Tuesday, 16 April 2013

ಮದುವೆ ಪ್ರಶ್ನೋತ್ತರಗಳು - ಭಾಗ - ೫ - ವಂಶಾಭಿವೃದ್ಧಿ, ವಯೋ ವ್ಯತಾಸಕ್ಕೆ ರೇವತಿ ಶಾಂತಿ, ಪ್ರೇತವಿವಾಹ, ಕುಜದೋಷ, ಏಕ-ಸಾಂಘಿಕ ವಿವಾಹ, ಮಾಂಗಲ್ಯಧಾರಣೆ, ಸಪ್ತಪದಿ

ಮದುವೆ ಮಾಡಿಕೊಳ್ಳಲಿಕ್ಕೆ ಅರ್ಹತೆ ಇಲ್ಲದವರು ದೇಶಸೇವೆ, ತೀರ್ಥಯಾತ್ರ ಮಾಡಲಿ ಎಂದು ಹೇಳಿದಿರಿ. ಅವರು ತೀರಿ ಹೋದ ನಂತರ ವಸುರುದ್ರಆದಿತ್ಯ ಸ್ವರೂಪಗಳ ಗತಿಯೇನು? ವಂಶವು ನಿರ್ವಂಶ ಆಗುತ್ತದೆ ಅದರ ಪರಿಹಾರವೇನು?
          ಈ ವಿಚಾರವನ್ನಿಟ್ಟೇ ಎಲ್ಲರಿಗೂ ಮದುವೆಯ ಪ್ರಯತ್ನ ಮಾಡುವುದು. ವಂಶವು ನಿರ್ವಂಶವಾಗುವುದು ಕೇವಲ ಕಲ್ಪನೆ. ವಂಶವು ನಿರ್ವಂಶ ಆಗುವುದಿಲ್ಲ. ಪ್ರತಿಯೊಬ್ಬ ತಂದೆಯೂ ತನ್ನ ವಂಶ ಬೆಳೆಯಬೇಕೆಂದು ತನ್ನ ಮಗನಿಗೆ ಮಗನಾಗಿ ಹುಟ್ಟುವ ಪ್ರಯತ್ನ ಮಾಡುತ್ತಾನೆ. ಆದರೆ ಈಗ ತಮ್ಮನಿಗೆ ಮಗುವಾಯ್ತಲ್ಲ ಎಂದು ಅಣ್ಣ ಸಂಕಟ ಪಡುತ್ತಾನೆ; ಅದು ಸಮಸ್ಯೆ. ವಂಶವು ಅಷ್ಟು ಸೂಕ್ಷ್ಮವಾಗಿಲ್ಲ. ನಾವು ಮಾತ್ರ ಅದನ್ನು ತೀರಾ ಸಣ್ಣಮಟ್ಟದಲ್ಲೇ ಇಟ್ಟಿದ್ದೇವೆ. ನಮ್ಮ ವಂಶ ಇಷ್ಟೆ, ನಾನು ನನ್ನ ಅಪ್ಪ, ನನ್ನ ಮಗ; ಇಷ್ಟೆ! ಇದರಲ್ಲಿ ಸ್ವಂತ ಅಣ್ಣತಮ್ಮಂದಿರು ಬರುವುದಿಲ್ಲ ಎನ್ನುತ್ತಾರೆ ಈಗಿನ ಜನ. ಆದರೆ ಇದು ವಂಶವಲ್ಲ. ನಮ್ಮ ವಂಶವು ಎಷ್ಟೂ ವಿಸ್ತಾರವಾಗಿರಬಹುದು. ಅಲ್ಲಿ ಎಲ್ಲಿಯೂ ಮಕ್ಕಳಾಗಿಲ್ಲ ಎಂಬುದು ನಿಸ್ಸಂತತಿಯಾಯ್ತು ಎಂಬುದು ಲೆಕ್ಕ. ಅದು ಅಷ್ಟು ಸುಲಭದಲ್ಲಿ ಆಗುವುದಿಲ್ಲ. ಅವೆಲ್ಲ ತೀರಾ ಬಾಲಿಶ! ಹೇಳಿಕೊಳ್ಳುವುದಕ್ಕೆ ಮಾತ್ರ. ತಮ್ಮನಿಗೋ ಅಣ್ಣನಿಗೋ ಮಕ್ಕಳಾಗಿರುತ್ತದೆ, ನೀವದನ್ನು ಲೆಕ್ಕಕ್ಕೆ ತೆಗೆದುಕೊಂಡಿರುವುದಿಲ್ಲ.
