Saturday, 9 February 2013

ಸರಕಾರದ ಕರ್ತವ್ಯವೇನು?


 ಅನ್ನ, ವಿಧ್ಯೆ, ಬಟ್ಟೆ, ರಕ್ಷಣೆ ಇವು ಮಾತ್ರ ಸರಕಾರದ ಕರ್ತವ್ಯ. ಅದು ಬಿಟ್ಟು ಬೇರಾವುದರಲ್ಲಿಯೂ ಸರಕಾರದ ಮೇಲುಸ್ತುವಾರಿ ಮಾತ್ರವಾಗಿರಬೇಕು. ಅದರಲ್ಲಿಯೇ ಸರಕಾರ ತೊಡಗಿಕೊಂಡಲ್ಲಿ ಮೊದಲಿನ ನಾಲ್ಕು ಭಾಗದಲ್ಲಿ ಸೋಲು ಖಂಡಿತ. ಸದ್ಯದಲ್ಲಿ ಸರಕಾರ ಅದನ್ನು ಮಾಡುತ್ತಿದೆಯೆ? ಇಲ್ಲ. ರಕ್ಷಣೆ ಮಾಡಬೇಕಾದವರದ್ದೇ ಹತ್ಯೆಯಾಗುತ್ತಿದೆ. ವಿಧ್ಯೆ ಮಾರಾಟವಾಗುತ್ತಿದೆ. ಬಟ್ಟೆ ಇಲ್ಲವೇ ಇಲ್ಲ. ಬಟ್ಟೆ ಎಂದರೆ ಬರೇ ಮೈಮುಚ್ಚುವ ವಸ್ತ್ರವಲ್ಲ ಮಾನ ಗೌರವ ಕಾಪಾಡುವುದು. ಅನ್ನ ದೇವರಿಗೇ ಪ್ರೀತಿ. ರೇಷನ್‍ಗಾಗಿಯೇ ಒಂದಿಲಾಖೆ ನಿರಂತರ ಹೋರಾಡುತ್ತಿದ್ದರೂ ಸರಿಪಡಿಸಲಾಗುತ್ತಿಲ್ಲ. ಅನ್ನ ಹಂಚಿಕೆ ಸರಿ ತೂಗಿಸಲು ಸಾಧ್ಯವೇ ಆಗಿಲ್ಲ. ಇಲ್ಲಿಯವರೆಗೆ ಬರೇ ರೇಷನ್ ಕಾರ್ಡ್ ಮಾಡಿಸಲೇ ಸರಕಾರಕ್ಕೆ ಆಗಿಲ್ಲ. ಆದರೆ ಅಭಾವ, ಬರಗಾಲ ಕಾಲದಲ್ಲಿ ಮಾತ್ರಾ ರೇಷನ್ ಪದ್ಧತಿ ಇಅರಬೇಕು. ಉಳಿಕೆ ಕಾಲದಲ್ಲಿ ಮುಕ್ತ ಆಹಾರ ಪದ್ಧತಿ ಇರಬೇಕು ಎಂಬ ಸತ್ಯ ಸರಕಾರಕ್ಕೆ ಹೇಳುವವರಾರು? ಸದಾಕಾಲ ರೇಷನ್ ಮೂಲಕ ಆಹಾರ ಒದಗಿಸುವ ಪದ್ಧತಿ ಎಷ್ಟು ನಿಕೃಷ್ಟವೆಂಬುದಾದರೂ ಅರಿವಿದೆಯೇ?


