Monday, 14 October 2013

ನೆರೆ, ಬರ, ಯುದ್ಧಗಳ ಪರಿಹಾರನೆರೆ, ಬರಗಳು, ಉತ್ಪಾತ, ಬಿರುಗಾಳಿಗಳು, ಯುದ್ಧ, ದೊಂಬಿಗಳು, ಬರ ಉರಿಗಳು ಒಂದಕ್ಕೊಂದು ಪೂರಕವಾಗಿ ಸತತ ಪ್ರಪಂಚದ ಒಂದಲ್ಲಾ ಒಂದು ಕಡೆ ಸದಾ ಜೀವಂತವಾಗಿಯೇ ಇವೆ. ಅಂದಾಜು ೧೯೮೨ ರಿಂದ ಈಚೆಗೆ ಇದು ಸತತವಾಗಿ ಅಪ್ಪಳಿಸುತ್ತಲೇ ಇವೆ. ಆದರೆ ೧೯೯೬ ರಿಂದ ಅದು ದ್ವಿಗುಣವಾಯ್ತು. ನಂತರ ೨೦೦೪ ರಿಂದ ತ್ರಿಗುಣವಾಗಿದೆ. ಮೊದಲು ೧೯೮೨ ರಿಂದ ೧೯೯೬, ೧೪ ವರ್ಷಗಳ ಕಾಲ. ನಂತರದ ೧೯೯೬ ರಿಂದ ೨೦೦೪, ೮ ವರ್ಷಕಾಲ. ೨೦೦೪ ರಿಂದ ೨೦೧೦, ೬ ವರ್ಷಕಾಲ. ನಂತರದ ೨೦೧೦ ರಿಂದ ೨೦೧೪, ೪ ವರ್ಷಕಾಲವೆಂದು ಈ ಕಾಲವನ್ನು ವಿಭಜಿಸಿದರೆ ಆಯಾ ಕಾಲದಲ್ಲಿ ಆದ ಪ್ರಾಕೃತಿಕ ಉತ್ಪಾತಗಳು ಮೇಲೆ ಸೂಚಿಸಿದ ಯಾವ ವರ್ಗದಲ್ಲಿ ಎಷ್ಟು ಎಂದು ಲೆಕ್ಕ ಹಾಕಿದರೆ ಮುಂದಿನ ಉತ್ಪಾತಗಳ ಮಟ್ಟವನ್ನು ನಿಖರವಾಗಿ ತಿಳಿದು ಮುನ್ನೆಚ್ಚರಿಕೆ ಪಡೆಯಬಹುದು. ಇಲ್ಲಾ ಮುಂದೆ ಉದಾಹರಿಸಿದ ಮಂತ್ರವನ್ನು ವಿಶ್ಲೇಷಿಸಿದರೆ ರಕ್ಷಣಾತ್ಮಕ ಕಾರ್ಯಕ್ಕೆ ಅನುಕೂಲ. ಆ ಮಂತ್ರಗಳನ್ನು ಉಪಾಸನೆ ಮಾಡಿ ಅದರರ್ಥವ ತಿಳಿದು ಅದರಂತೆ ನಡೆದರೆ ಹೆಚ್ಚಿನ ಉತ್ಪಾತಗಳು ಉಪಶಮನವಾಗಬಹುದು.

ಉತ್ಪಾತವಾದ ಮೇಲೆ ಸಾವಿರಾರು ಜನ ಪ್ರಾಣ ತೆತ್ತ ಮೇಲೆ ಲಕ್ಷಗಟ್ಟಲೆ ದವಸಧಾನ್ಯ ನಷ್ಟ ಮಾಡಿಕೊಂಡು ಕೊನೆಯಲ್ಲಿ ಅದಕ್ಕಾಗಿ ಕಣ್ಣೀರು ಸುರಿಸುತ್ತಾ ಪರಿಹಾರ ಕಾರ್ಯವೆಂದು ಊರೂರು ಭಿಕ್ಷೆಯೆತ್ತುವುದಕ್ಕಿಂತ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಮೇಲಲ್ಲವೇ?

