Friday, 7 December 2012

F.D.I. ಭಾರತಕ್ಕೆ ಬೇಕೇ?


ಕೇಂದ್ರ ಸರ್ಕಾರ ಚಾಲ್ತಿಯಲ್ಲಿ ತರಲು ಉದ್ದೇಶಿಸಿದ F.D.I. ಇದು ಭಾರತದಂತಹಾ ದೇಶಕ್ಕೆ ಬೇಕೆ? ಇಲ್ಲ. ಚಿಲ್ಲರೆ ವ್ಯಾಪಾರ ಕ್ಷೇತ್ರವೆಂಬುದು ಒಂದು ವಿಶಿಷ್ಟ ರೀತಿಯಲ್ಲಿ ಸಾವಿರಾರು ವರ್ಷಗಳಿಂದ ಬೆಳೆದು ಬಂದಿದೆ. ಈ ಚಿಲ್ಲರೆ ವ್ಯಾಪಾರ ಪದ್ಧತಿಯೇ ವಿಶೇಷ. ಪ್ರಪಂಚದಲ್ಲೆಲ್ಲಿಯೂ ಇರದ ಇಲ್ಲಿನ ಉದ್ದರಿ, ಕಡ, ಸಾಲ, ಮುಯ್ಯಿ, ಹುಯಿಲು, ವಾರ್‍ತೆ, ಆಳ್ತೆ ಎಂಬ ರೀತಿಯ ವ್ಯಾಪಾರ ಪದ್ಧತಿಯ ನೆಲೆಯಲ್ಲಿ ರೂಪುಗೊಂಡದ್ದು ಭಾರತೀಯ ಚಿಲ್ಲರೆ ವ್ಯಾಪಾರ ಪದ್ಧತಿ. ಅದರ ಮೂಲ, ಬದ್ಧತೆ, ವಿಶಿಷ್ಟತೆಯನ್ನು ಅರ್ಥಮಾಡಿಕೊಳ್ಳಲಾಗದ ಈಗಿನ ಅರ್ಥಶಾಸ್ತ್ರಜ್ಞರು ಏಕಾಏಕಿ ಈ F.D.I. ಬಳಕೆಗೆ ತಂದರೆ ಮುಂದೆ ಅನಾಹುತ ಖಂಡಿತ. ದೇಶದ ದುರಂತವೆಂದೇ ಹೇಳಬಹುದು.

ಭಾರತೀಯ ಚಿಲ್ಲರೆ ವ್ಯಾಪಾರ ಒಂದು ಕೌಟುಂಬಿಕ ವ್ಯವಸ್ಥೆಗೆ ಬದ್ಧವಾಗಿರುತ್ತದೆ. ಇಲ್ಲಿ ವ್ಯಾಪಾರೀ ಉದ್ದೇಶಕ್ಕಿಂತ ಪರಸ್ಪರ ಸಹಕಾರವಿದೆ. ಪೂರಕ ಜೀವನವಿದೆ. ಸಮಾಜಕ್ಕೆ ಅನ್ನ ಕೊಡುವ ಬಾಧ್ಯತೆ ಇದೆ. ಲಾಭ ಮಾಡುವ ಉದ್ದೇಶ ಮಾತ್ರಾ ಅಲ್ಲ, ಇಲ್ಲಿ ವಾರಕ್ಕೊಮ್ಮೆ, ತಿಂಗಳಿಗೊಮ್ಮೆ, ವರ್ಷಕ್ಕೊಮ್ಮೆ ಹಣ ಕೊಡುವ ಪದ್ಧತಿ, ಬೆಳೆದ ಧಾನ್ಯ, ತರಕಾರಿ, ಅಕ್ಕಿ, ರಾಗಿ ಕೊಡುವ ಪದ್ಧತಿಯೊಂದಿಗೆ. ಈ ರೀತಿ ಚಿಲ್ಲರೆ ವ್ಯಾಪಾರವು ಕೆಳ ಮಧ್ಯಮ ವರ್ಗಕ್ಕೆ ಆಶ್ರಯ ಕೊಡುತ್ತಾ ಕೃಷಿ, ಕೃಷಿಕೂಲಿ, ಇತರೆ ಕೆಲಸಗಳಲ್ಲಿ ಅಂದರೆ ನೇಕಾರಿಕೆ, ಕುಂಬಾರಿಕೆ, ಕಮ್ಮಾರಿಕೆ, ಮರಗೆಲಸ, ನಿರ್ಮಾಣ ಕೆಲಸಗಳು ಇವುಗಳನ್ನು ಮಾಡುವವರ ಆಶ್ರಯ ಮತ್ತು ಅನ್ನದಾತನಾಗಿ ಚಿಲ್ಲರೆ ವ್ಯಾಪಾರ ಭಾಗ ತನ್ನ ಕಾರ್ಯ ನಿರ್ವಹಿಸುತ್ತಿದೆ. ಆದರೆ F.D.I. ಬಂದರೆ ಈ ವ್ಯವಸ್ಥೆ ಸಾಧ್ಯವಿಲ್ಲ. ನಮ್ಮಲ್ಲಿ ಹಾಲು, ನೀತು, ತರಕಾರಿ, ಸೊಪ್ಪು, ದಿನಸಿಗಳು ನೇರ ವ್ಯಾಪಾರಕ್ಕಿಂತ ಉದ್ದರಿ ವ್ಯಾಪಾರ ಜಾಸ್ತಿ. ಮತ್ತು ಉತ್ಪಾದಕನಿಂದ ಬಳಕೆದಾರನಿಗೆ ತಲುಪಿಸುವ ವ್ಯವಸ್ಥೆಯೊಂದರಲ್ಲೇ ಅಂದಾಜು ೧೨ ಕೋಟಿ ಜನ ಉದ್ಯೋಗ ಮಾಡಿಕೊಂಡಿದ್ದಾರೆ ಭಾರತದೇಶದಲ್ಲಿ. 

