Friday, 8 February 2013

ಕಾನೂನಿನಲ್ಲೇನಿದೆ?

ಮೊದಲಾಗಿ ಭಾರತೀಯ ಸಂಸ್ಕೃತಿಯು ಪಾಪ+ಪುಣ್ಯಗಳ ನೆಲೆಗಟ್ಟಿನಲ್ಲಿ ಕೆಳಕಂಡ ೧೧ ಸಮಾಜ ಶಿಕ್ಷಣ ಪದ್ಧತಿಯೊಂದಿಗೆ ಬೆಳೆದು ನಿಂತ ಭದ್ರ ಬುನಾದಿಯ ಸಂಸ್ಕೃತಿ:

1.      ಪರೋಪಕಾರ 
2.      ದಾನ 
3.      ಧರ್ಮ 
4.      ಸದಾಚಾರ 
5.      ಸತ್ಸಂಗ 
6.      ಪುಣ್ಯಕಥಾಶ್ರವಣ 
7.      ಭಜನ 
8.      ಕೀರ್ತನ 
9.      ವಂದನ 
10.  ದಾಸ್ಯ 
11. ಶರಣಾಗತ

ಇದಕ್ಕೆ ಸ್ವರ್ಗ+ಮೋಕ್ಷಗಳೆಂಬ ದ್ವಾಪರದ ಆಮಿಷವಿತ್ತು ಸಮಾಜವನ್ನು ಒಂದು ಉತ್ತಮ ಪ್ರಾಮಾಣಿಕ ಮಾಪನದಲ್ಲಿ ನಡೆಸುತ್ತಿತ್ತು ಆಗಿನ ರಾಜ್ಯಶಾಸ್ತ್ರ. ಆಗಿನ ಕಾಲದಲ್ಲಿ ಸಜ್ಜನರಿಗೂ, ಸತ್ಯವಂತರಿಗೂ, ಪ್ರಾಮಾಣಿಕರಿಗೂ ಗೌರವವಿತ್ತು, ರಾಜಮಾನ್ಯತೆ ಇತ್ತು. ಅಂತಹಾ ನೀತಿಕಥೆಗಳೂ, ಸಚ್ಚಾರಿತ್ರ್ಯ, ಸಜ್ಜನಿಕೆಗೇ ವಿಶೇಷ ಮಾನ್ಯತೆ ಇತ್ತು ಭಾರತೀಯ ಸಂಸ್ಕೃತಿಯಲ್ಲಿ. ಆದರೆ ಎಲ್ಲಾ ಕಾಲದಲ್ಲೂ ಅದನ್ನು ವಿರೋಧಿಸುವ, ಪ್ರತಿಭಟಿಸುವ, ಚಾರ್ವಾಕ, ರಾಕ್ಷಸೀ, ವಿತಂಡಿಗಳಿರಲಿಲ್ಲ ಎಂದಲ್ಲ. ಅದನ್ನು ವಿರೋಧಿಸಿಯೇ ಬೆಳೆದದ್ದೂ ಇದೆ. ದೇಶ ಆಳಿದ್ದೂ ಇದೆ. ಆದರೆ ಧರ್ಮಶಾಸ್ತ್ರಾಧಾರಿತ ರಾಜ್ಯಶಾಸ್ತ್ರವು ಅದನ್ನೆಲ್ಲಾ ಉಪಸಂಹಾರ ಮಾಡಿ ಪುನಃ ಉತ್ತಮ ಆಡಳಿತ ಈ ದೇಶದಲ್ಲಿ ಬಂದಿದೆ. ಮುಂದೆಯೂ ಬಂದೇ ಬರುತ್ತದೆ ಖಂಡಿತ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯಾಂಗವೆಲ್ಲಿ ತಪ್ಪಿದೆ? ಚಿಂತಿಸೋಣ.

