Saturday, 16 February 2013

ದೇಶ ಆಳಲು ಏನು ಬೇಕು?

ಸರಕಾರದ ಕರ್ತವ್ಯವೇನು ಎಂಬ ಲೇಖನದಲ್ಲಿ ಹೇಗೆ ಸರಕಾರವು ಮಾಡಬಾರದನ್ನೆಲ್ಲಾ ಮಾಡಿ, ಆಗಬಾರದ ರೀತಿಯ ಆಗುಹೋಗುಗಳಿಗೆ ಕಾರಣವಾಗಿದೆ, ಅದನ್ನು ಜ್ಞಾಪಿಸಲೆಂದೇ ಅದರ ಕರ್ತವ್ಯಗಳನ್ನು ವಿಶ್ಲೇಷಿಸಲಾಗಿತ್ತು. ಇಂತಹಾ ದುರಂತ ಪರಿಸ್ಥಿತಿಯಲ್ಲಿ ಅಯೋಮಯರಾಗಿರುವಾಗ, ದೇಶ ಆಳಲು ಏನು ಬೇಕು ಎಂಬುದರ ಚಿಂತನೆಯನ್ನು ನಮ್ಮ ಪುರಾತನ ಇತಿಹಾಸ, ಪುರಾಣ, ರಾಜ್ಯಶಾಸ್ತ್ರಗಳ ಆಧಾರದಲ್ಲಿ ಚಿಂತಿಸೋಣ. ಪುರಾಣದ ಬಗ್ಗೆ ಚಿಂತಿಸುವುದಿದ್ದರೆ ಅಂಬರೀಷ, ಸಗರ, ನಹುಷ, ಪೃಥು, ಹರಿಶ್ಚಂದ್ರ, ನಳ, ಸತ್ಯವ್ರತ, ದೇವವ್ರತ, ರಾಮ, ಯಯಾತಿ, ದಶರಥ, ಅಜ, ಯದು, ಇಕ್ಷ್ವಾಕು, ಮಾಂಧಾತ ಹೀಗೆ ಹೆಸರಿಸುತ್ತಾ ಹೋದಲ್ಲಿ ಚಕ್ರವರ್ತಿಗಳ ಪಟ್ಟಿಯೇ ಸಿಗುತ್ತದೆ. ಅವರೆಲ್ಲಾ ಈ ಸಮಗ್ರ ಭಾರತವನ್ನು ಆಳಿದವರು. ಹೇಗೆಂದರೆ ತಮ್ಮ ಧರ್ಮಬುದ್ಧಿ, ಸನ್ನಡತೆ, ಸತ್ಯಪರಿಪಾಲನೆಯಿಂದ ಇಡೀ ಪ್ರಪಂಚದ ಭೂಭಾಗವನ್ನೆಲ್ಲಾ ಆಳಿ ಬೆಳಗಿದವರು ಇವರು. ದೇಶದಲ್ಲಿ ಇವರ ಕಾಲದಲ್ಲಿ ತುಡುಗು, ಕಳ್ಳತನ, ವಂಚನೆ ಮೋಸಗಳೆಲ್ಲಾ ಅಡಗಿ ಕುಳಿತಿದ್ದವು. ದುಷ್ಟರೆಂಬ ರಾಕ್ಷಸರೆಲ್ಲಾ ಪಾತಾಳ ಸೇರಿದ್ದರು. ಸತ್ಯ, ಪ್ರಾಮಾಣಿಕತೆ, ಸಜ್ಜನಿಕೆಯಿಂದ ಮಾನವರೇ ಎಲ್ಲೆಲ್ಲೂ ತುಂಬಿದ್ದರು. 

