Wednesday, 25 April 2018

ಶೈವಾಗಮೋಕ್ತ ದೇವಾಲಯಗಳಲ್ಲಿ "ಅಗೇಲು ಸೇವೆ" ಎಂಬ ವಿಶಿಷ್ಟ ಪೂಜಾ ವಿಧಾನ

ಸಾಮಾನ್ಯವಾಗಿ ಮುಖ್ಯವಾಗಿ ಶಿವಾಲಯದಲ್ಲಿ ಮತ್ತು ಶೈವ ಆಗಮಬದ್ಧವಾದ ಇತರೆ ದೇವಾಲಯಗಳಲ್ಲೂ ಆಚರಿಸುವ ಒಂದು ಪೂಜಾವಿಧಾನ. ಇದರ ಹಿನ್ನೆಲೆಯಲ್ಲಿ ತೀರಾ ಆಹಾರ ಉತ್ಪಾದನೆ ಕುಸಿತವಾದಾಗ ಸಮಾಜದಲ್ಲಿ ಸಮರ್ಪಕವಾಗಿ ಹಂಚುವ ಒಂದು ವಿಧಾನವೂ ಆಗಿರುತ್ತದೆ. ದೇಶದಲ್ಲಿ ಆಹಾರ ಕೊರತೆಯು ಹುಟ್ಟುವುದು ವೈಷ್ಣವ ವಿಷಣ್ಣತೆಯಿಂದ; ಆಹಾರ ತತ್ವದ ಅವಗಣನೆಯಿಂದ. ಅರಿಯದೇ ಮಾಡಿದ ಸಮಾಜದ ಈ ತಪ್ಪನ್ನು ಸರಿಪಡಿಸುವವರೆಗೆ ಜೀವಸಂಕುಲವನ್ನು ಬದುಕುವುದಕ್ಕೆ ಬೇಕಾದಷ್ಟು ಆಹಾರ ಒದಗಿಸಿ ರಕ್ಷಿಸಿಕೊಂಡು ಬರುವ ವಿಧಾನವೂ ಇದಾಗಿರುತ್ತದೆ. ಒಟ್ಟು ಪೃಥ್ವಿಯಲ್ಲಿ ಅಗಾಧ ಆಹಾರ ಸಂಪದವಿದ್ದರೂ ಮಾನವ ತನ್ನ ದುರ್ಗುಣಗಳಿಂದ ಪ್ರಕೃತಿಯಲ್ಲಿ ವಿಷಣ್ಣತೆಯನ್ನು ಸೃಷ್ಟಿಸಿ ಆಹಾರ ಕೊರತೆಗೆ ಕಾರಣನಾಗುತ್ತಾನೆ. ಅದನ್ನು ಮುಂದೆ ಅರ್ಥ ಮಾಡಿಕೊಂಡರೂ ಅದರ ಪುನರ್ಪರಿಷ್ಕರಣೆಯಾಗಿ ಸಹಜ ಸ್ಥಿತಿಗೆ ಬರಲು ಹಲವು ಕಾಲ ಬೇಕಾಗುವುದರಿಂದ ಅಂದಿನ ಕಾಲದ ಋಷಿಮುನಿಗಳು ಈ "ಅಗೇಲು ಸೇವೆ" ಎಂಬ ಪೂಜಾವಿಧಾನ ಬಳಕೆಗೆ ತಂದರು. ತನ್ಮೂಲಕ ಇದ್ದ ಅಲ್ಪಸ್ವಲ್ಪ ಆಹಾರವನ್ನೇ ವಿಶೇಷವಾಗಿ ಸಂಸ್ಕರಿಸಿ ೮ ವಿಧ ಆರೋಗ್ಯ ಪಡೆಯುವುದರ ಮುಖೇನ, ಸಪ್ತಧಾತುಗಳಲ್ಲಿ ೬ ರಸಗಳಾಗಿ ಮಿಲನ ಹೊಂದುವಂತೆ ಮಾಡುವ ಸೂತ್ರವೇ ಈ ಅಗೇಲು ಸೇವೆಯಾಗಿರುತ್ತದೆ. ಇಲ್ಲಿ ಮುಖ್ಯವಾಗಿ ಜೀವಜಂತುಗಳನ್ನು ಕಾಯ್ದು ಉಳಿಸಿಕೊಂಡು ಬರುವ ಮಹದೋದ್ದೇಶವಿರುತ್ತದೆ. ಮಾನವ ತಾನು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವಿರುತ್ತದೆ. ಮುಂದೆ ತಿದ್ದಿ ನಡೆಯುವ ಸಂಕಲ್ಪವಿರುತ್ತದೆ. ಮುಂದಿನ ಪೀಳಿಗೆಗೆ ಪಾಠವಿರುತ್ತದೆ, ಎಚ್ಚರಿಕೆಯಿರುತ್ತದೆ. ಹಂಚಿ ತಿನ್ನುವ ಸಾರ್ಥಕತೆ ಇರುತ್ತದೆ. ಇವೆಲ್ಲಾ ಆದರ್ಶ ಉದ್ದೇಶಗಳನ್ನು ಹೊಂದಿ ರೂಪಿಸಿದ ತಂತ್ರಸೂತ್ರವೇ "೭೮೬". ಇದೊಂದು ಸಂಖ್ಯೆ ಮಾತ್ರ. ಇದರ ಅರ್ಥ ವಿಶ್ಲೇಷಣೆ ಹೀಗಿರುತ್ತದೆ. ಸಪ್ತಧಾತುಗಳ ಸಂಘಟನೆಯೇ ದೇಹ. ಅದಿದ್ದರೆ ಜೀವ, ಪ್ರಾಣ, ಶಕ್ತಿ, ಜ್ಞಾನ ಮತ್ತು ಜೀವನಬೆಂಬ ಫಲಶ್ರುತಿ. ಇಂತಹಾ ಪ್ರಾಕೃತಿಕವಾದ ದೇಹ ಪಡೆದ ಆತ್ಮನು ಅದನ್ನು ಧರಿಸಿ ಆತ್ಮೋನ್ನತಿ ಸಾಧನೆಯಲ್ಲಿ ತೊಡಗಿದಾಗ ಪ್ರಕೃತಿಯು ಆ ದೇಹಕ್ಕೆ ಅಷ್ಟ ಕಷ್ಟಗಳನ್ನು ಒಡ್ಡಿ ಪರೀಕ್ಷಿಸುತ್ತದೆ. ಅದೇ ಅಷ್ಟವಿಧ ಆರೋಗ್ಯ ಭಾಗ. ದೈಹಿಕವಾಗಿ ೩, ಮಾನಸಿಕವಾಗಿ ೫, ಒಟ್ಟು ೮ ವಿಧ. ಅದರಲ್ಲಿ ದೈಹಿಕವಾಗಿ ವಾತ, ಪಿತ್ತ, ಕಫ ಜನಿತ ರೋಗಗಳು. ಇನ್ನು ಮಾನಸಿಕವಾಗಿ ಕಾಮ ಜನಿತ, ಕ್ರೋಧ ಜನಿತ, ಮೋಹ ಜನಿತ, ಮದ ಜನಿತ, ಮತ್ಸರ ಜನಿತಗಳೆಂಬ ೫ ಬಗೆಯ ಮಾನಸಿಕ ಖಾಯಿಲೆಗಳು ಅಥವಾ ಕಷ್ಟಗಳು. ಅವುಗಳು ಅನ್ನದಿಂದಲೇ ಪ್ರೇಷಿತ. ಹಾಗಾಗಿ ಷಡ್ರಸಯುಕ್ತವಾದ ಸಂಸ್ಕರಿತ ಅನ್ನ ಒದಗಿಸಿದಲ್ಲಿ ಈ ಬಾಧೆಯಿಂದ ವಿಮೋಚನೆ ಹೊಂದಿ ಆತ್ಮನು ಸುಲಭನಾಗಿ ಯಶಸ್ವಿಯಾಗಿ ಆತ್ಮ ಸಾಕ್ಷಾತ್ಕಾರ ಪಡೆಯುವುದರ ಮುಖೇನ ಸಿದ್ಧನಾಗಬಹುದು ಎಂಬುದು ನಮ್ಮ ಪೂರ್ವಕ ಋಷಿಮುನಿಗಳ ಅಭಿಮತ. ಹಾಗಾಗಿ ಈ ಪೂಜಾವಿಧಾನದಲ್ಲಿ ಅದನ್ನು ಸಂಯೋಜಿಸಿ ಮಾನವ ಕಲ್ಯಾಣ ಯೋಜನೆ ರೂಪಿಸಿದ್ದಾರೆ ಎಂದು ಘಂಟಾಘೋಷವಾಗಿ ಹೇಳಬಹುದು. ಅದರ ಕೆಲ ಮುಖ್ಯ ಸೂತ್ರಗಳನ್ನು ಹೆಸರಿಸುತ್ತಾ ಅಗೇಲು ಸೇವೆಯ ವಿಧಿ ವಿಧಾನಗಳನ್ನು ಪ್ರಕಟಿಸುತ್ತಿದ್ದೇವೆ. ಆಸಕ್ತರು ತಮ್ಮ ಊರಿನಲ್ಲಿ ದೇವಾಲಯದಲ್ಲಿ ಈ ಸೇವೆಯ ಮುಖೇನ ಆಹಾರ ಸಂಸ್ಕರಣೆ ಪಡೆದು ಅನ್ನದಿಂದ ಲಭ್ಯವಾಗುವ ಜ್ಞಾನ ಪಡೆದು ಮುಮುಕ್ಷುಗಳಾಗಲಿ ಎಂದು ಹಾರೈಸುತ್ತೇನೆ. ಅದರ ವಿಧಿ ವಿಧಾನ ಹೀಗಿರುತ್ತದೆ....

