Monday, 8 July 2013

ದೇವಾಲಯ - ಧರ್ಮಶಾಸ್ತ್ರ ಮತ್ತು ಆಗಮೀಕ ವಿವರಣೆಮುಖ್ಯವಾಗಿ ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಪ್ರಾಂತ್ಯದಲ್ಲಿರುವ ಎಲ್ಲಾ ದೇವಾಲಯಗಳೂ ಶೇ. ೯೦ ಭಾಗ ಪಾಂಚರಾತ್ರ ಆಗಮ ರೀತ್ಯಾ ಶಾಸ್ತ್ರೀಯವಾಗಿ ನಡೆದು ಬಂದಿರುತ್ತದೆ. ಇದರಲ್ಲಿ ದೇಶೀಯ ಆಚರಣೆಯಲ್ಲಿ ಕೆಲ ಅಲ್ಪ ಸ್ವಲ್ಪ ಭಿನ್ನತೆಯಿದ್ದರೂ ಎಲ್ಲವೂ ಪಾಂಚರಾತ್ರ ಆಗಮ ಬದ್ಧವಾಗಿರುತ್ತದೆ. ಅದರಲ್ಲಿ ದೇವಾಲಯ ನಿರ್ಮಾಣ, ವಿಗ್ರಹ, ಲಿಂಗ ನಿರ್ಮಾಣ, ಆಯ ನಿರ್ಣಯ, ಪ್ರತಿಷ್ಠಾವಿಧಿ, ನಿತ್ಯೋತ್ಸವ, ಪೂಜೆಗಳು, ವಾರ್ಷೀಕ ಉತ್ಸವ ವಿಧಿ-ವಿಧಾನಗಳು, ಭಕ್ತ+ದೇವರ ಸಂಬಂಧವೆಂಬ ಪ್ರಕರಣವು ಹೆಚ್ಚಿನ ತಂತ್ರಶಾಸ್ತ್ರಗಳಲ್ಲಿ ನಮೂದಿಸಿರುವುದಿಲ್ಲ. ಮೂಲತಂತ್ರಶಾಸ್ತ್ರಗಳಲ್ಲಿ ದೇವಾಲಯ ನಿರ್ಮಾಣ, ಪ್ರತಿಷ್ಠಾವಿಧಿ, ಪೂಜಾವಿಧಿ, ಅರ್ಚಕನ ಅರ್ಹತೆ, ಪ್ರತಿಷ್ಠಾಪಕನ ಅರ್ಹತೆ ಹೇಳುತ್ತದೆಯೇ ವಿನಃ ಭಕ್ತಾದಿಗಳ ಪೂಜಾರ್ಹತೆ, ವಿಧಿ ವಿಧಾನಗಳ ಬಗ್ಗೆ ವಿವರಣೆ ಹೆಚ್ಚಾಗಿರುವುದಿಲ್ಲ. ಅರ್ಚಕನ ನಿಯಮಬದ್ಧತೆ, ಅರ್ಹತೆ, ಅರ್ಚನಾ ವಿಧಾನ ವಿಸ್ತಾರವಾಗಿ ಹೇಳಿರುತ್ತದೆ. ತಂತ್ರಿಗಳ ಶಕ್ತತೆ, ಅರ್ಹತೆ, ಅಧಿಕಾರ, ಪ್ರತಿಷ್ಠಾಪನಾ ವಿಧಿ, ಶಿಲಾ ಪರೀಕ್ಷೆ ಇತ್ಯಾದಿಯಾಗಿಯೂ ಹಲವು ಮುಖದಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ವಿಸ್ತೃತ ವೈಜ್ಞಾನಿಕ ಚಿಂತನೆಯಾಗಿರುತ್ತದೆ. ಇನ್ನು ಇತರೆ ಸೇವಾ ನಿಯುಕ್ತರು ಅವರ ಸ್ಥಾನ ಅರ್ಹತೆಗಳನ್ನು ಕೆಲವು ಆಗಮಗಳು ಚರ್ಚಿಸಿವೆ. ಇನ್ನು ಬಿಟ್ಟರೆ ರಾಜಸ್ವ ನಿರೀಕ್ಷಕ, ರಾಜಪ್ರತಿನಿಧಿಯ ವಿಚಾರದಲ್ಲಿ ಕೆಲವೊಂದು ಸ್ಪಷ್ಟತೆ ಇರುತ್ತದೆ. ಆದರೆ ಯಾತ್ರಾರ್ಥಿ ಅಥವಾ ಭಕ್ತನ ಕಟ್ಟುಪಾಡುಗಳ ಬಗ್ಗೆ ಚಿಂತನೆ ಬಹಳ ಕಡಿಮೆ ಇರುತ್ತದೆ. ಪೂಜಾವಿಧಿಗಳಲ್ಲಿ ನಿತ್ಯಪೂಜಾವಿಧಿ ಬಹುಭಿನ್ನವಾಗಿದೆ. ಪ್ರತೀ ದೇವಾಲಯಗಳಲ್ಲೂ ಭಿನ್ನತೆ ಕಂಡು ಬರುತ್ತದೆ. ಅದು ದೇಶೀಯ ಸಂಸ್ಕಾರವೆಂದು ಆಗಮ ಶಾಸ್ತ್ರಗಳು ವಿಶಾಲ ದೃಷ್ಟಿಯಿಂದ ಚರ್ಚಿಸಿವೆ. ಭಕ್ತಾದಿಗಳಿಗೆ ನಿತ್ಯಪೂಜಾದಿಗಳಲ್ಲಿ ಯಾವ ಯಾವ ಮಟ್ಟದಲ್ಲಿ ಭಾಗವಹಿಸಬಹುದೆಂಬ ಸೂಕ್ತಿಗಳಿವೆ. ಅಲ್ಲೆಲ್ಲಾ ತುಂಬಾ ಸರಳ ಮತ್ತು ಸಹಜತೆ ಕಂಡು ಬರುತ್ತದೆ. ಈ ವಿಚಾರವಾಗಿ ಈ ಲೇಖನ ಆಧಾರ ಸಹಿತ ವಿಮರ್ಶಿಸಲಾಗುತ್ತದೆ. 

