Saturday, 7 September 2013

ಗೌರಿ-ಗಣೇಶ ಹಬ್ಬದ ವೈಜ್ಞಾನಿಕ ಹಾಗೂ ತಾತ್ವಿಕ ನೆಲೆಗಟ್ಟು

ಸ್ವರ್ಣ ಗೌರೀವೃತ:- ಭಾದ್ರಪದ ಶುದ್ಧ ತೃತೀಯ ಪ್ರಾತಃ ಸಂಧ್ಯಾ ಕಾಲ

ಭಾದ್ರಪದ ಶುದ್ಧ ತೃತೀಯಾದಂದು ಆಚರಿಸುವ ವೃತವು ವಿನಾಯಕ ವೃತದ ಪೂರ್ವದಲ್ಲಿ ಬರುತ್ತದೆ. ಆದರೆ ವಿನಾಯಕನ ವೃತಕ್ಕೂ ಇದಕ್ಕೂ ಏನೂ ಸಂಬಂಧವಿಲ್ಲ. ಸ್ತ್ರೀಯು ತನ್ನ ತೇಜಸ್ಸು ವೃದ್ಧಿಗಾಗಿ ವೃತಾಚರಣೆ ಮಾಡಬೇಕು. ಇಲ್ಲಿ ಗೌರೀ ಎಂಬ ಶಬ್ದವು ಗೋ, ಪರ್ವತ, ನದೀ, ನದ, ನಭ, ನಕ್ಷತ್ರದಲ್ಲಿರತಕ್ಕ ನಾಣ್ಯ. ಅಂದರೆ ವಿಶೇಷಗಳನ್ನು ಕುರಿತು ಅನುಷ್ಠಿಸುವ ಸ್ವ+ಅರಣಿ ಎಂಬ ವೃತ. ತನಗೆ ತಾನೇ ಆರಣಿಯಾಗಿ (ಅರಣಿ = ಅಗ್ನಿಮಂಥ / ಪ್ರೇಮ್ನಾ ಲ್ಯಾಟಿಫೋಲಿಯಾ. ಅರಣಿಯ ಅನ್ವರ್ಥಕ ರೂಪವೇ ಆರಣಿ) ತಾನೇ ವ್ಯವಹರಿಸಿ ಷಡ್ವಿಧ ಪ್ರಕೃತಿಯಲ್ಲಿರತಕ್ಕ ವಿಶೇಷಗಳನ್ನು ತನ್ನಲ್ಲಿ ಸೇರಿಸಿಕೊಳ್ಳುವುದು ವೃತವಾಗಿರುತ್ತದೆ. ಸಹಜ ಸಮಾಜದ ಅಳಿವು ಉಳಿವು ಸ್ತ್ರೀಯ ಕೈಯಲ್ಲಿದೆ. ಹಾಗಾಗಿ ಸ್ತ್ರೀಯು ತನ್ನ ಸಾಮರ್ಥ್ಯ ವೃದ್ಧಿಗಾಗಿ ಮಾಡುವ ವೃತ ನಿಯಮಗಳೇ ಅವಳಿಗೆ ಪೂರಕ. ಅಂತಹಾ ಶ್ರೇಷ್ಠ ವೃತಗಳಲ್ಲೊಂದು ಸ್ವರ್ಣಗೌರೀವೃತ.

ಮೃತ್ತಿಕಾ ಗೌರೀವೃತ:- ಭಾದ್ರಪದ ಶುದ್ಧ ತೃತೀಯ ಯುಕ್ತ ಚೌತಿ ಸಾಯಂ ಸಂಧ್ಯಾಕಾಲ


ವೃತದ ಉದ್ದೇಶವು  ಭುವಿಯ ಸಹಜ ಮೃತ್ ಸ್ವರೂಪವು ಹೇಗೆ ಚೈತನ್ಯ ಪಡೆದು ಜೀವ ತಳೆದು ಜೀವಿಯಾಗಿ ವ್ಯವಹರಿಸುತ್ತದೆ ಎಂಬುದನ್ನು ಅನುಭವಕ್ಕೆ ಗೋಚರಿಸಿಕೊಳ್ಳುವುದಾಗಿರುತ್ತದೆ. ಅದಕ್ಕೆ ಪೂರಕವಾಗಿ ಹಿಂದಿನ ಅಸ್ತವೇ ಮರುದಿನ ಉದಯಕ್ಕೆ ನಾಂದಿಯೆಂಬ ಸತ್ಯ ಬೋಧಕವೂ ಹೌದು. ಸಂಧ್ಯಾಕಾಲದಲ್ಲಿ ಆಚರಿಸುವ ವೃತವು ವರಸಿದ್ಧಿವಿನಾಯಕ ವೃತದ ಪೂರಕ ವೃತವಾಗಿರುತ್ತದೆ. ಮೃತ್ತಿಕಾ ರೂಪವು ವಿನಾಯಕವಾಗಿ ವ್ಯವಹರಿಸುವಂತೆ ಮಾಡಲು ಮಾತೃಕೆಯು ಚೈತನ್ಯವು ತುಂಬುತ್ತದೆ ಎಂಬುದು ವಿವರಿಸಲ್ಪಟ್ಟಿದೆ. ಋಣ, ರೋಗಾದಿಗಳಿಂದ ವಿಮುಕ್ತವಾಗಿ ಜೀವಿಯು ವ್ಯವಹರಿಸಲು ನೀಡುವ ಸಂದೇಶವೇ ವೃತ. ತ್ಯಾಗ, ಸಜ್ಜನಿಕೆಯ ಆವಿರ್ಭಾವ; ಅಹಂಕಾರ, ದ್ವೇಷ, ಅಸೂಯೆ, ಕೋಪಗಳ ಮರ್ದನ ಸಂದೇಶ ಸಾರುವ ವೃತವು ಅತೀ ದೀರ್ಘ ಕಾಲೀನ ಚಿಂತನೆಯಿಂದ ರೂಪುಗೊಂಡಿದೆ.

