Wednesday, 21 August 2013

Importance of Shantis done during 60, 70, 80 & 90 years for Human

ಉಗ್ರರಥ ಶಾಂತಿ:- ೬೦ನೇ ವರ್ಷಕ್ಕೆ

ಕೇಳು ಮನುಜನೇ ನಿನಗೆ ಷೋಡಶಕರ್ಮಗಳ ಸಂಸ್ಕಾರ ಮಾನವನಾಗಿ ಬದುಕಲು
ತಾಳು ಅದರಿಂದ ಜೀವನಕೆ ತಳಹದಿಯು ಜೀವನದಿ ಪಕ್ವತೆಯ ಪಡೆದು
ಬಾಳು ಹಸನಾಗಲು ಬೇಕು ಕೇಳೈ ಉಗ್ರರಥ, ಭೀಮರಥ, ವಿಜಯರಥ, ಸಹಸ್ರಚಂದ್ರದರ್ಶನವೆಂಬ ಸಂಸ್ಕಾರಗಳೂ
ಹೇಳಿಕೊಳ್ಳುವ ಜೀವನದ ಸಾಧನೆಯು ನಿನಗುಂಟೆ ಜೀವನರಥ ನಿನ್ನಯ
ಬಾಳು ವ್ಯರ್ಥವಾಗದಿರಲೆಂದು ಹಾರೈಸಿ ಈ ಸಂಸ್ಕಾರಗಳ ರೂಪಿಸಿದರಾಗ ಆತ್ಮನು
ಕೋಳು ಹೋಗದರಲೆಂದು ಉಗ್ರರಥನಾಗು ನೀನೀಗ ನಿನ್ನಯ ಆತ್ಮೋದ್ಧಾರ ಚಿಂತನೆಯಲ್ಲಿ ನಿರತನಾಗೆಂದೂ || ೧ ||

ಭೀಮರಥ ಶಾಂತಿ:- ೭೦ನೇ ವರ್ಷಕ್ಕೆ

ಭೀಮನಹುದೇ ನೀನು ದೃಢಭಕ್ತಿಯೊಳು ದೇವನಲಿ ಚಿತ್ತವ ನೆಲೆಗೊಳಿಪ
ಭೀಮಭಕ್ತಿಯು ಬೇಕು ಜೀವನದ ಅನಿವಾರ್ಯತೆಯಪರಾಧ ವಿಪಾಕವಾಗಲು ನೀನು
ಭೀಮಭಕ್ತಿಯಲಿ ಸತತ ಧೈವಚಿಂತನೆ ಮನದ ಪಶ್ಚಾತ್ತಾಪ, ಕಾಯ ಪ್ರಾಯಶ್ಚಿತ್ತ ರೋಗಾದಿಗಳ ಭೋಗಲಾಲಸೆಯ ಬಿಡಲೂ
ಭೀಮನಂತಿರಬೇಕು ಪ್ರಾಪ್ತಿಯನು ಬಳಸಿ ಆಸೆಯನು ಬಿಟ್ಟು ನಿಶ್ಚಲನಾಗಿದ್ದು
ಭೀಮಕಾಯವಿರಲಿ ನಿನಗೆ ಇನ್ನೇನು ಫಲ ಜೀವಿತದಿ ನಿನ್ನರಿವು ಮೂಡದಿರೆ
ಭೀಮರಥಶಾಂತಿಯನ ಹತ್ತೇಳು ವರುಷಕ್ಕೆ ಆಚರಿಸಿ ಕರ್ಮವಿಪಾಕಗೊಳಿಸಲು ಸನುಮತದ ಮಾರ್ಗವಿದು ಕಾಣೋ || ೨ ||

ವಿಜಯರಥಶಾಂತಿ:- ೮೦ನೇ ವರ್ಷಕ್ಕೆ

ಜಯನಹುದು ಈ ಲೋಕದೊಳು ನಿನ್ನಾತ್ಮ ನೀನಲ್ಲವೆಂದೆನಬೇಡ ವಿ
ಜಯರಥನಾಗು ನೀ ವಿಜಯಿಯಹುದೈ ಲೋಕಮುಖಕೆ ನನ್ನ ಜೀವನ ವಿ
ಜಯ ಪತಾಕೆಯಪ್ಪುದು ನೀನದರಿಂದ ಸುದರ್ಶನನಪ್ಪೆ, ಗುರುವಪ್ಪೆ, ಪಿತನಪ್ಪೆ ಲೋಕಕೆ ನೀನೇ ವಿಜಯೀ
ಜಯಿಸು ಈ ಲೋಕದಾ ಕರ್ಮಬಂಧವ, ಋಣವ, ಪಾಪದೋಷವನೆಲ್ಲ
ಜಯಿಸಿಹೆ ನೀನೆಂಬ ಕುರುಹೇ ವಿಜಯರಥ ಶಾಂತಿಯದು ಶೇಷವನುದಾಸದಿ
ಜಯಿಸಿ ಪಕ್ವಗೊಳ್ಳುವ ವಿಧಿ ವಿಧಾನವಿದು ವಿಜಯರಥಶಾಂತಿ ಪ್ರಕ್ತಿಯೆಯ ಬಿಡದೆ ಆಚರಿಸು ನೀನೆಂಬೇ || ೩ ||