ಆಗಮಾರ್ಥಂ ತು ದೇವಾನಾಂ ಗಮನಾರ್ಥಂ ತು ರಕ್ಷಸಾಮ್ |
ಕುರ್ವೇ ಘಂಟಾರವಂ ತತ್ರ ದೇವತಾಹ್ವಾನ ಲಾಂಛನಮ್ ||

 ಎಂದು ಘಂಟೆ ಬಾರಿಸುವುದರಿಂದ ಹಿಡಿದು ಕಲಶಪೂಜಾ, ಮಲಾಪಕರ್ಷಣ, ದ್ವಾರಪೂಜಾ, ಪೀಠಪೂಜಾ, ನವಶಕ್ತ್ಯಾದಿ ಪೂಜೆಯವರೆಗೆ ಪಂಚಾಯತನ ಸಿದ್ಧಾಂತವನ್ನು ಅಂಗೀಕರಿಸಿದ ಆಗಮವು, ನಂತರ ತಂತ್ರವು ಕೆಲ ವಿಭಿನ್ನ ಕಾರಿಕೆಗಳನ್ನು ಪ್ರಾದೇಶಿಕವಾಗಿ ಕಡ್ಡಾಯಗೊಳಿಸಿತು. ಅದಕ್ಕೆಲ್ಲಾ ಪ್ರಾದೇಶಿಕ ಕಾರಣಗಳೇ ಮುಖ್ಯ. ಆದರೆ ಆಗಮ, ತಂತ್ರ ಬದ್ಧತೆಯಿದೆ. ಆಗಮ ಮತ್ತು ತಂತ್ರಗಳು ಕಾಲಕಾಲಕ್ಕೆ ಕೆಲ ವಿಶೇಷ ಮಾರ್ಪಾಡುಗಳಾದದ್ದು ಕಂಡು ಬರುತ್ತದೆ. ಅಲ್ಲಿ ಸ್ಥಾಪಿತ ಹಿತಾಸಕ್ತಿಯ ಕೈವಾಡವೂ ಇರುತ್ತದೆ. ಸ್ವಹಿತ, ಸ್ವಲಾಭ ಚಿಂತನೆಯಿಂದ ಆಗಮವನ್ನೇ, ತಂತ್ರವನ್ನೇ ತಿರುಚಿ ಹೇಳಿದ ಉದಾಹರಣೆ ಬೇಕಾದಷ್ಟಿದೆ. ದೇವಸ್ಥಾನದ ನಿತ್ಯ ನೈಮಿತ್ತಿಕಗಳಲ್ಲಿ ಆಗಮ ಬದ್ಧತೆ ಮುಖ್ಯ. ಮತ್ತು ಉತ್ಸವಾದಿಗಳಲ್ಲಿ ಕಾಲ ದೇಶ ಅನುಸರಿಸಿ ಕೆಲವು ಉಲ್ಲಂಘನೀಯ. ಇನ್ನು ಯಾತ್ರಾರ್ಥಿಗಳು, ಭಕ್ತರು+ದೇವರು ಎಂಬ ವಿಚಾರದಲ್ಲಿ ಸುಗಮ, ಸೌಲಭ್ಯ, ಔಚಿತ್ಯವೇ ಪ್ರಧಾನ. ಅದು ಬಿಟ್ಟು ಕೆಲ ಶಾಸ್ತ್ರವಚನವಿಟ್ಟುಕೊಂಡು ಭಕ್ತಾದಿಗಳನ್ನು ಗೋಳಾಡಿಸುವುದು ಸರಿಯಲ್ಲ. ತತ್ಕಾಲದಲ್ಲಿ ದೇವಾಲಯಗಳಲ್ಲಿ ಬರೇ ಆದಾಯ ದೃಷ್ಟಿಯಿಂದ ನಡೆಸುವ ಸೇವೆಯೆಂಬ ಮೌಲ್ಯಾಧಾರಿತ ಆಚರಣೆಗಳಿಗೆ ಯಾವುದೇ ಆಗಮದ ಪುರಸ್ಕಾರವಿಲ್ಲ. 