ಪಾವಂಜೆ ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ -

ಬೆಳಿಗ್ಗೆ ನಿತ್ಯಪೂಜೆ, ಪಂಚಗವ್ಯ, ಪುಣ್ಯಾಹ, ದೇವನಾಂದಿ ಪೂರ್ವಕ ಪಂಚಾಮೃತ ಅಭಿಷೇಕ, ಪವಮಾನ ಪಾರಾಯಣ, ಅಭಿಷೇಕ, ಪವಮಾನಹೋಮ. ತಂತ್ರಿಗಳಿಂದ ಅಭ್ಯಾವರ್ತಿನೀ ಹೋಮ. ಗ್ರಾಮದೇವತಾ ಪ್ರಾರ್ಥನಾ, ಇಷ್ಟದೇವತಾ ಪ್ರಾರ್ಥನಾ, ಸುತ್ತಮುತ್ತಲಿನ ಮಹರ್ದೇವತೆಗಳ ಪ್ರಾರ್ಥನೆ, ಹತ್ತಿರವಿರುವ ದೈವಗಳ ಪ್ರಾರ್ಥನೆ, ಪರಿವಾರ ದೇವತೆಗಳಿಗೆ ವಿಶೇಷ ಪೂಜೆ, ಕಂಬಳನಾಗನಿಗೆ ಸೇವೆ ಇತ್ಯಾದಿ ಮಧ್ಯಾಹ್ನದವರೆಗೆ ಅರ್ಚನಾದಿಗಳು.

ಮಧ್ಯಾಹ್ನ ಅನ್ನಸಂತರ್ಪಣೆ. ಸಾಯಂಕಾಲ ೩.೩೦ಕ್ಕೆ ಅರ್ಚಕರಿಂದ ಪ್ರಧಾನ ದೇವರಿಗೆ ಪೂಜೆ. ತಂತ್ರಿಗಳಿಂದ ತಂತ್ರಕಲಶಸಿದ್ಧಿ, ತಂತ್ರಕಲಶ ಪೂಜೆ, ಉತ್ಸವಮೂರ್ತಿ ಪೂಜೆ, ನಂತರ ವರಣೆ ಆರಂಭ - ದೇವರು ಹೊರುವವರಿಗೆ, ನೈವೇದ್ಯ ತಯಾರಿ ಮತ್ತು ಅಲ್ಲಿ ಒದಗಣೆ ಮಾಡುವವರಿಗೆ, ಸೇವಾಂಗ ಹಲಗೆ ಇಟ್ಟು ಬಟ್ಟೆ ಹಾಸುವ ಜಾಗದ ಶುಚಿತ್ವದ ಬಗ್ಗೆ ಒಬ್ಬರಿಗೆ, ಹಾಗೆಯೇ ಹಲಗೆ ಇಟ್ಟು, ಬಟ್ಟೆ ಹಾಸಲು ಒಬ್ಬರಿಗೆ, ಬಾಳೆ ಎಲೆ ಹಾಕುವವರಿಗೆ, ನೈವೇದ್ಯ ಬಡಿಸುವವರಿಗೆ, ವೇದಘೋಷ ಮಾಡುವವರಿಗೆ, ಸಂಗೀತಗಾರರಿಗೆ, ಭಜನೆ ಮಾಡುವವರಿಗೆ, ಪಂಚವಾದ್ಯ, ಮೌರಿವಾದನ, ವಾದ್ಯವೃಂದದವರಿಗೆ, ದೀಪ ಹಿಡಿಯುವವರಿಗೆ ಮತ್ತು ಸಹಾಯಕರಿಗೆ ವರಣೆ ಕೊಡುವುದು. ಉತ್ಸವಮೂರ್ತಿಗೆ ಪೂಜೆ ಮಂಗಳಾರತಿ. ಉತ್ಸವಮೂರ್ತಿಯನ್ನು ಹೊರುವವರಿಗೆ ಕೊಡುವುದು.

ರಂಗಪೂಜೆಯ ವಿಧಾನದಲ್ಲಿ ಹಲಗೆ ಇಟ್ಟು ಬಟ್ಟೆ ಹಾಸಿ ಅದರ ಮೇಲೆ ಬಾಳೆಎಲೆ ಹಾಕುವುದು. ನೈವೇದ್ಯಕ್ಕೆ ಸಿದ್ಧ ಮಾಡಿದ ಪದಾರ್ಥವನ್ನು ಬಡಿಸುವುದು. (ಕಡುಬು, ಸಿಹಿ ಪದಾರ್ಥ, ಪಂಚಕಜ್ಜಾಯ, ಅಪೂಪ, ಧೂಪ, ದೀಪ, ತಾಂಬೂಲ, ದಕ್ಷಿಣೆ, ಇವಿಷ್ಟು ಒಂದು ಬಾಳೆ ಎಲೆಯ ಮೇಲೆ ಬಡಿಸುವುದು. ಇದೇ ರೀತಿ ನಕ್ಷೆಯಲ್ಲಿ ತೋರಿಸಿರುವಂತೆ ಸಿದ್ಧಮಾಡುವುದು). ಪ್ರತೀ ಎಡೆಯ ಪೂಜೆಯ ಹೊತ್ತಿಗೆ ಉತ್ಸವಮೂರ್ತಿ ಎದುರಿರಬೇಕು. ಪ್ರತೀ ಪೂಜೆಯ ನೈವೇದ್ಯ ನಂತರ ನೈವೇದ್ಯದ ಮೇಲಿರುವ ಹೂವನ್ನು ಮೊದಲು ಉತ್ಸವಮೂರ್ತಿಗೆ ಅರ್ಪಿಸಬೇಕು. ಉತ್ಸವಮೂರ್ತಿಯಿಂದ ಪುನಃ ಪ್ರಸಾದವನ್ನು ಅಂದರೆ ಹೂವನ್ನು ತೆಗೆದುಕೊಂಡು ಉಕ್ತದೇವತೆಗಳಿಗೆ, ಪರಿವಾರ ದೇವತೆಗಳಿಗೆ, ಬಲಿಗಲ್ಲುಗಳಿಗೆ ಇತ್ಯಾದಿ ಅರ್ಪಿಸುವುದು.

ಮೊದಲು ೧೪೪ ರಲ್ಲಿ ೪೦ ಭಾಗ ಪೂಜೆ ನಿತ್ಯವಿಧಿಯಂತೆ ಮಾಡುವುದು. ಸ್ವಸ್ತಿಕ ೩ ಬರುತ್ತದೆ. ಆದಿಯಲ್ಲಿ ೧, ೪೦ ರ ನಂತರ ಮಯೂರದ ಹತ್ತಿರ ೧, ಕೊನೆಯಲ್ಲಿ ೧. ಸೇವಾರ್ಥದಾರರಿಂದ ಕ್ಷೇತ್ರಾಭಿವೃದ್ಧ್ಯರ್ಥೇ ಎಂದು ಸಂಕಲ್ಪ. ೪೧ ರಿಂದ ಸೇವಾರ್ಥದಾರರ ಹೆಸರು ಹೇಳಿ ನೈವೇದ್ಯ ೧೦೪, ೫೩, ೨೭ ರವರೆಗೆ. ಮಂಗಳಾರತಿ. ಈ ಮಧ್ಯದಲ್ಲಿ ಆಗುವ ಮಂಗಳಾರತಿಗಳನ್ನು ಯಾರೂ ತೆಗೆದುಕೊಳ್ಳುವ ಹಾಗಿಲ್ಲ. ಮಂಗಳಾರತಿ ಒಳಗೆ ಹೋಗುವುದು. ಅಲ್ಲಿ ಅರ್ಚಕರಿಂದ ಮಂಗಳಾರತಿ. ನಂತರ ಉಪ ಅರ್ಚಕರ ಸೇವಾಥವಾಗಿ ಎಡನಾಳಿಯಲ್ಲಿ ನಕ್ಷೆಯಲ್ಲಿ ತೋರಿಸಿರುವಂತೆ ಸಿದ್ಧಮಾಡುವುದು.

ಪ್ರತೀ ಪೂಜೆ ಆದ ಮೇಲೆ ನೈವೇದ್ಯ ಮೇಲಿಟ್ಟ ಹೂವನ್ನು ಉತ್ಸವಮೂರ್ತಿಗೆ ಅರ್ಪಿಸುವುದು. ಹೀಗೆ ಪ್ರತಿಯೊಂದಕ್ಕೂ ಮಾಡಬೇಕು. ಪೂರ್ವದಿಕ್ಕಿನ ಎಡೆಗೆ ವಿಷ್ಣುಮಂತ್ರಗಳಿಂದ, ಪಶ್ಚಿಮ ದಿಕ್ಕಿನ ಎಡೆಗೆ ರುದ್ರ ಮಂತ್ರಗಳಿಂದ, ದಕ್ಷಿಣೋತ್ತರ ಎಡೆಗಳಿಗೆ ದುರ್ಗಾಮಂತ್ರಗಳಿಂದ ಅಭಿಮಂತ್ರಣೆ ಮಾಡುವುದು. ಪುನಃ ಸೇವಾರ್ಥದಾರರಿಂದ, ಸೇವಾರ್ಥದಾರರು ಇಲ್ಲದಿದ್ದರೆ ಪೂಜೆ ಮುಂದುವರಿಸುವುದು.

