Tuesday, 16 April 2013

ಮದುವೆ ಪ್ರಶ್ನೋತ್ತರಗಳು - ಭಾಗ - ೬- ಅರಶಿನಕೊಂಬು, ಕಂಕಣಭಾಗ್ಯ, ಗುರುಬಲ, ವಿಧವೆಗೆ ಸುಮಂಗಲೀ ವಸ್ತುಗಳು ನಿಷೇಧವಲ್ಲ, ವರ-ಪರೀಕ್ಷೆಗೆ ಗೋಪೂಜೆ, ಗಂಗಾಪೂಜೆ, ವಧು-ಪರೀಕ್ಷೆ ಇಲ್ಲ, ಬಂಜೆತನ, ಸೋದರ ಸಂಬಂಧ

ಬಡವರು ಚಿನ್ನವಿಲ್ಲದೇನೇ ಅರಶಿನಕೊಂಬು ಕಟ್ಟಿ ಮದುವೆಯಾಗುತ್ತಾರೆ. ಆಗ ಬಂಗಾರದ ಅಂಶ ಅರಿಶಿನ ಕೊಂಬಿನಲ್ಲಿ ಸಿಗುತ್ತದೆಯೇ?
          ನೇರ ಬಂಗಾರದ ಅಂಶವಲ್ಲದಿದ್ದರೂ ಬಂಗಾರದ ಕೆಲವೊಂದು ಅಂಶಗಳು ಅರಶಿನ ಕೊಂಬುಗಳಲ್ಲಿ ಸಿಗುತ್ತದೆ. ಹಾಗಾಗಿ ಅರಶಿನ ಬಳಕೆಯನ್ನೂ ಸ್ತ್ರೀಯರಿಗೆ ವಿಶೇಷವಾಗಿ ಹೇಳಿದ್ದಾರೆ. ಹಾಗಾಗಿ ಪ್ರತೀನಿತ್ಯವೂ ಸ್ವಲ್ಪವಾದರೂ ಅರಶಿನವನ್ನು ಬಳಸಬೇಕೆಂದು ನಮ್ಮ ಭಾರತೀಯ ಅಡಿಗೆಯಲ್ಲಿ ಸೇರಿಸಿದ್ದಾರೆ. ಹಾಗಂತ ಅರಶಿನವನ್ನು ಮೈತುಂಬಾ ಬಳಿದುಕೊಂಡರೆ ಚಿನ್ನದ ಅಂಶ ಬರುವುದಿಲ್ಲ. ಆದರೆ ಸ್ವಲ್ಪ ಪ್ರಮಾಣ ಚಿನ್ನದ ಗುಣ ಸಿಗಬಹುದು ಎನ್ನುವ ಅಭಿಪ್ರಾಯ ಇರುವುದರಿಂದ ಅರಶಿನಕ್ಕೂ ಅಷ್ಟೇ ಮಹತ್ವ ಬಂದಿತು. ಲಭ್ಯವಿಲ್ಲ, ಬಡತನವೆಂದಾಗ ಅರಶಿನ ಕೊಂಬನ್ನಾದರೂ ಕಟ್ಟಿಕೊಳ್ಳಿ ಎಂದರು. ಹಾಗೆ ಮುಂದೆ ಮಾಡಿಸಿಕೊಳ್ಳಬಾರದೆಂದು ಹೇಳಿಲ್ಲ. ಗಂಡನಿಗೆ ಆರ್ಥಿಕ ಸಬಲತೆ ಉಂಟಾಗಲು ಒಂದು ಚಿನ್ನದ ಆಭರಣವನ್ನು ಮಾಡಿಸಿ ಹಾಕಿಕೊಳ್ಳಬಹುದು. ತಾತ್ಕಾಲಿಕ ಅರಶಿನ ಕೊಂಬು ಅಷ್ಟೆ.

ಎಲ್ಲಾ ಗಂಡಿಗೂ, ಎಲ್ಲಾ ಹೆಣ್ಣಿಗೂ ಕಂಕಣಭಾಗ್ಯ ಇರುತ್ತದೆಯೇ?
         ಪ್ರತ್ಯುತ್ಪನ್ನ ಶಕ್ತಿಯನ್ನು ಹೊಂದಿದಂತಹ ಶಕ್ತಿಗೆ ಕಂಕಣಭಾಗ್ಯ ಮಾತ್ರವಲ್ಲ, ಅದು ಕರ್ತವ್ಯವಾಗಿರುತ್ತದೆ; ಇದ್ದೇ ಇರುತ್ತದೆ. ಕಾಲ, ಕಾರಣ, ಈಗಿನ ಪ್ರಾಪಂಚಿಕ ವ್ಯವಸ್ಥೆ, ವರದಕ್ಷಿಣೆ ಸಮಸ್ಯೆಗಳು, ಔದ್ಯೋಗಿಕ ಸಮೃದ್ಧಿ, ಆರ್ಥಿಕ ಸೌಲಭ್ಯತೆ ಹೀಗೆ ಹಲವಾರು ಸಮಸ್ಯೆಗಳ ಕಾರಣದಿಂದಾಗಿ ಮದುವೆ ಆಗದೇ ಇರಬಹುದು. ಆದರೆ ಆ ಶಕ್ತಿಯಿಲ್ಲ, ಅರ್ಹತೆಯಿಲ್ಲ ಎನ್ನುವ ಪ್ರಶ್ನೆಯಿಲ್ಲ. ಅದು ಇದ್ದೇ ಇರುತ್ತದೆ. ಸಮಾಜ ಪರಿಸರ ಅವರಿಗೆ ಒದಗಿಸಿ ಕೊಡದೇ ಇದ್ದರೆ ಅದಕ್ಕೆ ಸಮಾಜ ಬಾಧ್ಯ. ಅದಕ್ಕೆ ಆಯಾ ಹೆಣ್ಣೋ, ಗಂಡೋ ಜವಾಬ್ದಾರರಲ್ಲ. ಸಮಾಜದ ತಪ್ಪು ನಡವಳಿಕೆ ಆಗಿರುತ್ತದೆ. ಸಮಾಜದಲ್ಲಿ ಒಂದು ಕನ್ಯೆ ಅವಿವಾಹಿತಳಾಗಿ ಉಳಿದರೆ ಅದಕ್ಕೆ ಸಮಾಜವು ಮುಂದೊಂದು ದಿನ ಬೆಲೆ ತೆರಲೇಬೇಕು. ಅದು ಅಪರಾಧ!

