Monday, 21 April 2014

ಪುರಾಣಗಳ ವೇದಮೂಲ

ಪ್ರಪಂಚದ ಜೈವಿಕ ಸರಪಳಿಯಲ್ಲಿರುವ 84 ಲಕ್ಷ ಜೀವಪ್ರಭೇದಗಳಲ್ಲಿ ಬೌದ್ಧಿಕತೆಯಲ್ಲಿ ಮಾತ್ರ ಮನುಷ್ಯನು ಶ್ರೇಷ್ಠನೆಂದು ಅನೂಚಾನವಾಗಿ ಹೇಳಲ್ಪಟ್ಟಿದೆ. ಆದರೆ ಭೌತಶಾಸ್ತ್ರದ ರೀತಿ ಭ್ರಮೆ ಹಾಗೂ ಭ್ರಾಂತಿಗಳಿಂದ ಮನುಷ್ಯನೂ ಹೊರಗಿರುವುದಿಲ್ಲ. ಅದನ್ನೇ ಅಧ್ಯಾತ್ಮದಲ್ಲಿ ಮಾಯೆ ಎಂದರು. ಹೀಗಿರುವಾಗ ಮಾನವ ರಚಿತ ಗ್ರಂಥದಿಂದ ಪೂರ್ಣ ಜ್ಞಾನ ದೊರೆಯಲು ಕಷ್ಟಸಾಧ್ಯ. ವೇದವೆಂಬುದು ಮನುಷ್ಯ ಅಥವಾ ಈಶ್ವರ ಅರ್ಥಾತ್ ಯಾವುದೇ ದೇವರು ಎಂದು ಹೇಳುವ ಒಡೆಯನಿಂದ ರಚಿಸಲ್ಪಟ್ಟದ್ದಲ್ಲ. ಪರಮೇಶ್ವರ ನಿಶ್ವಾಸವನ್ನಿತ್ಯಾ ಅನಾದಯೋನಂತಾ ಅಪೌರುಷೇಯಃ ಎಂದು ವರ್ಣಿಸಿದ್ದಾರೆ. ಪ್ರಳಯದಲ್ಲಿ ಪರಮೇಶ್ವರನ ಅಂತರ್ಹಿತವಾದ ಅದು ಈಶ್ವರನ ನಿಶ್ವಾಸ ರೂಪದಲ್ಲಿ ಹೊರಬರುತ್ತದೆ. ಮೊದಲು ಬ್ರಹ್ಮನು ವೇದಗಳ ಜ್ಞಾನವನ್ನು ಪಡೆಯುತ್ತಾನೆ. ನಂತರ ಋಷಿಗಳು ನಾದನುಸಂಧಾನ ಪೂರ್ವಕ ತಪಸ್ಸನ್ನಾಚರಿಸೇ, ತಮ್ಮ ಸಮಕ್ಷದಲ್ಲಿ ತದನುರೂಪವಾದ ವೇದದ ಅಂಶವು ಪ್ರಾದುರ್ಭವಿಸುತ್ತದೆ. ಆ ಋಷಿಗಳು ತಮ್ಮ ವಿಧ್ಯಾರ್ಥಿಗಳಿಗೆ ವೇದ ಶಿಕ್ಷಣ ನೀಡುತ್ತಾರೆ. ಹೀಗಿ ಸ್ವಶಿಷ್ಯ, ಪ್ರಶಿಷ್ಯ, ಅವರ ಶಿಷ್ಯರಿಗೆ ಅವಿಚ್ಛಿನ್ನವಾಗಿ ಗುರು-ಶಿಷ್ಯ ಪರಂಪರೆಯಲ್ಲಿ ವೇದಗಳ ಪ್ರಚಾರವಾಗುತ್ತಾ ಬರುತ್ತದೆ.

