Friday, 9 May 2014

ಭೃಗು ಮತದಂತೆ ರಾಜ್ಯಶಾಸ್ತ್ರ ರೀತ್ಯಾ ಗೋಸಾಕಣೆಭೃಗು ಮಹರ್ಷಿಯು ಒಟ್ಟು ವಿಧ್ಯೆಯ ಮೂಲ ಸೂತ್ರವೂ, ಸಮಗ್ರ ಪ್ರಕೃತಿಯ ಉಳಿವಿಗಾಗಿ ಸದಾ ಹೋರಾಟ ನಡೆಸುವವರು. ಪ್ರಕೃತಿಯ ಎಲ್ಲಾ ಆಗುಹೋಗುಗಳ ನಿರೀಕ್ಷಕರೂ ಆಗಿ ಈಗಲೂ ಕಾರ್ಯ ನಿರ್ವಹಣಾ ವ್ಯವಸ್ಥೆಯನ್ನು ರೂಪಿಸಿರುತ್ತಾರೆ. ಹಾಗಾಗಿ ಅವರ ವ್ಯವಸ್ಥೆಯ ಹಿಂಬಾಲಕರನ್ನು "ಭಾರ್ಗವರು" ಎಂದು ಕರೆದರು. ಸದಾ ಪ್ರಪಂಚದ ಆಗು ಹೋಗುಗಳ ನಿರೀಕ್ಷೆ ಮಾಡುವ ಸೂರ್ಯನೂ ಭಾರ್ಗವನೇ, ಭರ್ಗನೇ. ಹಾಗೇ ಭೃಗು ವಂಶಜರೆಲ್ಲಾ ಪ್ರಕೃತಿ ರಕ್ಷಣೆಯ ಕಾರ್ಯಭಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಅಲ್ಲಿ ಭೃಗು ಮಹರ್ಷಿಯು ಕೆಲ ಮುಖ್ಯ ಸೂತ್ರವನ್ನು ಅಳವಡಿಸಿ ಒಂದು ವಿಶೇಷ ರಕ್ಷಣಾ ವಿಧಾನ ರಚಿಸಿದ್ದಾರೆ.