          ಎಲ್ಲಿಯವರೆಗೆ ಮುಕ್ತ ಆಹಾರ ಬರುವುದಿಲ್ಲ ಅಲ್ಲಿಯವರೆಗೆ ಜನರಲ್ಲಿ ಅಪರಾಧೀ ಪ್ರವೃತ್ತಿ ಬೆಳೆಯುತ್ತಲೇ ಹೋಗುತ್ತದೆ. ಅದಕ್ಕೆ ಹಸಿವು ಎಂಬ ಕಾರಣದ ಧರ್ಮರಕ್ಷಣೆ ಇದೆ. ಅಭಾವವಿದ್ದಾಗ ಕೊರತೆಯಾದಾಗ ಜನರಲ್ಲಿ ಕಿತ್ತು ತಿನ್ನುವ ಪ್ರವೃತ್ತಿಯ ಸಮತೋಲನಕ್ಕಾಗಿ ಮಾತ್ರಾ ರೇಷನ್ ಪದ್ಧತಿ ಬೇಕೇ ವಿನಃ ನಿರಂತರವಲ್ಲ. ಬರಗಾಲವಿದ್ದಲ್ಲಿ, ತೀವ್ರ ಕೊರತೆಯಿದ್ದಲ್ಲಿ ಪ್ರಜೆಗಳಲ್ಲಿ ಹುಟ್ಟುವ ಅಮಾನವೀಯ ಗುಣ, ಮೃಗೀಯ ಗುಣ ಕಿತ್ತು ತಿನ್ನುವುದು. ಆಗ ಅದನ್ನು ಸಮತೋಲನ ಮಾಡಲು ರೇಷನ್ ಪದ್ಧತಿ (ಅಥವಾ ಪಡಿತರ ಪದ್ಧತಿ) ಇರಲಿ. ಆದರೆ ನಿರಂತರ ಅದಿದ್ದರೆ ಮಾನವರೆಲ್ಲಾ ಮೃಗಗಳೆಂದರ್ಥವೇ? ತನಗೆ ಬೇಕಾದಷ್ಟನ್ನೇ ಹಿತ ಮಿತವಾಗಿ ಬಳಸಬೇಕಾದ ಸಹಜಗುಣ ಮಾನವನಿಗಿರಬೇಕು. ಅದನ್ನು ನಿರಂತರ ರೇಷನ್ ಮೂಲಕ ಇಷ್ಟೇ ತಿನ್ನಬೇಕು ಎಂಬ ಪದ್ಧತಿಯ ಸರ್ಕಸ್ ಪ್ರಾಣಿಗಳ ಸಾಕಾಣಿಕೆ ಪದ್ಧತಿ ಸಮಾಜದ ಅವಹೇಳನವಲ್ಲವೆ? ಪ್ರಜೆಗಳಿಗೆ ಮಾನವಿದೆಯೆ? ಒಂದು ರೇಷನ್ ಕಾರ್ಡ್ ಮಾಡಿಸುವ ಕಾರಣಕ್ಕಾಗಿಯೇ ದೇಶದ ಎಷ್ಟು ಮಾನವ ಶಕ್ತಿ ವ್ಯಯವಾಗುತ್ತಿದೆ ಚಿಂತಿಸಿದ್ದೀರಾ? ಅದರ ಬಗ್ಗೆ ಒಂದು ವಿವರಣೆ ಗಮನಿಸಿ.


          ಮೊದಲಾಗಿ ನಮ್ಮ ಕರ್ನಾಟಕದಲ್ಲಿ ರೇಷನ್‍ಗಾಗಿ ಕಾರ್ಡ್ ಪದ್ಧತಿ. ಬಿಪಿಎಲ್, ಆಧಾರ್, ಎಪಿಎಲ್ ಈಗ ಚಾಲ್ತಿಯಲ್ಲಿದೆ. ಮುಂಚೆ ಹಸಿರು, ಹಳದಿ, ಕೆಂಪು ಇತ್ಯಾದಿಗಳಿತ್ತು. ಅಂದಾಜ್ ೨೦೦೦ನೇ ಇಸವಿ ಆರಂಭಿಸಿ ಇಲ್ಲಿಯವರೆಗೆ ಅಂದಾಜು ಪ್ರತೀ ರಾಜ್ಯದಲ್ಲಿ ಎಷ್ಟೋ ಬಾರಿ ಕಾರ್ಡ್ ಮಾಡಿಸಿ ನಂತರ ಅದನ್ನು ಹಿಂಪಡೆದು ಪುನಃ ಮಾಡಿಸಿ ಒಟ್ಟಾರೆ ಈಗಲೂ ಯಾರಿಗೂ ಯಾವ ವ್ಯವಸ್ಥೆಯೂ ಪೂರ್ಣವಾಗಿಲ್ಲ. ಆದರೆ ಕರ್ನಾಟಕದ ಅಂದಾಜು ೬ ಕೋಟಿ ೫೦ ಲಕ್ಷ ಜನಸಂಖ್ಯೆಯು ನಿಜವಾದ ಮತ್ತು ಖೋಟಾ ಕಾರ್ಡ್ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚು ಕಾರ್ಡ್ ಮಾಡಿಸಿ ನಂತರ ಹಿಂಪಡೆದಿರಬಹುದು. ಅದರಲ್ಲಿ ಎಪಿಎಲ್ ಕಾರ್ಡ್ ಮಾಡುವಾಗ ಅಧಿಕೃತ ವೆಚ್ಚ ೬೦/- ರೂಪಾಯಿ. ಬಿಪಿಎಲ್ ಕಾರ್ಡ್ ಮಾಡಲು ೧೭೦/- ರೂಪಾಯಿ. ಆಧಾರ್ ಕಾರ್ಡ್‍ಗೆ ೫೦/- ರೂಪಾಯಿ ಅಧಿಕೃತ ಖರ್ಚು. ಮತ್ತು ಅನಧಿಕೃತ ಖರ್ಚುಗಳನ್ನು ಬರೆಯಲು ಸಾಧ್ಯವಿಲ್ಲ. ಇತರೆ ಓಟಿಗಾಗಿ ಐಡಿ ಕಾರ್ಡ್, ಗ್ಯಾಸ್‍ಗಾಗಿ ಗ್ಯಾಸ್ ಕಾರ್ಡ್ ಇತ್ಯಾದಿ ಇತ್ಯಾದಿ ಹಲವಿವೆ. ಅವೆಲ್ಲಾ ಬಿಡಿ. ಆದರೆ ೬ಕೋಟಿ ೫೦ಲಕ್ಷ ಜನರು ಹತ್ತು ಹನ್ನೆರಡು ವರ್ಷದಿಂದ ಒಂದು ಬದ್ಧ ಕಾರ್ಡ್ ಮಾಡಿಸುವುದಕ್ಕಾಗಿ ಹೋರಾಡುತ್ತಲ್ಲೇ ಇದ್ದಾರೆ. ವರ್ಷಕ್ಕೆ ೨-೩ ಬಾರಿ ಹೊಸ ಹೊಸ ಅಪ್ಲಿಕೇಷನ್, ಫೋಟೋ, ಗ್ರೂಪ್ ಫೋಟೋ ಇತ್ಯಾದಿ ಮಾಡಿಸುತ್ತಲೇ ಇದ್ದಾರೆ. ಆದರೂ ಇಲ್ಲಿಯವರೆಗೆ ೬೦% ಜನರಿಗೂ ಅಧಿಕೃತ ಕಾರ್ಡ್ ದೊರೆತಿಲ್ಲ. ಆದರೆ ಪ್ರತೀವರ್ಷ ಕರ್ನಾಟಕದಲ್ಲಿ ಲಕ್ಷ ಲಕ್ಷ ಅನಧಿಕೃತ ಕಾರ್ಡ್ ಹಿಂಪಡೆಯುತ್ತಲೇ ಇದೆ ಸರಕಾರ. ಈ ವರ್ಷವೂ ಮೊನ್ನೆ ಮೊನ್ನೆ ೨೦ ಲಕ್ಷ ಅನಧಿಕೃತ ಕಾರ್ಡ್ ಹಿಂಪಡೆದಿದ್ದಾರೆ ಅಧಿಕಾರಿಗಳು. ಈ ಅನಧಿಕೃತ ಕಾರ್ಡ್‍ಗಳೇನೂ ಸುಮ್ಮನೆ ಹುಟ್ಟಿಲ್ಲ. ಅಲ್ಲಿ ಭ್ರಷ್ಟಾಚಾರವಿರಲೇ ಬೇಕು.


          ಅಂದಾಜು ಕೇಳಿಕೆ ಮಾತು ಅಧಿಕೃತವಲ್ಲ ಒಂದು ಡೂಪ್ಲಿಕೇಟ್ ಕಾರ್ಡ್ ಮಾಡಿಸಲು ೨ಸಾವಿರ ರೂಪಾಯಿ ಕೊಟ್ಟರೆ ಆಗುತ್ತದೆ ಎಂಬುದು. ಆ ಲೆಕ್ಕದಲ್ಲಿ ೪೦೦ಕೋಟಿ ರೂಪಾಯಿ ಭ್ರಷ್ಟಾಚಾರ ಆಗಿದೆ ಎಂದರ್ಥ ಅಲ್ಲವೇ? ೨೦ಲಕ್ಷ x ೨ ಸಾವಿರ = ೪೦೦ಕೋಟಿ ರೂಪಾಯಿ. ಇದಿಷ್ಟೂ ಕಳ್ಳ ಹಣವಲ್ಲವೇ? ಇದರಲ್ಲಿ ಯಾರ್ಯಾರ ಪಾಲು ಎಷ್ಟೆಷ್ಟು? ಇಲ್ಲಿಗೆ ೧೨ ವರ್ಷದಲ್ಲಿ ಹೀಗೆ ಸುಮಾರು ಹಲವು ಕೋಟಿ ಕಾರ್ಡುಗಳು ವಶಪಡಿಸಿಕೊಳ್ಳಲಾಗಿದೆ ಎಂದರೆ ಭ್ರಷ್ಟ ಹಣದ ಮೊತ್ತವೆಷ್ಟು? ಒಬ್ಬ ಸಾಮಾನ್ಯ ಮಧ್ಯಮವರ್ಗದ ವ್ಯಕ್ತಿ ಒಂದು ಕಾರ್ಡ್‍ಗಾಗಿ ಸರಕಾರೀ ಕಛೇರಿಗಳಿಗೆ ೪-೫ ಬಾರಿ ಕೆಲಸ ಬಿಟ್ಟು ಓಡಾಡಲೇ ಬೇಕು. ದುಡಿಮೆಯ ನಷ್ಟ ಎಷ್ಟು? ಒಬ್ಬನ ಸಾಮಾನ್ಯ ದಿನಗೂಲಿ ೨೦೦ ರೂ. ಎಂದಿಟ್ಟುಕೊಂಡರೂ ೨ ಕೋಟಿಯಷ್ಟು ಕುಟುಂಬ ೫ ಬಾರಿ ಎಂದರೆ ೧೦ ಕೋಟಿ ಕೆಲಸದ ದಿನ ದುಡಿಮೆಯಿಲ್ಲದೆ ಉತ್ಪಾದನೆ ಇಲ್ಲದೆ ಕಳೆದಿದೆ. ಅಂದರೆ ೧೦ ಕೋಟಿ x ೨೦೦ = ೨೦೦೦ ಕೋಟಿ ರೂಪಾಯಿ ರಾಜ್ಯ ಬೊಕ್ಕಸಕ್ಕೆ, ಸಾಮಾನ್ಯ ಜನರಿಗೆ ನಷ್ಟವಲ್ಲವೆ? ಇದು ವರ್ಷದ ಲೆಕ್ಕ. ೧೨ ವರ್ಷಕ್ಕೆ ನೀವೇ ಗುಣಿಸಿಕೊಳ್ಳಿರಿ. ಅಂದಾಜು ೧೨ ವರ್ಷದಲ್ಲಿ ೨೪ ಸಾವಿರ ಕೋಟಿಯಷ್ಟು ಉತ್ಪಾದನಾ ಕೊರತೆ ಬರೇ ರೇಷನ್ ಕಾರ್ಡ್ ಎಂಬ ಕುತ್ಸಿತದಿಂದ ಉಂಟಾಗಿದೆ. ಅವೆಲ್ಲಾ ಸಾಮಾನ್ಯ ಜನರಿಗೆ ಅರ್ಥವಾಗುತ್ತದೆಯೆ? ಇದು ಬರೇ ಕರ್ನಾಟಕದ ಮಾತು. ಇನ್ನು ದೇಶದ ವಿಚಾರ ಲೆಕ್ಕ ಹಾಕಲು ಸಾಧ್ಯವೇ? ಚಿಂತೆಯಿಲ್ಲ.


          ಇಂತಹಾ ಅವ್ಯವಹಾರ ಭ್ರಷ್ಟಾಚಾರಯುಕ್ತವಾದ ರೇಷನ್ ವ್ಯವಸ್ಥೆ ಅಗತ್ಯವೇ? ಖಂಡಿತಾ ಇಲ್ಲ. ಅಭಾವವೂ ಇಲ್ಲ, ಬರಗಾಲವೂ ಇಲ್ಲ, ಕೊರತೆಯೂ ಇಲ್ಲ. ಆದರೆ ಅಧಿಕಾರಿಗಳಿಗೆ ಹಣ ಮಾಡುವ ಅತೀ ಸುಲಭ ಸರಳ, ಅಧಿಕೃತ ಮಾರ್ಗವಾದ್ದರಿಂದ ಇದನ್ನು ಪೋಷಿಸಿಕೊಂಡೇ ಬರುತ್ತಿದೆ ಸರಕಾರ. ಆದರೆ ದೇಶದಲ್ಲಿ ಭ್ರಷ್ಟಾಚಾರ ಬೆಳವಣಿಗೆಯಾಗಲು ಇಂತಹಾ ವ್ಯವಸ್ಥೆಯೇ ಕಾರಣ. ಆದರೆ ರೇಷನ್ ತಿಂದೇ ಬದುಕಬೇಕಾದ ದುಃಸ್ಥಿತಿ ಭಾರತೀಯರ ದುರಾದೃಷ್ಟ ಹೀನತನ, ಹೇಡಿತನ. ದುಡಿದು ಬದುಕಲಾಗದ ರಾಜನಿಂದ ರೇಷನ್ ಬೇಡಿ ತಿನ್ನಬೇಕಾದ ವೈಕಲ್ಯತೆ ತಂದು ಕೊಟ್ಟಿದೆ ಜನರಿಗೆ ಸರಕಾರ. ಆ ದೃಷ್ಟಿಯಲ್ಲಿ ಗಮನಿಸಿದರೆ ಈ ರೇಷನ್ ಪದ್ಧತಿ ಜನರಿಗೆ ಅನುಕೂಲವೆ? ಖಂಡಿತಾ ಇಲ್ಲ. ನಾಗರೀಕ ಸರಬರಾಜು ಇಲಾಖೆಯೊಂದು ತೀರಾ ಭ್ರಷ್ಟಾಚಾರದ ಕೊಂಪೆಯಾಗಿದೆ. ನಿತ್ಯವೂ ಪತ್ರಿಕೆ, ಟಿವಿಗಳಲ್ಲಿ ಆ ಸುದ್ದಿಯೇ. ಅದು ಸರಕಾರದ ಕರ್ತವ್ಯದ ನಾಟಕವಷ್ಟೇ ವಿನಃ ಕೊರತೆ ತುಂಬುವ ವಿಧಾನವಲ್ಲ. ಬೆಳೆಯುವುದಕ್ಕೆ ಸೂಕ್ತ ಪ್ರೋತ್ಸಾಹ ಕೊಟ್ಟಿಲ್ಲ. ಆಹಾರ ಕೊರತೆ ಇಲ್ಲ. ಆಹಾರ ಅಭಾವ ಇಲ್ಲದಾಗ ಈ ರೇಷನ್ ನಾಟಕ ಅಗತ್ಯವೂ ಇಲ್ಲ. ಇನ್ನು ಈ ವಿಚಾರವಾಗಿ ನಾನಾ ಇಲಾಖೆಗಳಲ್ಲಿ ಆಗುವ ಭ್ರಷ್ಟಾಚಾರವಂತೂ ಹೇಳಲಸಾಧ್ಯ. ಮುಂದಿನ ವಿಚಾರ ಬಟ್ಟೆ.


