Tuesday, 11 December 2012

ಭಾರತ ನಗರಗಳಲ್ಲೆಲ್ಲ ಕಸ ಕಸ ಕಸ.. (Waste Management)


ಜಗದ ಕಸವೆಲ್ಲ ಕೊಳೆತು ನಾರುತಲಿದೆ ಈಗ
ಜಗವೆ ಬೆರಗಾಗಿ ನೋಡುತ ಈ ಕಸವೇನು ಏನೇನು
ಜಗಕೆ ಕಸ ಮಾಡಲೆಂದೇ ಬಂದೆನೇ ಮುಂದಿನಾ ಕರ್ಮ ಗುರಿಗಳೇನು ತಿರುಕಾ ||

ಎಲೆ ಮನುಜ ಕೇಳ್ ನೀ ಬಿಸುಡುವುದೆಲ್ಲ ಕಸವಲ್ಲ ಮರುಳೆ
ಇನ್ನೊಬ್ಬನಾಹಾರ ನಿನ್ನ ಮೂರ್ಖತನದಿಂದ ಕೊಳೆಸಿ ಕಸ ಮಾಡುತಿಹೆ
ಅನ್ನವನು ನಾಶ ಮಾಡುವ ಪಾಪಕರ್ಮಕೆ ಹೇಸಬೇಕೈ ಇಲ್ಲದಿರೆ ಮುಂದೆ ನೀ ಅನ್ನ ತಿನ್ನಲಾರೆ ಕಾಣಯ್ಯ ||

ಜಗವು ಕಸವಲ್ಲ ತಿನ್ನುವ ಅನ್ನ ಹಾಳು ಮಾಡದಿರು ಈ
ಜಗದಿ ನಿನಗೆ ದುಡಿಮೆಯಿತ್ತನು ಭಗವಂತ ತಿಂದುಣ್ಣೆಂದು
ಈಗ ನೀನದನು ಮರೆತೆಯಾದೊಡೆ ಮುಂದೆ ನೀನುಣ್ಣಲಾರೆಯೋ ವ್ಯರ್ಥ ಕಸವಾಗದಿರೂ ||

      ಭಾರತದಾದ್ಯಂತ ನಗರಗಳಲ್ಲಿ ಕಸ, ಕಸ, ಕಸ ಇದೇನು ಕಸ? ಇದೇಕೆ ಹೀಗೆ? ಶುಭ್ರ ಸ್ವಚ್ಛ ದಿವ್ಯವಾಗಿರಬೇಕಾದ ನಗರ ಹಂದಿಗಳ ಬೀಡಾಗುತ್ತಿದೆ, ಕಸದ ರಾಶಿಯಾಗುತ್ತಿದೆ, ಕೊಳೆತು ನಾರುತ್ತಿದೆ, ಖಾಯಿಲೆ ಬೀಡಾಗುತ್ತಿದೆ, ಜನ ನಾನಾ ರೋಗಗಳಿಂದ ಸಾಯುತ್ತಿದ್ದಾರೆ. ಇದಕ್ಕೆ ಕಾರಣವೇನು ಚಿಂತಿಸಿದ್ದೀರಾ? ಒಮ್ಮೆ ಜೀವನ ವಿಧಾನದ ಸಿಂಹಾವಲೋಕನ ಮಾಡಿರಿ. ನಿಮಗೇ ಅರ್ಥವಾಗುವುದು ನಿಮ್ಮ ಜೀವನ ಮಾನವ ಜೀವನದಂತಿದೆಯೇ?

        ಚಿಂತಿಸಿದ ನಿಮಗೆ ಅರ್ಥವಾಗಿರಬಹುದು ಮಾನವ ಜೀವನವಿದಲ್ಲವೆಂದು. ನಾಗರೀಕತೆಯ ನೆಪದಲ್ಲಿ ನಾವು ಕಸ ಉತ್ಪಾದನೆ ಮಾಡುವ ಯಂತ್ರಗಳಾಗುತ್ತಿದ್ದೇವೆ. ರಾಜ್ಯಶಾಸ್ತ್ರದಲ್ಲಿ “ಮಾನವಶಕ್ತಿ ಉತ್ಪಾದಕವಾಗಿರಬೇಕು” ಎನ್ನುತ್ತದೆ. ಆದರೆ ಅದು ಕಸ ಉತ್ಪಾದನೆಯಲ್ಲ. ಇತರೆ ತನ್ನ ಸಮುದಾಯ ಬದುಕಲು ಬೇಕಾದ ಅವಶ್ಯಕ ವಸ್ತು, ಅನ್ನ ಉತ್ಪಾದನೆಯಾಗಿರಬೇಕಲ್ಲವೇ? ಒಂದು ಬೆಂಗಳೂರಿನಲ್ಲಿಯೇ ದಿನಕ್ಕೆ ಸಾವಿರಾರು ಲೋಡು ಕಸ ಉತ್ಪಾದನೆಯಾಗುತ್ತಿದೆ ಎಂದರೆ ಏನರ್ಥ? ಒಂದು ನಗರ ಉತ್ಪಾದಕವಾಗಿರಬೇಕು ಬರೇ ವಸತಿಗಾಗಿಯಲ್ಲ. ಇನ್ನು ಗ್ರಾಮೀಣ ಭಾಗದ ಉತ್ಪಾದನೆಗೆ ಉತ್ತಮ ಮಾರುಕಟ್ಟೆ ಒದಗಿಸಬೇಕು. ಸಕ್ರಮ ಆಡಳಿತಾಂಗ ವ್ಯವಸ್ಥೆ, ಅನ್ನ, ವಿಧ್ಯೆ, ರಕ್ಷಣೆ ಒದಗಿಸಬೇಕು. ಅದು ಬಿಟ್ಟು ಬರೇ ಕಸ ಉತ್ಪಾದನೆಯತ್ತ ಬೆಳೆಯುತ್ತಿರುವ ನಾಗರೀಕತೆಯ ಸೋಗಿನ ಈ ನಗರ ಜೀವನ ಮಾನವರನ್ನು ರಾಕ್ಷಸರನ್ನಾಗಿ ರೂಪಿಸುತ್ತಿದೆಯೆಂದು ಮಾತ್ರಾ ಘಂಟಾಘೋಷವಾಗಿ ಹೇಳಬಹುದು. ಇದರ ಬಗ್ಗೆ ಮೊದಲಾಗಿ ಮಾನವ ಜೀವನಶಾಸ್ತ್ರ, ವಾಸ್ತುಶಾಸ್ತ್ರ, ನಾಗರೀಕತೆ, ಮಾನವಧರ್ಮ ಆಧರಿಸಿ ಚಿಂತಿಸೋಣ.