ಇನ್ನೂ ಇತರೆ ಚಿಲ್ಲರೆ ವ್ಯಾಪಾರಿಗಳು ಬಟ್ಟೆ, ಗೃಹೋಪಕರಣ, ಸಮಾರಂಭಗಳ ನಿರ್ವಹಣೆ ಇತ್ಯಾದಿ ಭಾಗದಲ್ಲೂ ಅಂದಾಜು ೧೬ ಕೋಟಿ ಜನ ಕೆಲಸ ಮಾಡುತ್ತಿದ್ದಾರೆ. ಸಂತೃಪ್ತಿ ಇದೆ. ಸ್ವಲ್ಪ ತೊಡಕಾದರೂ ವ್ಯವಸ್ಥೆ ಕೋಟಿ ಕೋಟಿ ಜನರಿಗೆ ಜೀವನ ಕೊಟ್ಟಿದೆ. ಅವರೆಲ್ಲರ ಜೀವನ ಕಸಿದು ಅವರನ್ನು ನಿರುದ್ಯೋಗಿಗಳಾಗಿ ಮಾಡಿಕೊಡುವ ವಿದೇಶೀ ವ್ಯಾಪಾರ ಭಾರತಕ್ಕೆ ಬೇಕೇ ಚಿಂತಿಸಿ? ಒಟ್ಟಾರೆ F.D.I. ನಿಂದಾಗಿ ಭಾರತೀಯ ಪದ್ಧತಿಯ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ೨೮ ಕೋಟಿ ಜನ ಉದ್ಯೋಗ ಕಳೆದುಕೊಳ್ಳುತ್ತಾರೆ ಮಾತ್ರವಲ್ಲ ಈ ಚಿಲ್ಲರೆ ವ್ಯಾಪಾರ ಕ್ಷೇತ್ರವನ್ನೇ ಆಶ್ರಯಿಸಿ ಅದರ ಸಹಾಯ ಆಶ್ರಯದಿಂದ ಬದುಕುತ್ತಿರುವ ಅಂದಾಜು ೩೦ ಕೋಟಿಯಷ್ಟು ಬಡವರೂ ಕೂಡ ಕಂಗಾಲಾಗುತ್ತಾರೆ. ನಿತ್ಯವೂ ಹಣ ಕೊಟ್ಟೇ ಕೊಂಡುಕೊಳ್ಳುವ ಶಕ್ತಿ ಬಡವರಿಗಿರುವುದಿಲ್ಲ. ಯಾವುದೇ ರೀತಿಯ ಸಾಲ, ಉದ್ದರಿ ವಿದೇಶೀ ಕಂಪೆನಿಗಳು ಕೊಡಲಿಕ್ಕಿಲ್ಲ. ಅಂದಾಜು ೧೦ ಕೋಟಿಯಷ್ಟು ಕೂಲಿಕಾರ್ಮಿಕರು ಈ ವ್ಯವಸ್ಥೆಯ ಬಳಕೆ ಮಾಡಿಕೊಂಡು ಸುಖ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಅದೂ ಇಲ್ಲವಾಗುತ್ತದೆ. 

ಕಾಫಿ, ಟೀ, ರಬ್ಬರ್ ಮತ್ತು ಇರತೆ ತೋಟದ ಕೂಲಿ ಕಾರ್ಮಿಕರು, ನಿರ್ಮಾಣ ಕೆಲಸದ ಗಾರೆ ಇತರೆ ಕೂಲಿ ಕಾರ್ಮಿಕರು ವಾರಕ್ಕೆ ಒಮ್ಮೆ ಬಟವಾಡೆ ತೆಗೆದುಕೊಳ್ಳುವವರು. ಅವರು ತಮ್ಮ ಹತ್ತಿರದ ಪರಿಚಯಸ್ಥ ಚಿಲ್ಲರೆ ವ್ಯಾಪಾರಿಯಲ್ಲಿ ಆ ವಾರದ ದಿನಸಿ ಸಾಲ ಪಡೆದೇ ಬದುಕುವುದು. ಅವರ ಗತಿ ದೇವರೇ ಗತಿಯಲ್ಲವೆ? ಅದೆಲ್ಲಾ ಸೌಲಭ್ಯ ಈ ವಿದೇಶೀ ಕಂಪೆನಿ ಕೊಡಬಲ್ಲುದೇ? ಖಂಡಿತಾ ಕೊಡಲಾರದು. ಈಗಲೂ ಕೂಡ ನಾಲ್ಕಾಣೆ ಚಾಪುಡಿ ಕೊಳ್ಳುವ ಎಷ್ಟೋ ಜನರಿದ್ದಾರೆ. ಅವರಿಗೆ ಅವರ ಹಂತದಲ್ಲಿ ಚಿಲ್ಲರೆ ವ್ಯಾಪಾರ F.D.I. ಮಾಡುತ್ತದೆಯೇ? ಖಂಡಿತಾ ಇಲ್ಲ.