ಹೆಣ್ಣಿಗೆ ಅರಶಿನ ಮತ್ತು ಚಿನ್ನ ಎರಡೂ ಅನಿವಾರ್ಯವೆಂದು ಹೇಳಿದಿರಿ, ಆದರೆ ಗಂಡ ಸತ್ತ ನಂತರ ಅವುಗಳ ನಿಷೇಧವೇಕೆ?
       ಇದು ಸಂಪ್ರದಾಯದಲ್ಲಿ ಬಂದು ಹೋದ ಆಚರಣೆಗಳು. ಅರ್ಹತೆಯಿಲ್ಲವೆಂದು ಧರ್ಮಶಾಸ್ತ್ರವು ಎಲ್ಲೂ ಹೇಳಿಲ್ಲ. ಅವು ಗಂಡನಿಂದ ಕೊಡಲ್ಪಟ್ಟ ವಸ್ತುಗಳೂ ಅಲ್ಲ. ಗಂಡನೂ ಕೊಡುತ್ತಾನಷ್ಟೆ. ಅಷ್ಟು ಬಿಟ್ಟರೆ ಅದನ್ನು ಧರಿಸಬಾರದು ಎಂಬ ನಿಯಮವಿಲ್ಲ. ಮೊದಲೇ ಕನ್ಯೆಯಾಗಿದ್ದಾಗ ಅರಶಿನ ಧರಿಸಬಾರದು ಎಂದು ಎಲ್ಲೂ ಹೇಳಿಲ್ಲ. ಇದು ಮುಂದೆ ಬಂದ ಆಚರಣೆಗಳ ಅಭಿಪ್ರಾಯಗಳು. ಈ ರೀತಿ ನಿಷೇಧಕ್ಕೆ ಹಿಂದೆ ಏನೋ ಕಾರಣವಿರಬಹುದು. ಗಂಡ ಸತ್ತ ಮೇಲೆ ಪುನಃ ಅವಳು ಮಕ್ಕಳನ್ನು ಪಡೆಯುವ ಅಗತ್ಯವಿಲ್ಲ, ಹೇಗಿದ್ದರೂ ಮಕ್ಕಳನ್ನು ಸಾಕುತ್ತಾಳೆ. ಹಾಗಿದ್ದಾಗ ಅರಶಿನ ಧರಿಸದಿದ್ದರೂ ತೊಂದರೆಯಿಲ್ಲ, ಆಭರಣ ಧರಿಸದಿದ್ದರೂ ತೊಂದರೆ ಇಲ್ಲ ಎಂದು ಹಾಗೆ ಮಾಡಿರಬಹುದು. ಕರ್ತವ್ಯ ನಿರ್ವಹಿಸುವಾಗ ಅದು ಬೇರೆ ವಿಚಾರ. ಹಾಗೆ ಬಂದ ವಿಶಾಲ ಭಾವನೆಯು ಕೊನೆಯಲ್ಲಿ ಅದು ಅಪಾರ್ಥವಾಗಿ ಸುಮಂಗಲೀ ವಸ್ತುಗಳನ್ನೇ ಧರಿಸಲಿಕ್ಕೆ ಅನರ್ಹಳು ಎಂದು ಬಂದಿರಬಹುದು. ಅಗತ್ಯವಿಲ್ಲವೆಂದು ಬಿಡುವುದೂ, ಅನರ್ಹಳು ಎಂದು ಬಿಡುವುದಕ್ಕೂ ವ್ಯತ್ಯಾಸವಿದೆ. ಆ ಅನರ್ಹತೆಯಿಂದ ಬಿಡುವ ಮೌಢ್ಯ ಈಗ ಚಾಲ್ತಿಯಲ್ಲಿದೆ ಅಷ್ಟೇ ವಿನಃ ಖಂಡಿತವಾಗಿ ಅನರ್ಹತೆಯ ಪ್ರಶ್ನೆಯೇ ಇರುವುದಿಲ್ಲ. ಅಗತ್ಯವಿಲ್ಲವೆಂದು ತ್ಯಾಗ ಮಾಡುವುದಕ್ಕೂ, ಅನರ್ಹವೆಂದು ಬಿಡುವುದಕ್ಕೂ ವ್ಯತ್ಯಾಸವಿದೆ. ಹಾಗೆ ಅಗತ್ಯವಿಲ್ಲವೆನ್ನುವ ಕಾರಣಕ್ಕೆ ಉದಾಹರಿಸಿರಬಹುದು. ಅದನ್ನೇ ಶಾಸ್ತ್ರಾಧಾರ ಎಂದು ಅನರ್ಹ ಎಂದು ಹೇಳುವ ವಾಕ್ಯ ಶಾಸ್ತ್ರದಲ್ಲೆಲ್ಲೂ ಇಲ್ಲ. ಜನರ ಬಾಯಲ್ಲಿದೆ ಅಷ್ಟೆ!

