Saturday, 7 December 2013

ಅಗಸ್ತ್ಯರ ಅದ್ಭುತ ವೈಜ್ಞಾನಿಕ ಸಂಶೋಧನೆಗಳು - ೧


ಕಯಾ ಶುಭಾ ಸವಯಸಃ ಸನೀಳಾಃ” ಎಂದಿದ್ದಾರೆ ಅಗಸ್ತ್ಯರು. ನಮ್ಮೀ ಭಾರತ ಭೂಮಿಯಲ್ಲಿ ಲೋಕ ಹಿತಕರವಾದ ಬಡವರ, ದೀನರ, ಏಳ್ಗೆಗಾಗಿ ಶ್ರಮಿಸಿದ ಸರ್ವರನ್ನೂ ಸಮಾನದೃಷ್ಟಿಯಿಂದ ಕಂಡ ಆದರ್ಶ ವ್ಯಕ್ತಿಗಳಲ್ಲಿ ಎತ್ತರದಲ್ಲಿರುವವರು “ಅಗಸ್ತ್ಯರು”. “ಕಸ್ಯ ಬ್ರಹ್ಮಾಣಿ”ಕೋ ಅಧ್ವರೇ”ಕೇನ ಮಹಾ ಮನಸಾ” ಅಹಮೇತಾ ಮನವೇ ವಿಶ್ವಶ್ಚಂದ್ರಾಃ” ಇವೆಲ್ಲಾ ಅಗಸ್ತ್ಯರ ಎತ್ತರದ ಮನಸ್ಥಿತಿಯ ದ್ಯೋತಕಗಳು. ಅವರ ಕೆಲವೊಂದು ಸಮೀಕರಣಗಳನ್ನು ಉದಾಹರಿಸುತ್ತೇನೆ.

ಋಗ್ವೇದ ಮಂಡಲ ೧, ಸೂಕ್ತ ೧೬೫, ಮಂತ್ರ ೧೩

ಕೋನ್ವತ್ರ ಮರುತೋ ಮಾಮಹೇವಃ ಪ್ರಯಾತನ ಸಖೀಙ್ ರಚ್ಛಾ ಸಖಾಯಃ |
ಮನ್ಮಾನಿ ಚಿತ್ರಾ ಅಪಿವಾತಯಂತ ಏಷಾಂ ಭೂತ ನವೇದಾ ಮ ಋತಾನಾಮ್ ||

ಈ ಜಗದ ಋತವ ನರಿತವ ಮನುಜ ಕೇಳ್ ಸಾಗರದಿ
ಈಜುತಿದೆ ನಾವೆ ದೂರದಿ ದಡದಿ ನಿಂತಿಹ ಮನುಜ ನದರ
ಈಜು ಕೋಲನು ಎತ್ತಿ ನಾವಿಕ ಮೀಟುತಿರೆ ಜಲದಂಕ ತೆರೆಯಂಕದಳತೆಯಲಿ ಮೇಲಿರೆ |
ಈಂಕಾರದಕ್ಷರದ ಸ್ವರದ ಮೇಲಣ ಭಾರನಾದೆಯಾ ಹೇರದೂರ
ಈಕ್ಷಿಸಿಯೇ ಲೆಕ್ಕ ಹಾಕಲುಬಹುದು ಆಳವೆಷ್ಟು ಹರಿವೆಷ್ಟು
ಈಡೆಷ್ಟು ಎಂಬುದಕೆ ನೀರಿಗಿಳಿಯಲು ಬೇಡ ಲೆಕ್ಕ ಹಾಕಿಯೇ ತಿಳಿಯಬಹುದು ಜಾಣಾ ||

ಒಂದು ನಾವೆಯು ದೂರ ಸಮುದ್ರದಲ್ಲಿ ತೇಲುತ್ತಿದ್ದರೆ ದಡದ ತೆರೆಗಳ ಲೆಕ್ಕ ಆಧರಿಸಿ ದಡದಲ್ಲಿರುವ ಮರ್ತ್ಯನು ನಾವೆಯಲ್ಲಿರುವ ಹೇರೆಷ್ಟು, ದೂರವೆಷ್ಟು, ನಾವಿಕರೆಷ್ಟು, ಅವರ ಮೀಟು ಗೋಲೆಷ್ಟು, ಹುಟ್ಟೆಷ್ಟು, ವೇಗವೆಷ್ಟು, ಎಲ್ಲವನ್ನೂ ಕೇವಲ ಕಣ್ಣೋಟದಿಂದಲೇ ಅಳೆದು ನಿಖರವಾಗಿ ಹೇಳಬಹುದೆನ್ನುತ್ತಾರೆ ಅಗಸ್ತ್ಯರು. ಅದಕ್ಕೆ ಬೇಕಾದ್ದು ಋತ” ಎಂಬ ಒಂದು ಸೂತ್ರ. ಅದನ್ನರಿತವನು ಹೊರ ಸಮುದ್ರ ಆಳ ಅರಿತುಕೊಳ್ಳಬಲ್ಲವ ಎನ್ನುತ್ತಾರೆ ಅಗಸ್ತ್ಯರು.

