Sunday, 21 April 2013

ನಾಭ ಋಷಿ ಪ್ರೋಕ್ತ ಜಗತ್ ಸೃಷ್ಟಿಯ ನಿಯಮಗಳು


ಕೆ. ಎಸ್. ನಿತ್ಯಾನಂದ ಸ್ವಾಮೀಜಿಯವರ ಪಂಚವಾರ್ಷಿಕ ಅಗ್ನ್ಯಾ ವೈಷ್ಣವೀ ಯಾಗದಲ್ಲಿ ಅಗ್ನಿ ಮುಖೇನ ಉದ್ಘಾಟಿತ ನಾಭಾ (ನೇದಿಷ್ಠೋ ಮಾನವಃ) ಋಷಿರ್ಯ ಸತ್ಯ ವಿಚಾರಗಳಲ್ಲಿ ಜಗತ್ ಸೃಷ್ಟಿಯ ನಿಯಮಗಳ ಕೆಲ ಆಯ್ದ ಪದ್ಯಗಳು–

ಉದಯಕಾಲಕೆ ಮುನ್ನ ಮರುದಿನವೆದ್ದು ಶಿಷ್ಯರು ಸ್ನಾನ ಸಂಧ್ಯಾ
ವಂದನೆಯ ಮುಗಿಸುತ ಬಂದು ಗುರುವಿನ ಬಳಿಯಲಿ ಕೇಳಿದರು
ತಂದೆ ಕೇಳೈ ನೀವು ಪೇಳಿದಿರಿ ಈ ಅಜಾಂಡದ ರೂಪ ಸ್ವರೂಪವೇ ಮಾನವ ದೇಹವೆಂದಿರಿ ಅದರರ್ಥವೇನು ||
ಚಂದವಾಯಿತು ಮಕ್ಕಳೇ ಕೇಳಿ ನೀವ್ ಈ ಅಜಾಂಡದ ರಹಸ್ಯ
ವಿಂದು ಪೇಳುವೆ ಕೇಳಿ ಹಿಂದೆ ಜಲಮಯವಾಗಿತ್ತು ಇಲ್ಲಿನಾ ಆ
ನಂದ ಪೃಥ್ವಿಯು ಉದಿಸಲೋಸುಗ ಹರಿಯ ಕರ್ಣ ಶ್ಲೇಷ್ಮ ಉದುರಿಸಿದ ಬೊಮ್ಮನಾಗಲು ಜನಿಸಿದರೀರ್ವರೂ ||

ಇಬ್ಬರೆಂದರೆ ಮಾನವರಲ್ಲ ರಾಕ್ಷಸರು ಅಂದರೆ ವಿಕೃತಿ, ವಿಕಾರ
ಒಬ್ಬಗೆಯ ರೂಪವಿಲ್ಲದ ಮೆತ್ತನೆಯ ಮಾಂಸಲ ಮುದ್ದೆಯೊಂದು ಇ
ನ್ನೊಬ್ಬ ಕಠಿಣತೆಯಲಿ ಶಿಲೆಯಲ್ಲಿ ವಜ್ರವಲ್ಲವು ಶಂಖಾದಿ ಪಾಷಾಣಗಳ ಪರ್ವತವು ರೂಪವಿಲ್ಲದೆ ಉದಿಸಿರಲೂ ||
ಶಬುದಕೇನಾಕಾರ ವಿಭುಧರಿಲ್ಲವು ಆಕಾರ ನಿರ್ದೇಶನಕೆ ವಿಪುಲ ಜಲದಲಿ
ಅರ್ಬುದ ಹಲವಾರು ಕಾಲ ತೇಲುತಿರೆ ಒಂದಿನ ಬೊಮ್ಮ ಚಿಂತಿಸಿದ ಇದರಲಿ
ಕಬ್ಬವನು ಸೃಷ್ಟಿಸಲು ಪೃಥ್ವಿಯಪ್ಪುದು ಎಂದು ಮೈದೋರಿ ಕರ್ಷಣೆಗೆ ಅನುವಾಗಿ ವ್ಯರ್ಥವಾಗಲು ಕರೆದ ಹರಿಯನ್ನೂ ||

