Friday, 9 May 2014

ಎದ್ದೇಳು ಕನ್ನಡಿಗ - ಸಿರಿಗನ್ನಡವ ಬಳಸು, ಸವಿಗನ್ನಡವ ಬೆಳೆಸು


ಮಡಕೆಯನು ಬಡಿದು ಹೊನ್‍ಕೊಡವ ತೋರುವ ಸಖನೆ | ಪಡೆದಿಹೆಯ ರಹದಾರಿಯನು ಹೊನ್ನ ಗಣಿಗೆ? ||
ಒಡಲಿಗೊಗ್ಗಿದ ನೀರ ಚೆಲ್ಲಿದೊಡದೇಂ ಪಾಲ | ಕುಡಿವ ಸಂತಸಕೆಣೆಯೆ? - ಮಂಕುತಿಮ್ಮ.
Oh friend your pride utterance of assurance to provide golden pot by breaking the one made from mud, have you acquired the license to enter gold mines? By dropping the life giving water, asking to drink milk, can that soul satisfied by water can feel the happiness of drinking milk? One shouldn’t unnecessarily put their heads in individual practices.
ಬಲುಹಳೆಯ ಲೋಕವಿದು, ಬಲುಪುರಾತನಲೋಕ | ಬೆಳೆದಿರ್ಪುದಿದು ಕೋಟಿರಸಗಳನು ಪೀರ್ದು ||
ಸುಲಭವಲ್ಲಿದರ ಸ್ವಭಾವವನು ಮಾರ್ಪಡಿಸೆ | ಸಲದಾತುರೆಯದಕೆ – ಮಂಕುತಿಮ್ಮ ||
The world we live is very old. It grew from crores of sources of liquid (Rasas). It’s not easy to change the natural behavior. Don’t be in unusual hurry due to illusion that it is changing or it has changed.
ಸಿಂಧುವನು ಹಿಮಗಿರಿಗೆ ಹಿಂದಿರುಗಿ ಬೇರೊಂದು | ಚೆಂದದಲಿ ಪರಿದು ಬಾರೆಂದಾಣತಿಪೆಯಾ? ||
ಸಂದರ್ಭವಿಡಿದು ಜನಚೈತನ್ಯ ಪರಿದಿಹುದು | ಅಂಧಗತಿಯಲ್ಲವದು – ಮಂಕುತಿಮ್ಮ ||
For the river Sindhu can you instruct that ‘the way you are flowing now is improper, return to your origin – the Himalaya Mountain and flow back being modernized?’ It is flowing based on the declination of the Earth. Similarly, according to the place, time, situation, the people’s power & strengths will be utilized. Ignorant of this truth its not fair to say that it is moving in a blind path.
ಮತಿವಂತರಿದ್ದರಲ ನಮ್ಮ ಹಿಂದೆಯುಮಿಲ್ಲಿ | ಹಿತಚಿಂತಕರು ಜನಕೆ, ಕೃತಪರಿಶ್ರಮರು? ||
ಅತಿವೈದ್ಯರಿಂದ ಹೊಸರುಜಿನಕೆಡೆಯಾದೀತೊ | ಮಿತಿಯಿಂ ನವೀಕರಣ – ಮಂಕುತಿಮ್ಮ ||
Aren’t intellectuals there before us in this Earth? Haven’t they worked with proper knowledge & real concern? Over usage of a medicine for one disease may cause a new disease. Modernization should also be in its limits!
ಒಡೆಯದಿರು ತಳಹದಿಯ ಸರಿವಡಿಪೆನದನೆಂದು | ಸಡಲಿಸುವ ನೀಂ ಮರಳಿ ಕಟ್ಟಲರಿತವನೇಂ? ||
ಗಿಡವ ಸರಿ ಬೆಳೆಯಿಸಲು ಬುಡವ ಕೀಳ್ವುದು ಸರಿಯೇ? | ದುಡುಕದಿರು ತಿದ್ದಿಕೆಗೆ – ಮಂಕುತಿಮ್ಮ ||
Don’t break the foundation by thinking that this construction is not proper & I will repatch it. If you do like this, do you know how to rebuild it? To make a plant grow properly is it fair to cut the roots?

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಕೋರಿ ಹೋರಾಟ

ಇದು ಏನು? ಕನ್ನಡ ಒಂದು ಅಧಿಕೃತ, ಶಾಸ್ತ್ರೀಯ ಭಾಷೆಯೇ? ಇದರಲ್ಲಿ ಸಂಶಯವೇಕೆ? ಇದಕ್ಕೆ ಹೋರಾಟಬೇಕೆ? ಒಂದು ತೀರಾ ಬಾಲಿಶ ಅನುಪಯುಕ್ತ ಭಾಷೆಯಾಗಿದ್ದಲ್ಲಿ ಇದು ಒಂದು ಪ್ರದೇಶದ ಭಾಷೆಯೆಂದು ಹಿಂದೆ ಗುರುತಿಸುತ್ತಿದ್ದರೆ? ಸ್ವಾತಂತ್ರ್ಯಾನಂತರ ಭಾಷಾವಾರು ಪ್ರಾಂತ್ಯ ರಚನೆ ಕಾಲದಲ್ಲಿಯೇ ಕನ್ನಡವೂ ಒಂದು ಪ್ರಾದೇಶಿಕ ಸಮರ್ಥ ಭಾಷೆಯೆಂದು ಗುರುತಿಸಿಯೇ ಕರ್ನಾಟಕ ರಚನೆಯಾಗಿತ್ತಲ್ಲವೇ? ಅದಕ್ಕೆ ಇನ್ನೊಂದು ಮುದ್ರೆ ಬೇಕೆ? ಚಿಂತಿಸಿ.
          
    ಆ ಕಾಲದಲ್ಲಿ ಸಂಸ್ಕೃತದ ನಂತರ ಕನ್ನಡವೇ ಎಂದು ಜನಜನಿತವಾಗಿತ್ತು. ಕನ್ನಡವೆಂದರೆ ಸರ್ವಭಾಷಾಮಯಿ ಭಾಷಾ ಎಂದು ಕುಮುದೇಂದು ಮುನಿ ಹಾಡಿ ಹೊಗಳಿದ್ದಾನೆ. ಈಗಿನ ವಿದ್ವಾಂಸರಿಗೆ ಕನಸಿನಲ್ಲೂ ಎಣಿಸಲಿಕ್ಕೆ ಸಾಧ್ಯವಾಗದ ಕಟು ಸತ್ಯವೆಂದರೆ ಕನ್ನಡದಲ್ಲಿ ೬೭ ಲಕ್ಷ ಕೋಟಿ ಶಬ್ದಗಳಿವೆ. ಪ್ರಸಕ್ತ ಕಾಲಕ್ಕೂ ಪ್ರಾಕೃತಿಕ, ಜಾನಪದೀಯ, ಸಾಂಸ್ಕೃತಿಕ ಸೊಗಡಿನಲ್ಲೇ ೬೪ ಲಕ್ಷ ಕನ್ನಡ ಶಬ್ದಗಳಿಗೆ ಕರಾರುವಕ್ಕಾದ ಶಬ್ದೋತ್ಪತ್ತಿ ಸಿಗುತ್ತದೆ. ಭಾಷಾವಾರು ಪ್ರಾಂತ್ಯ ರಚಿಸುವಾಗ ಕನ್ನಡ ಒಂದು ಸಮೃದ್ಧಭಾಷೆಯೆಂದು ಗುರುತಿಸಿಯೇ ಕರ್ನಾಟಕ ರಚನೆಯಾಯ್ತು. ಈಗ ಇನ್ನೊಂದು ಮುದ್ರೆಯ ಅಗತ್ಯವಿದೆಯೇ? ಬೇಕಿಲ್ಲ. ಇಲ್ಲಿ ಕನ್ನಡ ಬೆಳೆಸಿ. ಕನ್ನಡಿಗರು ಕನ್ನಡ ಹೊರತುಪಡಿಸಿ ಇತರ ಭಾಷೆಗೆ ಅಸಹಕಾರ ತೋರಿಸಿ. ಆಗ ಕನ್ನಡ ಕಡ್ಡಾಯವಾಗಿ ಬೆಳೆಯುತ್ತದೆ. ಅದು ಬಿಟ್ಟು ಯಾರೋ ಒಬ್ಬ ಅಥವಾ ಒಂದು ಸರ್ಕಾರ ಕನ್ನಡಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಕೊಡಬೇಕು. ಅದನ್ನು ಕನ್ನಡಿಗರು ಕಾಡಿಬೇಡಿ ಪಡೆಯಬೇಕು ಎಂದರೆ ಏನರ್ಥ? ಇದು ಕೇವಲ ರಾಜಕೀಯ. ಅದನ್ನು ಗೌರವಿಸಬೇಡಿ. ಕನ್ನಡಿಗರೆಲ್ಲಾ ಕನ್ನಡ ವ್ರತ ಹಿಡಿಯಿರಿ. ಕನ್ನಡ ಹೊರತುಪಡಿಸಿ ಬೇರೆ ಭಾಷೆಗೆ, ಭಾಷಿಕರಿಗೆ ಸಹಕರಿಸಬೇಡಿ. ಹಾಗೆಂದು ಜಗಳ ಆಡಬೇಡಿ. ನಿಮ್ಮ ವ್ಯವಹಾರ ಕನ್ನಡದಲ್ಲಿ ಮಾತ್ರ ಇರಲಿ. ಕನ್ನಡಿಗರಲ್ಲದವರು, ಕನ್ನಡ ಬಾರದವರು ಅಂತಾದರೆ ಅವರ ವ್ಯವಹಾರ ಬಿಡಿ. ಆಗ ಕನ್ನಡ ಬೆಳೆಯುತ್ತದೆ. ಆಗ ದೇಶವೇನು, ಪ್ರಪಂಚವೇ ಕನ್ನಡವನ್ನು ಗೌರವಿಸುತ್ತದೆ. ಅದು ಕನ್ನಡಿಗರಿಗೆ ಬೇಕಿದೆಯೇ? ಆ ರೀತಿ ಕಾಣುವುದಿಲ್ಲ. ಆದರೆ ಕೇಂದ್ರದ ಶಾಸ್ತ್ರೀಯ ಮುದ್ರೆ ಬೇಕು ಏಕೆ? ಅದರಿಂದೇನು ಫಲ? ಪ್ರಪಂಚಕ್ಕೆಲ್ಲಾ ಮಾಹಿತಿ ಮಾರುವ ಅಂಗಡಿ ಕರ್ನಾಟಕದಲ್ಲಿ. ಆದರೆ ಅವರವರ ಭಾಷೆಯಲ್ಲಿ. ನಿಮ್ಮ ಭಾಷೆಯಲ್ಲ ಏಕೆ? ಅದನ್ನು ಅಭಿವೃದ್ಧಿ ಪಡಿಸಿಲ್ಲ ಏಕೆ?
         