ಮದುವೆಗೆ ಗುರುಬಲ ಬೇಕು ಎಂದು ಹೇಳುತ್ತಾರೆ? ಅದು ಎಷ್ಟು ಸೂಕ್ತ?
         ಸಾಮಾನ್ಯ ಯಾವುದೇ ಒಂದು ಪ್ರಕ್ರಿಯೆಗೂ ಗುರು ಹಿರಿಯರ ಆಶೀರ್ವಾದ ಬೇಕು ಎಂಬ ಪದ್ಧತಿಯಿದೆ. ಸಂಪ್ರದಾಯ ರೀತ್ಯಾ ಅದು ಸತ್ಯ. ಹಾಗೆ ಅಲ್ಲಿ ಗುರುವಿನ ಆಶೀರ್ವಾದ ಯಾವ ರೀತಿ ಎನ್ನುವುದು ಬಂದಾಗ ಗೋಚಾರ ಸ್ಥಿತಿಯಿರತಕ್ಕಂತಹ ಗ್ರಹ ಆಧರಿತ ಗುರುವನ್ನು ಪ್ರಧಾನವಾಗಿ ತೆಗೆದುಕೊಂಡು ಗುರುಬಲವನ್ನು ನೋಡುವ ಪದ್ಧತಿ ಬಂದಿತು. ಸಮರ್ಥ ಗುರುವಿದ್ದರೆ ಬೇರೆ ಯಾವ ಗುರುವಿನ ಬಲವೂ ಬೇಕಿಲ್ಲ. ಪುರೋಹಿತನು ಮದುವೆ ಮಾಡುವಾಗ ದಕ್ಷಿಣೆ ಮಾತ್ರ ಜವಾಬ್ದಾರಿ, ಉಳಿದದ್ದು ತನ್ನ ಜವಾಬ್ದಾರಿಯಲ್ಲ ಎಂದು ಹೇಳುತ್ತಾನೆ. ಧಾರೆ ಎರೆದು ಕೊಡುವಾಗ ಕನ್ಯಾಪಿತೃ ಧಾರೆಯೆರೆದು ಕೊಟ್ಟ ಮೇಲೆ ತನ್ನ ಜವಾಬ್ದಾರಿಯಿಲ್ಲ ಎಂದು ಹೇಳುತ್ತಾನೆ. ಅಥವಾ ಬಂಧುಗಳಿಗೆ ನೀವು ಕೇಳಿದ್ದೆಲ್ಲಾ ಕೊಟ್ಟಾಗಿದೆ ಎಂದು ಹೇಳುತ್ತಾನೆ. ಇನ್ನು ಮದುವೆಯಾಗಿ ಬಂದರೆ ಗಂಡನ ಮನೆಯಲ್ಲಿ ತನ್ನ ಮಗನನ್ನು ತನ್ನ ಕೈಯಿಂದ ಕಿತ್ತುಕೊಂಡಳು ಎಂದು ಅತ್ತೆಗೆ ಒಂಥರಾ ಸಂಕಟವಿರುತ್ತದೆ, ಅದು ಸಹಜ, ಅಪರಾಧವಲ್ಲ. ಅತ್ತೆ-ಸೊಸೆಯಲ್ಲಿ ಬರುವ ಭಿನ್ನಾಭಿಪ್ರಾಯಕ್ಕೆ ಕಾರಣವು ಅದೇ ಆಗಿರುತ್ತದೆ. ಅದನ್ನು ಅರಿತು ಹೊಂದಿಸಿಕೊಂಡು ಸ್ವಲ್ಪಕಾಲ ಹೋದರೆ ಮುಂದೆ ಅತ್ತೆ-ಸೊಸೆಯಲ್ಲಿ ಅನ್ಯೋನ್ಯತೆ ಬರುತ್ತದೆ. ಅದನ್ನು ಹೊಂದಿಸಿಕೊಂಡು ಹೋಗದೇ ಇದ್ದರೆ ಜಗಳವಾಗುತ್ತಾ ಇರುತ್ತದೆ. ಆ ಸಂದರ್ಭಗಳಲೆಲ್ಲಾ ಪ್ರಾಪಂಚಿಕ ಗುರುವಿನ ಬಲವನ್ನು ಪಡೆಯಲು ಸಾಧ್ಯವಿರುವುದರಿಂದ ತಾಯಿ ಗುರುವಿನಿಂದ ಬರತಕ್ಕಂತಹ ಬಲವು ಸಿಕ್ಕುವುದಿಲ್ಲ, ಹುಟ್ಟಿದ ಮನೆಯಿಂದ ಬರತಕ್ಕಂತಹ ಗುರುಬಲವೂ ಬರುವುದಿಲ್ಲ. ಬಲಕ್ಕೆ ಪೂರಕ ಶಕ್ತಿಯನ್ನು ಕೊಡತಕ್ಕಂತಹದ್ದು ಗುರು. ತಂದೆಯ ಮನೆಯಲ್ಲಿ ಸಾಲಸೋಲ ಇತ್ಯಾದಿ ಅಸಹಾಯಕತೆಯು ಇದ್ದಲ್ಲಿ ಅಲ್ಲಿಂದ ಗುರುವಿನ ಬಲವು ಸಿಕ್ಕುವುದಿಲ್ಲ. ಹಾಗಾಗಿ ಗೋಚಾರದ ಗುರು ಬಲವನ್ನಾದರೂ ಪಡೆದು ಮದುವೆಯಾಗಿ ಎನ್ನುವುದು ಗುರುಬಲ ನೋಡಿ ಮದುವೆ ಮಾಡಿ ಎಂಬ ಪದ್ಧತಿಯ ಹಿಂದಿರುವ ಸತ್ಯ.

