Friday, 28 June 2013

ವಚನ ಕಾವ್ಯಗಳಲ್ಲಿ ಜೀವನ ವರ್ಣನೆ-೧

ಮಕ್ಕಳೇ ಸಂಕಲ್ಪ ಬಲವಿರಬೇಕು, ಸ್ವಂತ ಸಾಹಸದಿಂದ ಮೇಲ್ಬರಬೇಕು –
ಭೂಮಂಡಲವೆನೆ ಬರೇ ಅಂಗಳ, ಕಡಲು ಕೆರೆಯು, ಪಾತಾಳ ಸಮನೆಲ,
ಮೇರು ಮಹಾಗಿರಿ ಹುತ್ತ ಕೇವಲ ಮನುಜನಿಗಿದ್ದರೆ ಸಂಕಲ್ಪ ಬಲ.
ಹುಟ್ಟಿನಿಂದೇನು? ತಂದೆಯ ಮೈಮೆಯಿಂದೇನು? ತನ್ನಾರ್ಪಿನಿಂದ ಮೇಲ್ಮೆಗೆ ಬರುವ ತಾನು;
ಬಾವಿಯೂ ಬತ್ತಲಾರದು ಕೊಡಗಳಿಂದ, ಕಡಲನೊಬ್ಬನೆ ಕುಡಿದನೋ ಕೊಡನ ಮಗನು.

ವಿಧ್ಯೆಯನ್ನು ಕಲಿಯಬೇಕು ಅದು ವಿನಯವನ್ನು ಕೊಡುವಂತಹದ್ದಾಗಿರಬೇಕು.
ವಿಧ್ಯೆ ಕಾಣದವನ ಬಾಳು ನಾಯಿ ಬಾಲದಂತೆ ಗಾಳು,
ಮಾನ ಮುಚ್ಚಲಾರದು ನೊಣ ಹೊಡೆಯಲು ಸಾಲದು.

ವಿನಯವಿಲ್ಲದಿರೆ ಮುಂದೆ ಸಾಕ್ಷರನು ಆಗುವ ರಾಕ್ಷಸನು -
ಸಾಕ್ಷರನು ತಾ ತಿರುಗಿದರೆ ರಾಕ್ಷಸನೆ ಅವ ನಿಚ್ಚಟ,
ತಿರುಗಿಬಿದ್ದರು ಸರಸನಾದವ ಸರಸತನವನು ಕೈಬಿಡ.

ಪ್ರಸಕ್ತ ಕಾಲದಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸುವುದೇ ಉದ್ಯೋಗಕ್ಕಾಗಿ ಎಂಬ ಭಾವನೆ ಜನರಲ್ಲಿ ಬೇರೂರಿದೆ. ಉದ್ಯೋಗದಲ್ಲಿಯೂ ಬಿಡದೆ ಸಾಧಿಸಬೇಕು-
ಬಿಡದೆ ಉದ್ಯೋಗ ಮಾಡು, ಮಾರ್ಜಾಲವನು ನೋಡು;
ಹಸುವ ಸಾಕಿದೆಯೆ? ಬೆಕ್ಕು ನಿತ್ಯ ಕುಡಿಯದೆ ಹಾಲು?

ಇನ್ನು ದುಡಿಯುವ ಹಂಬಲದಲ್ಲಿ ತಾವು ಕಲಿತ ವಿದ್ಯೆಗಳನ್ನೆಲ್ಲಾ ಮರೆದು ಎಂತಹಾ ಉದ್ಧಟ ವಾಕ್ಯಗಳನ್ನು ಉಚ್ಛರಿಸುವರೋ ನೋಡಿ!!
ಹಸಿದರೆ ತಿನಬಹುದೇ ವ್ಯಾಕರಣ? ತೃಷೆ ಹಿಂಗಿಸುವುದೆ ಕವಿತಾ ಪಾನ?
ಕುಲವುದ್ಧರಿಸದು ವೇದದ ಪಠನ; ಸುಡು ಗುಣಗಳ, ಶೇಖರಿಸಯ್ಯ ಹಣ!

