Monday, 24 June 2013

ಧನ್ವಂತರೀ ಯಾಗ ವರದಿದಿನಾಂಕ: ೨೦-೦೨-೨೦೧೩ ರಿಂದ ೧೪-೦೫-೨೦೧೩ರವರೆಗೆ ಒಟ್ಟು ೮೪ ದಿನಗಳು.
೧೧ ಜನ ಕಾರ್ಯ ಪ್ರಮುಖರು, ನಿರಂತರ ಸಂಚಾರ ಮತ್ತು ಜನ ಸಂಪರ್ಕ.
ಉದ್ಘೇದಭಿ ಶ್ರುತಾಮಘಂ ವೃಷಭಂ ನರ್ಯಾಪಸಮ್ | ಅಸ್ತಾರಮೇಷಿ ಸೂರ್ಯ ||

                ಒಟ್ಟು ೮೪ ದಿನಗಳ ಕಾಲ ನಿರಂತರ ಊರೂರು ಸುತ್ತಿ ಈ ಸಾರ್ವತ್ರಿಕ ಆರೋಗ್ಯ ಕಾಪಾಡಿಕೊಳ್ಳುವ ಒಂದು ವಿಶಿಷ್ಟ ಸೂತ್ರವನ್ನು ಬೋಧಿಸುತ್ತಾ ನಾವು ಹನ್ನೊಂದು ಜನ ನಿರಂತರ ಸಂಚಾರ ಕೈಗೊಂಡೆವು. ಮೊದಮೊದಲು ಅಷ್ಟೇನೂ ಸಂಖ್ಯೆ ಆಗದಿದ್ದರೂ ಕೊನೆಯಲ್ಲಿ ಒದಗಬಹುದೆಂಬ ನಮ್ಮ ನಿರೀಕ್ಷೆಯ ೨೦ ಸಾವಿರ ಸಂಖ್ಯೆಯ ಜನರಿಗೆ ಉಪದೇಶ ಕೊಡುವ ಗುರಿಯೊಂದಿಗೆ ನಮ್ಮ ಪಯಣ ಮುಂದುವರೆಸಿದೆವು. ಇದೊಂದು ಮಂತ್ರೋಪದೇಶ ಪ್ರಕ್ರಿಯೆಯಾದ್ದರಿಂದಲೇ ಜನ ಆಸಕ್ತಿ ತೋರಿಸುತ್ತಿರಲಿಲ್ಲ. ಮತ್ತು ಕೆಲವು ಸ್ಥಾಪಿತ ಹಿತಾಸಕ್ತಿಗಳ ಅಪಪ್ರಚಾರವೂ ಈ ಹಿನ್ನೆಡೆಗೆ ಕಾರಣವಾಯ್ತು. ಆದ ಕಾರಣದಿಂದಾಗಿ ೨೦ ಸಾವಿರ ಜನರ ಗುರಿಯೊಂದಿಗೆ ಹೊರಟ ನಮಗೆ ೧೭ ಸಾವಿರ ಚಿಲ್ಲರೆಯಷ್ಟು ಜನರನ್ನು ಮಾತ್ರಾ ಸಂಪರ್ಕಿಸಲು ಸಾಧ್ಯವಾಯ್ತು. ಹಾಗಾಗಿ ಅದಕ್ಕೇನೇ ತೃಪ್ತಿಪಟ್ಟುಕೊಂಡು ಮೇ. ೧೪ ರಂದು ಪಾವಂಜೆಯ ಶಾರಧ್ವತ ಯಾಗಶಾಲೆಯಲ್ಲಿ ಪೂರ್ಣಾಹುತಿ ಪ್ರಕ್ರಿಯೆ ನಡೆಸಲಾಯ್ತು. ಅದರ ಪೂರ್ಣ ವಿವರ ಮತ್ತು ಯಾಗಫಲ ನಿರೂಪಣೆಯನ್ನು ಮಾಡುತ್ತಿದ್ದೇನೆ. 

