Monday, 8 July 2013

Q&A related to Atma, Karma, Janma in Ayurveda..


ಆಯುರ್ವೇದವು ಉಪವೇದವಾದ್ದರಿಂದ ಅದರ ವಿಚಾರಗಳು ಸರ್ವಗ್ರಾಹ್ಯವಲ್ಲವೇ?
ಪುರಾತನ ಆಯುರ್ವೇದ ಶ್ಲೋಕಗಳಲ್ಲಿ ಸ್ವಲ್ಪವೂ ವೇದ ವಿರುದ್ಧವಾದ ವಿಚಾರಗಳನ್ನು ಹೇಳಿಲ್ಲ. ಕಾಲಘಟ್ಟದಲ್ಲಿ ಸೇರಿದ ಪ್ರಕ್ಷಿಪ್ತಗಳಿಂದ ಕೆಲ ಆಭಾಸ ಕಂಡುಬರುತ್ತದೆ. ಅದೇ ಚರಕ ಸಂಹಿತೆಯಲ್ಲಿ ಅಷ್ಟಾಗಿ ಪ್ರಕ್ಷೇಪಿತ ಭಾಗ ಸಿಗುವುದಿಲ್ಲ ಏಕೆಂದರೆ ಛಂದಸ್ಸಿನಲ್ಲಿ ಹೇಳಲಿಕ್ಕೆ ಉಂಟಾದ ಕಷ್ಟವು ಅದನ್ನು ಎಷ್ಟೋ ರಕ್ಷಸಿದೆ. ಚಿಕಿತ್ಸಾ ಭಾಗದಲ್ಲಿ ಮಾತ್ರ ದೃಢಬಲ ಎಂಬುವನು ಕೆಲ ವಿಚಾರಗಳನ್ನು ಸೇರಿಸಿದ್ದಾನೆ. ಶರೀರ ಸ್ಥಾನದಲ್ಲಿ ವೈದಿಕ ಚಿಂತನೆಯೇ ಕಂಡುಬರುತ್ತದೆ. ಹಾಗಾಗಿ ಆಯುರ್ವೇದ ಮೂಲ ಗ್ರಂಥಗಳು ವೇದ ಸ್ಪಷ್ಟತೆ ಹಾಗೂ ಭೌತಶಾಸ್ತ್ರ ಬದ್ಧತೆಯಲ್ಲಿವೆ

ಆತ್ಮದೇಹವಲ್ಲ ಅದೊಂದು ಅವ್ಯಕ್ತ ತತ್ವ ಅದು ನಾನು ಎಂಬುದನ್ನು ಶಾಸ್ತ್ರಕಾರರು  ಮಂಡಿಸಿದಾಗ ಮುಂದೆ ನಾಸ್ತಿಕರ ಅಭಿಪ್ರಾಯವನ್ನು ಹೇಳುತ್ತಾರೆ.

ನಾಸ್ತಿಕರ ಪ್ರಕಾರ ಆತ್ಮ ಎಂಬ ಪ್ರತ್ಯೇಕ ತತ್ವವೇ ಇಲ್ಲ, ಎಲ್ಲವೂ ದೇಹವೇ ಎನ್ನುತ್ತಾರೆ. ದೇಹಕ್ಕೆ ಸಹಜವಾದ ರಾಗಾದಿಗಳಿವೆ, ಇಂದ್ರಿಯಗಳಿಗೆ ಅದರದ್ದಾದ ಗುಣಗಳಿವೆ, ಅವು ವ್ಯವಹರಿಸುತ್ತವೆ ಹೊರತು ಆತ್ಮ ಎಂಬುವುದಕ್ಕೆ ಅದರಿಂದ ಯಾವ ಪೂರೈಕೆಯೂ ಇಲ್ಲ, ತೃಪ್ತಿಯೂ ಇಲ್ಲ. ಮತ್ತೊಬ್ಬ ಕರ್ತಾ + ಭೋಕ್ತೃ ಇಲ್ಲ, ದೇಹವೇ ತಿನ್ನುವುದು ಅದೇ ನಾನು ಎನ್ನುತ್ತಾರೆ. ಇಂದ್ರಿಯಗಳ ವ್ಯವಹಾರವೂ ಮನಸ್ಸಿನಿಂದ ಆಗುತ್ತದೆ ಎಂದು ಹೇಳುತ್ತಾರೆ. ಮನಸ್ಸಿಗೆ ದೇವತ್ವ ನೀಡುವುದಿಲ್ಲ. ನಾಸ್ತಿಕರು ಇಲ್ಲಿ ಖಂಡಿಸುವುದೇನೆಂದರೆ ರೋಗಕ್ಕೆ ಕಾರಣವಾಗುವುದು ಪೂರ್ವ ಜನ್ಮ ಕೃತ ಪಾಪ ಎನ್ನುವಂತಹ ವಾಕ್ಯವನ್ನು. ನಮ್ಮ ಆಹಾರ, ವಿಹಾರ, ಆಚಾರಗಳೇ ಕಾರಣ ಎಂದು ಹೇಳುತ್ತಾರೆ. ಅದಕ್ಕಾಗಿ ಸಾಲ ಮಾಡಿಯಾದರೂ ತುಪ್ಪ ತಿನ್ನಿ, ಶಕ್ತಿವಂತರಾಗಿ, ದೃಢಕಾಯರಾಗಿ, ದೀರ್ಘಾಯುಷಿಗಳಾಗಿ ಬಾಳಿರಿ ಎನ್ನುತ್ತಾರೆ. ಇದು ಚಾರ್ವಾಕರ ಆಯುರ್ವೇದ ನಿಂದೆ ಮಾಡುವ ವಾಕ್ಯಗಳಾಗಿವೆ. ಅದೇ ವೇದ ನಿಂದೆ ಮಾಡುವಾಗ ಬೇರೆಯೇ ವಾಕ್ಯಗಳನ್ನು ಹೇಳಿದ್ದಾರೆ. 

ಚಾರ್ವಾಕರು ಆತ್ಮ ತತ್ವವಿಲ್ಲ, ೭ * ೩ = ೨೧ ಮಾತ್ರ ಎನ್ನುತ್ತಾರೆ, ೨೪ ಒಪ್ಪುವುದೇ ಇಲ್ಲ. ನಾಸ್ತಿಕರಲ್ಲೂ ವೇದದ್ರಷ್ಟಾರರಿದ್ದಾರೆ. ವೇದದಲ್ಲೇ ದೃಢಚ್ಯುತರು ಬರುತ್ತಾರೆ. ಅವರು ದೇಹ ಲಕ್ಷಣದಲ್ಲಿ ೨೧ ವಿಭಾಗ ಮಾಡಿ ಅದೇ ಎಲ್ಲದಕ್ಕೂ ಕಾರಣ ಎಂದು ಮಂಡಿಸುತ್ತಾರೆ. ಸಪ್ತಧಾತುಗಳೇ ತ್ರಿವಿಧ ದೋಷಗಳಿಗೆ ಕಾರಣ. ತ್ರಿಗುಣಾತ್ಮಕವಾಗಿ ವ್ಯವಹರಿಸುವುದು ಸಪ್ತಧಾತುಗಳೇ! ಅದು ೭*೩=೨೧ ಎಂದು ಸಾಭೀತುಪಡಿಸಿ ತೋರಿಸುತ್ತಾರೆ. ಅದು ದೃಢಚ್ಯತರ ವಾದವೇ ಹೊರತು ಸರ್ವಮಾನ್ಯವಲ್ಲ. ಕಡೆಗೆ ವೇದದಲ್ಲಿ ಅವರ ಈ ವಿಚಾರವು ಮಂತ್ರವಾಗಿಯೇ ಇದೆ. ಆಸ್ತಿಕನೇ ಮಂತ್ರ ದ್ರಷ್ಟಾರನಾಗಬೇಕೆಂಬ ನಿಯಮವಿಲ್ಲ. ಯಾವುದು ನಿಮಗೆ ವಿಚಾರವನ್ನು ಹೇಳಬಲ್ಲದೋ, ಮನನಾತ್ ತ್ರಾಯತೇ ಇತಿ ಮಂತ್ರ. ಉತ್ತಮ ವಿಚಾರವನ್ನು ಹೇಳುವುದೆಲ್ಲ ಮಂತ್ರವೇ! ದೃಢಚ್ಯತರ ವಿಚಾರವು ಸಮರ್ಥವಾಗಿಯೇ ಇದೆ. ಕಟ್ಟೆ ಪಂಚಾಯತಿಕೆಯಾದರೆ ಮಂತ್ರವಾಗುವುದಿಲ್ಲ. ಒಂದು ವಿಚಾರವನ್ನು ಸಮರ್ಥವಾಗಿ ಯಾವುದು ದೃಢಪಡಿಸಿ ತೋರಿಸುತ್ತದೆ ಅದು ಮಂತ್ರ ಎನ್ನಿಸಿಕೊಳ್ಳುತ್ತದೆ. ದೃಢಚ್ಯುತನ ಈ ವಾದವನ್ನು ಹೆಕ್ಕಿಯೇ ಬೌದ್ಧ ಸಿದ್ಧಾಂತ ರೂಪುಗೊಂಡಿತು. ಹಾಗಾಗಿ ಮನಸ್ಸಿಗೆ ಹುಟ್ಟತಕ್ಕಂತಹಾ ಆಸೆ ಎಂಬ ವಿಕಾರಗಳು ಏನಿವೆಯೋ ಆ ಆಸೆಯೇ ಸಮಸ್ಯೆಗೆ ಕಾರಣ ಎಂದದ್ದು ಗೌತಮ ಬುದ್ಧ. ಹಾಗಾಗಿ ಆಸೆ ಬಿಟ್ಟು ಬಿಡಿ ಎಂದರು.