ಉದ್ಯೋಗಕ್ಕಾಗಿ ಮಹಾನಗರಗಳತ್ತ ಕಾಲಿಡುವ ಮುಗ್ದ ಯುವ ಪೀಳಿಗೆಯೇ ಜೀವನ ಎಂದರೇನೆಂದು ಅರಿತಿರುವಿರಾ? ಅಕ್ಷರ ಅರಿತಿರುವಿರೇನು? ಅನುಭವ ಜ್ಞಾನವಿದೆಯೇ? ಜೀವನ ನಡೆಸುವ ಪದವೀಧರರಾಗಿದ್ದೀರಾ? ಭಕ್ತಿ, ಯುಕ್ತಿ, ಮುಕ್ತಿಗಳನ್ನು ಅರಿತಿರುವಿರಾ? ಸುಮ್ಮನೆ ವಾದಿಸಿ ವೇಗದ ನಾಗಾಲೋಟದಲ್ಲಿ ಮಾರಿಹೋದಿರಾ -
ಅಕ್ಷರವ ಬಲ್ಲೆವೆಂದು ಅಹಂಕಾರವಡೆಗೊಂಡು ಲೆಕ್ಕಗೊಳ್ಳರಯ್ಯ,
ಗುರುಹಿರಿಯರು ತೋರಿದ ಉಪದೇಶದಿಂದ ವಾಗದ್ವೈತವ ಕಲಿತು ವಾದಿಪರಲ್ಲದೆ
ಆಗು-ಹೋಗೆಂಬುದನರಿಯರು, ಭಕ್ತಿಯನರಿಯರು, ಯುಕ್ತಿಯನರಿಯರು, ಮುಕ್ತಿಯನರಿಯರು
ಮತ್ತೂ ವಾದಿಗಳೆನಿಸುವರು ಹೋದರು, ಗುಹೇಶ್ವರ, ಸಲೆ ಕೊಂಡ ಮಾರಿಂಗೆ ||

ಒಂದು ಚೋದ್ಯವೆಂದರೆ ಅಕ್ಷರವೇ ತಿಳಿಯದಿದ್ದರೂ ಬಾಯಿದ್ದವ ಗೆದ್ದ ಎಂಬುದು ಪ್ರಸಕ್ತ ಕಾಲದ ನೀತಿಯಾಗಿಬಿಟ್ಟಿದೆ-
ಗೊತ್ತಿಲ್ಲದಿದ್ದರೂ ಒತ್ತಿ ನುಡಿ ನುಡಿವುದನು;
ಹೆಡ್ಡರದನೊಡನೆ ನಂಬುವರು-ಬಲ್ಲವ ಕೂಡ
ಇದ್ದೀತೆ ಎಂದು ಶಂಕಿಸುವ.

ಅಂತಹ ಬಂಡವಾಳ ಇಲ್ಲದೆ ಬಡಾಯಿ ಕೊಚ್ಚಿಕೊಳ್ಳುವವರ ಹಿಂಡು ಹಿಂಡೇ ಈಗ ಕಾಣಸಿಗುತ್ತದೆ. ಅವರು ತಮ್ಮತಮ್ಮಯ ಅನ್ಯೋನ್ಯ ಪ್ರಶಂಸೆಯಲ್ಲಿ ಮುಳುಗಿರುತ್ತಾರೆ-
ಒಂಟೆಗಳ ಮದುವೆಯಲಿ ಕತ್ತೆಗಳು ಹಾಡಿದವು,
ಒಂದನಿನ್ನೊಂದು ಕೊಂಡಾಡಿದವು ತಲೆದೂಗಿ
ಏನು ರೂಪೇನು ದನಿಯಹಹಾ !

ಅಂತಹಾ ಕೂಟದಲ್ಲಿ ದುರ್ಬಲನಿಗೆ ಕಾದಿರುತ್ತದೆ ಘಾತಕ. ಅಲ್ಲಿ ಸಜ್ಜನಿಕೆಗೆ ಬೆಲೆಯೇ ಇಲ್ಲ-
ಬೇಡದು ಕುದುರೆಯ, ಆನೆಯ ಬೇಡದು, ಬೇಡಲೆ ಬೇಡದಲಾ ಹುಲಿಯ-
ದೈವ ಕೊಲುವುದೂ ದುರ್ಬಲನನ್ನೇ – ಆಡಿನ ಮಗನನು ಕೊಡು ಬಲಿಯ!

ಅದೇನೇ ಇದ್ದರೂ ನಾವು ಮಾತ್ರ ಒಳ್ಳೇ ಮಾತನ್ನೇ ಆಡಬೇಕು-
ಒಳ್ಳೊಳ್ಳೆ ಮಾತಿಂಗೆ ಮಳ್ಳಾಗದವರಾರು? ಒಳ್ಳೆ ಮಾತನ್ನೆ ನೀನಾಡುತಿರು, ತಮ್ಮಯ್ಯ,
ಬಾಯ್ಮಾತಿಗೇನು ಬರಗಾಲ!

