Sunday, 13 April 2014

ವಿಶ್ವಾಮಿತ್ರ ಗಾಯತ್ರಿ ಚರಿತ್ರೆ


ನಮ್ಮ ಸೂತ್ರಕಾರರು ಗಾಯತ್ರಿಗೂ ವಿಶ್ವಾಮಿತ್ರನಿಗೂ ಅವಿನಾಭಾವ ಸಂಬಂಧವನ್ನು ಕಲ್ಪಿಸಿರುತ್ತಾರೆ. ಅವನು ಈ ಆಧ್ಯಾತ್ಮಿಕ ಜಗತ್ತಿಗೆ ಗಾಯತ್ರಿ ಮಂತ್ರವನ್ನು ಕಂಡುಹಿಡಿದು ನೀಡಿದ ಎಂಬ ವಿಚಾರ ಚಾಲ್ತಿಯಲ್ಲಿದೆ. ಅದಕ್ಕೆ ಸಮಾಜವು ಕೃತಜ್ಞತಾ ಸಮರ್ಪಣೆಯ ರೂಪದಲ್ಲಿ ಜಪ ಪೂರ್ವದಲ್ಲಿ ಅವನ ನಾಮಸ್ಮರಣೆ ಮಾಡುತ್ತಿದೆ. ಹಾಗಿದ್ದಲ್ಲಿ ಈ ಗಾಯತ್ರಿ ಎಂದರೇನು? ನಿಜವಾಗಿಯೂ ಇದು ಮಂತ್ರವೇ? ಅದನ್ನು ವಿಶ್ವಾಮಿತ್ರ ಹೇಗೆ ಕಂಡುಹಿಡಿದ? ಈ ವಿಶ್ವಾಮಿತ್ರ ಯಾರು? ಎಂಬ ವಿಚಾರ ವಿಮರ್ಷೆ ಮಾಡೋಣ.ಮುಖ್ಯವಾಗಿ ಗಾಯತ್ರಿ ಎಂದು ಹೇಳುವುದು ಮಂತ್ರವಲ್ಲ, ಅದು ಒಂದು ಛಂದಸ್ಸು. ರಾಗಮಾಲಿಕೆಯ ಪ್ರಕಾರ ಗಾಯತ್ರಿಯಲ್ಲದೆ ಅನುಷ್ಟುಪ್, ತ್ರಿಷ್ಟುಪ್, ಪಂಕ್ತಿ, ಜಗತೀ ಇತ್ಯಾದಿ ನಾನಾ ಛಂದಸ್ಸುಗಳಿವೆ. ಹಾಗೆಯೇ ಗಾಯತ್ರಿಯೂ ಕೂಡ ಒಂದು ಛಂದೋ ಪ್ರಕಾರವೇ ವಿನಃ ಮಂತ್ರ ಪ್ರಕಾರವಲ್ಲ. ಈಗ ಪ್ರಚಲಿತವಿರುವ ಋಗ್, ಯಜು, ಸಾಮ, ಅಥರ್ವ ವೇದಗಳು; ಬ್ರಾಹ್ಮಣ, ಅರಣ್ಯಕ, ಉಪನಿಷತ್ತುಗಳನ್ನು ಹುಡುಕಿದಾಗ ಸಾವಿರ ಸಾವಿರ ಸಂಖ್ಯೆಯ ಮಂತ್ರಗಳು ಸಿಗುತ್ತವೆ. ಹಾಗೆಯೇ ಈ ಗಾಯತ್ರಿ ಎಂದು ನಾವು ಏನು ಜಪಿಸುತ್ತವೆ, ಆ ಮಂತ್ರವೂ ಕೂಡ. ಈಗ ನಾವು ಜಪಿಸುತ್ತಿರುವ ಗಾಯತ್ರಿ ಮಂತ್ರ " ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ " ಈ ಮಂತ್ರವು ಋಗ್ವೇದದ ೩ನೇ ಅಷ್ಟಕ, ೩ನೇ ಮಂಡಲ, ೪ನೇ ಅಧ್ಯಾಯ, ೬೨ನೇ ಸೂಕ್ತದ, ೧೦ನೇ ಮಂತ್ರವಾಗಿರುತ್ತದೆ.ಈ ಮಂತ್ರವು ಒಂದು ಯುಗ್ಮದೇವತಾಕವಾದ ಮಂತ್ರವಾಗಿರುತ್ತದೆ. ಇದೇ ಅಲ್ಲದೆ ಯಜು, ಸಾಮ ಹಾಗೂ ಅಥರ್ವದಲ್ಲೂ ಈ ಮಂತ್ರವು ಕಂಡುಬರುತ್ತದೆ. ಸಾಕ್ಷಾತ್ ಬ್ರಹ್ಮ ಮುಖೋದ್ಗೀತವಾದ ಈ ಮಂತ್ರವು ಯಾರ ಸೃಷ್ಟಯೂ ಅಲ್ಲ ಮತ್ತು ಈಗಿನ ವಿಶ್ವಾಮಿತ್ರ ಮಂಡಲವು ಹಿಂದೆ ಗೃತ್ಸಮದ ಮಂಡಲವೆಂದೇ ಇತ್ತು. ಹಾಗಿದ್ದ ಮೇಲೆ ವಿಶ್ವಾಮಿತ್ರನಿಗೆ ಈ ಪಟ್ಟ ಎಲ್ಲಿಂದ ಬಂತು? ಹೇಗೆ ಬಂತು? ಕಾರಣವಿದೆ. ವಿಶ್ವಾಮಿತ್ರನು ತನ್ನ ತಪಃ ಶಕ್ತಿಯಿಂದ ಈ ಗಾಯತ್ರಿ ಛಂದಸ್ಸಿನ ಛಂದೋಸೂತ್ರವನ್ನು ಅಭ್ಯಸಿಸಿ ಆ ಛಂದೋಸೂತ್ರದಂತೆ ಆ ಮಂತ್ರಾಧಿಷ್ಠಾನ ದೇವತೆಯ ಸಾಕ್ಷಾತ್ಕಾರ ಹೊಂದಲು ಸಾಧ್ಯ ಎಂದು ಕಂಡುಹಿಡಿದು, ತತ್ಕಾರಣದಿಂದ ವಿಶ್ವಾಮಿತ್ರನಿಗೆ ಈ ಮಂತ್ರದ ದ್ರಷ್ಟಾರ ಎಂದು ಹೇಳುವುದು. ಇಲ್ಲಿ ಇನ್ನೊಂದು ವಿಚಾರ ಉದ್ಭವಿಸುತ್ತದೆ. ಗಾಯತ್ರಿ ಛಂದಸ್ಸಿನ ಸಾವಿರಾರು ಮಂತ್ರಗಳು ವೇದದಲ್ಲಿದ್ದರೂ, ಆಯಾಯ ಮಂತ್ರಗಳ ಅಧಿಷ್ಠಾತೃವಾಗಿ ಬೇರೆ ಬೇರೆ ದೇವತೆಗಳಿದ್ದರೂ ಈ ಮಂತ್ರವನ್ನೇ ಏಕೆ ವಿಶ್ವಾಮಿತ್ರನು ಅನುಷ್ಠಾನಕ್ಕೆ ಆರಿಸಿದ? ಅವನ ಉದ್ದೇಶವೇನು? ಎಂಬ ಜಿಜ್ಞಾಸೆ ಮೂಡುತ್ತದೆ. ಹಾಗಾಗಿ ಮುಖ್ಯವಾಗಿ ವಿಶ್ವಾಮಿತ್ರ ಯಾರು ಎಂದು ವಿವೇಚಿಸೋಣ.

