Tuesday, 8 April 2014

ನಮ್ಮ ಪುರಾತನ ಭಾರತೀಯ ರಾಜ್ಯಾಂಗ ವ್ಯವಸ್ಥೆ - ಒಂದು ಪರಿಚಯ - ಭಾಗ ೨

ಎಂಬ ಲೇಖನದಲ್ಲಿ ನಮ್ಮ ಪುರಾತನ ಭಾರತೀಯ ರಾಜ್ಯಂಗ ವ್ಯವಸ್ಥೆಯ ಸಮಗ್ರ ಆಡಳಿತ ರೂಪುರೇಷೆಯ ಕೋಷ್ಟಕ, ಚಕ್ರವರ್ತಿಯಿಂದ ಆರಂಭಿಸಿ ಒಟ್ಟು ವಿಭಾಗಗಳಲ್ಲಿ 16x16 ಒಂದು ಭಾಗದಲ್ಲಿ ಅರಸು + ಬೀಡು + ಗುತ್ತು ಮನೆಯ ಪರಸ್ಪರ ಪೂರಕ ಆಡಳಿತ, ರಾಜಾದಾಯ + ದೇವಸ್ವಾದಾಯ + ಸುಂಕ ಎಂಬ 3 ರೀತಿಯ ತೆರಿಗೆ ಪದ್ಧತಿ, ಚಕ್ರಾಧಿಪತಿ + ಮಹಾಮಂಡಲೇಶ್ವರರು + ಮಂಡಲೇಶ್ವರರು + ಅರಸು ಮನೆತನ + ಬೀಡಿನ ಮನೆತನ + ಗುತ್ತಿನ ಮನೆತನ ಎಂಬ 6 ವಿಭಾಗಗಳ ಸ್ಥೂಲ ವಿವರಣೆಯನ್ನು ನೀಡಲಾಗಿತ್ತು.

ಇವುಗಳಲ್ಲಿ ಮುಖ್ಯವಾಗಿ ಆಡಳಿತ ಸೂತ್ರದ ಮೂಲವಾದ ಗುತ್ತಿನ ಮನೆ ಮತ್ತು ಗುತ್ತು ಗಡಿ ಹಿಡಿದವರ ಸಂಬಂಧಿಯಾಗಿ ಲೇಖನ ಸಿದ್ಧಪಡಿಸಿರುತ್ತೇನೆ. ಇಲ್ಲಿ ಮಖ್ಯ ಉದ್ದೇಶವು ನಮ್ಮ ಪುರಾತನವಾದ ಆಳ್ವಿಕೆಯು ಎಷ್ಟು ಅರ್ಥಬದ್ಧ, ಸುಖಮಯ, ಸಾಮಾನ್ಯ ಮಧ್ಯಮ ವರ್ಗದ ಜೀವನಕ್ಕೆ ಎಷ್ಟು ಭದ್ರತೆ ಇತ್ತು ಎಂದು ಬಿಂಬಿಸುವುದು ಇದರ ಉದ್ದೇಶವಾಗಿರುತ್ತದೆ.

ಜನರ ಭಾರವನ್ನು ಹೊರುವವರು ಎಂಬರ್ಥದಲ್ಲಿ "ಗುತ್ತು" ಶಬ್ದ ಬಳಕೆಯಲ್ಲಿದೆ. ಭಾರವಾಹಕ ಅಂದರೆ ಮುಂಚೆ ತಲೆ ಹೊರೆಯಲ್ಲಿ ಸಾಮನ ಸಾಗಣೆ ಇದ್ದ ಭಾಗದಲ್ಲಿ ಗೆಟ್ಟಣೆ, ಕಟ್ಟೆ, ಗುತ್ತಿನ ಕಂಬ ಹೀಗೆ ಮಧ್ಯದಾರಿಯಲ್ಲಿ ವ್ಯವಸ್ಥೆ ಇರುತ್ತಿತ್ತು. ಅಲ್ಲಿ ತಲೆಯ ಎತ್ತರಕ್ಕೆ ಕಟ್ಟೆ ಇರುತ್ತಿತ್ತು. ಅಲ್ಲಿ ಹೊರೆಯನು ಇಳಿಸಿ ಸುಧಾರಿಸಿ ಪುನಃ ಹೊತ್ತು ಮುಂದೆ ನಡೆಯುತ್ತಿದ್ದರು. ಅದನ್ನು "ಗುತ್ತು" ಎಂದು ಗುರುತಿಸುತ್ತಿದ್ದರು. ಹಾಗೇ ಜನರ ಎಲ್ಲಾ ಜೀವನ ಭಾರವನ್ನು ತಾನು ಆಧರಿಸಿ ಸಮಾಜಕ್ಕೆ ಸುಖ ನೀಡುವವರು "ಗುತ್ತಿನ ಮನೆಯವರು". ಹೀಗೆ ಜನ ಹಿತಕ್ಕಾಗಿಯೇ ಗುತ್ತಿನ ಗಡಿ ಹಿಡಿಯುವ ಹಿರಿಯ ತನ್ನೆಲ್ಲಾ ಕುಟುಂಬ, ಸತಿ, ಸುತರಿಂದ ಕೂಡ ಆಧ್ಯಾತ್ಮಕವಾಗಿ ಹೊರಗುಳಿದು ಪೂರ್ತಾ ಸಮಾಜಕ್ಕಾಗಿಯೇ ತನ್ನನ್ನು ತೊಡಗಿಸಿಕೊಳ್ಳುತ್ತಾರೆ. ಅಂತಹವರನ್ನು "ಗುತ್ತಿನ ಹಿರಿಯರು" ಎಂದು ಕರೆಯುವುದು ವಾಡಿಕೆ. ಮೇಲಧಿಕಾರಿಯಾಗಿ ರಾಜ್ಯಾಂಗ ವ್ಯವಸ್ಥೆಯಲ್ಲಿ ೬ನೆಯ ಸ್ಥಾನವಾದರೂ ಸಾಮಾಜಿಕವಾಗಿ ತಮ್ಮ ಒಳ್ಳಯತನದಿಂದ ಮೊದಲನೆಯವರಾದವರು.

