Sunday, 24 November 2013

ವೇದೋಕ್ತ ಉಡುಗೆ ತೊಡಿಗೆ ಅಲಂಕಾರ ವೇಷ ಭೂಷಣ ಭಾಗ್ಯಗಳು


ಬೇಲಿಯೇ ಎದ್ದು ಹೊಲ ಮೇಯ್ದರೆ? ಇಂದಿನ ವೇದಶಾಸ್ತ್ರಜ್ಞರೂ, ವಿದ್ವಾಂಸರೂ, ಪ್ರಕಾಂಡ ಪಂಡಿತರು, ಜ್ಯೋತಿರ್ವಿದ್ವಾನ್ ಎಂದೆಲ್ಲ ಮಾಧ್ಯಮಗಳಿಂದ ಬಿರುದಾವಳಿ ಪಡೆದ ವಿಧ್ವಂಸಕರು ಉನ್ಮಾದದಿಂದ ಭಾರತೀಯ ಸಂಸ್ಕೃತಿಯನ್ನೇ ತಿರುಚುವ ಹುನ್ನಾರ ಗೈದಿದ್ದಾರೆ. ಏನಾಯ್ತು ಎಂದಿರಾ? ಮಾಂಗಲ್ಯಧಾರಣೆಯು ವೇದೋಕ್ತವಲ್ಲವಂತೆ ಅಂತ ಗಂಟೆಗಟ್ಟಲೆ ಟಿವಿಯಲ್ಲಿ ಚರ್ಚೆ. ಓತಿಕೇತನಿಗೊಂದು ಬೇಲಿ ಸಾಕ್ಷಿ ಎಂಬಂತೆ ಇಲ್ಲಸಲ್ಲದ ವಿತಂಡವಾದದ ಸರಣಿಯನ್ನೇ ಮಂಡಿಸುತ್ತಾರೆ. ಒಂದಂತು ನಿಜ, ಆ ರೀತಿ ಕುತಂತ್ರದಿಂದ ತಾಳಿ ಕಟ್ಟುವುದೇ ನಿಷೇಧ ಎಂಬಂತಹಾ ವಾಕ್ಯಗಳಿಂದ ಜನರನ್ನು ಭ್ರಾಂತರಾಗುವಂತೆ ಮಾಡಿದವರ ವಂಶದಲ್ಲಿ ಮುಂದೆ ಮಾಂಗಲ್ಯ ಭಾಗ್ಯವೇ ನಾಶವಾಗಿ ನಿರ್ವಂಶವಾಗುವುದು ಎಂಬುದಕ್ಕೆ ಕರ್ಮಸಿದ್ಧಾಂತ ಆಧಾರ ಹಾಗೂ ಪ್ರಾತ್ಯಕ್ಷತೆ ಇದೆ.

ಮೊತ್ತ ಮೊದಲಿಗೆ ತಿಳಿಯಬೇಕಾದ ವಿಚಾರವೆಂದರೆ ವೇದಗಳು ತಾವು ತಿಳಿದಂತೆ ಸಂಸ್ಕೃತದಲ್ಲಿಲ್ಲ! ಅದು ವೇದಭಾಷೆಯಾದ ಬ್ರಾಹ್ಮಿಯಲ್ಲಿದೆ. ಸಂಸ್ಕೃತದ ಹಲವು ಪದಪುಂಜಗಳು, ವ್ಯಾಕರಣ ನಿಯಮಗಳು ಬ್ರಾಹ್ಮಿಗೆ ಸಮೀಪವಿದೆ. ಆದರೆ ಸಂಸ್ಕೃತದಿಂದ ವೇದಾರ್ಥ ಮಾಡಿದರೆ ಅಪಾರ್ಥವೇ ಆಗುವುದು ಶತಃಸಿದ್ಧ.

ಎರಡನೆಯದು ವೈಧಿಕ ಭೌತಶಾಸ್ತ್ರ. ಇದು ವೇದದಲ್ಲಿ ಬರುವ ಋಷಿಗಳೇ ಸಮಾನ ಕಾಲದಲ್ಲಿ ಮಾಡಿದ ಅಗಾಧ ಸಂಶೋಧನೆಗಳ ಸಮುಚ್ಚಯ. ಪ್ರಕೃತಿಯ ಎಲ್ಲಾ ಜ್ಞಾನ, ವಿಜ್ಞಾನಗಳನ್ನು ಇನ್ನಿಲ್ಲದಂತೆ ವಿವರಿಸುತ್ತದೆ. ಅದಕ್ಕೆ ಬೆನ್ನೆಲುಬು ನೇರವಾಗಿ ವೇದಮಂತ್ರಗಳೇ ಆಗಿವೆ. ಈಗಿನ ವಿಜ್ಞಾನಕ್ಕಿಂತ ಸಹಸ್ರ ಸಹಸ್ರ ಪಟ್ಟು ಮುಂದುವರೆದ ವಿಜ್ಞಾನವನ್ನು ವೈಧಿಕ ಭೌತಶಾಸ್ತ್ರವು ಮಂಡಿಸಿ ಆಗಿದೆ. ಅದು ಅತೀ ನಿಖರ, ಇದಮಿತ್ಥಂ ಎಂದು ಪ್ರಾಯೋಗಿಕವಾಗಿ ಸಿದ್ಧಪಡಿಸಲಾದ ವಿಚಾರಗಳು ಮಾತ್ರ ಇದೆ. ಕೂದಲೆಳಯಷ್ಟು ಅಸತ್ಯ ಕಂಡರೆ ಭೌತಶಾಸ್ತ್ರವು ಅದನ್ನು ಒಪ್ಪುವುದಿಲ್ಲ. ಈಗಿನ ಮೂರ್ಖ ಪಂಡಿತರ ವಿತಂಡವಾದಗಳು, ವಿಜ್ಞಾನಿಗಳೆಂದು ಅಜ್ಞಾನ ಪಸರಿಸುವ ಪಾಖಂಡಿಗಳಿಗೆ ಇದರ ಗಂಧ ಗಾಳಿಯೂ ತಾಕಿದಂತೆ ಕಂಡುಬರುವುದಿಲ್ಲ.

ಮೂರನೆಯದು ತಂತ್ರಶಾಸ್ತ್ರ. ವೇದವು ಉದಯಿಸಿದ ಕ್ಷಣದಿಂದಲೇ ಅದರ ಜೊತೆಜೊತೆಗೆ ಬೆಳೆದು ಬಂದದ್ದು ತಂತ್ರಶಾಸ್ತ್ರ. ಭೌತಶಾಸ್ತ್ರವು ಪಂಚೇಂದ್ರಿಯಗಳಿಂದ ಅನುಭವಕ್ಕೆ ಬರತಕ್ಕಂತಹಾ ಸಹಜ ಪ್ರಾಕೃತಿಕ ವಿಚಾರಗಳನ್ನು ಹೇಳಿದರೆ ತಂತ್ರಶಾಸ್ತ್ರವು ಅದನ್ನು ಬಳಸಿ ಅದಕ್ಕಿಂತ ಹೆಚ್ಚಿನದ್ದನ್ನು ಸಾಧಿಸಿ ತೋರಿಸುತ್ತದೆ. ವೇದ ಪುಸ್ತಕಗಳಾದರೂ ಒಂದಿಷ್ಟು ಮುದ್ರಣ ದೋಷ ಬಿಟ್ಟರೆ ಮೂಲದಲ್ಲಿ ಕಂಠಸ್ಥವಾಗಿದ್ದರಿಂದ ಸಮಗ್ರತೆಯನ್ನು ಕಾಯ್ದುಕೊಂಡುಬಂದಿದೆ. ಆದರೆ ಲಭ್ಯ ತಂತ್ರಶಾಸ್ತ್ರ ಗ್ರಂಥಗಳನ್ನು ಓದಲೇ ಬೇಡಿ, ೯೯% ಅಸತ್ಯವೇ ಕಂಡುಬರುತ್ತದೆ. ಇದಕ್ಕೆ ಕಾರಣ ವಿದೇಶೀ ಆಕ್ರಮಣಕಾರರ ಕೈವಾಡ, ತಂತ್ರಸೂತ್ರ ಅರಿಯದ ಮೂರ್ಖ ಪಂಡಿತರ ವಿಕೃತ ವ್ಯಾಖ್ಯಾನ. ವೈಧಿಕ ಭೌತಶಾಸ್ತ್ರವನ್ನು ಕರತಲಾಮಲಕ ಮಾಡಿಕೊಂಡು ಶುದ್ಧ ಜೀವನ ನಡೆಸುವವರಿಗೆ ಮಾತ್ರ ಸಮಗ್ರ ತಂತ್ರಶಾಸ್ತ್ರದ ಪಾಠ ಮಾಡುತ್ತಿದ್ದರೆ ವಿನಃ ಎಲ್ಲರಿಗೂ ಮಾನ್ಯವಲ್ಲ. ಶಮ-ದಮಾದಿಗಳಿಲ್ಲದೆ ತಂತ್ರ ಸಿಕ್ಕರೆ ಪ್ರಪಂಚವೇ ನಾಶವಾಗುತ್ತದೆ. ಅದಕ್ಕೆ ರಾವಣ, ಭಾಣಾಸುರರೆಲ್ಲ ಸಾಕ್ಷಿ. ಮೂಲದಲ್ಲಿ ತಂತ್ರಶಾಸ್ತ್ರವು ವೇದಮಂತ್ರಗಳಿಂದಲೇ ರಚನೆಯಾಗಿದೆ. ಅದರಲ್ಲಿ ಎಲ್ಲ ಸೂತ್ರಗಳು ವೇದದಿಂದಲೇ ತಯಾರಿಸಲ್ಪಟ್ಟಿದೆ. ನಿಜವಾದ ತಂತ್ರಶಾಸ್ತ್ರ ಗ್ರಂಥಗಳು ವೇದಮಯವಾಗಿವೆ.

ನೀವು ಮಾಡುವ ನಾಮಕರಣ, ಚೌಲ, ಉಪನಯನ, ವಿವಾಹ, ಇತ್ಯಾದಿ ಪೂರ್ವಸಂಸ್ಕಾರಗಳು; ಉತ್ತರಕ್ರಿಯಾ, ಶ್ರಾದ್ಧಾದಿ ಉತ್ತರಸಂಸ್ಕಾರಗಳು; ಸಂಧ್ಯಾವಂದನೆ, ದೇವಪೂಜೆ, ಹೋಮ, ಯಜ್ಞ, ಯಾಗ, ವ್ರತ, ದಾನಾದಿ ಪ್ರಕ್ರಿಯೆಗಳ ಕಾರಿಕೆಯು ಸಿದ್ಧವಾಗುವುದು ವೇದವನ್ನು ಆಧರಿಸಿದ ತಂತ್ರಶಾಸ್ತ್ರದ ನಿಯಮದಂತೆಯೇ ಆಗಿದೆ.

ಉದಾ:- ಅಕ್ಕಿ ಎಂದರೇನು? ಅದು ಹೇಗೆ ಬೆಳೆಯುತ್ತದೆ? ಅದರ ಉಪಯುಕ್ತತೆ ಏನು? ಬೀಜ ನಿಯಮವದೇನು? ಬೀಜ ಸಂಸ್ಕಾರ ಹೇಗೆ? ಅಕ್ಕಿಯ ಬೆಳವಣಿಗೆಯಲ್ಲಿ ಕ್ರಿಮಿ-ಕೀಟ-ಸರಿಸೃಪಾದಿ ಬಾಧೆ ನಿರಸನ ಹೇಗೆ? ಇತ್ಯಾದಿ ಅಗಾಧವಾಗಿ ವೈಧಿಕ ಭೌತಶಾಸ್ತ್ರವು ವಿಸ್ತರಿಸಿದರೆ, ತಂತ್ರಶಾಸ್ತ್ರವು ಅದನ್ನೆಲ್ಲಾ ಪ್ರಾಯೋಗಿಕವಾಗಿ ಮಾಡಿ ಅಕ್ಕಿಯನ್ನು ಪಕ್ವಗೊಳಿಸಿ ಅತೀ ಶಕ್ತಿಶಾಲಿಯದ ಅನ್ನವಾಗಿ ಬಳಸಿ ಅನ್ನದಿಂದ ಬ್ರಹ್ಮವನ್ನು ಸಾಧಿಸುವುದನ್ನೂ ಪ್ರತ್ಯಕ್ಷವಾಗಿ ತೋರಿಸಿಕೊಡುತ್ತದೆ. ಬೇಕಾದರೆ ಅನ್ನದಿಂದ ಅಕ್ಕಿಯನ್ನೂ ಮಾಡಿ ತೋರಿಸುತ್ತದೆ, ತಂತ್ರ! ಹೀಗೆ ಯಾವ ತತ್ತ್ವವು, ಯಾವ ಉಪಾಂಶುಗಳೊಂದಿಗೆ ಯಾವ ಪರಿಕರದಲ್ಲಿ ಹೇಗೆ ಪ್ರತಿಷ್ಠಾಪಿಸಿ ಹೇಗೆ ಉಪಾಸಿಸಲ್ಪಡಬೇಕು ಎಂಬ ಸೂತ್ರವನ್ನು ತಂತ್ರಶಾಸ್ತ್ರದ ಮೂರ್ತಿಕಲ್ಪದಲ್ಲಿದೆ. ಅದಕ್ಕೂ ವೇದಾಧಾರವಿದೆ! ಮೂರ್ತಿಕಲ್ಪವು ವೇದ ಮತ್ತದರ ಭೌತಶಾಸ್ತ್ರದಿಂದಲೇ ಸಾಧಿಸಲ್ಪಟ್ಟಿದೆ. ಹಾಗಾಗಿ ಮೂರ್ತಿಪೂಜೆ ವೇದಾಧಾರಿತವೇ ಆಗಿದೆ. ನೇರವಾಗಿ ವೇದದಲ್ಲಿ ಸಿಕ್ಕದಿದ್ದರೂ, ಹಲವು ಕಡೆ ಸೂಚ್ಯವಾಗಿ ಹೇಳಲ್ಪಟ್ಟದ್ದನ್ನು ತಂತ್ರಶಾಸ್ತ್ರವು ವಿಶದೀಕರಿಸಿದೆ. ಹಾಗಾಗಿ ಕರಿಮಣಿಸರ, ಮಾಂಗಲ್ಯಗಳಲ್ಲಿ ಯಾವ್ಯಾವ ಉಪಾಂಶು ಲಭ್ಯತೆ, ಯಾವ್ಯಾವ ತತ್ತ್ವಗಳು, ಯಾವ್ಯಾವ ದೇವತೆಗಳು ಪ್ರತಿಷ್ಠಾಪಿಸಲ್ಪಟ್ಟಿವೆ ಎನ್ನುವುದು ಭೌತಶಾಸ್ತ್ರದ ಪರಿಕರ ವಿಜ್ಞಾನದಿಂದ ಸಿದ್ಧವಾದ ತಂತ್ರಸೂತ್ರಗಳಲ್ಲಿ ಬದ್ಧವಾಗಿಯೇ ಇದೆ.