ಮಹಾತ್ಮರಾದ ಅಗಸ್ತ್ಯರು ಹೆಚ್ಚಾಗಿ ದಕ್ಷಿಣ ಭಾರತವನ್ನೇ ತಮ್ಮ ಕಾರ್ಯಕ್ಷೇತ್ರವಾಗಿ ಮಾಡಿಕೊಂಡು ಇಲ್ಲಿಯೇ ಹೆಚ್ಚಾಗಿ ತಮ್ಮ ಅಧ್ಯಯನ, ಸಂಶೋಧನೆಗಳನ್ನು ಮಾಡುತ್ತಾ ಜನ ಮಧ್ಯದಲ್ಲಿ ಸೇರಿ ಒಂದಾಗಿ ಬಾಳಿ ಬದುಕಿದವರು. ಇಲ್ಲಿನ ಆಜ್ಞ ಜನರಿಗೆ ವೈಜ್ಞಾನಿಕ ಜೀವನ ಪದ್ಧತಿಯನ್ನು ತೋರಿಸಿಕೊಟ್ಟವರು. ನಿರಂತರ ಸಂಶೋಧನಾಸಕ್ತರು. ಸರಳ, ಸಾತ್ವಿಕ, ಸದ್ಗುಣಿ, ಶಮದಮಾದಿಗಳನ್ನು ಮೈಗೂಡಿಸಿಕೊಂಡವರು. ಕೋಪಾದಿ ಅರಿಷಡ್ವರ್ಗಗಳನ್ನು ಜಯಿಸಿದ ಜಿತೇಂದ್ರಿಯರು. ಸತ್ಯಾದಿ ಷಡ್ಬಂಧುಗಳನ್ನು ಪ್ರೀತಿಯಿಂದ ಆಧರಿಸಿ ಬಾಳಿದವರು. ತೀರಾ ಕೆಳ ಮಟ್ಟದ ಜೀವನ ಮಾಡುತ್ತಿದ್ದ ಬೆಸ್ತರು, ಈಡಿಗರು, ಮಲೆಕುಡಿಯರು, ಜೇನುಕುರುಬರು, ಕಿರಾತರು, ಬೇಡರು ಇವರೆಲ್ಲರನ್ನೂ ಸುಧಾರಿಸಿ ಒಂದು ಉತ್ತಮ ಜೀವನ ಪದ್ಧತಿ ರೂಪಿಸಿಕೊಟ್ಟವರ. ಹಾಗೇ ಅವರವರ ಕುಲವೃತ್ತಿಗೆ ಬೇಕಾದ ಕೆಲ ವೈಜ್ಞಾನಿಕ ಮೂಲದ ಸಂಶೋಧನೆ ಮಾಡಿಕೊಟ್ಟವರು. ಅದರ ಕೆಲ ಉದಾಹರಣೆಯನ್ನೇ ಈ ಮುಂದಿನ ಭಾಗದಲ್ಲಿ ವಿವರಿಸುತ್ತೇನೆ.

ಋಗ್ವೇದ ಮಂಡಲ ೧, ಸೂಕ್ತ ೧೬೭, ಮಂತ್ರ ೧

ಸಹಸ್ರಂತ ಇಂದ್ರೋತಯೋ ನಃ ಸಹಸ್ರಮಿಷೋ ಹರಿವೋ ಗೂರ್ತತಮಾಃ |
ಸಹಸ್ರಂ ರಾಯೋ ಮಾದಯಧ್ಯೈ ಸಹಸ್ರಿಣ ಉಪ ನೋ ಯಂತು ವಾಜಾಃ ||

ಈ ರೀತಿಯಲ್ಲಿ ಹಲವು ಮುಖದಿಂದ ಚಿಂತನೆ ಮಾಡಿದ್ದಾರೆ. ಬದುಕು ಕಲಿಯುವ ಜನಕ್ಕೆ ಹಲವು ಜೀವನ ಮುಖವನ್ನು ತೋರಿಸಿಕೊಟ್ಟರು. “ನ ರೋದಸೀ ಅಪನುದಂತ ಘೋರಾ” ಎಂದರು. ಒಟ್ಟಾರೆ ನಮ್ಮ ಸಮಾಜದ ಏಳ್ಗೆಗಾಗಿ ಕುಲವೃತ್ತಿಯಾಧರಿಸಿ ವೈಜ್ಞಾನಿಕತೆಯನ್ನು ತೋರಿಸಿಕೊಟ್ಟವರು ಅಗಸ್ತ್ಯರು. ಅವರದ್ದೇ ಆದ ಒಂದು ಮತ್ಸ್ಯೋದ್ಯಮ ಕರಿತ ಮಾತನ್ನು ಗಮನಿಸಿ –

