Wednesday, 24 July 2013

Vedic Physics - 1

ಅರ್ಪಣೆ
ಗುರುವು ಪರಬೊಮ್ಮವದು ಅರಿವಿನಾ ಗಣಿ ಕೇಳು ಜೀವನದ
ಗುರಿತೋರ್ಪ ಬೊಂಬಾಳ ದೀವಿಗೆಯು ಲೋಕಮುಖಕೆ ಏಕೈಕ
ಉರಿವ ಮಾರ್ತಾಂಡ ತೇಜ ಕಾಣೈ ಎಲ್ಲರಿಗೆ ಒಂದಾಗಿ ಸಮನಾಗಿ
ಮತ್ಪ್ರೀತಿ ಸುಧೆಯ ಹರಿಸುವುದೂ |

ದಾರಿ ತೋರುವ ಕೈಕಂಬ ಗುರುವಲ್ಲ ನಡೆದು ತೋರುವವರೇ ಗುರುವು
ದಾರಿ ಕಾಣದೆ ಬಳಲದಿರು ಸನ್ಮಾರ್ಗ ಪಥಿಕನನುಕರಿಸು ದಾರಿ ಕಾಂಬುದು ಆ
ದಾರಿಯಹುದೈ ಗುರುವೆಂಬ ಮಾನಸಮೂರ್ತಿ ನಿನ್ನ ಹೀಗೆಳೆಯದೆಲೆ
ಒತ್ತಿನಲಿ ಕರೆದು ಕೊಂಡೊಯ್ವರು ||

ಎಂಬುದಕ್ಕೆ ಅನ್ವರ್ಥವಾಗಿರುವ ನನ್ನ ಗುರುಗಳಾದ ಚಿಕ್ಕಮಗಳೂರಿನ ವೇದ ವಿಜ್ಞಾನ ಮಂದಿರದ ಸಂಸ್ಥಾಪಕರಾದಂತಹಾ ಬ್ರಹ್ಮ ಋಷಿ ಪಟ್ಟದಲ್ಲಿರುವ
ಶ್ರೀಯುತ ಕೆ.ಎಸ್. ನಿತ್ಯಾನಂದ ಸ್ವಾಮೀಜಿಯವರ ಪಾದಾರವಿಂದಕ್ಕೆ
ಕೆರೆಯ ನೀರನು ಕೆರೆಗೆ ಚೆಲ್ಲಿ ವರವಪಡೆದವರಂತೆ ಕಾಣಿರೋ
ಎಂಬಂತೆ ಈ ಕೃತಿಯನ್ನು ಸಮರ್ಪಿಸುತ್ತೇನೆ.

ಪ್ರಸ್ತಾವನೆ 


ನಮ್ಮ ಪುರಾತನ ಅನಾದಿ ವೇದ, ಸ್ಮೃತಿ, ಮೀಮಾಂಸಾದಿ ತೌಲನಿಕ ಗ್ರಂಥಗಳಲ್ಲಿ ವಿಷಯ ಮತ್ತು ವಿಚಾರ ನಿಖರತೆಗೆ ಪ್ರಾಧಾನ್ಯವಿತ್ತಿದ್ದರು. ಯಾವುದೇ ವಿಷಯ ಹೇಳಿರಲಿ ಅದು ಪರಿಪೂರ್ಣ, ದೃಷ್ಟಾಂತ ರೀತ್ಯಾ ಸತ್ಯವಾಗಿರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳದೆ ಮೂಢನಂಬಿಕೆಯೆಂದು ನಿಷೇಧಿಸುವ ಪ್ರವೃತ್ತಿ ಕಾಣುತ್ತಿದ್ದೇವೆ. ಅದಕ್ಕಾಗಿ ಈ ಭೌತಶಾಸ್ತ್ರವೆಂಬ ನಮ್ಮ ಪುರಾತನ ಋಷಿ-ಮುನಿಗಳ ಆಳ ಅಧ್ಯಯನ ಪ್ರಬಂಧದ ಪರಿಚಯವನ್ನು ನಿಮ್ಮ ಮುಂದಿಡುತ್ತಿದ್ದೇನೆ. ಇದನ್ನು ಓದಿ ಅರ್ಥೈಸಲು ಉದ್ಯುಕ್ತರಾಗಿ ನೀವೂ ಭೌತಶಾಸ್ತ್ರದ ಆಳವರಿತು ಈ ಪ್ರಕೃತಿ + ಚೈತನ್ಯದ ರಹಸ್ಯ ಅರಿಯಿರಿ. ಆಗ ನಿಮಗೇ ಸಮಾಜದಲ್ಲಿನ ಎಷ್ಟೋ ಸುಳ್ಳುಗಳು ಅರ್ಥವಾಗುತ್ತದೆ. ಆದರೆ ಯಾವುದನ್ನೂ ತಿರಸ್ಕರಿಸಬೇಡಿ.

