Thursday, 14 March 2013

ಕಂಬಳ – ಒಂದು ಚಿಂತನೆ


ಜನಜೀವನದಲ್ಲಿ ಬೆರೆತುಹೋದ ಎಷ್ಟೋ ಸತ್ಯಗಳು, ಆಚರಣೆಗಳು ಈಗ ಅರ್ಥಕಳೆದುಕೊಂಡು ವಿಕೃತವಾಗುತ್ತಾ ಹೋಗಿ ಈಗ ಕೇವಲ ಮೂಢನಂಬಿಕೆಯೆಂಬ ವಿಚಾರವಾದಿಗಳ ಭರ್ತ್ಸನೆಗೆ ಒಳಗಾಗುತ್ತಿರುವವರ ಕೆಲ ಆಚಾರ, ವಿಚಾರಗಳ ಒಳಹೊಕ್ಕು ಅಧ್ಯಯನ ಮಾಡಿದಲ್ಲಿ ಅದೆಷ್ಟು ವಿಚಾರಪ್ರದ, ಉಪಯುಕ್ತವೆಂದು ಹೊಳೆಯುತ್ತದೆ.

ಅಂತಹಾ ಹಲಕೆಲವು ಆಚರಣೆಗಳ ಮಹೋದಧಿಯೇ ಎಂದು ಗುರುತಿಸಬಹುದಾದ ಪ್ರದೇಶ ಕರಾವಳಿ ಕರ್ಣಾಟ ಪ್ರದೇಶ. ಇಲ್ಲಿ ಯಕ್ಷಗಾನವಿದೆ, ತಾಳಮದ್ದಳೆಕೂಟವಿದೆ, ಹೂವಿನಕೋಲಿದೆ, ಪಾಣಾರಾಟವಿದೆ, ಕೋಳಿಯುದ್ಧವಿದೆ, ಹಾಯಿಆಟವಿದೆ, ಕಾಯಿ ಹೊಡೆಯುವುದಿದೆ, ಕಡ್ಡಿ ಮುರಿಯುವುದಿದೆ, ಮಲ್ಲರಾಟವಿದೆ, ಕೋಟಚೆನ್ನಯ್ಯರಿದ್ದಾರೆ, ಕಂಬಳವಿದೆ, ಉಂಬಳಿಯಿದೆ, ನೇಮವಿದೆ, ಕೋಲವಿದೆ, ಧರ್ಮನೇಮವಿದೆ, ಪಾಡ್ದನಗಳಿವೆ, ಕದಿರುಕಟ್ಟುವರೆಲ್ಲ, ಬಿದಿರು ಒಡೆಯುವರೆಲ್ಲ, ಹಬ್ಬಕಬ್ಬಗಳಿವೆ, ನಾಡ ಕಬ್ಬಗಳಿವೆ, ಅಲ್ಲೆಲ್ಲಾ ಆಳದಲ್ಲಿ ಹುದುಗಿದೆ “ವೇದ”. ಇಂತಹಾ ನಾನಾತರಹದ ತಂತ್ರ, ಶಾಸ್ತ್ರ, ಆಗಮ, ವೇದಸಾರಗಳಲ್ಲಿ ಅಡಕವಾದ ವಿಚಾರಗಳನ್ನೊಳಗೊಂಡ ಜಾನಪದೀಯ ಹಬ್ಬಕಬ್ಬಗಳ ನಾಡು ಕರಾವಳಿ ಕರ್ನಾಟಕ. ಅದರಲ್ಲಿ “ಕಂಬಳ” ಎಂಬ ಜಾನಪದ ಕ್ರೀಡೆಯ ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರಿನಲ್ಲಿ ನೆಲಸಿರುವ ಬಗ್ಗೆ ನನ್ನ ಗುರುಗಳು- ಪೂರ್ವೋತ್ತರ ಮೀಮಾಂಸಕರಾದ ಬ್ರಹ್ಮರ್ಷಿ ಕೆ.ಎಸ್ ನಿತ್ಯಾನಂದ ಸ್ವಾಮೀಜಿಯವರಿಗೆ ಹುಟ್ಟಿದ ಕುತೂಹಲದಿಂದಾಗಿ ಈ ಅಧ್ಯಯನಕ್ಕೆ ಅನುವಾದರು. ಅದರಲ್ಲಿ ಕಂಡುಬಂದ ಸತ್ಯವನ್ನು ವಿವರಿಸುತ್ತೇನೆ.

