Sunday, 14 April 2013

ಮದುವೆ ಪ್ರಶ್ನೋತ್ತರಗಳು ಭಾಗ - ೪ - ಮದುವೆ ವಯಸ್ಸು, ಸೀತಾ ಸ್ವಯಂವರ, ಪಾಂಚಾಲಿ, ಪಿತೃಋಣ, ಗೃಹಸ್ಥಾಶ್ರಮ ಮತ್ತು ಸಮಾಜ ಸೇವೆ

ಈಗಿನ ಕಾನೂನಿನಲ್ಲಿ ೧೮ ವರ್ಷದ ಹುಡುಗ ಮದುವೆಯಾಗಬಹುದು ಎಂದು ಹೇಳುತ್ತದೆ. ಸಮಂಜಸವೇ?
          ಇದು ಸಮಂಜಸವಲ್ಲ. ಬಹಳ ಹಿಂದೆ ವರನಿಗೆ ೧೮ ವರ್ಷಕ್ಕೆ ಅವಕಾಶ ಕೊಟ್ಟಿತ್ತು. ಅದನ್ನು ಎಷ್ಟೋ ಜನ ಸೂತ್ರಕಾರರು ನಿಷೇಧಿಸಿದ್ದರು; ೨೧ ವರ್ಷದ ಒಳಗೆ ಮದುವೆ ಮಾಡಬಾರದು ಎಂಬುದಾಗಿ. ನಮ್ಮ ದೇಶೀಯ ನ್ಯಾಯಿಕ ವ್ಯವಸ್ಥೆಯಲ್ಲೂ ಈ ವಿಷಯ ಇದ್ದಿತು. ಬೇಗ ಮದುವೆಯಾಗಲಿ, ಬೇಗ ಮಕ್ಕಳಾಗಲಿ ಎಂಬಂತೆ ಓಟಿಗಾಗಿ ರಾಜಕಾರಣಿಗಳು ಮಾಡುವ ಕೆಲಸದಿಂದಾಗಿ ಬೇರೇನು ಮಾಡಲಿಕ್ಕಾಗುವುದಿಲ್ಲ. ಹಾಗೆ ಕೆಲವೊಂದಿಷ್ಟು ದೇಶೀಯ ವಿಪ್ಲವಗಳಿಂದ ಪರಿಹರಿಸಲು ಆಗುತ್ತದೆ ಎಂದು ಯಾರೋ ಒಬ್ಬ ಬುದ್ಧಿವಂತ ಹೇಳಿರಬಹು. ಹಾಗಾಗಿ ೧೮ ವರ್ಷಕ್ಕೆ ಇಳಿಸಿದ್ದಾರೆ. ವಯೋಮಾನ ಇಳಿಸುವುದಕ್ಕಾಗಲಿ ಅಥವಾ ಏರಿಸುವುದಕ್ಕಾಗಲಿ ಈಗಿನ ಸದ್ಯದ ತಾತ್ಕಾಲಿಕ ಸರ್ಕಾರಕ್ಕಾಗಲಿ ಅಥವಾ ಧರ್ಮಕ್ಕಾಗಲಿ ಅಧಿಕಾರವಿಲ್ಲ. ಏಕೆಂದರೆ ಅಂತಂತಹ ಧರ್ಮಜಿಜ್ಞಾಸುಗಳು ಹುಟ್ಟಬೇಕು. ಅದನ್ನು ಸಾಮಾನ್ಯ ಜಿಜ್ಞಾಸುಗಳು ನಿರ್ಣಯ ಮಾಡತಕ್ಕದ್ದಲ್ಲ. ಏಕೆಂದರೆ ಮನುಷ್ಯ ದೇಹ ಯಾವ ರೀತಿಯಲ್ಲಿ ಸ್ವರೂಪಗೊಂಡಿರುವುದೊ ಅದರ ಆದಿಯಿಂದ ಚಿಂತಿಸಬೇಕು. ಎಷ್ಟು ವರ್ಷಕ್ಕೆ ಅದು ಪ್ರೌಢವಾಗುತ್ತದೆ? ಪ್ರೌಢನಾದಾಗ ವಿವಾಹ ಅಧಿಕಾರ ಬರುವಂತಹದ್ದು. ಅದು ಕಾಲಕಾಲಕ್ಕೆ ಸ್ವಲ್ಪ ವ್ಯತ್ಯಾಸ ಬರಬಹುದು. ಆದರೆ ಸ್ವತಂತ್ರ ಬಂದ ನಂತರ ಬರೇ ೫೦ ವರ್ಷದಲ್ಲೇ ೩ ವರ್ಷ ಏರಿಸಿ, ಇಳಿಸುವಷ್ಟು ವ್ಯತ್ಯಾಸ ಖಂಡಿತಾ ಬರುವುದಿಲ್ಲ. ನಮ್ಮ ರಾಜಕಾರಣಿಗಳಿಗೆ ಏನೋ ಗೊತ್ತಿಲ್ಲ, ಮನಸ್ಸಿಗೆ ಬಂದ ಹಾಗೆ ಏರಿಸುತ್ತಾರೆ, ಹಾಗೇ ಇಳಿಸುತ್ತಾರೆ. ಅದನ್ನು ಚಿಂತನೆ ಮಾಡಬೇಡಿ. ಸಾಧ್ಯವಾದರೆ ಗಂಡುಮಕ್ಕಳಿಗೆ ೨೪ ವರ್ಷವಾದರೂ ಮದುವೆಯನ್ನು ಮಾಡಬೇಡಿ. ೨೪ರ ಮೇಲೆ ಸ್ವಲ್ಪ ಹೆಚ್ಚು ಕಡಿಮೆ ೧೦ ವರ್ಷ ಮುಂದೆ ಹೋದರೂ ಚಿಂತೆಯಿಲ್ಲ, ಮಾಡಿಬಿಡಿ. ೨೪ರ ಒಳಗೆ ಮದುವೆ ಮಾಡಿದರೆ ಅವರು ಯಶಸ್ವಿ ಸಂಸಾರಿಗಳಾಗುವುದಿಲ್ಲ. ಏಕೆಂದರೆ ಈಗಿನ ದೇಶ, ಕಾಲ, ಸ್ಥಿತಿ ಹಾಗಿದೆ. ಹಾಗಾಗಿ ನೀವು ತಡಮಾಡಿದಷ್ಟೂ ಒಳ್ಳೆಯದು. ಹುಡುಗಿಗೂ ಅಷ್ಟೆ, ಮುಂಚೆ ೧೬ ವರ್ಷ (ಷೋಡಶ) ಎಂದಿತ್ತು. ಆದರೆ ಈಗ ಅಷ್ಟು ಸಾಕಾಗುವುದಿಲ್ಲ, ೧೮ ದಾಟಲೇಬೇಕು. ಸಾಧ್ಯವಾದರೆ ೧೯-೨೦. ಇನ್ನು ಆ ಕಾಲೀನ ಗೋಚಾರ ಸ್ಥಿತಿಯಲ್ಲಿರತಕ್ಕಂತಹ ಕುಜ ಅಂದರೆ ಕರ್ಮದ ಅಧಿಪತಿಯ ದೋಷಗಳನ್ನು ಗುರುತಿಸಿ ಶಾಂತಿಯನ್ನು ಮಾಡದಿದ್ದರೂ ತೊಂದರೆಯಿಲ್ಲ, ಅವರು ಚಿನ್ನಾಗಿ ಬದುಕುವಂತೆ ಮದುವೆ ಮಾಡಿ. ಮದುವೆ ಮಾಡಿದರೆ ನಮ್ಮ ಕರ್ತವ್ಯ ತೀರಿತು ಎಂಬಂತೆ ಯಾರೂ ವರ್ತಿಸಬೇಡಿ. ಅವರು ಚೆನ್ನಾಗಿ ಬದುಕುವ ಅವಕಾಶವಿದೆಯೆ ಎಂದು ನೋಡಿ ಮದುವೆ ಮಾಡಿ ಇಲ್ಲದಿದ್ದರೆ ೪ ವರ್ಷ ಮುಂದಕ್ಕೆ ಹೋದರೂ ಪರವಾಗಿಲ್ಲ, ಮದುವೆಯನ್ನು ಮಾಡಲೇಬೇಡಿ. ಒಂದು ವೇಳೆ ಆತುರವಾಗಿ ಮದುವೆ ಮಾಡಿದರೆ ಮುಂದೆ ಅವರು ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಪರಿಸ್ಥಿತಿ ಖಂಡಿತಾ ಬರುತ್ತದೆ. ಮುಂದೆ ಅದು ದೊಡ್ಡ ಸಮಸ್ಯೆಯಾಗುತ್ತದೆ. ಅದಕ್ಕಾಗಿ ನಿಧಾನವಾದರೂ ತುಂಬಾ ಉತ್ತಮವಾದ ಚೆನ್ನಾಗಿ ಬದುಕನ್ನು ರೂಪಿಸಿಕೊಡುವಂತಹ ಅವಕಾಶ ಇರುವವರಿಗೆ ಕೊಡಿ ಎಂದು ಹೇಳುತ್ತದೆ.

ರಾಕ್ಷಸವಿವಾಹ ಪದ್ಧತಿಯಿದೆ ಎಂದು ಹೇಳಿದಿರಿ, ರಾಮನು ಬಲಪ್ರಯೋಗದಿಂದ ವಿವಾಹವಾಗಿದ್ದಾನೆ. ಅದು ರಾಕ್ಷಸವಿವಾಹ ಪದ್ಧತಿಯಲ್ಲವೇ? ದ್ರೌಪದಿ ೫ ಜನರನ್ನು ಮದುವೆಯಾಗಿದ್ದಾಳೆ, ಇದು ಸರಿಯೇ?