ಇನ್ನು ಇತಿಹಾಸ ಚಿಂತನೆ ಮಾಡಿದರೆ ನವನಂದರದ ನಂತರ ಚಂದ್ರಗುಪ್ತ, ಅಶೋಕ, ಶ್ರೀಹರ್ಷ, ಸಮುದ್ರಗುಪ್ತ, ಮಗಧೇಶ, ಉತ್ತಮೋಜಸ, ಪುಲಕೇಶಿ, ವಿಕ್ರಮಾದಿತ್ಯ, ಕೃಷ್ಣದೇವರಾಯ, ವಿಷ್ಣುವರ್ಧನಾದಿ ಅರಸರ ಹೆಸರೇನು ಕಡಿಮೆಯೆ? ಅವರೆಲ್ಲಾ ಈ ವಿಶಾಲ ಸಾಮ್ರಾಜ್ಯವನ್ನು ಸುಖಶಾಂತಿಯಿಂದ ಆಳಿಲ್ಲವೆ? ಸಜ್ಜನರೂ ಪ್ರಾಮಾಣಿಕರೂ ಆದ ಪ್ರಜೆಗಳಿದ್ದರೆ ಆಳ್ವಿಕೆ ಸುಲಭ. ನಂತರ ಭಾರತವನ್ನು ಆಕ್ರಮಿಸಿದ ವಿದೇಶಿಯರು ಬರೇ ಕುಟಿಲತೆಯಿಂದಲೇ, ಕುಹಕತನದಿಂದಲೇ ಆಳುತ್ತಾ ಜನರಲ್ಲಿ ದುರ್ಬೀಜ ಬಿತ್ತಿದರು. ಸತ್ಯವಚನ ಮರೆಯಾಯ್ತು. ಬ್ರಿಟಿಷರು ಭಾರತ ಬಿಟ್ಟರು. ಆದರೆ ಅವರ ಕೊಳಕೆಲ್ಲಾ ಇಲ್ಲೇ ಉಳಿಯಿತು. ಅದನ್ನಿಟ್ಟುಕೊಂಡು ಗಂಧವೆಂದು ಮೂಸುತ್ತಾ ನಮ್ಮ ರಾಜಕಾರಣಿಗಳು ಭ್ರಷ್ಟರಾಗಿ ಆಳುತ್ತಿದ್ದಾರೆ. ಬ್ರಿಟಿಷರು ಆಳುತ್ತಿದ್ದಾಗ ದೇಶದ ಸಂಪತ್ತ್ ಇಂಗ್ಲೆಂಡಿಗೆ ಸಾಗಿಸಲ್ಪಡುತ್ತಿತ್ತು. ಈಗ ಸ್ವಿಸ್ ಬ್ಯಾಂಕ್‍ಗೆ ಸಾಗಿಸುತ್ತಿದ್ದಾರೆ ಬಿಟ್ಟರೆ ಬೇರೆ ಯಾವುದೇ ವ್ಯತ್ಯಾಸವಿಲ್ಲ. ಇದಕ್ಕೆ ಸ್ವಾತಂತ್ರ್ಯ ಬೇಕೆ? ಚಿಂತಿಸಿ.

ಹಿಂದೆ ಅವರೆಲ್ಲಾ ಹೇಗೆ ಆಳುತ್ತಿದ್ದರು ಎಂದು ಚಿಂತಿಸಿದಲ್ಲಿ ಸತ್ಯ ಅರಿವಾಗುತ್ತದೆ. ರಾಜ್ಯಕೋಶವನ್ನು ಹರಿಶ್ಚಂದ್ರನು ವಿಶ್ವಾಮಿತ್ರನಿಗೆ ದಾನ ಮಾಡಿದಾಗ ಆತನಿಗೆ ಒಪ್ಪತ್ತಿನ ಊಟಕ್ಕೂ ಅವನದ್ದಾದ ಇತರೆ ಆಸ್ತಿ ಇರಲಿಲ್ಲ. ರಾಜ್ಯಕೋಶವನ್ನು ಸೋತ ಪಾಂಡವರು ವನವಾಸಕ್ಕೆ ತೆರಳಿದಾಗ ಅವರ ನಿಸ್ಸಹಾಯಕತೆ ಅರಿತ ಜಗಚ್ಚಕ್ಷು ಸೂರ್ಯನೇ ಸ್ವತಃ ಅಕ್ಷಯ ಪಾತ್ರೆಯನ್ನು ಕೊಟ್ಟ. ಆದರೂ ಸ್ವಂತದ್ದಾದ ಯಾವುದೇ ಆಸ್ತಿ ವಗೈರೆ ಮಾಡಿಲ್ಲ. ಆದರೆ ಈಗಿನ ರಾಜಕಾರಣಿಗಳು ತಾವು ಉಂಡುಟ್ಟು ಬದುಕಲು ಮಾತ್ರವಲ್ಲ, ದೇಶವನ್ನೇ ಕೊಂಡುಕೊಳ್ಳುವಷ್ಟು ಆಸ್ತಿ ಮಾಡುತ್ತಿದ್ದಾರೆ. ಹಾಗಾಗಿ ಭ್ರಷ್ಟಾಚಾರ ಬೆಳೆಯುತ್ತಿದೆ. ಒಟ್ಟಾರೆ ಸರ್ಕಾರ ಆಳುತ್ತಿದೆ.

