Thursday, 22 May 2014

ಋಗ್ವೇದ ವಾಮದೇವ ಮಂಡಲದ ಜೈವಿಕ-ತಂತ್ರಜ್ಞಾನ ಗಣಿತ -2

ಸಕಲ ಪ್ರಾಣಿಗಳಿಗೂ ಅನ್ನ ಮುಖ್ಯ. ಹಾಗೆ ಅದು ಬುದ್ಧಿ ಪ್ರಚೋದಕ, ಅಹಂಕಾರ ವಿಮೋಚಕ, ಚಿತ್ತ ನಿರೋಧಕ ಮತ್ತು ಹೇಗೆ ಜ್ಞಾನ ಪ್ರದಾಯಕವೆಂಬುದನ್ನು ಗೌತಮರು ವಿವರಿಸುತ್ತಾರೆ ಗಮನಿಸಿ.

ಋಗ್ವೇದ ಮಂಡಲ-, ಸೂಕ್ತ-೧೫, ಮಂತ್ರ ೧-೧೦

अ॒ग्निर्होता॑ नो अध्व॒रे वा॒जी सन्परि॑ णीयते । दे॒वो दे॒वेषु॑ य॒ज्ञिय॑: ॥
परि॑ त्रिवि॒ष्ट्य॑ध्व॒रं यात्य॒ग्नी र॒थीरि॑व । आ दे॒वेषु॒ प्रयो॒ दध॑त् ॥
परि॒ वाज॑पतिः क॒विर॒ग्निर्ह॒व्यान्य॑क्रमीत् । दध॒द्रत्ना॑नि दा॒शुषे॑ ॥
अ॒यं यः सृञ्ज॑ये पु॒रो दै॑ववा॒ते स॑मि॒ध्यते॑ । द्यु॒माँ अ॑मित्र॒दम्भ॑नः ॥
अस्य॑ घा वी॒र ईव॑तो॒ऽग्नेरी॑शीत॒ मर्त्य॑: । ति॒ग्मज॑म्भस्य मी॒ळ्हुष॑: ॥
तमर्व॑न्तं॒ न सा॑न॒सिम॑रु॒षं न दि॒वः शिशु॑म् । म॒र्मृ॒ज्यन्ते॑ दि॒वेदि॑वे ॥
बोध॒द्यन्मा॒ हरि॑भ्यां कुमा॒रः सा॑हदे॒व्यः । अच्छा॒ न हू॒त उद॑रम् ॥
उ॒त त्या य॑ज॒ता हरी॑ कुमा॒रात्सा॑हदे॒व्यात् । प्रय॑ता स॒द्य आ द॑दे ॥
ए॒ष वां॑ देवावश्विना कुमा॒रः सा॑हदे॒व्यः । दी॒र्घायु॑रस्तु॒ सोम॑कः ॥
तं यु॒वं दे॑वावश्विना कुमा॒रं सा॑हदे॒व्यम् । दी॒र्घायु॑षं कृणोतन ॥


ಮಾನವ ಮನಸ್ಸನ್ನೇ ಮುಖ್ಯವಾಗಿ ತೆಗೆದುಕೊಂಡಲ್ಲಿ ಅದು ಸದಾ ಮೂರು ಕಾರಣಗಳಿಂದ ಅತೃಪ್ತವಾಗಿಯೇ ಇರುತ್ತದೆ. ಇತರೆ ಪ್ರಾಣಿಗಳು ಆಹಾರ ಕಾರಣದಿಂದ ಮಾತ್ರ ಅತೃಪ್ತವಾಗಿರುತ್ತವೆ. ಆದರೆ ಮಾನವ ಹಾಗಲ್ಲ. ಹೊಟ್ಟೆ ತುಂಬಿದರೆ ನಂತರ ಸ್ವೇಚ್ಛೆ + ದುರಾಸೆಗೆ ಬಲಿಬಿದ್ದು ಹಲವು ರೀತಿಯ ಅದಮ್ಯ ಬೇಡಿಕೆಗಳನ್ನು ಹಾರೈಸುತ್ತಾ ನಿರಂತರ ಅತೃಪ್ತನಾಗಿಯೇ ಇರುತ್ತಾನೆ. ಅಧಿಕಾರ + ದ್ವೇಷಗಳಿಂದ ತೊಳಲುತ್ತಲೇ ಇರುತ್ತಾನೆ. ನಿತ್ಯ ಅತೃಪ್ತನಾಗಿರುತ್ತಾ ತನ್ನ ಕಣ್ಣೆದುರಿಗಿರುವ ಎಲ್ಲವೂ ಬೇಕೆಂಬ ತುಡಿತದಲ್ಲಿ ಅತೃಪ್ತನಾಗಿರುತ್ತಾನೆ. ಲೋಭ+ಮೋಹಗಳಿಗೆ ಒಳಗಾಗಿ ನಿರಂತರ ಮಾನಸಿಕ ಕ್ಷೋಭೆಗೊಳಗಾಗಿ ಅತೃಪ್ತನಾಗಿರುತ್ತಾನೆ. ಇವಕ್ಕೆಲ್ಲಾ ಕಾರಣ ಅನ್ನವೇ ಎಂಬುದು ಸತ್ಯ. ಹಿಂದೆ ವಿವರಿಸಿದ ಕಾರಣದಿಂದಾಗಿ ಮಾನವನು ತನ್ನ ಅತೃಪ್ತ ಜೀವನ ಮತ್ತು ಮನೋಕ್ಲೇಷ ಕಾರಣದಿಂದಾಗಿ ಆಯುಃ ಪ್ರಮಾಣ ಕಡಿಮೆ ಮಾಡಿಕೊಳ್ಳುತ್ತಿದ್ದಾನೆ. ನಾನಾ ರೋಗಗಳಿಗೆ ಕಾರಣವಾಗಿ ವ್ಯರ್ಥ ಸಾಯುತ್ತಿದ್ದಾನೆ. ಮಾನವನಲ್ಲಿ ಮೂಲಭೂತವಾಗಿರಬೇಕಾದ ಮಾನವೀಯತೆ ಅರ್ಥಾತ್ "ಸಾಹದೇವ್ಯತೆ" ನಿರ್ಮೂಲವಾಗುತ್ತಿದೆ. ಮರೆತೇ ಹೋಗುತ್ತಿದೆ. ಹಾಗಾಗಿಯೇ ಅನ್ನ ಕಾರಣದಿಂದಾಗಿ ಕ್ಷೋಭೆಗೊಂಡ ಮನಸ್ಸು ತನ್ನ ಸಹಜೀವಿಗಳಿಗೇ ಮೋಸ ವಂಚನೆ ಮಾಡಿ ಅಸತ್ಯ ನುಡಿಯುತ್ತಾ ಕೊಲೆ ಸುಲಿಗೆ ದರೋಡೆ ಬಲಾತ್ಕಾರಗಳಿಗೆ ಇಳಿಯುತ್ತಿದ್ದಾನೆ. ಅದರಿಂದಲೇ ಸುಖ ಸಂತೋಷವೆಂಬ ಭ್ರಾಂತಿಗೆ ಒಳಗಾಗಿರುತ್ತಾನೆ. ಅದೇ ಒಂದು ರೀತಿಯ "ಅನ್ನ ಬಂಧನ" ವೆಂಬ ಋಣಕಾರೀ ಪ್ರತಿಬಂಧಕವಾಗಿರುತ್ತದೆ.