ಹರಿಯೆ ಕೇಳ್ ಪೃಥ್ವಿಯಾ ಸೃಷ್ಟಿಯಲಿ ಎರಡು ಭೂತಗಳಿಹವು ಒಂದು ಮೃದು
ಸಿರಿಯೊಳಗಾಧವದು ಆದರಿನ್ನೊಂದು ಕಠಿಣವು ವಿಪುಲ ಗಾತ್ರವು ನಿನ್ನೊಳಿಹ
ಬರಿಯ ಶ್ಲೇಷ್ಮದ ಕಾರಣದಿ ಉತ್ಪನ್ನವಾಯಿತು ಅವುಗಳೊಳು ಕರ್ಷಣೆಯ ಹುಟ್ಟಿಸಲು ನೀ ಸಹಕರಿಸಬೇಕೆಂದಾ ||
ಹರಿಯು ನಸುನಗುತ ಬೊಮ್ಮನೇ ಕೇಳ್ ಶಬುದ ವ್ಯಾಪ್ತಿಗೆ ಇದಲ್ಲ
ಬರಿಯ ಸ್ನೇಹಕವಿದು ಇದರ ಕರ್ಷಣೆ ಭಿನ್ನವಾಗಿದೆ ಬಿಡು ಎನ
ಗಿರಲಿ ಈ ಮೃದು ಕಠಿಣತೆಯ ಕರ್ಷಣೆಯ ಜವಾಬ್ದಾರಿ ಎನಗಿರಲಿ ಕಾರ್ಯ ಕಾರಣ ನಾನು ನೀನು ಕರ್ತೃವೆಂದಾ ||

ಕೇಳಿರೈ ಶಿಷ್ಯರಿರಾ ಕಾರ್ಯವೊಂದಿದೆ ಕಾರಣವಿದೆ ಅದಕಾಗಿ ಕರ್ತೃವಿದೆ
ಹೇಳಿದಾ ಕಾರ್ಯ ಫಲ ರೂಪವೇ ಉತ್ಪನ್ನ, ವ್ಯವಹಾರ, ತನ್ಮುಖೇನ ಜ್ಞಾನ
ವಾಳುವುದು ಲೋಕವನ್ನೆಂದು ವೇದ ಹೇಳುತಿದೆ ಅರಿಯದಾ ಜ್ಞಾನ ಕರ್ತೃವನು ಎಲ್ಲವೂ ತಾನೆಂಬನೂ ||
ಬಾಳುವಾ ರೂಪ ಎಲ್ಲವು ಜಗದೊಳು ಮಾಯೆಯಾಡುತಿದೆ ಕಠಿಣತೆಯು ತಾನು
ಗೋಳು ಹೊಯ್ಯುತಿದೆ ಮೃದುತ್ವವನು ತನ್ಮುಖೇನ ಸೃಷ್ಟಿಯ ಪ್ರಪಂಚ
ಕೇಳಿರೀ ಈ ಲೋಕದಲಿ ಕಾಣುವಾ ಚರಾಚರಗಳೆಲ್ಲವ ಸೃಜಿಸಿದನು ಕರ್ತೃವು ಅದೇ ಬೊಮ್ಮ ಜ್ಞಾನವೆಂಬೇ ||

ಕರಣವದು ರೂಪ, ರೂಪವೇ ಕಾರಣವು, ಕಾರಣವೇ ಕರ್ತೃವಿನ ಇಚ್ಛೆಯು
ಕಾರ್ಯ ಕಾರಣವನರಿತು ಮಾಡಲು ರೂಪ ವಿದರೊಳು ಶಬ್ದವಿಲ್ಲವೊ ಕೇಳಿರೀ
ಕರಣವಿದೆ ಅದಕೆ ಕರ್ತೃವಿನ ಮನವಿದೆ ಕಾರ್ಯದಾ ಋಣವಿದೆ ಅದಕಾಗಿ ರೂಪವಿದೆ ಋಣವೇ ರೂಪವು ಕಾಣಿರೀ ||
ಶರಣು ಹೊತ್ತಿದೆ ರೂಪ ಋಣದಲಿ ಋಣವು ಮಾಯೆಯಲಿ ಆಡಿಸಿತು
ಕಾರಣವನರಿಯದಾ ಈ ಕಾರ್ಯ ಮಾಯೆಯಾಟದಿ ಸತತ ಚಲಿಸುತಿದೆ ಅದೇ
ಕಾರಣವಯ್ಯ ಸೃಷ್ಟಿಗೆ ಅದ್ಭುತವು ರೋಚಕವು ತನ್ನ ತಾನರಿಯದಾ ಬರಿ ಪಾತ್ರ ನಿರ್ವಹಣೆ ಈ ಲೋಕವೂ ||