ಸಿದ್ಧಿವಿನಾಯಕವೃತ:- ಭಾದ್ರಪದ ಶುದ್ಧ ಚೌತಿ


ಭಾದ್ರಪದ ಶುದ್ಧಚೌತಿಯಂದು ವೃತವಿರುತ್ತದೆ. ಇದು ಕಾಲನಿರ್ದೇಶಿತ. ಇದು ಪುರಾತನವಾಗಿ ೧೨ ದಿನಗಳ ಕಾಲ ಮಾಡುವ ಏಕಾಶನ ಪಕ್ಷೋಪವಾಸ ವೃತವೆಂದು ಹಿಂದೆ ಚಾಲ್ತಿಯಲ್ಲಿತ್ತು. ಶ್ರಾವಣ ಬಹುಳ ಸಪ್ತಮಿಯಿಂದ ಆರಂಭಿಸಿ ಭಾದ್ರಪದ ಶುದ್ಧ ಚೌತಿಯವರೆಗೆ ಆಚರಿಸುವ ವೃತ ಬಹಳ ವಿಶೇಷ ಮತ್ತು ಅಧ್ಯಯನ ಯೋಗ್ಯ. ಶ್ರಾವಣ ಬಹುಳ ಸಪ್ತಮಿಯಂದು ಉಪವಾಸ ಸಂಕಲ್ಪ, ವೃತ ಸಂಕಲ್ಪ, ವೃತ ದೀಕ್ಷಾಧಾರಿಯಾಗಿ ಮನೆ ಮನೆ ಸಂಚಾರ ಮಾಡಿ ದೇವನಾಮಗಳನ್ನು ಹೇಳುತ್ತಾ ಭಕ್ತಿಪ್ರಧಾನವಾಗಿ ಜನಜಾಗೃತಿಯನ್ನೂ, ದೇಶಭಕ್ತಿಯನ್ನೂ ಹುಟ್ಟಿಸುವ ವೃತವಿದಾಗಿತ್ತು. ವೃತಕಾಲದಲ್ಲಿ ಕೃಷ್ಣಜನ್ಮಾಷ್ಟಮಿ, ವಿಪುಲಾದಶಮಿ, ಅನಂತ ಏಕಾದಶಿ, ಅನಂತ ಚತುರ್ದಶಿ, ಉಪಾಕರ್ಮಾದಿಗಳು ಬಂದು ಭಾದ್ರಪದದ ಧರ್ಮ ದ್ವಿತೀಯಾ, ಗೌರೀತೃತೀಯಾ, ನಂತರ ಗಣೇಶ ಚತುರ್ಥೀ ಆಚರಿಸಲ್ಪಡತ್ತದೆ. ಹೀಗೆ ೧೪ ದಿನಗಳ ಕಾಲ ಆಚರಿಸಲ್ಪಡುವ ಸಿದ್ಧಿವಿನಾಯಕ ವೃತವೇ ಮುಂದೆ ಗಣೇಶನ ಹಬ್ಬವೆಂದು ಸಾಕ್ಷ್ಯಾಧಾರಗಳನ್ನು ಹೊಂದಿರುತ್ತದೆ. ಒಟ್ಟಾರೆ ಭಾರತೀಯ ಸಂಸ್ಕೃತಿಯ ಹೆಚ್ಚಿನ ಎಲ್ಲಾ ಕಲಾ ಪ್ರಕಾರಗಳೂ, ಎಲ್ಲಾ ಕಲವಿದರೂ, ಎಲ್ಲಾ ಜಾತಿಯ ಜನರೂ ಇದರಲ್ಲಿ ಭಾಗವಹಿಸತಕ್ಕ ಒಂದು ಶ್ರೇಷ್ಠ ವೃತವಾಗಿರುತ್ತದೆ. ಇಲ್ಲಿ ಮೂರು ರೀತಿಯಲ್ಲಿ ಸಾಮಾಜಿಕವಾಗಿ ಬಳಕೆಯಲ್ಲಿದೆ