ವಿಶ್ವಾಮಿತ್ರನ ಜನನ ವಿಚಾರವಾಗಿ ವಿವೇಚಿಸಿದಾಗ ಈತನು ಒಬ್ಬ ಚಂದ್ರವಂಶದ ಕ್ಷತ್ರಿಯ ರಾಜ, ಅವನ ವಂಶದಲ್ಲಿ ಹಿರಿಯನೊಬ್ಬನು ಕುಶಿಕನೆಂಬುವವನು ರಾಜನಗಿದ್ದಾಗ ಮಹಾ ಪ್ರಜಾಪೀಡಕನೂ, ಅತೀ ಕ್ರೂರಿಯೂ, ಸದಾ ದುರಾಲೋಚನಾಪರನೂ ಆಗಿದ್ದನು. ಅವನ ನಿಜನಾಮಧೇಯ ಲೋಮಶನೆಂದಿದ್ದರೂ ಸಹಾ ಕು = ಕೆಟ್ಟ, ಶಿಕ = ಸಂಚು; ಸದಾ ಕೆಟ್ಟ ಆಲೋಚನೆ ಮಾಡುವನಾಗಿದ್ದರಿಂದ ಕುಶಿಕನೆಂಬ ಹೆಸರೇ ಪ್ರಸಿದ್ಧವಾಯಿತು. ಅವನಿಂದ ಮುಂದೆ ಆ ವಂಶಸ್ಥರಿಗೆ ಕುಶಿಕ ವಂಶಸ್ಥರು ಅಥವಾ ಕೌಶಿಕರು ಎಂಬುದು ಚಾಲ್ತಿಯಲ್ಲಿ ಬಂದಿತು. ಆ ಚಂದ್ರವಂಶದಲ್ಲಿ ಗಾಧೀ ಎಂಬ ರಾಜನು ರಾಜ್ಯಭಾರ ಮಾಡತ್ತಿದ್ದ. ಆ ಕಾಲದಲ್ಲಿ ಹೈಹಯರು, ಕಿರಾತೀಯರು, ಪಾರ್ವತೇಯರು ಎಲ್ಲರೂ ಕ್ಷತ್ರಿಯ ಕುಲದವರಾದರೂ ನಿಸ್ತೇಜಿಗಳಾಗಿ ನಿರ್ಬಲರಾಗಿದ್ದರು. ಸದಾ ಬ್ರಾಹ್ಮಣರೊಂದಿಗೆ ಜಗಳ ಕಾಯುತ್ತಿದ್ದರು.