  ಉದಾ:- ಅಭಿಷೇಕ, ಬೆಳಿಗ್ಗೆ ಮಾತ್ರ. ತ್ರಿಕಾಲ ಪೂಜೆಯಿದ್ದ ದೇವಸ್ಥಾನದಲ್ಲಿ ಅಭಿಷೇಕ ಸೇವೆ ಚೀಟಿ ಯಾರಾದರೂ ಬರೆಯಬಹುದಷ್ಟೆ. ಅರ್ಚನೆ, ಮಧ್ಯಾಹ್ನ ಆವರಣ ಪೂಜಾ ವಿಧಿ ನಂತರ ಒಮ್ಮೆ ಮಾತ್ರ. ಮಂಗಳಾರತಿಯೂ ಒಮ್ಮೆ ಮಾತ್ರ, ಮಧ್ಯಾಹ್ನ. ಸಂಜೆ ದೀಪಾರಾಧನೆ ಇದ್ದಲ್ಲಿ ಮಂಗಳಾರತಿ. ಇಲ್ಲವಾದರೆ ಅಷ್ಟಾವಧಾನಾಂಗ ಬಹಿರ್ಭಾಗದಲ್ಲಿ ಮಂಗಳಾರತಿ. ಹೀಗೆ ಹಲವು ಉದಾಹರಣೆ ಕೊಡಬಹುದು. ಅವಕ್ಕೆಲ್ಲಾ ಶಾಸ್ತ್ರವಚನ ಇರುವುದಿಲ್ಲ. ಭಕ್ತರ ಸೌಲಭ್ಯ ಮತ್ತು ಔಚಿತ್ಯವೆಂಬ ಆಧಾರದಲ್ಲಿ ಅಂಗೀಕೃತವಷ್ಟೆ. ದೇವಾಲಯದಲ್ಲಿ ಅರ್ಚಕ ಹೊರತುಪಡಿಸಿ ಬೇರೆ ಯಾರೂ ದೇವರಿಗೆ ಪೂಜೆ ಮಾಡುವಂತಿಲ್ಲ. ಹಾಗಾಗಿ ಮುಖ್ಯ ಅಂಗವಾದ ಒಳ ಪ್ರಕಾರದಲ್ಲಿ ಅರ್ಚಕರು ಮಾತ್ರ ಸಂಕಲ್ಪ ಮಾಡಬೇಕು. ಇತರೆ ಭಕ್ತಾದಿಗಳು ದೇವರ ಮುಂಭಾಗದಲ್ಲಿಯಾಗಲಿ, ಅಥವಾ ಒಳ ಪ್ರಕಾರದಲ್ಲಿಯಾಗಲಿ, ತೀರ್ಥಮಂಟಪದಲ್ಲಿಯಾಗಲೀ ಸಂಕಲ್ಪ, ಬ್ರಹ್ಮಾರ್ಪಣ ಕ್ರಿಯೆಗಳನ್ನು ಮಾಡುವಂತಿಲ್ಲ. ಇದು ಶಾಸ್ತ್ರಸಮ್ಮತ. ಮಹಾಬಲಿಗಲ್ಲು ಮತ್ತು ಧ್ವಜಸ್ಥಂಭದ ಮುಂದೆ ಸಂಕಲ್ಪ ಅಥವಾ ಬ್ರಹ್ಮಾರ್ಪಣ ಬಿಡಬಹುದು ವಿನಃ ಒಳ ಪ್ರಕಾರದಲ್ಲಿ ಸಂಕಲ್ಪ ಮಾಡಿದ ಭಕ್ತನೇ ಪೂಜೆ ಮಾಡುವುದಿಲ್ಲವಾದ್ದರಿಂದ ಸರ್ವಥಾ ನಿಷೇಧ. ಅಲ್ಲಿ ಅಸತ್ಯವಾಕ್ಯ ಪ್ರಮಾಣವಾಗುತ್ತದೆ. ಒಂದು ದೇವಾಲಯವೆಂದರೆ ಹೀಗಿರುತ್ತದೆ. (ಚಿತ್ರ ನೋಡಿ)ಇದಿಷ್ಟು ಒಳ ಪ್ರಾಕಾರ ಎನ್ನಿಸುತ್ತದೆ. ಇಲ್ಲಿ ಯಾವುದೇ ರೀತಿಯ ಇತರೆ ಸಂಕಲ್ಪಾದಿಗಳಿಗೆ ಅವಕಾಶವಿರುವುದಿಲ್ಲ. ಬಾಹ್ಯ ಭಾಗವೆಂಬ ಪೌಳಿಯಲ್ಲಿ ಅವಕಾಶವಿದ್ದಲ್ಲಿ ಸಂಕಲ್ಪಾದಿಗಳು, ಪಾರಾಯಣಾದಿಗಳನ್ನು ನಡೆಸಬಹುದು. ದೇವರ ಮುಂಭಾಗದಲ್ಲಿ ತಂತ್ರಿ ಮತ್ತು ಅರ್ಚಕ ಹೊರತುಪಡಿಸಿ ಸಂಕಲ್ಪ ನಿಷೇಧ. ಈ ಸಂಬಂಧಿ ಭಕ್ತ+ದೇವರ ಸಂಬಂಧವು ಬೇಡಿಕೆ, ಪ್ರಾರ್ಥನೆಯು ಯಾವುದೇ ಕಾರಣಕ್ಕೂ ಅಸತ್ಯವಚನವಾಗದಂತೆ ನಡೆಸುವುದಕ್ಕಾಗಿಯೇ ಮೌನವಾಗಿ ದೇವಾಲಯ ಒಳಾಂಗಣದಲ್ಲಿ ವರ್ತಿಸಬೇಕೆಂಬ ನಿಯಮ ಕೆಲ ದೇವಾಲಯಗಳಲ್ಲಿ ಈಗಲೂ ಚಾಲ್ತಿಯಲ್ಲಿದೆ. ಅದರ ಉದ್ದೇಶ ಅಸತ್ಯ ಕಾರಣದ ಪ್ರಮಾದವಾಗಬಾರದೆಂದಿರುತ್ತದೆ. ಒಳಾಂಗಣಕ್ಕೆ ಭಕ್ತನು ಕೈಮುಗಿದು ಒಳಪ್ರವೇಶಿಸಬೇಕೇ ವಿನಃ ಸಂಕಲ್ಪ ಬದ್ಧನಾಗಲ್ಲ. ಕಾರಣ, ಭಕ್ತ ಆಗಮ ನಿಯಮಕ್ಕೆ ಬದ್ಧನಲ್ಲ. ಅವನು ತಿಳಿದಿರುವುದೂ ಇಲ್ಲ. ಅಂಜಲಿಹಸ್ತನಾಗಿ ಬೇಡಿಕೆ ಮನಸಾ ಇರಬೇಕು. ಹಾಗಾಗಿ ಪ್ರಾರ್ಥನೆ ಮಾಡಿಕೊಳ್ಳುವುದು, ಮಾಡಿಸುವುದಲ್ಲ. ತೀರ್ಥ ಪ್ರಸಾದಗಳನ್ನು ತೀರ್ಥಮಂಟಪದ ಮುಂದೆ ಕೊಡಬೇಕೇ ವಿನಃ ಗರ್ಭಗುಡಿಯ ಮುಂದಲ್ಲ. ಭಕ್ತರಿಗೆ ದರ್ಶನ, ತೀರ್ಥ, ಪ್ರಸಾದವೆಂಬ ಮೂರು ವಿಧ. ಅದರಲ್ಲಿ ದರ್ಶನಕ್ಕೆ ಮಾತ್ರ ಗರ್ಭಗುಡಿಯ ಮುಂದೆ ಅವಕಾಶವಿರುತ್ತದೆ. ದೇವಾಲಯದ ಪೌಳಿಯಲ್ಲಿ ದಕ್ಷಿಣ+ಆಗ್ನೇಯ ಮಧ್ಯದಲ್ಲಿ ದೇವರ ನೈವೇದ್ಯ ತಯಾರಿಸಬೇಕು. ಆದರೆ ಇತರೆ ಫಲಪುಷ್ಪಾದಿಗಳ ಸಮರ್ಪಣೆಗೆ ಸ್ಥಳ ನಿರ್ಬಂಧ ಶಾಸ್ತ್ರೀಯ ವಚನವಿರುವುದಿಲ್ಲ. ಮುಖ್ಯವಾಗಿ ಅಲ್ಲಿ ಗಮನಿಸಬೇಕಾದ್ದು ಸೌಲಭ್ಯ, ಶುಚಿತ್ವ, ಕ್ರಮಬದ್ಧ, ಶಿಸ್ತುಬದ್ಧ ನಿರ್ವಹಣೆ ಮಾತ್ರ. ಇನ್ನು ವಿದ್ಯುತ್‍ದೀಪ, ಫೋಟೋ ಇತ್ಯಾದಿಗಳು ನಿಷೇಧವೆಂಬ ವಾಕ್ಯಗಳಿಗೆ ಆಧಾರವಿಲ್ಲ. ಆದರೆ ತೀಕ್ಷ್ಣ ಬೆಳಕಿನ ಕಿರಣ ಗರ್ಭಗುಡಿಯ ಪ್ರಶಾಂತತೆಗೆ ಭಂಗತರಬಹುದು. ಒಳಗೆ ಎಣ್ಣೆ ದೀಪವೇ ಉತ್ತರವೆಂಬುದು ಶತಃಸಿದ್ಧ. ಆಗಮದಲ್ಲಿ ಆ ವಾಕ್ಯವಿರುವುದಿಲ್ಲ. ಆದರೆ ವರ್ಷಕ್ಕೊಮ್ಮೆ ಸೂರ್ಯಕಿರಣವನ್ನು ಉತ್ಸವಾಂಗವಾಗಿ ಗರ್ಭಗುಡಿಗೆ ಹರಿಸಬೇಕೆಂಬ ನಿಯಮವಿದೆ. ಹಾಗಾಗಿ ಕನ್ನಡಿ ಹಿಡಿದು ಕಿರಣಪ್ರತಿಫಲನ ಮಾಡುತ್ತಾರೆ. ಈ ಫೋಟೋ ಕಿರಣ ಮತ್ತು ವಿದ್ಯುತ್‍ದೀಪ ಆಗಮಶಾಸ್ತ್ರ ರಚನಾ ಕಾಲದಲ್ಲಿರುವುದಿಲ್ಲ. ಅಶನೀ ಪ್ರವೇಶ ಅಥವಾ ಪಾತ ಪ್ರಾಯಶ್ಚಿತ್ತವೆಂದು ಆಗಮದಲ್ಲಿ ಉದಾಹರಿಸಿದೆ. ಅದು ಸಿಡಿಲು ಬಿದ್ದು ದೇವಾಲಯ ಅಥವಾ ಗೋಪುರ ಭಿನ್ನವಾದಲ್ಲಿ ಪರಿಹಾರರೂಪದಲ್ಲಿ ಸೂಚಿಸಿದೆ. ಅದರೆ ಬರೇ ಮಿಂಚಿನ ಬೆಳಕಿಗೆ ಈ ವಿಚಾರ ಹೇಳಿದ್ದು ಕಂಡುಬರುವುದಿಲ್ಲ. ಮಿಂಚೂ ಕೂಡ ಲೈಟ್ ಫ್ಲಾಷ್ ಆಗುತ್ತದೆ. ಆದರೆ ಮಿಂಚಿನ ಬೆಳಕು ಪ್ರವೇಶದ ಬಗ್ಗೆ ಯಾವುದೇ ತಂತ್ರಶಾಸ್ತ್ರ ಪ್ರಣೀತ ವಚನಗಳಿಲ್ಲ.