  1. ವಿನಾಯಕ ವೃತದೀಕ್ಷೆಯನ್ನು ಮಾಡುವವನು, ಅದಕ್ಕೆ ಪೂರಕವಾಗಿ ಜಾಗರಣೆ ಮತ್ತು ಉಪವಸ
  2. ವೃತ ಪರಿಕರ ಸಂಗ್ರಹಣೆಯಲ್ಲಿ ಒದಗುವ ಸಮಾಜ
  3. ವೃತಾಚರಣೆ ಮಾಡುವ ವ್ಯಕ್ತಿಗೆ ಸಹಾಯಕವಾಗಿ ಅದನ್ನು ಒಂದು ಹಬ್ಬವಾಗಿ ಆಚರಿಸಿ ಸಂಭ್ರಮಿಸುವ ಒಂದು ವರ್ಗ
ಹೀಗೆ ಮೂರು ರೀತಿಯಲ್ಲಿ ಆಚರಣೆ ಇರುತ್ತದೆಇಲ್ಲಿ ಪ್ರಸಕ್ತಕಾಲದಲ್ಲಿ ವಿಗ್ರಹ ರಚನಾಕಾರರೆಂಬ ಮಣ್ಣಿನ ಕೆಲಸಗಾರರು ವೃತದ ಹಿಂದಿನ ಉದ್ದೇಶಕ್ಕೆ ಪೂರಕವಾಗಿಲ್ಲದಿದ್ದರೂ ಒಟ್ಟಾರೆ ನಿರತರಾಗಿದ್ದಾರೆ. ಇನ್ನು ಕಲೆ, ಕಲಾವಿದರು ಜನರ ಅಭಿರುಚಿ ಪ್ರಧಾನ ಮಾಡಿ ವಿಚಿತ್ರ ಕಲಾಪ್ರಕಾರಗಳು ಜೊತೆಯಲ್ಲಿ ತೀರಾ ಸಾರ್ವಜನಿಕವಾಗಿ ಹೋಮ, ಅದರಿಂದ ಅಲ್ಲಿ ವಂತಿಗೆ, ತತ್ಸಂಬಂಧ ವಂಚನೆ, ಮೋಸ, ಕುಡಿತ, ಜೂಜು ಇವೆಲ್ಲಾ ಆರಂಭವಾಗಿದೆ. ಇದು ಈಗಿನ ವಿನಾಯಕ ವೃತವಾಗಿದೆ. ಯಾರೂ ಈಗ ವೃತದಕ್ಷೆಯನ್ನು ಪಡೆದು ಊರೂರು ಸುತ್ತಿ ದೀಕ್ಷಾವಾಸ ಮಾಡಲಾರರು. ಅದರಂತೆ ವೃತನಿಷ್ಠರೂ ಆಗುವುದಿಲ್ಲ. ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಸಿಗುವ ಒಂದು ವಿಗ್ರಹ ತಂದು ಇಟ್ಟು ಪೂಜೆ ಮಾಡಿ ಮೋಜು ಮಾಡುತ್ತಾರೆ ಅಷ್ಟೆ.

ಆದರೆ ಹಿಂದಿನ ವಿನಾಯಕ ವೃತದಲ್ಲಿ ಮನೆಯ ಒಬ್ಬರು ವೃತದೀಕ್ಷೆ ಪಡೆದು ಊರೂರು ಸುತ್ತಿ ವೃತನಿಷ್ಠರಾಗಿ ಗಣಪತಿಯ ಧ್ಯಾನ, ಭಜನೆ, ಕೀರ್ತನೆಗಳಿಂದ ಸ್ತುತಿಸಿ ಅದರಿಂದಾಗಿ ಜನ ಮೆಚ್ಚಿ ಕೊಟ್ಟ ಕಾಣಿಕೆ ಸ್ವೀಕರಿಸಿ (ವಸ್ತುರೂಪದಲ್ಲಿ) ತದಿಗೆ ದಿನ ಚಂದ್ರಾಸ್ತ ನಂತರ ಊರನ್ನು ತಲುಪಿ ಇಲ್ಲಿ ಉಳಿದವರು ಸಿದ್ಧಪಡಿಸಿದ್ದ ಮೃತ್ತಿಕಾ ಗಣಪತಿ ವಿಗ್ರಹವನ್ನು ಪೂಜಿಸಿ ಜಾಗರಣೆ ಮಾಡಿ ಮರುದಿನ ಬೆಳಿಗ್ಗೆ ತಾನು ತಂದ ದವಸ ಧಾನ್ಯಗಳಿಂದ ತಿಂಡಿತಿನಿಸುಗಳನ್ನು ಮಾಡಿ ಪುನಃ ಕಲ್ಪೋಕ್ತ ಪೂಜೆ ಮಾಡಿ ನೈವೇದ್ಯ ಮಾಡಿ, ಮಕ್ಕಳಿಗೆ ತಿಂಡಿತಿನಿಸುಗಳನ್ನು ಹಂಚಿ ನಂತರ ತಾನು ಪ್ರಸಾದ ಸ್ವೀಕಾರ ರೂಪದಲ್ಲಿ ಊಟ ಮಾಡುವುದು ಮತ್ತು ನಂತರ ಚಂದ್ರಾಸ್ತ ನಂತರ ಮೃತ್ತಿಕಾ ವಿಗ್ರಹವನ್ನು ನದಿಯಲ್ಲಿ ವಿಸರ್ಜಿಸುವುದು. ಇದು ವೃತ ನಿಯಮವಾಗಿತ್ತು. ವಿಚಾರವಾಗಿ ಈಗಲೂ ಕೆಲವು ಕಡೆಗಳಲ್ಲಿ ಆಚರಣೆಯ ಕುರುಹುಗಳು ಕಂಡುಬರುತ್ತದೆ.