ಮತ್ತು ಮುಖ್ಯವಾಗಿ ಗಮನಿಸಿ. ಈ ಚಿಲ್ಲರೆ ವ್ಯಾಪಾರಿ ಕ್ಷೇತ್ರ ಸಮಾಜದಲ್ಲಿ ಒಂದು ಉತ್ತಮ ಬಾಂಧವ್ಯ ಸೃಷ್ಟಿಸಿದೆ. ಕಾರ್ಮಿಕರ + ರೈತರ + ವ್ಯಾಪಾರಿಗಳ ಪರಸ್ಪರ ಬಾಂಧವ್ಯ. ಏಕೆಂದರೆ ಅವರಿಗೆ ಇವರು ಬೇಕು, ಇವರಿಗೆ ಅವರು ಬೇಕು; ಅನಿವಾರ್ಯತೆ. ಹಾಗಾಗಿ ಬಿಡಲಾರದ ಒಂದು ವಿಶಿಷ್ಟ ಬಾಂಧವ್ಯವಿದೆ. ಈ F.D.I. ಬಂದರೆ ಈ ಬಾಂಧವ್ಯ ಒಗ್ಗಟ್ಟು ಇರಲಾರದಲ್ಲವೆ? ಇದ್ದರೂ ಯಾವ ಸ್ವರೂಪದ್ದಿರಬಹುದು? ಚಿಂತಿಸಿ. ಕೃಷಿಯಾರಂಭಕಾಲಕ್ಕೆ ಹಣವಿಲ್ಲದ ರೈತನೊಬ್ಬ ಹಿಂದಿನ ಕೃಷಿ + ವಾಣಿಜ್ಯ ಅನ್ಯೋನ್ಯ ಪದ್ಧತಿಯಲ್ಲಿ ಒತ್ತೆ ಕೃಷಿ ಎಂಬ ಪದ್ಧತಿಯಿತ್ತು. ಅಲ್ಲಿ ರೈತ ಕೃಷಿಯಾರಂಭದಿಂದ ಕೃಷಿಗೆ ಮತ್ತು ತನ್ನ ಕುಟುಂಬ ನಿರ್ವಹಣೆಗೆ ತಾನು ಮಾಡಲಿರುವ ಕೃಷಿಯನ್ನೇ ಒತ್ತೆಯಾಗಿಟ್ಟು ಸಾಲರೂಪದಲ್ಲಿ ಕೃಷಿ ಸಾಮಗ್ರಿ ಬೀಜಾದಿಗಳನ್ನು ಸಲಕರಣೆಗಳೂ ಮತ್ತು ಕುಟುಂಬ ನಿರ್ವಹಣೆಗೆ ದಿನಸಿಗಳನ್ನು ಪಡೆದು ಕೃಷಿ ಮಾಡುತ್ತಿದ್ದ. ಬೆಳೆ ಬಂದಾಗ ಕುಯಿಲಿನ ನಂತರ ತಾನೇ ಸ್ವತಃ ವ್ಯಾಪಾರಿಗೆ ಸಾಲದ ಬಾಬ್ತು ಬೆಳೆಯಲ್ಲಿ ಕೊಟ್ಟು ಉಳಿಕೆಯನ್ನು ತಾನು ಮುಂದೆ ಬಳಸುತ್ತಿದ್ದ. ಮತ್ತು ಈ ಸಂದರ್ಭದಲ್ಲಿ ಯಾವುದೇ ಉತ್ಪಾತಗಳಿಂದ ಬೆಳೆ ನಷ್ಟವಾದರೆ ಸಾಲ ಉದ್ದರಿಯಾಗುತ್ತಿತ್ತು. ರೈತನಿಗೆ ಭಾರವಿರುತ್ತಿರಲಿಲ್ಲ. ರೈತ ಸಾಲಗಾರನಾಗುತ್ತಿರಲಿಲ್ಲ.