ತುಂಬಾ ವಿಶಾಲವಾದ ಭರತಖಂಡದಲ್ಲಿ ಸಾಮಾಜಿಕ ಅಸ್ಥಿತ್ವ ಸಕಲರಿಗೂ ಅವರವರ ಸ್ಥಾನಬದ್ಧತೆ ಗೌರವ ಒದಗಿಸಿ ಕೊಟ್ಟವರು ಗುತ್ತಿನವರು. ಭಾರತದೇಶದಲ್ಲೆಲ್ಲಾ ವ್ಯಾಪಿಸಿರುವ ಆಡಳಿತ ಪದ್ಧತಿ ಸಮರ್ಥವೂ, ನ್ಯಾಯಯುತವೂ, ಬದ್ಧವೂ ಆಗಿತ್ತು ಎಂಬುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ.

ಹಿಂದೆ ಬ್ರಿಟಿಷರು ಆಳುತ್ತಿದ್ದ ಕಾಲದಲ್ಲಿ ಡೂಪ್ಲೆ ಎಂಬ ವೈಸ್ರಾಯ್ ಭಾರತಕ್ಕೆ ಬಂದನು. ಆಗಿನ ಕಾಲದ ಜಮೀನ್ದಾರಿ ಪದ್ಧತಿ ಪ್ರಪಂಚದ ಎಲ್ಲಾ ಕಡೆಯೂ ಬಳಕೆಯಲ್ಲಿದ್ದ ಕಾಲವದು. ಸಾಮಾನ್ಯ ವರ್ಗದಿಂದ ಬಂದಿದ್ದ ಆತನು ಸಹಜವಾಗಿ ಜಮೀನ್ದಾರಿಕೆಯ ವಿರುದ್ಧ ಸಹಜವಾಗಿಯೇ ಸಿಟ್ಟು ಇತ್ತು. ಅವನ ಆಡಳಿತ ಕಾಲದಲ್ಲಿ ದೇಶದಲ್ಲಿ ಆಂಶಿಕ ಬರಗಾಲವಿತ್ತು. ಹಾಗಾಗಿ ಒಂದು ಆಜ್ಞೆ ಹೊರಡಿಸಿದ. ಜಮೀನ್ದಾರರ ಮನೆಯ ಕಣಜದ ಧಾನ್ಯಗಳ ಮುಟ್ಟಗೋಲು. ಸೇನೆ ಸಮೇತನಾಗಿಯೇ ದಾಳಿ ಮಾಡುತ್ತಿದ್ದ ಕಲೆಕ್ಟರರು ಗ್ರಾಮಕ್ಕೆ ಬಂದಾಗ ಜಮೀನ್ದಾರರು ಹೇಳುತ್ತಿದ್ದುದ್ದು ನಮ್ಮ ಕಣಜ ತುಂಬಿದೆ. ಬೇಕಾದರೆ ತೆಗೆದುಕೊಂಡು ಹೋಗಿ. ಆದರೆ ಗೇಣಿ ಕಣಜವಿದೆ ಅದನ್ನು ಮುಟ್ಟಬೇಡಿ ಅದ ರೈತರ ಅನ್ನ ಎನ್ನುತ್ತಿದ್ದರು. ಜಮೀನ್ದಾರರೂ ಸ್ವಯಂ ಕೃಷಿ ಕೆಲಸ ಮಾಡುತ್ತಿದ್ದರು. ಒಂದೆರಡು ಕಣಜ ಬತ್ತ ಬೆಳೆಯುತ್ತಿದ್ದರು. ಉಳಿಕೆ ಜಮೀನು ಗೇಣಿಗೆ ಕೊಡುತ್ತಿದ್ದರು. ಅದರಿಂದ ಬಂದ ಆದಾಯ ರೈತರಿಗೇ ಮುಂದೆ ಸೂಕ್ತಾಸೂಕ್ತತೆ ಅರಿತು ಬಳಸುತ್ತಿದ್ದರು. ಇದನ್ನರಿತ ಡೂಪ್ಲೆ ತನ್ನ ಆದೇಶ ಹಿಂದೆ ಪಡೆದ. ಭಾರತೀಯ ಜಮೀನ್ದಾರರು ದೇವರಂತೆ ಎಂದ. ಸತ್ಯ ಪ್ರಾಮಾಣಿಕತೆಗೆ ಒಂದು ಜೀವಂತ ಉದಾಹರಣೆಯೆಂದ. ಹಾಗೇ ಅವರ ಸ್ನೇಹವನ್ನ ಬೆಳೆಸಿದ. ನಂತರ ತನ್ನ ಕುಹಕ ಬುದ್ಧಿಯಿಂದ ಅವರನ್ನೂ ಹಾಳು ಮಾಡಿದ, ಅದು ಇತಿಹಾಸ ಬಿಡಿ. ಜಮೀನ್ದಾರರೆಂದರೆ ಇಲ್ಲಿನ ಗುತ್ತಿನ ಮನೆಯವರು ಎಂದು ಕರೆಸಿಕೊಳ್ಳುವವರು. ಕೃಷಿ ಪ್ರಧಾನ ದೇಶದಲ್ಲಿ ಕಡ್ಡಾಯ ಕೃಷಿ ಪದ್ಧತಿ ಬಳಕೆಗೆ ತಂದ ಮೊದಲ ಜನರೆಂದರೆ ಗುತ್ತಿನವರು. ಈಗಿನ ೧೯೭೪ನೇ ಇಸವಿಯ ಟ್ರಚ್ನಲ್ ಟೆನೆನ್ಸಿ ಆಕ್ಟ್ ಪ್ರಕಾರ ಜಮೀನು ಪಡೆದ ಶೇ. ೪೦ ಭಾಗ ಜನರು ಭೂಮಿ ಮಾರಾಟ ಮಾಡಿಯೇ ಹಾಳು ಬಿಟ್ಟ ಜಮೀನು ವ್ಯರ್ಥ ಮಾಡಿದ್ದಾರೆ. ಆದರೆ ಆಗ ಕೃಷಿ ಜಮೀನ ಹೊಂದಿದ ರೈತ ಅಥವ ಗೇಣಿಗೆ ಪಡೆದ ರೈತ ಕೃಷಿ ಮಾಡದಿದ್ದರೆ ಅವನನ್ನ ಕಠಿಣ ಶಿಕ್ಷೆಗ ಗುರಿಪಡಿಸಲಾಗುತ್ತಿತ್ತು, ಅದು ಕಡ್ಡಾಯ ಕೃಷಿ ಕಾನೂನಿನಡಿಯಲ್ಲಿ. ಯಾರೇ ಕೃಷಿ ಭೂಮಿಯನ್ನು ಹೊಂದಿದ್ದರೂ ಅವರು ಹಾಳು ಬಿಡುವಂತಿಲ್ಲ. ಬಿಟ್ಟಲ್ಲಿ ಗುತ್ತಿನವರು ಮುಟ್ಟುಗೋಲು ಹಾಕಿಕೊಳ್ಳಬಹುದಿತ್ತು. ಈಗಲೂ ಅದೇ ಕಾನೂನು ಬಳಕೆಗೆ ಬಂದಲ್ಲಿ ದೇಶದ ಆಹಾರೋತ್ಪಾದನೆ ಕುಂಠಿತವಾಗುತ್ತಿರಲಿಲ್ಲ.