          ರಾಮಾಯಣದ ವಿಚಾರ ಎಂದಾಗ ಅದರ ಕಾಲ, ದೇಶವನ್ನು ಚಿಂತಿಸಬೇಕು. ಹಾಗೆ ರಾಮನು ಬಲಪ್ರಯೋಗದಿಂದ ಮದುವೆಯಾಗಿದ್ದಾನೆ ಎಂಬ ನಿಮ್ಮ ಕಲ್ಪನೆಯನ್ನು ಸರಿಪಡಿಸಬೇಕು. ರಾಮನು ಬಲಪ್ರಯೋಗದಿಂದ ಮದುವೆಯಾಗಲಿಲ್ಲ. ಅಲ್ಲಿ ಕನ್ಯೆಯು ವರನ ಅರ್ಹತೆಯನ್ನು ಪರೀಕ್ಷಿಸಬೇಕಾಗಿರುವುದರಿಂದ ಜನಕ ನ್ಯಾಸವನ್ನು ಇಟ್ಟಿದ್ದ. ಹಲಾವಾರು ಮಂದಿ ಅದನ್ನು ಪರೀಕ್ಷಿಸಿದರೇ, ಕೇವಲ ರಾಮನೊಬ್ಬನಲ್ಲ. ಹಲವರು ಪ್ರಯತ್ನಿಸಿ ಸೋತಿರಲು, ರಾಮನೊಬ್ಬ ಜಯಿಸಿದ. ನಂತರ ಸೀತೆ ವರಿಸಿದಳು ಎಂದು ಸೀತಾ ಸ್ವಯಂವರ ಪ್ರಕರಣದಲ್ಲಿ ಹೇಳುತ್ತದೆ. ಇದು ರಾಕ್ಷಸವಿವಾಹಕ್ಕೆ ಸಂಬಂಧಪಡುವುದಿಲ್ಲ. ಸ್ವಯಂವರ ವಿವಾಹಕ್ಕೆ ಸಂಬಂಧಪಡುತ್ತದೆ.
          ಶಿವಧನುಸ್ಸನ್ನು ಮುರಿದುದರಿಂದ ಸೀತೆಯು ಒಪ್ಪಿ ಮದುವೆಯಾದದ್ದು. ಅದು ಸೀತೆಯು ಕಡ್ಡಾಯವಾಗಿ ರಾಮನನ್ನು ಮದುವೆಯಾಗಬೇಕು ಎಂದು ನಿಯಮ ಮಾಡಿದ್ದಲ್ಲ. ಶಿವಧನುಸ್ಸನ್ನು ಮುರಿದ ವರನಿಗೆ ನಾನು ಸೀತೆಯನ್ನು ಕೊಡುತ್ತೇನೆ ಎಂದು ಜನಕ ಹೇಳಿದ್ದಾನೆ. ಸೀತೆಯು ತನಗೆ ಇಷ್ಟವಿದ್ದರೆ ಮದುವೆಯಾಗಬಹುದು. ಆಗ ರಾಮಾಯಣ ಕಾಲದಲ್ಲಿದ್ದ ವ್ಯವಸ್ಥೆಯು ಅದಾಗಿತ್ತು. ವಾಲ್ಮೀಕಿ ರಾಮಾಯಣದಲ್ಲಿ ರಾಮನು ಶಿವಧನುಸ್ಸನ್ನು ಮುರಿದ ಮೇಲೆ ಸೀತೆಯು ಸ್ವಯಂ ಇಚ್ಛೆಯಿಂದ ಬಂದು ರಾಮನಿಗೆ ಹಾರವನ್ನು ಹಾಕಿದಳು ಎಂದು ಹೇಳುತ್ತದೆ. ಸೀತೆಯು ಸ್ವತಃ ತನ್ನ ವರನನ್ನು ಆರಿಸಿಕೊಂಡಳು ಎಂದು ಹೇಳುತ್ತದೆ. ಹಾಗಿದ್ದಾಗ ಶಿವಧನುಸ್ಸನ್ನು ಮುರಿದ ಮೇಲೆ ರಾಮನನ್ನು ಬಿಡಬಹುದಿತ್ತು. ಅಲ್ಲಿ ರಾಮನಿಗೆ ಏನೂ ಅಧಿಕಾರವಿರಲಿಲ್ಲ. ಅದು ತಂದೆಯ ಅನುಮೋದನೆ ಮಾತ್ರವಾಗಿತ್ತು. ಯಾರು ಈ ಶಿವಧನುಸ್ಸಿಗೆ ಹೆದೆಯೇರಿಸುತ್ತಾರೆ ಅವರು ನನ್ನ ಅಳಿಯನಾಗಲಿಕ್ಕೆ ಶ್ರೇಷ್ಠವೆಂದು ಅನುಮೋದಿಸಿ ಜನಕ ಮಹಾರಾಜನು ಘೋಷಿಸಿದ್ದ. ಸೀತೆಯು ಒಪ್ಪುತ್ತಾಳೆ ಎಂದು ಹೇಳಿರಲಿಲ್ಲ. ಸೀತೆಯು ಇಷ್ಟಪಟ್ಟು ವರಿಸಿದಳು. ಅದು ಬೇರೆ ವಿಚಾರ. ಹೀಗೆ ರಾಮಾಯಣದ ಕಾಲ, ದೇಶೀಯ ಚಿಂತನೆ ಮಾಡಬೇಕಾಗುತ್ತದೆ. ಆ ಕಾಲದಲ್ಲಿ ಆ ಒಂದು ವ್ಯವಸ್ಥೆಯನ್ನು ಜನಕ ತಂದ. ಏಕೆಂದರೆ ಜನಕನು ಸ್ವತಃ ರಾಜರ್ಷಿ, ಬಹಳ ಜ್ಞಾನಿ. ಮಣ್ಣಿನಲ್ಲಿ ಸಿಕ್ಕಿದಂತಹ ಶಿಶುರೂಪವನ್ನು ಬೆಳೆಸಿ ಸೀತೆಯನ್ನಾಗಿ ಮಾಡಿರುವುದು. ಅದರ ಹಿನ್ನೆಲೆಯಲ್ಲಿ ಯಾವುದೋ ದೈವೀಕ ಸಂಕಲ್ಪವಿದೆ ಎಂಬುದು ಅರ್ಥವಾಗಿದೆ. ಆ ದೈವೀಕ ಸಂಕಲ್ಪವನ್ನೇ ನೆರವೇರಿಸುವುದಕ್ಕಾಗಿ ಅವಕಾಶ ಮಾಡಿಕೊಡಬೇಕು, ನನ್ನಿಚ್ಛೆಯಂತೆ ನಡೆಯಬೇಕು ಎಂದು ತಂದೆ ಎಂಬ ಅಧಿಕಾರದಲ್ಲಿ ಹೇಳಿದ್ದರೆ ಸೀತೆಯು ಅನಿವಾರ್ಯವಾಗಿ ಒಪ್ಪಿ ಮದೆವೆಯಾಗಬಹುದಿತ್ತು. ಹಾಗಾಗದಂತೆ ತಡೆದು ಅವಳು ಯಾವುದಕ್ಕಾಗಿ ಹುಟ್ಟಿದ್ದಾಳೆ, ಅದನ್ನೇ ಪಡೆಯಬೇಕವಳು. ತನ್ನ ಪ್ರಲೋಭನೆಯಂತೆ ಇರಬಾರದು ಎಂಬ ಸಂಕಲ್ಪದಿಂದಾಗಿ ಒಂದಿ ಶಿವಧನುಸ್ಸನ್ನು ಪ್ರಯೋಗವಾಗಿ ಇಟ್ಟ ಜನಕ ಮಹಾರಾಜ. ಆಗ ಸೀತೆಯನ್ನು ವರಿಸುವ ಅರ್ಹತೆಯುಳ್ಲವನು ಬಂದಾಗ ಮಾತ್ರ ಆ ಧನುಸ್ಸು ಹೆದೆಯೇರಿಸಲು ಸಾಧ್ಯವಾಗುತ್ತದೆ. ದೈವೀಕ ಸಂಕಲ್ಪಕ್ಕೆ ಪೂರಕವಾಗಿ ನಡೆದುಕೊಳ್ಳುವುದು ಜನಕನ ಕರ್ತವ್ಯವಗಿದೆ. ತಾನು ತಂದೆಯೆಂಬ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳಬಾರದು. ಜನಕನಿಗೆ ಅಧಿಕಾರವಿಲ್ಲವೆಂತಲ್ಲ, ಸಮಾಜವು ಜನಕನಿಗೆ ಅಧಿಕಾರ ಕೊಟ್ಟಿದೆ ಎಂಬಂತಿರಬೇಕು, ಅವನು ಅಧಿಕಾರವನ್ನು ಬಳಸಿದಂತಿರಬೇಕು, ಆದರೆ ಆ ಅಧಿಕಾರವು ದುರುಪಯೋಗ ಆಗದಂತಿರಬೇಕು. ಇಷ್ಟು ಕಾರಣಗಳನ್ನು ಅಳವಡಿಸಿಕೊಂಡು ಈ ಒಂದು ಬಲಪರೀಕ್ಷಾ ಪ್ರಯೋಗವನ್ನು ಇಟ್ಟಿದ್ದನು. ಹಾಗಾಗಿ ಆ ಧನುಸ್ಸನ್ನು ಯಾರು ಎತ್ತಿ ಹೆದೆಯೇರಿಸುತ್ತಾನೆ, ಅವನಿಗೆ ಸೀತೆ ವಧುವಾಗುತ್ತಾಳೆ ಎಂದು ಹೇಳುತ್ತಾನೆ. ಅಷ್ಟು ಬಿಟ್ಟರೆ ಅದು ಕಡ್ಡಾಯವಲ್ಲ. ಅಲ್ಲಿ ಆ ಧನುಸ್ಸನ್ನು ಎತ್ತುವವನಿಗೆ ಮಾತ್ರ ಸೀತೆಯನ್ನು ಮದುವೆಯಾಗುವ ಅರ್ಹತೆ ಇರುತ್ತದೆ. ಬೇರೆ ಯಾರಿಗೂ ಅದನ್ನು ಎತ್ತುವುದಕ್ಕೆ ಆಗುವುದಿಲ್ಲ. ಹಾಗೆ ಸಂಯೋಜಿಸಿದ್ದಾರೆ. ಇದು ದೈವಸಂಕಲ್ಪ. ಹಾಗೆ ಅದು ಆ ಕಾಲದ ವಿಚಾರವಾಯಿತು.