ಋಗ್ವೇದ ಮಂಡಲ ೧, ಸೂಕ್ತ ೧೭೦, ಮಂತ್ರ ೧-೫

ನ ನೂನಮಸ್ತಿ ನೋಶ್ವಃ ಕಸ್ತದ್ವೇದ ಯದದ್ಭುತಮ್ |
ಅನ್ಯಸ್ಯ ಚಿತ್ತಮಭಿ ಸಂಚರೇಣ್ಯಮುತಾಧೀತಂ ವಿನಶ್ಯತಿ || ೧ ||
ಕಿಂ ನ ಇಂದ್ರ ಜಿಘಾಂಸಸಿ ಭ್ರಾತರೋ ಮರುತಸ್ತವ |
ತೇಭಿಃ ಕಲ್ಪಸ್ವ ಸಾಧುಯಾ ಮಾನಃ ಸಮರಣೇ ವಧೀಃ || ೨ ||
ಕಿಂ ನೋ ಭ್ರಾತರಗಸ್ತ್ಯ ಸಖಾ ಸನ್ನತಿ ಮನ್ಯಸೇ |
ವಿದ್ಮಾ ಹಿ ತೇ ಯಥಾ ಮನೋಸ್ಮಭ್ಯಮಿನ್ನ ದಿತ್ಸಸಿ || ೩ ||
ಅರಂ ಕೃಣ್ವಂತು ವೇದಿಂ ಸಮಗ್ನಿಮಿಂಧತಾಂ ಪುರಃ |
ತತ್ರಾಮೃತಸ್ಯ ಚೇತನಂ ಯಜ್ಞಂ ತೇ ತನವಾವಹೈ || ೪ ||
ತ್ವಮೀಶಿಷೇ ವಸುಪತೇ ವಸೂನಾಂ ತ್ವಂ ಮಿತ್ರಾಣಾಂ ಮಿತ್ರಪತೇ ಧೇಷ್ಠಃ |
ಇಂದ್ರ ತ್ವಂ ಮರುದ್ಭಿಃ ಸಂ ವದಸ್ವಾಧಪ್ರಾಶಾನ ಋತುಥಾ ಹವೀಂಷಿ || ೫ ||

ಮಖೆಯೊಳಶ್ವಗತಿ ಋತಪುಠಧ್ವನಿ ತಾಡನ ಭೇಧನಗಳಿರೆ
ಸುಖವಪ್ಪುದೈ ಮತ್ಸ್ಯಗಳೊಳಾಡೆ ಸಂತತಿ ವೃದ್ಧಿ ಕೂರ್ಮಗಳಾ ಮೆಲೆ
ಮುಖ ಸಂಖ್ಯೆಯೊಳಾರು ಬಲ್ಲಿರೇ ನೂನದ ಅಧ್ವೇಧಃ ಮೊತ್ತದೊಳಹಿತರಾರು ಅನ್ನರಾರೊ ಅರಿಯೇ |
ಮುಖಾದ್ಭುತವನರಿ ಮುತಾಧೀತನಾಗೈ ಮನುಜ ಮೊತ್ತದ ಸಂಖ್ಯೆಯೊಳಾರು
ಮುಖದವನ ಕರುಣೆಯಲಿ ಜೊಂಡು ಬಸಿರಾಯ್ತು ಮತ್ಸ್ಯಗಳಾಯ್ತು
ಮಖೆಯೊಳಗೆ ಶಿಶುತನವು ಋತುವರಿತು ನಡೆ ನೀನು ಜೀವನ ರಥ ನಡೆಸು ಸುಗಮದಲೀ ||

ಅಂದೇ ಅಘಸ್ತ್ಯರು ಮತ್ಸ್ಯೋದ್ಯಮದ ವಿಸ್ತೃತ ಸಂಶೋಧನೆ ಮಾಡಿ ಯಾವ ಕಾಲದಲ್ಲಿ ಮತ್ಸ್ಯೋದ್ಯಮ ಮಾಡಬೇಕು? ಹೇಗೆ ಮಾಡಬೇಕು? ಜಲಚರಗಳ ಸಂತತಿ ವೃದ್ಧಿಕಾಲವ್ಯಾವುದು? ಎಲ್ಲವನ್ನೂ ವಿವರಿಸಿದ್ದಾರೆ. ಹಾಗೆ ಹೆಚ್ಚೆಚ್ಚು ಮತ್ಸ್ಯ ಬೆಳವಣಿಗೆಯಾಗಲು ನಾವೇನು ಪ್ರಾಕೃತಿಕ ನಿಯಮ ಪಾಲಿಸಬೇಕು ಎಂದೂ ತಿಳಿಸಿದ್ದಾರೆ. ಹಾಗೇ ಪ್ರಕೃತಿಯ ಲಕ್ಷಣ ಆಧರಿಸಿ ಯಾವ್ಯಾವ ದಿಕ್ಕಿನಲ್ಲಿ ಎಷ್ಟೆಷ್ಟು ಮತ್ಸ್ಯ ಸಂತತಿ ವೃದ್ಧಿಯಾಗಿದೆ? ಹೇಗೆ ಆಗುತ್ತದೆ? ಅದರಲ್ಲಿ ನಮ್ಮ ಪಾಲೆಷ್ಟು? ಖಗಾದಿಗಳ ಪಾಲೆಷ್ಟು? ಎಲ್ಲವನ್ನೂ ವಿವರಿಸಿದ್ದಾರೆ. ಈ ಮಾತುಗಳ ಜೊತೆಯಲ್ಲಿ ಕೆಲ ಪೌರಾಣಿಕ ಮಾಹಿತಿಗಳನ್ನೂ ಹೇಳಿ ಮುಂದೆ ಅಘಸ್ತ್ಯರ ವಿಚಾರವಾಗಿ ಬರೆಯುತ್ತೇನೆ.