ಅದರ ಮುಂದಿನ ಪ್ರಾಕಾರದಲ್ಲಿ ಪೂಜೆ. ಋಗ್ವೇದದ ಮೊದಲನೆಯ ಮಂಡಲದ ಮೊದಲನೆಯ ಅಧ್ಯಾಯದ ಕೊನೇ ಸೂಕ್ತದಿಂದ ಅಭಿಮಂತ್ರಣೆ ಮಾಡುವುದು. ಈ ಸುತ್ತು ಮುಗಿದ ಮೇಲೆ ಪ್ರಧಾನ ದೇವರ ಸನ್ನಿಧಿಯಲ್ಲಿ ಶಂಖಾದಿ ೬ ಮುದ್ರೆಗಳು (ಶಂಖ, ಚಕ್ರ, ಗದಾ, ಶಾಂರ್ಘ್ಯ, ಶೂಲ, ಮುದ್ಗರ). ದೇವರನ್ನು ಅಲ್ಲಿಯೇ ನಿಲ್ಲಿಸಿಕೊಂಡು ತಂತ್ರಿಗಳು ಪುನಃ ಹಿಂದಕ್ಕೆ ಬಂದು ತೀರ್ಥ ಮಂಟಪದ ಅರ್ಧ ಭಾಗ, ೨ನೆಯ ಆಪ್ರೀಸೂಕ್ತದಿಂದ ಅಭಿಮಂತ್ರಣೆ. ದೇವರನ್ನು ವೇದಘೋಷಗಳಿಂದ ಹಿಂದಕ್ಕೆ ತರುವುದು. ಚಂದ್ರಶಾಲೆಯ ಕೆಳಭಾಗದಲ್ಲಿ ಇರತಕ್ಕ ಎಡೆಗಳಿಗೆ ಮೊದಲನೇ ಆಪ್ರೀಸೂಕ್ತದಿಂದ ಅಭಿಮಂತ್ರಣೆ. ಅಣ್ಣಪ್ಪಯ್ಯ ಗುಡಿಯ ಹತ್ತಿರ ಅಣ್ಣಪ್ಪಯ್ಯನಿಗೆ ನೈವೇದ್ಯ. ನಂತರ ಪಾಕಶಾಲೆಯ ಅಗ್ನಿಗೆ ನೈವೇದ್ಯ ಮಾಡಿ ಮಂಗಳಾರತಿ ಮಾಡಿ ಪಾಕಶಾಲೆಯ ಒಲೆಗೆ ಅಗ್ನಿಯನ್ನು ಸೇರಿಸುವುದು. ಕೃತ್ತಿಕಾದಿಗಳಿಗೆ ಪೂಜೆ ನೈವೇದ್ಯ, ಅದರ ಪ್ರಸಾದ ಕೃತ್ತಿಕಾದಿ ಬಲಿಗಲ್ಲಿಗೆ, ಧರ್ಮದೇವತೆಗಳಿಗೆ ಪೂಜೆ ನೈವೇದ್ಯ, ಕೃತ್ತಿಕಾದ ಹತ್ತಿರ ಇರುವ ಬಲಿಗಲ್ಲಿಗೆ ಪ್ರಸಾದ, ಮಧ್ಯದ ಬಲಿಗಲ್ಲಿನವರೆಗ ಪೂಜೆ, ಅದರ ಪ್ರಸಾದ ಮಧ್ಯದ ಬಲಿಗಲ್ಲಿಗೆ, ನಂತರದ ೧೨ ಪೂಜೆ ನಂತರದ ಬಲಿಗಲ್ಲಿಗೆ, ನಂತರದ ೪ ಇನ್ನೊಂದು ಬಲಿಗಲ್ಲಿಗೆ. ನಂತರದ ಉತ್ತರದ ಕಡೆಯಲ್ಲಿ ಪ್ರತೀ ೪ ರಂತೆ ಪೂಜೆ, ಪ್ರಸಾದ ಪ್ರತೀ ಬಲಿಗಲ್ಲಿಗೂ ನಡೆಯುತ್ತದೆ. ಕೆಳಗಿನ ಭಾಗದ್ದು ವರುಣ ಮತ್ತು ೧ ಬಲಿಗಲ್ಲಿಗೆ, ವರುಣ ಮಂತ್ರದಿಂದ ಅಭಿಮಂತ್ರಣೆ. ಅಡ್ಡಸಾಲು ೧೨, ೨ ರಂತೆ ವೃಂದಾವನ, ತೀರ್ಥಕ್ಷೇತ್ರ, ವಲ್ಮೀಕ (ನಾಗ), ನ್ಯಾಯಸ್ಥಾನ, ಗೋ ೧ ಬಲಿಗಲ್ಲು, ತಾರ್ಕ್ಷ್ಯಾದಿ ೮ ಮುದ್ರೆಗಳು ಪ್ರಧಾನದೇವರಲ್ಲಿ (ತಾರ್ಕ್ಷ್ಯ, ನಾಗ, ಕೂರ್ಮ, ಮತ್ಸ್ಯ, ಘಂಟಾ, ಗಜ, ಧ್ವಜ, ದಂಡ). ದೇವರನ್ನು ಸಂಗೀತಾದಿಗಳಿಂದ ಹಿಂದಕ್ಕೆ ತರುವುದು.

ಚಂದ್ರಶಾಲೆಯಲ್ಲಿ ಮೇಲಿರುವ ಎಡೆಗಳಲ್ಲಿ ಕುಬೇರನಿಗೆ ಪ್ರಸಾದ ಧರ್ಮದರ್ಶಿಯ ಕೋಣೆಗೆ, ಶಾರದಾಂಬಾ ಎದುರಿಗೆ ತರತ್ಸಮಂದೀ ಧಾವತಿ ಮಂತ್ರಗಳಿಂದ ಅಭಿಮಂತ್ರಣೆ, ಶಾರದೆಗೆ ನೈವೇದ್ಯ. ಅದರ ಪಕ್ಕದ ಸಾಲಿನ ಪಶ್ಚಿಮದ ಎಡೆಗಳೂ ರಥಂ ನ ದುರ್ಗಾ ಮಂತ್ರಗಳಿಂದ ಅಭಿಮಂತ್ರಣೆ. ಅದೂ ದುರ್ಗಾ ಎನಿಸಿ ಶಾರದೆಗೆ ನೈವೇದ್ಯ, ಪ್ರಸಾದ. ಆಚಾರ್ಯ ಶಂಕರರ ಎದುರಿಗೆ ಪ್ರತೀ ಎಡೆ ಪೂಜೆ, ಬ್ರಾಹ್ಮಣ ಹಸ್ತೋದಕ, ಶಂಕರರಿಗೆ ಪ್ರಸಾದ. ಮಂಡಲದ ಆದ್ಯಂತ ಮಂತ್ರಗಳಿಂದ ಅಭಿಮಂತ್ರಣೆ. ಮುಂದಿನ ೭ ಎಡೆ ಸನ್ಯಾಸಿಗಳಿಗೆ ಹಸ್ತೋದಕ, ಶಂಕರರಿಗೆ ಪ್ರಸದ.

ಮುಂದಿನ ಪೂರ್ವ ದಿಕ್ಕಿನ ೧೨ ಎಡೆಗಳು ಪಂಚವಾದ್ಯ, ವಾದ, ದೀಪ, ಶ್ರುತಿ, ನಾದಸ್ವರ, ಛತ್ರಿ, ೨ ರಂತೆ. ಪ್ರಸಾದ ವಿನಿಯೋಗ. ಋಗ್ವೇದ ಮಂಡಲ ೮, ಸೂಕ್ತ ೪೬. ಸುರಭಿ ಆದಿ ೮ ಮುದ್ರೆಗಳು (ಸುರಭಿ, ಜ್ಞಾನ, ಚಕ್ರ, ಯೋನಿ, ಕೂರ್ಮ, ಪಂಕಜ, ಲಿಂಗ, ನಿರ್ಯಾಣ) ಪ್ರಧಾನದೇವರಲ್ಲಿ. ಮಂಗಳಾರತಿ. ದೇವರನ್ನು ಭಜನೆ ಇತ್ಯಾದಿಗಳಿಂದ ಹಿಂದಕ್ಕೆ ತಂದು ಹೊರಪ್ರಾಕಾರಕ್ಕೆ ಬರುವುದು.

ಹೊರಪ್ರಾಕಾರದಲ್ಲಿ ದೇವರನ್ನು ರಥದಲ್ಲಿ ಕುಳ್ಳಿರಿಸಿ ಒಂದು ಬಾರಿ ಪ್ರದಕ್ಷಿಣೆ ಬರುವುದು. ವಸಂತ ಮಂಟಪದಲ್ಲಿ ಕೂರಿಸಿ ಪೂಜೆ, ಅಷ್ಟಾವಧಾನ, ಮಂಗಳಾರತಿ. ನಂತರ ದೇವರನ್ನು ರಥದಲ್ಲಿ ಕೂರಿಸಿ ಪ್ರದಕ್ಷಿಣೆ ಬರುವುದು ಪೂಜೆಗೆ ಜೊತೆಗೆ. ಬಲಭಾಗದ ೨ ಎಡೆ ನೈವೇದ್ಯ, ದ್ಯಾವಾಪೃಥಿವೀ ಮಂತ್ರಗಳಿಂದ. ಅದರ ಪಕ್ಕದ ಬಲಿಗಲ್ಲಿಗೆ. ನಂತರದ ಎಡೆಗಳು ಭೈರವ ಕಲ್ಲು ಬರುವವರೆಗೆ, ಭೈರವಾದಿಗಳಿಗೆ ಪ್ರಸಾದ, ಅದರ ಮುಂದಿನ ಎಡೆಗಳು ಈಡುಗಾಯಿ ಕಲ್ಲಿಗೆ, ಒಂದು ಈಡುಗಾಯಿ ಒಡೆಯುವುದು. ಅದರ ಮುಂದಿನದ್ದು ಕ್ಷುದ್ರಗಳಿಗೆ ಪ್ರಸಾದ, ಅದರ ಮುಂದಿನದ್ದು ಕ್ಷೇತ್ರಪಾಲನವರೆಗೆ ಕ್ಷೇತ್ರಪಾಲನಿಗೆ ಪ್ರಸಾದ.

ಅದರ ಮುಂದಿನದ್ದು ಮತ್ತು ೨ ಇಂದ್ರಾಗ್ನಿ ಮಂತ್ರಗಳಿಂದ ಅಭಿಮಂತ್ರಣೆ. ಅವಭೃತ ಕೊಳಕ್ಕೆ ಪ್ರಸಾದ. ದೇವರನ್ನು ಅಭಿಮುಖವಾಗಿ ನಿಲ್ಲಿಸಿ ದಿಗಂತಾದಿ ೮ ಮುದ್ರೆಗಳು (ಆವಾಹನಾದಿ) ಮಹಾಮಂಗಳಾರತಿ. ತೀರ್ಥ ಪ್ರಸಾದ ವಿನಿಯೋಗ; ಹೊರಗಿನಿಂದ ಆರಂಭ.