ಸೃಜಿಸಿದಾ ಕರ್ತೃವಿನ ಮಾತ ಕೇಳಲು ಬಿಡದು ಮಾಯೆಯು
ಸೃಜನಶೀಲತೆಯಿರಲಾರದಲ್ಲಿ ಜಡತ್ವ ಪಸರಿಸಿದರೆ ಕ್ಲಪ್ತಜ್ಞಾನ
ಸೃಜಿಸಿತು ಪ್ರಾಪಂಚಿಕವ ಅನ್ನಾಹಾರ ವಸನ ವ್ಯಸನ ನಿರಸನ ನಿರುಪಾಯ ಉಪಾಯ ಉಪಾಂಶುಗಳಾ ||
ಸೃಜಿಸಿದಾ ಜ್ಞಾನ ಮೂಲನು ಬೊಮ್ಮ ಬೆರಗಾಗಿ ನೋಡುತಿರೆ ಹರಿ ಪೇಳ್ದ
ಸೃಜಿಸುವುದು ಮಾತ್ರ ನಿನ್ನಯ ಕರ್ಮ ಕರ್ತೃನೀನಹೆ ಬಿಡು ಚಿಂತೆ
ಸೃಜಿಸಿದಾ ಮೇಲಣ ವ್ಯಾಖ್ಯೆ ನನ್ನದು ಈ ಸೃಷ್ಟಿಯ ಕಾರ್ಯಕಾರಣ ನಾನು ನೀನರಿತಿರುವೆಯಲ್ಲಾ ||

ಇಂತು ಅಜಾಂಡ ಸೃಷ್ಟಿಯಾಯಿತು ಕೇಳಿ ಜ್ಞಾನದರಿವಿಲ್ಲ ಇ
ನ್ನೆಂತು ಬಾಳುವವೋ ಎಂದು ಚಿಂತಿಸುತ ಬೊಮ್ಮನು ಮನಸಿನಲಿ
ಇಂತು ಪಡೆದನು ನಲವತ್ತು ಮಂದಿ ಮಕ್ಕಳ ಲೋಗರಿಗೆ ಜ್ಞಾನವನು ಬೋಧಿಸಿರೆಂದಾ ||
ಇಂತು ಕಲೆಗಳ ಸೃಜಿಸಿ ಮನಸಿನಲಿ ಬೊಮ್ಮನೈ ಲೋಕದ
ಲೆಂತು ಜೀವಗಳಿವೆ ಅವುಗಳಿಗೆ ಜ್ಞಾನದಾ ಕೊರತೆಯಿರೆ ನೀ
ವಿಂತು ಬೋಧಿಸಿರೆಂದು ಹರಸಿ ಕಳುಹಲು ಬ್ರಹ್ಮಮಾನಸ ಪುತ್ರರಾಗಲು ಬಂದ ಲೋಗರ ಕಂಡರೂ || ….

ಇರಲಿ ಬಿಡಿ ಅಂಗಗಳ ಬಾಹ್ಯ ಗೋಚರ ಶಕ್ತಿ ಬಿಡಿ ಪೇಳುವೆನು ಆಧ್ಯಾತ್ಮ ಅ
ದರ ಸೂಕ್ಷ್ಮತೆಯನು ವಿವರಿಪೆನು ಕೇಳಿರಿ ಅದುವೆ ಬ್ರಹ್ಮದರಿವಿನಾ ದಾರಿ
ಇರಬೇಕು ತಲೆ ನಿಮಗೆ ಇದರರ್ಥವನು ತಿಳಿಯಲು ನಾ ಪ್ರವಚನವ ಮಾಡುವೆನು ನೀವು ಹೂಂಕಾರದಿಂದಾ ||
ಪರವಿಷಯ ಹೊರಗಿಟ್ಟು ನರರು ನಾವೆಂದೆಂಬ ಅರಿವು ಹೊಂದುತ
ಶರವೊ ಶಾಪವೊ ಸ್ವೀಕರಿಪೆ ಬರಲೆಂಬ ಧೈರ್ಯದಲಿ ಸಿದ್ಧರಾಗಿರುತ
ಕರಮುಗಿದು ಕಿವಿ ತೆರೆದು ಕಣ್ಣ ಮುಚ್ಚುತ ಏಕಾಗ್ರತೆಯ ಸಾಧಿಸಿರಿ ನಾ ಪೇಳ್ವೆ ಮುಂಗಥೆಯನೂ ||