ಉದಾ:- ಅಷ್ಟಮೀ ವೃತಾ ನಂತರ ವಿಠ್ಠಲಭಜನೆ, ಸಂಕೀರ್ತನೆ ಹಲವು ಕಡೆಗಳಲ್ಲಿ ನಡೆಯುತ್ತವೆ. ಕೆಲವು ಕಡೆ ಹೂವಿನ ಕೋಲು ಎಂಬ ಒಂದು ಹಾಡುಗಾರಿಕೆ ತಂಡ ಮನೆ ಮನೆಗೆ ಹೋಗುತ್ತದೆ. ವಾದ್ಯ ಮೇಳದವರು ಮನೆ ಮನೆಗೆ ಹೋಗುವ ಪದ್ಧತಿಯು ಈಗಲೂ ಇದೆ. ಚೌತಿಯ ದಿನ ಮಕ್ಕಳಿಗೆ ತಿಂಡಿ ಹಂಚುವ ಪದ್ಧತಿಯೂ ಇದೆ. ಇವೆಲ್ಲಾ ಹಳೇ ಆಚರಣೆಯ ಅಂಗವಾಗಿ ಅಳಿಸಿ ಹೋಗಲಾಗದೆ ಉಳಿದು ಹೋದ ಕುರುಹುಗಳು. ಇಲ್ಲಿ ಮುಖ್ಯವಾಗಿ ಕಾಣುವುದು ಒಂದು ಮನೆಯ ಒಬ್ಬ ಪ್ರಬುದ್ಧ ಯುವಕನು ವೃತದೀಕ್ಷೆ ಪಡೆಯಬೇಕು ಎಂಬ ನಿಯಮ. ಅದರರ್ಥ ಯೌವನ ಮದವು ದೀನಾವಸ್ಥೆಯಲ್ಲಿ ಊರೂರು ತಿರುಗುವುದರಿಂದ ಪರಿಷ್ಕರಣೆ ಆಗುತ್ತದೆ. ಉತ್ತಮ ಜೀವನಾನುಭವವೂ ಆಗುತ್ತದೆ ಎಂದು. ಹಾಗಾಗಿ ಸಪ್ತಮಿಯ ರಾತ್ರಿ ವೃತದೀಕ್ಷೆ ಪಡೆದು ಜಾಗರಣೆ ಮಾಡಿ, ಫಲಾಹಾರ ಮಾತ್ರ ಪಡೆದು ಭಜನೆ, ಕೀರ್ತನೆ, ಕುಣಿತಗಳಿಂದ ಜನರಂಜನೆ ಮಾಡುತ್ತಾ ಊರೂರು ತಿರುಗಿ ಫಲಾಹಾರ ಮಾತ್ರದಿಂದ ಜೀವಿಸುತ್ತಾ ೧೪ ದಿನ ಕಳೆದು ತಿರುಗಿ ಮನೆಗೆ ಬರುವಲ್ಲಿಯವರೆಗೆ ಯಾವ ಯುವಕನೂ ಉತ್ತಮ ಸಂಸ್ಕಾರವಂತನಾಗಲು ಸಾಕು ಎಂಬುದು ವೃತದ ಉದ್ದೇಶ. ಅವಿವೇಕಿಯಾದ ಯೌವನ ಮದವು ವ್ಯತಿರಿಕ್ತವಾಗಿ ವ್ಯವಹರಿಸಿದಲ್ಲಿ ತಲೆ ಹೋಗುತ್ತದೆ ಎಂಬ ಸಂಕೇತವಾಗಿದೆ. ಪರಿಪೂರ್ಣ ಜ್ಞಾನ ಅವನಿಗೆ ಬಂದಿರುತ್ತದೆ. ಹಾಗಾಗಿಯೇ ತನ್ನ ಉದ್ಧಟತನದಿಂದಲೇ ತಲೆ ಕಳೆದುಕೊಂಡು ನಂತರ ದೈವಾನುಗ್ರಹ ಪಡೆದರೂ ಉದ್ಧಟತನವನ್ನು ಸಂಕೇತಿಸುವ ಆನೆಯ ಮುಖವನ್ನೇ ಹೊತ್ತ ಗಣಪನನ್ನು ಪೂಜಿಸುವುದರಿಂದ ಯುವ ಜನಾಂಗಕ್ಕೆ ಹೆಚ್ಚಿನ ಬೋಧನೆ ಬೇಕು? ಸಾಕಲ್ಲವೆ, ಚಿಂತಿಸಿ.
-      ಬ್ರಹ್ಮರ್ಷಿ ಕೆ.ಎಸ್. ನಿತ್ಯಾನಂದ ಸ್ವಾಮೀಜಿ, ಚಿಕ್ಕಮಗಳೂರು