ವೇದವನ್ನು ನಿಗಮ ಎಂದು, ತಂತ್ರಶಾಸ್ತ್ರವನ್ನು ಆಗಮ ಎಂದು ಕರೆದರು. ಜಗದ್ಗುರು ಎಂದರೆ ನಿಗಮಾಗಮ ಪ್ರವೀಣ ಎಂದರ್ಥ. ಶಂಕರಾಚಾರ್ಯರು, ಮಧ್ವಾಚಾರ್ಯರು, ರಾಮಾನುಜಾಚಾರ್ಯರಂತಹಾ ಹಲವು ದರ್ಶನಕಾರರೇ ಮಾಂಗಲ್ಯಧಾರಣೆಯನ್ನು ಉದಾಹರಿಸಿದ್ದಾರೆ. ಅವರರಿಗಿಂತ ಹೆಚ್ಚಿನವರು ಅವರ ಇಂದಿನ ಶಿಷ್ಯವರ್ಗದವರು ಆಗಲಿಕ್ಕೆ ಸಾಧ್ಯವೇ ಇಲ್ಲ. ದರ್ಶನಕಾರರಿಗಿದ್ದ ಸಾಮಾಜಿಕ ಕಳಕಳಿ ಮತ್ತು ಬದ್ಧತೆಯ ಲವಲೇಷವೂ ಅವರ ಅನುಚರರಿಗಿಲ್ಲ.

ನಾಲ್ಕನೆಯ ಹಂತದಲ್ಲಿ ಸೂತ್ರಗ್ರಂಥಗಳು. ಇಡೀ ಭೂಮಿಯನ್ನು ೨೭ ರೀತಿಯಲ್ಲಿ ವಿಭಾಗ ಮಾಡಿ ಆಯಾಯ ಪ್ರಾದೇಶಿಕತೆಯನ್ನು ಸಹಸ್ರಾರು ಸೂತ್ರಕಾರ ಗುಂಪು ಸಹಸ್ರಾರು ವರ್ಷಗಳ ಕಾಲ ಅಧ್ಯಯನ, ಪ್ರಯೋಗ, ಪರಿಣಾಮಗಳನ್ನೆಲ್ಲಾ ವಿಶ್ಲೇಷಿಸಿ ಸೂತ್ರಗ್ರಂಥವನ್ನು ರಚಿಸಿದ್ದರೆ. ಇದು ಕಾಲಘಟ್ಟದಲ್ಲಿ ಬೆಳೆದು ಬಂದ ಸಂಶೋಧನೆಯಾಗಿವೆ. ಈಗ ಒಟ್ಟು ೨೭ ಮೂಲ ಸೂತ್ರಗ್ರಂಥಗಳು ಆಯಾ ಪ್ರದೇಶಕ್ಕೆ ಆಧರಿಸಿ ರಚೆನೆಯಾದವು ಆಗಿವೆ. ಸಹಜ ಜೀವನ ನಡೆಸಲು ಬೇಕಾದ ಎಲ್ಲಾ ಸೂತ್ರ, ವಿವರಣೆ, ವೃತ್ತಿ ಎಂಬ ಉದಾಹರಣೆಗಳೊಂದಿಗೆ ಎಲ್ಲರಿಗೂ ಸುಲಭ ಸಾಧ್ಯವಾಗಿ ಅರ್ಥವಾಗುವ ವಿಚಾರಗಳನ್ನು ಒಳಗೊಂಡಿವೆ. ವೇದ, ವೈಧಿಕ ಭೌತಶಾಸ್ತ್ರ, ತಂತ್ರಶಾಸ್ತ್ರ, ಪ್ರಯೋಗಗಳಿಂದ ಬಟ್ಟಿ ಇಳಿಸಿ ಅದರ ತಿರುಳನ್ನು ಮಾತ್ರ ಮಧುರವಾಗಿ ಬೆರೆಸಿ ಸೂತ್ರಗ್ರಂಥವು ಸಿದ್ಧಪಡಿಸಲಾಗುತ್ತದೆ. ಹಾಗಾಗಿ ನಿಮ್ಮ ಸೂತ್ರವು ಯಾವುದು ಎಂದರೆ ಆಯಾ ಪ್ರದೇಶಕ್ಕೆ ಆಧರಿಸಿದ ಆಶ್ವಲಾಯನವೋ, ಬೋಧಾಯನವೋ, ಆಪಸ್ತಂಭವೋ, ಕಾತ್ಯಾಯನವೋ, ಇತ್ಯದಿ ೨೭ರಲ್ಲಿ ಒಂದು. ಅದು ಆಯಾ ಪ್ರದೇಶಕ್ಕೆ ಸೀಮಿತವೇ ಹೊರತು ಎಲ್ಲಕಡೆ ಒಂದೇ ಸೂತ್ರ ಬಳಸುವುದಲ್ಲ.

ಐದನೆಯ ಹಂತದಲ್ಲಿ ಯೋಗಶಾಸ್ತ್ರ, ಆಯುರ್ವೇದಗಳು. ಇವೂ ಕೂಡ ಪ್ರಾದೇಶಿಕತೆಯ ಒಕ್ಕಣೆಯಾದ ಉಷ್ಣ ವಲಯ, ಸಮಶೀತೋಷ್ಣ ವಲಯ, ಶೀತ ವಲಯ; ಕಾಲ ನಿಬಂಧನೆಗಳಾದ ತಿಥಿ, ಋತುಮಾನ, ಆಯನ, ಸಂವತ್ಸರ, ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಆಯುರ್ವೇದವು ಒಂದು ಉಪವೇದ. ಆಧುನಿಕ ಆಯುರ್ವೇದ ಗ್ರಂಥಗಳನ್ನು ಬಿಟ್ಟು ಅತೀ ಪುರಾತನವಾದ ಆಯುರ್ವೇದ ಗ್ರಂಥಗಳನ್ನು ಪರಿವೀಕ್ಷಿಸಿದರೆ ಅದು ಸಂಪೂರ್ಣ ವೇದಮಯವಾಗಿದೆ. ಮತ್ತು ಅಲ್ಲಲ್ಲಿ ತಂತ್ರಶಾಸ್ತ್ರದ ಅಂಗಗಳನ್ನು ಸೇರಿಸಿಕೊಂಡಿದೆ. ಉದಾ:- ಮೂಳೆಗೆ ಸಂಬಂಧಿಸಿದ ಶಾಸ್ತ್ರವನ್ನು ಶಲ್ಯತಂತ್ರ. ಯೋಗಶಾಸ್ತ್ರವು ಯಮ, ನಿಯಮ, ಆಸನ, ಪ್ರಾಣಾಯಾಮಾದಿಗಳಿಂದ ಯೋಗದ ಆರಂಭ ಪಾಠವನ್ನು ಹೇಳುತ್ತದೆ. ವೇದವನ್ನು ಕಲಿತ ಮೇಲೆ ಇದರಲ್ಲಿ ಉತ್ತೀರ್ಣತೆಯ ಪಡೆಯಲುಬೇಕು. ಯೋಗವು ಕರ್ಮದೂಷಿತವಾಗದಂತೆ ಇರಬೇಕು. ಅದಕ್ಕೆ ಮಾನವು ಶುದ್ಧ ಚಾರಿತ್ರ್ಯ ಸಂಪನ್ನನಾಗಿರಬೇಕು. ಆಗ ಯೋಗನಿದ್ರೆಯೊಳಗೆ ಇರುವ ಮನದ ಶಕ್ತಿಯ ಮೂಲ ಚೇತನವು ೬೪ ಯೋಗಿನೀ ಗಣ ರೂಪದಲ್ಲಿ ಮೂಲಾಧಾರ ಶಕ್ತಿಯನ್ನು ಎಚ್ಚರಿಸುತಲಿ ಮನವನು ಯೋಗಶಕ್ತಿಯೊಳ್ ಪಿಡಿದು ಮನವನುದ್ಧರಿಸಿ ನೀ ಉದ್ಧಾರವಾಗು ಎಂದು ಮಾನವನಿಗೆ ಹರಸಿದರು.

ಮೊದಲಾಗಿ ಯೋಗಿನೀ ಗಣದಲ್ಲಿ ಮುಖ್ಯ ಕೂಟ 64. ಅವರೊಬ್ಬೊಬ್ಬರ ಸಮೂಹವು 20 ಸಾವಿರ ಮೊದಲ್ಗೊಂಡು ಕೆಲ ಕೂಟಗಳು 2 ಕೋಟಿ ಮೀರಿದ್ದೂ ಇದೆ. ಒಟ್ಟಾರೆ ತಂತ್ರಶಾಸ್ತ್ರಗಳು 33 ಕೋಟಿ ಯೋಗಿನಿಯರನ್ನು ಗುರುತಿಸಿದೆ. ಅವರೆಲ್ಲರ ಸಂಶೋಧನಾ ಸಂಗ್ರಹವೇ ಯೋಗಿನೀ ತಂತ್ರ. ಕೆಲವರದ್ದು ಒಂದೊಂದು ಶ್ಲೋಕವಾದರೆ ಕೆಲವರು ಸಾವಿರಕ್ಕೂ ಮಿಕ್ಕಿ ಶ್ಲೋಕರೂಪದಲ್ಲಿ ತಮ್ಮ ಸಂಶೋಧನೆಗಳನ್ನು ಬರೆದಿಟ್ಟಿದ್ದಾರೆ. ಅವೆಲ್ಲಾ ಒಟ್ಟು 1 ಲಕ್ಷ 26 ಸಾವಿರ ಶ್ಲೋಕಗಳಿವೆ. ಅವುಗಳಲ್ಲಿ ಮುಖ್ಯವಾಗಿ 18 ಪ್ರಧಾನ ಮಾಲೆಗಳು,ಇತರೆ 126 ಮಣಿಗಳು. ಇತರೆ ನೂರಕ್ಕೂ ಮಿಕ್ಕಿ ಮಾಲೆಗಳ ಬಗ್ಗೆ ಮಾಹಿತಿ ಬರೆದಿಟ್ಟಿದ್ದಾರೆ. 

ಇಲ್ಲಿ ಹಲವು ಕೋಟಿ ಯೋಗಿನಿಯರ ಸಾಧನೆ ಸಂಶೋಧನೆ ಸಾಧ್ಯವಾಯ್ತು. ದೇಶಕ್ಕೆ ಲಾಭವಾಯ್ತು.  ಇವರೆಲ್ಲರ ಸಾಧನೆಯ ಮುಖದಲ್ಲಿ ಸಾಧಕರಿಗೆ ಸಹಕರಿಸಲೆಂದೇ ಮಣಿವಿಧ್ಯೆಯ ಆವಿಷ್ಕಾರ ವಾಯ್ತು. ಮಾಲೆಗಳ ಆವಿಷ್ಕಾರವಾಯ್ತು. ಒಂದಾದರೂ ಹಾರವನ್ನು ಹೆಂಗಸರು ಧರಿಸಲೇ ಬೇಕು ಎಂಬ ನಿಯಮ ಈಗಲೂ ಚಾಲ್ತಿಯಲ್ಲಿದೆ. ಅದು ಕರಿಮಣಿಹಾರದ ರೂಪದಲ್ಲಿ ಈಗ. ಅದರರ್ಥ ಈ ಮಾಲೆಗಳ ಸಂಶೋಧನೆಗಳ ಹಿಂದೆ ಹಲವು ಆವಿಷ್ಕಾರಗಳು ಆಗಿ ಹೋಗಿವೆ ಎಂಬುದು. ಇಂತಹಾ ಉದಾಹರಣೆಗಳನ್ನು ಕೊಡುತ್ತಾ ಹೋದಲ್ಲಿ ಮುಗಿಯಲಾರದು. ಇನ್ನು ಹಾಗೆ ಇತರೆ ಕೆಲ ಹಾರ, ಕುಂಡಲ, ಕೇಯೂರ, ಕಂಕಣ, ಕಡಗ, ಉಂಗುರ, ಮೌಂಜಿ (ಉಡಿದಾರ), ಶುನಾಸೀರ, ಶುಖಮುದ್ರಾ, ಶಿರಸ್ತ್ರಾಣ, ಕವಚ, ಅಂಗುಲೀಯಕಗಳ ಬಗ್ಗೆಯೂ ವಿಸ್ತೃತ ವಿವರಣೆಗಳೂ ಈ ಯೋಗಿನೀ ತಂತ್ರದಲ್ಲಿ ಕಂಡುಬರುತ್ತವೆ. 
ಇವೆಲ್ಲಾ ವಿಶೇಷಾಧ್ಯಯನ ಕೈಗೊಳ್ಳಬೇಕಾದ ವಿಚಾರಗಳು. ಈ ನಿಟ್ಟಿನಲ್ಲಿ ನಮ್ಮ ಜನಮಾನಸ ಹರಿದರೆ ಖಂಡಿತಾ ಲೋಕಕ್ಷೇಮ ಸಾಧಿಸಬಹುದು. ಈಗ ಬರೇ ಇಂಜನಿಯರಿಂಗ್, ವೈದ್ಯಕೀಯ ಹೊರತು ಪಡಿಸಿದ ಒಂದು ಅಧ್ಯಯನ ಭಾಗದತ್ತ ಜನ ಮಾನಸ ತಿರುಗಿದರೆ ಖಂಡಿತಾ ಒಳ್ಳೆಯದಲ್ಲವೆಯುವಶಕ್ತಿಗೆ ಒಂದು ಉತ್ತಮ ಗುರಿ ತೋರಿದಂತಲ್ಲವೆಯಾವಾಗಲೂ ಹಣದ ಹಿಂದೆ ಹೋಗುವ ಭ್ರಷ್ಟತೆ, ಸುಖ ಲೋಲುಪತೆಯಿಂದ ಸರಿದಾರಿಗೆ ಬರಲು ಸಹಾಯಕವಲ್ಲವೆಇಂತಹಾ ಯೋಜಿತ ನಿಯಮಬದ್ಧ ವ್ಯವಸ್ಥೆಗಾಗಿ  ಮತ್ತು ಸಾಮಾಜಿಕ ಅಸಮಾನತೆ ನೀಗುವತ್ತಣ ಪ್ರಯತ್ನವಾದ ಯೋಗಮಾರ್ಗವೆಂಬ ನಿರಂತರ ಸಂಶೋಧನಾ ಶೀಲ ಮಹಿಳೆಯರ ಸಾಹಸ ಸ್ತುತ್ಯರ್ಹ.  