ದೈವ ಬ್ರಾಹ್ಮಣ ಪೀಡಕರಾದ ಇವರಿಗೆ ಬ್ರಹ್ಮ ತೇಜಸ್ಸಿನ ಮುಂದೆ ಸೋಲೇ ಖಚಿತವಾಯಿತು. ಆಗ ನಾವೂ ಕೂಡ ತೇಜಸ್ವಿಗಳಾಗಿ ಪ್ರಪಂಚದಲ್ಲಿ ಚಕ್ರಾಧಿಪತ್ಯವನ್ನು ಸ್ಥಾಪಿಸಬೇಕೆಂಬ ಹೆಬ್ಬಯಕೆಯೇ ಇ ಕುಟಿಲ ಕ್ಷತ್ರಿಯರದಾಗಿತ್ತು. ಆದರೆ ಯಾವುದೇ ಮಾರ್ಗದಿಂದ ಪ್ರಯತ್ನಿಸಿದರೂ ಜಯ ಸಿಗುತ್ತಿರಲಿಲ್ಲ. ಬ್ರಾಹ್ಮಣರು ಅಸ್ತ್ರವಿಧ್ಯಾ ರಹಸ್ಯವನ್ನು ಬಿಟ್ಟು ಕೊಡುತ್ತಿರಲಿಲ್ಲ. ಅದಕ್ಕಾಗಿ ಮೇಲೆ ಉದಾಹರಿಸಿದ ನಾನಾ ಕ್ಷತ್ರಿಯರು ಸೇರಿ ಬ್ರಹ್ಮ ತೇಜಸ್ಸನ್ನು ಅಪಹರಿಸುವ ಒಂದು ಸಂಚನ್ನು ಈ ಕುಶೀಕ ವಂಶೋದ್ಭವನಾದ ಗಾಧೀಯ ನೇತೃತ್ವದಲ್ಲಿ ತಯಾರಿಸಿದರು.

ಆ ಕಾಲದಲ್ಲಿ ಭೃಗು ವಂಶದವನಾದ ಋಚೀಕನೆಂಬ ಋಷಿಯು ಮಹಾ ತಪಸ್ವಿಯಾಗಿ, ಸದಾ ರುದ್ರಾನುಷ್ಠಾನ ನಿರತನಾಗಿ ಏಕಾದಶರುದ್ರರು ಸದಾ ಋಚೀಕನಿಂದ ಪೂಜಾಪೇಕ್ಷೆಯನ್ನು ಹೊಂದುವ ಮಟ್ಟಕ್ಕೆ ಏರಿ ಭೂಲೋಕದ ಪ್ರತ್ಯಕ್ಷ ಪರಮೇಶ್ವರ ಎಂದೆನಿಸಿಕೊಂಡಿದ್ದನು. ಈ ಕಾರಸ್ಥಾನಯುತರಾದ ಕ್ಷತ್ರಿಯರು ಆತನೊಂದಿಗೆ ಸಖ್ಯವನ್ನು ಬೆಳೆಸಿ, ಅವನಿಂದ ಬ್ರಹ್ಮ ತೇಜಸ್ಸನ್ನು ಅಪಹರಿಸುವ ಪ್ರಯತ್ನ ಮಾಡಿದರು. ಅದು ಹೇಗೆಂದರೆ, ಆ ಗಾಧಿಗೆ ಸತ್ಯವತಿ ಎಂಬ ಮಗಳಿದ್ದಳು. ತನ್ನ ಮಗಳನ್ನು ಈ ಋಚೀಕನಿಗೆ ಕೊಡುವುದರ ಮುಖೇನ ಬಾಂಧವ್ಯ ಬೆಳೆಸಿ, ಕಾಲಾನಂತರದಲ್ಲಿ ಅವನ ತಪಃ ಪ್ರಭಾವವನ್ನು ಅಪಹರಿಸಬಹುದು ಎಂದು ಚಿಂತಿಸಿದ ಅವರು ಋಚೀಕನನ್ನು ಆಹ್ವಾನಿಸಿ ದಾನ ರೂಪವಾಗಿ ತನ್ನ ಮಗಳನ್ನು ಕೊಟ್ಟನು. ಮತ್ತೆ ಮಗಳನ್ನು ಗಂಡನ ಮನೆಗೆ ಕಳುಹಿಸುವ ಕಾಲದಲ್ಲಿ ಈ ತನ್ನ ಸಂಚಿನ ಯಾವುದೇ ಗೌಪ್ಯತೆಯನ್ನು ಮಗಳಿಗೂ ಕೂಡ ಬಿಟ್ಟುಕೊಡದೆ, ಮಗಳ ಜೊತೆಯಲ್ಲಿ ಕಳುಹಿಸಿ ಕೊಡಬೇಕಾದ ದಾಸದಾಸಿಯರ ಜೊತೆಯಲ್ಲಿ ಸಂಚಿನ ರೂವಾರಿಯಾಗಿ ತನ್ನ ಹೆಂಡತಿಯನ್ನೇ ಕಳುಹಿಸಿಕೊಡುತ್ತಾನೆ. ತಿಳುವಳಿಕೆಯಲ್ಲಿ ಚಿಕ್ಕವಳಾದ ಸತ್ಯವತಿಗೆ ಆಶ್ರಮ ಜೀವನದಲ್ಲಿ ಯಾವುದೇ ಪರಿಶ್ರಮವಿಲ್ಲದಿದ್ದರೂ ತಾಯಿಯ ಸಹಾಯದೊಂದಿಗೆ ಆಕೆಯೂ ಅಲ್ಲದೆ ಋಚೀಕನೂ ಕೂಡ ಒಂದು ರೀತಿಯಲ್ಲಿ ಇವರ ಅಂಕೆಗೆ ಒಳಪಟ್ಟಂತಾಯಿತು.