ಈಗ ಹಾಗೇನಾದರೂ ಬ್ಯಾಂಕ್ ಸಾಲ ಮಾಡಿದ್ದರೆ ಅದೇ ಬ್ಯಾಂಕ್ ರೈತನ ಜಮೀನು, ಮನೆ ಸಾಮಾನು, ಒಡವೆ, ವಸ್ತ್ರಗಳು ಅಲ್ಲದೇ ರೈತನ ಮಾನವನ್ನೂ ಹರಾಜು ಹಾಕಿ ವಸೂಲಿ ಮಾಡಿಕೊಳ್ಳುತ್ತಿದ್ದಾರೆ. ಇದು ಬೇಕೆ? F.D.I. ಇದಕ್ಕೂ ಹೆಚ್ಚಿನ ಕ್ರೂರತೆ ಮೆರೆಯಲಾರದೇ? ವಿದೇಶೀ ನೀತಿಯ ಒತ್ತೆ ಸೆರೆ ಹೇಗಿತ್ತು ಎಂಬುದಕ್ಕೆ ನಮ್ಮ ಕರ್ನಾಟಕದ ಒಂದು ಉದಾಹರಣೆ ಸಾಕು ಕೇಳಿ. ಹಿಂದೆ ಟಿಪ್ಪುವು ಬ್ರಿಟಿಷರಿಗೆ ಯುದ್ಧದಲ್ಲಿ ಸೋತಾಗ ಅಮಾನವೀಯವಾಗಿ ತನ್ನ ಮಕ್ಕಳನ್ನೇ ಹಣದ ಪರವಾಗಿ ಒತ್ತೆ ಇಟ್ಟಿದ್ದು ನಿಮಗೆ ತಿಳಿದಿರಬಹುದು. ವಿದೇಶೀ ಕಂಪೆನಿಗಳು ಅದಕ್ಕಿಂತ ಅಮಾನವೀಯವಾಗಿ ವರ್ತಿಸಲಾರದೆಂಬ ಗ್ಯಾರಂಟಿ ಯಾರು ಕೊಡುತ್ತಾರೆ? ಒಟ್ಟಾರೆ ವಿದೇಶೀ ವ್ಯಾಪಾರ ನೀತಿಯು ಭಾರತಕ್ಕೆ ಖಂಡಿತಾ ಒಳ್ಳೆಯದಲ್ಲ. ಹಾಗಾಗಿ F.D.I. ನಂತಹಾ ವಿದೇಶೀ ವ್ಯಾಪಾರ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮುಂಚೆ ಎಚ್ಚೆತ್ತುಕೊಳ್ಳಿರಿ.

ನಮ್ಮ ಭಾರತದೇಶ ಒಂದು ರೀತಿಯ ಭಾವನಾತ್ಮಕ ಜೀವನ ಪದ್ಧತಿ ಹೊಂದಿದ ದೇಶ. ಇಲ್ಲಿ ಬಂಡವಾಳಶಾಹಿ ವೃತ್ತಿ ಬಿತ್ತಿ ಬಿಟ್ಟಿದ್ದಾರೆ ವಿದೇಶಿಯರು. ಅದರಿಂದಾಗಿ ಬಾಂಧವ್ಯ, ಸಂಬಂಧ ಭಾವನಾತ್ಮಕತೆ ನಾಶವಾಗುತ್ತಿದೆ. ಒಂದು ಗ್ರಾಮದಲ್ಲಿ ಸಮೂಹವಾಗಿ ವಾಸಿಸುತ್ತಿದ್ದ ಜನ ಸಂಪೂರ್ಣ ವೈಯಕ್ತಿಕತೆಗೆ ಹೋಗುತ್ತಿದ್ದಾರೆ. ಆ ಕಾರಣದಿಂದಾಗಿ ಮನೋ ವಿಕೃತಿ ಕಾರಣದಿಂದಾಗಿ ಜೀವನ ಸುಖದ ಅನುಭವವೇ ಅವರಿಗಿಲ್ಲವಾಗಿದೆ. ಪ್ರತೀ ವಿಚಾರವನ್ನೂ ಲಾಭ-ನಷ್ಟಗಳ ಪರಿಧಿಯಲ್ಲೇ ಚಿಂತಿಸುವ ಅಭ್ಯಾಸ ರೂಢಿಯಾಗಿದೆ. ತಮಗೇ ಹುಟ್ಟುವ ಮಕ್ಕಳೂ ಕೂಡ ಒಂದು ಬಂಡವಾಳವೆಂಬ ಭ್ರಾಂತಿಯಲ್ಲಿ ಆ ಮಗುವಿನ ಮಾನಸಿಕ ಸ್ಥಿತಿಯನ್ನು ಗಮನಿಸದೇನೇ ಓದು, ಓದು, ಓದು ಎಂಬ ಮೂರ್ಖಜ್ಞಾನ ಸಂಪಾದನೆಯಲ್ಲಿಯೇ ಎಲ್ಲಿಯೋ ಹಾಸ್ಟೆಲ್‍ನಲ್ಲಿ ಬೆಳೆಸುತ್ತಿದ್ದಾರೆ. ನಂತರ ಉದ್ಯೋಗ ಸಿಕ್ಕಿ ವಿದೇಶದಲ್ಲಿ ಮಗು ನೆಲೆಸುತ್ತದೆ. ಈ ತಂದೆ ತಾಯಿಗೆ ಅನಾಥ ಸ್ಥಿತಿ. ಪರಸ್ಪರ ಅವಲಂಬನೆ ಇಲ್ಲ. ಭಕ್ತಿ, ಭಾವ, ಭಯವಿಲ್ಲ. ಹಿರಿಯರಲ್ಲಿ ಗೌರವವಿಲ್ಲ. ಧೈವಭಕ್ತಿಯಿಲ್ಲ. ಪಾಪ-ಪುಣ್ಯಗಳ ಪರಿಚಯವಿಲ್ಲ. ಬರೇ ದುಡಿಮೆ + ಹಣ. ಈ ಕಾರಣದಿಂದಾಗಿ ಹೆಂಡತಿಯೂ ಒಂದು ಬಂಡವಾಳ. ಅಲ್ಲಿಯೂ ಭಾವನೆಯಿಲ್ಲ. ನಂಟುತನವಿಲ್ಲ. ಏಕತೆ ಇಲ್ಲ. ಸಾಮೀಪ್ಯ ಸಂಸಾರವೆಂಬ ಅನುರಾಗವಿಲ್ಲ. ತಂದೆತಾಯಿಗಳು ಮಕ್ಕಳ ದೃಷ್ಟಿಯಲ್ಲಿ “ಗುಜರಿ” ವೇಸ್ಟ್ ಬಾಡಿಗಳು. ಹಾಗಾಗಿ ಯಾವುದಾದರೂ ಆಸ್ಪತ್ರೆ, ಅನಾಥಾಶ್ರಮಗಳಿಗೆ ದಾನ ಮಾಡಿ ತಾವು ಸತ್ಕಾರ್ಯ ಮಾಡಿದೆವು ಅಂತ ಸಮಾಧಾನಪಟ್ಟು ಕೊಳ್ಳುತ್ತಾರೆ. ಆದರೆ ಇದು ಭಾರತೀಯ ಜೀವನವೆ? ಖಂಡಿತಾ ಅಲ್ಲ.