೧. ಅದು ಪ್ರಕೃತಿಯಲ್ಲಿಯ ಸಮತೋಲನ ಕಾಯ್ದುಕೊಂಡು ಬರುವುದಾಗಿರುತ್ತದೆ.
೨. ಆ ಸೂತ್ರಗಳು ಧಾರ್ಮಿಕ ಪೋಷಕಗಳು
೩. ನ್ಯಾಯಿಕ ಪೋಷಕಗಳು,
೪. ರಾಜವಿಕ ಪೋಷಕಗಳು;
೫. ಪ್ರಾಕೃತಿಕ ನಿಯಮದಂತಿರಬೇಕು. ಅದು ಸರ್ವದಾ ಅನುಲ್ಲಂಘನೀಯವೆಂದರು.
೬. ಪ್ರಾಪಂಚಿಕ ಔದ್ಯೋಗಿಕಗಳು ಪರಸ್ಪರ ಪೂರಕವಾಗಿರಬೇಕೆಂದೂ
೭. ಕೃಷಿ ವಾಣಿಜ್ಯಗಳು ಏಕ ಮುಖವಾಗಿರಬೇಕೆಂದೂ
೮. ದೇಶದ ಹೈನುಗಾರಿಕೆಯು ಪ್ರತಿಶತ ನಲವತ್ತು ದಾಮಾಶಯಕ್ಕೆ ಕೊರತೆ ಇರಬಾರದೆಂದೂ
೯. ಕೃಷಿಕನಿಗೆ ವಾಣಿಜ್ಯದ ಮೇಲಿನ ಹಿಡಿತವಿರಬೇಕೆಂದೂ
೧೦. ರೈತನಿಗೆ ಪೂರ್ಣ ಸ್ವಾತಂತ್ರ್ಯವಿರಬೇಕೆಂದೂ ನಿರ್ದೇಶಿಸಿದರು
೧೧. ರಾಜನಲ್ಲಿ ಧರ್ಮ ಇರಬೇಕೆಂದೂ
೧೨. ಪ್ರಜೆಗಳಲ್ಲಿ ಪ್ರಾಮಾಣಿಕತೆ ಇರಬೇಕೆಂದೂ
೧೩. ಗೋ ಬ್ರಾಹ್ಮಣರಲ್ಲಿ ಸಂತೃಪ್ತಿ ಇರಬೇಕೆಂದೂ
೧೪. ರಾಜೋದ್ಯೋಗಿಗಳು ಕರ್ತವ್ಯ ನಿಷ್ಠರಾಗಿರಬೇಕೆಂದೂ
೧೫. ರಕ್ಷಕರು ರಾಜನಿಷ್ಠರಾಗಿ ಇರಬೇಕೆಂದೂ
೧೬. ಸೈನಿಕರು ಪ್ರಾಣಭಯ ತೊರೆದಿರಬೇಕೆಂದೂ
೧೭. ವಣಿಕರು ಲೋಭ ತೊರೆಯಬೇಕೆಂದೂ
೧೮. ಕೃಷಿಕರು ಶ್ರದ್ಧಾಳುಗಳಾಗಿ ಇರಬೇಕೆಂದೂ
೧೯. ಅಧ್ಯಾಪಕರು ತ್ಯಾಗಿಗಳಾಗಿ ಇರಬೇಕೆಂದೂ
೨೦. ಸ್ನಾತಕನು ಸನ್ಯಸ್ತನಾಗಿ ಇರಬೇಕೆಂದೂ
೨೧. ವೃದ್ಧರೂ, ಅಶಕ್ತರೂ ಪಾಲಿಸಲ್ಪಡಬೇಕೆಂದೂ
೨೨. ಪ್ರಕೃತಿಯು ಸಸ್ಯ ಸಮೃದ್ಧಿಯಾಗಿರಬೇಕೆಂದೂ
೨೩. ಸಜ್ಜನರಿಗೆ ನಿರ್ಭಯತ್ವ ಇರಬೇಕೆಂದೂ
೨೪. ದುರ್ಜನರು ಸಜ್ಜನರಾಗಿ ಪರಿವರ್ತಿತರಾಗಬೇಕೆಂದೂ
೨೫. ಯಾಗ, ಯಜ್ಞಗಳು ಅಧ್ವರವಾಗಿ ಇರಬೇಕೆಂದೂ
೨೬. ದಾನ ಧರ್ಮಗಳು ನಡೆಯುತ್ತಾ ಇರಬೇಕೆಂದೂ
೨೭. ಋಷಿ ಮುನಿಗಳು ತಪೋನಿಷ್ಠರಾಗಿ ಇರಬೇಕೆಂದೂ

ಇತ್ಯಾದಿ ಒಟ್ಟು ೨೭ ಸೂತ್ರಗಳಲ್ಲಿ ರಾಜ್ಯ ಶಾಸ್ತ್ರ ನಿರ್ದೇಶಿಸಿದ್ದಾರೆ. ಇದನ್ನು ಹೊರತುಪಡಿಸಿದ ಯಾವುದೇ ವಿಭಾಗ ರಾಜ್ಯಾಡಳಿತಕ್ಕೆ ಅಗತ್ಯವಿಲ್ಲ. ಇಲ್ಲಿ ಮೂರು ರೀತಿ ಗಮನಿಸಬಹುದು - ಯಾವುದು ಹೇಗಿರಬೇಕು ಎಂಬ ನಿಯಮ? ಅದರಂತೆ ಇರಲು ಸೂಕ್ತ ವಿಧ್ಯೆ ತಿಳುವಳಿಕೆ ಕೊಡುವುದು ರಾಜನ ಕರ್ತವ್ಯ. ನಿಯಮ ಬಾಹಿರರನ್ನು ಶಿಕ್ಷಿಸುವುದು ರಾಜಧರ್ಮ. ಈ ಮೂರು ರೀತಿಯ ಪ್ರವರ್ತನೆಯಲ್ಲಿ ರಾಜನಿರಬೇಕೆಂದೂ ಭೃಗುವಿನ ಆಶಯವಾಗಿರುತ್ತದೆ. ಇಲ್ಲಿ ಒಂದು ಉದಾಹರಣೆ ಕೊಡುತ್ತೇನೆ. ಭೃಗು ಮತದ ಒಂದು ಸೂಕ್ತಿ ಕೇಳಿರಬಹುದು:

ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಾಂ ||
         ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ ||
ಗೋ ಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ ||
         ಲೋಕಾಃ ಸಮಸ್ತಾಃ ಸುಖಿನೋ ಭವಂತು ||

       
ಇದೊಂದು ಆದರ್ಶ ವಾಕ್ಯ. ಇಲ್ಲಿ ಭದ್ರವಾದ ರೀತಿಯಲ್ಲಿ ಪ್ರಜಾ ಪರಿಪಾಲನೆ ನಡೆಯಲಿ ಎಂಬುದು ಮೊದಲ ಹಾರೈಕೆ. ಹೇಗೆಂದರೆ ಹಿಂದೆ ಹೇಳಿದ ೨೭ ಸಮವಾಗಿರುವಂತೆ ನೋಡಿಕೊಂಡರೆ ಅದು ಮಹಿ ಎನ್ನಿಸಿಕೊಳ್ಳುತ್ತದೆ. ಅವು ಸಮವಾಗಿದ್ದರೆ ಮಾತ್ರ ಅದು ರಾಜ್ಯವಾಗುತ್ತದೆ. ಇಂತಹಾ ಮಹಿಯನ್ನು ರಾಜನು ನ್ಯಾಯದಿಂದಲೂ, ಧರ್ಮದಿಂದಲೂ ಪಾಲಿಸಲಿ. ಅಲ್ಪ ತೃಪ್ತರಾದ ಬ್ರಾಹ್ಮಣರು ಸದಾ ಲೋಕದ ಹಿತವನ್ನು ಹಾರೈಸಲಿ, ಗೋವುಗಳು ಸಂತೃಪ್ತವಾಗಿ ಶುಭಾಕಾಂಕ್ಷಿಗಳಾಗಿರಲಿ. ಲೋಕದ ಸಮಸ್ತವೂ ಸುಖಪ್ರದವಾಗಿ, ಶುಭಪ್ರದವಾಗಿ, ಸಮೃದ್ಧವಾಗಿರಲಿ ಎಂಬ ಹಾರೈಕೆ ಇರುತ್ತದೆ. ಹಾಗೇ ಭೃಗುವು ಈ ವಿಚಾರದಲ್ಲಿ ಹೇಳುತ್ತಾ ಅತೃಪ್ತ ಬ್ರಾಹ್ಮಣರನ್ನು ನಿರ್ಬಂಧಿಸಿ ಕೃಷಿಯಲ್ಲಿ ವಿನಿಯೋಗಿಸಿದ್ದು ಕಂಡು ಬರುತ್ತದೆ. ನಿಮ್ಮಲ್ಲಿ ಅತೃಪ್ತಿ ಇದ್ದಲ್ಲಿ ನೀವು ಸ್ವಾಧ್ಯಾಯಾನುಷ್ಠಾನ ಮಾಡಲಾರಿರಿ. ಹಾಗಾಗಿ ನೀವು ಕೃಷಿಯಿಂದ ಜೀವಿಸಿರಿ ಎಂದು ನಿಯೋಜಿಸಿದ ಉದಾಹರಣೆ ಕಂಡು ಬರುತ್ತದೆ. ಬ್ರಾಹ್ಮಣ ಆಯಾಯ ದಿನಕ್ಕೆ ಸಿಕ್ಕಿದ್ದರಲ್ಲಿ ತೃಪ್ತನಾಗಿ ಸದಾ ಸಮೃದ್ಧಿ ಪ್ರಕೃತಿಯ ಬಗೆಗೆ ಶುಭಾಕಾಂಕ್ಷಿಯಾಗಿರಬೇಕು ಎಂದು ಅರ್ಥ. ಹಾಗಿಲ್ಲವಾದಲ್ಲಿ ಅವರನ್ನು ಕೃಷಿಗೆ ನಿಯೋಜಿಸಬೇಕೆಂದು ನಿರ್ದೇಶಿಸಿದ್ದ.


