Saturday, 2 November 2013

ಜಗತ್ತಿನ ಸತ್ಯದರಿವು - ಋಗ್ವೇದದಲ್ಲೊಂದು ಗಣಿತಸೂತ್ರ : ಭಾಗ ೧|| ಶ್ರೀ ಗುರುಭ್ಯೋ ನಮಃ ||
          ಮಾನವನು ಈ ಜಗತ್ತಿನಲ್ಲಿ ಬುದ್ಧಿಜೀವಿಯಾಗಿ ಪ್ರಾದುರ್ಭಾವಕ್ಕೆ ಬಂದಾಗ ಅವನಲ್ಲಿ ಕಂಡು ಬಂದ ಮೊದಲ ಚಿಂತನೆಯೇ ಇದೇನು? ಇದೇಕೆ? ಎಂಬುದು. ಆ ನಿಟ್ಟಿನಲ್ಲಿ ನಿರಂತರ ಸಂಶೋಧನೆ ನಡೆಯುತ್ತಲೇ ಇದೆ. ಈ ಸೃಷ್ಟಿಯ ರಹಸ್ಯವು ಅರಿತುಕೊಳ್ಳಲು ನಮ್ಮ ಋಷಿಮುನಿಗಳು ಹಲವು ಮಾರ್ಗದಲ್ಲಿ ಚಿಂತನೆ ನಡೆಸಿದ್ದರು. ಮತ್ತು ಅವರ ಸಂಶೋಧನೆಗಳೆಲ್ಲವನ್ನು ಒಂದು ನಿರ್ದಿಷ್ಟ ಗಣಿತ ಸೂತ್ರದಲ್ಲಿ ಸೂಕ್ಷ್ಮೀಕರಿಸಿ ದಾಖಲಿಸಿದರು. ಅವನ್ನು ವೇದದಲ್ಲಿ ನಾವು ಕಾಣಬಹುದು.  ಪ್ರತಿಯೊಂದು ಘಟನೆಯು ಕಾರ್ಯವೂ ಕೂಡ ಕಾರಣ + ಕರ್ತನಿಲ್ಲದೆ   ಆಗುವುದಿಲ್ಲವೆಂದು   ಸರ್ವವಿದಿತ. ಹಾಗಿದ್ದ ಮೇಲೆ ಆಕಸ್ಮಿಕವೆಂಬುದು ಸತ್ಯವಲ್ಲ. ಕರ್ತ+ಕಾರಣದಿಂದಾಗಿ ಕಾರ್ಯ ಘಟಿಸುತ್ತದೆಯೆಂಬುದು ಎಷ್ಟು ಸತ್ಯವೋ ಹಾಗೇ ಆಕಸ್ಮಿಕವೆಂಬುದು ಅಷ್ಟೇ ಸುಳ್ಳು.  ಹಾಗಿದ್ದರೂ ಪ್ರಪಂಚವೆಲ್ಲವೂ ಆಕಸ್ಮಿಕವೆಂಬ ನಂಬಿಕೆಯ ನೆಲೆಯಲ್ಲಿ ರೂಪುಗೊಂಡಿದೆ.  ಪ್ರಸಕ್ತ ಸಮಕಾಲೀನ ವಿಜ್ಞಾನವೂ ಕೂಡ ಅದೇ ನೆಲೆಯಲ್ಲಿ ಮುಂದುವರಿಯುತ್ತಿದೆ. ಆದರೆ ವೇದ ವಿಜ್ಞಾನಿಗಳು ಮೊದಲು ಕರ್ತನನ್ನು ಗುರುತಿಸಿ ಕಾರಣ ಅರಿತು ಕಾರ್ಯದ ರೂಪುರೇಷೆಯನ್ನು ಅರಿತರು. ಹಾಗಾಗಿ ಆಕಸ್ಮಿಕ ಅಲ್ಲವೆಂದರು.  ಅದೆಲ್ಲಾ ಒಂದು ನಿರ್ದಿಷ್ಟ ಸೂತ್ರದಂತೆ ಕಾರ್ಯ ನಿರ್ವಹಿಸುತ್ತವೆ.  ಆ ನಿರ್ದಿಷ್ಟ ಸೂತ್ರವನ್ನು ಅರಿತವನೇ ಜ್ಞಾನಿ.  ಅವನೇ ಮುನಿ, ಋಷಿ, ದ್ರಷ್ಟಾರನೆಂದರು. ಅವನ್ನೆಲ್ಲಾ ಒಂದು ಉತ್ತಮ ಗಣಿತ ಸೂತ್ರಗಳನ್ನು ರಚಿಸಿ ಮಂತ್ರರೂಪದಲ್ಲಿ ಅಕ್ಷರ ಸಂಯೋಜನೆ ಮಾಡಿ ಅರ್ಥಬದ್ಧರೀತಿಯಲ್ಲಿ ವೇದಗಳಲ್ಲಿ ಅಡಕಿಸಿದರು. ಅವೆಲ್ಲಾ ಹೆಚ್ಚನವು ಸೂತ್ರೀಕೃತ ಗಣಿತ ಪ್ರಮೇಯಗಳು. ಅವುಗಳ ವಿಷಯವಾದ ಒಂದು ವಿಶೇಷಾಧ್ಯಯನವೇ ಈ ಲೇಖನ ಪುಂಜಗಳು.  ಋತ್ವಿಕ್ ವಾಣಿ ಬಳಗದ ಸದಸ್ಯರಿಗಾಗಿ ಈ ಪ್ರಬಂಧಗಳನ್ನು ಮಂಡಿಸುತ್ತಿದ್ದೇನೆ.  ನೀವೂ ಇದರ ಹೆಚ್ಚಿನ ಅಧ್ಯಯನ ಮಾಡಿರೆಂದು ಪ್ರಾರ್ಥಿಸುತ್ತಾ ಜೀವಜಗತ್ತಿನ ಸೃಷ್ಟಿಯ ಸತ್ಯದರಿವನ್ನು ನನ್ನ ಅಳತೆಯ ವ್ಯಾಪಕತೆಯ ಮಿತಿಯಲ್ಲಿ ಬಿಚ್ಚಿಡುತ್ತಿದ್ದೇನೆ.  ಓದಿ ಅರ್ಥಮಾಡಿಕೊಳ್ಳಿರಿ.

ಋಕ್:  ಮಂ-1,  ಸೂಕ್ತ-1,  ಮಂತ್ರ-1
ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಮ್ |
ಹೋತಾರಂ ರತ್ನಧಾತಮಮ್ || ೧ ||

ಪ್ರಪಂಚ ಸೃಷ್ಟಿಯು ಶಾಖದಿಂದ. ಅದಕ್ಕೆ ಜೀವ ನೀರಿನಿಂದ.  ಅದರ ನಿರ್ದೇಶನ ಅಥವಾ ಕಾರಣ ಜೀವಯಜ್ಞ. ಅದರ ಕರ್ತಾರ ಪುರೋಹಿತ. ಉದ್ದೇಶ ಸಾಫಲ್ಯತೆಯೇ ದೇವತ್ವ.  ಫಲವೇ ಅನರ್ಘ್ಯ ಅಮೂಲ್ಯ ತತ್ವಗಳು.  ಭೋಕ್ತೃವು ಹೋತೃವು ಜಗತ್ತಿನ ಸೃಷ್ಟಿಯ ಮೂಲ ಉದ್ದೇಶ  ಸಮತೋಲನ.  ಅಸಮಾನತೆಯು ಸಮಾನ ಅರ್ಥವನ್ನು ನಾಶ ಪಡಿಸುತ್ತದೆ. ಆ ಅರ್ಥನಾಶವೇ ಪುನಃ ಸೃಷ್ಟಿಗೆ ಕಾರಣವಾಗುತ್ತದೆ. ತತ್ಸಂಬಂಧವಾದ ಕಾರ್ಯವು ಕರ್ತನಾದ ಪುರೋಹಿತನಿಂದ ಪ್ರೇಷಿಸಲ್ಪಡುತ್ತದೆ. ಅಂತಹಾ ಕಾರ್ಯ+ಕಾರಣ ಜಗತ್ತಿನಲ್ಲಿ ಫಲಸ್ವರೂಪದಾ ಭೋಕ್ತೃ ಯಜ್ಞವು ನಿರಂತರವಾಗಲೀ ಎಂಬುದೇ ಮೊದಲಾಗಿ ವೇದಪುರುಷನಲ್ಲಿ ಮಾಡುವ ಪ್ರಾರ್ಥನೆಯಾಗಿರುತ್ತದೆ. ಅದೇ ಅಪ್ರಕಟಿತ, ಅರ್ಥಬದ್ಧವಾದರೂ ಅರ್ಥವಾಗದ, ಪ್ರತ್ಯಕ್ಷವಾದರೂ ಕಾಣಲಾರದ ಸತ್ಯ ಅದೇ ಬ್ರಹ್ಮ. ಅದರರಿವೇ ಈ ಸಂಶೋಧನೆಯಾಗಿರುತ್ತದೆ. ಸಂಶೋಧನೆ ನಿರಂತರ ನಿತ್ಯ. ನಿತ್ಯಂ ವೇದಮಧೀಯತಾಂ ಎಂದಿದ್ದಾರೆ.  ಅಂದರೆ ವೇದದಲ್ಲಿ ನಮ್ಮ ಪೂರ್ವೀಕರು ಅಧ್ಯಯನ ನಡೆಸಿ ಇದಮಿತ್ಥಂ ಎಂದು ನಿರ್ಣಯಿಸಿ ಕಂಡು ಹಿಡಿದ ಸತ್ಯವನ್ನು ಬರೆದಿಟ್ಟಿದ್ದಾರೆ. ಅದರ ಅಧ್ಯಯನ ನಡೆಸಿ ನೀವು ನಿಮ್ಮ ಅರ್ಹತೆಗೆ ತಕ್ಕಂತೆ ಅರ್ಥಮಾಡಿಕೊಳ್ಳಿ. ಒಟ್ಟಾರೆ ಈ ಪ್ರಕೃತಿ ನಿರಂತರವಾಗಿರಲು ವೇದವಿದರೂ, ಬುದ್ಧಿಜೀವಿಗಳೂ, ಅರ್ಥವಾಗದ ಅಜ್ಞಾನಿಗಳೂ ಅರ್ಥಮಾಡಿಕೊಳ್ಳದ ಮೂರ್ಖರೂ, ಗೋಜಿಗೇ ಹೋಗದ ಪಾಖಂಡಿಗಳೂ ಎಲ್ಲರೂ ಸೃಷ್ಟಿಯ ಅನಿವಾರ್ಯ ಅಂಗವೆಂದಿದ್ದಾರೆ. ಅದೇ -
ಋಕ್:  ಮಂ-1,  ಸೂಕ್ತ-10,  ಮಂತ್ರ-1
ಗಾಯಂತಿ ತ್ವಾ ಗಾಯತ್ರಿಣೋಽರ್ಚಂತ್ಯರ್ಕಮರ್ಕಿಣಃ |
ಬ್ರಹ್ಮಾಣಸ್ತ್ವಾ ಶತಕ್ರತ ಉದ್ವಂಶ ಮಿವ ಯೇಮಿರೇ ||

ಪ್ರಕೃತಿ, ಸ್ವರ ಮೂಲ ಚೈತನ್ಯದಲ್ಲಿ ಪ್ರಚೋದನೆ ಗೊಂಡಲ್ಲಿ ಜೀವಸೃಷ್ಟಿ. ಅದು ನಿರಂತರವಾಗುವುದೇ ಗಾನ ತರಂಗ. ಅದರ ಪ್ರೇಷಕವೇ ಪ್ರಕೃತಿ. ಅದೇ ಕರ್ತಾ. ಅದೇ ಕಾರ್ಯ.  ಅದೇ ಕಾರಣ.  ಉದ್ದೇಶ ನಿರಂತರತೆ. ನಿತ್ಯನೂತನತೆ.  ಬ್ರಹ್ಮದ ತೊಡಗುವಿಕೆಯ ಲಕ್ಷಣವಿದು. ಹಲವು ಮುಖದಲ್ಲಿ ಪ್ರಕಟಗೊಳ್ಳುತ್ತಾ ಮರೆಯಾಗುತ್ತಾ ನಿತ್ಯೋತ್ಸಾಹದ ಚಂಚಲತೆಯ ಕುರುಹೇ ಗಾನ. ಅದೇ ವರಣಧ್ವನಿ. ಅರ್ಕವೊಂದು ಕ್ಷಣರೂಪ ಪಡೆದು ಕ್ಷಣವಾಗಿ ರಣವಾಗಿ ಕಾರಣವಾಗಿ ಮರಣವನ್ನಪ್ಪಿ ಉದ್ವಂಶಗೊಳ್ಳುವುದೇ ನಿರಂತರತೆ ಅದೇ ಬ್ರಹ್ಮ ಸಂಕಲ್ಪ.  ಈ ಪ್ರಕೃತಿಯಲ್ಲಿ ದೇವ ಉಳಿಯುತ್ತದೆ.  ಬೆಳೆಯುತ್ತದೆ.  ರಾಕ್ಷಸ ನಾಶಮಾಡಲ್ಪಡುತ್ತದೆ. ಮಾನವ ನಾಶವಾಗುತ್ತದೆ. ಅದೇ ಪರಿಣಾಮಕಾರೀ ಗಾನ ತರಂಗದ ದೇವ ಸೃಷ್ಟಿಯಾಗಿರುತ್ತದೆ.