ಆಚಾರ್ಯ ಚಾಣಕ್ಯರು ತಮ್ಮ ಅರ್ಥಶಾಸ್ತ್ರ ವಿವರಣೆಯಲ್ಲಿ ಲೋಭಿ ಪ್ರಜೆಯು ದೇಶದಲ್ಲಿ ತ್ಯಾಗಿ ಪ್ರಜೆಯ ಸಂಖ್ಯೆಯ ೧೬ನೇ ೧ ಭಾಗ ಮಾತ್ರಾವಿರಬೇಕು. ಅದನ್ನಾಧರಿಸಿ ರಾಜ ಲೋಭಿಗಳ ಪ್ರಮಾಣ ಹೆಚ್ಚಿದಂತೆಲ್ಲಾ ತ್ಯಾಗಿಗಳ ಸಜ್ಜನರನ್ನು ಗುರುತಿಸಿ ಅವರಿಗೆ ವಿಶೇಷ ಸ್ಥಾನಮಾನ ಕಲ್ಪಿಸುವುದರಿಂದ ತ್ಯಾಗಿಗಳ ಉದಾರಿಗಳ ಸಂಖ್ಯೆ ಬೆಳೆಸಬೇಕು ಎಂದಿದ್ದಾರೆ. ಕುಟುಂಬ ಸಂಖ್ಯೆಯು ಶೇ. ೪೦ ಭಾಗ, ತ್ಯಾಗಿಗಳೂ, ವಿರಕ್ತರ ಭಾಗ ೨೦%; ಬ್ರಹ್ಮಚಾರಿಗಳಾದ ಸಮಾಜ ಸೇವಕರ ಭಾಗ ೧೫%; ವಿರಕ್ತರೂ, ಸನ್ಯಾಸಿಗಳ ಭಾಗ ೧೫%; ಅಧಿಕಾರಿಗಳೂ, ರಾಜೋದ್ಯೋಗಿಗಳ ಭಾಗ ೧೦% ದಾಮಾಶಯ ಕಾಯ್ದುಕೊಂಡಿರಬೇಕು. ಅವುಗಳಲ್ಲಿ ಕೊರತೆ ಕಂಡುಬಂದರೆ ಆ ಕ್ಷೇತ್ರಕ್ಕೆ ವಿಶಿಷ್ಠ ಸೌಲಭ್ಯ ಸ್ಥಾನಮಾನ ಒದಗಿಸುವುದು ಹಿಂತೆಗೆದು ಕೊಳ್ಳುವುದು ರಾಜನ ಮುಖ್ಯ ಕರ್ತವ್ಯವಾಗಿರುತ್ತದೆ ಎಂದಿದ್ದಾರೆ. ಒಟ್ಟು ಪ್ರಜಾಜನರ ಸಂಖ್ಯೆಯಲ್ಲಿ ಎಲ್ಲರೂ ವ್ಯಾವಹಾರಿಕ ಜ್ಞಾನ ವಿಧ್ಯೆ ಕಲಿತಿರಬೇಕು. ನಂತರ ಕುಲವೃತ್ತಿಯನ್ನೇ ಆಧರಿಸಿ ಉನ್ನತ ಶಿಕ್ಷಣ ಪಡೆಯಬೇಕು ಎಂದಿದ್ದಾರೆ. ಅವರಲ್ಲಿ ೧೦% ರಾಜಾಶ್ರಯದಿಂದ ವಿಧ್ಯೆಗೆ ಸಂಶೋಧನೆಗೆ ಅನುಕರ್ಸಬೇಕೆಂದ್ದೆ. ಅವರ ವಿಧ್ಯಾಭ್ಯಾಸಾ ನಂತರ ಪೂರ್ಣ ಸ್ವತಂತ್ರರು. ಅವರ ಮೇಲೆ ರಾಜನು ಯಾವುದೇ ಹಿಡಿತವಿಡುವ ಪ್ರಯತ್ನ ಮಾಡಬಾರದು. ಆಗ ಮಾತ್ರಾ ಅವರು ದೇಶಭಕ್ತರಾಗಿ ದೇಶಸೇವೆಗೆ ತೊಡಗಿಸಿಕೊಳ್ಳುತ್ತಾರೆ ಎಂಬುದು ಚಾಣಕ್ಯರ ಮತ