ವೃತಕಥಾಸಾರ ಸಂಗ್ರಹ, ಋತ್ವಿಕ್ ವಾಣಿ ಪ್ರಕಾಶನಭಾದ್ರಪದ
ಚೌತಿ ಚಂದ್ರ ದರ್ಶನ ಮತ್ತು ಅಪವಾದತಾತ್ವಿಕ ನೆಲೆಗಟ್ಟಿನಲ್ಲಿ

ಭಾದ್ರಪದ ಶುದ್ಧ ಚೌತಿ ರಾತ್ರಿಯಂದು ಚಂದ್ರ ದರ್ಶನ ಮಾಡಿದರೆ ಅಪವಾದಕ್ಕೆ ಒಳಗಾಗುತ್ತಾರೆ ಏಕೆ? ಎಂಬುದನ್ನು ತಾತ್ವಿಕ ನೆಲೆಗಟ್ಟಿನಲ್ಲಿ ವಿಚಾರವನ್ನು ಚಿಂತಿಸಬೇಕಾದರೆ ಮೊದಲು ಪೂರ್ವಭಾವಿಯಾಗಿ ಒಂದು ನೆಲೆಗಟ್ಟನ್ನು ಮಾಡಿಕೊಳ್ಳಬೇಕಾಗುತ್ತದೆ. ನಮ್ಮಲ್ಲಿ ಒಂದಿಷ್ಟು ಆಯಾ ಕಾಲಕ್ಕೆ ದರ್ಶನೀಯವಲ್ಲದ ವಿಚಾರಗಳಿವೆ. ಗ್ರಹಣ ನೋಡಬಾರದು, ಹೆಂಗಸರು ಸ್ನಾನ ಮಾಡುವಾಗ ನೋಡಬಾರದು, ನಿರ್ದೇಶಿತ ಕಾಲದ ಊಟ ಅಂದರೆ ಕ್ಷಣನಿಮಂತ್ರಿತ ಬ್ರಾಹ್ಮಣ ಭೋಜನ ಮಾಡುವುದನ್ನು ನೋಡಬಾರದು ಹೀಗೆ ಸುಮಾರು ೧೪,೦೦೦ ದರ್ಶನೀಯವಲ್ಲದ ವಿಚಾರಗಳು ನಮ್ಮ ಭಾರತೀಯ ಸಂಸ್ಕೃತಿಯಲ್ಲಿವೆ. ಅವೆಲ್ಲಕ್ಕೂ ಸ್ಪಷ್ಟ ನಿಖರ ಕಾರಣಗಳಿವೆ.

ಹೀಗೆ ಭಾದ್ರಪದ ಶುಕ್ಲ ಚೌತಿ ರಾತ್ರಿಯಂದು ಚಂದ್ರ ದರ್ಶನ ಮಾಡಬಾರದು ಎಂಬುದನ್ನು ಸ್ಪಷ್ಟ ಪಡಿಸಿಕೊಂಡು ಚಿಂತಿಸಿದರೆ ಮಾತ್ರ ನಮಗೆ ನಿಖರವಾದ ಉತ್ತರ ಸಿಗುತ್ತದೆ. ಯಾವುದೇ ಒಂದನ್ನು ಅದರ ಮೂಲ ಸಿದ್ಧಾಂತದಂತೆಯೇ ಗುರುತಿಸಿ ಅದರ ಮಹತ್ವವೇನು ಎಂಬುದನ್ನು ತಿಳಿಯಬೇಕು.

