Sunday, 11 August 2013

Scientific importance of Naga Chaturti, Panchami & Shasti


ನಾಗ ಪರಿಕಲ್ಪನೆ ಎನ್ನುವುದು ಲಿಖಿತ ದಾಖಲೆಗಳ ಆಧಾರದಲ್ಲಿ ಸುಮಾರು ೧೪,೦೦೦ ವರ್ಷಗಳಿಂದ ಪ್ರಚಲಿತದಲ್ಲಿದೆ. ಈ ಕಲ್ಪನೆ ಅಷ್ಟು ವರ್ಷಗಳ ಹಿಂದೆಯೇ ಅಸ್ಪಷ್ಟವಾಗಿತ್ತು. ಪ್ರಪಂಚದ ಯಾವುದೇ ಧರ್ಮವನ್ನು ಗಮನಿಸಿದರೆ ಅಲ್ಲಿ ನಾಗಾರಾಧನೆ ವಿಭಿನ್ನ ಸ್ವರೂಪದಲ್ಲಿ ಕಂಡು ಬರುತ್ತದೆ.

ಮುಖ್ಯವಾಗಿ ನಾಗ ಅಂದರೆ ಏನು ಎನ್ನುವುದನ್ನು ಗಮನಿಸಬೇಕು. ಪ್ರಾಚೀನ ಕಲದಲ್ಲಿ ಪ್ರಧಾನವಾಗಿ ಗುರುತಿಸಿದ್ದು ಜೀವಿಯಲ್ಲಿರುವ ಮನಸ್ಸು ಎಂಬ ಪ್ರವೃತ್ತಿಯನ್ನು. ಮನಸ್ಸು ಎನ್ನುವ ಪ್ರವೃತ್ತಿಯೇ ಜೀವನಕ್ಕೆ ಕಾರಣ ಎನ್ನುವುದನ್ನು ಆ ಕಾಲದಲ್ಲಿಯೇ ಕಂಡುಹಿಡಿದರು. ಆ ಕಾಲದಿಂದಲೇ; ಅಂದರೆ ವೇದಕಾಲದಿಂದಲೇ ಮನಸ್ಸಿಗೆ ಸಂಬಂಧಿಸಿದ ಅಧ್ಯಯನಗಳು ನಡೆದು ಬಂದಿರುವುದನ್ನು ಕಾಣಬಹುದು. ಮನಶ್ಶಾಸ್ತ್ರಕ್ಕೆ ಸಂಬಂಧಿಸಿದಂತೆ ಆ ಕಾಲದಲ್ಲೇ ವಿಶೇಷ ಅಧ್ಯಯನ ನಡೆದಿದೆ. ಈ ವಿಚಾರವಾಗಿ ಋಗ್ವೇದ, ಯಜರ್ವೇದ, ಸಾಮವೇದ ಮತ್ತು ಅಥರ್ವ ವೇದಗಳಲ್ಲಿ ಪೂರಕ ಮಾಹಿತಿ ದೊರದುತ್ತದೆ. 

ಅಲ್ಲೆಲ್ಲ ನಾಗ ಎನ್ನುವ ಅರ್ಥದಲ್ಲೇ ಈ ಅಧ್ಯಯನ ನಡೆದಿರುವುದು ಕಂಡುಬರುತ್ತದೆ.

ಒಂದು ಕಾಲದಲ್ಲಿ ಸಾರ್ವತ್ರಿಕವಾಗಿ ನಾಗ ಅಂದರೆ ಪ್ರಕೃತಿಯ ಪೂಜೆಯಿತ್ತು. ಪ್ರಕೃತಿಯ ಸಮಗ್ರ ಜ್ಞಾನವನ್ನು ನಾಗನ ಪೂಜೆಯಿಂದ ಜನರು ಪಡೆಯುತ್ತಿದರು. ಹಾಗಾಗಿ ಪ್ರಕೃತಿಯ ಪೂಜೆಗಾಗಿ ನಾಗನ ಪೂಜೆಯಿತ್ತು. ಪ್ರಕೃತಿಯಲ್ಲಿ ಮೃತ್‍ಸ್ವರೂಪ ಅಂದರೆ ಚೇತನವಿಲ್ಲದ ಸ್ವರೂಪ ಬಿಟ್ಟರೆ ಚೇತನವಿರುವ ಸ್ವರೂಪ ನಾಲ್ಕು. ಯಾವುದು ಜೀವಾಂಶವಿದೆ ಅದು ಪ್ರಕೃತಿ. ಜೀವಚೈತನ್ಯ ಸ್ವರೂಪದಲ್ಲಿ ೪ ಭಾಗ ಪ್ರಕೃತಿಯಲ್ಲಿ ಸಿಗುತ್ತದೆ. ಅವು ನೀರು, ಅಗ್ನಿ, ವಾಯು, ಆಕಾಶ. ಈ ೪ ಭಾಗವನ್ನು ಸೂಚಿಸುವುದು ಚತುರ್ಥಿ. ಮನಸ್ಸು ವ್ಯವಹರಿಸುವುದು ಚಂದ್ರನ ಕಲೆಗಳ ಆಧಾರದಲ್ಲಿ. ದೈನದಿಂದ ತಿಥಿ ನಿರ್ಣಯವೂ ಚಾಂದ್ರಮಾನದಂತೆಯೇ ಆಗುತ್ತದೆ.

