Sunday, 3 August 2014

ವೇದಗಳಲ್ಲಿ ರೋಗ ನಿದಾನ, ಚಿಕಿತ್ಸೆಗಳ ವಿಶೇಷ ವಿಚಾರ

ಶಾಸ್ತ್ರೀಯ ಆಯುರ್ವೇದ ಗ್ರಂಥಗಳಲ್ಲಿ ಕಂಡು ಬರುವ ರೋಗ ನಿದಾನ, ಚಿಕಿತ್ಸಾ ವಿಧಾನಗಳಲ್ಲಿ ಮೂಲ ವೈದಿಕ ಮಂತ್ರಗಳಲ್ಲಿರುವ ಅನೇಕ ವಿಚಾರಗಳು ಕಂಡು ಬರುವುದೇ ಇಲ್ಲ. ಏಕೆ ಈ ರೀತಿಯ ಮಹತ್ವದ ವಿಚಾರಗಳು ಶಾಸ್ತ್ರಗಳಲ್ಲಿ ಕಂಡು ಬರುವುದಿಲ್ಲ ಎನ್ನುವ ಆಶ್ಚರ್ಯ ಮತ್ತು ಆತಂಕ ಅನೇಕ ಚಿಂತಕರನ್ನು ಕಾಡಿಸುತ್ತದೆ. ವೈದಿಕ ಯುಗ ಮತ್ತು ನಂತರದ ಸಮಯದಲ್ಲಿ ಅನೇಕ ಕಾರಣಗಳಿಂದ ವೈದ್ಯರು ಆಶ್ಚರ್ಯವಾಗಿ ಅಸ್ಪೃಶ್ಯರು ಎಂಬುದಾಗಿ ಪರಿಗಣಿಸಿದ್ದುದು ಕಂಡು ಬರುತ್ತದೆ. ವೈಧ್ಯಾಃ ಅಪೂತ್ ಎಂಬ ವಿಚಾರ ಪ್ರಾಚೀನ ಗ್ರಂಥಗಳಲ್ಲಿ ಇದೆ. ಆದುದರಿಂದ ಬಹುಶಃ ವೈದ್ಯ ಸಮುದಾಯವು ವೇದಾಧ್ಯಯನದಿಂದ ವಂಚಿತರಾಗಿ ಉಳಿದಿರಬಹುದು ಅಥವಾ ಅಧ್ಯಯನವನ್ನು ನಿಷೇಧಿಸಿದ್ದರಲೂ ಬಹುದು. ಮುಂದೆ ಆಯುರ್ವೇದ ಎಂದು ಕರೆಯಲ್ಪಡುವ ಶಾಸ್ತ್ರಕ್ಕೆ ಆಧಾರ ಗ್ರಂಥಗಳು ಕೇವಲ ಸಂಗ್ರಹ ಮತ್ತು ಭಾಷ್ಯರೂಪದಲ್ಲಿರುವ ಗ್ರಂಥಗಳಾಗಿವೆ.

ಇದೇ ರೀತಿಯಿಂದ ವೈದಿಕ ಪರಂಪರೆಯಲ್ಲಿಯೂ ಮೂಲ ವೇದ ಪ್ರಣೀತವಾದ ದೇವ, ದೇವತೆಗಳು ಪೂಜಾವಿಧಾನಗಳು, ಸಾಮಗ್ರಿಗಳು ಬದಲಾವಣೆ ಹೊಂದಿ/ ಕಡೆಗಣಿಸಲ್ಪಟ್ಟು ಇಂದು ಭಯೋತ್ಪಾದಕ ದೇವತೆಗಳು ಅದರ ವೈಭವೀಕರಣ, ಪೂಜೆಗಳು ವಿಚಿತ್ರ ವಿಚಿತ್ರ ರೀತಿಯಿಂದ ಕಂಡು ಬರುತ್ತದೆ. ಇದಕ್ಕೆಲ್ಲ  ಕಾರಣಗಳು ಏನೇ ಇರಲಿ ವೈದಿಕ ಮಂತ್ರಗಳ ಅತ್ಯಂತ ಅವಶ್ಯಕವಾದ (? ರಹಸ್ಯ ಅರ್ಥಗಳು) ಅಧ್ಯಯನ, ಅಧ್ಯಾಪನ, ಸಂಶೋಧನೆ, ಪ್ರಚಾರ ಇವುಗಳು ಸಮರ್ಥವಾಗಿ ಮಾಡಬೇಕಾದ ಕೆಲಸವಾಗಿರುತ್ತದೆ.

ಶಾರೀರ ರಚನಾ ಮತ್ತು ಕ್ರಿಯಾ ರಹಸ್ಯಗಳು

ಆಯುರ್ವೇದದ ಶಸ್ತ್ರವಿಧ್ಯಾ ವಿಭಾಗದ ಪ್ರಧಾನ ಗ್ರಂಥ ಸುಶ್ರುತ ಸಂಹಿತಾ ಇದರಲ್ಲಿ ಧನ್ವಂತರಿ ಸಂಪ್ರದಾಯ ಎಂಬ ಅತ್ಯಂತ ಪ್ರಾಚೀನ ಶಸ್ತ್ರ ಚಿಕಿತ್ಸಾ ಸಂಪ್ರದಾಯದ ಪ್ರಾತಿನಿಧ್ಯ ಗ್ರಂಥವಾದರೂ ಅಂಗಾಂಗರಚನೆ ಹಾಗೂ ಕ್ರಿಯಾ ವಿಚಾರಗಳು ಬಹಳ ಸಂದಿಗ್ಧವಾಗಿದ್ದು ವೇದಗಳಲ್ಲಿ ವಿವರಿತವಾಗಿರುವ ಮಹತ್ವಾರ್ಥಗಳ ಪ್ರಸ್ತಾಪವೇ ಇರುವುದಿಲ್ಲ. ನಾಡೀ-ಧಮನಿ-ಸಿರಾ-ನರ ಇಂತಹ ಅತ್ಯಂತ ಮಹತ್ವಪೂರ್ಣ ರಚನೆಗಳ ಪ್ರಸ್ತಾಪ ಬಹಳ ಸಂಕ್ಷಿಪ್ತವಾಗಿದ್ದು ಬಹಳ ಸಂದಗ್ಧಿತೆಯಿಂದ ಕೂಡಿದೆ. ಇನ್ನು ಕಾಯ ಚಿಕಿತ್ಸಾ ಸಂಪ್ರದಾಯದ ಗ್ರಂಥಗಳು ರಚನಾ ಮತ್ತು ಕ್ರಿಯಾ ಶರೀರಕ್ಕೆ ಹೆಚ್ಚು ಮಹತ್ವವನ್ನೇ ಕೊಟ್ಟಿರುವುದಿಲ್ಲ.

ಆಯುರ್ವೇದದ ಶಾಸ್ತ್ರಗ್ರಂಥಗಳು ಸಂಪೂರ್ಣವಾಗಿ ವೇದಗಳನ್ನೇ ಆಶ್ರಯಿಸಿ ಬೆಳೆದವುಗಳೆಂದು ತಮ್ಮನ್ನು ಉಪಾಂಗ ಅಥವಾ ಉಪವೇದ ಎಂದು ಪರಿಗಣಿಸಲ್ಪಟ್ಟಿರುವುದಾಗಿ ಪ್ರಸ್ತಾಪಿಸುತ್ತವೆ. ಇಂದು ಕಂಡುಬರುವ ಆಯುರ್ವೇದ ಪದವೀಧರ ವೈದ್ಯರಲ್ಲಾಗಲೀ ಅಥವಾ ಹಿಂದಿನ ಶಾಸ್ತ್ರಾಧ್ಯಯನ ಪಾಂಡಿತ್ಯ ಪರಿಪೂರ್ಣರೆನಿಸಿದ ವೈದ್ಯರಲ್ಲಾಗಲೀ ಮೂಲ ವೇದಗಳಲ್ಲಿ ಪ್ರತಿಪಾದಿತವಾಗಿರುವ ವೈದ್ಯಜ್ಞಾನ ವಿಚಾರಗಳು ಸಂಪೂರ್ಣವಾಗಿ ಇಲ್ಲದಿರುವುದು ಸಾಮಾನ್ಯವಾಗಿದೆ.

ವೇದಗಳಲ್ಲಿ ಅಂಗರಚನೆ ಶಾರೀರ, ಕ್ರಿಯಾ ಶಾರೀರ ಬಹಳ ಗುಹ್ಯವಾದ ಅಂಗಾಂಗ ಅಂಶಾಂಶ ನಿಮಂತ್ರಣ ವಿಚಾರಗಳು ಬಹಳ ವೈವಿಧ್ಯಮಯವಾಗಿ ವಿವರಿಸಲ್ಪಟ್ಟಿರುವುದು ಇಂದಿಗೂ ಕಂಡುಬರುತ್ತದೆ. ಇವುಗಳನ್ನು ಅರಿಯಲು ಬೇಕಾದ ವಿಶೇಷ ಪಾಂಡಿತ್ಯ, ವಿಧ್ಯೆ ಹಾಗೂ ಕ್ರಮ ಪರಂಪರೆಯಲ್ಲಿ ಇಲ್ಲದಿರುವುದು ಬಹುತೇಕ ಕಾರಣವಾಗಿದೆ ಎನಿಸುತ್ತದೆ.