ಭಾರತೀಯ ಪರಂಪರೆಯಲ್ಲಿ ಬಹಳ ಪುರಾತನ ಕಾಲದಿಂದಲೂ ಜನವಸತಿ ಇದ್ದ ಒಂದು ಸಮೃದ್ಧ ಪ್ರದೇಶಗಳಲ್ಲಿ ಕರಾವಳೀ ತೀರವೂ ಕೂಡ ಒಂದು. ಅಲ್ಲಿನ ಇತಿಹಾಸಗಳಲ್ಲಿ ನಮಗೆ ಕಾಣಸಿಗದ ಆದರೆ ಜನಪದದಲ್ಲಿ ಬೆರೆತುಹೋದ ಎಷ್ಟೋ ಸತ್ಯಗಳು ಇತಿಹಾಸಕಾರರಿಗೆ ಕಾಣದಂತೆ ಉಳಿದು ಜನಮನದಲ್ಲಿ ಬೆರೆತುಹೋಗಿದೆ. ಭಾರತೀಯ ಪರಂಪರೆಗೆ ಹೇಗೆ ವೇದವು ಪರಮೋಚ್ಚ ಜ್ಞಾನವೋ ಹಾಗೆಯೇ ತಂತ್ರಗಳು ಪೂರಕ ಶಕ್ತಿಯಾಗಿತ್ತು. ಅವೆರಡೂ ಸಮಕಾಲೀನ ಜ್ಞಾನವಾಗಿದ್ದು ಸದಾ ಜನಜೀವನದಲ್ಲಿ ಬಟ್ಟೆಯ ಹಾಸುಹೊಕ್ಕಿನಂತೆ ನೇಯಲ್ಪಟ್ಟಿತ್ತು. ಅದರ ಬಗೆಗಿನ ಜ್ಞಾನ, ತಿಳುವಳಿಕೆ, ಬಳಕೆ, ಇವೆಲ್ಲಾ ಬಲ್ಲ ಜನರಿರುವುದು ಕರಾವಳಿ ಕರ್ನಾಟಕ ಪ್ರಾಂತ್ಯದಲ್ಲಿ ಈಗಲೂ ಗುರುತಿಸಬಹುದು. ಹಿಂದೆ ಒಂದಾನೊಂದು ಕಾಲದಲ್ಲಿ ತಂತ್ರಶಾಸ್ತ್ರ ಸಮೃದ್ಧಿ ಇಲ್ಲಿತ್ತು ಅನ್ನುವುದಕ್ಕೆ ಬೇಕಾದ ಪುರಾವೆಗಳೆಲ್ಲಾ ಇಲ್ಲಿ ಸಿಗುತ್ತವೆ. ಆದರೆ ಈಗ ತಂತ್ರಿಗಳ ಮನೆತನವಿದೆಯಷ್ಟೇ ವಿನಃ ತಂತ್ರಾಗಮ ಶಾಸ್ತ್ರನಿಪುಣರು ಕಡಿಮೆಯಾಗಿದ್ದಾರೆ. ಕಾರಣ, ಅದರ ಅಧ್ಯಯನಕ್ಕೆ ತಗಲುವ ಸಮಯಾಭಾವ. ಇನ್ನು ತಂತ್ರ ಮತ್ತು ವೈದಿಕ ಸಮನ್ವಯತೆಯೂ ಇಲ್ಲಿ ವಿಶಾಲವಾಗಿ ಕಂಡುಬರುತ್ತದೆ. ಆ ಸಂಬಂಧೀ ಯಾಗ, ಯಜ್ಞಗಳು ಇಲ್ಲಿ ಸತತವಾಗಿ ನಡೆದ ಉದಾಹರಣೆಯೂ ಕಂಡುಬರುತ್ತದೆ.

ಅಂತಹಾ ಮಹಾಯಾಗಗಳಲ್ಲಿ ಶ್ರೇಷ್ಠತರವಾದ ಸಪ್ತಮಹಾಯಾಗಗಳು ಎಂದರೆ ಅಗ್ನಿಷ್ಟೋಮ, ಅತಿರಾತ್ರ, ಇಳಾವೃತ, ಪುಂಡರೀಕ, ವಾಜಪೇಯ, ಅಶ್ವಮೇಧ, ರಾಜಸೂಯ ಇವುಗಳು. ಈ ಯಾಗಗಳನ್ನು ನಡೆಸಲು ಬೇಕಾದ, ಇದಕ್ಕೆ ಸಂಬಂಧಿಸಿದ ಗಿಡಮೂಲಿಕೆ, ಹೋಮದ್ರವ್ಯಗಳು, ಭೂಲಕ್ಷಣ, ಜನಸಮೃದ್ಧಿ, ಸಹಕಾರಶಕ್ತಿ, ವಿದ್ವಜ್ಜನರು ಇಲ್ಲಿ ವಿಪುಲವಾಗಿದ್ದರೆಂದು ಕಂಡುಬರುತ್ತದೆ. ಈಗ ಆ ಸಂಬಂಧಿ ಅಧ್ಯಯನವಾಗಲೀ, ಸಾಧನೆಯಾಗಲೀ ನಡೆಯದಿದ್ದರೂ ಕೂಡ ಜನಪದದಲ್ಲಿ ಸೇರಿಹೋದ ಈ ಪ್ರವೃತ್ತಿಯಿಂದ ಗುರುತಿಸಬಹುದು. ಅವುಗಳಲ್ಲಿ ಇಂತಹಾ ಆರಾಧನೆ, ಪೂಜೆ, ನೇಮಗಳಲ್ಲಿ ಅಲ್ಲಿನ ಜನರಲ್ಲಿ ಸೇರಿಹೋದ ನಾಗಾರಾಧನೆಯೂ ಒಂದು. ಈ ನಾಗಾರಾಧನೆಯ ವಿಶಿಷ್ಠತೆ ಕರಾವಳಿ ಕರ್ನಾಟಕಕ್ಕೆ ಸೀಮಿತವೋ ಎಂಬಂತೆ ವಿಶೇಷ ಆರಾಧನೆ, ಆಚರಣೆ ಬಳಕೆಯಲ್ಲಿದೆ. ಅಲ್ಲಿಯ ಆರಾಧನಾ ಪದ್ಧತಿಯಲ್ಲಿ “ಕಂಬಳಾದಿ ಸರ್ಪಾದ್ಯಷ್ಟಕುಲ ನಾಗ” ಎಂದು ಪೂಜೆಯಲ್ಲಿ ಹೇಳುವ ವಾಡಿಕೆ ಇದೆ.

ಹಾಗಿದ್ದರೆ ಈ ಕಂಬಳ ಯಾವ ನಾಗ? ಅಷ್ಟನಾಗಗಳಲ್ಲಿ ಒಂದೇ ಅಥವಾ ಕಂಬಳನಾಗವೆಂದರೆ ಬೇರೆಯೇ? ಋಗ್ವೇದಾದಿ ವೇದಭಾಗದಲ್ಲಿ ನಮಗೆ ಕಂಬಳನಾಗನ ವಿಚಾರ ಕಾಣಸಿಗುವುದಿಲ್ಲ. ಅಲ್ಲಿ ಕಾಣುವುದು ಅಜಗರ, ಕಾರ್ಕೋಟಕ, ತಕ್ಷಕ, ಕಾಳಿಕ, ಅನಂತ, ಶೇಷ, ಮಹಾಬಲ, ಅಶ್ವಪತಿ, ನಾರಾಯಣ ಹೀಗೆ ಹಲವಾರು ನಾಗಸ್ವರೂಪಗಳೂ, ಕಾರ್ದ್ರವೇಯ, ಜರತ್ಕಾರು, ಭೂಷಣ, ಭೃಂಗಮುಖ ಇತ್ಯಾದಿ ಹೆಸರುಗಳ ಉದಾಹರಣೆಯಿದೆ. ಹೀಗೆ ವೇದಭಾಗದಲ್ಲಿಯೂ ಕಂಡುಬರದ ಈ ಕಂಬಳವೆನ್ನುವ ಹೆಸರು ನಾಗಾರಾಧನೆಯಲ್ಲಿ ಸೇರಲು ಕಾರಣವೇನು? ಇದೇನು ಒಂದು ನಾಗಪ್ರಭೇದವೇ? ಇಲ್ಲಾ ಆಚರಣೆಯ ನಿಬಂಧನೆಯೇ? ಒಂದು ಸಿದ್ಧಾಂತದ ಹಿಡಿತವೇ? ಚಿಂತನೀಯ ವಿಚಾರ.

ಕಂಬಳ ಶಬ್ದದ ಮೂಲ ಹುಡುಕಿಕೊಂಡು ಹೊರಟರೆ ಸಮೂಹವಾಗಿ ನಡೆಸುವ ಒಂದು ಕೆಲಸ, ಕಾರ್ಯ, ಘಟನೆ, ವಿಚಾರ, ಆಚರಣೆ, ಇವುಗಳಲ್ಲಿ ನೇತೃತ್ವವನ್ನು ವಹಿಸಿದ ಭಾಗ ಕಂಬಳವೆಂದು ಕರೆಯುತ್ತಿದ್ದರು. ಅಂದರೆ ಕಂಬಳವೆನ್ನುವುದು ನೇತಾರ, ಮುಖ್ಯನಿರ್ದೇಶಕ ಎಂಬ ಅರ್ಥದಲ್ಲಿ ಹಿಂದೆ ಪ್ರಾಕೃತ ಭಾಷೆಯಲ್ಲಿ ಬಳಕೆಯಲ್ಲಿದ್ದುದು ಕಂಡುಬರುತ್ತದೆ. ಅಂದಾಗ ಇಲ್ಲಿ ನಾಗಸಮೂಹದ ನಿರ್ದೇಶಕ ಕಂಬಳ. ಇದೇ ಕಂಬಳ ಶಬ್ದವೂ ಕರಾವಳಿ ತೀರದಲ್ಲಿ ಒಂದು ಜಾನಪದ ಕ್ರೀಡಾರೂಪದಲ್ಲಿಯೂ ಬಳಕೆಯಲ್ಲಿದೆ. ಅಲ್ಲಿ ಅರಸುಕಂಬಳ, ಕಿನ್ನಿಕಂಬಳ, ಕಂಬಳಕಟ್ಟೆ, ಮೂಡುಕಂಬಳ, ಜೋಡಿಕಂಬಳ ಹೀಗೆ ಊರು, ಊರುಗಳಲ್ಲಿ ಅದೊಂದು ಕ್ರೀಡಾವಿಶೇಷವಾಗಿ ಬಳಕೆಯಲ್ಲಿದೆ. ದಕ್ಷಿಣಕನ್ನಡ, ಉತ್ತರಕನ್ನಡ, ಕಾಸರಗೋಡು ಪ್ರಾಂತ್ಯದಲ್ಲಿಯೂ ಈ ಕ್ರೀಡೆ ಚಾಲ್ತಿಯಲ್ಲಿತ್ತು ಎಂದು ಕಂಡುಬರುತ್ತದೆ. ಆ ಕ್ರೀಡೆಗೆ ಕಂಬಳವೆಂದು ಹೆಸರಿಸಿ ಅದನ್ನು ಅಲ್ಲಿನ ನೇತಾರಮನೆತನ, ಅರಸುಮನೆತನಗಳು ಶ್ರದ್ಧಾಭಕ್ತಿಯಿಂದ ನಡೆಸಿಕೊಂಡು ಬರುತ್ತಿತ್ತು. ಅಂದರೆ ಅದು ಬರೇ ಕ್ರೀಡೆಯಲ್ಲ, ಅದರ ಹಿಂದೆ ಯಾವುದೋ ಒಂದು ಆಧ್ಯಾತ್ಮ ರಹಸ್ಯ ಅಡಗಿರಬಹುದು ಎಂದು ಅನ್ನಿಸುವುದಿಲ್ಲವೇ?