The Anatomical Man in Ayurveda
ಅವರೇ ಗುರುತಿಸಿದ ನಾಡೀಜ್ಞಾನ ಮತ್ತು ಯೋಗಾಭ್ಯಾಸ ಶರೀರವೇ ಯೋಗ ರಂಗಸ್ಥಳವೆಂಬ ವಿಚಾರಕ್ಕೆ ಆಧರಿಸಿ ಋಗ್ವೇದದಲ್ಲಿ ಒಂದು ಉದಾಹರಣೆ ಕಂಡು ಬರುತ್ತದೆ. ಮಂಡಲ 8, ಸೂಕ್ತ 19, 37 ನೇ ಮಂತ್ರವು ಶರೀರವೊಂದು ಹೇಗೆ ಯೋಗಸಾಧನಾ ವೇದಿಕೆಯೆಂದು ವಿವರಿಸುತ್ತದೆ. 

ಉತ ಮೇ ಪ್ರಯಿಯೋರ್ವಯಿಯೋಃ ಸುವಾಸ್ತ್ವಾ ಅಧಿ ತುಗ್ವನಿ | 
ತಿಸೃಣಾಂ ಸಪ್ತತೀನಾಂ ಶ್ಯಾವಃ ಪ್ರಣೇತಾ ಭುವದ್ವಸುರ್ದಿಯಾನಾಂ ಪತಿಃ ||

ಈ ಶರೀರವೆಂಬುದು ಆತ್ಮನಾ ಸಾಧನಾ ವೇದಿಕೆ. ಶರೀರ ರೂಪ ಪ್ರಧಾನವಲ್ಲ. ರೂಪು ಪಡೆದ ಮೇಲೆ ಅದರ ಆಕಾರ ಗುಣ ಹೊಂದಿ ತನ್ಮೂಲಕ ಸಾಧನೆ ಮಾಡುತ್ತಾ ಶರೀರಮಾದ್ಯಂ ಖಲು ಧರ್ಮಸಾಧನಂ” ಎಂಬಂತೆ  ಶರೀರಧರ್ಮವನ್ನು ಹಿಡಿತದಲ್ಲಿಟ್ಟು ಆತ್ಮ ಧರ್ಮಸಾಧನೆ ಮಾಡಬೇಕೆಂದಿದೆ. ಅದಕ್ಕೆ ಈ ಯೋಗಮಾರ್ಗವೇ ಶ್ರೇಷ್ಠ ದಾರಿಯೆನ್ನುತ್ತದೆ ಯೋಗಿನೀ ತಂತ್ರ. ಅದರಂತೆ ಕರಿಮಣಿಸರ, ಸಾಧನಾಮಾಲೆ ಧಾರಣೆ ಮಾಡಿದಲ್ಲಿ ಸಾಮಾನ್ಯ ಸಮಕಾಲೀನ ಪ್ರಾಪಂಚಿಕ ಸಮಸ್ಯೆಗಳಿಂದ ದೂರವಿರಲು ಸಾಧ್ಯವೆಂಬುದು ಮಹಾದೇವಿಯಕ್ಕನ ಅಭಿಪ್ರಾಯವಾಗಿರುತ್ತದೆ.

ಈಗ ವೇದೋಕ್ತ ಭೌತಶಾಸ್ತ್ರದ ವಿಚಾರಕ್ಕೆ ಬರೋಣ. ಭೌತಶಾಸ್ತ್ರ ರಚನಾಕಾರರಾದ ವೇದ ದ್ರಷ್ಟಾರ ಋಷಿಗಳೇ ಹೇಳುವ ಒಂದು ಉದಾಹರಣೆ ಉಲ್ಲೇಖಿಸುತ್ತೇನೆ, ಗಮನಿಸಿ, ವೇದದ ಅಗಾಧತೆ ಅರ್ಥಮಾಡಿಕೊಳ್ಳಿ. ಭೌತಶಾಸ್ತ್ರದ ಸಿಂಹ ಎಂಬ ಮಾನುಷ ಪ್ರಕರಣದಲ್ಲಿ “ನಿವೇಶಿನಿ” ಎಂಬ ಸೂತ್ರ ಬರುತ್ತದೆ. ಅದಕ್ಕೆ ವೇದ ಪ್ರಮಾಣ ಇಂತಿದೆ-

ಆ ಕೃಷ್ಣೇನ ರಜಸಾ ವರ್ತಮಾನೋ ನಿವೇಶಯನ್ ಅಮೃತಂ ಮರ್ತ್ಯಂಚ |
ಹಿರಣ್ಯಯೇನ ಸವಿತಾ ರಥೇನ ದೇವೋ ಯಾತಿ ಭುವನಾನಿ ಪಶ್ಯನ್ ||

ಈ ಮಾನುಷ ಪ್ರಕರಣವು ಮಾನವ ದೇಹಶಾಸ್ತ್ರವನ್ನು ವಿವರಿಸುತ್ತದೆ. ಅದರಲ್ಲಿ ಈ ನಿವೇಶಿನಿ ಸೂತ್ರವನ್ನು ಋಷಿಗಳು ಬ್ರಾಹ್ಮಿಯಲ್ಲಿ ಹೀಗೆ ವಿಸ್ತರಿಸಿದ್ದಾರೆ:

ನೀವೀತೈಃ ವೇಷ್ಟಿತೈಃ ಶಿಂಸಿತೈಃ ನಿಯತೈಃ ಇತಿ ಚತುರ್ವಿಧಃ”

ಪರಿವೀಕ್ಷಿಸಿದಿರಾ ವೇದದ ಒಂದು ಶಬ್ದದ ಅಕ್ಷರಗಳ ಹಿಂದೆ ಅಡಗಿರುವ ಸೂತ್ರಗಳನ್ನು? ಈ ರೀತಿ ಹಲವು ಸಾಂಖ್ಯ ನಿಯಮಗಳಲ್ಲಿ, ಶಬ್ದೋತ್ಪತ್ತಿಗಳಲ್ಲಿ ಋಷಿ ಮತ್ತು ಗುರುಪರಂಪರಾನುಗತವಾಗಿ  ಬಂದಂತೆ ಯಾವ ಶಾಸ್ತ್ರವನ್ನು ಹೇಳುತ್ತಿದೆಯೋ ಅದರಂತೆ ಅರ್ಥೈಸಬೇಕೇ ವಿನಃ ನಮಗೆ ಮನಬಂದಂತಲ್ಲ! ನಿವೇಶಿನಿ ಸೂತ್ರದ ಅಂಗಗಳು ದೇಹ ರಕ್ಷಣೆಗೆ ಸಂಬಂಧಪಟ್ಟಂತಹಾ ಪ್ರಕ್ರಿಯೆಗಳು. ಬಟ್ಟೆ ಹಾಕದೆ ಇರುವ ಸಂಸ್ಕೃತಿ ಉಳ್ಳ ಜನರಿಗೆ ಇದು ವಿರೋಧಾಭಾಸವಾಗುತ್ತದೆ. ಈ ಸೂತ್ರದ ಪ್ರಕಾರ ದೇಹಕ್ಕೆ ಆವಶ್ಯಕವಾದ ಆಚ್ಛಾದನೆಗಳನ್ನು ತಿಳಿಸುತ್ತದೆ. ಅದರಲ್ಲಿ ಮೊದಲಿಗೆ ನೀವೀತಿ ಎಂಬ ನಿಯಮವಿದೆ. ಅಂದರೆ ಯಾವಾಗಲೂ ಸಮ ಚಿತ್ತವಾಗಿರುವಂತಹಾ ದೇಹ ಭಂಗಿಯನ್ನು ಅಳವಡಿಸಿಕೊಳ್ಳುವುದು. ಕ್ರಮಬದ್ಧವಾದ ರೀತಿಯಲ್ಲಿ ದೇಹದ ಆಕಾರವನ್ನು ಸದಾ ಕಾಯ್ದುಕೊಂಡು ಹೋಗುವುದರಿಂದ. ಅದನ್ನು ಮಾಲಾ ಅಥವಾ ನೀಮೀತಿ ಎಂದೂ ಕರೆದರು.

ದೇಹದಲ್ಲಿ ೧೦ ಸ್ಥಲಗಳಿರುತ್ತವೆ. ಅವಕ್ಕೆ ಸಮಪ್ರಮಾಣದ ಒತ್ತಡ ಕೊಟ್ಟರೆ ಎಲ್ಲಾ ಸಂಧಿಗಳು ಹಾಗೂ ಮೂಳೆಗಳು ಸಮರ್ಥವಾಗಿ ಕೆಲಸ ನಿರ್ವಹಿಸುತ್ತವೆ. ಸಮ ಒತ್ತಡ ಬೀಳದಿದ್ದಾಗ ಯಾವುದೋ ಒಂದು ಗ್ರಂಥಿ ಅಥವಾ ಮೂಳೆಗೆ ಹೆಚ್ಚು ಒತ್ತಡ ಬಿದ್ದು ದೇಹದ ಅವ್ಯವಸ್ಥೆಗೆ ಕಾರಣವಾಗುತ್ತದೆ. ಸಮ ಸ್ಥಿತಿ ಕಾಯ್ದುಕೊಳ್ಳುವ ಕೆಲವು ಸೂತ್ರಗಳು:
೧. ಅತೀ ಹೆಚ್ಚಾಗಿ ಕತ್ತನ್ನು ತಗ್ಗಿಸಿದರೆ ಕುತ್ತಿಗೆ ನೋವು ಬರುತ್ತದೆ, ಅತೀ ಮೇಲೆ ಎತ್ತಿದರೆ ತಲೆ ಸುತ್ತು ಬರುತ್ತದೆ. ಹಾಗಾಗಿ ಕತ್ತಿನ ಸಮತೋಲನ ಅಗತ್ಯ. ಹಾಗಾಗಿ ಮಾಲೆಯು ಬೆನ್ನಿನ ರಕ್ಷಣೆಯನ್ನು ಮಾಡುತ್ತದೆ ಎಂದು ವೇಷ್ಟಿತ ಸೂತ್ರವು ಹೇಳುತ್ತದೆ.

೨. ಕುತ್ತಿಗೆ ಹಿಂಭಾಗವು ಶಿಖದ ಹಿಡಿತದಲ್ಲಿರುತ್ತದೆ. ಅದಕ್ಕೆ ಪೇಟ ಕಟ್ಟುವುದು ಅಥವಾ ಶಿಖೆ ಕಟ್ಟವುದು ರಕ್ಷಣಾತ್ಮಕ ಎಂದು ವೇಷ್ಟಿತ ಸೂತ್ರವು ಹೇಳುತ್ತದೆ. ಅದನ್ನು ಸ್ನಾನದಿಂದ ಸಮತೋಲನದಲ್ಲಿ ಇಡಬೇಕು ಎಂದು ಶಿಂಸಿತ ಸೂತ್ರವು ಹೇಳುತ್ತದೆ.


೩. ಒಂದು ಪ್ರಮಾಣ ಬದ್ಧವಾಗಿಯೇ ಬೆನ್ನಿನ ನೇರವನ್ನು ಕಾಯ್ದುಕೊಳ್ಳಬೇಕು. ಮುಂದೆ ಹೆಚ್ಚು ಬಗ್ಗಿದರೆ  ಬೆನ್ನು ನೋವು ಬರುತ್ತದೆ. ಉಪವೀತವು ಉದರ ರಕ್ಷಣೆಯನ್ನು ಮಾಡುತ್ತದೆ. ಅದು ಸೊಂಟಕ್ಕೆ ಕಟ್ಟುವ ಬಟ್ಟೆಯ ಒಳಗಡೆ ಸೇರಬೇಕು. ಇದರಿಂದ ಅಲ್ಲಿಯ ಗ್ರಂಥಿಗಳ ಮೇಲೆ ಒತ್ತಡ ಬಿದ್ದು ಹೊಟ್ಟೆಯು ಮುಂದೆ ಬರದ ಹಾಗೆ ತಡೆಯುತ್ತದೆ. ಇದು ವೇಷ್ಟಿತ ಸೂತ್ರದ ವಿವರ.

