Friday, 30 May 2014

ಬೀಜಗಣಿತದ ಏಕವರ್ಣ ಸಮೀಕರಣ : ವಯೋಮಾನ ಲೆಕ್ಕ (Aptitude Interview Question)

ಮಲಯದೊಳ್ ಶ್ರೀ ಬಿಂದು ಎಂಬೀರ್ವ ಕಿನ್ನರಿಯರು
ಬಲು ಚೆಂದದಿಂ ಆಡುತಿರೆ ಬಂದು ಕೇಳಿದನಂದು
ಶರದಂಕೆಯ ಋತುರಾಜ ನಾನು ನಿನ್ನಾಯುಷವ ಬಿಂದುಬಿಟ್ಟು ಪೇಳೆಂದನು |
ಎನ್ನಯನದ ಬಿಂದುವಿನ ಗುಣಿತವು ಎನ್ನಾಯು, ಕರವರುಷದ
ಮುನ್ನ ಚಿಕ್ಕಿಗಿಂತ ನಾಲ್ಮೀರಿದೊಂದು ರವಿಕಾಂತಿ ಉದಿಸೆ,
ತಾಳೆಬೇಡ ತಾಳು ಮೊತ್ತಕೆ ಕಷ್ಟಗಳ ಕೂಡಿದರೂ ತಾಳಿಗೆ ಸಿಗೆ ತಾಳೈ ಸಿರಿ ತಾನೆಂದಳು  || ೨ ||

ಲೆಕ್ಕ:
ಶರದಂಕೆ = 5. ಐದನೇ ಋತುರಾಜ = ಹೇಮಂತ,
ಬಿಂದುಬಿಟ್ಟು = ಪೂರ್ಣ ಸಂಖ್ಯೆ.   
B = ತಂಗಿ ಬಿಂದುವಿನ ಪ್ರಸಕ್ತ ವಯಸ್ಸು,
S = ಅಕ್ಕ ಶ್ರೀಯ ಪ್ರಸಕ್ತ ವಯಸ್ಸು
ಪ್ರಸಕ್ತ: ನಯನ = 3. ಹಾಗಾಗಿ S = 3B
ಕರವರುಷ = 2 ವರ್ಷದ ಹಿಂದೆ:
   ಬಿಂದು: B - 2
   ಶ್ರೀ:    S - 2,

ಸಮೀಕರಣ:   
ನಾಲ್ಮೀರಿದೊಂದು ರವಿಕಾಂತಿ ಉದಿಸೆ = 4ನ್ನು ಗುಣಿಸಿ 1 ಕೂಡಿಸಿ
S - 2 = 4(B - 2) + 1
3B - 2 = 4B - 7
ತಂಗಿಯ ಪ್ರಸಕ್ತ ವಯಸ್ಸು: B = 5, ಅದಕ್ಕಿಂತ 8 (ಅಷ್ಟಕಷ್ಟಗಳು) ಜಾಸ್ತಿ => 13
ಅಕ್ಕಳ ಪ್ರಸಕ್ತ ವಯಸ್ಸು: S = 3B = 15, ಅದಕ್ಕಿಂತ 8 (ಅಷ್ಟಕಷ್ಟಗಳು) ಜಾಸ್ತಿ => 23
  
ವಿಶ್ಲೇಷಣೆ:-
ಈ ಏಕವರ್ಣ ಸಮೀಕರಣವನ್ನು ಭಾಸ್ಕರಾಚಾರ್ಯರ ಬೀಜಗಣಿತ ಉದಾಹರಣೆಗಳಿಂದ ಜೋಪಾನವಾಗಿ ೩ ದಿವಸ ಸತತ ಅಧ್ಯಯನದಿಂದ ರಚಿಸಿದೆನು. ರಚನಾ ಕೌಶಲ್ಯದಲ್ಲಿ ಶಬ್ದ ಚಮತ್ಕಾರಗಳೂ ಬಂದಿವೆ. ಲೆಕ್ಕದ ಆದಿಯಲ್ಲಿ ಪ್ರಾಕೃತಿಕ ವಿಭಜನೆಯನ್ನು ವರ್ಣಿಸಿದೆ. ಈ ಲೋಕದ ತ್ರಿಭುವನಗಳೆಂದರೆ ಸಹ್ಯಾದ್ರಿ ಮಲೆನಾಡು, ಪಶ್ಚಿಮ ಕರಾವಳಿಯಲ್ಲಿನ ದಕ್ಷಿಣ ಕನ್ನಡ ಮತ್ತು ಅದರ ಮುಂದಿನ ದಟ್ಟಾರಣ್ಯವುಳ್ಳ ಮಲಯ ಪ್ರಾಂತ್ಯ. ಈ ೩ ಪ್ರಾಂತ್ಯದಲ್ಲಿ ಪ್ರಸಕ್ತ ನಾಗಾರಾಧನೆ ಎಂದರೆ ಮನಸ್ಸಿನ ಆರಾಧನೆಯು ಪೂರ್ಣ ರೂಪದಲ್ಲಿ ಕಂಡುಬರುತ್ತದೆ. ಮಲೆನಾಡಿನಲ್ಲಿ ಭೂತಕಾಲೀನ ವಿಚಾರಗಳೇ ಮನಸ್ಸಿನ ಭೂತಾರಾಧನೆ, ದಕ್ಷಿಣ ಕನ್ನಡದಲ್ಲಿ ಮನಸ್ಸಿನ ವರ್ತಮಾನ ಸ್ವರೂಪದ ನಾಗಾರಾಧನೆ, ಮಲಯಾಳದಲ್ಲಿ ಮನಸ್ಸಿನ ಭವಿಷ್ಯತ್ ಸ್ವರೂಪದ ಯಕ್ಷಾರಾಧನೆ ಇಂದಿಗೂ ಅಳಿದುಳಿದು ಬಂದಿದೆ.

ಮನೋ ಆವರ್ತನಾ ಚಿಹ್ನೆ. ಅದನ್ನೇ ನಾಗಾರಾಧನೆಯಲ್ಲಿ ಪವಿತ್ರವೆನ್ನುತ್ತಾರೆ
ಕಿನ್ನರಿಯನ್ನು ನುಡಿಸುವ ಜೋಗಿಯ ಕಥೆ ನಿಮಗೆಲ್ಲ ತಿಳಿದೇ ಇದೆ. ಆದರೆ ಕಿನ್ನರಿ ಎಂಬುದು ಕಿಟಾರನೆ ಕಿರುಚುವ ಚಿಕ್ಕ ಪುಟ್ಟಿ ಎಂಬರ್ಥ ಕೊಡುತ್ತದೆಯಾದರೂ ಮಾನವನ ಸಾಧನಾ ಏರಿಕೆಯಲ್ಲಿ ಬರುವ ಕಿನ್ನರ ವರ್ಗವನ್ನೂ ಪ್ರತಿನಿಧಿಸುತ್ತದೆ. ಕಿನ್ನರಿ ಎಂದರೆ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಸುತ್ತ ಮುತ್ತಲಿನ ಕಿರಿದಾದ ವಿಚಾರಗಳನ್ನು ಅರಿತು ಹಿರಿಯರನ್ನೂ ಮೀರಿಸುವ ಚಾಣಾಕ್ಷೆ.

ಮಕ್ಕಳಿಗೆ ಗಣಿತ ಸಮಸ್ಯೆಗಳನ್ನು ಒಡ್ಡುವಾಗ ಹೆಚ್ಚಾಗಿ ಪರಿಸರ ಪ್ರೇಮ ಬೆಳಸುವ ಸಲುವಾಗಿ ಕಾಡು ಮೇಡುಗಳ ವರ್ಣನೆ ಇರಬೇಕು. ಹಾಗಾಗಿ ಇಲ್ಲಿ ಮಲಯ ಪ್ರಾಂತ್ಯವನ್ನು ಆರಿಸಿಕೊಂಡೆ. ರಜೆ ದಿನಗಳಲ್ಲಿ ಅಕ್ಕತಂಗಿಯರಿಬ್ಬರು ಅಂಗಳದಲ್ಲಿ ಆಡುತ್ತಿರುವ ದೃಷ್ಯವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾ ಅಲ್ಲಿಗೆ ಬಂದಂತಹಾ ಒಬ್ಬ ಯುವಕನು ತನ್ನ ಹೆಸರನ್ನು "ಶರದಂಕೆಯ ಋತುರಾಜ" (ಹೇಮಂತ) ಎಂದು ಹೇಳುತ್ತಾ ಶ್ರೀಯ ವಯಸ್ಸು ಕೇಳಿದ ಕೂಡಲೆ ಗಣಿತದ ಒಗಟನ್ನೇ ಒಡ್ಡುತ್ತಾರೆ ಸಹೋದರಿಯರು.

ಇಲ್ಲಿ ಋತುಜ್ಞಾನವೆಂಬ ಪರಿಸರ ವಿಜ್ಞಾನ ಅಡಗಿದೆ. ಒಂದು ವರ್ಷವನ್ನು ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ ಎಂಬ 6 ಋತುಗಳು ಆಳುತ್ತವೆ. ಋತುಗಳ ಅಧ್ಯಯನವು ಪ್ರಾಕೃತಿಕ ಬದಲಾವಣೆ, ವಾತಾವರಣ, ಆಹಾರ ವಿಹಾರ ಪಥ್ಯ, ಆರೋಗ್ಯ ರಕ್ಷಣೆ, ಜ್ಞಾನಾರ್ಜನೆ, ಕರ್ಮವಿಪಾಕಗಳಿಗೆ ಬಹಳ ಮುಖ್ಯ.

ಶ್ರೀಯು "ಎನ್ನಯನದ" ಎಂಬ ಶಬ್ದದಿಂದ ಒಗಟನ್ನು ಆರಂಭಿಸುತ್ತಾಳೆ. ಇಲ್ಲಿ ಋತುವೆಂಬ ಕಾಲದ ಲೆಕ್ಕ ಬಳಸಿದ ಯುವಕನಿಗೆ "ಎನ್ನ + ಅಯನದ" ಎಂದು ಗೋಜಲು ಮಾಡುವ ಉದ್ದೇಶವಿದೆ. ಅಯನ ಎಂದರೆ ೬ ತಿಂಗಳ ಕಾಲ. ಎರಡು ಅಯನಗಳಾದ ದಕ್ಷಿಣಾಯನ ಮತ್ತು ಉತ್ತರಾಯನಗಳು ಒಂದು ಸಂವತ್ಸರ (ವರ್ಷವನ್ನು) ಉಂಟುಮಾಡುತ್ತವೆ. ಆದರೆ ಇಲ್ಲಿ ಅಡಗಿರುವುದು "ಎನ್ + ನಯನ" ಎಂಬ ಪ್ರಾಕೃತ ನುಡಿಗಟ್ಟು. ನಯನ ಎಂಬ ಸಂಖ್ಯೆಯು ತ್ರಿನಯನ ಅಥವಾ ತ್ರಿನೇತ್ರ ಎಂಬ ಕಾರಣ ೩.

"ಎನ್ನಯನದ ಬಿಂದುವಿನ ಗುಣಿತವು ಎನ್ನಾಯು" ಎಂದರೆ ತನ್ನ ತಂಗಿ ಬಿಂದುವಿಗಿಂತ ಇವಳ ವಯಸ್ಸು ೩ ಪಟ್ಟು ಎಂದರ್ಥ. "ಎನ್ನಯನದ ಬಿಂದುವಿನ" ಎಂದಾಗ ತನ್ನ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿಕೊಂಡ ತಂಗಿಯ ಮಧುರ ಸಂಬಂಧದ ದ್ಯೋತಕ.

"ಕರವರುಷ ಮುನ್ನ" : ಕರ = ಕೈ = ೨ ವರ್ಷದ ಹಿಂದೆ.

"ನಾಲ್ಮೀರಿದೊಂದು ರವಿಕಾಂತಿ ಉದಿಸೆ" - ನಾಲ್ಕನ್ನು ಮೀರಿ ಸೂರ್ಯನಂತೆ ಒಂದೇ ಇರುವುದು. ಅಂದರೆ ಸಮೀಕರಣದಲ್ಲಿ ನಾಲ್ಕು ಪಟ್ಟು ಗುಣಿಸಿ ಅದಕ್ಕೆ ಒಂದನ್ನು ಸೇರಿಸಬೇಕೆಂದರ್ಥ.