ಆತ್ಮ ತತ್ವಕ್ಕೆ ಆಯುರ್ವೇದದಲ್ಲಿ ಚಿಕಿತ್ಸೆ ಹೇಳಿದೆಯೇ?
ಶಾರ್ಙ್ಘ್ಯಧರ,  ಚರಕಾದಿಗಳು ಕೆಲವೊಂದಿಷ್ಟು ಆತ್ಮ ತತ್ವದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಮಂತ್ರ ಚಿಕಿತ್ಸೆಗಳ ಬಗ್ಗೆ ವಿವರಿಸಿದ್ದಾರೆ. ಜನ್ಮಾಂತರ ಋಣ, ಕರ್ಮ, ಪಾಪ, ಪುಣ್ಯಗಳನ್ನು ಒಪ್ಪಿದ್ದಾರೆ. ಆದರೆ ನಾಸ್ತಿಕರು ಅವೆಲ್ಲವನ್ನೂ ಒಪ್ಪಲಿಲ್ಲ. ಅವರು ದೇಹವೇ ಪ್ರಧಾನ ಎಂದರು. ಚರಕನು ಚಿಕಿತ್ಸಾ ಪುರುಷ ಎಂಬ ಶಬ್ದದಿಂದ ೨೪ ತತ್ವಗಳನ್ನು ಸಂಬೋಧಿಸಿದ್ದರೂ ಅಲ್ಲಿ ಚಿಕಿತ್ಸೆ ಆಗುವುದು ೬ ತತ್ವಗಳಿಗೆ ಮಾತ್ರ. ಸುಶ್ರುತ ಒಂದು ಶ್ಲೋಕ ಹೇಳುತ್ತಾರೆ-
ಭೂತೇಭ್ಯೋ ಹಿ ಪರಂ ಅಸ್ಮಾತ್ ನಾಸ್ತಿ ಚಿಂತಾ ಚಿಕಿತ್ಸ್ಯತೇ ||

ಕೇವಲ ಪಂಚಮಹಾಭೂತಗಳಲ್ಲಿ ವ್ಯತ್ಯಾಸ ಮಾಡುವುದರಿಂದ ಚಿಕಿತ್ಸೆ ಮಾಡಬಹುದು, ಉಳಿದವಕ್ಕಲ್ಲ. ಉಳಿದವಕ್ಕೆ ತಂತ್ರ, ಯೋಗ, ಮಂತ್ರ ಚಿಕಿತ್ಸೆಗಳನ್ನು ಉದಾಹರಿಸುತ್ತಾರೆ. 

ಪ್ರಾಣ ಹೋದಾಗ ಆತ್ಮವು ಮನಸ್ಸು, ಬುದ್ಧಿ, ಚಿತ್ತಗಳನ್ನು ಒಟ್ಟಿಗೆ ಕಟ್ಟಿಕೊಂಡೇ ಹೋಗುತ್ತದೆಯೇ?
        ಹೌದು, ಎಲ್ಲವೂ ಒಟ್ಟಿಗೇ ಹೋಗುತ್ತವೆ.

ಆಯಾ ಶಾಸ್ತ್ರಗಳಲ್ಲಿ ಆತ್ಮವನ್ನು ಬೇರೆಯಾಗಿಯೇ ವಿಶ್ಲೇಷಿಸುತ್ತಾರಲ್ಲ ಯಾವುದು ಸತ್ಯ?
ಭೌತಶಾಸ್ತ್ರದಲ್ಲಿ ಅಯಂ = ಆತ್ಮಾ = ಖನಿಜ ಇತ್ಯುಕೈಃ ಖ ನಿಯಮಿತ ಜನಿತ್ರೀ ಎಂದೂ ಹೇಳಲಾಗಿದೆ. ಅಲ್ಲಿ ಅಯಂ ಎಂದರೆ ಯಾವುದೋ ಒಂದಿಷ್ಟು ಅಣುಗಳ ಸಂಯೋಜನೆಯಿಂದ ಬೇರೆ ಬೇರೆ ಲೋಹಗಳು ಗುರುತಿಸಲ್ಪಡುತ್ತದೆ. ಅಲ್ಲಿ ಸಂಯೋಜನೆ ಆಗುವಂತಹ ಒಂದು ಗುಣವೇ ಆತ್ಮ. ಪ್ರತಿಯೊಂದು ಅಣುವಿನಲ್ಲೂ ಬೀಜ ರೂಪಿನಲ್ಲಿ ಚೈತನ್ಯವಿರುತ್ತದೆ ಅವುಗಳನ್ನು ಸಂಯೋಜಿಸತಕ್ಕಂತಹಾ ಆತ್ಮವೇನಿದೆಯೋ ಅದು ಅಯಂ ಎಂದರು. ಇಂತಿಂತಹಾ ಅಣು ಸಂಯೋಜನೆ ಇದ್ದರೆ ಚಿನ್ನ, ಬೆಳ್ಳಿ, ಇತ್ಯಾದಿ ಆಗುತ್ತದೆ ಎನ್ನುವುದು. ಸಪ್ತಧಾತುಗಳನ್ನು ಸಂಯೋಜಿಸಿ ದೇಹ ಸೃಷ್ಟಿಯಾಗುತ್ತದೆ ಎಂದು ಭೌತಶಾಸ್ತ್ರವು ಹೇಳುತ್ತದೆ. ಆ ೭ ಧಾತುಗಳ ತ್ರಿಗುಣಾತ್ಮಕ ವ್ಯವಹಾರವನ್ನು ಆಧರಿಸಿ (೭*೩) ನಾಸ್ತಿಕರು ದೇಹವು ೨೧ರ ಸಂಯೋಜನೆ ಎಂದರು. ಅಲ್ಲಿ ಆತ್ಮ ಇತ್ಯಾದಿ ಅವ್ಯಕ್ತ ಇಲ್ಲ ಎಂದರು. ಹಾಗಾಗಿ ಹೊಟ್ಟೆ ತುಂಬ ತಿನ್ನಿ ಸಾಯುವಲ್ಲಿಯವರೆಗೆ ಗಟ್ಟಿಯಾಗಿ ಬದುಕಿ ಎಂದರು. ಆಯುರ್ವೇದ ೨೪ ತತ್ವಗಳ ಸಂಯೋಗದಿಂದ ಪುರುಷನ ಅಭಿವ್ಯಕ್ತಿ ಆಗುತ್ತದೆ ಎಂದು ಆಯುರ್ವೇದ ಹೇಳಿತು.

ಜನ್ಮಾಂತರ ಋಣ ಕರ್ಮಗಳನ್ನು ಹೇಗೆ ಅರ್ಥ ಮಾಡಿಕೊಳ್ಳುವುದು?
ಜನ್ಮಾಂತರ ಋಣ ಕರ್ಮಗಳ ಬಗೆಗಿನ ವೈಧಿಕ ಭೌತಶಾಸ್ತ್ರೀಯ ವಿಶ್ಲೇಷಣೆಯೇ ಬೇರೆ, ಇತರೆ ದರ್ಶನ ಶಾಸ್ತ್ರಜ್ಞರ ಅಭಿಪ್ರಾಯವೇ ಬೇರೆ. ಭೌತಶಾಸ್ತ್ರ ರೀತಿಯಾದರೆ ಒಂದು ಕಬ್ಬಿಣ ಎಂದಾಗ ಅದು ಮೂಲ. ನಂತರ ಅದು ಕೊಡಲಿ ಆಗುತ್ತದೆ. ತನ್ಮುಖೇನ ನಿರ್ವಹಿಸಿದ ಕರ್ಮಕ್ಕೆ ಆಧರಿಸಿ ಋಣ ಕರ್ಮಗಳು. ಅದೇ ಕಬ್ಬಿಣ ಗಟ್ಟಿಯು ಮತ್ತೊಂದು ಕತ್ತಿ ಆಗುತ್ತದೆ. ಆಗ ಅದರ ಋಣ ಕರ್ಮಗಳು ಬೇರೆ. 

