Friday, 8 February 2013

Is government registration required for Jyotishya? or not?ಜ್ಯೋತಿಷ್ಯಕ್ಕೆ ರಿಜಿಸ್ಟ್ರೇಶನ್ ಬೇಕೆ? ಬೇಡವೆ?

ಪ್ರಸಕ್ತಕಾಲದಲ್ಲಿ ಅಂದರೆ ಈ ದಶಂಬರ ತಿಂಗಳಲ್ಲಿ ಲೋಕವೆಲ್ಲಾ ಪ್ರಳಯವಾಗುತ್ತದೆ ಎಂದು ಗುಲ್ಲೆಬ್ಬಿಸಿದ ಮಾಧ್ಯಮ ಈಗ ಅದರ ಎಲ್ಲಾ ಜವಾಬ್ದಾರಿಯನ್ನೂ ಜ್ಯೋತಿಷ್ಯದ ಮೇಲೆ ಹಾಕಿ ಜ್ಯೋತಿಷಿಗಳನ್ನು ಕಂಟ್ರೋಲ್ ಮಾಡಬೇಕು ಅದಕ್ಕಾಗಿ ಜ್ಯೋತಿಷಿಗಳು ಲೈಸೆನ್ಸ್ ಹೊಂದಿರಬೇಕು, ಅವರು ರಿಜಿಸ್ಟ್ರೇಶನ್ ಮಾಡಿಸಬೇಕು, ಅದನ್ನು ಕಾನೂನಿನ ಅಡಿಯಲ್ಲಿ ಸೀಮಿತಗೊಳಿಸಬೇಕು ಎಂಬ ಹುನ್ನಾರದಲ್ಲಿದೆ ಮಾಧ್ಯಮ. ಪ್ರಳಯದ ವಿಚಾರ ಗುಲ್ಲೆಬ್ಬಿಸಿದವರಾರು? ಜ್ಯೋತಿಷಿಗಳು ಅಧಿಕೃತವಾಗಿ ಹೇಳಿದ್ದಾರೆಯೆ? ಆದರೆ ಮಾಧ್ಯಮ ಮಾತ್ರ ತನ್ನ ಹಿಡಿತದಲ್ಲಿ ವಿನಾ ಕಾರಣ ಪ್ರಚಾರ ಕೊಟ್ಟು ನಂತರ ತಾನು ಹೇಳಿಲ್ಲವೆಂದು ತಿಪ್ಪೆ ಸಾರಿದೆ. ಆದರೆ ಪ್ರಳಯದ ಬಗ್ಗೆ ಸಾರ್ವತ್ರಿಕ ಪ್ರಚಾರ ಕೊಟ್ಟದ್ದು ಮಾಧ್ಯಮವೇ ಅಲ್ಲವೇ? ಅದಿಲ್ಲದಿದ್ದಲ್ಲಿ ಈ ಪ್ರಳಯ ಪ್ರಚಾರವೇ ಇಲ್ಲದೆ ಯಾವ ಸಮಸ್ಯೆಗೂ ಕಾರಣವಾಗುತ್ತಿರಲಿಲ್ಲ. ಮಾಧ್ಯಮದ ಕಿತಾಪತಿಗೆ ಜ್ಯೋತಿಷಿಗಳು ಬಲಿಯಾದರು ಅಷ್ಟೆ. ಬೇರೆ ಎಲ್ಲರೂ ನಾವೇನೂ ಹೇಳೇ ಇಲ್ಲವೆಂದು ತಪ್ಪಿಸಿಕೊಂಡರು. ಹಾಗಿದ್ದರೆ ಹೇಳಿದವರಾರು ಎಂಬುದು ಜ್ಯೋತಿಷಿಗಳ ವಾದ. ಜ್ಯೋತಿಷಿಗಳಾದರೋ ಅಬ್ಬೆಪ್ಯಾರಿಗಳು, ಈ ಮಾಧ್ಯಮದ ಕುಹಕ ಅರಿಯದಿದ್ದವರು. ಮೊದಲು ಅವರಂತೆ ಸೈಗುಟ್ಟಿ ಕಡೆಯಲ್ಲಿ ಸಿಕ್ಕಿ ಬಿದ್ದರು. ಇಂತಹಾ ಪ್ರತ್ಯುತ್ಪನ್ನಮತಿಗಳಲ್ಲದ ಮೂರ್ಖ ಜ್ಯೋತಿಷ್ಯಕ್ಕೆ ಈಗ ಸರಕಾರ ಅಧಿಕೃತತೆ ಕೊಡಲು ಹೊರಟಿದೆ ಎಂದರೆ ಸರಕಾರವೆಷ್ಟು ಮೂರ್ಖತನ ಪ್ರದರ್ಶಿಸುತ್ತಿದೆ? ಜ್ಯೋತಿಷಿಗಳು ಜ್ಯೋತಿಷ್ಯ ಹೇಳಲು ರಿಜಿಸ್ಟ್ರೇಶನ್ ಮಾಡಿಸಬೇಕು. ಅದಕ್ಕೆ ಕಾನೂನು ತರಲು ಹೊರಟಿದೆ ಸರಕಾರ. ಆದರೆ ಮೂಲಭೂತ ಚಿಂತನೆಯನ್ನು ಮಾಡಿಲ್ಲ. ಸರಕಾರ ಜ್ಯೋತಿಷ್ಯವನ್ನು ಅಧಿಕೃತಗೊಳಿಸಿದೆಯೆ? ಅದರ ಅಧ್ಯಯನ ಅಂಗೀಕಾರವಾಗಿದೆಯೆ? ಅದರ ತಜ್ಞತೆಗೆ ಮಾಪನವೇನು? ಅದು ಸಂವಿಧಾನ ಬದ್ಧವೆ? ಎಷ್ಟು ಪ್ರಕಾರದ ಜ್ಯೋತಿಷ್ಯವು ಅಧಿಕೃತವೆಂದು ಸಂವಿಧಾನ ಮಾನ್ಯತೆ ಮಾಡಿದೆ? ಅದರ ಅಧ್ಯಯನಕ್ಕೆ ಸರಕಾರ ವಾರ್ಷೀಕ ಎಷ್ಟು ಅನುದಾನ ಕೊಡುತ್ತಿದೆ? ಹಾಗಿಲ್ಲದ ಮೇಲೆ ಅದನ್ನು ಸಂವಿಧಾನ ರೀತ್ಯಾ ಅಧಿಕೃತವೆಂದು ಘೋಷಿಸದೇನೇ ಅದಕ್ಕೆ ಪರವಾನಿಗೆ ಯಾವ ಆಧಾರದಲ್ಲಿ ಕೊಡುತ್ತಾರೆ??? ಸರಕಾರದ ಇಂತಹಾ ಹುಚ್ಚುತನ ಖಂಡಿತಾ ದೇಶದ್ರೋಹ, ಧರ್ಮದ್ರೋಹವೆನ್ನಿಸಿಕೊಳ್ಳುತ್ತದೆ. ಜ್ಯೋತಿಷ್ಯದ ಹೆಸರಿನಲ್ಲಿ ಸಮಾಜಕ್ಕೆ ಮೋಸ ಮಾಡುವ ಜನರಿಗೆ ಅಧಿಕೃತತೆ ಕೊಡುವುದು ಎಷ್ಟು ಸರಿ? ಚಿಂತಿಸಿ. ಈ ಬಗ್ಗೆ ವಿಸ್ತೃತ ಚಿಂತನೆಯೇ ಈ ಲೇಖನವಾಗಿರುತ್ತದೆ. ನಿಧಾನವಾಗಿ ಓದಿ ಅರ್ಥಮಾಡಿಕೊಂಡು ಸ್ಪಂದಿಸಿರಿ.

        ಮೊದಲಾಗಿ ಗಮನಿಸಬೇಕು ನಮ್ಮೀ ಭಾರತದೇಶದಲ್ಲಿ ಎಷ್ಟು ವಿಧ ಫಲ ಜ್ಯೋತಿಷ ಪದ್ಧತಿ ಇದೆ? ಅದು ಎಷ್ಟು ಶಾಸ್ತ್ರ ಮಾನ್ಯ, ಅಧಿಕೃತ? ಇನ್ನು ಉಪಾಸನಾ ಸಿದ್ಧಿಯವು ಎಷ್ಟು? ಸ್ವಂತ ತಪಶ್ಶಕ್ತಿಯಿಂದ ಕಂಡುಕೊಂಡ ವಿಧಾನಗಳು ಎಷ್ಟು? ಪರಂಪರೆಯಿಂದ ಬಂದವು ಎಷ್ಟು ವಿಧ? ಅವೆಲ್ಲಾ ಎಷ್ಟು ಸೂಕ್ತ? ಈ ಬಗ್ಗೆ ಸರಕಾರ ಏನಾದರೂ ಸಮೀಕ್ಷೆ ಮಾಡಿದೆಯೆ? ಅವನ್ನೆಲ್ಲಾ ಯಾವ ಯಾವ ಮಾಪನದಲ್ಲಿ ಅಳೆದು ಅಧಿಕೃತಗೊಳಿಸುತ್ತಾರೆ? ಇವೆಲ್ಲಾ ಚಿಂತನೆ ಮಾಡದೇನೇ ಜ್ಯೋತಿಷ್ಯ ಹೇಳುವವನು ರಿಜಿಸ್ಟ್ರೇಶನ್ ಮಾಡಿಸಬೇಕು, ಆ ಸಂಬಂಧೀ ಶುಲ್ಕ ಕಟ್ಟಬೇಕು, ನಮ್ಮ ಅಧಿಕಾರಿಗಳು ನಿಮಗೆ ಲೈಸನ್ಸ್ ನೀಡುತ್ತಾರೆ ಎಂದರೆ ಎಷ್ಟು ಸಾಧು? ಇಲ್ಲಿಯವರೆಗೂ ಒಂದು ಅಧ್ಯಯನ ಯೋಗ್ಯ ವಿಚಾರವೆಂದು ಸಂವಿಧಾನ ಮಾನ್ಯತೆ ಪಡೆಯದ, ಒಂದು ನಿರ್ದಿಷ್ಟ ನಿಯಮ ಬದ್ಧತೆ ಇಲ್ಲದ, ಅವರವರ ಉಪಾಸನೆ ಆಧರಿಸಿ ವಾಕ್ಸಿದ್ಧಿಯಿಂದ ಹೇಳುವ ಜ್ಯೋತಿಷ್ಯವು ಒಂದು ದೇಶದಲ್ಲಿ ಸಂವಿಧಾನಾತ್ಮಕವಾಗಿ ಅಂಗೀಕರಿಸಿರಬೇಕಲ್ಲವೆ? ಯಾವ ಧರ್ಮದ, ಯಾವ ಚೌಕಟಿನಲ್ಲಿ, ಯಾವ ಗಣಿತದ ಆಧಾರದಲ್ಲಿ, ಯಾವ ಮಾನದಂಡದಲ್ಲಿ ಇವನೊಬ್ಬ ಜ್ಯೋತಿಷಿಯೆಂದು ಗುರುತಿಸುತ್ತಾರೆ? ಅದನ್ನು ಗುರುತಿಸುವ ಅಧಿಕಾರಿ ಯಾರು? ಅವನಿಗೇನು ಅರ್ಹತೆ? ಅವನು ಶುದ್ಧನೆ, ಸಾತ್ವಿಕನೆ, ನಿರ್ಗುಣನೆ, ನಿರಂಹಕಾರಿಯೇ, ವೇದವಿದನೆ, ತ್ರಿಕಾಲಜ್ಞಾನಿಯೇ ಯಾರು? ಅಂತಹವನು ಈ ಸರಕಾರ ಕೊಡುವ ಪ್ರಜೆಯ ತೆರಿಗೆ ಹಣದ ಸಂಬಳವೆಂಬ ಕೂಲಿಗೆ ಒಡಂಬಟ್ಟವನಾದರೆ ಅವನ ಎಲ್ಲಾ ಅರ್ಹತೆಗಳೂ ನಿಷ್ಫಲವಲ್ಲವೆ? ಸಂಪೂರ್ಣ ನಿಸ್ವಾರ್ಥವಾಗಿ ತನ್ನ ಉಪಾಸನಾ ಶಕ್ತಿಯಿಂದ ಆಯಾಯ ಕ್ಷಣದ ಗ್ರಹ ಗೋಚಾರ ಸ್ಥಿತಿ ಆಧರಿಸಿ ಪಂಚ ಭೌತಿಕ ಪರಿಣಾಮ ಊಹಿಸಿ ಸಮಾಜಕ್ಕೆ ಸನ್ಮಾರ್ಗ ದರ್ಶನ ಮಾಡಬೇಕಾದ ಜ್ಯೋತಿಷಿ ಈ ಸರಕಾರದ ರಿಜಿಸ್ಟ್ರೇಶನ್ ಎಂಬ ನಾಟಕಕ್ಕೆ ಬಲಿಪಶುವಾದಲ್ಲಿ ಅವನ ಉಪಾಸನಾ ದೇವತೆಯೇ ಅವನನ್ನು ಶಪಿಸಲಾರದೇ? 