ಅದಕ್ಕಾಗಿ ೧೨ ಪಿತೃವರ್ಗವನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದು. ಅದನ್ನು ಅರ್ಥಮಾಡಿಕೊಳ್ಳಿ. ಇನ್ನು ಮೃತಾ ನಂತರದ ವಸುರುದ್ರಆದಿತ್ಯಗಳ ಸ್ವರೂಪ ಚಿಂತನೆ. ಅದು ಗೃಹಸ್ಥನಿಗೆ ಸಂಬಂಧಪಟ್ಟಿದ್ದು, ಸ್ನಾತಕನಿಗಲ್ಲ! ಸ್ನಾತಕನು ನೇರವಾಗಿ ಮೂರೂ ಹಂತಗಳನ್ನು ದಾಟಿಬಿಡುತ್ತಾನೆ. ಸ್ನಾತಕ ವೃತಧಾರಿಯಾಗಿ ಸಮಾಜ ಸೇವಾ ನಿರತನಾಗಿಯೇ ಮೃತನಾದರೆ ಸಹಜವಾಗಿ ಆದಿತ್ಯ ಸ್ವರೂಪವನ್ನು ಸೇರುತ್ತಾನೆ. ಅಲ್ಲಿ ವಸುರುದ್ರ ಸ್ವರೂಪಗಳ ಸಂಬಂಧವೇ ಇರುವುದಿಲ್ಲ. ಇದು ಕೂಡ ಧರ್ಮಶಾಸ್ತ್ರ ಹೇಳತಕ್ಕಂತಹ ನಿರ್ಣಯ! ಆ ಸಂಪರ್ಕಕ್ಕೆ ಅವನು ಬರುವುದೇ ಇಲ್ಲ. ಅದಕ್ಕಾಗಿಯೇ ಸ್ನಾತಕವೃತ ಕೊಟ್ಟು ದೇಶಸೇವೆಗೆ ಕಳಿಸುವಂತಾದ್ದು.

೨೦ ವರ್ಷದ ಹುಡುಗಿ ೪೫ ವರ್ಷದ ಹುಡುಗ ಮದುವೆಯಾದರೆ ಸಂಜವೇ?
          ಸಹಜ ಸಾಮಾಜಿಕ ಪ್ರಾಪಂಚಿಕ ಜೀವನ ವ್ಯವಸ್ಥೆಯಲ್ಲಿ ಸಾಮಾನ್ಯ ವೈಜ್ಞಾನಿಕವಾಗಿ ಹುಡುಗಿಯ ವಯಸ್ಸು ಹುಡುಗನಿಗಿಂತ ೫-೭ ವರ್ಷದಷ್ಟು ಕ್ಷಿಪ್ರ ಬೆಳವಣಿಗೆ ಹೊಂದಿರುತ್ತಾಳೆ ಎಂದು ಹೇಳುತ್ತದೆ. ಆದ್ದರಿಂದ ಅಷ್ಟು ವ್ಯತ್ಯಾಸವಿದ್ದರೆ ಸಾಕು. ಹುಡುಗನಿಗೆ ೧೭ ಆದರೆ ಹುಡುಗಿಗೆ ೧೦ ಎಂದು ಲೆಕ್ಕ. ಅಷ್ಟು ವ್ಯತ್ಯಾಸ ಇರಬೇಕು ಎಂದು ಹೇಳುತ್ತದೆ. ಆದರೆ ವಯಸ್ಸು ಹೆಚ್ಚಾದಾಗ ಮದುವೆಯಾದರೆ ಪ್ರಾಪಂಚಿಕ ಜೀವನ ಅಥವಾ ಗೃಹಸ್ಥಾಶ್ರಮ ಸ್ವೀಕಾರವಾಗುವುದಿಲ್ಲ ಎಂದಲ್ಲ. ಗೃಹಸ್ಥಾಶ್ರಮ ಸ್ವೀಕಾರ ಮಾಡಲು ಖಂಡಿತವಾಗಿ ಆಗುತ್ತದೆ ಮತ್ತು ಅಲ್ಲಿರುವ ತಿಳುವಳಿಕೆಗಳ ಪರಸ್ಪರ ಹಂಚುವಿಕೆಗಾಗಿ ರೇವತೀ ಶಾಂತಿ ಎಂಬುದಿದೆ. ಹುಡುಗಿಯ ವಯಸ್ಸು ಜಾಸ್ತಿಯಾಗಿದೆ, ಅವಳಿಗೆ ಜೀವನಾನುಭವ ಜಾಸ್ತಿಯಾಗಿದೆ, ಅದನ್ನು ವರನಿಗೆ ಹಂಚುವುದಕ್ಕೆ ಬೇಕಾಗಿ ರೇವತೀ ಶಾಂತಿಯನ್ನು ಮಾಡಬೇಕು. ಆ ಶಾಂತಿಯ ಮುಖೇನ ಅವರು ಪರಿಹರಿಸಿಕೊಂಡು ಸಮರ್ಥವಾಗಿ ಬಾಳಬಹುದು. ಅಂತಹ ಜೋಡಿಗಳು ಬಾಳಿದ ಹಲವು ಸಾವಿರ ಉದಾಹರಣೆಗಳಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರೇತವಿವಾಹ ಎಂದು ಮಾಡುತ್ತಾರೆ. ಮದುವೆಯಾಗದ ಸತ್ತ ಹುಡುಗ ಅಥವಾ ಹುಡುಗಿಗೆ ದೈವದ ಎದುರಿಗೆ ಕೆಲ ಪ್ರಕ್ರಿಯೆ ಮಾಡುತ್ತಾರೆ. ಅದೇನು ಎಂಬ ವಿಚಾರಗಳನ್ನು ತಿಳಿಸಿಕೊಡಿ.