ಅದೇ ಅಧ್ಯಾತ್ಮ ರೀತ್ಯ ಒಂದು ದೇಹದಲ್ಲಿ ವ್ಯವಹರಿಸಿದ ಹಿಂದಿನ, ಇಂದಿನ ಮತ್ತು ಮುಂದಿನ ಋಣ ಕರ್ಮಗಳು ಎಂದು ಬರುತ್ತದೆ. ಕತ್ತಿಯಾಗಲೀ, ಕೊಡಲಿಯಾಗಲೀ ಕಬ್ಬಿಣದ ಗುಣವನ್ನೇ ಹೊಂದಿರುತ್ತದೆ. ಅದಕ್ಕೆ ಮತ್ತೆ ನೀವು ಕೊಡತಕ್ಕಂತಹ ಹದ, ಶಾಖ, ಇತ್ಯಾದಿಗಳು ಏನಿವೆಯೋ – ಕೊಡಲಿಯ ಹರಿತವು ಕರ್ಮ ಸಂಯೋಜನೆ ಎನಿಸಿಕೊಳ್ಳುತ್ತವೆ. ಆ ಸಂಯೋಜಿತ ಕರ್ಮಕ್ಕೆ ಆಧರಿಸಿ ಕೊಡಲಿಯಾಗಿ ವ್ಯವಹರಿಸುತ್ತದೆ. ತತ್ಕಾರಣವಾದ ಋಣ ಅದರಲ್ಲಿ ಆರೋಪಿಸಲ್ಪಟ್ಟಿರುತ್ತದೆ. ಹಾಗಾಗಿಯೇ ಆ ಕೊಡಲಿಯು ತುಕ್ಕು ತಿಂದು ಹಾಳಾಗಿ ಹೋಗುತ್ತದೆ. 

ಇದು ಭೌತಶಾಸ್ತ್ರೀಯ ವಿಶ್ಲೇಷಣೆ. ಅಧ್ಯಾತ್ಮ ರೀತ್ಯಾ ವಿಶ್ಲೇಷಣೆ ಬೇರೆಯೇ ಇದೆ. ಭೌತಶಾಸ್ತ್ರವು ಅದಕ್ಕೆ ಸವಕಳಿ ಎಂದು ಹೇಳಿದರೆ ಅಧ್ಯಾತ್ಮವು ಅನುಭವಿಸುವುದು (ವಿಪಾಕ/ತಿನ್ನುವುದು) ಎಂದು ಹೇಳುತ್ತದೆ. ಆ ಸವಕಳಿಯು ಎಲ್ಲವಕ್ಕೂ ಇದೆ ಎಂದು ನಿರ್ಭಿಡೆಯಿಂದ ಹೇಳುತ್ತದೆ. ಭೌತಶಾಸ್ತ್ರವು ಸಂಪೂರ್ಣ ಸತ್ಯವನ್ನೇ ಪ್ರತಿಪಾದಿಸುತ್ತದೆ. ಅದನ್ನು ಆಧರಿಸಿ ಅಧ್ಯಾತ್ಮಶಾಸ್ತ್ರವು ಜನರಿಗೆ ಭಾವನಾತ್ಮಕವಾಗಿ ಬದುಕುವ ದಾರಿ ತೋರಿಸಿದೆ. ಇಲ್ಲದಿದ್ದರೆ ಮನುಷ್ಯ ಬದುಕುವುದಿಲ್ಲ. ಎಲ್ಲ ಸತ್ಯ ಹೇಳಿದರೆ ಮನುಷ್ಯನಿಗೆ ಬದುಕುವ ಇಚ್ಛೆ ಇರುತ್ತದೆಯೇ? ಅದಕ್ಕಾಗಿ ಭಾವನಾತ್ಮಕವಾಗಿ ಬದುಕಲು ಬೇಕಾಗಿ ದರ್ಶನ ಶಾಸ್ತ್ರವು ಹುಟಿಕೊಂಡಿತು. ನೀವು ಯಾವುದೋ ಒಂದು ದಾರಿಯಲ್ಲಿ ಏನೋ ಒಂದು ಸಾಧಿಸಬಹುದು ಎಂಬ ಮನೋಸ್ಥೈರ್ಯ ನೀಡುತ್ತದೆ. ಅವೆರಡನ್ನೂ ಮೀರಿ ತಂತ್ರಶಾಸ್ತ್ರವು ಅಸಾಧ್ಯವನ್ನೂ ಸಾಧಿಸಿ ತೋರಿಸು ಹೊರಟಿತು.

ಶರೀರಾಂತರ್ಗತ ಪುರುಷನಿಗೆ ಕರ್ಮದ ಸಂಸರ್ಗ, ಸಂಬಂಧ, ಸಂಯೋಗ ಆಗಲೇಬೇಕೆನ್ನುವುದು ಏಕೆ?
ಆಗಲೇಬೇಕೆಂದಲ್ಲ. ಅದು ಪ್ರಕೃತಿ ನಿಯಮ. ನೀವು ಅದನ್ನು ಜಯಿಸಿದರೆ ಆಗಬೇಕಾದ ಅಗತ್ಯವಿಲ್ಲ. ಎಲ್ಲದರಲ್ಲಿದ್ದೂ ಎಲ್ಲವುಗಳಿಂದಲೂ ಹೊರಗಿದ್ದಂತೆ ಇರಲು ಸಾಧ್ಯ. ಅದನ್ನೇ ದಾಸರು ತಾವರೆ ಎಲೆಯ ಮೇಲಿನ ನೀರಿನಂತಿರಬೇಕು ಎಂದರು. ಆದರೂ ಅಂಟಿಕೊಂಡೇ ಇರುವುದನ್ನು ಬಯಸುತ್ತೇವೆ, ಅದೇ ಪ್ರಕೃತಿಯ ಅನಿವಾರ್ಯತೆ. ಕೆಲವು ವ್ಯಾಪಾರಿಗಳು ವಯಸ್ಸಾಗುತ್ತಲೇ ವ್ಯಾಪಾರವೆಂದರೆ ಮೋಸ ಎಂದು ಉದ್ಗರಿಸುತ್ತಾರೆ. ಆದರೆ ವ್ಯಾಪಾರವು ಸಮಾಜದ ಅನಿವಾರ್ಯತೆ. ಎಲ್ಲರೂ ವ್ಯಾಪಾರ ಬೇಡವೆಂದು ಬಿಟ್ಟರೆ ಪ್ರಪಂಚ ಉಳಿಯುತ್ತದೆಯೇ? ಹಾಗಾಗಿ ಅದೂ ಒಂದು ವ್ಯವಸ್ಥೆಯ ಅಂಗ. ಮೋಸ ಅನಿವಾರ್ಯವಲ್ಲ. ಮೋಸ ಆಗಬಹುದೇ ಹೊರತು ಉದ್ದೇಶಪೂರ್ವಕವಾಗಿ ಮಾಡಬಾರದು.

ಕರ್ಮಕ್ಕೆ ಕರ್ತೃತ್ವ ಇಲ್ಲದೇಇರುವುದರಿಂದ ತನ್ನಯ ಕರ್ಮಕ್ಕೆ ತಾನೇ ಭೋಕ್ತೃ ಆಗಬೇಕು ಅನ್ನುವುದಕ್ಕೋಸ್ಕರ ಇರುವುದೋ? ಅಥವಾ ಇನ್ನೇನಾದರೂ ಕಾರಣ ಇರುವುದೋ?
 ಕಾರಣ ಇದೆ. ಭೋಕ್ತೃ ಅವನೇ ಆಗಬೇಕೆಂದೇನಿಲ್ಲ. ಹಾಗಾಗಿ ಅದರಿಂದ ಹುಟ್ಟಿದ ಒಂದು ಸಿದ್ಧಾಂತವೇ ಎಲ್ಲ ಕರ್ಮವನ್ನು ಬ್ರಹ್ಮನಿಗೆ ಅರ್ಪಣೆ ಮಾಡುವುದು ಎಂದು. ತನ್ನಯ ಕರ್ಮದ ಭೋಕ್ತೃ ತಾನೇ ಆಗಬೇಕೆಂದಿಲ್ಲ. ಕರ್ಮವು ನಿರ್ದಿಷ್ಟ, ಮಾಡಲೇಬೇಕು. ಆದರೆ ಫಲ ಅಪೇಕ್ಷೆ ಬೇಡ ಎಂದು ಭಗವದ್ಗೀತೆಯೂ ಹೇಳಿದೆ. ಭೋಕ್ತೃ ಅವನೇ ಎಂಬ ನಿರ್ಣಯವಿಲ್ಲ. ಒಂದು ಕರ್ಮ ಮಾಡಿದ ಮೇಲೆ ಭೋಕ್ತೃ ಬೇರೆ ಯಾರೋ ಆಗಬಹುದು, ಆಗಬಾರದೆಂದು ನಿಯಮವಿಲ್ಲ. ಅದಕ್ಕೆ ಬೇಕಾದಷ್ಟು ಉದಾಹರಣೆಗಳು ಸಿಗುತ್ತವೆ. ಕರ್ಮ ನಿರ್ಧಿಷ್ಟ ಎಂದರೆ ಆತನೇ ಮಾಡಬೇಕು ಎಂದು. ಆದರೆ ಅದರ ಫಲದ ಭೋಕ್ತೃ ಅವನೇ ಆಗಬೇಕಿಲ್ಲ ಎಂದರ್ಥ. 