          ಮಾನವೇಯ ನೆಲೆಯಲ್ಲಿ ಗೌರವವಾಗಿ ಬದುಕಲು ಅವಕಾಶ ಒದಗಿಸಿ ಕೊಡುವಂತಾದ್ದು ಸರಕಾರದ ಕರ್ತವ್ಯ. ಸಾಮಾನ್ಯ ವರ್ಗದ ಜನ ರಾಜಕಾರಣಿಗಳ ಮರ್ಜಿ, ಅಧಿಕಾರಿಗಳ ಮರ್ಜಿ ಮತ್ತು ಆ ಪ್ರದೇಶ ಗೂಂಡಾ, ಡಕಾಯಿತ, ಭ್ರಷ್ಟರ ಮರ್ಜಿಗೆ ತಲೆಬಾಗುತ್ತಲೇ ಬದುಕಬೇಕು. ಅವನಿಗೇನು ಬಟ್ಟೆಯಿದೆ, ಬದುಕಿದೆ. ಸ್ವಾತಂತ್ರ್ಯವೆಲ್ಲಿದೆ? ಆದರೆ ಅದೇ ಕಾನೂನು. ಬದುಕಿನಲ್ಲಿ ಗೌರವವೆಂದರೇನೆಂದು ಅರಿಯದ ಜನ ತಮ್ಮ ಕ್ರೋಧವನ್ನು ಮನೆಯಲ್ಲಿ ಅಸಹಾಯಕರ ಮೇಲೆ ತೀರಿಸಿಕೊಳ್ಳುತ್ತಾರೆ. ಅದು ಅತ್ಯಾಚಾರ, ಅನಾಚಾರವೆನ್ನಿಸಿಕೊಳ್ಳುತ್ತದೆ. ಆದರೆ ಅದರ ಮೂಲವಿರುವುದು ಸಾಮಾನ್ಯ ಜನರ ಅಸಹ್ಯಕತೆಯ ಪ್ರವರ್ತನೆಯಷ್ಟೆ. ಅದಕ್ಕೆ ಬಟ್ಟೆ ಒದಗಿಸಬೇಕಾದ ಸರಕಾರವೇ ಈ ಲಾಬಿಯನ್ನು ಪೋಷಿಸುತ್ತಿದೆ. ಸಾಮಾನ್ಯ ಕೆಳ ಹಂತದ ಒಬ್ಬ ನೌಕರನೂ ತನ್ನ ವ್ಯಾಪ್ತಿಯಲ್ಲಿ ಒಂದು ಲಾಬಿ ಮಾಡುತ್ತಾನೆ, ಗೂಂಡಾಗಿರಿ ಮಾಡುತ್ತಾನೆ. ಅದನ್ನು ಕೇಳುವ ಶಕ್ತಿ ಶ್ರೀಸಾಮಾನ್ಯನಿಗಿಲ್ಲ, ಸರಕಾರಕ್ಕೂ ಇಲ್ಲ. ಅದು ಓಟಿನ ರಾಜಕಾರಣ. ಧರ್ಮ ತುಷ್ಠೀಕರಣ; ಭ್ರಷ್ಟಾಚಾರ. ಬಟ್ಟೆಯಿಲ್ಲದ ಬದುಕಿನ ಆಕ್ರೋಶವೇ ಈಗಿನ ಕಾಲದ ಅತ್ಯಾಚಾರ, ಅನಾಚಾರಗಳೆಲ್ಲ. ನೈತಿಕ ನೆಲೆಗಟ್ಟಿನಲ್ಲಿ ಪ್ರತೀ ಶ್ರೀಸಾಮಾನ್ಯನೂ ಸ್ವತಂತ್ರವಾಗಿ ಬದುಕಲು ಸ್ವಾತಂತ್ರ್ಯ ಬೇಕೆಂದು ಹೋರಾಡಿ ಬ್ರಿಟಿಷರಿಂದ ಕಸಿದುಕೊಂಡರೂ ಬ್ರಿಟಿಷರಿಗೆ ಹುಟ್ಟಿದ ಬಂಡವಾಳಶಾಹಿ ಆಡಳಿತ ಪದ್ಧತಿ ನಮ್ಮನ್ನು ಬದುಕಲು ಬಿಡದೆ ಗುಲಾಮರಂತೆ ಆಳುತ್ತಿದೆ. ಗೌರವದ ಬದುಕು ಕೊಡಲಾರದ್ದು ಸರಕಾರ ಅನ್ನಿಸಿಕೊಳ್ಳುತ್ತದೆಯೆ?