ಋಕ್:  ಮಂ-1,  ಸೂಕ್ತ-24,  ಮಂತ್ರ-1
ಕಸ್ಯ ನೂನಂ ಕತಮಸ್ಯಾಂ ಋತಾನಾಂ ಮನಾಮಹೇ ಚಾರು ದೇವಸ್ಯ ನಾಮ |
ಕೋನೋ ಮಹ್ಯಾ ಅದಿತಯೇ ಪುನರ್ದಾತ್ ಪಿತರಂ ಚ ದೃಶೇಯಂ ಮಾತರಂ ಚ ||

ಯಾವುದು ಶೂನ್ಯವೋ ಅದೇ ಎಲ್ಲವೂ ಅಡಕವಾಗಿರುವ ಪೂರ್ಣಪಾತ್ರೆಯಾಗಿರುತ್ತದೆ. ಅಲ್ಲಿಯೇ ಸಕಲ ಋತುಗಳೂ ಅಡಕವಾಗಿವೆ. ಏನಕ್ಕೆಲ್ಲವೂ ಆದ ಆ ಶೂನ್ಯ ಅಥವಾ ಅಂಡದಿಂದ ಪ್ರಕಟಗೊಂಡ ಎಲ್ಲವೂ ಭಿನ್ನ ಭಿನ್ನ ರೂಪದ ಜೀವಿಗಳೇ. ಅದೇ ಆ ದೇವನ ಸೃಷ್ಟಿ. ಇಲ್ಲಿ ಅವುಗಳ ರೂಪ, ಚಹರೆ, ಕೃತ, ಕಾರ್ಯ, ಲಕ್ಷಣ, ಗುಣ, ಧರ್ಮ ಆಧರಿಸಿ ನಾವಿರಿಸಿಕೊಂಡ ಹೆಸರು ಭಿನ್ನವಷ್ಟೆ. ಆದರೆ ಎಲ್ಲವೂ ಒಂದೇ ಆಗಿರುತ್ತದೆ. ಗುಣಲಕ್ಷಣಗಳು ಕರ್ಮ ಕಾರಣ. ಕೃತ ಕಾರ್ಯಗಳು ಧರ್ಮವನ್ನಾಧರಿಸಿ ವ್ಯವಹರಿಸುತ್ತವೆ. ಹಾಗಾಗಿ ಕಾರಣೀಭೂತ ಪ್ರಪಂಚದಲ್ಲಿ ಅದಕ್ಕೆ ವಿಳಾಸದಾರರಾಗಿ ತಂದೆ ತಾಯಿಯರೇ ವಿನಃ ಅಂದರೆ ಚಹರೆ ದಾಯಕರೇ ವಿನಃ ಧಾತೃಗಳಲ್ಲ. ಅದೆಲ್ಲಾ ದೈವಸಂಕಲ್ಪವೆಂಬ ಸತ್ಯ ಅರಿಯಿರಿ. ಹಾಗಾಗಿ ತಂದೆ ತಾಯಿಯ ಕರ್ತೃತ್ವವೂ, ಬಂಧು ಬಳಗದ ಜ್ಞಾನವೂ, ಸಮಾಜದ ಸಹಕಾರವೂ, ಪರಿಸರದ ಪೂರಕತೆಯೂ ಎಲ್ಲವೂ ನಾವು ಜೀವಿಗಳಾಗಿ ಬಂದ ಮೇಲೆ ವಿಧಿಸಿಕೊಂಡ ಬಂಧನಗಳು. ಎಲ್ಲವೂ ಸಿಂಧುಶಯನನ ಸಂಕಲ್ಪ ಇಂದಿ ನೀ ಜಗವೆಲ್ಲಿ ಎಂದು ಮೈಮರೆವನೊ ಆಗಾತನೊಳು ಎಲ್ಲವೂ ಲೀನ ಜಗವಿನ್ನೆಲ್ಲಿದೆ | ಇದು ಸತ್ಯ ಸತ್ಯ ಸತ್ಯ. || 

ಋಕ್: ಮಂ-1,  ಸೂಕ್ತ-32,  ಮಂತ್ರ-10+14
ಅತಿಷ್ಠಂತೀನಾಮ ನಿವೇಶನಾನಾಂ ಕಾಷ್ಟಾನಾಂ ಮಧ್ಯೇ ನಿಹಿತಂ ಶರೀರಮ್ || ೧೦ ||
ಅಹೇರ್ಯಾತಾರಂ ಕಮಪಶ್ಯ ಇಂದ್ರ ಹೃದಿ ಯತ್ತೇ ಜಘ್ನುಷೋ ಭೀರಗಚ್ಛತ್ |
ನವ ಚ ಯನ್ನವತಿಂ ಚ ಸ್ರವಂತೀ ಶ್ಯೇನೋ ನ ಭೀತೋ ಅತರೋ ರಜಾಂಸಿ ||

ಧೈವ ನಿರ್ಣಯ ಸಂಕಲ್ಪದಿಂದ ಕರ್ಮ ಕಾರಣವಾಗಿ ಜನ್ಮಕ್ಕೆ ಬಂದ ಚೈತನ್ಯರೂಪೀ ಆತ್ಮನು ಬಾಂಧವ್ಯ ಕುಲ ಕರ್ಮಕ್ಕೆ ಸಿಲುಕಿ ನಾಮ ನಿರ್ದೇಶನ ಪಡೆದು ನಾನೆಂದು ವ್ಯವಹರಿಸುತ್ತಾನೆ ದೇಹಭ್ರಾಂತಿಯಿಂದ.  ಆದರೆ ದೇಹ ತಾನಲ್ಲವೆಂಬ ಪರಿಪೂರ್ಣ ಸತ್ಯ ಅರಿವಿದ್ದಾಗಲೂ ತಾನು ಕುಲ ನಾಮಕವಾಗಿ ವ್ಯವಹರಿಸುತ್ತಲೇ ಇರುತ್ತಾನೆ. ಹಾಗಾಗಿ ಕುಲವೆಂಬ ಆತ್ಮ ನಿಯೋಜಿತ ದೇಹನಿಗೆ ಋಣಾದಿ ಬಾಧೆಗಳು ಅಂಟಿಕೊಳ್ಳುತ್ತವೆ. ಅದೆಲ್ಲವೂ ನನ್ನದೇ ಎಂಬ ಭ್ರಾಂತಿಯಿಂದ ಸದಾ ಸರ್ವದಾ ದೈಹಿಕ ವ್ಯಾಪಾರವನ್ನಿಟ್ಟು ಕರ್ಮ ಕಾರಣದಿಂದ ದೈಹೀಕ ಕಾರಣದ ನೋವು ಋಜೆಯನ್ನು ತಾನೇ ಅನುಭವಿಸುತ್ತಾನೆ. ಆದರೆ ಶರೀರ ಶಾಶ್ವತವಲ್ಲ.  ಕ್ಷೀಣಯೋಗ್ಯವಾದದ್ದು ಎಂಬುದು ಅರಿತರೂ ಒಪ್ಪಲಾರ.  ಮಾನಸಿಕ ಭ್ರಾಂತಿ ಬಿಡಲಾರ. ಈ ಜೀವನವೆಂಬ ಕಷ್ಟದ ಕಾಷ್ಟದ ರಾಶಿಯಲ್ಲಿ ಶರೀರವನ್ನಿಟ್ಟು ತಾನೇ ತಾನಾಗಿ ಸುಡಿಸಿಕೊಳ್ಳುತ್ತಾ ಒಮ್ಮೆಯಾದರೂ ಅದರಿಂದ ಹೊರಬರುವ ಪ್ರಯತ್ನ ಮಾಡಲಾರವು ಜೀವಿಗಳು.  ಅದೇ ಸತ್ಯವೆಂಬ ಅರಿವು ಆತ್ಮನ ಆತ್ಮೋನ್ನತಿಗೆ ಬಂಧನವಾಗಿರುತ್ತದೆ. ಆದರೆ ಅದು ಮಾನವ ಕಲ್ಪಿತ ವೃತ್ರವೆಂದೂ, ಅದು ಅನಿಣಿಜನೆಂದೂ, ಚರವೆಂದೂ, ನೀರಿನಂತೆ ಚರವೆಂದೂ ಅರಿಯದೆ ವಿನಾ ಕಾರಣ ಆತ್ಮಬಲವನ್ನು ನಾಶ ಮಾಡಿಕೊಳ್ಳುತ್ತಾನೆ. ಅದಕ್ಕೆ ಕಾರಣವಾದ ತಮಸ್ಸನ್ನು ನಾಶ ಮಾಡಿಕೊಂಡಲ್ಲಿ ಆತ್ಮನು ನಿರಂತರ ಶಾಶ್ವತದೆಡೆಗೆ ನಡೆಯಬಹುದು. ಮೇಲೆ ಉದಾಹರಿಸಿದಂತೆ ಅಂಡದಿಂದ ಬೇರ್ಪಟ್ಟು ಹೊರಬರುವ ಎಲ್ಲಾ ಜೀವಿಗಳೂ ಕೂಡ ಯಾವುದೋ ಒಂದು ಕರ್ಮಬಂಧದಲ್ಲಿ ಸಿಲುಕಿರುತ್ತವೆ. ಅದನ್ನೇ ಈ ಎರಡನೆಯ ಮಂತ್ರವು ಉದಾಹರಿಸುತ್ತದೆ. ಒಂಬತ್ತು ಒಂಬತ್ತರ ಮಧ್ಯ ಎಂಬತ್ತನಾಲ್ಕು ಲಕ್ಷ ಭಿನ್ನವಿದೆ.  ಆ ಕಮ್ಮತದ ಮಧ್ಯೆ ಎದ್ದು ಬಿದ್ದೋಡುತಿದೆ ಭೀತಿಯಲಿ ಆತ್ಮ ಅರಿವಿಲ್ಲದೇ ನಾನು ನಾನೆಂದು ವ್ಯರ್ಥ ಬೇಗುದಿಯಲ್ಲಿ ಬೆಂದು ಬಸವಳಿದು ಬಲಗುಂದಿ ಆರ್ತತೆಯಲ್ಲಿ ಕೂಗಿ ಕರೆದಿದೆ ದೇವನನು ಆದರಿದು ಬಿಡಲು ಒಂಬತ್ತರ ಬಂಧ ಎಂಬತ್ತು ಕೂಟಗಳ ಬಿಡದೆ ಬರಲಾರ.  ಭಗವಂತ ಮೇಲೆತ್ತಲಾರ.  ಹೇ ಆತ್ಮನೇ ಬಿಡು ರಜವ, ಸತ್ವದೊಳು ನೋಡು ನಿನ್ನಯ ಶರೀರ ಬರೇ ಮಣ್ಣು ಮತ್ತು ನಾರು ಗಾಳಿ ಶಾಖದ ಬೆಟ್ಟ.  ನೀನದಲ್ಲ ನೀನಾತ್ಮನೆಂಬರಿವು ಪಡೆದೊಡೆ ಎಲ್ಲವೂ ಮಾಯವಯ್ಯಾ ಹಾಗಾಗಿ ಜೀವಜಗತ್ತಿನ ಎಲ್ಲವನ್ನೂ ವಿವರಿಸುತ್ತದೆ ಈ ಮಂತ್ರಪುಂಜಗಳು. ಅದರ ಬಗ್ಗೆ ನೋಡಿರಿ.
ಋಕ್:  ಮಂ-1,  ಸೂಕ್ತ-34,  ಮಂತ್ರ 1-12
ತ್ರಿಶ್ಚಿನ್ನೋ ಅದ್ಯಾ ಭವತಂ ನ ವೇದಸಾ ವಿಭುರ್ವಾಂ ಯಾಮ ಉತ ರಾತಿರಶ್ವಿನಾ |
ಯುವೋರ್ಹಿ ಯಂತ್ರಂ ಹಿಮ್ಯೇವ ವಾಸಸೋsಭ್ಯಾಯಂ ಸೇನ್ಯಾ ಭವತಂ ಮನೀಷಿಭಿಃ || 1 ||
ತ್ರಯಃ ಪವಯೋ ಮಧುವಾಹನೇ ರಥೇ ಸೋಮಸ್ಯ ವೇನಾ ಮನು ವಿಶ್ವ ಇದ್ವಿದುಃ |
ತ್ರಯಃ ಸ್ಕಂಭಾಸಃ ಸ್ಕಭಿತಾಸ ಆರಭೇ ತ್ರಿರ್ನಕ್ತಂ ಯಾಥಸ್ತ್ರಿರ್ವಶ್ವಿನಾ ದಿವಾ || 2 ||
ಸಮಾನೇ ಅಹನ್ ತ್ರಿರವದ್ಯ ಗೋಹನಾ ತ್ರಿರದ್ಯ ಯಜ್ಞಂ ಮಧುನಾ ಮಿಮಿಕ್ಷತಮ್ |
ತ್ರಿರ್ವಾಜವತೀ ರಿಷೋ ಅಶ್ವಿನಾ ಯುವಂ ದೋಷಾ ಅಸ್ಮಭ್ಯಮುಷಸಶ್ಚಪಿನ್ವತಮ್ || 3 ||
ತ್ರಿರ್ವರ್ತಿರ್ಯಾತಂ ತ್ರಿರನುವ್ರತೇ ಜನೇ ತ್ರಿಃ ಸುಪ್ರಾವ್ಯೇ ತ್ರೇಧೇವ ಶಿಕ್ಷತಮ್ |
ತ್ರಿರ್ನಾಂದ್ಯಂ ವಹತಮಶ್ವಿನಾ ಯುವಂ ತ್ರಿಃ ಪೃಕ್ಷೋ ಅಸ್ಮೇ ಅಕ್ಷರೇವ ಪಿನ್ವತಮ್ || 4 ||
ತ್ರಿರ್ನೋ ರಯಿಂ ವಹತಮಶ್ವಿನಾ ಯುವಂ ತ್ರಿರ್ದೇವತಾತಾ ತ್ರಿರುತಾವತಂ ಧಿಯಃ |
ತ್ರಿಃ ಸೌಭಗತ್ವಂ ತ್ರಿರುತ ಶ್ರವಾಂಸಿ ನಸ್ತ್ರಿಷ್ಠಂ ವಾಂ ಸೂರೇ ದುಹಿತಾ ರುಹದ್ರಥಮ್ || 5 ||
ತ್ರಿರ್ನೋ ಅಶ್ವಿನಾ ದಿವ್ಯಾನಿ ಭೇಷಜಾ ತ್ರಿಃ ಪಾರ್ಥಿವಾನಿ ತ್ರಿರುದತ್ತಮದ್ಭ್ಯಃ |
ಓಮಾನಂ ಶಂಯೋರ್ಮಮಕಾಯ ಸೂನವೇ ತ್ರಿಧಾತು ಶರ್ಮ ವಹತಂ ಶುಭಸ್ಪತೀ || 6 ||
ತ್ರಿರ್ನೋ ಅಶ್ವಿನಾ ಯಜತಾ ದಿವೇ ದಿವೇ ಪರಿ ತ್ರಿಧಾತು ಪೃಥಿವೀಮಶಾಯತಮ್ |
ತಿಸ್ರೋ ನಾಸತ್ಯಾ ರಥ್ಯಾ ಪರಾವತ ಆತ್ಮೇವ ವಾತಃ ಸ್ವಸರಾಣಿ ಗಚ್ಛತಮ್ || 7 ||
ತ್ರಿರಶ್ವಿನಾ ಸಿಂಧುಭಿಃ ಸಪ್ತಮಾತೃಭಿಸ್ತ್ರಯ ಆಹಾವಾಸ್ತ್ರೇಧಾ ಹವಿಷ್ಕೃತಮ್ |
ತಿಸ್ರಃ ಪೃಥಿವೀರುಪರಿ ಪ್ರವಾ ದಿವೋ ನಾಕಂ ರಕ್ಷೇಥೇ ದ್ಯುಭಿರಕ್ತುಭಿರ್ಹಿತಮ್ || 8 ||
ಕ್ವ1ತ್ರೀ ಚಕ್ರಾ ತ್ರಿವೃತೋ ರಥಸ್ಯ ಕ್ವ1 ತ್ರಯೋ ವಂಧುರೋ ಯೇ ಸನೀಳಾಃ |
ಕದಾ ಯೋಗೋ ವಾಜಿನೋ ರಾಸಭಸ್ಯ ಯೇನ ಯಜ್ಞಂ ನಾಸತ್ಯೋಪಯಾಥಃ || 9 ||
ಆ ನಾಸತ್ಯಾ ಗಚ್ಛತಂ ಹೂಯತೇ ಹವಿರ್ಮಧ್ವಃ ಪಿಬತಂ ಮಧುಪೇಭಿರಾಸಭಿಃ|
ಯುವೋರ್ಹಿ ಪೂರ್ವಂ ಸವಿತೋಷಸೋ ರಥ ಮೃತಾಯ ಚಿತ್ರಂ ಘೃತವಂತಮಿಷ್ಯತಿ || 10 ||
ಆ ನಾಸತ್ಯಾ ತ್ರಿಭಿರೇಕಾದಶೈರಿಹ ದೇವೇಭಿರ್ಯಾತಂ ಮಧು ಪೇಯಮಶ್ವಿನಾ |
ಪ್ರಾಯುಸ್ತಾರಿಷ್ಟಂ ನೀ ರಪಾಂಸಿ ಮೃಕ್ಷತಂ ಸೇಧತಂ ದ್ವೇಷೋ ಭವತಂ ಸಚಾಭುವಾ || 11 ||
ಆನೋ ಅಶ್ವಿನಾ ತ್ರಿವೃತಾ ರಥೇನಾರ್ವಾಂಚಂ ರಯಿಂ ವಹತಂ ಸುವೀರಮ್ |
ಶೃಣ್ವಂತಾವಾಮವಸೇ ಜೋಹವೀಮಿ ವೃಧೇ ಚ ನೋ ಭವತಂ ವಾಜಸಾತೌ || 12 ||