          ಇನ್ನು ಮಹಾಭಾರತದಲ್ಲಿ ಬರುವ ದ್ರೌಪದಿಯ ಪ್ರಕರಣದಲ್ಲಿ ದ್ರೌಪದಿಯು ೫ ಜನರನ್ನು ಮದುವೆಯಾದದ್ದು. ಪ್ರತ್ಯಕ್ಷ ನೋಡಿದರೆ ತೀರಾ ಬಾಲಿಶವೆನ್ನುವಂತಹದ್ದು. ಆದರೆ ಅಲ್ಲಿ ೫ ಜನರಿಲ್ಲ. ದ್ರೌಪದಿ ಮದುವೆಯಾದದ್ದು ಇಂದ್ರನನ್ನು ಎಂದು ಮಾತ್ರ ಹೇಳುವುದು. ನಮ್ಮಲ್ಲಿ ೧೪ ಇಂದ್ರ ಪದವಿಯಿದೆ. ಅದರಲ್ಲಿ ಈಗ ೮ನೆಯ ಪುರಂಧರನೆಂಬ ಇಂದ್ರನ ಅಧಿಕಾರ ನಡೆಯುತ್ತಾ ಇದೆ. ಹಿಂದಿನ ಇಂದ್ರರು ಅಸ್ತಂಗತ ಅಂದರೆ ಮೃತರಾಗುವುದಿಲ್ಲ, ಪುನಃ ಪುನಃ ಹೊಸದಾಗಿ ಇಂದ್ರಪದವಿಗೆ ಬರುತ್ತಾ ಇರುತ್ತಾರೆ. ೧೪ ಜನ ಇಂದ್ರ ಪದವಿಗೆ ಬರುವ ಅರ್ಹತೆಯುಳ್ಳವರು ಇರುತ್ತಾರೆ. ಅವರಿಗೆ ಇಷ್ಟಿಷ್ಟು ಕಾಲ ಎಂಬುದಿದೆ. ಅದು ನಮ್ಮ ಕಾಲ ಮಟ್ಟದ್ದಲ್ಲ, ಬಹು ದೀರ್ಘಾವಧಿಯ ಕಾಲವಾಗಿರುತ್ತದೆ. ಆಯಾಯ ಕಾಲಕ್ಕೆ ಹೊಂದಿ ಅವರವರಿಗೆ ಅಧಿಕಾರ ಬರುತ್ತದೆ. ಅವರು ಪದವಿಯಲ್ಲಿ ಇಲ್ಲದ ಕಾಲದಲ್ಲೂ ಕೂಡ ವ್ಯಾವಹಾರಿಕ, ಪ್ರಾಪಂಚಿಕ ಕರ್ಮಗಳಲ್ಲಿ ವಿನಿಯೋಗಿಸಲಿಕ್ಕೆ ಅವರಿಗೆ ಅವಕಾಶವಿದೆ. ಅಲ್ಲಿ ಅವರು ಪ್ರವೃತ್ತರಾಗಬಹುದು. ಅಂತಹ ಪ್ರವೃತ್ತ ಇಚ್ಛೆಯನ್ನು ಹೊಂದಿದಂತಹ ೫ ಜನ ಇಂದ್ರರು ಒಟ್ಟಾಗಿ ಭೂಮಿಯಲ್ಲಿ ಜನನಕ್ಕೆ ಬರುತ್ತಾರೆ. ಅವರೇ ಪಾಂಡವರು. ಅವರು ಮದುವೆಯಾದದ್ದು ದ್ರೌಪದಿಯ ರೂಪದ ಒಂದೇ ಶಕ್ತಿ, ಅದೇ ಚಿಚ್ಛಕ್ತಿ, ಅದೇ ಶಚಿ. ದ್ರೌಪದಿ ಬೇರೆ ಯಾರೂ ಅಲ್ಲ, ಹಿಂದೆಯೂ ಅವಳು ಮದುವೆಯಾದದ್ದು