          ಇನ್ನು ವಿಧ್ಯೆ. ಇದು ಕೇವಲ ಒಂದು ಬೂಟಾಟಿಕೆ. ಜನ ಸಾಮಾನ್ಯರಿಗೆ ವಿಧ್ಯೆ ಕೊಡುತ್ತಿಲ್ಲ. ಗುಲಾಮಿತನ ಕಲಿಸುತ್ತಿದೆ. ವಿಧ್ಯೆಯೆಂದರೆ ಅದನ್ನು ಕಲಿತವನು ಸ್ವತಂತ್ರವಾಗಿ ಬದುಕಲು ಆಗಬೇಕು. ಈಗ ಕಲಿಸುವ ವಿಧ್ಯೆಯಲ್ಲಿ ಆ ಬದುಕಿಲ್ಲ. ಯಾರಾದರೂ ಕಂಪೆನಿಯವರು ಕೆಲಸ ಕೊಟ್ಟರೆ ಅಲ್ಲಿ ಗುಲಾಮತನ ಮಾಡಬೇಕು. ಇಲ್ಲವಾದರೆ ಬದುಕಿಲ್ಲ. ಅದಕ್ಕೆ ಮೋಸವೆಂಬ ಪರೀಕ್ಷೆ, ಒಂದು ಸರ್ಟಿಫಿಕೇಟ್. ಒಂದೇ ರೀತಿಯ ಕೆಲಸ ಮಾಡಲು ವಿಧ್ಯೆ ಬೇಕಿಲ್ಲ. ಅದನ್ನು ಕಲಿಯುವುದಕ್ಕೆ ಕಾಲೇಜ್ ಎಂಬ ಒಂದು ಸೋಗಲಾಡಿ ವ್ಯವಸ್ಥೆಯಲ್ಲಿ ೩-೪ ವರ್ಷದ ಅಧ್ಯಯನ ನಂತರ ಪರೀಕ್ಷೆಯೆಂಬ ನಾಟಕ. ಅಲ್ಲಿ ಬರೇ ಕಾಪಿ, ಲಂಚ, ಭ್ರಷ್ಟಾಚಾರ. ಅದರ ಮೂಲಕ ಸಿಗುವ ಅರ್ಹತಾಪತ್ರ. ಇದೆಲ್ಲಾ ಸಮಾಜಕ್ಕೆ ಮಾಡುವ ದ್ರೋಹವಲ್ಲವೆ? ನಿಜವಾದ ತಜ್ಞತೆಗೆ ಮಾಡುವ ಅಪಚಾರವಲ್ಲವೆ? ಚಿಂತಿಸಿ. ಮೊನ್ನೆ ಬೆಂಗಳೂರಿನಲ್ಲಿ ನಮ್ಮ ಉನ್ನತ ಶಿಕ್ಷಣ ಸಚಿವರಾದ ಸಿ.ಟಿ. ರವಿಯವರು ಖುದ್ದಾಗಿ ಇದನ್ನು ಕಣ್ಣಾರೆ ಕಂಡರು. ಆದರೂ ಆ ಶಿಕ್ಷಣ ಸಂಸ್ಥೆ ಮಾನ್ಯತೆ ಏಕೆ ಕಳೆದುಕೊಂಡಿಲ್ಲ. ಆ ವ್ಯವಸ್ಥೆ ಇನ್ನೂ ಏಕೆ ಜಾರಿಯಲ್ಲಿದೆ? ಕಾಪಿ ಮಾಡಿ ಬರೆದು ಪಾಸಾದ ತಜ್ಞರು ದೇಶಕ್ಕೆ ಏನು ಕೊಟ್ಟಾರು? ಪುನಃ ಪರೀಕ್ಷೆ ಮಾಡಲು ಆದೇಶ ಮಾಡಿದ್ದೇಕೆ ಸಚಿವರು? ಅವರೆಲ್ಲಾ ಅನರ್ಹರೇ ಎಂಬುದು ಪ್ರತ್ಯಕ್ಷ ಪ್ರಮಾಣವಾದ ಮೇಲೂ ಮತ್ತೆ ಪುನಃ ಪರೀಕ್ಷೆ ನಾಟಕ ಬೇಕಿತ್ತೆ? ಇದು ನಮ್ಮ ದೇಶದ ನಮ್ಮ ಸರಕಾರ ಕೊಡುವ ವಿದ್ಯೆ. ಇದನ್ನು ಸರಿಯಾಗಿ ಮಾಡುತ್ತಿದೆಯೆ? ಇಲ್ಲ. ವಿಧ್ಯೆ ಒಂದು ವ್ಯಾಪಾರವಾಗಿದೆ. ಸರಕಾರ ಕಣ್ಣುಮುಚ್ಚಿ ಕುಳಿತಿದೆ. ದೇಶದ ಗತಿ ಅಧೋಗತಿ. ಇನ್ನು ರಕ್ಷಣೆಯ ವಿಚಾರ ಸರಕಾರಕ್ಕೆ ಸಾಧ್ಯವೆ?