ದೇವರ ಸಮ್ಮುಖದಲ್ಲಿ ಸೇವಾರ್ಥದಾರರು ದೇವರಿಗೆ ಅಭಿವಾದನ ಮಾಡಿ ಪ್ರಸಾದಂ ದೇಹಿ ಎಂದು ಬೇಡಿಕೊಂಡು ತಂತ್ರಿಗಳಿಂದ ಪ್ರಸಾದಗ್ರಹಣ. ಮೊದಲು ೫೩ ಎಡೆ ಹೊರಗಿನದ್ದು, ೨೭, ನಂತರ ಹೊರಪ್ರಾಕಾರ ದೇವರ ಸಮ್ಮುಖದಲ್ಲೇ ಪ್ರತಿಯೊಬ್ಬನೂ ತನ್ನ ಗೋತ್ರ ಗೊತ್ತಿಲ್ಲದಿದ್ದರೆ ಹೆಸರು ಹೇಳಿ ಪ್ರಸಾದಂ ದೇಹಿ ಎಂದು ಬೇಡಿ ನಂತರ ಪ್ರಸಾದ ತೆಗೆದುಕೊಳ್ಳಬೇಕು. ದೇವರನ್ನು ಒಳಕ್ಕೆ ತೆಗೆದುಕೊಂಡು ಚಂದ್ರಶಾಲೆಯ ಮೇಲಿರುವ ಎಡೆಗಳು ಪ್ರಸಾದ, ಶಾರದಾಂಬ ಎದುರು, ನಂತರ ಪಕ್ಕದ ಚಂದ್ರಶಾಲೆ, ನಂತರ ಆಚಾರ್ಯ ಶಂಕರರ ಎದುರಿನ ಎಡೆಗಳು, ೭ ಎಡೆ ಸನ್ಯಾಸಿಗಳದ್ದು. ಸೇವಾರ್ಥದಾರರಿಗೆ ಅದು ಪ್ರಸಾದವಲ್ಲ. ವಾದ್ಯವೃಂದದವರಿಗೆ ಅವರ ಎದುರಿನ ಎಡೆಗಳು. ನಂತರ ಕೆಳಗೆ ಇಟ್ಟಿರುವ ಎಡೆಗಳು, ತೀರ್ಥಮಂಟಪ ಹೀಗೆ ೧೦೪ ರವರೆಗೆ ಹಿಂದಕ್ಕೆ ಬರುವುದು. ೧೦೪ ನೆಯದು ಯಜಮಾನನಿಗೆ, ೪೦ ತಂತ್ರಿಗಳ ಭಾಗದ್ದು. ಅದರಲ್ಲಿ ೧ ಧರ್ಮದರ್ಶಿಗೆ, ೧ ದೇವರು ಹೊರುವವರಿಗೆ, ೧ ಆಡಳಿತ ಮೊಕ್ತೇಸರರಿಗೆ ಮತ್ತು ಇತರೆ ಸಹಾಯಕರಿಗೆ ಪ್ರಸಾದ ವಿನಿಯೋಗ.

ಎಡನಾಳಿಯಲ್ಲಿ ಇಟ್ಟ ಎಡೆಗಳ ಪ್ರಸಾದ ಅರ್ಚಕರಿಗೆ ಸೇರಿದ್ದು. ೧ ಧರ್ಮದರ್ಶಿಗೆ, ೧ ಆಡಳಿತ ಮೊಕ್ತೇಸರರಿಗೆ, ಉಪ ಅರ್ಚಕರಿಗೆ ಪ್ರಸಾದ ವಿನಿಯೋಗ. ಒಟ್ಟು ೭೮೯ ಎಡೆಗಳು, ೭೮೬ ಪ್ರಸಾದಗಳು.

ಹೀಗೆ ವಿಧಿಬದ್ಧವಾಗಿ ಶೈವಾಗಮ ರೀತ್ಯಾ ಈ ಲೇಖನದಲ್ಲಿ ಉಲ್ಲೇಖಿಸಿದ ಮಂತ್ರಗಳ ಮುಖೇನ ಆಹಾರ ಪರಿಷ್ಕರಣೆ ಮಾಡಿ ಎಲ್ಲರಿಗೂ ಹಂಚಿ ಸ್ವೀಕರಿಸಿದರೆ ಅನಂತಪುಣ್ಯವೆಂಬುದು ಶತಃಸಿದ್ಧ. ದೇವತಾನಾಮಗಳು ಅಲ್ಲಲ್ಲಿಯಂತೆ ಪರಿಷ್ಕರಿಸಿಕೊಳ್ಳಿರಿ. ಲೇಖನದಲ್ಲಿ ಹೇಳಿದ ಎಲ್ಲಾ ಜನರೂ, ಎಲ್ಲಾ ಆಹಾರ ಬಗೆಗಳೂ, ಎಲ್ಲಾ ವಾದ್ಯ ಕಲಾವಿದರೂ ಮುಕ್ತವಾಗಿ ಭಾಗವಹಿಸಿದಲ್ಲಿ ಖಂಡಿತಾ ಫಲಪ್ರದವೆಂದು ಹೇಳುತ್ತಾ ಈ ಲೇಖನ ಮುಗಿಸುತ್ತಿದ್ದೇನೆ.