“ಹೊಸ ಚಿಗುರು ಹಳೇ ಬೇರು ಕೂಡಿರಲು ಮರ ಸೊಬಗು; 
ಹೊಸ ಯುಕ್ತಿ ಹಳೆ ತತ್ವ ಒಡಗೂಡೇ ಧರ್ಮ; 
ಋಷಿವಾಕ್ಯದೊಡೆ ವಿಜ್ಞಾನ ಕಲೆ ಮೇಳವಿಸೆ, ಜಸವು ಜನಜೀವನಕೆ ಮಂಕುತಿಮ್ಮ”


ಎಂಬಂತೆ ಬೆಳೆದು ಸಮಾಜಕ್ಕೆ ಸಹಕಾರಿಯಾಗಿರಿ. ಈ ವೈಧಿಕ ಭೌತಶಾಸ್ತ್ರವು ಒಬ್ಬರ ವಿಚಾರವಲ್ಲ. ಹಲವು ಋಷಿಗಳು ವೇದದ ಸೂತ್ರಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಿ ಯಾವುದೇ ಊಹೆ, ಮೌಢ್ಯ, ಅವೈಜ್ಞಾನಿಕತೆಗೆ ಎಡೆಗೊಡದೆ, ಇದಮಿತ್ಥಂ ಎಂಬ ನಿರ್ಣಯ ಕೊಡಲು ಸಾಧ್ಯವಾಗಿರುವ ವಿಚಾರಗಳನ್ನು ಸಿದ್ಧಪಡಿಸಿ ತೋರಿಸುತ್ತದೆ. ಇಲ್ಲಿ ಪ್ರತ್ಯಕ್ಷ ಪ್ರಯೋಗಗಳಿಗೇ ಪ್ರಾಧಾನ್ಯತೆ. ಭಾವನಾತ್ಮಕ ವಿಚಾರಗಳು, ಆಧ್ಯಾತ್ಮಿಕ ವಿಚಾರಗಳು, ಭಕ್ತಿ ಪ್ರಧಾನ ವಿಚಾರಗಳು, ಸೃಷ್ಟಿ ಪ್ರಕ್ರಿಯೆಯ ಹಿಂದಿನ ಭೂತಕಾಲೀನ ವಿಚಾರಗಳು ಇತ್ಯಾದಿ ಯಾವುದನ್ನು ತನ್ನ ಪ್ರಯೋಗಗಳಿಂದ ಸಿದ್ಧಪಡಿಸಿ ತೋರಿಸಲು ಸಾಧ್ಯವಾಗುವುದಿಲ್ಲವೋ ಅದನ್ನು ಬದಿಗಿಡುತ್ತದೆ.


ಈ ಭೌತಶಾಸ್ತ್ರ ಪ್ರಬಂಧವು “ಬ್ರಹ್ಮವಿಧ್ಯಾ ಬ್ರಹ್ಮರಹಸ್ಯಕಾಂಡ” ಎಂಬ ಗ್ರಂಥ ಶೀರ್ಷಿಕೆಯೊಂದಿಗೆ ಹಸ್ತಪ್ರತಿರೂಪದಲ್ಲಿ ಲೇಖಿಸಲ್ಪಟ್ಟಿದೆ. ಮೂಲ ಬ್ರಾಹ್ಮೀ ಭಾಷೆಯಲ್ಲಿರುವ ಈ ಗ್ರಂಥವನ್ನು ಇದುವರೆಗೂ ಸಂಸ್ಕೃತ ಸೇರಿದಂತೆ ಯಾವ ಭಾಷೆಗೂ ಅನುವಾದ ಮಾಡಿ ಲೇಖಿಸಲ್ಪಟ್ಟಿಲ್ಲ. ಮೊಟ್ಟಮೊದಲಿಗೆ ಅದನ್ನು ಚಿಕ್ಕಮಗಳರೂರಿನ ವೇದ-ವಿಜ್ಞಾನ ಮಂದಿರದ ಸಂಸ್ಥಾಪಕರೂ, ಪೂರ್ವೋತ್ತರ ಮೀಮಾಂಸಕಾ ಪ್ರಾಚಾರ್ಯರಾದ ಬ್ರಹ್ಮಶ್ರೀ ಕೆ.ಎಸ್. ನಿತ್ಯಾನಂದ ಸ್ವಾಮೀಜಿಯವರು ಕನ್ನಡಕ್ಕೆ ಭಾಷಾಂತರಿಸಿ ನಮಗೆ ಪಾಠ ಮಾಡುತ್ತಿದ್ದಾರೆ. ಇಲ್ಲಿ ಗ್ರಂಥ ಶೀರ್ಷಿಕೆಯಲ್ಲಿ ಕಾಣಿಸಿದಂತೆ ಬ್ರಹ್ಮವಿಧ್ಯಾ = ಬ್ರಹ್ಮ = ಪ್ರಕೃತಿ, ಮತ್ತದರ ವಿವಿಧ ವಿಚಾರಗಳು. ಬ್ರಹ್ಮ ರಹಸ್ಯಾ ಅಂದರೆ ಪ್ರಾಕೃತಿಕ ರಹಸ್ಯವೆಂದು ಅರ್ಥ. ಸೃಷ್ಟಿ ಮೂಲವಾದ ಮೂಲಚೈತನ್ಯ, ಅದರ ಶಾಖ, ಉಪಶಮನ ಪ್ರಕ್ರಿಯೆ, ಸತತ ಶಾಖ ಕಳೆದುಕೊಂಡು ಬರುತ್ತಿರುವ ಮೂಲಚೈತನ್ಯವಾದ ಅಣುವು ತನ್ನ ಶಾಖದ ಉಳಿವಿಗಾಗಿ ಜೀವಿ, ಗಿಡ, ಮರ, ವಸ್ತುಗಳಾಗಿ ರೂಪು ಪಡೆಯಿತು. ಹಾಗಾಗಿ ಹೇಗೆ ಜೀವ ಸೃಷ್ಟಿಯಾಯಿತು? ಈ ಶಾಖದ ನಿರಂತರತೆಯನ್ನು ಈ ಪ್ರಕೃತಿ ಹೇಗೆ ಕಾಯ್ದುಕೊಂಡು ಬರುತ್ತಿದೆ? ಅದಕ್ಕೆ ಕಿರಣ + ಶಬ್ದ ಎಂಬ ಈ ತರಂಗದ್ವಯಗಳು ಎಷ್ಟು ಸಹಕಾರಿ? ಎಷ್ಟು ಸತ್ಯ? ಆದರೂ ತನ್ನ ರಹಸ್ಯವನ್ನು ಕಾಯ್ದುಕೊಂಡು ಬರುವಲ್ಲಿ ಅವುಗಳ ಪ್ರಯತ್ನ, ಎಲ್ಲವೂ ಈ ಗ್ರಂಥದಲ್ಲಿ ಉಲ್ಲೇಖಿಸಲ್ಪಟ್ಟಿದೆ. ಈ ಶಬ್ದ ಮತ್ತು ಕಿರಣವನ್ನು ಯೋಗ + ಮಾಯಾ ಎಂದು ಗ್ರಂಥವು ಉಲ್ಲೆಖಿಸಿದೆ.


