Saturday, 27 April 2013

ಚುನಾವಣೆ ಒಂದು ನೋಟ

1. ಮಹಾ ಚುನಾವಣೆ 
2. ಉಪ ಚುನಾವಣೆ
3. ಚುನಾವಣೆ
4. ಬಿಟ್ಟಿ ಚುನಾವಣೆ
5. ಬೇಕಾಬಿಟ್ಟಿ ಚುನಾವಣೆ
6. ವಿಪರೀತ ಚುನಾವಣೆ
7. ಮತಿಭ್ರಾಂತ ಚುನಾವಣೆ
8. ಅಪರಾಧಿ ಚುನಾವಣೆ
9. ಅಶ್ಲೀಲ ಚುನಾವಣೆ
10. ಅಕ್ರಮ ಚುನಾವಣೆ
11. ಭ್ರಷ್ಟ ಚುನಾವಣೆ
12. ಬಟಾಬಯಲು ಚುನಾವಣೆ

ಇವೆಲ್ಲಾ ನಾವು ಕಾಣುತ್ತಿರುವ ಚುನಾವಣಾ ಪ್ರಕ್ರಿಯೆಯಲ್ಲಿ ನಮ್ಮ ರಾಜಕಾರಣಿಗಳೇ ಮಾಡಿದ ನಾಮಕರಣವಾಗಿರುತ್ತದೆ. ಇದನ್ನೇ ಚುನಾವಣೆ ಎನ್ನಲೇ?


          ಹಾಗಿದ್ದರೆ ಇದೇನು? ಇದೇ ಚುನಾವಣೆ ನಮ್ಮ ರಾಜಕಾರಣದಲ್ಲಿ ರಾಜಕೀಯ ಮುಖಂಡರು ಪರಸ್ಪರ ವಿರೋಧಿಗಳಿಗೆ ರಾಡಿಯೆರಚುವ ಉದ್ವೇಗದಲ್ಲಿ ಹೇಳಿದ ಮಾತಿನ ಸಾರಾಂಶದಿಂದ ಇಷ್ಟು ರೀತಿಯ ಚುನಾವಣೆಗಳಿರಬಹುದೆಂದು ತಿಳಿದು ಬರುತ್ತದೆ. ಇಷ್ಟು ರೀತಿಯ ಚುನಾವಣೆಗಳು ನಮಗೆ ಬೇಕೇ? ಬೇಕಿದ್ದರೆ ಈ ಚುನಾವಣೆ ಎಂದರೇನು ತಿಳಿದುಕೊಳ್ಳೋಣ.


          ನಮ್ಮ ಭಾರತೀಯ ಸಂವಿಧಾನದಲ್ಲಿ ಮೂರು ಮುಖ್ಯ ಅಂಗಗಳಿವೆ. ೧. ನ್ಯಾಯಾಂಗ ೨. ಕಾರ್ಯಾಂಗ ೩. ಶಾಸಕಾಂಗ. ಈ ಮೂರರ ಪರಸ್ಪರ ಪೂರಕತೆಯೊಂದಿಗೆ ಸಂವಿಧಾನಬದ್ಧ ಚೌಕಟ್ಟಿನಲ್ಲಿ ದೇಶೀಯ ರಾಜಕಾರಣ, ಆಡಳಿತ ರೂಪಿಸಲ್ಪಡುತ್ತದೆ. ಇವುಗಳಲ್ಲಿ ನ್ಯಾಯಾಂಗ ಸ್ವತಂತ್ರ. ಕಾರ್ಯಾಂಗವು ಶಾಶ್ವತ. ಆದರೆ ಶಾಸಕಾಂಗದ ಅಧೀನತ್ವದಲ್ಲಿ ವ್ಯವಹರಿಸಬೇಕು. ಶಾಸಕಾಂಗವು ೫ ವರ್ಷಕ್ಕೊಮ್ಮೆ ಪ್ರಜೆಗಳಿಂದ ಚುನಾಯಿಸಲ್ಪಟ್ಟು ಅಧಿಕಾರಕ್ಕೆ ಬರುತ್ತದೆ. ರಾಷ್ಟ್ರಪತಿಯ ಅಂಕಿತದಲ್ಲಿ ಈ ಶಾಸಕಾಂಗ ಶಾಸನ ಬದ್ಧತೆಯೊಂದಿಗೆ ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಆಡಳಿತವನ್ನು ಕಾರ್ಯಾಂಗದ ಮುಖೇನ ನಿರ್ವಹಿಸುತ್ತದೆ. ಇದೇ ದೇಶೀಯ ಆಡಳಿತ ವ್ಯವಸ್ಥೆ. ಇಲ್ಲಿ ದೇಶೀಯವಾಗಿ ಶಾಸಕಾಂಗಕ್ಕೆ ನಡೆಯುವ ಆಯ್ಕೆಯನ್ನು ಚುನಾವಣೆ ಎಂದು ಕರೆಯುತ್ತಾರೆ. ನಮ್ಮದು ಸಂಯುಕ್ತ ದೇಶವಾದ್ದರಿಂದ ರಾಷ್ಟ್ರೀಯ ಚುನಾವಣೆಯನ್ನು ಮಹಾ ಚುನಾವಣೆ ಎಂದು ಕರೆದರು. 