    ಈ ಭಕ್ತ + ದೇವರ ಸಂಬಂಧ ಐತಿಹಾಸಿಕವಾಗಿ ಕೆಲವು ನೂರು ವರ್ಷಗಳಿಂದ ಅರ್ಚಕ, ತಂತ್ರಿ ವರ್ಗವು ಭಕ್ತರ ಮೇಲೆ ಅನಾವಶ್ಯಕ ಶಾಸ್ತ್ರವಚನದ ಭಯ ಹುಟ್ಟಿಸಿಕೊಂಡು ಬರುತ್ತಿದೆ. ಆದರೆ ಅದರಲ್ಲಿ ಸತ್ಯ ವಿಚಾರ ಸ್ವಲ್ಪಾಂಶ ಮಾತ್ರ. ಆಗಮ ಶಾಸ್ತ್ರದಲ್ಲಿ ಇವರು ಹೇಳುವ ತಂತ್ರವಚನಗಳೆಲ್ಲಾ ಕಪೋಲಕಲ್ಪಿತ. ಪ್ರಪಂಚದಲ್ಲೇ ಅತಿಶ್ರೇಷ್ಠ ಕ್ಷೇತ್ರ ಕಾಶಿ. ಅಲ್ಲಿ ಎಲ್ಲರ್ ಪೂಜೆ ಮಾಡಬಹುದು. ಅದೇ ರೀತಿ ಪಶ್ಚಿಮ ಕರಾವಳಿ ಗೋಕರ್ಣ ಅಲ್ಲಿಯೂ ಎಲ್ಲರೂ ಪೂಜಾರ್ಹರು. ಆದರೆ ಉಳಿದಂತೆ ಮಡಿ ಮೈಲಿಗೆ. ಹಾಗಿದ್ದರೆ ಅದರರ್ಥವೇನು? ಶುಚಿತ್ವ, ಔಚಿತ್ಯ, ಭದ್ರತೆ ದೃಷ್ಟಿಯಿಂದ ಮಾತ್ರ ಈ ಶಾಸ್ತ್ರವಚನ ರೂಪಿಸಲ್ಪಟ್ಟಿದೆ. ದಕ್ಷಿಣಕನ್ನಡ, ಉಡುಪಿ, ಕಾರವಾರ, ಕಾಸರಗೋಡು ಪ್ರಾಂತ್ಯದ ದೇವಾಲಯಗಳಲ್ಲಿ ಎಲ್ಲಿಯೂ ಒಂದರಂತಿಲ್ಲದ ಒಂದು ವ್ಯವಸ್ಥಿತ ನಡಾವಳಿ ಇಲ್ಲದ ದೇವಾಲಯಗಳೇ ಹೆಚ್ಚು. ಕಾರಣ ಅಲ್ಲಿನ ತಾಂತ್ರಿಕರ ಪೂರಕ ಹೊಂದಾಣಿಕೆಯೇ ಕಾರಣ ವಿನಃ ಬೇರಲ್ಲ. ಆದರೆ ನಂತರ ಬಂದ ತಂತ್ರಿವರ್ಗ ಇದನ್ನು ಅರ್ಥಮಾಡಿಕೊಳ್ಳಲಾಗದೇ ಅದಕ್ಕೆ ಏನೇನೋ ಕಲ್ಪಿತ ಶಾಸ್ತ್ರವಚನ ನೀಡಿದ್ದು ಕಂಡುಬರುತ್ತದೆ. ಅವರು ಉದಾಹರಿಸುವ ಯಾವ ವಿಚಾರವೂ “ಪಂಚರಾತ್ರಾಗಮ” ಪ್ರಣೀತವಲ್ಲ. ಕೇವಲ ಯಾವುದೋ ಒಂದು ವಿಚಾರ ಅವರ ಸ್ವಹಿತಾಸಕ್ತಿಗಾಗಿ ಯಾವುದೋ ಮುಖೋದ್ಗೀತ ವಿಚಾರಗಳನ್ನು ಉದಾಹರಿಸುತ್ತಾರೆಯೇ ವಿನಃ ಅದಕ್ಕೆ ಬದ್ಧತೆಯಿರುವುದಿಲ್ಲ. 

