Saturday, 13 April 2013

ಮದುವೆ ಪ್ರಶ್ನೋತ್ತರಗಳು ಭಾಗ - ೩ - ಜನ್ಮಾಂತರ ದಾಂಪತ್ಯ, ಪ್ರೇಮ ವಿವಾಹ, ಗಣ-ಕೂಟ, ವಿವಾಹಾರ್ಹತೆ

ಮದುವೆಯಾದ ದಂಪತಿಗಳು ಏಳೇಳು ಜನ್ಮಕ್ಕೂ ಅವರೇ ದಂಪತಿಗಳಾಗುತ್ತಾರೆ ಎಂಬುದು ನಿಜವೇ? ಅದೇ ಸ್ತ್ರೀಪುರುಷರೇ ಇರುತ್ತಾರಾ? ಅಂದರೆ ಸ್ತ್ರೀಯು ಸ್ತ್ರೀಯೇ ಆಗಿ ಪುರುಷನು ಪುರುಷನೇ ಆಗಿ ಮದುವೆಯಾಗುತ್ತಾರಾ ಅಥವಾ ಅದಲು ಬದಲಾಗಿ ಮದುವೆಯಾಗುತ್ತಾರಾ?

          ಸಾಮಾನ್ಯವಾಗಿ ಪ್ರಕೃತಿಯ ಅಂಶವು ಪ್ರಕೃತಿಯಾಗಿಯೇ ಉಳಿಯುತ್ತದೆ, ಪುರುಷಾಂಶವು ಪುರುಷವಾಗಿಯೇ ಉಳಿಯುತ್ತದೆ. ಬದಲಾವಣೆ ಸಾಮಾನ್ಯವಾಗಿ ಆಗುವುದಿಲ್ಲ. ಆದ ಉದಾಹರಣೆಗಳು ಬಹಳ ಕಡಿಮೆ. ಇನ್ನು ಅಪವಾದವಿರುತ್ತದೆ. ಅದು ಕೇವಲ ಪಾತ್ರಕ್ಕಾಗಿ, ತಾತ್ಕಾಲಿಕವಾಗಿ, ಏನೇನೋ ಕಾರಣಾಂತರಗಳಿಂದ ಬದಲಾದದ್ದು ಕಂಡುಬರುತ್ತದೆ. ಮಹಾಭಾರತದಲ್ಲಿ ಒಂದು ಉದಾಹರಣೆ ಬರುತ್ತದೆ. ಒಂದು ವರ್ಷ ಅರ್ಜುನ ಶಿಖಂಡಿಯಾಗಿ ಬದಲಾದ. ಹಾಗಂತ ಅರ್ಜುನ ಶಿಖಂಡಿಯಲ್ಲ! ಕಾಲದ ಕಾರಣದಿಂದ ಶಿಖಂಡಿಯಾಗಿ ವ್ಯವಹರಿಸಬೇಕಾಗಿತ್ತು ಅಷ್ಟೆ. ಅದೇ ರಾಮಾಯಣದಲ್ಲೂ ಬರುತ್ತದೆ – ವಾಲಿಯ ತಂದೆ ಹೆಣ್ಣಾದ! ವಾಲಿ-ಸುಗ್ರೀವರನ್ನು ಹೆತ್ತ. ನಂತರ ಗಂಡಾಗಿ ಪರಿವರ್ತನೆಯಾದ. ಅದಕ್ಕೆ ಅದರದ್ದೇ ಆದ ಸಂಬಂಧವುಳ್ಳ ಕಾರಣಗಳು ಇರುತ್ತವೆ. ಅವು ಶಾಶ್ವತವಲ್ಲ. ಅಷ್ಟು ಬಿಟ್ಟರೆ ಯಾವುದೇ ಪ್ರಕೃಿಯೂ ಪುರುಷವಾಗುವುದಿಲ್ಲ, ಯಾವುದೇ ಪುರುಷನೂ ಪ್ರಕೃತಿಯಾಗುವುದಿಲ್ಲ. ಆದರೆ ಭಾವನಾತ್ಮಕವಾಗಿ ಎರಡೂ ಒಂದಾಗುತ್ತವೆ. ಅದೇ ಸಂಸಾರ, ಅದೇ ಪ್ರಪಂಚ ಎಂದು ಹೇಳುತ್ತದೆ. ಪ್ರಕೃತಿಯು ಪ್ರಕೃತಿಯಾಗಿಯೇ ಉಳಿಯುತ್ತದೆ, ಪುರುಷನು ಪುರುಷನಾಗಿಯೇ ಉಳಿದು ಭಾವನಾತ್ಮಕವಾಗಿ ಒಂದಾಗಿ ಅದೇ ಪ್ರಪಂಚದ ವೃದ್ಧಿಗೆ ಕಾರಣವಾಗುತ್ತದೆ. ಇದು ಸಾರ್ವಕಾಲಿಕ ಸತ್ಯ. ಯಾವ ಕಾಲಕ್ಕೂ ಬದಲಾವಣೆಯಾಗುವುದಿಲ್ಲ. ಹಾಗಿದ್ದಾಗ ಏಳೇಳು ಜನ್ಮಕ್ಕೂ ಎನ್ನುವುದು ನಾನು ಎಂದು ಹೆಸರಿಸಿಕೊಂಡಿರುವಷ್ಟು ಕಾಲ. ನಾನು ಬಿಟ್ಟರೆ ಎಲ್ಲವೂ ಒಂದೇ ಆದಾಗ ಏಳೇಳು ಜನ್ಮವೇನು, ಎಪ್ಪತ್ತು ಜನ್ಮಕ್ಕೂ ಅವರೇ ಪತಿ-ಪತ್ನಿಯರು. ಪ್ರಕೃತಿ-ಪುರುಷರೇ ಮದುವೆಯಾಗುವುದು. ಅದರಲ್ಲಿ ನಾನು ಎಂಬ ಹೆಸರಿನ ಆರೋಪವನ್ನು ಇಟ್ಟುಕೊಂಡಾಗ ಮಾತ್ರ ಬೇರೆ. ಇಲ್ಲದಿದ್ದರೆ ಬೇರೆ ಎಲ್ಲಿದೆ? ಅದರಲ್ಲಿ ವ್ಯತ್ಯಾಸವಿಲ್ಲ. ಹಾಗಾಗಿ ಈ ವಾಕ್ಯಗಳೆಲ್ಲ ಬಂತು. ಅಷ್ಟು ಬಿಟ್ಟರೆ ಈ ದಿನ ಮದುವೆಯಾದಂತಹ ಜೋಡಿಗಳು ಅದೇ ಹೆಸರಿನಲ್ಲಿ ಮದುವೆಯಾಗುತ್ತಾರೆ ಎಂದು ಹೇಳುವುದಲ್ಲ. ಅವರಿಬ್ಬರಲ್ಲಿ ಇರತಕ್ಕಂತಹ ಪ್ರಕೃತಿ ಮತ್ತು ಪುರುಷಾಂಶಗಳು ಮುಂದೆಯೂ ಒಂದಾಗುತ್ತವೆ ಎಂಬುದು ಮಾತ್ರ ಸತ್ಯ. ಅವರು ಶಾಶ್ವತವಲ್ಲ, ಯಾವ ಕಾರಣಕ್ಕೂ ಆ ಅಂಶಗಳು ಬದಲಾಗುವುದಿಲ್ಲ. ಹಾಗೆ ಮಾತ್ರ ಇದಸತ್ಯ. ಅದನ್ನೇ ಏಳೇಳು ಜನ್ಮ ಎಂದು ಅರ್ಥೈಸಿದ್ದಾಗಿ ಹೇಳಿರಬಹುದೇ ವಿನಃ ಬೇರೇನೂ ಅಲ್ಲ. ಸಮಾನ ಕರ್ಮಗಳು, ಸಮಾನ ಋಣಗಳು ಬರುತ್ತವೆಯೇ ವಿನಃ ವಿಭಿನ್ನ ಪ್ರಭೇದಗಳು ಯಾವುದೇ ಕಾರಣಕ್ಕೂ ಪುನಃ ಒಂದಾಗುವ ಸಾಧ್ಯತೆ ಇರುವುದಿಲ್ಲ.ಪ್ರೇಮ ವಿವಾಹವನ್ನು ಒಪ್ಪುತ್ತೀರಾ? ಅದು ಹೆಚ್ಚಾಗಿ ವಿಚ್ಛೇದನದಲ್ಲಿ ಪರ್ಯಾವಸಾನಗೊಳ್ಳುತ್ತದೆ ಏಕೆ?