          ಇನ್ನು ಎರಡನೆಯದಾಗಿ ರಾಜ್ಯ, ರಾಜ್ಯಗಳಿಗೆ ಪ್ರತ್ಯೇಕ ವಿಧಾನ ಸಭೆ, ಪರಿಷತ್ತುಗಳಿದ್ದು ಅದಕ್ಕೆ ನಡೆಯುವ ಚುನಾವಣೆಯೇ ಉಪ ಚುನಾವಣೆ. ಇನ್ನಿತರೆ ಸಂವಿಧಾನಾತ್ಮಕ ಸಂಘ, ಸಂಸ್ಥೆಗಳಿಗೂ ಚುನಾವಣೆ ಇದೆ. ಅವೆಲ್ಲಾ ಉಪ ಚುನಾವಣೆಯೇ ಆಗಿವೆ. ಆದರೆ ಈಗ ಒಮ್ಮೆ ಒಂದು ಕ್ಷೇತ್ರದಲ್ಲಿ ಗೆದ್ದ ಅಭ್ಯರ್ಥಿ ಸತ್ತಾಗ ಅಥವಾ ಬದುಕಿದ್ದೂ ಸತ್ತಂತಾದಾಗ ಅಲ್ಲಿ ಅಭ್ಯರ್ಥಿ ಅಭ್ಯರ್ಥಿತನವನ್ನು ಕಳೆದುಕೊಂಡಾಗಲೆಲ್ಲಾ ಆ ಕ್ಷೇತ್ರದಲ್ಲಿ ಬರೇ ರಾಜಕಾರಣ ಮಾಡುವುದಕ್ಕಾಗಿಯೇ ಚುನಾವಣೆ ನಡೆಸಲಾಗುತ್ತದೆ. ಅದನ್ನೇ ಪ್ರಸಕ್ತ ಕಾಲದಲ್ಲಿ ಉಪ ಚುನಾವಣೆ ಎನ್ನುತ್ತಾರೆ. ಆದರೆ ಈ ಉಪಚುನಾವಣೆಯ ಅಗತ್ಯವಂತೂ ಸಂವಿಧಾನಕ್ಕೆ ಅಗತ್ಯವೇನೂ ಅಲ್ಲ. ಒಂದು ಕ್ಷೇತ್ರ, ಒಬ್ಬ ಅಭ್ಯರ್ಥಿ ಮೃತನಾದರೆ ಅಥವಾ ರಾಜೀನಾಮೆ ಕೊಟ್ಟರೆ ಆಡಳಿತ ನಿರ್ವಹಣೆಗೆ ಯಾವುದೇ ತೊಡಕಾಗುವುದಿಲ್ಲ. ಅಲ್ಲಿ ಚುನಾವಣೆಯ ಅನಿವಾರ್ಯತೆಯೂ ಖಂಡಿತ ಇರುವುದಿಲ್ಲ. ಆದರೆ ರಾಜಕೀಯ ಕಾರಣದಿಂದ ಅಲ್ಲಿ ಚುನಾವಣೆ ನಡೆಸಬೇಕಾಗುತ್ತದೆ. ಹಾಗಾಗಿ ಮೊದಲು ಪರಿಪೂರ್ಣ ಸ್ವತಂತ್ರವಾಗಿದ್ದ ನಮ್ಮ ಚುನಾವಣ ಆಯೋಗ, ಮಂತ್ರಿಗಳು, ಪ್ರಧಾನಿಗಳ, ರಾಜಕೀಯ ನಾಯಕರ ಆದೇಶದಂತೆ ಚುನಾವಣೆ ಘೋಷಿಸುತ್ತಾರೆ. ಹಾಗಾಗಿ ಇದು ನಾಲ್ಕನೆಯದಾದ ಬಿಟ್ಟಿ ಚುನಾವಣೆ ಎನಿಸಿಕೊಳ್ಳುತ್ತದೆ. ಇದರ ಹಾವಳಿ ಈಗೀಗ ತುಂಬಾ ಜಾಸ್ತಿಯಾಗಿದೆ. ಮುಂಚೆ ಈ ಬಿಟ್ಟಿ ಚುನಾವಣ್ಯ ಹಾವಳಿ ಇರಲಿಲ್ಲ.