          ಮೊದಲಾಗಿ ಎಲ್ಲಾ ಹನ್ನೊಂದು ಮಂದಿಯೂ ತಮ್ಮ ನಿತ್ಯೋಪಾಸನೆ ಮಾಡಿಕೊಂಡು ಇಂದ್ರ ಸೂರ್ಯಾತ್ಮಕ ಪರಿಣಾಮ ಸ್ವರೂಪೀ ಸೋಮನನ್ನು ಯಂತ್ರದಲ್ಲಿ ಆಹ್ವಾನಿಸಿ ಪೂಜಿಸಿ, ಅಶ್ವಿನಿದೇವತೆಗಳನ್ನೂ ಪೂಜಿಸಿ ಪ್ರಯೋಗ ಸೂತ್ರವನ್ನಾಧರಿಸಿ ಋಗ್ವೇದದ ಎಂಟನೇಯ ಮಂಡಲದ ಮೂವತ್ತೈದನೆಯ ಸೂಕ್ತದಲ್ಲಿ ವಿವರಿಸಿದಂತೆ ಅಶ್ವಿನಿ ದೇವತಾಕ ಮಂತ್ರಗಳನ್ನು ಬಳಸಿ ಪ್ರಯೋಗ ಮಾಡಲಾಯ್ತು. ಚತುರ್ವಿಂಶತಿ (೨೪) ವಿಭಾಗ ಮಾಡಿ ಓಷಧಿಗಳಲ್ಲೂ, ಗಾಳಿಯಲ್ಲೂ, ನೀರಿನಲ್ಲೂ ಉಪಾಸನಾ ಭಾಗವನ್ನು ನಿಯೋಜಿಸಿ ಅನ್ನದಲ್ಲಿ ಕ್ಷಮತೆಯೇರ್ಪಡುವಂತೆ ಸಂಯೋಜಿಸಿ ಹೋಮ ಮುಖೇನ ಪ್ರಯೋಗಿಸಲಾಯ್ತು. ನಮ್ಮ ಮೂಲ ಉದ್ದೇಶವಾದ ಸಕಲ ಭೋಗ್ಯ ವಸ್ತುಗಳಲ್ಲಿ ಸಂಯೋಜಿಸಲು ಅವಕಾಶವಾಗಲಿಲ್ಲ. ಉದ್ದೇಶಿತ ಸಂಖ್ಯಾಪೂರ್ತಿಯಾಗದ ಕಾರಣ ಕಡಿಮೆ ಪರಿಣಾಮದ ಪ್ರಯೋಗವಾಯ್ತು. ಆದರೂ ಪ್ರಾಪ್ತಿಯೆನ್ನುವ ಅಂಶವನ್ನು ಪರಿಗಣಿಸಿ ತೃಪ್ತಿಪಟ್ಟುಕೊಳ್ಳಲಾಯ್ತು. ಅಷ್ಟೇವಿನಃ ಪರಿಪೂರ್ಣ ಉದ್ದೇಶಿತ ಯಾಗ ಕೈಗೂಡಲಿಲ್ಲ. ಹಾಗಾಗಿ ಉಪದೇಶ ಪಡೆದವರು ಪೂರ್ಣ ಯಶಸ್ವಿ. ಅವರು ಬಿಡದೆ ಜಪ, ಉಪಾಸನೆ, ಯೋಗಾಸನ, ಪ್ರಾಣಾಯಾಮ ಮಾಡಿಕೊಂಡು ಬಂದಲ್ಲಿ ಅವರಿಗೆ ಯಾವುದೇ ರೋಗ ಬಾಧೆ ಬರುವುದಿಲ್ಲ. ಅವರು ಇನ್ನೊಬ್ಬರಿಗೆ ಉಪದೇಶ ಕೊಡಲು ಸಾಧ್ಯವಿಲ್ಲ. ಹಾಗಾಗಿ ದೇಶವ್ಯಾಪಿಯಾಗಿ ಈ ಮಂತ್ರ ಜಪ ಹಬ್ಬಿಸುವ ನಮ್ಮ ಪ್ರಯತ್ನ ಕೈಗೂಡಲಿಲ್ಲ. ಅದನ್ನೇ ಪ್ರಾಪ್ತಿಯೋಗವೆನ್ನುವುದು. “ಅದರ ವಿವರಣೆಯೇ ಅಗ್ನಿವಾಕ್ಯ”.

          ಮಾನವ ಜನ್ಮಕ್ಕೆ ತ್ರಿದೋಷ ಹೊರತುಪಡಿಸಿದ ಖಾಯಿಲೆಯೆಂಬುದೇ ಇಲ್ಲ. ವಾತ, ಪಿತ್ತ, ಕಫ ಸಮತೋಲನ ಮಾಡಿಕೊಂಡು ಬದುಕಿದಲ್ಲಿ ಯಾವುದೇ ರೋಗಬಾಧೆಯಿಲ್ಲ. ಅದರ ಸಮತೋಲನ ಜೀವನ ವಿಧಾನವೇ “ಭಾರತೀಯ ಜೀವನ ಪದ್ಧತಿ”. ಅದನ್ನು ಬಿಟ್ಟಿದ್ದರಿಂದ ಮಾನವ ನಾನಾರೋಗಗಳಿಗೆ ಈಡಾಗುತ್ತಿದ್ದಾನೆ. 