   ಇನ್ನು ಕನ್ನಡದ ಶಕ್ತಿ, ಅರ್ಹತೆ, ಶಾಸ್ತ್ರೀಯತೆ, ಸಮೃದ್ಧಿ ಬಗ್ಗೆ ಹೇಳುವುದಿದ್ದರೆ ಪ್ರಪಂಚದ ಯಾವುದೇ ಭಾಷೆಗೂ ಕಡಿಮೆಯಿಲ್ಲ. ನಮ್ಮದೇ ಭಾಷೆಯಾದ ಸಂಸ್ಕೃತಕ್ಕೆ ತೀರಾ ಸಮೀಪದ ಶುದ್ಧ, ಬದ್ಧ, ಭಾಷೆಯೆಂದರೆ ಕನ್ನಡವೇ. ಆದರೆ ಬೇರೆ ಭಾಷಿಕರಿಗೆ ಈ ಕನ್ನಡದ ಗುಣ ಅರ್ಥವಾಗಲಾರದು. ಕನ್ನಡದ ಹಿರಿದಾದ ಗುಣವನ್ನು ವಿವರಿಸುವ ಕನ್ನಡ ಭಾಷಾಜ್ಞಾನಿಗಳು ಇಲ್ಲದಿರುವುದು. ಬರೇ ಸುದ್ಧಿ ಮಾಧ್ಯಮದವರು ಹೊಯ್ದಾಡುವುದು ಕನ್ನಡ ಭಾಷೆಗೆ ಯಾವ ಪ್ರಯೋಜನವೂ ಇಲ್ಲ. ಕನ್ನಡ ಭಾಷೆಯ ಮಹತ್ತ್ವ ಅರ್ಥಮಾಡಿಕೊಳ್ಳಲಾಗದ ಕನ್ನಡಿಗರೇ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಇತರೆ ದೇಶೀಯ ಭಾಷೆಯತ್ತ ಹೋಗುತ್ತಿದ್ದರೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಅಗತ್ಯವೇನು? ಮುದುಕನ ಮದುವೆಯಂತೆ ನಿಷ್ಪ್ರಯೋಜಕವಲ್ಲವೆ?
   
    ಒಂದು ವಿಚಾರ ಗಮನಿಸಿ. ಈ ಕರ್ನಾಟಕದಲ್ಲಿರುವ ಕನ್ನಡಿಗರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೇ ಸೇರಿಸಿ ಎಂದು ಜನಾಭಿಪ್ರಾಯ ಸಂಗ್ರಹಿಸ ಹೊರಟರೆ ಶೇಖಡವಾರು ೧೦ ರಿಂದ ೧೫% ಜನ ಅನುಮೋದಿಸಬಹುದು. ಉಳಿದವರು ನಾವು ಇಂಗ್ಲೀಷ್ ಕಲಿಸುವುದೇ ಬದ್ಧವೆಂದು ಹೋರಾಡುತ್ತಾರೆ, ಕೂಗಾಡುತ್ತಾರೆ. ಅವರಿಗೆ ಬರೇ ಸ್ಲೋಗನ್‍ಗಾಗಿ, ರಾಜಕೀಯ ಲಾಭಕ್ಕಾಗಿ ಕನ್ನಡ ಬೇಕು. ಅವರ ಅಸಮರ್ಥತೆ ಮುಚ್ಚುವುದಕ್ಕಾಗಿ, ಇಲ್ಲಾ ಪಕ್ಕದ ಮನೆಯವರ ಮಕ್ಕಳು ಇಂಗ್ಲೀಷ್ ಕಲಿಯುತ್ತಾರಲ್ಲಾ ಎಂಬ ಹೊಟ್ಟೆ ಕಿಚ್ಚಿಗಾಗಿ ಅಷ್ಟೆ. ಅವರಿಗೆ ಕನ್ನಡದ ಬಗ್ಗೆ ಕಾಳಜಿ ಇದೆಯೋ? ಇಲ್ಲವೋ? ಅರ್ಥವಾಗುವುದಿಲ್ಲ. ಹಾಗಿದ್ದ ಮೇಲೆ ಹಿಂದಿನ ಭಾಷಾವಾರು ಪ್ರಾಂತರಚನೆ ಕಾಲದಲ್ಲಿ ಕನ್ನಡ ಒಂದು ಸಮೃದ್ಧ ಬಹುಜನ ಮಾತಾಡುವ ಭಾಷೆಯೆಂದು ಗುರುತಿಸಿ ಕೇಂದ್ರ ಸರಕಾರ ಮಾನ್ಯತೆ ಕೊಟ್ಟಿದ್ದೇ ಸಾಕೆಂದು ಸುಮ್ಮನಿರಬಹುದಲ್ಲ. ಇನ್ನೂ ಅದಕ್ಕಾಗಿ ಹೋರಾಟದ ಅರ್ಥವೇನು?

   ಒಂದು ಭಾಷೆ, ಸಂಸ್ಕೃತಿ ಉಳಿಯುವುದು, ಬೆಳೆಯುವುದು ಸರಕಾರ ಮಾನ್ಯತೆ ಕೊಡುವುದರಿಂದಲ್ಲ ಅಲ್ಲಿನ ಜನ ಬಳಕೆಯಿಂದ. ಜನ ಬಳಸದೇ ಇದ್ದರೆ ಅದು ತನ್ನಂತಾನೆ ನಾಶವಾಗುತ್ತದೆ. ಕನ್ನಡ ಸಂಸ್ಕೃತಿಯ ಸೊಗಡು ಈಗಲೇ ಶೇ.೯೦% ನಾಶವಾಗಿದೆ. ಇದನ್ನು ಶಾಸ್ತ್ರೀಯ ಸ್ಥಾನಮಾನ ಪಡೆದಾಕ್ಷಣ ಸರಿಪಡಿಸಲು ಸಾಧ್ಯವಿಲ್ಲ. ಇಲ್ಲಿನ ಕನ್ನಡಿಗರು ಅದನ್ನು ಬಳಸಬೇಕು. ಅದರ ರುಚಿಯನ್ನು ಇತರೆ ಭಾಷಿಕರು ಅರಿಯುವಂತೆ ಮಾಡಬೇಕು. ಆಗ ಭಾಷೆ ಬೆಳೆಯುತ್ತದೆ, ಸಂಸ್ಕೃತಿ ಉಳಿಯುತ್ತದೆ. ಬರೇ ಕೇಂದ್ರ ಸರಕಾರ ಶಾಸ್ತ್ರೀಯ ಸ್ಥಾನಮಾನ ಘೋಷಿಸುವುದರಿಂದಲ್ಲ. ಸಾಮಾನ್ಯ ಕನ್ನಡಪರ ಹೋರಾಟಗಾರರು, ನೇತಾರರು, ರಾಜಕೀಯ ಮುತ್ಸದ್ದಿಗಳು ಎಲ್ಲರಿಗೂ ಈ ವಿಚಾರ ತಿಳಿದಿದೆ. ಆದರೆ ಬಹಿರಂಗಪಡಿಸುತ್ತಿಲ್ಲ. ಒಮ್ಮೆ ಒಬ್ಬ ಕನ್ನಡಪರ ಹೋರಾಟ ನಡೆಸುವ ಕಾರ್ಯಕರ್ತನನ್ನು ಭೇಟಿಯಾಗುವ ಸುಯೋಗ ನನಗೊದಗಿತು. ಅವನಲ್ಲಿ ಕೇಳಿದೆ. ನಿಮ್ಮದು ಕರ್ನಾಟಕ ರಕ್ಷಣೆಯ ಉದ್ದೇಶವೇ? ಕನ್ನಡ ರಕ್ಷಣೆಯ ಉದ್ದೇಶವೇ? ಎಂದು. ಅವನು ಕೊಟ್ಟ ಉತ್ತರ ಹೀಗಿದೆ. ಅದೆಲ್ಲಾ ನಮಗೆ ಗೊತ್ತಿಲ್ಲ. ನಮ್ಮ ನಾಯಕರು ಹೇಳಿದಂತೆ ಮಾಡುವುದಷ್ಟೆ ಎಂದನು. ಏನಿದರರ್ಥ?

    ಈ ರೀತಿಯ ಕನ್ನಡ ಹೋರಾಟಕ್ಕೆ ಅರ್ಥವೇನಿದೆ? ಒಂದು ಸರಿಯಾದ ಭಾಷಾ ಭೂಮಿಗೆಯೊಂದಿಗೆ ಒಂದು ಉತ್ತಮ ತಳಹದಿಯನ್ನು ರಚಿಸಿ. ಅಸಹಕಾರ ತತ್ವದ ಅಡಿಯಲ್ಲಿ ಉತ್ತಮ ಹೋರಾಟ ರೂಪಿಸಿದರೆ ಖಂಡಿತಾ ಅಂತರ್ರಾಷ್ಟ್ರೀಯ ಮಾನ್ಯತೆಗೆ ಕನ್ನಡ ಬರುತ್ತದೆ.

   ಮೇಲಿನ ಚಿಂತನೆ ಆಧರಿಸಿ ಕನ್ನಡಿಗರೆಲ್ಲಾ ಚಿಂತಿಸಬೇಕು. ಈಗ ಏನೋ ಕೇಂದ್ರ ಸರಕಾರ ಕನ್ನಡಕ್ಕೆ ಎಲ್ಲಾ ಗೌರವವನ್ನೂ ಕೊಟ್ಟಿದೆ. ಸ್ಥಾನ ಮಾನವನ್ನು ನೀಡಿದೆ. ಇನ್ನಾದರೂ ಕನ್ನಡದ ಉಳಿವಿಗೆ ಅದರ ಸಬಲೀಕರಣಕ್ಕೆ ಸೂಕ್ತ ಚಿಂತನೆ ಮಾಡಿರಿ. ಪ್ರತಿಯೊಬ್ಬರೂ ಕನ್ನಡವನ್ನು ತಮ್ಮ ವ್ಯಾವಹಾರಿಕ ಭಾಷೆಯಾಗಿ ಬಳಸುತ್ತಾ ಕರ್ನಾಟಕದಲ್ಲಿಯಾದರೂ ಜಾರಿಗೆ ತನ್ನಿರಿ. ಇಲ್ಲಿ ಇತರೆ ಭಾಷೆಯವರೊಂದಿಗೆ ವ್ಯವಹರಿಸುವವರೊಂದಿಗೆ ನಿಮ್ಮ ವ್ಯವಹಾರ ಬಿಡಿರಿ ಮತ್ತು ಸಾಹಿತ್ಯಕ್ಕಾಗಿ ನೀವು ಸ್ವಲ್ಪವಾದರೂ ಕೃಷಿ ಮಾಡಿರಿ. ಭಾಷೆಯ ಶಾಸ್ತ್ರೀಯ ಅಧ್ಯಯನವನ್ನು ಮಾಡಲು ಪ್ರೋತ್ಸಾಹಿಸಿ. ಕನ್ನಡವನ್ನು ಬೆಳೆಸಿ ನೀವೂ ಬೆಳೆಯಿರಿ. ಕನ್ನಡ ಸಂಸ್ಕೃತಿಯ ಅರಿವು ಅಂದ, ಕಂಪು-ಪ್ರಪಂಚಕ್ಕೆಲ್ಲಾ ಪರಿಚಯಿಸಿರೆಂದು ಹಾರೈಸುತ್ತೇನೆ.