ಒಂದು ಉದಾಹರಣೆ ನೋಡಿ. ಒಂದು ಕಾಲದಲ್ಲಿ ಪ್ರಸಿದ್ಧ ನಾಗರೀಕತೆ, ಬೌದ್ಧಿಕತೆ, ವಿಚಕ್ಷಣಜ್ಞಾನ, ಸಂಪತ್ತು, ವೈಭವ, ಸಮೃದ್ಧಿಯಲ್ಲಿ ಹೆಸರಾದ ಪ್ರದೇಶ ಸರಸ್ವತೀ ನದೀ ಕಣಿವೆ ಪ್ರದೇಶ. ಎಲ್ಲರೂ ಸಕಲ ವಿಧ್ಯಾಪಾರಂಗತರೇ! ಸಹಜ ಸ್ವರ್ಗವೆಂದೇ ಇತರೆ ಅಭಿವೃದ್ಧಿಶೀಲ ನಾಗರೀಕತೆ ಕೊಂಡಾಡತ್ತಿದ್ದವು. ಅಂತಹಾ ಪ್ರದೇಶ ತನ್ನ ಮೂರ್ಖ ವ್ಯವಹಾರದಿಂದ ಸ್ವೇಚ್ಛಾಚಾರದಿಂದ ಭೂಮಿಯಲ್ಲಿ ಉತ್ಪಾತ ಉಂಟಾಗಿ ಸಂಪೂರ್ಣ ನಾಶವಾಯ್ತು. ಈಗಿನ ಅಮೇರಿಕಾದಂತೆ ಅಕಸ್ಮಾತ್ತಾಗಿ ಅಳಿದುಳಿದ ಸಾಮಾನ್ಯ ವರ್ಗದ ಜನ ವಲಸೆ ಹೋಗಿ ತಮ್ಮ ಬದುಕು ರೂಪಿಸಿಕೊಂಡರು. ಸರಸ್ವತೀ ನದೀ ಪಾತ್ರ ಮುಚ್ಚಿಯೇ ಹೋಯ್ತು. ಮುಂದೆ ಹಲವು ಸಾವಿರ ವರ್ಷದ ನಂತರ ಅದರ ಆಸುಪಾಸಿನಲ್ಲಿ ಮತ್ತೊಂದು ನಾಗರೀಕತೆ ಬೆಳೆಯಿತು. ಅಲ್ಲಿ ಪುನಃ ಮಳೆ ಬೆಳೆಯಾಗಲು ಕೃಷಿಯೋಗ್ಯ ಭೂಮಿ ರೂಪುಗೊಂಡಿತು. ಆದರೆ ಅಲ್ಲಿನ ಮಳೆ ನೀರು ಹರಿದು ಹೋಗುವ ಪ್ರಾಕೃತಿಕ ಕಣಿವೆ ನಷ್ಟವಾಗಿತ್ತು. ಆಗ ಮುಂದೆ ತಿಳಿಸುವ ವೇದ ಸೂತ್ರದಂತೆ ನೀರಿನ ಹರಿವನ್ನು ನಿರ್ಧರಿಸಿದರು, ಆಗಿನ ದಾರ್ಶನಿಕರು. ಅದರಂತೆ ಮಳೆ ಬಂದರೂ ಪ್ರವಾಹ ಘಟಿಸಲಿಲ್ಲ. ಆಗ ಅಲ್ಲಿ ಹೊಸ ನಾಗರೀಕತೆ ಬೆಳೆಯಿತು. ಅದೇ ಪಂಚನದ ಪ್ರಾಂತ್ಯ.

ವಿಪಾಶಾ, ಶಾಲ್ಮಲೀ, ಉಲೂಕ, ವೇದಾ, ಪುಷ್ಕರ ಎಂಬ ೫ ಬಗೆಯ ಪ್ರಾಕೃತಿಕ ಕಣಿವೆ ಸೃಷ್ಟಿಸಿ ಯಾಗಮುಖೇನ ನದೀ ಪ್ರಾಂತ್ಯವನ್ನಾಗಿ ಮಾಡಿದರು. ಹಾಗಾಗಿ ಅಲ್ಲಿ ಅತೀವೃಷ್ಟಿಯಾಗಲಿಲ್ಲ. ಅಂದರೆ ನೆರೆ ಬಂದರೂ ನೀರು ಸಹಜ ಹರಿದು ಹೋಯ್ತು. ಅದು ಆ ರೀತಿಯ ಅನುಷ್ಠಾನಗಳಿಂದ ಸಾಧ್ಯ. ಮುಂದೆ ಪಂಚನದ ಪ್ರಾಂತ್ಯದಲ್ಲಿ ಹಲವು ವಿಶಿಷ್ಟ ನಾಗರೀಕತೆ ಬೆಳೆದ ಬಗ್ಗೆ ಉದಾಹರಣೆಗಳಿವೆ. ಹಾಗೆ ಈ ೧೪-೮-೬-೪ ರ ಸೂತ್ರವನ್ನು ಬಿಡಿಸಲು ವಿದ್ವತ್ ವಲಯ ಪ್ರಯತ್ನಿಸಿದರೆ ಲೋಕೋಪಕರವಾದೀತು.

ಹಿಂದೆ ದೇವಾಸುರ ಯುದ್ಧ ಹಲವು ಸಾವಿರ ವರ್ಷಗಳ ಕಾಲ ನಡೆಯಿತೆಂದೂ, ಆಂಗೀರಸರ ಭಾರ್ಗವರ ಯುದ್ಧ ಹೋರಾಟ ಯುಗಗಳ ಕಾಲ ನಡೆಯಿತೆಂದೂ; ಹೈಹಯ, ಭಾರ್ಗವರ ದೊಂಬಿ ಯುದ್ಧ ಕೂಡ ಹಲವು ತಲೆಮಾರುಗಳ ಕಾಲ ನಡೆಯಿತೆಂದೂ ಕಂಡು ಬರುತ್ತದೆ. ಹಾಗೇ ಇನ್ನು ಕೆಲವು ಯುದ್ಧಗಳು ಸಾವಿರಾರು ವರ್ಷಗಳ ಕಾಲ ನಡೆದ ಉದಾಹರಣೆ ಇದೆ. ಆದರೆ ಮುಂದೆ ರುಮಣ್ವಕ ಈ ವಿಚಾರ ಗಮನಿಸಿ ವಿಶ್ವರೂಪನೆಂಬ ಪ್ರಜಾಪತಿಯ ಸಹಾಯ ಪಡೆದು ಒಂದು ವಿಶೇಷವಾದ ಯಾಗಮುಖೇನ ದೀರ್ಘಕಾಲೀನ ಯುದ್ಧಗಳಿಗೆ ತಡೆ ಹಾಕಿದ.