ದುಡಿಯಲು ಆರಂಭಿಸಿದಂತೆಯೇ ದೊರೆಯುವ ಸಂಪತ್ತು, ಜೊತೆಯಲ್ಲಿ ಸ್ತ್ರೀ ಸಖ್ಯ, ಮತ್ತೆ ಸೈಟು, ಮನೆ, ಕಾರು, ವಸ್ತ್ರ, ಆಭರಣ, ಅದು ಬೇಕು ಇದು ಬೇಕೆಂದೇ ಸಾಗುವಿರಲ್ಲ. ಅವೆಲ್ಲ ಸತ್ಯವೇ?
ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ, ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ,
ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ, ಮನದ ಮುಂದಣ ಆಶೆಯೇ ಮಾಯೆ ಕಾಣಾ ಗುಹೇಶ್ವರ ||

ಹಾಕುವ ಬಟ್ಟೆಗೆ ಬೆಲೆಯಲ್ಲ, ಹೊಂದಿರುವ ಗುಣ-ವಿಧ್ಯೆಗಳಿಗೆ ಬೆಲೆ ಎಂದು ನೀತಿ ಸಾರುತಿದೆ. ಆದರೆ ಅದಕ್ಕೆ ವಿರುದ್ಧವೆಂಬಂತೆ ವೇಷದ ಮಹಿಮೆಯು ಲೋಕದಲಿ ತಾಂಡವವಾಡುತ್ತಿದೆ-
ಬಟ್ಟೆಯಲ್ಲೇನುಂಟು ಎನಬೇಡ, ತಮ್ಮಾ! ಬಟ್ಟೆಯಿಂದಳೆಯುವರು ಯೋಗ್ಯತೆಯ ನಮ್ಮ,
ಪೀತಾಂಬರನ ನೋಡಿ ಮಗಳನ್ನೆ ಕೊಟ್ಟ, ಕಡಲರಸ ದಿಗಂಬರ ಶಿವಗೆ ವಿಷವಿತ್ತ !

ಯಾರೂ ಇಲ್ಲದಿರುವ ಸಿಟಿಯ ಔಟ್‍ಸ್ಕರ್ಟ್ಸ್‍ನಲ್ಲಿ ಒಂದು ಸೈಟ್ ಕೊಂಡು ಬಂಗಲೆಯಲ್ಲಿ ಒಂಟಿ ಭೂತದಂತೆ ಇದ್ದರೆ ಜೀವನ ಜಂಜಾಟ ಬಾಧಿಸದೇ?
ಆರೂ ಇಲ್ಲದಾರಣ್ಯದೊಳಗೆ ಮನೆಯ ಕಟ್ಟಿದರೆ ಕಾಡುಗಿಚ್ಚು ಎದ್ದು ಬಂದು ಹತ್ತಿತಲ್ಲಾ !
ಆ ಉರಿಯೊಳಗೆ ಮನೆ ಬೇವಲ್ಲಿ ಮನೆಯೊಡೆಯನೆತ್ತ ಹೋದನೋ ?!
ಆ ಉರಿಯೊಳಗೆ ಬೆಂದ ಮನೆ ಚೇಗೆಯಾಗದುದ ಕಂಡು ಮನೆಯೊಡೆಯನಳಲುತ್ತ
ಬಳಲುತ್ತೈದಾನೆ ಗುಹೇಶ್ವರ, ನಿಮ್ಮ ಒಲವಿಲ್ಲದ ಠಾವ ಕಂಡು ಹೇಸಿ ತೊಲಗಿದೆನಯ್ಯ !

ಸತ್ಯವನ್ನು ಅರಿಯದೆ ಜನರು ದುಡಿದು ದುಡಿದು ಮಿಥ್ಯೆಗಾಗಿಯೇ ಸಾಯುತ್ತಿದ್ದಾರೆ –
ಆಸೆಗೆ ಸತ್ತುದು ಕೋಟಿ ! ಆಮಿಷಕೆ ಸತ್ತುದು ಕೋಟಿ !
ಹೊನ್ನು-ಹೆಣ್ಣು-ಮಣ್ಣಿಂಗೆ ಸತ್ತುದು ಕೋಟಿ ! ಗುಹೇಶ್ವರ
ನಿಮಗಾಗಿ ಸತ್ತವರನಾರನೂ ಕಾಣೆ !!


ಇನ್ನೊಬ್ಬರ ಏಳಿಗೆಯನ್ನು ಕಂಡು ಕರುಬುವಿರಲ್ಲವೇ? ಅದು ನಿಮ್ಮ ಹೊಟ್ಟೆಯ ಕಿಚ್ಚನ್ನು ಹೆಚ್ಚಿಸಿ ನಿಮ್ಮನ್ನೇ ಸುಡುತ್ತದೆ ಹೊರತು ನೀವು ಅವರಾಗುವುದಿಲ್ಲ, ಅವರು ನೀವಾಗುವುದಿಲ್ಲ –
ಕುರೂಪಿ ಸುರೂಪಿಯ ನೆನೆದಡೆ ಸುರೂಪಿಯಪ್ಪನೆ?
ಆ ಸುರೂಪಿ ಕುರೂಪಿಯ ನೆನೆದೆಡೆ ಕುರೂಪಿಯಪ್ಪನೆ? ಧನವುಳ್ಳವರ ನೆನೆದಡೆ ದರಿದ್ರ ಹೋಹುದೇ?
ಪುರಾತರ ನೆನೆದು ಕೃತಾರ್ಥರಾದೆವೆಂಬರು ! ತಮ್ಮಲ್ಲಿ ಭಕ್ತಿನಿಷ್ಠೆಯಿಲ್ಲದವರ ಕಂಡಡೆ ಮೆಚ್ಚನು ಗುಹೇಶ್ವರನು.