೧. ವಾತ:- ನಿರಂತರ ಜೀವನದಲ್ಲಿ ತೊಡಗಿಸಿಕೊಳ್ಳುವುದು. ಏನಾದರೂ ಕೆಲಸ ಮಾಡುತ್ತಲೇ ಇದ್ದಲ್ಲಿ ವಾತ ಬಾಧೆ ಇರುವುದಿಲ್ಲ. ಆರ್ಷ ಗ್ರಂಥವಾದ ಭಗವದ್ಗೀತೆ ಹೇಳಿದ್ದೂ ಅದನ್ನೇ. ಬಸವಣ್ಣನವರು ಹೇಳಿದ್ದೂ ಅದನ್ನೇ “ಕಾಯಕವೇ ಕೈಲಾಸ”. ಅದೇ ಕರ್ಮಯೋಗ, ಕರ್ತವ್ಯ ಪಾಲನೆ. ಹಾಗಿದ್ದಲ್ಲಿ ಮಾನವನಿಗೆ ವಾತ ಭಯವಿಲ್ಲ. 

೨. ಪಿತ್ತ:- ಪಿತ್ತವು ಮನೋ ಪ್ರಚೋದಕ ದೈಹಿಕ ಪ್ರಚೋದಕ ಮರ್ದಕ. ಕಾರಣ ನಮ್ಮ ಮನಸ್ಸಿನಲ್ಲಿ ಹುಟ್ಟುವ ಮತ್ಸರವೇ ಕಾರಣ. ಮತ್ಸರ ರಹಿತನಾದ ಶುದ್ಧ ಸಹಜ ಸದ್ಗುಣ ಜೀವನ ಮಾಡಿದಲ್ಲಿ ಪಿತ್ತ ಪ್ರಕೋಪ ಇರುವುದಿಲ್ಲ. ನಿರಂತರ ಇನ್ನೊಬ್ಬರ ಏಳಿಗೆಯನ್ನು ಕಂಡು ಕರುಬುವುದಕ್ಕಿಂತ ಪ್ರಾಪ್ತಿಯನ್ನು ನಂಬಿ ಬದುಕಿದರೆ ಪಿತ್ತವಿಲ್ಲ. ಸದಾ ಸದ್ಭಾವನೆಯಿಂದ ಲೋಕ ಹಿತ ಬಯಸುವ ಬದುಕೇ ಭಾರತೀಯ ಬದುಕು.

೩. ಕಫ:- ಕಫಕ್ಕೆ ಕಾರಣ ನಾವು ತಿನ್ನುವ ಆಹಾರ. ಅನ್ನಕ್ಕೆ ಒಂದು ವಿಶಿಷ್ಟ ಗುಣವಿದೆ. ತಿನ್ನುವಾತನು ಒಂದು ತುತ್ತನ್ನಾದರೂ ಹಂಚಿದರೆ ಅನ್ನದ ದೋಷ ನಿವಾರಣೆಯಾಗುತ್ತದೆ. ಸಿಕ್ಕಿದ್ದನ್ನೆಲ್ಲಾ ತಾನೇ ತಿನ್ನಬೇಕೆಂಬ ದುರಾಸೆ ಬಿಟ್ಟು ಹಂಚಿ ತಿನ್ನುವ ಪ್ರವೃತ್ತಿ ಬೆಳೆಸಿಕೊಂಡಲ್ಲಿ ಖಂಡಿತಾ ಕಫ ದೋಷವಿಲ್ಲ. ಹಾಗಾಗಿಯೇ ನಮ್ಮಲ್ಲಿ ಪಂಚಯಜ್ಞಪದ್ಧತಿ, ವೈಶ್ವದೇವ ಪದ್ಧತಿ. ಊಟಕ್ಕೆ ಮೊದಲು ಚಿತ್ರಾಹುತಿ ಪದ್ಧತಿಗಳೆಲ್ಲಾ ಇದ್ದವು. ಎಲ್ಲವನ್ನೂ ಮರೆತ ನಾವು ಕಸಿದು ತಿನ್ನುವ, ದರೋಡೆ ಮಾಡಿ ತಿನ್ನುವ ಪ್ರವೃತ್ತಿಗೆ ಇಳಿದೆವು. ಹಾಗಾಗಿ ಕಫ ಜಾಸ್ತಿಯಾಯ್ತು ಜನರಲ್ಲಿ. 