ಈ ಮತದಂತೆ ಚಿಂತಿಸಿದರೆ ಉನ್ನತ ವ್ಯಾಸಂಗ ಮಾಡಿದವನು ಸ್ವತಂತ್ರವಾಗಿ ಬದುಕಬೇಕು ಎಂಬುದು ಅಭಿಪ್ರಾಯ. ಅವನು ರಾಜೋದ್ಯೋಗ ಸಲಹೆ ಮಾರ್ಗದರ್ಶನವನ್ನು ಸರಕಾರಕ್ಕೆ ಕೊಟ್ಟರೂ ಸಂಭಾವನೆ ಸಂಬಳ ಸೌಲಭ್ಯವಿಲ್ಲ. ಆಗ ಅವನು ಉತ್ತಮವಾದ ಸ್ವತಂತ್ರೋದ್ಯೋಗ ನಿರತನಾಗುವುದರಿಂದ ದೇಶಕ್ಕೆ ವಿಪುಲ ಲಾಭ, ಆದಾಯ, ಉತ್ತಮ ಉತ್ಪಾದನೆ ಜನರಿಗೆ ವಿಶೇಷ ಉದ್ಯೋಗಾವಕಾಶ ಒದಗಿ ಬರುತ್ತದೆ. ದೇಶದಲ್ಲಿ ಸ್ವತಂತ್ರ ಉದ್ದಿಮೆ ನಡೆಸುವವರಿಗೆ ಮುಕ್ತ ಅವಕಾಶ ನೀಡಿದಲ್ಲಿ ದೇಶೀಯ ಉತ್ಪಾದನೆ ಹೆಚ್ಚುತ್ತದೆ. ಇದು ಪುರುಕುತ್ಸರ ಮತ.

“ಆ ಸತ್ಯೋ ಯಾತು ಮಘವಾನ್ ಋಜೀಷೀ ದ್ರವಂತ್ವಸ್ಯ ಹರಯ ಉಪನಃ | ತಸ್ಮಾ ಇದಂಧ ಸುಷುಮಾ ಸುದಕ್ಷಮಿಹಾಭಿಪಿತ್ವಂ ಕರತೇ ಗೃಣಾನಃ” ||