          ಹುಟ್ಟಿದ ಶಿಷುವು ಸಂಸ್ಕಾರ ಪಡೆಯುತ್ತಾ ಬಾಲಕನಾಗಿ, ದ್ವಿಜನಾಗಿ, ಉಪನೀತನಾಗಿ, ಬ್ರಹ್ಮಚರ್ಯ ಪೂರ್ವಕ ಚಿರಕಾಲ ಗುರುಗ್ರಹದಲ್ಲಿ ಉಷಿತವಾಗಿ ವೇದಾಭ್ಯಾಸ ನಿರತನಾಗುತ್ತಾನೆ. ವೇದಾರ್ಥ ತಿಳಿಯುವ ಸಲುವಾಗಿ ಬ್ರಾಹ್ಮೀ ಮೂಲದ ಅಕ್ಷಾನುಸಂಧಾನ ಪೂರ್ವಕ ಶಿಕ್ಷಾ, ಕಲ್ಪ, ವ್ಯಾಕರಣ, ನಿರುಕ್ತ, ಜ್ಯೋತಿಷ, ಛಂದಸ್ಸುಗಳೆಂಬ ಷಟ್ಶಾಸ್ತ್ರಗಳ ಅಧ್ಯಯನವನ್ನೂ ಮಾಡುತ್ತಾನೆ. ಬಹಳ ಪರಿಶ್ರಮದಿಂದ ವೇದಗಳ ವಾಸ್ತವಿಕ ಅರ್ಥವು ವೇದ್ಯವಾಗುತ್ತದೆ. ಅದರೊಂದಿಗೆ ನಿಷ್ಕಾಮ ಭಾವನಾ ಪೂರ್ವಕ ವೈಧಿಕ ಕರ್ಮಾನುಷ್ಠಾನಗಳಿಂದ ಅಂತಃಕರಣ ನೈರ್ಮಲ್ಯ ಉಂಟಾಗಿ, ನಿರ್ಮಲ ಮನಸ್ಸಿನಿಂದ ವಾಸ್ತವಿಕ ಬ್ರಹ್ಮಜ್ಞಾನ ಉಂಟಾಗಲು ಸಾಧ್ಯವಾಗುತ್ತದೆ. 

          ವ್ಯಾಸ ವಾಲ್ಮೀಕಿ ಇತ್ಯಾದಿ ಮಹರ್ಷಿಗಳು ಅಲೌಕಿಕ ತಪಸ್ಸನ್ನಾಚರಿಸಿ ಪರಮಾತ್ಮನ ಅನುಕಂಪದಿಂದ ವೇದಗಳ ಯಥಾರ್ಥಮರ್ಥವನ್ನು ತಿಳಿದು ಅದನ್ನು ಲೋಕಕ್ಕೆ ಪರಿಚಯ ಮಾಡುವ ಸಲುವಾಗಿ ಸನ್ನದ್ಧರಾಗುತ್ತಾರೆ. ಸಾಮಾನ್ಯವಾಗಿ ಎಲ್ಲರಿಗೆ ಬಹಳ ಕಾಲ ಗುರುಕುಲದಲ್ಲಿರಲು ಸಾಧ್ಯವಾಗದಿರಬಹುದು. ಪ್ರಾಪಂಚಿಕ ವ್ಯಾಪಾರದ ನಡುವೆ ವೇದಾಸಾರವನ್ನು ತಿಳಿಯಲು ಬೇಕಾದ ಬ್ರಹ್ಮಚರ್ಯ-ತಪಃ-ಸ್ವಾಧ್ಯಾಯ-ಅನುಷ್ಠಾನೇತ್ಯಾದಿ ಕಠಿಣ ಪರಿಶ್ರಮ ಮಾಡಲು ಕಷ್ಟಸಾಧ್ಯ. ಅಂಹಾ ಜನರಿಗೆ ವೇದಗಳ ನಿಗೂಢಾರ್ಥ ತಿಳಿಯಲು ಸರಸ, ಸರಳ, ಸುಬೋಧ, ಸುರುಚಿ ಪೂರ್ಣವಾಗಿ ಮತ್ತು ಓಘ ಸಹಿತವಾಗಿ ಮೂಲದಲ್ಲಿ ಬ್ರಾಹ್ಮೀ ಭಾಷೆಯಲ್ಲಿ ಇತಿಹಾಸ ಪುರಾಣಗಳನ್ನು ದಾಖಲಿಸಿರುತ್ತಾರೆ. 

          ಈ ಪುರಾಣಗಳ ಅಧ್ಯಯನದ ವಿನಃ ವೇದಾರ್ಥ ತಿಳಿಯುವುದು ಬಹಳ ಕಷ್ಟವೆಂದರು. ಪ್ರಪಂಚದ ಅತ್ಯಂತ ಪುರಾತನ ಕೃತಿಯೆಂದರೆ ಋಗ್ವೇದ ಎಂಬುದು ನಿರ್ವಿವಾದ. ಸ್ವಯಂ ನಾರಾಯಣನೇ ವ್ಯಾಸ ರೂಪದಲ್ಲಿ ವೇದಗಳನ್ನು ವಿಸ್ತರಿಸಿ ಪುರಾಣಗಳಾಗಿ ರಚಿಸಿದನು ಎಂಬುದು ಉಕ್ತಿ. ಗೂಢವಾಗಿ ವರ್ಣಿತ ಅರ್ಥವನ್ನು ಮೋದ, ಆಮೋದ, ಪ್ರಮೋದಗಳ ಪೂರ್ವಕ ರಂಜನೀಯವಾಗಿ ಆಖ್ಯಾನ, ಉಪಾಖ್ಯಾನ, ಗಾಥ, ಕಲ್ಪಶುದ್ಧಿಗಳೆಂಬ ಚಕ್ರಗಳಲ್ಲಿ ಪುರಾಣಾರ್ಥ ವಿಶಾರದರಾದ ವ್ಯಾಸರು ಪುರಾಣ ಸಂಹಿತೆಗಳನ್ನು ರಚಿಸಿರುತ್ತಾರೆ. 