          ಒಂದು ಜೀವಿಯು ಇನ್ನೊಂದು ಜೀವಿಯನ್ನು ಪ್ರೇಮಿಸುವುದು ಅಥವಾ ಪ್ರೀತಿಸುವುದು ಖಂಡಿತಾ ಅಪರಾಧವಲ್ಲ. ಆ ಪ್ರೀತಿಗೆ ಅರ್ಥವಿರಬೇಕು. ಅಲ್ಲಿ ಅರ್ಥವಿದ್ದು ಪ್ರೀತಿಸಿ ಒಂದಾದರೆ ಅಲ್ಲಿ ವಿಚ್ಛೇದನ ಖಂಡಿತಾ ಬರುವುದಿಲ್ಲ. ತಾತ್ಕಾಲಿಕ ಯಾವುದೇ ಆವೇಶ, ಉದ್ವೇಗ ಇವುಗಳಿಂದ ಕೂಡಿ ಮದುವೆಯಾಗುವ ಸಂಕಲ್ಪ ಮಾಡುತ್ತಾರೆ, ಕೊನೆಗೆ ಬೇರೆ ಕಡೆಯಿಂದ ಒತ್ತಡ, ಭಯ ಬರುತ್ತದೆ. ಆಗ ಬದುಕುವುದಕ್ಕೆ ಹೆದರಿ ಎಷ್ಟೋ ಜನ ಊರು ಬಿಟ್ಟು ಓಡಿ ಹೋಗುತ್ತಾರೆ. ಎಲ್ಲೋ ಹೋಗಿ ಮದುವೆಯಾಗುತ್ತಾರೆ. ಆದರೆ ಬದುಕುವುದಕ್ಕೆ ಆಗದೆ ವಿಚ್ಛೇದನ ಪಡೆಯುತ್ತಾರೆ. ಅವರಲ್ಲಿ ಪ್ರೀತಿಯು ಹುಟ್ಟಿದಾಗ ಆ ಪ್ರೀತಿಯನ್ನು ಪೋಷಿಸಬೇಕು. ಆ ಪ್ರೀತಿಯು ನೈಜವಾಗುವಂತೆ ಮಾಡಬೇಕು. ಆಗ ಅವರು ಒಳ್ಳೆಯ ದಾಂಪತ್ಯ ಮಾಡುತ್ತಾರೆ. ಆದರೆ ಇಲ್ಲಿ ಭಯವೇ ಕಾರಣವಾದಾಗ ಹೆದರಿ ಓಡಿ ಹೋಗುತ್ತಾರೆ. ಹೋದ ಮೇಲೆ ಆಶ್ರಯವಿರುವುದಿಲ್ಲ, ಜೀವನ ಕಷ್ಟವಾಗುತ್ತದೆ, ಕಡೆಗೆ ವಿಚ್ಛೇದನಕ್ಕೆ ದಾರಿ ಮಾಡಿಕೊಡುತ್ತದೆ. ಅದಕ್ಕೆ ಕಾರಣರು ಅವರಲ್ಲ, ಸಮಾಜವಾಗಿರುತ್ತದೆ! ಆದ್ದರಿಂದ ಸಮಾಜವು ಅಂತಹಾ ಪ್ರೀತಿಗಳನ್ನು ಗೌರವಿಸಬೇಕು, ಪೋಷಿಸಬೇಕು. ಪೋಷಿಸಿದರೆ ಅವರಲ್ಲಿ ಖಂಡಿತಾ ವಿಚ್ಛೇದನ ಆಗುವುದಿಲ್ಲ. ನಿಶ್ಚಯಮಾಡಿ ಮದುವೆಯಲ್ಲೂ ಕೂಡ ಸಮಾಜವು ಪೋಷಿಸುವುದರಿಂದ ಯಶಸ್ವಿಯಾಗುತ್ತದೆ. ಒಂದು ವೇಳೆ ಸಮಾಜವು ಇವರಿಗೂ ಪೋಷಣೆ ಕೊಡದಿದ್ದರೆ ಆಗುವುದು ವಿಚ್ಛೇದನವೇ ಅಲ್ಲವೇ?ಜಾತಕ ನೋಡುವಾಗ 36 ಗುಣಗಳು ಸೇರಬೇಕು ಎನ್ನುತ್ತಾರಲ್ಲ, ಆ 36 ಗುಣಗಳು ಯಾವುದು?