"ತಾಳೆಬೇಡ ತಾಳು" : ಈ ಹಂತಕ್ಕೆ ಸಮೀಕರಣ ಬಿಡಿಸಿದಾಗ ಬಿಂದುವಿನ ವಯಸ್ಸು ೫, ಶ್ರೀಯ ವಯಸ್ಸು ೧೫ ಎಂದು ಬಂದಿರುತ್ತದೆ. ಲೆಕ್ಕವಾದೊಡನೆಯೇ ತಾಳೆ ನೋಡುವುದು ಅಭ್ಯಾಸವಾಗಿರುತ್ತದೆ. ಆದರೆ ಆತುರಗಾರನಿಗೆ ಬುದ್ಧಿ ಮಟ್ಟ ಎಂಬ ಎಚ್ಚರಿಕೆ ಇಲ್ಲಿದೆ. ಈ ಹಂತದಲ್ಲಿ ತಾಳೆ ನೋಡಬಾರದು ಎಂದು ಹೇಳುತ್ತಾಳೆ.

"ಮೊತ್ತಕೆ ಕಷ್ಟಗಳ ಕೂಡಿದರೂ": ಹಿಂದೆ ಬಂದ ಉತ್ತರಕ್ಕೆ ಕಷ್ಟದಂಕಿ ೮ನ್ನು ಕೂಡಿದರೆ ಬಿಂದು ೧೩ ಮತ್ತು ಶ್ರೀ ೨೩ ಎಂದು ಉತ್ತರ ಸಿಗುತ್ತದೆ.

"ತಾಳಿಗೆ ಸಿಗೆ ತಾಳೈ ಸಿರಿ ತಾನೆಂದಳು": ಈ ಲೆಕ್ಕ ಮಾಡಿದರೂ ತಾನು ತಾಳಿ ಕಟ್ಟಿಸಿಕೊಳ್ಳುವುದಕ್ಕೆ ಸಿಗುವವಳಲ್ಲ ಎಂಬ ಘಾಟಿ ನುಡಿಯಿಲ್ಲಿದೆ. ಇದು ಪ್ರಾಸಕ್ಕೆ ಬದ್ಧವಾಗಿ ತಾಳಿ, ತಾಳೈ, ತಾನೆಂ.. ಸಿಗೆ, ಸಿರಿ.. ಹೀಗೆ ಶ್ರೀಯ ತದ್ಭವ ಸಿರಿ ಎಂಬ ಸಂದೇಶವೂ ಇದೆ. ಶ್ರೀ ಎಂಬುದು ಅತ್ಯುತ್ಕೃಷ್ಟ ಸಂಯುಕ್ತಾಕ್ಷರ. ಶ್ + ರ + ಈ = ಶ್ರೀ = ಪ್ರಕೃತಿ / ಮಾಯೆ. ಶ್ರೀವಿಧ್ಯೆ ಎಂಬುದು ಅತ್ಯುನ್ನತ ವಿಧ್ಯೆ. ಸರಿಯಾಗಿ ಗೊತ್ತಿಲ್ಲದೆ ಅದರ ಸುದ್ದಿಗೆ ಹೋದರೆ ಅಷ್ಟೇ ಅಪಾಯಕಾರಿಯೂ ಹೌದು. ಬಿಂದು ಎಂದರೆ ಪ್ರತಿಯೊಂದು ರೇಖಾಕೃತಿಯ ಮೂಲ. ಇನ್ನು ಸಿರಿ-ಕುಮಾರರ ವರ್ಣನೆಯು ತುಳು ಪಾಡ್ದನಗಳಲ್ಲಿ ಹೇರಳವಾಗಿ ಕಾಣಸಿಗುತ್ತದೆ. ನಂದಳಿಕೆಯಲ್ಲಿ ಸಿರಿಯ ಜಾತ್ರೆಯಂತೂ ಬಹಳ ಪ್ರಖ್ಯಾತಿ ಹೊಂದಿದೆ. ಸಿರಿಭೂವಲಯವು ಲಭ್ಯ ಕನ್ನಡದ ಪ್ರಪ್ರಥಮ ಕೃತಿ. ಅದರ ಸಿರಿಯೇನೆಂಬೆ - ೭೧೮ ಭಾಷೆಗಳಲ್ಲಿ ಕೇವಲ ಕನ್ನಡದ ಅಂಕಿಗಳು ಡೀಕೋಡ್‍ಗೊಂಡು ರಾಶಿ ರಾಶಿ ಜ್ಞಾನ ಭಂಡಾರವನ್ನೇ ಎಲ್ಲಾ ಭಾಷೆಗಳಲ್ಲಿ ತೆರೆದಿಡುತ್ತದೆ. ಹಾಗಾಗಿ ಈ ಶ್ರೀ = ಸಿರಿ = ಸರ್ವಭಾಷಾಮಯೀ ಭಾಷಾ = ೬೭ ಲಕ್ಷ ಕೋಟಿ ಶಬ್ದಗಳುಳ್ಳ ಕನ್ನಡ.  "ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ".

ಹೆಣ್ಣಿನ ವಯಸ್ಸು ಕೇಳಬೇಡ ಎಂಬ ನಾಣ್ನುಡಿ ಇದೆ. ಕೇಳಿದಾಗ ಕ್ಷಣದಲ್ಲಿ ಜಟಿಲವಾದ ಗಣಿತದ ಒಗಟನ್ನು ಒಡ್ಡಿ ಜಾರಿಕೊಳ್ಳುತ್ತಿದ್ದರು ಭಾರತೀಯ ಯುವತಿಯರು. ಪ್ರಸಕ್ತ ಲೆಕ್ಕವು ಅದರ ಒಂದು ಉದಾಹರಣೆಯಷ್ಟೆ. ಆದರೆ ಹೆಂಗೆಳೆಯರು ಒಡ್ಡುತ್ತಿದ್ದ ಶಬ್ದ ಚಮತ್ಕಾರದಲ್ಲಿ ಬೆಸೆದ ಗಣಿತ ಸಮೀಕರಣವನ್ನು ಸಿದ್ಧಪಡಿಸುವುದು ಪುರುಷರಿಗೆ ಅಷ್ಟು ಸುಲಭಸಾಧ್ಯವಲ್ಲ. ಏಕೆಂದರೆ ಹೆಣ್ಣಿನ ಚಿಂತನಾ ಶೈಲಿಗೂ, ಗಂಡಿನ ಚಿಂತನಾ ಶೈಲಿಗೂ ಅಜಗಜಾಂತರ ವ್ಯತ್ಯಾಸವಿದೆ. ಬಳೆತೊಟ್ಟ ಕೈಯಿಗೆ ಇಳೆಯಾಧಿಪತ್ಯವದು ಪಥ್ಯವಲ್ಲ ಎಂದು ನಾಣ್ನುಡಿ ಇದೆ. ಅವರವರ ದೈಹಿಕ, ಮಾನಸಿಕ, ಸಾಮಾಜಿಕ ಕ್ಷಮತೆಗೆ ಸೂಕ್ತವಾದ ಕೆಲಸಗಳು ಹಿಂದೆ ನಿಗಧಿತವಾಗಿರುತ್ತಿದ್ದವು. ಆದರೆ ಬಳೆತೊಡುವುದರಿಂದ ಹೆಂಗೆಳೆಯರಲ್ಲಿ ಧೀಶಕ್ತಿ ಪ್ರಚೋದಿಸಲ್ಪಡುತ್ತದೆ ಎಂಬುದು ದೇಹಶಾಸ್ತ್ರೀಯ ಸತ್ಯ.