ನಮ್ಮ ಪುರಾಣಗಳಲ್ಲಿ ನವ ಖಂಡಗಳನ್ನೂ, ಸಪ್ತದ್ವೀಪಗಳನ್ನೂ, ಸಪ್ತ ಸಾಗರಗಳನ್ನೂ ಗುರುತಿಸಿ ಹೆಸರಿಸಿದ್ದಾರೆ. ಅದರಲ್ಲಿ ಭರತಖಂಡವೆಂಬ ಈ ಭೂಭಾಗ, ಅದರಲ್ಲಿ ಜಂಬೂದ್ವೀಪ ಪ್ರಸಿದ್ಧ. ಭರತಖಂಡವೆಂದರೆ ಈಗಿನ ಭಾರತಭೂಮಿ ಮಾತ್ರವಲ್ಲ, ಪೂರ್ವಪಶ್ಚಿಮವಾಗಿ ಆಫ್ಘಾನಿಸ್ಥಾನ, ಬಲೂಚಿಸ್ಥಾನದಿಂದ ಆರಂಭಿಸಿ ಬರ್ಮಾ, ಅದರ ದಕ್ಷಿಣೋತ್ತರವಾಗಿ ಹರಡಿದ ಎಲ್ಲಾ ಭೂಖಂಡಗಳೂ ಸೇರಿರುತ್ತವೆ. ಹಾಗೇ ಉತ್ತರ ದಕ್ಷಿಣವಾಗಿ ಉತ್ತರ ಕುರು ಪ್ರಾಂತ್ಯದಿಂದ ದಕ್ಷಿಣಕ್ಕೆ ಅಂದರೆ ಸಿಂಹಳದ ಕೊನೆವರೆಗೆ ಇರುವ ಪ್ರದೇಶ ಭರತಖಂಡ. ಅದರಲ್ಲಿ ಸುತ್ತ ಕರಾವಳಿ ಆವರಿಸಿರುವ ವಿಂಧ್ಯದ ದಕ್ಷಿಣ ಭಾಗವೆಲ್ಲಾ ಜಂಬೂದ್ವೀಪ. ಈ ಭರತಖಂಡದ ಒಟ್ಟು ವ್ಯಾಪ್ತಿಯಲ್ಲಿ ಆವರಿಸಿರುವ ಸಮುದ್ರಗಳೇ ಸಪ್ತ ಸಾಗರಗಳು. ಇಕ್ಷು, ಕ್ಷೀರ, ಸುರಾ, ಸರ್ಪಿ, ದಧಿ, ಲವಣ, ಶುದ್ಧೋದಕ ಎಂಬ ಸಪ್ತಸಾಗರಗಳಿವೆ ಈ ಭರತಖಂಡವನ್ನಾಧರಿಸಿ!

ಈಗಿನ ಹೆಸರುಗಳನ್ನು ಬಿಟ್ಟ ಪ್ರಾದೇಶಿಕತೆಯನ್ನು ಬಿಟ್ಟು ಪೂರ್ತಿ ಸಾಗರ ಪ್ರಾಂತ್ಯದಲ್ಲಿ ಸಂಚರಿಸಿದರೆ ಇದೆಲ್ಲಾ ಸತ್ಯವೇ. ಈಗಿನ ಅರಬ್ಬೀ ಸಮುದ್ರವೆಂಬುದು ಲವಣ ಸಮುದ್ರ ಎಂಬ ಹೆಸರುಳ್ಳದ್ದಾಗಿತ್ತು. ಅದರ ಮಧ್ಯದ ದ್ವೀಪ ಪ್ರದೇಶಗಳನ್ನು ಲವಣಾಸರನೆಂಬ ರಾಕ್ಷಸನು ಆಳುತ್ತಿದ್ದ. ರಾಮನ ಕಾಲದಲ್ಲಿ ಶತ್ರುಘ್ನನು ಅವನನ್ನು ಜಯಿಸಿ ಚಕ್ರಾಧಿಪತ್ಯಕ್ಕೆ ಸೇರಿಸಿದನೆಂಬ ಕಥೆಯಿದೆ. ಹಾಗೇ ಸಮುದ್ರಗಳ ಮಧ್ಯದಲ್ಲಿ ಅಲ್ಲಲ್ಲ ಸಿಹಿನೀರಿನ ಪ್ರವಾಹಗಳಿವೆ. ಅದೇ ಇಕ್ಷು ಸಾಗರ. ಹಾಗೇ ಕುಡಿಯಲು ಆರ್ಹವಾದ ಶುದ್ಧೋದಕ ಪ್ರವಾಹವೂ ಇದೆ. ಹಾಗೇ ಮಂಜುಗೆಡ್ಡೆಗಳ ನೀರಿನ ಮೇಲೆ ತೇಲುತ್ತಾ ಪ್ರವಹಿಸುವ ದಧಿ ಸಾಗರವೂ ಇದೆ. ಹಾಗೇ ಯಾವಾಗಲೂ ಬೆಳ್ಳಗೆ ಕಿರಣ ಪ್ರತಿಫಲಿಸುವ, ಎಲ್ಲಾ ಕಿರಣಗಳನ್ನು ಸಮಾನವಾಗಿ ಸ್ವೀಕರಿಸಿ ಪ್ರತಿಫಲಿಸುವ ಶಕ್ತಿ ಹೊಂದಿದ ಸಮುದ್ರ ಪ್ರದೇಶವೇ ಕ್ಷೀರಸಾಗರ ಎನ್ನಿಸಿದೆ. ಇನ್ನು ನೀರಿನ ಘನಾಂಶ ಹೆಚ್ಚಿ ಔಷಧೀಯ ಗುಣಗಳನ್ನು ತನ್ನಲ್ಲಿ ಕ್ರೋಢೀಕರಿಸಿಕೊಂಡ ನೀರಿನ ಭಾಗವೇ ಸರ್ಪಿ ಎನ್ನಿಸಿದೆ. ಹಾಗೇ ತೀಕ್ಷ್ಣತೆಯನ್ನು ಮೈಗೂಡಿಸಿಕೊಂಡ ಕೆಲ ಕಾಂತೀಯ ಕಿರಣಗಳನ್ನು ಹೊಂದಿದ ಸಮುದ್ರಭಾಗವೇ ಸುರಾಸಾಗರ ಎನ್ನಿಸಿದೆ. ಈ ಭರತಖಂಡ ಪ್ರದೇಶದಲ್ಲಿ ಇವೆಲ್ಲಾ ಕಂಡುಬರುತ್ತವೆ. ಹಾಗಾಗಿ ಸಪ್ತ ಸಾಗರಗಳು ಹೆಸರಿಸಲ್ಪಟ್ಟವು.