          ಇವೆಲ್ಲ ಸಹಜ ಕೌಟುಂಬಿಕ ವ್ಯವಸ್ಥೆಯಲ್ಲಿನ ಕೆಲವೊಂದು ಕಲ್ಪನಾ ವಿಲಾಸಗಳು ಎಂದು ಹೇಳುತ್ತೇವೆ. ಯಾವುದು ಪ್ರತ್ಯೇಕವಾಗಿ ಉಳಿಯತಕ್ಕಂತಹ ವಿಚಾರಗಳಿವೆ, ಜಿಜ್ಞಾಸೆಗಳಿವೆ ಅಥವಾ ಆತ್ಮವಿದೆ, ಅದು ಪ್ರೇತವೆನ್ನಿಸಿಕೊಳ್ಳುತ್ತದೆ. ಯಾವುದನ್ನು ಇನ್ನೊಂದಕ್ಕೆ ಸೇರಿಸಲಾಗುವುದಿಲ್ಲವೋ ಅದು ಪ್ರತ್ಯೇಕವಾಗಿಯೇ ಉಳಿಯುತ್ತದೆ. ಹಾಗೆ ಒಂದು ಕುಟುಂಬ, ತಂದೆ ತಾಯಿ, ನಾಲ್ಕಾರು ಜನ ಮಕ್ಕಳು, ಆ ಮಕ್ಕಳಲ್ಲಿ ಒಬ್ಬ ಅವಿವಾಹಿತನಾಗಿ ಸಾಯುತ್ತಾನೆ, ಸತ್ತಾಗ ಉಳಿದವರಿಗೆ ಮದುವೆಯಾಗುತ್ತಾ ಬಂದಂತೆ ಅಲ್ಲಿರತಕ್ಕಂತಹ ತಾಯಿಗೆ ಸಹಜ ಮಾನಸಿಕವಾಗಿ ಒಬ್ಬ ಮಗ ತೀರಿ ಹೋದ, ಅವನಿಗೂ ಮದುವೆ ಮಾಡಿದ್ದರೆ ಅದರ ಚೆಂದವನ್ನು ಮನತುಂಬಿಕೊಳ್ಳುತ್ತಿದ್ದೆ ಎಂದೆನಿಸುತ್ತದೆ. ಇದು ಮನುಷ್ಯ ಸಹಜ ಆಸೆ, ಅಪರಾಧ ಖಂಡಿತಾ ಅಲ್ಲ. ಈ ಆಸೆಯು ಒಂದು ರೂಪ ಪಡೆಯುತ್ತದೆ. ಇದು ಪ್ರೇತರೂಪವಾಗಿ ಕಾಡಲು ಆರಂಭಿಸುತ್ತದೆ. ಈ ಆಸೆಯು ಹುಟ್ಟುವುದು ಸಹಜವಾಗಿ ತಾಯಿಯಲ್ಲಿ. ಬೇರೆ ಯಾರಿಗೂ ಇದರ ಬಗ್ಗೆ ಗಮನ ಬರುವುದಿಲ್ಲ. ಇದು ಪ್ರತ್ಯೇಕವಾಗಿ ಉಳಿಯತಕ್ಕಂತಹ ಒಂದು ವಿಚಾರ ಮಾತ್ರ, ಅದು ಪ್ರೇತ ಎನಿಸಿಕೊಳ್ಳುತ್ತದೆ. ಈ ಕಲ್ಪನೆಯು ಅಪರಾಧವಲ್ಲ ಆದ್ದರಿಂದ ಅದಕ್ಕೆ ಪರಿಹಾರೋಪಾಯವನ್ನು ಆ ರೀತಿಯಲ್ಲಿ ಮೃತಿ ಹೊಂದಿದ ಯಾವುದಾದರು ಕನ್ಯೆಯಿದ್ದರೆ ಅವುಗಳಿಗೆ ವಿವಾಹ ಪ್ರಕ್ರಿಯೆಗಳನ್ನು ನಡೆಸುವುದರಿಂದ ಈ ದೋಷಗಳನ್ನು ಪರಿಹರಿಸಬಹುದು ಎಂದು ಅದಕ್ಕೊಂದು ಪರಿಹಾರೋಪಾಯವನ್ನು ಸೂತ್ರಕಾರರು ಕಂಡುಹಿಡಿದರು. ತಾಯಿಯ ಕಲ್ಪನೆಯ ಸದಂಶವನ್ನು ಸದ್ವಿನಿಯೋಗ ಮಾಡುವ ಒಂದು ವಿಚಾರವನ್ನು ಬಳಕೆಗೆ ತಂದರು. ಅದೇ ಪ್ರೇತವಿವಾಹ. ಹಾಗಾಗಿ ಅದು ಪ್ರೇತವಿವಾಹ ಪ್ರಕ್ರಿಯೆ ಎನಿಸಿದೆ. ಅದರ ವಿಧಾನವೂ ಇದೆ. ಎಲ್ಲವೂ ಪ್ರೇತವಲ್ಲ. ಹಾಗೆ ಎಲ್ಲಾ ವಿಚಾರಗಳನ್ನೂ ಚಿಂತಿಸಬೇಕು. ಯಾವುದ ಸದಂಶ, ಯಾವುದು ಸಹಜವಾಗಿ ಬರತಕ್ಕಂತಹದ್ದು, ಅದಕ್ಕೆ ಆಧರಿಸಿ ಒಂದೇ ರೀತಿಯಲ್ಲ ಹಲವಾರು ವಿಧಿಗಳಿವೆ. ಅವುಗಳಿಗ ಪರಿಹಾರವನ್ನು ರೂಪಿಸಬಹುದು. ಅದು ಭವಿಷ್ಯದಲ್ಲಿ ಸದಂಶವನ್ನು ಪೋಷಿಸಿದ್ದು, ಮುಂದೆ ಅಂತಹ ಘಟನೆಗಳು ಘಟಿಸದಂತ ಅಂದರೆ ತಂದೆತಾಯಿಗಳು ಬದುಕಿದ್ದಾಗಲೇ ಮಕ್ಕಳು ಸಾಯುವಂತಹ ದುರ್ಘಟನೆ ಆಗದಿರುವಂತೆ ತಡೆಯಲು ಸಾಧ್ಯವಾಗುತ್ತದೆ. ಅದಕ್ಕಾಗಿ ಅಂತಹಾ ಪ್ರಕ್ರಿಯೆಗಳಿಗೆ ಪೂರಕತೆಯಿದೆ.

ಹುಡುಗ ಅಥವಾ ಹುಡಿಗಿಗೆ ಕುಜದೋಷ ಇದ್ದರೆ ಅದು ವಿವಾಹ ಪ್ರತಿಬಂಧಕವೇ? ಪರಿಹಾರವೇನು?
          ಕುಜದೋಷ ಎಂಬುದು ಜ್ಯೋತಿಷ ರೀತ್ಯಾ ಹೇಳತಕ್ಕಂತಹ ಒಂದು ವಿಚಾರ. ಕುಜ ಎಂದರೆ ಭೂಮಿ ಪುತ್ರ ಎಂದು ಹೇಳುತ್ತದೆ. ಭೂಮಿಯೆಂದರೆ ಕರ್ಮಭೂಮಿಯೆಂದು ನಿಮಗೆ ಗೊತ್ತಿರಬಹುದು. ಕರ್ಮಭೂಮಿಯ ಪುತ್ರವೆಂದರೆ ಕರ್ಮ. ಕುಜದೋಷವಿರುವ ಕನ್ಯೆಯೆಂದರೆ ಅವಳಿಗೆ ಕರ್ಮದ ಪ್ರತಿಬಂಧಕವಿರುವ ಕನ್ಯೆ ಎಂದರ್ಥ. ಅವಳು ಕರ್ಮದ ಪ್ರತಿಬಂಧಕ ಇರುವವರನ್ನೇ ಮದುವೆಯಾದರೆ ಸಮಸ್ಯೆಯಿಲ್ಲ. ಅದಕ್ಕಾಗಿ ಇಬ್ಬರಲ್ಲೂ ಕುಜದೋಷ ಸಮಾನವಿರಬೇಕು ಎಂದು ಹೇಳುತ್ತಾರೆ. ಕುಜದೋಷ ಇರತಕ್ಕಂತಹ ಕನ್ಯೆಯು ಗೃಹಿಣಿಯಾಗಲಿಕ್ಕೆ ಅನರ್ಹಳು ಎಂದು ಅರ್ಥವಲ್ಲ. ಅವಳಿಗೆ ಇರತಕ್ಕಂತಹ ಕರ್ಮಪ್ರತಿಬಂಧಕ ಎಷ್ಟು? ಅಷ್ಟನ್ನೇ ಹೊಂದಿದ ವರನಿಗೆ ಹೊಂದಿಸಿದರೆ ಅವರದ್ದು ಸಮೃದ್ಧ ಜೀವನ. ವನಲ್ಲಿ ಏನೂ ಇಲ್ಲ ಕಡಿಮೆಯಿದೆ, ವುವಿನಲ್ಲಿ ಕರ್ಮಪ್ರತಿಬಂಧಕ ಜಾಸ್ತಿ ಇದ್ದರೆ ಆಗ ವಿಪ್ಲವಗಳಾಗಲು ಸಾಧ್ಯ. ಅದಕ್ಕೆ ಸಮಾನತೆಯನ್ನು ಗುರುತಿಸುವುದಕ್ಕಾಗಿ ವಿವಾಹಕ್ಕೆ ಕುಜದೋಷವನ್ನು ಗಣಿಸಬೇಕು ಎಂದು ಹೇಳುತ್ತಾರೆ. ಜಾತಕವನ್ನು ಈ ರೀತಿ ಸಮ್ಮೇಳನ ಮಾಡಿ ನೋಡುವುದಕ್ಕೆ ಬಳಸಬೇಕು ಎಂದು ಹೇಳಿದ್ದು.