ಭಗವಾನ್ ವಾಮದೇವರು ಅರ್ಥಶಾಸ್ತ್ರವು ರಾಜ್ಯಶಾಸ್ತ್ರಕ್ಕೆ ಬದ್ಧವಾಗಿರಬೇಕು. ಋಜು ಮಾರ್ಗಾನುವರ್ತಿ ಆಗಿರಬೇಕು. ಧರ್ಮ ಬದ್ಧವಾದ ಐಶ್ವರ್ಯ ಮಾತ್ರಾ ಫಲವನ್ನೀಯಬಲ್ಲದು. ಸುಖವನ್ನೀಯಬಲ್ಲದು. ಹಣದ ಸಹಜ ಗುಣವಾದ ಚಿತ್ತಾಕರ್ಷಣೆ ತನ್ಮೂಲಕ ದುರ್ಮಾರ್ಗಾವಲಂಬನೆಗೆ ದಾರಿಯಾಗುತ್ತದೆ. ಆದರೆ ಧರ್ಮ ಮಾರ್ಗದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲವೆಂಬ ಸೈದ್ಧಾಂತಿಕ ತತ್ವದಡಿಯಲ್ಲಿ ಸಂಗ್ರಹಿಸಿದ ಅರ್ಥ ಮಾತ್ರಾ ಸನ್ಮಾರ್ಗದಲ್ಲಿ ನಡೆಸುತ್ತದೆ ಎಂದಿದ್ದಾರೆ. ತನ್ಮೂಲಕ ಋಜು ಮಾರ್ಗದಿಂದ ಧರ್ಮ ಬದ್ಧರೀತಿಯಲ್ಲಿ ಅರ್ಜಿಸಿದ ಸಂಪತ್ತು ಮಾತ್ರಾ ಅರ್ಥವೆನ್ನಿಸಿಕೊಳ್ಳುತ್ತದೆ. ಅದರಿಂದ ಸಕಾಮನೆಗಳು ಪೂರ್ಣಗೊಂಡು ಪಾಪ ಜನಿತ ಕಾರಣ ಕೈಂಕರ್ಯ ಉಂಟಾಗುವುದಿಲ್ಲ. ಆದ್ದರಿಂದ ಪ್ರತೀ ಜೀವಿಯ ನಡೆಯೂ ಉತ್ತಮ ದಾರಿಯಲ್ಲಿರುತ್ತದೆ. ಹಾಗಾಗಿ ಮೋಕ್ಷ ಮಾರ್ಗವೆಂದರು ಜ್ಞಾನಿಗಳು.

“ಅವಸ್ಯ ಶೂರಾಢ್ವನೋ ನಾಂತೇಸ್ಮಿನ್ ನೋ ಅಧ್ಯಸವನೇ ಮಂದಧೈ”
“ಶಂಶಾತ್ಯುಕ್ತಮುಶನೇವ ವೇಧಾ ಶ್ಚಿಕಿತುಷೇ ಅಸುರ್ಯಾಯ ಮನ್ಮ”

ಸಹಜವಾಗಿರುವ ಅವಿಧ್ಯೆಯೆಂದರೆ ಲಾಲಸಾಯುಕ್ತವಾದ ಕುರುಡು ಪ್ರವರ್ತನೆ ಮಾನವನಿಗಲ್ಲ. ವಿವೇಕಯುಕ್ತವಾದ ಸೂಕ್ತಾಸೂಕ್ತ ಪ್ರವರ್ತನೆ ಅತೀ ಮುಖ್ಯ. ಅದನ್ನು ಭಕ್ತಿಯಿಂದ ಅಂದರೆ ದೃಢ ವಿಶ್ವಾಸದಿಂದ ಗಳಿಸಬೇಕಿದೆ. ತನ್ಮೂಲಕ ಮಹತ್ತರ ಜ್ಞಾನ ಪ್ರಾಪ್ತಿಯಾಗುತ್ತದೆ. ಅರಿಷಡ್ವರ್ಗ ವಿಜಯಿಯಾಗುತ್ತಾನೆ. ಅಂತಹಾ ಸಂಸ್ಕಾರವಂತನೂ ಅವನ ಪರಂಪರೆಯವರು ಮಾತ್ರಾ ರಾಜಕಾರ್ಯ ಯೋಗ್ಯರಿರುತ್ತಾರೆ. ಅವನನ್ನು ಪ್ರಸಕ್ತಕಾಲದಲ್ಲಿ ಉಪಾಸನಾ ಶಕ್ತಿಯಿಂದ ಅರಿತು ನಿಯೋಗಿಸಬೇಕು. ಅದು ಗುರುವಿನ ಕರ್ತವ್ಯವಾಗಿರುತ್ತದೆ. ಅದಕ್ಕೆ ರಾಜಗುರು ಪಟ್ಟ. ಪ್ರಶ್ನಾತೀತ, ಅನಿಂದ್ಯ, ಅದೇ ದೇವವಾಣಿ ಎಂದು ತಿಳಿಯಿರಿ.