          ವೇದವಿಜ್ಞಾನದ ಮನೋರಂಜಕ ಆಖ್ಯಾನದಲ್ಲಿ ಪರಿಣತಿ ಹೊಂದಿದ ಪುರಾಣಗಳಲ್ಲಿ ಅಪೂರ್ವ ಕೌಶಲ್ಯವಿದೆ. ವೇದಗಳ ವಾಸ್ತವಿಕ ರಹಸ್ಯ ತಿಳಿಯಲು ಪ್ರಾಚೀನಾಖ್ಯಾನ, ಉಪಾಖ್ಯಾನ ಇತ್ಯಾದಿ ವರ್ಣನೆಯಲ್ಲಿ ವಿವಿಧ ಉಪದೇಶಗಳನ್ನು ನೀಡಿ, ವಿಭಿನ್ನ ವಿಷಯಗಳನ್ನು ಉತ್ಕಟ ಲಾಲಸೆಯಿಂದ ಪರಿಗ್ರಹಿಸಲು, ಅಂತಃಕರಣವನ್ನು ಭಗವನ್ಮುಖವಾಗಿಸಲು, ಐತಿಹಾಸಿಕ ಘಟನೆಗಳನ್ನು ಉಲ್ಲೇಖಿಸುವ ಅವಶ್ಯಕತೆಯಂತಹಾ ವಿಶೇಷ ವಿಚಾರಗಳ ವರ್ಣನೆಯು ಪುರಾಣಗಳಲ್ಲಿದೆ. ಸರ್ವ ಪೌರಾಣಿಕರ ಕಥೆಗಳ ಮೂಲವು ವೇದವೇ ಆಗಿದೆ. ಪುರಾಣದಲ್ಲಿ ಲಿಖಿತ ವಿಚಾರವು ಯಾವುದೋ ವೇದ ಮಂತ್ರದ ವಿಸ್ತೃತ ವ್ಯಾಖ್ಯಾನವಾಗಿರುತ್ತದೆ. ಉದಾಹರಣೆಗೆ ಋಗ್ವೇದದ ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್ ಇತ್ಯಾದಿಯಾಗಿ ವರ್ಣಿತ ವಿಚಾರವು ವಾಮನ ಪುರಾಣದಲ್ಲಿ ವಿಸ್ತಾರವಾಗಿ ವರ್ಣಿತವಾಗಿದೆ. ಆದರೆ ಆಖ್ಯಾಯಿಕೆಯನ್ನು ಸವಿಸ್ತಾರವಾಗಿ ವರ್ಣಿಸುವುದು ವೇದದ ಉದ್ದೇಶವಲ್ಲ. ವೇದದ ಯಾವುದೋ ಒಂದು ವಿಚಾರದ ಉದ್ದೇಶವನ್ನೋ, ಸಂಕ್ಷೇಪವಾಗಿ ನಿರ್ದಿಷ್ಟ ಕಥೆಯನ್ನೋ ಪುರಾಣದಲ್ಲಿ ವಿಸ್ತೃತ ಆಖ್ಯಾಯಿಕ ರೂಪದಲ್ಲಿ ವರ್ಣಿಸಲಾಗಿರುತ್ತದೆ. ಸಾಧಾರಣ ಮನುಷ್ಯರಲ್ಲಿ ಕುತೂಹಲ ಪೂರ್ವಕ ಭಗವದ್ಭಕ್ತ್ಯುತ್ಪಾದನೆಯು ಪೌರಾಣಿಕ ಹಾಗೂ ಆಖ್ಯಾಯಿಕರ ಪ್ರಮುಖ ಲಕ್ಷ್ಯವಾಗಿದೆ.