ಇಷ್ಟಲ್ಲದೆ ಮುಖ್ಯವಾಗಿ ಗುತ್ತಿನವರು ಅವರ ಪ್ರಾದೇಶಿಕ ಸಾಂಪ್ರದಾಯಿಕ ಕಲೆ, ಜಾನಪದೀಯ ಕಲೆ, ಆಟೋಟಗಳು, ಕೃಷಿಕರಿಗೆ ಉತ್ತೇಜನ, ಪಶುಸಂಗೋಪನೆ, ಆ ಸಂಬಂಧಿ ಬಹುಮಾನಗಳು, ಗೌರವಗಳನ್ನು ಕೊಟ್ಟು ಪುರಸ್ಕರಿಸಿ ಬೆಳೆಸುತ್ತಿದ್ದರು. ರಾಜಾದಾಯ, ದೇವಸ್ವ, ಸುಂಕಾದಿಗಳನ್ನು ಸಂಗ್ರಹಿಸಿ ಕ್ರಮಬದ್ಧ ವಿನಿಯೋಗ ಮಾಡುತ್ತಿದ್ದರು. ದೇವಾಲಯಗಳು, ಭೂತಾಲಯಗಳು, ಉತ್ಸವ, ನೇಮ ಇತ್ಯಾದಿಗಳನ್ನು ಶಾಸ್ತ್ರೀಯವಾಗಿ ನಡೆಸುತ್ತಿದ್ದರು. ಉತ್ತಮ ನ್ಯಾಯ ಚಾವಡಿ ನಿರ್ವಹಣೆ, ಸಾಂವಿಧಾನಿಕ ನ್ಯಾಯಮೀಮಾಂಸೆಯಂತೆ ನ್ಯಾಯದಾನ, ಗಡಿವಿವಾದಾದಿಗಳ ನಿರ್ವಹಣೆ, ಕಳ್ಳತನಾದಿಗಳ ನಿರ್ಮೂಲನ, ಆಚಾರ ಹೀನರಿಗೆ ಶಿಕ್ಷಾದಿಗಳನ್ನು ಗುತ್ತಿನ ಮನೆಯವರು ನಿರ್ವಹಿಸುತ್ತಿದ್ದರು. ದೂರದೇಶಗಳಿಂದ ಬರುವ ವ್ಯಾಪಾರಿಗಳಿಂದ ಕರಸಂಗ್ರಹಣೆ, ದೂರದೇಶದ ಯಾತ್ರಾರ್ಥಿಗಳಿಗೆ ಊಟೋಪಚಾರ, ಸಾಧುಸಂತರ ಸತ್ಕಾರಗಳು, ರಾಜಾಧಿಕಾರಿಗಳ ಊಟ ವಸತಿ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು. ವ್ಯವಸ್ಥಿತ ಗರಡಿ ಮನೆ ನಿರ್ವಹಣೆ ಮಾಡಿ ಸೈನಿಕ ಪೂರೈಕೆ ಮಾಡುತ್ತಿದ್ದರು. ಇನ್ನು ಆಡಳಿತಾತ್ಮಕ ಆಧ್ಯಾತ್ಮಿಕ ಶಕ್ತಿಯ ಬಗ್ಗೆ ತಿಳಿಯೋಣ. ಮೊದಲಾಗಿ ಈ ಕೆಲವು ಮೂಲ ದಾಖಲೆಗಳ ವಿವರಣೆ ನೋಡಿರಿ.ಗುತ್ತಿನವರ ಆಧ್ಯಾತ್ಮಿಕತೆಯೇನು?
ಮೊದಲಾಗಿ ಗುತ್ತಿನವರನ್ನು ಆಯ್ಕೆ ಮಾಡುವುದು ಬೀಡಿನವರು. ಒಂದು ಬೀಡಿನವರು ೧೬ ಮಂದಿ ಗುತ್ತಿನವರನ್ನು ಆಯ್ಕೆ ಮಾಡುತ್ತಾರೆ. ನಂತರ ಅವರ ವಂಶಪಾರಂಪರ್ಯವಗಿ ನಡೆಸಿಕೊಂಡು ಹೋಗಬಹುದು. ಆದರೆ ಗುತ್ತಿನ ಗಡಿಕಾರನಿಗೆ ಸಹೋದರಿ ಇರಲೇ ಬೇಕು. ಇದು ಗುತ್ತಿನ ನಿಯಮ. ಗಡಿಹಿಡಿದವನು ಸತ್ಯವಂತನೂ, ಪ್ರಾಮಾಣಿಕನೂ, ರಾಜಪ್ರೀತನೂ, ದೇವಬ್ರಾಹ್ಮರಣರಲ್ಲಿ ಗೌರವವಿಡುವವನೂ, ಸಕಲರನ್ನೂ ಏಕಭಾವದಿಂದ ನೋಡುವವನೂ ಆಗಿರಬೇಕು. ತನ್ನ ಸ್ವಂತಶ್ರಮದಿಂದ ಜೀವನ, ನಿತ್ಯ ಧರ್ಮದೇವತೆಗಳ ಪೂಜೆ, ಪಂಚಧೈವ ಆರಾಧನೆ, ನಿತ್ಯ ಚಾವಡಿ ಸಮಾರಾಧನೆ, ರಾಜಸ್ವ ಲೆಕ್ಕಪತ್ರ ಲೇಖನ, ಸುಂಕಾದಿ ಆದಾಯ ನಿರ್ವಹಣೆ, ನ್ಯಾಯಿಕ ಶಿಕ್ಷಾದಿಗಳ ಜಾರಿ. ಈ ಏಳರಲ್ಲಿ ಭಿನ್ನತೆಯಾಗದಂತೆ ತನ್ನ ಕೌಟುಂಬಿಕ ಜೀವನ ನಿರ್ವಹಣೆ. ಇವು ಕರ್ತವ್ಯಗಳು.