ಇಲ್ಲಿ ಒಂದು ತಾಯಿ ತನ್ನ ಮಗುವನ್ನು ಹೆರುವುದು ತನ್ನ ಭಾಗ್ಯಕ್ಕಾಗಿ, ವಂಶಾಭಿವೃದ್ಧಿಗಾಗಿ, ತನ್ನ ತಾಯ್ತನದ ಸಾರ್ಥಕತೆಗಾಗಿ. ತಾನು ಒಂದು ಹೆಣ್ಣು ಎಂದು ಸಮಾಜದಲ್ಲಿ ಸ್ಥಿರಪಡಿಸುವುದಕ್ಕಾಗಿ. ಆ ಮಗು ಹೇಗೇ ಇರಲಿ, ಅದರ ಆಟೋಟಗಳಲ್ಲಿ ಆನಂದ ಅನುಭವಿಸಿ ತನ್ನ ತಾಯ್ತನ ಸಾರ್ಥಕ ಪಡಿಸಿಕೊಳ್ಳುತ್ತಾಳೆ. ಆದರೆ ಈಗ ಆ ಮಗು ಮಾತು ಕಲಿಯುತ್ತಲೇ ಶಾಲೆಗೆ ಹಾಕಿ, ಓದು ಕಲಿಸುವ ತನ್ಮೂಲಕ ಅಂಕಗಳಿಸುವ ಯಂತ್ರವಾಗಿ ರೂಪಿಸಿ, ಡಿಗ್ರಿ ಮಾಡಿ, ಉದ್ಯೋಗ ಕೊಡಿಸಿ, ವಿದೇಶಕ್ಕೆ ರಫ್ತು ಮಾಡಿ ಇದೇ ಸಂತೋಷವೆಂದು ತಿಳಿಯುತ್ತಾಳೆ. ಇದು ಅವಳ ಅಜ್ಞಾನವಲ್ಲವೇ? ಸಂಸಾರವೆಂದರೆ ಗಂಡ, ತಂದೆ, ತಾಯಿ, ಮಕ್ಕಳು ಇವರನ್ನು ಕೂಡಿ ಬಾಳುತ್ತಾ ಬಂಧುವರ್ಗದಲ್ಲಿ ಸ್ನೇಹ ವಿಶ್ವಾಸದಿಂದ ಸ್ಪಂದಿಸುತ್ತಾ ಹೊಂದಾಣಿಕೆಯಿಂದ ಅಲ್ಪತೃಪ್ತಳಾಗಿ ಬಾಳುವವಳೇ ತಾಯಿ ಎನ್ನಿಸಿಕೊಳ್ಳುತ್ತಾಳೆ. ಅದು ಬಿಟ್ಟು ಒಂದೋ ಎರಡೋ ಮಗುವನ್ನು ಹೆತ್ತವಳು ತಾಯಿಯಲ್ಲ. ಆ ಹೆತ್ತ ಮಕ್ಕಳನ್ನೂ ತನ್ನ ಭಾವನಾತ್ಮಕ ಬಾಂಧವ್ಯದಿಂದ ಪ್ರೀತಿಯಿಂದ ವಶಪಡಿಸಿಕೊಂಡು ಅವರ ಏಳ್ಗೆ ಸಂತೋಷಕ್ಕಾಗಿ ಪುಟಿಯುತ್ತಿರುವುದೇ ತಾಯ್ತನ. ಅವ್ಯಾವುದೂ ಇಲ್ಲದೇ ಎಲ್ಲಿಯೋ ವಿದೇಶದಲ್ಲಿ ತನ್ನ ಮಗ ಹಣ ಮಾಡುತ್ತಿದ್ದಾನೆ ಎಂಬ ಸಂತೋಷದ ಭ್ರಾಂತಿಯಲ್ಲಿ ಬದುಕುವ ಬದುಕು ಬದುಕೇ ಅಲ್ಲ. ಆದರೆ ಇದೆಲ್ಲಾ ವಿದೇಶೀ ಬಂಡವಾಳಶಾಹಿ ವೃತ್ತಿಯಿಂದ ಕಲಿತದ್ದು.