ಕನ್ನಡಿಗನ ಈಗಿನ ಸ್ಥಿತಿ (ಒಂದು ವಿಡಂಬನೆ)

ಗಂಡಹೆಂಡಿರ ಜಗಳದೊಳ್ ಕೂಸು ಬಡವಾಯ್ತಂತೆ
ಬಂಡಿ ಅನ್ನವ ತಿಂಬ ಕೂಸನು ಕಾಣದಾದಿರಿ ನೀವು ಈಗ
ಉಂಡೆ ಅನ್ನವ ತಿಂಬೆನೆಂದರು ಗತಿಯಿಲ್ಲವಾಯ್ತು ಮುಂದುವರಿದ ವೈಜ್ಞಾನಿಕತೆಯಲೀ |
ಖಂಡ ವೃಷ್ಟಿಯ ಸುರಿಯೆ ಜನ ಕಂಗಾಲಾಗಿ ಕೂಗುತ
ದಿಂಡೆದ್ದು ಓಡಿ ತಪ್ಪಿಸಿಕೊಳ್ಳಲಾಗದ ಷಂಡರನು ಏಕೆ
ಹಡೆದಳೋ ತಾಯಿ ಭಾರತೀಯ ಸರಕಾರ ಬಂದು ಕುಂಡೆಯಾ ಮೇಲೆತ್ತಿ ಏಳುವಿರಿ ಭಂಡ ಜನರೇ || ೧ ||

ಗಂಡುಗಲಿಗಳ ನಾಡು ಈ ಕನ್ನಡ ನೆಲವೆಂದು
ದುಂಡು ಅಕ್ಷರದಲ್ಲಿ ಬರೆಸಿದರೆ ಸಾಲದೈ ಏಳಿ ಎದ್ದೇಳಿ
ಗಂಡುಗಲಿಗಳ ತೆರದಿ ಸ್ವತಂತ್ರ ಜೀವನ ಮಾಡಿ ಭಿಕ್ಷಾನ್ನದಾ ಹಾರೈಕೆ ಬಿಡಿ ನೀವು ||
ಚಂಡ ವಿಕ್ರಮಿಗಳಾಗಿರಿ ಯಾರೋ ಕೊಡುವ ಹಂಗಿನನ್ನಕೆ
ಭಂಡತನದಲಿ ಜೊಲ್ಲ ಸುರಿಸದಿರಿ ಅದು ಮರಣ ಸಮಾನ
ಕಂಡು ಕಂಡು ನೀವ್ ಭಿಕ್ಷಾನ್ನದಾ ಸುಳಿಗೆ ಸಿಕ್ಕುವಿರಲ್ಲ ವ್ಯರ್ಥಬಾಳುವೆಗಿಂತ ಸಾವು ಮೇಲು || ೨ ||

ಕಂಡ ಕಂಡ ಕಲ್ಲು ದೇವರುಗಳಿಗೆ ಕೈಮುಗಿದರೇನುಂಟು ಫಲ
ಭಂಡಬಾಳಿನ ಕೂಳಿನಾ ಋಣ ನಿನ್ನ ಮೇಲಿರಲೇನು ಮಾಡುವ
ಕಂಡ ಕಂಡ ಗುರುಗಳ ಸಮಾಧಿ ಸುತ್ತುತ ಭಕುತಿಯಾ ನಾಟಕವು ವ್ಯರ್ಥ ಕಾಣೆಲೋ ಮರುಳೇ ನೀ ||
ಚಂಡ ವಿಕ್ರಮಿಯಹುದಾದರೆ ಮನದೊಳಗೆ ಸ್ಮರಿಸುತ ದೇವನು
ದ್ದಂಡನೆಂಬುದನರಿತು ನಿನ್ನಯ ಬಾಳ್ವೆಗೆ ಸ್ವತಂತ್ರತೆಯನಳ
ವಡಿಸಿಕೊಳೈ ಕೈಯ ಚಾಚದಿರು ಭಿಕ್ಷೆಗೆ ಬರಲಿ ಚಂಡಮಾರುತವೇನು ಹೆದರದಿರು ಮಾರ್ತಾಂಡಗೇ || ೩ ||

ತಾಯಿ ಭಾರತೀಯ ಗರ್ಭವನು ಹೀಗಳೆಯದಿರು ಮರುಳೇ
ನಾಯಿ ಬಾಳನು ಬಾಳಬೇಡೈ ಬಾಳುವೆಗೊಂದರ್ಥವಿದೆ ಅದಕೆ
ನೋಯದಿರು ಈ ದೇಶದಲಿ ಹುಟ್ಟಿದಕೆ ಸೋಲದಿರು ಪ್ರಚಂಡನಾಗು ಆಮಿಷಕೆ ಒಳಗಾಗದಿರೂ ||
ಬಾಯ ಬಡಿವರು ಆಳುವವರು ನಿನ್ನನು ತಾಳು ನೀ ನಿನ್ನನಾಳು
ಹೇಯ ಬದುಕಿಗೆ ವ್ಯರ್ಥಗಳಹದಿರು ಕೇಳಯ್ಯ ಭಾರತೀ ಸುತನಾಗು
ಕಾಯವಳಿಯಲಿ ನಿನ್ನ ಆತ್ಮದಾ ಕೀರ್ತಿಯುಳಿಯಲಿ ನಿನ್ನ ನೀ ನಾಳಿಕೊಂಡರೆ ಇದು ಖಂಡಿತವೂ || ೪ ||

ಅದಕೆ ಬೇಕೈ ನಿನಗೆ ಹಿಂದಿನ ಚರಿತೆ ಇತಿಹಾಸದರಿವು
ಅದನರ್ಥ ಮಾಡಿಕೊಂಡರೆ ನಮ್ಮ ಪೂರ್ವಿಕರ ಸುಖಬಾಳ್ವೆ
ಒದಗಿ ಕಾಣುವುದು ಬಿಡು ನೀನು ಅನರ್ಥ ಬಾಳಿನ ಈಗಿನ ದೊಂಬರಾಟವನೂ |
ಬದಿಗಿಟ್ಟು ನೈಜಜೀವನದರಿವು ಪಡೆಯುತ ಹಗೆದೊಲೆ
ಯೋದರದಂದದಿ ಬಾಳುವಾ ನಮ್ಮ ಇತಿಹಾಸವರಿತು ಬಾಳಿರಿ
ಒದಗುವುದು ನಿಮಗಾಗ ಜೀವನದರ್ಥ ಜ್ಞಾನ ಸುಖವಿದೆ ತ್ಯಾಗದಲಿ ಕಾಣಯ್ಯ ಮರುಳೇ || ೫ ||

ರನ್ನ ಪಂಪರ ಹೆಸರ ಹೇಳುತ ಉಚ್ಛಾರದಲಿ
ತನ್ನ ಮರೆತರು ಕನ್ನಡವದೇನು ಫಲಕದಲಿರಲಿ
ಚಿಣ್ಣರು ನಮ್ಮವರು ಕಲಿಯಲಿ ಇಂಗ್ಲೀಷ್‍ನೆಂಬರು ಕನ್ನಡದ ಗತಿಯೇನು? ||
ಬನ್ನ ಪಡುವರು ಈ ಕನ್ನಡಿಗರೆಲ್ಲ ಮಾತನರಿಯದೆ
ಸೊನ್ನೆ ಸುತ್ತುವರು ಅಂಕದಲಿ ದೂರದ ಸೌದಿಯ
ಚಿನ್ನದಾ ದೀನಾರ ಗಳಿಸುವ ಚಿಂತೆಯಲಿ ಸೊರಗಿ ತಾಯಿಯನು ಗುಜರಿಗಿಟ್ಟಾ || ೬ ||

ಹಣಬೇಕು ಜೀವನಕೆ ನಿಜವಾದರೆ ಅರಿತುಕೊ ಕನ್ನಡಿಗೆ
ಹಣವೇ ಜೀವನವಲ್ಲ ಕನನಡ ಮನೆಗೆ ತೋರಣ ಕಟ್ಟು
ಬಣಹುದದಿರಲಿ ನಂತರದಿ ಕನ್ನಡವೆ ಉಸಿರಾಗುವುದು ದುಡಿಮೆಯಿಹುದು ||
ಪುಣ್ಯಕೋಟಿಯ ನಾಡಿದು ಪುಣ್ಯಕೊಂದು ಶಬ್ದವೇ
ಕಾಣದ ಭಾಷೆ ಇಂಗ್ಲೀಷ್ ಕಲಿತು ದ್ರೋಹವೆಸಗದಿರು
ಬಣ್ಣ ಒಣಗಿದ ಮೇಲೆ ಪುರುಳೆ ಏಳ್ವಂತೆ ಉದುರಿಹೊವುದು ಇಂಗ್ಲೀಷ್ ತಿಳಿಯೊ || ೭ ||

ಈ ನಾಡು ನೆಲ ನಿನ್ನದೈ ಕನ್ನಡಿಗ ಮರೆಯದಿರು
ಈ ನಾಡಿನಾ ಭಾಷೆಯೇ ನಿನ್ನುಸಿರು ಅದ ಮರೆತು
ಈ ನಾಡ ಸಂಸ್ಕೃತಿಗೆ ದ್ರೋಹವೆಸಗಿದೆಯಾದರೆ ನಿನಗನ್ನ ಕೊಡಳು ||
ಈ ನಾಡ ದೇವತೆ ಅರಿತು ನೋಡೈ ಸಾಕು ಬಡಿವಾರ
ಈ ನಾಡಿನಲಿ ಆಗಿಹೋದ ಸಾಹಿತಿಗಳ ಮರೆಯದಿರು
ಈ ನಾಡು ರತ್ನಗಳವರು ಅವರ ದಾರಿಯಲಿ ನಡೆ ಸೌದಿ ಬೇಡವೋ ಮರುಳೆ ಅಲ್ಲಿ ಅನ್ನವಿಲ್ಲಾ || ೮ ||