ಯಾವುದೇ ವಸ್ತು ಅಥವಾ ವಿಚಾರವನ್ನು ಹೆಚ್ಚು ಒತ್ತಡದಲ್ಲಿಟ್ಟರೆ ಅದು ಸ್ಫೋಟಿಸಿ ಹೊರಬರುವ ಪ್ರಯತ್ನದಲ್ಲಿರುತ್ತದೆ ಎಂಬುದು ಸಹಜ ಪ್ರಾಕೃತಿಕ ನಿಯಮ. ಎಷ್ಟೇ ಒತ್ತಡಗಳಿದ್ದರೂ ಇದು ನಮ್ಮ ಭಾರತೀಯ ಮಾತೃತ್ವದ ಮಮತೆಯಲ್ಲಿ ಪೆÇೀಷಿಸಲ್ಪಟ್ಟ ಸದೃಢ ಶಾಸ್ತ್ರವೆಂಬುದು ಶತಸ್ಸಿದ್ಧ! ಆದ್ದರಿಂದ ವಿದೇಶೀ ಗೊಚ್ಚೆ ಗುಂದಿಯಲ್ಲಿನ ಎಂಜಲಿಗಾಗಿ ಕೊಡ ಹಿಡಿದು ಹೊಡೆದಾಡುವ ಬದಲು ಈ ವೈಧಿಕ ಭೌತಶಾಸ್ತ್ರವೆಂಬ ಮಹಾಸಾಗರದಲ್ಲಿ ನಿಮ್ಮಯ ಮಿದುಳು ಕೋಶಗಳ ಕುಂಭವನ್ನು ಸ್ವಚ್ಛಗೊಳಿಸಿ ಕೊಂಡೊಯ್ದರೆ ಶುದ್ಧ ಜ್ಞಾನವನ್ನು ತುಂಬಿಸಿಕೊಂಡು ಬಂದು ಸಮಾಜಕ್ಕೂ ಹಂಚಿ ಉನ್ನತಿ ಸಾಧಿಸಬಹುದು. ಕಿವಿಗೆ ಇಂಪಾಗುವಂತೆ ಮಾತನಾಡುವ ಭಾಷಿಗರ ನಾಡೆಂದೇ ಪ್ರಖ್ಯಾತವಾದ ನಮ್ಮ ಕರ್ಣಾಟಕದ ಕನ್ನಡಿಗರಿಂದಲೇ ಇದು ಪ್ರಪಂಚ ವ್ಯಾಪಿಯಾಗಲೀ ಎಂಬ ಸದುದ್ದೇಶದಿಂದ ಈ ವೈಧಿಕ ಭೌತಶಾಸ್ತ್ರದ ಪರಿಚಯಾತ್ಮಕ ಹೊತ್ತಿಗೆಯನ್ನು ಸಿರಿಗನ್ನಡದಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ. ಲೇಖನದಲ್ಲಿ ತಪ್ಪಿರಲು ಅದು ಮೂಲಗ್ರಂಥದ್ದಾಗಲೀ ಅಥವಾ ಋಷಿವರ್ಯರದ್ದಾಗಲೀ ಎಂದು ತಿಳಿಯದೆ, ಈ ಅಗಾಧ ಭೌತಶಾಸ್ತ್ರವನ್ನು ಕಲಿಯುವ ಹಂತದಲ್ಲಿರುವ ಬಾಲವಟುವಿನ ಬಾಲಭಾಷೆ ಎಂದು ವಿಶ್ವೇದೇವತೆಗಳೆಂದು ಕರೆಯಲ್ಪಡುವ ವಿದ್ವತ್ ಪರಿಷತ್ ಮನ್ನಿಸಲಿ ಎಂದು ಪ್ರಾರ್ಥಿಸುತ್ತೇನೆ.
- ಹೇಮಂತ್ ಕುಮಾರ್ ಜಿ.
____________________________________________________________
1.    ವೈಧಿಕ ಭೌತಶಾಸ್ತ್ರದ ಪರಿಚಯ - ಗುಣಾಧ್ಯಾಯ 


ವೇದವು ಸಮಗ್ರತೆಗೆ ಪ್ರಾಧಾನ್ಯತೆ ಕೊಡುತ್ತದೆ. ಬಹಳ ಹಿಂದೆ ಭಾರತೀಯ ಗುರುಕುಲ ಪದ್ಧತಿಯಲ್ಲಿ ಸಮಗ್ರವಾಗಿ ವೈಧಿಕ ಭೌತಶಾಸ್ತ್ರದ ಪಾಠ ಪ್ರವಚನಗಳ ಕ್ರಮವಿತ್ತು. ಬರಬರುತ್ತ ಕುಲವೃತ್ತಿ ಆಧಾರಿತ ಪಾಠಗಳನ್ನೇ ರಾಜ್ಯಾಂಗ ವ್ಯವಸ್ಥೆಯವು ಬಯಸಿದ್ದರಿಂದ ಆಯಾ ವಿಭಾಗದ ವಿಧ್ಯಾರ್ಥಿಗೆ ಆಯಾ ಶಾಸ್ತ್ರದ ಕಲಿಕೆ ಮಾತ್ರ ಎಂದು ಜಾರಿಗೆ ಬಂದಿತು. ಇಷ್ಟು ಕಲಿತರೆ ಸಾಕು! ಎಂಬ ಮನೋಭಾವ ಬೆಳೆಯುತ್ತಾ ಸಮಗ್ರತೆಯು ವಿಭಿನ್ನತೆಯತ್ತ ವಾಲಿ ಕ್ಷೀಣವಾಗುತ್ತಾ ಬಂದಿತು. 


