Tuesday, 5 August 2014

ಭರದ್ವಾಜ ಪ್ರಣೀತ ಪ್ರಸೂತಿಕ ವಿಜ್ಞಾನದಲ್ಲಿ ಸಂತಾನ ಪ್ರಕ್ರಿಯೆ
ವೈದಿಕ ಯುಗದಲ್ಲಿ ಸತ್ಸಂತಾನ ಪ್ರಾಪ್ತಿಯಾಗುವ ಪ್ರಕ್ರಿಯೆಯನ್ನು ಅತ್ಯಂತ ಮಹತ್ವವಾದ ಕಾರ್ಯವೆಂದು ಪರಿಗಣಿಸಲಾಗಿತ್ತು. ಸಂತಾನ ಪ್ರಕ್ರಿಯೆಗೆ ಸೃಷ್ಟಿಯಲ್ಲಿ ಸಹಜವಾಗಿ ಪ್ರೇರಿತವಾಗುವ ಕಾಮ ಪ್ರಚೋದನೆಯನ್ನು ಬುದ್ಧಿಜೀವಿಯಾದ ಮನುಷ್ಯರು ಪ್ರಜ್ಞಾಪೂರ್ವಕವಾಗಿ ನಿರ್ವಹಿಸಬೇಕೆಂದು ನಿರ್ಣಯಿಸಲಾಗಿತ್ತು. ಮನುಷ್ಯನ ಲೈಂಗಿಕ ಕಾಮೇಚ್ಛೆಯನ್ನು ಸಂತಾನೋತ್ಪತ್ತಿ ಕ್ರಿಯೆಗೆ ಮಾತ್ರ ಸೀಮಿತಗೊಳಿಸಿ ಪುರುಷನು ಉಳಿದಂತೆ ಮನೋ ನಿಯಂತ್ರಣದಿಂದ ಶುಕ್ರವನ್ನು ಕಾಪಾಡಿಕೊಳ್ಳಬೇಕೆಂಬುದೇ ಬಹುತೇಕ ಎಲ್ಲ ಋಷಿಗಳ ಅಭಿಪ್ರಾಯವಾಗಿತ್ತು.

ಸತ್ಸಂತಾನ ಉತ್ಪತ್ತಿ ಕ್ರಿಯೆಯು ತಂದೆತಾಯಿಗಳ ಸ್ವಸ್ಥ ಶರೀರ ಮತ್ತು ಮನಸ್ಸು ಇವುಗಳ ಮೇಲೆ ನಿರ್ಧಾರಿತವಾಗುವುದು ಸಹಜವಾದುದರಿಂದ ವಿವಾಹೋತ್ತರ ಸಂದರ್ಭದಲ್ಲಿ ಸ್ತ್ರೀಪುರುಷರ ಸಮಾಗಮವು ಸಂಪೂರ್ಣವಾಗಿ ಧಾರ್ಮಿಕ ಚೌಕಟ್ಟಿನ ನೆಲೆಯಲ್ಲಿ ನಡೆಸುವುದು ಧರ್ಮಶಾಸ್ತ್ರದ ಶಾಸನ ಬದ್ಧವಾದ ಕ್ರಿಯೆಯಾಗಿತ್ತು. ಇದರ ಜವಾಬ್ದಾರಿಯು ವೈಧ್ಯ ಹಾಗೂ ಪುರೋಹಿತ ಇವರುಗಳ ಮೇಲೆ ಹೊರೆಸಲಾಗಿದ್ದು ಅವರು ಸಾಮಾಜಿಕವಾದ ಉತ್ತರ ದಾಯಿತ್ವವನ್ನು ಹೊಂದಿರುತ್ತಾರೆ.

ಪುರೋಹಿತನಾದವನು ವಿವಾಹದ ನಿಶ್ಚಿತಾರ್ಥವಾಗುವ ಸಮಯದಿಂದಲೇ ಸ್ತ್ರೀಪುರುಷರ ಶಾರೀರಿಕ ಶುದ್ಧಿಪ್ರಕ್ರಿಯೆಯನ್ನು ಆಯುರ್ವೇದದ ಶಾಸ್ತ್ರದ (ಅಥವಾ ಪ್ರಾಂತೀಯವಾದ ಸಂಪ್ರದಾಯಿಕ ಆಚರಣೆಗಳ) ರೀತ್ಯ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಧನ್ವಂತರಿ ಸಂಪ್ರದಾಯದ ಸುಶ್ರುತ ಸಂಹಿತೆಯಲ್ಲಿ ಈ ಸಂದರ್ಭದಲ್ಲಿ ಮಾಡಬೇಕಾದ ವೈಧ್ಯಕೀಯ ಸೂತ್ರಗಳನ್ನು ಹೇಳಲಾಗಿದೆ. 

ತತೋ ವಿಧಾನಂ ಪುತ್ರೀಯಮುಪಾಧ್ಯಾಯಸ್ಸಮಾಚರೇತ್
ಕರ್ಮಾಂತೇ ಚ ಕ್ರಮಂ ಹ್ಯೇನಮಾರಭೇತ ವಿಚಕ್ಷಣಃ || 
ತತೋಪರಾಹ್ನೇ ಪುಮಾನ್ ಮಾಸಂ ಬ್ರಹ್ಮಚಾರೀ 
ಸರ್ಪಿಸ್ನಿಗ್ಧಃ ಸರ್ಪಿ ಕ್ಷೀರಾಭ್ಯಾಂ ಶಾಲ್ಯೋದನಂ ಭುಕ್ತ್ವಾ 
ಮಾಸಂ ಬ್ರಹ್ಮಚಾರಿಣೀಂ ತೈಲಸ್ನಿಗ್ಧಾಂ ತೈಲ ಮಾಷೋತ್ತರಾಹಾರಂ 
ನಾರೀಮುತೇಯಾದ್ರಾತ್ರೌ ಸಾಮಾದಿಭಿರಭಿ ವಿಶ್ವಾಸ್ಯ || ವಿಕಲ್ಪೈವಂ ಚತುರ್ಥ್ಯಾಂ ||