ದುಡಿಮೆಯಾದರೆ ಈ ನಾಡಲಿರಲಿ ನಿನ್ನಯ ಬೆವರು
ದುಡಿಮೆ ಈ ನಾಡಿಗೆಂದೇ ಮೀಸಲಿಡು ತಿನ್ನುವಾ ಅನ್ನಕ್ಕೆ
ಕಡಿಮೆಯಾಗದು ಕೇಳು ಬಡತನವು ಕನ್ನಡಿಗರಿಗಿಲ್ಲ ಭಾವದಲಿ ಶ್ರೀಮಂತರೂ ||
ಒಡೆಯರಿಹರೈ ಕೇಳು ದೇಶಕೆ ಮೈಸೂರಿನಲಿ ಪೀಠಕೆ
ಒಡೆಯರಿಹರೈ ಶೃಂಗೇರಿಯಲಿ ಹಾಲಾಡಿಯಲಿ
ಒಡೆಯರಿಹರೈ ಧರ್ಮಕೆ ಧರ್ಮಸ್ಥಳದಿ ಒಡೆಯರಿಹರಲ್ಲಾ ಬೇರೆಲ್ಲಿ ಇಹರೂ || ೯ ||

ಒಡವೆ ನುಡಿಮುತ್ತುಗಳು ಗಾದೆ ಮಾತುಗಳೆಲ್ಲ
ಒಡೆದು ಮೂಡಿವೆ ಇಲ್ಲಿ ಕನ್ನಡದಲ್ಲಿ ಇಂಪು ಸವಿ
ಬಿಡು ಬಿಡೆಲೊ ಬೇರೆ ಭಾಷೆಗಳಲ್ಲಿ ಇಲ್ಲದಾ ಕಂಪು ಮಲ್ಲಿಗೆ ಕಂಪು ಇಲ್ಲಿಹುದೂ ||
ಚಡಪಡಿಕೆ ಇಲ್ಲವು ಭಾಷೆಯಲಿ ಐವತ್ತೆರಡು ಅಕ್ಷರ
ಒಡೆದು ತೋರುವುದು ಆಡುವಾ ನುಡಿಯ ಸ್ಪಷ್ಟತೆಗೆ
ಕಡಗೋಲ ಮಂಥನವು ಬೇಕಿಲ್ಲ ಸವಿನುಡಿಯ ತಂಪು ಕಂಪಿನ ತಾಣ ಕಾಣೂ || ೧೦ ||

ಈ ನೆಲದ ಅನ್ನವದು ಬಹುವಿಧವು ಬಹಳ ಋಚಿ
ಈ ನೆಲದ ಭಾಷೆಯದು ಷಡ್ರಸದ ಸೋಪಸ್ಕರವು
ಈ ನೆಲದ ಸಂಸ್ಕೃತಿಯು ಅಪಾರಜ್ಞಾನದ ಬೀಡು ಬಡತನವಿಲ್ಲ ಇಲ್ಲಿನಾ ನೆಲದಿ ||
ಈ ನೆಲದ ಭಕ್ಷ್ಯಗಳು ಬಹುವಿಧದ ತಿಂಡಿಗಳು
ಈ ನೆಲದ ಜನರೆಲ್ಲ ಅನ್ನದಾನಿಗಳಯ್ಯ ಲೋಕದಲಿ
ಈ ನೆಲದ ಕಂಪಿನಡಿಗೆಯ ಮಾಡಿ ಉಣ್ಣಲಿಕ್ಕುವರು ದೇಶದೇಶಗಳಲ್ಲಿ ಭೀಮಸಮರೂ || ೧೧ ||

ವೀರರೈ ಶೂರರೈ ಕೊಂಡಾಡ ಹೊರಟರೆ ಮುಗಿಯದೀ
ವೀರರಾ ಕಥೆ ವೀರ ರಾಜೇಂದ್ರ ಅರಸು ನಮ್ಮವರು
ವೀರಕೇಸರಿಯ ಗುಣಗಾನ ಮಾಡಲೆರಡು ಸಾವಿರ ನಾಲಗೆ ಬೇಕು ||
ವೀರಪಟ್ಟವನೇರಿದಾ ಮದಕರಿ ನಾಯಕರು ಆದಿ ಸಾಮ್ರಾಜ್ಯ
ವೀರಪುತ್ರ ಬನವಾಸಿಯಲ್ಲಾಳಿಹರು ಕನ್ನಡದಿ ಹುಟ್ಟಿದಾ
ವೀರ ಟಿಪ್ಪುವು ಹುಲಿಯಿನಿಸಿದನಯ್ಯ ಅದು ಕನ್ನಡದ ಅನ್ನ ಕಾಣಯ್ಯ || ೧೨ ||

ಈಗ ನೀವೇಕೆ ಪಂಡಿತರೆ ಕನ್ನಡವ ಕತ್ತರಿಸುವಿರಿ
ಬೇಗ ಪೇಳಿರಿ ನಿಮಗೆ ಸತ್ಯ ಬೇಡವೆ ಋತವಿಲ್ಲದಿರೆ
ಜಾಗವಿಲ್ಲವು ಈ ಕನ್ನಡ ನಾಡಲಿ ತೊಲಗಿರೀ ನಮಗೆ ಋತ ಬೇಕು ಋಷಿತ್ವ ಬೇಕೂ ||
ಭೋಗ ತ್ಯಾಗವ ಮಾಡಿ ಕನ್ನಡಕೆ ಹೋರಾಡಿ ಮಡಿದವರ
ಜಾಗದಲಿ ಬರಿದೆ ಕುಳಿತು ಶ್ವಾನದಂತಿರಬೇಡಿ ಹೋರಾಡಿ
ಈಗ ಕನ್ನಡವೆ ಭಾಷೆ ಕನ್ನಡವೆ ನೆಲ ಕನ್ನಡವೆ ಅನ್ನ ಕನ್ನಡವೆ ಋಣವೆಂಬೆನೂ || ೧೩ ||

ಕೇಳು ಶ್ರೀಧರ ನಿನ್ನ ಶ್ರಮ ಸಾರ್ಥಕವಾಗಲಿ ಮುಂದೆ ತಾಳೋ
ಹಲವು ಭಾಷೆಯ ಕವಿಗಳಲ್ಲಿ ಅಲವೊತ್ತು ಕೊಂಡರೇನು
ಸಮ ಅಸಮಾನತೆಯ ಬಿಡಿ ಬಿಡಿರೆಂದು ನಾವೆಲ್ಲ ಒಂದೇ
ಎಂದು ಸಾರುವರಲ್ಲಿ ಕೇಳಿರಿ ನೀವೀಗ ನಕ್ಕಿರಿ ಭಾಷೆಯಾವುದು
ರುಚಿಸಿದರೀ ಭಾಷೆ ಕೂಳ ಭಾಷೆಯನರಿಹೆ ಹಸಿವ
ಭಾಷೆಯನರಿಹೆ ದುಃಖಕೆಲ್ಲಿದೆ ಭಾಷೆ ತಾಳು ಭಾಷೆಯ
ಹೆಚ್ಚಿದ ಜಗವೆಲ್ಲ ನಾವು ಒಂದೇ ಎಂದು ಬಾಳ ಕೊಡುವುದೇ ಭಾಷೆ ಕಾಣಯ್ಯ || ತಿರುಕ ||

ಆಧುನಿಕ ಕನ್ನಡಿಗನ ಕಾಳಜಿಯ ನುಡಿಗಳು:-

ಈಗಿನ ಕಾಲದ ಕನ್ನಡ ಜನ ಪರ ಬಾಷೆಗಳಿಗೆ ಮಾರು ಹೋಗ್ತಿದ್ದಾರೆ, ಮಿತಿ ಮೀರಿದ ಪರ ಭಾಷೆ ವ್ಯಾಮೋಹ, ಇವೆಲ್ಲ ಅವಥಾರಗಳಿಂದ ಕನ್ನಡ ನಿರ್ನಾಮ ಮಾಡೋಕೆ ಹೊರಟಿದ್ದಾರೆ. ಸಿಹಿ ಸಿಹಿ ಆಗಿದೆ ಅಂತ ವಿಷಾ ತಿನ್ನುತಿದ್ದಾರೆ ಇವರುಗಳು. ಮಕ್ಕಳನ್ನು ಕನ್ನಡ ಭಾಷಾಭಿಮಾನದಿಂದ ಬೆಳೆಸಿ. ಪಬ್ಲಿಕ್‍ನಲ್ಲಿ, ಎಲ್ಲೇ ಆಗಲಿ, ಸ್ಪಸ್ಥವಾಗಿ ಕನ್ನಡ ಮಾತನಾಡಲು ತಿಳಿಸಿ, ಬೇರೆ ಭಾಷೆಗಳಿಗೆ ಉತ್ತರಿಸೋದು, ಕಲಿಯೋದು, ಪ್ರೋತ್ಸಾಹಿಸೋದು ಬೇಡ ಇನ್ನು, ಬ್ರೋಕನ್ ಇಂಗ್ಲಿಷ್, ಪ್ಯಾಂಟ್ ಶರ್ಟ್ , ವರುಷ ವರುಷ ಹೆಚ್..ವಿ / ಎಸ್.ಟಿ.ಡಿ / ಹೆರ್ಪೆಸ್ ಕಾಯಿಲೆ ಜಾಸ್ತಿ ಆಗ್ತಿರೋದು ಬೆಂಗಳೂರಿನಲ್ಲಿ, ಕನ್ನಡನಾ ಅಸಹ್ಯವಾಗಿ ಕಾಣೋದು, ಪರ ಬಾಷಿಕರ ಜೊತೆ ಸೇರಿ ಕನ್ನಡಕ್ಕೆ ಅವಮಾನಿಸೋರು, ಹಿಂದಿ ರಾಷ್ಟ್ರ ಭಾಷೆ ಅಂತ ತಿಳ್ಕೊಳ್ಳೋದು, ಇಂಗ್ಲಿಷ್ ದೇವತೆಗಳ ಭಾಷೆ ಅಂತ ತಿಳಿದುಕೊಳ್ಳೋದು, ದುಡ್ಡು ಅಧಿಕಾರ ಬಂದ ತಕ್ಷಣ ಚಂಗ್ಲು ಥರ ವರ್ತಿಸೋದು ಇತ್ಯಾದಿ ಹೊಲಸು ಅವತಾರಗಳನ್ನೇ ಇವರುಗಳು Modernization ಅಂತ ತಿಳಿದುಕೊಂಡಿದ್ದಾರೆ, ಇವರಿಗೆ ಎಚ್ಚರಿಸಿ..