ಚೌತಿಯಂದು ಸೂರ್ಯಾಸ್ತವಾದ ನಂತರ ಸುಮಾರು ಒಂದೂವರೆ ಗಂಟೆಯಿಂದ ಎರಡ ಗಂಟೆಗಳ ಕಾಲ ಕಾಣಿಸಿಕೊಳ್ಳುವ ಚಂದ್ರನ ಮತ್ತು ಅದೇ ಚಂದ್ರನ ಸಮಾರು ಒಂದೂವರೆ ಗಂಟೆಯಿಂದ ಎರಡು ಗಂಟೆಗಳ ಗ್ರಹಣ ಕಾಲದಲ್ಲಿಯೂ ಅನೇಕ ನಿಷೇಧಗಳನ್ನು ಹೇಳಿದ್ದಾರೆ. ಅಂದರೆ ಪ್ರಾಕೃತಿಕವಾಗಿ ಖಗೋಳದಲ್ಲಿ ನಡೆಯುವಂತಹಾ ವಿದ್ಯಮಾನಗಳಿಂದಾಗಿ ಚಂದ್ರನಿಂದ ಪರಿಣಾಮಗಳು ನಮ್ಮ ಮೇಲೆ ಬಿದ್ದಾಗ ಬುದ್ಧಿಗೆ ಪ್ರಚೋದನೆ ನೀಡುವ ಕಿರಣಗಳು ಅಪವಾದಕ್ಕೆ ಕಾರಣವಾಗುತ್ತದೆ ಎನ್ನುವ ವಿಚಾರವೇ ವಿನಃ ಗಣಪತಿಯು ನಮಗೆ ಶಾಪವಿತ್ತ ಎಂಬುದಲ್ಲ ಎಂದು ಖಗೋಳ ಭೌತಶಾಸ್ತ್ರ ರೀತಿಯಲ್ಲಿ ಚಿಂತಿಸಿದರೆ ನಮಗೆ ನಿಖರ ಉತ್ತರ ಸಿಗುತ್ತದೆ.

ಭಾದ್ರಪದ ಶುದ್ಧ ಚೌತಿಯ ಕಾಲವು ಮಳೆಗಾಲವಾಗಿರುತ್ತದೆ. ಕಾಲದಲ್ಲಿ ಸೂರ್ಯನು ಸಿಂಹ ಅಥವಾ ಕನ್ಯಾ ರಾಶಿಗೆ ಬಂದಿರುತ್ತಾನೆ. ಸೂರ್ಯನ ಮಾನುಷ ಪ್ರವರ್ತನೆಯ ಕಾಲವೆಂದು ಖಭೌತ ಶಾಸ್ತ್ರವು ಹೇಳುತ್ತದೆ. ಹಸ್ತ ನಕ್ಷತ್ರದಲ್ಲಿ ಚೌತಿ ಬರಬೇಕೆಂದು ಶಾಸ್ತ್ರವು ಹೇಳುತ್ತದೆ. ಆಗ ಮನಃ ಕಾರಕನಾದ ಚಂದ್ರನ ನಾಲ್ಕನೇ ಕಿರಣವಾದ ತುಷ್ಟೀ ಕಿರಣ ಪ್ರಭಾವವು ಬುದ್ಧಿಯ ಮೇಲೆ ಅಷ್ಟೇ ಪ್ರಭಾವಕಾರಿಯಾಗಿರುತ್ತದೆ.