          ಈ ವಿಚಾರವಾಗಿ ಹಿಂದೆಯೇ ತಿಳಿಸಲಾಗಿದೆ. ವರನು ಪರಿಪೂರ್ಣನಾದರೆ ಆಗ ಈ ೩೬ ಗುಣಗಳು ಸೇರುವುದು ಬೇಡ. ವರನಲ್ಲಿ ಕೆಲವೊಂದು ಅನರ್ಹತೆಗಳಿದ್ದರೆ ಆಗ ಪೂರಕಬಲ ನೋಡುವ ದೃಷ್ಟಿಯಿಂದ ಈ ರೀತಿಯ ಹೊಂದಾಣಿಕೆ ಮಾಡಿಕೊಳ್ಳುವುದು. ವರನದ್ದು ರಾಕ್ಷಸಗಣವಾದರೆ ವಧುವಿನದ್ದು ಸಮಾನಗಣವಾಗಬೇಕು, ಅಥವಾ ಪೂರಕಗಣವಾಗಬೇಕು. ಆಗ ಹೇಗೋ ಹೊಂದಿಕೊಂಡು ಹೋಗುತ್ತದೆ. ಹೀಗೆ ಬೇರೆ ಬೇರೆ ಗಣ, ನಾಡಿ, ಯೋನಿ, ಇತ್ಯಾದಿ ಕೂಟಗಳನ್ನು ಗಣಿಸಿ ಇಂತಿಂತಹ ಯೋಗಗಳಿದ್ದರೆ ಈ ರೀತಿಯಲ್ಲಿ ಪೂರಕವಾಗಿ ಹೊಂದಿಕೊಂಡು ಹೋಗಲು ಸಾಧ್ಯ ಎನ್ನುವುದು ಜ್ಯೋತಿಷ್ಯ ರೀತ್ಯಾ ಮತ್ತು ನಕ್ಷತ್ರಾಧಾರಿತವಾಗಿ ಇಂತಹ ನಕ್ಷತ್ರದಲ್ಲಿ ಹುಟ್ಟಿದವಿಗ ಇಂತಹ ಪ್ರವೃತ್ತಿಯಿರುತ್ತದೆ ಎನ್ನುವ ಆಧಾರದಲ್ಲಿ ಗುರುತಿಸಿದ್ದಾರೆ. ಆದರೆ ಅದು ಪರಿಪೂರ್ಣ ಖಂಡಿತವಾಗಿಯೂ ಅಲ್ಲ. ಜಾತಕ ನೋಡಿ ಮದುವೆ ಮಾಡಿದ್ದು ಖಂಡಿತವಾಗಿ ಯಶಸ್ವಿಯಾಗುತ್ತದೆ ಎಂಬ ಕಲ್ಪನೆಯನ್ನೇ ಬಿಡಿ. ಅದು ಪೂರಕ ಮಾತ್ರ! ಹುಡುಗನಿಗೆ ಪರಿಪೂರ್ಣ ಅನರ್ಹತೆ ಇದ್ದರೆ ಈ ರೀತಿಯ ಕೆಲ ಪರಿಪೂರ್ಣತೆಗಳನ್ನು ಸೇರಿಸಿಕೊಂಡರೆ ಸಹಾಯವಾಗಬಹುದು ಎನ್ನುವುದಕ್ಕೆ ಜಾತಕ ನೋಡುವುದು ಬಂದಿರುತ್ತದೆ. ಅರ್ಹತೆಯನ್ನು ಕೊಡುವುದಕ್ಕೆ ಬರುವುದಿಲ್ಲ. ಕೇವಲ ಅನರ್ಹತೆ ಅಥವಾ ಅರ್ಹ ಎಂಬುದನ್ನು ಮಾತ್ರ ಗುರುತಿಸಲು ಜಾತಕ ನೋಡುವುದು. ಈ ರೀತಿ ನೋಡಿಯೂ ಮದುವೆಯು ಯಶಸ್ವಿಯಾಗದಿದ್ದಲ್ಲಿ ಅದಕ್ಕೆ ಜ್ಯೋತಿಷಿಯೊ ಅಥವಾ ಮದುವೆ ಮಾಡಿಸಿದ ಪುರೋಹಿತನೋ ಜವಾಬ್ದಾರನಲ್ಲ. ಹಾಗಾಗಿ ಆ ೩೬ ಗುಣಗಳು ಎಂಬ ಕಲ್ಪನೆ ತೀರಾ ಬಾಲಿಶ. ಅಂತಹ ಮಹತ್ವವೇನೂ ಇಲ್ಲ. ಪೂರಕತೆಯಲ್ಲಿ ಎಲ್ಲಿ ಕೊರತೆಯಿದೆ ಎಂದು ನೋಡಿ ಅದನ್ನು ಪೂರೈಸಿದರೆ ಅದು ಯಶಸ್ವಿಯಾಗಬಹುದು ಎನ್ನುವಷ್ಟು ಮಟ್ಟಿಗೆ ಮಾತ್ರ ಜಾತಕ ನೋಡಬೇಕು. ಪೂರ್ಣ ಪ್ರಯೋಜನಕಾರಿಯಲ್ಲ!ಹಾಗಿದ್ದರೆ ಗಂಡಿನಲ್ಲಿ ಮತ್ತು ಹೆಣ್ಣಿನಲ್ಲಿ ಇರಬೇಕಾದ್ದ ಅರ್ಹತೆಗಳೇನು?

          ಮೊತ್ತಮೊದಲಾಗಿ ಗಂಡಿಗೆ ವಿಧ್ಯೆಯಿರಬೇಕು, ವಿನಯವಿರಬೇಕು, ಹಾಗೆ ತಾನು ಪ್ರಪಂಚಕ್ಕಾಗಿ ಈ ಭೂಮಿಯಲ್ಲಿ ಹುಟ್ಟಿಬಂದವನು, ತನಗಾಗಿಯಲ್ಲ ಎಂಬ ಸ್ಪಷ್ಟಜ್ಞಾನವನ್ನು ಹೊಂದಿರಬೇಕು. ಸುತ್ತಿನ ಸಮಾಜವನ್ನು ಪೋಷಿಸುವ ರೀತಿಯಲ್ಲಿ ತನ್ನ ಜೀವನವನ್ನು ರೂಪಿಸಿಕೊಂಡು ನಾನು ಅಭಿವೃದ್ಧಿಯನ್ನು ಸಾಧಿಸುತ್ತೇನೆ ಎನ್ನುವ ಕಲ್ಪನೆಯಲ್ಲಿದ್ದರೆ ಐದನೆಯದಾದ ಆತ್ಮೋದ್ಧಾರ ಸಾಧನೆಗೆ ಸಹಾಯವಾಗುತ್ತದೆ. ಹಾಗಾಗಿ ಪುರುಷಾರ್ಥ ಸಾಧನೆಗಾಗಿ ಮದುವೆಯಾಗುತ್ತಿದ್ದೇನೆ ಎಂಬ ಸ್ಪಷ್ಟ ಕಲ್ಪನೆ ವರನಿಗಿದ್ದರೆ ವಿವಾಹಾರ್ಹತೆಯು ಬರುತ್ತದೆ. ಅದಕ್ಕೆ ಅನುರೂಪ, ಅಂದರೆ ಮದುವೆಯಾಗತಕ್ಕಂತಹ ಹುಡುಗಿಯೂ ಕೂಡ ಅದಕ್ಕೆ ಅನುರೂಪಳಾಗಿದ್ದರೆ ಹುಡುಗಿಗೆ ಅರ್ಹತೆ ಬರುತ್ತದೆ.