ಜ್ಯೋತಿಷ್ಯ ಭಾಗ ಕೇವಲ ಗ್ರಹಗಣಿತ ಸೂರ್ಯ ಚಲನೆಯೆಂದು ಭಾವಿಸಿದ ಮೂರ್ಖ ವಿಧ್ಯೆಯಲ್ಲ. ಆದರೆ ಅದು ಫಲ ಜ್ಯೋತಿಷ್ಯಕ್ಕೆ ಒಂದು ಸಾಧನವಷ್ಟೆ. ಅದನ್ನು ಅರ್ಥ ಮಾಡಿಕೊಳ್ಳದ ಜನ ಗ್ರಹ ಗತಿಯಾಧರಿಸಿ ಫಲ ಹೇಳುತ್ತಾರೆಯೆಂದು ತಿಳಿದ್ದಿದ್ದಾರೆ. ಆದರೆ ಹಾಗಲ್ಲ, ಫಲ ಹೇಳುವುದು ಜ್ಯೋತಿಷಿಯ ಸಾಧನಾಶಕ್ತಿ, ವಿವೇಕ ಜ್ಞಾನ, ಪ್ರತ್ಯುತ್ಪನ್ನಮತಿ, ಕಾಲ, ದೇಶ, ವ್ಯಕ್ತಿ ಆಧರಿಸಿ ಭಿನ್ನ ಭಿನ್ನವಾಗಿರುತ್ತದೆ. ಬರೇ ಸೂರ್ಯ ಚಲನೆ ಆಧರಿಸಿ ಮಾತ್ರವಾಗಿದ್ದರೆ ಅದನ್ನು ಈಗಿನ ಕಂಪ್ಯೂಟರ್ ಕ್ಷಣ ಮಾತ್ರದಲ್ಲಿ ಗುಣಿಸಿ ಗಣಿಸಿ ಮುಂದಿನ ಲಕ್ಷ ಲಕ್ಷ ವರ್ಷದ್ದು ಬೇಕಿದ್ದರೂ ಬರೆದು ಕೊಡಬಲ್ಲದು. ಆದರೆ ಮುಂದಿನ ಕ್ಷಣದ್ದನ್ನು ನಿಖರವಾಗಿ ಹೇಳಲು ಯಾವ ಜ್ಯೋತಿಷ್ಯಕ್ಕೂ ಸಾಧ್ಯವಿಲ್ಲ. ಆದರೆ ಊಹಾತ್ಮಕವಾಗಿ ಎಚ್ಚರಿಕೆ ತೆಗೆದುಕೊಳ್ಳುವ ವಿಧಾನ ಹೇಳುತ್ತದೆ ಅಷ್ಟೆ. ಅದನ್ನೇ ಒಂದು ವಿಶಿಷ್ಟ, ವಿಶೇಷ ಸಿದ್ಧಾಂತವೆಂದು ನಂಬಿದೆ ಸಮಾಜ. ಸಮಗ್ರ ಫಲ ಜ್ಯೋತಿಷ್ಯವು ಒಂದು ನಂಬಿಕೆಯ ಆಧಾರದಲ್ಲಿ ನಿಂತಿದೆಯೇ ವಿನಃ ಫಲ ಜ್ಯೋತಿಷ್ಯಕ್ಕೆ ಬೇರೆ ಆಧಾರವಿಲ್ಲ. ಆದರೆ ಹಿಂದಿನ ಅನುಭವ, ಆಪ್ತವಾಕ್ಯ ಆಧರಿಸಿ ಜ್ಯೋತಿಷ್ಯವಿದೆಯೇ ವಿನಃ ಸ್ವತಂತ್ರ, ಪ್ರತ್ಯಕ್ಷ, ಪ್ರಮಾಣ ಸಿದ್ಧಾಂತವಾಗಿ ಅಲ್ಲ. ಕೇವಲ ಸಂಬಿಕೆಯ ನೆಲೆಯಲ್ಲಿ ರೂಪುಗೊಂಡ ಸಹಜ ಸ್ವಭಾವ ಸ್ವಾಭಾವಿಕ ಪ್ರಕೃತಿ ರಹಸ್ಯಾಧ್ಯಯನವೇ ಜ್ಯೋತಿಷ. ಇದರ ಬಗ್ಗೆ ಈಗ ಯಾವುದೇ ವಿಶೇಷಾಧ್ಯಯನವಿಲ್ಲದ ಕಾರಣ ಒಂದು ಮೂಢನಂಬಿಕೆ ಎಂಬ ನೆಲೆಯಲ್ಲಿ ಚಿಂತಕರು ವಿಶ್ಲೇಷಿಸುತ್ತಿದ್ದಾರೆ. 

ಇದರಂತೆ ಜ್ಯೋತಿಷ್ಯವೊಂದು ಸ್ವತಂತ್ರವಾಗಿ ಬಿಡಬೇಕಾದ ವಿಚಾರವೇ ವಿನಃ ಅದೊಂದು ಅಧಿಕೃತಗೊಳಿಸುವ ವಿಚಾರವಲ್ಲ. ಇದನ್ನು ಸರಕಾರವು ಜ್ಯೋತಿಷಿಗಳಿಗೆ ಲೈಸನ್ಸ್ ನೀಡುವ ಮುಖೇನ ಅಧಿಕೃತಗೊಳಿಸ ಹೊರಟಿರುವುದು ಮಹಾಮೂರ್ಖತನ. ದೇಶದಲ್ಲಿ ವಿದ್ರೋಹಿ ಕೃತ್ಯಗಳಾದ ಮಾಟ, ಮಂತ್ರ, ಆಭಿಚಾರಗಳು, ವಾಮಾಚಾರಗಳು, ತಾಂತ್ರಿಕೋಪಾಸನೆಗಳು ನಡೆಯಲೇ ಬಾರದು. ತಡೆಯುವ ಪ್ರಯತ್ನ ಸರಕಾರ ಮಾಡಬೇಕೇ ವಿನಃ ಅದನ್ನು ಮಾಡುವವರಿಗೆ ಲೈಸನ್ಸ್ ಕೊಡ ಹೋದರೆ ಎಂತಹಾ ಅನಾಹುತ? ಮುಂದೆ ಕಳ್ಳರೂ, ವಂಚಕರೂ, ದರೋಡೆಕೋರರೂ, ಡಕಾಯಿತರೂ, ತಮ್ಮ ವೃತ್ತಿಗೆ ನೊಂದಾವಣೆ ಮಾಡಲು ಅಪೇಕ್ಷಿಸಬಹುದು. ಸರಕಾರದ ಮೂರ್ಖತನದ ಪರಮಾವಧಿ ಇದು.

ಜ್ಯೋತಿಷ್ಯವು ಸದ್ಯದಲ್ಲಿ ಎರಡು ಕವಲಾಗಿ ಹರಿಯುತ್ತಿದೆ. ಒಂದು ಏನಕೇನ ಪ್ರಕಾರೇಣ ಹಣ ಮಾಡುವುದು. ಅಲ್ಲಿ ಯಾವ ಬದ್ಧತೆ, ಜ್ಞಾನ, ಸಿದ್ಧಿ ಬೇಕಿಲ್ಲ. ಮೂರ್ಖರನ್ನು ಮಾತಿನ ಚಾಕಚಕ್ಯತೆಯಿಂದ ವಂಚಿಸಿ ಮೋಸ ಮಾಡುವುದು ವೃತ್ತಿ. ಇನ್ನೊಂದು ವರ್ಗ ತಮ್ಮ ಪರಂಪರೆ, ಸಾಧನಾ ಬಲ, ಅನುಷ್ಠಾನ ಶಕ್ತಿ ಬಳಸಿ ಲೋಕಕ್ಷೇಮ ಚಿಂತಕರು. ಇವರಿಗೆ ಧನದಾಹವಿಲ್ಲ. ಆದರೆ ಇವರ ಪ್ರಾಬಲ್ಯ ಹೆಚ್ಚಾಗಿ ಇಲ್ಲ. ಕಾರಣ ಅವರು ಜನರನ್ನು ಸೆಳೆಯಲಾರರು. ಅವರು ಪ್ರಚಾರ ಪ್ರಿಯರಲ್ಲ. ಹಲವು ತಲೆಮಾರುಗಳಿಂದ ಜ್ಯೋತಿಷ್ಯ ಹೇಳುತ್ತಾ ಬಂದ ಪರಂಪರೆ. ಕೇವಲ ಜೀವನ ಮಾತ್ರಾ ಅವರ ಉದ್ದೇಶ. ನಿರಂತರ ಅವರು ತಮ್ಮ ಪರಂಪರೆಯ ಜ್ಯೋತಿಷ್ಯ ಆಧಾರದಲ್ಲಿ ಸಮಾಜ ಸೇವೆ ಮಾಡುತ್ತಿದ್ದಾರೆ. ಅವುಗಳು ಒಟ್ಟು ೨೬ ವಿಭಾಗ. ಅವುಗಳಿಗೆ ಯಾವುದೇ ಆಧಾರ ಗ್ರಂಥವಿಲ್ಲ. ಆದರೆ ಸಮಾಜದ ಕೆಳವರ್ಗದ ಜನರ ಬದುಕು