          ಒಂದು ಕ್ಷೇತ್ರದ ಅಭ್ಯರ್ಥಿ ಮೃತನಾದಾಗಲೂ ಕಾದು ಬಿಟ್ಟು ಮಹಾ ಚುನಾವಣೆಯ ಕಾಲದಲ್ಲಿಯೇ ನಡೆಸಿದ ಉದಾಹರಣೆ ವಿಪುಲವಾಗಿವೆ. ಈ ಮಧ್ಯಂತರ ಚುನಾವಣೆಯು ನಾನು ಮುಂದೆ ತಿಳಿಸಿದ ಇತರೆ ಎಂಬ ರೀತಿಯ ಚುನಾವಣೆಯಾಗಿ ಪರಿವರ್ತಿತವಾಗುತ್ತದೆ. ಸತತ ಆರೋಪ, ಪ್ರತ್ಯಾರೋಪ, ಚುನಾವಣಾ ಆಯೋಗಕ್ಕೆ ದೂರು, ಆಯುಕ್ತರ ಎತ್ತಂಗಡಿ, ಜಗಳ, ಕಾದಾಟ, ಹೊಡೆದಾಟ, ಹೆಂಡ, ಸಾರಾಯಿಯ ನೆರೆ ಹಾವಳಿ, ಕಪ್ಪು ಹಣದ ದರ್ಬಾರು, ಬಾಡಿಗೆ ಭಾಷಣ ಕೇಳುಗರು, ಚಪ್ಪಾಳೆಗಿಷ್ಟು, ಹಾರಕ್ಕಿಷ್ಟು, ಜೈಕಾರಕ್ಕಿಷ್ಟು ಎಂದು ಬೆಲೆ ನಿಗದಿ ಮತ್ತು ಮೇಲ್ಮೈಗೆ ಬೆಂಬಲ ಬೆಲೆ. ಒಟ್ಟಾರೆ ಆ ಚುನಾವಣೆ ನಡೆಯುವ ಕ್ಷೇತ್ರ ವ್ಯಾಪ್ತಿ ಮತ್ತು ಅದರ ಸುತ್ತಮುತ್ತಿನ ಕ್ಷೇತ್ರದಲ್ಲಿ ಒಟ್ಟಾರೆ ಸಾರ್ವಜನಿಕ ಜೀವನ, ಕಾರ್ಯಕಲಾಪಗಳು ಪೂರ್ಣ ಸ್ಥಗಿತ. ರಾಜಕೀಯ ಯಂತ್ರವಂತೂ ಅಂದರೆ ಕಾರ್ಯಾಂಗವಂತೂ ಚುನಾವಣೆ ಕಾರ್ಯ ಹೊರತು ಪಡಿಸಿ ಇತರೆ ಯಾವುದೇ ಕಾರ್ಯ ಮಾಡಲಾರರು. ಒಟ್ಟಾರೆ ಬಡ-ಮಧ್ಯಮ ಮರ್ಯಾದಸ್ಥ ಜನರಿಗೆ ಇದೊಂದು ಬಿಸಿ ತುಪ್ಪ.