ಚಂದ್ರ ಎಂದರೆ ಷೋಡಶ ಕಲೆಯುಕ್ತವಾದದ್ದು. ಅವುಗಳು ಇಂತಿವೆ:-
“ ಅಮೃತಾ, ಮಾನದಾ, ಪೂಷಾ, ತುಷ್ಟಿ, ಪುಷ್ಟಿ, ರತಿ, ಧೃತಿ,
ಶಶಿನಿ, ಚಂದ್ರಿಕಾ, ಕಾಂತಿ, ಜ್ಯೋತ್ಸ್ನಾ, ಶ್ರೀ, ಪ್ರೀತಿ, ಅಂಗದ,
ಪೂರ್ಣ, ಪೂರ್ಣಾಮೃತ (ಭದ್ರದಾಯಿನಿ)”

ಚತುರ್ಥಿ ಎಂದಾಗ ಅಮೃತಾ, ಮಾನದಾ, ಪೂಷಾ ಎಂಬ ೩ ಕಲೆಗಳು ದಾಟಿ ತುಷ್ಟಿ ಕಲೆಯು ಬಂದಿರುತ್ತದೆ. ತುಷ್ಟಿ ಎಂದರೆ ತೃಪ್ತಿ, ಸಂತೃಪ್ತಿ ಎಂದರ್ಥ. ಈ ಕಲಾಂಶವನ್ನು ಬಿಂಬಿಸುವುದಕ್ಕೆ ಅಥವಾ ಅದನ್ನು ಪಡೆಯುವುದಕ್ಕೆ ನಾವು ಪ್ರಕೃತಿಯನ್ನು ನಾಗಚೌತಿ ಆಚರಣೆ ಮುಖೇನ ಪೂಜೆ ಮಾಡುತ್ತೇವೆ ಎನ್ನುವುದು ಮೂಲ ನಾಗಾರಾಧನೆಯ ಉದ್ದೇಶ. ಅದೇ ರೀತಿ ನೀರು, ಅಗ್ನಿ, ವಾಯು, ಆಕಾಶ ಎಂಬ ಪ್ರಕೃತಿಯ ೪ ಚೇತನಗಳ ಮುಖೇನ ಸಂತೃಪ್ತಿಯನ್ನು ಪಡೆಯುವ ಉದ್ದೇಶವೇ ನಾಗಚೌತಿ. ಪ್ರತಿಯೊಂದು ಜೀವಿಯೂ ಸಂತೃಪ್ತಿಯನ್ನು ಅಪೇಕ್ಷಿಸುತ್ತದೆ. ಇದನ್ನು ಅಪೇಕ್ಷಿಸಿ ಪೂಜಿಸುವ ಉದ್ದೇಶದಿಂದ ನಾಗಚೌತಿ ಪೂಜೆ ಬಳಕೆಗೆ ಬಂದಿತು.

ಸಂತೃಪ್ತಿಯು ಯಾವುದರಿಂದ ಉತ್ಪನ್ನವಾಯಿತು? ಒಬ್ಬನಿಗೆ ಹೊಡದುದರಿಂದ ಸಂತೋಷವಾಯಿತು, ಇನ್ನೊಬ್ಬನಿಗೆ ನೋವುಂಟಾಯಿತು, ಮತ್ತೊಬ್ಬನಿಗೆ ಪಾಪ ಅನ್ನಿಸಿತು. ಹೀಗೆ ಹೊಡೆದುದರ ಪರಿಣಾಮವಾಗಿ ಹಲವು ಪ್ರತಿಕ್ರಿಯೆಗಳು ಹೊರಹೊಮ್ಮಿದವು. ಹಾಗಾಗಿ ಅದರ ಮಾಪನ ಯಾವುದು? ಅದು ಮನಸ್ಸು. ಈ ಮನಸ್ಸು ಪರಿಣಾಮವನ್ನು ವಿಶ್ಲೇಷಿಸುತ್ತದೆ. ಒಂದೇ ಪರಿಣಾಮವು ಬೇರೆ ಬೇರೆ ಜನರಲ್ಲಿ ವಿಭಿನ್ನವಾಗಿ ವ್ಯಕ್ತವಾಗುತ್ತದೆ. ಆ ಬೇರೆ ಬೇರೆ ರೀತಿ ಯಾವುದು? ಅಂದರೆ ಅದು ಮನಸ್ಸು. ಬೇರೆ ಬೇರೆ ರೀತಿಯಲ್ಲಿ ವ್ಯಕ್ತವಾಗುವಂತೆ ಮಾಡುವುದು ಮನಸ್ಸು. ಮನಸ್ಸನ್ನು ಬಿಂಬಿಸುವ ಯಾವ ಕಲೆಯಿದೆ, ಆ ಕಲೆಯನ್ನು ನಾವು ಆರಾಧಿಸಿದರೆ ಮನಸ್ಸು ಪ್ರಕೃತಿಯೊಂದಿಗೆ ವ್ಯವಹರಿಸಿ ನಮಗೆ ಪರಿಪೂರ್ಣತೆಯನ್ನು ಕೊಡುತ್ತದೆ.

ಪಂಚಮಿಯ ದಿನದಂದು ಅಮೃತಾ, ಮಾನದಾ, ಪೂಷಾ, ತುಷ್ಟಿ ಕಲೆಗಳು ಕಳೆದು ಪುಷ್ಟಿ ಕಲೆಯ ಪ್ರಭಾವಕ್ಕೆ ಜನಮಾನಸವು ಸಿಗುತ್ತದೆ. ಪುಷ್ಟಿ ಎಂದರೆ ದೃಢತೆ. ಸಂತೃಪ್ತಿಗೆ ದೃಢತೆಯನ್ನು ಕೊಡುವುದು ಮನಸ್ಸು. ಹಾಗಾಗಿ ಚತುರ್ಥಿಯ ತುಷ್ಟಿಕಲೆಯಿಂದ ಸಂತೃಪ್ತಿ ಹೊಂದಿದ ಮನಸ್ಸಿಗೆ ದೃಢತೆಯನ್ನು ಕೊಡುವ ಕಲಾತತ್ತ್ವ ಯಾವುದೋ ಅದೇ ಪುಷ್ಟಿ ಕಲೆ. ಆಗ ಹಿಂದೆ ಹೇಳಿದ ಪೆಟ್ಟು ತಿಂದ ಉದಾಹರಣೆಯಲ್ಲಿ ಮನಸ್ಸಿಗೆ ದೃಢತೆ ಬಂದಿರುವುದರಿಂದ ಪೆಟ್ಟು ತಿಂದವನು ಯಾರೋ ಪುಣ್ಯಾತ್ಮ ಹೊಡೆದಿರುವುದು ಎಂದು ತಿಳದು ಸಂತೋಷ ಪಟ್ಟುಕೊಳ್ಳುತ್ತಾನೆ. ಈ ಪರಿಣಾಮಗಳು ಮನೋಭೂಮಿಕೆಯಲ್ಲಿ ಸಿದ್ಧವಾಗುವ ಪ್ರವೃತ್ತಿಗಳು. ಈ ಮನೋಭೂಮಿಕೆಯ ಆಧಾರದಲ್ಲಿ ಐದನೇ ವಿಶೇಷ ಕಲೆಗೆ ಪೂಜೆ ಆರಂಭವಾಯಿತು. ಈ ಕಲೆಯನ್ನು ಆರಾಧಿಸುವ ಪರಿಯೇ ನಾಗಪಂಚಮಿ ಪೂಜೆ.