ಹಾಗಾಗಿ ಬುದ್ಧಿ ಪ್ರಚೋದಕವು ವಿಕೃತವಾಗಿ ಜೀವಿಯ ಹುಟ್ಟು+ಸಾವುಗಳ ನಿರಂತರತೆಗ ಪೂರಕವಾಗಿರುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಈ ಅನ್ನವೆಂಬ ಬಂಧನವು ಜೀವಿಯನ್ನ ನಿರಂತರ ಹುಟ್ಟು ಸಾವುಗಳ ಸರಪಳಿಯಲ್ಲಿ ನಿರಂತರ ಸೇರಿಸುವ ಹುನ್ನಾರವೆಂದು ಅರ್ಥವಾಗುತ್ತದೆ. ಹಾಗಾಗಿ ಆ ಹುಟ್ಟು+ಸಾವುಗಳ ಮಧ್ಯದ ಜೀವನವೆಂಬ ಸಾರ್ಥಕಭಾಗ ಇಲ್ಲವಾಗಿದೆ. ಅದಕ್ಕೆ ಕಾರಣವು ಅನ್ನವೇ ಎಂದಾಗ ನಾವು ತಿನ್ನುವ ಅನ್ನದ ಪರಿಶುದ್ಧತೆ ಎಷ್ಟಿರಬೇಕು ಅಲ್ಲವೆ? ಆದರೆ ಈಗ ಋಣ ರಾಹಿತ್ಯವಾದ ಅನ್ನ ದೊರೆಯುವುದೇ? ನಾವು ತಿನ್ನುವ ಅನ್ನದ ದೊರಕುವಿಕೆಯಲ್ಲಿ ನಮ್ಮ ಶ್ರಮವೇನಿದೆ? ನಿರ್ದಿಷ್ಟ ಶ್ರಮವಿಲ್ಲದೇನೇ ದುಡಿಮೆಯ ನೆಪದಲ್ಲಿ ದೊರೆತ ಹಣ ವಿಷ ಸಮಾನವಲ್ಲವೆ? ನಮಗೆ ದೊರೆತ ಒಂದು ರೂಪಾಯಿಯೂ ನಿಜವಾದ ನಮ್ಮ ಶ್ರಮದ ದುಡಿಮೆಯಾದರೆ ಅದರಿಂದ ದೊರಕಿದ ಅನ್ನ ಖಂಡಿತಾ ಜ್ಞಾನಪ್ರದ, ಅಮೃತೋಪಮ. ಅದೇ ಹಣ ಕಳ್ಳತನ, ಮೋಸ, ವಂಚನೆಗಳಿಂದ ಬಂದದ್ದಾದರೆ ಆ ಅನ್ನವು ಅದೇ ರೀತಿಯ ಬುದ್ಧಿ ಪ್ರಚೋದಕವಲ್ಲವೆ? ಆ ಸಂಬಂಧಿಯಾಗಿ ಒಂದು ಕಥೆ ಉದಾಹರಿಸುತ್ತೇನೆ ಗಮನಿಸಿ.

ಒಂದೂರಿನಲ್ಲಿ ಒಬ್ಬ ಧರ್ಮಾತ್ಮನಾದ ಧನಿಕ ವ್ಯಾಪಾರಿಯಿದ್ದನು. ಆತನು ನಿತ್ಯವೂ ಯಾರಾದರೂ ಅತಿಥಿಗಳಿಗೆ ಅನ್ನ ದಾನ ಮಾಡದೇ ತಾನು ಊಟ ಮಾಡಲಾರೆನೆಂಬ ವೃತನಿಷ್ಠನು. ಹಾಗೇ ಒಂದಿನ ಎಂದಿನಂತೆ ಮಧ್ಯಾಹ್ನದ ಹೊತ್ತಿಗೆ ದಾರಿಹೋಕರಾದ ಅತಿಥಿಗಳಿಗೆ ಕಾಯುತ್ತಿರಲು ಎಷ್ಟು ಹೊತ್ತಾದರೂ ಯಾರೂ ಬರಲಿಲ್ಲ. ಆಗ ವ್ಯಾಪಾರಿಯು ನಿಧಾನವಾಗಿ ಮನೆಯಿಂದ ಹೊರಬಂದು ಊರ ಮುಂದಿನ ಕಟ್ಟೆಯ ಬಳಿಗೆ ಬರಲಾಗಿ ಅಲ್ಲೇ ತಪೋನಿಷ್ಠನಾದ ತಪಸ್ವಿಯನ್ನು ಕಂಡನು ಮತ್ತು ಅವರನ್ನು ಈ ದಿನ ತನ್ನ ಮನೆಗೆ ಆರೋಗಣೆಗೆ ಬರಬೇಕೆಂದು ಪ್ರಾರ್ಥಿಸಿದನು. ಅದನ್ನು ಕೇಳಿ ಆ ಸಾಧುವು ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಧ್ಯಾನಿಸಿ ಆಗಲಿ "ಧೈವಚಿತ್ತ" ವೆಂದು ವ್ಯಾಪಾರಿಯ ಜೊತೆಯಲ್ಲಿ ಹೊರಟು ಬಂದನು. ವ್ಯಾಪಾರಿಯು ಆದರದಿಂದ ಮನೆಗೆ ಕರೆತಂದು ಕಾಲು ತೊಳೆದು ಸತ್ಕರಿಸಿ ಉಚಿತಾಸನದಲ್ಲಿ ಕುಳ್ಳಿರಿಸಿ ಊಟ ಬಡಿಸಿ ಬ್ರಹ್ಮಾರ್ಪಣವೆನ್ನಲು ಸಾಧುವು ಊಟ ಮಾಡಿದನು. ನಂತರ ಸಾಧುವಿನ ಕೈತೊಳೆದು ವ್ಯಾಪಾರಿ ತಾಂಬೂಲಾದಿಗಳನ್ನಿತ್ತು ವಿಶ್ರಾಂತಿಗಾಗಿ ಹಾಸಿಗೆ ಸಿದ್ಧಪಡಿಸಿ ಒಂದು ಲೋಟ ಹಾಲನ್ನಿತ್ತು ವಿಶ್ರಾಂತಿ ಪಡೆಯಿರಿ ಎಂದು ಪ್ರಾರ್ಥಿಸಿ ತಾನು ಊಟ ಮಾಡಿ ತನ್ನ ವ್ಯಾಪಾರ ವ್ಯವಹಾರ ನಿಮಿತ್ತ ಹೊರಟು ಹೋದನು. ನಂತರ ಸಂಜೆಯ ಹೊತ್ತಿಗೆ ಮನೆಗೆ ಬಂದು ನೋಡಲಾಗಿ ಸಾಧುವು ಹೊರಟು ಹೋಗಿದ್ದ. ಕೆಲಸದವರು ಹಾಸಿಗೆ ಸುತ್ತಿಟ್ಟಿದ್ದರು. ಮನೆಯಾಕೆ ವ್ಯಾಪಾರಿಯಲ್ಲ ನೀವು ಸಾಧುವಿಗೆ ಹಾಲು ಕೊಟ್ಟ ಬೆಳ್ಳಿ ಲೋಟ ಕಾಣುವುದಿಲ್ಲವೆಂದಳು. ಚಕಿತನಾದ ವ್ಯಾಪಾರಿ ಯಾವುದಕ್ಕೂ ಇರಲೆಂದು ಊರ ಮುಂದಿನ ಕಟ್ಟೆಯ ಸಮೀಪ ಹೊರಟು ಬಂದನು.

ಅಷ್ಟೊತ್ತಿಗಾಗಲೇ ಸಾಧುವು ಆ ಮಂಟಪಕ್ಕೆ ಬಂದು ಕುಳಿತು ಚಿಂತಿಸ ಹತ್ತಿದನು. ತಾನೇಕೆ ಈ ಬೆಳ್ಳಿ ಲೋಟ ತೆಗೆದುಕೊಂಡು ಬಂದೆ? ಎಂದು ಚಿಂತಿಸಿದನು. ತನ್ನ ಚೀಲದಲ್ಲಿರುವ ಬೆಳ್ಳಿ ಲೋಟವನ್ನು ತೆಗೆದು ದೂರ ಎಸೆದನು. ಹಾಗೇ ಧ್ಯಾನಮಗ್ನನಾದನು. ಆಗ ಅಲ್ಲಿಗೆ ಬಂದ ವ್ಯಾಪಾರಿಯು ಲೋಟ ಎತ್ತಿಕೊಂಡು ಸಾಧುವನ್ನು ಸಮೀಪಿಸಿ ಅಯ್ಯಾ ಸಾಧುಗಳೇ! ಎಂದು ಕರೆದನು. ಆಗ ಎಚ್ಚೆತ್ತುಕೊಂಡ ಸಾಧುವು ಅವನನ್ನು ದುರುಗುಟ್ಟಿ ನೋಡಿ "ಎಂತಹಾ ಊಟ ಹಾಕಿದಿಯಯ್ಯಾ ನೀನು? ವಿರಕ್ತನಾದವನನ್ನೂ ಕಳ್ಳನಾಗುವಂತೆ ಮಾಡಿದೆಯಲ್ಲಾ. ಆ ಬೆಳ್ಳಿ ಲೋಟ ನಾನೇ ಕದ್ದು ತಂದದ್ದು; ನಿನ್ನ ಮನೆಯಿಂದ. ಇಂತಹಾ ಕೆಟ್ಟ ಕೆಲಸಕ್ಕೆ ಕಾರಣವನ್ನು ಹುಡುಕಲೇ ಬೇಕು. ನಾನು ಕಳ್ಳನಾಗಿದ್ದೇನೆ. ಕೊತ್ವಾಲನಲ್ಲಿಗೆ ಕರೆದೊಯ್ಯಿ ನನ್ನ" ಎಂದು ಹೇಳಿದನು ಸಾಧು.