ರೋಗ ನಿದಾನಕ್ಕೆ ಬೇಕಾದ ಅವಶ್ಯಜ್ಞಾನ ಸಾಧಾರಣವಾದ ನಮ್ಮ ಕೈಬೆರಳುಗಳಿಗೆ ಇರುವುದನ್ನು ಋಷಿಗಳು ಪ್ರಸ್ತಾಪಿಸಿರುತ್ತಾರೆ. ಋಗ್ವೇದದಲ್ಲಿ-ಸಾಮವೇದ ಮತ್ತು ಅಥರ್ವಣ ವೇದದಲ್ಲಿ ಸ್ವಲ್ಪಮಟ್ಟಿಗೆ ಯಜುರ್ವೇದದಲ್ಲೂ ಕಂಡುಬರುತ್ತದೆ. ಮನುಷ್ಯನ ಜೈವಿಕ ಅವಧಿಯಲ್ಲಿ ಒಂದು ವಿಶೇಷವಾದ ಕಾಲದ ವ್ಯವಸ್ಥೆಯಿರುತ್ತದೆ. ಇದು ಎಲ್ಲಾ ಪ್ರಾಣಿಗಳಲ್ಲೂ ಇರುವುದು ಸಾಮಾನ್ಯವಾಗಿದ್ದರೂ ಮನುಷ್ಯರಲ್ಲಿ ವಿಶೇಷವಾಗಿರುವುದು ಕಂಡುಕೊಳ್ಳಬಹುದು. ನಮ್ಮ ಆಡುಭಾಷೆಯಲ್ಲಿ ಕಾಲವನ್ನು ಗಡಿಯಾರ ಎಂದು ಊಹಿಸಿಕೊಂಡು ವಿಭಾಗ ಮಾಡಿಕೊಳ್ಳಬಹುದು.

1)    ಗರ್ಭಾವಸ್ಥೆಯ ಕಾಲ
2)    ಜನನದಿಂದ 3 ವರ್ಷದವರೆಗೆ
3)    3 ವರ್ಷದಿಂದ 12 ವರ್ಷದವರೆಗೆ
4)    12 ವರ್ಷದಿಂದ 20 ವರ್ಷದವರೆಗೆ
5)    40 ವರ್ಷದಿಂದ  ಜೀವಿತ ಕೊನೆಯವರೆಗೆ

ಈ ಜೀವ ಸೃಷ್ಟಿಗೆ ಹಿನ್ನೆಲೆ ಕಾರಣ ಆವಶ್ಯಕ ಪ್ರಾಪಂಚಿಕ ಕಾರಣವಿಲ್ಲದೆ ಇದು ಸಾಧ್ಯವೇ ಇಲ್ಲ. ಈ ಕ್ರಿಯೆಗೆ ಧೈವಸಂಕಲ್ಪವೇ ಪ್ರಧಾನ. ಮನುಷ್ಯ ಸಂಕಲ್ಪ ಅಥವಾ ಪ್ರಯತ್ನ ಕೇವಲ ನಿಮಿತ್ತ. ಜೀವಸೃಷ್ಟಿ ನಮ್ಮ ಸಂಕಲ್ಪದಂತೆ ನಡೆಯುವ ಕಾರ್ಯವಲ್ಲ. ಜೀವ ಸೃಷ್ಟಿಯ ಪ್ರಾಥಮಿಕ ಕಾರ್ಯವಾದ ಗರ್ಭಾದಾನದಿಂದ ಆ ಜೀವಿಯ ಗಡಿಯಾರ ಪ್ರಾರಂಭವಾಗುತ್ತದೆ. (ಇದನ್ನೇ ಆಯುಃ ಎಂಬ ಶಬ್ದದಿಂದ ಆಯುರ್ವೇದದಲ್ಲಿ ವರ್ಣಿತವಾಗಿರುತ್ತದೆ) ಜೀವಿಯ ಗರ್ಭವಾಸ ಕಾಲದಲ್ಲಿ ಯಾವ ಬದ್ಧತೆಯು ಜೀವಿಗಿರುವುದಿಲ್ಲ. ಈ ಸಮಯದಲ್ಲಿ ವೈದಿಕ ಪ್ರಕ್ರಿಯೆಗಳ ಭಾಗವಾಗಿ ಸಂಸ್ಕಾರಗಳನ್ನು ಮಾಡುವುದು ಧಾರ್ಮಿಕವಾಗಿ ವಿಧಿಯೂ ಹೌದು. ಪರಂಪರೆಯಲ್ಲಿಯೂ ಪ್ರಚಲಿತವಾಗಿರುತ್ತದೆ. ಜನನದ ನಂತರದಲ್ಲಿ 3 ವರ್ಷಗಳವರೆಗಿನ ಕಾಲವನ್ನು ಶೈಶವಾವಸ್ಥೆಯೆಂದು ಕರೆಯಲಾಗುತ್ತದೆ. ಇವೆರಡು ಕಾಲಗಳಲ್ಲಿ ನಡೆಯುವ ಪ್ರವೃತ್ತಿಗಳು ವ್ಯತಿರಿಕ್ತವಾದರೆ ರೋಗಕ್ಕೆ ಕಾರಣಗಳಾಗುತ್ತವೆ. ಆತ್ರೇಯ ಮಹರ್ಷಿಗಳು ಜೀವಿಯ ವಾಸ ಪ್ರದೇಶ ಅಂದರೆ ದೇಶ ಅದಕ್ಕನುಗುಣವಾದ ಪರಿಸರಾದಿಗಳೂ ಹಾಗೂ ಸಾಮಾಜಿಕ, ಸಾಂಪ್ರದಾಯಿಕ, ಭೌಗೋಳಿಕ ವ್ಯವಸ್ಥೆಗಳು ಪರಿಣಾಮವನ್ನು ಉಂಟು ಮಾಡುತ್ತವೆ ಎನ್ನುತ್ತಾರೆ. ಈ ಸಂದರ್ಭದಲ್ಲಿ ಸಂವತ್ಸ (ಮುಂದೆ ಇದನ್ನೇ ಸಂವತ್ಸರ ಎಂದರೆ 1 ವರ್ಷ ಎಂದು ಪ್ರಚಲಿತವಾಗಿರುತ್ತದೆ.) ಎಂದರೆ ಪ್ರಾಣಿಯ ಜೀವಿತ ಅವಧಿ (ಅಥವಾ ಆಯಸ್ಸು)ಯಲ್ಲಿ ಋಭವೋ ಗಾಮರಕ್ಷನ್ ಎಂದರೆ ಸರ್ವವಿಧದಿಂದಲೂ ಇದನ್ನು ಅಂದರೆ ಜೀವಿತವನ್ನು ರಕ್ಷಿಸಬೇಕು-ಕಾಪಾಡಬೇಕು. ಎಲ್ಲಾ ಪ್ರಾಣಿಗಳಿಗೂ ಸ್ವಾಭಾವಿಕವಾಗಿ ಬದ್ಧತೆಯು ಜನ್ಮತಃ ಇದ್ದೇ ಇರುತ್ತದೆ. ಪ್ರಾಣಿಗಳು ನೈಸರ್ಗಿಕವಾಗಿ ಈ ಬದ್ಧತೆಗೆ ಅನುಗುಣವಾಗಿಯೇ ತಮ್ಮ ಜೀವನ ನಿರ್ವಹಣೆ ಮಾಡುತ್ತದೆ. ಆದರೆ ಮನುಷ್ಯರಲ್ಲಿ ಸ್ವಾಭಾವಿಕ ಬದ್ಧತೆಯ ಗೊಂದಲ ಹಾಗೂ ಅಜ್ಞಾನ ಅದಕ್ಕಿಂತಲೂ ಹೆಚ್ಚಾಗಿ ಸ್ವೇಚ್ಛಾಚಾರ ಕಂಡು ಬರುತ್ತದೆ. ಆಧುನಿಕ ಜಗತ್ತಿನಲ್ಲಿ ಈ ಬದ್ಧತೆಗೆ ಯಾವ ಅರ್ಥವೂ ಇಲ್ಲ. ವೇದಗಳು ಈ ಬದ್ಧತೆಗಳ ಲೋಪವೇ ಬಹುತೇಕ ರೋಗಗಳ ಪ್ರಾದುರ್ಭಾವಕ್ಕೆ ಕಾರಣ ಎಂದು ತಿಳಿಸುತ್ತವೆ.

ಕಾಲ ಅಥವಾ ಗಡಿಯಾರದ ವ್ಯವಸ್ಥೆಯಲ್ಲಿ 3ನೇ ವರ್ಷದ ನಂತರ ಮಗುವಿನ ಜೀವನ ಅತ್ಯಂತ ಮಹತ್ವವಾದ ಘಟ್ಟದ್ದಾಗಿರುತ್ತದೆ. ಜೀವಿತಾವಧಿಯಲ್ಲಿ ಉಂಟಾಗಬಹುದಾದ ಸ್ವಾಸ್ಥ್ಯ, ರೋಗ ಇವುಗಳ ಮೂಲ ಈ  ಬಾಲ್ಯಾವಸ್ಥೆಯಲ್ಲಿ ನಿರ್ಣಯಿಸಲ್ಪಡುತ್ತದೆ. 12 ರಿಂದ 20 ವರ್ಷದ ವರೆಗಿನ ಜೀವಿತ ಅವಧಿಯಲ್ಲಿ ವ್ಯಕ್ತಿಯು 12 ವರ್ಷದವರೆಗಿನ ಬುದ್ಧಿಯ ಪ್ರಕಾರವೇ ತಾನೇ ನಿರ್ಣಯ ಮಾಡಿಕೊಂಡು ತನಗೆ ಅರಿವಿಲ್ಲದೆ ಮುಂದಿನ ಜೀವನದ ನಿರ್ಧಾರವನ್ನು ನಿರ್ಣಯಿಸುತ್ತಾನೆ.