ಏಕ ವಿವಾಹಕ್ಕೂ ಸಾಂಘಿಕ ವಿವಾಹಕ್ಕೂ ವ್ಯತ್ಯಾಸವೇನು?
          ಎಲ್ಲಾ ವಿವಾಹಗಳೂ ಮಾನ್ಯ. ಅದರಲ್ಲಿ ಸಾಮಾನ್ಯ ಶ್ರೇಷ್ಠ ಎಂಬುದಿಲ್ಲ. ಹಿಂದೆ ಹೇಳಿದ ೮ ವಿವಾಹ ಪ್ರಕ್ರಿಯೆಗಳೂ ಶಾಸ್ತ್ರೀಯವೆ, ಧರ್ಮಬದ್ಧವೇ ಆಗಿರುತ್ತದೆ. ಆದರೆ ಸಾಧ್ಯವಾದಷ್ಟು ಹೆಚ್ಚು ಆಚರಣೆಯನ್ನು ಅಲ್ಲಿ ಹೇಳಿದಂತಹ ವಿಧಿಗಳನ್ನು ಮಾಡಿಕೊಂಡು ಬರುವುದರಿಂದಾಗಿ ಒಂದಷ್ಟು ಧೀಶಕ್ತಿಗಳು ವಧೂವರರಲ್ಲಿ ಬರುವುದು. ವಿವಾಹಕಾಲದಲ್ಲಿ ಅವರಿಗೆ ಒಂದು ಅಯೋಮಯ ಸ್ಥಿತಿ ಇರುತ್ತದೆ. ನಾವು ಬೇರೆ ಯಾವುದೋ ಒಂದು ಹಂತಕ್ಕೆ ಹೋಗುತ್ತಿದ್ದೇವೆ, ನಮಗೇನೋ ಸಮಸ್ಯೆ, ತೊಂದರೆ ಬರಬಹುದು ಎಂದು ಅವರವರೇ ಸಂಕಲ್ಪ ಮಾಡಿದ ಮದುವೆಗಳಲ್ಲಿ ಭಯವಿರುತ್ತದೆ. ಅದನ್ನು ನೀಗುವುದಕ್ಕೆ ಬೇಕಾದ ಮಾನಸಿಕ ಪೂರಕ ಬಲವನ್ನು ಕೊಡುವುದಕ್ಕೆ ಬೇಕಾಗಿ ತುಂಬಾ ಪ್ರಕ್ರಿಯೆಗಳು ಇರುವುದರಿಂದ ಆದಷ್ಟು ಶಾಸ್ತ್ರೀಯವಾಗಿ ಮಾಡಲಿಕ್ಕಾಗದ್ದನ್ನು ಮಾಡಬೇಕು ಎಂದಲ್ಲ, ಎಷ್ಟಾದರೂ ಅದರಲ್ಲಿ ಶಾಸ್ತ್ರೀಯತೆ ಇದ್ದಲ್ಲಿ ಹೆಚ್ಚು ಮಾನಸಿಕ ಬಲ ಬರುತ್ತದೆ. ಆ ಬಲವು ಅವರನ್ನು ಯಾವತ್ತೂ ಬಿಡದಂತೆ ಹಿಡಿದುಕೊಂಡು ಹೋಗುವಂತೆ ದಾರಿ ತೋರಿಸುತ್ತದೆ. ಅದಕ್ಕಾಗಿ ಆದಷ್ಟು ಶಾಸ್ತ್ರೀಯವಾಗಿ ಮದುವೆ ಮಾಡುವುದು ಒಳ್ಳೆಯದು.