ಮಾನವ ಜೀವನಶಾಸ್ತ್ರ ಹೇಳುತ್ತದೆ ನಗರವಾಸಿಗಳ ಧರ್ಮ:-

ಶಂ ನೋ ದ್ಯಾವಾಪೃಥಿವೀ ಪೂರ್ವಹೂತೌ ಶಮಂತರಿಕ್ಷಂ ದೃಶಯೇ ನೋ ಅಸ್ತು |
ಶಂ ನ ಓಷಧೀರ್ವನಿನೋ ಭವಂತು ಶಂ ನೋ ರಜಸಸ್ಪತಿರಸ್ತು ಜಿಷ್ಣುಃ ||

           ತಾನು ನಗರವಾಸದಲ್ಲಿ ಇದ್ದುಕೊಂಡು ತನಗೆ ಅನ್ನ, ವಸ್ತ್ರಾದಿಗಳನ್ನೂ, ಜೀವಜಲವನ್ನೂ ಪೂರೈಸುವ ಗ್ರಾಮೀಣ ಬದುಕು ನಿರಂತರವೂ ಸುಖಮಯವೂ ಆಗಿರುವಂತೆ ತನ್ನ ಜೀವನ ರೂಪಿಸಿಕೊಳ್ಳಬೇಕು. ತಾನು ತನ್ನ ಉಪಜೀವನಕ್ಕಾಗಿ ಬಳಸುವ ಇಂಧನ, ಓಷಧಿಗಳು, ಕಾಡು ಉತ್ಪತ್ತಿಗಳು, ಅಕ್ಕಿ, ತರಕಾರಿ, ಹೂ, ಹಣ್ಣುಗಳು ಇತ್ಯಾದಿಗಳನ್ನು ಬೆಳೆಯುವವರೂ, ಮಾರಾಟ ಮಾಡುವವರೂ ಎಲ್ಲರೂ ತಮ್ಮ ಜೀವನಯಜ್ಞದಲ್ಲಿ ಸುಖಭಾಗಿಗಳಾಗಿರಲಿ ಎಂಬುದು ನಗರ ಜೀವನದ ಆದರ್ಶ. ಮಾನವನು ತಾನು ಬದುಕುವುದು ನಿಕೃಷ್ಟ. ತನ್ನವರ ಬದುಕನ್ನು ಬದುಕಿಸುವುದು ಉತ್ತಮ. ತಮ್ಮೆಲ್ಲರ ಬದುಕಿಗೆ ಸ್ಪಂದಿಸುವುದು ಶ್ರೇಷ್ಠ. ತನ್ನ ದೇಶಕ್ಕಾಗಿ ಬದುಕುವುದು ಮೋಕ್ಷದಾಯಕವೆನ್ನುತ್ತದೆ. ಆದರೆ ಆಲೋಚಿಸಿ ಈಗಿನ ನಗರವಾಸ ಜೀವನ ಹಾಗಿದೆಯೇ? ಖಂಡಿತಾ ಇಲ್ಲ. ಹಾಗಿದ್ದ ಮೇಲೆ ಅದನ್ನು ನಗರವಾಸವೆನ್ನುವುದಕ್ಕಿಂತ ತನಗಾಗಿ ತಾನೇ ಅಳುತ್ತಿರುವ ಪ್ರೇತಸ್ಥಿತಿಯಾದ ನರಕವಾಸ ಎನ್ನಬಹುದಲ್ಲವೇ?

         ಮಾನವ ತನಗಾಗಿ ತನ್ನ ಸಂತೋಷಕ್ಕಾಗಿ ಶ್ರಮಿಸುವ ಜನರನ್ನು ಹೊಂದಿರಬೇಕು. ತನ್ನ ಕಷ್ಟಕ್ಕೆ ಅಯ್ಯೋ ಎನ್ನುವ ಜನರನ್ನು ಪಡೆದಿರಬೇಕು. ಆದರೆ ಈಗ ಏನಿದೆ? ಬೀದಿ ಮಧ್ಯೆ ಒಬ್ಬನನ್ನು ಹೊಡೆದು ಕೊಲ್ಲುತ್ತಿದ್ದರೂ ಬಿಡಿಸಲಾರದ, ಬಿಡಿಸಲಾಗದ, ಬಿಡಿಸಬಾರದ ಸಂಸ್ಕೃತಿ ನಗರದಲ್ಲಿದೆ. ಇದಕ್ಕೆ ಕಾರಣವೇನು? ಇದನ್ನು ಮಾನವಜೀವನ ಧರ್ಮ ಮಾನವೀಯತೆ ಎನ್ನುವುದಿಲ್ಲ. ಮಾನವರಾರೂ ಈ ರೀತಿಯಲ್ಲಿ ಬದುಕಿದ ಉದಾಹರಣೆ ಇಲ್ಲ. ಆದರೆ ಈಗ ಅದನ್ನೇ ನಾಗರೀಕತೆ ಎನ್ನುತ್ತಿದೆ. ಖಂಡಿತಾ ಇನ್ನೊಂದು ಜೀವಿಯ ಸುಖ ಕಷ್ಟಕ್ಕೆ ಸ್ಪಂದಿಸದ ಬದುಕು ಮಾನವಧರ್ಮವಲ್ಲವೇ ಅಲ್ಲ. ಶ್ರೀರವಿಶಂಕರ್ ಗುರೂಜಿಯವರ “ಬದುಕಿನ ಕಲೆ” (Art of Living) ಜನರಿಗೆ ತಲುಪಲೇ ಇಲ್ಲವೆ? ಅಥವಾ ಅದನ್ನೋದುವ ನಾಗರೀಕತೆಯೂ ಜನರಲ್ಲಿಲ್ಲವೆ? ಅರ್ಥವಾಗುವುದಿಲ್ಲ. ವಿಧ್ಯಾಭ್ಯಾಸ ಕೇವಲ ದುಡಿಯುವ ಜಾಣ್ಮೆಗಾಗಿರಬಾರದು. ಬದುಕುವ ಜಾಣ್ಮೆ ಕಲಿಸುವ ವಿಧ್ಯೆ ಇರಬೇಕು. ಅದಿಲ್ಲದಿದ್ದರೆ ಅದನ್ನು ನಾಗರೀಕತೆ ಎನ್ನಲಾಗದು. ಸ್ವಾತಂತ್ರ್ಯ ಬದುಕೆಂಬ ಭ್ರಾಂತಿಯಲ್ಲಿ “ನಮಗಾಗಿ” ಎಂಬ ಆದರ್ಶ ಮರೆಯಾಗಿ “ನನಗಾಗಿ” ಎಂಬುದು ತಾಂಡವವಾಡುತ್ತಿದೆ. ಆದರೆ ಮಾನವ ಬದುಕು ಯಾವಾಗಲೂ “ನಮಗಾಗಿಯೇ” ಇರಬೇಕು.