ಇದೇ ಕರ್ನಾಟಕದ ಒಬ್ಬ ಪುಣ್ಯಾತ್ಮರು ಬದುಕಿನ ಕಲೆಯ ಬಗ್ಗೆ ವಿವರವಾಗಿ ಪುಸ್ತಕರೂಪದಲ್ಲಿ ಬರೆದು ತಿಳಿಸಿದರು. “ಬದುಕಲು ಕಲಿಯಿರಿ” “ಆರ್ಟ್ ಆಫ್ ಲೀವಿಂಗ್” ಆದರೇನು ಫಲ? ಪುಸ್ತಕ ಓದಲು ಕಲಿತಿಲ್ಲ ಜನ. ಬರೇ ಶಾಲೆಯ ‘ಸಿಲಬಸ್’ ಬಿಟ್ಟರೆ ಬೇರೇನೂ ಓದಲು ಬರೆಯಲು ಬಾರದಂತೆ ಶಿಕ್ಷಣ ಪಡೆದಿದ್ದಾರೆ ಇವರು. ಹಾಗಾಗಿ ಇವರಾರೂ ಬದುಕು ಕಲಿತಿಲ್ಲ. ಕಲಿಸಲು ಸಾಧ್ಯವಿಲ್ಲವೆಂಬಷ್ಟು ಅಜ್ಞಾನ ತುಂಬಿ ಹೋಗಿದೆ. ಇದು ಬಂಡವಾಳಶಾಹೀ ವೃತ್ತಿಯಾದ ವಿದೇಶೀ ಜ್ಞಾನ. ಇದನ್ನೇ ಸತ್ಯವೆಂದು ನಂಬಿದ್ದು ಅಜ್ಞಾನ. ನಮ್ಮ ಆಳುವ ಸರಕಾರ ಕೂಡ ಈ ಅಜ್ಞಾನದಿಂದಲೇ ಹೆಚ್ಚು ತೆರಿಗೆ ಸಂಗ್ರಹ, ಬಂಡವಾಳದ ಭರ್ತಿ ಉದ್ದೇಶವನ್ನು ಹೇಳಿ ಈ F.D.I. ಎಂಬ ಮಹಾರೋಗವನ್ನು ತರುತ್ತಿದೆ. ಈ ರೋಗಕ್ಕೆ ಮದ್ದಿಲ್ಲ. ಯಾವ ಮದರ್ ತೆರೆಸಾರಂತಹಾ ಶುಶ್ರೂಷಕಿಯರೂ ಶುಶ್ರೂಷೆ ಮಾಡಲಾರರು. ಗುಣಪಡಿಸಲಾಗದ ಖಾಯಿಲೆ ಇದು ಎಚ್ಚರ! ಎಚ್ಚರ!! ಎಚ್ಚರ!!! ಇದಕ್ಕೊಂದು ಉದಾಹರಣೆ ಕೊಡುತ್ತೇನೆ ಗಮನಿಸಿ. ಇಲ್ಲಿ ಹೆಸರು, ವಿಳಾಸ ಕೊಡುವುದಿಲ್ಲ. ಬರೇ ಘಟನೆ ಮಾತ್ರಾ ವಿವರಿಸುತ್ತೇನೆ.