          ಯಾರು ಯಾವ ವಿಧಾನದಲ್ಲಿ ಮಾಡಲಿ, ಮತೀಯವಾಗಿ ಮಾಡಲಿ ಅವರು ವಿವಾಹವನ್ನು ಮಾಡುತ್ತಾರೆ. ಎಲ್ಲರೂ ಮದುವೆಯನ್ನು ಡಿಯೇ ಮಾಡುತ್ತಾರೆ. ನಮ್ಮ ಶಾಸ್ತ್ರ ನಮಗೆ ಸರಿಯೆನಿಸುತ್ತದೆ, ಅವರ ಶಾಸ್ತ್ರ ನಮಗೆ ಸರಿಯಲ್ಲ ಎನ್ನಿಸಬಹುದು. ಅಲ್ಲಿಯೂ ಅವರು ಮತೀಯ ಸಿದ್ಧಾಂತ ರೀತ್ಯಾ ಅಳವಡಿಸಿರಬಹುದು. ಅವರೂ ಕೂಡ ನಾವೀಗ ತಪ್ಪು ಗ್ರಿಕೆಯಿಂದ ಮಾಡುವ ಹಾಗೆ ತಪ್ಪಮಾಡುತ್ತಿರಬಹುದು. ಆದರೆ ಶಾಸ್ತ್ರೀಯ ಹಿನ್ನೆಲೆ ಸರಿಯಾಗಿದೆ. ಆಚರಣೆಯಲ್ಲಿ ತಪ್ಪಿರಬಹುದು. ಈಗ ನಮ್ಮಲ್ಲೇ ಮಾಡುವ ಮದುವೆಯಲ್ಲಿ ಎಷ್ಟು ಆಚರಣೆಗಳಲ್ಲಿ ತಪ್ಪು ಮಾಡುತ್ತಿಲ್ಲ? ಹಾಗೆಯೇ ಇತರೆ ಮತೀಯರದ್ದೂ ತಪ್ಪಾಗಿರಬಹುದು. ಅಷ್ಟು ಬಿಟ್ಟರೆ ನಾವು ಮಾಡುವುದೇ ಸರಿ, ಅವರು ಮಾಡುವುದು ತಪ್ಪು ಎಂದು ಹೇಳಿದರೆ ಸರಿಯಾಗಲಾರದು. ಅದಕ್ಕೆ ಯಾವ ಅರ್ಥವೂ ಇಲ್ಲ. ಅವರಲ್ಲೂ ಮತೀಯ ಸಿದ್ಧಾಂತ ರೀತ್ಯಾ ಸಿದ್ಧಾಂತ ದರ್ಶನಕಾರರು ಇಂತಿಂತಹ ರೀತಿಯಲ್ಲಿ ವಿವಾಹ ಆಗಬೇಕು ಎಂದು ರೂಪಿಸಿದ್ದಾರೆ, ಆ ವ್ಯವಸ್ಥೆ ಖಂಡಿತ ನಿಖರ. ಅದನ್ನು ಬಿಟ್ಟು ಆಚರಣೆಯಲ್ಲಿ ತರುವಾಗ ಎಷ್ಟೋ ವ್ಯತ್ಯಾಸಗಳು ಆಗಿರುತ್ತವೆ. ಅವರಲ್ಲೂ ಕೂಡ ಈಗಿನ ವಿವಾಹಗಳು ಅಷ್ಟು ಯಶಸ್ವಿಯಲ್ಲದಿದ್ದರೂ ಅದರ ಮೂಲವನ್ನ ಸಂಶೋಧಿಸಿಕೊಂಡರೆ ಅದೂ ಕೂಡ ಯಶಸ್ವಿ ವಿವಾಹ ಪದ್ಧತಿ ಆಗುತ್ತದೆ. ಒಂದು ವಿವಾಹದ ವಿಧಿವಿಧಾನಗಳನ್ನು ಆದಷ್ಟ ಶಾಸ್ತ್ರೀಯವಾಗಿ ಮಾಡುವಂತಹದ್ದು. ಇನ್ನೊಂದು ವಿದೇಶೀ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗದೇನೇ ನಮ್ಮಲ್ಲಿ ನಾವು ಸಂತೃಪ್ತಿಯ ಜೀವನವನ್ನು ಮಾಡುವುದು. ಈ ೨ ಕಾರಣಗಳಿಂದ ವಿವಾಹ ವಿಚ್ಛೇದನವನ್ನು ಸಂಪೂರ್ಣವಾಗಿ ಭಾರತದಿಂದ ತೊಲಗಿಸಬಹುದು.

ಮದುವೆಯ ಎಲ್ಲ ಪ್ರಕ್ರಿಯೆಗಳು ವೈಜ್ಞಾನಿಕವೇ? ಮಾಂಗಲ್ಯಧಾರಣೆ ಮತ್ತು ಸಪ್ತಪದಿಯ ವೈಜ್ಞಾನಿಕ ವಿವರಣೆ ನೀಡಿರಿ.
          ಮದುವೆಯ ಎಲ್ಲ ವಿಚಾರಗಳಿಗೂ ವೈಜ್ಞಾನಿಕ ಹಿನ್ನೆಲೆ ಇದೆ. ಮಾಂಗಲ್ಯಧಾರಣೆ ಸ್ತ್ರೀಪುರುಷ ಪ್ರಧಾನವಾಗಿ ನ್ಯಾಸರೂಪವಾಗಿ ವುವಿನಲ್ಲಿ ಇಡುವಂತಹ ಒಂದು ಚಿನ್ನ ಅದು ಆಭರಣ ಸ್ವರೂಪದಲ್ಲಿರುತ್ತದೆ. ಆ ಚಿನ್ನವನ್ನು ಧಾತು ಮೂಲವಾಗಿ ವಿಶ್ಲೇಷಿಸಿದಾಗ ಅದು ನಮ್ಮ ದೇಹಕ್ಕೆ ಅತೀ ಅಗತ್ಯವಾದ ಸಹಜ ಪ್ರಾಕೃತಿಕ ಲೋಹದಲ್ಲಿ ದೇಹಕ್ಕಲಭ್ಯವಾಗದ ಒಂದು ಅಂಶ ಚಿನ್ನ. ಆಹಾರದಲ್ಲಿ ಅದು