ಇಂತಹಾ ವಯಸ್ಸಿನ ಸಮೀಕರಣಗಳಲ್ಲಿ ಕಾಲ ಗಣನೆಯ ಲೆಕ್ಕವಿದೆ. ಬಿಡಿಸುವವನು ತನ್ನ ಚಿಂತನೆಯನ್ನು ಲೆಕ್ಕದಲ್ಲಿ ಹೇಳಿದಷ್ಟು ಕಾಲ ಹಿಂದೆಯೋ, ಮುಂದೆಯೋ ತೆಗೆದುಕೊಂಡು ಹೋಗಬೇಕಾಗುತ್ತದೆ. ಅಲ್ಲಿಗೆ ತಲುಪಿದಾಗ ಅದು ಇನ್ಯಾವುದೋ ಕಾಲದ ಭಾಗಾಂಶವನ್ನು ಸಮೀಕರಣ ಬಿಡಿಸಲಿಕ್ಕೆ ಬಳಸಬೇಕಾಗುತ್ತದೆ. ಒಂದು ವೇಳೆ ಯುವತಿಯು ತನ್ನ ವಯಸ್ಸನ್ನು ಹೇಳಲಿಚ್ಛಿಸದಿದ್ದರೆ ನಾಗನಂತೆ ಸುರುಳಿಯಾಕಾರದಲ್ಲಿ ಸುತ್ತಿ ಮೇಲೇಳಲಾರದಂತಹಾ ಸಮೀಕರಣವನ್ನು ನೀಡಿಬಿಡುತ್ತಿದ್ದಳು. ಕೈ-ಕೈಹಿಡಿದು ಸುತ್ತುವ ಭಂಗಿಯನ್ನು ಭಾರತೀಯ ಹೆಣ್ಣುಮಕ್ಕಳು ತಮ್ಮ ಆಟದಲ್ಲಿ ಸಹಜವಾಗಿ ಬಳಸುತ್ತಾರೆ. ಹಸ್ತಗಳ ಮಧ್ಯದಲ್ಲಿ ಉಂಟಾಗುವ ಅನಂತ ಚಿಹ್ನಯೇ ಮನೋತರಂಗದ ಆವರ್ತನಾ ಚಿಹ್ನೆ. ಅದನ್ನು ಕಿಕ್ಲೀ ಎಂಬ ಪಂಜಾಬೀ ಜಾನಪದೀಯ ನೃತ್ಯದಲ್ಲಿಯೂ ಅಳವಡಿಸಿಕೊಂಡಿದ್ದಾರೆ. ಇದನ್ನು ನಮ್ಮ ಮಲೆನಾಡಿನಲ್ಲಿ ಈ ಕೆಳಗಿನ ಜಾನಪದ ಪದ್ಯ ಹಾಡಿಕೊಂಡು ಸುತ್ತುತ್ತಾರೆ:
" ರತ್ತೋ ರತ್ತೋ ರಾಯನ ಮಗಳೇ, 
ಬಿತ್ತೋ ಬಿತ್ತೋ ಭೀಮನ ಮಗಳೇ,
ಹದಿನಾರೆಮ್ಮೆ ಕಾಯಿಸಲಾರೆ,
ಬೈಟು ಕಂಬ ಬಾಳೆಕಂಬ
ಕ್ಕುಕ್ಕರ  ಬಸವಿ ಕೂರೆ ಬಸವಿ "

ರತ್ತೋ x ಬಿತ್ತೋ + ಕುಕ್ಕರ x ಕೂರೆ ಎಂಬ ಎರಡೆರಡು ಎಳೆದಾಟಗಳಿವೆ. ಎರಡು ಸ್ಥಿರತೆಗಳ ನಡುವೆ ಒಂದು ಚಲನೆ ಉಂಟಾದಾಗ "ವಿದ್ಯುತ್" ಉತ್ಪನ್ನವಾಗುತ್ತದೆ ಎಂದು ಅಥರ್ವವೇದ ಹೇಳುತ್ತದೆ. ಕಿಕ್ಲಿ ಗಿರಕಿಲ್ಲಿ ಸ್ಥಿತಿಸ್ಥಾಪಕತ್ವ ಉಂಟಾಗುತ್ತದೆ. ಅದು ಎರಡು ಹಿಮ್ಮುಕ ಬಲಗಳ ಸೆಣಸಾಟವು ಒಂದು ಕೇಂದ್ರಸ್ಥಿತ ಬಲವನ್ನು ಹೇಗೆ ಉಂಟುಮಾಡುತ್ತದೆ ಎಂಬುದರ ಪ್ರಾತ್ಯಕ್ಷತೆ.