ಈ ಮೇಲೆ ಹೇಳಿದ ವಿಚಾರಗಳೆಲ್ಲಾ ಭಾರತೀಯ ಸಂಸ್ಕೃತಿ. ಆ ಆದರ್ಶ ಜೀವನ ರೂಢಿಸಿಕೊಂಡರೆ “ತ್ರಿದೋಷಗಳಿಲ್ಲ”. ರೋಗವಿಲ್ಲ. ಇದು ಸತ್ಯ! ಸತ್ಯ!! ಸತ್ಯ!!! ಇದೇ ಯಾಗಮುಖದಲ್ಲಿ ಕಂಡುಬಂದ ಅಗ್ನಿವಾಕ್ಯ. ಅರ್ಥಮಾಡಿಕೊಂಡು ಮಾನವರಾಗಿ ಬದುಕಿದರೆ ಬಾಳು ಸುಖಮಯ ಆರೋಗ್ಯದಾಯಕ. ಹೆಚ್ಚಿಗೆ ವಿವರಿಸಲಾರೆ. ಒಮ್ಮೆ ಮಗದೊಮ್ಮೆ ಓದಿಕೊಂಡು ಅರ್ಥಮಾಡಿಕೊಳ್ಳಿರೆಂದು ಪ್ರಾರ್ಥಿಸುತ್ತೇನೆ.

ಇನ್ನು ನಮ್ಮ ಸಂಕಲ್ಪಿತ ಯಾಗದಲ್ಲಿ ಸಂಕಲ್ಪಿತ ಸಂಖ್ಯೆಯಾಗದಿದ್ದರೂ ಅಂದಾಜು ೮ ಸಾವಿರದಷ್ಟು ಜನರು ಉಡುಪಿ, ಮಂಗಳೂರು, ಕಾಸರಗೋಡು ಜಿಲ್ಲೆಯವರು ಪೂರ್ಣ ಸಹಕಾರ ಕೊಟ್ಟಿರುತ್ತಾರೆ. ಮಂತ್ರೋಪದೇಶ ಪಡೆದು ಯಾಗಕ್ಕೆ ಸಹಕರಿಸಿರುತ್ತಾರೆ. ಅವರೆಲ್ಲರಿಗೂ ಭಗವದನುಗ್ರಹ ಪ್ರಾಪ್ತವಾಗಲಿ, ಚಿರಾಯುಗಳಾಗಲಿ ಎಂದು ಪ್ರಾರ್ಥಿಸುತ್ತಾ ಕೃತಜ್ಞತೆಯನ್ನು ಸಮರ್ಪಿಸುತ್ತಿದ್ದೇವೆ. ಇನ್ನು ಈ ಯೋಜನೆಯಲ್ಲಿ ವಿಶೇಷವಾಗಿ ಸಹಕರಿಸಿದ ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸಿಬ್ಬಂದಿವರ್ಗ, ಶ್ರೀದೇವರು ಎಲ್ಲರನ್ನೂ ಮನಸಾ ವಂದಿಸುತ್ತೇವೆ. ಅಲ್ಲದೇ ಶ್ರೀಯುತ ನಾರಾಯಣ ಹೇರ್ಳೆ, ವಿದ್ಯಾಶಂಕರ್, ಎಸ್. ಎನ್. ಪಡಿಯಾರ್, ಸತೀಶ್ ಕುಮಾರ್, ದಾಮೋದರ ಶೆಟ್ಟರು ಜಯರಾಜ್, ರಾಮಕಾರಂತರು, ತಾರಾನಾಥ ಭಕ್ತರು, ಕಾರ್ಕಳ ಶಾಮಣ್ಣ ಇನ್ನೂ ಹಲವು ಜನ ಈ ಸಂಘಟನಾ ಕಾರ್ಯದಲ್ಲಿ ತಮ್ಮನ್ನು ಪೂರ್ಣ ತೊಡಗಿಸಿಕೊಂಡಿದ್ದಾರೆ. ಇವರೆಲ್ಲರಿಗೂ ಭಗವಂತನು ಆಯುರಾರೋಗ್ಯ ನೀಡಲೆಂದು ಹಾರೈಸುತ್ತೇವೆ. ಅಲ್ಲದೇ ಅಲ್ಲಲ್ಲಿ ಊರಿನ, ಹಿರಿಯರೂ, ಮುಖಂಡರೂ ಹಲವು ರೀತಿಯಲ್ಲಿ ಸಹಕರಿಸಿರುತ್ತಾರೆ. ಅವರೆಲ್ಲರಿಗೂ ಭಗವಂತನು ಆಯುರಾರೋಗ್ಯ ಸಂಪದವನ್ನೀಯಲೆಂದು ಹಾರೈಸುತ್ತಾ ಯಾಗಫಲ ನಿರೂಪಣಾ ಎಂಬ ಈ ಭಾಗವನ್ನು ಮುಗಿಸುತ್ತಾ ಒಂದೆರಡು ಮಾತನ್ನು ಮತ್ತು ಪೂರ್ವೋದಾಹರಣೆಯನ್ನು ಉಗಾದಿಗಳ ರೀತಿಯಲ್ಲಿ ಬರೆದು ಓದಿಕೊಳ್ಳಿರೆಂದು ಬಿನ್ನವಿಸಿ ಈ ಲೇಖನ ಮುಗಿಸುತ್ತಿದ್ದೇನೆ. ಉಳಿಕೆ ವಿವರಗಳಿಗೆ ಮುಂದಿನ ಲೇಖನ ಗಮನಿಸಿರಿ.
ಇಂತು
ಸಜ್ಜನ ವಿಧೇಯ
ಕೆ. ಎಸ್. ನಿತ್ಯಾನಂದ