ವಿವಾಹ ಸಂಸ್ಕಾರಾಂಗವಾಗಿ ಮಾಡಿದಂತಹ ಗೋಪೂಜೆ, ಗಂಗಾಪೂಜೆ ಇತ್ಯಾದಿಗಳ ಮಹತ್ವವೇನು?
          ಈ ಪೂಜೆಗಳು ಹೆಚ್ಚಾಗಿ ವರನ ಪರೀಕ್ಷೆಗೆ ಸಂಬಂಧಪಟ್ಟಂತಹ ಪರೀಕ್ಷಾ ದ್ಯೋತಕ ಪ್ರಕ್ರಿಯೆಗಳು. ಅದರಲ್ಲಿ ಗೋಪೂಜೆ ಎಂದು ತೆಗೆದುಕೊಂಡಾಗ ಪ್ರಕೃತಿಯಲ್ಲಿರತಕ್ಕಂತಹ ಪ್ರಾಣಿ ಶಕ್ತಿಗಳಲ್ಲಿ ಅತ್ಯಂತ ಶ್ರೇಷ್ಠವಾದ ಪ್ರಾಣಿಶಕ್ತಿಯೆಂದರೆ ಗೋ. ಅದರಿಂದ ನಾವು ಸಾತ್ವಿಕತೆಯನ್ನು, ವಿನಯವನ್ನು ಹೆಚ್ಚು ಗುರುತಿಸಲು ಸಾಧ್ಯ. ಅದರ ಮಾಪನ ಇಟ್ಟು ವರನಲ್ಲಿ ಸದ್ಗುಣವೆಷ್ಟಿದೆ? ಸಾತ್ವಿಕತೆ ಎಷ್ಟಿದೆ? ಎಷ್ಟು ಸಮಾಧಾನಕರವಾಗಿ ಪ್ರಪಂಚವನ್ನು ಅಥವಾ ಸಮಾಜವನ್ನು ನಿರ್ವಹಿಸಬಲ್ಲ? ಎಂದು ಗೋಪೂಜೆ ಮಾಡುವ ಮುಖೇನ ಪರೀಕ್ಷಿಸುತ್ತೇವೆ.
          ಹಾಗೆ ಗಂಗಾಪೂಜೆ – ಜೀವಶಕ್ತಿ ದ್ಯೋತಕ. ತಾನು ಜೀವಶಕ್ತಿಯಾದರೆ ಇನ್ನೊಂದು ಜೀವಶಕ್ತಿಯನ್ನು ಗೌರವಿಸುತ್ತಾನೆ. ತನ್ನಲ್ಲಿ ಜೀವಶಕ್ತಿಯನ್ನು ಕಳೆದುಕೊಳ್ಳುತ್ತಾ ಬಂದರೆ ಇನ್ನೊಂದು ಜೀವವನ್ನು ಗೌರವಿಸುವುದಿಲ್ಲ. ಒಂದು ಉದಾಹರಣೆಯಿದೆ – ತಾಯಿ ಮಗುವಿನ ಮೇಲೆ ಎಷ್ಟು ಪ್ರೀತಿ, ಮಮತೆಗಳನ್ನು ಹೊಂದಿರುತ್ತಾಳೆ ಎಂದರೆ ಮಗುವಿಗೆ ಬರುವ ಎಲ್ಲಾ ಆಪತ್ತುಗಳನ್ನು ಸ್ವೀಕರಿಸುತ್ತಾಳೆ. ಅದನ್ನು ಪರೀಕ್ಷಿಸುವುದಕ್ಕೆ ಒಬ್ಬ ಚಿಕಿತ್ಸಕ, ಚಿಂತಕನು ಒಂದು ಮರಿಯಿದ್ದ ಮಂಗವನ್ನು ಹಿಡಿದುಕೊಂಡು ಬರುತ್ತಾನೆ. ಅದನ್ನು ತಂದು ಒಂದು ತೊಟ್ಟಿಯೊಳಗೆ ಇಟ್ಟು ನೀರನ್ನು ತುಂಬಲು ಪ್ರಾರಂಭಿಸುತ್ತಾನೆ. ಮಂಗವು ನೀರು ಸಿಡಿಯುತ್ತದೆ ಎಂದು ತನ್ನ ಮರಿಯನ್ನು ಅವುಚಿ ಹಿಡಿದುಕೊಳ್ಳುತ್ತದೆ. ಅಲ್ಲಿಯವರೆಗೆ ನೀರು ಬರಲು ಆರಂಭವಾದಾಗ ಮರಿಯನ್ನು ಎತ್ತಿ ಹೆಗಲ ಮೇಲೆ ಇಟ್ಟುಕೊಳ್ಳುತ್ತದೆ. ಮತ್ತೂ ನೀರು ತುಂಬುತ್ತಲೇ ತಲೆಯ ಮೇಲೆ ಮರಿಯನ್ನು ಕುಳ್ಳಿರಿಸುತ್ತದೆ. ಮತ್ತೂ ನೀರು ತುಂಬಿದಾಗ ಮರಿಯನ್ನು ಎತ್ತಿ ಕೈಯಲ್ಲಿ ಹಿಡಿದುಕೊಳ್ಳುತ್ತದೆ. ಆಗ ತಾಯಿ ಮಂಗ ಮುಳುಗುವಷ್ಟು ನೀರು ತುಂಬಿದಾಗ ಮಾತ್ರ ಆ ಮರಿಯನ್ನು ಕಾಲಡಿಯಲ್ಲಿ ಹಾಕಿ ಅದರ ಮೇಲೆ ನಿಲ್ಲುತ್ತದೆ. ಕೊನೆಯಲ್ಲಿ ಜೀವ ಎಂದಾಗ ಮಾತ್ರ ಅದರ ಮಮತೆಯು ಹೊರಟು ಹೋಗುತ್ತದೆ. ಅದರಂತೆ ಪ್ರತಿಯೊಂದು ಜೀವಿಗೂ ತನ್ನ ಜೀವವೆಂದರೆ ಅತಿಪ್ರಿಯ. ನಂತರ ಮಾತೃತ್ವಕ್ಕೆ ಸ್ಥಾನ ಬರುವುದು. ಹಾಗೆ ಜೀವಶಕ್ತಿಯನ್ನು ಗುರುತಿಸುವುದು ನೀರಿನ ಮುಖಾಂತರ. ನೀರಿಗೆ ಜೀವ ಎಂದೂ ಹೆಸರಿದೆ. ಆ ಜೀವಶಕ್ತಿಯ ಪ್ರಮಾಣವನ್ನಿಟ್ಟು ವರನಲ್ಲಿ ಇರತಕ್ಕಂತಹ ಜೀವಶಕ್ತಿ, ಚೈತನ್ಯವೆಷ್ಟಿದೆ ಎಂದು ಪರೀಕ್ಷಿಸುವುದು ಎರಡನೆಯ ಹಂತದ ಗಂಗಾಪೂಜೆಯ ಅರ್ಥವಾಗಿರುತ್ತದೆ.