ಆದಿಯಲಿ ಬೊಮ್ಮನಿರಲಿಲ್ಲ ಇತ್ತು ಅಂಡವು ಆದಿಶಕ್ತಿಯ ಚಿಂತನೆಯಲೀ
ಆದಿಯಾಯಿತು ಪ್ರಕೃತಿಯ ರೂಪಿನಲಿ ತಾನಾಡುವಾ ಆಡುಂಬೊಲಕೆ ವೇದಿಕೆಯಿದೆಂದು
ಆದಿಶಕ್ತಿಯು ಭ್ರುಕುಟಿಯನು ಬಿಗಿಯಲು ಭೇಧಿಸಿತು ಅಂಡವು ಪಸರಿಸಿತು ಭೂಮಿಯಾಯ್ತು ಪಂಚಭೂತಗಳಾದವು ||
ಹಾದಿಯಿಂದ ಭೂ, ಜಲ ತತ್ವದಲಿ ಬ್ರಹ್ಮ ಸೃಷ್ಟಿಯಾಗಲಿ ಜಲ ಅಗ್ನಿ ವಾಯು ತತ್ವದಲಿ
ಆದಿನಾರಾಯಣನ ಸೃಷ್ಟಿಸಿ ವಾಯ್ವಾಕಾರದಲಿ ಹರನ ಸೃಜಿಸುತ ತತ್ವಗಳನರಿತು
ಆದಿಯಾಗಲಿ ಸೃಷ್ಟಿಗಿಂದೆಂದು ಆದಿ ಮಾಯೆಯು ಆದೇಶಿಸಲು ಉಪಕ್ರಮಿಸಿದರು ಮಾತೆಯ ಅನುಜ್ಞೆಗನುಗುಣವಾಗೀ ||

ಪೃಥಿವಿ ಆಪ್ ತೇಜೋ ವಾಯು ಆಕಾಶವೇ ಪಂಚ ಕಾಣಿರಿ
ಪೃಥಿವಿಯೊಳ್ ನಿಂತು ಈ ಕಾಯದಿಂ ನೀನರಿಯಲು ಜಲವು
ಪೃಥ್ವಿ ಜಡ ಜಲದೊಳು ನಿಂತು ನೀನರಿಯೇ ಜೀವಜಲ ಜಡವೆಂಬರಿವು ಮೂಡುವುದು ಸತ್ಯ ||
ಪಾರ್ಥಿವ ದೇಹವಿಲ್ಲದಿರೆ ತೇಜವೂ ಜಡ ಅನುಭವಕೆ ಬಾರದು
ಪಾರ್ಥಿವರಿಗಿದು ವಾಯು ಚಲನೆಯಲ್ಲವೂ ಜಡವು ಆಕಾಶವಿನ್ನೇನು
ಪಾರ್ಥಿವ ದೇಹವಿಲ್ಲದ ಜಡ ಸ್ಥಳವೇ ಕಾಣು ಎಲ್ಲವೂ ಜಡ ಮೂಲಚೈತನ್ಯ ಸೇರಿದರೇ ಜೀವವೂ ||

ಮೊದಲು ಗಿಡ, ಮರ, ತರುಲತೆ, ಓಷಧಿಯ ಸೃಜಿಸಿದನು ಬೊಮ್ಮನು
ಅದಲು ಬದಲಾದ ಲೋಹ, ಶಿಲೆ, ರಸ, ಪಾಷಾಣ, ಮೃತ್ ಸೃಜಿಸುತ ಪಾಲನೆ
ಯೊದಗಿಸಿದ ನಾರಾಯಣನು ಈ ವಿಶಾಲ ಪ್ರಕೃತಿಯ ಭೋಗಿಸುವ ಜೀವಿಯನು ಸೃಜಿಸೆಂದನು ಬೊಮ್ಮನಲೀ ||
ವಿಧಿಯು ಸೃಜಿಸಿದ ಚತುಷ್ಪಾದಿಗಳ, ದ್ವಿಚರಿಗಳ, ಪಾದ ರಹಿತ ಸೂಕ್ಷ್ಮಾಣು ಜೀವಿಗಳ
ಉದಿಸಿದವು ಲೋಕದಲಿ ಮೇಲಾಟ, ಏರಾಟ ಹೆಚ್ಚಿತೈ ಲೋಕದಲಿ ಉರಗ ಸಂತತಿ ಬೆಳೆಯಿತು
ಒದಗಿಸಲು ಆಹಾರವದರಿಂದ ವಿಪರೀತ ಸೃಷ್ಟಿಯಾಯಿತು ಅವುಗಳ ಮೇಲಾಟ ತಡೆಯಲು ಅನ್ನ ಚಕ್ರವ ಸೃಜಿಸಿದಾ ||