ಆಯಾಯ ಸಾಗರ ಪ್ರದೇಶದಲ್ಲಿ ಕೆಲ ವಿಶೇಷಗಳಿವೆ. ತೀಕ್ಷ್ಣ ಗುಣ ಹೊಂದಿದ ಸುರಾ ಸಾಗರ ಪ್ರದೇಶದಲ್ಲಿ ನೀರಿನಲ್ಲಿ ಮತ್ತಿನ ಅಂಶವಿದೆ. ವಜ್ರ, ಮಾಣಿಕ್ಯ, ಹವಳ ಇತ್ಯಾದಿ ರತ್ನಗರ್ಭವಾಗಿದೆ ಈ ಸಾಗರ. ಹಾಗೇ ಕ್ಷೀರದಲ್ಲಿ ಮುತ್ತು, ಶಂಖಗಳು ಇದ್ದರೆ ಸರ್ಪಿಯಲ್ಲಿ ಲೋಹಗಳೂ, ಇತರೆ ಖನಿಜಗಳೂ, ಕಲ್ಲೆಣ್ಣೆಯೂ ಇರುತ್ತದೆ. ದಧಿಯಲ್ಲಿ ನಾನಾ ರೀತಿಯ ವಿಶಿಷ್ಟ ಮೀನುಗಳೂ, ತರಹೇವಾರಿ ಗಿಡಮರಗಳೂ ಬೆಳೆಯುವುದಾಗಿ ವಿವರಿಸಿದ್ದಾರೆ (ಸಮುದ್ರ ಸಸ್ಯಗಳು). ಹೀಗೆ ಸಮುದ್ರದಾಳದ ಪ್ರತಿಯೊಂದನ್ನೂ ಅಘಸ್ತ್ಯರು ಇದಮಿತ್ಥಂ ಎಂದು ಸಂಶೋಧಿಸಿ ಬರೆದಿಟ್ಟಿದ್ದಾರೆ. ಹಾಗೇ ಸಮುದ್ರದ ಏರಿಳಿತ, ಅದಕ್ಕೆ ಕಾರಣ, ಅದರ ಉಪಯೋಗ, ನಿರಂತರ ಬೀಸುವ ಗಾಳಿ, ಅದರ ಬೀಸುವಿಕೆಗೆ ಕಾರಣವಾಗುವ ಭೂಮಿಯ ಮೇಲಿನ ಶಾಖೋತ್ಪಾದನೆ ಇತ್ಯಾದಿ ಇತ್ಯಾದಿಯೆಲ್ಲವೂ ಸೂತ್ರಬದ್ಧ ರೀತಿಯಲ್ಲಿರುತ್ತದೆ ಎಂದಿದ್ದಾರೆ. ಹಾಗೇ ಋತುಮಾನಗಳು, ತ್ರಿಕಾಲಗಳು, ಹಗಲು, ರಾತ್ರಿ, ಮಾಸಭೇದ, ದಿನಗಣನೆ, ಸಂವತ್ಸರ ಚಕ್ರವರ್ಣನೆ ಇತ್ಯಾದಿಗಳನ್ನೂ ಅಘಸ್ತ್ಯರು ನಿಶ್ಚಿತವಾಗಿ ವಿವರಿಸಿದ್ದಾರೆ. ಅವೆಲ್ಲದರ ವಿಚಾರವಾಗಿ ಮುಂದೆ ಉದಾಹರಣೆ ಸಹಿತವಾಗಿ ವಿವರಿಸಲು ಪ್ರಯತ್ನಿಸುತ್ತೇನೆ. ಅಘಸ್ತ್ಯರ ಪ್ರವೇಶ ಯಾವ್ಯಾವ ವಿಭಾಗದಲ್ಲಿದೆ? ಅದನ್ನು ವೈಜ್ಞಾನಿಕವಾಗಿ ಹೇಗೆ ವಿಶ್ಲೇಷಿಸಿದ್ದಾರೆ ಎಂಬುದರ ವಿವರವನ್ನು ಮೊದಲಾಗಿ ಪಟ್ಟಿ ಮಾಡಿ ವಿವರಿಸಿ ನಂತರ ಆ ಸೂತ್ರಗಳ ಪರಿಚಯ ಮಾಡಿಕೊಡುತ್ತೇನೆ.