  ದೇವರ ಭಾವಚಿತ್ರ ತೆಗೆಯುವುದೇ ಅಪರಾಧವಾದರೆ, ತಂತ್ರ ಭಿನ್ನವಾಗುವುದಾದರೆ ಮಾರುಕಟ್ಟೆಯಲ್ಲಿ ಭಾವಚಿತ್ರ ಹೇಗೆ ಮಾರಾಟವಾಗುತ್ತದೆ? ಒಮ್ಮೆ ತೆಗೆಯಿರಿ, ಮತ್ತೆ ತೆಗೆಯಬೇಡಿ ಎನ್ನುವುದಕ್ಕೆ ತಂತ್ರಾಗಮ ನಿರ್ಮಾತೃಗಳು ಅರ್ಚಕರೇ? ಫೋಟೋ ಫ್ಲಾಷ್ ಇತ್ಯಾದಿಗಳು ಆಡಳಿತ ವರ್ಗದ ವಿಶ್ಲೇಷಣೆಗೆ ಬಿಟ್ಟ ವಿಚಾರವೇ ವಿನಃ ತಂತ್ರಾಗಮ ಸಂಬಂಧಿಸಿಲ್ಲವೆಂದು ಹೇಳಬಹುದು. ಇಲ್ಲೆಲ್ಲಾ ಆಡಳಿತ ವರ್ಗಕ್ಕೆ ಪೂರ್ಣಾಧಿಕಾರವೇ ವಿನಃ ಆಗಮಕ್ಕೆ ಬದ್ಧತೆಯಿಲ್ಲ. ನಿತ್ಯ ನೈಮಿತ್ತಿಕ ಪೂಜೆ, ವಾರ್ಷೀಕ ಆಚರಣೆ, ಉತ್ಸವಾದಿಗಳು ಮಾತ್ರ ಶುದ್ಧ ತಾಂತ್ರಿಕ, ಆಗಮೋಕ್ತ, ಇತರೆ ಪೂಜೆ, ಸೇವಾದಿಗಳು, ಹೋಮ ಹವನಗಳು ಆಗಮಕ್ಕೆ ಸಂಬಂಧಿಸಿರುವುದಿಲ್ಲ. ಅಲ್ಲಲ್ಲಿ ಪ್ರಾದೇಶಿಕ ನಿಯಮ ಮತ್ತು ಸೂತ್ರೋಕ್ತವಾಗಿರುತ್ತದೆ. ಅವನ್ನು ಆಗಮಕ್ಕೆ ಗಂಟು ಹಾಕುವುದು ಸರಿಯಲ್ಲ. ದೇವರು+ಭಕ್ತರ ಮಧ್ಯೆ ಅರ್ಚಕ ಸೇತುವಾಗಿ ಪರಿಣಮಿಸಬೇಕು. ಅದು ಬಿಟ್ಟು ಭಕ್ತರನ್ನು ನೇರ ದೇವರ ಸಂಪರ್ಕಕ್ಕೆ ಬಿಟ್ಟರೆ ತಂತ್ರ ಭಿನ್ನ ಖಂಡಿತ. ತತ್ಕಾರಣವಾಗಿ ಆರ್ತ ಭಕ್ತರಿಗೆ ತೊಂದರೆಯೇ ವಿನಃ ಶುಭವಿಲ್ಲ. ಹಾಗಾಗಿ ಅರ್ಚಕ ತಂತುವಿನ ಮುಖೇನ ದೇವರ ಸಂಪರ್ಕ. ಹಾಗಾಗಿ “ದೇವರು ಕೊಟ್ಟರೂ ಅರ್ಚಕ ಬಿಡನು” ಎಂಬ ಗಾದೆ ಹುಟ್ಟಿದ್ದು. ಈ ಮೇಲ್ಕಂಡ ವಿಚಾರದಡಿಯಲ್ಲಿ ತಂತ್ರಶಾಸ್ತ್ರದ ರಹಸ್ಯ ಮತ್ತು ಆಗಮದ ರಹಸ್ಯಗಳೆರಡನ್ನೂ ಬಿಚ್ಚಿಡುತ್ತೇನೆ, ಮುಖ್ಯವಾಗಿ ಗಮನಿಸಿ.