ವೈದಿಕ ವಿಧಿ ವಿಧಾನದಂತೆ ಪುರೋಹಿತನು ಸ್ತ್ರೀಪುರುಷರ ವಿವಾಹ ಕಾರ್ಯಕ್ಕೆ ಬೇಕಾದ ಕ್ರಿಯೆಗಳನ್ನೆಲ್ಲಾ ಕ್ರಮಬದ್ಧವಾಗಿ ಮಾಡಲು ಪ್ರವೃತ್ತನಾಗಬೇಕು. ಇದರಲ್ಲಿ ವಿವಾಹ ಯೋಗ್ಯತಾ ನಿರ್ಣಯ ಉದಾ:- ವಯೋ ನಿರ್ಣಯ, ಗೋತ್ರ ನಿರ್ಣಯ, ಪರಸ್ಪರ ಅನುರಕ್ತತೆಯ ನಿರ್ಣಯ, ವರ್ಣ ಸಂಬಂಧ ನಿರ್ಣಯ, ಜ್ಯೋತಿಷ ಶಾಸ್ತ್ರದ ಹಾಗೂ ವೈಧ್ಯಶಾಸ್ತ್ರದ ಮಾರ್ಗದರ್ಶನ ಆಧಾರಿತ ಸಂಬಂಧ ನಿರ್ಣಯ, ಇದಲ್ಲದೆ ಇತರೆ  ದೇಶ, ಕಾಲ, ಸ್ಥಳೀಯ ಶಾಸನ, ಸಂಪ್ರದಾಯ ಇತ್ಯಾದಿಗಳ ನಿರ್ಣಯಗಳೆಲ್ಲವನ್ನೂ ನಿರ್ಧರಿಸಬೇಕು. ಧರ್ಮಶಾಸ್ತ್ರಗಳಲ್ಲಿ ಅಂಗೀಕೃತವಾದ ವಿವಾಹಗಳು 8 ಪ್ರಕಾರವಾಗಿರುತ್ತವೆ. ಅವುಗಳೆಲ್ಲದರ ನೈಜ ಉದ್ದೇಶವಾಗಲಿ, ಶಾಸ್ತ್ರೀಯತೆಯು ಪ್ರಸಕ್ತದಲ್ಲಿ ಬಳಕೆಯಾಗುತ್ತಿಲ್ಲವಾದ್ದರಿಂದ ಕೇವಲ ಹೆಸರುಗಳನ್ನು ಪ್ರಸ್ತಾಪಿಸೋಣ.

1) ಬ್ರಾಹ್ಮ
2)  ಧೈವ
3) ಆರ್ಷ
4) ಪ್ರಾಜಾಪತ್ಯ
5) ಆಸುರ
6) ಗಾಂಧರ್ವ
7) ರಾಕ್ಷಸ
8) ಪೈಶಾಚ

ಈ ಎಂಟು ಪ್ರಕಾರಗಳಲ್ಲಿ ವಿವಿಧ ವರ್ಣದವರಿಗೆ ಯಾವುದು ಧರ್ಮ ಸಮ್ಮತ ಎನ್ನುವುದು ಧರ್ಮಶಾಸ್ತ್ರಗಳಲ್ಲಿ ನಿರ್ದೇಶಿತವಾಗಿದೆ. ಬ್ರಾಹ್ಮ, ದೈವ ಮತ್ತು ಆರ್ಷ ಈ ಮೂರು ಬ್ರಾಹ್ಮಣರಿಗೆ ವಿಶೇಷ. ಇನ್ನುಳಿದ ಕ್ರಮಗಳು ಧರ್ಮ ಸಮ್ಮತವಲ್ಲ. ಆಸುರ ಮತ್ತು ಪೈಶಾಚ ಸಂಪೂರ್ಣ ನಿಷೇಧಿಸಲಾಗಿದೆ. ಗಾಂಧರ್ವ ಮತ್ತು ರಾಕ್ಷಸ ಪದ್ಧತಿಗಳು ಕ್ಷತ್ರಿಯರಿಗೆ ಧರ್ಮ ಸಮ್ಮತ. ವೈಶ್ಯ ಶೂದ್ರರಿಗೆ ಆಸುರ, ಗಾಂಧರ್ವ, ಪೈಶಾಚಗಳು ಧರ್ಮ ಸಮ್ಮತವಾಗಿದೆ. ಇದರಲ್ಲಿ ಕೆಲವು ಭಿನ್ನಾಭಿಪ್ರಾಯಗಳಿದ್ದು ಪ್ರಾದೇಶಿಕವಾಗಿ ಸಂಪ್ರದಾಯಗಳು ಭಿನ್ನವಾಗಿರುತ್ತದೆ. ಧರ್ಮಶಾಸ್ತ್ರಗಳು ಈ ಸೂತ್ರಗಳಲ್ಲಿ ಪ್ರಮುಖವಾಗಿ ಸಾಮಾಜಿಕ ದೃಷ್ಟಿಯಿಂದ ಉತ್ತಮವಾದ ಪ್ರಜೆಗಳನ್ನು ನೀಡುವ ಉದ್ದೇಶವನ್ನು ಹೊಂದಿರುವುದು ಗಮನಾರ್ಹ ಅಂಶ.

ವಿವಾಹದ ನಿಶ್ಚಿತಾರ್ಥದ ನಂತರದಲ್ಲಿ ವಿವಾಹ ಪ್ರಕ್ರಿಯೆಗೆ ವೈಧ್ಯಕೀಯ ದೃಷ್ಟಿಯಿಂದ ಮಾಡಬೇಕಾದ ವಿಧಿವಿಧಾನಗಳಿಗೆ 3-4 ತಿಂಗಳುಗಳು ಬೇಕಾಗುವುದರಿಂದ ವಿವಾಹ ಮುಹೂರ್ತವನ್ನು ಈ ದೃಷ್ಟಿಯಿಂದ ತೀರ್ಮಾನಿಸಬೇಕಾಗುತ್ತದೆ. ಕಾರಣಾಂತರದಿಂದ ವಿವಾಹ ಕಾರ್ಯವು ಬೇಗ ನೆರವೇರಿಸಬೇಕಾದಲ್ಲಿ ಗರ್ಭಾಧಾನ ಮುಹೂರ್ತಕ್ಕೆ ಈ ಕಾಲಾವಧಿಯನ್ನು ಗಮನಿಸಬೇಕಾಗುತ್ತದೆ.