ಉದಾ ವಾಲ್ಮೀಕಿ ಪ್ರಕರಣ:- ಅವನು ಮಾಡಿದ ಕರ್ಮಗಳಿಗೆ ಅವನೇ ಜವಾಬ್ದಾರ ಎಂದು ಸಪ್ತರ್ಷಿಗಳು ಹೇಳಿದರು. ನೀನು ಹೆಂಡತಿ ಮಕ್ಕಳ ಹೊಟ್ಟೆ ಹೊರೆಯಲು ಈ ರೀತಿ ಕೊಲೆ, ಸುಲಿಗೆ ಮಾಡುತ್ತೀಯಲ್ಲ ಆ ಪಾಪಕ್ಕೆ ಯಾರು ಜವಾಬ್ದಾರರು? ಕೌಟುಂಬಿಕರೆಲ್ಲ ಹಂಚಿಕೊಳ್ಳುವರೇ ಎಂದು ಕೇಳಿಕೊಂಡು ಬಾ ಎಂದು ವಾಲ್ಮೀಕಿಯನ್ನು ಕಳುಹಿಸುತ್ತಾರೆ. ಹೆಂಡತಿ ಮಕ್ಕಳಲ್ಲಿ ವಾಲ್ಮೀಕಿಯು ಕೇಳಲಾಗಿ ನಮ್ಮ ಪೋಷಣೆ ನಿಮ್ಮ ಕರ್ತವ್ಯ. ನೀವು ಕೊಂದು ತಂದಿದ್ದೀರೋ, ಸುಲಿಗೆ ಮಾಡಿ ತಂದಿದ್ದೀರೋ ಗೊತ್ತಿಲ್ಲ. ಅದರಲ್ಲಿ ನಮ್ಮ ಪಾಪವಿಲ್ಲ ಎನ್ನುತ್ತಾರೆ. ಹಾಗಾಗಿ ವಾಲ್ಮೀಕಿಯಲ್ಲಿ ಇರತಕ್ಕಂತಹಾ ಕರ್ತವ್ಯ ಭ್ರಷ್ಟತೆಯನ್ನು ತೋರಿಸಿಕೊಟ್ಟರು. ಅವನು ಹೆಂಡತಿ ಮಕ್ಕಳನ್ನು ಪೋಷಿಸಬೇಕೆಂದು ನಿಯಮವೇ ಹೊರತು ಕೊಲೆ, ಸುಲಿಗೆ ಮಾಡುವುದು ನಿಯಮವಲ್ಲ. ಹಾಗಾಗಿ ಅವನಿಗೆ ಜ್ಞಾನೋದಯವಾಯಿತು. ತಾನು ಅಂತಹಾ ದುಷ್ಕೃತ್ಯವನ್ನು ಮಾಡಿ ಸಂಸಾರವನ್ನು ಸಾಗಿಸುತ್ತೇನೆ ಎಂದು ಹೇಳುವುದು ತಪ್ಪು. ಧರ್ಮ ಮಾರ್ಗದಲ್ಲಿ ಸಂಸಾರ ಸಾಗಿಸಬೇಕು ಎಂದು ಒಳ್ಳೇ ಮಾರ್ಗದಲ್ಲೇ ಸಂಸಾರ ನಡೆಸಿದ. ಆತ ಜ್ಞಾನೋದಯವಾದ ಮೇಲೆ ಸಂಸಾರ ಬಿಡಲಿಲ್ಲ, ದುಷ್ಕೃತ್ಯ ಬಿಟ್ಟನಷ್ಟೆ. 

ಯಾವುದೇ ಒಬ್ಬ ವ್ಯಕ್ತಿಯು ತಾನು ಮಾಡಿದ ಹಿಂದಿನ ಕರ್ಮವನ್ನು ಅನುಭವಿಸಬೇಕು ಎಂದು ಹೇಳಿದೆ. ಹೀಗಿರುವಾಗ ಕೆಟ್ಟ ಮನುಷ್ಯ, ನೀಚ ಮನುಷ್ಯ ವಾಲ್ಮೀಕಿಗೆ ಹೇಗೆ ಜ್ಞಾನೋದಯವಾಯಿತು?
ವಾಲ್ಮೀಕಿಯು ಕೆಟ್ಟ ಮನುಷ್ಯ, ನೀಚ ಮನುಷ್ಯ ಎನ್ನುವುದನ್ನು ವ್ಯಾಖ್ಯಾನಕಾರರು ಬಿಂಬಿಸಿದ್ದು. ವಾಲ್ಮೀಕಿ ಅದನ್ನು ಸ್ಪಷ್ಟವಾಗಿ ಹೇಳಿದ್ದಾನೆ. ನನಗೆ ಜೀವನ ನಿರ್ವಹಣೆ ಆಗಬೇಕಿತ್ತು. ಬೇರೆ ದಾರಿ ಕಾಣಲಿಲ್ಲ, ಕಂಡದ್ದು ಇದೊಂದೇ ಅದನ್ನೇ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ. ಅದು ತಪ್ಪು ಎಂದೇ ಅವನಿಗೆ ಗೊತ್ತಿಲ್ಲ. ಸಪ್ತರ್ಷಿಗಳು ಬಂದು ತಪ್ಪು ಎಂದು ಯಾವಾಗ ಹೇಳಿದರೋ, ತಕ್ಷಣವೇ ಬಿಟ್ಟಿದ್ದಾನೆ. ಹಾಗಾಗಿ ಅವನು ಕೆಟ್ಟ ಮನುಷ್ಯ ಎಂದು ಹೇಗೆ ಹೇಳುತ್ತೀರಾ? ಹಲವಾರು ಕೊಲೆಗಳನ್ನು ಮಾಡಿರಬಹುದು, ಆದರೆ ಅವನಿಗೆ ಅದು ಬಿಟ್ಟು ಬದುಕಲಿಕ್ಕೆ ಬೇರೆ ಏನೂ ಮಾರ್ಗ ಗೊತ್ತೇ ಇರಲಿಲ್ಲ! ಅವನು ಮಾಡುತ್ತಿರುವುದು ಪಾಪಕರ್ಮ ಎಂದು ಅರ್ಥಮಾಡಿಕೊಳ್ಳಲು ಅವನು ಇದ್ದದ್ದು ಘೋರ ಕಾಡಿನಲ್ಲಿ. ಅಲ್ಲಿ ಒಳ್ಳೆತನವನ್ನು ಅರ್ಥಮಾಡಿಕೊಳ್ಳಲು ಮತ್ತೊಂದು ಮಾಧರಿಯೇ ಇರಲಿಲ್ಲ. ಅಲ್ಲಿಗೆ ಬಂದವರನ್ನೆಲ್ಲಾ ಕೊಂದಿದ್ದಾನೆ. ಒಳ್ಳೇ ರೀತಿಯಲ್ಲಿ ಬದುಕುವವರನ್ನು ನೋಡಿಯೇ ಇಲ್ಲ. ಸಪ್ತರ್ಷಿಗಳು ಹೇಳಿದ ನಂತರ ಮತ್ತೊಂದು ಕೊಲೆಯ ಪ್ರಯತ್ನವೇ ಮಾಡಲಿಲ್ಲ. ಕಡೆಗೆ ಒಂದು ಹಕ್ಕಿಯನ್ನು ಬೇರೆ ಯಾರೋ ಕೊಂದದ್ದಕ್ಕೆ ಮನನೊಂದು ರಾಮಾಯಣ ಬರೆದ.