ಆಧುನಿಕ ಕಾಲಘಟ್ಟದಲ್ಲಿ ಹಲವು ವಿದೇಶೀ ಆಕ್ರಮಣಕಾರರಿಂದ ಭಾರತೀಯ ವಿಧ್ಯೆಗಳು ಮೂಲೆಗುಂಪಾದವು. ಬ್ರಿಟೀಷರಂತೂ ಹಣ, ಆಸ್ತಿ, ಅಧಿಕಾರಗಳ ಆಮಿಷ ಒಡ್ಡಿ ಪ್ರಕಟವಿದ್ದ ಎಲ್ಲ ಶಾಸ್ತ್ರ ಗ್ರಂಥಗಳನ್ನು ತಿದ್ದಿಸಿದರು. ಅವುಗಳ ಪ್ರಕಟಣೆಗೆ ಉಚಿತವಾಗಿ ಪೇಪರ್ ಒದಗಣೆ, ಅಸ್ತಿತ್ವದಲ್ಲೇ ಇರದ ವಿದ್ವಾಂಸರ ಹೆಸರಿನಲ್ಲಿ ಪ್ರಕಟಣೆ, ಉಚಿತವಾಗಿ ಹಂಚುವಿಕೆ, ಇತ್ಯಾದಿ ಹಲವು ಯೋಜನೆಗಳನ್ನು ಭಾರತದಲ್ಲಿ ಅನುಷ್ಠಾನಕ್ಕೆ ತಂದರು. ಅಂತಹಾ ಪ್ರಕ್ಷಿಪ್ತ ಗಂಥಗಳನ್ನೇ ಆಧಾರವಾಗಿಟ್ಟು ಈಗಿನ ಸಾಂಪ್ರದಾಯಿಕ ಹಾಗೂ ವೈಜ್ಞಾನಿಕ ವಲಯಗಳು ಪರಸ್ಪರ ಕೆಸರು ಎರಚಿಕೊಳ್ಳುವ ಕಾಯಕದಲ್ಲಿ ತೊಡಗಿವೆ. ಇಂತಹಾ ಅವಘಡಗಳನ್ನು ಪೂರ್ವದಲ್ಲೇ ಚಿಂತಿಸಿದ ಋಷಿ-ಮುನಿಗಳು ಸುಸ್ಪಷ್ಟವಾದ ಎಲ್ಲ ಗ್ರಂಥಗಳ ಮೂಲ ದಾಖಲೆಗಳನ್ನು ಸುರಕ್ಷಿತವಾಗಿರಿಸಿದರು. ಅದು ಆಯಾ ಋಷಿ ಪರಂಪರೆಯಲ್ಲಿ ಕಲಿಯುವವರಿಗೆ ಮಾತ್ರ ಲಭ್ಯವಿರುತ್ತದೆ. ಪ್ರಸಕ್ತ ರಾಜಕೀಯ ವ್ಯವಸ್ಥೆ, ವಿದೇಶೀ ಪರಿಣಾಮವುಳ್ಳ ವೈಜ್ಞಾನಿಕ ವ್ಯವಸ್ಥೆ, ಬಂಡವಾಳ ಶಾಹಿ ಔದ್ಯೋಗಿಕ ವ್ಯವಸ್ಥೆ, ಉದ್ಯೋಗಾಧಾರಿತ ಶಿಕ್ಷಣ ವ್ಯವಸ್ಥೆ, ಇತ್ಯಾದಿ ಕಾರಣಗಳಿಂದ ಮೂಲ ಭಾರತೀಯ ವಿಜ್ಞಾನವು ಬಳಕೆಗೆ ಬರದೆ ತಡೆಯಲ್ಪಟ್ಟಿದೆ.


ಒಟ್ಟು 32 ಅಧ್ಯಾಯಗಳಲ್ಲಿ ಆವೃತವಾದ ವೈಧಿಕ ಭೌತಶಾಸ್ತ್ರದಲ್ಲಿ ಮಾನವಾಧಾರಿತವಾಗಿ ಸ್ಥೂಲ ಪರಿಚಯಾತ್ಮಕ ವಿವರಣೆ ನೀಡಲು ಕನಿಷ್ಠ 32,000 ಪುಟದಷ್ಟು ಪ್ರಬಂಧ ಸಿದ್ಧವಾಗುತ್ತದೆ. ಪ್ರತಿ ಶಾಸ್ತ್ರವನ್ನೂ ಆಳದಲ್ಲಿ ಅಭ್ಯಸಿಸುತ್ತಾ ಹೋದರೆ ಮಾಹಿತಿ ಅನಂತವಾಗುತ್ತದೆ. ಭಾರತೀಯ ತತ್ತ್ವಶಾಸ್ತ್ರ, ಖಗೋಳಶಾಸ್ತ್ರ, ಜೀವಶಾಸ್ತ್ರ, ದೇಹಶಾಸ್ತ್ರ, ಅಣುವಿಧ್ಯೆ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಮನಶ್ಶಾಸ್ತ್ರ ಇತ್ಯಾದಿ ಹಲವು ಶಾಸ್ತ್ರಗಳಿಗೆ ಬೆನ್ನೆಲುಬೇ ಈ ವೈಧಿಕ ಭೌತಶಾಸ್ತ್ರ. ಪ್ರಸಕ್ತ ವೈಜ್ಞಾನಿಕತೆಗಿಂತ ಸಾವಿರ ಪಟ್ಟು ಮುಂದುವರೆದ ವಿಚಾರಗಳು, ನಿಖರತೆ, ಪರೀಕ್ಷೆ, ಪ್ರಮಾಣಗಳಿವೆ. 


