Friday, 26 July 2013

Vedic Physics-3: Driggochara: Visible world, Speed, Illusion, Temperature, Oasis, Sky..





ದೃಗ್ಗೋಚರ  – ವಾಮದೇವ ರುದ್ರ 

ಅಸ್ಥಿರ ಕಾಲಮಿತಿಯನ್ನು ಹೊಂದಿ ಸದಾ ಪರಿವರ್ತನಾ ರೂಪ ಹೊಂದುವ, ಕಣ್ಣಿಗೆ ಕಾಣಿಸುವ ಅಥವಾ ಕಾಣಿಸಿಯೂ ಕೂಡ ಭ್ರಮಾಧೀನ ವಸ್ತುಗಳು, ಜೀವಿಗಳು ಇತ್ಯಾದಿ. ವಿಶಾಲ ಪ್ರಕೃತಿಯಲ್ಲಿಯ ಚರಾಚರಗಳನ್ನು ವಿವರಿಸುತ್ತಾ ಹೋಗುತ್ತದೆ. ಇವೆಲ್ಲವೂ ದೃಗ್ಗೋಚರ. ಜೀವ, ಅಣುಜೀವಿಗಳು, ಸೂಕ್ಷ್ಮಜೀವಿಗಳು, ದ್ವಿಪದಿಗಳು, ಏಕಾಣು, ದ್ವ್ಯಣು, ತ್ರಸರೇಣು, ಚತುರೇಣು ಜೀವಿಗಳು ಇತ್ಯಾದಿ ವಿಭಾಗಗಳು ಬರುತ್ತವೆ. ಅದನ್ನೆ ಈಗ ಬಯೋಲಜಿ, ಮೈಕ್ರೋಬಯೋಲಜಿ ಎಂಬ ವಿಭಾಗದಲ್ಲಿ ಸ್ವಲ್ಪ ಮಟ್ಟಿಗೆ ಕಾಣಬಹುದು.

ಉದಾ:- ಮರುಭೂಮಿಯಲ್ಲಿ ಕಾಣುವ ಮರೀಚಿಕೆ. ಕಣ್ಣಿಗೆ ಕಂಡರೂ ಸತ್ಯವಲ್ಲ. ಆದರೆ ಭೌತಶಾಸ್ತ್ರ ರೀತ್ಯಾ ಮರೀಚಿಕೆ ಅಲ್ಲಿದೆ. ಆದರೆ ನಮಗೆ ಕಾಣಿಸಿದ ವಸ್ತು ಅಲ್ಲಿ ಇರುವುದಿಲ್ಲ. ಇದು ಭ್ರಮಾಧೀನ ಸ್ಥಿತಿ.
 
ಪ್ರಶ್ನೆ 5:- ಮರುಭೂಮಿಯಲ್ಲಿ ಮರೀಚಿಕೆಯ ಜಾಗದಲ್ಲಿ ನಿಜವಾಗಿಯೂ ಕಣುವುದು ಏನು? 

ಅಗ್ನಿಯ ಒಂದು ಗುಣ ಶಾಖ. ಶಾಖವು ನೀರಿನಂತೆ ಭಾಸವಾಗುತ್ತದೆ. ಏಕೆಂದರೆ ಅಗ್ನಿಯಿಂದ ನೀರು ಉತ್ಪನ್ನವಾಗಿರುತ್ತದೆ. ಆದ್ದರಿಂದ ಅಗ್ನಿಯ ಮುಂದಿನ ರೂಪವಾದ ನೀರನ್ನೇ ಕಾಣಿಸಬೇಕೇ ಹೊರತು ಬೇರೇನಾದರೂ ಕಾಣಿಸಲು ಸಾಧ್ಯವಿಲ್ಲ. ಕಾಣಿಸಿದರೆ ಭೌತಶಾಸ್ತ್ರದ ನಿಯಮಕ್ಕೆ ವಿರುದ್ಧವಾಗುತ್ತದೆ. ಮತ್ತೊಂದು ಸಾಧ್ಯತೆ ಎಂದರೆ ವ್ಯಕ್ತಿಯ ಪಿತ್ತ ವಿಕಾರವಾದಾಗ ಉಂಟಾಗುವ ಭ್ರಮೆಯು ಏನನ್ನೂ ಕಾಣಿಸಬಹುದು. ಆದರೆ ಅದು ಭೌತಶಾಸ್ತ್ರೀಯ ಸತ್ಯವಲ್ಲ.
 
ದೃಗ್ಗೋಚರಗಳು  364 + ಭ್ರಮಾ = 365 ಎಂದು ಹಿಂದಿನಿಂದ ಬಳಕೆಯಲ್ಲಿತ್ತು. ಕೊನೆಗೆ ಗಾಲವರು 365 + ಮತ್ತೊಂದು ಭ್ರಮೆ = 366 ಎಂದು ತೋರಿಸಿಕೊಟ್ಟರು. ಅಂದರೆ ಭ್ರಮೆಯಲ್ಲಿ 2 ವಿಧ ಎಂದರು.