೧. ಜಲಯಂತ್ರಗಳು

೨. ನೌಕಾಯಾನಗಳು

೩. ಸಮುದ್ರ + ಸಾಗರಗಳ ಪರಿಚಯ

೪. ಸಮುದ್ರೋತ್ಪನ್ನಗಳು

೫. ಮತ್ಸ್ಯೋದ್ಯಮ ಮತ್ತು ಸಮುದ್ರೋತ್ಪಾತಗಳು

೬. ಉತ್ಪಾತಗಳಿಂದ ಮತ್ಸ್ಯೋತ್ಪತ್ತಿ

೭. ಮತ್ಸ್ಯ ಪ್ರಮಾಣ + ಉದ್ಯಮದಲ್ಲಿ ಹಿಡಿತ

೮. ನೇಕಾರಿಕೆ – ನೇಯುವ ಯಂತ್ರ ರಚನೆ

೯. ಹಾಸು + ಹೊಕ್ಕುಗಳ ಮುಖೇನ ನೇಯ್ಗೆ

೧೦. ನೇಯ್ಗೆಯಲ್ಲಿ ಚಿತ್ರ ರಚನೆ (ಚಿಕಣಿ ಚಿತ್ರಗಳು)

೧೧. ಲೋಹ ವಿಧ್ಯಾ – ಪರಿಕರ ತಯಾರಿಕೆ

೧೨. ಕಾಷ್ಟವಿಧ್ಯಾ – ಕಾಷ್ಟ ಕೃತಿಗಳ ನಿರ್ಮಾಣ, ಗೃಹವಾಸ್ತು, ಗೃಹರಚನೆ

೧೩. ಶಿಲ್ಪಕಲಾ ಶಿಲಾಶಿಕ್ಷಣ, ಶಿಲಾಶುದ್ಧಿ, ಶಿಲಾಸಂಸ್ಕಾರ, ವಜ್ರಶಿಲಾ ಲಕ್ಷಣ

೧೪. ತಂತ್ರಶಾಸ್ತ್ರಗಳ ರಚನೆ, ಯಂತ್ರ ತಯಾರಿಕೆ (ಸನ್ನೆಗಳು ಇತ್ಯಾದಿ)

೧೫. ತಿರುಗಣೆ ಮಣೆ, ಮರುಸುತ್ತು ಕೀಲಿಗಳು, ಅದರಲ್ಲಿ ಎಡ+ಬಲ.

೧೬. ಸನ್ನೆಯ ಕೆಲ ವಿಶಿಷ್ಠ ಆವಿಷ್ಕಾರಗಳು

೧೭. ವಿಷ ಚಿಕಿತ್ಸಾ ಪದ್ಧತಿ

೧೮. ವಿಷಜಂತುಗಳ ನಿಯಂತ್ರಣ

ಇಷ್ಟು ಭಾಗದಲ್ಲಿ (೧೮) ಅಘಸ್ತ್ಯರು ತಮ್ಮ ನೈಪುಣ್ಯ ಮೆರೆದಿದ್ದಾರೆ. ಅದೆಲ್ಲದರ ಕೆಲ ಅಳತೆ, ಲೆಕ್ಕ, ಆಕಾರ + ರೂಪ, ರಚನಾ ವಿನ್ಯಾಸ, ಸೂತ್ರಗಳು ವಿವರಿಸಲ್ಪಟ್ಟಿವೆ. ತನ್ನ ಈ ಅಲ್ಪ ಮತಿಗೆ ಹೊಳೆದಂತೆ ಮುಂದಿನ ಕಂತುಗಳಲ್ಲಿ ವಿವರಿಸಲು ಪ್ರಯತ್ನಿಸುತ್ತೇನೆ. ಹೆಚ್ಚಿನ ವಿವರಗಳಿಗಾಗಿ ನೀವೂ ಸಂಶೋಧನೆ ಮಾಡಿರೆದು ಪ್ರಾರ್ಥಿಸುತ್ತೇನೆ.

ಇಂತು,
ಕೆ. ಎಸ್. ನಿತ್ಯಾನಂದ
ಅಗಸ್ತ್ಯಾಶ್ರಮ ಗೋಶಾಲೆ,
ಬೇರಿಕೆ ಬೆಂದ್ರ, ಬಂದ್ಯೋಡ್, ಕಾಸರಗೋಡು

8 comments:

 1. ಮತ್ಸ್ಯೊದ್ಯಮ ಅಷ್ಟೊಂದು ಪುರಾತನ ಉದ್ಯಮವಾಗಿದ್ದರೆ, ಆ ಕಾಲದಿಂದಲೂ ಮತ್ಸ್ಯವನ್ನು ಆಹಾರವಾಗಿ ಸೇವಿಸುತ್ತಿದ್ದರೆ? ಸಸ್ಯಾಹಾರದ ಸಾತ್ವಿಕ ಭಾವನೆಗಳಿಗೆ ಇದು ವಿರುದ್ಧವಲ್ಲವೇ?