ಪೂರೈಕೆಯಾಗುವುದಿಲ್ಲ. ಬೇರೆ ಎಲ್ಲಾ ಲೋಹದ ಅಂಶಗಳು ಆಹಾರದ ಮುಖೇನ ನಮ್ಮ ದೇಹವನ್ನು ಸೇರುತ್ತವೆ. ಚಿನ್ನವಸ್ತುವು ಆಹಾರದ ರೂಪದಲ್ಲಿ ಪೂರೈಕೆಯಾಗುವುದಿಲ್ಲ. ಚಿನ್ನವು ನಮ್ಮ ದೇಹಕ್ಕೆ ಅನಿವಾರ್ಯ. ಅದಕ್ಕಾಗಿ ಅದನ್ನು ಆಭರಣ ರೂಪದಲ್ಲಿ ದೇಹದಲ್ಲಿ ಧರಿಸಿ ನಮ್ಮ ದೇಹಕ್ಕೆ ಬೇಕಾದಂತಹ ಪೂರೈಕೆಯನ್ನು  ಮಾಡುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಚಿನ್ನವನ್ನು ಧರಿಸುವುದರಿಂದ ಬರತಕ್ಕಂತಹ ಕಾಯಿಲೆಗಳು ಅವರಿಗೆ ಬರುವುದಿಲ್ಲ. ಅದನ್ನು ತಡೆಯುವುದಕ್ಕೂ ಅದಕ್ಕೆ ಸಾಧ್ಯತೆಯಿದೆ. ಹಾಗೆ ಚಿನ್ನದ ಅಂಶವು ಸದಾ ನಮ್ಮ ದೇಹವನ್ನು ಸೇರುತ್ತಾ ಇರುತ್ತದೆ. ಅದು ವೃದ್ಧ್ಯರ್ಥವಾಗಿ ತುಂಬಾ ಸುಲಭದಲ್ಲಿ ಸೇರುತ್ತದೆ. ಹಾಗಾಗಿ ಹೃದಯದ ಮೇಲೆ ಚಿನ್ನವನ್ನು ಧಾರಣೆ ಮಾಡಿ, ನಿಮಗೆ ರೋಗಾದಿಗಳಿಂದ ರಕ್ಷಣೆ ಕೊಡಲು ಸಾಧ್ಯ ಎಂದರು. ಹಾಗಾಗಿ ಅದನ್ನು ಆಭರಣ ರೂಪದಲ್ಲಿ ಧಾರಣೆ ಮಾಡುವ ಪದ್ಧತಿ ಬಂತು. ಅದರಲ್ಲಿ ಸ್ತ್ರೀಯರಿಗೆ ವೃದ್ಧ್ಯರ್ಥವಾಗಿ ಹೃದಯದ ಮೇಲೆ ಆಭರಣ ಇರಬೇಕು. ಏಕೆಂದರೆ ಅವರಲ್ಲಿ ಪ್ರತ್ಯುತ್ಪನ್ನ ಶಕ್ತಿಯಿದೆ. ಹೆಣ್ಣಿಗೆ ತನ್ನಂತೆಯೇ ಸೃಷ್ಟಿ ಮಾಡುವ ಶಕ್ತಿಯಿರುತ್ತದೆ; ಗಂಡಿಗಲ್ಲ. ಹೆಣ್ಣು ಮಾತ್ರ ತನ್ನಂತೆಯೇ ಇನ್ನೊಂದು ಪ್ರತಿರೂಪವನ್ನು ಸೃಷ್ಟಿ ಮಾಡಿ ಪ್ರಪಂಚಕ್ಕೆ ಕೊಡಬಲ್ಲಳು. ಆ ಪ್ರತ್ಯತ್ಪನ್ನ ಶಕ್ತಿಯಿರುವವರಿಗೆ ಆ ಶಕ್ತಿಯನ್ನು ಉಂಟುಮಾಡುವುದು ಚಿನ್ನಲೋಹ. ಹಾಗಾಗಿ ಅವರಲ್ಲಿ ಆ ಅಂಶವು ಹೆಚ್ಚು ಬೇಕಾಗುತ್ತದೆ. ಪುರುಷನಿಗೆ ಅಷ್ಟು ಅಗತ್ಯವಿಲ್ಲ. ಆದರೆ ಹೆಂಗಸರಿಗೆ ಹೆಚ್ಚು ಚಿನ್ನ ಬೇಕು. ಅದಕ್ಕಾಗಿ ಚಿನ್ನ ಧಾರಣೆ ಕಡ್ಡಾಯ ಮಾಡಿದರು. ಹೆಚ್ಚು ಎಂದರೆ ಸಾಧ್ಯವಾದಷ್ಟ ಮೈತುಂಬಾ ಆಭರಣ ಇರುತ್ತೆ. ಒಂದು ವಧುವಿನ ಅಲಂಕಾರವನ್ನು ಹೆಚ್ಚು ಕಡಿಮೆ ೩೦೦ ರೀತಿಯ ಆಭರಣಗಳಿಂದ ಅಲಂಕರಿಸಬಹುದು ಎಂದು ಹೇಳುತ್ತದೆ. ಸಾಲಂಕೃತ ಕನ್ಯಾ ಆಧಾನ ಎಂದು ಹೇಳುತ್ತದೆ. ಅಷ್ಟು ಚಿನ್ನವನ್ನು ಧರಿಸಬೇಕು ಅವಳು ಎಂದರ್ಥ. ಈಗ ಕೊಡಬೇಕು ಎಂದಾಗ ಕಡೆಯಲ್ಲಿ ಬೇಡಿಕೆಯಾದರೆ ಕಷ್ಟ. ಆ ಪರಿಸ್ಥಿತಿಯಿದೆ! ಸ್ವಲ್ಪವಾದರೂ ಚಿನ್ನವನ್ನು ಧರಿಸುವುದರಿಂದ ಅವರಿಗೆ ಆ ಪ್ರತ್ಯುತ್ಪನ್ನ ಶಕ್ತಿಯು ನಿಖರವಾಗಿ ಸಮೃದ್ಧವಾಗಿ ಪ್ರಾಪ್ತವಾಗುತ್ತದೆ ಎನ್ನುವ ಉದ್ದೇಶದಿಂದ ಚಿನ್ನ ಧಾರಣೆಗೆ ಮಹತ್ವವನ್ನು ಕೊಟ್ಟರು.