ನಂತರ ರಾಮರಾವಣರ ಯುದ್ಧ, ಮಹಾಭಾರತ ಯುದ್ಧ; ಇವುಗಳೆಲ್ಲ ನಿಶ್ಚಿತ ದಿನದಷ್ಟೆ ನಡೆದವು. ಭಾರತಕ್ಕೆ ಮೊಗಲರು ಪ್ರವೇಶಿಸುವವರೆಗೂ ನಡೆದ ಕೆಲವು ಮಹಾಯುದ್ಧದಲ್ಲಿ ಕಳಿಂದ ಯುದ್ಧ (ಅಶೋಕ), ನವನಂದರ ಯುದ್ಧ, ಭರತ ಬಾಹುಬಲಿಯುದ್ಧ ಇತ್ಯಾದಿ ಯುದ್ಧಗಳೆಲ್ಲಾ ನಿಶ್ಚಿತ ದಿನದಷ್ಟೇ ನಡೆಯುತ್ತಿದ್ದವು. ಆದರೆ ಈಗ ಈ ಹೋರಾಟ, ಯುದ್ಧಗಳು ಪುನಃ ಕಾಲಾತೀತವಾಗುತ್ತಿವೆ. ಹಾಗಾಗಿ ಸಾಮಾನ್ಯ ಜನಜೀವನ ನಾಶವಾಗುತ್ತಿದೆ. ಈಗಲಂತೂ ಯುದ್ಧವೆಂದರೆ ಜನರನ್ನು ಕೊಲ್ಲುವುದು ಎಂದು ತಿಳಿದಿದ್ದಾರೆ ಯುದ್ಧ ಪಿಪಾಸುಗಳು. ಯುದ್ಧವು ನಿಶ್ಚಿತ ಉದ್ದೇಶ, ನಿಶ್ಚಿತ ಗುರಿ, ನಿಶ್ಚಿತ ದಿನದಂದೇ ಅಷ್ಟೇ ನಡೆದರೆ ಅದರಿಂದ ಸಾಮಾನ್ಯ ಜನಜೀವನ ನಾಶವಿಲ್ಲ. ಹಾಗಾಗಿ ಆ ರೀತಿಯ ಕೆಲ ಪರಿಷ್ಕರಣೆ ಮಾಡಬಹುದಲ್ಲವೆ? ಹಿಂದೆ ತಿಳಿಸಿದ ಆ ಮುಖ್ಯ ಸೂತ್ರವನ್ನು ಬಳಸಿದರೆ, ಅದನ್ನು ಸರಕಾರವ ಮಾಡಿದರೆ, ಆ ಸಂಬಂಧಿಯಾದ ಅನುದಾನ ಕೊಟ್ಟಲ್ಲಿ ಸಂಶೋಧನೆಯಿಂದ ಉತ್ತಮ ಫಲಿತಾಂಶ ಖಂಡಿತವಲ್ಲವೆ?

ಈ ಮುಖದಲ್ಲಿ ಪ್ರಯತ್ನ ಖಂಡಿತ ಅಪರಾಧವಲ್ಲ. ಭೂಮಿಯ ಆಳದಲ್ಲಿ ಮಹಾಸ್ಫೋಟವನ್ನು ಮಾಡುತ್ತೇವೆಂದು ಮೂವತ್ತು ವರ್ಷಗಳಿಂದ ಸಾಧನೆ ಮಾಡುತ್ತಿರುವವರನ್ನು ಸರಕಾರ ಪೋಷಿಸುತ್ತಿಲ್ಲವೆ? ಚಂದ್ರನ ಮೇಲೆ ನೀರಿದೆ ಎಂದು ಸಂಶೋಧನೆ ಮಾಡಲ ನಮ್ಮ ಸರಕಾರ ಎಷ್ಟು ಹಣ ಸುರಿದಿದೆ? ನಮ್ಮ ದೇಶದ ಹವಾಮಾನ ಇಲಾಖೆಗೆ ವಾರ್ಷಿಕ ವೆಚ್ಚ ಎಷ್ಟು? ಆದರೆ ರಾಯಚೂರಿನ ದುರಂತ ಪಾಕಿಸ್ತಾನಿಗಳ ಕೈವಾಡವಲ್ಲವಲ್ಲ. ಹವಾಮಾನ ಮಾಪನ ಇಲಾಖೆಗೆ ತಿಳಿಯದೆ ಇದಾಯ್ತೆ? ಗಣಿ ಮತ್ತು ಭೂಗರ್ಭ ಇಲಾಖೆ ಏಕೆ ಭೂಕಂಪನದ ಬಗ್ಗೆ ಮಾಹಿತಿ ಕೊಡುವುದಿಲ್ಲ? ಕೆಲ ಬಾರಿ ಮಾಹಿತಿ ಕೊಟ್ಟರೂ ಅದು ಠುಸ್ ಪಟಾಕಿ ಆದದ್ದೇ ಜಾಸ್ತಿ. ಹಾಗೆಂದು ಅವು ನಿರುಪಯುಕ್ತವೆನ್ನುವುದಿಲ್ಲ. ಆದರೆ ಅದರ ಜೊತೆಯಲ್ಲಿ ಈ ಮೇಲೆ ಹೇಳಿದ ಅಧ್ಯಯನ ಸಂಶೋಧನೆಯೂ ನಡೆದರೆ ಏನು ನಷ್ಟ? ಚಿಂತಿಸಿ. ವಿಶಾಲ ಹೃದಯಿಗಳಾಗಿ.