-      ಬ್ರಹ್ಮ ಋಷಿ ಕೆ.ಎಸ್. ನಿತ್ಯಾನಂದರು
ವೇದ ವಿಜ್ಞಾನ ಮಂದಿರ,

ಚಿಕ್ಕಮಗಳೂರು

Thursday, 5 April 2018

ಬ್ರಹ್ಮ ಋಷಿ ಕೆ.ಎಸ್. ನಿತ್ಯಾನಂದರ ತಂತ್ರಸಮುಚ್ಚಯ ಗ್ರಂಥ ವಿಮರ್ಷೆ


ವಿರಳವಾದ ನಿಗಮಾಗಮ ರಹಸ್ಯವನ್ನು ಅನಾವರಣಗೊಳಿಸಿರುವ ಪ್ರಪ್ರಥಮ "ತಂತ್ರ ಸಮುಚ್ಚಯ" ಗ್ರಂಥ ಪ್ರಕಟವಾಗಿದೆ. ಹಿಮಾಲಯ, ಕಾಶಿ, ಗಾಂಧಾರ ಪ್ರದೇಶ ವಾಸಿ ಪರಮಗುರು ಅವೈಧ್ಯನಾಥರ ಕರಕಮಲ ಸಂಜಾತ, ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದರು, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು ಇವರ ಜ್ಞಾನ ಮೂಸೆಯಿಂದ ಹೂರಬಂದ ಸುವರ್ಣಪುಷ್ಪ.
ಲೋಕವೆಲ್ಲಾ ತಿಳಿದಿರುವುದು ಈಗಿನ ಸೈನ್ಸ್ ಎಂದು ಬಿಂಬಿಸುತ್ತಿರುವ ಬೊಗಳೆಯೇ ವಿಜ್ಞಾನವೆನ್ನುತ್ತಿದ್ದಾರೆ. ಆದರೆ ಅದು ವಿಜ್ಞಾನವಲ್ಲ. ಯಾವುದು ಮನುಷ್ಯನನ್ನು ಬೌದ್ಧಿಕವಾಗಿ ಎತ್ತರಕ್ಕೇರಿಸುತ್ತದೆಯೋ, ಯಾವುದು ಶಾಂತಿ, ದಯೆ, ಕರುಣೆ, ಔದಾರ್ಯ, ಸಹಿಷ್ಣುತೆ, ಜ್ಞಾನ ತುಂಬಿಸಬಲ್ಲದೋ ಅದುವಿಜ್ಞಾನ”. ಒಂದು ನಾಶಕಾರೀ ಅಸ್ತ್ರ ಕಂಡುಹಿಡಿದು ಲೋಕಕಂಟಕರಾಗುವುದು ವಿಜ್ಞಾನವಲ್ಲ. ಯಾವುದೇ ವಿಚಾರ, ಕಾರ್ಯ, ವೃತ್ತಿ, ಉತ್ಪಾದನೆ ಇವುಗಳು ಲೋಕನಾಶಕರವಲ್ಲದ ರೀತಿಯಲ್ಲಿ ಉತ್ಪಾದಿಸಿ ಲೋಕಕ್ಕೆ ತ್ಯಾಗ ರೀತಿಯಲ್ಲಿ ಕೊಡುತ್ತಾ ಹಾಗೇ ವಿಚಾರವು ಲೋಕಕಂಟಕವಾದಲ್ಲಿ ಅದನ್ನು ಹಿಂಪಡೆಯುವ ಅಂದರೆ ಉಪಸಂಹಾರ ವಿಧಿಯುಕ್ತವಾಗಿರುವ ಜ್ಞಾನವೇ ವಿಜ್ಞಾನವೆನ್ನಿಸಿಕೊಳ್ಳುತ್ತದೆ. ಈಗಿನ ಬಂಡವಾಳಶಾಹಿ ವೃತ್ತಿಯು ವಿಜ್ಞಾನವೆಂದರೆ ಅದು ನಿಮ್ಮ ಮೂರ್ಖತನವೆನ್ನಬಹುದು.
ಭಗವದಿಚ್ಛೆಯಂತೇ ಎಲ್ಲವೂ ಇದೆ. ಆದರೆ ಅವುಗಳ ವ್ಯವಹಾರವೆಲ್ಲವೂ ಭಗವದಧೀನವೇ ಅಥವಾ ಸ್ವತಂತ್ರವೇ? ಸ್ವತಂತ್ರತೆ ಪಡೆಯಲು ಇರುವ ಮಾರ್ಗವಾವುದು? ಅದರ ಅನ್ವೇಷಣೆಯಲ್ಲಿ ದೊರೆತ ಮಾರ್ಗವೇ ಆಗಮ.
ನದಿಯು ಸ್ವತಂತ್ರವೇ, ಅಲ್ಲವೇ? ದಡ ಮುಖ್ಯವೇ ಅಥವಾ ಪಾತ್ರ ಮುಖ್ಯವೇ? ವಿಶ್ಲೇಷಿಸುತ್ತಾ ನಡೆದ ಸಂಶೋಧಕರು ನೀರಿನ ಹರಿಯುವ ಶಕ್ತಿಯೇ ಪ್ರಧಾನ ಎಂದು ಗುರುತಿಸಿ, ತನ್ಮುಖೇನ ಪರಿಕರ ವಿಜ್ಞಾನವನ್ನು ಅನ್ವೇಷಿಸಿದರು.
ಗಂಗಾದಿ ನದಿಗಳಿಗೆ ತಮ್ಮ ಕರ್ತೃತ್ವ ಶಕ್ತಿ ದೊರಕಿದ್ದು ಹೇಗೆ? ಅವುಗಳ ಆಗಮೀಕ ರಹಸ್ಯವನ್ನು ಅನಾವರಣ ಮಾಡಲಾಗಿದೆ.
ಮೂಲ ಆಗಮ ಮತ್ತು ತಂತ್ರಗಳು ಈಗಿನ ಸಂಸ್ಕೃತವನ್ನು ಸೇರಿದಂತೆ ಯಾವುದೇ ಪ್ರಚಲಿತ ಭಾಷೆಯಲ್ಲಿ ಲೇಖಿಸಲ್ಪಟ್ಟಿಲ್ಲ. ಈಗಿನ ವಿದ್ವಾಂಸರು ಅದನ್ನು ತಮಗೆ ತಿಳಿದ ಭಾಷೆಯಲ್ಲಿ ತರ್ಜುಮೆ ಮಾಡಲು ಹೋಗಿ ಅನರ್ಥ ಮಾಡಿಕೊಳ್ಳುತ್ತಿದ್ದಾರೆ. ಭಾಷೆಗೆ ವ್ಯಾಕರಣವೇ ಇಲ್ಲವೆಂಬ ಸತ್ಯವೂ ತಿಳಿದಿಲ್ಲ. ನಿಸ್ವಾರ್ಥಿಯ ಶುದ್ಧಮನಸ್ಸಿನ ಚಿಂತನೆಯೇ ವೇದ್ಯವಾಗುತ್ತದೆಅದಕ್ಕೆ ಶಂಕರಾಚಾರ್ಯರುನಹಿ ನಹಿ ರಕ್ಷತಿ ಡುಕೃಂಕರಣೇಎಂದು ಹೇಳಿದ್ದು.
ಇಂತಹಾ ಆಗಮದಿಂದ ಸಮಾಜದಲ್ಲಿ ತಂತ್ರವು ಹೇಗೆ ಪ್ರಕಟಗೊಂಡಿತು?
ಆಗಮಕ್ಕೆ ವೇದದ ಬದ್ಧತೆ, ತಂತ್ರಕ್ಕೆ ಆಗಮದ ಬದ್ಧತೆ. ತಂತ್ರಾಧಿದೇವತೆ ಶಂಕರನಿಗೇ ಎಲ್ಲಾ ತಂತ್ರಗಳು ಸಮರ್ಪಿತ.
ಸಾತ್ವಿಕ ಜೀವನ ಶೈಲಿಯಿಂದ ಸಾತ್ವಿಕ ಮಾರ್ಗ ಬಳಸುವುದೇ ತಂತ್ರಕ್ಕೆ ಒಂದು ಹಂತದ ಅಧಿಕಾರ. ಪಂಚ ಮಕಾರಗಳೇ ತಂತ್ರವೆಂದು ಪ್ರಚಾರದಲ್ಲಿದೆ. ಆದರೆ ಅದು ಶುದ್ಧ ಸುಳ್ಳು ಎಂದು ವೇದೋಕ್ತಿಗಳಿಂದ ತಿಳಿಸಿದ್ದಾರೆ.