ಅಳಿಯ ಮಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡ ಆ ಮಹಾತಾಯಿ, ಕಾಲಾನಂತರದಲ್ಲಿ ಮಗಳಿಗೆ ಮದುವೆಯಾಗಿ ಇಷ್ಟು ವರ್ಷವಾಯಿತು ಮಕ್ಕಳಾಗಲಿಲ್ಲ, ನಿನ್ನ ಗಂಡನನ್ನು ಕೇಳು, ಹಾಗೆಯೇ ನಮ್ಮ ವಂಶ ಬೆಳೆಯುವುದಕ್ಕಾಗಿ ಒಂದು ಗಂಡು ಮಗುವನ್ನು ಅನುಗ್ರಹಿಸಲು ಹೇಳು ಎಂದು ಎತ್ತಿಕಟ್ಟಿದಳು. ತಾಯಿಯ ಕಾರಸ್ಥಾನದ ಅರಿವಿಲ್ಲದ ಮಗಳು, ರುದ್ರಾನುಷ್ಠಾನ ಮಾಡುತ್ತಿರುವ ಸಂದರ್ಭದಲ್ಲಿ ಗಂಡನೊಂದಿಗೆ ತನ್ನ ಬೇಡಿಕೆಯನ್ನಿಡುತ್ತಾಳೆ. ಹೋಮ ಮಾಡುತ್ತಿರುವ ಕಾಲದಲ್ಲಿ ಅಗ್ನಿಧಾತಳಾದ ಪತ್ನಿಯು ಕೇಳಿದ್ದನ್ನು ನಿರಾಕರಿಸುವಂತಿಲ್ಲ, ಇಂತಹ ಇಕ್ಕಟ್ಟಿನಲ್ಲಿ ಸಿಕ್ಕಿದ ಋಚೀಕನು ಅನಿವಾರ್ಯವಾಗಿ ಈ ಕಾರಸ್ಥಾನದ ಅರಿವಾದರೂ ಕೂಡ ಉಮಾಮಹೇಶ್ವರರಿಗೆ ಅರ್ಪಿಸಬೇಕಾಗಿದ್ದ ಹವಿಸ್ಸನ್ನೇ ಪಿಂಡ ರೂಪದಲ್ಲಿ ಹೆಂಡತಿಯ ಕೈಯಲ್ಲಿ ಕೊಡುತ್ತಾನೆ. ಕೊಡುವಾಗ ಮೊದಲ ಪಿಂಡವನ್ನು ನೀನೇ ತಿನ್ನು, ಈ ಎರಡನೆಯ ಪಿಂಡವನ್ನು ನಿನ್ನ ತಾಯಿಗೆ ಕೊಡು ಎಂದು ಆದೇಶಿಸುತ್ತಾನೆ. ಹೀಗೆ ಯಾಗ ಸಮಾಪ್ತಿ ಮಾಡಿ ಮನಃಶಾಂತಿಗಾಗಿ ತಪಸ್ಸಿಗೆ ತೆರಳುತ್ತಾನೆ.

ಈ ಸತ್ಯವತಿಯು ಆ ಪಿಂಡಗಳನ್ನು ತೆಗೆದುಕೊಂಡು ಹೋಗಿ ತಾಯಿಗೆ ವಿಚಾರವನ್ನು ತಿಳಿಸುತ್ತಾಳೆ. ಆಗ ಆ ತಾಯಿಯು ತನ್ನ ಮತ್ತು ಮಗಳ ಪ್ರಸಾದ ರೂಪವಾದ ಪಿಂಡವನ್ನು ದೇವರ ಮುಂದೆ ಇಟ್ಟು ಸ್ನಾನ ಮಾಡುವ ನೆಪದಿಂದ ಮಗಳನ್ನು ನದಿಗೆ ಕರೆದೊಯ್ಯುತ್ತಾಳೆ. ಮಗಳಿಂದ ಮುಂಚಿತವಾಗಿಯೇ ಸ್ನಾನವನ್ನು ಮುಗಿಸಿ ಕ್ಷಿಪ್ರವಾಗಿ ಆಶ್ರಮಕ್ಕೆ ಬಂದು ಋಚೀಕನಿಂದ ಮಂತ್ರಿಸಲ್ಪಟ್ಟು ತನಗಾಗಿ ಕೊಟ್ಟ ಪಿಂಡವನ್ನು ಬಿಟ್ಟು ಮಗಳಿಗಾಗಿ ಕೊಟ್ಟ ಪಿಂಡವನ್ನು ತಿನ್ನುತ್ತಾಳೆ. ಈ ವಿಚಾರವನ್ನರಿಯದ ಸತ್ಯವತಿಯು ಆ ಪಿಂಡವನ್ನು ತಿನ್ನುತ್ತಾಳೆ. ಮುಂದೆ ಕಾಲಾನಂತರದಲ್ಲಿ ರುದ್ರಾಂಶದಿಂದ ಕೂಡಿದ ಕ್ಷಾತ್ರ ತೇಜೋಭಿಭೂತವಾದ ಪಿಂಡ ಭಕ್ಷಣ ಮಾಡಿದ ಸತ್ಯವತಿಯು ತನ್ನ ಗರ್ಭದ ಉರಿಯನ್ನು ತಾಳಲಾರದೆ ತಪಸ್ಸಿಗೆ ತೆರಳಿದ ಗಂಡನನ್ನು ಹುಡುಕಿ ಆತನಲ್ಲಿ ಮೊರೆಯಿಡುತ್ತಾಳೆ. ಆಗ ದಿವ್ಯದೃಷ್ಠಿಯಿಂದ ವಾಸ್ತವಾಂಶವನ್ನು ತಿಳಿದ ಋಚೀಕನು ಪ್ರಮಾದವಾಯಿತು, ನಿನ್ನ ತಾಯಿಯು ನಿನಗೆ ಮೋಸ ಮಾಡಿದಳು. ನಿನ್ನ ಹೊಟ್ಟೆಯಲ್ಲಿ ಕ್ಷತ್ರಿಯ ವಂಶಕುಟಾರಕನೂ, ಮಹಾ ಕ್ರೂರಿಯೂ ಆದ ಮಗ ಹುಟ್ಟುತ್ತಾನೆ. ನಾನು ನಿನಗೆ ಅಭಿಮಂತ್ರಿಸಿಕೊಟ್ಟ ಬ್ರಹ್ಮತೇಜಸ್ಸಿನ ಪಿಂಡವನ್ನು ನಿನ್ನ ತಾಯಿ ಭುಂಜಿಸಿದ್ದಾಳೆ. ಅವಳ ಹೊಟ್ಟೆಯಲ್ಲಿ ಮಹಾಜ್ಞಾನಿಯಾಗಿಯೂ, ಅತ್ಯಂತ ಪರಾಕ್ರಮಿಯೂ, ತೇಜಸ್ವಿಯೂ ಆದ ಮಗನು ಹುಟ್ಟುತ್ತಾನೆ. ಆದರೆ ಮುಂದೆ ಅವನು ಬ್ರಾಹ್ಮಣನಾಗುತ್ತಾನೆ, ಮಹಾತಪಸ್ವಿಯೂ ಆಗುತ್ತಾನೆ. ಗರ್ಭಮೂಲದಲ್ಲೇ ಕುಟಿಲತೆಯು ಬೆರೆತಿರುವುದರಿಂದ ಮಹಾ ಕೋಪಿಷ್ಟನೂ, ಮೂರ್ಖನೂ ಆಗುತ್ತಾನೆ ಎಂದು ಹೇಳುತ್ತಾನೆ.