ಅದನ್ನು ನಡೆಸುವ ಮನೆತನಗಳಲ್ಲಿ ಮೂಲ್ಕಿ ಅರಸುಮನೆತನ, ಅಲ್ಲಿ ನಡೆಯುವ ಕಂಬಳಕ್ಕೆ ಅರಸುಕಂಬಳವೆಂದೇ ಹೆಸರಿದೆ. ಅಲ್ಲಿನ ಅರಸರು, ಆ ಕ್ರೀಡೆಗೆ ಸಂಬಂಧ, ರೀತಿ ರಿವಾಜುಗಳನ್ನು ಅವರಿಂದಲೇ ಕೇಳಿ ತಿಳಿಯಬೇಕು; ಅಷ್ಟು ಸ್ವಾರಸ್ಯವಿದೆ! ಕ್ರೀಡೆ ಮನೋರಂಜನೆ ಮಾತ್ರವಾಗಿದ್ದರೆ, ಅಲ್ಲಿನ ಅರಸರಿಗೆ ಆ ಕಂಬಳ ದಿನ ಆರಂಭದಿಂದ ಮುಕ್ತಾಯದವರೆಗೆ ಉಪವಾಸ ವ್ರತ ಏಕೆದ್ದಿರಬಹುದು? ಅದು ಅವರಿಗೆ ಮಾತ್ರವಲ್ಲ, ಅವರ ಮನೆಯ ಕೋಣದ ಜೊತೆಗೂ ಕೂಡ ಎಂದು ಅವರೇ ಹೇಳಿದ್ದರು. ಉಪವಾಸವೂ ಒಂದು ಮನರಂಜನಾ ಕ್ರೀಡೆಯಾಗಿರಲು ಸಾಧ್ಯವಿಲ್ಲ. ಹಾಗಿದ್ದಲ್ಲಿ ಅದೂ ಕೂಡ ಒಂದು ನೇಮರೀತಿಯ ಧಾರ್ಮಿಕ ಆಚರಣೆಯಲ್ಲಿ ಅಡಕವಾದ ರಹಸ್ಯವಿದೆ ಎಂದು ತಿಳಿಯುವುದಿಲ್ಲವೇ? ಅಲ್ಲಿ ವಿಶಾಲವಾದ ಗದ್ದೆಯಲ್ಲಿ ಗದ್ದೆಯ ಒಂದು ಭಾಗದಲ್ಲಿ ಜೋಡಿ ಕಂಬಗಳೆರಡಿವೆ. ಅದಕ್ಕೆ ಅರಸುಮನೆತನದ ಕೋಣಗಳನ್ನು ಮಾತ್ರ ಕಟ್ಟುತ್ತಾರಂತೆ. ಅರಸುಮನೆತನದ ಕೋಣಗಳು ಗದ್ದೆಗೆ ಇಳಿದ ನಂತರವೇ ಊರಿನ ಇತರೆ ಕೋಣಗಳು ಗದ್ದೆಗೆ ಇಳಿಯಬೇಕು. ಗದ್ದೆಯಲ್ಲಿ ಸದಾ ನಾಗವೊಂದು ವಾಸವಿರುತ್ತದೆ. ಕಂಬಳದಂದು ಅರಸುಮನೆತನದ ಕೋಣ ಇಳಿಯುವ ಮೊದಲು ಆ ನಾಗ ಅಲ್ಲಿಂದ ಹೊರಹೋಗುತ್ತದೆ. ಮತ್ತು ಕಂಬಳ ಮುಗಿದ ನಂತರ ಪುನಃ ಅಲ್ಲಿ ಸೇರುತ್ತದೆ. ಕಂಬಳ ದಿನ ಹೊರತುಪಡಿಸಿ ಪಟ್ಟವೇರಿದ ಅರಸರು ಅಲ್ಲಿ ಹೋಗುವಂತಿಲ್ಲ. 