ಅಂದಾಜು ೧೯೦೨ನೇ ಇಸವಿ ಒಂದೂರಿನಲ್ಲಿ ಒಂದು ಮನೆ ಇತ್ತು. ಸಾಕಷ್ಟು ಜೀವನ ಸೌಲಭ್ಯವೂ ಇತ್ತು. ತುಂಬು ಕುಟುಂಬ. ೮೪ ವರ್ಷದ ಹಿರಿಯರೊಬ್ಬರು ಯಜಮಾನರು. ಊರಿಗೇ ಯಜಮಾನರು. ಗೌರವ ತುಂಬಾ ಇತ್ತು. ಇಡೀ ಊರು ಅವರ ಮಾತಿಗೆ ಬೆಲೆ ಕೊಡುತ್ತಿತ್ತು. ಅವರಿಗೆ ೯ ಜನ ಮಕ್ಕಳು. ಅದರಲ್ಲಿ ೫ ಹೆಣ್ಣು ೪ ಗಂಡು. ಎಲ್ಲರಿಗೂ ಮದುವೆಯಾಗಿತ್ತು. ಭಾರತದಲ್ಲಿ ಆಗ ಸ್ವಾತಂತ್ರ್ಯ ಹೋರಾಟದ ಗಲಾಟೆ ಜೋರಾಗಿತ್ತು. ಅಸಹಕಾರ ಚಲುವಳಿ, ಕಾನೂನು ಉಲ್ಲಂಘನೆ, ಜೈಲ್ ಭರೋ ಚಳುವಳಿ ಇತ್ಯಾದಿಗಳು ನಡೆದಿತ್ತು. ಅವರ ಮಕ್ಕಳಲ್ಲಿ ಒಬ್ಬರು ಸ್ವಾತಂತ್ರ್ಯ ಹೋರಾಟಕ್ಕೆ ಇಳಿದರು. ಕೊನೆಗೆ ಬ್ರಿಟಿಷರ ಸಾಮನೀತಿಯಿಂದಾಗಿ ಲೋಭಿಗಳಾಗಿ ಪರಿವರ್ತಿತರಾಗಿ ಬ್ರಿಟಿಷರ ಸಹಾಯದಿಂದಾಗಿ ತಮ್ಮ ಮಕ್ಕಳನ್ನು ವಿಧ್ಯಾಭ್ಯಾಸಕ್ಕೆ ಇಂಗ್ಲೆಂಡಿಗೆ ಕಳಿಸಿದರು. ನಂತರ ನೋಡಿ ಅಲ್ಲಿ ಶುರುವಾಯ್ತು ಪೈಪೋಟಿ. ಎಲ್ಲಾ ಗಂಡು ಮಕ್ಕಳೂ ತಮ್ಮ ತಮ್ಮ ಮಕ್ಕಳಿಗೆ ಈ ವಿಚಾರವನ್ನೇ ಬಿಂಬಿಸುತ್ತಾ ದೇಶ ವಿದೇಶಗಳಲ್ಲಿ ಪೈಪೋಟಿಯಿಂದ ವಿದ್ಯಾಭ್ಯಾಸ, ಉದ್ಯೋಗ ಕೊಡಿಸಿದರು. ಎಲ್ಲರೂ ದುಡಿಮೆಗಾರರೆ. ಆದರೆ ಕೂಡು ಕುಟುಂಬವಾಗಿದ್ದುದ್ದು ಒಡೆದುಹೋಯ್ತು. ವಿಪುಲವಾಗಿದ್ದ ಆಸ್ತಿ ಪಾಲಾಗಿ ಹರಿದು ಹಂಚಿ ಹೋಳಾಗಿ ಮಾರಾಟವಾಯ್ತು. ಯಜಮಾನರೂ ತೀರಿ ಹೋದರು. ಅಲ್ಲಿನ ಆಸ್ತಿಯೆಲ್ಲಾ ಮಾರಾಟ ಮಾಡಿ ಎಲ್ಲರೂ ಊರು ಬಿಟ್ಟರು. ಮೈಸೂರು, ಬೆಂಗಳೂರು, ಮದ್ರಾಸ್, ಮುಂಬೈಗಳಲ್ಲಿ ನೆಲೆಸಿದ ಆ ಕುಟುಂಬಿಕರು ಮೊದಮೊದಲು ಆಸ್ತಿವಂತರಾದರೂ ನಂತರ ದುಡಿಯುವ ಶಕ್ತಿ ಕಳೆದುಕೊಂಡು ಬಡತನ ಆವರಿಸಿತು. ತೀರಾ ಹೀನಾಯಸ್ಥಿತಿ ತಲುಪಿದರು. ವಿದೇಶದಲ್ಲಿ ಓದಿದ ಸ್ವಾತಂತ್ರ್ಯ ಹೋರಾಟಗಾರರ ಮಗ ಹುಚ್ಚನಾದ. ೧೯೪೭ನೇ ಇಸವಿ ಹೊತ್ತಿಗೆ ಅವನು ಸತ್ತೇ ಹೋದ. ನಂತರ ಅವರ ಮಕ್ಕಳು, ಮರಿ ಮಕ್ಕಳು, ಹೆಣ್ಣುಮಕ್ಕಳ ಮಕ್ಕಳೂ ಎಲ್ಲರೂ ನಾನಾ ಕಾರಣಗಳಿಂದ ಕ್ಷೀಣವಾಗುತ್ತಾ ಬಂದು ಹೇಳ ಹೆಸರಿಲ್ಲವಾದರು.