೪. ಬೆನ್ನನ್ನು (ಹೊಟ್ಟೆಯನ್ನು) ಮುಂದೆ ಮಾಡಿದರೆ ಜೀರ್ಣಾಂಗಗಳು ನಿಷ್ಕ್ರಿಯೆಯಾಗುತ್ತಾ ಬರುತ್ತವೆ. ಉಪವಾಸದಲ್ಲಿ ಇರುವಾಗ ವಿಪರೀತ ಹಸಿವೆ ಉಂಟಾದರೆ ಬೆನ್ನು ಮುಂದೆ ಮಾಡಿ ಕೆಲ ಕಾಲ ಕಳೆದರೆ ಹಸಿವೆ ಕಡಿಮೆಯಾಗುತ್ತದೆ. ಹಾಗಾಗಿ ಸ್ವಲ್ಪ ಹಸಿವೆಯಾದಾಗ ಆಕಳಿಸುತ್ತಾರೆ, ಮೈಮುರಿಯುತ್ತಾರೆ. ಇವುಗಳನ್ನು ಮಾಡುವಾಗಲೂ ಬೆನ್ನು (ಹೊಟ್ಟೆ) ಮುಂದೆ ಬರುತ್ತದೆ.

೫. ಆಧಾರ ಭಾಗ:- ಸೊಂಟದ ಭಾಗ. ಇದರಿಂದ ಬೆನ್ನಿಗೆ ನೇರವನ್ನು ನೀಡಬೇಕು. ಉಡಿದಾರವು ಆಧಾರವನ್ನು ರಕ್ಷಿಸುತ್ತದೆ. ಆಧಾರದ ಎರಡೂ ಪಕ್ಕದ ಮೂಳೆಗಳ ಮೇಲೆ ಉಡಿದಾರ ನಿಲ್ಲುತ್ತದೆ. ಆಧಾರದ ನಿಯಮಿತತೆ ಇಡುತ್ತದೆ. ಅಂದರೆ ಹೊಕ್ಕಳ ಕೆಳಗೆ ಉಡಿದಾರ ಬರುತ್ತದೆ. ಪಂಚೆಯಾಗಲೀ, ಸೀರೆಯಾಗಲಿ ಹೊಕ್ಕಳ ಮೇಲೆ ಬರುತ್ತದೆ. ಇದು ವೇಷ್ಟಿತ ನಿಯಮ. ಇದನ್ನು ಅರಿಯದ ಮೂರ್ಖ ವಿದ್ವಾಂಸರು ಮಾಂಗಲ್ಯಸರವನ್ನು ಕುತ್ತಿಗೆಗೇ ಏಕೆ ಕಟ್ಟಬೇಕು, ಸೊಂಟಕ್ಕೆ ಕಟ್ಟಿದರೆ ಆಗುವುದಿಲ್ಲವೇ ಎಂದು ಅಪಹಾಸ್ಯ ಮಾಡುತ್ತಾರೆ. ಯಾವುದನ್ನು ಎಲ್ಲಿ, ಹೇಗೆ ಬಳಸಿದರೆ ದೇಹದ ಯಾವ ಸ್ಥಲದ ರಕ್ಷಣೆಯಾಗುತ್ತದೆ ಎಂಬುದನ್ನು ತಿಳಿಸುವ ವೇಷ್ಟಿತ ಸೂತ್ರವನ್ನೇ ತಿಳಿಯದವ ಎಂತಾ ವಿದ್ವಾಂಸನೋ ನಾನರಿಯೆ!

೬. ಊರೂ – ತೊಡೆಗಳಲ್ಲಿ ಒಂದಷ್ಟು ವಿಶಿಷ್ಟ ಮೂಳೆಗಳಿವೆ. ದೇಹದ ಶೇಖಡ ೮೦% ರಕ್ತವು ತೊಡೆ ಮತ್ತು ಮೊಣಕಾಲಿನ ೨ ಮೂಳೆಗಳ ಭಾಗದಿಂದ ಉತ್ಪತ್ತಿಯಾಗುತ್ತದೆ. ಇದಕ್ಕೆ ಪದ್ಮಾಸನದಿಂದ ರಕ್ಷಣೆ ಎನ್ನುತ್ತದೆ ವೇಷ್ಟಿತ ಸೂತ್ರ. ಒಂದು ಪಾದವಾದರೂ ಮೇಲ್ಮುಖವಾಗಿದ್ದರೆ ಅದು ಪದ್ಮ ಎಂದಿದೆ ಈ ಸೂತ್ರ. ಆಸನವೆಂಬುದು ೨೧ ವಿಧ. ಅದರಲ್ಲಿ ಊರೂ ಎಂಬುದೂ ಒಂದು ಆಸನ. ಪತ್ನೀ, ಪುತ್ರಯೋಃ ಊರೂ ಆಸನಂ ಎಂದಿದೆ.

೭. ಪಾದ – ದತ್ತಾತ್ರೇಯರಿಂದ ಪ್ರಸರಿಸಲ್ಪಟ್ಟ ಮೂರ್ತಿಕಲ್ಪದ ಮೊತ್ತ ಮೊದಲ ಪ್ರಾತ್ಯಕ್ಷತೆ ಎಂದರೆ ಪಾದುಕಾ ಪೂಜೆ. ಪಾದದಲ್ಲಿ ೬೪ ತತ್ತ್ವ ದ್ಯೋತಕ ಪ್ರಾಕೃತಿಕ ಮೂಲ ಶಕ್ತಿ ಕೇಂದ್ರಗಳಿವೆ. ದೇಹದ ಎಲ್ಲ ಚಟುವಟಿಕೆಗಳಿಗೆ ಇಲ್ಲಿಂದ ಪ್ರೇಷಣೆ ಸಿಗುತ್ತದೆ. ಇದಕ್ಕೂ ಪದ್ಮಾಸನವೇ ಶ್ರೇಷ್ಠ ಎಂದಿದೆ ವೇಷ್ಟಿತ ಸೂತ್ರ. ಪದದ ಗಂಟಿನಿಂದ ಹೆಚ್ಚು ಒತ್ತಡವನ್ನು ಕೊಟ್ಟಾಗ ತೊಡೆಯ ಮೂಳೆಗಳಲ್ಲಿ ಹೆಚ್ಚು ರಕ್ತ ಉತ್ಪಾದನೆಯಗಲು ಚಾಲನೆ ನೀಡಿದ ಹಾಗಾಗುತ್ತದೆ.


೮. ಹಸ್ತ – ನಮ್ಮ ಕೈಗಳಿಗೆ ಕಣ್ಣು, ಕಿವಿ, ಮೂಗು, ಬಾಯಿ, ಸ್ಪರ್ಷೇಂದ್ರಿಯಗಳಿಂದ ಮಾಡಬಹುದಾದ ಎಲ್ಲಾ ಕೆಲಸಗಳ ಹತ್ತು ಪಟ್ಟು ಕೆಲಸ ಮಾಡುವ ಸಾಮಾರ್ಥ್ಯವಿದೆ. ಮಣಿಕಟ್ಟಿನ ಮೇಲ್ಭಾಗಕ್ಕೆ ಕೃಪಾಣ ಅಂದರೆ ಬಳೆಗಳು. ಸ್ತ್ರೀಯರಿಗೆ ಅತಿ ಹೆಚ್ಚು ಬಳಗಳ ಅವಶ್ಯಕತೆ ಇರುತ್ತದೆ. ಸ್ತ್ರೀಯರು ಕೈಯಲ್ಲಿ ಎಷ್ಟು ಹೆಚ್ಚು ಬಳೆಗಳನ್ನು ಹಕಿಕೊಂಡಿರುತ್ತಾರೋ ಅದರ ಆಧಾರದ ಮೇಲೆ ಅವರ ಧೀಶಕ್ತಿ ನಿರ್ಣಯವಾಗುತ್ತದೆ. ಬಳೆಗಳು ಯಾವ ಒಳ್ಳೆಯ ಲೋಹದಿಂದ ಮಾಡದ್ದರೂ, ಪೂರ್ಣ ಹಸ್ತ ಭಾಗವನ್ನು ಮುಚ್ಚುವಂತಿರಬೇಕು. ಅದೇ ಈ ವೇಷ್ಟಿತ ಸೂತ್ರತ ಭಾವವಾಗಿರುತ್ತದೆ.
೯. ಭುಜೈಃ – ಭುಜಕ್ಕೆ ವಂಕಿ, ಕವಚ; ಮೊಣಕೈ ಮೇಲ್ಭಾಗಕ್ಕೆ ಖಡ್ಗ; ಇದರಿಂದ ಭುಜಗಳ ರಕ್ಷಣೆಯಾಗುತ್ತದೆ. ಮತ್ತು ತಾಡನೆಯಿಂದ ಭುಜಗಳ ಸಮತೋಲನ ಸಾಧ್ಯ ಎಂದು ಶಿಂಸಿತ ಸೂತ್ರವು ಹೇಳುತ್ತದೆ. ಭುಜ (ಕೈ) ತಟ್ಟುವುದು ಎಂದು ಆಡುಭಾಷೆಯಲ್ಲಿ ಹೇಳಬಹುದು.

೧೦. ಪಾರ್ಶ್ವೆ – ಓರೆಯಾಗಿ ಕೂರಬೇಡಿ. ಅದರಿಂದ ಪಕ್ಕೆಗಳು ನೋವು ಅನುಭವಿಸುತ್ತವೆ. ಪಾರ್ಶ್ವೈಃ ಕವಚಃ ಎನ್ನುತ್ತದೆ ವೇಷ್ಟಿತ ಸೂತ್ರ. ಅಂದರೆ ಶಲ್ಯವನ್ನು ಬಲ ಕಂಕಳ ಕೆಳಗಿನ ಪಕ್ಕೆಗಳನ್ನು ಬಳಸಿ ಎಡಭುಜದ ಮೇಲಿಂದ ಹಿಂದಕ್ಕೆ ಇಳಿಬಿಡುವ ಬ್ರಹ್ಮವಸ್ತ್ರವನ್ನು ಹಾಕುವುದು. ಇದರಿಂದ ಹೆಚ್ಚು ಬಗ್ಗಿ ಶ್ರಮಿಸುವ ಬಲ ಪಾರ್ಶ್ವದ ಪಕ್ಕೆಗಳಿಗೆ ಬಿಗಿಯಾದ ಹಿಡಿತ ದೊರೆತು, ಎಡ ಪಾರ್ಶ್ವದ ಮೇಲ್ಭಾಗದಿಂದ ಬಿಗಿ ಪಟ್ಟು ಬಂದು ಭುಜದಿಂದ ಮೇಲ್ಬರಿಸಿ ಕತ್ತಿನವರೆಗೆ ಹಿಡಿತ ನೀಡುತ್ತದೆ. ಹಾಗಾಗಿ ಭಾರತೀಯ ಧಾರ್ಮಿಕ ಹಾಗು ಆಧ್ಯಾತ್ಮಿಕತೆಯಲ್ಲಿ ಮತ್ತೆ ಅದನ್ನು ಅನುಸರಿಸಿ ಹಲವು ದೇಶಗಳ ಹಲವು ಸಂಸ್ಕೃತಿಗಳಲ್ಲಿ ಬ್ರಹ್ಮವಸ್ತ್ರಕ್ಕೆ ಪ್ರಾಧ್ಯಾನ್ಯತೆ ನೀಡಿದರು.

ಹೆಂಗಸರಿಗೆ ಮೇಖಲವು ಶ್ರೇಷ್ಠವೆಂದರು. ಸೆರಗು ಬರಿಸಿ ಮೇಲಿನಿಂದ ಹೊದಿಕೆ ಬಂದು ಆಧಾರ ಭಾಗದಲ್ಲಿ ಕೊನೆಗೊಳ್ಳುವ ವಸ್ತ್ರವೇ ಮೇಖಲೆಯಾಗಿರುತ್ತದೆ. ಹಾಗಾಗಿ ಸರಿಯಾಗಿ ಸೀರೆ ಉಡುವ ವಿಧಾನವನ್ನು ರೂಢಿಸಿಕೊಳ್ಳಬೇಕು. ಆಯಾಯ ಪ್ರಾದೇಶಿಕತೆಯಂತೆ ಸೀರೆ ಉಡುವುದು ಸರಿಯಾದ ಕ್ರಮವಾಗಿರುತ್ತದೆ. ಅದ ಬಿಟ್ಟು ಬಿಗಿಯಾದ ಪ್ಯಾಂಟು, ಅಂಗಿ ಧರಿಸಿ ವಿಪರೀತ ಒತ್ತಡ ಕೊಡುತ್ತಾ ಬರಲು ದಶಸ್ಥಲಗಳಲ್ಲಿ ಸಂಕುಚಿತ ಉಂಟಾಗಿ ಪ್ರತ್ಯುಪನ್ನ ಶಕ್ತಿಹೀನತೆ ಅಂದರೆ ಸಂತಾನ ಶಕ್ತಿ ಕ್ಷೀಣ, ಮಾನಸಿಕ ಒತ್ತಡ, ವಿಪರೀತ ಅಂಗಾಂಶ ವೃದ್ಧಿ, ಚರ್ಮದ ಕಾಂತಿಹೀನರೆ, ಮಾಂಸಪೇಶಗಳ ಬಲ ಕುಂದುವಿಕೆ, ರಕ್ತದೊತ್ತಡ ಇತ್ಯಾದಿ ಉಂಟಾಗುತ್ತದೆ. ಹಾಗಾಗಿ ಶುಭ್ರವಾದ ಮೃದು ಬಟ್ಟೆಗಳನ್ನು ಸಂಪ್ರದಾಯದಂತೆ ಎಲ್ಲೆಲ್ಲಿ ಎಷ್ಟೆಷ್ಟು ಸಡಿಲ, ಎಷ್ಟೆಷ್ಟು ಬಿಗಿ ಬೇಕೋ ಅಷ್ಟನ್ನೇ ಕೊಟ್ಟು ಉಡುಗೆ ತೊಡಿಗೆಯಲ್ಲಿ ಅಲಂಕಾರಗಳಿರಲಿ. ಇದು ನಿಮ್ಮ ಆರೋಗ್ಯ ದೃಷ್ಟಿಯಿಂದ ಬಹಳ ಅವಶ್ಯಕವಾಗಿದೆ. ಬಣ್ಣದ ಮಾಧ್ಯಮದ ಸೋಗಿನ ಜಾಹಿರಾತಿಗೆ ಮರುಳಾಗದಿರಿ. ಭಾರತೀಯ ಉಡುಗೆ ತೊಡಿಗೆಯು ನಿಮ್ಮ ಜೀವನಾಡಿ, ಅದು ಮಾತ್ರ ನಿಮ್ಮನ್ನು ಎಲ್ಲ ರೀತಿಯಲ್ಲೂ ರಕ್ಷಿಸಬಲ್ಲದು.