“ಒಕ್ಕಣ್ಣ ರಾಜ್ಯದಲ್ಲಿ ಎರಡು ಕಣ್ಣಿದ್ದರೂ ಮುಚ್ಚಿಕೊಳ್ಳಿ” ಕಾರಣ ಎರಡನೇ ಕಣ್ಣನ್ನು ಅಲ್ಲಿನ ಒಕ್ಕಣ್ಣರು ಕೀಳುತ್ತಾರೆ. ಅಂದರೆ ವಿಜ್ಞಾನವೆಂಬ ಒಂದು ಮೋಸ ಪ್ರಪಂಚ. ಆಧ್ಯಾತ್ಮಿಕತೆಯೆಂಬ ಇನ್ನೊಂದು ಮೋಸ ಪ್ರಪಂಚದ ವಿರುದ್ಧ ಹೋರಾಡುತ್ತಲೇ ಇದೆ. ಅದಕ್ಕೆ, ಅಂದರೆ ವಿಜ್ಞಾನಕ್ಕೆ ವಿಚಾರವಾದಿ ಸಾರಥ್ಯ, ಆಧ್ಯಾತ್ಮಿಕತೆಗೆ ಭಂಡರ ಸಾರಥ್ಯ. ಇದರ ಹೊರತುಪಡಿಸಿದ ಒಂದು ವಿಶಾಲ ಧರ್ಮ ಜಿಜ್ಞಾಸುಗಳು ಈಗಲೂ ಈ ಭೂಮಿಯಲ್ಲಿದ್ದಾರೆ. ಅವರ ನೇತೃತ್ವದಲ್ಲಿ ಏಕೆ ಬುದ್ಧಿಜೀವಿಗಳು ಈ ಸಮಸ್ಯೆಗಳನ್ನು ಗುರುತಿಸುವ ಪ್ರಯತ್ನ ಮಾಡಬಾರದು? ವ್ಯರ್ಥ, ಮೈಲಿಗೆ, ದ್ವೇಷ, ಅಸೂಯೆ ಬೇಡ, ವಿಶಾಲ ಚಿಂತನೆ ಮಾಡಿರಿ.

ಹಲವು ಲಕ್ಷ ವರ್ಷಗಳಿಂದ ಈ ಭೂಮಿಯಲ್ಲ ಜೀವಿಗಳು ಬೆಳೆದು ಬಂದಿವೆ. ಆಗ ಈ ವಿಜ್ಞಾನವೆಂಬ ಅಜ್ಞಾನ ಇರಲಿಲ್ಲ. ಕೇವಲ ೩೦೦ ವರ್ಷದ ಇತಿಹಾಸ ಈ ವಿಜ್ಞಾನಕ್ಕಿರುವುದು. ಅದರ ಮುಂದೆ ಹೋದರೆ ಪ್ರಪಂಚವೆಲ್ಲಾ ಅಜ್ಞಾನವೇ ಇತ್ತೇ? ಖಂಡಿತಾ ವಿಪುಲ ಜ್ಞಾನ ಹಿಂದೆಯೂ ಇತ್ತು. ಬ್ರಿಟಿಷರು ವ್ಯವಸ್ಥಿತವಾಗಿ ಅದನ್ನು ನಾಶ ಮಾಡಿ ಈಗ; ಪ್ರಪಂಚವೆಲ್ಲಾ ಅಜ್ಞಾನಮಯವಾಗಿತ್ತು ಎಂದು ಇತಿಹಾಸ ಬರೆದರು. ಅದನ್ನೇ ಓದಿ ಬೆಳೆದರು ಈಗಿನ ಇತಿಹಾಸಜ್ಞರು. ಆದರೆ ಅದು ಸತ್ಯವಲ್ಲ. ಪ್ರಪಂಚವು ಬೆಳೆಯುವುದು “ಭೂತದ ಚಿಂತನೆ ಅನುಭವ ಫಲಿತವನ್ನು ಆಧರಿಸಿ ಭವಿಷ್ಯಕ್ಕೆ ಪೂರಕವಾಗಿ ಬದ್ಧತೆಯೊಂದಿಗೆ ವರ್ತಮಾನಕಾಲದಲ್ಲಿ ಬೆಳೆಯುತ್ತದೆ”. ಅದೇ ಸಹಜ ಪ್ರಕೃತಿ. ಅದನ್ನು ಈಗಿನ ಇತಿಹಾಸಜ್ಞರು ಅರ್ಥಮಾಡಿಕೊಂಡರೆ ಸಮಾಜಕ್ಕೆ ನ್ಯಾಯ ಒದಗಿಸಬಹುದು. ರಾಜರ ಕರ್ತವ್ಯ ಪ್ರಜೆಗಳ ರಕ್ಷಣೆಯೇ ವಿನಃ ಪ್ರಜೆಗಳ ಅಂತ್ಯಸಂಸ್ಕಾರವಲ್ಲ. ಒಂದು ಭೂಗತ ಪಾತಕಿಗಳ ವಿದ್ವಂಸದಿಂದ ಜನ ಸತ್ತ ಮೇಲೆ ದುಃಖದ ನಾಟಕವಾಡಿ ಪರಿಹಾರವೆಂದು ಸತ್ತವರ ಅಂತ್ಯಕ್ರಿಯೆ ಮಾಡಿದರೆ ಏನುಪಯೋಗ? ಹಲವಾರು ಲಕ್ಷ ಅಭಿಮಾನವಿಲ್ಲದ ಕಾಗದದ ಚೂರು ಕೊಟ್ಟು ತಾತ್ಕಾಲಿಕ ಶಮನ ಮಾಡದರೆ ಅದರಿಂದ ನೊಂದ ಲಕ್ಷ ಲಕ್ಷ ಭಯೋತ್ಪಾದಕರು ಹುಟ್ಟುತ್ತಾರೆ. ಸಮೂಲವಾಗಿ ಭದ್ರ, ರಕ್ಷಣೆ ಸರಕಾರದ ಕರ್ತವ್ಯ. ಅದು ಬಿಟ್ಟು ಸತ್ತ ಮೇಲಿನ ಸಾಂತ್ವನವಲ್ಲ ಚಿಂತಿಸಿ.