ಪ್ರಕೃತಿಯ ನಿರಂತರತೆಗೆ ಕುತೂಹಲವೇ ಕಾರಣ. “ಕುತೂಹಲೈಃ ಸಹಸ್ರಮುಖೈಃ” – ಅದೇನು, ಇದೇನು, ಅದೇಕೆ ಹೀಗೆ, ಇದೇಕೆ ಹಾಗೆ, ಇತ್ಯಾದಿ ಸಾವಿರಾರು ಮುಖದಲ್ಲಿ ಪ್ರಶ್ನೆಗಳು ಉದ್ಭವಿಸುತ್ತವೆ. ಪ್ರಶ್ನೆಗೊಂದು ಉತ್ತರವೂ ಇದ್ದೇ ಇರುತ್ತದೆ. ಪ್ರಶ್ನೆಗೆ ತೃಪ್ತಿ ಎನ್ನುವ ಉತ್ತರ ಸಿಕ್ಕಿದಾಗ ಆ ಪ್ರಶ್ನೆ ಮುಗಿದು ಮತ್ತೊಂದಕ್ಕೆ ನಾಂದಿಯಾಗುತ್ತದೆ. ಹೀಗೆ ಪ್ರಶ್ನೋತ್ತರಗಳ ಕೌತುಕವೇ ಈ ಪ್ರಕೃತಿಯ ಚಿರಂತನ ನಿತ್ಯ ನೂತನತೆಗೆ ಕಾರಣ. ಹಾಗಾಗಿ ಹಲವು ಭಾರತೀಯ ಶಾಸ್ತ್ರ ಗ್ರಂಥಗಳು ಪ್ರಶ್ನೋತ್ತರ ರೂಪದಲ್ಲಿಯೇ ಪ್ರಕಟವಾಗಿವೆ. ಹಾಗಾಗಿ ಪ್ರಶ್ನೆಯಿಂದಲೇ ವಿಚಾರ ಮಂಥನ ಪ್ರಾರಂಭಿಸೋಣ. 

ಪ್ರಶ್ನೆ 1. ಭೌತಶಾಸ್ತ್ರ ಎಂದರೇನು?
ಪಂಚೇಂದ್ರಿಯಗಳಿಂದ ಅನುಭವಕ್ಕೆ ಬರುವಂತಹ ವಿಚಾರಗಳನ್ನು ಗುರುತಿಸಲು ಬರುವಂತಹದ್ದು; ಜೈವಿಕ, ಪ್ರಾಕೃತಿಕ, ಸ್ವಭಾವಜನ್ಯ ವಸ್ತುಗಳನ್ನು ಪರಿಚಯಿಸುವಂತಹದ್ದು ಭೌತಶಾಸ್ತ್ರ. ಇದೊಂದು ಸ್ವಾಭಾವಿಕ, ನಿರಂತರ, ಅಭಿವೃದ್ಧಿಪರ, ರಕ್ಷಣಾತ್ಮಕ ಸೂತ್ರದಂತೆ ಸಂಯೋಜಿಸಲ್ಪಟ್ಟಿದೆ. ಬ್ರಾಹ್ಮಿಯಲ್ಲಿ ಪ್ರತಿ ಶಬ್ದಕ್ಕೂ ನಿರ್ಧಿಷ್ಟ ಶಬ್ದೋತ್ಪತ್ತಿ ನಿಯಮವಿದೆ. ಅದರಲ್ಲಿ ಮನೋವ್ಯಾಪರದಂತೆ ವಿವರಿಸಿದರೆ “ಭ ಔರಸೈಃ ತದಾಯತನಃ ಇತಿ ಭೌತಃ” ಎಂದಾಗುತ್ತದೆ. ಭ - ಸಮಗ್ರ ಪ್ರಕೃತಿ, ಅದರಲ್ಲಿರತಕ್ಕ ಔರಸಗಳು - ಸಂಪೂರ್ಣ ಜವಾಬ್ದಾರಿ ಹೊತ್ತ ರಸಗಳು, ತತ್ ಆಯತನಃ – ಅವುಗಳ ವ್ಯವಹಾರ, ಪರಿಣಾಮ, ಫಲಿತಾಂಶಗಳೊಂದಿಗೆ ಪ್ರಕಟಗೊಳ್ಳುವುದೇ ಭೌತ. 

ಪ್ರಶ್ನೆ 2. ಭೌತಶಾಸ್ತ್ರದಲ್ಲಿ ವಿಭಾಗಗಳೆಷ್ಟು?

ಭೌತಶಾಸ್ತ್ರದಲ್ಲಿ 5 ವಿಭಾಗವಿದೆ.

1.    ಭೌತಶಾಸ್ತ್ರ ನಿಯಮದಂತೆಯೇ ತನ್ನಂತಾನೇ ತಡೆರಹಿತವಾಗಿ ನಡೆಯುವ ಕ್ರಿಯೆಗಳುಳ್ಳ ಅಗೋಚರ ಭಾಗ.