ಪ್ರಶ್ನೆ 6:- ಗಾಲವರು ಹೇಳಿದ ಹಾಗೆ ಮತ್ತೊಂದು ಭ್ರಮೆಯ ಉದಾಹರಣೆ ಕೊಡಿ.
ಇಲ್ಲಿ ಮಾನಸಿಕ, ಚಿತ್ತ, ಪಿತ್ತ ಭ್ರಮೆಗಳಲ್ಲ. ಪ್ರತಿಫಲನ ಎಂದು ಉದಾಹರಿಸಿದರೆ ಅದು ಮರೀಚಿಕೆಯಲ್ಲಿ ಹೇಳಿದ ರೂಪ ವ್ಯತ್ಯಾಸ ನಿಯಮದಲ್ಲಿ ಬರುತ್ತದೆ. ಮತ್ತೊಂದು ಭ್ರಮೆಯನ್ನು ಅಂಡಾಭಾಸ ಎಂದು ಗಾಲವರು ಹೇಳುತ್ತಾರೆ. ಆಕಾಶವನ್ನು ನೋಡಿದರೆ ಉರುಟಾಗಿ ಬಂದು ಭೂಮಿಗೆ ತಾಗಿದ ಹಾಗೆ ಕಾಣುತ್ತದೆ. ಆದರೆ ಅದು ತಾಗಿದೆಯಾ? ಇಲ್ಲ. ಪ್ರಪಂಚದ ಎಲ್ಲಾ ವಸ್ತುಗಳೂ ಅಂಡಾಭಾಸವಾಗಿ ಕಾಣುತ್ತದೆ, ಆದರೆ ಅಂಡವಲ್ಲ. ಎಲ್ಲಾ ವಸ್ತುಗಳೂ ಅದರದರ ನಿಯಮದಂತೆ ವ್ಯವಹರಿಸಿದಾಗ ಮಾತ್ರ ಅಂಡಾಭಾಸವಾಗಿ ಕಾಣುತ್ತವೆ. ಅದು ಭ್ರಮೆಯ ಮತ್ತೊಂದು ಭಾಗ. ಇದು ಸತ್ಯ. ಆದರೆ ಪರೀಕ್ಷೆ ಮಾಡಿ ನೋಡಿದಾಗ ಅಂಡವಾಗಿ ಇರುವುಲ್ಲ. ಈ ಭ್ರಮೆಯ ಕಾರಣದಿಂದಾಗಿಯೇ ಭೂಮಿಯು ಅಂಡಗೋಳಿಕ ಎಂದು ಕಾಣುತ್ತದೆ ಎಂದರು. ಆದರೆ ಅದು ಸತ್ಯವಾದ ದರ್ಶನವಲ್ಲ. ಉದಾಹರಣೆಗೆ ಬೆಂಗಳೂರಿನ ಭೌಗೋಳಿಕ ಅಕ್ಷಾಂಶ 12degree 57minute, ಆದರೆ ಅದರ ಅಂಡಗೋಳಿಕ ಅಕ್ಷಾಂಶ 12degree 52minute ಆಗುತ್ತದೆ. 
 