ಈ ಜಗತ್ ಸೃಷ್ಟಿಯೆಲ್ಲವೂ ಒಂದು ಗಣಿತ ಪ್ರಮೇಯದ ಅಡಿಯಲ್ಲಿ ಅದರ ಲೆಕ್ಕಾಚಾರದಂತೆಯೇ ಸೃಷ್ಟಿಯಾಗಿದೆ. ಎಲ್ಲಿಯೂ ಒಂದಂಶವೂ ಭಿನ್ನವಾಗಿಲ್ಲ, ಲೆಕ್ಕ ತಪ್ಪಿಲ್ಲ. ಮುಖ್ಯವಾಗಿ ಎಲ್ಲವೂ ಮೂರರ ಅಂದರೆ ಕಾರ್ಯ + ಕಾರಣ + ಕರ್ತ ವೆಂಬ ಒಂದು ಸಮೀಕರಣದ ಅಡಿಯಲ್ಲಿ ಯೋಜಿಸಲ್ಪಟ್ಟಿದೆ. ಈ ಕಾರ್ಯ + ಕಾರಣ + ಕರ್ತವು ಮುಂದೆ ಗಣಿತದ ಸಮೀಕರಣ ವಿವರಣೆಯಲ್ಲಿ ಭವತವೆಂದೂ ನಾಮ ನಿರ್ದೇಶನ ಪಡೆಯುತ್ತದೆ. ಹಾಗೆ ಕರ್ಮ + ಋಣ + ಕರ್ಮ ವೆಂಬ ಕಾಯಕತ್ವವು ವೇದಸವೆಂದೂ, ಇಚ್ಛಾ + ಕ್ರಿಯಾ + ಜ್ಞಾನವೆಂಬುದು ಧೈವವೆಂದೂ ನಾಮ ನಿರ್ದೇಶನ ಪಡೆಯುತ್ತದೆ. ಇವೆಲ್ಲದರ ಹಿಂದೆ ಇರತಕ್ಕ ಬೀಜವೇ ಅಥವಾ ಶಕ್ತಿಯೇ ಈ ಎಲ್ಲ ಕಾರ್ಯಗಳ ನಿರ್ದೇಶಕ. ಈ ನಿರಂತರ ಪ್ರಪಂಚದ ಅನ್ಯೋನ್ಯತೆ, ಪೂರಕತೆ, ಪಕ್ವತೆಗೆ ಸಹಕಾರಿಯಾಗಿರುವುದೇ ಮಾಯೆ. ಇದರ ಆಮೋದ + ಪ್ರಮೋದಗಳೇ ಜೈವಿಕ ಭ್ರಾಂತಿ. ಇದರಿಂದಾಗಿ ಜೀವಿಗಳು ಅರಿತರೂ ಅರಿಯದವರಂತೆ ಹೋರಾಡುತ್ತಲೇ ಜೀವನ ಸಾಗಿಸುತ್ತವೆ. ಆದರೆ ಸತ್ಯ ಬೇರಿದೆಯೆಂಬ ಅರಿವು ಪ್ರತೀ ಜೀವಿಗೂ ಗೊತ್ತು ಒಪ್ಪಲಾರವಷ್ಟೆ. ಮೇಲಿನ ಮಂತ್ರದ ಸೂಚ್ಯ ಸಾರಾಂಶ ಶಬ್ದ ಕೋಶ ಸೂತ್ರದಂತೆ ಪಟ್ಟಿ ಮಾಡುತ್ತೇನೆ. ಅದೆಲ್ಲವೂ ಒಟ್ಟಾಗಿ ಒಂದು ಸಮೀಕರಣದ ಉತ್ತರ ರೂಪದ ಪ್ರತಿಮಾ ಸ್ವರೂಪ. ಅದರ ಕೈ, ಕಾಲು, ಆಯುಧ, ಚಿಹ್ನೆ, ಕಲೆ, ತಲೆ, ಕಣ್ಣು, ಬಾಯಿ ಎಲ್ಲವೂ ಪ್ರಮೇಯಗಳೇ. ಮಂತ್ರದೊಂದಿಗೆ ನಿಧಾನವಾಗಿ ಓದಿಕೊಳ್ಳಿರಿ. ಮುಂದಿನ ಈಗ ಸದ್ಯಕ್ಕೆ ಲಭ್ಯವಿರುವ ಎಲ್ಲ ಒಂದು ಸಾವಿರದ ಮುನ್ನೂರ ಹದಿನಾಲ್ಕು ಸಮೀಕರಣಗಳನ್ನೂ ನಿಮ್ಮ ಮುಂದಿಡುತ್ತಿದ್ದೇನೆ. ಓದಿ ಅರ್ಥಮಾಡಿಕೊಳ್ಳುವುದು ನಿಮಗೆ ಬಿಟ್ಟಿದ್ದು. ಯಾವುದನ್ನೂ ಇನ್ನು ಹೆಚ್ಚಿಗೆ ವಿವರಿಸಲಾರೆ. ನನ್ನ ಅಳತೆಯ ಮಿತಿಯಲ್ಲಿ ವಿವರಿಸುತ್ತೇನೆ. ಅದಕ್ಕಿಂತ ಹೆಚ್ಚಿಗೆ ಏನೂ ಹೇಳಲಾರೆ. ಈ ಕೆಳಗಿನ ವಾಕ್ಯಗಳನ್ನು ಓದಿರಿ. ಒಂದು ಜಿಡುಕಾದ ಗಣಿತ ಪ್ರವೇಶವಿದಾಗಿರುತ್ತದೆ.

ಮೂರು ಕಣ್ಣುಗಳಾದಿಯಲಿ ಮೂರು ಭಿನ್ನಗಳು ಅರಿತವರಾರು
ಮೂರರಾ ಪ್ರಭುವಾತನಿಚ್ಛೆಯವರಿತು ಪೇಳುವೆ ಕೇಳಿರೀ ಜನರೆಲ್ಲ
ಮಾರು ಹೋಗದಿರಿ ಜೀವನಕಾಂಕ್ಷೆಯಲಿ ಬೆಸಗೊಂಡಿಹುದು ಜೀವನಯಂತ್ರವಿದು ಸತ್ಯ |
ಮೂರು ಮುಚ್ಚದು ಮೂರು ಮರೆಯಾಗೆ ಆಶಿಷವು ಮಾರಿ ಹೊಗೆ
ಮೂರರಾಧೀನ ವೀ ಜಗವು ಭವತದೊಳು ಮುಳುಗೇಳುತಿದೆ
ಮೂರು ಭಿನ್ನವ ಅರಿತವನೇ ಜಾಣನೈ ಆತನೇ ಜೀವನ ಯಂತ್ರ ಚಾಲಕ ಮಾನಿಷವು ಬೆಳಗೆಂದೂ ||
ಹರಿವು ಮೂರರವು ಹರವು ಮೂರರದು ಮಧು ಮೂರು ಸುಧೆ ಮೂರು
ಹೊರಳಿ ನೋಡಲು ವೇನನೊಳು ಅಡಕವಿದೆ ಸೋಮ ಮಂಡಲವೇಳು ಮೂರರಲಿ
ತೆರಳಿ ಕೂಡುತಿದೆ ಜೀವ ಭವತದ ಹೊದಿಕೆಯಲಿ ಕಾಯುತಿದೆ ಲೋಕ ಉರಿ, ಕಿಚ್ಚು, ಜ್ವಾಲೆಯೆಂಬಂತೆ |
ಎಲ್ಲವಡಕವು ಇದರಲಿ ಹಗಲು ರಾತ್ರಿಗಳ ಮಧ್ಯದಾ ಕಾಲ ಮೂರದೆ
ಬಲ್ಲವರು ಪೇಳುವರು ವಿಶ್ವದ ಶ್ವಸಿತವು ಸ್ಥಂಭಕ, ಕುಂಭಕ, ರೇಚಕವೇ
ಎಲ್ಲ ಜೀವಿಯ ಜೀವಸತ್ವವು ಹೊಳ್ಳೆಯೊಳಗಿಲ್ಲ ಪ್ರಾಣ ಮೂರರಲ್ಲಿದೆ ಅಲ್ಲಿದೆ ಇಲ್ಲಿದೆಯೆಂದು ಹುಡುಕೇ ||
ಮೂರು ರಾತ್ರಿಗಳಲ್ಲಿ ರತನಾಗಿ ಜೀವಿಯು ಹುಟ್ಟೊಂದು ಸಾವೊಂದು, ಮಧ್ಯದಾ ಗೆರೆ
ಮೂರು ದಿನವೊಂದು ಈ ಕಾಲ ಲೆಕ್ಕದಲಿ ಬಾಳುವೆಯ ಕಾಲ ಲೆಕ್ಕವ ಮಾಡಲಾಪುವುದೆ
ಮಾರು ಹೋಗದಿರು ಸುಖವೆಂಬ ಭ್ರಾಂತಿಯಲಿ ರುಚಿಯೆಂದು ವಿಷವ ತಿನ್ನದಿರು ಜೀವನೇ ನಿನ್ನಾತ್ಮನೆಂದರಿಯೆ |
ಹೊನ್ನ ತೈಲದ ಹಣತೆಯಲಿ ಮೂರು ಬತ್ತಿಗಳುರಿದು ತೈಲ ತಿನ್ನುವ ತೆರದಿ
ಬನ್ನ ಬಡುತಿವೆ ಜೀವರೆಲ್ಲರು ಋಣ+ಕರ್ಮದೊಳು ಭಾಜನರಾಗಿ ತೇಯುವರು
ಚಿನ್ನದಾಸೆಯಲಿ ಪುಣ್ಯ ಕಳೆವರು ಅಕ್ಷರವ ಬಿಟ್ಟೋಡುವರು ಮೂರರಾ ಧಾವಂತವೇನೆಂಬೆನೂ |
ಬಣ್ಣ ಬಣ್ಣದ ಬಟ್ಟೆ ಜೀವನ ಬಟ್ಟೆ ಮರೆಮಾಚುತಿದೆ ಇಟ್ಟ ಗುರಿಯಿಲ್ಲ ಮೂರರಲಿ
ಸಣ್ಣ ಕುಂದಿದೆ ಕಂದೀಲ ಪಿಡಿದು ನೋಡಲು ಋತವನರಿಯಲು ಬಹುದು ಭಾಗ್ಯವು
ಕಣ್ಣರಳಿ ಕಾಂಬುದು ಕೇಳಿರಿ ಮೂರರಲಿ ಸೌಭಾಗ್ಯವರಸಲು ಋತ, ಶ್ರವ, ಸ್ತಿಷ್ಠಗಳು ಮರೆಯಾಗೇ ||
ಒರಲದೇತಕೆ ಜೀವನೇ ನೀ ನಿನ್ನ ಮೂರನು ಅರಿತು ಬದುಕನರಸಿರೆ
ಸರಳವಿದೆ ಈ ಸೂತ್ರ ಪಾರುಗಾಣುವ ಔಷಧಿಯು ಮೂರರೊಳಗಿದೆ
ಸೂರೆ ಹೋಗದಿರು ಪ್ರಾಪಂಚಿಕಕೆ ಮೂರರೊಳಗೊಂದಾಗು ಸರಳ ಸುಖ ಸೂರೆಗೊಂಬುವುದೂ |
ಒಟ್ಟು ಜೀವಿಗಳಿವೆ ಲಕ್ಷದಲಿ ಸಿಂಧು ಮೂರರ ಮಾತೃಕೆಯೊಳು ಇಪ್ಪತ್ತೊಂದು ಗುರಿ
ಯಿಟ್ಟು ಪುರುಷಾರ್ಥದೊಳು ಗುಣಿಸೆ ಎಂಬತ್ತನಾಲ್ಕು ಆಹವಗಳಾರು ಶತ್ರುಗಳಾರು ಮಿತ್ರರಾರು
ಕಟ್ಟಕಡೆಯಲಿ ಈ ಮೂರರಲಿ ಒಂದಿಟ್ಟು ಎರಡು ಕಳೆ ಉಳಿದೊಂದೆ ಪರಮಾತ್ಮವದು ತಪ್ಪದಿರಲೀ ಗುರಿಯೆಂಬೆನೂ ||