   ಹಾಗೆ ಒಂದೊಂದು ಹಂತದ ಪ್ರಕ್ರಿಯೆಯೂ ಕೂಡ ವರನ ಪರೀಕ್ಷೆಗೆ ಸಂಬಂಧಪಟ್ಟ ವಿಧಾನಗಳಾಗಿರುತ್ತವೆ. ಗೋಪೂಜೆಯಾಗಲಿ, ಗಂಗಾಪೂಜೆಯಾಗಲಿ, ಅಥವಾ ಇತರೆ ಕೂಪಶಾಂತಿಯಾದಿ ೧೬ ಶಾಂತಿ ಕರ್ಮಗಳಾಗಲಿ, ಎಷ್ಟು ಸಾಧ್ಯ, ಎಷ್ಟು ಅನಿವಾರ್ಯ ಅಷ್ಟು ಮಾಡಬೇಕು. ಕೆಲವೊಂದು ಅನಿವಾರ್ಯ ಕಾರ್ಯಗಳನ್ನು ಮಾಡಿರುವುದಿಲ್ಲ, ಇದು ಬೇಕಿಲ್ಲ, ಮೊದಲೇ ಆಗಿದೆ ಎಂದು ಅನ್ನಿಸಿರುತ್ತೆ ಹಾಗೆ ಬಿಟ್ಟಿರುತ್ತೇವೆ. ಮತ್ತು ಯಾವ್ಯಾವುದು ಪರೀಕ್ಷೆಗೆ ಬೇಕೋ, ಅವನ್ನು ಮಾಡಿರುತ್ತೇವೆ. ಅವೆಲ್ಲ ವರನ ಅರ್ಹತೆಯ ಪರೀಕ್ಷಾ ವಿಧಾನಗಳು ಎಂದರ್ಥ.

ವಧುವಿಗೂ ಈ ತರಹದ ಪರೀಕ್ಷೆಗಳಿವೆಯೇ?
                ಮೊದಲಿನಿಂದಲೂ ಹೇಳಿರುವುದೇನೆಂದರೆ ವಧುವಿನಲ್ಲಿ ಅನರ್ಹತೆಯ ಪ್ರಶ್ನೆ ಬರುವುದಿಲ್ಲ. ವಧು ಸಹಜ ಪ್ರಕೃತಿ. ವರನಲ್ಲಿ ಮಾತ್ರ ಅರ್ಹತೆ, ಅನರ್ಹತೆ ಸಾಧ್ಯತೆ ಇರುತ್ತದೆ. ಹಾಗಾಗಿ ವರನಿಗೆ ಪರೀಕ್ಷೆ ಬಿಟ್ಟರೆ ವಧುವಿಗೆ ಇರುವುದಿಲ್ಲ. ವರನು ಚೈತನ್ಯದ ಮೂಲದವನು. ಬೇರೆ ಕಡೆಯಿಂದ ಬಂದದ್ದು ಎಂದು. ಬೇರೆ ಕಡೆಯಿಂದ ಬರುವಾಗ ಸಹಜವಾಗಿ ದೂಷಿತಗಳು ಆವೇಶಿತವಾಗುವುದು. ಆದರೆ ಪ್ರಕೃತಿಯು ಇಲ್ಲೇ ಇರುವಂತಹದ್ದು. ಇಲ್ಲಿರುವುದಕ್ಕೆ ಅರ್ಹ ಅಥವಾ ಅನರ್ಹತೆಯ ಪ್ರಶ್ನೆ ಬರುವುದಿಲ್ಲ.
         
ಸ್ತ್ರೀಯು ಮಕ್ಕಳನ್ನು ಪಡೆಯುವುದು ಕರ್ತವ್ಯವೆಂದು ಹೇಳಿದಿರಿ. ಆದರೆ ಕೆಲವೊಂದು ಸ್ತ್ರೀಯರು ಮಕ್ಕಳನ್ನು ಪಡೆಯಲಿಕ್ಕಾಗದೆ ಬಂಜೆತನವನ್ನು ಅನುಭವಿಸುತ್ತಿರುತ್ತಾರೆ. ಇದಕ್ಕೆ ಕಾರಣವೇನು?