ಗೋವುಗಳು ಕೂಡಾ ಸಮರ್ಥವಾಗಿಲ್ಲದಿದ್ದಲ್ಲಿ ರಾಜ ನಿರ್ಮಿತ ಗೋಮಾಳದಲ್ಲಿ ಅವುಗಳಿಗೆ ಸ್ವೇಚ್ಛೆ ಕೊಟ್ಟು ಬಿಡಬೇಕೆಂದು ನಿರ್ದೇಶಿಸಿದ್ದ. ಅಲ್ಲದೇ ಯಾವುದೇ ಕಾರಣಕ್ಕೂ ಗೋಹತ್ಯೆ ಮಾಡಬಾರದು ಎನ್ನುವುದು ಭೃಗು ಮಹರ್ಷಿಯ ಅಭಿಪ್ರಾಯ. ವಯಸ್ಸಾದ ಹಸುಗಳು ರಾಜನ ಕಾದಿಟ್ಟ ಸಂಪತ್ತಿನಂತೆ ಎಂದು ಉದಾಹರಿಸಿದ್ದಾರೆ. ಅಲ್ಲದೇ ಅವು ಇರತೆ ಉಪಯುಕ್ತತೆಗೆ ಯಾವತ್ತೂ ಕುಂದು ತರುವುದಿಲ್ಲ. ಒಂದು ಹಸುವು ತಾನು ತಿನ್ನುವ ಆಹಾರದ ಬೆಲೆಯ ನಾಲ್ಕು ಪಟ್ಟು  ಉತ್ತಮ ಪರಿಸರ ಪ್ರಯೋಜನಕಾರಿ ಗೊಬ್ಬರ ಪ್ರಕೃತಿಗೆ ನೀಡುತ್ತದೆ. ಹಾಗಾಗಿ ಪ್ರಕೃತಿಗೆ ಹಸುವಿನಿಂದ ಉಪಕಾರವೇ ವಿನಃ ನಷ್ಟವಿಲ್ಲ, ಅವನ್ನು ಪ್ರಕೃತಿಯೇ ಪೋಷಿಸುತ್ತದೆ. ನೀವು ಉತ್ತಮ ಪರಿಸರದಲ್ಲಿ ಅದನ್ನು ಬಿಟ್ಟು ಬಿಡಿ. ಅದು ಅದರಷ್ಟಕ್ಕೆ ಮೇದು ಅದರಷ್ಟಕ್ಕೆ ಬದುಕಬಲ್ಲದು. ಆದರೆ ಅದನ್ನು ಕೊಲ್ಲಬೇಡಿ. ಕೊಂದು ತಿನ್ನುವವರಿಗೆ ಕೊಡಬೇಡಿ. ಗೋಮಾಂಸ ಖಂಡಿತಾ ಮಾನವ ಆಹಾರವಲ್ಲ. ಮನುವು, ಭೃಗುವು ಉದಾಹರಿಸಿದ ಪಂಚ ಮಹಾಪಾತಕಗಳ ಪಟ್ಟಿಯಲ್ಲಿ ಗೋಹತ್ಯೆಯನ್ನು ಹೇಳಿದ್ದಾರೆ. ಹಾಗಾಗಿ ಗೋಹತ್ಯೆಗೆ ಕಾರಣರಾಗಿ ಮಹಾ ಪಾತಕಿಗಳಾಗಬೇಡಿ ಎಂದಿದ್ದಾರೆ.
ಇಂತು
ಕೆ. ಎಸ್. ನಿತ್ಯಾನಂದ

No comments:

Post a Comment