ದಿನದಿನವು ಅಹರಹರ ಮಧ್ಯದೊಳು ಮಧ್ಯಕಾಲವು ಸಂಧ್ಯೆ ಈ ಮೂರನರಿತರೆ
ಅನುದಿನವು ಕಾಡದು ಕರ್ಮ ಬೇಗುದಿಯಿಲ್ಲ ಭವವಿಲ್ಲ ಭವತವೇ ಇಲ್ಲ
ನೀನು ವೇಧಸನಾಗು ಮೊದದೊಳು ಉಣ್ಣು ಪ್ರಪಂಚವನು ಅರಗಿಸಿಕೊ ಅನ್ನಾದ್ಯ ಉಪಾಂಶುಗಳನೂ |
ಹುಟ್ಟು ಸಾವಿಗೆ ಮುಹೂರ್ತವಿಡುವುದು ಸಾವು ಹುಟ್ಟಿಗೆ ಕಾರಣವು
ಬಿಟ್ಟ ಮೂರು ದಿನದ ಬಾಳುವೆಯೇ ಅದಕನ್ನ ಈ ಮೂರರನು ಬಿಟ್ಟು
ಬಿಟ್ಟಿ ಜೀವನವಿಲ್ಲ ಬದುಕಿಗೆ ಅರ್ಥವೀವುದೇ ಈ ಸತ್ಯ ಹುಟ್ಟು ಸಾವಿನ ಗೊಜ ತಪ್ಪಿಸಿರಿ ಬದುಕಿರೆಂಬೇ ||
ಕನಸು ನಿಜಜೀವನದ ಬುತ್ತಿ ಬಿಚ್ಚಿದೆ ಕೇಳಿ ತುತ್ತುನೀಂಟುತ ಮಧು ಮಧುವೆಂ
ದಿನಿಸುತಿದೆ ಮಧುವಲ್ಲದಿರೆ ಕಟುವೇ ಕಟುವೇಕೆ ನಿಮಗಿಂತ ಕನಸೇಕೆ
ಇನಿತು ಯೋಜನೆ ಬಿಟ್ಟು ಸವಿತವೂ ಉಷಸವೂ ನಿತ್ಯ ಚಕ್ರದ ತಿರುವು ಕೀಲುಗಳು ರಥದ ಚಕ್ರದೊಳೂ |
ಗುಣವದೇಳರೊಳು ಕಳೆದೊಂದು ಮೂರೆರಡು ಸಮನಿರೆ ಸಮತೋಲನಕೆ ಬರೆ
ಗಣಕ ಸೂತ್ರವಿದೊಂದು ಸವಿಗನ್ನಡದಲಿ ಗೂಢವಾಗಿಯೇ ಬರೆದೆನಿದ ಸರಸ್ವತಿ
ಯಣಕವಲ್ಲವೋ ಸತ್ಯದಾ ಹೊಳಹಿದೆ ಹಿಂದಿನಾ ಮಂತ್ರಗಳ ಅರ್ಥವಿದೆ ಸೂತ್ರ ಸಮೀಕರಣವಿದು ಕೇಳು ||

ಹೀಗೆ ಪ್ರಪಂಚದ ಎಲ್ಲಾ ಆಗು ಹೋಗುಗಳೂ ತ್ರಯೀಕರಣ  ಸೂತ್ರದಡಿಯಲ್ಲಿ ಕಾರ್ಯ + ಕಾರಣ + ಕರ್ತವೆಂಬ ಬಗೆಯಲ್ಲಿ ಸಂಯೋಜಿಸಿದೆ ವಿಶ್ವ. ಯಥಾ ವಿಶ್ವ ಸಜೋಷಸೋ ಎಂಬಂತೆ ವಿವಿಧಾ ಶ್ವಸಿತೈಮಿತಿ ವಿಶ್ವಃ ಎಂಬಂತೆ ನಾನಾರೂಪ, ಗುಣ, ಪ್ರಕಾರ, ವೈವಿಧ್ಯತೆಯ ಮಧ್ಯೆ ಭಿನ್ನ ಭಿನ್ನ ಪ್ರವರ್ತನೆಯಲ್ಲಿ ತೊಡಗಿಕೊಂಡಿದೆ ಜೀವಜಗತ್ತು. ಅದನ್ನೆಲ್ಲಾ ಪಶುಪತಿಯೆಂಬ ಪಾಶುಪತ ನಿಯಮಬದ್ಧತೆಯಲ್ಲಿ ರೂಪಿಸಲಾಗಿದೆ. ಎಲ್ಲವುದರ ಕೊಂಡಿಯೂ ಕೀಲಿಯೂ ಪಾಶುಪತದಲ್ಲಿದೆ. ಅದನ್ನೇ ಹೇಳುತ್ತದೆ

ಋಕ್:  ಮಂ-1,  ಸೂಕ್ತ-43,  ಮಂತ್ರ-7
ಅಸ್ಮೇ ಸೋಮ ಶ್ರಿಯಮಧಿ ನಿಧೇಹಿ ಶತಸ್ಯ ನೃಣಾಮ್ | ಮಹಿಶ್ರವಸ್ತುವಿನೃಮ್ಣಮ್ ||
ಮಾನಃ ಸೋಮ ಪರಿಬಾಧೋ ಮಾರಾತಯೋ ಜುಹುರಂತ | ಆ ನ ಇಂದೋ ವಾಜೇ ಭಜ ||

ಪ್ರಪಂಚದ ಆಗುಹೋಗುಗಳೆಲ್ಲಾ ಪಾಶುಪತ ಸೂತ್ರ ದಡಿಯಲ್ಲಿದೆ. ಅದನ್ನೇ ಗಣಿತ ಸಂಖ್ಯಾಶಾಸ್ತ್ರವೆಂದರು. ಎಲ್ಲವೂ ಒಂದು ಲೆಕ್ಕಾಚಾರದಡಿಯಲ್ಲೇ ನಡೆಯುತ್ತಿದೆಯೆಂದಾದರೆ ಅದರ ಬಗ್ಗೆ ತಿಳಿಯುವ ಪ್ರಯತ್ನ ಮಾಡಬೇಡವೆ. ನೂರಾರು ಭಿನ್ನ ಭಿನ್ನ ಸಮೀಕರಣಗಳಲ್ಲಿ ಸಮಕಾಲೀನ, ಭವಿಷ್ಯೋತ್ತರ, ಭೂತಕಾಲದ  ಘಟನೆಗಳೆಲ್ಲಾ ನಿರ್ದೇಶಿತವಾದದ್ದು ಗಣಿತ ಸೂತ್ರಗಳಲ್ಲಿ ಕಂಡು ಬರುತ್ತದೆ. ಹಾಗಾಗಿ ಸಾಂಖ್ಯಶಾಸ್ತ್ರವೊಂದು ಅದನ್ನಾಧರಿಸಿಯೇ ಉದ್ಭವವಾಗಿದೆ. ಇದರ ಮೂಲವನ್ನು ಅನ್ವೇಷಿಸಿ ಕೊಂಡು ಹೋದ ನನಗೆ ಕಂಡು ಬಂದ ಸುಮಾರು 1314 ಸಮೀಕರಣಗಳನ್ನು ಗುರುತಿಸಿ ಮಂತ್ರರೂಪದಲ್ಲಿರುವ ಈ ರಹಸ್ಯವನ್ನು ತೋರಿಸಿ ಕೊಡುತ್ತಿದ್ದೇನೆ. ಅದನ್ನು ಮುಂದಿನ ಅಧ್ಯಯನವನ್ನು  ಆಸಕ್ತರು  ಕೈಗೊಂಡಲ್ಲಿ  ಲೋಕಕ್ಷೇಮ ಲಭಿಸುವುದೆಂದು ನನ್ನ ಭಾವನೆ. ನನ್ನ ಅಳತೆಯ ಮಿತಿಯಲ್ಲಿ ಇದನ್ನು ಬರೆದಿದ್ದೇನೆ.  ಮುಂದಿನ  ಅಧ್ಯಯನ  ನೀವೇ ಮಾಡಿಕೊಳ್ಳಬೇಕೆಂದು ತಿಳಿಸುತ್ತಾ ಲೇಖನ ಮುಂದುವರೆಸುತ್ತೇನೆ.

ಋಕ್:  ಮಂ-1,  ಸೂಕ್ತ-47,  ಮಂತ್ರ-2
ತ್ರಿವಂಧುರೇಣ ತ್ರಿವೃತಾ ಸುಪೇಶಸಾ ರಥೇನ ಯಾತ ಮಶ್ವಿನಾ |
ಕಣ್ವಾಸೋವಾಂ ಬ್ರಹ್ಮಕೃಣ್ವಂತ್ಯಧ್ವರೇ ತೇಷಾಂ ಸುಶೃಣುತಂ ಹವಮ್ ||

ಜಗವು ರಥವಾಗುವುದು ಜೀವಚಲನೆಯು ಕಾಲ ಚಲನೆಯು ಇನ್ನೇನೆಲ್ಲ
ಮಿಗತೆ ಚಲನೆಯದೆಲ್ಲ ಒಂದೆ ಸೂತ್ರದೊಳಡಕವಾಗಿದೆ ಅದುವೇ ತ್ರಿವಂಧು
ಸುಗಮ ತ್ರಿವೃತವು ಮೂಲ ಮಧ್ಯಮಾದಿಗಳೆಂಬ ಮೂರು ಗೊನೆಯಲಿ ನೂಕು, ಎಳೆ, ಎತ್ತೆಂಬ ಮೂರು ಶಕ್ತಿಯಲೀ ಚಾರು ಬಲವಿದೆ ಅದುವೆ ಚಲನೆಯ ಸೂತ್ರ ಕೇಳೈ ಇಳೆಯ ಧರ್ಮವದು ಕಾಂತ
ದೊಳು ಮೂರು ಬಲ ದೃಶ್ಯದೊಳು ಮೂರು ಬಲ ರೂಪದೊಳೇಳು ಹದಿನಾರು ಮುಂದಿನಾ
ಇಪ್ಪತ್ತನಾಲ್ಕು ಬಲವೇ ಒಟ್ಟು ಚಲನೆಯ ಸೂತ್ರ ಕಾಣೈ ಇದು ಸತ್ಯಶ್ರವಣವೆಂಬ ಸಮೀಕರಣದೊಳಗಡಗಿಹುದು ಕೇಳೀ ||

ಇದೊಂದು ಜಗತ್ತಿನ ಎಲ್ಲಾ ಚಲನೆಯ ಸೂತ್ರ. ಇದನ್ನು ಸತ್ಯಶ್ರವ ಎನ್ನುತ್ತಾರೆ. ಏಕೆಂದರೆ ಇದು ನಿರಂತರ ನಿತ್ಯ ಶಾಶ್ವತ ಸತ್ಯ. ಜಗತ್ತಿನ ಸ್ವಭಾವಶಕ್ತಿಯನ್ನಾಧರಿಸಿದ ಈ ಸೂತ್ರ ಒಂದು ರೀತಿಯ ಸರಪಳಿಯಂತೆ. ಅದರ ಪ್ರಕಾರ ಒಂದು ರಾಗಿಯ ಕಾಳು ಪ್ರವೃತ್ತವಾದರೆ ಜಗತ್ತಿನ ಕಾಲ ನಿಯಮ ಸೂತ್ರವನ್ನು ಸೇರಿಸಿ ಲೆಕ್ಕ ಹಾಕುತ್ತಾ ಹೋದರೆ ವೃದ್ಧಿಬಲದ ಒಟ್ಟು ಪ್ರಮಾಣ ಏಳು ಲಕ್ಷ ಮಾನವಶಕ್ತಿಯನ್ನು ಉತ್ಪಾದಿಸುತ್ತದೆ. ಅಂದರೆ  ಅದಕ್ಕೆ ಪ್ರಕೃತಿಯನ್ನು ಅದರ ಕಾಂತಬಲವನ್ನು ಯೋಜಿಸುತ್ತಾ ಹೋಗಬೇಕು. ರಾಗಿಕಾಳು ಮೊಳಕೆಯಾಯ್ತು, ತೆನೆ ಬಿಟ್ಟಿತು, ಒಬ್ಬನಿಗೆ ಆಹಾರ, ಹುಲ್ಲು ಪಶುವಿಗೆ ಆಹಾರ. ಆ ಮಾನವ ಆ ರಾಗಿಯ ಶಕ್ತಿಯಿಂದ ಪ್ರಾಕೃತಿಕ ಸ್ವಭಾವಜನ್ಯ ಕಾರ್ಯಕ್ಕಿಳಿದಾಗ ಅವನು ಮಾಡುವ ಕೆಲಸ ಹಲವು ರಾಗಿಗಳ ಅಂದರೆ ಪುನಃಶಕ್ತಿಯ ಉತ್ಪಾದನೆ ಅದು ಪುನರಾಹಾರ ನಿಯಮದಂತೆ ಹಲವು ಜನರಿಗೆ ಆಹಾರ ತತ್ಫಲವಾದ ಬಲ. ಹೀಗೆ ಹಿಗ್ಗುತ್ತಾ ಕ್ಷೀಣಬಲ ಅಂಶವನ್ನು ಅಥವಾ ಸವಕಳಿಯನ್ನು ಲೆಕ್ಕ ಹಿಡಿದು ಕಳೆದರೂ ಏಳು ಲಕ್ಷ ಮಾನವ ಶಕ್ತಿ ಉತ್ಪಾದನೆ ಆಗುತ್ತದೆ ಎನ್ನುತ್ತದೆ ಈ ಸೂತ್ರ. ಅಲ್ಲಿ ಯೋಜಕ ಮಾತ್ರ ಸ್ವಾರ್ಥ ಬಿಟ್ಟು ಮಾನವಶಕ್ತಿಯ ಸದ್ಬಳಕೆ ಮಾಡಬೇಕಷ್ಟೆ.
ಋಕ್:  ಮಂ-1,  ಸೂಕ್ತ-82,  ಮಂತ್ರ-4
ಸ ಘಾತಂ ವೃಷಣಂ ರಥಮಧಿತಿಷ್ಠಾತಿ ಗೋವಿದಮ್ |
ಯಃ ಪಾತ್ರಂ ಹಾರಿಯೋಜನಂ ಪೂರ್ಣಮಿಂದ್ರ ಚಿಕೇತತಿ ಯೋಜಾನ್ವಿಂದ್ರತೇ  ಹರೀ ||