 ಮಂತ್ರಶಾಸ್ತ್ರವು ಸ್ವರ, ತಾಡನ, ಲಯ, ಛಂದಸ್ಸು, ಅಕ್ಷರ ಸಂಯೋಜನೆ ಮತ್ತು ದೇವತೆಯೆಂಬ ಒಂದು ವಿಶೇಷ ಕ್ರಮದಲ್ಲಿ ರೂಪುಗೊಂಡಿದೆ. ಅದು ತಾನೇ ತಾನಾಗಿ ಕೆಲಸ ಮಾಡಲಾರದು. ಆದರೆ ಒಂದು ವಿಶಿಷ್ಟ ಶಕ್ತಿಯೇ ಮಂತ್ರಗಳು. 

 ತಂತ್ರಶಾಸ್ತ್ರವು ಈ ಮಂತ್ರಗಳ ಬಳಕೆಯಿಂದ ಸಮಾಜದ ಉನ್ನತಿ ಸಾಧನೆಗಾಗಿ ರೂಪಿಸಿ ಹಲವು ಪ್ರಯೋಗ ಪ್ರಕರಣಗಳಲ್ಲಿ ಈ ದೇವಾಲಯ ನಿರ್ಮಾಣ ಮತ್ತು ದೇವತಾ ಸ್ಥಾಪನೆ ಜೊತೆಯಲ್ಲಿ ನಿರಂತರ ಔಪಾಸನೆಯೆಂಬ ಆಗಮ ಸೂತ್ರಗಳು. ಈ ಆಗಮ ಸೂತ್ರಕ್ಕೆ ಅದರದ್ದೇ ಆದ ಕಟ್ಟುಪಾಡುಗಳಿದ್ದ ಕಾರಣ ಅದು ನೇರವಾಗಿ ಮಂತ್ರ ಪ್ರಯೋಗ ಮಾಡುವುದಿಲ್ಲ. ಬೀಜ, ನ್ಯಾಸ, ಮುದ್ರೆ, ಅಸ್ತ್ರ, ಕೀಲಕವೆಂಬ ಐದು ಬಗೆಯಲ್ಲಿ ತನ್ನ ಸುತ್ತಿನ ಎಲ್ಲಾ ಆಗುಹೋಗುಗಳನ್ನು ಆಗಮ ರೀತ್ಯಾ ನಿಯಂತ್ರಿಸುವ ಶಕ್ತಿ ಹೊಂದಿರುತ್ತದೆ.

  ಅದೇ ಯಂತ್ರಶಾಸ್ತ್ರವು ತಂತ್ರಶಾಸ್ತ್ರದ ಪ್ರಯೋಗ ಪರಿಕರವಷ್ಟೆ. ಯಂತ್ರ ಎಂದರೆ ಒಂದು ಪರಿಕರ ಅಥವಾ ಮೆಟೀರಿಯಲ್ ಎಂಬ ಸತ್ಯ ತಂತ್ರಿಗಳಿಗೆ ಮಾತ್ರ ಅರಿವಿರುವಂತಹ ಪವಿತ್ರ ಸತ್ಯ. ಈ ಯಂತ್ರಗಳ ಅಥವಾ ಪರಿಕರಗಳ ಮುಖೇನ ತಂತ್ರಿಯು ದೇವತಾಶಕ್ತಿಯನ್ನು ನ್ಯಾಸದಿಂದಲೊ, ಸ್ವರ, ತಾಡನಗಳಿಂದಲೊ ಬೀಜವನ್ನು ಮಾತ್ರಾ ಉಚ್ಚರಿಸಿ ನೇರ ಮಂತ್ರೋಚ್ಚಾರಣೆ ಮಾಡದೇನೇ ಕಾರ್ಯ ಸಾಧನೆ ಮಾಡುವುದೇ ಆಗಮಶಾಸ್ತ್ರ. ಇಲ್ಲಿ ಪರಿಪೂರ್ಣತೆ ಇದೆ, ಶುದ್ಧತೆಯಿದೆ, ಬದ್ಧತೆ ಇದೆ. ಆಗಮಗಳೆಲ್ಲಾ ಮಹಾನ್ ಪ್ರಚೋದಕ ಶಕ್ತಿಯವು. ಅಲ್ಲಿ ಬೀಜಾಕ್ಷರಗಳು ವ್ಯವಹರಿಸುವುದು. ಅದನ್ನು ಉಪಾಸನಾಪೂರ್ವಕ ಸಿದ್ಧಿ ಪಡೆದ ತಂತ್ರಿಯು ಮಹಾನ್ ಯೋಗಿ, ಪೂಜಾರ್ಹ. ಇದು ಸತ್ಯ.