ಎರಡನೆಯದಾಗಿ ವಾಸ್ತುಶಾಸ್ತ್ರ ಹೇಳುತ್ತದೆ ನಗರ ನಿರ್ಮಾಣ ವಿಧಿ. ಅದನ್ನು ಈಗಿನ ವಿನ್ಯಾಸಕಾರರು ಅರ್ಥವೇ ಮಾಡಿಕೊಳ್ಳುತ್ತಿಲ್ಲ. ಒಂದು ನಗರ ನಿರ್ಮಾಣದಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶಗಳು ಇವು – ನೀರು, ಮಾರ್ಗ, ಬೀಸುವಗಾಳಿ, ಸ್ವಾಭಾವಿಕ ವಾತಾವರಣ, ಭೂತರವಣ ಶಕ್ತಿ, ಭೂತಾಳಿಕೆ ಶಕ್ತಿ, ಭೂ ಪರಿವರ್ತನಾ ಶಕ್ತಿ, ಆಹಾರ ಪೂರೈಕೆ ಪ್ರದೇಶ, ಉತ್ಪಾತಾದಿ ತಾಳಿಕೆ ಶಕ್ತಿ, ಆಕ್ರಮಣ ಶಕ್ತಿಗಳ ತಾಡನಶಕ್ತಿ ಮತ್ತು ಅಗತ್ಯತೆ. ಈ ೧೧ ರುದ್ರಗಳೆಲ್ಲಾ ಪೂರಕವಾಗಿದ್ದರೆ ಅದು ನಗರ. ಅದಕ್ಕೆ ಅಧಿದೇವತೆ ನಗರೇಶ್ವರ. ಅವನೇ “ಪಶುಪತಿ”. ಪಾಶುಪತವೆಂದರೆ ಸಂರಕ್ಷಣಾಶಕ್ತಿಯ ನಿರಂತರ ವ್ಯವಸ್ಥೆ. ಇದನ್ನರಿಯದ ನಗರ ನಿರ್ಮಾತೃಗಳು ಬೇಕಾಬಿಟ್ಟಿ ನಗರ ನಿರ್ಮಾಣ ಮಾಡುತ್ತಾ ಒಂದಲ್ಲಾ ಒಂದು ಕಾಲಕ್ಕೆ ಮನುಕುಲ ಸರ್ವನಾಶವಾಗುವುದು ಖಂಡಿತವೆನ್ನಬಹುದು. ಈ ಮೇಲೆ ತಿಳಿಸಿದ ೧೧ ರುದ್ರಗಳ ಅಂಶ ಸಹಿತವಾದದ್ದೇ ನಗರ ನಿರ್ಮಾಣ ವಾಸ್ತುವೆನ್ನುತ್ತದೆ. ಅದರಲ್ಲಿ ಬಾಳಿ ಬೆಳಗುವ ಪರಂಪರೆಯ ಬುದ್ಧಿವಂತ ಪ್ರಜೆಗಳೇ ನಾಗರೀಕರೆಂದು ಹೇಳುತ್ತದೆ ವಾಸ್ತುಶಾಸ್ತ್ರ. ಆದರೆ ಈಗ ಮೇಲೆ ತಿಳಿಸಿದ ಯಾವುದನ್ನೂ ಗಮನಿಸದೇ, ಅಲ್ಲದೆ ಪರಿಣಾಮ ಫಲಗಳಾದ ಶೌಚಾದಿಗಳ ಚಿಂತನೆ ಮಾಡದೇನೇ ಸ್ವಲ್ಪವೇ ಸ್ಥಳದಲ್ಲಿ ಹಲವಾರು ಮನೆಗಳನ್ನು ಕಟ್ಟಿ ಉಸಿರಾಡುವ ಗಾಳಿಯೂ ಸರಿಯಾಗಿ ದೊರಕದಂತೆ ಮಾಡುತ್ತಿದ್ದಾರೆ. ದಶ ಶೌಚಾದಿಗಳ ಬಗ್ಗೆ ಸರಿಯಾದ ಗಮನವಿಲ್ಲದಿದ್ದರೆ ನಗರವು ನರಕರೂಪವಾಗುವುದರಲ್ಲಿ ಸಂಶಯವಿಲ್ಲ. ಅದರಲ್ಲಿ –

೧. ವಾತಜನ್ಯ – ಗಾಳಿಯಿಂದ ಹಾರಿಬಂದು ಸಂಗ್ರಹವಾಗುವ ಕಸ, ಧೂಳು ಇತ್ಯಾದಿ.
೨. ಕಾಲಜನ್ಯ – ಯಾವುದೇ ವಸ್ತುಗಳು ಕೂಡ ಕಾಲಕಾರಣದಿಂದಾಗಿ ಕಸ, ಧೂಳು, ಕೆಸರು ಇತ್ಯಾದಿಯಾಗಿ ಪರಿವರ್ತನೆಯಾಗುವಿಕೆ.
೩. ಪಕ್ಷಿಜನ್ಯ – ಆ ಪ್ರದೇಶದಲ್ಲಿ ವಾಸಿಸುವ ಪಕ್ಷಿಗಳು ತಂದು ಎಸೆಯುವ ವಸ್ತು.
೪. ಪ್ರಾಣಿಜನ್ಯ – ಅಲ್ಲಿ ವಾಸಿಸುವ ಆಶ್ರಯಿತ ಪ್ರಾಣಿಗಳಿಂದ ಉತ್ಪನ್ನವಾಗತಕ್ಕವು.
೫. ಮಾನವಜನ್ಯ – ಮನುಷ್ಯನ ನಿತ್ಯ ಶೌಚಾದಿಗಳಿಂದ ಉತ್ಪನ್ನ.
೬. ಜಲಜನ್ಯ – ಬಚ್ಚಲು, ಮೋರಿ ನೀರು ಇತ್ಯಾದಿಗಳು.
೭. ಆಹಾರ ಕಾರಣ ಜನ್ಯ – ತರಕಾರಿ ಹಣ್ಣು ಇತ್ಯಾದಿಗಳಿಂದ ಉತ್ಪನ್ನವಾಗತಕ್ಕವುಗಳು.
೮. ವಿಹಾರ ಕಾರಣ ಜನ್ಯ – ಮಾನವನು ತನ್ನ ವಿಹಾರಕಾಲದ ಕೆಲ ದೂಷಿತವಸ್ತುಗಳು.
೯. ವಿನಿಮಯಜನ್ಯ – ಒಂದು ಇನ್ನೊಂದರೊಂದಿಗೆ ಹೊಂದುವುದರಿಂದ ಉಂಟಾಗುವ ದೂಷಿತಗಳು. ಅದರಲ್ಲಿ ನಿರ್ಮಾಣವೂ ಸೇರಿರುತ್ತದೆ.
೧೦. ಮೃತಾಜನ್ಯ – ಅಲ್ಲಿ ನಗರವಾಸಿಗಳ ಮತ್ತು ಪ್ರಾಣಿ, ಪಕ್ಷಿ ಇತ್ಯಾದಿ ಯಾವುದೇ ಮೃತಪಟ್ಟಾಗ ಉಂಟಾಗುವ ದೂಷಿತ.

ಈ ಹತ್ತಕ್ಕೂ ಸರಿಯಾದ ನಿರ್ವಹಣೆ ಸ್ವಾಭಾವಿಕ ರೀತಿಯಲ್ಲಿ ಆಯೋಜಿಸದ ವ್ಯವಸ್ಥೆ ಮುಂದೆ ನಗರವಲ್ಲ ನರಕವಾಗುತ್ತದೆ ಎನ್ನುತ್ತದೆ ವಾಸ್ತುಶಾಸ್ತ್ರ.

ಮೂರನೆಯದಾದ ನಾಗರೀಕತೆ

”ವಿಧ್ಯಾ, ವಿನಯ, ಭೂಷಣ, ದಯಾ, ಧರ್ಮ, ದಾಕ್ಷಿಣ್ಯ, ಸತ್ಯ, ನ್ಯಾಯಯುತಾಃ ಇತಿ ನಾಗರೀಕಃ

ಈ ಅಷ್ಟ ಲಕ್ಷಣಯುಕ್ತನಾಗಿದ್ದವನು ನಾಗರೀಕನೆನಿಸಿಕೊಳ್ಳುತ್ತಾನೆ. ಈಗಿನ ಪಟ್ಟಣವಾಸಿಗಳಲ್ಲಿ ಮೇಲ್ಕಂಡ ಯಾವ ಸದ್ಗುಣವಿದೆಯೆಂದು ನೀವೇ ಗುರುತಿಸಿಕೊಳ್ಳಿರಿ. ಅದು ನಾಗರೀಕತೆಯೇ ಚಿಂತಿಸಿರಿ?