ಮುಂದೆ ಈ ಮನೋಭೂಮಿಕೆಯನ್ನು ವಿಶ್ಲೇಷಿಸುತ್ತಾ ಹೋಗಿ ಬಹು ವಿಸ್ತೃತವಾಯಿತು. ಮನೋಭೂಮಿಕೆಯ ಹಿಡತವನ್ನು ಸಾಧಿಸಿ ಪ್ರಪಂಚದ ಎಲ್ಲಾ ಜೀವಿಗಳನ್ನು ಆಳುವಂತಹ ಸೂತ್ರವು ಕೂಡ ನಾಗಾರಾಧನೆಯಿಂದ ಬಳಕೆಗೆ ಬಂದಿತು. ತುಷ್ಟಿ ಕಲೆಯ ಪೂಜೆಯುಳ್ಳ ಚೌತಿ ಇರುವಾಗ ಸಮಸ್ಯೆಯು ಇರಲಿಲ್ಲ. ಚೌತಿಯು ಸಾತ್ವಿಕ ಗುಣವುಳ್ಳದ್ದು. ಅದು ಯಾವಾಗ ಪುಷ್ಟಿಕಲೆಯ ಪಂಚಮಿಯಾಗಿ ಎರಡನೆಯ ಹಂತಕ್ಕೆ ಬಂದಿತೋ ಆಗ ರಾಜಸಿಕ ಗುಣಕ್ಕೆ ಪರಿವರ್ತನೆಯಾಯಿತು. ಹಾಗಾಗಿ ಪುಷ್ಟಿಕಲೆಯ ಹಿನ್ನಲೆಯಲ್ಲಿ ರಾಜಸಿಕ ಗುಣವಿದೆ. ಅದು ಸದ್ಬಳಕೆಯೂ ಹಾಗೇ ದುರ್ಬಳಕೆಯೂ ಆಯಿತು. 

ಈ ರೀತಿಯಲ್ಲಿ ಮನಃಶಾಸ್ತ್ರಜ್ಞರು ಜೀವಿಗಳನ್ನು ಪೀಡಿಸುವುದಕ್ಕೆ ಆರಂಭಿಸಿದಾಗ, ಮನೋಭೂಮಿಕೆಯ ಮೇಲೆ ಹಿಡಿತ ಸಾಧಿಸಿ ಸಮಾಜಕ್ಕೆ ಕಂಟಕಪ್ರಾಯರಾದಾಗ ಈ ಷಷ್ಠೀ ಎಂದು ಹೇಳತಕ್ಕಂತಹಾ ಆರನೆಯ ಕಲೆಯ ಮುಖೇನ ಅವರನ್ನು ಹಿಡಿತಕ್ಕೆ ತರುವುದು. ಅದು ಸುಬ್ರಹ್ಮಣ್ಯ. ಅದಕ್ಕೆ ಷಡಕ್ಷರಸೂತ್ರ ಬಳಕೆಗೆ ಬಂದಿತು. ಷಷ್ಠಿಗೆ ಅಮೃತಾ, ಮಾನದಾ, ಪೂಷಾ, ತುಷ್ಟಿ, ಪುಷ್ಟಿ ದಾಟಿ ರತಿ ಕಲೆ ಬರುತ್ತದೆ. ಈ ರತಿ ಕಲೆಯಿಂದ ಸಮ್ಮೋಹಿಸಿ, ಆ ಮನಸ್ಸಿನ ಶಕ್ತಿಯನ್ನು ಹಿಡಿತಕ್ಕೆ ತಂದು ಮನಃಶಾಸ್ತ್ರಜ್ಞರನ್ನು ದಮನ ಮಾಡಿದರು. ಅದು ಇಡೀ ಪ್ರಪಂಚವ್ಯಾಪಿಯಾಯಿತು. ಪ್ರಪಂಚದ ಎಲ್ಲಾ ಕಡೆ ಇದ್ದ ನಾಗಾರಾಧನೆಯು ಮೂಲೋತ್ಪಾಟನೆಯಾಗಿ ನಿರ್ಮೂಲವಯಿತು. 