2.    ವರ್ತಮಾನದಲ್ಲಿ ನಡೆಯುತ್ತಿರುವ ಕ್ರಿಯೆಯು ಸ್ವಾಭಾವಿಕವಾದರೂ ಗೋಚರವಾದ್ದರಿಂದ ಅದನ್ನು ಪರಿವರ್ತಿಸಬಹುದು. ಇಂತಹಾ ಪರಿವರ್ತನೀಯ ಭಾಗವೇ ದೃಗ್ಗೋಚರ ಭಾಗ.

3.    ಯಾವ ಗೋಚರಭಾಗದಲ್ಲಿ ಕ್ರಿಯೆಯನ್ನು ಗುರುತಿಸಲು ಸಾಧ್ಯವಿಲ್ಲವೋ ಅದು ಪರಿಣಾಮ-ಗೋಚರ ಭಾಗ.

4.    ಎಲ್ಲಿ ವಸ್ತುವನ್ನು ಗುರುತಿಸಲಾಗದೆ, ಕೇವಲ ಕ್ರಿಯೆಯು ಗುರುತಿಸಲ್ಪಡುತ್ತದೋ ಅದು ಪ್ರವರ್ತನಾ-ಗೋಚರ ಭಾಗ.

5.    ಯಾವುದರಲ್ಲಿ ವಸ್ತು, ಕ್ರಿಯೆ ಮತ್ತು ಪರಿಣಾಮವನ್ನು ರಾಸಾಯನಿಕ ವಿಶ್ಲೇಷಣೆಯಿಂದ ತಿಳಿಯಬಹುದೋಅದು ಗುಣ-ಗೋಚರ ಭಾಗ.


... ಇನ್ನೂ ಧಾತುಗಳಿವೆ !


ಈ 5 ನಿಯಮಗಳ ಬದ್ಧತೆಯಲ್ಲಿ ಭೌತಶಾಸ್ತ್ರದ ಸಮಗ್ರ ವ್ಯವಸ್ಥೆ ರೂಪುಗೊಂಡಿದೆ. ಸಮಗ್ರ ಪೃಥ್ವಿಯು ಇದೇ ಆಧಾರದ ಮೇಲೆ ನಿಂತಿದೆ. ಈ ಐದರಿಂದಲೂ ಅನುಭವಕ್ಕೆ ಬಾರದ್ದು ಭೌತಶಾಸ್ತ್ರವಲ್ಲ. ಇದು ಸತ್ಯ. ಒಂದು ವೇಳೆ ನಾವು ಗುರುತಿಸದೇ ಹೋದರೆ ನಮ್ಮ ಅಜ್ಞಾನವೇ ಹೊರತು ಭೌತಶಾಸ್ತ್ರವಲ್ಲ ಎಂದು ಅಲ್ಲಗಳೆಯುವಂತಿಲ್ಲ. ಅದನ್ನು ಗುರುತಿಸುವ ಶಕ್ತಿ ಗಳಿಸಿಕೊಳ್ಳಬೇಕು. ಮೂಲಧಾತುಗಳು 187. ಮೂಲಧಾತುಗಳಲ್ಲಿ 164 ಗೋಚರ, 23 ಅಗೋಚರ. ಇದುವೇ ಒಟ್ಟು ಅಣುಗಳ ವಿನ್ಯಾಸ-ವಿಭಾಗ ಸಂಖ್ಯೆ. ಅಣುಗಳಿಂದ ಮೂಲಧಾತುಗಳನ್ನು ಗುರುತಿಸಲು ಸಾಧ್ಯ. ಅಲ್ಲದೆ ಇತರೆ 7 ರೀತಿಯ ಪ್ರಯೋಗಗಳಿಂದಲೂ ಮೂಲಧಾತುವನ್ನು ಗುರುತಿಸಬಹುದು.

ಪ್ರಶ್ನೆ 3. ಭೌತಶಾಸ್ತ್ರೀಯ ವಿಭಾಗಗಳಿಗೆ ಒಂದೊಂದು ಉದಾಹರಣೆ ಕೊಡಿ.


ಪಂಚಬ್ರಹ್ಮ
 ಪರಿಸರ, ಜೀವಿಗಳು, ವಸ್ತುಗಳು ಎಂದು ಪಟ್ಟಿ ಮಾಡುತ್ತಾ ಹೋಗಬಹುದು. ಉದಾಹರಣೆ ಕೊಡುವಾಗ ಅದು ತನ್ನ ವಿಭಾಗದಲ್ಲೇ ಗುರುತಿಸಲ್ಪಡಬೇಕು. ಮೊತ್ತೊಂದು ರೀತಿಯಲ್ಲಿ ಗುರುತಿಸಲು ಆಗಬಾರದು. ಶಾಖ-ಅನುಭವ, ಸಕ್ಕರೆ-ರುಚಿ, ಗಾಳಿ-ಸ್ಪರ್ಷ, ವಿದ್ಯುತ್-ಪ್ರವಾಹ ಇತ್ಯಾದಿ ನಮ್ಮಲ್ಲಿ ಆಗತಕ್ಕ ಅನುಭವಗಳು. ವಿಷ ಸೇವಿಸಿದ ವ್ಯಕ್ತಿಯ ಒದ್ದಾಟ, ಪರಸ್ಪರ ಪ್ರೀತಿ, ದ್ವೇಷ, ಅಸೂಯೆ ಇತ್ಯಾದಿಗಳು ಬೇರೆಯವರಲ್ಲಿ ಆಗತಕ್ಕ ಅನುಭವದ ಪರಿಣಾಮ-ಗೋಚರಗಳು. ಸ್ವಲ್ಪ ಮಟ್ಟಿನಲ್ಲಿ ಪಟ್ಟಿ ಮಾಡಿದರೂ ಸಮಗ್ರ, ಸಮರ್ಥ ಉದಾಹರಣೆ ಸಿಗುವುದು  ವೇದದಲ್ಲಿ. ಅದನ್ನೇ ಪಂಚಬ್ರಹ್ಮವೆಂದು, ಶಿವನ ಪಂಚಮುಖಗಳ ಹೆಸರಿನಿಂದ ಉಲ್ಲೇಖಿಸಿದರು. ಅಂದರೆ ಸದ್ಯೋಜಾತ:- ಅಗೋಚರ, ವಾಮದೇವ:- ದೃಗ್ಗೋಚರ, ಅಘೋರ:- ಪರಿಣಾಮ-ಗೋಚರ, ತತ್ಪುರುಷ:- ಪ್ರವರ್ತನಾ-ಗೋಚರ, ಈಶಾನ:- ಗುಣ-ಗೋಚರ.