        ಮೊದಲಾಗಿ ನಮ್ಮ ಭಾರತಕ್ಕೆ ಸ್ವಾತಂತ್ರ್ಯ ೧೯೪೭ರಂದು ಅಧಿಕೃತವಾಗಿ ಬಂದಾಗ ಅಂದರೆ ಬ್ರಿಟಿಷರು ಭಾರತ ಬಿಟ್ಟು ಹೋದಾಗ ನಮಗೆ ಅಂದರೆ ನಮ್ಮ ರಾಜಕೀಯ ಮುಖಂಡರಿಗೆ ಒಂದು ನಿರ್ದಿಷ್ಟ ಸ್ಪಷ್ಟ ನಿಲುವಿರಲಿಲ್ಲ. ಬ್ರಿಟಿಷರು ಭಾರತ ಬಿಟ್ಟು ಹೋದಾಗ ನಾವೇನು ಮಾಡಬೇಕು ಎಂಬ ಕಲ್ಪನೆಯಿರಲಿಲ್ಲ. ಅದೇ ಬ್ರಿಟಿಷರು ಮಾಡುತ್ತಿದ್ದ ಕುರುಡು ಕಾನೂನು ಭ್ರಷ್ಟ ವ್ಯವಸ್ಥೆ, ಬಂಡವಾಳಶಾಹಿ ಪ್ರವೃತ್ತಿ, ದೊಂಬಿಗಾರರಿಗೆ ಮಣೆ ಹಾಕುವುದು. ಅದನ್ನೇ ಆಶ್ರಯಿಸಿದ ಬ್ರಿಟಿಷರು ಬಿಟ್ಟು ಹೋದ ಕುರ್ಚಿಯ ಮೇಲೆ ಭಾರತೀಯರು ಕುಳಿತರಷ್ಟೆ. 

ಅದೇ ಆಡಳಿತ ನೀತಿ, ಅದೇ ಡಂಭಾಚಾರ, ಬೂಟಾಟಿಕೆ ಹಾಗೇ ನಡೆಯುತ್ತಲೇ ಬಂತು. ಬ್ರಿಟಿಷರಿಗೇನೋ ಸಮಾಜಕ್ಕೆ ವಂಚನೆ ಮಾಡಿ ಸ್ವದೇಶಕ್ಕೆ ಸಂಪತ್ತು ಸಾಗಿಸಬೇಕಿತ್ತು. ಹಾಗಾಗಿ ಆ ಆಡಳಿತ ಪದ್ಧತಿ ಅವರಿಗೆ ಬೇಕಿತ್ತು. ಭಾರತೀಯರಿಗೆ ಬೇಕಿತ್ತೇ? ಇಲ್ಲ. ಆದರೆ ಮೂಲ ಮೌಲಿಕ ಆಡಳಿತ ಪದ್ಧತಿ ತರಲೇ ಇಲ್ಲ. ಮಕ್ಕಳಿಗೆ ನೈತಿಕ ಶಿಕ್ಷಣ ಇಲ್ಲವೇ ಇಲ್ಲ. ದೇಶದಲ್ಲಿ ಹಣ ಮಾಡುವುದು ಒಂದೇ ಸರ್ವಶ್ರೇಷ್ಠ ಗುರಿ ಎಂದು ಮಕ್ಕಳಲ್ಲಿ ಬಿಂಬಿಸಲ್ಪಟ್ಟಿತು. ನ್ಯಾಯ, ನೀತಿ, ಧರ್ಮ ದೂರವಾಯ್ತು. ಎಲ್ಲರನ್ನೂ, ಎಲ್ಲವನ್ನೂ ಕಾನೂನಿನ ಮೂಲಕ ಆಳಬಹುದೆಂಬ ಬ್ರಿಟಿಷರ ಕ್ಷುಲ್ಲಕ ಜ್ಞಾನವೇ ನಮಗೆ ವೇದಜ್ಞಾನಕ್ಕಿಂತ ಮಿಗಿಲಾಯ್ತು. ಆಳಲಾರದೇ ಸರಕಾರ ಸೋತು ಸುಣ್ಣವಾಗಿದೆ ಈಗ.