ಒಂದು ಕಾಲದಲ್ಲಿ ಪ್ರಪಂಚದ ಯಾವುದೇ ಭೂಮಿಯಲ್ಲೂ ಹೋಗಿ ನೋಡಿದರೂ ನಾಗಾರಾಧನೆ ಇದ್ದಿತು. ಈ ಭಾರತ ಮಾತ್ರವಲ್ಲ, ಇಡೀ ಪ್ರಪಂಚವ್ಯಾಪಿಯಾಗಿತ್ತು. ಈ ಆರನೆಯ ಕಲೆಯು ಮನಃಶಾಸ್ತ್ರಜ್ಞರನ್ನೂ ಸಮ್ಮೋಹಿಸುವ ಪ್ರವೃತ್ತಿಯ ಕಲೆ. ಯಾವಾಗ ಜನರಲ್ಲಿ ಈ ಕಲೆಯನ್ನು ಬಿಂಬಿಸಿ ಅವರ ಮನಸ್ಸಿನ ಮೇಲೆ ಮನಃಶಾಸ್ತ್ರಜ್ಞರು ಸಮ್ಮೋಹನ ಮಾಡುತ್ತಾ ಬಂದರೋ, ಅವರನ್ನೇ ಸಮ್ಮೋಹಿಸಿ ತರುವ ಸೂತ್ರವನ್ನು ಪ್ರಯೋಗಿಸಿದಾಗ ಪ್ರಪಂಚವ್ಯಾಪಿಯಾಗಿದ್ದ ನಾಗಾರಾಧನೆಯು ನಿರ್ಮೂಲವಾಯಿತು. ಎಲ್ಲೂ ನಾಗಾರಾಧನೆಯು ಇಲ್ಲದಂತೆ ನಾಶವಾಯಿತು ಎನ್ನುವ ಮಟ್ಟಕ್ಕೆ ಬಂದಾಗ ಸ್ವಲ್ಪವೇ ಉಳಿದ ಪ್ರದೇಶವೇ ಕೇರಳ ಮತ್ತು ದಕ್ಷಿಣ ಕನ್ನಡ. ಬೇರೆ ಕೆಲವು ಕಡೆ ಸುಬ್ರಹ್ಮಣ್ಯ ಆರಾಧನೆ ಬಿಟ್ಟರೆ ನಾಗಾರಾಧನೆ ಇಲ್ಲ. ಅದು ಉಳಿದದ್ದು ಜನಮೇಜಯನ ಸರ್ಪಯಾಗ ಪ್ರಕರಣದಿಂದ. ಎಲ್ಲಾ ಕಡೆ ಮನಃಶಾಸ್ತ್ರ ನಾಶವಾಗುತ್ತಾ ಬಂದಾಗ ಅದು ಉಳಿಯಬೇಕೆನ್ನುವ ಉದ್ದೇಶದಿಂದ, ಅದೂ ಕೂಡ ಉಪಯುಕ್ತ ವಿಧ್ಯೆಯಾದ್ದರಿಂದ, ಅದು ಸಂಪೂರ್ಣ ನಾಶವಾಗಲು ಬಿಡಬಾರದು, ಅದನ್ನು ಉಳಿಸಲು ವಿದ್ವಾಂಸ ಮಟ್ಟದ ಎಲ್ಲರೂ ಸೇರಿ ಚರ್ಚಿಸಿ ಈ ಪ್ರದೇಶದಲ್ಲಿ ಮನಃಶಾಸ್ತ್ರ ಉಳಿದುಕೊಂಡು ಬರಲಿ ಎಂದು ತೀರ್ಮಾನಿಸಿದರು. ಉಳಿಸಿದ್ದು ೮ ಕುಲ ನಾಗಗಳನ್ನು ಎಂಬ ಕಥೆಯ ಮೂಲಕ ತಿಳಿಸಿದ್ದಾರೆ. ಇಲ್ಲಿ ಮಾತ್ರ ಸುಬ್ರಹ್ಮಣ್ಯ ಮತ್ತು ನಾಗ ಒಟ್ಟಾಗಿ ಆರಾಧನೆ ನಡೆಯಲಿ ಎಂದು ನಿರ್ದೇಶನವಾಯಿತು. 

ನಾಗಪ್ರತಿಷ್ಠೆಗೊಂಡಿರುವ ಸ್ಥಳವನ್ನು ಚಿತ್ರಕೂಟ ಎನ್ನುತ್ತಾರೆ. ಇಲ್ಲಿ ಚೌತಿಭಾಗವು ನಿಕ್ಷೇಪವಾಗಿರುತ್ತದೆ. ಚಿತ್ರ ಎಂದರೆ ೫. ಗಜಶಾಲಾ ಮೃತ್ತಿಕೆ, ಅಶ್ವಶಾಲಾ ಮೃತ್ತಿಕೆ, ಗೋಶಾಲಾ ಮೃತ್ತಿಕೆಗಳಿಗೆ ಊರ್ಧ್ವಲೋಕಗಳನ್ನು ಹಾಗೂ ವಲ್ಮೀಕ ಮೃತ್ತಿಕೆ ಮತ್ತು ನದೀತಟಾಕ ಮೃತ್ತಿಕೆಗಳಿಗೆ ಅಧೋಲೋಕಗಳನ್ನು ಆಹಾನೆ ಮಾಡಿ ಐದು ಕೂಟಗಳನ್ನು ಮಾಡಿ ಪ್ರತಿಷ್ಠಾಪಿಸಿದಾಗ ಅದು ಚಿತ್ರಕೂಟವಾಗುತ್ತದೆ. ಚಿತ್ರ ಎಂದರೆ ವರ್ಣ ಎಂದೂ ಅರ್ಥವಿದೆ. ನಾಗನಲ್ಲಿ ೫ ವರ್ಣವಿರುತ್ತದೆ:
೧. ನಾಗನ ಕಣ್ಣು ಕೆಂಪಾಗಿರುತ್ತದೆ.
೨. ನಾಗನ ನಾಲಿಗೆ ಕಪ್ಪಾಗಿರುತ್ತದೆ.
೩. ಮೈಬಣ್ಣ ಹಳದಿಯಾಗಿರುತ್ತದೆ.
೪. ಹೊಟ್ಟೆಯ ಭಾಗ ಬಿಳಿಯಾಗಿರುತ್ತದೆ.
೫. ಕುತ್ತಿಗೆಯ ಹತ್ತಿರ ವಿಷವಿದ್ದ ಭಾಗದಲ್ಲಿ ಹಸಿರು ಇರುತ್ತದೆ, ಅದರ ಮೇಲಿನ ಚರ್ಮವು ನೀಲಿಯಾಗಿ ಕಾಣುತ್ತದೆ.

ಈ ೫ ವರ್ಣಗಳು ದೃಷ್ಟಾಂತವಾಗಿ ಹಾವಿನಲ್ಲಿ ಕಾಣಸಿಗುತ್ತದೆ. ಆದರೆ ಪಂಚವರ್ಣ ಮುಖ್ಯವೇ ಹೊರತು ಹಾವಲ್ಲ. ಈ ಪಂಚವರ್ಣವನ್ನು ಸಂಯೋಜಿಸಿ ನಾಗಪೂಜೆ ಮಾಡುವುದು. ಪ್ರತಿವರ್ಷ ಚಿತ್ರಕೂಟದಲ್ಲಿ ಪ್ರಕೃತಿ ಸ್ವರೂಪದಿಂದ ಮೂಲ ಪ್ರಸಾದವನ್ನು ತೆಗೆಯುತ್ತಾರೆಯೇ ಹೊರತು ನಾಗಸ್ವರೂಪದಿಂದಲ್ಲ. ಕಂಬಳಾದಿ ಅಷ್ಟಕುಲ ನಾಗಪೂಜೆಯಲ್ಲಿ ಒಂದು ಗಿಡ ನೆಡುವುದು. ಅದು ವಟಿಯಾಗಿ ಮಾಡುವುದಕ್ಕಾಗಿ. ವಟೀ ಎಂದರೆ ಪ್ರಕೃತಿಗೆ ಹೊರ ಬರವ ಸ್ವರೂಪವನ್ನು ಕೊಡುವುದು. ಅದು ಐದು ರೀತಿಯ ಗುಣಾತ್ಮಕ ರೂಪದಲ್ಲಿ ಹೊರಬರಬಹುದು. ಹಾಗಾಗಿ ಅದು ಪಂಚವಟೀ ಆಯಿತು. ಅದರಲ್ಲಿ ಒಂದು ಭೌತಿಕಸ್ವರೂಪವಾದ ನಾಗವಾಗಿ ಹೊರಬರುತ್ತದೆ. ಅದರಂತೆ ಪ್ರಕೃತಿಯಿಂದ ವಿಭಜಿಸಲ್ಪಟ್ಟು ಐದು ತತ್ತ್ವಗಳಿಗೆ ಅನುಗುಣವಾಗಿ ನಾಗವಾಗಿ ಹೊರಬರುತ್ತದೆ. ಅದು ಐದು ರೀತಿಯ ಸ್ವರೂಪವಾದ್ದರಿಂದ ಅದು ಕಾಣಿಸುವುದಿಲ್ಲ. ಈ ಹೊರಬರುವ ಪ್ರಕ್ರಿಯೆಗೆ ವಟಿ ಎಂದು ಕರೆಯುತ್ತಾರೆ.