ದೇವವಾಣಿ

ಕೇಳು ಬಾಲಕ ನೀನು ಸರ್ಗದಲಿ ಅನುರ್ವ ನಿರಂತರವೀ
ಬಾಳು ಕೆಲ ಜನ ತಿಲಕವಿಟ್ಟಂತೆ ಮುಖಮಂಡಲಕೆ ನಿಜ
ವೇಳು ಚಿಂತಿಸದಿರು ನಡೆ ಮುಂದೆ ಯಾಗವಿದು ಧೈವ ಕಾರಣ ಸಫಲತೆಯಹುದು ಕೇಳೆಂದಾ ||
ತಾಳು ತಾಳೈ ಮಗುವೆ ನೀನೆನಗೆ ಅರ್ಪಿಸಿದೆ ಹವಿಃಯನು
ಕೇಳು ಸಂತೃಪ್ತಿಯಿದೆ ನಿಯಮದಂತೆ ಸಂಖ್ಯೆ ನ್ಯೂನತೆ
ಹೇಳು ಕೊರತೆ ಯಾರದು ಜನಕೆ ಬೇಕಿಲ್ಲ ಪಾತ್ರರಲ್ಲವು ಚಿಂತಿಸದಿರು ಭಗವದಿಚ್ಛೆಯದು ಕೇಳೆಂಬೇ || ೧ ||

“ಯೋ ಜನಾನ್ ಮಹಿಷಾ ಇವಾತಿ ಉತಾಪವೀರವಾನ್ ಯುಧಾ”
ಯೋಜಕನು ನೀನಹುದು ಬಲಯುತರು ಬಹಳಿಹರು ಏತಕೆ
ಯೋಗವಿಲ್ಲವು ದೇಶಕೆ ಧರ್ಮ ಬೇಗುದಿಯಿಹುದು ಧೈವಸಂಕಲ್ಪವಿದೆ ನೀನರಿತುಕೊ ||
ಯಾಗದೊಳು ಸಾಧಿಸುವೆನೆಂಬ ನಿನ್ನ ಕೆಚ್ಚನು ಅರಿತೆ ಮರುಳೆ
ಈಗ ನೀ ನನ್ನ ಬಂದಿ ಮಂತ್ರಬಲವಿದೆ ಒಲವಿದೆ ನಿನಗನವರತ
ಬೇಗ ಸಾಧಿಪ ಇಚ್ಛೆ ಬಿಡು ಮುಂದೊದಗಿ ಬರುವುದು ಕಾಲ ಸಾಧಿಸಿಕೊ ಲೋಕಕ್ಷೇಮವನೂ || ೨ ||