(೩ನೇ ಆಯಾಮದಲ್ಲಿ ಕಂಬುಕಂಠೀಯ ಸುರುಳಿಯಾಕಾರದಲ್ಲಿ ಕೇಂದ್ರಾಪಗ ಹಾಗೂ ಕೇಂದ್ರಾಭಿಗ ಬಲಗಳ ಬಂಧುರವು; ಜೀವ ವೇಗದಲ್ಲಿ)


(ಬಳೆಗಳೊಳಗೆ ಬಳೆಗಳಿದ್ದಂತೆ, ವಿಶ್ವ ವಿದ್ಯುತ್ಕಾಂತೀಯ ಪ್ರವೃತ್ತಿಯಲ್ಲಿ ಕೇಂದ್ರಾಪಗ ಮತ್ತು ಕೇಂದ್ರಾಭಿಗ ಬಲಗಳಿಂದ ಕ್ಷೇತ್ರಗಳ ಉತ್ತರಂಗ)
ಸೃಷ್ಟಿಯಲ್ಲಿನ ಎಲ್ಲಾ ಶಕ್ತಿಗಳು ಲಾಗರಿದಮಿಕ್ ಸುರುಳಿಯಲ್ಲಿವೆ.

ಇಲ್ಲಿ ಖಗೋಳದಿಂದ ಆರಂಭಿಸಿ ಭೂಪ್ರಕೃತಿಯವರೆಗಿನ ರಹಸ್ಯವೇ ಅಡಗಿದೆ. ಕಿಕ್ಲೀಯಲ್ಲಿ ಹಾಗೇ ಸುತ್ತುತ್ತಾ ಅಕ್ಕ-ತಂಗಿಯರು ಮುಂದೆ ಸಾಗಿದಾಗ ಬರುವ ಪಥವೇ ಈ ಖಗೋಳದಲ್ಲಿನ ಗ್ರಹಮಂಡಲ ಮಾದರಿ. ಎರಡು ಬಿಂದುಗಳ ಪರಸ್ಪರ ಕರ್ಷಣಾ ಬಲವೇ ಗ್ರಹಗತಿಗೆ ಕಾರಣ. ಇಲ್ಲಿ ಶ್ರೀ ಎಂದರೆ ಸೂರ್ಯನೇ ಎಂದು ಗಣಿಸಿದರೆ, ಅವನಿಂದ ಮಾಡಲ್ಪಟ್ಟ ಪಥವನ್ನು ಈ ಮನೋ ಆವರ್ತನಾ ಶೈಲಿಯಲ್ಲಿ ೭ ಆಕಾಶ ಕಾಯಗಳು ತಮ್ಮದ್ದೇ ಆದ ಪರಿಮಾಣದ ಕಾರಣ ತಮ್ಮದ್ದೇ ಆದ ಪಥದಲ್ಲಿ ಹಿಂಬಾಲಿಸುತ್ತಾ ಸಾಗುತ್ತವೆ. ಉದಾಹರಣೆಗೆ ಇಲ್ಲಿ ಅಕ್ಕಳಾದ ಶ್ರೀಯು ಭಾರವಾಗಿದ್ದು ತಂಗಿ ಬಿಂದುವು ಕೃಶಳಾಗಿದ್ದಲ್ಲಿ ಅಕ್ಕಳೇ ನೃತ್ಯದಲ್ಲಿ ಎಳೆದುಕೊಂಡು ಹೋಗುತ್ತಿರುತ್ತಾಳೆ. ಹಾಗೆಯೇ ಈ ಗ್ರಹಮಂಡಲ ವ್ಯವಸ್ಥೆ ಇದೆ. ಆದರೆ ಇದು ಪ್ರಸಕ್ತ ವಿಜ್ಞಾನ ಹೇಳುವ ಗುರುತ್ವಾಕರ್ಷಣ ಬಲವಲ್ಲವೇ ಅಲ್ಲ!! ಹೇಗೆ ಅಕ್ಕ-ತಂಗಿಯರು ಸುತ್ತುತ್ತಾ ಮುನ್ನಡೆಯುತ್ತಾರೆಯೋ ಹಾಗೆಯೇ ಎರಡು ಕಾಯಗಳು ಪರಸ್ಪರ ಜೋಡಿ ಓಟದಲ್ಲಿ ಹೆಲಿಕಲ್ ಹೆಲಿಕ್ಸ್‍ಗೆ ಹೋಲಿಸಬಹುದಾದ ಮಾಧರಿಯಲ್ಲಿ ಚಲಿಸುತ್ತವೆ.

ಇನ್ನು ಈ ಕೈ-ಕೈ ಹಿಡಿದು ಸುತ್ತುವ ನೃತ್ತವೇ ಅದ್ವೈತವನ್ನೂ ತನ್ಮೂಲಕ ಅಣು ವಿಜ್ಞಾನವನ್ನೂ ಈ ಮಧುರ ಭಜನೆಯು ವಿವರಿಸುತ್ತದೆ:

ಒಂದು ಅಂಡವು ಬಿಂದುವಿನ || ಕೇಂದ್ರದೊ || ಳು ಚಂದದಿಂ ಸುತ್ತುತಿದೆ
ಹಿಂದು ಮುಂದಾಗಿ ಬೆಳೆಯುತಿದೆ || ಲೋಕವೃಕ್ಷವು || ಆಧಾನವದು ಚೇತನಾ || ಪಲ್ಲವಿ ||
ಒಂದು ಬೊಮ್ಮವದು ಕೇಳು || ನರನೇ || ಲೋಕದೊಳು ವ್ಯವಹರಿಪ ಚೇತನವು
ಇಂದದನು ಅರಿಯದಾ ಮಾನವನು || ಬಹುಭಿನ್ನ || ತೆಯೊಳಗೆ ಸಿಲುಕಿ ನಲುಗಿ ಹೋಗಿಹನೂ || ೧ ||
ಒಂದನರಿತುಕೊ ಮನುಜ ನೀನು || ನಂತರದಿ || ಭಿನ್ನವದು ಅರಿಯಬಹುದೈ ಕೇಳು
ಹಿಂದು ಮುಂದಿಲ್ಲದೆ ವ್ಯರ್ಥಗಳಹುವೆಯೇಕೆ || ಲೋಕಭಿನ್ನ || ವೆಂದು ಬೊಮ್ಮವೊಂದೇ ಸತ್ಯ ಕಾಣಯ್ಯ || ೨ ||

           (ದೇಹವೇ ಬ್ರಹ್ಮಾಂಡ ಅದರೊಳಗೆಲ್ಲ ತಂತ್ರವೂ ಸಿದ್ಧವೂ)