ನಾಗನಾಗಿ ಆರಾಧನೆ, ಪೂಜೆ ಇರುತ್ತದೆ. ಮುಂದೆ ನಾಗನಿಗೆ ಸೇವಾಯೂಪದಲ್ಲಿ ಢಕ್ಕೆಬಲಿ ಸೇರಬಹುದು. ಪಂಚವಟಿಯಾದಾಗ ನಾಗವಾಯಿತು. ಅದು ಯಕ್ಷೆಯಾದಾಗ ಢಕ್ಕೆಬಲಿ ಸೇವೆಗೆ ಅರ್ಹವಾಗುತ್ತದೆ. ನಾಗವು ಪಿತೃಸ್ವರಪವನ್ನು ದಾಟಿ ಯಕ್ಷೆ ಆಗಬೇಕು. ಯಕ್ಷೆಯಾಗಬೇಕಾದರೆ ಮೊದಲು ನಾಗವು ಪಿತೃ ಹಂತಕ್ಕೆ ಬರಬೇಕು. ಅಲ್ಲಿ ಆಕಾಶ, ವಾಯು, ಅಗ್ನಿ, ಜಲ, ಭೂಮಿ ಎಂಬ ಪಂಚಭೂತಗಳ ದ್ಯೋತಕವಾದ ಶಬ್ದ, ಸ್ಪರ್ಷ, ರೂಪ, ರಸ, ಗಂಧ ಎಂಬ ಪಂಚತನ್ಮಾತ್ರಗಳಿವೆ. ಆ ಪಂಚತನ್ಮಾತ್ರಗಳ ಮುಖೇನ ಆರಾಧಿಸಿದಾಗ ನಾಗವು ಪಿತೃಹಂತಕ್ಕೆ ಬರುತ್ತದೆ. ಹಾಗಾಗಿ ನಾಗಪಿತೃ ಸ್ವರೂಪದಲ್ಲಿ ಹಿರಿಯರಿಗೆ ಎಡೆ ಇಡುವ ಪರಿಪಾಠವೂ ಬೆಳೆದು ಬಂದಿದೆ. ಪಿತೃಹಂತದಿಂದ ಮೇಲೆ ಬಂದಾಗ ಯಕ್ಷೆಯ ಸ್ವರೂಪ, ಅಥವಾ ಪಂಚಕೋಶಾವಸ್ಥೆಯನ್ನು ಕೊಡುತ್ತದೆ. ಪಂಚಕೋಶಗಳೆಂದರೆ ಪ್ರಕೃತಿ ಹಾಗೂ ದೇಹದಲ್ಲಿಯೂ ಅಡಕವಾಗಿರುವ ಅನ್ನಮಯಕೋಶ, ಪ್ರಾಣಮಯಕೋಶ, ಮನೋಮಯಕೋಶ, ವಿಜ್ಞಾನಮಯಕೋಶ, ಆನಂದಮನಕೋಶ. ಯಕ್ಷೆಯ ಸ್ವರೂಪ ಎಂದರೆ ಸಮ್ಮೋಹನಾವಸ್ಥೆ. ಅದಕ್ಕಾಗಿಯೇ ಅದು ನಾಗನಿಂದ ಸಮ್ಮೋಹನವಾಗುವುದು.

ವರ್ತಮಾನ ಸ್ವರೂಪದಲ್ಲಿ ನಾಗ ಎಂದು ಕರೆದರು. ಇದು ಸಾತ್ವಿಕ ಸ್ವರೂಪ. ಪ್ರಾತಃ ಕಾಲ ಬ್ರಾಹ್ಮಿ ಮುಹೂರ್ತದಲ್ಲಿ ಶುದ್ಧ ಸಾತ್ವಿಕ ಮನೋರೂಪದಲ್ಲಿ ಪ್ರಕತಿಯ ನಾಗ ಸ್ವರೂಪದಲ್ಲಿ ವ್ಯಕ್ತವಾಗುತ್ತದೆ. ಅದಕ್ಕೆ ಡಮರು ವಾದನ ಸಹಿತ ಪೂಜೆಯಾಗುತ್ತದೆ. ಪಂಚಮಿಯಂದು ನಾಗ ಪ್ರತಿಷ್ಠೆಯಾದ ನಂತರ ಕಂಬಳಾದಿ ಅಷ್ಟಕುಲನಾಗ ಪೂಜೆ; ಅದರಲ್ಲಿ ವಾದ್ಯ, ಮೇಳಾ, ಶ್ರುತಿ, ಮೌರಿ ವಾದನೆಯೊಂದಿಗೆ ಬಲಿಹರಣ, ಪುಷ್ಪಾರ್ಚನೆ ಆಗುತ್ತದೆ. ಅದರ ನಂತರ ಪಂಚಾಂಗ ನ್ಯಾಸಪೂರ್ವಕವಾಗಿ ನಾಗವು ಪಿತೃಸ್ವರೂಪ ಅಂದರೆ ಭೂತಕಾಲ ಸ್ವರೂಪವನ್ನು ಪಡೆಯುತ್ತದೆ. ಇದು ರಾಜಸಿಕವಾಗಿರುತ್ತದೆ. ಹಾಗಾಗಿ ಮುಂಜಾವಿನ ನಂತರ ನಿಮಗೆ ಸಿಗುವುದು ರಾಜಸಿಕವಾದ ನಾಗಪಿತೃ ಸ್ವರಪ ಮಾತ್ರ. ಮಧ್ಯಾಹ್ನ ನಂತರ ಕೋಶನಾಸ್ಯವಾದಾಗ ಭವಿಷ್ಯತ್ಕಾಲ ರೂಪೀ ಯಕ್ಷೆ ಸ್ವರೂಪವನ್ನು ಪಡೆಯುತ್ತದೆ. ಆ ಯಕ್ಷೆಯು ತಾಮಸಿಕ ಶಕ್ತ್ಯಾತ್ಮಕವಾಗಿರುತ್ತದೆ. ಈ ನಾಗರೂಪೀ ಯಕ್ಷನಿಗೆ ಗಾನ, ತಾಡನಾದಿ ನರ್ತನೆಗಳಿಂದ ಅರ್ಚನೆ, ರಾಜೋಪಚಾರ ಪೂರ್ವಕ ರಾಷ್ಟ್ರಾಶೀರ್ವಾದ ಬಿನ್ನಹ ಗೈಯ್ಯಲಾಗುತ್ತದೆ. 