ವಿವಾಹ ಗರ್ಭಾಧಾನ ಪೂರ್ವ ಮಾಡಬೇಕಾದ ಶುದ್ಧಿ ಸಂಸ್ಕಾರ

ಪುರುಷರಿಗೆ:- ವೈಧ್ಯನು ಪುರುಷನ ಶಾರೀರಿಕ, ಮಾನಸಿಕ ಸ್ವಾಸ್ಥ್ಯವನ್ನು ಪರಿಶೀಲಿಸಿ ಪುರುಷನೊಡನೆ ನಿಧಾನವಾಗಿ ಸಂಭಾಷಣೆಯನ್ನು ಮಾಡಿ ದಾಂಪತ್ಯಕ್ಕೆ ಸಂಬಂಧಪಟ್ಟ- ಸಂತಾನಕ್ಕೆ ಸಂಬಂಧಪಟ್ಟ ಸ್ತ್ರೀ ಶರೀರ, ಮಾನಸಿಕ ವಿಚಾರಗಳ ಬಗ್ಗೆ ಮತ್ತು ಆಚರಣೆಗಳ ಬಗ್ಗೆ ಮಾರ್ಗದರ್ಶನವನ್ನು ನೀಡಿ ಆಹಾರ-ವಿಹಾರ-ನಿದ್ರೆ-ವ್ಯವಹಾರ ಮತ್ತು ವಿಚಾರ ಇವೆಲ್ಲ ವಿಚಾರಗಳ ಬಗ್ಗೆ ಹಾಗೂ ಇವುಗಳಿಂದ ಉಂಟಾಗುವ ಪ್ರಭಾವಗಳು ಹೇಗೆ ಅವನ ದಾಂಪತ್ಯ ಹಾಗೂ ಶಿಶುವಿನ ಮೇಲೆ ಉಂಟಾಗುತ್ತದೆ ಮುಂತಾದ ವಿಚಾರಗಳಲ್ಲಿ ಶಿಕ್ಷಣವನ್ನು ನೀಡಬೇಕು. ಸಂದರ್ಭೋಚಿತವಾಗಿ ಕಾಮಶಾಸ್ತ್ರದ ವಿಚಾರಗಳನ್ನು ಕಾಲಕಲೆಯನ್ನು ಉಪದೇಶಿಸಬೇಕು. ವೈಧ್ಯಕೀಯ ರೀತ್ಯ ಯಾವುದಾದರು ರೋಗರುಜಿನಗಳು ಇದ್ದಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡಿ ನಂತರ ಶರೀರ ಶುದ್ಧಿ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು. ಶರೀರ ಶುದ್ಧಿಯು ಮನಸ್ಸಿನ ಶುದ್ಧಿಗೂ ಸಹಕಾರಿಯಾಗಿರುವುದರಿಂದ ಇದೊಂದು ಮುಖ್ಯವಾದ ಪ್ರಕ್ರಿಯೆಯಾಗಿರುತ್ತದೆ. ಸಾಮಾನ್ಯವಾಗಿ ಆಯುರ್ವೇದ ಶಾಸ್ತ್ರರೀತ್ಯಾ ಸ್ವಸ್ಥನಿಗೆ ನಿರ್ದೇಶಿತವಾಗಿರುವ ಪಂಚಕರ್ಮ ಚಿಕಿತ್ಸೆಯನ್ನು ಶುದ್ಧಿಗೋಸ್ಕರ ಮಾಡಬೇಕಾಗುತ್ತದೆ. ಈ ಚಿಕಿತ್ಸೆಯ ಸೂಕ್ಷ್ಮಾತಿಸೂಕ್ಷ್ಮ ವಿಧಿ ವಿಧಾನಗಳನ್ನು ವೈಧ್ಯನು ನಿರ್ಧರಿಸಿ ಮಾಡಬೇಕು.

ಪಂಚಕರ್ಮ ಚಿಕಿತ್ಸೆ


 • ಪೂರ್ವಕರ್ಮಗಳು :- ಸ್ನೇಹನ ಮತ್ತು ಸ್ವೇದನ
 • ಪ್ರಧಾನ ಕರ್ಮಗಳು :- ವಮನ, ವಿರೇಚನ, ಅನುವಾಸನ ಬಸ್ತಿ, ನಿರೂಹ ಬಸ್ತಿ, ನಸ್ಯ.ಅವಶ್ಯಕವಿದ್ದರೆ ರಕ್ತಮೋಕ್ಷಣ.
 • ಪಶ್ಚಾತ್ ಕರ್ಮ :- ಸಂಸರ್ಜನ, ರಸಾಯನ, ವಾಜೀಕರಣ.


ಇವಿಷ್ಟು ಕರ್ಮಗಳನ್ನು ಕ್ರಮಬದ್ಧವಾಗಿ ಮಾಡಲು 1 ತಿಂಗಳು ಕೆಲವೊಮ್ಮೆ ಅದಕ್ಕೂ ಹೆಚ್ಚು ಸಮಯ ಬೇಕಾಗುತ್ತದೆ. ನಂತರದಲ್ಲಿ ಈ ಪುರುಷನಿಗೆ 1 ತಿಂಗಳವರೆಗೆ ಹಾಲು ಮತ್ತು ತುಪ್ಪ ಇವುಗಳನ್ನು ಉಪಯೋಗಿಸಿ ಮಾಡಿದ ಶಾಲ್ಯಾನ್ನ ಪ್ರಧಾನವಾದ ಭೋಜನವನ್ನು ವಿಶೇಷವಾಗಿ ನೀಡಬೇಕು. ಈ ಅವಧಿಯಲ್ಲಿ ಶರೀರದ ಸ್ನಿಗ್ಧತೆಯನ್ನು ಕಾಪಾಡಿ ಅದನ್ನು ವೃದ್ಧಿಗೊಳಿಸುವುದು ಉದ್ದೇಶವಾಗಿರುವುದರಿಂದ ಬೇರೆಲ್ಲಾ ಆಹಾರಗಳನ್ನು ಗೌಣವಾಗಿ ಅಥವಾ ವರ್ಜ್ಯ ಮಾಡಿದರೂ ಉತ್ತಮವೆ. ಬೇಯಿಸದೆ ಇರುವ ತರಕಾರಿಗಳು, ಸೊಪ್ಪುಗಳು, ಅತಿಯಾದ ಪ್ರಮಾಣದಲ್ಲಿ ಹುಳಿ ರಸ ಇರುವ ಮತ್ತು ಇತರೆ ರಸವಿರುವ ಹಣ್ಣಿನ ಸೇವನೆ, ಕ್ಷಾರ, ಲವಣ, ಖಾರ ರಸಗಳ ಸೇವನೆ ಇವುಗಳನ್ನು ವರ್ಜಿಸಬೇಕು. ಅತಿಯಾದ ಸಾಹಸ ಕಾರ್ಯಗಳು, ಅತಿಯಾದ ಬಿಸಿಲಿನ ಸೇವನೆ, ಅತಿ ವ್ಯಾಯಾಮ, ಅತಿವೇಗದ ಪ್ರಯಾಣ ಮುಂತಾದ ರಜೋಗುಣ ಪ್ರಧಾನವಾದ ಪ್ರವೃತ್ತಿಗಳನ್ನು ನಿರ್ಬಂಧಿಸಬೇಕು. ವೈಧ್ಯನು ಶುಕ್ರ ಧಾತುವಿನ ಗುಣವರ್ಧನೆ ಹಾಗೂ ಪ್ರಮಾಣ ವರ್ಧನೆಯ ದೃಷ್ಟಿಯಿಂದ ಆಹಾರ ವಿಹಾರಗಳ ಸಂಯೋಜನೆಯನ್ನು ಮಾಡಿ ಸದಾಚಾರ ಪ್ರವೃತ್ತವಾಗಿರುವಂತೆ ಮಾರ್ಗದರ್ಶನ ಮಾಡಬೇಕು.