ವ್ಯಪಾರಿಯೂ ಏನು ಮಾಡುವುದೆಂದು ತಿಳಿಯದೇ ಕೊತ್ವಾಲನಲ್ಲಿಗೆ ಸಾಧುವನ್ನು ಕರೆದೊಯ್ದನು. ಕೊತ್ವಾಲನು ಇವರನ್ನು ಕಂಡು ವ್ಯಾಪಾರಿಯು ಪರಿಚಯಸ್ಥನಾದ್ದರಿಂದ ನಗುಮುಖದಿಂದಲೇ ಸ್ವಾಗತಿಸಿ 'ಏನು ಬಂದಿರೆಂದು' ಕೇಳಲು ವ್ಯಾಪಾರಿಯು ಅಲ್ಲಿಯವರೆಗಿನ ಎಲ್ಲಾ ಕಥೆಯನ್ನೂ ಕೂಲಂಕುಷವಾಗಿ ವಿವರಿಸಿದನು ಹಾಗೂ ಬೆಳ್ಳಿ ಲೋಟವನ್ನು ಮುಂದಿಟ್ಟನು. ಸಾಧುವು 'ನಾನು ಆ ಲೋಟವನ್ನು ಕದ್ದದ್ದು ಹೌದು. ಅದಕ್ಕೆ ತಕ್ಕ ಶಿಕ್ಷೆಗೆ ನಾನು ಬದ್ಧನೆಂದು ಆದರೆ ಈ ಮಹಾಶಯ ನನಗೆ ಹಾಕಿದ ಊಟದ ಅಕ್ಕಿ ಎಲ್ಲಿಂದ ಬಂತೆಂದು ವಿಚಾರಿಸಬೇಕೆಂದೂ' ವಿನಯದಿಂದ ಪ್ರಾರ್ಥಿಸಿದನು. ಆಗ ವ್ಯಾಪಾರಿಯು 'ರಾಮನೆಂಬ ಕಾರ್ಮಿಕ ತನ್ನ ಮಾಸಿಕ ಕೂಲಿಯ ಕಾಳೆಂದು ತಂದು ಮಾರಿದ್ದ' ನೆಂದ. ಕೂಡಲೇ ಆ ರಾಮನನ್ನು ಕರೆಸಿರೆಂದು ಸಾಧುವು ಬಿನ್ನವಿಸಲಾಗಿ ಭಟರು ರಾಮನನ್ನು ಕರೆ ತಂದು ಕೊತ್ವಾಲನ ಮುಂದೆ ನಿಲ್ಲಿಸಿದರು. ಆಗ ರಾಮನಿಗೆ ಹಿಂದಿನ ದಿನ ವ್ಯಾಪಾರಿಗೆ ಮಾರಿದ ಅಕ್ಕಿಯ ಬಗ್ಗೆ ಕೇಳಲಾಗಿ ಹೆದರುತ್ತಾ 'ತಾನು ಪಕ್ಕದೂರಿನ ಬಂಡಸಾಲೆಯಿಂದ ಕದ್ದದ್ದೆಂದು' ಒಪ್ಪಿಕೊಂಡನು. ಆಗ ಸಾಧುವು ನಸುನಕ್ಕು "ಅಯ್ಯಾ ಕೊತ್ವಾಲನೇ! ಈ ವ್ಯಾಪಾರಿ ನನ್ನ ಊರಿನ ಹೊರ ಮಂಟಪದಿಂದ ಅವನೇ ಕರೆದುಕೊಂಡು ಹೋಗಿ ಊಟವಿಕ್ಕಿದ ಪುಣ್ಯಾತ್ಮ. ಆದರೆ ಊಟದ ಅಕ್ಕಿ ಮಾತ್ರ ಕಳ್ಳತನದ್ದು. ಅದನ್ನು ಉಂಡ ನನಗೆ ಈ ಕಳ್ಳ ಬುದ್ಧಿ ಬಂತು. ಅದಕ್ಕಾಗಿಯೇ ವ್ಯಾಪಾರಿಗೂ ಈ ವಿಷಯ ಅರ್ಥವಾಗಲಿ ಎಂಬ ಉದ್ದೇಶದಿಂದ ನಾನು ಹೀಗೆ ಮಾಡಿದೆ. ಹಾಗೇ ಊರಿನಲ್ಲಿ ಕಳ್ಳತನ ಅಪರಾಧ ಹಾಗೇ ಕಳ್ಳ ಸರಕನ್ನು ಕೊಳ್ಳುವುದೂ ಅಪರಾಧವೇ. ಆದರೆ ಸತ್ಯ ಧರ್ಮಿಷ್ಠನಾದ ವ್ಯಾಪಾರಿಗೆ ಈ ಹೊಳಹು ಗೊತ್ತಿರಲಿಲ್ಲ. ಹಾಗಾಗಿ ಮೋಸ ಹೋದ. ಆದರೆ ನಿಜವಾಗಿ ಕಳ್ಳತನ ಮಾಡಿದ ರಾಮ ಸಿಕ್ಕಿ ಬಿದ್ದ. ಈಗ ತಮಗೆ ಸರಿ ಕಂಡಂತೆ ಶಿಕ್ಷೆ ವಿಧಿಸಬಹುದು" ಎಂದನು ಸಾಧು.