3 ವರ್ಷದಿಂದ 12 ವರ್ಷದವರೆಗಿನ ಕಾಲಾವಧಿ ಸಂಪೂರ್ಣವಾಗಿ ತಂದೆತಾಯಿಗಳ ಆಶ್ರಯದಲ್ಲಿದ್ದು ಸಮರ್ಥವಾದ ಸಂಸ್ಕಾರಗಳು ದೊರಕಿದರೆ ಮತ್ತು ಅವರು ಅನುಕರಣೀಯವಾದ ಸತ್ ಸಂಪ್ರದಾಯ ಶೀಲದಲ್ಲಿದ್ದು ಸದಾಚಾರದಲ್ಲಿ ನಿರತರಾಗಿದ್ದರೆ ಆ ಮಗುವು ಯಶಸ್ವಿಯಾದ ಬಾಲ್ಯ ಕಂಡ ಮಗು ಎಂದು ಪರಿಗಣಿಸಲ್ಪಡುತ್ತದೆ. ಈ ಅವಧಿಯಲ್ಲಿ ಜೀವಿತಕ್ಕೆ ಆಧಾರವಾಗುವ ಹಾಗೂ ಮನಸ್ಸಿನ ಸಮರ್ಥವಾದ ಬೆಳವಣಿಗೆಗೆ ಬೇಕಾದ ಪೂರಕ ಸಾಮಗ್ರಿಗಳು ಅನೇಕವಾಗಿದ್ದು ಅದನ್ನು ದೊರಕಿಸಿಕೊಡುವ ಜವಾಬ್ದಾರಿ ತಂದೆತಾಯಿಗಳು ಹಾಗೂ ಸಮಾಜದ್ದಾಗಿರುತ್ತದೆ. ಇದರಲ್ಲಿ ತಂದೆತಾಯಿ ಇವರ ಗೋತ್ರ ಅಂದರೆ ಅವರು ಯಾವ ರೀತಿಯ ಪರಂಪರೆಯಲ್ಲಿ ಬಂದಿರುವವರು ಎನ್ನುವ ವಿಚಾರ, ರಕ್ತ, ಆಹಾರ, ಪರಿಸರ, ಮನೆಯಲ್ಲಿ ನಡೆಯುವ ಎಲ್ಲಾ ವಿಧ ವ್ಯವಹಾರಗಳು, ಚಿಂತನೆಗಳು, ಪ್ರವರ್ತನೆಗಳು ಇವೆಲ್ಲವೂ ನಿರ್ಧರಿಸುತ್ತವೆ. ವೈದ್ಯಕೀಯ ದೃಷ್ಟಿಯಿಂದ ವೇದಗಳು ಈ ಸಂದರ್ಭದಲ್ಲಿ ಉಂಟಾಗಬಹುದಾದ ರೋಗಕಾರಕ/ರೋಗ ಬೀಜೋತ್ಪಾದಕ ಕಾರಣಗಳ ವಿವರವನ್ನು ನೀಡಿರುತ್ತವೆ. ಉದಾಹರಣೆಗೆ ಮೇಹ, ಪ್ರಮೇಹ, ಮಧುಮೇಹ ಇವುಗಳಿಗೆ ಸ್ಪಷ್ಟ ಕಾರಣವನ್ನು ಹುಡುಕಬಹುದು. ಜೀವಿಯ ಜೀವಿತಕ್ಕೆ ಬೇಕಾದ ರಸ ವಸ್ತುಗಳು ಯಾವ ರೀತಿಯ ದ್ರವ್ಯಗಳಿಂದ ಉಪಲಬ್ಧವಾಗುತ್ತಿದೆ, ಆಹಾರ ಶುದ್ಧವಾಗಿದೆಯೇ ಅಥವಾ ಅಶುದ್ಧತೆಯಿಂದ ಕೂಡಿದೆಯೇ, ಆಹಾರ ಉತ್ಪನ್ನವಾಗುವ ವಾತಾವರಣ ಇವುಗಳಿಂದ ಶರೀರದಲ್ಲಿ ಉತ್ಪನ್ನವಾಗುವ ಮೂಲಧಾತುಗಳ ಉತ್ಪನ್ನಗಳು ಮುಂದೆ ಉಂಟಾಗಬಹುದಾದ ರೋಗದ ಬೀಜವನ್ನು ಉಂಟು ಮಾಡುತ್ತವೆ.  ಈ ಎಲ್ಲಾ ಅಂಶಗಳ ಅಧ್ಯಯನದಿಂದ ವೈದ್ಯನು ನಿದಾನ, ಚಿಕಿತ್ಸೆಗಳ ನಿರ್ವಹಣೆ ಮಾಡಲು ಹಾಗೂ ಸೂಕ್ತ ಸಲಹೆಯನ್ನು ನೀಡಲು ಅಧ್ಯಯನ ಸಾಮಗ್ರಿಯಾಗಿ ಬಳಸಬಹುದಾಗಿದೆ.

ಮನೋ ವಿಜ್ಞಾನದ ಕೆಲವು ವಿಚಾರಗಳು

ಮನುಷ್ಯ ಜೀವಿಯ ಸೃಷ್ಟಿ ತತ್ವಗಳಲ್ಲಿ ಮನಸ್ಸಿನ ಮಹತ್ವ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿರುತ್ತದೆ. ಜೀವಿಯ ಚೇತನಾಧಾತು ಎನಿಸಿದ ಆತ್ಮತತ್ವವು ಸಾಮಾನ್ಯವಾಗಿ ಪ್ರಧಾನ ಎನಿಸಿದರೂ ವೈದಿಕ ಚಿಂತನೆಯಲ್ಲಿ ಮತ್ತು ಆಯುರ್ವೇದದ ಸಿದ್ಧಾಂತದ ಪ್ರಕಾರ ಮನಸ್ಸಿಗೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ಈ ವಿಚಾರದಲ್ಲಿ ಆತ್ರೇಯರು ಭೂತೈಶ್ಚತುರ್ಭಿಃ ಸಹಿತಃ ಸುಸೂಕ್ಷಮೈರ್ಮನೋಜವೋ ದೇಹಾತ್ | ಕರ್ಮಾತ್ಮಕತ್ವಾನ್ನ ತು ತಸ್ಯ ದೃಶ್ಯಂ ದಿವ್ಯಂ ವಿನಾ ದರ್ಶನಮಸ್ತಿ ರೂಪಮ್ ||

ಸೂಕ್ಷ್ಮ ಶರೀರವನ್ನು ಪೂರ್ವಜನ್ಮದ ಕರ್ಮದ ವಾಸನೆಯ ನಿರ್ದೇಶನದಂತೆ (ಧೈವ ಎಂಬ ಶಬ್ದವನ್ನು ಹೇಳಲಾಗಿದೆ) ಶರೀರದಿಂದ ಶರೀರಕ್ಕೆ ಕೊಂಡೊಯ್ಯುವ ಕೆಲಸವನ್ನು ಮಾಡುವುದು ಮನಸ್ಸಿಗೆ ಮಾತ್ರ ಸಾಧ್ಯ. ಅಂದರೆ ಆತ್ಮವಸ್ತುವಿನ ದೇಹಾಂತರ್ ಗಮನಕ್ಕೆ ಮನಸ್ಸೇ ಕಾರಣವಾಗಿದ್ದು ಜನ್ಮಜನ್ಮಾಂತರದ ಅನುಭವ ಸ್ಮೃತಿಗಳನ್ನು ತನ್ನೊಡನೆ ಒಯ್ಯುತ್ತದೆ. ಹೊಸ ಶರೀರವನ್ನು ಪಡೆದು ದೈವ ನಿರ್ದೇಶಿತವಾಗಿ ತಂದೆತಾಯಿಗಳನ್ನು ಪಡೆದು ಜನ್ಮವನ್ನು ಪಡೆಯುವ ಈ ಮನಸ್ಸು ಈ ಜನ್ಮದಲ್ಲಿ ಪೂರ್ವಸ್ಮೃತಿ ಏನೇ ಇದ್ದರೂ ಪರಿಶುದ್ಧವಾಗಿ ಇರುವಂತೆ ಮಾಡುವುದಕ್ಕೆ ಬೇಕಾದ ಪುರುಷಪ್ರಯತ್ನವನ್ನು ಮಾಡಬೇಕೆಂಬ ನಿರ್ದೇಶನ ವೈದಿಕ ಸಂಸ್ಕಾರಗಳ ಮೂಲಕ ತಿಳಿಯಪಡಿಸಲಾಗಿದೆ. ದಧಿಕ್ರಾವ್ಣೋ ----- ಈ ಮಂತ್ರದಲ್ಲಿ ದಧಿ ಎಂಬ ಶಬ್ದ ಸಂತೋಷ, ಶುದ್ಧತೆ, ಆರೋಗ್ಯ, ಶುಭ ಎಂಬ ಸಂಕೇತಗಳಿಂದ ಬಳಸಲಾಗಿದೆ. ಅಂದರೆ ಮನಸ್ಸು ತಿಳಿಯಾದ ಬಿಳಿಬಣ್ಣದಂತೆ ಶುದ್ಧವಾಗಿರಬೇಕೆಂಬ ನಿರ್ದೇಶನ ಅದಕ್ಕೆ ವಿರುದ್ಧವಾಗಿ ಕೃಷ್ಣ ಅಂದರೆ ವಿವಿಧವಾದ ಕಪ್ಪುಬಣ್ಣಗಳ ಸಂಕೇತ ಆದರೂ ಅದನ್ನು ಆಕರ್ಷಿತವನ್ನಾಗಿ ಮಾಡುವಂತೆ ನಿರ್ದೇಶನವಿದೆ. ಜನ್ಮದಿಂದ 3 ವರ್ಷ ಗಳವರೆಗೆ ಶೈಶವಾವಸ್ಥೆ ಆ ನಂತರದಲ್ಲಿ ಪ್ರಯತ್ನಪೂರ್ವಕವಾಗಿ ಮಾಡಬೇಕಾದ ಕಾರ್ಯಗಳನ್ನು ಸೂಚಿಸಲಾಗಿದೆ. 3ನೇ ವರ್ಷದಿಂದ 12ನೇ ವಯಸ್ಸಿನವರೆಗೂ ಅಂದರೆ 9 ವರ್ಷಗಳ ಕಾಲ ಮಗುವಿನ ಬೆಳವಣಿಗೆಯಲ್ಲಿ ಇಡೀ ಜೀವನದಲ್ಲಿ ಪ್ರಭಾವ ಬೀರುವ ನರಮಂಡಲದ ಸಂಪೂರ್ಣ ಬೆಳವಣಿಗೆ ಉಂಟಾಗುತ್ತದೆ. ಈ ಬೆಳವಣಿಗೆಯು ಮಗುವಿಗೆ ದೊರಕುವ ಪರಿಸರ, ಆಹಾರ ಇತ್ಯಾದಿ ಪ್ರಭಾವಿ ಅಂಶಗಳ ಆಧಾರದ ಮೇಲೆ ನಿರ್ಧಾರಿತವಾಗಿ ಅದಕ್ಕನುಗುಣವಾಗಿ ಮನಸ್ಸಿನ ಸ್ಥಾಪನೆಯಾಗುತ್ತದೆ. ಇವುಗಳು ವ್ಯಕ್ತಿತ್ವವನ್ನು ನಿರ್ಮಾಣ ಮಾಡುವುದರಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುವುದರಿಂದ ಆಗ ಮಾಡಬೇಕಾದ ಮಹತ್ವದ ಸಂಗತಿಗಳನ್ನು ಈ ಋಗ್ವೇದ ಸೂಕ್ತ-33ರಲ್ಲಿ ವಿವರಿಸಲಾಗಿದೆ.

ಭಾರತೀಯ ಸಂಸ್ಕೃತಿಯಲ್ಲಿ ಸಾಂಪ್ರದಾಯಿಕವಾಗಿ ಇದ್ದ ಕುಟುಂಬದ ವ್ಯವಸ್ಥೆ ಈ ಅಂಶಗಳನ್ನೆಲ್ಲಾ ಒಳಗೊಂಡಿರುವ ಪರಿಸರವಾಗಿದ್ದುದು ಸಾಮಾನ್ಯವಾಗಿ ಭಾರತದ ಎಲ್ಲಾ ಕಡೆಯಲ್ಲಿಯೂ ಕಂಡುಬರುತ್ತದೆ. ಮಕ್ಕಳಿಗೆ ನೈತಿಕತೆಯ ಪಾಠಗಳು ಮನ ಮುಟ್ಟುವಂತೆ ಮಾಡುವ ಪ್ರಕ್ರಿಯೆಯನ್ನು ಅಜ್ಜ ಅಜ್ಜಿಯರು, ಅತ್ತೆ ಮಾವಂದಿರು ಇತ್ಯಾದಿ ಹಿರಿಯರು ರೋಚಕವಾದ ಕಥೆಗಳನ್ನು ಹೇಳುವ ಪದ್ಧತಿಯಲ್ಲಿ ಅಳವಡಿಸಿಕೊಂಡಿದ್ದರು. ಸ್ವಾಭಾವಿಕವಾದ ನೈಸರ್ಗಿಕ ಪರಿಸರದಲ್ಲಿ ಪುರಾಣ ಪುಣ್ಯಕಥೆಗಳು, ಹಬ್ಬ ಹರಿದಿನಗಳು, ಹಾಡು ಹಸೆಗಳು, ಬಂಧುಬಾಂಧವರ ನಡುವಿನ ಮೈತ್ರಿ, ಸಾಂಸ್ಕೃತಿಕ ಆಚರಣೆಗಳ ಮೂಲಕ ಸುಮತಿ ಅಂದರೆ ಉತ್ತಮವಾದ ಮತಿ ಎಂದರೆ ಬುದ್ಧಿಯನ್ನು ಸರಿಯಾದ ರೀತಿಯಲ್ಲಿ ಸ್ಥಾಪಿಸುವ ಪ್ರಯತ್ನ. ಆದರ್ಶಗಳನ್ನು ನಡವಳಿಕೆಗಳಿಂದ ರೂಢಿಸುವುದು, ಸುಸಂಸ್ಕೃತವಾದ ಆಹಾರ. ವಿಹಾರ, ವಿಚಾರ, ಪರಿಸರ, ಮಾತುಕತೆ ಇವುಗಳ ಮೂಲಕವಾಗಿ ಪ್ರತಿಷ್ಠಾಪನೆ ಮಾಡುವ ಪ್ರಜ್ಞಾಪೂರ್ವಕ ಪ್ರಯತ್ನ ಸತತವಾಗಿ ನಡೆಯುವಂತೆ ಮಾಡುವುದು ಗೃಹಸ್ಥ ಆಶ್ರಮದ ಪ್ರಮುಖವಾದ ಅಂಗವೆಂದು ಪರಿಗಣಿಸಲ್ಪಟ್ಟಿದೆ. ಇವೆಲ್ಲವೂ ಅರಿವಿಲ್ಲದೆ ಮಕ್ಕಳಲ್ಲಿ ಸ್ವಸ್ಥವಾದ ಸ್ಥಿರವಾದ ಮನಸ್ಸಿನ ಸ್ಥಾಪನೆಗೆ ಕಾರಣಗಳಾಗುತ್ತವೆ. ವೇದಗಳ ಉಪದೇಶಗಳು ಮನಸ್ಸಿನ ಪ್ರಮುಖವಾದ ಜೀವನದ ತತ್ವಗಳಾಗುವಂತೆ ಏಕೀಕರಣಗೊಳ್ಳುವುದು ಈ ವಯಸ್ಸಿಲ್ಲಿ ಆಗಬೇಕಾದುದು ಅವಶ್ಯ. ಉದಾಹರಣೆಗೆ ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ ಇತ್ಯಾದಿ ಭಾರತೀಯ ಆದರ್ಶಗಳು. ಅದೇ ರೀತಿ ಸುಳ್ಳು ಹೇಳದಿರುವಿಕೆ, ಧರ್ಮಾಚರಣೆ ಗುರುಹಿರಿಯರಲ್ಲಿ ಗೌರವ ಮುಂತಾದ ನಡವಳಿಕೆಗಳ ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳ ಅರ್ಥವತ್ತಾದ ಆಚರಣೆ ಇತ್ಯಾದಿ ಆಯುರ್ವೇದದಲ್ಲಿ ಹಾಗೂ ಧರ್ಮಶಾಸ್ತ್ರಗಳಲ್ಲಿ ಇವುಗಳನ್ನು ಸದಾಚಾರ ಎಂಬ ಹೆಸರಿನಿಂದ ವ್ಯವಹರಿಸಲಾಗಿದೆ. ಇದಕ್ಕೆ ತದ್ವಿರುದ್ಧವಾಗಿ ನರಮಂಡಲ ಬೆಳೆಯುವಂತೆ ಆಹಾರ, ವಿಹಾರ, ಪರಿಸರಾದಿಗಳು ಇದ್ದರೆ ಈ ವಯಸ್ಸಿನಲ್ಲಿ ಉಂಟಾಗುವ ಈ ನರಮಂಡಲ ವಿಕೃತಿಯಿಂದ ಅಸ್ವಸ್ಥ ಹಾಗೂ ದುಷ್ಟ ಮನೋ ಪ್ರವೃತ್ತಿ ಉಂಟಾಗುವ ಸಾಧ್ಯತೆಗಳು ಉಂಟಾಗುತ್ತವೆ. ಸಂದರ್ಭೋಚಿತವಾದ ನರಗಳ ಉದ್ರೇಕವು ಸ್ವಾಸ್ಥ್ಯವೆನಿಸಿಕೊಳ್ಳುತ್ತವೆ. ಆದರೆ ಇದರಲ್ಲಿ ವಿಪರೀತವಾದ ಮನಸ್ಸನ್ನು ರೋಗಕಾರಕವಾಗುವಂತೆ ಉದ್ರೇಕಿಸುವಂತಹ ನರಮಂಡಲ ವ್ಯಕ್ತಿಯ ಜೀವನಕ್ಕೆ ಬಾಧಕವಾಗುತ್ತದೆ. ಇಂತಹವರು ಮಾಡುವ ಪ್ರವೃತ್ತಿಗಳು ದಂಡನಕ್ಕೆ ಯೋಗ್ಯವಾಗಿರುವುದರಿಂದ  ಈ ದಂಡನಾದಿ ಕಾರ್ಯಗಳನ್ನು ಅಂದರೆ ಶಿಕ್ಷೆಯನ್ನು ಶಿಕ್ಷಣದ ರೂಪದಲ್ಲಿ ಈ ಎರಡನೆ ಗಡಿಯಾರದ ಕಾಲದಲ್ಲಿ (3-12 ವರ್ಷ)  ಸಮರ್ಥವಾಗಿ ಮಾಡುವುದು ತಂದೆತಾಯಿಗಳ ಕರ್ತವ್ಯವಾಗಿರುತ್ತದೆ. ಇದು 2 ರೀತಿಯಲ್ಲಿರುವುದು ಒಂದು ತಂದೆತಾಯಿಗಳಿಂದ, ಎರಡು ಆಧ್ಯಾತ್ಮ ಬೋಧನೆಗಳಿಂದ ಅಥವಾ ಶಿಕ್ಷಣದಿಂದ ತನ್ಮೂಲಕ ಜ್ಞಾನದ ಸಹಾಯದಿಂದ. ಭಾರತೀಯ ಸಂಸ್ಕೃತಿಯಲ್ಲಿ ಈ ವೈದಿಕ ಚಿಂತನೆಯ ಮಹತ್ವವನ್ನರಿತು ಅತ್ಯಂತ ಸಮಂಜಸವಾಗಿ ಜೀವನದ ಎಲ್ಲಾ ಸ್ಥರಗಳಲ್ಲಿ ಎಲ್ಲಾ ವಯಸ್ಸಿನಲ್ಲಿ ಪರಿಣಾಮ ಬೀರುವಂತೆ ಗೃಹ, ಗ್ರಾಮ, ನಗರ, ಸಮಾಜ ಹಾಗೂ ರಾಜಕೀಯ ವ್ಯವಸ್ಥೆಗಳನ್ನು ನಿರ್ಮಾಣ ಮಾಡಲಾಗಿತ್ತು. ಇವತ್ತಿನವರೆಗು ಇನ್ನೂ ತಕ್ಕಮಟ್ಟಿಗೆ ಜೀವಂತವಾಗಿಯೇ ಇವೆ.

ಮನೋ ವಿಕೃತಿಗಳ ರೋಗಕಾರಕತ್ವ

ಮನೋ ನೆಲೆಯಲ್ಲಿ ಉಂಟಾಗುವ ವಿಕಾರಗಳನ್ನು ಅರಿಷಡ್ವರ್ಗ ಎಂಬ ವಿಭಾಗದಲ್ಲಿ ಬಹುತೇಕವಾಗಿ ಎಲ್ಲರಿಗೂ ಪರಿಚಯವಾಗಿರುತ್ತದೆ. ಇದರಲ್ಲಿ ಕ್ರೋಧ ಎಂದರೆ ಸಿಟ್ಟು ಬರುವಿಕೆ. ಇದನ್ನು ವಿಶೇಷವಾಗಿ ವಿವರಿಸಲಾಗಿದೆ. ಸಿಟ್ಟಿನಿಂದ 3 ರೀತಿಯ ರೋಗಗಳನ್ನು ವಿವರಿಸಲಾಗಿದೆ.
1)    ಕಣ್ಣು, ಕಿವಿ ಇವುಗಳ ಶಕ್ತಿ ಕಡಿಮೆಯಾಗುತ್ತಾ ಹೋಗುವುದು.
2)    ಬೆನ್ನಿನ ಕೂರ್ಮವಾಯು-ಹಿಂಸಾತ್ಮಕವಾದ ನೋವು.
3)    ಕೈಮೂಳೆ ಕೆಳಗೆ ನೋವು.
ಮನೋ ರೋಗಗಳಲ್ಲಿ ಅಪಸ್ಮಾರವು ಪ್ರಧಾನವಾದುದು. ಇದು ನರಮಂಡಲದಲ್ಲಿ ಉಂಟಾಗುವ ಅವ್ಯವಸ್ಥೆ. ಇದರ ಪರಿಣಾಮ ಮನಸ್ಸಿನ ಮೇಲೆ ಉಂಟಾಗುವುದರಿಂದ ರೋಗ ಉಂಟಾಗಿ ಮನಸ್ಸಿನ ಸ್ವಾಸ್ಥ್ಯ ಅತಿಯಾಗಿ ಹದಗೆಟ್ಟರೆ ಅದು ಹುಚ್ಚು ಅಥವಾ ಉನ್ಮಾದ ಎಂದು ಕರೆಯಲಾಗುತ್ತದೆ. (ನರಮಂಡಲದ ವಿವರ ವೇದಗಳಲ್ಲಿ ದೊರಕುತ್ತದೆ. ನಾಭಿ ಇದರ ಕೇಂದ್ರ ಪ್ರದೇಶವಾಗಿದ್ದು ಮೆದುಳಿನ ಜೊತೆಗೆ ಸಂಪರ್ಕಜಾಲವನ್ನು ಹೊಂದಿರುತ್ತದೆ) ವೈದಿಕ ಕಾಲದಿಂದಲೂ ಈ ವ್ಯಾಧಿಗಳಿಗೆ ಹಾಗೂ ನಿಯಂತ್ರಣಕ್ಕೆ ಮಂತ್ರಗಳ ಪ್ರಯೋಗ ಔಷಧ ಸಹಿತವಾಗಿಯೂ, ಕೆಲವೊಮ್ಮೆ ರಹಿತವಾಗಿಯೂ ಪ್ರಯೋಗಿಸಲ್ಪಡುತ್ತಿತ್ತು. ಕಾಲಾಂತರದಲ್ಲಿ ಮಂತ್ರಗಳ ಪ್ರಯೋಗ ವೈದ್ಯರಲ್ಲಿ ನಿಂತುಹೋಗಿ ಕೇವಲ ಔಷಧದಿಂದ ಪರಿಣಾಮವಾಗದೆ ಮನೋರೋಗಕ್ಕೆ ಮದ್ದಿಲ್ಲ ಎಂದು ಪ್ರಚಾರವಾಯಿತು. ಸಾಮಾನ್ಯವಾಗಿ 30 ವರ್ಷದ ವಯೋ ಸಮಯದ ನಂತರ ಉಂಟಾಗುವ ಮನೋ ವೈಪರೀತ್ಯವನ್ನು ವಿಶೇಷವಾಗಿ ಸಿಟ್ಟನ್ನು ತಡೆಯಲು ಮಂತ್ರಜಪವನ್ನು ರಹಸ್ಯವಾಗಿ ಬಳಸಲಾಗಿದೆ. ಇದನ್ನು ಚೆನ್ನಾಗಿ ಬಾಯಿಪಾಠ ಮಾಡಿಕೊಂಡು ಮಂತ್ರಜಪ ಮಾಡಿದರೆ ಈ ಅತ್ಯಂತ ಪ್ರದಾನ ಮಧ್ಯವಯಸ್ಕರ ಸಮಸ್ಯೆಗಳನ್ನು ನಿವಾರಿಸಬಹುದು. (ಋ.ಮಂ.5.ಸೂ.33 ಮಂ.9)

ಆಧುನಿಕ ಜಗತ್ತಿನಲ್ಲಿ ಯೌವನದ ಮದದಿಂದಲೂ ಆರ್ಥಿಕ ಸಬಲತೆಯಿಂದಲೂ ಈ ಮಧ್ಯಮ ವಯಸ್ಸಿನ ಜನಾಂಗ ಪರಿಸರದ ವಿಶೇಷ ಪ್ರಭಾವಕ್ಕೆ ಒಳಗಾಗಿ ಕ್ಲೇಶ ವಿಶಿಷ್ಟವಾದ ಮನೋಧರ್ಮವನ್ನು ತಮಗರಿವಿಲ್ಲದೆಯೇ ಪಡೆದಿರುತ್ತಾರೆ. ಅದರ ಪರಿಣಾಮವಾಗಿ ಮನಸ್ಸಿನ ವಿಕಾರಗಳು ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತದೆ. ರಕ್ತದ ಒತ್ತಡ (ಬಿ.ಪಿ) ಎನ್ನುವುದು ವಾಸ್ತವವಾಗಿ ಅತಿ ಹೆಚ್ಚು ಇಂದಿನ ಜನಾಂಗದಲ್ಲಿ ಕಂಡು ಬರುತ್ತಿರುವುದು ತಿಳಿದ ವಿಷಯ. ಇದು ಒಂದು ರೋಗವೇ ಅಲ್ಲ. ಆದರೆ ರೋಗಗಳಿಗೆ ಮೂಲವಾಗಬಲ್ಲ ಒಂದು ಮನೋ ಶಾರೀರಿಕ ದೋಷ. ಬಹುತೋಕ ಮನೋ ವಿಕಾರಗಳು ಇದರಿಂದಲೇ ಉಂಟಾಗುತ್ತವೆ. ಅಲ್ಲದೆ ಸಾಂಸಾರಿಕ ಜೀವನ ಸಮಸ್ಯೆಗಳು, ದಾಂಪತ್ಯ ಸಮಸ್ಯೆಗಳು, ಸಾಮಾಜಿಕ ಸಮಸ್ಯೆಗಳು, ಸ್ತ್ರೀಯರಲ್ಲಿ ವಿಶೇಷವಾಗಿ ಕಂಡುಬರುವ ಸ್ವೇಚ್ಛಾಪ್ರವೃತ್ತಿಯ ಜೀವನ ಇತ್ಯಾದಿಗಳು ವಿಪರೀತವಾಗಿ ಸಮಾಜವನ್ನು ರೋಗ ಸಮೂಹಕ್ಕೆ ಒಳಗಾಗಿಸಿರುವುದು ಪ್ರತ್ಯಕ್ಷವಾಗಿದೆ.

ಇಂದಿನ ಯುವಕ ಯುವತಿಯರು ಮಕ್ಕಳಾಗಿ ಬೆಳೆದಿರುವ ಪರಿಸರ ಬಹುತೇಕ ಭಾರತೀಯ ಸಾಂಸ್ಕೃತಿಕ ನೆಲೆಯಲ್ಲಿ ಅಥವಾ ಪರಿಸರದಲ್ಲಿ ಅಲ್ಲವಾಗಿರುವುದರಿಂದ (ವಿಶೇಷವಾಗಿ ಕಳೆದ 20-25 ವರ್ಷಗಳಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯ ತಂದೆ ತಾಯಿಗಳು ತಮ್ಮ ಮಕ್ಕಳನ್ನು ಬೆಳೆಸಿರುವ ರೀತಿ ಇಂದಿನ ಸಮಸ್ಯೆಗೆ ಕಾರಣವಾಗಿರುತ್ತದೆ.) ಈಗ ಅವರಲ್ಲಿ ಪರಿವರ್ತನೆಯು ಇಂದಿನ ಸಮಾಜದಿಂದಾಗಲಿ ಅಥವಾ ಸರ್ಕಾರದ ವ್ಯವಸ್ಥೆಯಿಂದಾಗಲಿ ಸಾಧ್ಯವಾಗುವುದಿಲ್ಲ. ಕಳೆದ 25 ವರ್ಷಗಳಲ್ಲಿ ಹಿಂದೆಂದೂ ಕಂಡು ಬರದಷ್ಟು ಯೋಗ, ಧ್ಯಾನ, ಪ್ರಾಣಾಯಾಮ, ದೇವ, ದೇವಸ್ಥಾನ, ಗುರು-ಕೇಂದ್ರೀಕೃತವಾದ ಸಂಸ್ಥೆಗಳು ಹುಟ್ಟಿಕೊಂಡಿರುವುದು ಇದಕ್ಕೆ ನಿದರ್ಶನವಾಗಿದೆ. ಸಾಮಾನ್ಯವಾಗಿ 12ನೇ ವಯಸ್ಸಿನ ನಂತರ ಸ್ವೀಕೃತ ಮನೋಭಾವ ಕಡಿಮೆಯಾಗುತ್ತದೆ. ಸಂಶಯದೃಷ್ಟಿ, ಅಂಗಚೇಷ್ಟೆ ಮಾಡುವುದು, ಕಸಿದು ತಿನ್ನುವ ಪ್ರವೃತ್ತಿ, ಕಣ್ಣು ಕೆಂಪಗಾಗಿಸುವುದು ಇವೆಲ್ಲಾ ಸರ್ವೇ ಸಾಮಾನ್ಯ. ಇಂದು ಮನುಷ್ಯರಲ್ಲಿ ವಿಪರೀತವಾದ ಮೋಹ ಕಂಡು ಬರುತ್ತದೆ. ಎಲ್ಲವೂ ತನಗೆ ಬೇಕು, ಹಣದಿಂದ ಏನನ್ನು ಬೇಕಾದರೂ ಪಡೆದುಕೊಳ್ಳಬಹುದು. ಅದಕ್ಕಾಗಿಯೇ ವಿಧ್ಯಾಬ್ಯಾಸ, ಪಾಶ್ಚಾತ್ಯ ವ್ಯಾಮೋಹ ಇತ್ಯಾದಿಗಳು ಯುವಕ ಯುವತಿಯರಲ್ಲಿ ಜೀವನದ ಪ್ರಧಾನ ಉದ್ದೇಶವಾಗಿ ಕಂಡು ಬರುತ್ತದೆ. ಇದನ್ನು ಸಾಧಿಸಲಾಗದ ಶೇ.75 ರಷ್ಟು ಯುವಕ ಯುವತಿಯರು ಮತ್ತೊಂದು ರೀತಿಯಲ್ಲಿ ಮನೋ ವಿಕಾರಕ್ಕೆ ಒಳಗಾಗಿ ಸಮಾಜದಲ್ಲಿ ಸಮಸ್ಯೆಯಾಗಿ ಉಳಿಯುತ್ತಾರೆ.

ಗೃತ್ಸಮದ ಋಷಿ ಪ್ರಕೃತವಾದ ಜೀವನ ಕ್ರಮ

ಋಗ್ವೇದದಲ್ಲಿ ಬರುವ ಗೃತ್ಸಮದ ಋಷಿಗಳ ಜೀವನ ನಿರ್ವಹಣಾ ಸೂತ್ರಗಳು ಅತ್ಯಂತ ಪ್ರಾಚೀನವಾದವು. ಆ ಕಾಲದಲ್ಲಿ ಈ ಮಂತ್ರಗಳ ಪ್ರಸ್ತುತೆಯೇ ಇರಲಿಲ್ಲ. ಆದರೆ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಆವಶ್ಯವೆನಿಸಿ ಬಹಳ ಮುಖ್ಯವಾದ ತತ್ವಗಳನ್ನು ನಿರೂಪಿಸಿರುತ್ತಾರೆ.

ಅಮೃತೋಪಮವಾಜೀವನ ಆಗಬೇಕಾದರೆ
1)    ಸತ್ಯವಾದಿ ಆಗುವುದಲ್ಲ
2)    ಹಿತವಾದಿಯಾಗಬೇಕು.

ಸಾಮಾನ್ಯವಾಗಿ ಸತ್ಯದ ವಿಷಯದಲ್ಲಿ ಬಹಳ ಬದ್ಧತೆ ಇಟ್ಟುಕೊಂಡು ಜೀವನ ಮಾಡುವ ವಿಚಾರದ ಬಗ್ಗೆ ನಮ್ಮಲ್ಲಿ ಬಹಳ ಗೌರವಯುತವಾದ ಭಾವನೆಯಿದೆ. ಆದರೆ ವಾಸ್ತವವಾಗಿ ಸತ್ಯದ ಚಿಂತನೆ, ಅರಿವು, ಪರಾಮರ್ಶೆ, ವ್ಯಾಖ್ಯೆ ಇವುಗಳ ಯಾವುದರ ಪರಿಚಯವೂ ಸಾಮಾನ್ಯವಾಗಿ ಇರುವುದಿಲ್ಲ. ಇದೊಂದು ಸಾಂಪ್ರದಾಯಿಕವಾದ ಆಚರಣೆ ಎನ್ನುವ ಮಾತಿನಿಂದಾಗಿ ನಮ್ಮ ಜನಗಳ ಸಂಭಾಷಣೆಯಲ್ಲಿ ಇರುತ್ತದೆ. ಸತ್ಯದ ನಿಜವಾದ ಅರಿವಿದ್ದು ಮಾಡುವುದು ವಾಸ್ತವವಾಗಿ ಸರಳ ಸಾಧ್ಯವಾದ ವಿಷಯವೇ ಅಲ್ಲ. ಇಡೀ ಸೃಷ್ಟಿಯ ರಹಸ್ಯ ಮಾಯೆಯ ಮೋಹದ ನೆಲೆಯಿಂದ ನಿರ್ಮಿತವಾಗಿರುತ್ತದೆ. ಅಸ್ವಾಭಾವಿಕವಾದುದನ್ನು ಸ್ವಾಭಾವಿಕವಾಗಿ ಕಾಣುವಂತೆ ಮಾಡುವುದು ಪ್ರಕೃತಿಯ ಸಹಜ ಧರ್ಮ. ಎಲ್ಲಾ ಕಡೆಯೂ ಇದನ್ನು ಪ್ರತ್ಯಕ್ಷವಾಗಿಯೇ ಕಾಣಬಹುದು. ಆದರಿಂದಲೇ ಸತ್ಯವೆಂಬುದು ಕಟು ಅಂದರೆ ಖಾರವಾದದ್ದು, ತೀಕ್ಷ್ಣವಾದದ್ದು, ಎದುರಿಸಲು ಕಷ್ಟಕರವಾದದು ಎಂಬ ಅರ್ಥದಲ್ಲೇ ಪ್ರಚಲಿತದಲ್ಲಿರುತ್ತದೆ. ಜಗತ್ತಿನಲ್ಲಿ ಕಂಡುಬರುವ ಶೇ.97 ಭಾಗ ಅಸತ್ಯವೇ ಆಗಿದ್ದು ಕೇವಲ ವ್ಯಾವಹಾರಿಕ ಪ್ರಪಂಚದಲ್ಲಿ ಕೆಲವು ಕಾಲಕ್ಕೆ ಸೀಮಿತವಾಗಿ ಸತ್ಯದಂತೆಯೇ ಕಂಡುಬರುತ್ತದೆ. ಇದು ಆಧ್ಯಾತ್ಮಿಕ ದೃಷ್ಟಿಯಿಂದಾಗಲಿ, ತಾರ್ಕಿಕ ದೃಷ್ಟಿಯಿಂದಾಗಲಿ ವಾಸ್ತವತೆಯ ಪರೀಕ್ಷಾ ದೃಷ್ಟಿಯಿಂದ ನೋಡಿದಾಗ ತಿಳಿದು ಬರುತ್ತದೆ. ಆದರೆ ಈ ಪ್ರಕೃತಿಯ ಮೋಹಜಾಲದಿಂದ ಸೃಷ್ಟಿಯಾಗಿರುವ ಎಲ್ಲಾ ಜೀವರುಗಳು ಈ ಮಾಯಾಜಾಲವನ್ನೇ ಸತ್ಯವೆಂದು ನಂಬಿ ಜೀವನ ಮಾಡುವುದು ಸತ್ಯವೇ ಆಗಿರುತ್ತದೆ ಅಥವಾ ಸಹಜವಾಗಿರುತ್ತದೆ.

ಗೃತ್ಸಮದ ಋಷಿಗಳ ಈ ಚಿಂತನೆಯ ಫಲಶೃತಿಯಾಗಿ ಜೀವನವು ಸುಂದರವೂ, ಅರ್ಥಪೂರ್ಣವೂ, ಅಮೃತಮಯವೂ ಆಗಬೇಕಾದರೆ ಜಗತ್ತಿನ ಈ ವಾಸ್ತವತೆಯನ್ನು ಅರಿತು ಒಪ್ಪಿಕೊಂಡು ಹಿತವಾದ ಸುಸಂಸ್ಕೃತವಾದ, ಯಾರಿಗೂ ನೋವಾಗದಂತೆ ಉಂಟಾಗುವ ಭಾಷಾ ಪ್ರಯೋಗ, ಮುಖಭಾವ, ವರ್ತನೆಗಳಿಂದ ಒಂದು ಹಿತವಾದ ವಾತಾವರಣವನ್ನು ಸೃಷ್ಟಿ ಮಾಡಬೇಕು. ಯಾವುದೇ ಒಂದು ವ್ಯವಸ್ಥೆಯಲ್ಲಿ ಅದನ್ನು ಇದ್ದಂತೆ ಸ್ವೀಕರಿಸಿ ವ್ಯವಹಾರವನ್ನು ಸಮತೋಲನ ಚಿತ್ತ ಸ್ಥಿತಿಯಿಂದ ಮಾಡಿದರೆ ಅತ್ಯುತ್ತಮವಾದ ಜೀವನ ಸಾಧ್ಯವಾಗುತ್ತದೆ. ಗೃತ್ಸಮದರು ಪ್ರಕೃತಿ ನಿಯಮಕ್ಕೆ ಬದ್ಧವಾದ ನಿತ್ಯಜೀವನ ಮಾಡುವುದರಿಂದ ಇದು ಸಂಪೂರ್ಣವಾಗಿ ಸಾಧ್ಯವಾಗುತ್ತದೆಯೆಂದು ಪ್ರತಿಪಾದನೆ ಮಾಡಿರುತ್ತಾರೆ.

ಉದಾಹರಣೆಗೆ ಶರದ್ ಋತುವಿನಲ್ಲಿ ಭೂಮಿಯು ವರ್ಷ ಋತುವಿನ ಪ್ರಭಾವದಿಂದ ಹಸಿರು ತುಂಬಿ ಎಲ್ಲ ಕಡೆ ಸಮೃದ್ಧವಾದ ವನಸ್ಪತಿಗಳ ಒಂದು ಪ್ರಪಂಚ ನಿರ್ಮಾಣವಾಗಿರುತ್ತದೆ. ಮುಂದಿನ 2 ತಿಂಗಳಲ್ಲಿ ಈ ಎಲ್ಲಾ ದೃಶ್ಯವೂ ಸಂಪೂರ್ಣವಾಗಿ ವಿರುದ್ಧವಾಗಿ ಒಣಗಿ  ನಿಂತಿರುವ ಶುಷ್ಕ ಭೂಮಿಯಾಗಿ ಪರಿವರ್ತಿತವಾಗುತ್ತದೆ. ಆದರೆ ಭೂಮಿ ಇದ್ದ ಹಾಗೆ ಇರುತ್ತದೆ. ಬೆಳೆದದ್ದು ಋಣ. ಅದು ಕೆಟ್ಟದಾಗಲಿ ಅಥವಾ ಒಳ್ಳೆಯದಾಗಲಿ ಹೀಗೆ 24 ರೀತಿಯ ಋಣಗಳು ಈ ಸೃಷ್ಟಿ ಕ್ರಿಯೆಯಲ್ಲಿ ಭಾಗಿಯಾಗಿ ಎಲ್ಲಾ ರೀತಿಯ ಪರಿಣಾಮ ಪರಿವರ್ತನಾದಿ ಕ್ರಿಯೆಗಳಿಗೆ ಕಾರಣವಾಗಿರುತ್ತವೆ. ಇದೇ ರೀತಿ ಜಗತ್ತಿನಲ್ಲಿ ಎಲ್ಲ ತರಹ ಸಂಬಂಧಗಳು ಹೀಗೆಯೇ ತಮ್ಮ ತಮ್ಮ ಕಾರ್ಯಗಳನ್ನು ತಮಗಾಗಿಯೇ ಮಾಡುತ್ತಾ ಜೀವನ ಸಾಗಿಸುತ್ತಾರೆ. ಯಾರು ಯಾರಿಗಾಗಿಯೂ ಅಲ್ಲ. ಎಲ್ಲವೂ ಕೇವಲ ಹೊಂದಾಣಿಕೆಯಿಂದ (ಅಡ್ಜೆಸ್ಟ್ ಮೆಂಟ್) ಮಾತ್ರ ನಡೆಯುತ್ತದೆ.

ಈ ಋಣಗಳನ್ನು ವ್ಯವಸ್ಥೆಗೊಳಿಸುವುದೇ ಮಾಯೆ. ಅದರ ಬಲವೇ ಇಂದ್ರ. ಬಲ ಪ್ರೇಷಿತವಾದುದು  ಅಂದರೆ ನಂಬಿ ಬದುಕುವುದು.

ಪ್ರಕೃತಿ ಸಹಜವಾಗಿ ಮನಸ್ಸಿನಲ್ಲಿ ಕಾಮ ಕ್ರೋಧಾದಿ ಅನೇಕ ಪ್ರವೃತ್ತಿಗಳು ಮಾಯೆಯ ಸತತವಾದ ಪ್ರೇರಣೆಗೆ ಕಾರಣವಾಗುತ್ತವೆ. ಈ ಸಂಬಂಧದಿಂದ ಮನುಷ್ಯನಿಗೆ ಬಹುತೇಕ ಸಮಸ್ಯೆಗಳು ಮನಸ್ಸಿನ ನೆಲೆಯಲ್ಲಿ ಹುಟ್ಟುತ್ತವೆ. ಮುಂದೆ ಇದರ ಪ್ರಭಾವದಿಂದ ಮಾನಸಿಕ, ಶಾರೀರಿಕ, ಸಾಮಾಜಿಕ, ನೈತಿಕ ಸಮಸ್ಯೆಗಳು ಉತ್ಪನ್ನವಾಗಿ ಜೀವನ ಗೊಂದಲವಾಗುತ್ತದೆ. ಮತ್ತು ರೋಗಗಳಿಗೂ ಮೂಲಕಾರಣವಾಗುತ್ತವೆ. ಕಾಮಕ್ರೋಧಾದಿಗಳು ಸಕ್ರಿಯವಾಗಿದ್ದರೆ ಮಾತ್ರ ಮಾಯೆಯ ಕೆಲಸವು ಸಾಧ್ಯ. ಇಲ್ಲವಾದಲ್ಲಿ ಮಾಯೆ ನಿಷ್ಕ್ರಿಯವಾಗುತ್ತದೆ.

ಗೃತ್ಸಮದ ಋಷಿಗಳು ವೈದಿಕ ಚಿಂತನೆಯ ಒಂದು ಮಹತ್ವದ ಕೊಡುಗೆಯಾಗಿ ಈ ಕೆಳಕಂಡಂತೆ ನಿರ್ದೇಶನವನ್ನು ನೀಡಿರುತ್ತಾರೆ.

ಜೀವನವನ್ನು ಒಂದು ಯಜ್ಞರೂಪವಾಗಿ ಮಾಡುವುದು ಈ ಕ್ರಮದಲ್ಲಿ ಒಂದು ಅಂಶ. ಜೀವನದ ಪ್ರತಿಹಂತವನ್ನು ಸರಿಯಾಗಿ ಅರ್ಥಮಾಡಿಕೊಂಡು ಪ್ರಕೃತಿ ನಿಯಮಗಳಿಗೆ ಬದ್ಧನಾಗಿ ನಿತ್ಯ ಜೀವನ ಮಾಡುವುದರಿಂದ ಅದೊಂದು ಯಜ್ಞವಾಗುತ್ತದೆ. ವ್ಯಕ್ತಿಯೇ ಹೋತೃವಾಗುತ್ತಾನೆ. ಅಗ್ನಿ ಪಾವಕ ನೆನಿಸುತ್ತಾನೆ. ಈ ಯಜ್ಞದಲ್ಲಿ ಮನುಷ್ಯನೇ ಸಮಿತ್ತು. ಜೀವನ ವಿಧಾನವೇ ಅಗ್ನಿ. ಗುರಿ ಅಥವಾ ಉದ್ದೇಶವೇ ಇಧ್ಮ.

ಜೀವನ ನಿರ್ವಹಣ ಯಜ್ಞದಲ್ಲಿ ಘೃತ/ಆಜ್ಯ ವನ್ನು ವಿವರಿಸುತ್ತಾ ಗೃತ್ಸಮದದರು ಈ ಶಬ್ದದ ಅರ್ಥವನ್ನು 3 ರೀತಿ ಸಂಸ್ಕಾರಗೊಂಡ ಅಥವಾ 3 ಬಾರಿ ಜನ್ಮವನ್ನು ಪಡೆದ ಎಂಬ ಅರ್ಥದಲ್ಲಿ ಪ್ರಯೋಗಿಸಿರುತ್ತಾರೆ. ಇದನ್ನು ತ್ರಿಕರ್ಣ ಸಂಸ್ಕಾರವೆಂತಲೂ ಕರೆಯುತ್ತಾರೆ. ಜೀವಿಗೆ ಹುಟ್ಟು ಎನ್ನುವುದು ಗರ್ಭದಿಂದ ಆಗುವ ಹುಟ್ಟಿಗೆ ಮಾತ್ರ ಸೀಮಿತವಾಗದೆ ಪ್ರತಿಕ್ಷಣದಲ್ಲಿಯೂ ಹುಟ್ಟಿನ ಕ್ರಿಯೆ ನಡೆಯುತ್ತಲೇ ಇದ್ದು ಅದರ ಜೊತೆಯಲ್ಲಿ ಸಾವು ಅದೇ ರೀತಿಯಲ್ಲಿ ಸತತವಾಗಿ ನಡೆಯುವ ಕ್ರಿಯೆಯಾಗಿರುತ್ತದೆ. ಇವುಗಳ ಮಧ್ಯದಲ್ಲಿರುವ ಜೀವಿತ ಕ್ರಿಯೆಯೇ ಜೀವನ.

ಆಯುರ್ವೇದದಲ್ಲಿ ಇದನ್ನು ವಿವರಿಸುತ್ತಾ ಆತ್ರೇಯ ಋಷಿಗಳು ಈ ರೀತಿ ಹೇಳುತ್ತಾರೆ.
ಶರೀರೇಂದ್ರಿಯ ಸತ್ಯಾತ್ಮ ಸಂಯೋಗೋ ಧಾರಿ ಜೀವಿತಂ | 
ನಿತ್ಯಗನುಶ್ಚಾನುಬಂಧಶ್ಚ ಪರ್ಯಾಯೈ ಆಯುರ್ ಉಚ್ಯತೇ ||

ಶರೀರ,  ಇಂದ್ರಿಯಗಳು, ಮನಸ್ಸು, ಆತ್ಮ ಇವುಗಳ ಸಂಯೋಗ ರೂಪದ ಧರಣ ಮಾಡುವುದೇ ಜೀವಿತ ಎಂದು ಅದನ್ನೇ ಆಯು ಎಂದೂ ಕರೆಯಲಾಗಿದೆ. ಈ ನಾಲ್ಕು ತತ್ವಗಳ ಪರಸ್ಪರ ಅನುಬಂಧ ರೂಪವಾದ ನಿತ್ಯ ಸಂಬಂಧವು ಜೀವಿತ ಎಂಬ ಕ್ರಿಯೆಗೆ ಮೂಲ ಕಾರಣಗಳಾಗಿರುತ್ತವೆ.

ಈ ಜೀವಿತದಲ್ಲಿ ಅವ್ಯಕ್ತರೂಪದಲ್ಲಿ ಪ್ರವೃತ್ತವಾಗಿರುವ ಮನಸ್ಸನ್ನು ಹಿಡಿದಿಟ್ಟುಕೊಂಡು ಅದನ್ನು ಸಂಪೂರ್ಣವಾಗಿ ಜೀವನ ನಿರ್ವಹಣೆಯಲ್ಲಿ ತೊಡಗಿಸುವ ಅರ್ಥಗರ್ಭಿತ ಬದ್ಧತೆಯನ್ನು ಪ್ರಜ್ಞಾಪೂರ್ವಕವಾಗಿ ಮಾಡುವ ಈ ಕ್ರಿಯೆ ಯಜ್ಞವಾಗುತ್ತದೆ.

ಮನುಷ್ಯನು ಹುಟ್ಟಿನಿಂದ ಪಡೆದಿರುವ ಸಾಮಾನ್ಯ ಮನುಷ್ಯರಿಗಿರುವ ಇಂದ್ರಿಯ, ಮನಸ್ಸು, ಬುದ್ಧಿ ಮುಂತಾದ ಸೌಲಭ್ಯಗಳಿಂದ ಪ್ರಕೃತಿ ಸಹಜ ಜೀವನ ನಿರ್ವಹಣೆಯನ್ನು ಸಮರ್ಥವಾಗಿ ಮಾಡಬಲ್ಲನು. ಆದರೆ ಅಷ್ಟೇ ಸಹಜವಾಗಿ ಅವನ ಜೊತೆಯಲ್ಲೇ ಹುಟ್ಟಿಬಂದಿರುವ ಕಾಮ ಕ್ರೋಧಾದಿಗಳು ಈ ಮಾಯಾ ಬಹುತ್ವದ ಜಗತ್ತಿನಲ್ಲಿ ರಜೋಗುಣ ಪ್ರಾಬಲ್ಯದೊಡನೆ ಬಲಿತು ಬೇರೂರಿ ಬಹು ಸುಲಭವಾಗಿ ರಾಕ್ಷಸೀಯ ಪ್ರವೃತ್ತಿಗಳನ್ನು ತನ್ನದಾಗಿಸಿಕೊಂಡು ಬೆಳೆಯುತ್ತದೆ. ಅಷ್ಟೇ ಸಹಜವಾಗಿ ದೇವತ್ವಕ್ಕೆ ಏರಬೇಕಾದ ಸಕಲ ಸಾಧಕಗಳು ಇದ್ದರೂ ಆ ದಿಸೆಯಲ್ಲಿ ಪ್ರವೃತ್ತವಾಗುವುದು ಅತೀ ವಿರಳ. ಇದೂ ಕೂಡ ಸಹಜ ಪ್ರಕೃತಿ ಪ್ರೇರಿತವೆ. ಆದ್ದರಿಂದ ವೈದಿಕ ಚಿಂತನೆಯಲ್ಲಿ ಮನುಷ್ಯನು ದೇವತ್ವದ ಕಡೆಗೆ ಹೋಗುವ ಪ್ರವೃತ್ತಿಯನ್ನು ಮನಸ್ಸಿನಲ್ಲಿ ಜಾಗೃತವಾಗುವಂತೆ ಮಾಡಲು ಅನೇಕ ವಿಧಿ, ನಿಯಮ, ಆದೇಶ, ನಿರ್ದೇಶ, ಮಾರ್ಗಗಳನ್ನು ಕೊಟ್ಟಿರುತ್ತಾರೆ. ಪ್ರಸ್ತುತ ಗೃತ್ಸಮದರ ಪದ್ಧತಿಯಲ್ಲಿ ಈ ಜೀವನ ಯಜ್ಞವನ್ನು 4 ಪ್ರಮುಖವಾದ ಬರ್ಹಿಷದ ಸಹಾಯದಿಂದ ಮಾಡುವ ಪ್ರಕ್ರಿಯೆಯನ್ನು ಕೊಟ್ಟಿರುತ್ತಾರೆ. ಯಜ್ಞಕುಂಡದಲ್ಲಿ ದರ್ಭೆಗಳ ಮುಖಾಂತರವಾಗಿ 4 ದಿಕ್ಕುಗಳನ್ನು ಬಂಧನ ಮಾಡುವಂತೆ ಮನಸ್ಸನ್ನು ನಿಯಂತ್ರಣ ಮಾಡುವ ವ್ಯವಸ್ಥೆಯನ್ನು ವಿವರಿಸುತ್ತಾರೆ.

ಪೂರ್ವಜೀವನ ಎಂಬುದು ಮನುಷ್ಯನು ತಾನೇ ತನ್ನ ಪ್ರಯತ್ನ ಪೂರ್ವಕವಾಗಿ ನಿರ್ಧರಿಸಿ ಸರಿಯಾದ ಗುರಿ (ಉದ್ದೇಶ) ಮತ್ತು ಸಮರ್ಥವಾದ ದಾರಿಯಲ್ಲಿ ಪ್ರಯಾಣಿಸುತ್ತಾ ತನ್ನನ್ನು ತಾನು ಉದ್ಧಾರ ಮಾಡಿಕೊಳ್ಳುತ್ತಾ ಪ್ರಕೃತಿಯೊಡನೆ ಸಮಯೋಗದಲ್ಲಿರುತ್ತಾ ಸಮಾಜದ ಬದ್ಧತೆಗೆ ಪೂರಕವಾಗಿ ನಿರ್ವಹಿವ ಕ್ರಿಯೆಯಾಗಿರುತ್ತದೆ. ಇದು ಸ್ವೇಚ್ಛಾಪ್ರವೃತ್ತಿಯ ಸ್ವಚ್ಛಂದವಾದ ಮನಸ್ಸಿನಿಂದ ನಡೆಯುವ ಕ್ರಿಯೆಯಲ್ಲ. ಬುದ್ಧಿಯ ಸಮರ್ಥ ಉಪಯೋಗದಿಂದ ಸ್ವಸ್ಥನಾದ ಸಮತ್ವಬಾವದ ಪ್ರಕೃತಿ ನಿರ್ಮಿಸಿಕೊಂಡ ವ್ಯಕ್ತಿಯಿಂದ ಮಾತ್ರ ನಿರ್ವಹಿಸಬಲ್ಲ ಕ್ರಿಯೆ. ಆದ್ದರಿಂದ ಹಿಂದಿನ ಕಾಲದಲ್ಲಿ ಸಮರ್ಥ ಜೀವನ ನಡೆಸಿರುವವರ ಅನುಭವವನ್ನು ಪಡೆದು ಅರ್ಥ ಮಾಡಿಕೊಂಡು ತನ್ನ ಜೀವನದ ಯೋಜನೆಯನ್ನು ಸ್ವಾಭಾವಿಕವಾದ ಇತಿಮಿತಿಗಳಲ್ಲಿ ತಯಾರಿಸಿಕೊಂಡು ಕಾಲದ ಚೌಕಟ್ಟಿನಲ್ಲಿ ನಿರ್ಧರಿಸಿಕೊಳ್ಳಬೇಕು. ತನ್ನೆಲ್ಲಾ ಬೇಕು ಬೇಡಗಳನ್ನು ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸಂಯೋಜಿಸಿ ಕಾಮಕ್ರೋಧಾದಿಗಳ ಪ್ರಭಾವವನ್ನು ನಿಯಂತ್ರಣದಲ್ಲಿಟ್ಟುಕೊಂಡು ತನಗೆ ತಾನೇ ಈಶ ಎನ್ನುವ ದುರಹಂಕಾರ ರಹಿತವಾದ ಸಾತ್ವಿಕ ರಜಸ್ಸಿನ ಶಕ್ತಿಯಲ್ಲಿ ದೃಢವಾಗಿ ನಿಂತು ನಿರ್ವಹಿಸಬೇಕು. ಜೀವನ ಯಜ್ಞದ ಪ್ರಪ್ರಥಮ ಘಟ್ಟವಾಗಿ ಈ ನಿರ್ದೇಶನ ನೆಲೆಯಾಗಬೇಕು. 

- ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದ ಸ್ವಾಮೀಜಿಯವರ ಆಯುರ್ವೇದ ಪಾಠ 
ಲೇಖಿಸಿದವರು ಡಾ|| ಬಿ.ವಿ. ಕುಮಾರಸ್ವಾಮಿ

No comments:

Post a Comment