ಈ ವಾಲ್ಮೀಕಿ ಪ್ರಕರಣದಲ್ಲಿ ಗೊತ್ತಿಲ್ಲದೇ ಮಾಡಿದ ತಪ್ಪಿಗೆ ಪರಿಮಾರ್ಜನೆ ಇದೆಯೇ?
ಇದರ ವಿಚಾರವನ್ನು ವಾಲ್ಮೀಕಿಯು ರಾಮಾಯಣದಲ್ಲೇ ಹೇಳಿದ್ದಾನೆ. ವಾಲ್ಮೀಕಿ ತನ್ನ ತಪ್ಪಿನ ಅರಿವಾದ ನಂತರ ಸಪ್ತರ್ಷಿಗಳಲ್ಲಿ ಪರಿಮಾರ್ಜನೆ ಕೇಳುತ್ತಾನೆ. ಆಗ ಸಪ್ತರ್ಷಿಗಳು ಹೇಳುತ್ತಾರೆ- ನಮ್ಮದ್ದೂ ತಪ್ಪಿದೆ ಇಲ್ಲಿ. ಕಾಡಿನ ಮಧ್ಯದಲ್ಲಿ ಹುಟ್ಟಿದವನಿಗೆ ಬದುಕು ತೋರಿಸಿಕೊಡದೇ ಇದ್ದರೆ ತಮ್ಮ ಸಪ್ತರ್ಷಿ ಪಟ್ಟದ ಕರ್ತವ್ಯ ಚ್ಯುತಿ ಹಾಗಾಗಿ ಅಲ್ಲಿಯವರೆಗಾದ ಪಾಪವನ್ನು ನಾವು ಹಂಚಿಕೊಳ್ಳುತ್ತೇವೆ ಎನ್ನುತ್ತಾರೆ. ಇನ್ನು ಮುಂದೆ ನೀನು ಸಜ್ಜನನಾಗಿ ಬದುಕು ಎಂದರು. 

ಆಣಿ ಮಾಂಡವ್ಯನ ಪ್ರಕರಣ
ಹುಡುಗಾಟದಲ್ಲಿ ಬಾಲ್ಯದಲ್ಲಿ ತಿಳಿಯದೇ ಪತಂಗಕ್ಕೆ ಕಡ್ಡಿ ಚುಚ್ಚುತ್ತಾ ಇದ್ದು ಮಾಂಡವ್ಯ. ಅದಕ್ಕಾಗಿ ಆತನನ್ನು ಶೂಲಕ್ಕೇರಿಸುತ್ತಾರೆ. ಆಗ ಮಾಂಡವ್ಯನು ಯಮನಿಗೆ ಶಾಪ ಕೊಡುತ್ತಾನೆ. ತಿಳಿಯದೇ ಮಾಡಿದ ತಪ್ಪಿಗೆ ಶಿಕ್ಷಿಸಿದ ಕಾರಣ ಯಮನು ಆ ಪಾಪವನ್ನು ಶಾಪ ಕಾರಣದಿಂದ ಅನುಭವಿಸಬೇಕೆಂದು ಹೇಳುತ್ತಾನೆ. ಆದರೂ ಯಮನು ಶಿಕ್ಷೆ ಕೊಟ್ಟಾಗಿರುವುದರಿಂದ ಮಾಂಡವ್ಯನು ಶೂಲದ ಹೊರಭಾಗವನ್ನು ಕತ್ತರಿಸಿ ತೆಗೆದು ಒಳಗೆ ಉಳಿದ ಶೂಲದೊಂದಿಗೆ ಜೀವನ ಪರ್ಯಂತ ಇರುತ್ತಾನೆ. 

ಈ ರೀತಿ ಶಾಪಗ್ರಸ್ಥನಾದ ಯಮನು ವಿಧುರನಾಗಿ ಹುಟ್ಟುತ್ತಾನೆ. ಮಾಂಡವ್ಯನಿಗೆ ಕಳ್ಳನೆಂದು ಶಿಕ್ಷೆ ಕೊಟ್ಟ ಕಾರಣ, ಯಮನು ವಿಧುರನಾಗಿ ಹುಟ್ಟಿ ಆ ರೀತಿಯ ಎಲ್ಲಾ ಭರ್ತ್ಸನೆಗಳನ್ನೂ ಅನುಭವಿಸಬೇಕು ಎಂಬುದೇ ಶಾಪ. ವಿಧುರ ಜನ್ಮದಲ್ಲಿ ಒಂದು ಅಪವಾದವಲ್ಲ. ಕಳ್ಳ, ಸುಳ್ಳ, ವಂಚಕ, ಮೋಸಗಾರ, ದಾಸೀಪುತ್ರ, ನೀಚ, ಭ್ರಷ್ಟ ಎಂಬಂತಹಾ ಸಾವಿರ ಅಪವಾದಗಳನ್ನು ಎದುರಿಸಬೇಕಾಯ್ತು. 

ಅಜ್ಞಾನ ಅಪರಾಧವಲ್ಲವೇ?
ಅಜ್ಞಾನದಿಂದ ಆಗತಕ್ಕಂತಹಾ ತಪ್ಪು, ಲೋಕೋಪಕಾರಕ್ಕೆ ಮಾಡುವಂತಹಾ ತಪ್ಪು ಕ್ಷಮಾರ್ಹ. ಅದು ಪ್ರಕೃತಿಯಲ್ಲಿ ಎಷ್ಟೆಷ್ಟೋ ಭಾಗದಲ್ಲಿ ಹಂಚಿಹೋಗುತ್ತದೆ. ತಿಳಿದೂ ಮಾಡಿದ ತಪ್ಪು ಹಂಚಿ ಹೋಗುವುದೇ ಇಲ್ಲ. ತಿಳಿದು ಮಾಡಿದ ಪಾಪವನ್ನು ಅನುಭವಿಸಿಯೇ ತೀರಬೇಕು! ಹಿತೋಪದೇಶ ಹೇಳುತ್ತದೆ-

ತ್ಯಜೇದೇಕಂ ಕುಲಸ್ಯಾರ್ಥೇ, ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್ |
ಗ್ರಾಮಂ ಜನಪದಸ್ಯಾರ್ಥೇ, ಆತ್ಮಾರ್ಥೇ ಪೃಥಿವೀಂ ತ್ಯಜೇತ್ ||

ಒಂದು ಕುಲವು ಕಂಡಿತವಾಗಿಯೂ ಉದ್ಧಾರ ಆಗುತ್ತದೆ ಎಂದರೆ ಅದಕ್ಕಾಗಿ ಅವರಲ್ಲಿನ್ನ ಒಬ್ಬ ಮಹಾಪಾಪಿಯನ್ನು ಕೊಂದರೂ ಪಾಪವಲ್ಲ. ಹಾಗೆ ಒಂದು ಗ್ರಾಮದ ಒಳಿತಿಗಾಗಿ ಒಂದು ಕುಲವನ್ನೇ ಹೊರಗೆ ಹಾಕಬಹುದು. ದೇಶಕ್ಕಾಗಿ ಒಂದು ಗ್ರಾಮವನ್ನೇ ತ್ಯಜಿಸಬಹುದು. ಅಣೆಕಟ್ಟು ನಿರ್ಮಾಣಕ್ಕಾಗಿ ಒಂದು ಊರನ್ನೇ ಮುಳುಗಿಸುತ್ತಾರೆ. ಅದರಿಂದ ಸಾವಿರಾರು ಊರುಗಳು ಬೆಳೆಯುತ್ತವೆ. ಹಾಗಾಗಿ ಒಂದು ಊರು ಮುಳುಗಿಸಿದ್ದು ದೋಷವಾಗುವುದಿಲ್ಲ. ಆತ್ಮೋದ್ಧಾರಕ್ಕೋಸ್ಕರ ಭೂಮಿಯನ್ನೇ ಬಿಟ್ಟರೂ ತಪ್ಪಿಲ್ಲ ಎಂದು ನ್ಯಾಯಶಾಸ್ತ್ರ, ಕರ್ಮಸಿದ್ಧಾಂತಗಳು ಹೇಳುತ್ತವೆ. ಭೂಮಿ ಬಿಡೋದು ಎಂದರೆ ಆತ್ಮಹತ್ಯೆಯಲ್ಲ. ಅದು ಸಾಧನೆಯಿಂದ, ಸಾಧನೆಗಾಗಿಯೇ ಬಿಡುವುದು. ಅದರಲ್ಲಿ ಹಲವಾರು ವಿಧ. ಆತ್ಮಹತ್ಯೆ ಮಹಾಪಾಪ. ಹಾಗೆ ಜೀವಶಾಸ್ತ್ರ ಅಧ್ಯಯನದಲ್ಲಿ ಕೆಲವಾರು ಜೀವಗಳ ಹತ್ಯೆಯಾದರೂ ಅದು ತಪ್ಪಲ್ಲ. ಅಧ್ಯಯನಕ್ಕಾಗಿ ಮಾಡಿದಾಗ ಹತ್ಯೆ ಎಂದು ಪರಿಗಣಿಸಲ್ಪಡುವುದಿಲ್ಲ. ಅವೆಲ್ಲ ಪ್ರಕೃತಿಯಲ್ಲಿ ಹಂಚಿಹೋಗುವ ವ್ಯವಸ್ಥೆ ಇದೆ.