ಋಚೀಕನ ಈ ಮಾತನ್ನು ಕೇಳಿದ ಸತ್ಯವತಿಯು ದುಃಖದಿಂದ ಗೋಳಿಡುತ್ತಾ ಈ ಕ್ಷಾತ್ರ ಪಿಂಡದ ತೇಜಸ್ಸನ್ನು ಭರಿಸುವ ಶಕ್ತಿ ನನಗಿಲ್ಲ, ಅಂತಹಾ ಕ್ರೂರಿ ಮಗನು ನನಗೆ ಬೇಡವೂ ಬೇಡ, ಹುಟ್ಟಲೇ ಬೇಕೆಂತಿದ್ದರೆ ಮುಂದೆ ನನ್ನ ಮಗನಿಂದ ಹುಟ್ಟಲಿ, ಹಾಗೆಯೇ ಅನುಗ್ರಹಿಸಿ ಎಂದು ಬೇಡಿಕೊಂಡಳು. ಆಗ ಅದಕ್ಕೆ ಸಂಬಂಧಪಟ್ಟ ಶಾಂತಿಕರ್ಮಗಳನ್ನು ಋಚೀಕನು ಆಚರಿಸಿದ. ಅದೇ ಅವನ ಮೊಮ್ಮಗ ಪರಶುರಾಮ ಜನಿಸಲು ಕಾರಣವಾಯಿತು. ಇತ್ತ ಸತ್ಯವತಿಯ ತಾಯಿ ನುಂಗಿದ ಪಿಂಡವು ದಿನೇ ದಿನೇ ಬ್ರಹ್ಮ ತೇಜೋಭಿಭೂತವಾದ ಶುಕ್ಲ ಪಕ್ಷದ ಚಂದ್ರನಂತೆ ಬೆಳೆದು ಒಂದು ಗಂಡು ಶಿಶುವಿಗೆ ಜನ್ಮ ನೀಡುತ್ತಾಳೆ, ಆ ಮಗುವಿಗೆ ವಿಶ್ವರಥ ಎಂದು ನಾಮಕರಣ ಮಾಡುತ್ತಾರೆ. ಕುಶೀಕ ವಂಶೋದ್ಭವನಾದುದರಿಂದ ವಿಶ್ವರಥನು ಕೌಶಿಕ ಎಂದೂ ಪ್ರಸಿದ್ಧನಾಗುತ್ತಾನೆ. ಹೀಗೆ ಕುಟಿಲ ಕಾರಸ್ಥಾನದಿಂದ ಪಾರ್ಥಿವ ಜೀವಕ್ಕೆ ಬಂದ ಈ ಪಿಂಡವು ಕೆಟ್ಟ ಆಲೋಚನೆ, ಕೆಟ್ಟ ನಡೆ, ಅತಿ ಚಪಲತ್ವ, ಪ್ರಪಂಚದ ಎಲ್ಲವೂ ಬೇಕೆಂಬ ಆಸೆ, ಛಲ, ಸಿಟ್ಟು, ಅಹಂಕಾರಗಳೇ ಮೂರ್ತೀಭವಿಸಿರುವ ಸ್ವರೂಪವೇ ವಿಶ್ವಾಮಿತ್ರನ ಪೂರ್ವಾಶ್ರಮವಾಗಿರುತ್ತದೆ.