ದೇಹದಲ್ಲಿ ಉಸಿರಾಟವೇ ಪ್ರಾಣಸಂಚಾರ. ವಿಶ್ವದಲ್ಲದೇ ಶಕ್ತಿಸಂಚಾರ. ಸೃಷ್ಟಿಯ ಪ್ರತಿಯೊಂದು ಸುರುಳಿಯಲ್ಲಿ ಉತ್ತರಿಸುವ ಕ್ರಮಾವಳಿಯೇ (ಅಲ್ಗೋರಿದಮ್) ವಿಶ್ವದಲ್ಲಿ "ಓಂಕಾರ" ನಾದದಿಂದ ವಿಭಜನೆಯಾಗಿ ಎರಡಾಗಿ ಗೋಚರಕ್ಕೆ ಬರುವ "ಸೋಹಂ" ಅಥವಾ "ಹಂಸಃ". ಇವುಗಳಿಂದಲೇ ಚೈತನ್ಯ ಪ್ರವಹನೆಯು ವಿಶ್ವದೆಲ್ಲೆಡೆ ಹಿಂದುಮುಂದಾದ ಸುರುಳಿಯಲ್ಲಿ ಬೆಸೆದಿವೆ. ಅವೇ ಆಕುಂಚನ x ವಿಕಸನಗೊಳ್ಳುವ ಅಗ್ನಿ ಮತ್ತು ಜಲ ತತ್ವಗಳು.


ಇದನ್ನು ಮೇಲಿನ ಪದ್ಯದಲ್ಲಿ ಎಷ್ಟು ಸೂಚ್ಯವಾಗಿ ಚಿತ್ರಿಸಿದ್ದಾರೆ ಎಂದರೆ:

"ರಾಯನ ಮಗಳೇ" : ರಾಯ ಎಂದರೆ ರಾ ಪ್ರಧಾತ್ತಮಿತಿ, ಅಂದರೆ ಅಗ್ನಿ. ಅಗ್ನಿಯ ಮಗಳೆಂದರೆ ಆಪ, ಅಂದರೆ ನಾರಾಯಣ ಎಂಬ ೪ ಅಂಶಗಳ ಫಾರ್ಮುಲಾ ಉಳ್ಳ ಜಲ.

"ಭೀಮನ ಮಗಳೇ" : ಭೀಮನೆಂದರೆ ಮಹಾಬಲ, ಅಂದರೆ ವಾಯು. ವಾಯುವಿನ ಮಗಳೆಂದರೆ ಅಗ್ನಿ.
ರಾಯನ ಮಗಳೇ, ಭೀಮನ ಮಗಳೇ ಎಂದು ಕಿನ್ನರಿಯರು ಹಾಡುತ ಆಡುತಿರೆ ಅಲ್ಲಿ ಲಯದ ರಹಸ್ಯವೇ ಅಡಗಿದೆ. ಏಕೆಂದರೆ ಅಗ್ನಿ ಮತ್ತು ಜಲ ತತ್ವಗಳ ಸೆಣಸಾಟದಲ್ಲಿ ಪ್ರಪಂಚ ವ್ಯವಹಾರ.

"ಹದಿನಾರೆಮ್ಮೆ ಕಾಯಿಸಲಾರೆ": ಶಿವನು ಡಮರು ಹಿಡಿದು ತಾಂಡವ ನೃತ್ಯ ಮಾಡಿದಾಗ ಅಲ್ಲಿ ಹೊರಟ ೧೬ ನಾದ ತರಂಗಗಳೇ ಪ್ರಪಂಚದಲ್ಲಿ ೧೬ ಸ್ವರಗಳಾದವು ಎಂಬ ಚಿತ್ರಣವಿದೆ.

ಡಮರುವಿನ ಆಕಾರವೇ ದೇವಾಲಯದ ಆಗಮದಲ್ಲಿ ಅಡಿಪಾಯದಲ್ಲಿ ಸ್ಥಾಪಿಸಲ್ಪಡುವ ಷಢಾಧಾರ. ಪ್ರಪಂಚಕ್ಕೆ ಷಢಾಧಾರವೇ ಸರ್ವಾಧಾರ ಎಂದು ಅಥರ್ವವೇದದ ವಾಕ್ಯ. ಅದರಲ್ಲಿ ೬ ಋತುಗಳು, ೨ ಅಯನಗಳು, ಸಂಧಿಯಲ್ಲಿ ಸಂವತ್ಸರ, ದಿವಾ-ರಾತ್ರಿ, ಸೂರ್ಯ-ಚಂದ್ರ, ಇತ್ಯಾದಿ ಕಾಲಗಣನೆಗಳ ಆಧಾರವಿದೆ.

ಎಲ್ಲವೂ ಎರಡೆರಡಾಗಿ ವ್ಯವಹರಿಸಿದರೂ ಅದರ ಕೇಂದ್ರಸ್ಥಿತ ಬಲವು ಒಂದೇ ಸತ್ಯ, ಅದುವೇ ಬ್ರಹ್ಮ. "ಒಂದು ಕೆಲಸ ಮಾಡಕ್ಕಾಗಲ್ಲ, ಒಂದು ಸುಳ್ಳು ಹೇಳಕ್ಕಾಗಲ್ಲ" ಎಂಬ ಗಾದೆ ಇದೆ. ಹಾಗಾಗಿ ಗಿರಕಿ ಹೊಡೆಯುವ ವಸ್ತುಗಳಾಗಲೀ ಅಥವಾ ಜೀವಿಗಳಾಗಲೀ ಪೊಳ್ಳು, ಕರ್ಷಣ X ವಿಕರ್ಷಣಗಳಿಂದ ಅವುಗಳ ನಡುವೆ ಏರ್ಪಡುವ  ಸ್ಥಿತಿಸ್ಥಾಪಕತ್ವ ಎಂಬ ಬ್ರಹ್ಮವೊಂದೇ ಸತ್ಯ.