ವಿಧ್ಯಾ:- ಸಕಲ ವಿವೇಚನಾಯುಕ್ತವಾದ ಪೂರ್ಣಜ್ಞಾನವೇ ವಿಧ್ಯೆ ಎನಿಸಿಕೊಳ್ಳುತ್ತದೆ. ಆದರೆ ಈಗಿನ ಪಟ್ಟಣವಾಸಿಗಳಲ್ಲಿ ಯಾವುದೋ ಒಂದು ವಿಷಯದಲ್ಲಿ ಮಾತ್ರ ಜ್ಞಾನವಿರುತ್ತದೆ. ಅದರಲ್ಲಿ ಮಾತ್ರ ಅವರು ಅಧ್ಯಯನ ಮಾಡಿರುತ್ತಾರೆ. ನಂತರದ ಜೀವನ ವಿಧಾನದಲ್ಲಿ ಅವರಿಗೇನೂ ತಿಳುವಳಿಕೆಯಿಲ್ಲ. ಬೆಂಗಳೂರು ಒಂದರಲ್ಲೇ ಹೆಚ್ಚು ಜನ ಆರ್ಥಿಕ ವಂಚನೆ ಅಪರಾಧಗಳಿಗೆ ಈಡಾಗುತ್ತಿದ್ದಾರೆ ಎಂದರೆ ಅವರನ್ನು ವಿಧ್ಯಾವಂತರೆಂದು ಕರೆಯಲು ಸಾಧ್ಯವೇ? ತನ್ನ ಪರಿಸರದ ಸಕಲ ಜೀವಿಗಳ ಮೇಲೆ ಕರುಣೆ ಇಡದ, ದಯೆ ತೋರದ, ಸತ್ಯ ಧರ್ಮಗಳನ್ನು ಗಾಳಿಗೆ ತೂರಿದ, ಸದಾ ದೇಶಕ್ಕೂ, ತನ್ನ ಆತ್ಮಕ್ಕೂ ವಂಚನೆ ಮಾಡುತ್ತಾ ಬದುಕುವ ಬದುಕು ನಾಗರೀಕತೆಯೇ? ಅದನ್ನು ಮಾನವಜನ್ಮವೆಂದು ಹೇಳಲೂ ನಾಚಿಕೆಯಾಗುತ್ತದೆ. ಮೊನ್ನೆ ಏನೋ ಕಾರಣದಿಂದ ಬೆಂಗಳೂರಿಗೆ ಹೋಗಿದ್ದೆ. ಅಲ್ಲಿನ ನಗರಪಾಲಿಕೆ ಒಂದು ಕಾನೂನು ಮಾಡಿದೆ “ಅವರವರ ಮನೆಯ ಕಸ ಪ್ರತ್ಯೇಕವಾಗಿ ವಿಂಗಡಿಸಿ ಕಸ ವಿಲೇವಾರಿ ಘಟಕದ ಕಾರ್ಯಕರ್ತರಿಗೆ ಒಪ್ಪಿಸಬೇಕು ಇಲ್ಲವಾದರೆ ದಂಡವೆಂದು”. ಆದರೆ ನೋಡಿ ಎಂತೆಂತಹಾ ವಿಧ್ಯಾವಂತರೂ, ನಾಗರೀಕರೂ ಎಂಬ ಜನ ಬೆಳಗಿನ ಜಾವ ನಾಲ್ಕುಗಂಟೆಗೆ ಎಲ್ಲಾ ಕಾನೂನನ್ನೂ ಗಾಳಿಗೆ ತೂರಿ ಕಳ್ಳತನದಿಂದ ಯಾರೂ ನೋಡದಂತೆ ಹೊರಬಂದು ತಮ್ಮ ಮನೆಯ ಕಸವನ್ನು ರೋಡಿನಲ್ಲಿ ಎಸೆದು ಹೋಗುತ್ತಿದ್ದಾರೆ ಬಲ್ಲಿರಾ. ಇಂತಹಾ ಜನರು ನಾಗರೀಕರೇ?

ಇನ್ನು ಮಾನವಧರ್ಮದ ಬಗ್ಗೆ ಚಿಂತಿಸೋಣ :-

ಸಹನಾವವತು | ಸಹನೌ ಭುನಕ್ತು | ಸಹ ವೀರ್ಯಂ ಕರವಾವಹೈ |
ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ | ಓಂ ಶಾಂತಿಃ ಶಾಂತಿಃ ಶಾಂತಿಃ ||

          ಎಂದಿತು ವೇದೋಪನಿಷತ್ತುಗಳು. ಆದರೆ ಪಟ್ಟಣ ಜೀವನ ಹಾಗಿದೆಯೇ? ಅಕ್ಕಪಕ್ಕದ ಮನೆಯವರಿಗೇ ಪರಸ್ಪರ ಮುಖ ಪರಿಚಯವೂ ಇಲ್ಲ. ಅವರಿಬ್ಬರೂ ಒಂದೇ ಅಪಾರ್ಟ್‍ಮೆಂಟಿನಲ್ಲಿದ್ದರೂ ಅವರು ಯಾರೆಂದೇ ಗೊತ್ತಿಲ್ಲ. ಒಟ್ಟಾಗಿ ಉಣ್ಣುವುದಾಗಲೀ, ಬೆಳೆಯುವುದಾಗಲೀ ಹೇಗೆ ಸಾಧ್ಯ?

“ಆ ನೋ ಭದ್ರಾಃ ಕ್ರತವೋ ಯಂತು ವಿಶ್ವಾತಃ” – ವಿಶ್ವದ ಎಲ್ಲವೂ ಶುಭವೂ, ಭದ್ರವೂ ಆಗುವಂತೆ

“ಕೃಣ್ವಂತೋ ವಿಶ್ವಮಾರ್ಯಂ” ಎಂಬ ಆದರ್ಶದೊಂದಿಗೆ ನಗರವಾಸಿಗಳ ನಾಗರೀಕತೆ ಇರಬೇಕಿತ್ತು.

ಅದು ಅವರ ಜವಾಬ್ದಾರಿಯೂ ಹೌದು. ಹಾಗಾಗಿಯೇ ಕೃಷಿಕ ತನ್ನ ಉತ್ಪಾದನೆಯನ್ನು ನಗರವಾಸಿಗಳಿಗೆ ಕೊಡುವುದು. ಅವರೆಲ್ಲಾ ತನ್ನ ಜೀವನ ಮಾರ್ಗದಲ್ಲಿ ಅವರ ವಿಶೇಷ ಜ್ಞಾನದಿಂದ ಸಹಕರಿಸಲಿ ಎಂದು ಹಾರೈಸಿ. ಆದರೆ ಅವರು ಕೊಟ್ಟದ್ದೇನು? “ಷೇರ್ ಬಿಸಿನೆಸ್” ಎಂಬ ಜೂಜನ್ನು, ನಿರಂತರ ಹಣದಾಹ, ಮೋಸ, ವಂಚನೆ, ಹಳ್ಳಿ ಹಳ್ಳಿಗೂ, ಮನೆ ಮನೆಗೂ ಭ್ರಷ್ಟ ರಾಜಕೀಯ ಮಾತ್ರಾ. ಇದೆಲ್ಲಾ ಮಾನವ ಧರ್ಮವೇ? ಚಿಂತಿಸಿ.