ನೆರೆ, ಉತ್ಪಾತ, ರೋಗ, ಬರ, ಭೂಕಂಪ, ಬಿರುಗಾಳಿ, ಯುದ್ಧ, ಇವೆಲ್ಲಾ ಅನಿರೀಕ್ಷಿತವಲ್ಲ, ಪೂರ್ವ ನಿಯೋಜಿತ. ಹಾಗಾಗಿ ಆ ಬಗ್ಗೆ ಅಧ್ಯಯನ ಮಾಡಿ ಪ್ರಾಕೃತಿಕ ನಡೆ ಗುರುತಿಸಿ ಅದರ ತಾಳ ತಪ್ಪದಂತೆ ಸರಿಯಾದ ತಾಳದಲ್ಲಿ ನಾವೂ ಹೆಜ್ಜೆ ಹಾಕದರೆ ಬೇಕಾದಷ್ಟು ಮಹೋತ್ಪಾತಗಳಿಂದ ರಕ್ಷಣೆ ಪಡೆಯಬಹುದು. ಅದು ಬಿಟ್ಟು ಇಂತಹಾ ಬರ, ಬಿರುಗಾಳಿ ಬರಲಿ ಎಂದು ಹಾರೈಸುವ ವರ್ಗವನ್ನು ಬೆಳೆಸುವ ಕೆಲಸ ಮಾಡುವುದು ಒಳ್ಳೆಯದಲ್ಲ. ಉರಿವ ಮನೆಯಲ್ಲಿ ಹಿರಿದುಂಡವರೆಷ್ಟೋ ಎಂಬಂತೆ ಪರಿಸ್ಥಿತಿಯ ದುರುಪಯೋಗ ಒಳ್ಳೆಯದಲ್ಲ. ಅದಕ್ಕೆ ಅವಕಾಶವಾಗದಂತಿರಲಿ ಸರಕಾರ. ಸದ್ಯಕ್ಕೆ ಈ ನಿಟ್ಟಿನಲ್ಲಿ ಸರಕಾರ ಮುತ್ಸದ್ದಿಗಳು ಚಿಂತಿಸಬೇಕೆಂದು ಪ್ರಾರ್ಥನೆ.

ಒಟ್ಟಾರೆ ಪ್ರಕೃತಿ ಮುನಿದು ಮೈಕೊಡವಿದಲ್ಲಿ ರಕ್ಷಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಅದಕ್ಕಾಗಿ ಮುನ್ನೆಚ್ಚರಿಕೆಯೇ ಮುಖ್ಯ. ಹಾಗಂತ ಪ್ರಲಯವಾಗುತ್ತದೆ, ಸಮಗ್ರ ಪ್ರಕೃತಿಯೇ ನಾಶವಾಗುತ್ತದೆಯೆಂದಲ್ಲ, ಒಟ್ಟಾರೆ ಸಮೂಹ ಪ್ರಾದೇಶಿಕ ವಿಪತ್ತು ಆಯಾಯ ಪ್ರದೇಶಕ್ಕೆ ಹೊಂದಿ ಪರಿಣಾಮ ಭಿನ್ನವಾಗಿದೆ. ಅದು ಯಾವುದೂ ಪರಿಣಾಮಕಾರಿಯಾಗಿ ಇನ್ನಿಲ್ಲದಂತೆ ಮಾಡಲು ಸಾಧ್ಯವಿಲ್ಲ. ಆದರೆ ಬುದ್ಧಿವಂತಿಕೆಯಿಂದ ರಕ್ಷಿಸಲು ಸಾಧ್ಯ. ಮನುಷ್ಯ ನದಿಯಲ್ಲಿ ಮುಳುಗುತ್ತಿದ್ದಾಗ, ಮನೆಯು ಸುಟ್ಟು ಉರಿಯುತ್ತಿದ್ದಾಗ, ಎತ್ತರದಿಂದ ಜಾರಿ ಬೀಳುತ್ತಿದ್ದಾಗ, ಹಸಿದು ನರಳುತ್ತಿದ್ದಾಗ, ತೀಕ್ಷ್ಣತಮ ರೋಗದಿಂದ ನರಳುತ್ತಿದ್ದಾಗ, ಪಾಪಿಷ್ಠರಿಂದ ಹತ್ಯೆಗೊಳಗಾಗುತ್ತಿದ್ದಾಗ ಯಾವುದೇ ಜಾತಿ, ಮತ, ಸಿದ್ಧಾಂತ, ಭೋಜ್ಯ, ಅಭೋಜ್ಯ ಲೆಕ್ಕಿಸದೆ ಸಿಕ್ಕಿದ ಆಶ್ರಯ ಪಡೆದು ಬದುಕಬೇಕೆಂದು ಧರ್ಮಶಾಸ್ತ್ರ ಹೇಳುತ್ತದೆ. ಅದಕ್ಕೆ ವೈಜ್ಞಾನಿಕತೆಯ ಜಾತೀಯ ವಾದ ಬೇಡ. ಯಾವುದೇ ರೀತಿಯಲ್ಲೂ ಪ್ರಯತ್ನಿಸಬಹುದು ತಪ್ಪಲ್ಲ.