ಒಂದು ಜೀವನ ಯಾನ ಅದರ ಉದ್ದವೆಷ್ಟು? ಆತ್ಮಿಕ ಯೋಜನ ಲೆಕ್ಕದಂತೆ ಪೂರ್ಣವು ನೂನದಲ್ಲಿ ಹೇಗೆ ವಿಭಜಿಸಲಾರದೋ ಹಾಗೇ ಯೋಜನ ಲೆಕ್ಕದಲ್ಲಿ ಅಳತೆ ಮಾಡಿದರೂ ಕೂಡ ಅದು ಮುಂದಿನ ದಾರಿ, ಕ್ರಮಣ, ಶೇಷ, ಶಿಷ್ಠ, ಜಿಕಿತ, ಕೌತುಲ, ವ್ಯೂಹ, ಮೇಢ್ರ, ವೃಷವೆಂಬ ನವವಿಧ ಪ್ರವರ್ತನೆ ಗುಣಕವಾಗಿಯೂ ಅಥವಾ ಭಾಜಕವಾಗಿಯೂ ಪರಿಣಮಿಸಬಹುದು. ಆದರೆ ಆತ್ಮನ ಮೂಲ ಜೀವನ ದಾರಿ ಒಂದೇ ಯೋಜನ. ನಂತರ ಆತ್ಮನು ನಿರ್ವಹಿಸಿದ ಪಾತ್ರ, ಬಲ, ಬಳಸಿದ ಉಪಾಂಶು, ಅನುಭವಿಸಿದ ಜೀವನ, ತಿಂದ ಅನ್ನ, ಉಟ್ಟ ವಸ್ತ್ರ ಇವೆಲ್ಲಾ ಲೆಕ್ಕವಿಡುತ್ತಾ ಹೋಗುತ್ತದೆ.  ಅದೇ ಹರಿ=ಗಾತ್ರ ಹಿಗ್ಗುತ್ತಾ ಹೋಗುತ್ತದೆ. ಇಲ್ಲಿಗೆ ಈ ಕಲ್ಪದ 28ನೆಯ ಕಲಿಯುಗದವರೆಗಿನ ಲೆಕ್ಕ ಮಾಡಿದಲ್ಲಿ ಆತ್ಮನ ಯೋಜನೆ ಯೋಜನ ಲೆಕ್ಕ 17 ಕೋಟಿ 26 ಲಕ್ಷದ 37 ಸಾವಿರಕ್ಕೂ ಮಿಕ್ಕಿ ಪ್ರಯಾಣವಾಗಿರುತ್ತದೆ. ಅದೊಂದು ಗಣಿತ ಸೂತ್ರ ಈ ಮಂತ್ರದಲ್ಲಿ ಅಡಕವಾಗಿದೆ. ಓದಿ ಗಮನಿಸಿ ಸಂಶೋಧಿಸಿ ಅರ್ಥ ಮಾಡಿಕೊಂಡರೆ ನಿಮಗೆಲ್ಲವೂ ಸಮೀಪವೇ. ಯಾವುದೂ ದೂರವಲ್ಲ.  ಕ್ರಮಣ ಮಾರ್ಗ ಮಾತ್ರ ಬೇರೆ ಅಷ್ಟೆ. ಸುಲಭ, ಸರಳ, ಸೂಕ್ತ, ಸುಖದಾಯಕ.

ಋಕ್:  ಮಂ-1,  ಸೂಕ್ತ-95,  ಮಂತ್ರ-1
ದ್ವೇ ವಿರೂಪೇ ಚರತಃ ಸ್ವರ್ಥೇ ಅನ್ಯಾನ್ಯಾ ವತ್ಸ ಮುಪ ಧಾಪಯೇತೇ |
ಹರಿರನ್ಯಸ್ಯಾಂ ಭವತಿ ಸ್ವಧಾವಾಞ್ಛುಕ್ರೋ ಅನ್ಯಸ್ಯಾಂ ದದೃಶೇ ಸುವರ್ಚಾಃ ||

ಜೀವಜಗತ್ತಿನ ಎಲ್ಲವೂ ದ್ವಂದ್ವವೇ ಭಿನ್ನವೇ ಏಕ ಸ್ವರೂಪವಿಲ್ಲ. ಏಕ ಗುಣವಿಲ್ಲ, ಯಾವುದರಲ್ಲೂ ಏಕತೆಯಿಲ್ಲ. ಹಾಗಂತ ಬಹುಭಿನ್ನವಲ್ಲ. ಎಲ್ಲಿಯೋ ಸ್ವಲ್ಪ ಮಾರ್ಪಾಡು. ಸಣ್ಣ ಬದಲಾವಣೆ. ಅದಕ್ಕೆ ಕಾರಣವಾದ ಗುಣ+ಕರ್ಮ ವಿಭಾಗವು ವಿಶ್ಲೇಷಿಸಲ್ಪಡುತ್ತದೆ ಈ ಮೇಲ್ಕಾಣಿಸಿದ ಮಂತ್ರ ಮತ್ತು ಅದರ ಮುಂದಿನ ಮೂರು ಸೂಕ್ತಗಳು. ಆದರೆ ಅಲ್ಲೆಲ್ಲಾ ಒಂದು ನಿರ್ದಿಷ್ಟ ಗಣಿತ ಸೂತ್ರವೂ ಇದೆ. ಹಾಗೇ ಕರ್ಮವಿಪಾಕ ಮುಖೇನ ಗುಣಿಯಾಗುವತ್ತ ಮಾನವನ ಪ್ರವರ್ತನೆ ಹೇಗಿರಬೇಕೆಂದೂ ವಿವರಿಸುತ್ತದೆ. ಹಾಗೇ ಹರಿ = ದೊಡ್ಡದರ ಆಶ್ರಯ, ಅನುಕರಣೆ ಹೇಗೆ ಪೂರಕವೆಂದೂ ಹೇಳುತ್ತದೆ. ಸಕಲ ಜೀವಿಗಳೂ ತಮ್ಮ ಪೂರ್ವವನ್ನು ಅನುಕರಣೆ ಮಾಡಿಯೇ ಬದುಕು ಸಾಧಿಸುತ್ತವೆ ಎಂಬುದು ಸರ್ವ ವಿದಿತ. ಎಲ್ಲೋ ಕೆಲವು ನಂತರ ಅದರ ಭೂಮಿಕೆಯಲ್ಲಿ ಕೆಲ ಆವಿಷ್ಕಾರಗಳನ್ನು ಮಾಡಿಕೊಳ್ಳಬಹುದು. ಆದರೆ ಎಲ್ಲವೂ ಭೂತಾನುಕರಣಿಯೆಂ ಬುದು ಸತ್ಯ. ಹಾಗಾಗಿಯೇ ಈ ಮಾತು ಹುಟ್ಟಿರಬಹುದು. ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಎಂದು.   ಈ ಅನುಕರಣೆ ಅಥವಾ ಭೂತಾವಲಂಬನೆಯೆಂಬ ವ್ಯವಸ್ಥೆಯ ಆಧಾರದಲ್ಲಿಯೇ ನಮ್ಮೀ ಭಾರತದ ಸಾಮಾಜಿಕ ವ್ಯವಸ್ಥೆ ರೂಪುಗೊಂಡಿದೆ. ಹಾಗೇ ಬಾಂಧವ್ಯ, ಸಂಬಂಧ, ಗುರುತಿಸುವ ಹೆಸರು ಅಥವಾ ನಾಮ ನಿರ್ದೇಶನ ಎಲ್ಲವೂ ಸೂತ್ರಬದ್ಧವಾಗಿ- ರುತ್ತದೆ. ಅದರಲ್ಲಿ ಅಕ್ಷಸೂತ್ರ ನಿಬಂಧನೆ ಇದೆ. ತಾಯಿಗೆ ಮಗು ಮೂಲ ಬಂಧು. ಹಾಗಾಗಿ ಅಮ್ಮ. 2ನೆಯ ಬಂಧು ತಂದೆ. ಹಾಗಾಗಿ ಅಪ್ಪ. ಇನ್ನು ಅಣ್ಣ, ಅಕ್ಕ, ಅಜ್ಜ, ಅಜ್ಜಿ ಎಲ್ಲವೂ ಆದಿ ಅಕಾರವೇ. ಅದೇ ತಾಯಿಯ ಕಾರಣದಿಂದ ಮಾವ, ಹಾಗಾಗಿ ಅಮ್ಮ 2ನೆಯ ಅಕ್ಷರದ ಆದಿಯಿಂದ ಬಾಂಧವ್ಯ. ಆದರೆ ಅತ್ತೆ ತಂದೆಯ ಸೋದರಿಯೂ ಆಗಿರುವುದರಿಂದ ಅಕಾರಾದಿ ಶಬ್ದ. ಇಲ್ಲಿ ಅಕ್ಷಸೂತ್ರ ಅಳವಡಿಸಲ್ಪಟ್ಟಿದೆ. ಇಲ್ಲಿ ಅಮ್ಮ ಅ + += ಅಮ್ಮ = ಅಕಾರ ಆರಂಭ 16 ಮಾತೃಕೆಗಳು.  ಒಂದು ಜೀವಿಯ ಆರಂಭಿಕ ದೇಹರಚನಾ ವಿನ್ಯಾಸ ತ್ರಿಪಂಚಕ + ಆತ್ಮ = 16. ಹಾಗಾಗಿ ಜೀವಿಯ ಆಶ್ರಯ ತಾಣ ಕರ್ತೃ ಮಾತೆ ಅಥವಾ ಅಮ್ಮ. ಅದೇ ಅ. ನಂತರ ಮ. ಪಂಚತನ್ಮಾತೃಕಾದಿ ಪಂಚಗಳು ಅಂದರೆ 5 ಪಂಚಕಗಳು ಒಟ್ಟು 25. ಕೊನೆಯ ಅಕ್ಷರ ಮ. ಅಂದರೆ ಅಂಮ = + ಅನುನಾಸಿಕ + ಮ. ಅಂದರೆ ಏನೂ ಇಲ್ಲದ ಸಹಜ ಸ್ವಾಭಾವಿಕವಾಗಿರುವ ತನ್ನ ದೇಹದ ಶ್ಲೇಷ್ಮದಿಂದಲೇ ಅಂದರೆ ರಜಸ್ಸಿನಿಂದಲೇ ತ್ರಿಪಂಚಕಗಳಿಂದ ದೇಹ ವಿನ್ಯಾಸ ಮಾಡಿ ಪಂಚತನ್ಮಾತೃಕೆಗಳಿಂದ ಕೋಶ ರಚನೆ ಮಾಡಿ ಜೀವನಿಗೆ ಅಥವಾ ಆತ್ಮನಿಗೆ ಆಶ್ರಯತಾಣವಾದ ದೇಹ ಸೃಷ್ಟಿ ಮಾಡಿದ್ದರಿಂದ ಅಂದರೆ ಶೂನ್ಯದಿಂದ ಸೃಷ್ಟಿ ಯೆಂದು ಭಾವನಾತ್ಮಕವಾಗಿ ಅರ್ಥೈಸಬಹುದು. ಆತ್ಮಿಕ ಋಣ ಕರ್ತಳಾದ್ದರಿಂದ ಅಂಮ ಅಥವಾ ಅಮ್ಮ. ಎರಡೂ ಒಂದೇ. ಎರಡನೆಯದು ಮಕಾರವೇ ಆದಲ್ಲಿ ಮಗುವಿಗೆ ಊಡಿಸುವ ಮಮತೆಯೆಂಬ ಭ್ರಾಂತಿ. ಅನುನಾಸಿಕವಾದರೆ ಶೂನ್ಯಸೃಷ್ಟಿ. ಹೀಗೆ ಭಾರತೀಯ ಭಾಷೆಯಲ್ಲಿಯ ಭಾರತೀಯ ಸಂಬಂಧಗಳೆಲ್ಲಾ ಅರ್ಥಬದ್ಧ. ಹಾಗೇ ಸೂತ್ರೀಕರಿಸಲ್ಪಟ್ಟವು. ವಿದೇಶೀ ಭಾಷೆಗಳಲ್ಲಿ ಈ ಕಂಪು ಇಲ್ಲ. ಭಾರತೀಯ ಭಾಷೆಯಲ್ಲಿ ಮಾತ್ರ ಇದನ್ನು ಕಾಣಬಹುದು. ಒಟ್ಟು ಅಕ್ಷ ವಿಧ್ಯೆಯ ಮೂಲಾಕ್ಷರಗಳಾದ ಸ್ವರ 16 ವ್ಯಂಜನ + 25 = 36 ಹೊಂದಿಸಿ ಕೊಡುವುದು ತಾಯಿ ಅಂದರೆ ಅಮ್ಮ. ಉಳಿದ ಅವರ್ಗೀಯ ತಾರುಮಾರುಗಳನ್ನು ಹೊಂದಿಸಿಕೊಳ್ಳುವುದು ಮಗು. ಅಮ್ಮ ಅರ್ಥವಾಯ್ತೆ? ಇದು ಮೇಲೆ ಉದಾಹರಿಸಿದ ಮಂತ್ರದಲ್ಲಿ ಯೋಜಿಸಿದ ಗಣಿತ ಸೂತ್ರದಲ್ಲಿ ಅಡಕವಾಗಿದೆ. ಹಾಗೇ ಹಲವು ವಿಚಾರಗಳ ಕೂಡುವಿಕೆಯಿದೆ. ಅವೆಲ್ಲಾ ಬೇರೆ ಬೇರೆ ಲೆಕ್ಕಗಳು. ಅವನ್ನೆಲ್ಲಾ ಅಧ್ಯಯನ ಮಾಡುವ ಉತ್ಸಾಹಿಗಳು ಬೇಕಿದೆ. ಅಧ್ಯಯನ ಮಾಡಿದಲ್ಲಿ ಸಾರ್ಥಕತೆ ಇದೆ.