ಸದಾ ನಗರವಾಸಿ ಜನರು ಇತರೆ ಗ್ರಾಮೀಣ ಜನರ ರೈತಾಪಿ ವರ್ಗದ ಕ್ಷೇಮಾಭ್ಯುದಯ ಚಿಂತನೆಯಿಂದ ರೈತಾಪಿ ವರ್ಗವನ್ನು ಪ್ರೋತ್ಸಾಹಿಸಿ ಹುರಿದುಂಬಿಸಬೇಕಿದೆ. ಆದರೆ ಈಗ ರೈತ ಬೆಳೆದ ವಸ್ತುವಿಗೆ ಬೆಲೆ ಕೊಡದೇನೇ ಮೂರು ಕಾಸಿಗೆ ಕೊಂಡು ಕೊಂಡು ೬೦ ಪೈಸೆಯ ಸೋಪ್ ರೂ. ೨೦ಕ್ಕೆ ಮಾರುತ್ತಾರೆ. ರೂ. ೫೦೦ ಕಚ್ಚಾವಸ್ತುವಿನಿಂದ ಉತ್ಪಾದನೆಯಾಗುವ ಟಿ.ವಿ. ರೂ. ೧೫೦೦೦ಕ್ಕೆ ಮಾರುತ್ತಾರೆ ರೈತನಿಗೆ. ಇದು ತಾನು ತಿನ್ನುವ ಅನ್ನ ನೀಡುವ ದೇವರಿಗೆ ಮಾಡುವ ದ್ರೋಹವಲ್ಲವೆ? ಆ ಕಾರಣದಿಂದ ಮುಂದೆ ಪಟ್ಟಣ ಜೀವನ ಇನ್ನೂ ಹೆಚ್ಚು ದುರ್ಭರವಾಗಲಿಕ್ಕಿಲ್ಲವೇ? ವಿದ್ಯಾವಂತರೆಂದು ಹೇಳಿಕೊಳ್ಳುವ ಪಟ್ಟಣವಾಸಿಗಳು ತಮ್ಮ ಜವಾಬ್ದಾರಿ ಏನೆಂಬ ಜ್ಞಾನದರಿವು ಪಡೆದೇ ಇಲ್ಲ. ಈಗಿನ ಶಿಕ್ಷಣದಲ್ಲಿ ಆ ವಿಚಾರ ಬೋಧನೆ ಇಲ್ಲ. ಅನ್ನ ನೀಡುವ ರೈತಾಪಿ ವರ್ಗಕ್ಕೆ ತಾವು ಋಣಿಗಳು, ಅವರ ಕ್ಷೇಮಾಭಿವೃದ್ಧಿ ತಮ್ಮದು ಎಂಬ ಕಲ್ಪನೆಯೇ ಇಲ್ಲ. ಹಾಗಿದ್ದ ಮೇಲೆ ಅದನ್ನು ಮಾನವಧರ್ಮವೆಂದು ಹೇಳಲಾದೀತೆ? ಈ ಬಗ್ಗೆ ವೇದಮೂಲದ ಚಿಂತನೆಯತ್ತ ದೃಷ್ಟಿ ಹಾಯಿಸೋಣ.

ಅಥರ್ವ ಕಾಂಡ-೧೯, ಸೂಕ್ತ-೫೫, ಮಂತ್ರ-೫.

ಅಪಶ್ಚಾ ದಗ್ಧಾನ್ನಸ್ಯ ಭೂಯಾಸಮ್ | ಅನ್ನದಾಯಾನ್ನಪತಯೇ ರುದ್ರಾಯ ನಮೋ ಅಗ್ನಯೇ ||
ಸಭ್ಯಃ ಸಭಾಂ ಮೇ ಪಾಹಿ ಯೇ ಚ ಸಭ್ಯಾಃ ಸಭಾಸದಃ ||

ರೈತಾಪಿ ವರ್ಗವು ಬೆಳೆದ ಮತ್ತು ಇತರೆ ಕುಲವೃತ್ತಿ ಆಧರಿಸಿ ಉತ್ಪನ್ನವಾದ ಸಕಲ ವಸ್ತುಗಳೂ ಮತ್ತು ಅನ್ನವು ವಿಧ್ಯಾವಂತರೂ, ಶ್ರೇಷ್ಠ ವಿವೇಚನಾಶಕ್ತಿಯುಳ್ಳವರೂ ಆದ ನಗರೇಶ್ವರನ ನೇತೃತ್ವದಲ್ಲಿ ವಾಣಿಜ್ಯ ಮುಖೇನ ಸರ್ವರಿಗೂ ಹಂಚುವವರ ಕೈಯಲ್ಲಿ ಇಟ್ಟು ಲೋಕಕ್ಷೇಮ ಚಿಂತನೆ ಮಾಡಬೇಕು. ಉತ್ತಮವಾದ ಸರ್ವರಿಗೂ ಸಮಾನ ವಿತರಣೆ ಮಾಡಲು ಅವರು ಅರ್ಹರು ಎಂಬ ಭಾವಲಿಲ್ಲಿ ಅಡಕವಾಗಿದೆ. ಈ ರುದ್ರ ಅಗ್ನಿಗಳೇ ನಗರವಾಸಿಗಳು. ಇವರು ಸರ್ವಸಮಾನ ಅನ್ನ ಭೋಗಾದಿಗಳನ್ನು ಹಂಚುವಲ್ಲಿ ನಿಷ್ಣಾತರು ಎಂಬ ಭಾವ.

ಅಥರ್ವ ಕಾಂಡ-೧೯, ಸೂಕ್ತ-೩೭, ಮಂತ್ರ-೧.

ಇದವರ್ಚೋ ಅಗ್ನಿನಾ ಧತ್ತಮಾಗನ್ ಭರ್ಗೋ ಯಶಃ ಸ ಓಜೋ ವಯೋ ಬಲಮ್ |
ತ್ರಯಸ್ತ್ರಿಂಶದ್ ಯಾನಿ ಚ ವೀರ್ಯಾಣಿ ತಾನ್ಯಗ್ನಿಃ ಪ್ರದದಾತು ಮೇ ||

          ನಮ್ಮಲ್ಲಿ ಉತ್ಪನ್ನವಾಗತಕ್ಕ ಆಹಾರ ಮತ್ತು ಇತರೆ ಉಪಭೋಗ ವಸ್ತುಗಳೂ ತನ್ಮೂಲಕ ಸಿಗುವ ಎಲ್ಲಾ ಶಕ್ತಿಗಳೂ ದೇವಸಂಪನ್ನ ವಿಧ್ಯಾವಂತರಾದ ಪಟ್ಟಣವಾಸಿಗಳಲ್ಲಿ ಸೇರಲಿ. ಅವರಲ್ಲಿ ಏಕಾದಶ ರುದ್ರರೂ, ದ್ವಾದಶಾದಿತ್ಯರೂ, ಅಷ್ಟವಸುಗಳೂ, ಬ್ರಹ್ಮ, ಇಂದ್ರರೂ, ಅವರು ಮಾಡುವ ಯಾಗಯಜ್ಞಗಳಲ್ಲಿ ಭಾಗವಹಿಸಿ ಹವಿರ್ ರೂಪವಾಗಿ ಪಡೆದು ಸಕಲ ಜೀವಿಗಳ ಉದ್ಧಾರದಲ್ಲಿ ತೊಡಗಲಿ. ಇಡೀ ಪ್ರಪಂಚ ಶಕ್ತಿಶಾಲಿಯಾಗಿ ನಿರಂತರವಾಗಲಿ. ಪ್ರಪಂಚದ ಎಲ್ಲವೂ ದೀರ್ಘಾಯುಷ್ಯವಂತವಾಗಲಿ. ಆ ಬಲದಿಂದ ಎಲ್ಲಾ ಜೀವಿಗಳೂ ಶ್ರೇಷ್ಠತೆಯನ್ನು ಪಡೆಯುತ್ತಾ ಭಗವತ್ಸನ್ನಿಧಾನ ಸೇರುವ ಕಾಲ ಸನ್ನಿಹಿತವಾಗಲಿ. ಸರ್ವೇ ಜನಾಃ ಸುಖಿನೋ ಭವಂತು. ಸಮಸ್ತ ಸನ್ಮಂಗಳಾನಿ ಭವಂತು. ಇದು ಉದ್ದೇಶ.

ಅಥರ್ವ ಕಾಂಡ-೨೦, ಸೂಕ್ತ-೧೬, ಮಂತ್ರ-೧.