ಇದು ವಂಶ ಪಾರಂಪರ್ಯವಾದ್ದರಿಂದ ಗುತ್ತಿನವರು ತಾವು ಆರ್ಜಿಸಿದ ಆಸ್ತಿ ಒಂದು ಭಾಗವಾದರೆ ಅವರು ತಮ್ಮ ಸರಳ, ನಿಷ್ಕಾಪಟ್ಯ ಜೀವನದಿಂದ ಆರ್ಜಿಸಿದ ಪುಣ್ಯ ತಲತಲಾಂತರದಿಂದ ಹರಿದು ಬಂದು ಗಡಿಕಾರನಾದ ಮೇಲೆ ಒಬ್ಬ ದೇವತೆಯಂತೆಯೇ. ಹಾಗಾಗ ಕೆಲ ಆಹಾರ ಬದ್ಧತೆ, ನಿಯಮಬದ್ಧತೆಗಳೂ ಇರುತ್ತವೆ. ಅದರ ಮುಖ್ಯ ಉದ್ದೇಶ ನಿಯಮಪಾಲನೆ ದೀರ್ಘಾಯುಷ್ಯದ ಆಧಾರಸ್ಥಂಭ. ಕುಟಿಲ, ಕುಹಕಜನರು ವಿಷಾಹಾರ, ಮಾದಕವಸ್ತುಗಳ ಪ್ರಯೋಗದಿಂದ ತೊಂದರೆ ಉಂಟುಮಾಡಬಹುದು ಎಂಬ ಮುನ್ನೆಚ್ಚರಿಕೆ. ಹಾಗಾಗಿ ಬೇರೆ ಎಲ್ಲಿಯೂ ಊಟಾದಿ ಆಹಾರ ಸೇವನೆ ನಿಷೇಧಿಸಿದರು. ವಸ್ತ್ರಸಂಹಿತೆ ವ್ಯವಹಾರಕ್ಕೆ ಆಧರಿಸಿರುತ್ತದೆ. ಗುತ್ತಿನವರು ಧೈವಭಕ್ತ. ಸದಾ ದೇವರನ್ನೇ ಪೂಜಿಸುತ್ತಾ ದೇವರಾಗಿಯೇ ವ್ಯವಹರಿಸಬೇಕಾದ್ದರಿಂದ ಸಾಂಪ್ರದಾಯಿಕ ಉಡುಗೆ-ತೊಡುಗೆ ಹೇಳಲ್ಪಟ್ಟಿತು. ಮಡಿ, ಮೈಲಿಗೆ ಆಚರಣೆ - ಯಾವುದು ಅರಿಷಡ್ವರ್ಗ ಪ್ರೇಷಕವೋ ಅದರಿಂದ ದೂರವಿರುವುದೇ ಮಡಿ. ಯಾವುದು ಮನೋ ವಿಕಾರಗಳಿಗೆ ಪ್ರೇಷಕವೋ ಅದೇ ಮೈಲಿಗೆ. ಅದರಿಂದ ದೂರವಿದ್ದು ಮನೋನಿಗ್ರಹ ಸಾಧಿಸಿರಲೇಬೇಕು. ಆಹಾರ ಶುದ್ಧ ಸಾತ್ವಿಕವಾಗಿರಬೇಕು. ಉದಾರವಾಗಿ ಹೇಳುವುದಾದರೆ ಮನುಷ್ಯ ತಿನ್ನುವ ಆಹಾರವೆಂದಿದೆ. ಮಾನವ ಆಹಾರ :- ಹಣ್ಣು, ಗೆಡ್ಡೆ, ಗೆಣಸು, ಏಕದಳ, ದ್ವಿದಳ ಸಸ್ಯೋತ್ಪನ್ನ ಧಾನ್ಯಗಳು. ಅವುಗಳನ್ನು ಜೀರ್ಣಿಸಿಕೊಳ್ಳುವ ಶಕ್ತತೆಯ ಜೀರ್ಣಾಂಗಗಳನ್ನು ಮಾತ್ರ ಮಾನವ ಹೊಂದಿರುತ್ತಾನೆ. ಅದು ಹೊರತುಪಡಿಸಿ ಯಾವುದೂ ಮಾನವ ಆಹಾರವಲ್ಲ. ಅದೇ ಆಹಾರ ನಿಯಮವಾಗಿದೆ. ತಾಂಬೂಲ, ಗಂಧ, ಧೂಪ, ಪುಷ್ಪ, ಸ್ವರ್ಣಾಭರಣ, ಆಯುಧ, ಗುತ್ತಿನವರಿಗೆ ವಿಶೇಷ ಅಲಂಕಾರ. ಅವರ ತೂಕದ ಮಾತೇ ಧ್ವಜ. ಅವರ ನ್ಯಾಯ ನಿಷ್ಠುರತೆಯೇ ಸಿಂಹಾಸನ. ಧೈವಭಕ್ತಿಯೇ ಕಿರೀಟ. ಪರಂಪರೆಯ ಅವಿಚ್ಛಿನ್ನತೆಯೇ ಶಕ್ತಿ. ಕೈಯಲ್ಲ ಧರಿಸಿರುವ ಕಂಕಣವೇ ಅದರ ಕೀಲಕ. ಎರಡೂ ಕಡೆಯ ದ್ವಂದ್ವವಾದವನ್ನು ತಾಳ್ಮೆಯಿಂದ ಕೇಳವುದೇ ನ್ಯಾಸ. ನಂತರ ದ್ವಂದ್ವದ ಮಧ್ಯದ ಸತ್ಯವೇ ಬೀಜ. ಅದನ್ನಾಧರಿಸಿ ನೀಡುವ ನ್ಯಾಯವೇ ಅಸ್ತ್ರ. ಇದು ಗುತ್ತಿನವರ ಸಂಕಲ್ಪ ಅಥವಾ ದೀಕ್ಷೆ. ಇದನ್ನು "ಗಡಿ ಹಿಡಿಯುವುದು" ಎಂದರು. ತನ್ನ ಜೀವನಕ್ಕೆ ಒಂದು ಸೀಮಾರೇಖೆ ವಿಧಿಸಿ ಅದರ ಬದ್ಧತೆಯೊಂದಿಗೆ ಪ್ರಾಣವೇ ಪಣವಾಗಿಟ್ಟು ನಡೆಸುವ ಜೀವನಪದ್ಧತಿಯೇ ಗಡಿಹಿಡಿಯವುದು. ತಾನು ಆ ಗಡಿಯನ್ನು ಉಲ್ಲಂಘಿಸದೆ ಇರುವುದೇ ಗಡಿಬದ್ಧತೆ.