ಆಧುನಿಕ ಪ್ರಪಂಚದ ಜೀವನ ಶೈಲಿಯ ಇಂದಿನ ಯುಗದಲ್ಲಿ ಇನ್ನೂ ಹೆಚ್ಚಿನ ಜಾಗರೂಕತೆ ಮತ್ತು ಚಿಂತನೆ ಹಾಗೂ ಸಂಶೋಧನೆಗಳನ್ನು ಮಾಡಿ ಮಾರ್ಗದರ್ಶನ ನೀಡುವುದು ವೈಧ್ಯನ ವಿಶೇಷ ಜವಾಬ್ದಾರಿ ಎಂದು ಹೇಳಬಹುದು. ಉದಾ:- ಅನವಶ್ಯಕವಾಗಿ ಕೆಲುವ ಅಜ್ಞಾನಿಗಳು ಹಸಿ ತರಕಾರಿ, ಕೇವಲ ಫಲಾಹಾರ, ಸೊಪ್ಪುಗಳ ಅತಿ ಬಳಕೆಯನ್ನು ಆರೋಗ್ಯದಾಯಕವೆಂದು ತಿಳಿದು ಉಪಯೋಗಿಸಲು ಸಲಹೆ ನೀಡುತ್ತಾರೆ ಅಥವಾ ಸ್ವಯಂ ಪ್ರೇರಿತರಾಗಿಯೂ, ಮಾಧ್ಯಮಗಳ ಪ್ರಭಾವದಿಂದಲೂ ಅನುಸರಿಸುವುದು ಕಂಡು ಬರುತ್ತದೆ. ಆದರೆ ಈ ಅಭ್ಯಾಸದಿಂದ ಶುಕ್ರಧಾತುವಿನ ಬೀಜಾಂಶಗಳು ಸತ್ತು ಹೋಗಿ ಷಂಡತ್ವವೇ ಪ್ರಾಪ್ತಿಯಾಗುವ ಸಾಧ್ಯತೆ ಇರುತ್ತದೆ ಎಂಬುದನ್ನು ಅರಿಯುವುದು ಅವಶ್ಯ. ಬಹುತೇಕವಾದ ಇಂದಿನ ಚಿಂತನೆಗಳಲ್ಲಿ ಮತ್ತು ನಿರ್ದೇಶನಗಳಲ್ಲಿ ಅನುಭವದ ಕೊರತೆ ಮತ್ತು ಸಮರ್ಥವಾದ ವೈಜ್ಞಾನಿಕ ಪ್ರಯೋಗಗಳ ಕೊರತೆ ಹಾಗೂ ಪ್ರಚಾರ ಪ್ರಿಯತೆ ಅಥವಾ ವ್ಯಾಪಾರಿ ದೃಷ್ಟಿ ಪ್ರೇರಿತವಾದ ಪ್ರವೃತ್ತಿಯಾಗಿರುವುದು ಕಂಡುಬರುತ್ತದೆ.

ಸ್ತ್ರೀಯರಿಗೆ:- ಸಾಮಾನ್ಯ ಶೋಧನವನ್ನು ಸೂಕ್ತವಾದ ಪಂಚಕರ್ಮ ವಿಧಾನದಿಂದ ಮಾಡಿ ಒಂದು ತಿಂಗಳ ಪರ್ಯಂತ ತಿಲತೈಲ ಅಥವಾ ಎಳ್ಳೆಣ್ಣೆಯನ್ನು ನಿತ್ಯ ಅಭ್ಯಂಗಕ್ಕಾಗಿ ಬಳಸಬೇಕು. ಅಭ್ಯಂಗದ ನಂತರ ಹದವಾದ ಬಿಸಿನೀರಿನ ಸ್ನಾನ ಮಾಡಿ ದೇಹವನ್ನು ಸ್ನಿಗ್ಧವಾಗಿಟ್ಟುಕೊಳ್ಳುವ ಪ್ರಯತ್ನ ಮಾಡಬೇಕು. ಉದ್ದಿನ ಬೇಳೆ ಮತ್ತು ಎಳ್ಳೆಣ್ಣೆಗಳನ್ನು ಆಹಾರದಲ್ಲಿ ವಿಶೇಷವಾಗಿ ಬಳಸಬೇಕು. (ಕಾಲ ಮತ್ತು ದೇಶಗಳ ಅನುಗುಣವಾಗಿ ವಿವಿಧ ತೈಲಗಳನ್ನು ಮಿಶ್ರ ಮಾಡಿ ಅಭ್ಯಂಗಕ್ಕೆ ಬಳಸಬಹುದು)

ಆಹಾರ ವಿಹಾರಾದಿಗಳು ಮೇಲೆ ಹೇಳಿದ ಕೆಲ ವಿಶೇಷ ಪ್ರಯೋಗಗಳನ್ನು ಬಿಟ್ಟರೆ ಉಳಿದಂತೆ ಸಾಮಾನ್ಯ ನಿಯಮಗಳನ್ನು ಅನುಸರಿಸಬೇಕು. ಭಾರತೀಯ ಸಾಂಪ್ರದಾಯಕ ಕುಟುಂಬ ವ್ಯವಸ್ಥೆಯಲ್ಲಿ ಅನೂಚಾನವಾಗಿ ಅನೇಕ ಆಚರಣೆಗಳು ನಡೆದುಕೊಂಡು ಬರುತ್ತಿರುವುದು ಸರ್ವವಿದಿತ. ಇಂತಹ ಆಚರಣೆಗಳಲ್ಲಿ ಸಣ್ಣಪುಟ್ಟ ಲೋಪದೋಷಗಳಿದ್ದರೆ ವೈಧ್ಯನು ಸೂಕ್ತ ಮಾರ್ಗದರ್ಶನ ನೀಡಬೇಕು.