ಅಯಂ ಮೇ ಹಸ್ತೋ ಭಗವಾನ್ ಎಂದಿದೆ ನಿಜ ಕೇಳು
ಅಯಂ ಮೇ ಭಗವತ್ತರವೆಂದಿದೆಯಲ್ಲವೇ ಮಗು
ಅಯಂ ಮೇ ವಿಶ್ವಭೇಷಜವಿರಲಿ ಅಯಂ ಶಿವಾಭಿಮರ್ಶನಃ ಇದು ನೀತಿ ಕೇಳೆಂಬೇ ||
ಈಯಾಮಾಧಹಂ ವೈವಸ್ವತಾತ್ಸುಬಂಧೋ ಕೇಳು ಮನ
ವಾಯದೊಳು ಬಂಧಿಸಿದೆ ಮನಕೆ ಸಂಸ್ಕಾರವಿಲ್ಲದೆ
ಆಯ ತಪ್ಪಿಹೆ ಮಗುವೆ ಜನಮನದೊಳಗೆ ತುಂಬಿದೆ ಸಂಶಯಭೂತ ಬಿಡು ಚಿಂತೆಯಾ || ೩ ||

ಆದರೇನ್ ಬಿಡು ಚಿಂತೆ ಮುಂದಿದೆ ಕಾಲ ಯಾಗದಲಿ
ಓದಿಸಿದೆ ನೀ ಪೂರ್ಣಾಹುತಿಯ ಅದಕಾಗಿ ಪೇಳಿದೆ
ನಿದನರ್ಥ ಮಾಡಿಕೊ ಲೋಕ ಸುಜ್ಞಾನಕೆಳಸುವುದು ಆಕಾಲದಲಿ ನೀನೂ ||
ಮೊದದಿಂದಾಚರಿಸು ಯಾಗವನು ಫಲವೀವೆ
ಇದು ವಚನ ಕೇಳೈ ಮಗುವೆ ಕಾಲ ಪಕ್ವವಿಲ್ಲದೆ
ಮೊದಲಿಸಿದೆ ಅದಕೆ ಈ ಫಲ ಸ್ಥಂಭಿಸಿದೆ ಮುಂದೊದಗಿ ಬರುವೆ ಕೇಳೆಂಬೇ || ೪ ||

ಪ್ರಾಪ್ತಿಯಿಲ್ಲದ ಜನಕೆ ನೀನೇನ ಮಾಡುವೆ ಮಗುವೆ
ಪ್ರಾಪ್ತಿಯಿಲ್ಲದ ದೇಶದಲಿ ಇದರ ವ್ಯಾಪ್ತಿಯಿಲ್ಲವು
ಸುಪ್ತದೊಳಿಹುದು ವಿಧ್ಯೆಯು ನಿರಂತರ ಮುಂದೆ ಚಲನೆಗೆ ಬಂದ ಮೇಲಿನ್ನೂ ||
ವ್ಯಾಪ್ತಿಯೊಳು ಕಾರ್ಯಾರಂಭಗೈಯುವುದು ಕೇಳ್ ಸು
ಷುಪ್ತಿಯಲಿ ನೆರೆದಿಹುದು ಲೋಕವು ಲೋಗರು ಇನ್ನು
ಸುಪ್ತಗೊಳಿಸಿದ ವಿಧ್ಯೆಗಳ ಮರು ಎಚ್ಚರಿಸುವಾ ಕೈಂಕರ್ಯದಲಿ ತೊಡಗು ಎಂಬೇ || ೫ ||

|| ಕಂದ ||
|| ಇಂತೀಪರಿಯೊಳಗೆ ಧೈವ ಸಾಂತ್ವನ ಕೇಳಿ ಸಂತಸದೊಳಗೆ ಲೋಕಮಂಗಳಕಾರಕನು
ನಿರಂತರ ಲೋಕಕೆ ಮಂಗಳವ ನೀಯಲೆಂದು ಪ್ರಾರ್ಥಿಸುತಲೀ ||
|| ಭದ್ರಂ | ಶುಭಂ | ಮಂಗಳಂ ||

-    ಬ್ರಹ್ಮರ್ಷಿ  ಕೆ. ಎಸ್. ನಿತ್ಯಾನಂದ,
ಪೂರ್ವೋತ್ತರ ಮೀಮಾಂಸಕರು
ವೇದ ವಿಜ್ಞಾನ ಮಂದಿರ,
ಚಿಕ್ಕಮಗಳೂರು

No comments:

Post a Comment