ಇಲ್ಲಿ ತಾತ್ವಿಕ ನೆಲೆಗಟ್ಟಿನಲ್ಲಿ ಒಂದಿಷ್ಟು ವಿಚಾರಗಳು ಅಡಕವಗಿವೆ. ಗಣಪತಿ ಅಸಹಜ ಸೃಷ್ಟಿ, ಅಸಹಜ ಸೃಷ್ಟಿಯು ಪ್ರಬುದ್ಧಮಾನಕ್ಕೆ ಬಂದು, ಸಹಜತೆಯೊಂದಿಗೆ ಒಪ್ಪಂದವಾಗಿ, ಸಹಜ ಸ್ವಾಭಾವಿಕತೆಗೆ ಅದರ ಅನಿವಾರ್ಯತೆಯನ್ನು ತಂದಿಟ್ಟಿದೆ ಸಮಾಜ. ಮುಂದೆ ಗಣಪತಿಯನ್ನು ಅನಿವಾರ್ಯವಾಗಿ ಸಮಾಜ ಸ್ವೀಕರಿಸಬೇಕಾಯಿತು. ಮೂಲ ನೆಲೆಯಲ್ಲಿ ಗಣಪತಿಯು ಅಸಹಜ, ಎಂದರೆ ದರ್ಶನೀಯವಲ್ಲ. ಕೊನೆಯಲ್ಲಿ ಪ್ರಾಕೃತಿಕವಾದ ಯಾವುದೋ ಘಟನೆಗಳಿಂದ ಸಮಾಜವು ಪ್ರಾಶಸ್ತ್ಯವನ್ನು ಕೊಡುತ್ತಾ ಬಂದು ಗಣಪತಿ ದರ್ಶನೀಯವಾಗಿ ಅನಿವಾರ್ಯವಾಯಿತು. ಆದರೂ ಗಣಪತಿಯ ದೂಷಿತ ಭಾಗವನ್ನು ಗುರುತಿಸಲು ಮತ್ತೆ ಹಿಂದಕ್ಕೆ ಹೋಗಿ ನೋಡಲು ಸಾಧ್ಯವೇ? ಇಲ್ಲ. ಹಾಗಾದರೆ ದೂಷಿತ ಭಾಗವನ್ನು ಎಲ್ಲಿ ಕಾಣುವುದು ಎಂಬ ಪ್ರಶ್ನೆ ಬಂದಾಗ ಅದನ್ನು ಕಾಲಗಣನೆಯಲ್ಲಿ ಮಾತ್ರ ಗುರುತಿಸಲು ಸಾಧ್ಯ. ಅಂದರೆ ಚಂದ್ರಮಾನವು ಒಂದು ಕಾಲಗಣನೆ ಆದ್ದರಿಂದ ಗಣಪತಿಯ ದೂಷಿತ ಭಾಗವನ್ನು ಭಾದ್ರಪದ ಶುದ್ಧ ಚೌತಿ ರಾತ್ರಿಯ ಒಂದು ಸಮಯ ಗಣಪತಿಯ ದೂಷಿತ ಭಾಗ. ನಾವು ಚಂದ್ರನನ್ನು ಕಂಡಾಗ ಕಾಣುವುದು ಗಣಪತಿಯ ದೂಷಿತ ಭಾಗವೇ ಹೊರತು ಚಂದ್ರನದ್ದಲ್ಲ. ಗಣಪತಿಯ ದೂಷಿತ ಭಾಗ ಎನ್ನುವಂತಹದ್ದು ಕಾಲನಲ್ಲಿ ನಿಯೋಜಿಸಲ್ಪಟ್ಟಿತು. ಅಂದರೆ ಭಾದ್ರಪದ ಶುದ್ಧ ಚೌತಿಯ ರಾತ್ರಿ ಚಂದ್ರ ದರ್ಶನ ಕಾಲ ಮಾತ್ರ ದೂಷಿತ ಭಾಗ.

ಸಾಂಪ್ರದಾಯಿಕ ಆಚರಣೆಯ ರೀತಿಯಲ್ಲಿ ಅದಕ್ಕೆ ಮಹತ್ವ ಕೊಟ್ಟಿತು. ಒಂದು ಹೆಂಗಸು ತನ್ನ ಮೈಯಲ್ಲಿನ ಕೊಳೆಯನ್ನು ತೆಗೆಯಲು ಸ್ನಾನಕ್ಕೆ ಹೋದಾಗ ನೋಡುವುದು ಸರಿಯೇ? ನ್ಯಾಯವೇ? ಎಂದು ಸಂಪ್ರದಾಯವು ಕೇಳುತ್ತದೆ. ಆಂದರೆ ಅದು ಸ್ತ್ರೀ ದೂಷಿತ ಕೊಳೆ ದರ್ಶನೀಯವಲ್ಲ ಎನ್ನುವ ಅಂಶ ಇಲ್ಲಿ ಪರಿಗಣಿಸಬೇಕು. ಭಾದ್ರಪದ ಶುದ್ಧ ಚೌತಿಯಲ್ಲಿ ಚಂದ್ರನ ಕಲೆಯಲ್ಲಿ ದೂಷಿತ ಅಂಶವು ಸೇರಿರುತ್ತದೆ. ಆದ್ದರಿಂದ ಅಂದು ಚಂದ್ರ ದರ್ಶನ ಮಾಡಿದರೆ ಸ್ತ್ರೀಯು ಕೊಳೆಯನ್ನು ತೆಗೆಯಲು ಸ್ನಾನ ಮಾಡುತ್ತಿರುವುದನ್ನು ಕದ್ದು ನೋಡಿದ ಅಪವಾದಕ್ಕೆ ಸಿಕ್ಕಿ ಬೇಳುವ ಸಾಧ್ಯತೆ ಇರುವಂತಹಾ ಅನಕ ಕಪೋಲ ಕಲ್ಪಿತ ಅಪವಾದಗಳಿಗೆ ಸಿಲುಕಲು ಸಾಧ್ಯ! ಆದ್ದರಿಂದ ಅಂದು ಚಂದ್ರ ದರ್ಶನ ನಿಷೇಧ. ಮನಸ್ಸಿಗೆ ಪ್ರಚೋದಕನಾದ ಚಂದ್ರನ ಕಾಲದ ದರ್ಶನವು ಕೆಟ್ಟ ಬುದ್ಧಿಯನ್ನು ಪ್ರೇರೇಪಿಸುತ್ತದೆ. ಆದ್ದರಿಂದ ಅಂದು ಚಂದ್ರನನ್ನು ನೋಡಬೇಡಿ ಎಂದರು. ಇಲ್ಲಿ ದೂಷಿತ ದರ್ಶನೀಯವಲ್ಲ ಎನ್ನುವುದು ಮುಖ್ಯವಾದ ವಿಚಾರ ವಿಶ್ಲೇಷಣೆಯಾಗಿರುತ್ತದೆ.