          ಆದರೆ, ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೇ ಜಾಣ ಎಂಬ ಗಾದೆ ಮಾತಂತ ವರ್ತಿಸುವವರಿಗೆ ಮಾತ್ರಾ ಸುಗ್ಗಿಯೋ ಸುಗ್ಗಿ, ಹಬ್ಬವೋ ಹಬ್ಬ. ಒಂದು ಚುನಾವಣೆ ಬಂತೆಂದರೆ ಅವರು ಪಾತ್ರ ಸಲಕರಣಗಳು, ಕುಡಿಯುವಷ್ಟು ಹೆಂಡ ಸಾರಾಯಿ ಎಲ್ಲವನ್ನೂ ಮಾಡಿಕೊಳ್ಳುತ್ತಾರೆ. ಇನ್ನು ಮರಿ ನಾಯಕರ ವಿಚಾರ ಕೇಳ ಬೇಡಿ. ಅವರು ಒಂದೆರಡಾದರೂ ತೋಟ, ಸೈಟು, ಮನೆ ಖರೀದಿಸದಿದ್ದರೆ ಸರಿಯೇ? ಇಂತಹಾ ಬಿಟ್ಟಿ ಚುನಾವಣೆ, ಬೇಕಾಬಿಟ್ಟಿ ಚುನಾವಣೆಗಳು ನಡೆಯುವುದೇ ಅವರಿಗಾಗಿ. ಅಲ್ಲಿ ನಡೆಯುವ ದೊಂಬಿ, ಗಲಾಟೆ, ಹೊಡೆದಾಟ ಮತ್ತು ಸಮಯ ಉಳಿದರೆ ಸಭೆ, ಸಮಾರಂಭ, ಡ್ಯಾನ್ಸ್ ಮೇಳಗಳು ನಡೆಸುತ್ತಾರೆ. ಒಟ್ಟಾರೆ ಮತದಾರನನ್ನು ಮತಿ ಭ್ರಾಂತನನ್ನಾಗಿ ಮಾಡಿ ಮತಿಭ್ರಾಂತ ಚುನಾವಣೆ ಆಗಿಸುತ್ತಾರೆ. ಚುನಾವಣಾ ನೀತಿ ಸಂಹಿತೆಯೊಂದು ಇದ್ದರೂ, ಎಲ್ಲವೂ ಅದಕ್ಕೆ ವಿರುದ್ಧವಾಗಿಯೇ ನಡೆಯುತ್ತದೆ. ಹಾಗಾಗಿ ಅಪರಾಧೀ ಚುನಾವಣೆ ಆಗುತ್ತದೆ. 


          ರಾಜಕಾರಣಿಗಳು ತಮ್ಮ ವಿರೋಧಿಗಳನ್ನು ಕೆಟ್ಟಕೆಟ್ಟ ಶಬ್ದಭಂಡಾರದಿಂದ ಟೀಕಿಸುತ್ತಾ, ಬೈಯುತ್ತಾ, ಪರಸ್ಪರ ಎರಚಾಡುತ್ತಾ ಕಾಲ ಕಳೆಯುತ್ತಾರೆಯೇ ವಿನಃ ತಮ್ಮ ಅಭ್ಯರ್ಥಿಯ ಹೆಚ್ಚುಗಾರಿಕೆಯನ್ನು ಹೇಳುವುದೇ ಇಲ್ಲ, ಹೇಳಲೇನೂ ಇಲ್ಲ ಬಿಡಿ. ಅವರ ಹೈಕಮಾಂಡಿನ ದೊಂಬಿಗಳಷ್ಟೆ. ಹೀಗೆ ರೌಡಿ ಬಲದಿಂದ, ಹೆಂಡ-ಸಾರಾಯಿ, ಸೀರೆ-ದುಡ್ಡು ಅಗತ್ಯವಾದಲ್ಲಿ ಇನ್ನೇನೇನೋ ಒದಗಿಸುತ್ತಾ ನಡೆಸುವ ಚುನಾವಣೆ ಅಶ್ಲೀಲ, ಅಕ್ರಮ, ಭ್ರಷ್ಟ ಎನ್ನಿಸಿಕೊಳ್ಳದೆ ಇನ್ನೇನು? ಆದರೆ, ಇದನ್ನು ನಡೆಸುವುದು ಚುನಾವಣಾ ಆಯೋಗವಲ್ಲ. ಚುನಾವಣೆಯಲ್ಲಿ ಸ್ಪರ್ಧಿಗಳೂ ಅಲ್ಲ, ಅವರನ್ನು ಗೆಲ್ಲಿಸಬೇಕೆಂಬ ಹುಂಬರು ಅಷ್ಟೆ. ಹಾಗಾಗಿ ಯಾವುದೇ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲವೆಂದು ಆಯೋಗ ಬೆಚ್ಚಗೆ ಹೊದ್ದು ಮಲಗುತ್ತಿದೆ. ಒಟ್ಟಾರೆ ಬಟಾಬಯಲು ಚುನಾವಣೆ ಆಗುತ್ತದೆ.