ಸೂಕ್ಷ್ಮ ಜೀವಿಯು ಹುಲ್ಲಿಗೆ ಹುಲ್ಲು ಹುಲ್ಲೆಗೆ ಹುಲ್ಲೆಯು ಹುಲಿಗೆಂಬಾ ಈ ಚಕ್ರದಾ
ಸೂಕ್ಷ್ಮ ಪರಿಭ್ರಮಣದಾಧಾರದಲಿ ಹಲವು ಜೀವಿಗಳು ಉದಿಸಿದವು ಚಕ್ರಗುಣಕನುವಾಗಿ
ಸೂಕ್ಷ್ಮತೆಯು ಹೆಚ್ಚಿತೈ ಒಟ್ಟು ಎಂಬತ್ತನಾಲ್ಕು ಲಕ್ಷ ಜೀವಿಗಳುದಿಸಿದವು ಲೋಕ ಲೋಕವರಿಯದ ವೈಖರಿಯು ಇರಲಿಲ್ಲಾ ||
ಸೂಕ್ಷ್ಮತೆಯ ಚಿಂತನೆಗೆ ಹಚ್ಚಲು ಪ್ರಕೃತಿ ಸಹಜ ಉತ್ಪಾದಕತೆಗೆ ಪೂರಕವಿರಲು ಅಸಹಜ
ಸೂಕ್ಷ್ಮತೆಯನರಿಯದ ಈ ಚರಾಚರ ಜೀವಿಗಳು ಆದಿಶಕ್ತಿಯ ಮನೋಲ್ಲಾಸಕೆಣೆಯಿಲ್ಲವೆಂದು
ಸೂಕ್ಷ್ಮದಲಿ ಚಿಂತಿಸುತ ವಿಧಿಯು ಈ ಜೀವಿಗಳ ಋಣ, ಕರ್ಮ, ಭೋಗವನಳೆದು ಇಬ್ಬಗೆಯಲಿ ಆರು ಚಕ್ರವ ಸೃಜಿಸಿದಾ ||

ಹರಿಯು ಪೇಳಿದ ಕೇಳು ಬೊಮ್ಮನೆ ಈ ಜೀವಿಗಳಿಗೆ ಕರ್ಮದ ಬಂಧ ಜೀವನ
ಹರಿದು ಕರ್ಮವ ತಿಂಬ ಜೀವಿಯ ಸೃಜಿಸಿದರೆ ಕರ್ಮ ಬೆಳೆಯುವುದು ಕಠಿಣತೆಯು
ಅರಿಯಲಾಗದು ವ್ಯರ್ಥ ಸೃಷ್ಟಿಯ ಮಾಡದಿರು ಈ ಕರ್ಮಗಳ ಭುಂಜಿಪ ಜೀವಿಯನು ಸೃಷ್ಟಿಸಿ ಕರ್ಮ ನಾಶ ಮಾಡೆಂದಾ ||
ಹರಿಯಾಣತಿಯ ನೊಡಗೊಂಡು ಬೊಮ್ಮ ಆರುಚಕ್ರವ ನಿಲಿಸಿ ಅಸ್ಥಿಯ ಮಹಾಭೇರ
ದರಿವಿನಿಂ ಮಾನವನ ಸೃಜಿಸಿ ತಲೆಯೊಳಗೆ ಸಹಸ್ರಾರದಲಿ ನಿಲ್ಲಿಸಿದ ಅನ್ನಚಕ್ರವನು
ಹರಿಯಲೀ ಈ ಭುವಿಯ ಸಂಚಿತ ಕರ್ಮಶೇಷವೇ ಮಾನವಗೆ ಆಹಾರ ನಿತ್ಯದುತ್ಪನ್ನವೇ ಕರ್ಮ ತಿಳಿಯೆಂದಾ ||