ಈ ಪಟ್ಟದ ವ್ಯವಸ್ಥೆ ಬಹಳ ಪುರಾತನ ಕಾಲದಿಂದಲೂ ಬಂದಿರುವಂತಹದ್ದು. ಅಲ್ಲಿ ಪಟ್ಟವನ್ನು ಏರುವ ವ್ಯಕ್ತಿಯನ್ನು ಆರಿಸುವವರು ಗುತ್ತಿನವರು. ಪಟ್ಟಾಭಿಷಿಕ್ತನಾದ ದೊರೆ ಮೃತರಾದಾಗ ಅವರ ಶವದ ಬೆರಳಿನಲ್ಲಿರುವ ಪಟ್ಟದ ಉಂಗುರ ಶವದ ಬೆರಳಿನಿಂದ ಇವರ ಬೆರಳಿಗೆ ನೇರವಾಗಿ ಅಂದರೆ ಹೊಸದಾಗಿ ಆಯ್ಕೆಯಾದ ಅರಸರಿಗೆ ತಲುಪಬೇಕು. ಮಧ್ಯೆ ಬೇರೆ ಯಾರ ಕೈಬೆರಳೂ ಅದರ ಒಳತೂರಬಾರದು. ಅದಕ್ಕೆ ಒಂದು ವ್ಯವಸ್ಥೆ ಇದೆ ಗಮನಿಸಿ. ಅರಸರ ಮೃತದೇಹವನ್ನು ಪ್ರಾಂಗಣದಲ್ಲಿ ಮಲಗಿಸಿ, ಪಟ್ಟದ ಮಂಚದ ಮೇಲೆ ನೂತನ ಅರಸರನ್ನು ಕೂರಿಸಿ, ದೀಕ್ಷಾ ವಿಧಿವಿಧಾನಗಳನ್ನು ನಡೆಸಿ ನಂತರ ಹಿಂದಿನ ಅರಸರ ಮೃತದೇಹದ ಉಂಗುರದ ಬೆರಳಿನಿಂದ ದಾರ ಕಟ್ಟಿ ನೂತನ ಅರಸರ ಕೈಬೆರಳಿನವರೆಗೆ ದಾರದ ಮುಖೇನವೇ ಉಂಗುರ ದಾಟಿ ಬರಬೇಕು ಎಂಬ ವಿಧಿಯಿದೆಯಂತೆ. ಅಂದರೆ ಅವರ ಅರಸೊತ್ತಿಗೆಯ ನಿಷ್ಠೆ, ಶ್ರದ್ಧೆಯನ್ನು ಹೊಗಳಲು ಸಾಧ್ಯವೇ? ಅಲ್ಲಿ ಪಟ್ಟವೇರಿದ ಅರಸರಿಗೆ ಯಾವುದೇ ಬಾಂಧವ್ಯದ ಬಂಧನವಿರುವುದಿಲ್ಲ. ಸೂತಕಾದಿಗಳೂ ಇಲ್ಲ. ಹಾಗಿದ್ದರೆ ಅಲ್ಲಿನ ಅರಸರು ತಮ್ಮನ್ನು ಎಷ್ಟು ನಿಷ್ಕಾಮನೆಯಿಂದ ಸಮಾಜಕ್ಕೆ ಅರ್ಪಿಸಿಕೊಂಡಿದ್ದಾರೆ ಅರ್ಥವಾಯ್ತೇ? 

ಇಂತಹಾ ಆಚರಣೆಗಳ ಹಿಂದೆ ಯಾವುದೋ ಒಂದು ನಿಗೂಢ ರಹಸ್ಯವಿರಲೇಬೇಕು. ಕೇವಲ ಕ್ರೀಡೆ, ಅರಸುತನ, ಅಧಿಕಾರ ಆಯ್ಕೆ, ತ್ಯಾಗ, ಸಮ್ಯಕ್ ಜೀವನ ಉದ್ದೇಶವಿರಲಿಕ್ಕಿಲ್ಲ. ಅದರ ಹಿಂದೆ ಯಾವುದೋ ದೈವೀಕ, ಆತ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಭದ್ರತೆಯ ಸೂತ್ರ ಅಡಕವಾಗಿದೆ. ಹಾಗಾಗಿಯೇ ಇಲ್ಲಿ ಅರಸು ಮನೆತನ, ಏಕಾಧಿಪತ್ಯ, ಏಕತಾ ನಿರ್ಣಯ, “ಆತ್ಮಸಂಯೋಜನೆ”, ಅಥವಾ “ಆತ್ಮಪಟ್ಟವ್ಯವಸ್ಥೆ” ಇಲ್ಲಿ ರೂಢಿಗೆ ಬಂದಿರಬೇಕು ಎಂದು ಕಾಣುತ್ತದೆ. ಅಲ್ಲಿ ಮೊದಲನೆಯ ದೊರೆಯ ಆತ್ಮಶಕ್ತಿಯು ಉಂಗುರರೂಪದಲ್ಲಿ ಇವರನ್ನು ಬಂದು ಸೇರುವ ಪ್ರಕ್ರಿಯೆ ಇರಬಹುದೇ ಚಿಂತಿಸಿ. ಹಾಗಿದ್ದಲ್ಲಿ ಯಾವಕಾಲದಲ್ಲಿ ಅಲ್ಲಿನ ಅರಸೊತ್ತಿಗೆ ಆರಂಭವಾಯ್ತೋ ಅಲ್ಲಿಂದ ಇಲ್ಲಿಯವರೆಗಿನ ಅರಸರೆಲ್ಲಾ ಒಬ್ಬರೇ? ಮೂಲ ಅರಸರ ಆತ್ಮವೇ ಈಗಲೂ ಅರಸರಲ್ಲಿ ಸೇರಿ ನಡೆಸುತ್ತಿದೆಯೆಂದು ಭಾವವೇ? ಹಾಗಾಗಿಯೇ ಅವರಿಗೆ ಯಾವುದೇ ಬಾಂಧವ್ಯ, ಸಂಬಂಧ, ಸೂತಕಾದಿಗಳು ಇರುವುದಿಲ್ಲವೇ? ಅದರ ಹಿನ್ನಲೆ ಏನು? ಯಾಕೆ ಈ ರೀತಿಯ ಅರಸೊತ್ತಿಗೆ ಪರಿಪಾಟ ನಡೆದು ಬಂತು? ಅವರು ಈ ಕಂಬಳ ಏಕೆ ನಡೆಸಬೇಕು? ಕಂಬಳಕಾಲದಲ್ಲಿ ಇವರ ವ್ರತನಿಷ್ಠೆಗೆ ಕಾರಣವೇನು? ಒಮ್ಮೆ ಸಿಂಹಾವಲೋಕನ ಮಾಡಿದಲ್ಲಿ ಇದಕ್ಕೆ ಉತ್ತರ ಸಿದ್ಧ.

