Friday, 25 April 2014

ಮಾಘ ಮಾಸ, ಶಿವರಾತ್ರಿ, ಶಿಶಿರ ಋತು ವರ್ಣನೆ

ಅಂಗದವದು ಚಂದ್ರಕಲೆಯು ಚತುರ್ದಶಿಯೆಂಬರು
ಇಂದುವಿನ ಅಂದಕಾಣದ ರಿಕ್ತ ತಿಥಿಯದು
ಪ್ರಪಂಚಕೆ ವ್ಯವಹಾರದಲಿ ಅಶುಭವೆಂಬರು
ಶಂಕರನು ಶುಭಕರನು ಆತ್ಮೋನ್ನತಿಗೆ 
ಶಿವರಾತ್ರಿ ಪ್ರತಿಮಾಸ ವ್ರತವದು 
ಚಂದಿರನ ಪ್ರೀತಿಯಂತ್ಯದಿಂ ಭದ್ರದಾರಂಭವನಕ ಉಪಾಸಿತವು ||  ||

ಶಿವನುಡಿ:-

ಮಾಘ ಕಾಲವೇ ಪುಣ್ಯಕರ ಲೋಕಾನಂದಕರ ಈ 
ಮಾಘ ಪುಷ್ಕರವೆಂದು ಪೇಳಲು ಮಾತೆ ಪುಣ್ಯಕರ
ಮಾಘದಾ ಆದಿಯಲಿ ನೈಮಿಶಾರಣ್ಯದಲಿ ಯಾಗಾಗ್ನಿ ತಂಪಾಗಿ ಚಂದ್ರನೂ ನೆರೆಯುವನೂ |
ಮಾಘವೇ ಪೇಳುತಿದೆ ಅಘವೆಮಗೆ ಬೇಡ ಮಾ +
ಅಘವೆಂಬ ಶಬ್ದಾರ್ಥವೇ ಮಾಘದ ಅಂತರಾರ್ಥವು ನಿಜ
ಮಾಘದಲಿ ಸಾಧಿಸದ ಸಾಧನೆಯಿಲ್ಲ ಅಲ್ಲಿ ನಾ ಮೃತ್ಯುಂಜಯನಾದೆ ಕೇಳು ಲಲನೆ ||  ||

ಪುಣ್ಯಕರ ಮಾಸವದು ಈ ಮಾಸದಲಿ ತೀರ್ಥಯಾತ್ರೆಯಲಿ
ಪುಣ್ಯಪ್ರದ ಫಲವು ವಿಶೇಷ ಸಂಕ್ರಾಂತಿ ಘಟಿಸಲಾನುಗ್ರಹ
ಪುಣ್ಯವನಂತವೈ ಮಾಘದ ಮಹಿಮೆ ವರ್ಣಿಸಲಸದಳವು ಶಿವ ತಾ ಮೃತ್ಯುಂಜಯನಾದ ಕಾಲಾ ||
ಪುಣ್ಯವನಂತ ಕೋಟಿ ಲಭಿಸುವುದು ಸ್ನಾನದಲಿ ಹರಿನಾಮ ಸ್ಮ
ರಣೆಯೇ ತೀರ್ಥಸ್ನಾನವೇ ಆರ್ತ ಭೋಜನ ಸ್ಮಾರ್ತ
ಪುಣ್ಯಕರ್ಮಗಳೆಲ್ಲ ಅತುಲ ಅನಂತಫಲದಾಯಕವು ಕೇಳೆಂಬೆ ಲಲನೆ ||  ||

ಇಲ್ಲೊಂದು ರಹಸ್ಯವಡಗಿದೆ ಕೇಳು ಈ ಭವವು
ಇನ್ನೆಂದು ಬೇಡವೆಂಬಾ ಲೋಗರಿಗೆ ಮಾಘವೆಂಬಾ
ಇದೊಂದೆ ನಾಮಸ್ಮರಣೆ ಸಾಕೈ ಮಾ+ಘ ದೊಳು ಸಕಲ ಅಘ ನೀಗುವುದೂ |
ಇಂದು ಈ ಲೋಗರರಿಯದೆ ಅಘವ ಬೇಕೆಂದು
ಎಂದೆಂದು ಬೇಡುವರು ಅಘವವರ ಬಿಡದು
ಎಂದಿಗೂ ಮುಕ್ತಿ ಸಂಪದವಿಲ್ಲ ಸುಖವಿಲ್ಲ ಈ ಅಜ್ಞಾನಿಲೋಗರಿಗೆ ಬುದ್ಧಿ ಪೇಳಲಾರೂ ||  ||

ಇದುವೆ ಕೇಳೈ ಶಿಶಿರದಲಿ ಮಾಘ ಫಾಲ್ಗುಣರ ವೃತ್ತಿ
ಯದು ಶತಭಿಷವು ಆದಿಯಾಗಿಹುದು ರೇವತ್ಯಂತ
ವಿದು ಶಿಶಿರದಾಕಾಲ ಕೋಶಗಳು ಬೆಳೆಯುವವು ದೇಹದಲಿ ಶೇಷನಾಸನದೀ
ಇದು ಕಾಲವಿದು ಕಾಲ ವಿದುವೆ ಕಾಲವು ಭೂತ
ವಿದು ಭವ್ಯವಿದು ವರ್ತಮಾನವೆಂದೆಂಬ ಕಾಲ
ವಿದುವೇ ಮಾರ್ತಾಂಡನೆಂದೆಂಬ ಮೃತ್ಯುಹರ ಕಾಲ ಜೀವಿಗಳಿಗೆ ಮರುಜನ್ಮವೀವ ಕಾಲಾ ||  ||

No comments:

Post a Comment