ಉದಪ್ರುತೋ ನ ವಯೋ ರಕ್ಷಮಾಣಾ ವಾವದತೋ ಅಭ್ರಿಯಸ್ಯೇವ ಘೋಷಾಃ |
ಗಿರಿಭ್ರಜೋ ನೋರ್ಮಯೋ ಮದಂತೋ ಬೃಹಸ್ಪತಿಮಭ್ಯ ೧ರ್ಕಾ ಅನಾವನ್ ||

          ಇಡೀ ದೇಶದ ಸಮಗ್ರತೆ ಕಾಯುವತ್ತ ಮತ್ತು ಖನಿಜ, ಜಲ ಇತರೆ ಸಂಪನ್ಮೂಲವನ್ನು ಸಮರ್ಥವಾಗಿ ಬಳಸುವತ್ತ ಉತ್ತಮ ಯೋಜನೆ ರೂಪಿಸಿ ತನ್ಮೂಲಕ ಒಟ್ಟು ಜನರ ಕ್ಷೇಮಾಭಿವೃದ್ಧಿ ಸಾಧನೆಯಲ್ಲಿ ವಿದ್ವತ್ ಪೂರ್ಣವಾದ ಚಿಂತನೆ ನಡೆಸುವ ಸಮರ್ಥರಾದ ನಗರವಾಸಿಗಳೇ ಒಟ್ಟು ಮನುಕುಲದ ಕ್ಷೇಮಚಿಂತನೆಯತ್ತ ನಿಮ್ಮ ಮನಸ್ಸಿರಲಿ. ಅದಕ್ಕಾಗಿ ಉತ್ತಮ ಅನ್ನವನ್ನು ನಾವು ಬೆಳೆದು ನಿಮಗೆ ಒಪ್ಪಿಸುತ್ತಿದ್ದೇವೆ. ನಗರವಾಸಿಗಳಾದ ನೀವು ನಿರಂತರ ಅಧ್ಯಯನಶೀಲರಾಗಿ ಸಮಸ್ತ ಜೀವಕುಲದ ಚಿಂತನೆ ಮಾಡಿರಿ ಎನ್ನುತ್ತದೆ ಮಾನವ ಜೀವನ ಧರ್ಮ.

ಅಥರ್ವ ಕಾಂಡ-೧೬, ಸೂಕ್ತ-೮, ಮಂತ್ರ-೧-೨೭.

ಜಿತಮಸ್ಮಾಕಮುದ್ಭಿನ್ನಮಸ್ಮಾಕಮೃತಮಸ್ಮಾಕಂ ತೇಜೋಽಸ್ಮಾಕಂ ಬ್ರಹ್ಮಾಸ್ಮಾಕಂ ಸ್ವರಸ್ಮಾಕಂ ಯಜ್ಞೋ೩ಽಸ್ಮಾಕಂ ಪಶವೋಽಸ್ಮಾಕಂ ಪ್ರಜಾ ಅಸ್ಮಾಕಂ ವೀರಾ ಅಸ್ಮಾಕಮ್ | ೧ |
ತಸ್ಮಾದಮುಂ ನಿರ್ಭಜಾಮೋಽ ಮುಮಾಮುಷ್ಯಾಯಣಮಮುಷ್ಯಾಃ ಪುತ್ರಮಸೌ ಯಃ | ೨ |
ಸ ಗ್ರಾಹ್ಯಾಃ (೧), ಸ ನಿರ್‌ಋತ್ಯಾಃ (೨), ಸೋಽಭೂತ್ಯಾಃ (೩), ಸ ನಿರ್ಭೂತ್ಯಾಃ (೪), ಸ ಪರಾಭೂತ್ಯಾಃ (೫), ಸ ದೇವಜಾಮೀನಾಂ (೬), ಸ ಬೃಹಸ್ಪತೇಃ (೭), ಸ ಪ್ರಜಾಪತೇಃ (೮), ಸ ಋಷೀಣಾಂ (೯), ಸ ಆರ್ಷೇಯಾಣಾಂ (೧೦), ಸೋಽಙ್ಗಿರಸಾಂ (೧೧), ಸ ಆಂಗಿರಸಾನಾಂ (೧೨), ಸೋಽಥರ್ವಣಾಂ ನಿರ್ಭೂತ್ಯಾಃ (೧೩), ಸ ಆಥರ್ವಣಾನಾಂ (೧೪), ಸ ವನಸ್ಪತೀನಾಂ (೧೫), ಸ ವಾನಸ್ಪತ್ಯಾನಾಂ (೧೬), ಸ ಋತೂನಾಂ (೧೭), ಸ ಆರ್ತವಾನಾಂ (೧೮), ಸ ಮಾಸಾನಾಂ (೧೯), ಸೋಽರ್ಧ ಮಾಸಾನಾಂ ನಿರ್ಭೂತ್ಯಾಃ (೨೦), ಸೋಽಹೋರಾತ್ರಯೋಃ (೨೧), ಸೋಽ ಹ್ನೋಃ ಸಂಯತೋಃ (೨೨), ಸ ದ್ಯಾವಾಪೃಥಿವ್ಯೋಃ (೨೩), ಸ ಇಂದ್ರಾಗ್ನ್ಯೋಃ (೨೪), ಸ ಮಿತ್ರಾವರುಣಯೋಃ (೨೫), ಸ ರಾಜ್ಞೋ ವರುಣಸ್ಯ (೨೬), ಸ ಮೃತ್ಯೋಃ ಪಡ್ಬೀಶಾತ್ (೨೭) ……  ಪಾಶಾನ್ಮಾ ಮೋಚಿ | ೩ |
ತಸ್ಯೇದಂ ವರ್ಚಸ್ತೇಜಃ ಪ್ರಾಣಮಾಯುರ್ನಿ ವೇಷ್ಟ ಯಾಮೀದಮೇನಮಧರಾಞ್ಚಂ ಪಾದಯಾಮಿ | ೪ | || ೧ - ೨೭||