ಋಕ್:  ಮಂ-1,  ಸೂಕ್ತ-111,  ಮಂತ್ರ1-4
ತಕ್ಷನ್ರಥಂ ಸುವೃತಂ ವಿದ್ಮನಾಪಸಸ್ತಕ್ಷನ್ ಹರೀ ಇಂದ್ರವಾಹಾ ವೃಷಣ್ವಸೂ |
ತಕ್ಷನ್ ಪಿತೃಭ್ಯಾಮೃಭವೋ ಯುವದ್ವಯ ಸ್ತಕ್ಷನ್ ವತ್ಸಾಯ ಮಾತರಂ ಸಚಾಭುವಮ್ ||1||
ಆ ನೋ ಯಜ್ಞಾಯ ತಕ್ಷತ ಋಭುಮದ್ವಯಃ ಕ್ರತ್ವೇ ದಕ್ಷಾಯ ಸುಪ್ರಜಾವತೀಮಿಷಮ್ |
ಯಥಾ ಕ್ಷಯಾಮ ಸರ್ವ ವೀರಯಾ ವಿಶಾ ತನ್ನಃ ಶರ್ಧಾಯ ಧಾಸಥಾ ಸ್ವಿಂದ್ರಿಯಮ್ ||2||
ಆ ತಕ್ಷತ ಸಾತಿ ಮಸ್ಮಭ್ಯ ಮೃಭವಃ ಸಾತಿಂ ರಥಾಯ ಸಾತಿ ಮರ್ವತೇ ನರಃ |
ಸಾತಿಂ ನೋ ಜೈತ್ರೀಂ ಸಂ ಮಹೇತ ವಿಶ್ವಹಾ ಜಾಮಿಮಜಾಮಿಂ  ಪೃತನಾಸು ಸಕ್ಷಣಿಮ್ ||3||
ಋಭುಕ್ಷಣಮಿಂದ್ರಮಾ ಹುವ ಊತಯ ಋಭೂನ್ ವಾಜಾನ್ಮರುತಃ ಸೋಮಪೀತಯೇ |
ಉಭಾ ಮಿತ್ರಾವರುಣಾ ನೂನಮಶ್ವಿನಾ ತೇ ನೋ ಹಿನ್ವಂತು ಸಾತಯೇ ಧಿಯೇ ಜಿಷೇ ||4||

ರಥ ಅಂದರೆ ಜೀವನ ಅಥವಾ ಪ್ರಯಾಣವೆಂಬ ಅರ್ಥದಲ್ಲಿ ಒಂದು ಜೀವ ತಾನು ನಂತರ ತನ್ನ ಕರ್ಮ+ಋಣ ನಂತರ ಭೌತಿಕಾದಿ ತಾಪತ್ರಯಗಳು ಅದರ ನಿರ್ವಹಣೆ ಹಾಗೇ ಮುಂದೆ ತನ್ನ ಕುಲಾಚಾರ, ಮಾತೃ ಪಿತೃ ದೇವ ಋಷಿ ಋಣಗಳು. ಹಾಗೇ ದೇಶೀಯ ಋಣಗಳು. ಅನ್ನ ಋಣ, ಪ್ರಕೃತಿ ಋಣ, ಇನ್ನತರೆ ಭವಗಳು. ಇವೆಲ್ಲಾ ಕೂಡಿದ ಒಂದು ಲೆಕ್ಕವಿದೆ. ಅದೇ ಆತ್ಮಿಕ ಲೆಕ್ಕ. ಉಭಾ ಮಿತ್ರಾವರುಣಾ ನೂನಮಶ್ವಿನಾ ತೇ ನೋ ಹಿನ್ವಂತು ಸಾತಯೇ ಧಿಯೇ ಜಿಷೇ = ಸಮಸಂಖ್ಯಾ ಭೋಕ್ತೃವಾದ ಉಭಾ = ಮಿತ್ರಾ + ವರುಣಗಳು ಭೋಗ್ಯವಾದಲ್ಲಿ ನೂನಂ = ಶೂನ್ಯವಾಗಿರುತ್ತಾ ಅಶ್ವಿನದ ಗುಣಕದಲ್ಲಿ ಯಾವ್ಯಾವುದು ಇದೆಯೋ ಅದೆಲ್ಲವೂ ಭೋಗ್ಯ ಫಲಗಳಾಗಿ ನಿರೂಪಗೊಂಡು ನಿರಂತರತೆಗೆ ಅಂದರೆ ಬಡ್ಡಿ ಅಥವಾ ವೃದ್ಧಿಗೆ ಕಾರಣವಾಗುತ್ತಾ ಹೋಗುತ್ತವೆ. ಅವುಗಳ ಮೊತ್ತದ ಸಂಖ್ಯೆ ಜಯಾ ಆಗಿರುತ್ತದೆ. ಅದೇ ಆತ್ಮನ ಆತ್ಮೋನ್ನತಿ. ಈ ಸಮೀಕರಣ ಬಿಡಿಸಬಲ್ಲಿರಾ ಬಿಡಿಸಿದಲ್ಲಿ ಆತ್ಮ ಸಾಕ್ಷಾತ್ಕಾರ ಖಂಡಿತ ವೆಂಬುದು ಕುತ್ಸ ಆಂಗೀರಸರ ಅಭಿಮತ.

ಋಕ್:  ಮಂ-1,  ಸೂಕ್ತ-116,  ಮಂತ್ರ 4-25
ತಿಸ್ರಃ ಕ್ಷಪಸ್ತ್ರಿರಹಾತಿವ್ರಜದ್ಭಿರ್ನಾಸತ್ಯಾ ಭುಜ್ಯುಮೂಹಥುಃ ಪತಂಗೈಃ |
ಸಮುದ್ರಸ್ಯ ಧನ್ವನ್ನಾರ್ದ್ರಸ್ಯ ಪಾರೇ ತ್ರಿಭೀ ರಥೈಃ ಶತಪದ್ಭಿಃ ಷಳಶ್ವೈಃ || 4 ||
ಅನಾರಂಭಣೇ ತದವೀರಯೇಥಾಮನಾಸ್ಥಾನೇ ಅಗ್ರಭಣೇ ಸಮುದ್ರೇ |
ಯದಶ್ವಿನಾ ಊಹಥುರ್ಭುಜ್ಯುಮಸ್ತಂ ಶತಾರಿತ್ರಾಂ ನಾವಮಾತಸ್ಥಿವಾಂಸಮ್ || 5 ||
ಯಮಶ್ವಿನಾ ದದಥುಃ ಶ್ವೇತಮಶ್ವಮಘಾಶ್ವಾಯ ಶಶ್ವದಿತ್ಸ್ವಸ್ತಿ |
ತದ್ವಾಂ ದಾತ್ರಂ ಮಹಿ ಕೀರ್ತೇನ್ಯಂ ಭೂತ್ಪೈದ್ವೋ ವಾಜೀ ಸದಮಿದ್ಧವ್ಯೋ ಅರ್ಯಃ || 6 ||
ಯುವಂ ನರಾ ಸ್ತುವತೇ ಪಜ್ರಿಯಾಯ ಕಕ್ಷೀವತೇ ಅರದತಂ ಪುರಂಧಿಮ್ |
ಕಾರೋತರಾಚ್ಛಫಾದಶ್ವಸ್ಯ ವೃಷ್ಣಃ ಶತಂ ಕುಂಭಾಂ ಅಸಿಂಚತಂ ಸುರಾಯಾಃ || 7 ||
ಹಿಮೇನಾಗ್ನಿಂ ಘ್ರಂಸಮವಾರಯೇಥಾಂ ಪಿತುಮತೀಮೂರ್ಜ ಮಸ್ಮಾ ಅಧತ್ತಮ್ |
ಋಭೀಸೇ ಅತ್ರಿಮಶ್ವಿನಾವನೀತ ಮುನ್ನಿನ್ಯಥುಃ ಸರ್ವಗಣಂ ಸ್ವಸ್ತಿ  || 8 ||
ಪರಾವತಂ ನಾಸತ್ಯಾನುದೇಥಾಮುಚ್ಚಾಬುಧ್ನಂ ಚಕ್ರಥುರ್ಜಿಹ್ಮ ಬಾರಮ್ |
ಕ್ಷರನ್ನಾಪೋ ನ ಪಾಯನಾಯ ರಾಯೇ ಸಹಸ್ರಾಯ ತೃಷ್ಯತೇ ಗೋತಮಸ್ಯ || 9 ||
ಜುಜುರುಷೋ ನಾಸತ್ಯೋತ ವವ್ರಿಂ ಪ್ರಾಮುಂಚತಂ ದ್ರಾಪಿ ಮಿವ ಚ್ಯವಾನಾತ್ |
ಪ್ರಾತಿರತಂ ಜಹಿತಸ್ಯಾಯುರ್ದಸ್ರಾದಿತ್ಪತಿ ಮಕೃಣುತಂ ಕನೀನಾಮ್ || 10 ||
ತದ್ವಾಂ ನರಾ ಶಂಸ್ಯಂ ರಾಧ್ಯಂ ಚಾಭಿಷ್ಟಿಮನ್ನಾಸತ್ಯಾ ವರೂಥಮ್|
ಯದ್ವಿದ್ವಾಂಸಾ ನಿಧಿಮಿವಾಪಗೂಳ್ಹಮುದ್ದರ್ಶತಾ ದೂಪಥುರ್ವಂದನಾಯ || 11 ||
ತದ್ವಾಂ ನರಾ ಸನಯೇ ದಂಸ ಉಗ್ರಮಾವಿಷ್ಕೃಣೋಮಿ ತನ್ಯತುರ್ನ ವೃಷ್ಟಿಮ್ |
ದಧ್ಯಙ್ ಹ ಯನ್ಮಧ್ವಾಥರ್ವಣೋ ವಾಮಶ್ವಸ್ಯ ಶೀರ್ಷ್ಣಾ ಪ್ರಯದೀಮುವಾಚ || 12 ||
ಅಜೋಹವೀನ್ನಾಸತ್ಯಾ ಕರಾವಾಂ ಮಹೇ ಯಾಮನ್ಪುರುಭುಜಾ ಪುರಂಧಿಃ |
ಶ್ರುತಂ ತಚ್ಛಾಸುರಿವ ವಧ್ರಿಮತ್ಯಾ ಹಿರಣ್ಯಹಸ್ತ ಮಶ್ವಿನಾವ ದತ್ತಮ್ || 13 ||
ಆಸ್ನೋ ವೃಕಸ್ಯ ವರ್ತಿಕಾಮಭೀಕೇ ಯುವಂ ನರಾ ನಾಸತ್ಯಾ ಮುಮುಕ್ತಮ್ |
ಉತೋ ಕವಿಂ ಪುರುಭುಜಾ ಯುವಂ ಹ ಕೃಪಮಾಣಮಕೃಣುತಂ ವಿಚಕ್ಷೇ || 14 ||
ಚರಿತ್ರಂ ಹಿ ವೇರಿವಾಚ್ಛೇದಿ ಪರ್ಣಮಾಜಾ ಖೇಲಸ್ಯ ಪರಿ ತಕ್ಮ್ಯಾಯಾಮ್ |
ಸದ್ಯೋ ಜಂಘಾಮಾಯಸೀಂ ವಿಶ್ಪಲಾಯೈ ಧನೇ ಹಿತೇ ಸರ್ತವೇ ಪ್ರತ್ಯಧತ್ತಮ್ || 15 ||
ಶತಂ ಮೇಷಾನ್  ವೃಕ್ಯೇ ಚಕ್ಷದಾನಮೃಜ್ರಾಶ್ವಂ ತಂ ಪಿತಾಂಧಂ ಚಕಾರ |
ತಸ್ಮಾ ಅಕ್ಷೀ ನಾಸತ್ಯಾ ವಿಚಕ್ಷ ಆಧತ್ತಂ ದಸ್ರಾ ಭಿಷಜಾ ವನರ್ವನ್ || 16 ||
ಆ ವಾಂ ರಥಂ ದುಹಿತಾ ಸೂರ್ಯಸ್ಯ ಕಾರ್ಷ್ಮೇವಾತಿಷ್ಠದರ್ವತಾ ಜಯಂತೀ |
ವಿಶ್ವೇ ದೇವಾ ಅನ್ವಮನ್ಯಂತ ಹೃದ್ಭಿಃ ಸಮುಶ್ರಿಯಾ ನಾಸತ್ಯಾ ಸಚೇಥೇ || 17 ||
ಯದಯಾತಂ ದಿವೋದಾಸಾಯ ವರ್ತಿರ್ಭರದ್ವಾಜಾ ಯಾಶ್ವಿನಾ ಹಯಂತಾ |
ರೇವದುವಾಹ ಸಚನೋ ರಥೋವಾಂ ವೃಷಭಶ್ಚ ಶಿಂಶುಮಾರಶ್ಚ ಯುಕ್ತಾ || 18 ||
ರಯಿಂ ಸುಕ್ಷತ್ರಂ ಸ್ವಪತ್ಯ ಮಾಯುಃ ಸುವೀರ್ಯಂ ನಾಸತ್ಯಾ ವಹಂತಾ |
ಆ ಜಹ್ನಾವೀಂ ಸಮನಸೋಪ ವಾಜೈಸ್ತ್ರಿರಹ್ನೋ ಭಾಗಂ ದಧತೀಮಯಾತಮ್ || 19 ||
ಪರಿವಿಷ್ಟಂ ಜಾಹುಷಂ ವಿಶ್ವತಃ ಸೀಂ ಸುಗೇಭಿರ್ನಕ್ತಮೂಹಥೂ ರಜೋಭಿಃ |
ವಿಭಿಂದುನಾ ನಾಸತ್ಯಾ ರಥೇನ ವಿಪರ್ವತಾ ಅಜರಯೂ ಅಯಾತಮ್ || 20 ||
ಏಕಸ್ಯಾ ವಸ್ತೋರಾವತಂ ರಣಾಯ ವಶಮಶ್ವಿನಾ ಸನಯೇ ಸಹಸ್ರಾ |
ನಿರಹತಂ ದುಚ್ಛುನಾ ಇಂದ್ರವಂತಾ ಪೃಥುಶ್ರವಸೋ ವೃಷಣಾವರಾತೀಃ || 21 ||
ಶರಸ್ಯ ಚಿದಾರ್ಚತ್ಕಸ್ಯಾವತಾದಾ ನೀಚಾದುಚ್ಚಾ ಚಕ್ರಥುಃ ಪಾತವೇ ವಾಃ |
ಶಯವೇ ಚಿನ್ನಾಸತ್ಯಾ ಶಚೀಭಿರ್ಜಸುರಯೇ ಸ್ತರ್ಯಂ ಪಿಪ್ಯಥುರ್ಗಾಮ್ || 22 ||
ಅವಸ್ಯತೇ ಸ್ತುವತೇ ಕೃಷ್ಣಿಯಾಯ ಋಜೂಯತೇ ನಾಸತ್ಯಾ ಶಚೀಭಿಃ |
ಪಶುಂ ನ ನಷ್ಟಮಿವ ದರ್ಶನಾಯ ವಿಷ್ಣಾಪ್ವಂ ದದಥುರ್ವಿಶ್ವಕಾಯ || 23 ||
ದಶ ರಾತ್ರೀರಶಿವೇನಾ ನವದ್ಯೂನ ವನದ್ಧಂ ಶ್ನಥಿತಮಪ್ಸ್ವಂ1ತಃ |
ವಿಪ್ರುತಂ ರೇಭಮುದನಿ ಪ್ರವೃಕ್ತಮುನ್ನಿನ್ಯಥುಃ ಸೋಮಮಿವ ಸ್ರುವೇಣ || 24 ||
ಪ್ರವಾಂ ದಂಸಾಂಸ್ಯಶ್ವಿನಾವವೋಚಮಸ್ಯ ಪತಿಃ ಸ್ಯಾಂ ಸುಗವಃ ಸುವೀರಃ |
ಉತ ಪಶ್ಯನ್ನಶ್ನುವನ್ ದೀರ್ಘಮಾಯುರಸ್ತಮಿವೇಜ್ಜ ರಿಮಾಣಂ ಜಗಮ್ಯಾಮ್ || 25 ||