ಹೆಂಗಸರಿಗೂ ಉಪವೀತವನ್ನು ಹೇಳಿದ್ದಾರೆ. ಹಿಂದಿನ ಕಾಲದಲ್ಲಿ ಅಗಲವಾದ ಪಟ್ಟಿಯಂತಹಾ ಹಾಸಿನಿಂದ ಉಪವೀತವನ್ನು ತಯಾರಿಸಿ ಹೆಂಗಸರು ಬಳಸುತ್ತಿದ್ದರು. ಅದು ಉಪವೀತವಾಗಿ ಉದರ ರಕ್ಷಣೆ ಮಾಡುತ್ತದೆ. ಅದನ್ನು ಒಳಗೆ ಸೇರಿಸಿ, ಅದರ ಮೇಲೆ ಸೀರೆ ಉಡುತ್ತಿದ್ದರು. ಹೆಂಗಸರೇ ಹೆಚ್ಚು ಬಗ್ಗಿ ಕೆಲಸ ಮಾಡುತ್ತಾರೆ. ಕುತ್ತಿಗೆಯಿಂದ ಹಾರ (ಸರ) ಬಂದಿರುತ್ತದೆ. ಮುಂದೆ ಬಗ್ಗಿದಾಗ ಬೆನ್ನು ಮೂಳೆಯ ಮೇಲೆ ಒತ್ತಡ ಬೀಳದ ಹಾಗೆ ಕಾಯುತ್ತದೆ. ಇದು ಕತ್ತಿನಲ್ಲಿರುವ ವಿಶೇಷ ನರತಂತು ಹಾಗೂ ಮೂಳೆಗಳಿಂದ ಬೆನ್ನನ್ನು ಹಿಡಿತದಲ್ಲಿ ಇಡುತ್ತದೆ. ಕೇವಲ ಮಾಲೆಯ ಒತ್ತಡ ಕಡಿಮೆಯಾದಾಗ ಉತ್ತರೀಯ, ತೂಕದ ಲೋಹವಾದ ಬಂಗಾರದ ಸರಗಳನ್ನು ಹಾಕುತ್ತಾರೆ. ಏಕೆಂದರೆ ಚಿನ್ನದ ಗಾತ್ರ ಕಡಿಮೆ, ತೂಕ ಜಾಸ್ತಿ.

ವೇಷ್ಟಿತಗಳಲ್ಲಿ ಮುಖ್ಯ ಆಚ್ಛಾದನೆಗಳನ್ನು ಹೇಳಿದ್ದಾರೆ. ಮುಂದಿನ ಪಾಠಗಳಲ್ಲಿ ಸಂವೇದನಾ ಗ್ರಂಥಿಗಳಿಗೆ ಸ್ಪಂದನ ನೀಡಲು ಉಂಗುರಗಳು, ವಾಯು ರೋಗ ನಿವಾರಣೆಗೆ ಕಿವಿಯಲ್ಲಿ ೩ ಕಡೆ ಚುಚ್ಚುವುದು, ಮೂಗು ಚುಚ್ಚುವುದು, ದಂತದ ಉಂಗುರದಿಂದ ಸಣ್ಣದಾದ ಕೈ ನಡುಕ ಸರಿಪಡಿಸುವುದು, ಇತ್ಯಾದಿಗಳನ್ನು ಚಿಕಿತ್ಸಾ ವಿಧಾನ ಪ್ರಕ್ರಿಯೆಗಳಲ್ಲಿ ವಿಸ್ತರಿಸಿದ್ದಾರೆ. ಎಷ್ಟು ಅಗಾಧವಲ್ಲವೇ ನಮ್ಮ ಭೌತಶಾಸ್ತ್ರ?

ಇನ್ನು ಮುಖ್ಯ ಸಂಸ್ಕಾರವಾದ ಮದುವೆಯ ವಿಚಾರ. ಮದುವೆಯ ಎಲ್ಲ ವಿಚಾರಗಳಿಗೂ ವೈಜ್ಞಾನಿಕ ಹಿನ್ನೆಲೆ ಇದೆ. ಮಾಂಗಲ್ಯಧಾರಣೆ ಸ್ತ್ರೀಪುರುಷ ಪ್ರಧಾನವಾಗಿ ನ್ಯಾಸರೂಪವಾಗಿ ಹುಡುಗಿಯಲ್ಲಿ ಇಡುವಂತಹ ಒಂದು ಚಿನ್ನ ಅದು ಆಭರಣ ಸ್ವರೂಪದಲ್ಲಿರುತ್ತದೆ. ಚಿನ್ನವನ್ನು ಧಾತು ಮೂಲವಾಗಿ ವಿಶ್ಲೇಷಿಸಿದಾಗ ಅದು ನಮ್ಮ ದೇಹಕ್ಕೆ ಅತೀ ಅಗತ್ಯವಾದ ಸಹಜ ಪ್ರಾಕೃತಿಕ ಲೋಹದಲ್ಲಿ ಲಭ್ಯವಾಗದ ಒಂದು ಅಂಶ ಚಿನ್ನ. ಆಹಾರದಲ್ಲಿ ಅದು ಪೂರೈಕೆಯಾಗುವುದಿಲ್ಲ. ಬೇರೆ ಎಲ್ಲಾ ಲೋಹದ ಅಂಶಗಳು ಆಹಾರದ ಮುಖೇನ ನಮ್ಮ ದೇಹವನ್ನು ಸೇರುತ್ತವೆ. ಚಿನ್ನವಸ್ತುವು ಆಹಾರದ ರೂಪದಲ್ಲಿ ಪೂರೈಕೆಯಾಗುವುದಿಲ್ಲ. ಚಿನ್ನವು ನಮ್ಮ ದೇಹಕ್ಕೆ ಅನಿವಾರ್ಯ. ಅದಕ್ಕಾಗಿ ಅದನ್ನು ಆಭರಣ ರೂಪದಲ್ಲಿ ದೇಹದಲ್ಲಿ ಧರಿಸಿ ನಮ್ಮ ದೇಹಕ್ಕೆ ಬೇಕಾದಂತಹ ಪೂರೈಕೆಯನ್ನು  ಮಾಡುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಚಿನ್ನವನ್ನು ಧರಿಸುವುದರಿಂದ ಬರತಕ್ಕಂತಹ ಕಾಯಿಲೆಗಳು ಅವರಿಗೆ ಬರುವುದಿಲ್ಲ. ಅದನ್ನು ತಡೆಯುವುದಕ್ಕೂ ಅದಕ್ಕೆ ಸಾಧ್ಯತೆಯಿದೆ. ಹಾಗೆ ಚಿನ್ನದ ಅಂಶವು ಸದಾ ನಮ್ಮ ದೇಹವನ್ನು ಸೇರುತ್ತಾ ಇರುತ್ತದೆ. ಅದು ವೃದ್ಧ್ಯರ್ಥವಾಗಿ ತುಂಬಾ ಸುಲಭದಲ್ಲಿ ಸೇರುತ್ತದೆ. ಹಾಗಾಗಿ ಹೃದಯದ ಮೇಲೆ ಚಿನ್ನವನ್ನು ಧಾರಣೆ ಮಾಡಿ, ನಿಮಗೆ ರೋಗಾದಿಗಳಿಂದ ರಕ್ಷಣೆ ಕೊಡಲು ಸಾಧ್ಯ ಎಂದರು. ಹಾಗಾಗಿ ಅದನ್ನು ಆಭರಣ ರೂಪದಲ್ಲಿ ಧಾರಣೆ ಮಾಡುವ ಪದ್ಧತಿ ಬಂತು. ಅದರಲ್ಲಿ ಹೆಂಗಸರಿಗೆ ವೃದ್ಧ್ಯರ್ಥವಾಗಿ ಹೃದಯದ ಮೇಲೆ ಆಭರಣ ಇರಬೇಕು. ಏಕೆಂದರೆ ಅವರಲ್ಲಿ ಪ್ರತ್ಯುತ್ಪನ್ನ ಶಕ್ತಿಯಿದೆ. ಹೆಣ್ಣಿಗೆ ತನ್ನಂತೆಯೇ ಸೃಷ್ಟಿ ಮಾಡುವ ಶಕ್ತಿಯಿರುತ್ತದೆ; ಗಂಡಿಗಲ್ಲ. ಹೆಣ್ಣು ಮಾತ್ರ ತನ್ನಂತೆಯೇ ಇನ್ನೊಂದು ಪ್ರತಿರೂಪವನ್ನು ಸೃಷ್ಟಿ ಮಾಡಿ ಪ್ರಪಂಚಕ್ಕೆ ಕೊಡಬಲ್ಲಳು. ಪ್ರತ್ಯತ್ಪನ್ನ ಶಕ್ತಿಯಿರುವವರಿಗೆ ಶಕ್ತಿಯನ್ನು ಉಂಟುಮಾಡುವುದು ಚಿನ್ನಲೋಹ. ಹಾಗಾಗಿ ಅವರಲ್ಲಿ ಅಂಶವು ಹೆಚ್ಚು ಬೇಕಾಗುತ್ತದೆ. ಪುರುಷನಿಗೆ ಅಷ್ಟು ಅಗತ್ಯವಿಲ್ಲ. ಆದರೆ ಹೆಂಗಸರಿಗೆ ಹೆಚ್ಚು ಚಿನ್ನ ಬೇಕು. ಅದಕ್ಕಾಗಿ ಚಿನ್ನ ಧಾರಣೆ ಕಡ್ಡಾಯ ಮಾಡಿದರು. ಹೆಚ್ಚು ಎಂದರೆ ಸಾಧ್ಯವಾದರೆ ಮೈತುಂಬಾ ಆಭರಣ, ಒಂದು ವಧುವಿನ ಅಲಂಕಾರವನ್ನು ಹೆಚ್ಚು ಕಡಿಮೆ ೩೦೦ ರೀತಿಯ ಆಭರಣಗಳಿಂದ ಅಲಂಕರಿಸಬಹುದು ಎಂದು ಹೇಳುತ್ತದೆ. ಸಾಲಂಕೃತ ಕನ್ಯಾ ಆಧಾನ ಎಂದು ಹೇಳುತ್ತದೆ. ಅಷ್ಟು ಚಿನ್ನವನ್ನು ಧರಿಸಬೇಕು ಅವಳು ಎಂದರ್ಥ. ಈಗ ಕೊಡಬೇಕು ಎಂದಾಗ ಕಡೆಯಲ್ಲಿ ಬೇಡಿಕೆಯಾದರೆ ಕಷ್ಟ. ಪರಿಸ್ಥಿತಿಯಿದೆ. ಸ್ವಲ್ಪವಾದರೂ ಚಿನ್ನವನ್ನು ಧರಿಸುವುದರಿಂದ ಅವರಿಗೆ ಪ್ರತ್ಯುತ್ಪನ್ನ ಶಕ್ತಿಯು ನಿಖರವಾಗಿ ಸಮೃದ್ಧವಾಗಿ ಪ್ರಾಪ್ತವಾಗುತ್ತದೆ ಎನ್ನುವ ಉದ್ದೇಶದಿಂದ ಚಿನ್ನ ಧಾರಣೆಗೆ ಮಹತ್ವವನ್ನು ಕೊಟ್ಟರು.

ಈ ರೀತಿ ಭಾರತೀಯ ಸಂಪ್ರದಾಯದಂತೆ ಉಪವೀತ, ಸೀರೆ, ಕುಪ್ಪಸ, ಮೇಖಲಾ, ಆಭರಣ, ಮಾಂಗಲ್ಯ ಇತ್ಯಾದಿಗಳು ಸ್ತ್ರೀ ದೇಹವನ್ನು ಶಿಸ್ತು ಬದ್ಧವಾಗಿಸಿ ಪ್ರಸಕ್ತ ಕಾಡ್ಗಿಚ್ಚಿನಂತೆ ಹರಡುತ್ತಿರುವ "ಸ್ತನ ಕ್ಯಾನ್ಸರ್" ನಂತಹಾ ಮಾರಣಾಂತಿಕ ಕಾಯಿಲೆಗಳನ್ನು ದೂರವಿರಿಸಲು ಸಹಕಾರಿ.
[
http://en.wikipedia.org/wiki/Dressed_to_Kill_%28book%29
http://www.collective-evolution.com/2014/04/16/ladies-its-finally-time-to-take-off-that-bra-for-good/ ]


ಬಡವರು ಚಿನ್ನವಿಲ್ಲದೇನೇ ಅರಶಿನಕೊಂಬು ಕಟ್ಟಿ ಮದುವೆಯಾಗುತ್ತಾರೆ. ಆಗ ಬಂಗಾರದ ಅಂಶ ಅರಿಶಿನ ಕೊಂಬಿನಲ್ಲಿ ಸಿಗುತ್ತದೆಯೇ?
       