ಧರ್ಮವ್ಯಾದ ಪ್ರಕರಣ:-
 ಧರ್ಮವ್ಯಾದನ ಕಾಲಮಾನದ ಬಗ್ಗೆ ಸ್ಪಷ್ಟತೆ ಇಲ್ಲ. ಕೌಶಿಕ ಎಂಬ ಬ್ರಾಹ್ಮಣನು ಯಾವ ಕಾಲದವನು ಎಂಬುದರ ಸ್ಪಷ್ಟತೆ ಇಲ್ಲ. ಒಂದು ಚಿಂತನೆಯಲ್ಲಿ ಒಬ್ಬ ಉಚಥ್ಯ ಋಷಿಯು ಧರ್ಮವ್ಯಾದ ಪ್ರಕರಣವನ್ನು ವಿಶ್ಲೇಷಿಸುತ್ತಾ ಮಾಂಸವೆಂದರೆ ಪಕ್ವವಾದದ್ದು ಎಂದರ್ಥ. ಪಕ್ವ ಜ್ಞಾನವನ್ನು ಆತ ಜನರಿಗೆ ಹಂಚುತ್ತಾ ಇದ್ದ. ಅದನ್ನೇ ಮಾಂಸ ವ್ಯಾಪಾರ ಎಂದು ಹೇಳಿದ್ದು ಎಂದು ಪೂರ್ಣ ಆಧ್ಯಾತ್ಮಕ್ಕೆ ತೆಗೆದುಕೊಂಡುಬಿಟ್ಟ. ಇನ್ನೊಂದು ಭಾಗದಲ್ಲಿ ಅದು ಕುಲವೃತ್ತಿಯಾದ್ದರಿಂದ ಅವನಿಗೆ ಅದು ದೋಷವಲ್ಲ. ಅವನು ಯಾವುದೇ ಪ್ರಾಣಿಯನ್ನು ಕೊಂದಿದ್ದಾನೆ ಎಂದು ಸಿಕ್ಕುವುದಿಲ್ಲ. ಬರೇ ವಿಕ್ರಯ ಮಾಡಿದ್ದು ಮಾತ್ರವೆಂದೂ ವಿಶ್ಲೇಷಣೆ ಇದೆ. ವಿಕ್ರಯ ಅಪರಾಧವಲ್ಲ, ಕೊಲೆ ಅಪರಾಧ. ವ್ಯಾಪಾರವು ಸಾಮಾಜಿಕ ವೃತ್ತಿ, ತಪ್ಪಿಲ್ಲವಲ್ಲಿ. ಅಲ್ಲಿ ಕ್ರಯ-ವಿಕ್ರಯ ಮಾತ್ರ ಗಣನೀಯ. ಮಾಂಸ ಮಾರುವುದು ಇನ್ನೊಬ್ಬರು ತಿನ್ನುವುದಕ್ಕಾಗಿ ಅಂತ ಅಲ್ಲ. ಮಾರುವುದು ವ್ಯಾಧನ ಕರ್ತವ್ಯ. ಈಗ ಅಂಗಡಿಗಳಲ್ಲಿ ವಿಷ ಮಾರಟ ಮಾಡುತ್ತಾರೆ. ಹಾಗಂತ ಅದು ತಿನ್ನಲಿಕ್ಕಲ್ಲ. ಹಾಗೆ ಆ ಕಾಲದಲ್ಲಿ ಮಾಂಸ ವಿಕ್ರಯವು ಯಾವುದಕ್ಕೆ ಬಳಕೆಯಾಗುತಿತ್ತೋ ತಿಳಿದಿಲ್ಲ. ತಿನ್ನಿಸಲಿಕ್ಕೇ ಮಾರಿದ್ದು ಎಂಬ ಆಧಾರ ಸಿಕ್ಕುವುದಿಲ್ಲ. ಏಕೆಂದರೆ ಮಾಂಸಾಹಾರ ಮನುಷ್ಯನ ದೇಹಕ್ಕಲ್ಲ ಎಂದು ದೇಹಶಾಸ್ತ್ರವು ಸ್ಪಷ್ಟ ಪಡಿಸಿದೆ. ಮನುಷ್ಯ ದೇಹದಲ್ಲಿ ಮಾಂಸವನ್ನು ಜೀರ್ಣಿಸಿಕೊಳ್ಳುವ ಯಾವುದೇ ರೀತಿಯ ಪಚನ ರಸಗಳಾಗಲೀ, ಗ್ರಂಥಿಗಳಾಗಲೀ ಇಲ್ಲ. ಹಾಗಾಗಿ ಮಾಂಸ ಮನುಷ್ಯನಿಗೆ ಆಹಾರ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಕರ್ಮಸಿದ್ಧಾಂತಕ್ಕೆ ಆಯುರ್ವೇದದಲ್ಲಿ ಬಹಳ ಪ್ರಾಮುಖ್ಯತೆ ನೀಡಿದ್ದಾರೆ. ಒಂದು ಕರ್ಮವನ್ನು ಮಾಡುವಾಗ ಇರಬೇಕಾದ ಕರ್ತವ್ಯ ಬದ್ಧತೆ ಇರಬೇಕು. ಕರ್ಮದ ಬದ್ಧತೆಯೊಂದೇ ಸಮಸ್ತ ಜೀವಿಗಳ ಸೃಷ್ಟಿ, ಸ್ಥಿತಿ, ಲಯಗಳಲ್ಲಿ ಕೆಲಸ ಮಾಡುತ್ತಿರುತ್ತದೆ. ಇದು ಬಿಟ್ಟು ಬೇರೆ ಯಾವುದೇ ತಾಂತ್ರಿಕ ಪ್ರಕ್ರಿಯೆಯು ಅದಕ್ಕೆ ಅವಶ್ಯಕತೆ ಇಲ್ಲ ಎಂಬ ಒಂದು ಮಾತು ಚರಕ ಸಂಹಿತೆಯಲ್ಲಿದೆ.
ಯದಾ ಸ್ವೇನ ಆತ್ಮನಾ ಆತ್ಮಾನಂ ಸರ್ವಾ ಸರ್ವಾಸು ಯೋನಿಷು |
ಪ್ರಾಣೈಃಸ್ತಂತ್ರಯತೇ ಪ್ರಾಣೀನ್ ನಹ್ಯಂತೋ ಅಸ್ಯ ತಂತ್ರಕಃ ||
ಈ ಕರ್ಮಸಿದ್ಧಾಂತ ಒಂದರ ಮೇಲೆಯೇ ಇಡೀ ಜನ್ಮಜನ್ಮಾಂತರದ ಪ್ರಕ್ರಿಯೆಗಳು ಮತ್ತು ಎಲ್ಲ ಪ್ರಾಣಿ ಸಂಬಂಧಿ ಪ್ರಕ್ರಿಯೆಗಳು ನಡೆದುಕೊಂಡು ಹೋಗುತ್ತದೆ. ಇದನ್ನು ಬಿಟ್ಟು ಬೇರೆ ಯಾವುದೇ ಸಿದ್ಧಾಂತದ ಅವಶ್ಯಕತೆ ಇಲ್ಲ ಎನ್ನುತ್ತಾರೆ. ಸರಿಯೇ?

        ಈ ಶ್ಲೋಕ ಚರಕನದ್ದೇ ಆದರೂ ಅವನು ಹೇಳಿದ ಓಘ ಬೇರೆ. ಈ ರೀತಿ ಅರ್ಥ ಬರುವುದಿಲ್ಲ. ತಂತ್ರವಿಲ್ಲದೇ ಇದ್ದರೆ ಶಸ್ತ್ರಚಿಕಿತ್ಸೆ ಇತ್ಯಾದಿ ಇರುವ ಶಲ್ಯತಂತ್ರವನ್ನು ಬರೆಯುತ್ತಲೇ ಇರಲಿಲ್ಲ. ಅಂದರೆ ಈ ರೀತಿಯ ಚಿಕಿತ್ಸಾ ಪ್ರಕ್ರಿಯೆಗಳನ್ನೂ ತಂತ್ರಗಳೆಂದು ಕರೆದಿದ್ದಾನೆ. ಮನುಷ್ಯನು ಸಹಜವಾಗಿ ಬದುಕುವುದನ್ನು ಕಲಿತರೆ ಈ ರೀತಿಯ ತಂತ್ರಗಳ ಅಗತ್ಯತೆ ಇಲ್ಲ ಎಂಬ ಓಘದಲ್ಲಿ ಹೇಳಲಾಗಿದೆ. ಅದು ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆಯಂತೆ ಇದೆ. ಆ ರೀತಿ ಆಗದೆ ಇದ್ದ ಸಂದರ್ಭದಲ್ಲಿ ಈ ಕರ್ಮಗಳ ಅಗತ್ಯತೆ ಬರುತ್ತದೆ ಎಂದನು. ದೇಹದಲ್ಲಿ ಒಂದು ಅಂಗ ಕ್ಷೀಣವಾದರೆ ದೇಹ ಉಳಿಸುವುದಕ್ಕಾಗಿ ತಂತ್ರ ಪ್ರಯೋಗಿಸಿಯಾದರೂ ಆ ಅಂಗವನ್ನು ತೆಗೆದು ಹಾಕುವುದು ಅನಿವಾರ್ಯವಾಗುತ್ತದೆ. ಅಂದರೆ ಸುಮ್‍ಸುಮ್ನೆ ಆಪರೇಶನ್ ಮಾಡಬಾರದು. ಆಪರೇಶನ್ ಮಾಡುವಂತಹಾ ಅನಿವಾರ್ಯತೆ ಬರದ ಹಾಗೆ ಬದುಕಿದರೆ ಆಪರೇಶನ್ ಅಂತಹ ಅಪಾಯಕಾರೀ ತಂತ್ರಗಳ ಬಳಕೆ ಬೇಡ ಎಂದನು. ಆ ಕಾಲದಲ್ಲೇ ಶಲ್ಯತಂತ್ರವನ್ನು ಸಾರ್ವಜನಿಕ ಬಳಕೆಗೆ ತಂದವನು ಚರಕ. ಅವನು ತಯಾರಿಸಿ ನಮೂದಿಸಿರುವ ಶಸ್ತ್ರ ಚಿಕಿತ್ಸಾ ಪರಿಕರಗಳನ್ನು ಬಿಟ್ಟು ಒಂದೇ ಒಂದು ಹೊಸ ಪರಿಕರವನ್ನು ಆಧುನಿಕರು ಕಂಡುಹಿಡಿದಿಲ್ಲ. ಎಲ್ಲವೂ ಆತನ ಪರಿಕರ ಮಾಧರಿಗಳನ್ನು ಅಭ್ಯಸಿಸಿ ಅರ್ಥೈಸಿದ್ದಾಗಿದೆ. 

ಚರಕನು ಜನ್ಮಾಂತರ ಪ್ರಾಪ್ತಿಯನ್ನು ೩ ಶಬ್ದಗಳಲ್ಲಿ ವಿವರಿಸಿದ್ದಾನೆ: ಕರ್ಮ: ಕಾಯಾ, ವಾಚಾ, ಮನಸಾ. ಅವುಗಳ ಬದ್ಧತೆ. ಇದನ್ನು ದೈವ ಎಂದು ಸಂಬೋಧಿಸಲಾಗಿದೆ. ಏಕೆಂದರೆ ಜನ್ಮಾಂತರದಲ್ಲಿ ಇವುಗಳಿಗೆ ಕಾರಕತ್ವ ಬರುತ್ತದೆ. ಇವುಗಳ ಸಂಪೂರ್ಣವಾದ ಪ್ರಭಾವದಿಂದಲೇ ಜೀವನ ಪ್ರಕ್ರಿಯೆ, ರೋಗಗಳಿಗೂ ಕಾರಣವಾಗುತ್ತದೆ ಎನ್ನಲಾಗಿದೆ. ಈ ದೈವವನ್ನು ಎದುರಿಸಲು ಪುರುಷಸ್ಕರ ಎಂಬ ಚಿಕಿತ್ಸಾ ವಿಭಾಗ, ಅದರೊಂದಿಗೆ ಕರ್ಮಸಿದ್ಧಾಂತ, ತಂತ್ರ ಎಲ್ಲ ಬರುತ್ತದೆ. ಈ ದೇಹಾಂತರ ಪ್ರಾಪ್ತಿ ಆಗಬೇಕಾದರೆ ಈ ಆತ್ಮನನ್ನು ಶರೀರದಿಂದ ಭಿನ್ನವಾಗಿ ನೋಡಬೇಕಾಗುತ್ತದೆ ಎಂಬಂತಹಾ ಪರಿಸ್ಥಿತಿ ಬರುತ್ತದೆ. ಅದು ಸೂಕ್ಷ್ಮ ಶರೀರ ರೂಪದಲ್ಲಿ ಹೊರ ಹೋಗುತ್ತದೆ. ಅದನ್ನು ತೆಗೆದುಕೊಂಡು ಹೋಗಲು ಕಾರಕವಾದದ್ದು ಮನಸ್ಸು. ಮನಸ್ಸು, ಹಿಂದಿನ ಜನ್ಮದಿಂದ ಮಾಡಿರತಕ್ಕಂತಹಾ ಕರ್ಮಸಂಬಂಧವಾದ ದೈವ ರೂಪವಾದದ್ದು, ಆತ್ಮ ಮತ್ತು ಸೂಕ್ಷ್ಮ ರೂಪವಾದ ೪ ಭೂತಗಳನ್ನು ಮಾತ್ರ ಹೇಳುತ್ತಾನೆ. ಅದರಲ್ಲಿ ಆಕಾಶ ತತ್ವವಿಲ್ಲ. 

ಆಕಾಶವು ಯಾವುದೇ ಕಲ್ಪನೆಗೆ ಸಿಕ್ಕದ್ದೆಂದು ಆ ಕಾಲದಲ್ಲೇ ಬಹಳ ಸ್ಪಷ್ಟತೆ ಇತ್ತು. ಈಗ ಮಾತ್ರ ಬಹಳವಾಗಿ ಬರೆದು ಬಿಟ್ಟಿದ್ದಾರೆ. ಈಗ ಯಾರಿಗೂ ಗೊತ್ತಿಲ್ಲ, ಏನು ಹೇಳಿದರೂ ನಡೆಯುತ್ತದೆ ಎಂಬ ಢಂಬತನ ತಾಂಡವವಾಡುತ್ತಿದೆ. ಆಕಾಶವು ಸರ್ವವ್ಯಾಪಕವಲ್ಲವೇ ಎಂದು ಪ್ರಶ್ನಿಸಬಹುದು. ಆದರೆ ಆಕಾಶದ ಕಲ್ಪನೆಯು ಅಪ್ರಬುದ್ಧವೆಂದು ಆಗಿನ ಕಾಲದ ಜಿಜ್ಞಾಸುಗಳಿಗೆ ಸ್ಪಷ್ಟವಿತ್ತು. ಆಕಾಶದ ಕಲ್ಪನೆಯು ಪ್ರಬುದ್ಧವಾಗಬೇಕಾದರೆ ಈ ಬ್ರಹ್ಮನ ಕಾಲವು ಮುಗಿಯಬೇಕು. ಈಗಿನ ಹಿರಣ್ಯಗರ್ಭ ಬ್ರಹ್ಮನಿಗೆ ನಾಲ್ಕೇ ತಲೆ. ಐದನೇಯದು ಗೊತ್ತು ಎಂದು ಮತ್ತೊಂದು ತಲೆ ಇಟ್ಟುಕೊಂಡಾಗ ಅದನ್ನು ಈಶ್ವರ ಕತ್ತರಿಸಿದ. ಐದನೆಯ ತಲೆಯ ಬ್ರಹ್ಮ ಬರಬೇಕು, ಆಗ ಐದನೆಯ ಭೂತವು ಪ್ರಕಟವಾಗುತ್ತದೆ. ಅಲ್ಲಿಯವರೆಗೂ ಪೂರ್ಣ ಪ್ರಕಟ ಆಗುವುದೇ ಇಲ್ಲ. ಅದೇ ಸತ್ಯ. ಇದರ ಕಲ್ಪನೆಯು ಚರಕನ ಕಾಲದವರಿಗೆ ಇತ್ತು. ನಂತರದಲ್ಲಿ ಏನೇನೋ ವ್ಯಾಖ್ಯಾನ ಮಾಡಿದ್ದಾರೆ. 