ಕನ್ನಡ ಮಕ್ಕಳಿಗೆ ದಯವಿಟ್ಟು ಕನ್ನಡ ಭಾಷಾ ಅಭಿಮಾನದಿಂದ ಬೆಳೆಸಿ, ಇಲ್ಲಾಂದರೆ ಕೈಗೆ ಸಿಗದಂತೆ ಹೋಗಿ ಬಿಡ್ತಾರೆ.

When “Kavirajamarga” was written by Amogha Varsha Nripathunga,
English was in cradle

& Hindi was not born at all..
ಇಲ್ಲಿ ಯಾವ ಭಾಷೆ ಗೆ ಅವಮಾನಿಸ್ತಿಲ್ಲ, ಅವರ ವರ್ತನೆಗಳಿಗೆ ಅಸ್ಟೆ..

ಇಂಗ್ಲೀಷ್ ಭಾಷೆಯ ವ್ಯಾಮೋಹ

ಪ್ರಸಕ್ತ ವಿದ್ಯಮಾನದಲ್ಲಿ ಕನ್ನಡ ಭಾಷೆಗೆ ಸಂಬಂಧಿಸಿ ಅದರ ಅಳಿವು ಉಳಿವಿನ ಬಗ್ಗೆ ಚಿಂತಕರ ಹೋರಾಟ ಮಾಡುತ್ತಲೇ ಸರಕಾರ ಇಂಗ್ಲೀಷ್ ಭಾಷೆಯೇ ಸಮಾಜದ ಸಂಸ್ಕೃತಿಯ ಅಭಿವೃದ್ಧಿಗೆ ಪೂರಕವೆಂದು ಭಾವಿಸಿ ಇಂಗ್ಲೀಷ್ ಕಡ್ಡಾಯ ಮಾಡಿ ಕೆಲವು ವರ್ಷ ಹಿಂದೆಯೇ ಆದೇಶ ಹೊರಡಿಸಿ ಬಿಟ್ಟಿತು. ಆದರೆ ಅದರ ಅಗತ್ಯ, ಅನಿವಾರ್ಯತೆ, ಚಿಂತನೆ, ವಿಚಾರ, ವಿಮರ್ಷೆ, ದೇಶದ ನಾಡಿನ ಸಂಸ್ಕೃತಿಯ ಅಭಿವೃದ್ಧಿ ಭಾಷೆಯಿಂದ ಸಾಧ್ಯವೇ? ಈ ಬಗ್ಗೆ ಏನು ಅಧ್ಯಯನ ನಡೆದಿರುತ್ತದೆ? ಕೇವಲ ಭಾವುಕತೆಯ ನಿರ್ಣಯವೂ ಅಪಾಯ, ರಾಜಕೀಯ ಆತುರ ನಿರ್ಣಯವೂ ಅಪಾಯ. ಇವುಗಳನ್ನೆಲ್ಲಾ ಮುಖ್ಯವಾಗಿ ಪೂರ್ವೋದಾಹರಣೆಯ ಆಧಾರದಲ್ಲಿ ನಿರ್ಣಯ ಮಾಡಬೇಕಿದೆ. ಇಲ್ಲಿ ಈ ಮಾನದಂಡ ಯಾವುದು?
೧. ಪೂರ್ವೋದಾಹರಣೆ
೨. ಆ ಪ್ರಾದೇಶಿಕ ನೈತಿಕತೆ
೩. ಸಾಮಾಜಿಕ ಅನಿವಾರ್ಯತೆ
೪. ಸಾಮಾಜಿಕ ಪ್ರಜ್ಞೆ
೫. ಸಾಮಾಜಿಕ ಪೂರಕ ಜ್ಞಾನ
೬. ಸಾಮಾಜಿಕ ಪರಿಸರ ಜ್ಞಾನ
೭. ಸಾಮಾಜಿಕ ಸಾಂಖ್ಯಯೋಗ
೮. ಪ್ರಾದೇಶಿಕ ಸಂಸ್ಕೃತಿ
೯. ಪ್ರಾದೇಶಿಕ ವಾಕ್‍ಮಧುತ್ವ
ಈ ೯ ಲಕ್ಷಣಗಳ ಆಧಾರದಲ್ಲಿ ಭಾಷೆ ಹುಟ್ಟುತ್ತದೆ. ಅದು ಹುಟ್ಟಿದ ಪ್ರದೇಶಕ್ಕೆ ಪೂರಕವೂ ಹೌದು. ಆದರೆ ಅದು ಯಾವುದೋ ಪ್ರದೇಶದ ಮೇಲೆ ತನ್ನ ಪ್ರಭಾವ ಬೀರಲಾರದು. ಒತ್ತಾಯ ಪೂರ್ವಕ ಹೇರಿದರೂ ಅಪಾಯಕಾರೀ ಪರಿಣಾಮ ಉಂಟುಮಾಡಬಹುದು. ಇವುಗಳ ಆಧಾರದಲ್ಲಿ ಒಂದೊಂದಾಗಿ ವಿಮರ್ಶೆ ಮಾಡೋಣ.
           
    ನಮಗೆ ಕನ್ನಡ ಭಾಷೆ ಬೇಕೇ? ಅಥವಾ ಇತರೆ ಭಾಷೆ ಬೇಕೆ? ಮೊದಲಾಗಿ ಮಾನವೀಯತೆಯು ಅಭಿವೃದ್ಧಿಯಾಗುವುದು ಮನುಷ್ಯ ಮಾನವನಾಗಿ ಬದುಕಿದಾಗ. ಅದಕ್ಕೆ ಬೇಕು
 • ಪ್ರಾಮಾಣಿಕತೆ,
 • ಸತ್ಯ,
 • ನ್ಯಾಯ ತತ್ಪರತೆ,
 • ಪರಸಹಿಷ್ಣುತೆ,
 • ಪ್ರಾಣಿದಯೆ,
 • ಪೂರಕಸಹಕಾರ
ಇವುಗಳು ಪ್ರಾಮಾಣಿಕತೆಯ ನೆಲೆಯಲ್ಲಿದ್ದಲ್ಲಿ ಯಾವುದೇ ಭಾಷೆಯ ಅಗತ್ಯ ಮಾನವನಿಗೆ ಇಲ್ಲ. ಅವುಗಳಲ್ಲಿ ಯಾವುದರ ಕೊರತೆಯಾದರೂ ತನ್ನ ಚರ್ಯೆಯನ್ನು ಸಮರ್ಥಿಸಿಕೊಳ್ಳುವುದಕ್ಕೆ ಭಾಷೆ ಅಗತ್ಯವಿರುತ್ತದೆ. ಆಗ ಭಾಷೆಯಾದರೂ ಅದರ ಪ್ರಾದೇಶಿಕ ಮಣ್ಣಿನ ಗುಣ ಹೊಂದಿದ್ದರೆ ಆ ನ್ಯೂನತೆಯನ್ನು ತುಂಬಬಲ್ಲದು. ಅದಿಲ್ಲದಿದ್ದಾಗ ಯಾವ ಭಾಷೆಯೂ ನಿಮ್ಮನ್ನು ಉದ್ಧಾರ ಮಾಡಲಾರದು. ಇದು ಖಂಡಿತ. ಇಂಗ್ಲೀಷ್ ಕಲಿತ ತಕ್ಷಣ ಯಾರೂ ಉದ್ಧಾರವಾಗಲು ಸಾಧ್ಯವಿಲ್ಲ. ಆದರೆ ಕಲಿಯಬಾರದೆಂದಲ್ಲ. ಯಾವ ಭಾಷೆ ಕಲಿತಾಕ್ಷಣ ಮಾನವ ಮಾನವನಾಗಲು ಸಾಧ್ಯವಿಲ್ಲ. ತಾನು ವಿಶಾಲವಾದಾಗ ಭಾಷೆಯು ವಿಶಾಲವಾಗಲು ಸಾಧ್ಯ. ಆದರೆ ಮಾನವ ಪ್ರವೃತ್ತಿ ಸಹಜವಾಗಿ ಹೇಗಿರುತ್ತದೆ? ಅದು ಸಹಜ ಸಂಪುಟವೃತ್ತಿ ಮತ್ತು ಕೂರ್ವ ಪ್ರವೃತ್ತಿ.
      
    ಉದಾ:- ಯಾವುದೋ ದೂರದ ರಾಜ್ಯದಲ್ಲಿ ಹಿಂದಿ ಭಾಷೆಯ ನಾಡಿನಲ್ಲಿ ಕನ್ನಡಿಗನೊಬ್ಬ ಉದ್ಯೋಗ ನಿಮಿತ್ತ ನೆಲೆಸಿದ್ದ. ಅವನು ಅಲ್ಲಿ ತನ್ನ ಅಕ್ಕಪಕ್ಕದವರೊಂದಿಗೆ ಚೀನ್ನಾಗಿಯೇ ಇದ್ದ. ಸ್ವಲ್ಪ ಕಾಲದಲ್ಲಿ ಅಲ್ಲಿಗೆ ಇನ್ನೊಬ್ಬ ಕನ್ನಡಿಗ ಬಂದ. ಆಗ ಅವರಿಬ್ಬರಲ್ಲಿ ವಿಶೇಷ ಸಖ್ಯ ಬೆಳೆಯಿತು. ಅಲ್ಲಿಯವರೆಗಿನ ಸ್ನೇಹ ಸೌಹಾರ್ದತೆಯನ್ನೆಲ್ಲಾ ಮರೆತು ಬಿಟ್ಟ. ಇದನ್ನೇ ಕೂರ್ಮ ಪ್ರವೃತ್ತಿ ಎಂದರು. ನಂತರ ಅವನ ಬಳಕೆ, ಸ್ನೇಹ, ಸಂಬಂಧವೆಲ್ಲಾ ಆ ಕನ್ನಡಿಗನೊಂದಿಗೇ ಸೀಮಿತವಾಗುತ್ತಾ ಬಂತು. ಅದರಿಂದಾಗಿ ಸಹಜ ಅವನ ವಿಶಾಲ ಪ್ರವೃತ್ತಿ ಸೀಮಿತವಾಗಿ ಕ್ಷೀಣಿಸಿತು. ಅದನ್ನು ಸಂಪುಟವೃತ್ತಿ ಎನ್ನುತ್ತಾರೆ.
     