ನಾಗ ಚೌತಿಯ ದಿವಸ ಭೂಮಿಯ ಉಳುಮೆಯು ನಿಷೇಧ ಎಂದು ಹೇಳಲಾಗಿದೆ. ಭೂಮಿಯ ಯಾವುದನ್ನೂ ಅಗೆಯುವಂತಿಲ್ಲ. ಚೌತಿಯ ದಿನ ಪ್ರಕೃತಿಯಲ್ಲಿ ಸೇರಿಹೋಗಿರತಕ್ಕಂತಹಾ ನಾಗ ಪೂಜೆ. ಅಲ್ಲಿಯವರೆಗೆ ಮನಸ್ಸಿನ ಪ್ರವೃತ್ತಿ ಎಂಬ ನಾಗವು ಭೂಮಿಯ ಒಳಗೆ ಅಂದರೆ ಸುಪ್ತಾವಸ್ಥೆಯಲ್ಲಿರುತ್ತದೆ. ಅವಾಗಲೇ ಹುತ್ತಕ್ಕೆ ಹಾಲು ಎರೆಯುವುದು, ಹುತ್ತಕ್ಕೆ ಪೂಜೆ ಮಾಡುವುದು ಕರ್ತವ್ಯ. ಏಕೆಂದರೆ ಆಗ ನಾಗ (ಮನಸ್ಸು) ಪ್ರಕೃತಿಯಲ್ಲಿ ಸೇರಿ ಹೋಗಿರುತ್ತದೆ, ಅರ್ಥವಾಯ್ತೇ? ಅದು ಪಂಚಮಿಯಂದು ಪ್ರಕಟವಾಗುತ್ತದೆ. ಆಗ ಭೂಮಿಗೂ ಅದಕ್ಕೂ ಸಂಬಂಧವಿರುವುದಿಲ್ಲ. ಆದರೆ ಕೆಲಕಡೆ ಪಂಚಮಿಯಂದೇ ಹಾಲು ಎರೆಯುತ್ತಾರೆ. ಅದು ಪ್ರಾದೇಶಿಕ ವ್ಯತ್ಯಾಸದಿಂದ ಬಂದಂತಹದ್ದು. ಆದರೆ ಆಚರಣೆಯ ಉದ್ದೇಶ ಮಾತ್ರ ಎಲ್ಲ ಕಡೆಯೂ ಒಂದೇ ಸಮಾನವಾಗಿತ್ತು. ನಾಗಷಷ್ಠಿಯ ದಿವಸವೂ ಭೂಮಿ ಉಳಬಾರದೆಂಬ ಕಲ್ಪನೆಯು ಕೆಲ ಕಡೆ ಇದೆ. ಆದರೆ ಷಷ್ಠಿಗೂ ಭೂಮಿಗೂ ಸಂಪರ್ಕವಿರುವುದಿಲ್ಲ. ಅಲ್ಲಿ ನಾಗಭವ್ಯ ಆಗಿರುತ್ತದೆ. ಅದು ಕೇರಳೀಯ ಪದ್ಧತಿ. ಹೆಚ್ಚಾಗಿ ರಾತ್ರಿಕಾಲದಲ್ಲಿ ನಡೆಯುವ ಪ್ರಕ್ರಿಯೆಗಳಾಗಿರುತ್ತದೆ. ಆದರೆ ದಕ್ಷಿಣ ಕನ್ನಡದಲ್ಲಿ ಮಧ್ಯಾಹ್ನದ ನಂತರ ಹಲವು ಕಡೆ ನಾಗನ ಪೂಜೆಯನ್ನೇ ಮಾಡುವುದಿಲ್ಲ. ಏಕೆಂದರೆ ಅದು ನಾಗವರ್ತಮಾನ ಸ್ವರೂಪ. 