ಪ್ರಕೃತಿಯ ನಿಯಮವಾದ ಕೇಂದ್ರಸ್ಥಿತ ನಿಯಮದ ರೀತ್ಯಾ ಎಲ್ಲಾ ವಸ್ತುಗಳು ಅಂಡದಂತೆಯೇ ತಿರುಗುತ್ತದೆ. ಪ್ರಕೃತಿ ಸದಾ ಪರಿಶುದ್ಧತೆಯತ್ತ ಪ್ರಯತ್ನ ಪಡುತ್ತಿರುತ್ತದೆ. ಮಾಯೆಯೆಂಬ ವಿಚಿತ್ರ ಅಸ್ತಿತ್ವ ಅದನ್ನು ಹಾಳುಗೆಡವಲು ಪ್ರಯತ್ನಿಸುತ್ತಿರುತ್ತದೆ. ಯಾವಾಗ ಈ ನಿಯಮ ತಪ್ಪುತ್ತದೋ ಆಗ ಈ ಪ್ರಕೃತಿಯೇ ಇಲ್ಲ. ಈ ರೀತಿ ತತ್ತ್ವ, ಉಪಾಂಶು, ದೇವರು, ದೇವತೆಗಳು ಎಂಬ ಭೌತಶಾಸ್ತ್ರ ನಿಯಮದಲ್ಲಿ ದೇವರ ಅಸ್ತಿತ್ವವನ್ನು ಸಮರ್ಥವಾಗಿ ತೋರಿಸಿಕೊಡುತ್ತದೆ. ದೇವರಿಲ್ಲ ಎನ್ನುವವರೆಲ್ಲ ಚಕಾರವೆತ್ತದೆ ಒಪ್ಪಬಹುದಾದ ಸೂತ್ರಗಳಿವು. ಮರೀಚಿಕೆಯಲ್ಲಿ ಅಗೋಚರವಾದ ಶಾಖವು ಹೇಗೆ ಗೋಚರವಾಯಿತೋ, ಹಾಗೇ ಇಲ್ಲಿ ಅಗೋಚರವಾದ ವೇಗ ಗೋಚರವಾಗುತ್ತದೆಯೇ ಹೊರತು ವಸ್ತು ಗೋಚರವಾಗುವುದಿಲ್ಲ. ಆದ್ದರಿಂದ ವೇಗವೂ ಅಂಡಾಭಾಸವಾಗುತ್ತದೆ. ವೇಗವು ವಸ್ತುರೂಪವನ್ನು ಕಾಣಿಸುವುದಿಲ್ಲ. ಅಂಡರೂಪವನ್ನೇ ಕಾಣಿಸುತ್ತದೆ. ಏಕೆಂದರೆ ಪ್ರಪಂಚದ ಎಲ್ಲವೂ ಅಂಡಾಭಾಸವೆಂಬ ಭ್ರಮಾರೂಪದಲ್ಲೇ ಇರುವಂತಹದ್ದು. ಹಾಗಾಗಿ ವೇಗದಿಂದಲೇ ಪ್ರಪಂಚ ಉತ್ಪನ್ನವಾಯಿತು. ಹಾಗಾಗಿ ಚಲನೆಯಿಂದ ಜೀವಿಯನ್ನು ಗುರುತಿಸಲಾಗುತ್ತದೆ. ಹಾಗಾಗಿ ಈ ಜೀವಸೃಷ್ಟಿಯ ಮೂಲಧಾತುವೇ ವೇಗ ! 

ವೇದ ದ್ರಷ್ಟಾರರು ವಾಮದೇವಾಯ ನಮೋ ಜ್ಯೇಷ್ಠಾಯ ನಮಃ. . . ಎಂಬ ಮಂತ್ರದಿಂದ ವೇಗ ಸೂತ್ರವನ್ನು ಸಂಯೋಜಿಸಿದ್ದಾರೆ. ಯಾವಾಗ ತಿರುಗುತ್ತಿರುವ ಎಲೆಕ್ಟ್ರಾನ್, ನ್ಯೂಟ್ರಾನ್‍ಗಳು ಇತ್ಯಾದಿಗಳು ತಮ್ಮ ವೇಗವನ್ನು ಕಳೆದುಕೊಳ್ಳುತ್ತವೋ ಆಗ ಅಣುವೇ ಇಲ್ಲ. ಭೂಮಿ, ನೀರು, ಅಗ್ನಿ, ಗಾಳಿ, ಆಕಾಶಗಳಿಗೆ ತಮ್ಮದ್ದೇ ಆದ ವೇಗವಿದೆ. ವೇಗ ಕಳೆದುಕೊಂಡರೆ ಅಸ್ತಿತ್ವವೇ ಇಲ್ಲ. ಆದ್ದರಿಂದ ಆಕಾಶವನ್ನು ಗುರುತಿಸಲು ಸಾಧ್ಯ! ಹೇಗೆ? ಪ್ರತಿವಸ್ತುವಿನ ರೂಪದಲ್ಲಿ. ವೇಗವನ್ನು ನೇರವಾಗಿ ಗುರುತಿಸುವುದಿಲ್ಲ. ಅಂಡಸ್ವರೂಪವಾಗಿ ಗುರುತಿಸುತ್ತೇವೆ. ಆಗ ನಾವು ಗುರುತಿಸುವುದು ವೇಗವನ್ನೇ ಹೊರತು ಅಂಡವನ್ನಲ್ಲ. ಅದಕ್ಕೇ ಹೇಳುವುದು ಅಂಡಾಭಾಸವೆಂದು.

ದೃಗ್ಗೋಚರದ ಒಂದು ನಿಯಮವೆಂದರೆ ಯಾವುದೇ ವಸ್ತುವಿಗೆ ನಾಶವಿಲ್ಲ. ಎಲ್ಲವೂ ಪ್ರವರ್ತನೆ, ಪರಿಣಮ, ಗುಣಗಳ ಆಧಾರದಲ್ಲಿ ಪರಿವರ್ತನೆ ಹೊಂದುತ್ತವೆ. ಅಂದರೆ ದೃಗ್ಗೋಚರದ ರೂಪ ನಾಶವಿಲ್ಲ, ರೂಪ ವ್ಯತ್ಯಾಸ ಹೊಂದುತ್ತದೆ. ದೃಗ್ಗೋಚರದಲ್ಲಿ ಪರಿಣಮ – 84, ಪ್ರವರ್ತನೆ – 432, ಗುಣ – 108.