ಆಗ ಕೊತ್ವಾಲನು ರಾಮನಿಗೆ ಅಕ್ಕಿಯ ಹಣದಷ್ಟು ದಂಡವನ್ನೂ, ೨೫ ಚಾಟಿ ಏಟನ್ನೂ ವಿಧಿಸಿ, ವ್ಯಾಪಾರಿಗೆ ಎಚ್ಚರಿಸಿ, ಇನ್ನು ಮುಂದೆ ಹೀಗಾಗದಂತೆ ವ್ಯಾಪಾರ ಮಾಡಬೇಕೆಂದು ವಿಧಿಸಿ, ಕೆಟ್ಟ ಅನ್ನ ತಿಂದೂ ತಾಳ್ಮೆಯಿಂದ ಅರಗಿಸಿಕೊಂಡ ಸಾಧುವಿಗೆ "ಊರ ಸನ್ಮಾನ"  ಏರ್ಪಡಿಸಿ ಗೌರವದಿಂದ ಬೀಳ್ಕೊಟ್ಟನು. "ಇದು ಅನ್ನದ ಮಹಿಮೆ". ಹಾಗಾಗಿ ಮುಖ್ಯವಾಗಿ ಗಮನಿಸಬೇಕು ನಾವು ತಿನ್ನುವ ಅನ್ನವೆಷ್ಟು ಪರಿಶುದ್ಧವೆಂದು. ಹಾಗೆ ಪರಿಪೂರ್ಣ ಆಹಾರವೆಂದರೆ ನಮ್ಮ ಸ್ವಂತ ಶ್ರಮಕ್ಕೆ ತಕ್ಕ ಕೂಲಿಯ ಅನ್ನ. ಅದಕ್ಕೆ ಯಾವುದೇ ಬಾಧಕವಿರುವುದಿಲ್ಲ. ಅದನ್ನೇ ಗೌತಮರು ವಿವರಿಸುತ್ತಾ "ಕುಮಾರಂ ಸಾಹದೇವ್ಯಮ್" ಎಂದರು. ನಾವು ಮಾನವರಾಗಿ ಹುಟ್ಟಿ ದೇವತ್ವಕ್ಕೇರುವ ಮೊದಲ ಸೋಪಾನವೇ ಅನ್ನ ಮೂಲ, ಅನ್ನ ಶುದ್ಧಿ, ನಿರಂತರ ದುಡಿಮೆಗಾರರಾಗಿ ದುಡಿಯುತ್ತಾ ನಾವು ದುಡಿದ ಅನ್ನವನ್ನೇ ತಿನ್ನುತ್ತಾ ಅಲ್ಪ ತೃಪ್ತರಾಗಿ ಬಾಳಿದರೆ ಅವರೇ "ದೇವತೆಗಳು".

ಹಾಗೇ ವಾಮದೇವರು ಇನ್ನೊಂದು ಅನ್ನದ ವಿಶೇಷವನ್ನೂ ಕಂಡು ಹಿಡಿದಿದ್ದಾರೆ. ಹಾಗೇ ಅದರ ವಿವರಣೆ ಸಹಿತ ಸೂತ್ರೀಕರಿಸಿದ್ದಾರೆ. ಅದೇನೆಂದರೆ ಹಸಿದಿದ್ದಾಗ ಜೀವಿಗಳಲ್ಲಿರುವ ಅನಿರ್ವಾರ್ಯತೆಯ ವಿಧೇಯತೆ, ಹೊಟ್ಟೆ ತುಂಬಿದ ಮೇಲೆ ಇರುವುದಿಲ್ಲ. ಅದರಲ್ಲೂ ಮಾನವ ಜೀವಿಯಲ್ಲಿ ಅದು ಅಹಂಕಾರವಾಗಿ ಮಾರ್ಪಡುತ್ತದೆ ಎಂದಿದ್ದಾರೆ. ಅದನ್ನು ವಿವರಿಸುತ್ತಾ ಅದಕ್ಕೆ ಕಾರಣ, ಕರ್ತಾ, ಹಾಗೆ ಪರಿಣಾಮ ಫಲಗಳನ್ನೂ ವಿವರಿಸಿದ್ದಾರೆ ಗಮನಿಸಿ.

ಋಗ್ವೇದ ಮಂಡಲ-೪, ಸೂಕ್ತ-೨೬, ಮಂತ್ರ ೧-೭
अ॒हं मनु॑रभवं॒ सूर्य॑श्चा॒हं क॒क्षीवाँ॒ ऋषि॑रस्मि॒ विप्र॑: ।
अ॒हं कुत्स॑मार्जुने॒यं न्यृ॑ञ्जे॒ऽहं क॒विरु॒शना॒ पश्य॑ता मा ॥  
अ॒हं भूमि॑मददा॒मार्या॑या॒हं वृ॒ष्टिं दा॒शुषे॒ मर्त्या॑य ।
अ॒हम॒पो अ॑नयं वावशा॒ना मम॑ दे॒वासो॒ अनु॒ केत॑मायन् ॥ 
अ॒हं पुरो॑ मन्दसा॒नो व्यै॑रं॒ नव॑ सा॒कं न॑व॒तीः शम्ब॑रस्य ।
श॒त॒त॒मं वे॒श्यं॑ स॒र्वता॑ता॒ दिवो॑दासमतिथि॒ग्वं यदाव॑म् ॥  
प्र सु ष विभ्यो॑ मरुतो॒ विर॑स्तु॒ प्र श्ये॒नः श्ये॒नेभ्य॑ आशु॒पत्वा॑ ।
अ॒च॒क्रया॒ यत्स्व॒धया॑ सुप॒र्णो ह॒व्यं भर॒न्मन॑वे दे॒वजु॑ष्टम् ॥
भर॒द्यदि॒ विरतो॒ वेवि॑जानः प॒थोरुणा॒ मनो॑जवा असर्जि ।
तूयं॑ ययौ॒ मधु॑ना सो॒म्येनो॒त श्रवो॑ विविदे श्ये॒नो अत्र॑ ॥ 
ऋ॒जी॒पी श्ये॒नो दद॑मानो अं॒शुं प॑रा॒वत॑: शकु॒नो म॒न्द्रं मद॑म् ।
सोमं॑ भरद्दादृहा॒णो दे॒वावा॑न्दि॒वो अ॒मुष्मा॒दुत्त॑रादा॒दाय॑ ॥  
आ॒दाय॑ श्ये॒नो अ॑भर॒त्सोमं॑ स॒हस्रं॑ स॒वाँ अ॒युतं॑ च सा॒कम् ।
अत्रा॒ पुरं॑धिरजहा॒दरा॑ती॒र्मदे॒ सोम॑स्य मू॒रा अमू॑रः ॥ 


ಮಾನವನು ತಾನು ತಿನ್ನುವ ಯಾವುದೇ ಆಹಾರವನು ಅನ್ನವೆಂದೇ ಕರೆಯಲ್ಪಡುತ್ತದೆ. ಅವುಗಳಲ್ಲಿ ಮುಖ್ಯವಾಗಿ:

೧. ರಸ
೨. ಸತ್ವ
೩. ಸ್ನೇಹ
೪. ಧಾತು
೫. ರುಚಿ
೬. ಪಿಷ್ಠ
೭. ಪ್ಲೀಹ
ಎಂಬ ೭ ರೀತಿಯ ಪ್ರತ್ಯೇಕ ಗುರುತಿಸಲಾಗುವ ವಸ್ತು ವಿಶೇಷಗಳಿರುತ್ತವೆ. ಅವುಗಳಲ್ಲಿ ನಮ್ಮ ದೇಹಕ್ಕೆ ಪೂರಕ ಮತ್ತು ಅಗತ್ಯವಾದವು ಬೇಕು. ಆದರೆ ಅನಗತ್ಯವಾದವೂ ಅವುಗಳಲ್ಲಿ ಸೇರಿರುತ್ತವೆ. ಹಾಗಾಗಿ ಅದೆಲ್ಲಾ ರಜೋ ಸತ್ವಗಳಾಗಿ ಪರಿವರ್ತನೆ ಹೊಂದುವುದರಿಂದ ಒಂದು ರೀತಿಯ ಕರ್ಷಣ ತರಂಗಗಳಾಗಿ ರೂಪುಗೊಂಡು ಮೆದುಳನ್ನು ಸೇರಿ ಮಾನವನನ್ನು ಪ್ರಚೋದಿಸುತ್ತದೆ. ಆ ಪ್ರಚೋದಕವೇ ಅರ್ಥಾತ್ ಅದರ ಪರಿಣಾಮವೇ ಅಹಂಕಾರ, ಅವಿವೇಕ, ಸೋಮಾರಿತನ, ಜಾಡ್ಯಾದಿಗಳು, ಅಕಾಲಿಕ ವೃದ್ಧಾಪ್ಯ ಮತ್ತು ಮರಣ ಕಾರಣವಾಗುತ್ತವೆ. (ಅದನ್ನು ಈಗಿನ ವಿಜ್ಞಾನ ಬ್ರೈನ್ ಹೆಮೊರ್ಹೇಜ್ ಎಂದು ಗುರುತಿಸಿದೆ) ನೀವು ತಿನ್ನುವ ಅನ್ನ ನಿಮಗಾಗಿರಲಿ, ನಿಮ್ಮದಾಗಿರಲಿ. ಅದು ಬಿಟ್ಟು
·        "ಕುತ್ಸವಾಗದಂತೆ,
·        ಕವಿರುಶನವಾಗದಂತೆ,
·        ಭೂಮದವಾಗದಂತೆ,
·        ಅನುಕೇತವಾಗದಂತೆ,
·        ಮಂದಸತ್ಯವಾಗದಂತೆ,
·        ಆಶುಪತ್ವವಾಗದಂತೆ,
·        ಮಂದ್ರಮದವಾಗದಂತೆ" ಆಹಾರವಿರಬೇಕು.ಇಲ್ಲವಾದಲ್ಲಿ:
"ನವಸಾಕಂ ನವತೀ ಶಂಬರಸ್ಯ"
"ಶತತಮಂ ವೇಶ್ಯಂ ಸರ್ವತಾತಾ"
"ವಿರಸ್ತು ಪ್ರಶ್ನೇನ ಶ್ಯೇನೀಭ್ಯ ಆಶುಪತ್ವಾ"
ಇತ್ಯಾದಿ ನಿಮ್ಮಂಕೆಗೆ ಮೀರಿದ ಹಲವು ರೀತಿಯ ಉಪಪರಿಣಾಮಗಳಿಗೆ ಕಾರಣವಾಗುತ್ತದೆ ಎಂದರು ವಾಮದೇವರು. ಹಾಗೇ "ಪುರಂಧೀರಜಹಾದರಾತಿಃ" ಯಾಗಿರಬೇಕು ಅನ್ನ. ಅದೇ ಸತ್ಯವೆಂದರು. ಹಾಗೇ ಮುಂದುವರಿದು ಅನ್ನವು ಹೇಗೆ ಸೃಜನಶೀಲ, ಪ್ರತ್ಯುತ್ಪಾದಕ, ರೋಚಕ, ವಿರೇಚನ ಎನ್ನುವುದನ್ನು ತಿಳಿಸುತ್ತಾ ಈ ಸೂತ್ರಗಳಲ್ಲಿ ವಿವರಿಸಿದ್ದಾರೆ. ಅದು ಹೀಗಿದೆ:

ಋಗ್ವೇದ ಮಂಡಲ-೪, ಸೂಕ್ತ-೨೭, ಮಂತ್ರ ೧-೫
गर्भे॒ नु सन्नन्वे॑षामवेदम॒हं दे॒वानां॒ जनि॑मानि॒ विश्वा॑ ।
श॒तं मा॒ पुर॒ आय॑सीररक्ष॒न्नध॑ श्ये॒नो ज॒वसा॒ निर॑दीयम् ॥
न घा॒ स मामप॒ जोषं॑ जभारा॒भीमा॑स॒ त्वक्ष॑सा वी॒र्ये॑ण ।
ई॒र्मा पुरं॑धिरजहा॒दरा॑तीरु॒त वाताँ॑ अतर॒च्छूशु॑वानः ॥
अव॒ यच्छ्ये॒नो अस्व॑नी॒दध॒ द्योर्वि यद्यदि॒ वात॑ ऊ॒हुः पुरं॑धिम् ।
सृ॒जद्यद॑स्मा॒ अव॑ ह क्षि॒पज्ज्यां कृ॒शानु॒रस्ता॒ मन॑सा भुर॒ण्यन् ॥
ऋ॒जि॒प्य ई॒मिन्द्रा॑वतो॒ न भु॒ज्युं श्ये॒नो ज॑भार बृह॒तो अधि॒ ष्णोः ।
अ॒न्तः प॑तत्पत॒त्र्य॑स्य प॒र्णमध॒ याम॑नि॒ प्रसि॑तस्य॒ तद्वेः ॥
अध॑ श्वे॒तं क॒लशं॒ गोभि॑र॒क्तमा॑पिप्या॒नं म॒घवा॑ शु॒क्रमन्ध॑: ।
अ॒ध्व॒र्युभि॒: प्रय॑तं॒ मध्वो॒ अग्र॒मिन्द्रो॒ मदा॑य॒ प्रति॑ ध॒त्पिब॑ध्यै॒ शूरो॒ मदा॑य॒ प्रति॑ ध॒त्पिब॑ध्यै ॥

ಅನ್ನ ವಿಷಯವಾಗಿ ಚಿಂತನೆಯೇ ಒಂದು ವಿಶೇಷ. ಏಕೆಂದರೆ ಈ ಲೇಖನ ಬರೆಯುವಾಗ ತಿಂದ ಅನ್ನವೂ ಚಿಂತನಾ ವಿಷಯದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ೨ ದಿನದಿಂದ ಏನನ್ನೂ ತಿನ್ನದೆ ಬರೇ ನೀರು ಕುಡಿದು ಶುದ್ಧನಾಗಿ ಈ ವಿಚಾರ ಬರೆಯುತ್ತಿದ್ದೇನೆ (ಬ್ರಹ್ಮರ್ಷಿ ಕೆ ಎಸ್ ನಿತ್ಯಾನಂದರು). ಏಕೆಂದರೆ ಈ ಕಾಲದಲ್ಲಿ ಶ್ರಮಿಕನಿಗೆ ಸಿಗುವ ಅನ್ನ ದೂಷಿತವಾಗಿರುತ್ತದೆ. ಅದನ್ನೇ ಗೌತಮರು ಉದಾಹರಿಸಿದ್ದಾರೆ: "ಕೃಶಾನುರಸ್ತಾಮನಸಾ" - ನಿರಂತರ ಅನ್ನ ವ್ಯವಸ್ಥೆಯೂ ಒಂದಲ್ಲಾ ಒಂದು ಕಾರಣದಿಂದ ದೂಷಿತವೇ ಆಗಿರಲು ಸಾಧ್ಯ. ಹಾಗಾಗಿ ವಿವೇಚಿತ ಅನ್ನ ಬೇಕೆಂದರೆ ಮುಂದೆ ಹೇಳುವ ವಿಧಾನದಲ್ಲಿ ಅನ್ನವನ್ನು ಹೊಂದಿಸಿಕೊ ಎಂದಿದ್ದಾರೆ. ಅದನ್ನು ಒಂದು ಚೌಪದಿಯ ರೀತಿಯಲ್ಲಿ ಬರೆಯುತ್ತೇನೆ. ಅದಕ್ಕೆ ಮಾತ್ರ ನಾನು ಶಕ್ತನೆಂದು ಹೇಳಬಲ್ಲೆ.

ಇಂದುಧರ ತಾನೊಂದು ಜಟೆಯಲಿ ಸೃಜಿಸಿದ
ನಂದು ವೀರಭದ್ರನ ಕೊಂದು ಕಳೆದನೇ ದಕ್ಷನಾ
ಎಂದಿಗೂ ಕೊಲಲಾರ ಶಿವ ಕಾರಣನಾತನೇ ಕಾಲ
ನೆಂದರಿತೆಯೆಲ್ಲವೊ ಮನುಜ ಹರ ಒಲಿವನಲ್ಲದೆ ಕೊಲುವನಲ್ಲ ಮರುಳೇ || ೧ ||

ಮುನಿ ಮೃಕಂಡುವಿಗಿತ್ತ ವರವನು ಅಂದು ಶಿಶು
ಮುನಿಯಾದ ಮಾರ್ಕಂಡೇಯ ಸತ್ತನೆ ಸುಳ್ಳೆಂದ
ತನ್ನ ವರ ಹದಿನಾರು ತನ್ನಳತೆಯಲ್ಲೆಂದು ಉಳಿಸಿ
ತನ್ನ ಭಕುತನ ಕಾದನೇ ಹೊರತು ಕೊಲೆಗೈಸಲಿಲ್ಲ ಧರ್ಮನ ತಡಕಿ ನಿಲ್ಲಿಸಿದಾ || ೨ ||

ಅನ್ನ ಓಷಧಿಗಳಿಗೆ ಪಶುಪತಿ ರುದ್ರನೇ ಮೊತ್ತ
ಇನ್ನುಳಿದ ಜೀವನವೇನು ತನ್ನವರ ಸಲಹುವ
ಹುನ್ನಾರವಿದು ಕಾಣು ತನ್ನಕ್ಷಿಯೊಳುದಿಸಿದ ಬಾಧೆ
ಯನು ತಾನೇ ಸುಟ್ಟು ಭಕುತರ ಕಾವ ಭಕ್ತರ ಪೊರೆವನೈ ಶಂಕರನು ಕಾಣಿರೊ || ೩ ||

ಅನ್ನವೆಂದರೆ ಶಿವನು ಕುಡಿವೆನೆಂದರೆ ಗಂಗೆ
ಇನ್ನು ತಾನಟ್ಟು ಬಡಿಸುವಳು ಅನ್ನಪೂರ್ಣೆ
ಅನ್ನವೇ ಜ್ಞಾನ ಸುಬ್ರಹ್ಮಣ್ಯ ಬಯಕೆಯೇ
ವಿನಾಯಕ ಶಿವಸುತ ಅನ್ನ ತಿನ್ನೆಲೊ ಮನುಜ ನೀ ಮಣ್ಣ ತಿನ್ನದಿರು ಎಂದಿಗೂ || ೪ ||

ಶಿವಾರ್ಪಣವೆಂದು ಭುಂಜಿಸಲು ವಿಷವೆಲ್ಲ
ಶಿವಧರಿಸಿ ಅಮೃತವನ್ನುಣ್ಣಿಸುತ ತಾ
ಶಿವ ನೀಡುವನು ಭಕುತರಿಗೆ ನಿರಂತರ
ಶಿವ ಶಿವಾ ತನ್ನಯ ಕರುಣಾ ಜಲಧಿಯ ಮುಚ್ಚಿ ಮೃಢನಾದೆಯಲ್ಲಾ || ೫ ||