ಕಾನೂನು ಧರ್ಮ ಮೂಲದ ತಳಹದಿಯಲ್ಲಿಲ್ಲದಿದ್ದಲ್ಲಿ ಆ ಕಾನೂನು ಏನೂ ಮಾಡಲಾರದು, ಮಾಡಲಾಗದು. ಮೊದಲಾಗಿ ತಿಳಿಯಿರಿ ಕಾನೂನಿಗೆ ಶಕ್ತಿ ಬರುವುದು ಕಾರ್ಯಾಂಗ ಬಲದಿಂದಲ್ಲ, ನ್ಯಾಯಾಂಗ ಬಲದಿಂದಲ್ಲ. ಜನರಲ್ಲಿರುವ ನೈತಿಕತೆಯಿಂದ ಎಂಬ ಸತ್ಯ ಸುಸ್ಪಷ್ಟ. ಕಾನೂನು ಉಲ್ಲಂಘಿಸಿಯೇ ಬದುಕು ರೂಪಿಸಿಕೊಳ್ಳುವ ಇರಾದೆ ಹೊಂದಿದ ಪ್ರಜೆಗಳು ಇರುವಲ್ಲಿಯವರೆಗೆ ಕಾನೂನು ವ್ಯರ್ಥ. ಪ್ರಜೆಗಳಲ್ಲಿ ಶುದ್ಧ, ಸಾತ್ವಿಕ, ನೈತಿಕತೆ ಇರಬೇಕು. ಇಲ್ಲವಾದಲ್ಲಿ ಕಾನೂನು ಏನೂ ಮಾಡಲಾರದು. ಹಿಂದೆಯೂ ಧರ್ಮಶಾಸ್ತ್ರಗಳು, ರಾಜ್ಯಶಾಸ್ತ್ರಗಳು ನೈತಿಕ ನೆಲೆಗಟ್ಟಿನಲ್ಲಿ ರೂಪಿಸಿದ್ದ ಕಾನೂನು ಉಲ್ಲಂಘನೆಯಾಗಿಲ್ಲವೆಂದಲ್ಲ ಆಗಿದೆ. ಹಾಗಾಗಿಯೇ ಹಲವು ಮತ ಸಂಸ್ಕೃತಿ ಹುಟ್ಟಿಕೊಂಡವು. ಆದರೆ ಅಲ್ಲಿಯೂ ನೈತಿಕ ಬಲವಿತ್ತು. ಆದರೆ ಈಗ ದೇಶದಲ್ಲಿ ನೈತಿಕ ಬಲವೇ ಕಾಣುವುದಿಲ್ಲ. ಸತ್ಯವಚನ ಎಂಬುದರ ಮಹತ್ವವೇ ಚಾಲ್ತಿಯಲ್ಲಿಲ್ಲವೀಗ. ಹಾಗಾಗಿ ಕಾನೂನು ಅಸಹಾಯಕ.

ಈಗ ಕಾನೂನಿನ ವಂಚನೆ, ಮೋಸ, ಸುಳ್ಳು, ಭ್ರಷ್ಟಾಚಾರವೇ ತಾಂಡವವಾಡುತ್ತಿದೆ. ಆಡಳಿತ, ಕಾನೂನು ನಿಸ್ಸಹಾಯಕವಾಗಿದೆ. ಕಾರಣ ಕಾನೂನಿನಲ್ಲಿರುವ ವಿದೇಶೀ ಪ್ರಭಾವ. ಅಲ್ಲಿ ಸ್ವದೇಶೀಯ ಜ್ಞಾನವಿಲ್ಲ. ರಾಜ್ಯಶಾಸ್ತ್ರದ ಆಳವಾದ ಅಧ್ಯಯನವಿಲ್ಲ. ಹಾಗಾಗಿ ವ್ಯರ್ಥವಾಗುತ್ತಿದೆ. ನಮ್ಮ ದೇಶೀಯ ಸಂಸ್ಕೃತಿಯು ಮತ್ತೂ ಮತ್ತೂ ತುಳಿಯಲ್ಪಡುತ್ತಿದೆ. ಪದೇ ಪದೇ ಸಂವಿಧಾನಕ್ಕೆ ತಿದ್ದುಪಡಿ ತಂದು ಸಂವಿಧಾನಕ್ಕೆ ಕೆಟ್ಟ ಅವಮಾನ ಮಾಡುತ್ತಿದ್ದಾರೆ ಶಾಸಕಾಂಗ ಭಾಗದವರು. ಇದೋ ತಿಳಿಯಿರಿ ಕಾನೂನಿನಲ್ಲೇನಿಲ್ಲ ಆದರೆ ಅದು ಪ್ರಜೆಗಳಲ್ಲಿದೆ - ನೈತಿಕವಾಗಿ ನಡೆದರೆ ಮಾತ್ರಾ ಇದು ಸಾರ್ವಕಾಲಿಕ ಸತ್ಯ.

No comments:

Post a Comment