ಹಾಗಾಗಿ ಏಕೆ ವೇದಮಂತ್ರಗಳ ಆಶ್ರಯ ಪಡೆದು ಈ ಉತ್ಪಾತಾದಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಬಾರದು? ಕೆಲ ಮತೀಯ ಭ್ರಾಂತ ರಾಜಕಾರಣಿಗಳಿಗೆ ಅಸಮಾಧಾನವಾಗಬಹುದಷ್ಟೆ. ಆದರೆ ಅದೆಲ್ಲಾ ಕೇವಲ ಓಟಿಗಾಗಿ. ಅವರೂ ಕೂಡ ತಮ್ಮ ಗೆಲುವಿಗಾಗಿ ನಾನಾ ಹೋಮ ಹವನಗಳನ್ನು ಮಾಡಿಸುತ್ತಾರೆ. ಯಾವ ಸಿದ್ಧಾಂತ, ಯಾವ ಪದ್ಧತಿ, ಯಾವ ಮತ ಮುಖ್ಯವಲ್ಲ. ಒಟ್ಟಾರೆ ಜನತೆಗೆ ಶೀಘ್ರವಾಗಿ ಭದ್ರ, ಶುಭ, ಮಂಗಳಪ್ರದವಾದ ಜೀವನ ನೀಡುವುದು ಸರಕಾರದ ಕರ್ತವ್ಯವಲ್ಲವೆ? ಹಾಗಿದ್ದಲ್ಲಿ ಈ ಮುಖದಲ್ಲಿ ಒಮ್ಮೆ ಪ್ರಯತ್ನಿಸಿ ನೋಡಿರಿ. ಕಾಡನ್ನು ಕಾಯುವುದಕ್ಕೆ ಇಲಾಖೆ ಇದೆ, ಆದರೆ ಕಾಡು ನಾಶವಾಗುತ್ತಲೇ ಇದೆ. ಭ್ರಷ್ಟಾಚಾರ ಕಾಯುವುದಕ್ಕೆ ಲೋಕಾಯುಕ್ತ ಇಲಾಖೆ ಇದೆ, ದೇಶದಲ್ಲಿ ಭ್ರಷ್ಟಾಚಾರವಿಲ್ಲವೆ? ರಕ್ಷಣೆಗೆ ಆರಕ್ಷಕ ಇಲಾಖೆ ಇದೆ, ಆದರೆ ಶ್ರೀಸಾಮಾನ್ಯನಿಗೆ ಏನು ರಕ್ಷಣೆ ಇದೆ? ಹಾಗೆ ಉತ್ಪಾತ ಕಾವಲು ಇಲಾಖೆಯೆಂದು ರೂಪಿಸಿ ಅದರ ಮುಖೇನ ಈ ಪ್ರಕ್ರಿಯೆ ನಡೆಸುವುದಾದರೆ ಅದರ ವಿವರ ಈ ಕೆಳಗಿನಂತಿದೆ.

ಮುಖ್ಯ ಆವಶ್ಯಕ ಸೌಲಭ್ಯಗಳು:-
೧. ಸ್ವಲ್ಪ ವಿಶಾಲ ಸ್ಥಳ
೨. ಗಿಡಮೂಲಿಕೆ
೩. ನಾರುಬೇರುಗಳು
೪. ಖನಿಜಗಳ
೫. ಧಾತುಗಳು
೬. ತುಪ್ಪ
೭. ಭತ್ತ
೮. ಎಳ್ಳು
೯. ಸಮಿತ್ತು
೧೦. ದರ್ಭೆ
೧೧. ಇತರೆ ಹೋಮ ಪರಿಕರಗಳು
೧೨. ಒಂದು ಬ್ರಾಂಚಿಗೆ ೧೨ ಜನ
೧೩. ಪರಿಚಾರಕರು ೩ ಜನ
೧೪. ಅಂದಾಜು ೧೦೦ ಕಿ.ಮೀ. ವ್ಯಾಪ್ತಿಯಲ್ಲಿ ಅಧ್ಯಯನ ಮಾಡಿ ಆ ಪ್ರದೇಶದ ಎಲ್ಲವನ್ನೂ ಗುರುತಿಸಬಹುದು.

೯೦% ಖಂಡಿತಾ ಯಶಸ್ವಿ!! ದೇಶದೆಲ್ಲೆಡೆ ಗಡಿವ್ಯಾಪ್ತಿಯಲ್ಲಿಯೂ ಮಾಡಬಹುದು. ಅನಾವಶ್ಯಕ ಯುದ್ಧ ತಪ್ಪಿಸಬಹುದು.