ಉದಾ:- ಗಂಡ ಒಂದು ಸಣ್ಣ ವಿಲೇಜ್ ಅಕೌಂಟೆಂಟೆ ಕೆಲಸಕ್ಕೆ ಹೋಗುತ್ತಿರುತ್ತಾನೆ. ಸಂಬಳ ಸಾಕಾಗುವುದಿಲ್ಲ, ಹೆಂಡತಿಯು ಅವನಿಗೆ ಆಗಾಗ ನೀವೇನ್ರಿ, ಲಂಚ ತೆಗೆದುಕೊಳ್ಳುವುದಿಲ್ಲ, ಮನೆಯನ್ನು ಕಟ್ಟುವುದು ಯಾವಾಗ? ಅಲ್ಲಿ ಎರಡು ಸೈಟು ಮಾಡುವುದು ಯಾವಾಗ? ಕಾರು ತೆಗೆದುಕೊಳ್ಳುವುದು ಯಾವಾಗ? ಇತ್ಯಾದಿಯಾಗಿ ಸದಾ ಕೇಳುತ್ತಿದ್ದರೆ, ಅದು ಅನುರೂಪವಲ್ಲ. ಬರುವ ಸಂಬಳದಲ್ಲೇ ಹಂಚಿ ತಿಂದು ಬದುಕುವ ಗುಣ ಯಾರಿಗಿರುತ್ತದೊ, ಅವಳು ಅನುರೂಪಳೆಂದು ಹೇಳುತ್ತಾರೆ. ಒಂದು ವೇಳೆ ಗಂಡ ಲಂಚ ತೆಗೆದುಕೊಳ್ಳುತ್ತಾನೆ ಎಂಬ ಅಂಶದ ಸೂಕ್ಷ್ಮ ಸಿಕ್ಕಿದರೂ ಮೊದಲು ಗಂಡನನ್ನು ಶಿಕ್ಷಿಸಬೇಕಾದ್ದು ಹೆಂಡತಿಯ ಕೆಲಸವೆಂದು ಹೇಳುತ್ತದೆ. ಏಕೆಂದರೆ ಗಂಡ ತಪ್ಪು ದಾರಿಗೆ ಹೋಗುತ್ತಿದ್ದ ಎಂದು ಮೊದಲು ಶಿಕ್ಷಿಸಬೇಕು. ಹೆಂಡತಿಯನ್ನು ಧರ್ಮವೆಂದು ಹೇಳುತ್ತದೆ. ಗಂಡನು ಅಧರ್ಮಕ್ಕೆ ಹೋಗುವುದನ್ನು ತಪ್ಪಿಸಿ ಸರಿದಾರಿಗೆ ಕೊಂಡು ಹೋಗುವುದು ಹೆಂಡತಿಯ ಧರ್ಮ ಮತ್ತು ಕರ್ತವ್ಯ. ಹೀಗೆ ಹಲವು ವಿಚಾರಗಳಲ್ಲಿ ಅನುರೂಪಳಾಗುವ ಹೆಣ್ಣು – ಪತ್ನಿಯಾಗುತ್ತಾಳೆ. ಇದನ್ನು ಹೊಂದಿಕೊಂಡರೆ ಸಾಕಾಗುತ್ತದೆ.

1 comment: