Wednesday, 11 June 2014

ಋಗ್ವೇದದಲ್ಲಿ ಆತ್ರೇಯರ ಅದ್ಭುತ ಸಂಶೋಧನೆಗಳು - 1

ಅತೀ ಪ್ರವೀಣರೂ, ತಾಂತ್ರಿಕ ವಿಧ್ಯಾ ಪಿತಾಮಹರು ಎಂದರೆ ಆತ್ರೇಯರು. ಇವರ ಸಂಶೋಧನೆ ತಂತ್ರಜ್ಞಾನದಲ್ಲಿ ಅಗಾಧವಾಗಿದ್ದು ನಿತ್ಯನೂತನ, ನಿರಂತರ, ಕ್ಷಣಕ್ಷಣಕ್ಕೂ ಬೆಳೆಯುತ್ತಲೇ ಇದೆ. ಅದರ ಕುರಿತು ಎರಡು ಮಾತನ್ನು ಬರೆದು ಅವರ ಗಣಿತದ ಕೊಡುಗೆಯ ಬಗ್ಗೆ ಬರೆಯುತ್ತೇನೆ.

ಅತ್ರಿ ಮುನಿಯಿಂದ ಮುಂದಿನ ಜನರೆಲ್ಲಾ ಆ ಪರಂಪರೆಯ ಎಲ್ಲರೂ ಆತ್ರೇಯರು. ಅತೀ ಬುದ್ಧಿವಂತರೂ, ನಿಷ್ಠರೂ, ಶ್ರದ್ಧಾಳುಗಳೂ, ಕಠೋರ ತಪೋನಿಷ್ಠರೂ, ತಂತ್ರವಿಧ್ಯಾ ಪ್ರವೀಣರೂ, ಕುಶಲರೂ ಆಗಿದ್ದ ಇವರು ನಿರಂತರ ಸಾಧನಾ ಮಾರ್ಗದಲ್ಲಿಯೇ ಇರುವವರು. ಹಾಗೇ ಏನ ಕೇನ ಪ್ರಕಾರೇಣ ವೆಂಬಂತೆ ಸಾಧಿಸಿದ್ದನ್ನೆಲ್ಲಾ ಬಳಸಿ ಫಲ ಪಡೆದವರು. ಇವರಲ್ಲಿ ತ್ರಿಶೋಕ, ಅತ್ರಿ, ಗುಣವಂತ, ದತ್ತಾತ್ರೇಯ, ವಂಶಿ, ಪುರು, ನೃಮೇಧ, ಔಡಲ, ಋಚೀಕ, ತ್ರಿತ, ದ್ವಿತ, ಆಪ್ತ್ಯ, ಅನುವಂಶಿ, ಆರ್ಷ್ಣಿಷೇಣ, ವೃಶ, ಜಾನ, ವಸುಶ್ರುತ, ಇಷ, ಗಯ, ಗಯಪ್ಲಾತ, ಸುತಂಭರ, ಧರುಣ, ಮೃಕ್ತವಾಹಾ, ವಪ್ರಿ, ಪ್ರಯಸ್ವಂತ, ಧ್ಯುಮ್ನ, ಶ್ರುತಬಂಧು, ವಿಪ್ರಬಂಧು, ಸುಬಂಧು, ವಸೂಯವ, ತ್ರೈರುಣ, ವಿಶ್ವವಾರಾದಿಯಾಗಿ ಇನ್ನೆಷ್ಟೋ ಜನ ಆತ್ರೇಯರು ನಾನಾ ರೀತಿಯ ಸಾಧನೆ ಮಾಡಿದ ಸಿದ್ಧಪುರುಷರು, ತಪಸ್ವಿಗಳು ಸಂಕಲ್ಪ ಸೃಷ್ಟಿಯೆಂಬ ಹೊಸಾ ಸೂತ್ರವನ್ನು ಕಂಡುಹಿಡಿದವರು. ಸೃಷ್ಟಿ ಪ್ರಕ್ರಿಯೆಯಲ್ಲಿ ಮಹಾನ್ ಸಾಧನೆ ಮಾಡಿದವರು. ಅಂಗ ಪ್ರತ್ಯಂಗ ಉತ್ಪಾದನಾ ನಿಷ್ಣಾತರು. ಹುಟ್ಟಿದ ಮಗುವಿಗೆ ಕೈಯಿಲ್ಲವೆಂಬ ಕಾರಣಕ್ಕೆ ಶಿಶುವಿಗೆ ಸಾವಿರ ಕೈಗಳನ್ನು ಕೊಟ್ಟ ವಿಶಿಷ್ಟ ಸಾಧಕರು. (ನೋಡಿ ಕಾರ್ತಿವೀರ್ಯಾರ್ಜುನ) ಶಿಶುವಾಗಿ ಹುಟ್ಟಿದ ಕಾರ್ತಿವೀರ್ಯಾರ್ಜುನನಿಗೆ ಕೈಗಳೇ ಇರಲಿಲ್ಲ. ಆಗ ದತ್ತಾತ್ರೇಯ ಮುನಿಗಳು ಸಾವಿರ ಕೈಗಳನ್ನು ಅನುಗ್ರಹಿಸಿದರೆಂಬ ಕಥೆ ನೀವು ಓದಿರಬಹುದು. 

ಋ.ಮ.5 ಸೂಕ್ತ 1 ಮಂತ್ರ 8-9

ಮಾರ್ಜಾಲ್ಯೋ ಮೃಜ್ಯತೇ ಸ್ವೇ ದಮೂನಾಃ ಕವಿ ಪ್ರಶಸ್ತೋ ಅತಿಥಿಃ ಶಿವೋ ನಃ
ಸಹಸ್ರಶೃಂಗೋ ವೃಷಭಸ್ತದೋಜಾ ವಿಶ್ವಾಙ್ ಅಗ್ನೇ ಸಹಸಾ ಪ್ರಾಸ್ಯನ್ಯಾನ್ ||  8 ||
ಪ್ರ ಸದ್ಯೋ ಅಗ್ನೇ ಅತ್ಯೇಷ್ಯನ್ಯಾನಾವಿರ್ಯಸ್ಮೈ ಚಾರುತಮೋ ಬಭೂಥ | 
ಈಳೇನ್ಯೋ ವಪುಷ್ಯೋ ವಿಭಾವಾ ಪ್ರಿಯೋ ವಿಶಾಮತಿಥಿರ್ಮಾನುಷೀಣಾಮ್ ||  9 ||
ತುಭ್ಯಂ ಭರಂತಿ ಕ್ಷಿತಯೋ ಯವಿಷ್ಠ ಬಲಿಮಗ್ನೇ ಅಂತಿತ ಓತ ದೂರಾತ್ | 
ಆ ಭಂದಿಷ್ಠಸ್ಯ ಸುಮತಿಂ ಚಿಕಿದ್ಧಿ ಬೃಹತ್ತೇ ಅಗ್ನೇ ಮಹಿ ಶರ್ಮ ಭದ್ರಮ್ ||  10 ||

ಇದರಂತೆ ಒಂದಿದ್ದರೆ ಎರಡಾಗಿಯೂ ನಾಲ್ಕಾಗಿಯೂ ನಂತರ ಎಷ್ಟು ಬೇಕಾದರೂ ಅಭಿವೃದ್ಧಿ ಪಡಿಸಬಹುದು ಭೌತಶಾಸ್ತ್ರ ನಿಯಮದಂತೆ. ಆದರೆ ತಂತ್ರಶಾಸ್ತ್ರಕ್ಕೆ ಒಂದರ ಅಗತ್ಯವೂ ಇಲ್ಲ. ಶೂನ್ಯವನ್ನೇ ವಿಭಜಿಸಿ ಎಷ್ಟು ಬೇಕಾದರೂ ಮಾಡಬಹುದು. ಇದು ಅದರ ಸ್ಥೂಲಾರ್ಥ. ವಿವರವಾದ ಅರ್ಥ ಇಲ್ಲಿ ಅಪ್ರಸ್ತುತ. ಆತ್ರೇಯರ ಸಾಮರ್ಥ್ಯ ಮಾತ್ರಾ ಇಲ್ಲಿ ಮುಖ್ಯ. ಇವರ ತಂತ್ರಾಗಮ ಪ್ರಾವೀಣ್ಯತೆ, ಹಠ ಸಾಧನೆ, ಯೋಗಶಕ್ತಿ, ತಪಶ್ಶಕ್ತಿ ಅಗಾಧವಾದದ್ದು. ವೇದಗಳಲ್ಲಿ ಈ ಆತ್ರೇಯರೇ ಕಂಡುಹಿಡಿದ ಮಂತ್ರಗಳು ಹಲವಾರಿವೆ. ಅದೇ ಒಂದು ಮಂಡಲವಾಗಿ ವಿಭಜಿಸಲ್ಪಟ್ಟಿದೆ ಋಗ್ವೇದದಲ್ಲಿ. ಹಾಗೇ ಸಾಮ, ಯಜುಷ್, ಅಥರ್ವದಲ್ಲಿ ಹಲವು ಮಂತ್ರಗಳು ಕಂಡು ಬರಬಹುದು ಹುಡುಕಬೇಕಷ್ಟೆ.

ಮುಖ್ಯವಾಗಿ ನಿರ್ಮಾಣ ಶಾಸ್ತ್ರ, ಔಷಧ ವಿಜ್ಞಾನ, ದೇಹಶಾಸ್ತ್ರ, ಅಂಗರಚನೆ, ಯುದ್ಧವಿಧ್ಯೆ, ಅಸ್ತ್ರಾದಿಗಳು, ದಿವ್ಯಲೋಕಯಾತ್ರೆ, ವೈಮಾನಿಕ ಶಾಸ್ತ್ರ ಇತ್ಯಾದಿ ಇತ್ಯಾದಿಗಳಲ್ಲಿ ಉತ್ತಮ ತಂತ್ರಜ್ಞತೆ ಹೊಂದಿದವರಲ್ಲಿ ಆತ್ರೇಯರು ಎತ್ತರದಲ್ಲಿದ್ದಾರೆ. ಆ ವಿಷಯವಾಗಿ ಇಲ್ಲಿ ಹೆಚ್ಚು ವಿವರಿಸಲಾರೆ. ಅವರ ಕೆಲ ಗಣಿತ ತಜ್ಞತೆಯನ್ನು ಮಾತ್ರಾ ಉದಾಹರಿಸುತ್ತಾ ನಮ್ಮ ಹಿಂದಿನ ಕೆಲ ವಿಶಿಷ್ಟ ನಿರ್ಮಾಣಗಳ ಬಗ್ಗೆ ಬೆಳಕು ಚೆಲ್ಲುವ ಉದ್ದೇಶ ಈ ಲೇಖನದ್ದಾಗಿರುತ್ತದೆ. ಅವರ ವಾಸ್ತು ಶಾಸ್ತ್ರ ತಜ್ಞತೆಯೂ ಅಗಾಧವಾದದ್ದು. ಚಲನಾಶಕ್ತಿಗೆ ಒಂದು ವಿಶಿಷ್ಟ ಆಯಾಮವನ್ನೇ ಕೊಟ್ಟ ಇವರು ಜಡ ವಸ್ತುಗಳಲ್ಲಿ ಶಕ್ತಿ ಪ್ರಯೋಗವಿಲ್ಲದೇನೇ ಚಲನೆಯುಂಟು ಮಾಡುವ ತಂತ್ರಜ್ಞಾನ ರೂಪಿಸಿದ್ದಾರೆ. ಅದರ ಬಗ್ಗೆ ಈ ಲೇಖನದಲ್ಲಿ ಬೆಳಕು ಚೆಲ್ಲೋಣ.

ಋ.ಮ.5 ಸೂಕ್ತ 2 ಮಂತ್ರ 6-12
ವಸಾಂ ರಾಜಾನಂ ವಸತಿಂ ಜನಾನಾಮರಾತಯೋ ನಿ ದಧುರ್ಮರ್ತ್ಯೇಷು | 
ಬ್ರಹ್ಮಾಣ್ಯತ್ರೇರವ ತಂ ಸೃಜಂತು ನಿಂದಿತಾರೋ ನಿಂದ್ಯಾಸೋ ಭವಂತು ||  6 ||
ಶುನಶ್ಚಿಚ್ಛೇಪಂ ನಿದಿತಂ ಸಹಸ್ರಾದ್ಯೂಪಾದಮುಂಚೋ ಅಶಮಿಷ್ಟ ಹಿ ಷಃ | 
ಏವಾಸ್ಮದಗ್ನೇ ವಿಮುಮುಗ್ಧಿ ಪಾಶಾನ್ ಹೋತಶ್ಚಿಕಿತ್ವ ಇಹ ತೂ ನಿಷದ್ಯ ||  7 ||  
ಹೃಣೀಯಮಾನೋ ಅಪ ಹಿ ಮದೈಯೇಃ ಪ್ರ ಮೇ ದೇವಾನಾಂ ವ್ರತಪಾ ಉವಾಚ | 
ಇಂದ್ರೋ ವಿದ್ವಾಙ್ ಅನು ಹಿ ತ್ವಾ ಚಚಕ್ಷ ತೇನಾಹಮಗ್ನೇ ಅನುಶಿಷ್ಟ ಆಗಾಮ್ ||  8 ||
ವಿ ಜ್ಯೋತಿಷಾ ಬೃಹತಾ ಭಾತ್ಯಗ್ನಿರಾವಿರ್ವಿಶ್ವಾನಿ ಕೃಣುತೇ ಮಹಿತ್ವಾ | 
ಪ್ರಾದೇವೀರ್ಮಾಯಾಃ ಸಹತೇ ದುರೇವಾಃ ಶಿಶೀತೇ ಶೃಂಗೇ ರಕ್ಷಸೇ ವಿನಿಕ್ಷೇ ||  9 ||
ಉತ ಸ್ವಾನಾಸೋ ದಿವಿ ಷಂತ್ವಗ್ನೇಸ್ತಿಗ್ಮಾಯುಧಾ ರಕ್ಷಸೇ ಹಂತವಾ ಉ | 
ಮದೇ ಚಿದಸ್ಯ ಪ್ರ ರುಜಂತಿ ಭಾಮಾ ನ ವರಂತೇ ಪರಿಬಾಧೋ ಅದೇವೀಃ ||  10 ||
ಏತಂ ತೇ ಸ್ತೋಮಂ ತುವಿಜಾತ ವಿಪ್ರೋ ರಥಂ ನ ಧೀರಃ ಸ್ವಪಾ ಅತಕ್ಷಮ್ | 
ಯದೀದಗ್ನೇ ಪ್ರತಿ ತ್ವಂ ದೇವ ಹರ್ಯಾಃ ಸ್ವರ್ವತೀರಪ ಏನಾ ಜಯೇಮ ||  11 ||
ತುವಿಗ್ರೀವೋ ವೃಷಭೋ ವಾವೃಧಾನೋಽಶ್ವತ್ರ1ರ್ಯಃ ಸಮಜಾತಿ ವೇದಃ | 
ಇತೀಮಮಗ್ನಿಮಮೃತಾ ಅವೋಚನ್ ಬರ್ಹಿಷ್ಮತೇ ಮನವೇ 
ಶರ್ಮ ಯಂಸದ್ಧವಿಷ್ಮತೇ ಮನವೇ ಶರ್ಮ ಯಂಸತ್ ||  12 ||

ಪ್ರತಿಯೊಂದು ಜೀವಿಯೂ ತನ್ನ ಭದ್ರತೆ, ರಕ್ಷಣೆ, ಹಿತಕ್ಕಾಗಿ ನಿರ್ಮಾಣ ಶಾಸ್ತ್ರ ಆಧರಿಸಿ ಒಂದು ವಾಸಸ್ಥಳವನ್ನು ಕಟ್ಟಿ ಕೊಳ್ಳುತ್ತವೆ. ಹಾಗೇ ಮಾನವನೂ ತನಗಾಗಿ ನಿರ್ಮಿಸಿಕೊಂಡ ಸೂರೇ ಮನೆ. ಆ ಮನೆ ಹೇಗಿರಬೇಕು? ಹೇಗಿದ್ದರೆ ಸೌಲಭ್ಯ? ಹೇಗಿದ್ದರೆ ಕ್ಷೇಮ? ಸುಖದಾಯಕವೆಂಬುದು ಒಂದು ಲೆಕ್ಕಾಚಾರ. ಆ ಲೆಕ್ಕಾಚಾರವನ್ನು ಈ ಮೇಲಿನ ಮಂತ್ರಗಳು ಕೆಲ ವಿಶಿಷ್ಟ ಸಂಜ್ಞೆಗಳ ಮೂಲಕ ವಿವರಿಸುತ್ತವೆ.  ಹಾಗೂ ಈ ಸೂತ್ರದಂತೆ ಗೃಹ ನಿರ್ಮಾಣ ಮಾಡಿಕೊಂಡರೆ ಸುಖಶಾಂತಿ ನೆಮ್ಮದಿ ಲಭ್ಯವೆಂದಿದ್ದಾರೆ. ಆದರೆ ಇವೆಲ್ಲಾ ಗಣಿತ ಸಮೀಕರಣ ರೀತಿಯಲ್ಲಿರದೆ ಒಂದು ವಿಚಿತ್ರ ಸಂಜ್ಞಾರೂಪದಲ್ಲಿ ಸಂಕೇತಾಕ್ಷರ ಮತ್ತು ಅರ್ಥಾಪತ್ತಿವಿವೇಕವೆಂಬ ಸೂತ್ರದಲ್ಲಿ ಅಡಕವಾಗಿದೆ. ಯಾವ ವಿಚಾರಕ್ಕೆ ಯಾವ ಸಂಜ್ಞೆಯು ಪ್ರಧಾನವೋ ಹಾಗೂ ಪ್ರಸ್ತುತವೋ ಮತ್ತು ಎಲ್ಲವನ್ನೂ ಸೂಚಿಸಬಲ್ಲದೋ ಅದೇ ಅರ್ಥಾಪತ್ತಿವಿವೇಕವೆಂಬ ಸೂತ್ರ

ಉದಾ:- ಮಹಾತ್ಮಾ ಗಾಂಧಿ ಎಂದಾಗ ಬರೇ ಕನ್ನಡಕ ಪ್ರಧಾನ. ನಮ್ಮ ದೇಶವನ್ನಾಳಿದ ಪ್ರಧಾನಿ ಇಂದಿರಾಗಾಂಧಿಗೆ ಮೂಗೇ ಪ್ರಧಾನ. ಇವೆಲ್ಲಾ ಗಾಂಧಿ, ಇಂದಿರಾಗಾಂಧಿ ಎಂದು ಹೇಳುವ ಬದಲು ಸೂಚ್ಯಾಂಗಗಳಾಗಿ ವ್ಯವಹಾರದಲ್ಲಿವೆ ಗಮನಿಸಿರಬಹುದು. ಅಂತಹಾ ಮುಖ್ಯ ಸೂಚ್ಯಾಂಕ ಚಿಹ್ನೆಗಳು, ಶಬ್ದಗಳು, ಸಂಧಿ ವಿಗ್ರಹಗಳು ಈ ಮಂತ್ರದಲ್ಲಿ ಬಳಕೆಯಾಗಿದೆ. ಇದರ ಹಿನ್ನೆಲೆಯ ಉದ್ದೇಶ ಮಂತ್ರ ದುರ್ಬಳಕೆಯಾಗದಿರಲಿ ಎಂಬುದೇ ಆಗಿರುತ್ತದೆ. ಒಂದು ಉದಾಹರಣೆ ಕೊಡುತ್ತೇನೆ ಗಮನಿಸಿ.

ಈ ಲೆಕ್ಕದಲ್ಲಿ ಒಂದು ಸಣ್ಣ ಮನೆ ನಿರ್ಮಾಣಕ್ಕೆ ಬೇಕಾಗುವ ಸಾಮಗ್ರಿ ವಿಚಾರದ ಒಂದು ಲೆಕ್ಕವಡಗಿದೆ. 

೧. “ನಿದಿತಂ ಸಹಸ್ರಾಶುನಃ 
೨. “ಉಪಾದಂ ಯೂಪ ಪಾದಂ ಚ 
೩. “ವಿದ್ವಾನ್ ಅನುಹಿತ್ವಾ ಚಚಕ್ಷ 
೪. “ಶಿಶೀತೇ ಶೃಂಗೇ ರಕ್ಷಸೇವಿ 

ಈ ರೀತಿಯಲ್ಲಿ ಆಯ, ಅದನ್ನಾಧರಿಸಿದ ಉದ್ದ+ಅಗಲ ನಿರ್ಮಾಣ ಗುಣಮಟ್ಟ  ಆಧರಿಸಿ  ಒಂದು ಬೀಜ ಸಂಖ್ಯೆಯನ್ನು ನಿರ್ಧರಿಸಿಕೊಂಡಲ್ಲಿ ಈ ಮೇಲ್ಕಂಡ ನಾಲ್ಕು ವಿಚಾರಗಳೇ ಅರ್ಥಬದ್ಧ. ಇಲ್ಲವಾದಲ್ಲಿ ಬರೇ ಕೇವಲ ವಾಕ್ಯವೆನ್ನಿಸುವುದು. ಅರಮನೆ, ಊರಿನ ನಿರ್ಮಾಣ, ಸಾರ್ವಜನಿಕ ಭದ್ರತೆಯ ಕೋಟೆ ನಿರ್ಮಾಣ, ಗುಹಾಲಯ ನಿರ್ಮಾಣ, ದೇವಾಲಯ ನಿರ್ಮಾಣ ಇವೆಲ್ಲವೂ ಕೆಲ ಸೂತ್ರ ರೀತಿಯಲ್ಲಿ ವಿವರಿಸಲ್ಪಟ್ಟಿವೆ. ಇವುಗಳನ್ನು 

೧. “ದಿವಿಷಂತಾ 
೨. “ತುವಿಗ್ರೀವ 
೩. “ಸಮಜಾತಿ 
೪. “ತುವಿಜಾತ 
೫. “ಆಶಮಿಷ್ಠ 
೬. “ಹೃಣೀಯಮಾನ 

ಎಂಬ ೬ ಪದ್ಧತಿಯಲ್ಲಿ ಸಂಯೋಜಿಸಿದ್ದಾರೆ ಮತ್ತು ಒಂದು ನಿರ್ಮಾಣದ ಅಳತೆ, ಅದರ ವಿಸ್ತಾರವನ್ನಾಧರಿಸಿ ಆಯಾಯ ಕಾಲಕ್ಕೆ ತಗಲುವ ಖರ್ಚುವೆಚ್ಚ ಮತ್ತು ಕಚ್ಚಾವಸ್ತು ಪ್ರಮಾಣ ಇವನ್ನೆಲ್ಲಾ ನಿಖರವಾಗಿ ಲೆಕ್ಕ ಹಾಕಬಹುದು. ಅಲ್ಲದೇ ಕೆಲ ವಿಶಿಷ್ಟ ನಿರ್ಮಾಣವೂ ಸಾಧ್ಯ. ಈಗಿನ ಭಾರತೀಯರಿಗೆ ಇಟಲಿಯ ಪೀಸಾ ಗೋಪುರ ಒಂದು ಅದ್ಭುತ. ಅದೊಂದು ವಿಶಿಷ್ಟ ವಾಸ್ತು ಎಂದೇ ತಿಳಿಸಲಾಗುತ್ತದೆ. ಆದರೆ ಭಾರತದಲ್ಲಿ ಅಂಥಾ ಕೆಲವು ನಿರ್ಮಾಣಗಳು ಇವೆ. ಅದರ ತಂತ್ರಜ್ಞಾನ ಭಾರತದ್ದೇ. ಅದರ ಉದ್ದೇಶ ಸಮತೋಲನ ಸೂತ್ರ ಅದರ ಉಪಯುಕ್ತತೆ ಎಲ್ಲವೂ ವಿವರಿಸಲ್ಪಟ್ಟಿವೆ ಆತ್ರೇಯರಿಂದ. ಒಟ್ಟಾರೆ ಕೆಲ ವಿಶಿಷ್ಟ ವಾಸ್ತು ನಿರ್ಮಾಣದಲ್ಲಿ ಆತ್ರೇಯರ ಕೊಡುಗೆ ಅಪಾರ. ಒಂದು ಉದಾಹರಣೆ ಗಮನಿಸಿ. (ಊರು ಹೆಸರು ಕಲ್ಪಿತ)

ರಾಮಪುರವೆಂಬ ಊರಿನಲ್ಲಿ ಒಂದು ಹಳೇಕೋಟೆ. ಆ ಕೋಟೆಯ ಒಳಗೆ ಒಂದು ಶಿವಾಲಯ. ಅದೇ ಅರಮನೆಯೂ ಕೂಡ. ಅದರ ವಾಸ್ತುವಿನ ಬಗ್ಗೆ ಈ ವಿವರಣೆ ಈ ಕಾಲಮಾನದ ಅನಿವಾರ್ಯತೆಯಿಂದಾಗಿ ಊರಿನ ವಿವರಣೆ ಕೊಡುತ್ತಿಲ್ಲ ಕುತೂಹಲಿಗಳು ಆ ವ್ಯವಸ್ಥೆಯನ್ನು ಹಾಳು ಮಾಡಬಹುದು ಎಂಬ ಕಾರಣದಿಂದ. ಈಗಲೂ ಆ ವಾಸ್ತುವ್ಯವಸ್ಥೆ ಜೀವಂತವಾಗಿದೆ. ಆದರೆ ಯಾರಿಗೂ ಗೊತ್ತಿಲ್ಲ. ಬರೇ ದೇವಾಲಯದಲ್ಲಿ ಪೂಜೆ ಆಗುತ್ತಿದೆ. ಈ ರಹಸ್ಯಗಳು ಯಾರಿಗೂ ತಿಳಿದಿಲ್ಲ.

ಒಂದು ಮೇರು ಪ್ರಸ್ತಾರದಲ್ಲಿ ನಿರ್ಮಾಣವಾದ ಶಿಲಾಮಯ ದೇವಾಲಯವಿದು. ಶಿವ, ನಂದಿ, ಪಾರ್ವತಿ, ಗಣಪತಿ, ಹರಿಹರ, ಮಹಾವಿಷ್ಣು, ಕಾರ್ತಿಕೇಯ, ದಕ್ಷಿಣಾ ಮೂರ್ತಿ, ಕಾಳಿಕಾ ಹೀಗೆ ಹಲವು ದೇವರ ಗರ್ಭಗುಡಿ ಸಹಿತವಾದ ಹಲವು ಕೋಣೆಗಳು, ಅಂತರ್ಗೃಹಗಳು ಹಾಗೂ ವಿಶಾಲ ಹಜಾರ ನೃತ್ಯಮಂಟಪ, ಸುಖನಾಸಿ, ಮುಖಮಂಟಪ, ತೀರ್ಥಮಂಟಪ, ಪಾಕಶಾಲೆ, ಅಗ್ನಿ ಪೂಜಾಗೃಹ, ತಂತ್ರಿನಿವಾಸ, ಮಡಿಕೋಣೆ, ಭಂಡಾರಕೋಣೆ,  ಪಾರುಪತ್ಯೆಗಾರರ ಕೋಣೆ, ಪವಿತ್ರಪಾಣಿಗೃಹ ಸುತ್ತಿನ ಪೌಳಿ 3, ನೌಕರರ ವಸತಿ, ಬೇರಿಮಾಳಿಗೆ, ನಗಾರಿ ಗೋಪುರ, ಚತುರ್ಮುಖ ಗೋಪುರ, ಶಾಂತಿಗೋಪುರ, ವಿಜಯ ಗೋಪುರ, ನಂದಿಧ್ವಜ, ಮಹಾಬಲಿಕಲ್ಲು, ಇತರೆ ಬಲಿಕಲ್ಲುಗಳು, ಕುಕ್ಕುಟಯಂತ್ರ, ತುಲಾಸ್ತಂಭ, ಮಹಾರಥ, ಸಣ್ಣರಥಗಳು ಹಾಗೂ ವಿಶಾಲ ರಥಬೀದಿ ಇವಿಷ್ಟು ಇದ್ದು ವ್ಯವಸ್ಥಿತವಾದ ದೇವಾಲಯ ವಿಜೃಂಭಣೆಯಿಂದಲೇ ನಡೆಯುತ್ತಿದೆ. ಅರಿಯದೇ ಕೆಲ ಬದಲಾವಣೆಯನ್ನು ಆಡಳಿತ ಮಂಡಳಿ+ಅರ್ಚಕ ತಂತ್ರಿವರ್ಗ ಮಾಡಿಕೊಂಡಿದೆ. ಆದರೆ ಯಾವುದೇ ಭಿನ್ನತೆಯಾಗಿಲ್ಲ. ಇವೆಲ್ಲಾ ಪ್ರತ್ಯಕ್ಷ ಪರೋಕ್ಷವಾಗಿ ಅಲ್ಲಿ ಸಂಯೋಜಿಸಿದ ಒಂದು ವಾಸ್ತು ರಹಸ್ಯ ಯಾರಿಗೂ ಗೊತ್ತಿಲ್ಲ. ಅಲ್ಲಿನ ಒಂದು ವಿಶಿಷ್ಟ ವಿಗ್ರಹ, ಅದರ ಪಾಣಿಪೀಠ ದಕ್ಷಿಣಕ್ಕೆ ಮುಖವಾಗುವಂತೆ ತಿರುಗಿಸಿದರೆ ಒಂದು ದಾರಿ ನೆಲಮಾಳಿಗೆಗೆ. ಅದು ವಿಶಾಲ ಹಜಾರ. ಸಾವಿರಾರು ಜನ ಸೇರಿ ಅಲ್ಲಿ ವಾಸ ಮಾಡಬಹುದು. ಅದು ರಾಜನ ಮಂತ್ರಾಲೋಚನ ಗೃಹ. ಹಾಗೇ ಪಶ್ಚಿಮಕ್ಕೆ ತಿರುಗಿಸಿದರೆ ಒಂದು ದ್ವಾರ. ಅದು ರಾಜನ ಅಂತರ್ಗೃಹ. ರಾಣೀವಾಸ, ಸಂರಕ್ಷಿತ ಪ್ರದೇಶ. ಹಾಗೇ ಉತ್ತರಕ್ಕೆ ತಿರುಗಿಸಿದರೆ ಗುಹಾದ್ವಾರ. ಊರಿನ ಹೊರಭಾಗಕ್ಕೆ ಅಂದಾಜು 7 ಕಿ.ಮೀ.ನಷ್ಟು ದೂರದಲ್ಲಿ ನದೀ ತೀರಕ್ಕೆ ಕರೆದುಕೊಂಡು ಹೋಗಿ ಬಿಡುತ್ತದೆ. ಇವೆಲ್ಲಾ ಅತೀ ರಹಸ್ಯವಾಗಿ ಜೋಡಿಸಿದ ಒಂದು ವಾಸ್ತು ರಚನೆ. ಇಲ್ಲಿ ಆ ವಿಗ್ರಹವನ್ನು ಉತ್ತರಕ್ಕೆ ತಿರುಗಿಸಿದರೆ ಮಾತ್ರಾ ನದೀತೀರದ ದಾರಿಯೂ ತೆರೆಯುತ್ತದೆ. ಇಲ್ಲವಾದರೆ ಅಲ್ಲಿ ದಾರಿಯಿದೆಯೆಂಬ ಕುರುಹೂ ಸಿಗದಂತೆ ಮಾಡಿದ್ದಾರೆ ಮತ್ತು ಈ ಮೇಲಿನ ದೇವಾಲಯ ಒಂದು ವಿಶಿಷ್ಟತೆ ಎಂದರೆ ಒಂದೇ ಸನ್ನೆಯ ಮೇಲೆ ಆಧಾರಗೊಳ್ಳುತ್ತಾ ಇಡೀ ಶಿವಾಲಯ ನಿಂತಿರುತ್ತದೆ. ಈ ಗುಹಾದ್ವಾರದ ಆರನೇ ದೀಪಸ್ತಂಭದ ಮೇಲೆ ಒಂದು ಕುಕ್ಕುಟ ಯಂತ್ರದ ಕೀಲಿ ಇದೆ. ಅದನ್ನು ಚಲಿಸಿದರೆ ಅಂದರೆ ಕಿತ್ತು ತೆಗೆದರೆ ಈ ಇಡೀ ಮೇಲಿನ ದೇವಾಲಯ ಮತ್ತು ಪ್ರತ್ಯಕ್ಷ ನಿರ್ಮಾಣಗಳೆಲ್ಲಾ ಒಂದೊಂದಾಗಿ ಕಳಚಿಬಿದ್ದು ನಾಶವಾಗುತ್ತದೆ. ಅಂತಹಾ ವಾಸ್ತು ಇಲ್ಲಿ ಅಳವಡಿಸಲ್ಪಟ್ಟಿದೆ. ಇದರ ಮುಖ್ಯ ಕಾರಣ ಶತ್ರು ರಾಜರ ದಾಳಿಯಾಗಿ ಅರಸ ಸೋತರೆ ಈ ಗುಹಾದ್ವಾರದ ಮುಖೇನ ತಪ್ಪಿಸಿಕೊಂಡು ಹೋಗಬಹುದು. ಹಾಗೇ ಶತ್ರು ರಾಜನು ಸೈನ್ಯ ಸಮೇತ ಈ ದೇವಾಲಯ ಪ್ರವೇಶಿಸಿದ ನಂತರ ಈ ಕುಕ್ಕುಟ ಯಂತ್ರದ ಕೀಲಿ ಕಳಚಿದರೆ ದೇವಾಲಯ ತಲೆಮೇಲೆ ಬಿದ್ದು ಎಲ್ಲರೂ ನಾಶವಾಗುತ್ತಾರೆ. ಶತ್ರುನಾಶ+ರಕ್ಷಣೆಯೆಂಬ ಸೂತ್ರದಲ್ಲಿ ಇದನ್ನು ರಚಿಸಿದ್ದಾರೆ. ಆತ್ರೇಯರು ಈ ಸೂತ್ರದ ಕರ್ತೃಗಳು. ಹಾಗೇ ಇನ್ನೂ ಕೆಲವು ಇಂತಹಾ ರಹಸ್ಯ ರಕ್ಷಣಾತ್ಮಕವಾದ ವಿಶಿಷ್ಟ ವಾಸ್ತುಗಳನ್ನು ಯೋಜಿಸಿದ್ದಾರೆ. ಅವೆಲ್ಲಾ ಒಂದು ಗಣಿತಸೂತ್ರದಂತೆಯೇ ವ್ಯವಹರಿಸುತ್ತದೆ ಎಂದು ಬೇರೆ ಹೇಳಬೇಕಿಲ್ಲ ಅಲ್ಲವೆ. ಇಂತಹಾ ನಿರ್ಮಾಣ ವಿಜ್ಞಾನದಲ್ಲಿ ಅತೀ ಮುಂದುವರಿದ ತಂತ್ರಜ್ಞಾನ ಬಲ್ಲ ಆತ್ರೇಯರು ಅತೀ ಹೆಚ್ಚಿನ ಸನ್ನೆ ಯಂತ್ರಗಳನ್ನು ಕಂಡು ಹಿಡಿದಿದ್ದರು. ಭಾರ ಎತ್ತುವುದು, ದೂರ ತಳ್ಳುವುದು, ಎಸೆಯುವುದು, ವೇಗವರ್ಧಕ, ನಿರಂತರ ಚಲನೆ ಇತ್ಯಾದಿ ಇತ್ಯಾದಿ ಬಗೆಗಳು.

ಋ.ಮ.5 ಸೂಕ್ತ 9 ಮಂತ್ರ 1-7
ತ್ವಾಮಗ್ನೇ ಹವಿಷ್ಮಂತೋ ದೇವಂ ಮರ್ತಾಸ ಈಳತೇ | 
ಮನ್ಯೇ ತ್ವಾ ಜಾತವೇದಸಂ ಸ ಹವ್ಯಾ ವಕ್ಷ್ಯಾನುಷಕ್ ||  1 ||
ಅಗ್ನಿರ್ಹೋತಾ ದಾಸ್ವತಃ ಕ್ಷಯಸ್ಯ ವೃಕ್ತಬರ್ಹಿಷಃ | 
ಸಂ ಯಜ್ಞಾಸಶ್ಚರಂತಿ ಯಂ ಸಂ ವಾಜಾಸಃ ಶ್ರವಸ್ಯವಃ ||  2 ||
ಉತ ಸ್ಮ ಯಂ ಶಿಶುಂ ಯಥಾ ನವಂ ಜನಿಷ್ಟಾರಣೀ | 
ಧರ್ತಾರಂ ಮಾನುಷೀಣಾಂ ವಿಶಾಮಗ್ನಿಂ ಸ್ವಧ್ವರಮ್ ||  3 ||
ಉತ ಸ್ಮ ದುರ್ಗೃಭೀಯಸೇ ಪುತ್ರೋ ನ ಹ್ವಾರ್ಯಾಣಾಮ್ | 
ಪುರೂ ಯೋ ದಗ್ಧಾಸಿ ವನಾಗ್ನೇ ಪಶುರ್ನ ಯವಸೇ ||  4 ||  
ಅಧ ಸ್ಮ ಯಸ್ಯಾರ್ಚಯಃ ಸಮ್ಯಕ್ ಸಮ್ಯಂತಿ ಧೂಮಿನಃ | 
ಯದೀಮಹ ತ್ರಿತೋ ದಿವ್ಯುಪ ಧಮತಿ ಶಿಶೀತೇ ಧ್ಮಾತರೀ ಯಥಾ ||
ತವಾಹಮಗ್ನ ಊತಿಭಿರ್ಮಿತ್ರಸ್ಯ ಚ ಪ್ರಶಸ್ತಿಭಿಃ | 
ದ್ವೇಷೋಯುತೋ ನ ದುರಿತಾ ತುರ್ಯಾಮ ಮರ್ತ್ಯಾನಾಮ್ ||  
ತಂ ನೋ ಅಗ್ನೇ ಅಭೀ ನರೋ ರಯಿಂ ಸಹಸ್ವ ಆ ಭರ | 
ಸ ಕ್ಷೇಪಯತ್ ಸಪೋಷಯದ್ಭುವದ್ವಾಜಸ್ವ ಸಾತಯ ಉತೈಧಿ ಪೃತ್ಸು ನೋ ವೃಧೇ ||  7 ||  

ಈ ಮೇಲ್ಕಂಡ ಮಂತ್ರದಲ್ಲಿ ಉದಾಹರಿಸಿದಂತೆ ಹಲವಾರು ರೀತಿಯ ವಿಶಿಷ್ಟ ಸನ್ನೆಗಳನ್ನು ಸರ್ವೇ ಸಾಮಾನ್ಯವಾಗಿ ಬಳಸುತ್ತಿದ್ದರು ಜನ. ಎಲ್ಲವೂ ರಕ್ಷಣೆ, ಸುಲಭ ಸಾಧ್ಯತೆ, ಕ್ಷಿಪ್ರತೆಗೆ ಆಧರಿಸಿದ್ದವು. ಈಗ ಮುಂದುವರಿದ ವೈಜ್ಞಾನಿಕತೆಯಿಂದಾಗಿ ಮರೆಯಾಗಿವೆ ಅಷ್ಟೆ. ರೈತಾಪಿ ಜನರು ಬಳಸುತ್ತಿದ್ದ ಕೋಲುಮಣೆ, ಕಟ್ಟೆಮಣೆ, ತೊಟ್ಟಿಕಂಬ, ಮಲ್ಲಕಂಬ, ಮೇಟಿಕಂಬ, ಏತ, ಮುಗುಳುಡಬ್ಬಿ, ನೇಗಿಲು, ಕೊಡಲಿ, ಮಚ್ಚು, ಕಡೆಮಟ್ಟ, ನೂಲುಮಚ್ಚು ಇತ್ಯಾದಿ ಇತ್ಯಾದಿ ಹಲವು ಸನ್ನೆಗಳು ಜನರಲ್ಲಿ ಬಳಕೆಯಲ್ಲಿದ್ದವು. ಇಷ್ಟಲ್ಲದೆ ಬಟ್ಟೆ ನೇಯುವ ತಂತ್ರಜ್ಞಾನ, ದಾರ ಮಾಡುವ ತಂತ್ರಜ್ಞಾನ, ನಾರಿನ ಉತ್ಪನ್ನಗಳ ತಂತ್ರಜ್ಞಾನ, ಲಾಳಿ ಮೀಟುವ ಸನ್ನೆ, ಬಲೆ ನೇಯ್ಗೆ, ಒತ್ತು ಗುಂಡು, ಚಕ್ಕಡಿ ತಂತ್ರ, ದ್ವಿಚಕ್ರಿ, ತ್ರಿಚಕ್ರಿ, ಚತುಶ್ಚಕ್ರಿ, ಷಟ್ ಚಕ್ರಿ, ದಶರಥ, ಷೋಡಶರಥ, ದ್ವೇತ್ರಿಂಶತ್ ರಥ, ಚತುಷ್ಷಷ್ಟಿರಥ, ಅಶೀತಿ ರಥ ಇತ್ಯಾದಿ ಭಾರವಾಹಕ ಸೂಕ್ಷ್ಮ ಸನ್ನೆಗಳೂ ವಾಸ್ತುಶಾಸ್ತ್ರರೀತ್ಯಾ ಬಳಕೆಯಲ್ಲಿದ್ದವು. ಇವೆಲ್ಲಾ ಆತ್ರೇಯರ ಸಾಧನೆಗಳಾಗಿದ್ದವು. ಅವೆಲ್ಲಾ ಒಂದು ರೀತಿಯಲ್ಲಿ ಗಣಿತ ಸೂತ್ರ ಆಧರಿಸಿ ತಯಾರಿಸುತ್ತಿದ್ದರು.
ಅಶ್ವಹೃದಯವೆಂಬ ಒಂದು ವಿಶಿಷ್ಟ ವಿಧ್ಯೆ ಇದೆ. ಇದರಲ್ಲಿ ಒಂದು ಸಮೀಕರಣ ಬಹಳ ಗೂಢವಾಗಿ ವಿಶೇಷ ಜ್ಞಾನವನ್ನು ಅಡಗಿಸಲಾಗಿದ್ದು ಆಗಿನ ಕಾಲದಲ್ಲೇ ನಳನೆಂಬ ಚಕ್ರವರ್ತಿ ಇದರಲ್ಲಿ ನಿಷ್ಣಾತನಾಗಿದ್ದ. ಕೇವಲ 9 ಮಾತ್ರಾ ಕಾಲದಲ್ಲಿ 60 ಯೋಜನ ದೂರ ಪ್ರಯಾಣಿಸುವ ತಂತ್ರಜ್ಞಾನ ಸಾಧಿಸಿದ್ದ. ಉದಾಹರಣೆ ರಥಾನ್ ತಿಷ್ಠಕ ಬಾಹುಕ ಒಟ್ಟು 9 ಮಾತ್ರಾ ಕಾಲವೆಂದರೆ ಈಗಿನ 5 ಸೆಕೆಂಡ್ ಕಾಲ. ಅದರ ಸೂತ್ರ ಹೀಗಿದೆ: 
ರಃ ಮಿತ್ಯೇತಿ ಯತ್ ರಥಾತಿ ರಣರಣೈಃ ಕಾರಣೇ ಭೂತಾನ್ ಅಣೋಃ ಉತ್ಕೀಲನ ಕೋಷ್ಠಕೇ ತತ್ ಪ್ರಾಯಃ ಶೋಷನ್ ಬಾಹುವೃಕ್ತಾಮಿತಿ ಹೂಂಕಾರೈ ಪ್ರಜಾಪ್ರತ್ಯೇಕಂ ಕಃ ಇತಿ ಸೂತ್ರಃ"  

5 ಸೆಕೆಂಡಿಗೆ 60 ಯೋಜನ. 1 ಯೋಜನ ಸಮ 4.5 ಕಿ.ಮೀ. x12=54 ಕಿ.ಮೀ 1 ಸೆಕೆಂಡಿಗೆ. 1 ನಿಮಿಷಕ್ಕೆ 3240 ಕಿ.ಮೀ. ಪ್ರಯಾಣಿಸಬಲ್ಲ ರಥ ತಂತ್ರಜ್ಞಾನ ತಿಳಿದಿದ್ದ ನಳ ಚಕ್ರವರ್ತಿ. ಒಂದು ಮಿತೀಯ ವೇಗದ ನಂತರ ಪಥವಿಲ್ಲ ನೆಲ ಬಿಟ್ಟು ರಥವು ಹಾರುತ್ತಿತ್ತು. ಹಾಗಾಗಿಯೇ ಋತುಪರ್ಣ ರಥ ನಿಲ್ಲಿಸೆಂದಾಗ ಕೇವಲ 5 ಸೆಕೆಂಡಿನ ಕಾಲದಲ್ಲಿ 60 ಯೋಜನ ಮುಂದೆ ಹೋಗಿತ್ತು ರಥ. ಇದು ಅಶ್ವಹೃದಯದ ಒಂದಂಶ ಮಾತ್ರ. ಅದರಲ್ಲಿ ರಥ ನಿರ್ಮಾಣ, ಕುದುರೆಯ ಶಕ್ತಿ, ಸಂಯೋಜನೆ, ಚಕ್ರಯೋಜನೆ, ಉತ್ಕ್ರಮಣ ಶಕ್ತಿ, ಗಾಳಿ ಬೀಸುವ ಕ್ರಮ, ಪ್ರಯಾಣ ದಿಕ್ಕು, ಗುರಿಯ ದೂರ ಇವನ್ನು ಗಮನಿಸಿ ಯೋಜಿಸಬೇಕು. ಇದು ಅಶ್ವಹೃದಯದ ಗಮನ ತಂತ್ರವೆಂಬ ಒಂದಂಶ. 7 ಅಧ್ಯಾಯಗಳಲ್ಲಿ ಒಟ್ಟು ಅಶ್ವಹೃದಯದ 24 ಪಾಠಗಳಿವೆ. ಅವೆಲ್ಲವೂ ಹೆಚ್ಚಾಗಿ ಆತ್ರೇಯರ ಸಂಶೋಧನೆಯಾಗಿರುತ್ತವೆ. ಇಂತಹಾ ಹಲ ಕೆಲವು ನಿರ್ಮಾಣ ಶಾಸ್ತ್ರದ  ಸಂಶೋಧನೆಗಳು ಕಂಡು ಬರುತ್ತವೆ. ಹಾಗೇ ಭೂವಿಜ್ಞಾನ, ಮಳೆ, ಸುವೃಷ್ಟಿ ತಂತ್ರಜ್ಞಾನ, ಗಣಿಗಾರಿಕೆ, ರತ್ನಶೋಧ, ಲೋಹಶೋಧ ಇತ್ಯಾದಿಗಳಲ್ಲಿಯೂ ಇವರ ಕಾರ್ಯ ಕುಶಲತೆ ಮೆರೆದಿದೆ. ಒಂದು ನುಡಿಗಟ್ಟು ಗಮನಿಸಿ.

ಮಾಣಿ ಮುರುಗನ ಮರವನೇರಲು
ಏಣಿಯೇತಕೆ ಮೆಟ್ಟಲಿದೆ ಅದಕೆ
ಶಾಣ್ಯತನದಲಿ ಲೆಕ್ಕಿಸಲು ಕಾಣಿಸುವುದೈ ಸೋಣ ವದರಡಿಯಲಿಹುದು ||

ಯಾವುದೋ ಒಂದು ಭೂಗತ ಖನಿಜ ಸಂಪತ್ತನ್ನು ಕುರಿತು ಈ ವಾಕ್ಯವನ್ನು ಹೇಳಿದ್ದಾರೆ. ಇದು ಉತ್ತರ ಕನ್ನಡದ ಅರೆ ಮಲೆನಾಡು ಪ್ರದೇಶದ ಒಂದು ವಾಕ್ಯ. ಹೀಗೆ ಉದಾಹರಿಸುತ್ತಾ ಹೋದರೆ ಮುಗಿಯದ ಕಥೆ.

ಋ.ಮಂ.5 ಸೂ.27 ಮಂ.1-6
ಅನಸ್ವಂತಾ ಸತ್ಪತಿರ್ಮಾಮಹೇಮೇ ಗಾವಾ ಚೇತಿಷ್ಠೋ ಅಸುರೋ ಮಘೋನಃ | 
ತ್ರೈವೃಷ್ಣೋ ಅಗ್ನೇ ದಶಭಿಃ ಸಹಸ್ರೈ ರ್ವೈಶ್ವಾನರ ತ್ರ್ಯರುಣಶ್ಚಿಕೇತ ||  1 ||
ಯೋ ಮೇ ಶತಾ ಚ ವಿಂಶತಿಂ ಚ ಗೋನಾಂ ಹರೀ ಚ ಯುಕ್ತಾ ಸುಧುರಾ ದದಾತಿ | 
ವೈಶ್ವಾನರ ಸುಷ್ಣುತೋ ವಾವೃಧಾನೋಽಗ್ನೇ ಯಚ್ಛ ತ್ರ್ಯರುಣಾಯ ಶರ್ಮ ||  2 ||
ಏವಾ ತೇ ಅಗ್ನೇ ಸುಮತಿಂ ಚಕಾನೋ ನವಿಷ್ಠಾಯ ನವಮಂ ತ್ರಸದಸ್ಯುಃ | 
ಯೋ ಮೇ ಗಿರಸ್ತುವಿಜಾತಸ್ಯ ಪೂರ್ವೀರ್ಯುಕ್ತೇನಾಭಿ ತ್ರ್ಯರುಣೋ ಗೃಣಾತಿ ||  3 ||  
ಯೋ ಮ ಇತಿ ಪ್ರವೋಚತ್ಯಶ್ವಮೇಧಾಯ ಸೂರಯೇ | 
ದದದೃಚಾ ಸನಿಂ ಯತೇ ದದನ್ಮೇಧಾ ಮೃತಾಯತೇ ||  4 ||  
ಯಸ್ಯ ಮಾ ಪರುಷಾಃ ಶತಮುದ್ಧರ್ಷಯಂತ್ಯುಕ್ಷಣಃ | 
ಅಶ್ವಮೇಧಸ್ಯ ದಾನಾಃ ಸೋಮಾ ಇವ ತ್ರ್ಯಾಶಿರಃ ||  5 ||  
ಇಂದ್ರಾಗ್ನೀ ಶತದಾವ್ನ್ಯಶ್ವಮೇಧೇ ಸುವೀರ್ಯಮ್ | 
ಕ್ಷತ್ರಂ ಧಾರಯತಂ ಬೃಹದ್ದಿವಿ ಸೂರ್ಯಮಿವಾಜರಮ್ ||  6 ||  

ನಮ್ಮಲ್ಲಿ ಹಿಂದಿನಿಂದಲೂ ಅಶ್ವಶಕ್ತಿ, ವೃಷಭಶಕ್ತಿ, ಗಜಶಕ್ತಿ  ಎಂಬ ಮೂರು ವಿಧದ ಶಕ್ತಿ ಮಾಪನ ವ್ಯವಸ್ಥೆಯಿತ್ತು. ಇನ್ನೆಲ್ಲಾ ಶಕ್ತಿಮೂಲವನ್ನೂ ಅಳೆಯಲು ಈ ಶಕ್ತಿ ಮಾನವೇ ಅಳತೆಗೋಲು ಉದಾ-ಭೀಮ ಸಾವಿರ ಆನೆ ಬಲ, ಧೃತರಾಷ್ಟ್ರ ಹತ್ತುಸಾವಿರ ಆನೆಬಲ, ವೃಷಕೇತು ನೂರು ಅಶ್ವಬಲ, ಚಿತ್ರಸೇನ ಸಾವಿರ ಅಶ್ವಬಲ, ಅಶ್ವಪತಿ ದಶಸಹಸ್ರ ಅಶ್ವಬಲ, ಭರತ ಚಕ್ರವರ್ತಿ ದಶಲಕ್ಷ ಅಶ್ವಬಲ ಈ ಅಳತೆಗಳು ಪುರಾಣ ಜನಿತ. ಅದೇನೇ ಇದ್ದರೂ ಅದನ್ನು ಗುರುತಿಸುವ ಒಂದು ತೂಕ ಯಂತ್ರವೇ ಅರುಣ ಯಂತ್ರ. ಅದರ ಅಳತೆ, ಮಾಪನ ವಿಧಾನ, ಪ್ರಮಾಣ, ಬಳಕೆವಿಧಾನ, ಎಲ್ಲವೂ ಒಂದು ಸೂತ್ರದಲ್ಲಿ ವಿವರಿಸಿದ್ದಾರೆ. ಅದನ್ನು ಅರುಣಪ್ರಶ್ನ ವೆಂಬ ಮಂತ್ರ ಭಾಗದಲ್ಲೂ ಕಾಣಬಹುದು. ಮಹಾಸೌರವೆಂಬ ಮಂತ್ರಭಾಗದಲ್ಲೂ ಕಿರಣಶಕ್ತಿ ಆಧರಿಸಿ ಸೌರಶಕ್ತಿಯ ಬಳಕೆಯನ್ನೂ ಉದಾಹರಿಸಿದ್ದಾರೆ. ಇಲ್ಲಿ ಮೂರು ವಿಧದ ಅರುಣಶಕ್ತಿಯೆಂಬರ್ಥದಲ್ಲಿ ತ್ರ್ಯರುಣ ವೆಂದು ಹೆಸರಿಸಿದ್ದಾರೆ. ಅದೊಂದು ವಿಶೇಷವಾದ ಗಣಿತ ಸಮೀಕರಣ. ಅದನ್ನು ಬಿಡಿಸಿದಲ್ಲಿ ಜಗತ್ತಿನಲ್ಲಿ ಶಕ್ತಿಯ ಕೊರತೆ ಇಲ್ಲ. ಇದೂ ಕೂಡ ಆತ್ರೇಯರ ಕೊಡುಗೆ.

ಋ.ಮಂ.5 ಸೂ.29 ಮಂ.1-15

ತ್ರ್ಯರ್ಯಮಾ ಮನುಷೋ ದೇವತಾತಾ ತ್ರೀ ರೋಚನಾ ದಿವ್ಯಾ ಧಾರಯಂತ | 
ಅರ್ಚಂತಿ ತ್ವಾ ಮರುತಃ ಪೂತದಕ್ಷಾಸ್ತ್ವಮೇ ಷಾಮೃಷಿರಿಂದ್ರಾಸಿ ಧೀರಃ ||  1 ||
ಅನು ಯದೀಂ ಮರುತೋ ಮಂದಸಾನಮಾರ್ಚನ್ನಿಂದ್ರಂ ಪಪಿವಾಂಸಂ ಸುತಸ್ಯ | 
ಆದತ್ತ ವಜ್ರಮಭಿ ಯದಹಿಂ ಹನ್ನಪೋ ಯಹ್ವೀರಸೃಜತ್ ಸರ್ತ ವಾ ಉ ||  2 ||
ಉತ ಬ್ರಹ್ಮಾಣೋ ಮರುತೋ ಮೇ ಅಸ್ಯೇಂದ್ರಃ ಸೋಮಸ್ಯ ಸುಷುತಸ್ಯ ಪೇಯಾಃ | 
ತದ್ಧಿ ಹವ್ಯಂ ಮನುಷೇ ಗಾ ಅವಿಂದದಹನ್ನಹಿಂ ಪಪಿವಾಙ್ ಇಂದ್ರೋ ಅಸ್ಯ ||  3 ||
ಆದ್ರೋದಸೀ ವಿತರಂ ವಿ ಷ್ಕಭಾಯತ್ ಸಂವಿವ್ಯಾನ ಶ್ಚಿದ್ಭಿಯಸೇ ಮೃಗಂ ಕಃ | 
ಜಿಗರ್ತಿಮಿಂದ್ರೋ ಅಪಜರ್ಗುರಾಣಃ ಪ್ರತಿ ಶ್ವಸಂತಮವ ದಾನವಂ ಹನ್ ||  4 ||
ಅಧ ಕ್ರತ್ವಾ ಮಘವನ್ ತುಭ್ಯಂ ದೇವಾ ಅನು ವಿಶ್ವೇ ಅದದುಃ ಸೋಮಪೇಯಮ್ | 
ಯತ್ ಸೂರ್ಯಸ್ಯ ಹರಿತಃ  ಪತಂತೀಃ ಪುರಃ ಸತೀರುಪರಾ ಏತಶೇ ಕಃ ||  5 ||
ನವ ಯದಸ್ಯ ನವತಿಂ ಚ ಭೋಗಾಂತ್ಸಾಕಂ ವಜ್ರೇಣ ಮಘವಾ ವಿವೃಶ್ಚತ್ | 
ಅರ್ಚಂತೀಂದ್ರಂ ಮರುತಃ ಸದಸ್ಥೇ ತ್ರೈಷ್ಟುಭೇನ ವಚಸಾ ಬಾಧತ ದ್ಯಾಮ್ ||  6 ||
ಸಖಾ ಸಖ್ಯೇ ಅಪಚತ್ತೂಯಮಗ್ನಿರಸ್ಯ ಕ್ರತ್ವಾ ಮಹಿಷಾ ತ್ರೀ ಶತಾನಿ |
ತ್ರೀ ಸಾಕಮಿಂದ್ರೋ ಮನುಷಃ ಸರಾಂಸಿ ಸುತಂ ಪಿಬದ್ ವೃತ್ರಹತ್ಯಾಯ ಸೋಮಮ್ ||  7 ||
ತ್ರೀ ಯಚ್ಛತಾ ಮಹಿಷಾಣಾಮಘೋ ಮಾಸ್ತ್ರೀ ಸರಾಂಸಿ ಮಘವಾ ಸೋಮ್ಯಾಪಾಃ | 
ಕಾರಂ ನ ವಿಶ್ವೇ ಅಹ್ವಂತ ದೇವಾ ಭರಮಿಂದ್ರಾಯ ಯದಹಿಂ ಜಘಾನ ||  8 ||
ಉಶನಾ ಯತ್ ಸಹಸ್ಯೈ3ರಯಾತಂ ಗೃಹಮಿಂದ್ರ ಜೂಜುವಾನೇಭಿರಶ್ವೈಃ | 
ವನ್ವಾನೋ ಅತ್ರ ಸರಥಂ ಯಯಾಥ ಕುತ್ಸೇನ ದೇವೈರವನೋರ್ಹ ಶುಷ್ಣಮ್ ||  9 ||
ಪ್ರಾನ್ಯಚ್ಚಕೃಮವೃಹಃ ಸೂರ್ಯಸ್ಯ ಕುತ್ಸಾಯಾನ್ಯದ್ವರಿವೋ ಯಾತವೇಽಕಃ | 
ಅನಾಸೋ ದಸ್ಯೂಙ್ ರಮೃಣೋ ವಧೇನ ನಿ ದುರ್ಯೋಣ ಆವೃಣಙ್ಮೃಧ್ರವಾಚಃ ||  10 ||
ಸ್ತೋಮಾಸಸ್ತ್ವಾ ಗೌರವೀತೇರವರ್ಧನ್ನರಂಧಯೋ ವೈದಥಿನಾಯ ಪಿಪ್ರುಮ್ | 
ಆ ತ್ವಾ ಮೃಜಿಶ್ವಾ ಸಖ್ಯಾಯ ಚಕ್ರೇ ಪಚನ್ ಪಕ್ತೀರಪಿಬಃ ಸೋಮಮಸ್ಯ ||  11 ||
ನವಗ್ವಾಸಃ ಸುತಸೋಮಾಸ ಇಂದ್ರಂ ದಶಗ್ವಾಸೋ ಅಭ್ಯರ್ಚಂತ್ಯರ್ಕೈಃ |
ಗವ್ಯಂ ಚಿದೂರ್ವಮಪಿಧಾನವಂತಂ ತಂ ಚಿನ್ನರಃ ಶಶಮಾನಾ ಅಪವ್ರನ್ ||  12 ||
ಕಥೋ ನು ತೇ ಪರಿ ಚರಾಣಿ ವಿದ್ವಾನ್ ವೀರ್ಯಾ ಮಘವನ್ ಯಾ ಚಕರ್ಥ | 
ಯಾ ಚೋ ನು ನವ್ಯಾ ಕೃಣವಃ ಶವಿಷ್ಠ ಪ್ರೇದು ತಾ ತೇ ವಿದಥೇಷು ಬ್ರವಾಮ ||  13 ||
ಏತಾ ವಿಶ್ವಾ ಚಕೃವಾಙ್ ಇಂದ್ರ ಭೂರ್ಯಪರೀತೋ ಜನುಷಾ ವೀರ್ಯೇಣ | 
ಯಾ ಚಿನ್ನು ವಜ್ರಿನ್ ಕೃಣವೋ ದಧೃಷ್ವಾನ್ನ ತೇ ವರ್ತಾ ತವಿಷ್ಯಾ ಅಸ್ತಿತಸ್ಯಾಃ ||  14 ||
ಇಂದ್ರ ಬ್ರಹ್ಮ ಕ್ರಿಯಮಾಣಾ ಜುಷಸ್ವ ಯಾ ತೇ ಶವಿಷ್ಠ ನವ್ಯಾ ಅಕರ್ಮ | 
ವಸ್ತ್ರೇವ ಭದ್ರಾ ಸುಕೃತಾ ವಸೂಯೂ ರಥಂ ನ ಧೀರಃ ಸ್ವಪಾ ಅತಕ್ಷಮ್ ||  15 ||

ಮನುಷ್ಯನ ಮಾನವ ಬಲ ಅದರ ಶಕ್ತಿಗೆ ಆಧರಿಸಿದ ಬಲ, ಶಸ್ತ್ರ, ಸಲಕರಣೆ, ಸನ್ನೆ ಇತ್ಯಾದಿ ಸುಲಭೀಕರಣ ವಿಧಾನವನ್ನು ಒಬ್ಬ ಮನುಷ್ಯನು ಒಂದು ಕಾಲದಲ್ಲಿ ಮಾಡುವ ಕೆಲಸದ ಫಲಿತವೇ ಮಾನವಬಲ. ಅದೇ ಮನುಷ್ಯ ಅದೇ ಕಾಲದಲ್ಲಿ ಮೂರರಷ್ಟು ಕೆಲಸ ಮಾಡಿದರೆ ಅಶ್ವಬಲ. 7 ರಷ್ಟು ಮಾಡಿದರೆ ವೃಷಭ ಬಲ. 64 ರಷ್ಟು ಮಾಡಿದರೆ ಗಜಬಲ ಮಾನವನ್ನೂ ಗಜಬಲ ಪಡೆಯುವ ವಿಶಿಷ್ಠ ಸನ್ನೆಗಳ ಆವಿಷ್ಕಾರ ಮಾಡಿದ್ದಾರೆ.

1)     ಮೂರು ಗುಣಗಳು ಮೂಲ ಕೇಳೈ
ಮೂರೆರಡು ದುರ್ಗುಣ ಹೆಚ್ಚಿತೈ
ಪುರಾಣದಲಿ ಸೇರಿದವು ಸತ್ವವು ಹೊರುತಿದೆ ಅನವರತ |
ಪಾರ ಸಂಖ್ಯೆ ಸಪ್ತತಿ ಮತ್ತೆರಡು
ಮೂರರಲಿ ಸೇರಿರಲು ಮೊತ್ತವದು
ಮಾರದಿರು ಒಂದುಗೂಡಿಸೇ ಅಗಾಧವೇ ಸಂಖ್ಯೆ ಹನ್ನೆರಡು ||

2)    ಮೂರು ಮಕ್ಕಳ ತಾಯಿ ಹೆರಲಿಲ್ಲ
ಹೊರಲಿಲ್ಲ ಜರೆಯವಳ ಸೊತ್ತಲ್ಲ ನೀ
ಆರು ಶತ್ರುವ ಗುಣಿಸಿ ಪುರಾಣದೊಳು ಮೇಳವಿಸಿ ನೋಡೆಂಬೇ ||
ಬಾರಿಗು ಅರ್ಥವಿದೆ ಹಲಕೆಲವು ಮೂಲ್ಯವು
ಏರಿ ಏರಿದ ಮೇಲೆ ನಡೆ ದಾರಿ ಇದೆ ಅಲ್ಲಿ
ಊರ ಮುಂದಿನ ಬಾಗಿಲಿನ ಆಯವರಿತವನೇ ಜಾಣ ಕೇಳ್ ವಾಸ್ತುವಿದೂ ||  

3)    ದಾರಿ ಯಾವುದು ವೈಕುಂಠಕೆ ಹೇಳು ನೀನು
ದಾರಿಯಾದೊಡೆ ಹೊಳಹು ಕಾಣ್ಪುದು ಕೇಶವ
ನರಿಯದೇ ನಿನಗರಿವಿಲ್ಲ ಶ್ರುತಿ+ಸ್ಮೃತಿ+ಪುರಾಣದಾ ಲೆಕ್ಕಕೆ ಮಿಗಿಲು ||
ಕರಿಯನರಿತಿಹ ಕೇಳು ಎಂಟರೊಳಗೆ
ಬರಿ ಪುರಾಣದ ಶೂನ್ಯ ಸಂಖ್ಯೆಯೊಳ್ ಭಿನ್ನ
ಸೇರಿಸಿ ಮತ್ತದಕೆ ತಾಯಿ+ಮಾಯೆ+ಮಮತೆಯ ಕೂಡೆ ಮೊತ್ತಾ ||  

4)   ಕೋಳಿ ಕುರಿ ಮರಿ ಹಂದಿ ನಾಯಿ ನರಿ
ರೌಳಿ ಖಡುಗ ವೈನತೇಯ ಗುಬ್ಬಚ್ಚಿ ಸಿರಿ
ಹೇಳೂ ಲೆಕ್ಕವ ಮನುಜ ನೀನೇಳ್ಗೆ ಬಯಸಲು ಅಂದಿನಾ ನೂಲ |
ಲಾಳಿಯ ನೊಡೆ ಒಡೆದ ಲೆಕ್ಕದಲಿ ಛತ್ತೀಸ
ಸುಳಿಗೂಡು ಮೊತ್ತಕ್ಕೆ ವೃತ್ತಿಮಾಯೆಯ
ಒಳ ಸೇರಿದಾ ಮೊತ್ತದಂಕೆ ಕೇಳು ಮೃಗಸಂಖ್ಯೆ ಸಮವಪ್ಪುದಯ್ಯಾ ||  

5)    ಗೋಕ್ಷೀರದಾ ಮೊತ್ತ ಸಮಭಾಗ ಒಂಟೆ
ಗೋಕ್ಷುರದ ಲೆಕ್ಕದಲಿ ಕುದುರೆ, ಅಜ, ಒಜ
ಈಕ್ಷಿಸಲು ಸಮವಪ್ಪುದೈ ಲೋಕದಾಹಾರಮಿದಕೆ ಮಿಗಿಲಾಗಿ |
ಸಾಕ್ಷಿಯದು ಸುಭಿಕ್ಷತೆಯು ನೆಲೆಸೆ
ಭಿಕ್ಷುಕರಿಲ್ಲ ಲೋಕದಲಿ ಸಂತೃಪ್ತಿಯಿರೆ
ರಕ್ಷೆಯಿದೆ ಷಣ್ಣವತಿಯಾಗು ಮಿಣ್ಣಗೆ ಗುಣಿಸು ಮೊತ್ತದಲಿ ಮತ್ತದಾಹಾರ ||  

6)    ಒಂದು ಲೆಕ್ಕವು ಕೇಳು ಮಹಿಷಿಯಾ ಸಂತಾನ
ವಿಂದು ಹೆಣ್ಣ ಹೆತ್ತಳು ತಾಯಿ ತಾಯಲ್ಲ ನೀ
ನಿಂದು ಅಘ ಮಘಗಳೆಲ್ಲ ನೊಂದಾಯಿಸಿದವು ಬರದೊಳು ಬಂದು ||
ಹಿಂದಿನಾ ಮೊತ್ತದಲಿ ಹಂದಿ ಸಂಖ್ಯೆಯ ಗುಣಿಸಿ
ಇಂದುಧರನಪ್ಪಣೆಯ ಪ್ರಮಥರೊಳು ಹೋರಿ
ಅಂದೇ ನೀ ಗೆಲಿದ ದಿನ ಲೆಕ್ಕವೇ ಒಂದಿನದ ಜನನ ಮರಣಸಂಖ್ಯೆಗಳೂ ||  

7)    ಅಹಿಯ ಶಿರವೆಷ್ಟು ಕೇತನವಿಲ್ಲ
ಮಹಿಯ ಸ್ತ್ರೀ ತಾನುಂಡ ಅನ್ನಕೆ ಎಲ್ಲ
ಸಹಿಸದಾ ಗುಣವಿಲ್ಲ ಲೋಕದಲಿ ಮೂರಿಲ್ಲ ಆರೆಲ್ಲ ಕೇಳುವರು ||
ವಹಿಸಿದಾ ಹರಿ ಅನ್ನಕೆ ತಾ ಬಾಧ್ಯನೆಂ
ದಹಿಸಿದಾ ಅಹಿ ಅಹಿತರೆಲ್ಲಕೆ ತಾನು
ಮಹೀಷನೆಂದೊರೆಯೆ ಮೊತ್ತವದೆಷ್ಟು ಮಹಿ+ಅಹಿಗಳೆಷ್ಟು ಜಾಣ ಹೇಳೂ ||  

ಈ ಮೇಲೇಳನು ಅರಿತವನೆ ಯೋಗಿಯೂ
ಈ ಲೋಕದಲಿ ಸುಜ್ಞಾನಿ ವಿಜ್ಞಾನಿ ಭಗವಂತ
ಈ ಮಾತು ಸತ್ಯ, ಸತ್ಯವೇ ಎನ್ನ ಧರ್ಮ ಅದುವೆ ತಾಯಿ ಜಗದಂಬೆ ಎಂಬೆ ನಿಮ್ಮಾಣೆ ||


ಈ ರೀತಿಯಲ್ಲಿ ಆತ್ರೇಯರ ಕೆಲ ಸೂತ್ರಗಳನ್ನು ಕನ್ನಡ ಸಂಧಿ+ವಿಗ್ರಹ ವೆಂಬ ಸೂತ್ರದಲ್ಲಿ ಅಕ್ಷರ ಸಂಯೋಜನೆ ಮಾಡಿ ಸಮೀಕರಣ ಬರೆದಿದ್ದೇನೆ. ಓದಿ ಅರ್ಥ ಮಾಡಿಕೊಳ್ಳಿರಿ. ಮುಂದಿನ ಆತ್ರೇಯರ ಅಭಿಪ್ರಾಯಗಳನ್ನು ಮುಂದಿನ ಲೇಖನದಲ್ಲಿ ನೋಡಿರಿ.


ಲೇಖನ ಕೃಪೆ
ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದ ಸ್ವಾಮೀಜಿ
ವೇದ ವಿಜ್ಞಾನ ಮಂದಿರ,
ಚಿಕ್ಕಮಗಳೂರು


No comments:

Post a comment

Note: only a member of this blog may post a comment.