ಈ ಪಂಚ ಸೂತ್ರದಲಿ ಹೊಂಚಿ ನಿಂತಿದೆ ಲೋಕ
ಈ ಪ್ರಪಂಚದ ಎಲ್ಲ ಜೀವಿಗಳು ಪಶುಪತಿಯಾಧೀನ
ಈ ಪುರಾತನ ಸತ್ಯವರಿತ ಗೌತಮ ತಾನು ಶಿವ ಸೂತ್ರದೊಳಗಳವಡಿಸಿ ಬರೆದ |
ಈತಿ ಬಾಧೆಗಳೆಲ್ಲ ತೀರ್ಚುವ ಸುಲಭದನ್ನವ ಕೊಟ್ಟು
ಈಶನೇ ಸಕಲ ಲೋಕಕೆ ಬಾಧ್ಯನೆಂದೆಂಬ ರೀತಿಯೊಳು
ಈಶೇಷ ಗಣಿತ ಸೂತ್ರವ ನೊರೆವೆ ಮನುಜ ನೀನರಿತೊಡೆ ನಿನಗೆ ಅನ್ನ ಋಣವಿಲ್ಲಾ ||ತ್ವಕ್ಷಸಾ ಪುರಂಧಿರಜಹಾದರಾತೀ
ಹಕ್ಷಿಪಜ್ಯಾ ಕೃಶಹಾನುರಸ್ತಾಂ ಮನ
ಸಾಕ್ಷಿಯೊಳು ನಿಜವಿದೆ ಮೂರರಾ ಗಂಟಿದೆ ನಂಟಿದೆ ನೊಂದೆನೆನ ಬೇಡ |
ಅಕ್ಷಿಯನು ತೆರೆದು ನೀ ಅವಧರಿಸು
ಈಕ್ಷಿಸುವುದು ಸುಲಭವು ಶ್ರೀಶಸಖ
ರಕ್ಷಿಸುವ ನಿರಂತರ ಅನ್ನ ನೀರನು ಒದಗಿಸುವ ನಿರಂತರ ಪಶುಪತಿಯಾತ || ೧ ||

ಅಂತಃಪತತ್ ಪತತ್ರ್ಯಸ್ಯ ಪರ್ಣಂ
ಅದಃ ಯಾಮನಿ ಪ್ರಸಿತಸ್ಯ ತದ್ವೇ
ಮದಃ ಮದಂಕರೇ ನೀಚರೆ ನಿಶ್ಚಲಾ ನಿರ್ವಿಕಾರೇ |
ಅಧಃ ಶ್ವೇತ ಕಲಶಂ ಗೋಭಿರಕ್ತಂ
ತದಃ ಶುಕ್ರಮಂಧ ಮಘವಾ ವಿಪ್ಸತಿಂ
ಊಹುಃ ಪಿಬಧ್ಯೈ ಶೂರೋ ಮದಾಯ ಪ್ರತಿ ಶ್ವೇತಕಲಶಂ || ೨ ||

ಈಯೆರಡು ಗೂಡಸೂತ್ರಗಳರಿತವನೆ
ಈ ಯಾಗಾದಿ ಜೀವ ಸೂತ್ರಗಳನರಿವ ಜೀವ
ನ ಯೋಗವೆಲ್ಲವು ಅಡಕವಿದೆ ಚಿಂತಿಸದಿರೈ ಮಾನವನೆ ನೀನೂ
ಹರ ಕಾಯ್ವನೀ ನಿನ್ನ ಕಾಯಕದೊಳಿರಲು
ಬರಿದೆ ಕಾಲ ಕಳೆಯದಿರು ಕಾಯಕವೇ ಕೈಲಾಸ
ವರಿತು ನೀ ತೊಡಗಿರಲು ನಿರಂತರ ಅನ್ನವೊದಗುವುದು ಅಮೃತವಾಗೀ || ೩ ||

ಇದರ ರಹಸ್ಯವಿದು ಕೇಳು ಯುಗಸಂಖ್ಯೆ
ಮೊದಲಾಗಿ ಇಪ್ಪತ್ತೆರಡು ನೂರರೊಳಾರು
ಪದುಮದಳ ಸಂಖ್ಯೆ ಜೀವರ ಉಸಿರಿನಾ ದಿನ ಸಂಖ್ಯೆಯೊಳಗೆ ಮೊತ್ತವಿಸು |
ಉದಯಿಸುವ ರವಿಕಿರಣ ಸಂಖ್ಯೆಯಲಿ
ಒದಗಿ ಕೂಡಲು ಮೊತ್ತವೇಳರ ಮೇಲೆ
ಬದಿಗಿಟ್ಟ ಶೇಷವೇ ನಿನ್ನರಿವು ಸುಜ್ಞಾನ ಅನ್ನವೇ ಬ್ರಹ್ಮ ನನ್ನಿಯಾ ಮಾತಿದು ಕೇಳೆಂಬೆ || ೪ ||

ಈ ರೀತಿಯಲ್ಲಿ ವಾಮದೇವರ ಅನ್ನ ಸಂಶೋಧನೆಯನ್ನು ನನ್ನ ಇತಿಮಿತಿಯಲ್ಲಿ ಬರೆದಿದ್ದೇನೆ. ಓದಿ ಅರ್ಥಮಾಡಿಕೊಂಡು ಬ್ರಹ್ಮಜ್ಞಾನ ಹೊಂದಿರೆಂದು ಹಾರೈಸುತ್ತೇನೆ. ಹಾಗೆ ಮುಂದಿನ ಲೇಖನದಲ್ಲಿ ಆತ್ರೇಯ ಮಂಡಲಕ್ಕೆ ಸಾಗೋಣ.

ಇಂತು ಸಜ್ಜನ ವಿಧೇಯ

ಕೆ. ಎಸ್. ನಿತ್ಯಾನಂದ

No comments:

Post a Comment