ಕ್ರಿ. ಶ.  600-700ರ   ಕಾಲದವರೆಗೂ  ಮಾನವ  ಜೀವನವೆಂದರೆ ಏನೆಂದೇ ಅರಿಯದ ನೆಲೆಯಲ್ಲಿದ್ದ ಇತರೆ ದೇಶಗಳು ಭಾರತ ದೇಶವನ್ನೇ ಸ್ವರ್ಗಭೂಮಿಯೆಂದು ಗುರುತಿಸುತ್ತಿದ್ದುದ್ದು. ಅಲ್ಲಿನ ಜನರಿಗೆ ಒಮ್ಮೆಯಾದರೂ ಭಾರತ ಪ್ರವಾಸ ಮಾಡಲೇಬೇಕೆಂಬ ಮಹತ್ವಾಕಾಂಕ್ಷೆ ಇದ್ದದ್ದೂ ಸತ್ಯವೇ. ಹಾಗೇ ಎಷ್ಟೋ ಜನ ಯಾತ್ರಿಕರು ಭಾರತಕ್ಕೆ ಬಂದು ಇಲ್ಲಿನ ರಾಜರ ವೈಭವ, ಜನ ಜೀವನ ವಿಧಾನ, ಇಲ್ಲಿನ ವಿಧ್ಯೆ, ಜ್ಞಾನ, ಆಧ್ಯಾತ್ಮಶಕ್ತಿ, ಋಷೀ ಮುನಿಗಳ ತಪೋಶಕ್ತಿಯನ್ನು ವರ್ಣಿಸಿ ಬರೆದಿಟ್ಟ ಎಷ್ಟೋ ದಾಖಲೆಗಳು ಈಗಲೂ ಇವೆ. ಅಂತಹಾ ವಿದೇಶೀ ಯಾತ್ರಿಗಳ ವಿಚಾರದಲ್ಲಿ ನೀವು ಇತಿಹಾಸದಲ್ಲಿ ಓದಿರಬಹುದು. ಹಾಗಿದ್ದರೆ ಅರ್ಥಮಾಡಿಕೊಳ್ಳಿ ಆಗ ಭಾರತ ಹೇಗಿತ್ತು ಎಂದು. ನಂತರ ಮಾನವೀಯ ಜೀವನ ನೆಲೆಯರಿತ ವಿದೇಶಿಗಳು ಭಾರತದ ಸಂಪತ್ತಿನ ಆಸೆಯಿಂದ ತುಡುಗು ಸೈನ್ಯ ಕಟ್ಟಿಕೊಂಡು ಆಕ್ರಮಣ ಮಾಡುತ್ತಾ ಹಳ್ಳಿ ಗ್ರಾಮಗಳನ್ನು ದರೋಡೆ ಮಾಡುತ್ತಾ ಇಲ್ಲಿನ ಸಂಪತ್ತನ್ನು ದೋಚಲಾರಂಭಿಸಿದರು. ಅದರರ್ಥ ಇಲ್ಲಿ ಅಷ್ಟು ಸಂಪತ್ತಿತ್ತು ಅಲ್ಲಿರಲಿಲ್ಲ ಅಂತಲ್ಲವೆ?

ಅವರೆಲ್ಲಾ ಅರಿತು ಕೊಂಡದ್ದು ಇಲ್ಲಿನ ಋಷಿ ಮುನಿಗಳಲ್ಲಿ ಅಡಕವಾಗಿರುವ ಮಂತ್ರಶಕ್ತಿ, ತಂತ್ರಶಕ್ತಿ, ಜ್ಞಾನಶಕ್ತಿ, ಇಚ್ಛಾಶಕ್ತಿ, ಕ್ರಿಯಾಶಕ್ತಿ ಎಂಬ  ಪಂಚಶಕ್ತಿಯ ಮುಖೇನ ಪ್ರವಹಿಸುವ ಯಂತ್ರಶಕ್ತಿಯಿಂದಲೇ ಎಂಬುದನ್ನರಿತರು. ನಂತರ ಇತರೆ ಮೂಲದ ಶಕ್ತಿ ಪೂರೈಕೆಯಿಂದ ಅಂದರೆ ಭೌತಿಕ ವಸ್ತು+ಧಾತು ಮೂಲದಿಂದ ಶಕ್ತಿಯುಪಯೋಗಿಸಿ ಯಂತ್ರ ತಯಾರಿಕೆಯಲ್ಲಿ ನೈಪುಣ್ಯತೆ ಪಡೆದರು. ಆದರೆ ಅದೇ ಕೆಲಸವನ್ನು ಭಾರತೀಯ ಋಷಿ ಮುನಿಗಳು ತಮ್ಮ ಇಚ್ಛಾಶಕ್ತಿಯಿಂದಲೇ ಇಂಧನ ಪೂರೈಕೆ ಇಲ್ಲದೇನೇ ಮಾಡುತ್ತಿದ್ದರು. ಅದೇ ಅಸ್ತ್ರವಿಧ್ಯೆಗಳು. ಸೂತ್ರ ಒಂದೇ. ತಂತ್ರ ಬೇರೆ, ಯಂತ್ರ ಬೇರೆ, ಇಂಧನ ಶಕ್ತಿ ಬೇರೆ ಅಷ್ಟೆ. ಒಂದು ಆಗ್ನೇಯಾಸ್ತ್ರ ಭಾರತೀಯ ಋಷಿಗಳ ಭೂ ಮಧ್ಯದ ಒಂದು ಕಿರಣ ಶಕ್ತಿ. ಅದೇ ಆಗ್ನೇಯಾಸ್ತ್ರ. ಆದರೆ ವಿದೇಶೀಯ ತಂತ್ರ ಒಂದು ಇಕ್ಕಟ್ಟಾದ ಪ್ರದೇಶ, ಏಕಮುಖ ಪ್ರವಹನ ನಳಿಕೆ, ಅಲ್ಲಿ ತೀಕ್ಷ್ಣಜ್ವಲನಶಕ್ತಿಯ ದಹ್ಯಾನುಕೂಲಿ ವಸ್ತುವನ್ನು ಉರಿಸಿ ಆ ಜ್ವಲನಶಕ್ತಿಯು ಸ್ಫೋಟವಾಗು- ವಂತೆಯೂ ಅದರ ಮುಂಭಾಗದಲ್ಲಿಟ್ಟ ಕಲ್ಲು, ಲೋಹದ ಗುಂಡುಗಳು ವೇಗವಾಗಿ ತಳ್ಳಲ್ಪಡುವಂತೆ ಮಾಡುವ ತಂತ್ರಜ್ಞಾನವೇ ತೋಪು, ಕೋವಿ ಇತ್ಯಾದಿಗಳು. ಆದರೆ ಆಗ್ನೇಯಾಸ್ತ್ರಕ್ಕೆ ಸಮಾನವಲ್ಲ. ಹಾಗೆಯೇ ರಥ, ನೌಕಾ, ವಿಮಾನ, ವೇಗ, ಉತ್ಫಲಿ, ಯಾನ, ಅಯನಗಳೆಂಬ ಪ್ರಯಾಣ ವಿಧಾನವೂ ಭಾರತದಲ್ಲಿ ಚಾಲ್ತಿಯಲ್ಲಿತ್ತು. ಅಗತ್ಯಕ್ಕೆ ಅನುಸರಿಸಿ ಮಾತ್ರವಿತ್ತು. ಅವೆಲ್ಲಾ ವಿಧ್ಯೆಗಳೂ ವೇದದಲ್ಲಿವೆ. ಹಾಗೆಯೇ ವಸ್ತು+ಚಲನೆ+ಬಲವೆಂಬ ಮೂರರ ಸೂತ್ರದಲ್ಲಿ ಇವೆಲ್ಲ ಅಡಕವಾಗಿತ್ತು. ಅವನ್ನೆಲ್ಲಾ ಈ ಮೇಲ್ಕಾಣಿಸಿದ ಮಂತ್ರಗಳು ಸರಳ ಸೂತ್ರಗಳಲ್ಲಿ ವಿವರಿಸುತ್ತವೆ. ಅವೆಲ್ಲಾ ಗಣಿತ ಸೂತ್ರದಂತಿದೆ. ಸಂಖ್ಯೆ ಪ್ರಧಾನವಾಗಿ ಹೇಳುತ್ತಾ ಮಂತ್ರ ಸೂಚಿಯಂತೆ ಯಾವ್ಯಾವ ಭಾಗದಲ್ಲಿ ಈ ರಹಸ್ಯವಿದೆಯೆಂದೂ ಬ್ರಾಹ್ಮಣ+ಅರಣ್ಯಕ+ಸೂತ್ರಗಳಾದಿಯಾಗಿ ಅಲ್ಲಿ ಸೇರಿಸಿ ರಹಸ್ಯವಾಗಿಡಲಾಗಿದೆ ಎಂತಲೂ ಸೂಚಿಸಲಾಗಿದೆ. ಇದರ ಒಂದು ರಹಸ್ಯವನ್ನು ಅಕ್ಷಮಾಲಾವೆಂಬ ಸಾಂಖ್ಯಸೂತ್ರದಂತೆ ವಿವರಿಸುತ್ತೇನೆ. ಜಾಣರಾದರೆ ಅರ್ಥಮಾಡಿಕೊಳ್ಳಿರಿ.

ಮೂರು ಮೂರಾರೇನು ಮಾರುತ ಮೊತ್ತದೊಳೇಳು ಮೂರಲಿ
ಮರುಜೀವ ಸಂಖ್ಯೆಯಲಿ ಮೂರೆರಡ ಕೂಡಿರಲು ಮಾರುತಾತ್ಮಜನಪ್ಪ ಕೇಳೂ ||
ಯಾರು ಉತ್ತರಿಪರೀ ಸವಾಲಿಗೆ ಮೂರು ಜನ್ಮದ ಗಳಿಕೆ
ಹೋರಿ ಪಡೆದವರಾರು ಬದುಕಿಲ್ಲ ವೇರಿಹರು ಸಗ್ಗಕೆ ಚಾರುಮತಿ
ಯರ ಸಂಗ ಕೆಳಸಿಹರವರು ವ್ಯರ್ಥ ಬಿಡು ಈ ಮೂರರಾ ಗಂಟ
ಲಿರೆ ಬಿಡಿಸಲಾಗದು ಬಂಧ ವಾನರಯೂಥ ಮುಖ್ಯರೊಳೊಬ್ಬ ನಿಹನಾತನೇ ವೀರ ಕಾಣಯ್ಯಾ ||