  ಇನ್ನು ಕೆಲ ಮುಖ್ಯ ವಿಚಾರಗಳನ್ನು ಉದಾಹರಿಸುತ್ತೇನೆ. ಆಗಮಗಳಲ್ಲಿ ಬರೇ ಕಾರಿಕೆಗಳ ಪ್ರಯೋಗವಿದೆ. ಮಂತ್ರೋಚ್ಚಾರಣೆ ನೇರವಾಗಿ ತಂತ್ರಿಯು ಮಾಡುವುದಿಲ್ಲ. ಅರ್ಚಕನು ತಂತ್ರಿಯಲ್ಲ. ಬೀಜನ್ಯಾಸಾದಿಗಳಿಂದ ತಂತ್ರಿ ರೂಪಿಸಿಕೊಟ್ಟ ದೇವತಾ ತತ್ವವನ್ನು ಅರ್ಚಕನು ಮಂತ್ರಮುಖೇನ ಪುರಶ್ಚರಣೆ ಮಾಡಿ ಲೋಕಕಲ್ಯಾಣಾರ್ಥವಾಗಿ ಭಕ್ತ+ದೇವರ ಸಂಬಂಧ ಬೆಸೆಯುತ್ತದೆ. ಅದಕ್ಕೆ ಆಯತನವೆನ್ನುತ್ತಾರೆ. ಇದರಲ್ಲಿ ದೇವಾಯತನವನ್ನು ಮೂರು ವಿಧದಲ್ಲಿ ವಿಭಾಗಿಸಿದರು.

೧. ವೈಖಾನಸ

೨. ಶೈವ

೩. ಪಾಂಚರಾತ್ರ


ಈ ಮೂರೂ ಕೂಡ ಅಲ್ಲಲ್ಲಿಯ ಪ್ರಾದೇಶಿಕ ಪ್ರಕೃತಿಯನ್ನು ಗುರುತಿಸಿ ಸಮಾಜಮುಖವಾಗಿ ತೊಡಗಿಸಿಕೊಳ್ಳುವಂತೆ ಮಾಡುವ ವಿಧಾನವಾಗಿರುತ್ತದೆ. ಇಲ್ಲಿ ತಂತ್ರಿಯ ಪಾತ್ರ ಮಹತ್ವದ್ದು. ಅರ್ಚಕನು ಬರೇ ಮಧ್ಯವರ್ತಿಯಷ್ಟೆ. ಒಂದು ಆಗಮೋಕ್ತ ವಿಧಿ ವಿಧಾನದಿಂದ ನಡೆಯುವ ದೇವಾಲಯವು ಭಕ್ತ+ದೇವರ ಸಂಬಂಧಕ್ಕಾಗಿಯೇ ಇರುತ್ತದೆ. ಅಲ್ಲಿ ಔಚಿತ್ಯ, ಸೌಲಭ್ಯ, ಸಂಬಂಧಗಳ ಮೂಲದಿಂದ ವಿಮರ್ಶಿಸಿ ಸೇವಾದಿ ಕಾರ್ಯಗಳು ನಿರೂಪಿಸುತ್ತದೆ. ಅಲ್ಲಿ ಭಕ್ತರ ಸೇವಾಕಾರ್ಯಗಳು ದೇವರ ಮುಂದೆಯೇ ನಡೆಸಬೇಕು ಎಂಬ ನಿಯಮವಿಲ್ಲ. ಒಟ್ಟು ಕ್ಷೇತ್ರದಲ್ಲಿ ಎಲ್ಲಿ ನಡೆದರೂ ಅದು ಸೇವಾಕಾರ್ಯವೆನಿಸುತ್ತದೆ. ಇದು ಆಗಮ ವಾಕ್ಯ.

ಇನ್ನು ಸಂಕಲ್ಪವೆಂದರೆ ತಾನು ಒಟ್ಟು ಪ್ರಪಂಚದಲ್ಲಿ ಎಷ್ಟು ಸಣ್ಣ ತುಣುಕು, ತನ್ನ ಅಸ್ತಿತ್ವವೇನು ಎಂಬರಿವು ಮೂಡಿಸುತ್ತಾ ಕಾಲ ವಿವರಣೆಯಿಂದ ತಾನು ಎಷ್ಟ್ ಕಡಿಮೆ ಕಾಲದಲ್ಲಿ ಹುಟ್ಟಿ ಕೊನೆಗಾಣತಕ್ಕ ಜೀವಿ ಎಂಬರಿವು ಮೂಡಿಸಿ ಮನೋಂತರ್ಗತ ಅಹಂಕಾರ ನಾಶ ಮಾಡುವುದು ಗುರಿ. ಅಷ್ಟೇ ವಿನಃ ಸೇವೆಯನ್ನು ತಾನು ಕೊಡುತ್ತಿದ್ದೇನೆ ಎಂದು ಘೋಷಿಸತಕ್ಕದ್ದಲ್ಲ. ಈಗಿನ ಅರ್ಚಕ ಪ್ರಧಾನ ದೇವಾಲಯಗಳಲ್ಲಿ ಹಾಗೆ ಬಿಂಬಿಸಿರುತ್ತಾರೆ ಅಷ್ಟೆ. ಜನರಿಗೆ ಅರ್ಥವಾಗದ ಪ್ರಾಕೃತ ಭಾಷೆಯಲ್ಲಿ ಒಂದು ಶ್ಲೋಕ ಉದಾಹರಿಸಿ ಸಂಸ್ಕೃತದಲ್ಲಿ ವಿವರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ.