ನೇರ ಬಂಗಾರದ ಅಂಶವಲ್ಲದಿದ್ದರೂ ಬಂಗಾರದ ಕೆಲವೊಂದು ಅಂಶಗಳು ಅರಶಿನ ಕೊಂಬುಗಳಲ್ಲಿ ಸಿಗುತ್ತದೆ. ಹಾಗಾಗಿ ಅರಶಿನ ಬಳಕೆಯನ್ನೂ ಸ್ತ್ರೀಯರಿಗೆ ವಿಶೇಷವಾಗಿ ಹೇಳಿದ್ದಾರೆ. ಹಾಗಾಗಿ ಪ್ರತೀನಿತ್ಯವೂ ಸ್ವಲ್ಪವಾದರೂ ಅರಶಿನವನ್ನು ಬಳಸಬೇಕೆಂದು ನಮ್ಮ ಭಾರತೀಯ ಅಡಿಗೆಯಲ್ಲಿ ಸೇರಿಸಿದ್ದಾರೆ. ಹಾಗಂತ ಅರಶಿನವನ್ನು ಮೈತುಂಬಾ ಬಳಿದುಕೊಂಡರೆ ಚಿನ್ನದ ಅಂಶ ಬರುವುದಿಲ್ಲ. ಆದರೆ ಸ್ವಲ್ಪ ಪ್ರಮಾಣ ಚಿನ್ನದ ಗುಣ ಸಿಗಬಹುದು ಎನ್ನುವ ಅಭಿಪ್ರಾಯ ಇರುವುದರಿಂದ ಅರಶಿನಕ್ಕೂ ಅಷ್ಟೇ ಮಹತ್ವ ಬಂದಿತು. ಲಭ್ಯವಿಲ್ಲ, ಬಡತನವೆಂದಾಗ ಅರಶಿನ ಕೊಂಬನ್ನಾದರೂ ಕಟ್ಟಿಕೊಳ್ಳಿ ಎಂದರು. ಹಾಗೆ ಮುಂದೆ ಮಾಡಿಸಿಕೊಳ್ಳಬಾರದೆಂದು ಹೇಳಿಲ್ಲ. ಗಂಡನಿಗೆ ಆರ್ಥಿಕ ಸಬಲತೆ ಉಂಟಾಗಲು ಒಂದು ಚಿನ್ನದ ಆಭರಣವನ್ನು ಮಾಡಿಸಿ ಹಾಕಿಕೊಳ್ಳಬಹುದು. ತಾತ್ಕಾಲಿಕ ಅರಶಿನ ಕೊಂಬು ಅಷ್ಟೆ.

ನಿವೇಶಿನಿಯ ನಿಯತಿ ಸೂತ್ರವು ಯಾವುದೇ ಒಂದು ವ್ಯವಸ್ಥೆಯಲ್ಲಿ ಇರುವ ನಿಯಮವನ್ನು ಹೇಳುತ್ತದೆ. ಯೋಗಶಾಸ್ತ್ರದಲ್ಲಿ ನಿಯಮಗಳನ್ನು ವಿಶದೀಕರಿಸಿದ್ದರೆ. ಅದರಲ್ಲಿ ದೇಹಶಾಸ್ತ್ರಕ್ಕೆ ಬೇಕಾದ ೧೦ ನಿಯಮಗಳೆಂದರೆ: “ಆಹಾರ, ನ್ಯಾಸ, ಕಾಲ, ಪ್ರಾಪಂಚಿಕ, ವ್ಯಾಪಾರ, ಭೋಗ, ಆನಂದ, ದುಃಖ, ಕ್ರೋಧ, ಮೋಹ” ಎಂಬ ೧೦ ಸೂತ್ರಗಳು. ದೇಹವನ್ನು ಈ ದಶಸೂತ್ರಗಳ ನಿಯಮಬದ್ಧತೆಯಲ್ಲಿ ಇರಿಸಿಕೊಳ್ಳಬೇಕು.

ಇನ್ನು ದೇಹಶಾಸ್ತ್ರದ ಹಿರಣ್ಯಂ ಎಂಬ ಸೂತ್ರವು ಆಕರ್ಷಕವಾಗಿ ಕಾಣುವಂತಹಾ ಪ್ರವೃತ್ತಿಯನ್ನುವಿವರಿಸುತ್ತದೆ. ಅದೂ ಕೂಡ ಒಂದು ಮಂತ್ರದ ಒಂದು ಶಬ್ದವೇ ಆಗಿದೆ-

ಆ ಕೃಷ್ಣೇನ ರಜಸಾ ವರ್ತಮಾನೋ ನಿವೇಶಯನ್ ಅಮೃತಂ ಮರ್ತ್ಯಂಚ |
ಹಿರಣ್ಯಯೇನ ಸವಿತಾ ರಥೇನ ದೇವೋ ಯಾತಿ ಭುವನಾನಿ ಪಶ್ಯನ್ ||

ಅದನ್ನು ವಿಸ್ತರಿಸಲು ಶ್ರೀಸೂಕ್ತದ ಮೊದಲನೆಯ ಮಂತ್ರ ನೀಡಿದ್ದಾರೆ-

ಹಿರಣ್ಯ ವರ್ಣಾಂ ಹರಿಣೀಂ ಸುವರ್ಣ ರಜತಸ್ರಜಾಂ |
ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋಮ ಆವಹ ||

ಅಂದರೆ ಆಕರ್ಷಕ ಪ್ರವೃತ್ತಿ ಎನ್ನವುದರಲ್ಲಿ ೯ ವಿಧ – “ಸಹಜ, ಸ್ವಭಾವ, ಉದ್ದೇಶಿತ, ಅನಿವಾರ್ಯ, ಬಂಧುರ, ಭ್ರಮಾ, ಲಾಸ್ಯ, ಮೋಹ, ಜ್ವಲಂತ”. ಇದು ೯ ರೀತಿಯಲ್ಲಿ ತನ್ನ ಅಸ್ತಿತ್ವವನ್ನು ಪ್ರಕಟಿಸಿಕೊಳ್ಳುವ ವಿಧಾನದಲ್ಲಿ ವ್ಯವಹರಿಸುತ್ತದೆ. ಹಾಗಾಗಿ ಇದನ್ನು ಹಿರಣ್ಯವೆಂದರು. ಅಂದರೆ ಆಕರ್ಷಕವಾಗಿ ಕಾಣುವ ಪ್ರವೃತ್ತಿ ಎಂದರು. ಇದು ದೇಹದ ಮುಖ್ಯ ಕಾರ್ಯ ಚಟುವಟಿಕೆಯಾಗಿದೆ. ಇಡೀ ದೇಹವೇ ಆಕರ್ಷಕವಾಗಿ ಕಾಣಲು ಹಿಂದಿನ ಉಡುಗೆ, ತೊಡಿಗೆಯ ಜೊತೆಗೆ ಸಾಂಪ್ರದಾಯಿಕ ವೇಷ, ಭೂಷಣ, ಅಲಂಕಾರಗಳು ಸೇರಿದಲ್ಲಿ ದೇಹದ ಅಸ್ತಿತ್ವವು ಸಹಜವಾಗಿ ಪ್ರಕಟಗೊಳ್ಳುತ್ತದೆ. ಇದರಲ್ಲಿ ಸದ್ಗುಣಗಳೂ ಒಂದು ಹಿರಣ್ಯ ಎಂದರು. ಈ ೯ ದೇಹದ ಅಸ್ತಿತ್ವ ಕಾಯ್ದುಕೊಳ್ಳುವ ಪ್ರವತ್ತಿಗಳನ್ನು ಕರಿಮಣಿಸರ ಸಹಿತ ಮಾಂಗಲ್ಯದಲ್ಲಿ ಸಂಯೋಜಿಸಿರುತ್ತಾರೆ. ಅದರ ಧಾರಣೆಯಿಂದ ಸ್ತ್ರೀಯರು ತಮ್ಮ ದೇಹದ ಅಸ್ತಿತ್ವ ಕಾಯ್ದುಕೊಳ್ಳುವುದರ ಜೊತೆಯಲ್ಲಿ ಪತಿಯ ಅಸ್ತಿತ್ವವನ್ನು ಪತಿವ್ರತಾ ಶಕ್ತಿಯಿಂದ ಕಾಯ್ದುಕೊಳ್ಳಬಹುದು. ಅದಕ್ಕೇ ಈ ಆದರ್ಶ ಶ್ಲೋಕವು ಮಂತ್ರವಾದದ್ದು-

ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನಾ |
ಕಂಠೇ ಭದ್ರಾಣಿ ಶುಭದೇ ತ್ವಂ ಜೀವಃ ಶರದಃ ಶತಂ ||

ಹೀಗೆ ಮುಂದುವರೆಯುತ್ತಾ ಭೂಃ ಎಂಬ ಸೂತ್ರದಲ್ಲಿ ಜೈವಿಕ, ರಾಸಾಯನಿಕ, ಖಗೋಲ, ಭೌತ, ಇನ್ನಿತರೆ ಶಾಸ್ತ್ರಗಳ ವಿವರಣೆಯಲ್ಲಿ ೯ ವಿಭಾವನ್ನು ಮಂಡಿಸುತ್ತಾರೆ-

               ಸ್ಯೋನಾ ಪೃಥಿವೀ ಭವ ಅನೃಕ್ಷರಾ ನಿವೇಶನೀ ಯಚ್ಛಾನಃ ಶರ್ಮ ಸಪ್ರಥಃ ||

ಈ ಸೂತ್ರದಲ್ಲಿ ನಿವೇಶನಿಯು ಸತ್-ಅಸತ್‍ಗಳ ರಂಗಮಂಟಪದಲ್ಲಿ ವ್ಯವಹರಿಸತಕ್ಕಂತಹಾ ವ್ಯಾಪಾರವಾಗಿರುತ್ತದೆ. ನಿವೇಶನದಲ್ಲಿ ವ್ಯವಹರಿಸುವ ವ್ಯಾಪಾರವನ್ನು ನಿವೇಶನಿ ಎಂದರು. ನೋಡಿ ಇಲ್ಲಿನ ನಿವೇಶನಿಯ ಶಬ್ದೋತ್ಪತ್ತಿಯು ಹಿಂದಿನದಕ್ಕಿಂತ ವಿಭಿನ್ನ. ಹಾಗಾಗಿ ಒಂದು ಶಬ್ದಕ್ಕೆ ಒಂದೇ ಅರ್ಥ, ಅಥವ ಹಲವು ಅರ್ಥ, ಎಲ್ಲೆಲ್ಲಿ ಯಾವ್ಯಾವ ಅರ್ಥ, ಉತ್ಪತ್ತಿ ನಿಯಮ ಬಳಸಬೇಕೆನ್ನುವುದು ಮಂತ್ರ ದ್ರಷ್ಟಾರರೇ ಹೇಳಿಕೊಡಬೇಕೇ ವಿನಃ ನಾವು ಅರ್ಥ ಮಾಡಲು ಹೊರಟರೆ ಅಪಾರ್ಥವಾಗಬಹುದು. ಇಲ್ಲಿ ಮಾಂಗಲ್ಯವು ನಿವೇಶನಿಯ ನಿಯತಿ ಸೂತ್ರದಂತೆ ಪತಿಯಿಂದ ನ್ಯಾಸ ರೂಪವಾಗಿ ಪತ್ನಿಯಲ್ಲಿ ಕೊಡಲ್ಪಟ್ಟಿರುತ್ತದೆ. ನಿವೇಶಾತ್ – ಒಂದರಲ್ಲಿ ನ್ಯಾಸ ರೂಪವಾಗಿ ಇಡಲ್ಪಟ್ಟದ್ದು. ಅದು ನಿಯುಕ್ತೈಃ – ಒಂದು ವಿಚಾರದ ಹಿನ್ನಲೆಯಲ್ಲಿ ನಿಯುಕ್ತವಾಗಿರುತ್ತದೆ. ವೇಷ್ಟಿತೈಃ – ಅದು ಮುಚ್ಚಿಟ್ಟು ಕಾಯ್ದಿರಿಸಲ್ಪಟ್ಟಿರುತ್ತದೆ. ಹಾಗಾಗಿ ಇನ್ನೇಷ್ಟೆಷ್ಟೋ ವಿಚಾರಗಳು ಪ್ರಕಟಗೊಳ್ಳದೆ ಅದರ ಉಪಯುಕ್ತತೆ ತಿಳಿಯದಿದ್ದರೂ ಅದರ ಉಪಯೋಗ ಮಾತ್ರ ನಮಗೆ ಆಗುವಂತೆ ವ್ಯವಸ್ಥೆ ಮಾಡಿರುತ್ತಾರೆ ಋಷಿ ಮುನಿಗಳು. ಶೀಕ್ಷೈಃ – ವ್ಯವಹರಿಸುವ ಉದ್ದೇಶ ಎಂದರ್ಥ. ಹಾಗಾಗಿ ನಿವೇಶನಿ ಎಂದರೆ ಸಿದ್ಧವಾದ ಪರಿಕರ ಎಂದರ್ಥ.