“ಎಲ್ಲವೂ ಈ ಪಂಚಬ್ರಹ್ಮಾತ್ಮಕ ಸೂತ್ರಕ್ಕೆ ಅನುಗುಣವಾಗಿಯೇ ನಡೆಯುತ್ತದೆ. ಇದಕ್ಕೆ ಹೊರತುಪಡಿಸಿ ಏನಾದರೂ ನಡೆದಿದೆ ಎಂದರೆ ಅದು ಸುಳ್ಳು. ಇದು ಭೌತಶಾಸ್ತ್ರದ ನಿಯಮ.”


ಹಾಗಾಗಿ ಈ ಸೂತ್ರವು ಸ್ಪಷ್ಟವಾಗಿ ಅರ್ಥವಾದರೆ ಯಾವುದೇ ಪ್ರಕ್ರಿಯೆಯ ಸಾಧ್ಯಾಸಾಧ್ಯತೆಗಳನ್ನು ತಿಳಿಯಲು ಸಾಧ್ಯ. ಒಂದು ಸೂಕ್ಷ್ಮದರ್ಶಕದಲ್ಲಿ ನೋಡುವಾಗ ಈ ಬ್ರಹ್ಮಾಂಡದ ಎಲ್ಲ ವಸ್ತು ಸಂಯೋಜನೆ ಕಾಣಬಹುದು. ಆದರೆ ಅದನ್ನೇ ಇನ್ನೊಬ್ಬ ನೋಡುವಾಗ ಕಾಲ ದಾಟಿರುವುದರಿಂದ ಮುಂದಿನ ವಿಚಾರ ನೋಡಬಹುದಷ್ಟೇ, ಹಿಂದಿನದ್ದಲ್ಲ! ಈ ರೀತಿಯಲ್ಲಿ ಹೇಗೆ ಒಂದನ್ನೇ ನೋಡಲು ಸಾಧ್ಯವಿಲ್ಲವೋ ಹಾಗೇ ನಿರಂತರತೆ ಸ್ವಭಾವ ಜನ್ಯವಾದ ಈ ಪ್ರಕೃತಿಯಲ್ಲಿ ಎಲ್ಲವೂ ವಿಭಿನ್ನವಾಗಿಯೇ ಕಾಣುತ್ತದೆ. ಭೌತಶಾಸ್ತ್ರ ರೀತ್ಯಾ ಪರಮಾತ್ಮ ಎಂದರೆ ಎಲ್ಲದರ ಹಿಂದಿರುವ ಚೈತನ್ಯ ಎಂದು ಅಂಗೀಕೃತವಾಗಿ ಅದರದ್ದೇ ಆದ ನಿಯಮದಂತೆ ಒಪ್ಪಲಾಗಿದೆ.

ಈ 5 ಸೂತ್ರಗಳ ಆಧಾರದಲ್ಲಿ ಉಪಶಾಸ್ತ್ರಗಳು ಹುಟ್ಟಿಕೊಳ್ಳುತ್ತವೆ. 40 ಕಲೆಗಳ ರೀತಿಯಲ್ಲಿ 40 ಉಪಶಾಸ್ತ್ರಗಳು ಎಂದು ವಿಭಾಗಿಸಲಾಗಿದೆ.

1.    ಅಂದರೆ ರಸವಸ್ತುಗಳು, ಅನ್ನ, ಆಹಾರ, ಇತ್ಯಾದಿ ಶಾಸ್ತ್ರಗಳು ಬರುತ್ತವೆ. ಅದನ್ನೇ 16 ಸಂಖ್ಯೆಯಲ್ಲಿರುವ ಅಮೃತಕಲೆಗಳು ಎಂದರು.

2.    ಶಾಖ, ವಿದ್ಯುತ್, ಕಾಂತ ಇತ್ಯಾದಿಗಳಿಗೆ ಸಂಬಂಧಪಟ್ಟಂತಹಾ 10 ಸಂಖ್ಯೆಯಲ್ಲಿರುವ ಅಗ್ನಿಕಲೆಗಳು.

3.    ಬೆಳಕು, ಖಗೋಳ, ಚಲನೆ, ಪರಿಣಾಮ, ಅದಕ್ಕೆ ಸಂಬಂಧಪಟ್ಟಂತಹಾ 12 ಸಂಖ್ಯೆಯಲ್ಲಿರುವ ಸೌರಕಲೆಗಳು.