ಎಷ್ಟೇ ದುಡಿದರೂ, ಧನ, ಧಾನ್ಯ, ಪಶು, ಪತ್ನಿ, ಸುತ, ಆಲಯ, ಸ್ಥಾನ-ಮಾನ ಗಳಿಸಿ, ಏನೇ ಮಾಡಿದರೂ ನಿಮಗೆ ತೃಪ್ತಿ ಇದೆಯೇ? ಅದಕ್ಕಾಗಿ ಅಲ್ಪ ತೃಪ್ತತೆ ರೂಢಿಸಿಕೊಳ್ಳಿ-
ಅಲ್ಪತೃಪ್ತಿಯ ಮಂದಭಾಗ್ಯನಿಗೆ ಮುಳಿದು
ಹೆರರಿತ್ತ ಸಿರಿ ಕೂಡ ಹೋಗುವುದು ತೊಳೆದು ||

ಇಲ್ಲದಿದ್ದರೆ ನಿಮ್ಮ ಜೀವನವೇ ಯದ್ವಾತದ್ವಾ ಆಗುತ್ತದೆ-
ಮಂಗ ಸುರೆಯ ಕುಡಿಯಿತು, ಮೇಲೆ ಚೇಳು ಕಡಿಯಿತು,
ಮತ್ತೆ ಭೂತ ಬಡಿಯಿತು, ಏನಕೇನೋ ಆಯಿತು!

ಆ ಆಸೆ, ಈ ಆಸೆ ಎಂದು ಆಶಾ ಸಾಗರದಲ್ಲಿ ತೇಲುತಿರೆ ಸಾಲದು, ಶಾಂತಿ ಬೇಕೆಂದರೆ ಸಜ್ಜನಿಕೆಯನ್ನು ಬೆಳೆಸಿಕೊಳ್ಳಬೇಕು-
ಹುಣ್ಣಾಸೆ ನೊಣಗಳಿಗೆ, ಹಣದಾಸೆ ಅರಸರಿಗೆ, ನೀಚರಿಗೆ ಕಲಹ ಬೇಕೆಂಬಾಸೆ-
ನಿಚ್ಚವೂ ಸಜ್ಜನರಿಗಾಸೆ ಶಾಂತಿಯು.

ಶ್ರೀಮಂತಿಕೆಯು ಎಲ್ಲವನ್ನೂ ಕೊಡಲಶಕ್ಯ. ದಾರಿದ್ರ್ಯವು ಇರಬೇಕು, ಅದು ಮಾನವನನ್ನು ಮಾನವನನ್ನಾಗಿ ರೂಪಿಸುತ್ತದೆ-
ದಾರಿದ್ರ್ಯವೆ, ನಿನಗೆ ನಮೋ ಎಂಬೆ! ಸಿದ್ಧನಾದೆ ನಾ ನಿನ್ನ ದಯದಿಂದೆ;
ಜಗವನೆಲ್ಲ ನಾ ಕಾಣುತಲಿರುವೆ ಜಗದ ಕಂಗಳಿಗೆ ಕಾಣಿಸದಿರುವೆ ||

ಏನೇ ಬರಲಿ ಎಂತೇ ಇರಲಿ, ಅನುದಿನ ಯಾವ ಅಸುಖ ಸುಖ ತರಲಿ. ಬಾಳ ಗೊಂದಲದ ಕರ್ಕಶದೆಡೆಯಲ್ಲಿ ಕೇಳುತಿರಲಿ ಹರಿ ನಿನ್ನ ಮುರಳಿ ಎಂಬಂತೆ ಜಗ್ಗದೆಯೆ ಕುಗ್ಗದೆಯೆ ನುಗ್ಗಿ ನಡೆ ಮುಂದೆ-
ಸಾವಿರ ಗಾವುದ ಸಾಗಲು ಬಹುದು ಇರುವೆಯಾದರೂ ನಡೆದೂ ನಡೆದೂ,
ಕೂತಲ್ಲಿದ್ದರೆ ಗರುಡನು ಕೂಡ ಒಂದಂಗುಲ ಮುನ್ನಡೆಯನು ಮಾಡ ||

No comments:

Post a Comment