  ReplyDelete
  Replies
  1. ಕರಾವಳಿಯಲ್ಲಿ ಮತ್ಸ್ಯವೇ ಆಹಾರವಾಗಿದೆ. ಅದಕ್ಕೆ ಅಗಸ್ತ್ಯಾದಿ ಋಷಿಗಳ ಅನುಮೋದನೆಯೂ ಇದೆ. ಕೃಷಿ ಸಾಧ್ಯವೇ ಇಲ್ಲವೆಂದಿದ್ದ ಕರಾವಳಿಯಲ್ಲಿ ಬದುಕುವುದಕ್ಕಾಗಿ ಮತ್ಸ್ಯದ ಮೊರೆ ಹೊಕ್ಕರು. ಅದನ್ನು ಕೃಷಿಯ ರೂಪದಲ್ಲೇ ಬಿತ್ತಿ ಬೆಳೆದು ಭುಂಜಿಸುತ್ತಾರೆ. ಧಾನ್ಯಾದಿಗಳು, ಹರಿತ್ಸಂಪತ್ತು, ಗೋಸಾಕಾಣಿಕೆ, ಸಾಧ್ಯವೇ ಆಗುತ್ತಿರಲಿಲ್ಲವೆಂದು, ಬದುಕುವುದಕ್ಕೆ ಕರಾವಳಿ ತೀರದ ಜನನು ಮತ್ಸ್ಯೋದ್ಯಮವನ್ನು ಆರಿಸಿಕೊಂಡರು. ಅದು ಎಷ್ಟೆಷ್ಟೆಷ್ಟೋ ವರ್ಷಗಳಿಂದ ನಡೆದುಕೊಂಡು ಬಂದಿತ್ತು. ಪಶ್ಚಿಮ ಕರಾವಳಿಯಲ್ಲಿ ಸಂಶೋಧನೆಗೆ ಬಂದ ಅಗಸ್ತ್ಯರಿಗೆ ಇದು ಅರ್ಥವಾಗಿ ಮತ್ಸ್ಯೋದ್ಯಮಕ್ಕೆ ಒಂದು ವೈಜ್ಞಾನಿಕ ನೆಲೆಗಟ್ಟನ್ನು ಹಾಕಿಕೊಟ್ಟರು. ಮತ್ಸ್ಯವನ್ನು ಕೊಲ್ಲುವುದಲ್ಲ, ಮತ್ಸ್ಯವನ್ನು ಬಿತ್ತಿ ಕೃಷಿ ಮಾಡಿ ಬಳಸುವ ತಂತ್ರಜ್ಞತೆಯನ್ನು ತೋರಿಸಿಕೊಟ್ಟರು. ಈ ಕಾರಣದಿಂದ ಹೊಟ್ಟೆಪಾಡಿಗೆ ಮತ್ಸ್ಯವಾದರೂ ಕೃಷಿ ಮಾಡಿ ಬದುಕು ಕಂಡುಕೊಂಡರು. ಮತ್ಸ್ಯಾಹಾರ ಮಾಂಸಾಹಾರವಲ್ಲ. ಅದು ಹೇಗೆಂದು ವಿವರಿಸಿದ್ದಾರೆ ಎಂದು ಕೇಳಿದ್ದೇನೆ. ಆರ್ತ ಜನರ ಉದರ ಪೋಷಣೆಗಾಗಿ ಇದ್ದ ಒಂದೇ ಮಾರ್ಗವಾದ ಮತ್ಸ್ಯೋದ್ಯಮಕ್ಕೆ ಸಾಂಪ್ರದಾಯಿಕ ಕೃಷಿಯ ಚೌಕಟ್ಟು ನೀಡಿ, ಪುಷ್ಟಿ ಕೊಟ್ಟು ಮತ್ಸ್ಯೋದ್ಯಮದ ಬಗ್ಗೆ ಬೃಹತ್ ಪ್ರಬಂಧವನ್ನೇ ಮಂಡಿಸಿದರು. ಹಾಗಂತ ಎಲ್ಲರೂ ಮೀನು ತಿನ್ನಿ ಎಂದು ಹೇಳಲಿಲ್ಲ. ಸಸ್ಯಾಹಾರ ಲಭ್ಯತೆಯಿದ್ದು, ಅದನ್ನೇ ಬಳಸುವವರನ್ನು ಎಳೆದು ತಂದು ಮತ್ಸ್ಯಾಹಾರಿಗಳಾಗಿ conversion ಮಾಡುವಂತಹಾ ಕೆಲಸ ಮಾಡಿಲ್ಲ, ಅಗಸ್ತ್ಯರು! ಆದಷ್ಟು ಸಾತ್ವಿಕ ಜೀವನ ಮಾಡಿರಿ ಎಂದೇ ಬೋಧಿಸಿದ್ದಾರೆ. ಆ ಕಾಲದ, ಆ ಜನರ ವ್ಯವಸ್ಥೆಗೆ ಬೇಕಾದ ಸೂಕ್ತ ಪರಿಹಾರೋಪಾಯವೇ ಮತ್ಸ್ಯೋದ್ಯಮ. ಈ ಕಾರಣದಿಂದ ಪುರಾತನ ಕಾಲದಿಂದಲೂ ಬೆಳೆದು ಬಂದ ಉದ್ದಿಮೆ ಇದಾಗಿದೆ. ಮುಂದೆ ಮಡಿ ಮೈಲಿಗೆಗೆ ಭಂಗವಾಗುತ್ತದೆ ಎಂದು ಪುರೋಹಿತಶಾಹಿ ವ್ಯವಸ್ಥೆಯು ಅಗಸ್ತ್ಯರನ್ನು ಬ್ರಾಹ್ಮಣರೇ ಅಲ್ಲ, ಮೊಗವೀರರೆಂದೂ ಅವರ ಅಗಾಧ ವೈಜ್ಞಾನಿಕ ಸಂಶೋಧನೆಗಳನ್ನೂ, ಅವರ ಕೆಲ ವೇದ ಮಂತ್ರಗಳನ್ನೂ ಸುಪ್ತಗೊಳಿಸಿದರು. ಈಗಲೂ ಅವರ ಸಂಶೋಧನೆಯು "ಅಗಸ್ತ್ಯ ಸಂಹಿತಾ" ಎಂಬ ತಾಳಗ್ರಂಥದಲ್ಲಿ ತುಳು ಲಿಪಿಯಲ್ಲಿದೆ. ಎಲ್ಲಿಯ ತನಕ ಸಮರ್ಥ, ಸಮೃದ್ಧ, ಪೂರಕ ಆಹಾರ ಉಪಲಭ್ಯತೆ ಸಾಧ್ಯವಿಲ್ಲವೋ, ಅಲ್ಲಿಯ ತನಕ ಮತ್ಸ್ಯೋದ್ಯಮದ ವಿರುದ್ಧ ಮಾತನಾಡಲಿಕ್ಕೆ ಸಾಧ್ಯವಿಲ್ಲದಷ್ಟು ಉತ್ಕೃಷ್ಟವಾಗಿ ಮಂಡಿಸಿದ್ದಾರೆ. ಮೂಲದಲ್ಲಿ ಮತ್ಸ್ಯವೆಂದರೆ "ಮತ್ ಅಸ್ಯ ಸಃ" ಎಂದು ಬ್ರಾಹ್ಮಿ ಭಾಷೆಯಲ್ಲಿ ಶಬ್ದೋತ್ಪತ್ತಿ ನೀಡುತ್ತಾ, ಮೂಲ ಮತ್ಸ್ವದ ಸಂಪರ್ಕ ಸಾಧಿಸುವ ವಿಧಾನವನ್ನು ಬೋಧಿಸಿದರು. ಆ ಮೂಲ ಮತ್ಸ್ವದಿಂದ ಮತ್ಸ್ಯ ಉತ್ಪತ್ತಿಯಾಗುತ್ತದೆ. ಅಲ್ಲಿ ಅವರ ಬೋಧನೆಯ ವಿಷಯವಿದ್ಧದ್ದು ಕನಿಷ್ಠ ಪಕ್ಷ ಮತ್ಸ್ಯದಿಂದಾದರೂ ಮತ್ಸ್ವವನ್ನು ಸಾಧಿಸಿಕೊಂಡರೆ ನೇರವಾಗಿ ನಾರಾಯಣ ಎಂಬ ನಾಲ್ಕಂಶ ಉಳ್ಳ ಜಲದಲ್ಲಿ ಮತ್ಸ್ವಾಂಶವನ್ನು ಸ್ವೀಕರಿಸುವ ಶಕ್ತತೆ ಒದಗಿ ಬರುತ್ತದೆ. ಆಗ ಆಹಾರಾದಿಗಳೇ ಬೇಡ ಎಲ್ಲವೂ ಮೂಲ ಮತ್ಸ್ವದಿಂದಲೇ ಪೂರೈಕೆಯಾಗುತ್ತದೆ. ಇಷ್ಟು ಸ್ಥೂಲ ವಿವರಣೆ ನೀಡಬಹುದು. ಹೆಚ್ಚಿನ ವಿವರಗಳಿಗೆ ಸ್ವಯಂ ಸಂಶೋಧನೆ ಗೈದರೆ ಮೂಲ ಮತ್ಸ್ಯವು ಗೋಚರಿಸಿ ನೀವೇ ಸಮರ್ಥ ಸಿದ್ಧಾಂತಿಯಾಗಬಹುದು ನಿಜವು ಎಂದು ಸತ್ಯದೇವತೆಯಾದ ಶ್ರೀ ಅಣ್ಣಪ್ಪಯ್ಯ ಯತಿವರೇಣ್ಯರ ವಾಕ್ಯ.