    ಹಾಗಿದ್ದರೆ ಇದು ಯಾವ ವ್ಯಾಮೋಹ? ಇದಕ್ಕೆ ಬರೇ ಭಾಷೆಯೇ ಕಾರಣವೇ? ಖಂಡಿತಾ ಇಲ್ಲ. ಸಹಜ ಮಾನವನಲ್ಲಿರತಕ್ಕ ವೃತ್ತಿ ಪ್ರವೃತ್ತಿಗಳು. ಅವುಗಳನ್ನು ಮಾನವನು ವಿಶಾಲಗೊಳಿಸಿಕೊಳ್ಳುವಲ್ಲಿಯವರೆಗೂ ಸಾವಿರ ಭಾಷೆ ಕಲಿತರೂ ಉದ್ಧಾರವಾಗಲಾರ. ಹಾಗಿದ್ದ ಮೇಲೆ ಕಡ್ಡಾಯ ಇಂಗ್ಲೀಷ್ ಏನು ಮಾಡೀತು? ಇಂಗ್ಲೀಷ್ ಭಾಷೆಯ ತಂದೆ ಇಂಗ್ಲೀಷರು ಒಂದು ಕಾಲದಲ್ಲಿ ಪ್ರಪಂಚವನ್ನೆಲ್ಲಾ ಆಳುತ್ತಿದ್ದರು. ಈಗ ಅವರ ಸ್ಥಿತಿ ಹೇಗಿದೆ? ಅದಕ್ಕೆ ಅವರ ಭಾಷೆ ಕಾರಣವೇ? ವೈಜ್ಞಾನಿಕ ನವೀನ ಯುಗ ಯಾವ ಭಾಷೆಯಲ್ಲಿ ಆರಂಭವಾಯ್ತು? ಥಾಮಸ್ ಆಲ್ವಾ ಎಡಿಸನ್‍ನ ವಿಧ್ಯಾಭ್ಯಾಸ ಎಷ್ಟು? ಯಾವ ಭಾಷಾಶಾಸ್ತ್ರದಲ್ಲಿ ಅವನು ಡಿಗ್ರಿ ಮಾಡಿದ್ದಾನೆ? ಜೀವನ ಅನಿವಾರ್ಯತೆ ಎಂಬ ಭಾಷೆ ಕಲಿತ ಪ್ರತೀಜೀವಿಯೂ ವಿಜ್ಞಾನಿಯೇ. ಅದು ಬಿಟ್ಟು ಸೌಲಭ್ಯದ ದಾಸನಾದ ಜೀವಿ ಮುಂದೆ ಬೆಳೆಯಲಾರ, ಬದುಕಲಾರ. ಇದು ಪೂರ್ವೋದಾಹರಣೆಯಿಂದ ಕಂಡ ಸತ್ಯ. ಈ ಪೂರ್ವೋದಾಹರಣೆಯ ಬಲದಲ್ಲಿ ಪ್ರಾದೇಶಿಕ ನೈತಿಕತೆ, ಸಾಮಾಜಿಕ ಅನಿವಾರ್ಯತೆ, ಸಾಮಾಜಿಕ ಪ್ರಜ್ಞೆ, ಸಾಮಾಜಿಕ ಪೂರಕಜ್ಞಾನ, ಸಾಮಾಜಿಕ ಪರಿಸರಜ್ಞಾನ, ಸಾಮಾಜಿಕ ಸಾಂಖ್ಯಯೋಗ, ಪ್ರಾದೇಶಿಕ ಸಂಸ್ಕೃತಿ, ಪ್ರಾದೇಶಿಕ ವಾಕ್‍ಮಧುತ್ವ ಕಲಿಸುವ ಒಂದು ಭಾಷೆಯನ್ನು ಮಾನವ ಕಲಿತರೆ ರಾಜನಾಗಿ ಬಾಳಬಹುದು. ಇಲ್ಲದಿದ್ದಲ್ಲಿ ಮುಂದೆ ವೀರಪ್ಪನ್ನೋ, ಉಮೇಶ್‍ರೆಡ್ಡಿಯೋ, ದರೋಡೆ-ಕೋರನೋ, ಕಳ್ಳನೋ ಆಗುವ ಸಾಧ್ಯತೆ ಜಾಸ್ತಿ.

      ಇಲ್ಲಿನ ಯಾವ ಭಾಷೆಯನ್ನೂ ಕಲಿಯದ ಮುಸ್ಲಿಂ ದೊರೆಗಳು ಭಾರತವನ್ನು ಆಳಿದರು. ಬ್ರಿಟಿಷರೂ ಇಲ್ಲಿನ ಭಾಷೆ ಕಲಿತು ಆಳಿದ್ದಲ್ಲ. ಡಚ್ಚರು, ಪೋರ್ಚುಗೀಸರು, ಫ್ರೆಂಚರು, ಭಾರತವನ್ನು ಕೆಲಕಾಲ ಆಳಿದ್ದಾರೆ. ಆದರೆ ಅವರು ಯಾರೂ ಈ ಭಾಷೆ ಕಲಿತು ಆಳಿದ್ದಲ್ಲ. ಮತ್ತು ಅವರೆಲ್ಲರ ಭಾಷೆಯೂ ಇಂಗ್ಲೀಷಲ್ಲ. ಬೇರೆ ಬೇರೆ ಭಾಷೆಯನ್ನು ಬಲ್ಲವರು. ಕೇರಳದ ಒಬ್ಬ ದೊರೆ ಒಂದು ಕಾಲದಲ್ಲಿ ಅರಬ್ ರಾಷ್ಟ್ರಗಳ ಮೇಲೆ ತನ್ನ ಹಿಡಿತವನ್ನು ಸಾಧಿಸಿದ್ದ. ಭಾರತದ ಎಷ್ಟೋ ರಾಜರು ಚಕ್ರಾಧಿಪತ್ಯ ಸ್ಥಾಪಿಸಿದ್ದರು. ಅವರಲ್ಲಿ ಯಾರಿಗೂ ಇಂಗ್ಲೀಷ್ ಬರುತ್ತಿರಲಿಲ್ಲ. ನೆಪೋಲಿಯನ್, ಹಿಟ್ಲರ್ ಇವರ ಭಾಷೆಯೂ ಇಂಗ್ಲೀಷ್ ಭಾಷೆ ಆಗಿರಲಿಲ್ಲ. ಒಸಾಮಾ ಬಿನ್ ಲಾಡೆನ್ನೂ ಕೂಡ ಇಂಗ್ಲೀಷ್ ಭಾಷೆಯಲ್ಲಿ ವ್ಯವಹರಿಸಿಲ್ಲ. ಮೈಸೂರನ್ನು ಆಳಿದ ಟಿಪ್ಪೂ ಸುಲ್ತಾನ್ ಪರ್ಶಿಯನ್ ಭಾಷೆಯಲ್ಲ್ ಆಡಳಿತ ನಡೆಸುತ್ತಿದ್ದ. ಆದರೂ ಕನ್ನಡಿಗರು ಬದುಕಿದ್ದರು. ಅದರ ಅರ್ಥ ಭಾಷೆಯೊಂದು ಮಾಧ್ಯಮವಷ್ಟೇ ವಿನಃ ನೈತಿಕ ನೆಲೆಗಟ್ಟಿಲ್ಲದ ಸಮಾಜಕ್ಕೆ ಭಾಷೆ ಏನೂ ಸಹಾಯ ಮಾಡಲಾರದು ಎಂಬ ಸತ್ಯ ಈ ಮೇಲ್ಕಂಡ ಪೂರ್ವೋದಾಹರಣೆಗಳಿಂದ ಕಂಡು ಬರುತ್ತದೆ. ಹಾಗಿದ್ದರೆ ಕಡ್ಡಾಯ ಇಂಗ್ಲೀಷ್ ಕಲಿಸುವ ಅಗತ್ಯವನ್ನು ಚಿಂತಿಸಬೇಡವೇ? ಇಂಗ್ಲೀಷ್ ಕಲಿತವರೆಲ್ಲಾ ಖಂಡಿತಾ ಪ್ರಾಮಾಣಿಕರೂ ಅಲ್ಲ, ಜ್ಞಾನಿಗಳೂ ಅಲ್ಲ, ಬುದ್ಧಿವಂತರೂ ಅಲ್ಲ. ಇಂಗ್ಲೀಷ್ ಕಲಿತವರೆಲ್ಲಾ ಜೀವನದಲ್ಲಿ ಯಶಸ್ವಿಗಳೂ ಅಲ್ಲ. ಅವರಲ್ಲಿ ಎಷ್ಟೋ ಜನ ದರೋಡೆ, ಸುಲಿಗೆ, ಮೋಸ, ವಂಚನೆಯನ್ನೇ ವೃತ್ತಿಯಾಗಿಸಿ ಬದುಕುತ್ತಿದ್ದಾರೆ.