ಎಲ್ಲಾ ಆಗಮ ಶಾಸ್ತ್ರಗಳೂ ಪ್ರಾಕೃತ ಭಾಷೆಯಲ್ಲಿಯೇ ಇದ್ದಿತು. ಅದನ್ನು ಭಾಷಾಂತರ ಮಾಡಿದ ಕೆಲ ಮುತ್ಸದ್ದಿಗಳು ಲಾಭ ಬಡುಕ ವ್ಯಾಖ್ಯಾನ ಮಾಡಿರುತ್ತಾರೆ. ಹಾಗಾಗಿ ಆ ವ್ಯಾಖ್ಯಾನ ನಂಬಲರ್ಹವಲ್ಲ. ಹಿಂದೆ ಉದಾಹರಿಸಿದ ಆಗಮಾರ್ಥಂ ತು…|| ನಿಜವಾಗಿ ಪ್ರಾಕೃತ ಭಾಷೆಯ ಒಂದು ಶ್ಲೋಕ. ಶಬ್ದಗಳು ಸಂಸ್ಕೃತಕ್ಕೆ ಹತ್ತಿರವಿದ್ದು ಅದನ್ನು ಸಂಸ್ಕೃತರೀತ್ಯ ಘಂಟಾವಾದನ ಪೂರ್ವಕ ರಕ್ಷಸ್ಸನ್ನು ಓಡಿಸಿ ದೇವತೆಯನ್ನು ಸಾತ್ವಿಕತೆಯನ್ನು ಆಹ್ವಾನಿಸುತ್ತೇನೆ ಎಂಬಂತೆ ಅರ್ಥ ಬಿಂಬಿಸುತ್ತಾರೆ. ಆದರೆ ನೈಜ ಅರ್ಥ ಅದಲ್ಲ.

ಗಣಾನಾಂ ತ್ವಾ ಗಣಪತಿಂ ಹವಾಮಹೇ ಕವಿಂ ಕವೀನಾಮುಪಮಶ್ರವಸ್ತಮಮ್ |
ಜ್ಯೇಷ್ಠರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆನಃ ಶೃಣ್ವನ್ನೂತಿಭಿಃ ಸೀದ ಸಾದನಮ್ ||

ಈ ಮಂತ್ರ ವೇದದಲ್ಲಿ ಬ್ರಹ್ಮಣಸ್ಪತಿ ದೇವತಾಕ ಮಂತ್ರ. ಚಾಲ್ತಿಯಲ್ಲಿ ಗಣಪತಿ ಪೂಜನಾ, ಧ್ಯಾನ ಮಂತ್ರ. ಹಾಗೆ ಅದಕ್ಕೊಂದು ಆಗಮ ವಾಕ್ಯವಿದೆ. ನಾಮ ಮಂತ್ರಗಳು ಮಂತ್ರದಲ್ಲಿ ಕಂಡುಬಂದರೆ ಅದು ಆ ದೇವತಾಕವಾಗಿ ಬಳಸಲರ್ಹವೆಂದು. ಆದರೆ ಮಂತ್ರದ ಉದ್ದೇಶ, ಅರ್ಥ ಬೇರಿರುತ್ತದೆ.

    ನಿಷುಸೀದ ಗಣಪತೇ ಗಣೇಷು ತ್ವ್ಮಾಹುರ್ವಿಪ್ರತಮಂ ಕವೀನಾಮ್ | 
 ನ ಋತೇ ತ್ವತ್ಕ್ರಿಯತೇ ಕಿಂಚನಾರೇ ಮಹಾಮರ್ಕಂ ಮಘವನ್ ಚಿತ್ರಮರ್ಚ ||
 
ಇದೂ ಒಂದು ಗಣಪತಿಯ ಮಂತ್ರ. ಆದರೆ ಇದರ ದೇವತೆ ಇಂದ್ರ. ಇಂದ್ರನ ಉಪಾಸನೆಯ ಮಂತ್ರವದು. ಈ ಮೇಲಿನ ಎಲ್ಲಾ ಮಂತ್ರಗಳನ್ನೂ ಎಲ್ಲಾ ಅರ್ಚಕರೂ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ರೀತಿ ಬಳಸಿರಬಹುದು. ಆದರೆ ಅದು ತತ್ಕಾಲೀನ ಕಾರಣವೇ ವಿನಃ ಆಗಮ ಬದ್ಧವಲ್ಲ. ಒಂದು ವಿಷಯ ಮುಖ್ಯವಾಗಿ ಗಮನಿಸಿ. ಆಗಮ ಮತ್ತು ತಂತ್ರಗಳಲ್ಲಿ ಮಂತ್ರಗಳ ಸಾರರೂಪವಾದ ಬೀಜ ಮಂತ್ರಗಳು ಅಥವಾ ಬೀಜಾಕ್ಷರ ವ್ಯವಹರಿಸುತ್ತದೆಯೇ ವಿನಃ ನೇರ ಮಂತ್ರ ತಂತ್ರಗಳಲ್ಲಿ ಬಳಕೆಯಿಲ್ಲ. ಆಗಮವು ತಂತ್ರಶಾಸ್ತ್ರದ ಒಂದು ಅಂಗವೇ ವಿನಃ ಸ್ವತಂತ್ರಶಾಸ್ತ್ರವಲ್ಲವೆಂದು ನಿರ್ದಿಷ್ಟವಾಗಿಯೂ, ನಿಖರವಾಗಿಯೂ ಹೇಳಬಹುದು.
                                                                                ಇಂತು
                                                                        ಕೆ. ಎಸ್. ನಿತ್ಯಾನಂದ
                                                                  ಪೂರ್ವೋತ್ತರ ಮೀಮಾಂಸಕರು

2 comments:

  1. Thanks for the useful info :)

    ReplyDelete
  2. ಧನ್ಯವಾದಗಳು ತಮಗೆ.

    ReplyDelete