                ಯಾವುದೇ ಒಂದು ವಿಚಾರಕ್ಕೂ ಒಂದೇ ಕಾರಣವಿರುವುದಿಲ್ಲ. ಹಾಗೆ ಸ್ತ್ರೀಯಲ್ಲಿ ಸಂತಾನಶಕ್ತಿ ಇಲ್ಲದೇ ಇರುವುದಕ್ಕೂ ಕೂಡ ೧೫ ಬೇರೆ ಬೇರೆ ಕಾರಣಗಳನ್ನು ಹೇಳಿದೆ. ಅದರಲ್ಲಿ ಹೆಚ್ಚಿನ ಕಾರಣಗಳು ಸಕಾಲಿಕವಾಗಿ ಸ್ಪಂದನೆ ಇಲ್ಲದಂತಹದ್ದು ಎಂದರ್ಥ. ಸಕಾಲದಲ್ಲಿ ಮದುವೆ ಮಾಡದಿದ್ದರೆ, ಯಾವ್ಯಾವ ಕಾಲದಲ್ಲಿ ಹೆರಿಗೆಯ ಶಕ್ತಿ ಇರುತ್ತದೆ, ಆಗ ಅದನ್ನು ದಾಟಿ ಯಾವಾಗಲೋ ಮದುವೆ ಮಾಡಿದರೆ ಆಗ ಸಂತಾನ ಆಗಲಿಲ್ಲವೆಂದರೆ ಅದು ಸ್ತ್ರೀಯ ಅಸರ್ಮರ್ಥತೆ ಎಂದು ಅರ್ಥವಲ್ಲ. ಹಾಗೆ ೧೧ ಕಾರಣಗಳು ಸಮಾಜದ ಸ್ಪಂದನದ ಕೊರತೆಯಾಗಿರುತ್ತದೆ. ಸಮಾಜವು ಆ ಕಾಲಕ್ಕೆ ಸರಿಯಾಗಿ ನಿರ್ವಹಿಸದ್ದು ಬಂಜೆತನಕ್ಕೆ ಕಾರಣವಾಗಿರುತ್ತದೆ. ಸಮಾಜವೆಂದರೆ ಸುತ್ತಮುತ್ತಿನ ಪರಿಸರ, ತಂದೆತಾಯಿ, ಬಂಧುವರ್ಗವೆಲ್ಲವೂ ಬರುತ್ತದೆ. ಅವರ ಸ್ಪಂದನದಲ್ಲಿ ಕೊರತೆಯಾದಾಗ ಆ ರೀತಿಯ ಅಸಮರ್ಥತೆ ಬರಬಹುದು. ಇನ್ನು ಆಹಾರ ವ್ಯತ್ಯಾಸಗಳು ಕಾರಣವಾಗುತ್ತವೆ. ಇನ್ನೂ ಒಂದು ಕೊನೆಯದಾದ ಮಹತ್ತರವಾದ ಕಾರಣವೊಂದಿದೆ. ಅದು ಜನ್ಮಾಂತರ ಋಣದೋಷಕರ್ಮಗಳು. ಅದಕ್ಕೆ ಸಂಬಂಧಪಟ್ಟಂತಹ ಪರಿಹಾರ ಪ್ರಕ್ರಿಯೆಗಳನ್ನು ಕೂಡ ಸೂತ್ರಕಾರರು ಬರೆದಿದ್ದಾರೆ. ವಿವಾಹ ಶಕ್ತಿ ಕ್ಷೀಣವಾದರೆ ಅದನ್ನು ಹೇಗೆ ಪುನಃ ಸರಿಪಡಿಸಬಹುದು? ಎಂದು ಅದಕ್ಕೆ ಸಂಬಂಧಪಟ್ಟಂತಹ ಪರಿಹಾರ ಪ್ರಕ್ರಿಯೆ, ವಿಧಿವಿಧಾನಗಳನ್ನು ಹೇಳಿರುತ್ತಾರೆ. ಅವು ಯಾವುದನ್ನೂ ಮಾಡದೇನೇ ಬಂಜೆ ಎಂದು ಹೇಳುವುದು ಮಾತ್ರ ಸುಲಭ; ಅದನ್ನು ಹೇಳಿ ಜನ ಬಿಟ್ಟುಬಿಡುತ್ತಾರೆ. ಅದು ತಪ್ಪು, ಪ್ರಯತ್ನ ಮಾಡಬೇಕು. ಅದು ಸರಿಯಾಗುವ ಅವಕಾಶವಿರುತ್ತದೆ.

ಸೋದರ ಸಂಬಂಧಗಳಲ್ಲಿ ವಿವಾಹದಿಂದ ಸಂತಾನಕ್ಕೆ ತೊಂದರೆ ಎಂದು ಹೇಳುತ್ತಾರೆ. ಅದು ಸರಿಯೇ? ಹಾಗೆ ತಂಗಿಯ ಮಗಳಿಗೆ ತಮ್ಮನ ಮಗನನ್ನು ಕೊಡುವುದು ಸರಿಯಲ್ಲ ಎಂದು ಕೆಲವರ ಅಭಿಪ್ರಾಯ. ನಿಮ್ಮ ಅಭಿಪ್ರಾಯವೇನು?
          ಸಾಮಾನ್ಯ ಅಂತಹ ಹಲವು ಅಭಿಪ್ರಾಯಗಳಿವೆ. ಹೆಚ್ಚಾಗಿ ಅಂಗವಿಕಲ ಮಗು ಜನಿಸುತ್ತದೆ ಎನ್ನುವುದೂ ಕೂಡ ವೈಜ್ಞಾನಿಕ ಅಭಿಪ್ರಾಯವಾಗಿ ಬಿಂಬಿಸಲ್ಪಟ್ಟಿದೆ. ನಮ್ಮಲ್ಲಿಯೂ ಕೂಡ ಅದನ್ನು ಹೇಳಿದ್ದಾರೆ, ಸಗೋತ್ರದಲ್ಲಿ ವಿವಾಹ ಮಾಡಬೇಡಿ ಎಂದು. ಅದರ ಅರ್ಥವೆಂದರೆ ಈ ಹತ್ತಿರದ ಸಂಬಂಧದಲ್ಲಿ ಎನ್ನುವ ಅರ್ಥವನ್ನೇ ಕೊಡುತ್ತದೆ. ಹತ್ತಿರದ ಸಂಬಂಧದಲ್ಲಿ ವಿವಾಹ ಅಷ್ಟು ಉತ್ತಮವಲ್ಲ ಅನ್ನುವುದನು ಹೇಳಿದ್ದಾರೆ. ಆದರೆ ಅದು ಪೂರ್ಣ ಪರಿಗ್ರಹವಲ್ಲ ಎಂದೂ ಕೂಡ ಹೇಳಿರುತ್ತಾರೆ. ಕೆಲವು ಸಂದರ್ಭದಲ್ಲಿ ಅದು ಸೂಕ್ತವೆಂದು ಉದಾಹರಿಸಿದೆ.