ಈ ಮಂತ್ರಗಳೆಲ್ಲಾ ತನ್ನ ವೈಯಕ್ತಿಕ ತೇಜ, ಓಜಗಳನ್ನು ತ್ಯಾಗ ಮಾಡಿ ಹೇಗೆ ಲೋಕಕಲ್ಯಾಣ ಮಾಡಬಹುದು ಎಂಬುದರ ವಿವರ ನೀಡುತ್ತವೆ. ದೇಶದ, ಸಮಗ್ರ ಜೀವಿಗಳ, ಸರ್ವರ ಆತ್ಮೋನ್ನತಿಯ ಕಾರ್ಯದಲ್ಲಿ ನಾವು ಅಂದರೆ ನಗರವಾಸಿಗಳು ಹೇಗೆ ತೊಡಗಬೇಕೆಂಬುದರ ವಿವರವಿದೆ. ಅದಕ್ಕಾಗಿಯೇ ಭಾರತವು “ಏಕ ನಾಯಕತ್ವವನ್ನು” ಆಧರಿಸಿತು. ಅದೇ “ಚಕ್ರಾಧಿಪತ್ಯ”. ಈಗ ಸಾಮೂಹಿಕ ನಾಯಕತ್ವ. ಅಂದರೆ ಪ್ರಜಾಪ್ರಭುತ್ವವಿದೆಯೆಂಬ ಭ್ರಾಂತಿಯಲ್ಲಿದ್ದಾರೆ ಜನರು. ಆದರೂ ಈಗಲೂ ಏಕವ್ಯಕ್ತಿಗತವಾಗಿಯೇ ನಡೆಯುತ್ತಿದೆ. ಆದರೆ ಆಗಿನ ಏಕ ನಾಯಕತ್ವ ಒಂದು ರೀತಿ ಸಾಮೂಹಿಕ ನಾಯಕತ್ವವೇ. “ಸಪ್ತಾಂಗ ರಾಜ್ಯ ವ್ಯವಸ್ಥೆ”. ಉತ್ತಮವಾದ ರಾಜ್ಯಶಾಸ್ತ್ರ ಮತ್ತು ನ್ಯಾಯಾಂಗವಿತ್ತು. ಈಗ ಅದನ್ನೆಲ್ಲಾ ಕಳೆದುಕೊಂಡು ನಗರವಾಸಿಗಳಿಗೆ ನಾವೇಕೆ ನಗರ ಸೇರಿದ್ದೇವೆ? ತಿಳಿದೇ ಇಲ್ಲ. ಅದನ್ನು ಬ್ರಿಟಿಷರು ದುರುಪಯೋಗ ಮಾಡಿ ಜನರನ್ನು ಹಣದ ಹಿಂದೆ ಓಡುವಂತೆ ಮಾಡಿ, ಬಂಡವಾಳಶಾಹಿ ಜೀವನ ವ್ಯವಸ್ಥೆ ರೂಢಿಗೆ ತಂದರು. ಹಿಂದೆ ಕೆಟ್ಟು ಪಟ್ಟಣ ಸೇರಿದರು ಎಂದಿತ್ತು. ಆದರೆ ಈಗ ಪಟ್ಟಣ ಸೇರಿ ಕೆಡುತ್ತಿದ್ದಾರೆ ಜನ. ಬದುಕಲಾರದೆ, ಬದುಕಲ್ಲದ ಬದುಕನ್ನು ಬಾಳುತ್ತಿದ್ದಾರೆ. ಆ ನೆಲೆಯಲ್ಲಿಯೇ ಈ “ಕಸವೆಂಬ ಸಮಸ್ಯೆ”.ಸದ್ಯಕ್ಕೆ ಬೆಂಗಳೂರು ಆದಿಯಾಗಿ ನಗರಗಳು ಕಸದ ಸಮಸ್ಯೆಯಿಂದ ಹೊರಬರಲಾರದ ಸಮಸ್ಯೆಯಲ್ಲಿದೆ. ಆದರೆ ಅದಕ್ಕೆ ಕಾರಣ “ಅನಾಗರೀಕ ಜನರಿಗೆ ನಾಗರೀಕತೆಯ ಪಟ್ಟ ಕೊಟ್ಟದ್ದು”. ನಾಗರೀಕತೆಯ ಮುಖ್ಯಲಕ್ಷಣವೂ ತಿಳಿದಿಲ್ಲದ ಜನ. ಕೇವಲ ಸುಖ, ಸೋಮಾರಿತನ, ಅವಿವೇಕದ ನಡೆಯೇ ಈ ಕಸ ಸಮಸ್ಯೆಗೆ ಕಾರಣ. ಅನ್ನವೇ ಬ್ರಹ್ಮ, ಅನ್ನವೇ ಜ್ಞಾನ, ಅನ್ನವೇ ಬುದ್ಧಿ, ಅನ್ನವೇ ಪ್ರಜ್ಞೆ, ಯಶ, ಬಲ, ವೀರ್ಯವೆಂದು ಸಾರುವ ನಮ್ಮೀ ಭಾರತೀಯ ಸಂಸ್ಕೃತಿಯಲ್ಲಿ ಬೆಂಗಳೂರು ಒಂದರಲ್ಲೇ ದಿನಕ್ಕೆ ೧೦ ಲಕ್ಷ ಜನರ ಆಹಾರ ವ್ಯರ್ಥವಾಗುತ್ತಿದೆ. ಕೊಳೆತು ನಾರುತ್ತಿದೆ. ಕಾರಣ ಅಡಿಗೆ ಮಾಡುವ ಪ್ರವೃತ್ತಿ ಬಿಟ್ಟು ಜನ ಹೋಟೆಲಿಂದ ಕಟ್ಟಿ ತಂದು ತಿನ್ನಲಾಗದೇ ಉಳಿದು ಎಸೆಯುತ್ತಿರುವ ಅನ್ನ. ಇದೇನು ಸಾಮಾನ್ಯ ದ್ರೋಹವೇ? ಚಿಂತಿಸಿ. ಮುಂದೆ ಅನ್ನವೇ ಬೆಳೆಯದ ಸ್ಥಿತಿ ದೇಶಕ್ಕೆ ಬಂದರೆ ಅದಕ್ಕೆ ಕಾರಣ ನಗರವಾಸಿಗಳು. ಇದು ಖಂಡಿತ. ತಮಗೆ ತಿನ್ನಲು ಬೇಕಾದಷ್ಟನ್ನೇ ತರುವ ವಿವೇಕವೂ ಇಲ್ಲದ್ದು ಅತಿ ದುಡಿಮೆಯ ಧಾರ್ಷ್ಟ್ಯತನವಿದಲ್ಲವೆ?


ಅಲ್ಲಲ್ಲೆ ಗೋಶಾಲೆ ಮಾಡಿ ಈ ಅನಾವಶ್ಯಕ ಹಾಳಾಗುತ್ತಿರುವ ತಿಂಡಿ ತಿನಿಸನ್ನಾದರೂ ಗೋವು ಮತ್ತಿತರೆ ಪ್ರಾಣಿಗಳಿಗೆ ಕೊಡಬಾರದೇ? ಎಂತಹಾ ಪಾಪಿಗಳಿವರು. ನಿತ್ಯವೂ ಅನ್ನ ಎಸೆಯುತ್ತಾ ಬಂದರೆ ಮುಂದೆ ಅನ್ನ ತಿನ್ನಲಾರದ ಖಾಯಿಲೆ ಬರಲಾರದೇ ಇವರಿಗೆ? ಇಷ್ಟು ಸಂಸ್ಕೃತಿಯನ್ನಾದರೂ ಕಲಿಯಬಾರದೇ? ಅದನ್ನು ನಾಗರೀಕತೆಯೆನ್ನಬಹುದೇ? ಮೊದಲಾಗಿ ನಾಗರೀಕರು ತಮ್ಮ ನಾಗರೀಕ ಪ್ರಜ್ಞೆಯನ್ನು ವೃದ್ಧಿಸಿಕೊಳ್ಳಬೇಕು. ತಮ್ಮ ಮನೆಯ ಅನಿವಾರ್ಯ ತ್ಯಾಜ್ಯ ವಸ್ತುಗಳನ್ನು ಪುನರ್ಬಳಕೆ ಸಾಧ್ಯವೇ? ಚಿಂತಿಸಬೇಕು. ಇಲ್ಲವಾದಲ್ಲಿ ಅದನ್ನು ಸೂಕ್ತವೂ, ಉತ್ತಮವೂ ಆದ ರೀತಿಯಲ್ಲಿ ವಿಲೇವಾರಿ ಮಾಡುವ ಚಿಂತನೆ ಮಾಡಬೇಕು. ನಗರವಾಸಿಗಳಿಗೆ ಬಿಡುವಿನ ಸಮಯ ಜಾಸ್ತಿ. ಅವರು ಕೇವಲ ೮ ಗಂಟೆ ಮಾತ್ರಾ ಸರಿಯಾಗಿ ದುಡಿಮೆ ಮಾಡುವುದು. ಉಳಿದ ೧೬ ಗಂಟೆ ತಮ್ಮ ಸ್ವಂತ ವೈಯಕ್ತಿಕ ಕೆಲಸಕ್ಕೆ ಅವಕಾಶವಿರುತ್ತದೆ. ತಮ್ಮಲ್ಲಿ ಉತ್ಪಾದಿತ ಕಸವು ಇನ್ನೊಬ್ಬನಿಗೆ ಬಳಕೆಗೆ ಬರುವಂತಿದ್ದರೆ ಆದರ ಪೂರ್ವಕವಾಗಿ ಅವರಿಗೆ ಕೊಡಿ. ಅದರಲ್ಲಿ ಲಾಭ ಚಿಂತನೆ ಬೇಡ. ಇಲ್ಲವಾದಲ್ಲಿ ವಾರದ ರಜಾದಿನಗಳಲ್ಲಿ ಊರಿನಿಂದ ದೂರಕ್ಕೆ ನದೀಪ್ರದೇಶ ಅಥವಾ ಗುಡ್ಡಗಾಡು ಪ್ರದೇಶಕ್ಕೆ ತೆರಳಿ ಅಲ್ಲಿಯ ವಾತಾವರಣಕ್ಕೆ ಧಕ್ಕೆಯಾಗದಂತೆ ಅದನ್ನು ಅಲ್ಲಿ ವಿಸರ್ಜಿಸಿ ಬನ್ನಿರಿ. ವಾರದ ಕೊನೆಯ ದಿನ ಜಾಲಿ ಟ್ರಿಪ್ ಹಾಕುವವರು ಈ ಕೆಲಸವನ್ನೂ ಜೊತೆಯಲ್ಲಿ ಸೇರಿಸಿಕೊಂಡರೆ ಯಾವುದೇ ತೊಂದರೆ ಖಂಡಿತಾ ಇಲ್ಲ. 