          ಎಲ್ಲೆಲ್ಲೂ ದೊಂಬಿ, ಗಲಾಟೆ, ಕಳ್ಳತನ, ದರೋಡೆ, ವಂಚನೆ, ಮೋಸ, ಕೊಲೆ, ಸುಲಿಗೆ ನಡೆಯುತ್ತಲೇ ಇದೆ. ಘಟನೆ ನಂತರ ಸರಕಾರ ಅಪರಾಧಿಗಳನ್ನು ಹಿಡಿದು ಕಠಿಣವ್ಗಿ ಶಿಕ್ಷಿಸಲಾಗುವುದು ಎಂದು ಹೇಳಿಕೆ ಕೊಡುತ್ತಲೇ ಇದೆ. ಪರಿಣಾಮವಿಲ್ಲ. ಯಾರನ್ನೂ ರಕ್ಷಿಸಲು ಸರಕಾರಕ್ಕೆ ಆಗಿಲ್ಲ, ಆಗುತ್ತಿಲ್ಲ. ರಾಷ್ಟ್ರಪಿತ ಗಾಂಧಿಯೂ ಹತ್ಯೆಯಾದರು. ಇಬ್ಬರು ಪ್ರಧಾನಿಗಳೂ ಹತ್ಯೆಯಾದರು. ಇನ್ನು ಶ್ರೀಸಾಮಾನ್ಯನ ಪಾಡೇನು? ದಿನಾ ದರೋಡೆ, ಲೂಟಿ, ಗಲಭೆ, ದೊಂಬಿ, ಅಪಘಾತ, ದುರಂತ, ಕೊಲೆ, ಸುಲಿಗೆ, ಅತ್ಯಾಚಾರ, ಅನಾಚಾರ, ಕಳ್ಳತನ, ಮೋಸ, ವಂಚನೆ ನಡೆಯುತ್ತಲೇ ಇದೆ. ಸರಕಾರ ಘಟನೆ ಘಟಿಸಿದ ಮೇಲೆ ಅಪರಾಧಿಗಳನ್ನು ಕಠಿಣವಾಗಿ ಶಿಕ್ಷಿಸಲಾಗುವುದು ಎಂಬ ಹೇಳಿಕೆ ಕೊಡುತ್ತಲೇ ಬಂದಿದೆ. ಆದರೆ ಯಾವುದೂ ನಿಂತಿಲ್ಲ. ಕಾರಣ ಜನರಿಗೆ ನೈತಿಕ ಶಿಕ್ಷಣ ಇಲ್ಲದಿರುವುದು. ಜನರಲ್ಲಿ ನೈತಿಕತೆ ಇಲ್ಲದಿದ್ದರೆ ಕಾನೂನಿನಿಂದ ಆಳಲು ಸಾಧ್ಯವಿಲ್ಲ. ಅದನ್ನೂ ಸರಕಾರ ಅರಿತುಕೊಳ್ಳಬೇಕು. ಶಿಕ್ಷಣವೆಂಬ ಮೂರ್ಖತನದಿಂದ ಸಮಾಜದ ನೈತಿಕತೆ ಪೂರ್ಣ ಹಾಳಾಗಿದೆ. ಇನ್ನೂ ೫೦ ವರ್ಷ ಬೇಕು ಈ ವ್ಯವಸ್ಥೆ ಪುನಾ ರಚಿಸಲು. ಜನರಲ್ಲಿ ಎಷ್ಟು ಭ್ರಷ್ಟಾಚಾರ ಮಡುಗಟ್ಟಿದೆಯೆಂದರೆ ನೈತಿಕತೆ ಬೋಧಿಸುವ “ಭಗವದ್ಗೀತೆ” ಶಾಲೆಗಳಲ್ಲಿ ಬೋಧಿಸಬಾರದೆಂಬಲ್ಲಿಯವರೆ ಂದಿದ. ಭವದ್ಗೀತೆಯಂತಹಾ ಜೀವನ ನೈತಿಕತೆ ಬೋಧಿಸುವ ಒಂದು ಗ್ರಂಥ ಪ್ರಪಂಚದ ಯಾವ ಧರ್ಮವೂ ಮತವೂ ಬೋಧಿಸಲಾರದು. ಅದೇ ನಮ್ಮ ಜನಕ್ಕೆ ಬೇಡ. ಹಾಗಿದ್ದ ಮೇಲೆ ಈ ಸರ್ಕಾರ ಏನು ರಕ್ಷಣೆ ಕೊಟ್ಟೀತು ಸಮಾಜಕ್ಕೆ? ಇದು ಈ ದೇಶದ ಈಗಿನ ದುಸ್ಥಿತಿ. ಪ್ರಜಾಜನರ ಪಾಡು ನಾಯಿಪಾಡು. ತನ್ನ ಮುಖ್ಯ ಕರ್ತವ್ಯ ಮರೆತ ಸರಕಾರ ಮಾಡಬಾರದ್ದನ್ನೆಲ್ಲಾ ಮಾಡಿ, ಆಗಬಾರದ ರೀತಿಯ ಆಗುಹೋಗುಗಳಿಗೆ ಕಾರಣವಾಗಿದೆ. ಇದೇ ದುರಂತ.