ಇಂತಹಾ ವಿಶ್ವಾಮಿತ್ರನು ವಿಶ್ವರಥನೆಂಬ ಸಾರ್ಮಭೌಮನು, ಚೈತ್ರ ಯಾತ್ರಾ ಉದ್ದೇಶದಿಂದ ಪ್ರಪಂಚ ಪರ್ಯಟನೆ ಮಾಡುತ್ತಿರುವ ಕಾಲದಲ್ಲಿ ವಸಿಷ್ಠಾಶ್ರಮಕ್ಕೆ ಬರುತ್ತಾನೆ. ಅಲ್ಲಿ ವಸಿಷ್ಠ ಮಹರ್ಷಿಯು ಹೋಮಧೇನುವಾದ ನಂದಿನಿಯ ಸಹಾಯದಿಂದ ಆ ವಿಶ್ವಾಮಿತ್ರನ ಸಕಲಸೇನಾ ಸಹಿತವಾಗಿ ಎಲ್ಲರಿಗೂ ರಾಜಾತಿಥ್ಯವನ್ನು ನೀಡುತ್ತಾನೆ. ಈ ಕಾಡಿನ ಮಧ್ಯದಲ್ಲಿ ಇಷ್ಟೊಂದು ಅಕ್ಷೋಹಿಣಿ ಸಂಖ್ಯೆಯ ಸೈನ್ಯಕ್ಕೆ ರಾಜಾತಿಥ್ಯವನ್ನು ನೀಡುವಂತಹಾ ಸಫಲತೆ ಈ ಬಡ ಹಾರವನಿಗೆ ಹೇಗೆ ಬಂದಿತು ಎಂದು ಚಿಂತಿಸಿದ ವಿಶ್ವಾಮಿತ್ರನು ಇದಕ್ಕೆಲ್ಲಾ ಕಾರಣ ನಂದಿನಿ ಎಂಬ ಧೇನು ಎಂದು ತಿಳಿದನು. ಸ್ವಭಾವತಃ ಅತೀ ಚಪಲತ್ವನಾದ ವಿಶ್ವಾಮಿತ್ರನು, ವಸಿಷ್ಠರಲ್ಲಿ ಆ ಧೇನುವನ್ನು ತನಗೆ ಕೊಡಲು ಕೇಳಲು, ಅವರು ನಿರಾಕರಿಸಿದರು. ಅಲ್ಲಿಂದ ಬಲ ಪ್ರಯೋಗ ಆರಂಭ. ವಿಶ್ವಾಮಿತ್ರನ ಬಲವು ಪ್ರಯೋಜನಕ್ಕೆ ಬರಲಿಲ್ಲ. ಪುನಃ ಪುನಃ ಪ್ರಯತ್ನಿಸಿದ ವಿಶ್ವಾಮಿತ್ರನು ತಪೋ ಮಾರ್ಗವನ್ನು ಹಿಡಿದು, ಮಂತ್ರಾಸ್ತ್ರಗಳನ್ನು ಪಡೆದು ವಸಿಷ್ಠರ ಮೇಲೆ ಪ್ರಯೋಗಿಸಿದ, ಎಲ್ಲವೂ ಬ್ರಹ್ಮದಂಡದ ಮುಂದೆ ನಿಷ್ಕ್ರಿಯವಾಯಿತು. ಆಗ ಕ್ಷತ್ರಿಯ ತೇಜಸ್ಸು ನಿಷ್ಪ್ರಯೋಜಕ ಎಂದು ತಿಳಿದನು. ಬ್ರಹ್ಮತೇಜಸ್ಸೇ ಹೆಚ್ಚಿನ ಬಲವೆಂದು ತಿಳಿದ ವಿಶ್ವಾಮಿತ್ರನು ವಾಸನಾಬಲದಿಂದ ಪರಮೇಶ್ವರನನ್ನು ಒಲಿಸಿ ಶಿವನಿಂದ ಬ್ರಹ್ಮಾಸ್ತ್ರವನ್ನು ಪಡೆದ. ಅದನ್ನೂ ತಂದು ವಸಿಷ್ಠರ ಮೇಲೆ ಪ್ರಯೋಗಿಸಿದ. ಆಗಲೂ ಜಗ್ಗದ ವಸಿಷ್ಠರು ಆ ಬ್ರಹ್ಮಾಸ್ತ್ರವನ್ನೇ ನುಂಗಿಬಿಟ್ಟರು. ಆದರೆ ಪ್ರಯೋಗದಿಂದಾದ ಕ್ಷೋಭೆಯು ಪ್ರಪಂಚವನ್ನೆಲ್ಲಾ ದಹಿಸುತ್ತಿರಲು, ಪ್ರತ್ಯಕ್ಷನಾದ ಪರಮೇಶ್ವರನು ವಿಶ್ವಾಮಿತ್ರನನ್ನು ನಿಂದಿಸಿ, ಪ್ರಪಂಚವೆಲ್ಲಾ ನಾಶವಾಗುತ್ತಿದೆ, ಯಾರಿಗೂ ಲಭ್ಯವಾಗದೆ ಬ್ರಹ್ಮ ತೇಜಸ್ಸು ಲುಪ್ತವಾಗುತ್ತಿದೆ. ಬ್ರಹ್ಮಾಸ್ತ್ರ ನಾಶ ಮಾಡಿದ ದೋಷ ನಿನ್ನ ಮೇಲೆ ಬರುತ್ತದೆ. ನೀನು ಪುನಃ ನಿನ್ನ ತಪಃ ಶಕ್ತಿಯಿಂದ ಬ್ರಹ್ಮಾಸ್ತ್ರವನ್ನು ಸಿದ್ಧಿಸಿ ಲೋಕಮುಖಕ್ಕೆ ಕೊಡು ಎಂದು ಆದೇಶಿಸುತ್ತಾನೆ.