      ನಮ್ಮ ದೇಶದ ಒಟ್ಟು ಆರ್ಥಿಕ ಅಪರಾಧಗಳಲ್ಲಿ ಅಪರಾಧವೆಸಗಿದ ಅಪರಾಧಿಗಳು ಶೇ. ೯೯% ಇಂಗ್ಲೀಷ್ ಕಲಿತವರೇ ಆಗಿದ್ದಾರೆ. ಹಾಗಿದ್ದರೆ ನೈತಿಕ ನೆಲೆಗಟ್ಟು ಪ್ರಾಮಾಣಿಕತೆ ಕಲಿಸುವ ಭಾಷೆ ಬೇಡವೇ ಚಿಂತಿಸಿ? ಪ್ರಪಂಚದ ಯಾವುದೇ ಒಂದು ಭಾಷೆ ಕಲಿಯಿರಿ. ಆದರೆ ಅದರಲ್ಲಿ ಪ್ರಾದೇಶಿಕ ವಾಕ್‍ಮಧುತ್ವ ಇರಬೇಕು. ಕನ್ನಡವೊಂದರಲ್ಲೇ ಮೈಸೂರು ಕನ್ನಡ, ಮಂಗಳೂರು ಕನ್ನಡ, ಧಾರವಾಡ ಕನ್ನಡ, ಬೆಳವಾಡಿ ಕನ್ನಡ, ಮಲೆನಾಡು ಕನ್ನಡ, ಬಳ್ಳಾರಿ ಕನ್ನಡ, ಹವ್ಯಕ ಕನ್ನಡ, ಕುಂದಾಪುರ ಕನ್ನಡ, ಕಾಸರಗೋಡು ಕನ್ನಡ, ಇವೆಲ್ಲ ಬೇರೆ ಬೇರೆ ಇದೆ. ಅಲ್ಲಲ್ಲಿಗೇ ಅದು ಮಧು. ಅದು ಬಿಟ್ಟು ಬೇರೆ ಮಾತನಾಡಿದರೆ ಕರ್ಕಶ, ಕಟುವೆನ್ನಿಸುತ್ತದೆ. ಹಾಗಿದ್ದ ಮೇಲೆ ಸರಿಯಾಗಿ ಒಂದು ಬಹುವಚನ ಪ್ರಯೋಗವೂ ಶಾಸ್ತ್ರೀಯವಾಗಿಲ್ಲದ ಈ ಇಂಗ್ಲೀಷ್ ಭಾಷೆ ವ್ಯಾಮೋಹ ಕೇವಲ ಮೋಸವಲ್ಲವೆ? ದಯವಿಟ್ಟು ಈ ಬಗ್ಗೆ ಚಿಂತನೆ ಮಾಡಿರಿ. ಋಣ, ರೋಗ, ದಾರಿದ್ರ್ಯಗಳು ಪ್ರಾದೇಶಿಕತೆಯಲ್ಲದೆ ಅಲ್ಲಿನ ಭಾಷೆಯಲ್ಲಿ ಮಾತ್ರ ಹಾಸು ಹೊಕ್ಕಾಗಿದೆ. ಋಣವೇ ಸಂಪತ್ತಿಗೆ ಮೂಲ. ರೋಗವೇ ಜೀವನಾನಂದದಾಯಕ. ಬೇವು ತಾನೆ ಬೆಲ್ಲದ ರುಚಿಯನ್ನು ಕೊಡುವಂತಹದ್ದು? ದಾರಿದ್ರ್ಯವೇ ಸನ್ನಡತೆಯ ದ್ಯೋತಕ. ನಯ, ವಿನಯ, ಸಂಪನ್ನತೆಯು ದಾರಿದ್ರ್ಯದಿಂದ ಹುಟ್ಟುತ್ತದೆ. ಇವೆಲ್ಲಾ ಪ್ರಪಂಚ ಅರಿಯಲಾರದ ಕಟು ಸತ್ಯ ತಿಳಿದಿರಲಿ. ದಯವಿಟ್ಟು ಬದುಕುವ ಭಾಷೆ ಕಲಿಸುವ ಪ್ರಯತ್ನ ಮಾಡಿರಿ ಎಂದು ಕನ್ನಡಿಗನಾಗಿ ಪ್ರಾರ್ಥಿಸುತ್ತೇನೆ.

    ನಾವು ನಿಜವಾದ ಕನ್ನಡಿಗರಾಗೋಣ. ಅಂದರೆ ಶುಭ್ರಜೀವನ ನಮ್ಮದಾಗಿರಲಿ. ಕನ್ನಡಿಯಂತೆ ಶುಭ್ರ ಜೀವನ ಹೊಂದಿದವ. ಅಂದರೆ ಕನ್ನಡಿಯನ್ನು ಹೊಂದಿದವ ಆಗಬೇಕು. ಅದೇ ಕನ್ನಡಿಗ. ನಾವು ಕರ್ಣಾಟರೇ ವಿನಃ ಕರ್ನಾಟಕರಲ್ಲ. ಅದು ಬಿಟ್ಟು ಕರ್ನಾಟಕ ಅಂದರೆ ಕರಿ ನಾಟಕವಾಗುವುದು ಬೇಡ. ಗಂಡುಗಲಿಗಳಾದ ಕನ್ನಡಿಗರೆಲ್ಲ ಕಪ್ಪು ನಾಟಕ, ಕಾಳ ನಾಟಕ ಮಾಡಲಾರರು. ಮೋಸ, ವಂಚನೆ ಅರಿಯಲಾರ. ಹಾಗಾಗಿ ನಮ್ಮ ಅಂದರೆ ಕನ್ನಡಿಗರಲ್ಲಿ ತೆರೆಮರೆಯ ಕತ್ತಲೆಯ ನಾಟಕವಿಲ್ಲ. ನಮಗೆ ಸರಕಾರೀ ಅಧಿಕಾರಿಗಳ ಮೋಸ, ವಂಚನೆ, ಭ್ರಷ್ಟಾಚಾರದಿಂದ ಮುಕ್ತಿಗೊಳಿಸಿ ಕೊಡಿ. ಉಸಿರಾಡುವುದಕ್ಕೂ ಆ ಅಧಿಕಾರಿಗಳಿಂದ ಸರ್ಟಿಫಿಕೇಟ್ ಪಡೆಯುವ ಸಂಸ್ಕೃತಿ ಬಿಡಿಸಿಕೊಡಿ. ಕನ್ನಡಿಗರಾಗಿ ಬದುಕುತ್ತೇವೆ. ಆಗ ಇಲ್ಲಿ ಬಂದು ಸೇರುವ ಕಳ್ಳ, ಖದೀಮ, ವಿದೇಶೀಯರನ್ನು ನೀವು ಗುರುತಿಸಲು ಸಹಾಯಕವಾಗುತ್ತದೆ. ನಾವೇ ಹಿಡಿದುಕೊಡುತ್ತೇವೆ. ನಮ್ಮ ಕೋಟೆ, ಕೊತ್ತಲ, ಕೆರೆ, ಬಾವಿ, ದೇವಾಲಯ, ಅಣೆಕಟ್ಟುಗಳನ್ನೂ ನಾಶಮಾಡುವ, ಸಂಚುರೂಪಿಸುವ, ಖದೀಮರನ್ನು ನಿರ್ನಾಮ ಮಾಡಲು ಪಣ ತೊಡುತ್ತೇವೆ ಎನ್ನುತ್ತಾ ಈ ಪ್ರಾಪಂಚಿಕ ನೋಟಕ್ಕೆ ಮುಕ್ತಾಯ ಹಾಡುತ್ತಿದ್ದೇವೆ.

4 comments:

 1. ನನ್ನ ಉದ್ದೇಶ ನಿಮ್ಮ ಜ್ಞಾನವನ್ನು ಅಥವಾ ನಮ್ಮ ಪೂರ್ವಿಕರ ಜ್ಞಾನವನ್ನು ಕಡೆಗಣಿಸುವುದಾಗಿಲ್ಲ. ಯಾವುದೇ ಲೇಖನವನ್ನು ಬರೆಯುವಾಗ ಅದರ ಮೂಲವನ್ನು ಪ್ರಸ್ತಾಪಿಸಬೇಕೆಂದಷ್ಟೇ ಆಗಿದೆ.

  ReplyDelete
  Replies
  1. ವೇದವೇ ಸರ್ವಕ್ಕೂ ಮೂಲ. ಅದರ ಆಚರಣೆಗಳು ಜಾನಪದೀಯವಾಗಿಯೂ ಹಾಸುಹೊಕ್ಕಾಗಿದೆ. ಹಲವು ವಿಚಾರಗಳು ಶ್ರೀಯುತ ಕೆ.ಎಸ್. ನಿತ್ಯಾನಂದ ಸ್ವಾಮೀಜಿಯವರ ಜ್ಞಾನ ಭಂಡಾರದಿಂದ ಹೊರಬಂದಂತಹವಾಗಿವೆ. ಅದು ನಿಮಗೂ ತಿಳಿದಿದೆ. ಇನ್ನು ಸ್ವಶ್ರಮದಿಂದ ಸಂಗ್ರಹಿಸಿದ ದೇಶದ ಹಲವಾರು ವಿದ್ವಾಂಸರ ಪ್ರಬಂಧಗಳು, ಸಾಧಕರ ಆಪ್ತವಾಕ್ಯಗಳು, ಹಳೇ ಗ್ರಂಥಗಳ ಸಂಗ್ರಹದಿಂದ ಪರಿಷ್ಕರಿಸಿ, ವೇದದೊಂದಿಗೆ ತಾಳೆ ನೋಡಿ, ಸಾಧ್ಯವಾದರೆ ಒಂದಿಷ್ಟು ಪ್ರಾಯೋಗಿಕವಾಗಿಯೂ ಪರೀಕ್ಷಿಸಿ ಸಾರಾಂಶವನ್ನು ಮಾತ್ರ ಬ್ಲಾಗಿನಲ್ಲಿ ನೀಡುವ ಉದ್ದೇಶವಿದೆ. ಮತ್ತೆ ಸುದೀರ್ಘ ಚರ್ಚೆಗಳು ಇಲ್ಲಿ ಸಾಧ್ಯವಿಲ್ಲ. ಈ-ಮಾಧ್ಯಮಕ್ಕೆ ಇರುವ ವ್ಯಾಪ್ತಿ ಕಡಿಮೆ. ವೇದದ ಒಂದು ವಿಚಾರದ ಹಿಂದೆ ಹಲವು ಸೂತ್ರಗಳು, ಸಿದ್ಧಾಂತಗಳ ಸಂಪರ್ಕ ಕೊಂಡಿ ಬೇಕಾಗುತ್ತದೆ. ಒಂದು ಪ್ರಶ್ನೆಗೆ ಒಂದೇ ವಾಕ್ಯದಲ್ಲಿ ಉತ್ತರಿಸುವುದು ಬಹು ಕಷ್ಟ.

   ಭೌತಶಾಸ್ತ್ರಕ್ಕೆ ಸಂಬಂಧಪಟ್ಟ ಎಲ್ಲಾ ವಿಚಾರಗಳಿಗೆ ಅತೀ ಪುರಾತನವಾದ ವೈದಿಕ ಭೌತಶಾಸ್ತ್ರ ಎಂಬ ತಾಳೆ ಪತ್ರ ಸಂಗ್ರವೇ ಆಧಾರ. ಇನ್ನು ಪ್ರತಿಯೊಂದು ಶಾಸ್ತ್ರಕ್ಕೆ ಅದರದ್ದೇ ಆದ ಋಷಿಗಳ ಪ್ರಬಂಧಗಳಿವೆ. ಅವೇ ಆಧಾರ. ಎಲ್ಲವೂ ಬ್ರಾಹ್ಮೀ, ಪಾಲಿ, ಪ್ರಾಕೃತ, ಗೂರ್ಜರ, ನಾಗ, ಬಾಳಬಂಧು, ಪೈಶಾಚ, ಮಾಗಧಿ, ಶೂರಸೇನೀ, ಒರಿಯಾ ಇತ್ಯಾದಿ ಇತ್ಯಾದಿ ಪುರಾತನ ಭಾಷೆ ಮತ್ತು ಲಿಪಿಗಳಲ್ಲಿವೆ. ಅವುಗಳ ಹೆಸರನ್ನು ಹಿಡಿದು ಜಗ್ಗಾಡುವುದಕ್ಕಿಂತ, ವಿಚಾರವನ್ನು ಸತತ ಶ್ರವಣ, ಮನನ, ನಿಧಿಧ್ಯಾಸನಗಳಿಂದ ಸಾಧಿಸುವ ಪ್ರಯತ್ನ ನಮ್ಮದ್ದಾಗಬೇಕು. ಸಾಧ್ಯವಾದಷ್ಟು ಬದ್ಧ ವಿಚಾರಗಳನ್ನೇ ಇಲ್ಲಿ ನೀಡುವ ಅಭಿಲಾಷೆ ಇದೆ. ಗುರುಕುಲದ ಪ್ರಾಚ್ಯ ವಿಧ್ಯಾ ಪ್ರಾಕಾರದಲ್ಲಿ ಸತತ ಅಭ್ಯಾಸ ಮಾಡಿದಾಗ ಯಾವ ವಿಚಾರಕ್ಕೆ ಯಾವ ಆಧಾರ, ಬದ್ಧತೆಗಳೆಲ್ಲ ತಾನಾಗಿಯೇ ತಿಳಿದುಬರುತ್ತದೆ. ಅದಕ್ಕೂ ಮೀರಿದ ಚರ್ಚೆಗಳು ಇಲ್ಲಿ ಪ್ರಸ್ತುತವಲ್ಲ.