ಸ್ತ್ರೀ ಶರೀರವನ್ನುಸಂತಾನೋತ್ಪತ್ತಿಯ ಕ್ಷೇತ್ರ ಎಂದು ಪರಿಗಣಿಸಲಾಗಿದ್ದು ಜೀವ ಸೃಷ್ಟಿಯ ಪ್ರಕ್ರಿಯೆಯಲ್ಲಿ 9 ತಿಂಗಳ ಕಾಲ ಅತ್ಯಂತ ಮಹತ್ವವಾದ ಪಾತ್ರವನ್ನು ನಿರ್ವಹಿಸುತ್ತವೆ. ಸಹಜವಾಗಿ ಸ್ತ್ರೀ ಶರೀರವು ಅದಕ್ಕನುಗುಣವಾಗಿ ಬೆಳೆದು ಬಂದಿದ್ದರೂ ಆರ್ತವ (ಸ್ತ್ರೀ ಬೀಜಾಣು) ದೋಷಗಳು ಕಂಡು ಬರುವ ಸಾಧ್ಯತೆ ಇರುವುದರಿಂದ ಆರ್ತವ ಶುದ್ಧಿಗಾಗಿ ವಿಶೇಷವಾಗಿ ಎಳ್ಳನ್ನು ವಿವಿಧ ರೀತಿಯಲ್ಲಿ ಪ್ರಯೋಗಿಸುವ ಪದ್ಧತಿ ರೂಢಿಯಲ್ಲಿದ್ದು ಇದು ಗರ್ಭಾಶಯ, ಅಂಡಕೋಶ ಮತ್ತು ಅಂಡಾಣುಗಳನ್ನು ಶುದ್ಧಿ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಆದ್ದರಿಂದ ವಿವಾಹ ಪೂರ್ವದಲ್ಲಿ ಋತುಮತಿಯಾಗುವ ಕನ್ಯೆಗೆ ಇದರ ಸೂಕ್ತ ಬಳಕೆಯನ್ನು ವೈಧ್ಯ ಮಾಡಿಸುವುದು ಶ್ರೇಷ್ಠವಾದುದು.

ಹೀಗೆ ಸ್ತ್ರೀ ಪುರುಷರಿಬ್ಬರನ್ನೂ ಸಂತಾನೋತ್ಪತ್ತಿ ಕ್ರಿಯೆಗೆ ವಿಶೇಷವಾಗಿ ಸಿದ್ಧಪಡಿಸುವಾಗ ಮನೆಯಲ್ಲಿ ಉತ್ತಮವಾದ ವಾತಾವರಣವನ್ನು ನಿರ್ಮಾಣ ಮಾಡುವ ಜವಾಬ್ದಾರಿಯನ್ನು ಒಂದು ಧಾರ್ಮಿಕವಾದ ಜವಾಬ್ದಾರಿಯನ್ನಾಗಿ ಹಿರಿಯರು ನಿರ್ವಹಿಸಬೇಕು. ವಿಶೇಷವಾಗಿ ಸ್ತ್ರೀಗೆ ಯಾವುದೇ ವಿಧವಾದ ಮಾನಸಿಕ ದುಷ್ಪರಿಣಾಮಗಳಾಗುವ ಸಂದರ್ಭಗಳನ್ನು ಆಗದಂತೆ ಮಾಡಿ ವ್ರತ, ಜಪ, ತಪ, ಪೂಜೆ, ತೀರ್ಥಯಾತ್ರೆಯ ಮೂಲಕ ಕ್ಷೇತ್ರದರ್ಶನ ಮುಂತಾದ ನಿತ್ಯೋತ್ಸವ ಸಂದರ್ಭಗಳನ್ನು ಸೃಷ್ಟಿ ಮಾಡಿ ಅತ್ಯುತ್ತಮವಾದ ಪರಿಸರವನ್ನು ಒದಗಿಸಬೇಕು.

ಭಾರದ್ವಾಜರು ಋಗ್ವೇದದ 6ನೇ ಮಂಡಲದ 9ನೇ ಸೂಕ್ತದಲ್ಲಿ ಜೀವ ಸೃಷ್ಟಿಯ ವಿಚಾರವನ್ನು ಪ್ರತಿಪಾದನೆ ಮಾಡುತ್ತಾ ಜೀವ ಸೃಷ್ಟಿಗೆ ಸತ್ವ ರಜೋ ತಮೋಗುಣಗಳಲ್ಲಿ ರಜೋ ಗುಣವೇ ಪ್ರಧಾನವಾಗಿ ಕಾರಣವಾಗುತ್ತದೆಂದು ಹೇಳುತ್ತಾರೆ. ಈ ರಜೋ ಗುಣವನ್ನು ವೈಶ್ವಾನರ ಎಂಬ ಅಗ್ನಿಯು ವೃದ್ಧಿ ಮಾಡಿಸುವುದು ಮತ್ತು ಅದರಲ್ಲಿ ಪರಿವರ್ತನೆಯನ್ನು ತಂದು ಜೀವಸೃಷ್ಟಿಯ ಕಾರ್ಯವನ್ನು ಪ್ರಾರಂಭಿಸುತ್ತದೆ ಎಂದಿದ್ದಾರೆ. ಭಗವದ್ಗೀತೆಯಲ್ಲಿ ಭಗವಂತನು ತಾನೇ ವೈಶ್ವಾನರ ಎಂಬ ಅಗ್ನಿಯಾಗಿದ್ದು ಮನುಷ್ಯನು ತಿನ್ನುವ ಆಹಾರವನ್ನು 4 ವಿಧವಾಗಿ ಶರೀರದ ಜೀವಕಣಗಳಾಗಿ ಪರಿವರ್ತಿಸುವುದಾಗಿ ಹೇಳಿದ್ದಾರೆ. 

ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ |
ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್

ಮುಂದೆ 15, 19ನೇ ಸೂಕ್ತಗಳಲ್ಲಿ ಮನುಷ್ಯ ಸೃಷ್ಟಿಯ ಪ್ರಕ್ರಿಯೆಯನ್ನು ಹೇಳುತ್ತಾ ಸ್ತ್ರೀ ಪುರುಷರಲ್ಲಿ ಜೀವ ಸೃಷ್ಟಿಯ ಪ್ರಕ್ರಿಯೆಯ ಆರಂಭಕ್ಕೆ ಮನೋಭೂಮಿಕೆಯ ಮಹತ್ವವಾದ ಪಾತ್ರವನ್ನು ವಿವರಿಸುತ್ತಾರೆ. ಈ ಮನೋಭೂಮಿಕೆಯು ಪ್ರಶಸ್ತವಾಗಿದ್ದಷ್ಟೂ ಉತ್ತಮ ಸಂತಾನದ ಸಾಧ್ಯತೆಗಳು ಹೆಚ್ಚಾಗಿ ಉಂಟಾಗುತ್ತವೆ. ಆದ್ದರಿಂದ ಗರ್ಭಾಧಾನ ಪೂರ್ವದಲ್ಲಿ ಮಾಡುವ ಎಲ್ಲಾ ವಿಧದ ಪ್ರಕ್ರಿಯೆಗಳು ಇದಕ್ಕೆ ಪೂರಕವಾಗಿ ಯೋಜಿಸಲ್ಪಟ್ಟಿರುತ್ತವೆ. ವಿವಾಹವೆಂಬ ಧಾರ್ಮಿಕ, ಸಾಮಾಜಿಕ, ಮಾನಸಿಕ ಮುಂತಾದ ಅನೇಕ ಮಹತ್ವದ ಜೀವನ ದಾಯಿತ್ವಗಳ ನಿರ್ವಹಣೆಗೆ ಒಂದು ಪ್ರಧಾನ ಭೂಮಿಕೆಯಾಗಿದ್ದು ಧರ್ಮಶಾಸ್ತ್ರಗಳು ಇದಕ್ಕೆ ವಿಶೇಷ ಪ್ರಾಶಸ್ತ್ಯವನ್ನು ನೀಡಿರುತ್ತವೆ. ಬ್ರಾಹ್ಮ ವಿವಾಹ ಪದ್ಧತಿಯನ್ನು ದೋಷ ನಿವಾರಕವಾದ ಉತ್ತಮ ಪದ್ಧತಿಯೆಂದು ಪರಿಗಣಿಸಲಾಗಿದೆ. (ಇಂದಿನ ಆಧುನಿಕ ಕಾಲದವರೆವಿಗೂ ಈ ಪದ್ಧತಿಯನ್ನೇ ಬಹುತೇಕ ಸಮಾಜಗಳಲ್ಲಿ ಆಚರಿಸಲಾಗುತ್ತಿದೆ) ವಿವಾಹದ ನಂತರದಲ್ಲಿ ಗುರುಹಿರಿಯರೆಲ್ಲರ ಆಶೀರ್ವಾದ ಪೂರ್ವಕವಾಗಿ ಗೃಹಸ್ಥಾಶ್ರಮ ಸ್ವೀಕಾರ ಮಾಡಿ ಜೀವಸೃಷ್ಟಿಯ ಕಾರ್ಯಕ್ಕೆ ಪ್ರಪ್ರಥಮ ಘಟ್ಟವಾಗಿ ಜೀವಕ್ಕೆ ಪ್ರಥಮವೆಂದು ಹೇಳಬಹುದಾದ ಗರ್ಭಾಧಾನ ಸಂಸ್ಕಾರ ಯೋಜಿತವಾಗಿರುತ್ತದೆ. ಋತುಸ್ನಾತೆಯಾದ ಸ್ತ್ರೀಯು ಪ್ರಶಸ್ತವಾದ ಮುಹೂರ್ತದಲ್ಲಿ ಸ್ತ್ರೀ ಜೀವನದ ಅತ್ಯಂತ ಮಹತ್ವದ ಘಟ್ಟವೆಂದು ಪರಿಗಣಿಸಲಾಗಿರುವ ತಾಯಿಯಾಗುವೆ ಎಂಬ ಕಲ್ಪನೆ ಮತ್ತು ಪುರುಷರಿಗೆ ತಂದೆಯಾಗುವೆ ಎಂಬ ಕಲ್ಪನೆ ಸಮರ್ಥವಾಗಿರುವಂತೆ ಮನೋಭೂಮಿಕೆಯನ್ನು ಸಿದ್ಧಗೊಳಿಸುವ ಸಾಂದರ್ಭಿಕ ಜವಾಬ್ದಾರಿಯನ್ನು ಎಲ್ಲ ಗುರುಹಿರಿಯರು ನಿರ್ವಹಿಸಿ ಯಾವ ಮಾಪನಕ್ಕೂ ಸಿಗದ ಸೃಷ್ಟಿಗೆ ಮೂಲ ಕರ್ತೃವಾಗುವ ಆ ಕ್ಷಣದ ಪ್ರಕ್ರಿಯೆಯನ್ನು ಸ್ತ್ರೀಪುರುಷರಲ್ಲಿ ಏಕಕಾಲದಲ್ಲಿ ಪ್ರಕಟವಾಗುವಂತೆ ಸರ್ವಸಿದ್ಧತೆಗಳನ್ನು ವ್ಯವಸ್ಥೆಗೊಳಿಸಬೇಕು. ಶಾಸ್ತ್ರೀಯ ಮತ್ತು ಸಾಂಪ್ರದಾಯಿಕ ವಿಧಿವಿಧಾನಗಳು ಸಮರ್ಥವಾಗಿ ನಡೆದಿದ್ದರೆ ಅದರ ಫಲಶೃತಿಯಾಗಿ ಉತ್ತಮ ಸಂತಾನದ ಸೃಷ್ಟಿಕ್ರಿಯೆಯು ಪ್ರಾರಂಭವಾಗುತ್ತದೆ.