ಆಧುನಿಕ ಶಸ್ತ್ರಾಸ್ತ್ರಗಳಿಗೆ ಯಾವುದೇ ವಿವೇಚನೆ ಇಲ್ಲ. ಆದರೆ ತಂತ್ರದಿಂದ ವಿವೇಚನೆಯನ್ನು ತುಂಬಬಹುದು. ಪ್ರಕೃತಿ ನಾಶ ಮಾಡಲು ಹೊರಟರೆ ಪ್ರತಿಬಲ ಸೃಷ್ಟಿಯಾಗಿ ಆತನನ್ನೇ ಬಲಿತೆಗೆದುಕೊಳ್ಳುತ್ತದೆ.ಸಾರ್ವತ್ರಿಕ ಉಪಯೋಗಕ್ಕಿರುವ ಸಲಕರಣೆಗಳು, ವಾಸ್ತು, ಜ್ಯೋತಿಷ್ಯ, ನಿರ್ಮಾಣಗಳು, ಉದ್ಯೋಗಳು, ಒಕ್ಕೂಟ ರಚನೆ, ವಾಹನ ತಂತ್ರಜ್ಞಾನ, ಸಮಸ್ಯಾ ಪರಿಹಾರ, ಇತ್ಯಾದಿಗಳ ಹಿಂದೆಯೂ ತಂತ್ರವಿದೆ. ಜಾನಪದೀಯ ಸೊಗಡಿನಲ್ಲಿ ಹೇಗೆ ತಂತ್ರವು ಸಮ್ಮೇಲನಗೊಂಡಿದೆ ಎಂದು ದೃಷ್ಟಾಂತ ನೀಡಿದ್ದಾರೆ. ಹೆಚ್ಚೇಕೆ ನಿತ್ಯ ದೇವರ ಪೂಜೆ, ದೀಪ ಹಚ್ಚುವುದು, ಗೋಪೂಜೆ, ತುಳಸೀ ಪೂಜೆ, ರಂಗೋಲಿ ಹಾಕುವುದು ಇತ್ಯಾದಿಗಳೆಲ್ಲದರ ಹಿಂದೆ ತಂತ್ರದ ಬೀಜಾಕ್ಷರಗಳು ಸಂಯೋಜನೆಗೊಂಡಿದೆ.
ಅತಿಮಾನವ ಶಕ್ತಿ ಸಾಧನೆಯನ್ನೂ ಮಾಡುವ ಹಲವಾರು ವಿಧ್ಯೆಗಳನ್ನು ಹೇಳಿದ್ದಾರೆ. ಆದರೆ ಅವೆಲ್ಲವೂ ಸಮಾಜದ ಹಿತಕ್ಕಾಗಿ ಹೊರತು ಸ್ವಾರ್ಥಕ್ಕಲ್ಲ ಎಂದು ಎಚ್ಚರಿಕೆಯ ಘಂಟೆ ಮೊಳಗಿಸಿದ್ದಾರೆ. ದುರುಪಯೋಗ ಮಾಡಿದಲ್ಲಿ ಕರ್ತೃವಿನ ಸರ್ವನಾಶ ಖಂಡಿತ.
ಷೋಡಶೀ ವಿಧ್ಯೆಯ ನೈಜ ಸ್ವರೂಪವನ್ನು ಸ್ಥೂಲವಾಗಿ ಪರಿಚಯಿಸಿದ್ದಾರೆ. ಆದರೆ ಇದನ್ನು ಅರ್ಥ ಮಾಡಿಕೊಳ್ಳದ ಎಷ್ಟೆಷ್ಟೋ ಪಂಥಗಳು ವಿಕೃತಾನುಷ್ಠಾನ ಮಾಡುತ್ತಾ ಸಮಾಜದ್ರೋಹಿಗಳಾಗಿದ್ದಾರೆ. ಆದರೆ ತಂತ್ರವು ಎಂದೂ ಸಮಾಜದ್ರೋಹಿ ಕೆಲಸಕ್ಕೆ ಸಹಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ಮಂಡಿಸಿದ್ದಾರೆ.
೧೨೬೩ ಬೀಜಾಕ್ಷರಯುಕ್ತವಾದ ೬೪ ತಂತ್ರಸಮುಚ್ಚಯಗಳು ಮೂಲತಃ ಸಂಜ್ಞಾವೇದ ಎಂಬ ವೇದಮೂಲದ್ದೇ ಆಗಿರುತ್ತದೆ.
ಮದ್ಯ ತಯಾರಿಕೆ, ಚೋರ ವಿಧ್ಯೆ, ಯುದ್ಧ ವಿಧ್ಯೆ ಇತ್ಯಾದಿ ಎಲ್ಲವನ್ನೂ ವೇದ ಹೇಳಿತು. ಆದರೆ ಅದನ್ನೆಲ್ಲಾ ಎಲ್ಲರೂ ಮಾಡಿ ಎಂದಲ್ಲ. ಆದರೆ ಎಲ್ಲರೂ ಆತ್ಮೋನ್ನತಿ ಸಾಧಿಸಿ ಎಂದು ಮಾತ್ರ ಹೇಳಿದೆ. ಅಲ್ಲಿಯೂ ನೀವು ತೊಡಗಿಕೊಳ್ಳಲೇಬೇಕೆಂದು ಹೇಳಿಲ್ಲ. ಆಯ್ಕೆ ಆತ್ಮನದ್ದುವೇದದ ಆದರ್ಶವನ್ನು ಎತ್ತಿ ಹಿಡಿಯಲು ಆಗಮವು ಉದ್ಭವಿಸಿತು. ನಿಗಮ + ಆಗಮ = ತಂತ್ರ  ಎಂಬ ಕೂಸು. ಆದರೆ ತಂದೆತಾಯಿಯನ್ನು ಮರೆತ ಕೂಸು ದಾರಿ ತಪ್ಪಿತುಆಗಲೇ ತಂತ್ರವು ತನ್ನ ಮರಣಶಾಸನ ಬರೆದುಕೊಂಡಿತು.
ತನ್ನ ಸ್ವೇಚ್ಛೆಯನ್ನು ನಿರ್ಬಂಧಿಸಬಹುದು ಎಂದು ವೇದವನ್ನೇ ನಾಶ ಮಾಡಲು ಹೊರಟಿತು. ತತ್ಕಾರಣ ವೇದವು ಅರ್ಥವಾಗದ ಭಾಷೆಯಾಗಿ ರೂಪುಗೊಂಡಿದೆ. ನಿಗಮ + ಆಗಮ + ತಂತ್ರಗಳ ಸಂಬಂಧವೇ ಅರ್ಥವಾಗದ ಸ್ಥಿತಿಗೆ ತಲುಪಿದೆ.
ತಹಬಂಧಿ ಇಡುವ ನಿಗಮಾಗಮಗಳನ್ನೇ ಗಾಳಿಗೆ ತೂರಿ ಬೆಳೆದ ಏನ ಕೇನ ಪ್ರಕಾರೇಣ ತಂತ್ರವೇ ಈಗಿನ "ತಂತ್ರಮಾರ್ಗ". ಸಮಾಜ ಒಡೆದು ಶ್ರೌತಿಗಳು, ಸ್ಮಾರ್ತರು, ತಾಂತ್ರಿಕರು ಎಂಬ ವಿಭಾಗವಾಯ್ತು. ಈಗ ಅವೆಲ್ಲವೂ ಇಲ್ಲದೆಯೇ ಮತೀಯ ಭಯೋತ್ಪಾದಕತೆ ಎಂಬ ವಿಕೃತಿಯು ಬೆಳೆಯುತ್ತಿದೆ. ಅದು ಸಧ್ಯದಲ್ಲೇ ನಾಶವಾಗುವುದು ಖಂಡಿತ. ಅದೆ ಕೃಷ್ಣ ತಂತ್ರ.
ನೈಜತಂತ್ರ ಲಭ್ಯವಿಲ್ಲದೆ ಭ್ರಾಂತ ತಂತ್ರವನ್ನೇ ನಂಬಿ ಮೋಸ ಹೋಗುತ್ತಿರುವ ಸಮಾಜವನ್ನು ಎಚ್ಚರಿಸುವುದಕ್ಕಾಗಿಯೇ ತಂತ್ರದ ಪುನರುಜ್ಜೀವನದ ಉದ್ದೇಶದಿಂದ ನಿಗಮಾಗಮ ನಿಬಂಧನೆಗಳೊಂದಿಗೆ ತಾಂತ್ರಿಕರಾಗುವ ಹಾರೈಕೆ ಇಟ್ಟು ಗ್ರಂಥವನ್ನು ಬರೆಯಲಾಗಿದೆ.
ತಂತ್ರಸಾರ ಎಂಬ ಲೇಖನವು ಆಯಾಯ ಋಷಿ-ಮುನಿಗಳಿಂದ ಅನ್ವೇಷಿಸಲ್ಪಟ್ಟು ಸಮಾಜ ಹಿತಕ್ಕಾಗಿ ನೀಡಿದ ಸಮಗ್ರ ನಿಗಮಾಗಮ ತಂತ್ರ ಆಧ್ಯಾತ್ಮಗಳ  ರಾಶಿ ರಾಶಿ ಅಪ್ರಕಟಿತ ಗ್ರಂಥಗಳ ಪಟ್ಟಿ ನೀಡುತ್ತದೆ. ಕೃಷಿ, ವಾಣಿಜ್ಯ, ನಿರ್ಮಾಣ, ಉದ್ದಿಮೆಗಳು, ವೈಧ್ಯ, ಲೋಹಶಾಸ್ತ್ರ, ಶಿಲ್ಪಶಾಸ್ತ್ರ, ಭೌತವಾದ, ರಸವಾದ ಇತ್ಯಾದಿ ಇತ್ಯಾದಿ ಎಲ್ಲಾ ತಂತ್ರಜ್ಞಾನಗಳೂ ಇವೆ. ತಂತ್ರಶಾಸ್ತ್ರದ ತುಣುಕುಗಳನ್ನು ಆಯ್ದು ಕೆಲವೇ ತಂತ್ರಜ್ಞಾನಗಳ ಕನಿಷ್ಠ ವಿಷಯಗಳನ್ನು ಬಳಸಿಕೊಂಡು ಇಂಜಿನಿಯರ್ ಎಂಬ ವೃತ್ತಿ ಈಗಿನ ಕಾಲದಲ್ಲಿ ವಿಜೃಂಭಿಸುತ್ತಿದೆ. ಆದರೆ ಬಳಸಿ ಖಾಲಿ ಮಾಡಲು ಆಗದಷ್ಟು ಸಾಹಿತ್ಯ ರಾಶಿಯು ಭಾರತೀಯ ತಂತ್ರಶಾಸ್ತ್ರದಲ್ಲಿ ಅಡಗಿದೆ ಎಂಬುದು ನಿಶ್ಚಿತ.