2 comments:

 1. ನೀವು ಮೇಲೆ ಹೇಳಿದ ಪ್ರತಿಯೊಂದು ವಿಷಯಗಳು ಅಕ್ಷರಶಃ ಸತ್ಯ ಎಂಬುದು ದುರಾದ್ರಷ್ಟಕರ. ಇದರ ಜೊತೆ healthcare ವ್ಯವಸ್ಥೆಯೂ ಅಧೋಗತಿಗೆ ಇಳಿದಿದೆ (we can see that in the current pandemic crisis)
  ಇದರ ಬಗ್ಗೆ ಹಲವು ಬಾರಿ ನಮ್ಮ ಸಮುದಾಯದಲ್ಲಿ ಕೆಲವರೊಂದಿಗೆ ವಿಮರ್ಶಿಸಲು ಮಾಡಿದ ವ್ಯರ್ಥ ಪ್ರಯತ್ನವೂ, ಲೇವಡಿಗೊಂಡಿದ್ದು ಆಗಿದೆ. ನಮ್ಮ ಭಾರತದಲ್ಲಿ ಇದರ ಬಗ್ಗೆ ಹೇಳಿದರೆ ಸ್ವಲ್ಪ ಅರ್ಥವಾಗಬಹುದು ಆದ್ರೆ ಹಣ ಗಳಿಕೆ, ಐಷಾರಾಮಿ ಜೀವನ, ನಶೆಯಲ್ಲೇ ಮುಳುಗಿರುವ capitalist mindset ಇರುವ USA ನಲ್ಲಿ ಅಸಾಧ್ಯ. Just keep your thoughts to yourself and suck it up! ಎನ್ನುವ ಮಟ್ಟಿಗೆ ಬಂದಿದೆ.
  ನೀವು ಕೊಟ್ಟ "ಬೆಕ್ಕಿನ ಕುತ್ತಿಗೆಗೆ ಗಂಟೆ" ಯ ಉದಾಹರಣೆ ಚೆನ್ನಾಗಿದೆ ಆದರೆ ನಮ್ಮ ಸುತ್ತಮುತ್ತ ಇರುವುದು ಬೆಕ್ಕಲ್ಲ ಹುಲಿಗಳು.

  ReplyDelete
 2. ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ತರುವುದಕ್ಕಾಗಿಯೇ ಅಗೋಚರ ಚೈತನ್ಯ ರೂಪದಲ್ಲಿ ಕೋರೋನಾ ಆವರಿಸಿರುವುದು. ಭಾರತವು ವಿಶ್ವಗುರುವಾಗುವತ್ತ ಬೇಕಾದ ಸಂವತ್ಸರಪರ್ಯಂತ "ವಿಶ್ವಜಿಗೀಷದ್ ಯಾಗ" ಹಿಂದಿನ ವರ್ಷವೇ ಸಂಪನ್ನಗೊಂಡಿದೆ. ವಿಶ್ವಗುರುವಾದರೆ ಉಳಿದೆಲ್ಲಾ ರಾಷ್ಟ್ರಗಳು ಶಿಷ್ಯರಂತೆ ಗುರುವಚನ ಪಾಲಿಸಿಯಾರು.

  ವೇಷ ತೊಟ್ಟರೆ ನರಿಯೂ ಹುಲಿಯಂತೆ ಕಾಣುತ್ತದೆ, ಆದರೆ ಸತ್ಯವಲ್ಲ. ಪಂಚತಂತ್ರದ ನೀಲಿ ನರಿಯ ಕಥೆ ಓದಿರಿ - https://veda-vijnana.blogspot.com/2013/08/moral-of-discrimination-story-of-blue.html

  ReplyDelete