ಹೀಗೆ ಗಡಿಕಾರರು ಒಂದು ವ್ಯವಸ್ಥೆಯ ಬದ್ಧತೆಗೆ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿರುವುದರಿಂದ ಅವರು ಪೂಜ್ಯರೂ, ವಂದನೀಯರೂ, ಮಹಾತ್ಮರೂ ಆಗಿರುತ್ತಾರೆ. ವಿಚಕ್ಷಣಾ ಜ್ಞಾನ ಇವರ ಪರಂಪರೆಯ ಆಸ್ತಿ. ಇವರು ಕುಟುಂಬದಿಂದ ಬೇರ್ಪಟ್ಟು ಕೆಲ ಸಂಸ್ಕಾರ ಪೂರ್ವಕ ದೀಕ್ಷಾವಿಧಿಗಳನ್ನು ಪಡೆದ ಮೇಲೆ ಇವರಿಗೆ ಯಾವ ಜಾತೀಯ ಕಟ್ಟುಪಾಡುಗಳೂ ಇರುವುದಿಲ್ಲ. ಎಲ್ಲಾ ಜಾತಿಯೂ ಹೊರತುಪಡಿಸಿದ ಸರ್ವಮಾನ್ಯರಾಗಿರುತ್ತಾರೆ. ಆ ರೀತಿಯ ಜಾತೀಯ ಕಟ್ಟುಪಾಡುಗಳಾಗಲೀ ಅನರ್ಹತೆಗಳಾಗಲೀ ಪಾಲಿಸತಕ್ಕದ್ದಲ್ಲ.

ದೈನಂದಿನವಾಗಿ ಗುತ್ತಿನವರು ಪ್ರಾತಃ ಕಾಲದಲ್ಲಿ ಎದ್ದು ಕೈಕಾಲುಮುಖ ತೊಳೆದುಕೊಂಡು ಗೋಪೂಜಾದಿಗಳನ್ನು ಮಾಡಿ, ಪಂಚಧೈವಗಳ ಪೂಜೆ, ದಂಡ, ಕಂಕಣಕ್ಕೆ ಪೂಜೆ, ನ್ಯಾಯದೀಪ ಬೆಳಗಿಸುವುದು ನಿತ್ಯ ಕರ್ತವ್ಯ. ಇದರ ನಂತರ ವೈಯಕ್ತಿಕ ಅನುಷ್ಠಾನಗಳನ್ನು ಮಾಡುವುದು. ನಂತರ ಅವರವರ ವ್ಯವಹಾರಗಳಿಗೆ ತೊಡಗುವುದು. ಅಲ್ಲಿ ಕೃಷಿ, ವಾಣಿಜ್ಯ, ವಾಣಿಜ್ಯೇತರ, ವೈದ್ಯ, ಜ್ಯೋತಿಷ, ಉಪಾಧ್ಯಾಯ, ಅಶ್ವಹೃದಯ, ಗಜಹೃದಯ, ರಥನಿರ್ಮಾಣ, ಆದಿಯಾಗಿ ಯಾವುದೇ ವೃತ್ತಿಯನ್ನೂ ಮಾಡಬಹುದು. ಮಠಗಳ ಅಧಿಪತ್ಯ, ಪೌರೋಹಿತ್ಯ, ಅರ್ಚಕ, ಗ್ರಾಮಣಿ (ಶ್ಯಾನುಭೋಗ), ಪತ್ರವಾಹ, ಗೂಢಚರ್ಯೆ ಇವುಗಳು ನಿಷೇಧವಿರುತ್ತದೆ. ಹಸ್ತಾಕ್ಷರಗಳು ಹಾಕುವ ಸಂದರ್ಭದಲ್ಲಿ ಆಧ್ಯಾತ್ಮನಾಮ ಸೇರಿಸಿ ವ್ಯವಹಾರನಾಮ ರೂಢಿಯಲ್ಲಿರಬೇಕು.