ಇಂದ್ರನನ್ನೇ! ಅವಳು ಮದುವೆಯಾದದ್ದು ಒಂದನ್ನೇ! ಆ ಇಂದ್ರರು ೫ ಭಾಗವಾಗಿ ಪ್ರಕಟವಾಗಿ ಈ ಭೂಮಿಯಲ್ಲಿ ಬಂದಾಗ ಅವರು ಒಂದೇ ಇಂದ್ರರು. ಹಾಗಾಗಿ ಅವಳು ೫ ಜನರನ್ನು ಮದುವೆಯಾದವಳು ಎಂಬುದು ಕೇವಲ ಪ್ರಾಪಂಚಿಕ ವ್ಯಾವಹಾರಿಕದಲ್ಲಿ ಮಾತ್ರ ಕಲ್ಪನೆಯಾಗಿ ಕಂಡುಬರುವುದು. ಸತ್ಯ ಮಾತ್ರ ಅವಳು ಒಂದೇ ಮದುವೆಯಾಗಿರುವುದು! ಅದೂ ಇಂದ್ರನನ್ನೇ! ೫ ಮದುವೆಯಾಗಲೇ ಇಲ್ಲ. ಅಲ್ಲಿಯೂ ಕೂಡ ವಿವಾಹಕ್ಕೆ ಅರ್ಹತೆಯ ಮಾಪನವಾಗಿ ಬಲದ ಪರೀಕ್ಷೆಯನ್ನು ಇಟ್ಟಿರುತ್ತಾರೆ. ಅಲ್ಲಿ ಮತ್ಸ್ಯಯಂತ್ರವನ್ನು ಛೇದಿಸಿದವನು ಅರ್ಜುನನೊಬ್ಬನೆ. ಉಳಿದ ಪಾಂಡವರು ಛೇದಿಸಿಲ್ಲ. ಅಂದರೆ ಮಧ್ಯಮ ಪಾಂಡವ ಎಂದು ಹೇಳುತ್ತದೆ. ಅಲ್ಲದೆ ಬೇರೆ ಪಾಂಚಾಲರಿಗೆ ಮದುವೆ ಮಾಡಿಕೊಟ್ಟಿಲ್ಲ, ಅರ್ಜುನನೊಬ್ಬನಿಗೆ ಮದುವೆ ಮಾಡಿದ್ದು, ಅಲ್ಲಿ ಬೇರೆ ಯಾವ ಕಲ್ಪನೆಗಳಿಗೂ ಅವಕಾಶವಿಲ್ಲ. ಹಾಗಾಗಿ ನಮ್ಮಲ್ಲಿ ಅತಿಶ್ರೇಷ್ಠ ಕನ್ಯೆಯರಲ್ಲಿ ದ್ರೌಪದಿಯೊಬ್ಬಳು ಎಂದು ಅಂಗೀಕರಿಸಲ್ಪಟ್ಟಿರುವುದು. ಹಾಗಾಗಿ ಅಭಿಪ್ರಾಯಭೇದಗಳು ಕತೆಗಾಗಿ. ಅದನ್ನು ನಂಬಲು ಅರ್ಹವಲ್ಲ. ಅದನ್ನು ಬಿಟ್ಟು ದ್ರೌಪದಿಯೊಬ್ಬಳು ಶ್ರೇಷ್ಠಕನ್ಯೆಯೆಂದು ಸ್ವೀಕರಿಸಿ ಎಂದು ಬೇಡಿಕೊಳ್ಳುತ್ತೇನೆ.

ಮದುವೆ ಮಾಡಿಕೊಳ್ಳಲಿಕ್ಕೆ ಅರ್ಹತೆಯಿಲ್ಲದಿದ್ದವರು ದೇಶಸೇವೆ, ತೀರ್ಥಯಾತ್ರ ಮಾಡಲಿ ಎಂದು ಹೇಳಿದಿರಿ. ಹಾಗಾದಾಗ ಅವರು ಪಿತೃಋಣವನ್ನು ಹೇಗೆ ತೀರಿಸುವುದು?