ವಿವಿಧ ಯಂತ್ರಗಳು ಹಾಗೂ ಮಂಡಲಗಳ ವಿನ್ಯಾಸವನ್ನು ನೀಡಲಾಗಿದೆ. ಮುಂದೆ ಭೂಪುರಾದಿಗಳ ವರ್ಣನೆಯಲ್ಲಿ ಕೇವಲ ಚಿತ್ರಣವೋ ಎಂದು ಭಾವಿಸಿರುವ ಯಂತ್ರಗಳ ಹೊರಗಿನ ಗೆರೆಗಳು ಎಷ್ಟು ಮಹತ್ವವನ್ನು ಹೊಂದಿವೆ, ಅವುಗಳಲ್ಲಿ ಎಷ್ಟೆಷ್ಟು ವಿಧ, ಹೇಗೇಗೆ ಕೆಲಸ ಮಾಡುತ್ತದೆ ಎಂದು ಈಗಿನ ಯಾವುದೇ ಗ್ರಂಥದಲ್ಲಿ ಲಭ್ಯವಿಲ್ಲದ ಮಾಹಿತಿಯನ್ನು ಪ್ರಕಟಗೊಳಿಸಿದ್ದಾರೆ. ರೀತಿ ಯಂತ್ರಗಳ ರಹಸ್ಯವನ್ನು ವಿವರಿಸುತ್ತಾ ಒಂದು ಹಂತದವರೆಗೆ ಶಬ್ದತರಂಗ ಹಾಗೂ ಕಿರಣತರಂಗಗಳೊಂದಿಗೆ ವ್ಯವಹರಿಸುವ ವಿಧಾನವನ್ನು ಸೂಚ್ಯವಾಗಿ ಹೇಳಲಾಗಿದೆ. ಇವುಗಳಿಂದ ಏನಕ್ಕೇನೂ ಮಾಡಬಹುದು. ಹಾಗಾಗಿ ಅದಕ್ಕೆಲ್ಲ ನಿಗಮಾಗಮ ಬದ್ಧತೆ ಇಡಲಾಗಿದೆ.
ಮುಂದುವರೆದು ಆಯ್ದ ವೇದದ ಮಂತ್ರಗಳ ಸಾರರೂಪೀ ೧೨೬೩ ಬೀಜಾಕ್ಷರಗಳನ್ನು ಅರಿತನೆಂದರೆ ಅವನೇ ದೇವರಾಗುತ್ತಾನೆ!! ಎಂಬ ರಹಸ್ಯವನ್ನು ಉದ್ಘೋಷಿಸಿದ್ದಾರೆ. ಸರ್ವಜ್ಞತ್ವ, ಈಶಿತ್ವ, ವಶಿತ್ವ, ಪ್ರಾಪ್ತಿ, ಪ್ರಾಕಾಮ್ಯಾದಿಗಳು ಸ್ವಯಂಸಿದ್ಧಿಯಾಗುತ್ತವೆ. ಇವೆಲ್ಲ ರಹಸ್ಯಗಳು ಯಂತ್ರಗಳ ಭೂಪುರದ ಲೇಖನದಲ್ಲಿ ಕಾಣಬಹುದು.
ಯಂತ್ರಗಳು ಹಾಗೂ ಮಂಡಲಗಳು ಪ್ರದರ್ಶನಕ್ಕಾಗಿಯೋ, ಕಂಡದ್ದನ್ನೆಲ್ಲ ಮನೆಯಲ್ಲಿ ಇಟ್ಟು ಪೂಜಿಸುವುದಕ್ಕಾಗಿಯೋ ಇಲ್ಲಿ ನೀಡಿದ್ದಲ್ಲ. ಯಾರೋ ದಾರಿಹೋಕರು ಹೇಳಿದರು, ಎಲ್ಲೋ ಪುಸ್ತಕದಲ್ಲಿ ಬರೆದಿದೆ, ಮಾಧ್ಯಮದಲ್ಲಿ ಪ್ರದರ್ಶಿಸಿದ್ದಾರೆ ಎಂಬಂತಹಾ ಆಮಿಷಕ್ಕೆ ಈಡಾಗಿ ಸಿಕ್ಕ ಸಿಕ್ಕ ಯಂತ್ರಗಳನ್ನು ತಂದು ಮನೆಯಲ್ಲಿಟ್ಟು ಪೂಜಿಸಬೇಡಿ. ಮನೆಯ ಮುಂದೆ ಹಾಕುವ ರಂಗೋಲಿಗಳೆಲ್ಲ ಮಂಡಲಗಳಲ್ಲ. ಹಾಗೇ ನಿರ್ಧಿಷ್ಟ ಕಾರ್ಯ ಸಾಧನೆಗಾಗಿ ತಯಾರಿಸಲ್ಪಟ್ಟಿರುವ ತಾಂತ್ರಿಕ ಮಂಡಲಗಳನ್ನು ಮನೆಯ ಮುಂದೆ ರಂಗೋಲಿಯಂತೆ ಬಳಸುವುದಲ್ಲ. ಉಪಯೋಗಕ್ಕಿಂತ ಹಾನಿಯೇ ಹೆಚ್ಚು. ಅತೀ ಸರ್ವತ್ರ ವರ್ಜಯೇತ್ ಎಂಬುದನ್ನು ನೆನಪಿನಲ್ಲಿಡಬೇಕು. ತಾಂತ್ರಿಕನಿಗೆ ಆಯಾಯ ಕಾರ್ಯಸಾಧನೆಗೆ ಇರುವ ಮಾರ್ಗವಿದೆಂದು ನೆನಪಿಡಬೇಕು. ಹೇಗೆ ಒಬ್ಬ ವಿಮಾನ ಚಾಲಕ ಮಾತ್ರ ವಿಮಾನವನ್ನು ಉಡಾವಣೆ ಮಾಡಬಲ್ಲನೋ ಹಾಗೆಯೇ ಸರಿಯಾಗಿ ಗುರುಮುಖೇನ ಕಲಿತು ಪ್ರಯೋಗ ಪರೀಕ್ಷಾದಿಗಳಿಂದ ದೃಢತೆ ಪಡೆದ ತಾಂತ್ರಿಕನು ಮಾತ್ರ ಇವುಗಳನ್ನು ಬಳಸಬಹುದು; ನಿಗಮಾಗಮಗಳ ಬದ್ಧತೆಯಲ್ಲಿ. ತಿಳಿಯದೆ ಬಳಸುವುದು, ತಪ್ಪು ಆಚರಣೆಗಳನ್ನು ಮಾಡುವುದು, ಇತ್ಯಾದಿಗಳಿಂದ ಬಳಸಿದವರನ್ನು ಆಹುತಿ ತೆಗೆದುಕೊಳ್ಳುವುದಲ್ಲದೆ ಅವರ ವಂಶ ನಿರ್ವಂಶ, ಸಮಾಜದಲ್ಲಿ ಕ್ಷೋಭೆ ಇತ್ಯಾದಿ ಆಗಬಹುದು. ವಿಧ್ವಂಸಕರಾಗಬೇಡಿರಿ, ವಿದ್ವಾಂಸರಾಗಿರಿ ಎಂಬ ಎಚ್ಚರಿಕೆಯ ಘಂಟೆ ಮೊಳಗಿಸಿದ್ದಾರೆ.
ಇದಕ್ಕೆ ಸ್ಪಷ್ಟ ಉದಾಹರಣೆಯೇ ಪ್ರಸಕ್ತ ಶ್ರೀಚಕ್ರ ಅಥವಾ ಶ್ರೀಯಂತ್ರ. ಇದೊಂದು ಸ್ಥಂಭನ ಯಂತ್ರವಾಗಿದ್ದು ಅದರ ಬಳಕೆಯ ಸ್ಥಾನ ಮತ್ತು ಅನಿವಾರ್ಯತೆಯಲ್ಲಿ ಮಾತ್ರ ಸೂಕ್ತ. ತಾಂತ್ರಿಕತೆಯ ಅನಿವಾರ್ಯತೆ ಪೂರ್ಣಜ್ಞಾನವಿಲ್ಲದೆ ಸುಖಾಸುಮ್ಮನೆ ಬಳಸಿದವರ ಸರ್ವನಾಶ ಮಾಡುವುದು ಖಂಡಿತ!! ಇದಕ್ಕೆ ಹಲವಾರು ಶ್ರೀವಿಧ್ಯಾ ಸಾಧಕರ ಅಥವಾ ಶ್ರೀಚಕ್ರ ಸಾಧಕರ ದುರಂತ ಜೀವನದ ವ್ಯಥೆಗಳೇ ಸಾಕ್ಷಿ.
ಪ್ರಪಂಚಕ್ಕೆ ಸರ್ವಾಧಾರವಾದ ಷಢಾಧಾರ. ಅದರ ಚಲನೆಯ ಕ್ರಮವೇ ಸ್ವಸ್ತಿಕ. ಅದರಲ್ಲಿ ಹೇಗೆ ಪಂಚ ಮೂಲ ಶಕ್ತಿಗಳು ವ್ಯವಹರಿಸುತ್ತವೆ ಎಂದು ವಿವರಿಸಲಾಗಿದೆ. ಎಲ್ಲಾ ಆಗಮಗಳೂ ಪಂಚಾಯತನವೆಂಬ ಸೂತ್ರದಲ್ಲೇ ಬೆಸೆದುಕೊಂಡಿವೆ. ಆದರೆ ಮೂಲ ಆಗಮಗಳೇ ನಷ್ಟವಾಗಿದ್ದು, ಕಲ್ಪಿತವಾಗಿರುವ ಪ್ರಸಕ್ತ ಗ್ರಂಥಗಳಲ್ಲಿ ಯಾವುದೇ ಹುರುಳಿಲ್ಲ, ಬದ್ಧತೆಯೂ ಇಲ್ಲ. ಗೃಹಸ್ಥನು ತನಗೆ ಒದಗಬಹುದಾದ ಎಲ್ಲಾ ಕಷ್ಟ ಕಾರ್ಪಣ್ಯಗಳನ್ನು ಪಂಚ ದೇವತೆಗಳ ಸ್ಥಾನದ ಸಂಯೋಗ ಭಂಗದಿಂದ ಮೂಲದಲ್ಲಿದ್ದ ಪಂಚಾಯತನ ಪೂಜಾ ಪದ್ಧತಿಯಿಂದ ಸೋಲಿಲ್ಲದೆ ಮುನ್ನಡೆಯಬಹುದು. ಮುಂದಕ್ಕೆ ತಂತ್ರ ಬಳಸಿ ಸಾಮಾಜಿಕ ಸತ್ಕಾರ್ಯಗಳನ್ನು ಮಾಡಲು ಇಚ್ಛಿಸಿದರೆ ಸರ್ವದೇವತಾ ಮಂತ್ರಾನುಷ್ಠಾನಕ್ಕೆ ಉಪಯೋಗವಾಗುವ ಸರ್ವತೋಭದ್ರ ಮಂಡಲ ದೇವತಾ ಪೂಜಾವಿಧಾನವನ್ನೂ ಕೊಡಲಾಗಿದೆ.
ಈಗ ಕನಸು ಬಿದ್ದೊಡನೆ, ದುಡ್ಡು ಹೆಚ್ಚಾದೊಡನೆ, ದುಡ್ಡು ಮಾಡುವ ಸಲುವಾಗಿ ಇತ್ಯಾದಿ ಬಾಲಿಶ ಕಾರಣಗಳಿಗಾಗಿ ಕುಂತಲ್ಲಿ-ನಿಂತಲ್ಲಿ ಭಾರತಾದ್ಯಂತ ಕೋಟ್ಯಂತರ ದೇವಾಲಯಗಳ ನಿರ್ಮಾಣವಾಗುತ್ತಿದೆ. ಈಗೀಗಂತೂ ವೇದೋಕ್ತ ದೇವತೆಗಳು ಹೋಗಿ ಯಥೇಚ್ಛ ಭಯ ಉತ್ಪಾದನೆ ಮಾಡಿಯೇ ಭಕ್ತರನ್ನು ಸೆಳೆಯುವ ಆಧುನಿಕ ದೇವತೆಗಳದ್ದೇ ಕಾರುಬಾರು. ನಿಗಮಾಗಮ ತಂತ್ರಗಳನ್ನು ತಿಳಿಯದಿದ್ದರೂ ಕೂಡ ದಾರಿಹೋಕರೂ ದೇವತಾ ಪ್ರತಿಷ್ಠ ಮಾಡುವವರೇ ಆಗಿಬಿಟ್ಟಿದ್ದಾರೆ! ಆದರೆ ದೇವಾಲಯದಲ್ಲಿ ಚೈತನವೇ ಇಲ್ಲ. ದೇವತಾ ಸಾನ್ನಿದ್ಧ್ಯ ಉಳಿಯುತ್ತಿಲ್ಲವೇಕೆ? ವಾಸ್ತುಶಾಸ್ತ್ರಜ್ಞರು, ಶಿಲ್ಪಿಗಳು ಹಾಗೂ ಆಗಮೀಕರಿಗೆ ವರ್ಷಂಪ್ರತಿ ಜೀರ್ಣೋದ್ಧಾರ, ಬ್ರಹ್ಮಕಲಶ, ಉತ್ಸವ ಇತ್ಯಾದಿಗಳಿಗಾಗಿಯೇ ದೇವತಾ ಸಾನ್ನಿದ್ಧ್ಯ ಮರೆಯಾಗಿದೆಯೇ? ಭಕ್ತಾದಿಗಳಿಗೆ ಸಂಕಷ್ಟಗಳ ನಿವಾರಣೆಯಾಗುತ್ತಿಲ್ಲವೇಕೆ? ಸಮಾಜವನ್ನು ಒಗ್ಗೂಡಿಸುವ ಶಕ್ತಿ ದೇವಾಲಯಕ್ಕೆ ಇರಬೇಕಿತ್ತು. ಆದರೆ ಸಮಾಜವು ಒಡೆದು ಚೂರಾಗುತ್ತಿರುವುದು ಏಕೆ? ಎಲ್ಲಿ ತಪ್ಪಿದ್ದಾರೆ ಎಂದು ಆಲೋಚಿಸದರೂ ಹೊಳೆಯುವುದಿಲ್ಲ. ಏಕೆಂದರೆ ದೇವಪ್ರತಿಷ್ಠಾ ವಿಧಿ ಹಾಗೂ ಅದರ ಶಕ್ತಿಯನ್ನು ಕಾಯ್ದುಕೊಂಡು ಬರುವ ವಿಧಾನದ ಅಸ್ಪಷ್ಟತೆ. ಹಾಗಾಗಿ ದೇವಾಲಯ ನಿರ್ಮಾಣವಾದ ಸ್ಥಳ, ಆಯ, ವಿನ್ಯಾಸ, ದೇವತಾ ನಾಮ ನಿರ್ದೇಶನ, ಸೂಕ್ತಾಸೂಕ್ತ ಚಿಂತನೆ, ನಿರ್ಮಾತೃವಿನ ಯೋಗ, ಗ್ರಾಮವಾಸಿಗಳ ಯೋಗ, ಪ್ರಾಕೃತಿಕ ನಿಯಮಬದ್ಧತೆ ಇತ್ಯಾದಿಗಳನ್ನು ಸ್ಥೂಲವಾಗಿ ಚಿಂತಿಸಲಾಗಿದೆ.