“ಸ್ವ ಅರ್ಯದ್ ವೇದೀ ಸುದೃಶೀಕ ಮರ್ಕೈಃ ಮಹೀಜ್ಯೋತಿ ರುರುಚುರ್ಯದ್ಧವಸ್ತೋಃ | ಅಂಧಾ ತಮಾಂಸಿ ದುಧಿತಾ ವಿಚಕ್ಷೇ ನೃಭ್ಯಶ್ಚಕಾರ ನೃತಮೋ ಅಭಿಷ್ಟೌ” ||

ಈ ಮಹೀಯಲ್ಲಿ ಬದುಕುವ ಶ್ರೇಷ್ಠ ಜೀವಿ ಮಾನವ. ಇತರೆ ಜೀವಿಗಳಲ್ಲಿಲ್ಲದ ವಿಶೇಷ ಶಕ್ತಿ, ವೈಖರಿ, ಬುದ್ಧಿ, ಕರ್ಮ, ಋಣಗಳೊಂದಿಗೆ ಮಾನವ ಬದುಕು ರೂಪಿಸಿಕೊಳ್ಳಬೇಕು. ಅದರ ದಿವ್ಯಜ್ಞಾನವನ್ನು ಬೋಧಿಸುತ್ತದೆ ನಮ್ಮ ವೇದಗಳು. ಅದನ್ನು ಅರ್ಥ ಮಾಡಿಕೊಂಡವನು ಮಾತ್ರಾ ಶಾಸಕನಾಗಬೇಕು, ಆಡಳಿತ ಸೂತ್ರ ಹಿಡಿಯಬೇಕು. ಅವನು ಮಾತ್ರಾ ಪ್ರಜೆಗಳಲ್ಲಿ ಪರಿವರ್ತನೆ ತರಬಲ್ಲ ಸರ್ವಶ್ರೇಷ್ಠ ನೇತಾರನಾಗಿರುತ್ತಾನೆ. ಅವನೇ ಪ್ರತ್ಯಕ್ಷ ಧೈವಸ್ವರೂಪನಾಗಿರುತ್ತಾನೆ. ರಾಜಾ ಪ್ರತ್ಯಕ್ಷ ದೇವತಾ ಎಂಬ ಉಕ್ತಿ ಹುಟ್ಟಿದ್ದು ಇದೇ ಕಾರಣದಿಂದಾಗಿ. ತ್ಯಾಗಿಯೂ ಭೋಗಿಯೂ ಎಂದಿಗೂ ಸಮವಲ್ಲ. ಊಟ, ವಸತಿ, ಮಾನಗಳಲ್ಲಿ ಮಾತ್ರಾ ಸರ್ವಸಮಾನತೆ ಇರಬೇಕು. ಇನ್ನಿತರೆ ವಿಷಯಗಳಲ್ಲಿ ನಿರ್ದಿಷ್ಟ ಅರ್ಹತೆ ಇರಲೇಬೇಕು. ಅದರಲ್ಲಿ ಮೀಸಲಾತಿ ಸರಿಯಲ್ಲ. ಆದರೆ ಈಗಿನ ರಾಜಕಾರಣ ಕುರುಡುತನದಿಂದ ಜಾತಿ ಆಧಾರದಲ್ಲಿ ಮೀಸಲಾತಿ ನಿರ್ಧರಿಸುತ್ತಿದೆ. ಆರ್ಥಿಕ, ಬೌದ್ಧಿಕವಾಗಿ ಬ್ರಿಟಿಷರ ರಾಜಕಾರಣದಿಂದ ಹಿಂದುಳಿದವರನ್ನು ಸಮಗ್ರ ವಾಹಿನಿಯಲ್ಲಿ ಮುಂದೆ ಬರುವ ಅವಕಾಶವಾದೀ ಸೌಲಭ್ಯ ಆಗ ಕೇವಲ ೩೦ ವರ್ಷಕ್ಕೆ ಅಂಗೀಕರಿಸಿದ್ದು ಈಗ ನಿರಂತರವಾಗಿದೆ. ಅದೇ ದೇಶದ ಅಧೋಗತಿಗೆ ಕಾರಣ ತಿಳಿಯಿರಿ.