ವಿಶಾಲ ಅಪಾರ್ಟ್‍ಮೆಂಟ್ ಹೊಂದಿರುವವರು ತಮ್ಮ ವಿಶಾಲ ಕಾರ್ ಪಾರ್ಕಿಂಗ್‍ನಲ್ಲಿ ೩-೪ ದನ ಸಾಕಿ. ಇಡೀ ಅಪಾರ್ಟ್‍ಮೆಂಟಿನ ತಿಂಡಿ, ತಿನಿಸು, ತರಕಾರಿ, ಸಿಪ್ಪೆ ದನಗಳಿಗೆ ಬಳಕೆಯಾಗುತ್ತದೆ. ಅವುಗಳು ಕೊಡುವ ಶುದ್ಧ ಹಾಲು ನಿಮಗೆ ಬಳಕೆಯಾಗುತ್ತದೆ. ಅದೇ ಹಾಲಿನ ಉತ್ಪನ್ನಗಳಿಂದ ಅವುಗಳನ್ನು ಸಾಕುವವನ ಸಂಬಳ, ಮೇಲುಸ್ತುವಾರಿ ಆಗಲು ಸಾಧ್ಯ. ಜೊತೆಯಲ್ಲಿ ನೀವು ಉಸಿರಾಡುವ ಗಾಳಿ ಶುದ್ಧ ಪರಿಪೂರ್ಣವಾಗಿ ನಿಮ್ಮ ಆರೋಗ್ಯ ರಕ್ಷಣೆಯೂ ಆಗುತ್ತದೆ. ಹೂಗಳನ್ನು ಬೆಳೆಸಿದಲ್ಲಿ ನಿಮ್ಮ ಪರಿಸರವೇ ನಗುನಗುತ್ತಿರುತ್ತದೆ. ಸದಾ ಶುಭ್ರ, ಸ್ವಚ್ಛ, ಆನಂದದಾಯಕ ವಾತಾವರಣ ಸಿದ್ಧಿಯಾಗುತ್ತದೆ.

ನಿಮ್ಮಲ್ಲಿರುವ ಒಣ ಕಸಗಳು ಕೆಲ ಅಗತ್ಯಗಳಿಗೆ, ನೀರು ಕಾಯಿಸುವುದಕ್ಕೆ ಯೋಜಿಸಿದರೆ ನಿಮ್ಮಲ್ಲಿ ಉಳಿಯುವುದು ತಿಂಗಳಿಗೆ ಬರೆ ಸ್ವಲ್ಪ ಕಸಗಳು. ಮತ್ತು ಇನ್ನೊಂದು ಉತ್ತಮ ವಿಚಾರವೆಂದರೆ ಈಗಿನ ಅಭದ್ರತೆಯ ಅಪಾರ್ಟ್‍ಮೆಂಟ್ ವಾಸಗಳಲ್ಲಿ ಈ ಕೆಲಸದ ಸಿಬ್ಬಂದಿಗಳು ಇದ್ದರೆ ಭದ್ರತೆ ಹೆಚ್ಚುತ್ತದೆ. ವಯಸ್ಸಾದ ನಿವೃತ್ತಿ ಜೀವನ ನಡೆಸುತ್ತಿರುವ ಮಂದಿಗೆ ಈ ಹೂದೋಟ, ಹಸು, ಕರು ಮನಸ್ಸಿಗೆ ಶಾಂತಿ ನೆಮ್ಮದಿ ತರಬಲ್ಲದು. ಬುದ್ಧಿವಂತರಾದ ನಗರವಾಸಿಗಳು ಇಂತಹಾ ಯೋಜನೆಯನ್ನು ದಾರಿಗೆ ತಂದಲ್ಲಿ ಮುಂದೆ ಕಸವೇ ಇಲ್ಲದ ನಗರ ಕಾಣಬಹುದು. ಇಲ್ಲವಾದರೆ “ನಗರದ ಪರ್ಯಾಯ ನಾಮ ಕಸವೆಂದು ಕರೆಯಬಹುದು”.

ಎಲ್ಲಾ ನಾಗರೀಕರೂ ತಮ್ಮ ವೈಯಕ್ತಿಕ ಪ್ರಜ್ಞೆಯನ್ನು ಜಾಗ್ರತಗೊಳಿಸಿಕೊಂಡು ಜವಾಬ್ದಾರಿಯುತವಾಗಿ ಬಾಳಿದಲ್ಲಿ ಸ್ವಚ್ಛ, ಶುಭ್ರ, ಆರೋಗ್ಯದಾಯಕ ನಗರ ಕಾಣಬಹುದು. ನಗರವಾಸಿಗಳು ಗ್ರಾಮೀಣ ಜನರಂತಲ್ಲ. ವಿಧ್ಯಾವಂತರೂ, ಬುದ್ಧಿವಂತರೂ ಎಂದು ಸಾಬೀತು ಪಡಿಸುವುದು ಈ ತಮ್ಮ ಪರಿಸರ, ಜೀವನ, ಶುದ್ಧಿಪಡಿಸಿಕೊಳ್ಳುವುದರಿಂದ. ಎಲ್ಲೆಂದರಲ್ಲಿ ತಮಗೆ ಬೇಡದ್ದನ್ನು ಎಸೆದು ಹೋಗುವುದು ಪ್ರಾಣಿಧರ್ಮ. ಮಾನವಧರ್ಮ ತನಗೆ ಬೇಡದ್ದನ್ನೂ ಒಂದು ಶಿಸ್ತುಬದ್ಧ ರೀತಿಯಲ್ಲಿ ವಿಸರ್ಜಿಸಿದರೆ ಅದನ್ನೇ ನಾಗರೀಕತೆ ಎನ್ನುತ್ತಾರೆ ಎಂದು ತಿಳಿಸುತ್ತಾ ಈ ಲೇಖನ ಮುಗಿಸುತ್ತಿದ್ದೇನೆ.

No comments:

Post a Comment