ಕೆಲ ಕಾಲ ನಾಗನಿಗೆ ಗೋವಿನ ಯಾವುದೇ ವಸ್ತುಗಳು ಬಳಸದಂತೆ ದಕ್ಷಿಣ ಕನ್ನಡದಲ್ಲಿ ನಿರ್ಬಂಧವಿದ್ದಿತು. ಆಗೆಲ್ಲಾ ಜೇಡಿಯಿಂದ ಶೋಚಿಸಲ್ಪಟ್ಟ ನೀರನ್ನೇ ಕ್ಷೀರಾಭಿಷೇಕವಾಗಿ ನಾಗನಿಗೂ ಬಳಸುತ್ತಿದ್ದರು. ಅಂತಹಾ ಪರಿಸ್ಥಿತಿಯಲ್ಲಿ ಪಂಚಗವ್ಯವೂ ಜೇಡಿಮಣ್ಣಿನ ನೀರಿನಿಂದ ಮಾಡಿಕೊಡುತ್ತಿದ್ದರು. ಹಾಲಿಗೆ ಪ್ರತ್ಯಾಮ್ನಾಯವಾಗಿ ನಾಗನಿಗೆ ಹೇಳಿರುವುದು ಹಾಲಿಟ್ಟು ಸೇವೆ ಎಂದು. ಅಂದರೆ ಭತ್ತದ ತೆನೆಯ ಹಾಲು. ಮಹಾಭಾರತದಲ್ಲೂ ಇದಕ್ಕೆ ಉದಾಹರಣೆ ಸಿಗುತ್ತದೆ. ಅಶ್ವತ್ಥಾಮನು ೧೪ ವರ್ಷದವನಾಗುವವರೆಗೂ ಇದೇ ಹಾಲನ್ನು ಕುಡಿಯುತ್ತಿದ್ದನು. ಹಾಲಿನ ಎಲ್ಲ ಪೌಷ್ಠಿಕತೆತನ್ನು ಅಕ್ಕಿಯನ್ನು ಕಡೆದು ತಯಾರಿಸುವ ಹಾಲಿನಿಂದಲೂ ಸಾಧ್ಯ. ಹಾಗೆ ಮುಂದೆ ತೆಂಗಿನ ಹಾಲೂ ಬಳಕೆಗೆ ಬಂದಿತು.ವೇದವೇ ಹೇಳುತ್ತದೆ ಕರವಾಳಿಯು ಗೋಸಾಕಾಣಿಕೆಗೆ ಸೂಕ್ತ ಸ್ಥಳವಲ್ಲ. ಅದು ಉಪ್ಪುನೀರು ಹಾಗೂ ಉಷ್ಣ ಪ್ರದೇಶ. ಹಾಗಾಗಿ ಹಿಂದೆ ಕರಾವಳಿಯಲ್ಲಿ ಸಾಮಾನ್ಯವಾಗಿ ಗೋಸಾಕಾಣಿಕೆ ಬಹಳ ಕಷ್ಟವಾಗಿತ್ತು. ಹಾಗಾಗಿ ಅಕ್ಕಿಪುಡಿ, ಶೇಡಿ (ಜೇಡಿ) ಪುಡಿ ಕಲೆಸಿ ಹಾಲೆಂದು ಸ್ವೀಕರಿಸುತ್ತಿದ್ದರು. ನಂತರ ಬೇರೆ ಬೇರೆ ರಾಜರ ಆಡಳಿತಗಳ ಪ್ರಭಾವವು ದಕ್ಷಿಣ ಕನ್ನಡದ ಮೇಲೆ ಉಂಟಾಯಿತು. ಗೋವಿನ ಅಷ್ಟು ಬಳಕೆಯಿಲ್ಲದ ರಾಷ್ಟ್ರಕೂಟ ಪ್ರದೇಶದಿಂದ ಬಂದ ಕದಂಬರು ಬನವಾಸಿಯಲ್ಲಿ ಬೋಧಾಯನ ಸೂತ್ರೋಕ್ತ ಜೀವನ ವಿಧಾನ ತಿಳಿದು ಸೂಕ್ತ ಆಹಾರ ಪದ್ಧತಿ ಮತ್ತು ಗೋವಿನ ಉತ್ಪನ್ನಗಳನ್ನು ಬಳಕೆಗೆ ತಂದರು. ಬನವಾಸಿಯ ಕದಂಬರು ಮತ್ತು ಪಲ್ಲವರ ಕಾಲದಲ್ಲಿ ಗೋಸಾಕಾಣಿಕೆಗೆ ಪ್ರಾಧಾನ್ಯತೆ ದೊರೆತು ದಕ್ಷಿಣ ಕನ್ನಡ ಪ್ರದೇಶದಲ್ಲಿ ದನದ ಹಾಲು ಬಳಕೆಯು ಹೇರಳವಾಯಿತು. ಅದನ್ನು ಸೌರಾಷ್ಟ್ರದವರೆಗೂ ಖ್ಯಾತಿಗೊಳಿಸಿದರು. ಆಗ ನಾಗ ಪ್ರತಿಮೆಗೆ ಹಾಲು ಎರೆಯುವ ಪದ್ಧತಿ ಚಾಲ್ತಿಗೆ ಬಂದಿತು. ಅದರ ಕುರುಹು ಎಂಬಂತೆ ಈಗಲೂ ದಕ್ಷಿಣ ಕನ್ನಡದ ಕೆಲ ಜನಾಂಗದವರು ಹಾಲು, ಮೊಸರುಗಳನ್ನು ಸ್ವೀಕರಿಸುವುದೇ ಇಲ್ಲ. ಕೆಲ ಕಡೆ ನಾಗನಿಗೆ ಮೊಟ್ಟೆ ಇತ್ಯಾದಿ ಇಡುತ್ತಾರೆ. ಆದರೆ ಅದು ಯಾವುದೋ ಬೇರೆ ಪ್ರದೇಶದ ಯಾವುದೋ ಆಚರಣೆಯನ್ನು ಇಲ್ಲಿ ಸೇರಿಸಿದ ಪರಿಣಾಮವೇ ಹೊರತು ಮೂಲ ನಾಗಾರಧನೆಯಲ್ಲಿ ಇದಕ್ಕೆಲ್ಲ ಅವಕಾಶವೇ ಇಲ್ಲ.