4.    ಇನ್ನು ಉಳಿದ 2 – ಆತ್ಮ (ಚೈತನ್ಯಾಂಶ) + ಪರಮಾತ್ಮ (ಚೈತನ್ಯ).


ಹಾಗಾಗಿ ಚೈತನ್ಯಾಂಶವನ್ನು ಗುರುತಿಸುವ ಸಿದ್ಧಾಂತದಂತೆ ಆತ್ಮವನ್ನೂ, ಮೂಲಚೈತನ್ಯವನ್ನು ಗುರುತಿಸುವ ಸಿದ್ಧಾಂತದಂತೆ ಪರಮಾತ್ಮನನ್ನೂ ಗುರುತಿಸಬಹುದು. ಜೀವಶಾಸ್ತ್ರ ರೀತ್ಯಾ ಹೇಗೆ ಜೀವ ಪ್ರಭೇದ, ದೇಹಲಕ್ಷಣ, ಅಂಗಲಕ್ಷಣ ಗುರುತಿಸಲ್ಪಡುತ್ತದೋ ಹಾಗೆಯೇ ಗುರುತಿಸಬಹುದು. ಈ 40 ಉಪಶಾಸ್ತ್ರಗಳ ಆಧಾರದಲ್ಲಿ ತಂತ್ರಶಾಸ್ತ್ರ ಸಿದ್ಧವಾಗುತ್ತದೆ. ಹಾಗಾಗಿ ತಂತ್ರವು ಸಮಗ್ರ ಭೌತಶಾಸ್ತ್ರ. ಮೇಲ್ನೋಟಕ್ಕೆ ಭೌತಶಾಸ್ತ್ರ ನಿಯಮಕ್ಕೆ ವಿರುದ್ಧ ಎಂಬಂತೆ ಕಂಡುಬಂದರೂ, ತಂತ್ರವು 40 ಉಪಶಾಸ್ತ್ರಗಳ ಆಧಾರದಲ್ಲಿ, ವಿಕಲ್ಪ ಸಂಯೋಜನೆಯೊಂದಿಗೆ ಭೌತಶಾಸ್ತ್ರದಲ್ಲೇ ವ್ಯವಹರಿಸುತ್ತದೆ. ತಂತ್ರವು ಈಗಿನ ಟೆಕ್ನಾಲಜಿಗಿಂತ ಮುಂದುವರೆದುದ್ದಾಗಿದೆ.


ಉದಾ:- ಮಾವಿನಕಾಯಿ ಸಹಜವಾಗಿ ಹಣ್ಣಾಗುತ್ತದೆ, ನಂತರ ಕೊಳೆಯುತ್ತದೆ. ಅದು ಭೌತಶಾಸ್ತ್ರ. ಮಾವಿನಕಾಯಿ ಹಣ್ಣಾಗದಂತೆ, ಹಣ್ಣು ಕೊಳೆಯದಂತೆ ತಡೆಯುವುದು ತಂತ್ರಶಾಸ್ತ್ರ. ಅಂದರೆ ತಂತ್ರವು ತನಗೆ ಬೇಕಾದ ಪರಿಸರವೋ, ಪರಿಕರವೋ, ರಾಸಾಯನಿಕವೋ ಇವುಗಳಿಂದ ಭೌತಶಾಸ್ತ್ರದ 40 ಉಪಶಾಸ್ತ್ರಗಳ ಆಧಾರದಲ್ಲಿ ಉಪಯುಕ್ತ ಭಾಗವನ್ನು ಆರಿಸಿ ಮಾಡಿದ ನಿಯಮ. ಹಾಗಾಗಿ ತಂತ್ರಶಾಸ್ತ್ರವು (ವಿರುದ್ಧವಾಗಿ) ಭೌತಶಾಸ್ತ್ರದ ಆಧಾರದಲ್ಲಿ ಭೌತಿಕ ನಿಯಮವನ್ನೇ ಬಳಸಿ ಬೆಳೆದಿದೆ (ಪವಾಡವೆಂಬಂತೆ ಕಾಣಿಸುತ್ತದೆ). ಮತ್ತೊಂದು ಉದಾಹರಣೆ ಎಂದರೆ ಯುವಕ ಮುದುಕನಾಗದೇ ಇರುವುದು. ತಂತ್ರಶಾಸ್ತ್ರ ರೀತ್ಯಾ (ಭೌತಶಾಸ್ತ್ರದ) ಉಳಿದ ಉಪಶಾಸ್ತ್ರಗಳ ಆಧಾರದಲ್ಲಿ ಆಯುರ್ಮಾನವನ್ನು ಹೆಚ್ಚಿಸುವುದು. ಹೀಗೆ ಮಾಡಿದಾಗ ಅದು ಅಸಹಜವಾಗದೆ, ಸಹಜ ಪ್ರಕೃತಿಯೇ ಆಗುತ್ತದೆ. ಪ್ರಯತ್ನಪೂರ್ವಕವಾಗಿ ಸಾಧಿಸಿ ತೋರಿಸುವುದರಿಂದ ತಂತ್ರಶಾಸ್ತ್ರಕ್ಕೆ ವಿಶೇಷತೆ ಬಂದಿದೆ.

4 comments:

 1. hi,

  Trying for an online translator.

  krushna

  ReplyDelete
 2. Namaste. WONDERFUL. Pray that I get the leisure and energy to translate these Series.

  ReplyDelete
 3. Very good information.....
  keep writing more...
  waiting for the next info...

  Santosh hegde

  ReplyDelete
 4. Excellent job...
  It is reflecting your knowledge and societal concern.

  Nimma e baravanige nirantaravagi saagi gnanadaaha neegisali endu haraisuva,
  Nimma Veda vignana vidyarthi.

  ReplyDelete