ದೇಹಾಂತರ ಕರ್ಮಪ್ರಾಪ್ತಿಯ ಬಗ್ಗೆ ಹಲವು ಸಿದ್ಧಾಂತಗಳಿವೆ. ಚರಕರು ಕಪಿಲರ ಮತವನ್ನು ಮಂಡಿಸಿದಂತೆ ಕಂಡುಬರುತ್ತದೆ. ಅಲ್ಲಿ ಆತ್ಮ ಪ್ರತ್ಯೇಕವಾಗಿರುತ್ತದೆ. ಅದನ್ನು ಮನಸ್ಸು ಆವರಿಸಿರುತ್ತದೆ. ಅದು ಆ ಜನ್ಮದಲ್ಲಿ ವ್ಯವಹರಿಸಿದಂತಹಾ ಪಾಪ-ಪುಣ್ಯಗಳನ್ನು ಶೇಷ ಸಹಿತವಾಗಿ ಇನ್ನೊಂದು ಜನ್ಮಕ್ಕೆ ಹೋಗುತ್ತದೆ ಎಂದರು. ಬೇರೆ ಬೇರೆ ಆತ್ಮ ಸಿದ್ಧಾಂತಗಳಲ್ಲೂ ಇದರ ಹತ್ತಿರದ ಓಘದಲ್ಲಿಯೇ ಹೇಳಲಾಗಿದೆ. ವೈದಿಕದಲ್ಲೂ ಇದ್ದಕ್ಕೆ ಹತ್ತಿರವಿದ್ದಾಗ್ಯೂ ಇದಕ್ಕಿಂತ ಹೆಚ್ಚು ಸ್ಪಷ್ಟತೆ ಸಿಗುತ್ತದೆ. ಚರಕರ ರೀತಿ ಆತ್ಮವು ಕರ್ಮವನ್ನು ಕೊಂಡು ಹೋದರೆ ಇಲ್ಲಿ ಏನೂ ಉಳಿಯುವುದಿಲ್ಲ! ಹಾಗಿದ್ದಾಗ ಪಿತೃಶ್ರಾದ್ಧ ಮಾಡುವುದು ಬೇಡವೆಂದಾಗುತ್ತದೆ. ಆದರೆ ವೈದಿಕದಲ್ಲಿ ಹಾಗೆ ಹೇಳುವುದಿಲ್ಲ. ಆತ್ಮಕ್ಕೆ ಉಂಟಾದ ತಾಪಗಳು ೩ ರೀತಿ ಇರುತ್ತದೆ- ಭೌತಿಕ, ದೈವಿಕ ಮತ್ತು ಆತ್ಮಿಕ. ಅದು ಆ ತಾಪಗಳನ್ನು ಆಧರಿಸಿ ತೆಗೆದುಕೊಂಡು ಹೋಗುತ್ತದೆ. ಆದರೆ ಅದರ ದೈವೀಕತೆ ಇಲ್ಲೇ ಉಳಿಯುತ್ತದೆ. ಅದಕ್ಕೆ ಉತ್ತರಕ್ರಿಯಾದಿಗಳನ್ನು ಮಾಡಿಕೊಂಡು ಆ ದೈವಿಕವನ್ನು ನಾವು ಪಿತೃಗಳ ರೂಪದಲ್ಲಿ ಪೋಷಿಸಿಕೊಂಡು ಬರುವುದು. ಅದಕ್ಕಾಗಿಯೇ ಅಂಗುಷ್ಠ ಪ್ರಮಾಣದ ದೇಹ ಸೃಷ್ಟಿ ಮಾಡಿಕೊಳ್ಳುವುದು. ಅದು ಹೋಗುವುದಿಲ್ಲ, ಅದು ಅವರ ವಂಶದಲ್ಲಿ ಹಾಗೇ ಉಳಿದಿರುತ್ತದೆ. ಮೂರನೇ ತಲೆಮಾರಾದ ಮೇಲೆ ಬಿಟ್ಟು ಹೋಗುತ್ತದೆ. ಆತ್ಮದ ದೈವಿಕ ಸಂಪರ್ಕವು ತಪ್ಪುವುದಿಲ್ಲ ಎಂದು ವೈದಿಕಶಾಸ್ತ್ರ ಹೇಳುತ್ತದೆ. ಭೌತಿಕವಾಗಿ ಜೀವನ ಮಾಡಿದಾಗ ಏನು ಪಾಪ-ಸಂಚಯನ ಮಾಡಿದೆಯೊ ಅದನ್ನು ತೆಗೆದುಕೊಂಡು ಆತ್ಮವು ಬೇರೆ ಕಡೆ ಹೊರಟು ಹೋಗುತ್ತದೆ. ಹೀಗೆ ಕರ್ಮವು ಆತ್ಮದೊಂದಿಗೆ ಹೋಗಿ ದೇಹಾಂತರ ಪ್ರಾಪ್ತಿ ಪಡೆಯುತ್ತದೆ. ಆದರೆ ತಂದೆ(ಪಿತೃ) ಎನ್ನುವ ದೈವಿಕ ಭಾಗವು ವಂಶದಲ್ಲೇ ಇರುತ್ತದೆ. ಹಾಗಾಗಿ ಪಿತೃ ಭಾಗ ಉಳಿಸಿಕೊಂಡು, ಪ್ರೇತ ಭಾಗವನ್ನು ಕಳುಹಿಸಿಕೊಡಲಾಗುತ್ತದೆ. ಪ್ರೇತ ಎಂದರೆ ಪ್ರತ್ಯೇಕಿಸಲ್ಪಟ್ಟದ್ದು ಎಂದರ್ಥ. ವೈದಿಕದಲ್ಲಿ ಸೂಕ್ಷ್ಮಶರೀರ ಎಂದರೆ ಔರ್ಧ್ವದೈಹಿಕ ಕ್ರಿಯಾಕರ್ಮಕ್ಕಾಗಿ ತಂದೆಗೊಂದು ದೇಹವನ್ನು ಸೃಷ್ಟಿ ಮಾಡಿಕೊಡುವುದು, ಅದು ಪ್ರೇತವಲ್ಲ. ಅದರ ಭೌತಿಕತೆ ಏನಿರುವುದೋ ಅದು ಆತ್ಮದ ಜೊತೆಯಲ್ಲಿ ಸೇರಿ ಪ್ರೇತವಾಗಿ ಹೊರಟು ಹೋಗುತ್ತದೆ. 

ಆತ್ಮಿಕ ಭಾಗವು ಸಂಪರ್ಕವಿಲ್ಲದಂತೆ ಮುಂದೆ ಹೋದಾಗ ಪ್ರೇತ ದೋಷ ಹೇಗೆ ಬರುತ್ತದೆ?
ದೈವಿಕ, ಭೌತಿಕ, ಆತ್ಮಿಕ ಎಂದು ವಿಭಾಗಿಸಲ್ಪಟ್ಟ ಆತ್ಮವು ಆತ್ಮಿಕಾಂಶದಲ್ಲಿ ಜನ್ಮ ಪ್ರಾಪ್ತಿಗಾಗಿ ಸೂಕ್ತ ಕ್ಷೇತ್ರ ಅರಸಿ ಹೊರಟಾಗ ಭೌತಿಕ ಕಾರಣದ ಯಾವುದಾದರೂ ಪ್ರತಿಬಂಧನವಿದ್ದರೆ ಅದು ಪ್ರೇತಬಾಧೆ ಎನ್ನಿಸಿಕೊಳ್ಳುತ್ತದೆ. ಅಲ್ಲಿ ಪ್ರತಿಬಂಧವು ಬಾಧೆ ಎಂದರೇ ಹೊರತು ತಂದೆಯೇ ಪ್ರೇತವೆಂದಲ್ಲ. ಋಗ್ಣಷೇಣರು ಬಹಳ ಚೆನ್ನಾಗಿ ವಿವರಿಸಿದ್ದಾರೆ. 

ಆತ್ಮವು ಮತ್ತೊಂದು ದೇಹವನ್ನು ಪಡೆಯಲು ಎಷ್ಟು ಕಾಲ ಬೇಕು?
            ಯಾವ ದೇಹದಲ್ಲಿ ಹೋಗಿ ಸೇರಿದರೆ ತಾನು ಆರ್ಜಿಸಿದ ಕರ್ಮವು ಕರಗಿಸಲು ಆಗುತ್ತದೆ ಎಂದು ಚಿಂತನೆ ಮಾಡಿ ಹೋಗಿ ಸೇರಬೇಕು. ಕರ್ಮ ತೀರಿಸುವುದೇ ಅದರ ಗುರಿ. ಅದಕ್ಕೆ ಅದರದ್ದಾದ ಕ್ಷೇತ್ರಪ್ರಾಪ್ತಿಯಾಗಬೇಕು. ಅಲ್ಲಿ ಕರ್ಮಬಂಧಿತ ಸ್ವಯಂ ಆಯ್ಕೆ ಆಗಿರುತ್ತದೆ. ಅದು ಸಿಗುವಷ್ಟು ಕಾಲ ಎಂಬುದು ಇಲ್ಲಿ ಮುಖ್ಯ. ಕಾಲ ಪ್ರಾಪ್ತಿಯಾದಾಗ ಆಹಾರ ಮುಖೇನ ಮನುಷ್ಯನಲ್ಲಿ ಸೇರಿ ಅಲ್ಲಿಂದ ಭ್ರೂಣಕ್ಕೆ ಸೇರುತ್ತದೆ. ಕರ್ಮ ಸ್ವಾತಂತ್ರ್ಯ ಪಡೆದರೆ ಬೇಕಾದಲ್ಲಿ ಬೇಕಾದಾಗ ಹುಟ್ಟಲು ಸಾಧ್ಯ! 

ಬಿಟ್ಟು ಹೋದ ಆತ್ಮಕ್ಕೆ ಸುಖ-ದುಃಖಗಳು ಇವೆಯೇ?
 ಸರಿಯಾದ ಕ್ಷೇತ್ರ ಪ್ರಾಪ್ತಿಯಾಗದಿದ್ದರೆ ಕರ್ಮವು ಜೊತೆಯಲ್ಲೇ ಇರುವುದರಿಂದ ಎಲ್ಲವೂ ಅನುಭವಕ್ಕೆ ಬರುತ್ತದೆ. ಅದನ್ನೇ ಪ್ರೇತ ಎನ್ನುವುದು.

No comments:

Post a comment