          ನಮ್ಮಲ್ಲಿ ಬಹಳ ಸುಲಭವಾಗಿ ಪಿತೃಋಣವನ್ನು ತೀರಿಸಲು ಪುತ್ರಸಂತಾನದಿಂದ ಸಾಧ್ಯ ಎಂದರು. ಇದು ಬಿಟ್ಟರೆ ಬೇರೆ ಮಾರ್ಗವೇ ಇಲ್ಲವೆಂದು ಹೇಳಲಿಲ್ಲ. ಮಕ್ಕಳನ್ನು ಪಡೆಯುವುದು ಮಾತ್ರ ಪಿತೃಋಣ ಪರಿಹಾರವಲ್ಲ. ಬೇರೆ ಎಷ್ಟೋ ಪರಿಹಾರಗಳಿವೆ. ಅದೇ ತಂದೆತಾಯಿಯರನ್ನು ಇವನು ಅವಿವಾಹಿತನಾಗಿ ಚೆನ್ನಾಗಿ ಸಾಕಿ, ಅವರನ್ನು ಅಂತ್ಯಕಾಲದವರೆಗೆ ಯಾವ ಕೊರತೆಯೂ ಬಾರದಂತೆ ನೋಡಿಕೊಂಡಿದ್ದು ಪೋಷಿಸಿಕೊಂಡು ಬರಬಹುದು. ಅಲ್ಲಿಯೂ ಪಿತೃಋಣವು ತೀರುತ್ತದೆ. ಅಷ್ಟಲ್ಲದೆ ತಂದೆ ಮತ್ತು ಆ ವಂಶದ ಕೀರ್ತಿ ಪ್ರತಿಷ್ಠೆಯನ್ನು ಹೆಚ್ಚಿಸತಕ್ಕಂತಹ ಸತ್ಕಾರ್ಯಗಳನ್ನು ಸಮಾಜದಲ್ಲಿ ಮಾಡಿ ಅದರಿಂದಲೂ ಪಿತೃಋಣವನ್ನು ತೀರಿಸಬಹುದು. “ದಶಃ ಪೂರ್ವೇಷಾಂ ದಶಃ ಪರೇಷಾಂ” ಎಂದು ವಿವಾಹಕಾಲದಲ್ಲಿ ಮಾಡುವ ಕನ್ಯಾಧಾನ ಸಂಕಲ್ಪದಲ್ಲಿ ಹೇಳುವಂತೆ ೧೦ ತಲೆಮಾರಿನ ಹಿಂದಿನವರೂ, ೧೦ ತಲೆಮಾರಿನ ಮುಂದಿನವರೂ ಅಭಿವೃದ್ಧಿಯನ್ನು ಹೊಂದತಕ್ಕಂತಹ ಕೀರ್ತಿಶಾಲಿಗಳಾಗಿ ಯಶಸ್ವಿಯಾಗತಕ್ಕಂತಹ ಸತ್ಕಾರ್ಯ ಮಾಡುವುದಕ್ಕಾಗಿ, ಆ ರೀತಿಯಲ್ಲಿ ಪುರುಷಾರ್ಥವನ್ನು ಸಾಧಿಸುವಂತಹ ಗೃಹಸ್ಥಾಶ್ರಮವನ್ನು ಸೇರುತ್ತೇವೆ ಎಂಬ ಸಂಕಲ್ಪವು ಅಲ್ಲಿ ಆಗುವುದು. ಹಾಗಾಗಿ ಅಲ್ಲಿಯೂ ಪಿತೃಋಣವು ತೀರುತ್ತದೆ. ಮದುವೆಯಾಗಿ ಮಕ್ಕಳನ್ನು ಪಡೆದಾಕ್ಷಣ ಪಿತೃಋಣವು ತೀರುತ್ತದೆ ಎಂದು ಖಂಡಿತವಾಗಿ ಇಲ್ಲ. ಅದೂ ಒಂದು ಮಾರ್ಗವೆಂದು ಹೇಳಿದೆ. ಒಳ್ಳೆಯ ಮಗನನ್ನು ಪಡೆದು ಭಾರತದೇಶದ ಸತ್ಪ್ರಜೆಯನ್ನಾಗಿ ರೂಪಿಸಿದಲ್ಲಿ ಏನೋ ಪಿತೃಋಣ ತೀರಿದರೂ ತೀರಬಹುದು. ಇವರ ಕೈಯಲ್ಲಿ ಆಗದ್ದನ್ನು ಮಗನಾದರೂ ಒಳ್ಳೆಯ ರೀತಿಯಲ್ಲಿ ಮಾಡಿದರೆ ತೀರಬಹುದು ಅಷ್ಟೆ. ಇವನೇ ಅದನ್ನು ಮಾಡಿದರೆ ಮತ್ತೆ ಮಗನನ್ನು ಪಡೆಯುವ ಅಗತ್ಯವಿಲ್ಲ. ಹಾಗೆ ಪಿತೃಋಣ ತೀರಿಸುವುದಕ್ಕಾಗಿಯೇ ಎಂಬ ಬಾಲಿಶ ಅಭಿಪ್ರಾಯಗಳನ್ನು