ಒಟ್ಟಾರೆ ಆ ವಂಶದ ಎಲ್ಲರೂ ಒಂದಲ್ಲಾ ಒಂದು ದುರ್ಗತಿಗೆ ಸಿಕ್ಕಿ ನಾಶವಾಗುತ್ತಾ ಬಂದು ಕೂಲಿನಾಳಿ ಮಾಡಿ ಬದುಕುತ್ತಿದ್ದವರೂ ಕೂಡ ಕೊನೆಯಲ್ಲಿ ಬದುಕಲಾರದೇ ಆತ್ಮಹತ್ಯೆ ಮಾಡಿಕೊಂಡರು. ಮೊನ್ನೆ ೨೦೧೨ರ ಜನವರಿಯಲ್ಲಿ ಆ ಕುಟುಂಬದ ಒಂದೇ ಒಂದು ಕುಡಿ ಉಳಿದಿದ್ದು ಕೂಡ ದುರ್ಮರಣಕ್ಕೀಡಾಯ್ತು. ಕೇವಲ ೧೯೦೨ ರಿಂದ ೨೦೧೨ಕ್ಕೆ ೧೧೦ ವರ್ಷದ ಅಂತರದಲ್ಲಿ ಯಜಮಾನ ೧ + ಮಕ್ಕಳು ೯ + ಅವರ ಮಕ್ಕಳು ೨೮ + ಅವರ ಹೆಂಡತಿಯರು ಗಂಡಂದಿರು ಮಕ್ಕಳು ೩೭ + ಅವರ ಮಕ್ಕಳು ೧೪ + ಮೊನ್ನೆಯ ಕೊನೇ ಕುಡಿ ೧ ಒಟ್ಟು ೯೦ ಜನರು ದುಡಿದು ಆಸ್ತಿ ಮಾಡಿ ದುಡಿದು ಕಳೆದು ಕೊನೆ ಕುಡಿ ನಾಶವಾಗುವಾಗ ಆತನ ದಹನ ಕೂಡ ಕಾರ್ಪೊರೇಶನ್ ಮಾಡಿತು. ೧೯೦೨ರಲ್ಲಿದ್ದ ವಿಪುಲ ಆಸ್ತಿ, ದೊಡ್ಡ ಕುಟುಂಬ ಸರ್ವನಾಶವಾಯ್ತು. ಅವರು ಮಾಡಿದ ಯಾವ ಆಸ್ತಿಯೂ ಉಳಿದಿಲ್ಲ. ಹಾಗಿದ್ದರೆ ಚಿಂತಿಸಿ ಆಸ್ತಿ ಬೇಕೇ? ಸಂಸಾರ ಬೇಕೆ? ಸಂಸಾರ ಬೇಕಿದ್ದರೆ ಈ ವಿದೇಶೀ ನೀತಿ ಬಿಡಿ. ಕುಟುಂಬ ಜೀವನಕ್ಕೆ ಮರಳಿ ಇದ್ದುದ್ದರಲ್ಲೇ ಅವಕಾಶ ಪಡೆದು ದುಡಿದು ಭಾರತೀಯ ಸಂಸ್ಕೃತಿಯಲ್ಲಿ ಬದುಕಿರಿ. ಅದು ಬಿಟ್ಟು ವಿದೇಶೀ ಜೀವನಪದ್ಧತಿಯ ಬದುಕು ಬದುಕಲ್ಲ. ಅರ್ಥಮಾಡಿಕೊಳ್ಳಿರಿ. ಆ ಕುಟುಂಬದ ಒಟ್ಟು ಜನರು ದುಡಿದದ್ದೆಷ್ಟು? ಅದರಲ್ಲೇನಾದರೂ ಉಳಿಕೆಯಾಯ್ತೆ? ಏನೂ ಇಲ್ಲ. ಕೊನೇ ಕುಡಿ ಮೃತನಾದಾಗ ಅನಾಥಶವವಾಯ್ತು. ಇಂತಹಾ ಉದಾಹರಣೆ ನಮ್ಮ ಭಾರತದೇಶದಲ್ಲಿ ವಿದೇಶೀ ಪ್ರಭಾವದಿಂದಾಗಿ ಸಾವಿರಗಟ್ಟಲೆ ಸಿಗುತ್ತಿದೆ. ಹಾಗಿದ್ದರೆ ನಾನು ಹಿಂದೆ ಉದಾಹರಿಸಿದ ಒಬ್ಬ ಪುಣ್ಯಾತ್ಮರು ಬರೆದ “ಬದುಕಲು ಕಲಿಯಿರಿ” ಪುಸ್ತಕ ನೀವು ಓದಿದ್ದೀರೋ ಬಿಟ್ಟಿದ್ದೀರೋ ಆದರೆ ವೇದದ ಬದುಕುವ ಆದರ್ಶ ಮಾರ್ಗವೇನೆಂದು ಮುಂದಿನ ಲೇಖನದಲ್ಲಿ ವಿವರಿಸುತ್ತೇನೆ ಗಮನಿಸಿ.

1 comment:

  1. nicely written article, well thought out, chennaagi barediddeeri. the path ahead can be expected to be full of danger, full of mines, full of traps, full of efforts to enslave india further to the interests of the racist white capitalist western powers who are not afraid of engaging criminally with the east, with non-whites, with africa etc, using covert and overt strategies, often in subtle hidden ways, through internal or external third parties (like islam, china, mafia, christianity, leftists), also by manipulative inducing of self-damage and self-destruction (like what happened with indian kings and the british in the past). yes, the indian people have better awareness this time, are more ready and better prepared compared to the days of the east india company. but, the dangers are there, the potential for much damage exists.

    ReplyDelete