ಮೊದಲು ಈ ಆತ್ಮ ಶುದ್ಧಿಯೊಳಿತ್ತು ಭುವಿಯ ಋಣ, ಕರ್ಮಗಳು ಬಾಧಿಸೆ
ಒದಗಿತೈ ಹಲವು ಜನ್ಮವು ಆತ್ಮಕರಿವಿಲ್ಲ ಮಾಯೆ ಮುಸುಗಿತು ಮರೆಯಿತೈ
ಒದಗಿ ಬಂದಿತು ಹಲವು ಕ್ಷುದ್ರಜನ್ಮವು ಅದರ ನರಳಾಟದಿಂದರಿವು ಪಡೆಯುತ ಸಾಧನೆಯಿಂದ ಮಾನವ ಜನ್ಮ ಪಡೆಯೇ ||
ಅದಲು ಬದಲಾಯ್ತು ಇಲ್ಲಿಯೂ ಅರಿವಾ ಬೋಧಿಸಿತಾ ನೀ ಸ್ವತಂತ್ರನಲ್ಲ
ವೆಂದು ಬೋಧಿಸಿ ಕುಲದ ಬಂಧನ, ಋಷಿಯ ಬಂಧ, ದೇವಬಂಧನ
ಎಂದು ತೊಡಗಿಸಿ ಬಂಧಿಸಿದಳಾಗ ತಾಯಿ ಮಮತೆಯ ಬಳಿಯಲಿ ನವಿರಾಗಿ ಆನಂದವಾಯ್ತು ಆತ್ಮನಿಗೇ ||

ಆತ್ಮನಿಗೆ ತನ್ನರಿವು ಕ್ರಿಮಿ ಕೀಟ ಶ್ವಾನದಲ್ಲಿರುವಾಗ ಆಗಲು ತಾನು
ಆತ್ಮನೇ ಹೊರತು ಪಾರ್ಥಿವನಲ್ಲ ಇದು ಬರೀ ವೇಷ ಇಲ್ಲಿನಾ ನೆಂಟನೆಂ
ದಾತ್ಮ ಚಿಂತಿಸಿ ಮುಕುತಿ ಪಡೆಯಲು ಈ ಪರ್ಥಿವದೊಳ್ ಮಾನವನಾಗಿ ಬಯಸಿ ಬಂದಾ ||
ಆತ್ಮನಿಗೆ ಜೀವಾತ್ಮ ಪರಮಾತ್ಮ ಭೇದದರಿವಿರಲು ಕ್ಷುದ್ರದಲಿ ಜೀ
ವಾತ್ಮ ಬಂಧನದಿಂದ ಪರಮಾತ್ಮನಲಿ ಬೆಸುಗೆಯಾ ಆಶೆಯಲಿ
ಆತ್ಮರೂಪು ಪಡೆದನು ಮಾತೆಯಾ ಮಮತೆಯಲಿ ಮಿಂದುಂಡು ಮರೆತನೆಲ್ಲಾ ||

ಅಹುದಹುದು ತಿಳಿಯಿರಿ ಲೋಕದಲಿ ಗುರುವೇ ಸರ್ವಸ್ವ ಆತ್ಮನು
ಬಹುಮುಖ್ಯವಾಗಿ ಆತುಕೊಳ್ಳಲು ಬೇಕು ಗುರುವನು ಇಲ್ಲದಿರೆ ಆತ
ಬಹುಜನ್ಮ ವೆತ್ತಿದರೂ ಕೊನೆಗಾಣಲಾರ ಇದು ಸತ್ಯ ಗುರುವಿನ ಗುಲಾಮನಾಗುವತನಕ ದೊರೆಯದು ಮುಕ್ತಿ ||
ಅಹುದು ಎಂದಿರಿ ನೀವು ಈ ಲೋಕವೇಕೆ ಸೃಷ್ಟಿಸಿದ ಬೊಮ್ಮನು
ಬಹು ಜೀವಿಗಳು ಬೇಕೆ ಅವುಗಳೊಳು ವೈರ, ಭೇದ ಭಿನ್ನತೆಗ
ಳಿಹೆಯೇಕೆ ಈ ವಿಕಟ ಪ್ರಪಂಚದಾ ಹಿಂದೆ ಏನಿದೆ ಉದ್ದೇಶ ಕಪಟನಾಟಕದರ್ಥವೇನೂ ||