   Delete
  2. ಆಗಲಿ. ನಿಮ್ಮ ಪ್ರಸ್ತಾವನೆಗೆ ಸ್ವಾಗತ. ಅರ್ಥವಾಗದ ಗೂಢ ವಿಚಾರಗಳನ್ನು ಇನ್ನಷ್ಟು ಅಂತಹುದೇ ವ್ಯಾಖನಗಳಿಂದ ಗೊಂದಲಗೊಳಿಸುವ ಬದಲು ಸರಳವಾಗಿ ಎಲ್ಲರಿಗೂ ತಿಳಿಯುವ ರೀತಿಯಲ್ಲಿ ಬರೆದರೆ ಒಳ್ಳೆಯದಲ್ಲವೆ. ಈ ಮಾದ್ಯಮದ (ಬ್ಲಾಗ್) ಪರಿಧಿ ತಿಳಿದಿರುವ ನಿಮಗೆ ಇದರಿಂದ ಇನ್ನಷ್ಟು ಜನರನ್ನು ಸಾಧ್ಯ. ಇದಕ್ಕೂ ಮೊದಲಿನ ಹಲವು ಲೇಖನಗಳಲ್ಲಿ ಇದು ಸಾಬೀತಾಗಿದೆ (ಉದಾಹರಣೆಗೆ - ಹಚ್ಚು ಕಾಮೆಂಟ್ಸ್ ಬಂದಿರುವುದು). ನಿಮ್ಮ ಬ್ಲಾಗಲ್ಲಿ ಏನನ್ನು ಬೇಕಾದರೂ ಬರೆಯುವ ಹಕ್ಕು ನಿಮಗಿದೆ. ನಿಮ್ಮ ಪಾಂಡಿತ್ಯ ಪ್ರದರ್ಶನಕ್ಕೆ ಇದು ಸೀಮಿತವಾಗದಿರಲಿ ಎಂದಷ್ಟೇ ನನ್ನ ಆಶಯ.

   Delete
  3. ಅರ್ಥ ಆಗದಿರುವುದು ಅವರವರ ಕರ್ಮವೇ ಹೊರತು ಮಂತ್ರದ್ದಾಗಲೀ, ದ್ರಷ್ಟಾರರದ್ದಾಗಲೀ ಅಲ್ಲ. ಅರ್ಥಕ್ಕೆ ಮುಖ್ಯವಾದದ್ದು ಋತವೇ ಹೊರತು ಪೂರ್ವಾಗ್ರಹವಲ್ಲ. ಎಲ್ಲವೂ ಎಲ್ಲರಿಗೂ ಅರ್ಥವಾಗಬೇಕೆಂಬ ನಿಯಮವಿಲ್ಲ. ಯೋಗಿ ಪಡೆದದ್ದು ಯೋಗಿಗೆ, ಭೋಗಿ ಪಡೆದದ್ದು ಭೋಗಿಗೆ. ಸರಿಯಾಗಿ ಶ್ರವಣ, ಮನನ, ನಿಧಿಧ್ಯಾಸನದಿಂದ ಯಾವ ವಿಚಾರವನ್ನೂ ಜೀರ್ಣಿಸಿಕೊಳ್ಳಬಹುದು. ಅದರ ವಿಸ್ತೃತ ದಶವಿಧ ಅಧ್ಯಯನಾ ಕ್ರಮವನ್ನು ಹಿಂದಿನ ಲೇಖನಗಳಲ್ಲಿ ನೀಡಲಾಗಿದೆ. ದೂರದ ಬೆಟ್ಟ ನುಣ್ಣಗೆ ಎಂದು ಸುಮ್ಮನೆ ಕೂತವರಿಗೆ ವೇದವು ಕಬ್ಬಿಣದ ಕಡಲೆ. ನರಿಯು ತೋಟಕ್ಕೆ ಹೋಗಿ ಹಾರಿ ಹಾರಿ ಸಿಗದಿದ್ದಾಗ ದ್ರಾಕ್ಷಿ ಹುಳಿ ಎಂದಿತಂತೆ, ಹಾಗಿದೆ ಪ್ರಸಕ್ತ ಪ್ರಪಂಚದಲ್ಲಿ ನಾಟಕೀಯ ವಿದ್ಯಾರ್ಥಿಗಳು. ಛಲವಿಟ್ಟು ಸಾಧಿಸಿದರೆ ಶಿವನೇ ಪ್ರತ್ಯಕ್ಷನಾದ ಉದಾಹರಣೆಯು ಇತಿಹಾಸ ಪುರಾಣಗಳಲ್ಲಿದೆ. ನಮ್ಮ ಕಾಲ ಬುಡಕ್ಕೇ ಶ್ರಮವಿಲ್ಲದೆ ಎಲ್ಲವೂ ಬಂದು ಬೀಳಬೇಕು ಎಂದರೆ ಅದು ನಮ್ಮ ಮೌಢ್ಯ!!

   ವೈಚಾರಿಕತೆ ಎಂಬುದಿದೆ. ಅದರ ನಿಯಮದಂತೆ ಅದರದರ ಪಾತ್ರತೆ ಉಳ್ಳವರಿಗೆ ಆಯಾಯ ವಿಚಾರದ ಅರಿವು ಮೂಡಬೇಕು ಎಂಬುದು ಪ್ರಾಕೃತಿಕ ನಿಯಮ. RTI ಇದೆ ಅಂತ ದೇಶದ ಭದ್ರತಾ ರಹಸ್ಯವನ್ನೇ ಬಹಿರಂಗ ಪಡಿಸಿ ಎನ್ನುವುದು ಮೂರ್ಖವಾದ.

   ಇಲ್ಲಿ ಪಾಂಡಿತ್ಯ ಪ್ರದರ್ಶಿಸಿ ಅದರಿಂದ ಬಿರುದಾವಳಿಗಳನ್ನು ಗಳಿಸಿ ದೊಡ್ಡ ಮನುಷ್ಯ ಅಂಥ ಅನ್ನಿಸಿಕೊಳ್ಳೋ ಜಾಯಮಾನ ನಮ್ಮದಲ್ಲ. ಕಲಿತ ವಿಧ್ಯೆಗಳ ಸಾರಾಂಶವನ್ನು ಹಂಚಿಕೊಳ್ಳುತ್ತಿದ್ದೇನೆಯೇ ಹೊರತು ಡೊನೇಶನ್ ತೆಗೆದುಕೊಳ್ಳುವ ಶಾಲೆ ತೆರೆದು ಕುಳಿತಿಲ್ಲ. ಎಲ್ಲರೂ ಬಂದು ಓದಿ ಬ್ಲಾಗ್ ಹಿಟ್‌ಕೌಂಟ್ ಜಾಸ್ತಿ ಆಗಿ ಯಾಡ್‍ಸೆನ್ಸ್ ಜಾಸ್ತಿ ಮಾಡಿ ಅದರಿಂದ ದುಡಿಯಬೇಕೆಂಬ ದುರಾಸೆಯೂ ಇಲ್ಲ. ವಿಧ್ಯೆಯನ್ನು ಅರಸಿ ಬರುವ ವಿಧ್ಯಾರ್ಥಿಗಳಿಗೆ ಇದು ತಲುಪಲಿ ಎಂಬುದು ಉದ್ದೇಶ. ಇಂದಲ್ಲದಿದ್ದರೆ ಮುಂದೊಂದು ದಿನ ಒಬ್ಬನಾದರೂ ಮುಮುಕ್ಷು ಹುಟ್ಟಿ ಬರುತ್ತಾನೆ. ಅವನಿಗೆ ಅರ್ಥವಾದರೆ ಸಾಕು. ಎಲ್ಲರೂ ಕಲಿತು ಉದ್ದರಿಸುವುದು ಅಷ್ಟರಲ್ಲೇ ಇದೆ, ಪ್ರಪಂಚ ನಾಶವೂ ಮಾಡಬೇಕಿಲ್ಲ.

   ಸುಮ್ಮನೇ ಸಾಧನೆಯೇ ಇಲ್ಲದೆ ಯಾರೋ ಕೊಟ್ಟ ವಿಧ್ಯೆಯೂ ಕೂಡ ಶಾಶ್ವತವಲ್ಲ. ನಾವು ಸಾಧಿಸಿ, ಗಳಿಸಿದ್ದು ಮಾತ್ರ ನಮ್ಮಲ್ಲಿ ಉಳಿಯುತ್ತದೆ.

   ಬ್ಲಾಗಿನ ನಿರ್ವಹಕ ನಾನಾದರೂ, ಏನು ಬೇಕಾದಾರೂ ಬರೆಯುವ ಹಕ್ಕಿರುವುದಿಲ್ಲ. ವೈಚಾರಿಕ, ವೈದಿಕ ಬದ್ಧತೆ ಎಂಬುದಿದೆ. ವಿತಂಡ, ಜಲ್ಪಾದಿಗಳಿಗೆ ತಕ್ಕ ತರ್ಕಶಾಸ್ತ್ರೀಯ, ಮೀಮಾಂಸ ರೀತ್ಯಾ ಕಟು ಉತ್ತರಗಳೂ ಇವೆ. ಮಗುವಿಗೆ ನವನೀತದಂದದಿ ಅರೆದು ತಿನಿಸುವ ಮಧುರಭಾಷೆಯಿದು. ಕೀಲಕವು ತೆರೆದರೆ ಮಾತ್ರ ರಹಸ್ಯ ಅರ್ಥವಾದೀತು.

   Delete