“ಕಂಬಳನಾಗವೆಂದರೇನು?
ಮೂಲಿಕಾ ಅರಸೊತ್ತಿಗೆಯೆಂದರೇನು?
ಆತ್ಮಪಟ್ಟದ ರಹಸ್ಯವೇನು?
ಇವರು ಆರಾಧಿಸಿಕೊಂಡು ಬರುತ್ತಿರುವ ಪದ್ಮಾವತಿ ತಾಯಿ ಯಾರು?
ಕಂಬಳದ ದಿನ ಕೋಣಕ್ಕೆ ದಾರಿ ತೋರುವ ಭೂತವೇಷದ ಅರ್ಥವೇನು?
ಅಲ್ಲಿರುವ ನಾಗರೂಪದ ಸರ್ಪ ಯಾವುದು?
ಸದಾ ಅದು ಗದ್ದೆಯಲ್ಲಿ ಏನು ಮಾಡುತ್ತದೆ?
ಈಗಿನ ಪುರಾತನ ಬಸದಿ ಸಹಿತ ಅರಮನೆಯ ಭಾಗ ಶಿಥಿಲವಾಗಿದ್ದರೂ ಪುನಃರೂಪಿಸಲು ಹೊರಟಾಗ ಏಕೆ ದೈವೀಕ ಸಹಕಾರ ಸಿಕ್ಕಿರಲಿಲ್ಲ?
ಅಲ್ಲಿರುವ ಚಿಕ್ಕರಮನೆ, ದೊಡ್ಡರಮನೆ, ಮಧ್ಯದ ಭೂತಾಲಯ, ಬಸದಿಗಳು ಏಕೆ ನಿರ್ಮಿಸಲ್ಪಟ್ಟವು?
ಇವರ ಅಂದರೆ ಮೂಲ್ಕಿ ಅರಸರ ಇತರೆ ಬಾಧ್ಯತೆಗಳೇನು?” 

… ಚಿಂತಿಸೋಣವೇ? ಹಾಗಿದ್ದರೆ ಮುಂದಿನ ಲೇಖನ ಓದಿ ನೋಡಿ,  ಜಿಜ್ಞಾಸುಗಳಾಗಿರಿ:- 
http://veda-vijnana.blogspot.in/2013/03/blog-post_16.html


- ಬ್ರಹ್ಮರ್ಷಿ ಕೆ.ಎಸ್. ನಿತ್ಯಾನಂದ ಸ್ವಾಮೀಜಿ
ಅಘಸ್ತ್ಯಾಶ್ರಮ ಗೋಶಾಲೆ, ಬಂದ್ಯೋಡು
ಇವರ ಆಯ್ದ ಲೇಖನ

No comments:

Post a Comment