ಅದರಲ್ಲಿ ಹಾಸುಹೊಕ್ಕಾಗಿ ಹೋಗಿದೆ. ಅದು ಕೇವಲ ಉಪಾಸನಾ ಬಲದಿಂದಲೇ ನಿಂತಿರುತ್ತದೆ. ಇನ್ನು ಗ್ರಹ ಗಣಿತಾಧಾರದ ಜಾತಕಾಧರಿಸಿ ಮತ್ತು ತಾಂಬೂಲಾದಿ ಪ್ರಶ್ನೆಗಳು. ಇವುಗಳು ೮೪ ವಿಧ. ಇವು ಒಂದಿಷ್ಟು ಗ್ರಂಥಾಧಾರಿತ. ಆಪ್ತವಾಕ್ಯ, ಅನುಭವ, ವೇದ್ಯ, ಸಾಮಾನ್ಯಜ್ಞಾನ, ಸತ್ಯಪರಿಪಾಲನೆ, ಉಪಾಸನೆ, ಜಪ, ತಪ, ಸಾಧನೆ ಇತ್ಯಾದಿಗಳಿಂದ ಪ್ರಕಟಕ್ಕೆ ಬರುವ ಜ್ಯೋತಿಷ್ಯ ವಿಧಾನ. ಒಟ್ಟು ಭಾರತದಾದ್ಯಂತ ೩೦೦ಕ್ಕೂ ಹೆಚ್ಚು ಜ್ಯೋತಿಷ ವಿಧಾನವಿದೆ. ಅವುಗಳೆಲ್ಲಾ ಕೆಲ ಮಟ್ಟಿಗೆ ಸತ್ಯವೇ ವಿನಃ ಪೂರ್ಣ ಸತ್ಯವಲ್ಲ. ನಂಬಿಕೆಯ ನೆಲೆಯಲ್ಲಿ ಆಪ್ತವಾಕ್ಯ (ಗ್ರಂಥಾಧಾರ) ವಿಶ್ಲೇಷಣೆಯೆಂದು ಹೇಳಬಹುದು. ಅದನ್ನು ಅಧಿಕೃತಗೊಳಿಸಲು ವಿಶೇಷ ತಜ್ಞತೆ ಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ಒಂದು ದೊಡ್ಡ ಸಮಾಜದ್ರೋಹಿ ಕೆಲಸವಾಗಬಹುದು. ಇದನ್ನು ಸರಕಾರ ಅರ್ಥ ಮಾಡಿಕೊಂಡಲ್ಲಿ ಕ್ಷೇಮವಾಗಬಹುದು.

ಪ್ರಸಕ್ತಕಾಲದಲ್ಲಿ ಜ್ಯೋತಿಷ್ಯ ಒಂದು ವಿಧ್ಯಾಪ್ರಕಾರವೆಂದೇ ಸರಕಾರ ಅಧಿಕೃತವಾಗಿ ಒಪ್ಪಿಲ್ಲ. ಅದಕ್ಕೆ ಯಾವುದೇ ಮಾನ್ಯತೆ ಕೊಟ್ಟಿಲ್ಲ. ಸಮಾಜ ಸ್ವೀಕರಿಸಿದೆ, ತನ್ನ ಉಪಯುಕ್ತತೆ ಆಧರಿಸಿ ಬಳಸುತ್ತಿದೆ ವ್ಯಾಪಕವಾಗಿ. ಮೊದಲಾಗಿ ಅದನ್ನು ರಾಜ್ಯಾಂಗ ಅಧಿಕೃತವಾಗಿ ಸ್ವೀಕರಿಸಿ ಅದಕ್ಕೇ ಆದಂತಹಾ ಅಧ್ಯಯನ ವಿಧಾನ ರೂಪಿಸಿ ಅದರ ಅಳತೆಯಲ್ಲಿಯೇ ಅದನ್ನು ಅಧಿಕೃತತೆ ರೂಪಿಸಬೇಕು. ಆಸಂಬಂಧಿ ಉತ್ಕೃಷ್ಟ ತಜ್ಞರನ್ನು ನೇಮಿಸಿ ಉತ್ತಮ ಅಧ್ಯಯನ ಯೋಗ್ಯ ಪುಸ್ತಕ ತಯಾರಿಸಿ ಪ್ರಕಟಿಸಿ ಆಸಂಬಂಧಿ ಶಿಕ್ಷಣ ಯೋಜನೆ ರೂಪಿಸಬೇಕು. ಅದು ಬಿಟ್ಟು ಈಗ ಸದ್ಯಕ್ಕೆ ಸರಕಾರ ಇದ್ದವರಿಗೇ ನಾವು ಲೈಸನ್ಸ್ ಕೊಡುತ್ತೇವೆ, ನೀವು ಲೈಸನ್ಸ್ ಪಡೆದು ಜ್ಯೋತಿಷ್ಯ ಹೇಳಿ ಎಂದರೆ ಅದೊಂದು ದೊಡ್ಡ ಭ್ರಷ್ಟಾಚಾರದ ಕೂಪವಾಗಬಹುದು. ದೇಶದ ಅನರ್ಥಕ್ಕೆ ಕಾರಣವಾಗಬಹುದು. ಒಟ್ಟು ದೇಶೀಯ ಅಂದಾಜು ೩೦೦ಕ್ಕೂ ಮೀರಿದ ಜ್ಯೋತಿಷ ವಿಧಾನದಲ್ಲಿ ಯಾವುದಕ್ಕೆ ಸರಕಾರ ಲೈಸನ್ಸ್ ಕೊಡುತ್ತದೆ? ಯಾವುದನ್ನು ಮಾನ್ಯ ಮಾಡಿದೆ ಎಂದೇ ಅರ್ಥವಾಗುತ್ತಿಲ್ಲ? ಕೇವಲ ಕರ್ನಾಟಕದಲ್ಲಿಯೇ ಅಂದಾಜು ೧೧೦ ರೀತಿಯ ಜ್ಯೋತಿಷ ಪದ್ಧತಿ ಬಳಕೆಯಲ್ಲಿದೆ. ಅವೆಲ್ಲವುಗಳ ವಿಷಯದಲ್ಲಾದರೂ ವಿಶೇಷ ಅಧ್ಯಯನ ಮಾಡಿದ ತಜ್ಞರಿದ್ದಾರೆಯೆ? ಯಾವ ತಜ್ಞತೆಯೂ ಇಲ್ಲದ ಬರೇ ರಾಜಕಾರಣ ಮಾಡಿ ಅಧಿಕಾರಕ್ಕೆ ಬಂದ ರಾಜಕಾರಣಿ ನಿರ್ಣಯಿಸುವ ವಿಚಾರವೇ ಇದು? ಅಥವಾ ಯಾವುದೋ ಅಧಿಕಾರಿ ಅಧಿಕೃತತೆಗೊಳಿಸಿ ಲೈಸನ್ಸ್ ಕೊಡುವ ವಿಚಾರವೋ ಇದು? ಖಂಡಿತಾ ಇಲ್ಲ. ಇಂತಹಾ ಮೂರ್ಖತನಕ್ಕೆ ಸರಕಾರ ಅಧಿಕಾರವಿದೆಯಿಂದು ಇಳಿಯಲೂ ಬಾರದು. ಅದರ ದುಷ್ಪರಿಣಾಮ ಮುಂದೆ ಅಗಾಧ. ಇವನ್ನು ಅರ್ಥಮಾಡಿಕೊಂಡು ಈ ಜ್ಯೋತಿಷ ವಿಭಾಗವನ್ನು ಅದರಷ್ಟಕ್ಕೇನೇ ಬಿಟ್ಟು ಅದನ್ನು ಬಳಸುವವರಿಗೆ ನಿರ್ಬಂಧ ಹಾಕುವುದು ಒಳ್ಳೆಯದು ಎಂಬುದು ನನ್ನ ಅಭಿಪ್ರಾಯ. 

ಈ ವಿಚಾರವಾಗಿ ಕುತೂಹಲಕ್ಕೆ ಇರಲಿ ಎಂದು ಜ್ಯೋತಿಷದ ಕೆಲ ವಿಭಾಗ ತಿಳಿಸುತ್ತೇನೆ ಗಮನಿಸಿ. ಅವುಗಳಲ್ಲಿ ಮುಖ್ಯವಾಗಿ ಪ್ರಕಾರಗಳು:
ಗ್ರಹಗಣಿತ ಆಧಾರಿತ ವಿಭಾಗ
೧೬
ನಾಡೀ ಜ್ಯೋತಿಷ ವಿಭಾಗ
೧೦
ಧೈವಾದಿ ವಿಭಾಗ
೧೨
ಅಮೃತನಾಡೀ ವಿಭಾಗ
೧೦
ವಿಷನಾಡೀ ವಿಭಾಗ
೧೦
ರೇಖಾದಿ (ಹಸ್ತ) ವಿಭಾಗ
೦೮
ಶಕುನಶಾಸ್ತ್ರ ವಿಭಾಗ
೨೪
ಮಂಗಳಪ್ರಶ್ನ ವಿಭಾಗ
೦೮
ತಾಂಬೂಲಾದಿ ವಿಭಾಗ
೦೮
೧೦
ವೇದಾಂಗ ಜ್ಯೋತಿಷ (ಯೋಗಸಹಿತ)
೦೪
೧೧
ಕುಂಡಲಿನೀ ಜ್ಯೋತಿಷ
೦೨

ಇವಿಷ್ಟು ಪ್ರಕಾರಗಳೂ ನಾನಾ ವಿಧದಲ್ಲಿ ಕರ್ನಾಟಕದಲ್ಲಿ ಪ್ರಸಾರದಲ್ಲಿದೆ. ಅವುಗಳಲ್ಲಿ ಯಾವ್ಯಾವುದನ್ನು ಸರಕಾರ ಮಾನ್ಯ ಮಾಡಿದೆ? ಅಧಿಕೃತ ಪ್ರಕಟಣೆ ಏನಾದರೂ ಮಾಡಿದೆಯೇ? ಏನೂ ಕಂಡು ಬರುವುದಿಲ್ಲ. ಸುಮ್ಮನೇ ಲೈಸನ್ಸ್ ಕೊಡ ಹೊರಟರೆ ಅದರ ದುಷ್ಪರಿಣಾಮ ಚಿಂತನೆ ಮಾಡಿದ್ದಾರೆಯೆ? ಪರಿಣಾಮದಲ್ಲಿ ಕಳ್ಳನೂ ಕೂಡ ಲೈಸನ್ಸ್‍ಗೆ ಅರ್ಜಿ ಹಾಕಬಹುದು. ಅವನಿಗೂ ಸಂಪಾದನೆ ಇದೆ. ತೆರಿಗೆ ಕಟ್ಟಲು ಅವನೂ ಸಿದ್ಧನೆ. ಆದರೆ ಸರಕಾರ ಕಳ್ಳತನಕ್ಕೆ ಲೈಸನ್ಸ್ ಕೊಡುತ್ತದೆಯೇ? ಹಾಗೇ ಅಧಿಕೃತವಲ್ಲದ, ಸಂವಿಧಾನ ಅಂಗೀಕರಿಸಿಲ್ಲದ ಒಂದು ವಿಚಾರಕ್ಕೆ ಲೈಸನ್ಸ್ ಕೊಡುವುದೂ ಕೂಡ ದೇಶದ್ರೋಹವೇ ಅಲ್ಲವೆ? ಚಿಂತಿಸಿ ಎಂದು ಹೇಳುತ್ತೇನೆ.

ವಿ.ಸೂ:- ನಿಮಗೆ ಕುತೂಹಲಕ್ಕೆ ಇರಲಿ ಎಂದು ಒಂದು ಮಾಹಿತಿ ಕೊಡುತ್ತೇನೆ ಗಮನಿಸಿ.
ಧೈವಾದಿ ಭಾಗ ೧೨ ಪ್ರಕಾರಗಳು. ಅವುಗಳಲ್ಲಿ
೧. ದರ್ಶನ :- ನಾಗ, ಧೈವ, ದೇವತಾ
೨. ಪ್ರಸಾದ :- ಅಲಂಕಾರ, ಶೇಷ, ಪತನ, ಛದ್ರ
೩. ನುಡಿಗಟ್ಟು:- ನುಡಿಗಟ್ಟು, ಪ್ರೇಷಿತ, ವಾಕ್ಯ, ಪ್ರಮಾಣ, ಪ್ರಸಾದ
ಒಟ್ಟು ೧೨ ವಿಭಾಗ. ಅಂದಾಜು ಕರ್ನಾಟಕದಲ್ಲಿ ಶೇ.೪೦ ಭಾಗ ಜನ ನಂಬುವ ಒಂದು ವಿಶಿಷ್ಟ ಜ್ಯೋತಿಷ ಭಾಗ. ಇವಕ್ಕೆ ಆಧಾರ, ಗ್ರಂಥ, ಅಧ್ಯಯನ, ಜ್ಞಾನ ಯಾವುದೂ ಇಲ್ಲ. ಆದರೆ ನಮ್ಮ ಕರ್ನಾಟಕದ ಮುಖ್ಯಮಂತ್ರಿಗಳೂ ಇದನ್ನು ನಂಬಿದ್ದಾರೆ, ಒಪ್ಪಿದ್ದಾರೆ. ಫಲಾಫಲಗಳು ಬೇರೆ. ಇದಕ್ಕೆ ಲೈಸನ್ಸ್ ಕೊಡುತ್ತೀರಾ?
ಇದನ್ನು ಅರ್ಥ ಮಾಡಿಕೊಂಡಲ್ಲಿ ಪ್ರಜಾಕ್ಷೇಮ ಸಾಧ್ಯ.
ಇಂತು
ಕೆ.ಎಸ್. ನಿತ್ಯಾನಂದ

No comments:

Post a Comment