ಈ ರೀತಿ ಒಂದು ಇಲಾಖೆ ರೂಪಿಸಿದರೆ ಇತರೆ ಸಾರ್ವಜನಿಕ ಇಲಾಖೆಗಿಂತ ಹತ್ತು ಪಟ್ಟು ಹೆಚ್ಚು ಸಮರ್ಥ ಕಾರ್ಯ ನಿರ್ವಹಣೆ ಸಾಧ್ಯ. ಆಗ ಈ ದೇಶೀಯ ನಷ್ಟದ ಮೊತ್ತ ಸಂಪೂರ್ಣ ನಿಲ್ಲುತ್ತದೆ. ಜನಜೀವನ ಸಮೃದ್ಧವಾಗುತ್ತದೆ. ಋಗ್ವೇದ, ಅಥರ್ವವೇದಗಳಲ್ಲಿ ಉದಾಹರಿಸಿದ ಮಂತ್ರಗಳಿಂದ ಈ ಕಾರ್ಯ ಯಶಸ್ವೀಗೊಳಿಸಬಹುದು. ಆರಂಭಿಸಿ ಒಂದೇ ವರ್ಷದಲ್ಲಿ ಪೂರ್ಣ ಮಾಹಿತಿ ಪಡೆಯಲು ಸಾಧ್ಯ. ಇಲ್ಲಿ:
೧. ಸಪ್ತ ಪಾತಾಳ ಕುಂಡಗಳು- ೭ ರೀತಿಯ ಭೂ ಉತ್ಪಾತವನ್ನೂ,
೨. ಮೂರು ಭೂಕುಂಡಗಳುಭೂಮಿಯಲ್ಲಿನ ಉತ್ಪಾತಗಳನ್ನೂ,
೩. ಎರಡು ನಭೋಕುಂಡಗಳುಖಗೋತ್ಪಾತವನ್ನೂ ನಿಖರವಾಗಿ ಗುರುತಿಸುತ್ತವೆ.
ಇದಕ್ಕಾಗಿ ಸರಕಾರ ಒಂದು ಹತ್ತು ವರ್ಷದ ಯೋಜನೆಯನ್ನು ರೂಪಿಸಿ ಇವುಗಳನ್ನು ಗುರುತಿಸಿ ತಡೆಯುವ ಪ್ರಯತ್ನ ಮಾಡಬಹುದಲ್ಲವೆ? ಈ ಮುಖದಲ್ಲಿ ಜಿಜ್ಞಾಸುಗಳು ಚಿಂತಿಸುವಿರಾ? (ಮಡಿವಂತಿಕೆ ಬಿಟ್ಟು ಚಿಂತಿಸಿ).

ಒಂದು ಕಥೆ ಕೇಳಿ. ಮೂವರು ಪಂಡಿತರು ಒಂದಿನ ಒಂದು ನದಿಯನ್ನು ನಾವೆಯಲ್ಲಿ ದಾಟುತ್ತಿದ್ದರು. ಅವರಿಗೆ ತಾವು ಪಂಡಿತರೆಂಬ ಅಹಂಕಾರ. ನಾವಿಕನನ್ನು ಕೇಳಿದರು ನಾವಿಕನೇ, ನಿನಗೆ ತರ್ಕಶಾಸ್ತ್ರ ಗೊತ್ತೆ? ಇಲ್ಲವೆಂದ ನಾವಿಕ. ನೀನು ಕಾಲುಭಾಗ ಸತ್ತಂತೆ ಎಂದ ಒಬ್ಬ. ಇನ್ನೊಬ್ಬ ಕೇಳಿದ ನಿನಗೆ ಧರ್ಮಶಾಸ್ತ್ರ ಗೊತ್ತೆ? ಎಂದು. ಇಲ್ಲವೆಂದ ನಾವಿಕ. ಆಗ ನೀನು ಅರ್ಧಸತ್ತಂತೆ ಎಂದ. ಇನ್ನೊಬ್ಬ ಪಂಡಿತ ಕೇಳಿದ ನೀನು ವೇದ ಓದಿದ್ದೀಯ? ಇಲ್ಲಾ ಸ್ವಾಮಿ ಎಂದು. ಆಗ ಹೇಳಿದ ಛೀ, ವ್ಯರ್ಥ ನಿನ್ನ ಬಾಳು, ಬದುಕಿದ್ದು ವ್ಯರ್ಥವೆಂದ. ಆ ನದಿ ಮಧ್ಯದಲ್ಲಿ ದೋಣಿ ತೂಫಾನಿಗೆ ಸಿಕ್ಕಿಕೊಂಡಿತು. ಅವನು ಕೇಳಿದ ಅಯ್ಯಾ! ನಿಮಗೆ ಈಜಲು ಬರುತ್ತದೆಯೇ? ಎಂದು. ಪಂಡಿತರು ಇಲ್ಲವೆಂದರು. ಆಗ ನಾವಿಕ ಹೇಳಿದ ನೀವು ಪೂರ್ಣ ಸತ್ತಂತೆಯೇ. ಈ ದರ್ಮ, ಅರ್ಥ, ತರ್ಕ, ನ್ಯಾಯ, ವೇದಗಳು ಬದುಕುವ ವಿಧ್ಯೆ ಕಲಿಯದ ನಿಮಗೆ ವ್ಯರ್ಥ ಸಂಪದ. ಕೋಣನ ಕೊಂಬಿನ ಮೇಲೆ ಕಟ್ಟಿದ ಜೀನಿನಂತೆ ಎಂದು ಹಿಡಿತ ತಪ್ಪಿದ ಮುಳುಗುತ್ತಿರುವ ದೋಣಿ ಬಿಟ್ಟು ಹಾರಿ ಈಜಿ ಬದುಕಿದ. ಪಂಡಿತರು ಮುಳುಗಿ ಸತ್ತರು.