ಒಟ್ಟಾರೆ ಪ್ರಸಕ್ತ ಕಾಲಕ್ಕೆ ಈ ಗುತ್ತಿನ ಮನೆ ಆಡಳಿತವೇ ಈಗಿನ ದೇಶೀಯ ಆಡಳಿತ ಸಮಾನಾಂತರದಲ್ಲಿದ್ದರೆ ಗ್ರಾಮೀಣ ಬದುಕು, ಸುಖ, ಸಂತೋಷ, ಆನಂದದಾಯಕ, ಭದ್ರವಾಗಿರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಈಗಿನ ದೇಶೀಯ ಆಡಳಿತ ಗ್ರಾಮೀಣ ಬದುಕನ್ನು ದುರ್ಭರಗೊಳಿಸುತ್ತಿದೆ. ಅದು ಹೊರತುಪಡಿಸಿ ಈ ಗುತ್ತಿನ ಆಡಳಿತ ಸಮಾನಾಂತರದಲ್ಲಿದ್ದರೆ ಎಷ್ಟೋ ಅನಕೂಲಕರವೆಂದು ಕಂಡುಬರುತ್ತದೆ. ಈಗಿನ ರಾಜಕೀಯದಲ್ಲಿ ಆಡಳತ ತಜ್ಞತೆ ಇಲ್ಲ. ರಾಜಕಾರಣಿಗಳಿಗೋ, ಅಧಿಕಾರಿಗಳಿಗೋ ಯಾವುದೇ ಬದ್ಧತೆ ಇಲ್ಲ. ತಾವು ಮಾಡಿದ ಕೆಲಸದ ಬಗ್ಗೆ ಶ್ರದ್ಧೆ ಇಲ್ಲ. ಹಾಗಾಗಿ ಇನ್ನು ಈ ಆಡಳಿತ ಸುಧಾರಣೆ ಸಾಧ್ಯವೇ ಇಲ್ಲವೆಂಬ ಮಟ್ಟಿಗೆ ಸಾವಿನಂಚಿನಲ್ಲಿದೆ. ಅದಕ್ಕಾಗಿ ಪ್ರಸಕ್ತ ಗ್ರಾಮೀಣ ಪ್ರದೇಶದಲ್ಲಾದರೂ ಗುತ್ತಿನ ಆಡಳಿತವನ್ನು ಸಾಮಾನ್ಯ ಜನರು ಆಯ್ದು ಕೊಂಡರೆ ೨೫ ವರ್ಷದಲ್ಲಿ ಅನಿವಾರ್ಯವೂ ಆಗುವ ಸಮಸ್ಯೆಗೆ ಉಜ್ವಲ ಭವಿಷ್ಯವಿರುವ ಒಂದು ವ್ಯವಸ್ಥೆ ಬರುತ್ತದೆ.

ಒಂದು ಉದಾಹರಣೆ:- ರಾಮಯ್ಯ ಮತ್ತು ಕೃಷ್ಣಯ್ಯ ಅಕ್ಕಪಕ್ಕದ ಮನೆಯವರು. ಅವರಿಗಿರುವ ಜಮೀನು ಅಕ್ಕಪಕ್ಕದ್ದು. ನೀರಿನ ಹರಿವಿನ ವಿಚಾರದಲ್ಲಿ ಅವರಿಬ್ಬರಿಗೂ ಒಂದು ವಿವಾದ ಹುಟ್ಟುತ್ತದೆ. ಆ ವಿವಾದ ಮುಂದುವರಿದು ಗಲಾಟೆ ಆರಂಭವಾಗುತ್ತದೆ. ಮೊದಲಿನ ಗುತ್ತಿನ ಆಡಳಿತ ಪದ್ಧತಿಯಲ್ಲಿ ನೀರಿನ ದಾರಿ, ನಡೆದಾಡುವ ದಾರಿ ಇತ್ಯಾದಿ ಅನುಭವ ರೀತ್ಯಾ ನಿರ್ಣಯವಿತ್ತು. ಹಾಗಾಗಿ ವಿವಾದ ಮುಂದುವರಿಯುತ್ತಿರಲಿಲ್ಲ. ಆದರೆ ಈಗ ಅವರ ವಿವಾದ ಊರಲ್ಲಿ ಕೇಳುವವರಿಲ್ಲ. ಎರಡೂ ಕಡೆಗೆ ಬೆಂಕೆ ಹಚ್ಚುವ ಜನ, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಂಬ ಹಣೆ ಪಟ್ಟಿ ಕಟ್ಟಿದ ಜನ ಗಲಾಟೆ ದೊಡ್ಡದು ಮಾಡುತ್ತಾರೆ. ಕೊನೆಗೆ ಹೊಡೆದಾಟ, ಪೋಲೀಸರು ಕೇಸು ಹಾಕುತ್ತಾರೆ, ಕೋರ್ಟಿಗೆ ಹೋಗುತ್ತದೆ. ಎರಡೂ ಕಡೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಕೋರ್ಟ್ ಆದೇಶ ಕೊಡುತ್ತದೆ. ಕೃಷಿ ನಿಂತಿತು, ಕೇಸು ನಡೆಯಲಾರಂಭಿಸಿತು. ರಾಮಯ್ಯ ಮತ್ತು ಕೃಷ್ಣಯ್ಯರ ಸಣ್ಣ ಮಕ್ಕಳೂ ಇದನ್ನು ಗಮನಿಸುತ್ತಾ ಬೆಳೆಯುತ್ತಾರೆ. ಅವರೂ ಪರಸ್ಪರ ವೈರಿಗಳಾಗಿ ಬೆಳೆಯುತ್ತಾರೆ. ಅಂದಾಜ ಹತ್ತೋ, ಇಪ್ಪತ್ತೋ ವರ್ಶಕ್ಕೆ ಕೋರ್ಟು ನೀರು ಹರಿಯುವಲ್ಲಿಯೇ ಹರಿಯಬೇಕು, ಮಾರ್ಗ ಗುರುತಿಸಿ ಕೊಡಿ ಎಂದು ಹೊಡೆದಾಟದ, ಸಾವು ನೋವಿಗೆ ಸಾಕ್ಷಾಧಾರ ಸಾಲದೆಂದೂ, ತೀರ್ಮಾನಿಸಿ ಆರ್ಡರ್ ಮಾಡುತ್ತದೆ.