ಮನಸ್ಸು ವ್ಯವಹರಿಸಲಿಕ್ಕೆ ಇರತಕ್ಕಂತಹ ನಾಲ್ಕ ರಥಗಳೆಂದರೆ ನಾಲ್ಕ ಇಂದ್ರಿಯಗಳು. ಪ್ರವೃತ್ತ ಮನಸ್ಸಿನ ಸಂಕೇತವಾಗಿ ಹೆಡೆ ಎತ್ತಿದ ನಾಗಸ್ವರೂಪ. ನಾಗಸ್ವರೂಪ ಹೆಡೆಮುಚ್ಚಿದಾಗ ಮನಸ್ಸು (ಜ್ಞಾನ) ಸುಪ್ತ. ಮನುಷ್ಯನು ಸಹಜ ಜೀವನ ವಿಧಾನದಿಂದ ಆಧ್ಯಾತ್ಮದ ತುತ್ತತುದಿಗೆ ಏರಿದರ, ಅಂದರೆ ಮನಸ್ಸನ್ನು ಗೆದ್ದರೆ ಮನಸ್ಸೇ ಅವನಿಗ ಆಭರಣವಾಗುತ್ತದೆ. ಹಾಗಾಗಿ ಅದನ್ನು ಸಾಧಿಸಿದ ಶಿವನು ನಾಗಾಭರಣನಾದ. ಪ್ರಾಪಂಚಿಕ ಪೋಷಣೆಗೆ ಒಂದು ಹದ್ದುಬಸ್ತು ತರುವದರ ದ್ಯೋತಕವಾಗಿ ಪ್ರಕೃತಿಯ ಸ್ವರಪವಾದ ಗಣಪತಿಯು ನಾಗನನ್ನು ಹೊಟ್ಟೆಗೆ ಕಟ್ಟಿಕೊಂಡನು. ಮನಸ್ಸಿನ ನಾನಾ ವಿಕೃತ ವ್ಯವಹಾರಗಳನ್ನು ಸುಬ್ರಹ್ಮಣ್ಯನು ಮಯೂರ (ನವಿಲು) ಸೂತ್ರದ ಮುಖೇನ ಮೆಟ್ಟಿ ನಿಂತನು. ವಿಷ್ಣುವು ಆದಿಶೇಷನ ಹೆಡೆಯ ಅಡಿಯಲಿ ಮಲಗಿ, ಮನೋನಿಗ್ರಹ ಗೈಯುತಿರೆ ಮದನನನ್ನೇ ಮಗನನ್ನಾಗಿ ಪಡೆದು ಲೋಕಕ್ಕಿತ್ತು ಪೋಷಣಾ ನಿರಂತರತೆ ಕಾಯ್ದನು. ಸಹಸ್ರ ಹೆಡೆಯುಳ್ಳ ಆದಿಶೇಷ ಎಂದರೆ ಮನಸ್ಸಿನ ವ್ಯವಹಾರ ಅಷ್ಟು ಅಗಾಧ ಎಂದರ್ಥ. ಹಾಗಾಗಿ ಆದಿಶೇಷ ಎಂಬ ಮನೋಬಲವೇ ಒಟ್ಟು ಅಗಾಧ ಮನೋಪ್ರಭೇದಗಳು ಎಂಬ ಭೂಮಿಯನ್ನು ಹೊತ್ತು ನಿಂತಿದ್ದಾನೆ ಎಂದರ್ಥ. ಸಾವಿರ ತಲೆ ಎಂದರೆ ಅಷ್ಟು ವಿಚಾರದ ಮಂಥನ ಆಗುತ್ತಿರುತ್ತದೆ ಎಂದರ್ಥ. ನಾಗನಿಗೂ ಷಟ್ಚಕ್ರಗಳಿಗೂ ಅವಿನಾಭಾವ ಸಂಬಂಧವಿದೆ. ಭೂಮಿಯ ಸಪ್ತಪಥಗಳಲ್ಲಿ ಮನೋಭೂಮಿಕೆಯ ಮೇಲೆ ಪ್ರಭಾವ ಬೀರುವ ನಾಗಪಥ ಎಂಬುದಿದೆ. ಅದನ್ನೇ ನಾಗನಡೆ ಎಂದರು. ಆ ನಾಗಪಥದ ಪರಿಣಾಮ ಹೆಚ್ಚಾಗಿರುವ ದಕ್ಷಿಣ ಕನ್ನಡದಂತಹಾ ಪ್ರದೇಶದಲ್ಲಿ ಮನೋ ಹಿಡಿತವನ್ನು ಸಾಧಿಸಲಿಕ್ಕೆ ನಾಗಾರಾಧನೆ ಬೇಕೇ ಬೇಕು! ಕಾಳಾವರ, ಕಂದಾವರಾದಿ ಪ್ರದೇಶಗಳಲ್ಲಿ ಹೆಚ್ಚು ಪರಿಣಾಮವಿರುವ ನಾಗಬಿಂದುಗಳೆಂದು ಗುರುತಿಸಿದರು. ಈ ಪಥಗಳೆಲ್ಲ ವೇದೋಕ್ತ ಭೌತಶಾಸ್ತ್ರದ ಭೂಗರ್ಭಶಾಸ್ತ್ರದಲ್ಲಿ ಸವಿಸ್ತಾರವಾಗಿದೆ. ಅದರ ಸಮತೋಲನೆಯಿಂದಲೇ ಉತ್ಪಾತಗಳಾಗದಂತೆ ತಡೆಯಲು ಸಾಧ್ಯ. ಅದಕ್ಕೆ ಬೇಕು ದೇವಾಲಯಗಳು, ಆರಾಧನೆಗಳು, ಪೂಜಾ, ಉತ್ಸವಾದಿ ಶುದ್ಧ ವೈಜ್ಞಾನಿಕ ಪ್ರಕ್ರಿಯೆಗಳು. 

ಸ್ನಾನ ಮಾಡುವುದು ಮಡಿಯಲ್ಲ, ಒದ್ದೆ ಬಟ್ಟೆ ಉಟ್ಟುಕೊಳ್ಳುವುದು ಮಡಿಯಲ್ಲ. ಹಾವು ಹೇಗೆ ಪೊರೆ ಕಳಚುತ್ತದೆಯೋ ಹಾಗೆ ಮನಸ್ಸಿನ ಪೊರೆಯನ್ನು ಕಳಚಿದರೆ ಮಾತ್ರ ಮಡಿ, ಅಂದರೆ ಇಡೀ ಪ್ರಪಂಚವೇ ಶುದ್ಧವಾಗುತ್ತದೆ. ಅದು ನಾಗಾರಾಧನೆಯ ಉದ್ದೇಶ. ಅದನ್ನು ಸಾಧಿಸಿದರೆ ಪ್ರಪಂಚಕ್ಕೇ ನಾಗ ಚಿಕಿತ್ಸಕರಾಗಬಹುದು. 

ಹೀಗೆ ವಿವರಿಸುತ್ತಾ ಹೋದರೆ ನಾಗನ ಅನಂತತೆಯು ಅನಾವರಣಗೊಳ್ಳುತ್ತಾ ಸಾಗುತ್ತಲೇ ಇರುತ್ತದೆ.

No comments:

Post a Comment