ಶಿವನಾಜ್ಞೆಯನ್ನು ಪಡೆದ ವಿಶ್ವಾಮಿತ್ರನು ಚಿಂತನಾಶೀಲನಾಗಿ, ಬ್ರಹ್ಮ ತೇಜಸ್ಸನ್ನು ಅನ್ವೇಷಿಸುವುದಕ್ಕೆ ಪ್ರಾರಂಭಿಸುತ್ತಾನೆ. ಎಲ್ಲಾ ತೇಜಸ್ಸಿಗೂ ಮೂಲವಾದ ಸೂರ್ಯನೇ ಬ್ರಹ್ಮ ತೇಜಸ್ಸಿಗೂ ಮೂಲವಿರಬಹುದೆಂದು ಚಿಂತಿಸಿದ ವಿಶ್ವಾಮಿತ್ರನು ಸವಿತೃ ದೇವತಾನುಷ್ಠಾನಕ್ಕೆ ಉಪಕ್ರಮಿಸುತ್ತಾನೆ. ಆದರೆ ಪ್ರಯತ್ನದಲ್ಲಿ ಯಶಸ್ವಿಯಾಗುವ ಲಕ್ಷಣವನ್ನು ಕಾಣದ ವಿಶ್ವಾಮಿತ್ರನು ಲೋಕ ಸಂಚಾರಕ್ಕೆ ತೆರಳುತ್ತಾನೆ. ಹಲವಾರು ಕ್ಷೇತ್ರ ಸಂದರ್ಶನ ಮಾಡುತ್ತಾ ಕೆಲವಾರು ವರ್ಷಗಳು ಕಳೆದಾಗ ವಿಶ್ವಾಮಿತ್ರನಲ್ಲಿ ಸಾತ್ವಿಕ ಗುಣ ವೃದ್ಧಿಯಾಗುತ್ತದೆ. ಆಗ ವಿಶ್ವಾಮಿತ್ರನಿಗೆ ಜ್ಞಾನೋದಯವಾಗುತ್ತದೆ. ವೇದಮಂತ್ರದ ಮೂಲವಾದಂತಹ ಛಂದಸ್ಸಿನ ಅರಿವಾಗುತ್ತದೆ. ಅದರಲ್ಲಿರುವ ಗಾಯತ್ರಿ ಎಂಬ ಛಂದಸ್ಸನ್ನು ತೆಗೆದು ಆ ಛಂದಸ್ಸಿನ ನಾದಾನುಸಂಧಾನ ಮಾಡಿದಾಗ ಸವಿತ್ರಾತ್ಮಕವಾದ ಬ್ರಹ್ಮತೇಜಸ್ಸು ಗೋಚರಿಸುತ್ತದೆ. ಅದಕ್ಕಾಗಿ ವಿಶ್ವಾಮಿತ್ರನು ಋಗ್ವೇದದ ೩ನೇ ಅಷ್ಟಕದ, ೩ನೇ ಮಂಡಲದ, ೪ನೇ ಅಧ್ಯಾಯದ, ೬೨ನೇ ಸೂಕ್ತವನ್ನು ಉಪಯೋಗಿಸಿಕೊಂಡ. ಅದು ಯುಗ್ಮ ದೇವತಾತ್ಮಕವಾದ್ದರಿಂದ ಅನಿವಾರ್ಯವಾಗಿ ಸವಿತ್ರಾತ್ಮಕವಾದ ಬ್ರಹ್ಮತೇಜಸ್ಸು ವಿಶ್ವಾಮಿತ್ರನಿಗೆ ಒಲಿಯಿತು. ಅದೇ ಬ್ರಹ್ಮಾಸ್ತ್ರ ಎಂದು ಪರಿಗಣಿಸಲ್ಪಟ್ಟಿತು. ಆಗ ವಿಶ್ವಾಮಿತ್ರನು ಬ್ರಾಹ್ಮಣನಾದ.


"ಈ ಗಾಯತ್ರಿ ಮಂತ್ರವನ್ನು ಎಲ್ಲರೂ ಅನುಷ್ಠಾನಿಸಿ " ಎಂದು ಲೋಕಕ್ಕೆ ಹುಡುಕಿಕೊಟ್ಟ. ಅದೂ ಅಲ್ಲದೆ ಅಲ್ಲಿಯವರೆಗಿನ ತನ್ನ ತಪಃ ಶಕ್ತಿಯನ್ನೆಲ್ಲಾ ಧಾರೆ ಎರೆದ. "ಯಾರು ಈ ಮಂತ್ರಾನುಷ್ಠಾನವನ್ನು ಮಾಡುವರೋ ಅವರಿಗೆ ಪ್ರಾಪಂಚಿಕ ಪಾತಕಗಳಾವುದೂ ಅಂಟದಿರಲಿ " ಎಂದು ಅನುಗ್ರಹಿಸಿದ. ಮುಂದೆ ಅದೇ ಸವಿತೃ ದೇವತಾತ್ಮಕವಾದ ಬ್ರಹ್ಮಾಸ್ತ್ರವೆಂದು ಲೋಕದಲ್ಲಿ ಪರಿಗಣಿಸಲ್ಪಟ್ಟಿತು. ಆಗ ಆ ಮಂತ್ರವಿರುವ ಭಾಗದ ದೃಷ್ಠಾರನಾದ ಗೃತ್ಸಮದನು ಆ ಭಾಗವನ್ನು ಪ್ರತ್ಯೇಕಿಸಿ ವಿಶ್ವಾಮಿತ್ರ ಮಂಡಲವೆಂದು ನಾಮಕರಣ ಮಾಡಿದ, ಬ್ರಹ್ಮನು ಪ್ರತ್ಯಕ್ಷನಾಗಿ ವಿಶ್ವಾಮಿತ್ರನಿಗೆ ಬ್ರಹ್ಮರ್ಷಿ ಪಟ್ಟವನ್ನು ಕೊಟ್ಟ. ಆದರೆ ಅಲ್ಲಿಯವರೆಗೆ ವಸಿಷ್ಠರಂತಹಾ ಪರಮ ಸಾತ್ವಿಕರೊಂದಿಗೇ ಸೆಣಸಾಡಿದ ಕಾರಣ, ಅವರು ಬ್ರಹ್ಮರ್ಷಿ ಎಂದು ಘೋಷಿಸಿದರೆ ಮಾತ್ರ ಆ ಪಟ್ಟವು ತನಗೆ ಭೂಷಣ ಎಂದು ನುಡಿದ. ಅದಕ್ಕೆ ವಸಿಷ್ಠರೂ ತಥಾಸ್ತು ಎಂದರು. ವಿಶ್ವಾಮಿತ್ರನ ತ್ಯಾಗವನ್ನು ದೇವತೆಗಳು, ಋಷಿಮುನಿಗಳು ಕೊಂಡಾಡಿ, ಅಲ್ಲಿಯವರೆಗೆ ವಿಶ್ವರಥವಾಗಿದ್ದ ಗಾಧಿಪುತ್ರ ಕೌಶಿಕನಿಗೆ " ವಿಶ್ವಾಮಿತ್ರ " ಎಂದೇ ನಾಮಕರಣ ಮಾಡಿದರು.