ಈ ಸಂತಾನೋತ್ಪತ್ತಿಯಲ್ಲಿ ಮೂರು ಮುಖ್ಯವಾದ ಪ್ರಭೇದಗಳನ್ನು ಹೇಳಲಾಗಿದೆ.
     1)    ಐಚ್ಛಿಕ
     2)    ಆಕಸ್ಮಿಕ
     3)    ಪೈಶಾಚಿಕ

:ಐಚ್ಛಿಕ ಸಂತಾನ:

ಶಬ್ದವೇ ಹೇಳುವಂತೆ ಸಂತಾನೋತ್ಪತ್ತಿಗಾಗಿ ದಂಪತಿಗಳು ಹಾಗೂ ಅವರ ಗುರು ಹಿರಿಯರು ಮನೋ ನಿಶ್ಚಯವಾಗಿ ಸಂಕಲ್ಪ ಮಾಡಿ ವಿವಾಹ ಪೂರ್ವ, ವಿವಾಹ ಹಾಗೂ ನಂತರದ ಎಲ್ಲಾ ಶಾಸ್ತ್ರೋಕ್ತವಾದ ಹಾಗೂ ಸಾಂಪ್ರದಾಯಿಕವಾದ ಕ್ರಿಯೆಗಳೆಲ್ಲವನ್ನೂ ಮಾಡಿ ಪುರೋಹಿತರನ್ನು ಮುಂದಿಟ್ಟುಕೊಂಡು ವೇದೋಕ್ತ ಪ್ರಕಾರವಾಗಿ ಮುಹೂರ್ತ ನಿಶ್ಚಯ ಮಾಡಿ ನಿಷೇಕ ಪ್ರಸ್ಥದ ಮೂಲಕವಾಗಿ ಋತುಕಾಲದಲ್ಲಿ ವಿಧಿಪೂರ್ವಕವಾಗಿ ಗರ್ಭಾಧಾನವನ್ನು ಮಾಡುವುದರ ಮೂಲಕ ಸಂತಾನ ಉತ್ಪತ್ತಿಗೆ ಉದ್ಯುಕ್ತರಾದರೆ ಅದು ಐಚ್ಛಿಕ ಸಂತಾನ ಎನಿಸಿಕೊಳ್ಳುತ್ತದೆ.

ಭಾರದ್ವಾಜರು ಈ ಸಂದರ್ಭದಲ್ಲಿ ಸ್ತ್ರೀಪುರುಷರಿಬ್ಬರ ದೇಹಗಳು ಕೇವಲ ಭೌತಿಕ ಸಂಘಟನೆಯ ದ್ರವ್ಯವಾಗಿದ್ದು ಅವುಗಳಲ್ಲಿ ಸಂತಾನ ಕ್ರಿಯೆಯ ಪ್ರವೃತ್ತಿ ಸಮರ್ಥವಾಗಿ ಉಂಟುಮಾಡಲು ಅನೇಕ ಪ್ರಕ್ರಿಯೆಗಳನ್ನು ಹೇಳಿರುತ್ತಾರೆ. ಇಲ್ಲದಿದ್ದರೆ ಈ ದೇಹಗಳು ಕೇವಲ ಶವಗಳಾಗಿದ್ದು ಸೃಷ್ಟಿ ಪ್ರಕ್ರಿಯೆಯ ಇಚ್ಛೆ ಪ್ರಕಟವಾಗಿ ಸಹಜ ಕಾಮೋತ್ತೇಜನೆಯಾಗಿ ಸ್ತ್ರೀಪುರುಷರಿಬ್ಬರೂ ಏಕಕಾಲದಲ್ಲಿ ಪ್ರವೃತ್ತರಾಗುವಂತೆ ಆಗುವುದು ಸಾಧ್ಯವಿಲ್ಲ. ಏಕೆಂದರೆ ಈ ಎಲ್ಲಾ ಕ್ರಿಯೆಗಳು ಮನಸ್ಸು ಮತ್ತು ಶರೀರದಲ್ಲಿ ಕಂಡು ಬಂದರೂ ಮೂಲಭೂತವಾಗಿ ಇದು ಆತ್ಮಕ್ಕೆ ಸೇರಿದ ಪ್ರಕ್ರಿಯೆಯಾಗಿರುತ್ತದೆ. ಆದ್ದರಿಂದ 6 ವಿಧವಾದ ಶುದ್ಧಿಗಳನ್ನು ಮುಖ್ಯವಾಗಿ ವಿವರಿಸುತ್ತಾರೆ. ಈ ಶುದ್ಧಿಗಳು ವಿಶೇಷವಾದ ಉದ್ದೇಶದಿಂದ ಕೂಡಿದ್ದು ಐಚ್ಛಿಕ ಸಂತಾನದಲ್ಲಿ ಉತ್ತಮ ಫಲವನ್ನು ಪಡೆಯುವುದಕ್ಕೆ ಬೇಕಾದ ಸಿದ್ಧತೆ ಎನಿಸುತ್ತದೆ. ಇವುಗಳಿಗೆ ಮುಖ ಶುದ್ಧಿ ಎಂದು ಕರೆದಿರುತ್ತಾರೆ. ಇಲ್ಲಿ ಮುಖವೆಂದರೆ ಮನಸ್ಸಿನ ಭಾವಗಳನ್ನು ಅಭಿವ್ಯಕ್ತಪಡಿಸುವ ವಿಶಿಷ್ಠ ಅಂಗ. ಇಂದ್ರಿಯ ಸ್ನಾಯುಗಳನ್ನು ಹೊಂದಿರುವ ಉತ್ತಮಾಂಗವಾದ ಶಿರಸ್ಸಿನ ಮುಂದಿನ ಭಾಗವೆಂದು ಪರಿಗಣಿಸಬೇಕು.