ಹಾಗಾಗಿ ನಿಯುಕ್ತೈಃ ವೇಷ್ಟಿತೈಃ ಶೀಕ್ಷೈಃ ಇವುಗಳು ಅಧೀನವಾದರೆ “ನಿ” ಆಗುತ್ತದೆ. ಅದರಿಂದಲೇ ನಿವೇಶನವು ನಿವೇಶನಿ ಎಂದಾಗುತ್ತದೆ. ನಿವೇಶನಿ ಎಂದರೆ ಸಿದ್ಧವಾದ ಪರಿಕರ ಎಂದರ್ಥ. ಅದೇ ‘ನಿ’ಯು ಪತಿಯೊಂದಿಗೆ ಮಾಂಗಲ್ಯ ನ್ಯಾಸ ಪೂರ್ವಕ ಸೇರುವುದರಿಂದ ಪತ್ನಿ ಆಗುತ್ತದೆ. ಅವಳೇ ಗೃಹಕ್ಕೆ ಗೃಹಿಣಿ ಎಂದೆನಿಸಿಕೊಳ್ಳುತ್ತಾಳೆ. ಅದಕ್ಕೇ ಗಹಿಣೀ ಗೃಹಮುಚ್ಯತೇ – ಅಂದರೆ ಗೃಹಿಣಿಯೇ ಸಾಕ್ಷಾತ್ ಗೃಹ ಸ್ವರಪಿಣಿ, ಅವಳಿಲ್ಲದೆ ಗೃಹವಿಲ್ಲ. ಅದೇ ನಿಯುಕ್ತೈಃ ವೇಷ್ಟಿತೈಃ ಶೀಕ್ಷೈಃ ಇವುಗಳಿಂದ ಸ್ವತಂತ್ರವಾದರೆ “ನ” = “ನಿವೇಶನ”; ಅಂದರೆ ತಯಾರಾದ ವಿಚಾರ ಎಂದಾಗುತ್ತದೆ. ನಿವೇಶನದಲ್ಲಿ ನಿವೇಶನಿಯು ಇರಬೇಕು. ಅದಕ್ಕೆ ಮಾಂಗಲ್ಯಾದಿ ಧಾರಣೆ ಅತ್ಯಗತ್ಯ. ಪತಿ-ಪತ್ನಿಯರ ದೇಹದ, ತಮ್ಮ ಗೃಹದ, ತಮ್ಮ ಜೀವನದ ತಾಳಿಕೆ ಬಾಳಿಕೆಗಾಗಿ ಬೇಕು ಈ ತಾಳಿ. ಇದು ಇಳೆಯ ಬೆಳೆಯ ಸಂಕೇತ. ನಮ್ಮ ಸಂಸ್ಕೃತಿಯಲ್ಲಿ ಅದು ಬೇಡವೆನ್ನುವುದು ಸಮಾಜದ್ರೋಹ, ಮನೆಮುರುಕುತನ ಎಂದಾಗುತ್ತದೆ.

“ನಾಳಾಂತರ್ಗತಂ ಜಗತ್ಸರ್ವಂ” ಎಂಬುದು ಅಗಸ್ತ್ಯರ ನಾಳೀ ತಂತ್ರದ ಉದ್ಘೋಷ. ದೇಹವಾಗಲೀ ತತ್ಸ್ವರೂಪಿಯಾದ ಬ್ರಹ್ಮಾಂಡವಾಗಲಿ ನಾಳಿಯೊಳಗೇ ಇರುವುದು. ಎಲ್ಲ ಚರಾಚರಗಳೂ ನಾಳದಲ್ಲಿ ವ್ಯವಹರಿಸುತ್ತವೆ. ಮಗು ಹುಟ್ಟುವುದು ನಾಳದಿಂದ, ಅನ್ನ ಒಳಹೊಕ್ಕುವುದು ನಾಳದಿಂದ, ಪ್ರಾಣ ಹೋಗುವುದು ನಾಳದಿಂದಲೇ. ನಾಳೀಯೊಳಗೆ ತ, ಥ, ದ, ಧ, ಎಂಬ ಚತುಷ್ತತ್ವಗಳು ಸೇರಿ ಪಂಚಭೂತಾತ್ಮಕವಾಗಿ ವ್ಯವಹರಿಸುವುದೇ ತಾಳಿ. ಆ ತಥದಧಗಳೇ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳು.  ಅದರಿಂದ “ನ” ಅಂದರೆ ತನ್ನ ಅಸ್ತಿತ್ವ, ಅದರಿಂದ ನಾನು, ನನ್ನದು, ನನ್ನವರು, ಎಂಬುದು ಉಂಟಾಗುತ್ತದೆ. ತಾಳಿ ಮತ್ತು ನಾಳಿಗಳು ಒಂದು ತಾನ ಅಥವಾ ತಾಳದಲ್ಲಿ ಇರುತ್ತವೆ. ಪತಿಯು ತಾಳಿ ಕಟ್ಟುವುದು ಮತ್ತು ಪತ್ನಿಯು ತಾಳಿ ಕಟ್ಟಿಸಿಕಳ್ಳುವುದು ಎಂಬ ಪ್ರಕ್ರಿಯೆ ನಡೆದರೆ ಮಾತ್ರ ಅದರ ತಾನವು ಅರ್ಥವಾಗುತ್ತದೆ. ಅದನ್ನೇ ಜೀವನರಾಗ, ಜೀವನ ನಡೆ, ಜೀವನ ತಾಳ ಎಂದೆಲ್ಲ ಕರೆದರು. ಇವೆಲ್ಲ ಬ್ರಾಹ್ಮಿಯ ಅಕ್ಷರ ವಿಧ್ಯೆಯಿಂದ ತಿಳಿದು ಬರುವ ವಿಚಾರಗಳಾಗಿವೆ. ಇದರ ಉಲ್ಲೇಖವು ಲಭ್ಯ ಗ್ರಂಥಗಳಲ್ಲಿ ಕನ್ನಡದ ಪ್ರಪ್ರಥಮ ಕೃತಿಯಾದ ಕುಮುದೇಂದು ಕೃತ ಸಿರಿಭೂವಲಯದಲ್ಲಿ ಅಂಕಾಕ್ಷರ ಗಣಿತ ಮುಖೇನ ಸ್ಪಷ್ಟವಾಗಿದೆ.

|| ಅಸತೋಮಾ ಸದ್ಗಮಯ ತಮಸೋಮ ಜ್ಯೋತಿರ್ಗಮಯ

ಮೃತ್ಯೋರ್ಮಾ ಅಮೃತಂಗಮಯ ಓಂ ಶಾಂತಿಃ ಶಾಂತಿಃ ಶಾಂತಿಃ ||

6 comments:

 1. ವ್ಹಾ ಎಂತಹ ಅದ್ಬುತ ಮಾಹಿತಿ ಕಲೆ ಹಾಕಿದ್ದೀರಿ ಶ್ರೀಯುತರೆ.... ನಿಮಗೆ ಅನಂತ ಧನ್ಯವಾದ್ಗಳು.....ಆದ್ರೆ ನನ್ನ ಒಂದು ಅನುಮಾನವನ್ನು ದಯವಿಟ್ಟು ಪರಿಹರಿಸುತ್ತೀರಾ....
  >"ಮೊತ್ತ ಮೊದಲಿಗೆ ತಿಳಿಯಬೇಕಾದ ವಿಚಾರವೆಂದರೆ ವೇದಗಳು ತಾವು ತಿಳಿದಂತೆ ಸಂಸ್ಕೃತದಲ್ಲಿಲ್ಲ! ಅದು ವೇದಭಾಷೆಯಾದ ಬ್ರಾಹ್ಮಿಯಲ್ಲಿದೆ. ಸಂಸ್ಕೃತದ ಹಲವು ಪದಪುಂಜಗಳು, ವ್ಯಾಕರಣ ನಿಯಮಗಳು ಬ್ರಾಹ್ಮಿಗೆ ಸಮೀಪವಿದೆ. ಆದರೆ ಸಂಸ್ಕೃತದಿಂದ ವೇದಾರ್ಥ ಮಾಡಿದರೆ ಅಪಾರ್ಥವೇ ಆಗುವುದು ಶತಃಸಿದ್ಧ."<
  ಎಂದು ಹೇಳಿದ್ದೀರಿ ಅಂದರೇ... ವೇದಗಳು ಸಂಸ್ಕ್ರ‍ತದಲ್ಲಿಲ್ಲ ಎಂದಾದರೆ....ವೇದಭಾಷೆಯಾದ ಬ್ರಾಹ್ಮಿಯನ್ನು ತಿಳಿಯಲು ಸಂಸ್ಕೃತ ಪ್ರಾಜ್ನರು ಈ ಲಿಪಿಯನ್ನು ಅಧ್ಯನ ಮಾಡಿರುತ್ತಾರಾ,,,,,> ಅಥವ ಈಗ ಭಾರತದಲ್ಲಿ ದೊರಕುತ್ತಿರುವ ಅಮೂಲ್ಯ ಪ್ರಾಚೀನ ವೇದ-ಉಪನಿಷತ್,ಶಾಸ್ತ್ರ -ಮೀಮಾಂಸೆ,ಪುರಾಣಗಳೆಲ್ಲವನ್ನೂ ಸಂಸ್ಕೃತ ಭಂಡಾರವಾಗಿ ಭಾಷಾಂತರ ಮಾಡಿದ್ದಾರಾ..... ದಯವಿಟ್ಟು ವಿವರಿಸಿ.....

  ReplyDelete
  Replies
  1. ಬ್ರಾಹ್ಮಿಯು ಎಲ್ಲಾ ಭಾಷೆ, ಲಿಪಿಗಳಿಗೆ ಮಾತೃವಾಗಿದೆ. ಅದರ ಬಗ್ಗೆ ಭಾರತೀಯ ನೈಜ ಭಾಷಾಶಾಸ್ತ್ರಜ್ಞರ ಮತ್ತು ಲಿಪಿಕಾರರ ಸಮ್ಮತಿಯಿದೆ. ಹಲವು ಕಾರಣಗಳಿಂದ ಬ್ರಾಹ್ಮಿಯಿಂದ ಹಲವು ಭಾಷೆಗಳು ಹಲವು ಕಾಲಘಟ್ಟದಲ್ಲಿ ಬೆಳೆದು ಬಂದವು. ಹೀಗೆ ಬರಬರುತ್ತಾ ಹಲವು ಸಾವಿರ ಭಾಷೆಗಳು ಆಡಳಿತಾತ್ಮಕವಾಗಿ, ಬೋಧನಾತ್ಮಕವಾಗಿ ಇನ್ನಿತರೆ ಗೊಂದಲಗಳನ್ನು ಒಡ್ಡಿತು. ಅದನ್ನು ನೀಗಲೆಂದೇ ಆಗ ಪ್ರಚಲಿತವಿದ್ದ ಎಲ್ಲಾ ಭಾಷೆಗಳನ್ನು ಸಂಸ್ಕರಿಸಿ ಅದರಿಂದ ಆಯ್ದ ಶುದ್ಧ, ಬದ್ಧ ಧಾತು ನಿಯಮವುಳ್ಳ ಶಬ್ದಗಳಿಂದ, ನಿರ್ದಿಷ್ಟ ವ್ಯಾಕರಣ ನಿಯಮಗಳಿಂದ ಏಕತೆಯನ್ನು ಸಾಧಿಸಿದ ಭಾಷೆಯೇ ಸಂಸ್ಕೃತ. ಹಾಗಾಗಿ ಸಂಸ್ಕೃತದಲ್ಲಿ ಎಲ್ಲಾ ಭಾಷೆಯ ಶಬ್ದಗಳಿವೆಯೇ ಹೊರತು ಎಲ್ಲ ಭಾಷೆಗಳು ಸಂಸ್ಕೃತದಿಂದ ಬಂದದ್ದಲ್ಲ. ಸಂಸ್ಕೃತ ಎಂದರೆ ಸಂಸ್ಕರಿಸಲ್ಪಟ್ಟ ಭಾಷೆ. ಆಗ ಚತುರ್ವೇದಗಳನ್ನು ಬಿಟ್ಟು ಉಳಿದ ಎಲ್ಲಾ ಗ್ರಂಥಗಳನ್ನು ಸಂಸ್ಕೃತಕ್ಕೆ ತರ್ಜುಮೆ ಮಾಡಿದರು. ಹಾಗಂತ ಸಂಸ್ಕೃತ ಕಡಿಮೆಯೇನಲ್ಲ. ಈಗಿನ ಎಲ್ಲ ಭಾಷೆಗಳಿಗಿಂತ ಬಲಿಷ್ಠವಾಗಿದೆ. ಆದರೆ ವೇದಗಳು ಸಂಸ್ಕೃತದಲ್ಲಿಲ್ಲ. ಎಷ್ಟೇ ಬುದ್ಧಿವಂತಿಕೆ ಬಳಸಿ ತರ್ಜುಮೆ ಮಾಡಿದರೂ ಋಷಿಪ್ರೋಕ್ತ ಮೂಲಭಾಷೆಯ ಸೊಗಡನ್ನು ಈಯುವುದು ಸುಲಭವಲ್ಲ. ಅದರಿಂದಲೇ ಉಪನಿಷತ್, ಪುರಾಣಾದಿಗಳಿಗೆ ಹಲವು ಭಾಷ್ಯಗಳು, ಟೀಕೆಗಳು, ಭಾವಾರ್ಥಗಳೆಲ್ಲ ಹುಟ್ಟಿಕೊಂಡವು. ಎಷ್ಟೆಷ್ಟೋ ವಿಕೃತ ವ್ಯಾಖ್ಯಾನಗಳೂ ಆದವು.