          ಶ್ರೀಮದ್ಭಾಗವತಾದಿ ಪುರಾಣ ಗ್ರಂಥಗಳಲ್ಲಿ ಜಗನ್ಮಾತೆ, ಗಿರಿರಾಜನ ಕುಮಾರಿ, ಭಗವತಿ, ಪಾರ್ವತಿಯು ಉಮಾ ರೂಪದಲ್ಲಿ ಜನ್ಮಗ್ರಹಿಸಿದ ಕಥೆಯು ಕಂಡುಬರುತ್ತದೆ. ಕೇನೋಪನಿಷತ್ತಿನಲ್ಲಿ ಬ್ರಹ್ಮವಿಧ್ಯೆಯಿಂದ ಹೈಮವತಿಯ ಉಮಾರೂಪದ ಆವಿರ್ಭವವು ವರ್ಣಿತವಾಗಿದೆ ಸ ತಸ್ಮಿನ್ನೇವಾಕಾಶೇ ಸ್ತ್ರಿಯಮಾಜಗಾಮ ಬಹುಶೋಭಮಾನಾಮುಮಾಂ ಹೈಮವತೀಮ್|”. ಅಥರ್ವವೇದದಲ್ಲಿ (ಕಾಂ 8. ಸೂ. 3,4,5) ಮಹಾರಾಜ ಪೃಥುವಿನ ಪೃಥ್ವೀದೋಹನವು ಸಂಕ್ಷೇಪವಾಗಿ ವರ್ಣಿತವಾಗಿದೆ. ಅದನ್ನೇ ಭಾಗವತದಲ್ಲಿ ವಿಸ್ತರಿಸಿದ್ದಾರೆ. ವೇದವು ಉಪಾಖ್ಯಾನದ ಮೂಲ ಉದ್ದೇಶವುಳ್ಳದ್ದಲ್ಲ. ಸಂಧಿ ವಿಶೇಷಗಳಲ್ಲಿ ವೇದವು ಉದಾಹರಣೆಯ ರೂಪದಲ್ಲಿ ಉಪಾಖ್ಯಾನವೀಯುತ್ತದೆ. ಆದರೆ ಪುರಾಣಗಳಲ್ಲಿ ಉಪಾಖ್ಯಾನಗಳು ಸಂಘಟಿತವಾಗಿ ಸಮಾವೇಶಗೊಂಡಿರುತ್ತವೆ. ಇಲ್ಲಿ ಒಂದು ಉಪಾಖ್ಯಾನವೇ ಬಹುವಿಸ್ತಾರವಾಗಬಹುದು. ವೇದ ಪುರಾಣಗಳು ಒಂದೇ ಸನಾತನ ಧರ್ಮದ ಅಭಿವೃದ್ಧಿಗಾಗಿ, ಲೋಕಕಲ್ಯಾಣಕ್ಕಾಗಿ ವಿಭಿನ್ನ ಕಾಲಘಟ್ಟದಲ್ಲಿ ಆವಿರ್ಭವಿಸಿದ ಮಹಾಗ್ರಂಥಗಳೆಂದು ಮಾನ್ಯತೆ ಪಡೆದಿವೆ. ವೇದ ಪುರಾಣಗಳಲ್ಲಿ ಭಿನ್ನತೆಯಿಲ್ಲ. ವಿಭಿನ್ನತೆಯು ಉಭಯ ವರ್ಣನಾ ಪದ್ಧತಿಗಳಲ್ಲಿ ಕಂಡುಬರಬಹುದು. ಆದರೆ ವೇದವೆಂಬ ಮೂಲ ಸೂತ್ರವನ್ನು ಅರಿತವರಿಗೆ ಭಿನ್ನತೆಯನ್ನರಿಯುವುದು ಸುಲಭ. ಹಾಗಾಗಿ ವೇದಾರ್ಥ ವಿವರಣೆಯ ಉದ್ದೇಶದಲ್ಲಿ ಪುರಾಣ-ವೇದೈಕ್ಯತೆಯು ನಿರ್ವಿವಾದವೆಂದು ಸಿದ್ಧವಾಗುತ್ತದೆ.

ಸ್ವಂತ ಅಧ್ಯಯನ ವರದಿ
ಹೇಮಂತ್ ಕುಮಾರ್ ಜಿ.

2 comments:

  1. There is so much to be discarded in the puranas compared to Vedas. Simply calling it as science does not do justice.

    ReplyDelete
    Replies
    1. Yes, the injections done by many commentators & foreign invaders has to be discarded. But Puranaas are originally compiled in Brahmi language by Pauraanikaas with 10 rules. They try to elaborate the concepts of Vedas by adding colors such that common people can understand it. Don't read the commentaries. There is a particular way to study the Puranas according to its Dasha Lakshanaas. Else it is felt useless.

      Delete