   Delete
 2. ಇಷ್ಟೊಂದು ಸಂಶೋಧನೆ ಮಾಡಿ ನನ್ನ ಜಿಜ್ಞಾಸೆಗೆ ಉತ್ತರಿಸಿದ್ದಕ್ಕೆ ಧನ್ಯವಾದಗಳು

  ReplyDelete
  Replies
  1. ಧನ್ಯವಾದಗಳು. ಇಲ್ಲಿ ನನ್ನದೇನು ಇಲ್ಲ. ಮಹಾನ್ ಋಷಿ-ಮುನಿಗಳ ಸಂಶೋಧನೆಯನ್ನು ಕೇಳಲಿಕ್ಕೆ, ನೋಡಲಿಕ್ಕೆ ಸಿಕ್ಕ ಅತೀ ಸಣ್ಣ ವ್ಯಕ್ತಿಯಷ್ಟೆ.

   Delete
 3. "ಮತ್ಸ್ಯಾಹಾರ ಮಾಂಸಾಹಾರವಲ್ಲ", ಹೇಗೆಂದು ವಿವರಣೆ ನೀಡಬಹುದೇ?

  ReplyDelete
  Replies
  1. ತಿಳಿದ ವಿವರಗಳನ್ನು ಮೇಲಿನ ಪ್ರಶ್ನೆಯಲ್ಲಿ ವಿವರಿಸುವ ಪ್ರಯತ್ನ ಮಾಡಲಾಗಿದೆ. ಹೆಚ್ಚಿನ ವಿವರಗಳಿಗೆ ಅಗಸ್ತ್ಯ ಸಂಹಿತೆಯನ್ನು ಸಂಶೋಧಿಸಿ ಅರ್ಥಮಾಡಿಕೊಳ್ಳಿರಿ.

   Delete
  2. Smart answers for smart questions & smart people :)

   Delete