ಹೀಗೆ ಗಾಯತ್ರಿ ಮಂತ್ರವನ್ನು ವಿಶ್ವಾಮಿತ್ರನು ಲೋಕಮುಖಕ್ಕೆ ಕೊಟ್ಟ ಎಂಬ ಪ್ರತೀತಿ ಚಾಲ್ತಿಯಲ್ಲಿ ಬಂದಿತು. ಮುಖ್ಯವಾಗಿ ವಿಶ್ವಾಮಿತ್ರನು ಮಂತ್ರ ದೃಷ್ಟಾರನೇ ವಿನಃ, ಮಂತ್ರ ಜನಕನಲ್ಲ. ಗಾಯತ್ರಿ ಎಂಬುದು ಛಂದಸ್ಸೇ ವಿನಃ ಮಂತ್ರವಲ್ಲ. ನಾವು ಬಳಸುವುದು ಗಾಯತ್ರಿ ಛಂದಸ್ಸಿನ ಒಂದು ಮಂತ್ರ ಎಂಬುದನ್ನು ಗಮನದಲ್ಲಿಡಬೇಕು. ದೇವತೆಯು ಲಿಂಗ ಸೂಚಕವಲ್ಲ, ಕೇವಲ ತೇಜಸ್ಸು! ಇದಿಷ್ಟು ಪರಮ ಸತ್ಯ. ಈ ರೀತಿಯಲ್ಲಿ ಆಧ್ಯಾತ್ಮ ಜಗತ್ತಿನಲ್ಲಿ ಚಾಲ್ತಿಯಲ್ಲಿರುವ ಅಜ್ಞಾನಿಯನ್ನು ಸುಜ್ಞಾನಿಯನ್ನಾಗಿ ಮಾಡತಕ್ಕ ಮಹಾರಹಸ್ಯವೊಂದನ್ನು ಕಂಡುಹಿಡಿದ ವಿಶ್ವಾಮಿತ್ರನ ಚರಿತ್ರೆಯ ಮುಖೇನ ನಾವೇನು ಅರಿತುಕೊಳ್ಳಬಹುದು ಎಂದರೆ ಕಾಮಾದಿ ಅರಿಷಡ್ವರ್ಗಗಳನ್ನು ಜಯಿಸಿದರೆ ಮಾತ್ರ ಯಾವುದೇ ಒಬ್ಬ ಮನುಷ್ಯನು ಬ್ರಾಹ್ಮಣನಾಗಬಹುದು, ಬ್ರಹ್ಮರ್ಷಿಯಾಗಬಹುದು ಎಂಬ ಸತ್ಯ ಗೋಚರಿಸುತ್ತದೆ. ಇಲ್ಲಿಗೆ ಈ ಲೇಖನವನ್ನು ಮುಗಿಸುತ್ತಾ, ಗಾಯತ್ರಿ ರಹಸ್ಯವನ್ನು ಇನ್ನೊಂದು ಲೇಖನದಲ್ಲಿ ನೀಡಲಾಗುವುದು.

4 comments:

 1. Please mention source/references!

  ReplyDelete
 2. ವಿಶ್ವಾಮಿತ್ರನ ಹಾಗು ಗಾಯತ್ರಿ ಮಂತ್ರದ ಮಹತ್ವದ ಬಗ್ಗೆ ನಮಗೆ ತಿಳಿಸಿದ್ದಕ್ಕೆತುಂಬಾ ಧನ್ಯವಾದಗಳು. ಕೆಲವರು ತಾವು ಸಂಧ್ಯಾವಂದನೆಯಲ್ಲಿ ಅಭಿವಾದಯೆ ಮಂತ್ರ ಹೇಳುವಾಗ ವಿಶ್ವಾಮಿತ್ರ ಗೋತ್ರ, ವಸಿಷ್ಠ ಗೋತ್ರ ಎಂದು ಹೇಳುತ್ತಾರೆ. ಇದರರ್ಥ, ಇವರು ಆಯಾಯ ಋಷಿಗಳ ವಂಶಸ್ಥರಾ?

  ReplyDelete
  Replies
  1. Please go through following link to know more about Gotra: http://veda-vijnana.blogspot.in/2013/04/blog-post_9.html

   Delete