ಜೀವಿಗಳಲ್ಲಿ ಡಿ.ಎನ್.ಎ ಸ್ಟ್ರ್ಯಾಂಡ್‍ನ ಆಕಾರವು ಇದೇ ನಾಗಗಳ ಎಣೆಯಾಟದಂತೆ ಹೆಲಿಕಲ್ ಮಾಧರಿಯಲ್ಲಿಯೇ ಮಧುರವಾಗಿ ಬೆಸೆದಿರುವುದು ಸೋಜಿಗವೇ ಸರಿ:
"ಬೈಟುಕಂಭ, ಬಾಳೆಕಂಭ": ಪ್ರತಿಯೊಂದು ಆಟಕ್ಕೆ ಒಂದು ಆಧಾರ, ಇತಿ-ಮಿತಿ ಇರಬೇಕು. ಸುಮ್ಮನೇ ಅಡುವುದೇ, ಇನ್ನೊಬ್ಬರನ್ನು ಆಡಿಸುವುದೇ ಜೀವನವಲ್ಲ. ತಮ್ಮ ಮನೋಭಿಲಾಷೆ ಪೂರೈಕೆಗಾಗಿ ಇನ್ನೊಬ್ಬರ ಜೀವನದಲ್ಲಿ ಕುಹಕ ಆಟವಾಡಬೇಡಿ. ಜೀವನದ ಆಟವು ಶುದ್ಧತೆಯತ್ತ ಇರಲಿ. ಜೀವನದಲ್ಲಿ ಆಟ-ಪಾಠಗಳು ಜೊತೆಯಾಗಿ ಸಾಗಬೇಕು. ಇಲ್ಲಿ ಈ ಕಂಭಗಳೇ ಅವರಿಗೆ ಗಡಿ. ಉರಿಗೂ ಒಂದು ಗಡಿಯಾಗಿ ಗರಡುಗಂಭ, ಹೇರುಗಂಭ, ದೀಪಕಂಭ, ಕೈಮರ ಇತ್ಯಾದಿ ಇರುತ್ತದೆ. ತೋಟಕ್ಕೂ ಒಮ್ದು ಬಾಳೆಕಂಭವೋ ಗಡಿ ಇರಬಹುದು. ಅಂದರೆ ಪ್ರತಿಯೊಂದಕ್ಕೂ ಒಂದು ಇತಿ-ಮಿತಿ ಇದೆ. ಅದನ್ನು ಮೀರಬಾರದು. ಮೀರಿದರೆ ಆಪತ್ತು ಖಂಡಿತಾ!

"ಕುಕ್ಕರ ಬಸವಿ, ಕೂರೆ ಬಸವಿ": ಈ ವಾಕ್ಯವನ್ನು ಉಚ್ಛರಿಸುತ್ತಾ ಅಕ್ಕತಂಗಿಯರಿಬ್ಬರೂ ಪರಸ್ಪರ ಕೈ ಜೋಡಿಸಿ ಕೆಳಗೆ ಕೂರುತ್ತಾರೆ. ಹೆಚ್ಚಾಗಿ ಉದ್ದ ಲಂಗ ಧರಿಸಿದಾರ ಅದು ಇವರೊಂದಿಗೆ ಸುರುಳಿಯಾಕಾರದಲ್ಲಿ ಸುತ್ತುತ್ತಿದ್ದು ಕುಳಿತಾಗ ನೆಲದಲ್ಲಿ ಕಮಲ ಅರಳಿದಂತೆ ಹರಡುತ್ತದೆ. ಮಕ್ಕಳಿಗೆ ಅದೇನೋ ಸಂತೋಷ ಸಿಗುತ್ತದೆ. ಇಲ್ಲಿ ಸುತ್ತಿ ಸುತ್ತಿ ನಂತರ ಅದನ್ನು ಸ್ಥಿಮಿತತೆಗೆ ತರಲು ಕೂರುವುದು. ಯಾವುದೇ ವಸ್ತುವಿರಲಿ ಬಾಹ್ಯ ಚಲನೆ ಆರಂಭವಾಗಿ ತನ್ನ ಕಾರ್ಯಸಾಧನೆ ಆದ ಮೇಲೆ ವೇಗ ಕಡಿಮೆಗೊಳಿಸುತಾ ಸ್ಥಿರತೆಗೆ ಬರಬೇಕು. ಹಾಗೇ ಮಾನವನೂ ಜೀವನ ಚಕ್ರದಲ್ಲಿ ಸುತ್ತಿ ಸುತ್ತಿ ಸುಣ್ಣವಾಗಿ, ಜೀವನ ಬಣ್ಣವನ್ನರಿತ ಅಣ್ಣನಾಗಿ, ಮಣ್ಣಾಗುವ ಮುನ್ನ ಪಕ್ವತೆಯನ್ನು ಪಡೆಯಬೇಕು. ಎಷ್ಟು ಬೇಗೆ ಜೀವನದಲ್ಲಿ ಪಕ್ವತೆಯನ್ನು ಸಾಧಿಸುತ್ತಾರೊ ಅಷ್ಟರಿಂದ ಮುಂದಿನ ಜೀವನವು ಸುಗಮ. ಸಮಾಜಕ್ಕೂ ದಾರಿ ದೀಪವಾಗಬಹುದು. ಅನುಭವದ ಮೂಸೆಯಲ್ಲಿ ಖಾಯಿಸಿದ ಸುಖ-ಕಷ್ಟಗಳೆಂಬ ಬೆಸುಗೆ ಉಳ್ಳ ಲೋಹಗಳು ಒಳ್ಳೇ ಆಭರಣವಾಗುತ್ತವೆ.

ಬಸವಿ ಎಂಬುದು ಬಸವದ ಸ್ತ್ರೀಲಿಂಗ ವಾಚಕವಾಗಿ ಬಳಸಲಾಗಿದೆಯಷ್ಟೆ. ಬಸವ ತತ್ವದ ಬಗ್ಗೆ ಹಲವಾರು ಶಿವಶರಣರು ತಮ್ಮ ವಚನ ಸಾಹಿತ್ಯದಲ್ಲಿ ಬೆಳಕು ಚೆಲ್ಲಿದ್ದಾರೆ. ಈ 'ಬ' 'ಸ' 'ವ' ಎಂಬ ೩ ಅಕ್ಷರಗಳನ್ನು ಅರಿತವನೇ ನಿಜವಾದ ಶರಣನಾಗಬಹುದು. ಹಿಂದೆ ಪೋಷಕರ ಒಂದು ನಾಣ್ನುಡಿ ಇತ್ತು: "ಮಗ/ಮಗಳು ಮೂರಕ್ಷರ ಕಲಿಯಲಿ ಅಂಥ ಶಾಲೆಗೆ ಹಾಕಿದ್ದೇವೆ". ಹಾಗಾಗಿ ಮಕ್ಕಳೇ, ಪ್ರಯತ್ನ ಪಟ್ಟು ೩ ಅಕ್ಷರಗಳನ್ನು ಸಾಧಿಸಿ ಕೃತಕೃತ್ಯರಾಗಿರಿ.