          ಸಪ್ತಪದಿಯು ನೋಡುವುದಕ್ಕೆ ಅಕ್ಕಿಯ ರಾಶಿಯ ಮೇಲೆ ಹೆಜ್ಜೆಯನ್ನಿಟ್ಟು ವಧುವನ್ನು ಮುಂದೆ ನಡೆಸುತ್ತಾರೆ. ಅಲ್ಲಿ ವರನು ೭ ಹೆಜ್ಜೆಗಳಲ್ಲಿ ವಧುವಿನ ಚೈತನ್ಯದ ಅಳತೆ ಮಾಡುವುದು ಎಂದರ್ಥ. ಅಲ್ಲಿ ಹೇಳುವಾಗ ತಮ್ಮ ಜೀವನದ ಆದರ್ಶವನ್ನು ಹೇಳಿಕೊಂಡು ಹೋಗುತ್ತಾ ಭೂಮಿಗೆ ಸ್ಪರ್ಷವನ್ನು ಕೊಡದೇನೇ ಅಂದರೆ ಪ್ರಕೃತಿಯನ್ನು ಪ್ರಕೃತಿಯಿಂದ ಬೇರ್ಪಡಿಸಿ ಚೈತನ್ಯ ರೂಪದಲ್ಲಿ ಇವಳಿಗೆ ಎಷ್ಟು ಧೀಶಕ್ತಿಯಿದೆ ಎಂದು ವರ ಇಲ್ಲಿ ಪರೀಕ್ಷೆ ಮಾಡುತ್ತಾನೆ. ಆ ಧೀಶಕ್ತಿಗೆ ಹೊಂದಿಕೊಂಡು ವರ ಬದುಕಿದರೆ ಸ್ಥಿರವಾದ ದಾಂಪತ್ಯ ಸಾಧ್ಯವೆಂದು ಹೇಳುತ್ತದೆ. ಕೆಲವು ಸ್ತ್ರೀಯರಲ್ಲಿ ವಿಶೇಷವಾದ ಧೀಶಕ್ತಿಯು ಇರುತ್ತದೆ. ನಮ್ಮಲ್ಲಿ ಎಷ್ಟೋ ಜನ ಸ್ತ್ರೀಯರು ಮಹತ್ತರವಾದ ಪಟ್ಟ ಏರಿದ್ದಾರೆ. ಅಂತಹ ಧೀಶಕ್ತಿಯೊಂದಿಗೆ ನನಗೆ ಬದುಕಲಿಕ್ಕೆ ಸಾಧ್ಯವೇ ಎಂದು ವರ ಪರೀಕ್ಷೆ ಮಾಡುವುದು. ವರನಿಗೆ ಆ ಅರ್ಹತೆಯು ಇದೆಯೊ ಇಲ್ಲವೊ ಬೇರೆ ವಿಚಾರ. ಪ್ರಕೃತಿಯ ಸಂಪರ್ಕವನ್ನು ತಪ್ಪಿಸಿ ಅಂದರೆ ಭೂಮಿಯನ್ನು ತಾಗದಂತೆ ಅಕ್ಕಿ ರಾಶಿಯ ಮೇಲೆ ನಿಲ್ಲಿಸಿ ಅವಳ ಧೀಶಕ್ತಿಯನ್ನು ಅಳತೆ ಮಡಿಕೊಳ್ಳುತ್ತಾನೆ. ಆ ೭ ಹೆಜ್ಜೆ ನಡೆಯುವಾಗ ಒಂದಿಷ್ಟು ಅನುಭವ ಹೊಂದಿ ಅಷ್ಟರಲ್ಲಿಯೇ ಇವನು ಅವಳಿಗೆ ಸರಿಯಾಗಿ ಬದುಕುತ್ತೇನೆ ಎನ್ನುವುದು ಆ ಸಪ್ತಪದಿಯಲ್ಲಿ ಇರತಕ್ಕಂತಹ ಆಚರಣೆ.

No comments:

Post a comment