ಅಂದು ಈ ಅಜಾಂಡವಿರಲಿಲ್ಲ ನೀಹಾರಿಕೆಯು ತಾನೇ ತಾನಾಗಿತ್ತು ಕತ್ತಲು
ಒಂದು ಬಾರಿ ನಕ್ಕಿತು ನೋಡಿ ಚೈತನ್ಯ ಮೂಲವು ಉದಿಸಿತೈ ದ್ವಾದಶಾದಿತ್ಯರು
ಹಿಂದು ಮುಂದಾದ ತ್ರಿಕೋಣದಂತಿರೆ ಮೂವತ್ತಾರು ಕೋಣಗಳು ಉದಿಸಿತು ನವಕೋಣಗಳು ಆದಿತ್ಯರಾಗೇ ಅದ ||
ರೊಂದಿನ ಆದಿತ್ಯರೆಲ್ಲರಿಗು ಚಿಂತೆ ಹುಟ್ಟಿತು ತಮ್ಮಯ ಕಾರ್ಯ ಬೇರೇನು
ಇಂದೀ ನೀಹಾರಿಕೆಯಲಿ ಸಾಕು ಒಂದಾದಿತ್ಯ ವಿನ್ನುಳಿದವರಿಗೇನು ಕೆಲವ
ವೆಂದಿರಲು ಉದಿಸಿತೈ ಸುಳಿಯೊಂದು ನೀಹಾರಿಕೆ ವಿಭಜಿಸಲು ಹದಿನಾಲ್ಕು ಲೋಕ ಭಿನ್ನ ಭಿನ್ನವಾಗಿರಲೂ ||

ಒಂದು ತೇಜೋಮಯವು ಚೈತನ್ಯ ನಗುವಿನ ಮೂಲ ಕತ್ತಲೆಯ ಕಾಡು ಇ
ನ್ನೊಂದು ಲೋಕದಾ ದುಃಖದಾ ಮಂದಿರವು ಉಳಿದ ಹನ್ನೆರಡು ಲೋಕದಲಿ
ಅಂದು ಜೀವಸೃಷ್ಟಿಯು ಆಯಿತಾಗಲು ಭಗವಂತನಾಟದಾ ಕಣ ಸಿದ್ಧವಾಯ್ತಲ್ಲಿ ಜೀವ ಜಡತ್ವ ಸಿದ್ಧಾಂತ ಮೆರೆಯೇ ||
ಒಂದು ಎರಡಾಯ್ತು ಎರಡೊಳಗೊಂದು ಸೇರಿ ಮೂರು ನಾಲ್ಕು ಐದುಗಳ
ಚಂದದಿಂ ಪಂಚೀಕರಣಗೊಳ್ಳುತ ಶೇಷಕರ್ಮವು ವಿಭಜಿಸಿ ಪಂಚಭೂತಗಳು
ಒಂದಾಗಿ ಪ್ರಕೃತಿಯದಾಯ್ತು ಜೀವ ಸಂಕುಲ ಸೃಷ್ಟಿಯದಾಯ್ತು ಮೂಲಚೈತನ್ಯ ವಿಘಟನೆಯಿಂದ ನೆಲೆಯಾಯ್ತು ಭೂಮಿ ||

ಚಲನೆಯದು ಚೈತನ್ಯದಾ ಸಹಜಗುಣ ವದರಿಂದ ಅದು ತನಗಾಗಿ
ಚಲನಶೀಲತೆಯ ನೆಲೆಗೊಳಿಸಿ ಅಸ್ಥಿರ ಪ್ರಪಂಚವನು ಸೃಷ್ಟಿಸುತ
ಚಲನೆಯದು ರಹಸ್ಯವಾಗಿರಲು ಲೋಕದಲಿ ಮಾಯೆ ಸೃಷ್ಟಿಸಿತು ಅರಿಯದಿರಲಿ ಜೀವಗಳೆಂದೂ ||
ಚಾಲನಾಶಕ್ತಿ ತಾನಾಗಿ ವ್ಯವಹರಿಸಿ ತನ್ನ ಅಸ್ಥಿತ್ವಕ್ಕೆ ಬೇಕಾಗಿ ಈ ಜಗದ
ಚಲನೆಯಲಿ ಸುಖ ಕಂಡು ಆನಂದಪಡುತ ನಿರಂತರತೆಗಾಗಿ ಸದಾ
ಚಲನೆಯಲಿ ಇಹುದದುವೇ ಚೇತನವು ನೀವಾರು ಚಲಿಸುತಿಲ್ಲವೊ ಮರುಳೇ ಭ್ರಾಂತಿಯದು ನಿಮಗೇ ||