ಉದಾಹರಣೆಗೆ ಮಹಾಭಾರತದಲ್ಲಿ ಎಲ್ಲಾ ಕೌರವರ ಅಥವಾ ಎಲ್ಲಾ ದುಷ್ಟಶಕ್ತಿಗಳ ಸಂಕಲ್ಪವು ಸಚ್ಛಕ್ತಿಯ ಸರ್ವನಾಶ. ಅದಕ್ಕೆ ಬೇಕಾದಂತಹ ಸಕಲ ಪೂರಕತೆ ಹೊಂದಿಸಿದೆ. ಕೆಟ್ಟವರೇ ಆದರೂ ಹಲವಾರು ವರ್ಷ ರಾಜ್ಯವಾಳಿದ್ದು ಕೌರವರೇ. ಒಳ್ಳೆಯವರಾದರೂ ಪಾಂಡವರಿಗೆ ರಾಜ್ಯವಾಳಲು ಸಿಕ್ಕಿಲ್ಲ. ಹಾಗೆ ದುಷ್ಟಶಕ್ತಿಯೇ ಪ್ರವರ್ಧಮಾನವಾಗಿ ಬೆಳೆದು ಸಚ್ಛಕ್ತಿಯಂತಕ್ಕಂತಹ ನಿಷ್ಪಾಂಡವ ಪ್ರಕ್ರಿಯೆ ರೂಪದಲ್ಲಿ ಇದ್ದು ಹೋರಾಟವಾಯಿತು, ಯುದ್ಧವಾಯಿತು, ಎಲ್ಲಾ ಪ್ರಜೆಗಳೂ ನಾಶವಾದರು. ಕೊನೆಯಲ್ಲೂ ದುಷ್ಟಶಕ್ತಿಯ ಪ್ರೇಷಣೆ ಅಶ್ವತ್ಥಾಮನೆಂಬ ಒಬ್ಬ ವ್ಯಕ್ತಿಯ ಮೇಲೆ ಆಗಿ ಅವನು ಅಸ್ತ್ರಪ್ರಯೋಗ ಮಾಡಿ ಆ ಸಚ್ಛಕ್ತಿಯ ಒಂದು ಅಂಕುರ ಉತ್ತರೆಯ ಗರ್ಭ ಅದನ್ನೂ ನಾಶ ಮಾಡಿತು. ಹಾಗೆ ಸಚ್ಛಕ್ತಿಯನ್ನು ನಾಶ ಮಾಡುವುದೇ ಅದರ ಗುರಿಯಾದಂತಹ ದುಷ್ಟಶಕ್ತಿಯೇ ಪ್ರಬಲವಾದಲ್ಲಿ ಸಚ್ಛಕ್ತಿಯನ್ನು ಉಳಿಸುವ ಪ್ರಯತ್ನದ ಹಿನ್ನೆಲೆಯಲ್ಲಿ ಸೋದರ ಮಗಳನ್ನೇ ಮದುವೆಯಾದ್ದರಿಂದ ಉಳಿಸಲು ಸಾಧ್ಯವಾಯಿತು. ಅಭಿಮನ್ಯುವು ಸೋದರಮಾವನಾದ ಬಲರಾಮನ ಮಗಳನ್ನು ಮದುವೆಯಾದ್ದರಿಂದ, ಉತ್ತರೆಯು ಅವನಿಗೆ ಎರಡನೆಯ ಹೆಂಡತೆಯಾಗಿದ್ದರಿಂದ ಅಸ್ತ್ರವು ೨ ಭಾಗವಾಗಿ ಪ್ರಯೋಗವಾಯಿತು. ಅದು ಪ್ರಯೋಗವಾದ್ದರಿಂದ ಎಲ್ಲಿ ಭ್ರೂಣವಿದ್ದ ಉತ್ತರೆಯ ಗರ್ಭವಿದೆ, ಹಾಗೆ ಬಲರಾಮನ ಮಗಳು; ಅವಳ ಗರ್ಭದಲ್ಲುಯೂ ಭ್ರೂಣವಿದೆಯೇ ಎಂದು ಹುಡುಕಲೇಬೇಕು. ಆ ಪ್ರಯೋಗವು ೨ ಭಾಗವಾದ್ದರಿಂದ ಅಸ್ತ್ರದ ಬಲ ಕ್ಷೀಣವಾಯಿತು. ಅದು ಮೊದಲು ಹುಡುಕಿದ್ದು ಬಲರಾಮನ ಮಗಳ ಗರ್ಭವನ್ನು. ನಮ್ಮಲ್ಲಿ ಹಿರಿತನದ ಸಂಪ್ರದಾಯವಾದ್ದರಿಂದ ಹಾಗೆ ಮಾಡಿತು. ಅದರಿಂದ ಅಸ್ತ್ರದ ಬಲ ಕ್ಷೀಣವಾಯಿತು. ಈ ರೀತಿಯಲ್ಲಿ ಸೋದರಮಾವನ ಮಗಳ ಮದುವೆಯಾದದ್ದು ಉಪಯುಕ್ತವಾಯಿತು. ಹಾಗೆ ಕೆಲವೊಂದು ಅನಿವಾರ್ಯ ಸಂದರ್ಭಗಳಲ್ಲಿ, ಹಾಗೆ ಕೆಲವೊಂದು ವೈಜ್ಞಾನಿಕ ಕಾರಣಗಳಿಂದ ಅಂತಹ ಸಂದರ್ಭಗಳಲ್ಲಿ ಸೋದರಮಾವನ ಮಗಳನ್ನು ಮದುವೆಯಾಗುವುದು, ತಂಗಿಯ ಮಗಳನ್ನು ಮದುವೆಯಾಗುವುದು ದೋಷವಾಗುವುದಿಲ್ಲ. ಸಾರ್ವತ್ರಿಕವಾಗಿ ಅದು ಒಳ್ಳೆಯದಲ್ಲ. ಹಾಗೆ ಅನಿವಾರ್ಯ ಸಂದರ್ಭಗಳಲ್ಲಿ ಸಂತಾನ ನ್ಯೂನತೆಯಾಗುವುದಿದ್ದಲ್ಲಿ, ಅವುಗಳನ್ನು ಚಿಂತಿಸಿದಾಗ ಹೆಚ್ಚಾಗಿ ಆ ರೀತಿಯ ಸಂತಾನ ನ್ಯೂನತೆಗಳ ದೋಷಗಳು ಬರುವುದು ತಾಯಿ, ತಾಯಿಯಿಂದ ಮಗನಿಗೆ, ಮಗನಿಂದ ಅವನ ಮಗಳಿಗೆ, ಹೀಗೆ ಅದು ಹರಿದು ಬರುವಂತಾದ್ದು. ಹಾಗಾಗಿ ಆ ಒಂದು ಸಂಪರ್ಕಕ್ಕೆ ತಾಗದ ದೋಷವಾದರೆ ಆಗ ಅದನ್ನು ಸುಲಭದಲ್ಲಿ ಪರಿಹರಿಸಲು ಸಾಧ್ಯವಾಗುತ್ತದೆ. ಕೆಲವೊಂದು ಮನೆಯಲ್ಲಿ ಒಬ್ಬರಿಗಾದರೂ ಹುಚ್ಚು ಇದ್ದೇ ಇರುತ್ತದೆ. ಅವರೇನೂ ಸೋದರಿಕೆಯಲ್ಲಿ ಮದುವೆಯಾಗುವ ವಂಶವಲ್ಲ. ಅದು ಹಲವು ತಲೆಮಾರಿನಿಂದ ನಡೆದುಕೊಂಡು ಬರುತ್ತಿದೆ. ಅದನ್ನು ಪರಿಹರಿಸುವುದಕ್ಕೆ ಮಾತ್ರ ಈ ಸೋದರಮಾವನ ಮಗಳನ್ನೇ ಮದುವೆಯಾಗುವುದು ಖಂಡಿತಾ ಪರಿಹಾರೋಪಾಯ. ಏಕೆಂದರೆ ಆ ಮಾನಸಿಕ ಪ್ರವೃತ್ತಿಯಲ್ಲಿ, ತಾಯಿಯಿಂದ ಕೊಡಲ್ಪಟ್ಟ ಮಾನಸಿಕ ಪ್ರವೃತ್ತಿಯೇ ಬೇರೆ, ತಂದೆಯಿಂದ ಕೊಡಲ್ಪಡುವ ಮಾನಸಿಕ ಪ್ರವೃತ್ತಿಯೇ ಬೇರೆ. ಇಲ್ಲಿ ತಾಯಿಯಿಂದ ಮಗನೆಂದಾಗ ಸೋದರಮಾವನ ಅಂಶದಿಂದ ಎಂದಾಗುತ್ತದೆ. ಅದೇ ಅವನ ಮಗಳೆಂದಾಗ ಆ ಅಂಶವು ಸಮಾನವಾಗುತ್ತದೆ. ಆಗ ಅವರಿಬ್ಬರಿಗೆ ಮದುವೆ ಮಾಡಿದಾಗ ಆ ಹುಚ್ಚು ಎಂಬ ಪ್ರವೃತ್ತಿಯು ಸ್ಥಂಭಿಸಲ್ಪಟ್ಟು ಮುಂದೆ ಅವರಿಗೆ ಹುಟ್ಟುವ ಮಕ್ಕಳಲ್ಲಿ ಆ ಹುಚ್ಚು ಪ್ರವೃತ್ತಿ ಇರುವುದಿಲ್ಲ. ಹಾಗಾಗಿ ಸೋದರಿಕೆ ಸಂಬಂಧವು ಕೆಲವೊಂದು ಸಮಸ್ಯೆಗೆ ಪರಿಹಾರ, ಕೆಲವೊಂದು ಸಂದರ್ಭಗಳಲ್ಲಿ ಸಮಸ್ಯೆ ಆಗಬಹುದು. ಆದರೆ ಸರಿಯಾದ ಚಿಂತನೆ ಮಾಡಿ ನಮಗೀಗ ಏನು ಸಮಸ್ಯೆಯಿದೆ? ಅದಕ್ಕೆ ಯಾವ ರೀತಿ ಪರಿಹಾರ ತೆಗೆದುಕೊಳ್ಳಬಹುದು ಎಂಬುದನ್ನು ಚಿಂತಿಸಿ ಆ ರೀತಿಯಲ್ಲಿ ಮದುವೆಯಾದರೆ ಖಂಡಿತಾ ಪರಿಹಾರವಿದೆ.

No comments:

Post a Comment