ಈ ಪದ್ಯದಲ್ಲಿ ಸವಾಲೂ ಸೇರಿಸಿ ಕನ್ನಡದ ಭಾಷೆಯಲ್ಲಿಯೇ ಬರೆದಿದ್ದೇನೆ. ನೀವ್ಯಾರಾದರೂ ಸಾಧಿಸಿದಲ್ಲಿ ಆರನೆಯ ಬ್ರಹ್ಮರಾಗಲು ನಿಮಗೆ ಸಿದ್ಧವಿದೆ ಪಟ್ಟ ಇದು ಸತ್ಯ. ಇದು ವೇದದ ಸವಾಲು. ಇಂತಹಾ ಕೆಲ ರಹಸ್ಯದ ಹೊಳಲರಿತ ವಿದೇಶೀಯರು ವ್ಯಾಪಾರದ ನೆಪದಿಂದ ಭಾರತಕ್ಕೆ ಬಂದು ಇಲ್ಲಿ ಕಾಲೂರಿ ನಮ್ಮೆಲ್ಲಾ ವಿಧ್ಯೆ, ಜ್ಞಾನವನ್ನೂ ನಾಶಮಾಡಿ ನಮ್ಮನ್ನಾಳಿದರು. ಅಜೇಯರಾದರು. ಇಡೀ ಪ್ರಪಂಚವನ್ನಾಳಿದರು. ಆದರೇನು ಅವರರಿತದ್ದು ಬರೇ ಹೊಳಹು ಅರ್ಥಾತ್ ನೆರಳು. ನೈಜ ಅರಿತ ಬುದ್ಧಿವಂತರು ಭಾರತದಲ್ಲಿನ್ನೂ ಇದ್ದಾರೆ ಎಂದು ತಿಳಿಯದೇ ಮೈಮರೆತರು ಸರ್ವನಾಶವಾದರು. ಇತಿಹಾಸದಲ್ಲಿ ನೀವು ಓದಿದ್ದು ಎರಡು ಮಹಾಯುದ್ಧ ಚರಿತ್ರೆ. ಅದು 1912ರ ನಂತರ ಒಂದು, 1936ರ ನಂತರ ಇನ್ನೊಂದು ಈಗ ಟುಸ್ ಪಟಾಕಿ ಇಟ್ಟುಕೊಂಡು ಮೂರನೆಯ ಮಹಾಯುದ್ಧಕ್ಕೆ ಸಿದ್ಧವಾಗುತ್ತಿದೆ ಎಂದು ಬುದ್ಧಿಜೀವಿಗಳೆಂಬ ಲದ್ದಿಗಳು ಬಾಯ್ ಬಡುಕೊಳ್ಳುತ್ತಿವೆ. ಆದರೆ ಭಾರತೀಯ ಇತಿಹಾಸ ಇದಲ್ಲ. ಅದಕ್ಕೆ ಮೊದಲು ಎಷ್ಟು ಮಹಾಯುದ್ಧಗಳಾಗಿಲ್ಲ?  ನಿಮಗೆ ಲೆಕ್ಕ ಗೊತ್ತೆ? ಖಂಡಿತಾ ಇಲ್ಲ. ಹಲವು ಬಾರಿ ಹಲವು ಕೋಟಿ ಜನರ ನಾಶ ಯುದ್ಧ ಕಾರಣದಿಂದಲೇ  ಆಗುತ್ತಲೇ ಬಂದಿತ್ತು. ಅದರ ಇತಿಹಾಸ ನಿಮಗೆ ಗೊತ್ತಿಲ್ಲ. ಶಿವನ ಆಗ್ರಹಕ್ಕೆ ಸಿಕ್ಕಿ ಮ್ಲೇಂಛಲೋಕ ಸುಟ್ಟು ಮರಳುಗಾಡಾಯ್ತು. ಕಪಿಲನ ದೃಷ್ಟಿ ಶಕ್ತಿಗೆ ಸುಟ್ಟುರಿದು ಹೋಯ್ತು ನಾಗಲೋಕ. ಹಿಂದೆ ಒಂದು ಬಾಣಕ್ಕೆ ಸಪ್ತ ಸಮುದ್ರಗಳು ಒಣಗಿ ಹೋದವು. ಅತೀ ಕುಳ್ಳಗಿನ ಆಕಾರದ ಅಗಸ್ತ್ಯ ಇಡೀ ಸಮುದ್ರವನ್ನೇ ಕುಡಿದ. ಭೋರ್ಗೆರೆದು ಹರಿವ ಗಂಗೆಯನ್ನು ಕುಡಿದ ಜಹ್ನು ಋಷಿ. ಇವೆಲ್ಲಾ ಸಾಧ್ಯ. ಮೇಲ್ಕಂಡ ಮಂತ್ರಗಳಲ್ಲಿ ಅಡಕವಾದ ತಂತ್ರರಹಸ್ಯ, ಅದರ ಸೂಚಿತ ಸೂಚನೆ ಅರ್ಥ ಮಾಡಿಕೊಳ್ಳುವ ಬುದ್ಧಿ ಬೆಳೆಸಿ ಕೊಳ್ಳಿರೆಂದು ಪ್ರಾರ್ಥಿಸುತ್ತೇನೆ. ಅದೇ ಸೂಕ್ತದ 2ನೆಯ ಮಂತ್ರ ಗಮನಿಸಿ ನಿಮಗೆ ಸವಾಲೆಸೆದಿದೆ ಈ ಮಂತ್ರ

ವೀಳು ಪತ್ಮಭಿರಾಶು ಹೇಮಭಿರ್ವಾ ದೇವಾನಾಂ ವಾ ಜೂತಿಭಿಃ ಶಾಶದಾನಾ |
ತದ್ರಾಸಭೋ ನಾಸತ್ಯಾ ಸಹಸ್ರಮಾಜಾ ಯಮಸ್ಯ ಪ್ರಧನೇ ಜಿಗಾಯ || 2 ||

ಎಂದಿದೆ. ಅದೇನು ಗೊತ್ತೆ? ಈ ಪದ್ಯ ಗಮನಿಸಿ

ನಡು ನಿಡುವನೆಡೆಯ ಒಡೆಯನ ಕಡೆಯ
ಕಡಿದೊಟ್ಟಿದಾ ಒಡವೆ ಗಾತ್ರದ ಜಡ ಜಡವೀ ಜೀವ
ತೊಡು ತೊಡೆಲವೊ ನಿನ್ನ ಕುಡಿ ಜೀವ ಮುಡಿಗೇರೆ ಕಡೆ
ಕಡೆದು ರಸ ಹಿಂಡಿ ಒಡೆಯದಂತೆ ಕಾಸಿದೊಡೆ ಉತ್ತರವಿದು.

ಋಕ್: ಮಂ-1, ಸೂಕ್ತ-122, ಮಂತ್ರ13
ಮಂದಾಮಹೇ ದಶತಯಸ್ಯ ಧಾಸೇರ್ದ್ವಿರ್ಯತ್ ಪಂಚ ಬಿಭ್ರತೋ ಯಂತ್ಯನ್ನಾ |
ಕಿಮಿಷ್ಟಾಶ್ವ ಇಷ್ಟರಶ್ಮಿರೇತ ಈಶಾನಾ ಸಸ್ತರುಷ ಋಂಜತೇ ನೃನ್ ||

ಋಕ್: ಮಂ-1, ಸೂಕ್ತ-122, ಮಂತ್ರ14-15
ಹಿರಣ್ಯಕರ್ಣಂ ಮಣಿಗ್ರೀವಮರ್ಣಸ್ತನ್ನೋ ವಿಶ್ವೇ ವರಿವಸ್ಯಂತು ದೇವಾಃ |
ಅರ್ಯೋ ಗಿರಃ ಸದ್ಯ ಆ ಜಗ್ಮುಷೀರೋಸ್ರಾಶ್ಚಾಕಂತೂ ಭಯೇಷ್ವಸ್ಮೇ ||
ಚತ್ವಾರೋ ಮಾ ಮಶರ್ಶಾರಸ್ಯ ಶಿಶ್ರಸ್ತ್ರಯೋರಾಜ್ಞ ಆಯವಸಸ್ಯ ಜಿಷ್ಣೋಃ |
ರಥೋ ವಾಂ ಮಿತ್ರಾವರುಣಾ ದೀರ್ಘಾಪ್ಸಾಃ ಸ್ಯೂಮಗಭಸ್ತಿಃ ಸೂರೋ ನಾದ್ಯೌತ್ ||

ನಾಕ ಬೇಕೆ ಮನುಜ ನಿನಗೆ ನೂಕೆಲವೊ ಸಾಕು ಬೇಕು ಬೇಕೆಂಬ
ಕಾಕುಲತೆಯನು ಬಿಟ್ಟು ನಾಕರೊಳಗೊಂದು ಸಾಕೆಂದು ತೊಡಗಿರಲು
ತಾಕಿ ತೋರುವುದು ಈ ಮೂರರಾ ಚಹರೆ ಅರ್ಥ ಮಾಡಿಳೆ ನಿದ್ದೆ ಬಿಟ್ಟೇಳುವದು ಮನುಜಾ ||

ಪ್ರಪಂಚ ದ್ವಂದ್ವವೇ ಮಾನವ ಚಿಂತನಾ ಶಕ್ತಿಗೆ ಹೇತು ಒಂದು ಗುರಿ, ಒಂದು ದಾರಿ, ಒಂದು ಚಿಂತನೆ ಬಿಟ್ಟು ದ್ವಂದ್ವದೆಡೆಗೆ ಮನ ಓಡಿದರೆ ಯಾವುದೂ ಅರ್ಥವಾಗದು. ಅದಕ್ಕಾಗಿ ಈ ಮಂತ್ರ ಗಮನಿಸಿ

ಋಕ್: ಮಂ-1, ಸೂಕ್ತ-123, ಮಂತ್ರ-9
ಜಾನತ್ಯಹ್ನಃ ಪ್ರಥಮಸ್ಯ ನಾಮ ಶುಕ್ರಾ ಕೃಷ್ಣಾದಜನಿಷ್ಟ ಶ್ವಿತೀಚೀ|
ಋತಸ್ಯ ಯೋಷಾ ನ ಮಿನಾತಿ ಧಾಮಾಹರಹರ್ನಿಷ್ಕೃತಮಾ ಚರಂತೀ ||

ಹಾಗಾಗಿ ಜೀವನು ದ್ವಂದ್ವವನ್ನು ಬಿಟ್ಟು ಒಂದೇ ಗುರಿಯನ್ನು ಸಾಧಿಸಿಕೊಂಡರೆ ಅಂದರೆ ಸಮತೋಲನ ಸಾಧಿಸಿ ಮಧ್ಯವರ್ತಿಯಾದರೆ ತನ್ಮೂಲಕ ಏಕಾಗ್ರತೆ ಸಾಧನೆ ಸಾಧ್ಯ. ಉದಯ+ಅಸ್ತ= ಹಗಲು+ರಾತ್ರಿ = ಹೆಣ್ಣು+ಗಂಡು = ಶ್ವೇತ + ಕೃಷ್ಣ = ಹರಿ+ಹರ = ಸತ್ಯಾ+ನೃತ ಅಲ್ಲದೆ ವಿಷ+ ಅಮೃತ -ಗಳಲ್ಲೂ ಭೇದವಿಲ್ಲದ ದೃಷ್ಟಿ ಸಾಧಿಸಿದರೆ ಮಾತ್ರಾ ಈ ತತ್ವ ಅರ್ಥವಾದೀತು. ಅದಕ್ಕಾಗಿ ಋತಮಾಚರಂತಿ ಎಂದಿದೆ. ದನ+ಧನಗಳಲ್ಲಿ ವ್ಯತ್ಯಾಸವಿದೆ. ಆದರೆ ಚಿಂತಕನಿಗೆ ವ್ಯತ್ಯಾಸವಿಲ್ಲ ಕಾರಣ ಎರಡೂ ಒಂದೇ. ಅದು ಸಂಪತ್ತೇ. ಹಾಗಾಗಿ ಮೇಲ್ನೋಟಕ್ಕೆ ಬೇರೆ ಬೇರೆಯಾಗಿ ಕಂಡರೂ ಪ್ರಪಂಚದಲ್ಲಿ ದ್ವಂದ್ವವಿಲ್ಲ. ದ್ವಂದ್ವವು ಪ್ರಪಂಚದಾಟಕ್ಕೆ ಸೀಮಿತ ಮಾತ್ರವೆಂದು ತಿಳಿಯಬೇಕು. ಹಾಗಾಗಿ ನಿರಂತರತೆಯು ಏಕತೆಯಲ್ಲಿದೆಯೇ ವಿನಃ ಭಿನ್ನದಲ್ಲಿಲ್ಲ. ಅದನ್ನು ದೃಢಪಡಿಸುವ ಭಿನ್ನರಾಶಿ ಸೂತ್ರವರಿ ಎಂದಿದೆ ವೇದದ ಅಂಗವಾದ ಬ್ರಾಹ್ಮಣ (ಕೌಷೀತಕಿ). ಇವೆಲ್ಲಾ ಕೇವಲ ಮಂತ್ರಪುಂಜಗಳಲ್ಲ. ಅಕ್ಷರ ಸಮೂಹವೂ ಅಲ್ಲ. ಎಲ್ಲವೂ ಅಂಕೆಗಳ, ಸಂಖ್ಯೆಗಳ ತಾಕಲಾಟ. ಜನಜೀವನದ ಪೀಕಲಾಟ. ಪ್ರಪಂಚ ನಡೆಸುವ ಭಗವಂತನ ಸೂತ್ರದಾಟವೆಂಬುದೇ ಸತ್ಯ.       
          ಮುಂದುವರೆಯುವುದು……
- ಕೆ.ಎಸ್ ನಿತ್ಯಾನಂದ

2 comments:

  1. ನಮಗೆಲ್ಲ ಗೊತ್ತೇ ಇರದ ಹಲವು ವಿಚಾರಗಳನ್ನು ತಿಳಿಸಿದ್ದೀರಿ. ತಮಗೆ ಅಭಿನಂದನೆಗಳು

    ReplyDelete
    Replies
    1. ಕಲಿಯ ಅಜ್ಞಾನವನ್ನು ಮೆಟ್ಟಲು ಹಳೆ ಹಳೆದಾದ ವೇದ ವಿಚಾರಗಳು ಹೊಸಹೊಸತಾಗಿ ಉದ್ಘಾಟನೆಯಾಗುತ್ತಿವೆ. ಇದು ಋಷಿಮುನಿಗಳ ಆಶಯವಾಗಿದೆ. ಅದನ್ನು ಸ್ವೀಕರಿಸುವ ವಿಶಾಲತೆಯನ್ನು ಮಾನವ ಬೆಳೆಸಿಕೊಳ್ಳಬೇಕು. ಒಮ್ಮೆಗೆ ಅರ್ಥವಾಗದ ವಿಚಾರಗಳಿವು. ಹಲವು ಬಾರಿ ಸತತ ಪರಿಶ್ರಮದಿಂದ ಓದಿರಿ, ಅದನ್ನೇ ಜಪಿಸಿರಿ, ಉಪಾಸನೆ ಮಾಡಿರಿ, ಸಾಧನೆ ಮಾಡಿರಿ, ಪ್ರಪಂಚದ ರಹಸ್ಯಗಳ ಗಣಿತ ಸಮೀಕರಣಗಳು ಗೋಚರವಾಗುವವು. ಅದನ್ನೇ ಸಾಧಿಸಲು ಭಾಸ್ಕರಾಚಾರ್ಯರಾಗಲೀ, ರಾಮಾನುಜಂ ಆಗಲೀ ಅಂತಹಾ ಗಣಿತಜ್ಞರು ಪ್ರಯತ್ನಿಸಿದರು. ಅರ್ಥೈಸಿ ಪ್ರಪಂಚಕ್ಕೆ ಸಾರಿರಿ. "ವಿಜ್ಞಾನ ಗೊಬ್ಬರದಿ ಸುಜ್ಞಾನ ಬೆಳೆಯೋಣ ಜಜ್ಞಾನದಿಂ ನಾವೆಲ್ಲರೊಂದಾಗಿ ಬ್ರಹ್ಮರಾಗೋಣ".

      Delete