ಅಷ್ಟೋತ್ತಿಗೆ ಕೃಷಿಯಿಲ್ಲದೇ ಜೀವನ ನಿರ್ವಹಣೆ ಅಸಾಧ್ಯವಾಗಿ ಊರಿನಲ್ಲಿ ಕೂಲಿ ಸಿಗದೇ ಪೇಟೆ ಪಟ್ಟಣ ಸೇರಿಯಾಗಿರುತ್ತದೆ. ಅವರಿಗಿನ್ನೆಂತು ಜೀವನ? ಈ ನ್ಯಾಯ ಪದ್ಧತಿ ಬೇಕೇ? ಆರಂಭದಲ್ಲಿಯೇ ಗುತ್ತಿನವರು ಎರಡೂ ಕಡೆಯ ವಿವಾದವನ್ನು ಅರ್ಥಮಾಡಿಕೊಂಡು ಮಳೆಯ ನೀರು ಹರಿದು ಹೋಗಲು ಯಾರಿಂದಲೂ ತಡೆ ಬರಬಾರದು. ಈ ವಿವಾದ ಸರಿಯಲ್ಲ ಎಂದು ತಿಳಿಸಿ ಸಮಾಧಾನ ಪಡಿಸಿದ್ದರೆ ಈ ೧೫ ವರ್ಷದ ನಂತರ ಸಿಗುವ ನ್ಯಾಯ ಆ ಕಾಲಕ್ಕೇ ಸಿಗುತ್ತಿರಲಿಲ್ಲವೆ? ಆದರೆ ಯಾವುದೇ ನಷ್ಟವಿಲ್ಲದೆ ರಾಮಯ್ಯ + ಕೃಷ್ಣಯ್ಯರು ಜಮೀನ್ದಾರರಾಗಿಯೇ ಉಳಿಯುತ್ತಿದ್ದರಲ್ಲವೆ? ಯಾವುದೇ ರೀತಿಯಲ್ಲಿ ಅವರ ಮಕ್ಕಳು ಮುಂದೆ ಹಗೆ ಸಾಧಿಸುತ್ತಾ ಬೆಳೆಯ ಬೇಕಿಲ್ಲವಲ್ಲವೆ? ಆದರೆ ಈಗಿನ ಪದ್ಧತಿಯಲ್ಲಿ ಕೋರ್ಟ್ ಕಟ್ಲೆ ವ್ಯವಹಾರ ಮುಗಿಯುವಲ್ಲಿಯವೆರೆಗೆ, ಮುಂದೆ ಸಿಗುವ ನ್ಯಾಯದ ಮೇಲೆ ಆಧರಿಸಿ ಹಗೆತನ ಬೆಳೆಯುತ್ತಾ ಹೋಗುವುದಿಲ್ಲವೆ? ಹಾಗಿದ್ದ ಮೇಲೆ ನಿಮಗೆ ಈ ನ್ಯಾಯದಾನ ಪದ್ಧತಿ ಬೇಕೆ? ಅಥವಾ ಹಿಂದಿನ ಗುತ್ತಿನವರ ನ್ಯಾಯ ಬೇಕೆ? ಅದರ ನಂತರದ ಬೀಡಿನವರ ದಂಡಪೂರ್ವಕ ನ್ಯಾಯ, ಅರಸು ಮನೆತನದ ಶಿಕ್ಷಾತ್ಮಕ ನ್ಯಾಯ, ಏನಿದ್ದರೂ ಅದು ಶೀಘ್ರ ನ್ಯಾಯಪದ್ಧತಿ. ಅದೇ ಉಪಯುಕ್ತವಲ್ಲವೆ? ಚಿಂತಿಸಿ. ಈ ವರ್ಷಾಂತರಗಳ ಕಾಲ ಕಾದು ಹಗೆ, ಕೊಲೆಯನ್ನು ಬೆಳೆಸಿ ಇತರೆ ಅಪರಾಧಗಳಿಗೆ ದಾರಿಯಾಗುವುದಾದರೂ ತಪ್ಪುತ್ತದೆಯಲ್ಲವೆ? ಬುದ್ಧಿವಂತರಾದ ನೀವು ನಿಮ್ಮಲ್ಲಿಯೇ ಒಂದು ಗಂಟೆ ಆಲೋಚಿಸಿ ಸರಿಯೆಂದು ಕಂಡರೆ ಮುಂದೆ ಸರಕಾರೀ ಕಚೇರಿಗಳಿಗೆ ಎಡತಾಕುವುದು ಬಿಟ್ಟು ರಾಜಾದಾಯ (ತೆರಿಗೆ) ಪಾವತಿಸಿ. ಆಮೇಲೆ ಅವರಿಂದ ನಿಮಗೆ ಯಾವುದೇ ಸಹಕಾರ, ಪತ್ರದ ಅಗತ್ಯವಿಲ್ಲದೇನೇ ನೀವೇ ಪರಸ್ಪರ ಸಹಕಾರ ಧರ್ಮದಿಂದ ಬಾಳುವೆ ರೂಪಿಸಿಕೊಂಡು ಬಾಳುವ ಒಂದು ದಾರಿಯ ಅನ್ವೇಷಣೆ ಮಾಡಿಕೊಂಡಲ್ಲಿ ಈಗಿನ ದೇಶೀಯ ಭ್ರಷ್ಟಾಚಾರದಲ್ಲಿ ಶೇ. ೭೦ ಭಾಗ ನಿರ್ನಾಮವಾಗುತ್ತದೆ ಎಂದು ತಿಳಿಸುತ್ತಾ ಈ ಲೇಖನ ಮುಗಿಸುತ್ತಿದ್ದೇನೆ.