ಅಯ್ಯಾ ಮುತ್ಸದ್ದಿಗಳೇ! ನೀವು ವಿಜ್ಞಾನವೆಂದು ಬೀಗುತ್ತಾ ಸಾಮಾನ್ಯ ಜ್ಞಾನ, ಬದುಕುವ ವಿಧ್ಯೆ ಕಲಿಸುತ್ತಿಲ್ಲ. ಹಾಗಾಗಿ ಬಡ, ಮಧ್ಯಮ ವರ್ಗ ಸೋತು ಪರಾವಲಂಬಿಯಾಗಿದೆ. ದಯವಿಟ್ಟು ಪ್ರಾದೇಶಿಕ ಸಾಮಾನ್ಯಜ್ಞಾನ ಶಾಲೆಗಳಲ್ಲಿ ಮಕ್ಕಳಿಗೆ ಬೋಧಿಸುವಂತಾಗಲಿ, ಆಗ ಇಂತಹಾ ಉತ್ಪಾತಗಳಿಂದ ಅವರೇ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಾರೆ. ನೀವು ರಕ್ಷಣೆಗೆ ಹೋಗುವಲ್ಲಿಯವರೆಗೆ ಅವರು ಸಾಯುವುದು ಬೇಕಿಲ್ಲ. ಪ್ರಾಥಮಿಕ ಶಿಕ್ಷಣದಲ್ಲಿ ಮುಖ್ಯವಾಗಿ ಪ್ರಾದೇಶಿಕ ಜ್ಞಾನ ಬೋಧಿಸಲ್ಪಟ್ಟರೆ ಮಘೆಯು ಮೊಗೆದು ಸುರಿಯುವುದು, ಉತ್ತರೆಯು ಉತ್ತರ ತೀಕ್ಷ್ಣತೆ, ಹಸ್ತಾಳ ಜಾರತನ, ಚಿತ್ತೆಯ ವಿಚಿತ್ರ ಬುದ್ಧಿ, ಸ್ವಾತಿಯ ಪಾವಿತ್ರ್ಯತೆ, ವಿಶಾಖೆಯ ತೀಕ್ಷ್ಣತೆ ಅರಿವಿದ್ದರೆ ಈ ಉತ್ಪಾತ ಮಳೆ ಅರ್ಥವಾಗುತ್ತಿತ್ತು. ಇದು ರಾಯಚೂರು ಜನರ ಸಾಮಾನ್ಯಜ್ಞಾನ. ಯಾವಾಗ ಆರ್ದ್ರಾ ಒಣಗುತ್ತದೆ, ಪುಷ್ಯನು ನೀರು ಕೊಡಲಿಲ್ಲವೊ, ಆಗ ಹಸ್ತ ಮತ್ತು ಚಿತ್ತಿಯು ತಮ್ಮ ಗುಣ ತೋರಿಸುತ್ತಾರೆ ಎಂಬುದು ಅಲ್ಲಿನ ಜಾನಪದದ ನಂಬಿಕೆ. ಅದು ತಿಳಿದಿದ್ದರೆ ಎಚ್ಚರಿಕೆ ವಹಿಸಿ ಯಾವ ನಷ್ಟ ಕಷ್ಟವ ಇಲ್ಲದೆ ಪಾರಾಗಬಹುದಿತ್ತು.

ಮುಖ್ಯವಾಗಿ ಅಲ್ಲಲ್ಲಿನ ಪ್ರದೇಶಿಕ ಜ್ಞಾನಬೋಧನೆಯಾಗಬೇಕು, ಜನಕ್ಕೆ. ಆಗ ಎಲ್ಲರೂ ತಮ್ಮ ರಕ್ಷಣೆ ತಾವೇ ಮಾಡಿಕೊಳ್ಳಬಲ್ಲರು. ಇಲ್ಲವಾದರೆ ಸರಕಾರ ಹೆಲಿಕಾಪ್ಟರ್ ತರುತ್ತದೆಯೆಂತಾದರೆ ಯಾರಿಗೆ ಬೇಡ ವಾಯುಯಾನ? ಹಿಂದಿನ ಸುನಾಮಿ ಪ್ರಕರಣ ನೆನಪಿರಬಹುದು. ಅಲ್ಲಿ ಅಲ್ಲಿನ ಮೂಲನಿವಾಸಿಗಳು ಯಾರೂ ಸಾಯಲಿಲ್ಲ. ಅವರು ವಿಜ್ಞಾನ ಓದಿಲ್ಲ, ಅನಕ್ಷರಸ್ಥರು. ಆದರೆ ಸಾಮಾನ್ಯ ಜ್ಞಾನದರಿವು ಅವರಿಗಿತ್ತು, ಬದುಕಿದರು. ಜಾರಿ ಬಿದ್ದ ಮಗು ಯಾರಿಲ್ಲದಿದ್ದರೆ ತಾನೇ ಎದ್ದು ಗಾಯ ಒರೆಸಿಕೊಂಡು ಮನೆಗೆ ಹೋಗುತ್ತದೆ. ತಂದೆ, ತಾಯಿ ನೋಡಿದರೆ ಬಿದ್ದಲ್ಲಿಂದ ಏಳದೇ ಕೂಗುತ್ತದೆ. ಈ ಸಾಮಾನ್ಯ ಜ್ಞಾನ ಅರ್ಥಮಾಡಿಕೊಳ್ಳಿರಿ ಎಂದು ಹೇಳುತ್ತಾ ಈ ಲೇಖನ ಮುಗಿಸುತ್ತಿದ್ದೇನೆ.

No comments:

Post a Comment