ವಿಚಾರವನ್ನು ಸಾಮಾನ್ಯ ಜನರಿಗೆ ಮನ ಮುಟ್ಟುವ ಹಾಗೆ ತಿಳಿಸಲು ಪಾರ್ವತಿ ಎನ್ನುವ ಸಮಯ, ಸ್ನಾನ ಎನ್ನುವ ಸಂದರ್ಭ, ಗಣಪತಿ ಎನ್ನುವ ಪ್ರಕರಣದ ಕಾರಣ ಇವುಗಳಿಂದ ಉತ್ಪನ್ನವಾದ ದೂಷಿತ ಪರಿಣಾಮವನ್ನು ತೋರಿಸಲು ಚಂದ್ರ, ಇವುಗಳಿಗೆ ಸಂಬಂಧ ಪಟ್ಟು ಅದರ ಸುತ್ತಾ ಒಂದು ಕಥೆಯನ್ನು ರಚಿಸಿ ಸಮಾಜಕ್ಕೆ ನೀಡಿದರು. ಶಾಪವೆಂಬ ಭಯದ ಪ್ರವೃತ್ತಿಯನ್ನು ಹುಟ್ಟಿಸಿ ಚಂದ್ರನನ್ನು ನೋಡದ ಹಾಗೆ ಮಾಡಿ ಸಮಾಜದಲ್ಲಿ ಹೀನ ಬುದ್ಧಿ ಉಂಟಾಗದಂತೆ ಕಥೆಯ ಮಖೇನ ಮಾಡಿದರು.

ದೂಷಿತ ಚಂದ್ರ ಕಿರಣ ದರ್ಶನ ಮಾಡಿದ ದೋಷದಿಂದ ಮುಕ್ತರಾಗಲು ಶಮಂತೋಪಾಖ್ಯಾನ ಕಥೆಯನ್ನು ಕೇಳಿದರೆ ಶಾಪ ಪರಿಹಾರ ಎಂದು ಹೇಳಿದ್ದರ ಹಿನ್ನೆಲೆಯನ್ನು ಚಿಂತಿಸಿದರೆ, ಮಹಾಪುರುಷನಾದ ಕೃಷ್ಣನೇ ಚಂದ್ರ ದರ್ಶನ ಮಾಡಿದರೂ ಅಪವಾದಕ್ಕೆ ಒಳಗಾಗುತ್ತಾನೆ ಎಂದ ಮೇಲೆ ಸಾಮಾನ್ಯ ಜನರ ಪಾಡೇನ ಎಂಬ ಸತ್ಯವನ್ನು ಅರ್ಥಮಾಡಕೊಂಡು ತಪ್ಪನ್ನು ಮುಂದೆ ಮಾಡದಿರಿ ಎಂದು ತಿಳಿಸುವ ಕಥೆಯಾಗಿರುತ್ತದೆಯೇ ವಿನಃ ಚಂದ್ರ ದರ್ಶನ ಮಾಡಿದ ಅಪವಾದಕ್ಕೆ ಸಿಕ್ಕ ಪರಿಹಾರವಲ್ಲ. ಮುಂದೆ ತಪ್ಪನ್ನು ಮಾಡದೆ ತಿದ್ದಿಕೊಂಡು ನಡೆಯಲಿ ಎಂಬುದು ಶಮಂತೋಪಾಖ್ಯಾನದ ಕಥೆಯ ಸಾರಾಂಶವಾಗಿರುತ್ತದೆ.

ಯಾವುದೇ ಪುರಾಣ ಕಥೆಗಳನ್ನು ಯಥಾವತ್ತಾಗಿ ಕಥೆ ಸ್ವರೂಪದಲ್ಲಿ ಸ್ವೀಕರಿಸದೆ ಅದರಲ್ಲಿರತಕ್ಕ ವೈಜ್ಞಾನಿಕ ಹಾಗೂ ತಾತ್ತ್ವಿಕ ಮಹತ್ತ್ವವನ್ನು ಪುರಾಣದ ದಶಲಕ್ಷಣಯುಕ್ತವಾಗಿ ಹುಡುಕಿ ಅದರ ಪ್ರಯೋಜನವನ್ನು ಪಡೆಯಿರಿ ಎಂದು ಹೇಳುತ್ತಾ ನನ್ನ ಗುರುವಿಗೆ ವಂದಿಸುತ್ತಾ ಸರ್ವೇ ಜನಾಃ ಸುಖಿನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು.

- ವಿಜಯಾನಂದ, ಬೇಲೂರು

No comments:

Post a comment