ಗಂಡಹೆಂಡಿರ ಜಗಳದೊಳ್ ಕೂಸು ಬಡವಾಯ್ತಂತೆ
ಬಂಡಿ ಅನ್ನವ ತಿಂಬ ಕೂಸನು ಕಾಣದಾದಿರಿ ನೀವು ಈಗ
ಉಂಡೆ ಅನ್ನವ ತಿಂಬೆನೆಂದರು ಗತಿಯಿಲ್ಲವಾಯ್ತು ಮುಂದುವರಿದ ವೈಜ್ಞಾನಿಕತೆಯಲೀ |
ಖಂಡ ವೃಷ್ಟಿಯು ಸುರಿಯೆ ಜನ ಕಂಗಾಲಾಗಿ ಕೂಗುತ
ದಿಂಡೆದ್ದು ಓಡಿ ತಪ್ಪಿಸಿಕೊಳ್ಳಲಾಗದ ಷಂಡರನು ಏಕೆ
ಹಡೆದಳೋ ತಾಯಿ ಭಾರತಿಯ ಸರಕಾರ ಬಂದು ಕುಂಡಯಾ ಮೇಲೆತ್ತಿ ಏಳುವಿರಿ ಭಂಡ ಜನರೇ || ೧ ||

ಗಂಡುಗಲಿಗಳ ನಾಡು ಈ ಕನ್ನಡ ನೆಲವೆಂದು
ದುಂಡು ಅಕ್ಷರದಲ್ಲಿ ಬರೆಸಿದರೆ ಸಾಲದೈ ಏಳಿ ಎದ್ದೇಳಿ
ಗಂಡುಗಲಿಗಳ ತೆರದಿ ಸ್ವತಂತ್ರ ಜೀವನ ಮಾಡಿ ಭಿಕ್ಷಾನ್ನದಾ ಹಾರೈಕೆ ಬಿಡಿ ನೀವು |
ಚಂಡ ವಿಕ್ರಮಿಗಳಾಗಿರಿ ಯಾರೋ ಕೊಡುವ ಹಂಗಿನನ್ನಕೆ
ಭಂಡತನದಲಿ ಜೊಲ್ಲ ಸುರಿಸದಿರಿ ಅದು ಮರಣ ಸಮಾಸ
ಕಂಡು ಕಂಡು ನೀವ್ ಭಿಕ್ಷಾನ್ನದಾ ಸುಳಿಗೆ ಸಿಕ್ಕುವಿರಲ್ಲ ವ್ಯರ್ಥಬಾಳುವೆಗಿಂತ ಸಾವು ಮೇಲು || ೨ ||

ಕಂಡ ಕಂಡ ಕಲ್ಲು ದೇವರುಗಳಿಗೆ ಕೈಮಗಿದರೇನುಂಟು ಫಲ
ಭಂಡಬಾಳಿನ ಕೂಳಿನಾ ಋಣ ನಿನ್ನ ಮೇಲಿರಲೇನು ಮಾಡುವ
ಕಂಡ ಕಂಡ ಗುರುಗಳ ಸಮಾಧಿ ಸುತ್ತುತ ಭಕುತಿಯಾ ನಾಟಕವು ವ್ಯರ್ಥ ಕಾಣೆಲೋ ಮರುಳೇ ನೀ |
ಚಂಡ ವಿಕ್ರಮಿಯಹುದಾದರೆ ಮನದೊಳಗೆ ಸ್ಮರಿಸುತ ದೇವನು
ದ್ದಂಡನೆಂಬುದನರಿತು ನಿನ್ನಯ ಬಾಳ್ವೆಗೆ ಸ್ವತಂತ್ರತೆಯನಳ
ವಡಿಸಿಕೊಳೈ ಕೈಯ ಚಾಚದಿರು ಭಿಕ್ಷೆಗೆ ಬರಲಿ ಚಂಡಮಾರುತವೇನು ಹೆದರದಿರು ಮಾರ್ತಾಂಡಗೇ || ೩ ||

ತಾಯಿ ಭಾರತಿಯ ಗರ್ಭವನು ಹೀಗಳೆಯದಿರು ಮರುಳೇ
ನಾಯಿ ಬಾಳನು ಬಾಳಬೇಡೈ ಬಾಳುವೆಗೊಂದರ್ಥವಿದೆ ಅದಕೆ
ನೋಯದಿರು ಈ ದೇಶದಲಿ ಹುಟ್ಟಿದಕೆ ಸೋಲದಿರು ಪ್ರಚಂಡನಾಗು ಆಮಿಷಕೆ ಒಳಗಾಗದಿರೂ |
ಬಾಯ ಬಡಿವರು ಆಳುವವರು ನಿನ್ನನು ತಾಳು ನೀ ನಿನ್ನನಾಳ
ಹೇಯ ಬದುಕಿಗೆ ವ್ಯರ್ಥಗಳಹದಿರು ಕೇಳಯ್ಯ ಭಾರತೀ ಸುತನಾಗು
ಕಾಯವಳಿಯಲಿ ನಿನ್ನ ಆತ್ಮದಾ ಕೀರ್ತಿಯುಳಿಯಲಿ ನಿನ್ನನಾಳಿಕೊಂಡರೆ ಇದು ಖಂಡಿತವೂ || ೪ ||

ಅದಕೆ ಬೇಕೈ ನಿನಗೆ ಹಿಂದಿನ ಚರಿತೆ ಇತಿಹಾಸದರಿವು
ಅದನರ್ಥ ಮಾಡಿಕೊಂಡರೆ ನಮ್ಮ ಪೂರ್ವಿಕರ ಸುಖಬಾಳ್ವೆ
ಒದಗಿ ಕಾಣುವುದು ಬಿಡು ನೀನು ಅನರ್ಥ ಬಾಳಿನ ಈಗಿನ ದೊಂಬರಾಟವನೂ |
ಬದಿಗಿಟ್ಟು ನೈಜಜೀವನದರಿವು ಪಡೆಯುತ ಹಗೆದೊಲೆ
ಯೊದರದಂದದಿ ಬಾಳುವಾ ನಮ್ಮ ಇತಿಹಾಸವರಿತು ಬಾಳಿರಿ
ಒದಗುವುದು ನಿಮಗಾಗ ಜೀವನದರ್ಥ ಜ್ಞಾನ ಸುಖವಿದೆ ತ್ಯಾಗದಲಿ ಕಾಣಯ್ಯ ಮರುಳೇ || ೫ ||

ಇಂತು

ಕೆ. ಎಸ್. ನಿತ್ಯಾನಂದ

No comments:

Post a Comment