“ವಿಶ್ವಾನಿ ಶಕ್ರೋ ನರ್ಯಾಣಿ ವಿದ್ವಾನ್ ಆಪೋ ರಿರೇಚ ಸಖಿಭಿರ್ನಿಕಾಮೈಃ”
“ಅಶ್ಮಾನಂ ಚಿದ್‍ಯೇ ಬಿಭಿದುರ್ವಚೋಭಿರ್ವೃಜಂ ಗೋಮಂತ ಮುಶಿಜೋ ವಿವವ್ರುಃ”

ಮಾನವೋಚಿತವಾದ ಸದ್ಗುಣಗಳಿಂದ ಪ್ರಕಾಶಮಾನವಾಗಬೇಕು. ಅವನೇ ಲೋಕ ನೇತಾರನಾಗಬೇಕು. ಪ್ರಜೆಗಳೆಲ್ಲಾ ಅವನ ಶೌರ್ಯ, ಸಾಹಸ, ಪಾಂಡಿತ್ಯ, ಸದ್ಗುಣ, ಸಹಿಷ್ಣುತೆಗಳನ್ನು ಕೊಂಡಾಡುವಂತಿರಬೇಕು. ಅವನೇ ರಾಜನೆನ್ನಿಸಿಕೊಳ್ಳುತ್ತಾನೆ. ರಾಜನ ವಾಣಿಯು ಪಾಲನೀಯವಾಗಿರಬೇಕು. ಪ್ರಜೆಗಳಲ್ಲಿ ಆಧ್ಯಾತ್ಮಿಕ ಆಸಕ್ತಿ ಹುಟ್ಟಿಸುವಂತಿದ್ದು ಸಹಜ ಸ್ವಾಭಾವಿಕ ಪ್ರಾಪಂಚಿಕ ಕಾಮನೆಗಳನ್ನು ಮಿತಿಯಲ್ಲಿಡಬೇಕು. ಪರಸ್ಪರ ಸ್ನೇಹಭಾವದಿಂದಲೇ ಪ್ರಜಾ ಜನರಿರುವಂತೆ ನೋಡಿಕೊಳ್ಳಬೇಕು. ಹುಟ್ಟುವ ಕೆಲ ಅಘಟಿತ ವಿದ್ರೋಹಗಳನ್ನು ಗುರುತಿಸಿ ಮಟ್ಟ ಹಾಕಬೇಕು. ಸದಾ ಎಚ್ಚರದಿಂದ ಪ್ರಜಾ ಕ್ಷೇಮ ಚಿಂತನೆ ಮಾಡುವವನಾಗಿರಬೇಕು. ಅದಕ್ಕಾಗಿ ವೇದವಿದನೂ, ಜ್ಞಾನಿಯೂ, ವಿವೇಕಿಯೂ ಆದವನು ದೇಶದ ರಾಜನಾದರೆ ಅಂದರೆ ಈಗಿನ ಶಾಸಕನಾದರೆ ದೇಶ ಸುಭಿಕ್ಷವಾಗುತ್ತದೆ. ಇಲ್ಲವಾದರೆ ಹುಚ್ಚು ಹಿಡಿದಂತೆ ವರ್ತಿಸುವ ಪ್ರಜಾಜನರು ಏನಕೇನ ಪ್ರಕಾರೇಣ ಏನೇನನ್ನೋ ಮಾಡಬಹುದು. ಅದನ್ನು ತಡೆಯಲು ಕಾನೂನಿಗೆ ಶಕ್ತಿ ಇರುವುದಿಲ್ಲ.

“ಕಾನೂನು ಅಪರಾಧಕ್ಕೆ ಶಿಕ್ಷೆ ವಿಧಿಸಬಹುದೇ ವಿನಃ ಅಪರಾಧವನ್ನು ತಡೆಯಲಾರದು”

ಅಪರಾಧ ತಡೆಯಲು ಒಳ್ಳೆ ಪ್ರಜಾಜನರನ್ನು ಉತ್ಪಾದಿಸಲು ಪಾಪ+ಪುಣ್ಯಗಳ ನೆಲೆಯಲ್ಲಿ ನೈತಿಕ ಶಿಕ್ಷಣವಿರಬೇಕು ಎಂದು ರಾಜ್ಯಶಾಸ್ತ್ರಾಧಾರಿತವಾದ ಈ ಲೇಖನ ಮುಗಿಸುತ್ತಿದ್ದೇನೆ.

No comments:

Post a Comment