ಚಲಿಪ ದ್ವಿಪದಿಯು ಮೊತ್ತವದಕೆ ಕೂಡಿಪ ಸಂಖ್ಯೆ ಚತುಷ್ಪದಿ
ಚರಿಸುವಾ ಸರಿಸೃಪ ಗುಣಕದಂಶ ಹಾರುವಾ ಕೀಟವದು ಭಾಗಾಂಶವೂ
ಚಲನೆಯಲಿರುವಾ ಮೃಗಾದಿ ಕ್ರೂರಗಳು ಹತ್ತೇಳು ಸಾಧುಗಳು ಏಳೇಳು ಮೂರೇಳು ಮತ್ತು ಖಗವೂ ||
ಚಾಲನೆಯ ನೀಡುವಾ ಸನ್ನೆ ಚಿಹ್ನೆಯ ಹತ್ತು ಮತ್ತಾರು ಮೂರು ಆರುಗಳು
ಚಲಿಸುತಿವೆ ಖಗೋಳದಲಿ ಗ್ರಹವು ಅರಿಯಿರೈ ಅದಕನುಸರಿಸಿ ರೂಪು
ಚಲನೆ, ವೈಖರಿಯು, ಆಹಾರ, ಸ್ವಭಾವ, ವೃತ್ತಿ, ಉದ್ದೇಶ ವವಕದಕೆ ಇದೆ ತಿಳಿಯಿರೆಂಬೇ || …..


ಚೊಕ್ಕ ಲೆಕ್ಕವ ಪೇಳ್ವೆ ಕೇಳೈ ಮೂರು ಋಣ ಆರು ಕರ್ಮವು
ಚಿಕ್ಕ ಜೀವಿಗೆ ಕೂಡ ಇಹುದೈ ಅದಕೆ ಬೊಮ್ಮನ ಲೆಕ್ಕ ವಿಧಿಯೆಂದು
ಮಿಕ್ಕೆಲ್ಲ ಲೆಕ್ಕದಲಿ ದಿನಮಣಿಯ ಕಿರಣಪಾತದ ಲೆಕ್ಕದಿಂ ಪರಿಣಮಿಸಲಾ ಜೀವ ತರುಲತೆಗಳಾಯ್ತು ||
ಪಕ್ಕಲೆಕ್ಕವಿದು ಶೇಷವಿಲ್ಲದ ಲೆಕ್ಕ ಅಕ್ಕರದಿ ಜೀವಿ ಭೋಗಿಪ
ಲೆಕ್ಕ ಅದೆಲ್ಲ ಕರ್ಮಗಳು ಋಣಗಳು ಚೊಕ್ಕವಾಗಿಯೇ ಜೀರ್ಣಿಸಲು
ಮಿಕ್ಕ ಜೀವಿಗಳಿಲ್ಲ ಲೋಕದಲಿ ಮೂಲಚೈತನ್ಯ ಮಾಯಯು ತಾನೇ ತಾನು ಹೊರತು ಬೇರಿಲ್ಲ ||

ಒಟ್ಟು ಅಜಾಂಡದಲಿ ಇರುವ ಜೀವಿಯು ತನ್ನ ಜೀವನ ಕರ್ಮ ಶೇಷವ ಅರ್ಜಿಸುತ
ಬಿಟ್ಟು ಮಾನವನಾಗಿ ಹುಟ್ಟಿಯದರನು ಭುಂಜಿಸುತ ಕಡೆಯಲಿ ಶೇಷ ತೀರಲು
ಕಟ್ಟಕಡೆಯಲಿ ಮೂಲಚೈತನ್ಯದೊಡತಿಯಲಿ ಸೇರಲಿ ಎಂದು ಸೃಜಿಸಿದ ಮಾನವನ ಬೊಮ್ಮನೂ ||
ನಾನು ನಾನ್ಯಾರೆಂಬ ಅರಿವು ಮೂಡುವ ತನಕ ಪಯಣವಿದೆ ಬಹುದೂರ
ನೀನು ನಿನ್ನ ಅಸ್ತಿತ್ವ ಮರೆಯುತ ಶೂನ್ಯವಾಗುತ ಮುನ್ನಡೆಯುತಿರೆ
ಜೀನಿನಾ ತೆರದಿ ನಿನ್ನ ಹಬ್ಬಿಕೊಂಡಿಹ ಕರ್ಮ ದೂರವಾಗುತ ಜೀವನ ಮಧುವ ಕಾಣುವೆ ಕೇಳು ನೀನೆಂಬೇ ||

No comments:

Post a Comment