   ಕನ್ನಡವು ಬ್ರಾಹ್ಮಿಗೆ ಅತೀ ಸಮೀಪವರ್ತಿ ಭಾಷೆಯಾಗಿದೆ ಎಂಬುವುದೇ ಕನ್ನಡಿಗರು ಹೆಮ್ಮೆ ಪಡಬೇಕಾದ ವಿಚಾರ. ಕನ್ನಡದ ಪ್ರಾಚೀನ ಗ್ರಂಥವಾದ ಕುಮುದೇಂದುವಿನ ಸಿರಿಭೂವಲಯದಲ್ಲಿನ ಪದ್ಯಗಳಲ್ಲಿ ಇದಕ್ಕೆ ಉತ್ತರವಿದೆ. ಕೆಲ ಪದ್ಯಗಳನ್ನು ಉದಾಹರಿಸುತ್ತೇನೆ, ಅರ್ಥಮಾಡಿಕೊಳ್ಳಿ:

   ಎಡಗೈಯ ನಾಡಂಕವೆಂದೆನೆ ಬ್ರಾಹ್ಮಿಯ | ಎಡಗೈಯ ಸರದ ಕನ್ನಡದ |
   ಮಡುವಿನಂಕದೆ ಬೆರೆಸಲು ಐದೈದಾದಂಕ | ಎಡಬಲ ಸೌಂದರಿಯಂಕ || ೫-೮೯

   ಪರಮಂ ಪೇಳಿದ ಹದಿನೆಂಟು ಮಾತಿನ | ಸರಸದ ಲಿಪಿ ಈ ನವಮ |
   ವರಮಂಗಲಪ್ರಾಭೃತದೊಳು ಅಂಕವ | ಸರಿಗೂಡಿ ಬರುವ ಭಾಷೆಗಳಂ || ೫-೮೯

   ರಸವು ಮೂಲಿಕೆಗಳ ಸಾರವ ಪೀರ್ವಂತೆ | ಹೊಸ ಕರ್ಮಾಟಕ ಭಾಷೆ |
   ರಸಶ್ರೀ ನವಮಾಂಕವೆಲ್ಲರೊಳ್ ಬೆರೆಯುತ | ಹೊಸೆದು ಬಂದಿಹ ಓಂ ಒಂದಂಕ ||
   ಕರುಣೆಯಿಂ ಬಹಿರಂಗ ಸಾಮ್ರಾಜ್ಯಲಕ್ಷ್ಮಿಯ | ಅರುಹನು ಕರ್ಮಾಟಕದ |
   ಸಿರಿಮಾತೆ ಯತ್ನದೆ ಒಂದರಿಂ ಪೇಳಿದ | ಅರವತ್ನಾಲ್ಕಂಕ ಭೂವಲಯ || ೧-೩೦

   ರಾಗವ ವೈರಾಗ್ಯವನೊಂದೆ ಬಾರಿಗೆ | ತಾಗಿಸೆ ಕರ್ಣಾಟಕದ |
   ಬಾಗಿಲ ಸಾಲಿನಿಂ ಪರಿತಂದ ಕಾರಣ | ಶ್ರೀ ಗುರುವರ್ಧಮಾನಾಂಕ || ೫-೮೩

   ಸರ್ವಜ್ಞದೇವನು ಸರ್ವಾಂಗದಿಂ ಪೇಳ್ದ | ಸರ್ವಸ್ವ ಭಾಷೆಯ ಸರಣಿ || ೬-೨

   ಸಕಲವು ಕರ್ಮಾಟದಣುರೂಪ ಹೊಂದುತ | ಪ್ರಕಟದೆ ಒಂದರೊಳ್ ಅಡಗಿ || ೬-೩

   ಹದಿನೆಂಟು ಭಾಷೆಯು ಮಹಾಭಾಷೆಯಾಗಲು | ಬದಿಯ ಭಾಷೆಗಳೇಳುನೂರಂ |
   ಹೃದಯದೊಳಡಗಿಸಿ ಕರ್ಮಾಟಲಿಪಿಯಾಗಿ | ಹುದುಗಿಸಿದಂಕ ಭೂವಲಯ || ೬-೪

   ಯಶಸ್ವತೀದೇವಿಯ ಮಗಳರಿದೇಳ್ನೂರು | ಪಶುದೇವನಾರಕ ಭಾಷೆ || ೬-೩೨

   ನವದಂಕದ ಈ ಭಾಷೆಗಳೆಲ್ಲವು | ಅವತರಿಸಿದ ಕರ್ಮಾಟ || ೬-೩೩

   ಘನಕರ್ಮಾಟದಾದಿಯೊಳ್ ಬಹುಭಾಷೆ | ವಿನಯತ್ವವಳವಡಿಸಿಹುದು || ೬-೩೪
   ಧರ್ಮಭಾಷೆಗಳೆಂಟೊಂದೇಳು || ೧-೮೮

   ಅರಿವು ಏಳ್ನೂರ್ ಹದಿನೆಂಟು || ೩-೧೪೯ || ಪರಮಭಾಷೆಗಳೆಲ್ಲವಿರುವ || ೩-೧೫೦

   ಇರುವ ಭೂವಲಯದೊಳೇಳ್ನೂರ ಹದಿನೆಂಟು ಸರಸಭಾಷೆಗಳವತಾರ || ೪-೧೭೭

   ವರದವಾದೇಳ್ನೂರ ಹದಿನೆಂಟು ಭಾಷೆಯ | ಸರಮಾಲೆಯಾಗಲುಂ ವಿದ್ಯಾ || ೧೦-೨೧೦

   ಸಾವಿರದೆಂಟು ಭಾಷೆಗಳಿರಲಿವನೆಲ್ಲ | ಪಾವನ ಮಹವೀರವಾಣಿ |
   ಕಾವ ಧರ್ಮಾಂಕವು ಒಂಬತ್ತಾಗಿರ್ಪಾಗ | ತಾವು ಏಳ್ನೂರ ಹದಿನೆಂಟು || ೫-೧೦೦

   ಇದರೊಳು ಹುದುಗಿದ ಹದಿನೆಂಟುಭಾಷೆಯ | ಪದಗಳ ಗುಣಿಸುತ ಬರುವರ್ || ೫-೧೨೪

   ವಾಸವರೆಲ್ಲರಾಡುವ ದಿವ್ಯಭಾಷೆಯ | ರಾಶಿಯ ಗಣಿತದೆ ಕಟ್ಟಿ |
   ಆಶಾಧರ್ಮಾಮೃತಕುಂಭದೊಳಡಗಿಹ | ಶ್ರೀಶನೇಳ್ನೂರಂಕ ಭಾಷೆ || ೫-೧೨೩

   ಮಿಕ್ಕಿಹ ಏಳ್ನೂರನಕ್ಷರ ಭಾಷೆಯಂ | ದಕ್ಕಿಪ ದ್ರವ್ಯಾಗಮರ |
   ತಕ್ಕ ಜ್ಞಾನವ ಮುಂದಕರಿಯುವ ಆಶೆಯ | ಚೊಕ್ಕ ಕನ್ನಡ ಭೂವಲಯ || ೫-೧೭೫
   ____________________________________________________
   ಕುಮುದೇಂದು ಮುನಿಯ ಸಂಸ್ಕೃತ ಪದಗಳು-

   ಸರ್ವಭಾಷಾಮಯೀಭಾಷಾ, ವಿಶ್ವವಿದ್ಯಾವಭಾಸಿನೇ, ತ್ರಿಷಷ್ಟಿಃ ಚತುಃಷಷ್ಟಿರ್ವಾ ವರ್ಣಾಃ ಶುಭಮತೇ, ಮತಾಃ, ಪ್ರಾಕೃತೇ, ಸಂಸ್ಕೃತೇಚಾಪಿ, ಸ್ವಯಂ ಪ್ರೋಕ್ತಾಃ, ಸ್ವಯಂಭುವಾ-ಅಕಾರಾದಿ, ಹಕಾರಾಂತಂ, ಶುದ್ಧಾಂ, ಮುಕ್ತಾವಲೀಮಿವ, ಸ್ವರ, ವ್ಯಂಜನಭೇದೇನ, ದ್ವಿಧಾ, ಭೇದಮುಪೈಯುಷೀಂ, ಅಯೋಗವಾಹ ಪರ್ಯಂತಂ, ಸರ್ವವಿದ್ಯಾಸುಸಂಗತಾಂ, ಅಯೋಗಾಕ್ಷರಸಂಭೂತಿಂ, ನೈಕಬೀಜಾಕ್ಷರಶ್ಚಿತಾಂ, ಸಮವಾದೀ ದಧತ್, ಬ್ರಾಹ್ಮಿ ಮೇಧಾವಿನ್ಯತಿ ಸುಂದರೀ - ಸುಂದರೀ ಗಣಿತಂ, ಸ್ಥಾನಂ, ಕ್ರಮೈಹಿ, ಸಮ್ಯಗಧಾಸ್ಯತ್, ತತೋ ಭಗವತೋ ವಕ್ತ್ರಾನಿಃ ಹ್ಸೃತಾಕ್ಷರಾವಲೀಂ, ನಮ ಇತಿ - ವ್ಯಕ್ತ ಸುಮಂಗಲಾಂ ಸಿದ್ಧಮಾತೃಕಾಂ, ಸ ಭೂವಲಯ ೫-೧೨೨,೧೪೫

   ಧಾರ್ಮಿಕ ದೃಷ್ಟಿ -

   ಮನುಜರಾಡುವ ಋಕ್ಕು ದಿವಿಜರಾಡುವ ಋಕ್ಕು | ದನುಜರಾಡುವ ಋಕ್ಕುದನದ |
   ವಿನಯವು ಗೋಬ್ರಾಹ್ಮಣೇಭ್ಯಃ ಶುಭಮಸ್ತು | ಜಿನಧರ್ಮಸಮಸಿದ್ಧಿರಸ್ತು || ೬-೮೩

   ರತುನತ್ರಯದೇ ಆದಿಯದ್ವೈತ | ದ್ವಿತೀಯವು ದ್ವೈತವೆಂಬಂಕ |
   ತೃತೀಯದೊಳನೇಕಾಂತವೆನೆ ದ್ವೈತಾದ್ವೈತವ | ಹಿತದಿ ಸಾಧಿಸಿದ ಜೈನಾಂಕ ||

   ಹಿರಿಯತ್ವವಿವು ಮೂರು ಸರಮಣಿ ಮಾಲೆಯ | ಅರಹಂತ ಹಾರದ ರತ್ನಂ |
   ಸರಪಣಿಯಂತೆ ಮೂರರ ಮೂರು ಒಂಬತ್ತು | ಪರಿಪೂರ್ಣಮೂರಾರು ಮೂರು ||

   ಯಶದಂಕವದರೊಳಗೊಂದಂ ಕೂಡಲು | ವಶದಾ ಸೊನ್ನೆಗೆ ಬ್ರಾಹ್ಮಿ |
   ವೆಸರಿನಲಿಪಿಯಂಕ ದೇವನಾಗರಿಯೆಂಬ | ಯಶವದೆಯ ಋಗ್ವೇದದಂಕ ||

   ಧರ್ಮವದಿಂತು ಸಮನ್ವಯವಾಗಲು | ನಿರ್ಮಲವದ್ವೈತಶಾಸ್ತ್ರ |
   ಶರ್ಮರಿಗಾಮೂರು ಆನುಪೂರ್ವಿಗೆ ಒಂದು | ಧರ್ಮದೈಕ್ಯವನು ಸಾಧಿಪುದು || ೬-೮೦-೧೬೩

   Delete
  2. ಇನ್ನು ಬೇರೆಯವರು ಈ ಮೂಲಭಾಷೆಯಾದ ಬ್ರಾಹ್ಮಿ ಮತ್ತದರ ಲಿಪಿಯ ಬಗ್ಗೆ ಅಧ್ಯಯನ ಮಾಡಿದ್ದಾರೋ ಇಲ್ಲವೋ ಅಷ್ಟು ಮಾಹಿತಿ ಇಲ್ಲ. ವಿಶಾಲ ದೃಷ್ಟಿಕೋನ ಇಲ್ಲದೆ ವಿಶೇಷ ವಿಚಾರಗಳ ಅಧ್ಯಯನ ಸಾಧ್ಯವಿಲ್ಲ. ಲಭ್ಯ ಆಪ್ತವಾಕ್ಯಾಧರದಂತೆ ಪ್ರಸಕ್ತ ಬ್ರಾಹ್ಮಿ ಬಲ್ಲ ೧೨ ಜನ ಈ ಭೂಮಿಯಲ್ಲಿ ಇದ್ದಾರೆ. ಈಗಿನ ಗ್ರಂಥಗಳಲ್ಲಿ ಯಾರು ಎಷ್ಟೇ ತಿದ್ದಿದರೂ ಬ್ರಾಹ್ಮೀ ಮೂಲದ ಗ್ರಂಥಗಳನ್ನು ಋಷಿ ಪರಂಪರೆಯಲ್ಲಿ ಇನ್ನೂ ಉಳಿಸಿಕೊಂಡು ಬಂದಿದ್ದಾರೆ.

   http://veda-vijnana.blogspot.in/2011/11/vedic-language-brahmi.html
   http://veda-vijnana.blogspot.in/2011/11/vaidhika-bauthashaastra-unexplored.html
   http://veda-vijnana.blogspot.in/2012/08/light-on-vedic-heritage.html
   http://veda-vijnana.blogspot.in/2013/09/blog-post.html

   Delete
 2. ಹೇಮಂತ್ ಕುಮಾರ್ ಜೀ ಅದ್ಭುತ ಕೆಲಸ ಮಾಡುತ್ತಿದ್ದೀರಾ ........ಮುಂದುವರೆಸಿ, ದೇವರು ನಿಮಗೆ ಒಳ್ಳೆಯದನ್ನು ಮಾಡಲಿ... ಹಾಗೂ ಒಳ್ಳೆಯದನ್ನ ಸಮಾಜಕ್ಕೆ ಇನ್ನೂ ತಲುಪಿಸುವ ಶಕ್ತಿ ಕೊಡಲಿ.....

  ReplyDelete
 3. wonderful !! thank you so much for this article!!!

  ReplyDelete