ಪ್ರಶ್ನೆಯಲ್ಲಿನ ಪದ್ಯದಲ್ಲಿ ಬೆಸೆದ ಶಬ್ದಗಳು ಅಷ್ಟೇ ಛಂದೋಬದ್ಧವಾಗಿರುತ್ತಿದ್ದವು. ಒಂದು ವೇಳೆ ಕೇಳಿದ ಯುವಕನನ್ನು ಅಲ್ಲಿಂದ ಓಡಿಸಬೇಕೆಂದು ಅನ್ನಿಸಿದರೆ ವಿದ್ವೇಷಣಾ ತರಂಗ ಪರಿಣಾಮ ಮಾಡುವ ಅಕ್ಷರಗಳನ್ನು ಜೋಡಿಸಿ ಆತನಿಗೆ ಬಿಡಿಸಲು ಹೇಳಿ, ಅದಕ್ಕೆ ಉತ್ತರ ಸಿಗದೆ ಅವಮಾನಿತನಾಗಿ ಹೊರಟು ಹೋಗುತ್ತಿದ್ದನು.

ಈಗಿನ ಹಾಗೆ ಪುಸ್ತಕ ಪೆನ್ನು ಹಿಡಿದು ಲೆಕ್ಕ ಬಿಡಿಸುತ್ತಿರಲಿಲ್ಲ. ಎಲ್ಲ ಲೆಕ್ಕಾಚಾರಗಳು ತಲೆಯಲ್ಲಿಯೇ ಮಾಡಬೇಕಿತ್ತು. ಅಲ್ಲಿ ಇಂತಹಾ ಪರಿಣಾಮಕಾರೀ ಅಕ್ಷರ ಸಂಯೋಜಿತ ಸಮಸ್ಯಾ ನಿರೂಪಣೆ ಮಾಡಿದಾಗ ಮಿದುಳಿನಲ್ಲಿ ಗೊಂದಲ ಉಂಟಾಗುತ್ತದೆ. ಏಕೆಂದರೆ ಅಲ್ಲಿ ಸಮೀಕರಣವನ್ನು ಬಿಡಿಸುವುದು ಮಿದುಳಿನಲ್ಲಿನ ನ್ಯೂರಾನ್‍ಗಳ ಅಂತರ್ಜಾಲ. ಅವುಗಳಿಗೆ ಸರಿಯಾದ ಸಂಪರ್ಕ ಸಿಗದಿದ್ದರೆ ಉತ್ತರ ಸಿಗುವುದಿಲ್ಲ. ಹಾಗಾಗಿ ಯಾವುದೇ ಗಣಿತ ಸಮಸ್ಯೆಯನ್ನು ಬಿಡಿಸಲು ಮೊದಲು ಅದು ಮನದಟ್ಟಾಗಬೇಕು ಎನ್ನುತ್ತಾರೆ. ಅದರ ಉದ್ದೇಶವೇನು? ಸಾಫಲ್ಯತೆಯೇನು? ಬಳಕೆಯೇನು? ಋಣವೇನು? ಗುಣವೇನು? ಸವಕಳಿಯೇನು? ಇತ್ಯಾದಿ ದಶಮುಖಗಳಿಂದ ಚಿಂತಿಸಬೇಕು.


ಇತ್ತೀಚಿನ ವರ್ಷಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಈ ರೀತಿಯ ವಯೋಮಾನ ಆಧರಿತ ಪ್ರಶ್ನೆಗಳನ್ನು ಸಾಮಾನ್ಯವಾಗಿ ಕೇಳುತ್ತಾರೆ. ಒಂದೆರಡು ಕಠಿಣ ಲೆಕ್ಕಗಳನ್ನು ನೋಡಿ ಬಿಡಿಸಿ ಪುನಃ ಕೆಲವಾರು ಲೆಕ್ಕಗಳನ್ನು ಸ್ವಂತ ಪರಿಶ್ರಮದಿಂದ ಬಿಡಿಸಿದರೆ ಉಪಯುಕ್ತತೆ ಪಡೆಯಬಹುದು. 

- ಹೇಮಂತ್ ಕುಮಾರ್ ಜಿ

2 comments:

  1. ಗುರುಗಳೇ ನಾವು ಇದನ್ನು 10 ಬಾರಿ ಓದಿದ್ದೇನೆ ಗುರುಗಳೇ ತುಂಬಾ ಸೊಗಸಾಗಿದೆ ನಾವು ನಿಮ್ಮ ಬ್ಲಾಗ್ ನ್ನು ಕಾಪಿ ಮಾಡಬಹುದೆ???

    ReplyDelete
  2. ಕಾಪಿ ಎಂದರೆ ಹೇಗೆ? ನೇರವಾಗಿ ನಿಮ್ಮದ್ದೇ ಲೇಖನ ಎಂದರೆ ಕೃತಿಚೌರ್ಯ ಎಂದಾಗುತ್ತದೆ. ಅದರಿಂದ ಸಮಸ್ಯೆ ಎಂದರೆ ಯಾರಾದರೂ ಪ್ರಶ್ನಿಸಿದರೆ ಉತ್ತರ ನೀಡಲಾಗದಿರಬಹುದು. ಇನ್ನೊಬ್ಬರಿಗೆ ಇದರ ಸಂಪರ್ಕ ಕೊಂಡಿಯನ್ನು ಹಂಚಿಕೊಳ್ಳಬಹುದು. ಇದೊಂದು ಜ್ಞಾನ ಯಜ್ಞ. ಸಾವಿರಾರು ಲೇಖನಗಳು ಬರಲಿಕ್ಕಿದೆ. ಅದಕ್ಕೆ ಬೇಕಾದ ಅಕ್ಷರ ಮತ್ತು ಚಿತ್ರಗಳ ವಿನ್ಯಾಸ ಈ ವೆಬ್ ಪೇಜಿಗೆ ಬೇಕಾದಂತೆ ರಚಿಸಿರುತ್ತೇನೆ. ಆಸಕ್ತರಿಗೆ ಇಲ್ಲಿನ ವಿಳಾಸ ತಿಳಿಸಿ, ಅವರೂ ಇಲ್ಲಿಗೇ ಬಂದು ಓದಿದರೆ ಅದರ ಸವಿ ಹೆಚ್ಚು.

    ReplyDelete