ಇಟ್ಟುಕೊಂಡು ಮದೆಯಾಗುವ ಅರ್ಹತೆಯನ್ನು ಪಡೆಯುವುದು ಅಷ್ಟು ಶ್ರೇಷ್ಠವಲ್ಲ. ಸಾಧ್ಯವಾದಷ್ಟೂ ಈ ಪ್ರಪಂಚದ ಉನ್ನತಿಗಾಗಿ ಹೋರಾಡುವ ಪ್ರವೃತ್ತಿಯಲ್ಲಿ ಮನುಷ್ಯನಿರಬೇಕು. ಅದು ಪೂರಕವಾಗಿ ಸಾಂಸಾರಿಕ ಜೀವನವಿರಬೇಕು ಎಂಬುದು ಸೂತ್ರಕಾರರ ಅಭಿಪ್ರಾಯವಾಗಿರುತ್ತದೆ. ಕೇವಲ ಸಾಂಸಾರಿಕ ಜೀವನ ಮಾತ್ರ ಪ್ರಾಪಂಚಿಕ ಉನ್ನತಿಗೆ ಮಾರ್ಗವಲ್ಲ, ಸಾಧ್ಯವೂ ಇಲ್ಲ. ಅದರಿಂದ ಪಿತೃಋಣ, ದೇವಋಣ, ಋಷಿಋಣ ಯಾವುದನ್ನೂ ತೀರಿಸಲಿಕ್ಕೆ ಸಾಧ್ಯವಿಲ್ಲ. ತನ್ನ ಸಂಕಲ್ಪಿಸಿದ ಆಶ್ರಮಧರ್ಮವನ್ನೇ ಪ್ರಸಕ್ತಕಾಲದಲ್ಲಿ ಯಶಸ್ವಿಯಾಗಿ ನಿರ್ವಹಿಸಲು ಆಗುತ್ತಿಲ್ಲ. ಈಗ ಇಲ್ಲಿ ಆಶ್ರಮಧರ್ಮ ನಿರ್ವಹಿಸದೆ ಧರ್ಮಭ್ರಷ್ಟನಾಗ್ ಹೋಗುವ ಕಾಲದಲ್ಲಿ ಮನುಷ್ಯನಿಗೆ ಯಾವ ಋಣ ತೀರಿಸಲು ಸಾಧ್ಯ? ಈಗಿನ ಕಾಲ, ದೇಶದ ಪರಿಸ್ಥಿತಿಯಲ್ಲಿ ಯಾವುದನ್ನೂ ತೀರಿಸಲು ಸಾಧ್ಯವಿಲ್ಲ. ಅಷ್ಟು ಕೆಟ್ಟಿದೆ. ಹಾಗಾಗಿ ಪಿತೃಋಣ ತೀರಿಸುವುದಕ್ಕಾಗಿ ಮದುವೆಯಾಗುತ್ತಿದ್ದೇವೆ ಎಂದು ಬೆನ್ನು ತಟ್ಟಿಕೊಳ್ಳುವುದರಲ್ಲಿ ಅರ್ಥವಿಲ್ಲ!

ಈಗ ನಮ್ಮ ಜೀವನವನ್ನು ಸಮಾಜ ಸೇವೆಗಾಗಿ ಮುಡುಪಾಗಿ ಇಟ್ಟರೆ ಹೇಗೆ?
                ಗಂಡನ ಜೊತೆಯಲ್ಲಿಯೇ ಹೆಂಡತಿಯು ಹೆಜ್ಜೆ ಇಟ್ಟು, ಅವನು ಒಳ್ಳೆಯ ಮಾರ್ಗದಲ್ಲಿಯೇ ಹೋಗುವಂತೆ ನಡೆಸಿಕೊಂಡು ಹೋಗುವುದು ಒಂದು ದಾರಿ. ಇದು ಬಹಳ ಮುಖ್ಯ. ಎರಡನೆಯದಾಗಿ ಗಂಡನು ತನ್ನ ಸಂಪಾದನೆಯಿಂದ ಏನನ್ನು ತರುತ್ತಾನೆ, ಹೆಂಡತಿಯು ಅದರಿಂದಲೇ ಸಂತೃಪ್ತರಾಗಿ ಬದುಕುವ ಪ್ರಯತ್ನ. ಮೂರನೆಯದಾಗಿ ಅಕಸ್ಮಾತ್ ಯಾರಾದರೂ ಬಂದಂತಹ ಬಂಧುಗಳಿಗೆ, ಸ್ನೇಹಿತರಿಗೆ, ಅತಿಥಿಗಳಿಗೆ ಇದ್ದುದರಲ್ಲೇ ಹಂಚಿ ತಿನ್ನುವ ಪ್ರವೃತ್ತಿಯ ಬದುಕು ಮಾಡಿದರೆ ಅದು ಸಮೃದ್ಧವಾದ, ಶ್ರೇಷ್ಠವಾದ ಗೃಹಸ್ಥಾಶ್ರಮ ಜೀವನವಾಗುತ್ತದೆ. ಬೇರೆ ಏನೂ ಬೇಕಿಲ್ಲ.

No comments:

Post a Comment