ಉತ್ಸವಗಳಲ್ಲಿ ಮನೆತನ, ಗ್ರಾಮ, ಕ್ಷೇತ್ರ ಎಂಬ ವಿಭಾಗದ ಆಧಾರದಲ್ಲಿ ಭಿನ್ನತೆ ಇದೆ. ನೂರಾರು ಉತ್ಸವಗಳಿಂದ ಪ್ರಕೃತಿಗೆ ನಿತ್ಯೋತ್ಸವವೇ ಆಗುತ್ತದೆ. ಎಲ್ಲಾ ಉತ್ಸವಗಳು ಒಂದಲ್ಲಾ ಒಂದು ರೀತಿಯಲ್ಲಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಉದ್ದೇಶದಲ್ಲಿಯೇ ವೇದ ಮಾನ್ಯವಾಗಿಯೇ ಆಚರಿಸಲ್ಪಡುತ್ತದೆ. ಬ್ರಹ್ಮೋತ್ಸವ ವಿಧಿಯನ್ನು ನೀಡಲಾಗಿದೆ.
ಈಗಿನ ಪೀಳಿಗೆಗೆ ಪರಿಕರವೆಂದರೆ ಮೊಬೈಲ್, ಲ್ಯಾಪ್ಟಾಪ್, ಮೋಡಮ್, ಟಿ.ವಿ, ಇತ್ಯಾದಿ ಆಧುನಿಕ ವಿದ್ಯುನ್ಮಾನ ಉಪಕರಣೆಗಳು ಮತ್ತವುಗಳಿಗೆ ಸಂಬಂಧಪಟ್ಟ ಕೆಲ ಹತಾರಗಳು ಮಾತ್ರ. ಆದರೆ ಇವುಗಳ ಹಿಂದಿನ ವೈಧಿಕ ಭೌತಶಾಸ್ತ್ರೀಯ ಬದ್ಧತೆಯಾಗಲೀ  ತಂತ್ರೋಕ್ತ ಕಾರ್ಯವಿಧಾನಗಳಾಗಲೀ ತಿಳಿದೇ ಇಲ್ಲ. ಅಜ್ಞಾನದ ನಾಗಾಲೋಟದಲ್ಲೇ ಪರಿಕರಗಳನ್ನು ಉಪಾಂಶುವಾಗಿ ಬಳಸುತ್ತಾ ಪ್ರಾಕೃತಿಕ ಋಣ ಕರ್ಮ ಪಾಶಗಳಲ್ಲಿ ನಿರಂತರ ಬಂಧಿಯಾಗುತ್ತಿದ್ದಾನೆ. ಅವುಗಳನ್ನು ಗೆಲ್ಲಲು ಪರಿಕರ ವಿಜ್ಞಾನ ಅರಿತಿರಬೇಕುಅದು ವಿಶೇಷವಾದ ೧೦ ವಿಭಾಗಗಳು, ಅಂದರೆ ೫೦ ಸಾಧಿಸಬೇಕಾದ ಪರಿಕರಗಳು. ಪರಿಕರದ ಹತ್ತೇ ತಂತ್ರದ ದಶಮಹಾವಿಧ್ಯೆ ಹೊರತು ಛಿನ್ನಮಸ್ತಾದಿ ಉಗ್ರಶಕ್ತಿಗಳಲ್ಲ. ಪ್ರಪಂಚದ ಯಾವುದೇ ಶಾಸ್ತ್ರದ ಯಾವುದೇ ಸಲಕರಣೆ, ಉಪಕರಣೆ, ಹತಾರಗಳನ್ನು ಯಾವುದೇ ರೀತಿಯಲ್ಲಿ ತನಗೆ ಬೇಕಾದಂತೆ ಕಾರ್ಯಸಾಧನೆ ಮಾಡಲು ಪರಿಕರ ಸಿದ್ಧಿ ಪಡೆಯಬೇಕು. ಇದರ ನಂತರವೇ ಆಗಮ+ತಂತ್ರಾಭ್ಯಾಸ ಮಾಡಬೇಕೆಂಬ ಸೂಚನೆ ಇದೆ. ಪರಿಕರ ಸೂತ್ರವನ್ನು ಸಿದ್ಧಸಿಕೊಂಡವರೇ ಆಗಮೀಕ, ತಂತ್ರಿ ಆಗುವ ಅರ್ಹತೆ ಪಡೆದು ಸಾಧನೆ ಗೈದು ಯೋಗಿಯೋ, ಧೈವವೋ, ದೇವತೆಯೋ ಆಗಬಹುದು.
ಎಲ್ಲಾ ತಂತ್ರಸಾಧನೆಗಳ ದಾರಿಯನ್ನು ತೋರುತ್ತಾ ನಿತ್ಯಾನಂದರು ಆಯ್ದ ವೇದ ಮಂತ್ರಗಳಿಂದ ಹಿಂಜಿ ತೆಗೆದ ಶೈವ, ವೈಖಾನಸ, ಪಾಂಚರಾತ್ರವೆಂಬ ಮೂರು ಆಗಮಗಳಲ್ಲಿ ಹಾಗೂ ಆಗಮಾತೀತವಾಗಿಯೂ ವ್ಯವಹರಿಸತಕ್ಕ ೨೩೬ ಬೀಜಾಕ್ಷರಗಳನ್ನು ಪ್ರಕಟಿಸಿದ್ದಾರೆ. ಅದರಿಂದ ನ್ಯಾಸ, ಅಸ್ತ್ರ, ಕೀಲಕ, ಪ್ರಯೋಗಾದಿಗಳ ಕುರುಹು ನೀಡಿದ್ದಾರೆ. ಬೀಜಾಕ್ಷರ ವಿಭಾಗಗಳನ್ನು ಸೂಕ್ಷ್ಮವಾಗಿ ವಿವರಿಸಲಾಗಿದೆ. ಆದರೆ ಇಲ್ಲಿಯೂ ಕೂಡ ವೇದಾಧ್ಯಯನದಿಂದಲೇ ನಿಧಾನವಾಗಿ ತಾಂತ್ರಿಕರಾಗಿರಿ, ಆತುರಕ್ಕೆಡೆಮಾಡಿಕೊಟ್ಟು ವಿನಾಶವಾಗದಿರಿ ಎಂದು ಎಚ್ಚರಿಸಲಾಗಿದೆ.
೧೫ ನ್ಯಾಸಗಳು, ಪ್ರಯೋಗಗಳು, ಕೀಲಕಗಳು, ಶಕ್ತಿಗಳು, ಚಾಲ್ತಿಯಲ್ಲಿರುವ ಅಸ್ತ್ರ ವಿಭಾಗಗಳು, ಅದರೊಳಗೆ ೩೨ ಮಂತ್ರಾಸ್ತ್ರಗಳು + ೩೨ ಶಸ್ತ್ರಗಳು, ಅವಕ್ಕೆ ೮೪ ವಿಧದ ಪ್ರಯೋಗ ಅವಕಾಶವಿದೆ. ಅಸ್ತ್ರ ಸಿದ್ಧಿ ವಿಧಾನ, ಪ್ರಯೋಗಾರ್ಹತೆ, ಇತ್ಯಾದಿ ರಹಸ್ಯಗಳನ್ನು ಬಹಳ ಸೂಕ್ಷ್ಮವಾಗಿ ತಿಳಿಸಿದ್ದಾರೆ. ಇಲ್ಲೆಲ್ಲಾ ನಿಗಮಾಗಮ ಬದ್ಧತೆ, ಸಾತ್ವಿಕತೆ, ಸಮಾಜ ಸ್ವಾಸ್ಥ್ಯ, ಪ್ರಾಕೃತಿಕ ಸಮತೋಲಗಳಿಗೇ ಪ್ರಾಧಾನ್ಯತೆ. ಏನಕೇನ ಪ್ರಕಾರೇಣ ಬಳಸಿದರೆ ಏನಕೇನ ಪ್ರಕಾರೇಣ ನಾಶ ಖಂಡಿತ ಎಂಬ ಶಾಪವೇ ಇದಕ್ಕಿರುವಂತೆ ಕಾಣುತ್ತದೆ.
ಮೂಲ ಆಗಮಗಳಲ್ಲಿ ದೇವಾಲಯ, ಗ್ರಾಮ, ನಗರ, ಕಟ್ಟಡ ಹಾಗೂ ಕೋಟೆ ಕೊತ್ತಲಗಳಂತಹಾ ಬೃಹತ್ ನಿರ್ಮಾಣಗಳಿಗೆ ನೀಡಿರುವ ಲೆಕ್ಕಾಚಾರವನ್ನು ಸಣ್ಣ ಪುಟ್ಟ ನಿರ್ಮಾಣಗಳಿಗೂ ಹೊಂದಿಸಿ ಜೀವನ ಸುಗಮಗೊಳಿಸುವ "ಆಯ"ಗಳನ್ನು ತಂತ್ರವು ರೂಪಿಸಿತು. ಮೂಲ ತಂತ್ರದ ಆಯ ಸೂತ್ರಗಳೇ ನಿಜವಾದ ವಾಸ್ತುಶಾಸ್ತ್ರಈಗಿನ ಕಳಪೆ ವಾಸ್ತುಶಾಸ್ತ್ರಕ್ಕಿಂತ ಭಿನ್ನವಾದ ವಾಸ್ತುಶಾಸ್ತ್ರದ ವಿಚಾರವನ್ನು ಬುದ್ಧಿವಂತರು ಮಾತ್ರ ಅರ್ಥಮಾಡಿಕೊಳ್ಳಲಿ ಎಂಬ ಸದಾಶಯದಿಂದ ಪ್ರಕಟಿಸಲಾಗಿದೆ.ಒಟ್ಟಾರೆ ನಿಗೂಢವಾಗಿ ರಹಸ್ಯವಾಗಿ ಕಂಡುಬರುವ ನಿಗಮಾಗಮ ತಂತ್ರಗಳ ಕೊಂಡಿಯನ್ನು ವೇದ ವಿಜ್ಞಾನದ ಚೌಕಟ್ಟಿನಲ್ಲಿ ವರ್ಣಿಸಿರುವ ಬ್ರಹ್ಮ ಋಷಿ ಕೆಎಸ್ನಿತ್ಯಾನಂದ ಸ್ವಾಮೀಜಿಯವರಿಗೆ ಅನಂತಾನಂತ ವಂದನೆಗಳು. ಇವರಿಂದ ಎಲ್ಲಾ ತಂತ್ರಗಳ ಪಾಠ ಪ್ರವಚನಗಳು ಲೋಕಮುಖಕ್ಕೆ ದೊರಕಲಿ ಎಂದು ಮಹಾಕಾಲನಲ್ಲಿ ಪ್ರಾರ್ಥಿಸುತ್ತೇನೆ.
- ಹೇಮಂತ್ ಕುಮಾರ್ ಜಿ.

ಪುಸ್ತಕದ ಪ್ರತಿ ದೊರೆಯುವ ಸ್ಥಳಗಳು:-

1. ವೇದ ವಿಜ್ಞಾನ ಮಂದಿರ, ಶ್ರೀನಿವಾಸ ನಗರ, ರಾಂಪುರ, ಚಿಕ್ಕಮಗಳೂರು.2. ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ, ಪಾವಂಜೆ, ಹಳೆಯಂಗಡಿ, ದ.ಕ.  ವೆಬ್‍ಸೈಟ್:- http://jnanashakthi.in/  • ಪುಸ್ತಕವು ಮೇಲ್ಕಂಡ ಸ್ಥಳಗಳಲ್ಲಿ ಖುದ್ದಾಗಿ ಪಡೆದುಕೊಳ್ಳಬಹುದು.
  • ಅಂಚೆಯ ಮೂಲಕ ಕಳುಹಿಸುವ ವ್ಯವಸ್ಥೆ ಇರುವುದಿಲ್ಲ.
  • ಪುಸ್ತಕದ ಮೊತ್ತವನ್ನು ಗೋಶಾಲೆಯಲ್ಲಿ ಗೋಸೇವೆಗೆ ಬಳಸಲಾಗುವುದು.