          ಮತದಾರನೇ ಮತ ಹಾಕಲು ಉತ್ಸುಕನಾಗಿಲ್ಲದಿದ್ದಲ್ಲಿ ಅವನ ಪರವಾಗಿ ಮತ ಹಾಕಲು ಜನರಿದ್ದಾರೆ. ಸತ್ತವರ ಪವರ್ ಆಫ್ ಅಟಾರ್ನಿ ಪಡೆದು ಮತ ಹಾಕುವವರಿದ್ದಾರೆ. ಇನ್ನು ಏನೇನೋ ಮಾಡಿದರೂ ಒಟ್ಟಾರೆ ಶೇಕಡಾ ೫೫ ಭಾಗ ಮತದಾನವಾಗುತ್ತದೆ. ಅದರಲ್ಲಿ ಇದ್ದ ಹತ್ತಾರು ಮಂದಿ ಅಭ್ಯರ್ಥಿಗಳಲ್ಲಿ ಒಬ್ಬನಿಗಾದರೂ ಒಂದು ಜಾಸ್ತಿ ಸಿಕ್ಕಿತೋ ಅವನೇ ಚುನಾಯಿತ ಅಭ್ಯರ್ಥಿ. ಇಡೀ ಕ್ಷೇತ್ರ ಮತದಾರರ ಪ್ರತೀಕ. ಮುಂದೆ ಅವನು ಸ್ವತಂತ್ರ. ಐದು ವರ್ಷದವರೆಗೆ ಅವನಿಗೆ ಈ ಮತದಾರರ ಹಂಗೇನೂ ಇರುವುದಿಲ್ಲ. ಅವನ ನಿಷ್ಠೆ ಏನಿದ್ದರೂ ಉದ್ಯಮಿಗಳು, ಹೆಂಡದ ದೊರೆಗಳು, ಪಕ್ಷದ ವರಿಷ್ಠರಿಗೆ ದೊಗ್ಗು ಸಲಾಮು ಹೊಡೆದರೆ ಮುಗಿಯಿತು. ಒಂದು ನೂರಾರು ಎಕರೆ ಭೂಮಿ, ಯಾವುದಾದರೊಂದು ಮಂತ್ರಿಗಿರಿಯೋ ಅಥವಾ ಅಧ್ಯಕ್ಷಗಿರಿಯೋ, ಒಂದು ಹತ್ತಾರು ಸೈಟು, ಮನೆ, ಬಂಗಲೆ, ಓಡಾಡಲು ವಿದೇಶೀ ಕಾರು, ಸುತ್ತಲು ನಾನಾ ದೇಶ ಯಾತ್ರೆ, ಸರಕಾರೀ ವೆಚ್ಚದಲ್ಲಿ ಇವೆಲ್ಲ ಲಭ್ಯವಂತೂ ಖಂಡಿತ. ಇಲ್ಲಿ ಅಭ್ಯರ್ಥಿ ಹೈಕಮಾಂಡಿಗೆ ವಿರೋಧಿಯಾದರೆ ಮಾತ್ರಾ ಅವನ ಅಭ್ಯರ್ಥಿತನ ಅರ್ಹತೆ ಕಳೆದುಕೊಳ್ಳುತ್ತದೆಯೇ ವಿನಃ ಬೇರೆ ಯಾವುದೇ ಕಾರಣಕ್ಕೆ ಅವನ ಅರ್ಹತೆ ನಷ್ಟವಾಗಲಾರದು. ಇದೇ ನಮ್ಮ ಚುನಾವಣೆ.


               ನಮ್ಮ ಪ್ರಜಾಪ್ರಭುತ್ವದ ಮಹಾಪ್ರಭುಗಳ ಆಯ್ಕೆ. ಇದೇ ನಮ್ಮ ಸ್ವತಂತ್ರ ಭಾರತದ ರಹಸ್ಯ.
-      ನಿತ್ಯಾನಂದ ಕೆ. ಎಸ್.

No comments:

Post a comment