ಸಹಸ್ರಚಂದ್ರದರ್ಶನ ಶಾಂತಿ:- ೯೦ನೇ ವರ್ಷಕ್ಕೆ


ಜಗದ ನಿಯಮವು ಕೇಳು ಮನುಜನೇ ವೃದ್ಧಿಕ್ಷೀಣವು ಸತತವಾಗಿಹುದು
ಜಗದೊಡೆಯನಾ ಸಂಕಲ್ಪವಿದು ಅದರ ಪ್ರಾಮಣ್ಯದಂತ ವೃದ್ಧಿಕ್ಷೀಣವ ಕಂಡ
ಜಗದ ತಂಪಿನಮೂರ್ತಿ ಬೇಸರಿಸದಿರುವಂತೆ ಪರಿಪಕ್ವಗೊಂಡಿಹ ಮನದ ದ್ಯೋತಕವಿದು ಚಂದ್ರದರ್ಶನವೂ
ಜಗದ ಜಂಜಾಟದಲಿ ಸಿಕ್ಕಿ ತೊಳಲಿಹೆ ನೀನು ಜರ್ಜರಿತನಾಗಿಹುದು ದೇಹಾ
ಜಗದಾಕರ್ಷಣೆಯಿಲ್ಲ ಬಹುವಬೇಕೆಂಬ ಈತಿಗಳು ನಿನಗಿಲ್ಲ ಪಕ್ವದಲಿ
ಜಗಕೆ ದಾರಿದೀಪವು ನೀನೆಂಬ ಸತ್ಯವ ಲೋಕಮುಖಕೆ ಸಾರುವ ನಿನ್ನಯ ಪಕ್ವತೆಯ ಆರ್ಹತಾ ಪತ್ರ ಕಾಣಯ್ಯಾ || ೪ ||

ಚಂದ್ರನಂತಿರಬೇಕು ತಂಪು ತಂಪಾಗಿರಬೇಕು ಮನದ ಆಲೋಚನೆಯಲಿ
ಅಂದಗಾಣುವ ದೇಹವಿಲ್ಲ ನಿನಗೆ ಸುಕ್ಕುಗಟ್ಟಿದೆ, ಧ್ವನಿಯಲ್ಲಿ ನಡಗುತಿದೆ
ಚಂದ್ರನಾ ತೆರದ ತಂಪಾದ ದೃಷ್ಟಿಯು ಕ್ಷೀಣವಾಗಿದೆ ಆದರೆ ಮನವು ಚಂದ್ರನಂತಿದೆ ಹೊಳೆಯುತಿದೆ ಕಣಾ
ಚಂದ್ರನೂ ಕೂಡ ನಿನ್ನ ಹುಟ್ಟಿದಾರಂಭದಿಂದಲಿ ಸಾಸಿರಸಾರಿ ಕ್ಷೀಣವೃದ್ಧಿಯ ತೋರೇ
ಚಂದ್ರನೇ ಈ ಸ್ಥಿತಿಗೆ ಕಾರಣವೆಂಬ ಸತ್ಯವನರಿತೆಯಾದರೆ ನಿನಗಿಹುದು ಮನ
ಐಂದ್ರಿಯಾತೀತನಾಗಿಹುದು, ಇಂದ್ರಿಯಗಳ ಸೋತಮೇಲ್ ನೀ ಪಕ್ವನಾದೆ ಕಲಿತೆ ಚಂದ್ರನಿಂದೆಂಬ ಸತ್ಯವನರಿತೆಯಲ್ಲಾ || ೫ ||

ಹುಟ್ಟಿದಾ ಮಾನವಗೆ ಮೆಟ್ಟಹ ಕರ್ಮಗಳ ಕಳೆಯಲು ಬೇಕು ವರುಷಗಳಾರು ಹತ್ತು
ಮುಟ್ಟಿದಾ ಚಿನ್ನವೂ ಇದ್ದಿಲಪ್ಪುದು ಕೇಳು ಪ್ರಾಪ್ತಿ ಇಲ್ಲದೊಡೆ ಆದರೆ ಅರವತ್ತು ಕಳೆಯಲು
ಮೆಟ್ಟಿದಾ ಭೂಮಿಯ ಋಣ ಸಹಿತ ಕರ್ಮದ ನಿಶ್ಶೇಷಗೊಳಿಸಲು ಬಪ್ಪುದೈ ಅಲ್ಲಿಯವರೆಗಿನ ಜೀವನ ನಿಷ್ಕಳಂಕವಾಗಿರಲು
ಮುಟ್ಟದೇ ಪರಧನವ ಸ್ವಾರ್ಜಿತದಿಂದ ಬದುಕಿರಲಾಗ ಮೆಚ್ಚದಿದ್ದರೆ ಪರಸತಿಯ ಬಿಡದೆ ನೀ
ಹುಟ್ಟಿದಾ ನೆಲದ ಋಣಕೆ ಕಾಯಕವ ಮಾಡಿ ತೀರಿಸಿರೆ ಅರವತ್ತು ತುಂಬುವ ಕಾಲ ಸುದಿನ
ಕೆಟ್ಟ ಆಲೋಚನೆಗಳ ಕಳೆದು ನೀಗುತ ಆತ್ಮಸಂಸ್ಕಾರವನು ಪಡೆವ ಕಾಲವು ಅದಕೆ ಗಂಡುಹೆಣ್ಣೆಂಬ ಭೇದವಿಲ್ಲಾ || ೬ ||

ಕಂದಪದ್ಯ:-
ಇಂತೀಪರಿಯೊಳಗೆ ಕಜ್ಜದೊಳು ವಿವರಿಸಿಹೆ ನೀನರಿತುಕ ಮುಂದಿನಾ ವಿಧಿ ವಿಧಾನಗಳ ವೇದಜ್ಞರಲಿ ತಿಳಿದು
ಸೂತ್ರಕಾರರಲಿ ಚರ್ಚಿಸಿ ತಿಳಿಯಬೇಕೆಂದು ಸಲಹೆಯನಿಪ್ಪೆ ಸದಾಶಿವನ ದಯದಿಂದಾ ||

-      ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದರ ಪದ್ಯಗಳು

No comments:

Post a Comment