 1. ಸ್ತ್ರೀಪುರುಷರಿಗೆ ತಮಗೆ ಸಂತಾನ ಬೇಕು ಎನ್ನುವ ಸಹಜ ಇಚ್ಛೆ ಉಂಟಾಗಿ ಅದಕ್ಕೆ ಬೇಕಾದ ಎಲ್ಲಾ ಪ್ರಕ್ರಿಯೆಗಳನ್ನು ಮಾಡುವಿಕೆ. ಇದಕ್ಕೆ ಕುಂತಿ ಹಾಗೂ ಪಾಂಡುವಿನ ಉದಾಹರಣೆ ನೀಡಬಹುದು. ಇದಕ್ಕೆ ವಿರುದ್ಧವಾದ ಇಚ್ಛೆಯನ್ನು ಗಾಂಧಾರಿಯ ಉದಾಹರಣೆಯನ್ನು ನೋಡಬಹುದು. ಹೀಗೆ ಸಹಜವಾದ ಸಂತಾನದ ಇಚ್ಛೆ ಎಲ್ಲ ರೀತಿಯ ಹಿತ, ಸುಖ, ಆನಂದ, ಶಾಂತಿದಾಯಕವಾಗಿದ್ದು ಧಾರ್ಮಿಕವಾಗಿಯೂ ಸಮ್ಮತವಾಗಿರುವಂತೆ ಪ್ರವೃತ್ತಿಸುವುದು.
 2. ತನಗೆ ಸದ್ಗತಿ ಪಡೆಯುವ ಕಾರಣಕ್ಕಾಗಿ ಪ್ರವೃತ್ತಿಸುವುದು. ಸಾಮಾನ್ಯವಾಗಿ ಪ್ರಪಂಚದಲ್ಲಿ ಬಹುತೇಕ ಪ್ರವೃತ್ತಿಗಳು ಇಹಲೋಕದ ಸಾಂಸಾರಿಕ ಜೀವನ ಉದ್ದೇಶಿತವಾಗಿಯೇ ಇರುತ್ತದೆ. ಅರ್ಥ ಕಾಮಾದಿಗಳ ಉದ್ದೇಶಿತ ಪ್ರವೃತ್ತಿ ಸಹಜ. ಆದರೆ ಪಾರಮಾರ್ಥಿಕವಾದ ಪರಲೋಕ ಮೋಕ್ಷಪ್ರಾಪ್ತಿ ಕಡೆಗೆ ಪ್ರವೃತ್ತಿಯಿಲ್ಲದಿರುವುದು ಮನುಷ್ಯನಿಗೆ ಶತ್ರು. ಇದನ್ನು ಕುರಿತ ಚಿಂತನೆ ಮಾಡಿ ತನಗೆ ಸದ್ಗತಿ ಪಡೆಯುವ ಕಾರಣಕ್ಕಾಗಿ ಈ ಶತ್ರುವನ್ನು ಗೆಲ್ಲುವಂತ ಪ್ರವೃತ್ತಿಯನ್ನು ಬೆಳೆಸುವ ಶುದ್ಧಿ.
 3. ತನ್ನಲ್ಲಿರುವ ಉತ್ತಮವಾದ ಸತ್ಪಾತ್ರತೆ–ಪರಂಪರೆ-ಜ್ಞಾನ-ವಿಧ್ಯೆ-ಕೌಶಲ-ತಂತ್ರಜ್ಞಾನ ಇತ್ಯಾದಿಗಳನ್ನು ಸತ್ಪಾತ್ರರಲ್ಲಿ ಹಂಚುವುದಕ್ಕೆ ತನ್ನಲ್ಲಿಯೇ ಅಂತಹ ಸತ್ಪಾತ್ರ ಸಂತಾನವನ್ನು ಪಡೆಯಲು ಪ್ರವೃತ್ತವಾಗುವುದು.
 4. ಪ್ರತಿಯೊಬ್ಬ ವ್ಯಕ್ತಿಗೂ ತನ್ನ ವಂಶವನ್ನು ಕುರಿತ ಬದ್ಧತೆಯಿರುತ್ತದೆ. ಇದು ಭಾರತೀಯ ಧರ್ಮಮೂಲ ಜೀವನ ವ್ಯವಸ್ಥೆಯಲ್ಲಿ ಬಹಳ ಪ್ರಮುಖವಾದ ವಿಷಯವಾಗಿರುತ್ತದೆ. ವಂಶವನ್ನು ಕ್ಷೀಣಿಸಲು ತಾನು ಕಾರಣನಾಗದೆ ವಂಶಾಭಿವೃದ್ಧಿಯಾಗಲು ಪ್ರವೃತ್ತಿಸುವುದು.
 5. ಒಂದು ಜೀವದಿಂದ ಮತ್ತೊಂದು ಜೀವದ ಸೃಷ್ಟಿ ಪ್ರಕೃತಿಯಲ್ಲಿ ಅತ್ಯಂತ ಮೂಲಭೂತವಾದ ಪ್ರಕ್ರಿಯೆಯಾಗಿರುತ್ತದೆ. ಸೃಷ್ಟಿಯು ಸತತವಾಗಿ ಮುಂದುವರೆದು ಪ್ರಾಪಂಚಿಕ ವ್ಯವಸ್ಥೆ ಸಮಸ್ಥಿತಿಯಲ್ಲಿರಲು ಇದು ಅತ್ಯಂತ ಪ್ರಮುಖವಾಗಿರುತ್ತದೆ. ಇದನ್ನು ಧಾರ್ಮಿಕವಾಗಿ ಧೈವೇಚ್ಛೆ ಎಂದು ಕರೆಯಲಾಗಿದೆ. ಈ ದೈವೇಚ್ಛೆಗೆ ವಿರುದ್ಧವಾಗಿ ಹೋಗದೆ ಇರುವುದು ಮತ್ತು ದೈವೇಚ್ಛೆಯನ್ನು ಪೂರೈಸುವುದು ಮನುಷ್ಯನ ಕರ್ತವ್ಯವಾಗಿರುತ್ತದೆ. ಈ ಕರ್ತವ್ಯ ಪ್ರಜ್ಞೆಯ ದೃಷ್ಟಿಯಿಂದ ಪ್ರವೃತ್ತಿಸುವುದು.

ಈ ರೀತಿಯಲ್ಲಿ ಕರ್ತವ್ಯ ಪ್ರಜ್ಞೆಯನ್ನು ಬೆಳೆಸಿಕೊಂಡು ತನ್ನ ಮನಸ್ಸಿನ ಶುದ್ಧಿಯನ್ನು ಮಾಡಿಕೊಳ್ಳುತ್ತಾ ದೃಢವಾದ ಸಂಕಲ್ಪವನ್ನು ಮಾಡಿ ಮೇಲೆ ಹೇಳಿದ ಯಾವುದಾದರೂ ಒಂದಾದರೂ ಉದ್ದೇಶವನ್ನು ಹೊಂದಿ ಪ್ರವೃತ್ತರಾಗಬೇಕು. ಇದಕ್ಕೆ ಮನುಷ್ಯನಿಗೆ ತನ್ನ ಜೀವನದಲ್ಲಿ ಉತ್ತಮ ಸಂಸ್ಕಾರಗಳು ದೊರಕಿದ್ದರೆ ಸರಳವಾಗಿ ಪ್ರವೃತ್ತನಾಗುತ್ತಾನೆ. ಸೂಕ್ತ ವಯಸ್ಸಿನಲ್ಲಿ ಸಂತಾನದ ಉದ್ದೇಶವನ್ನು ಮತ್ತು ಜವಾಬ್ದಾರಿಗಳನ್ನು ಅರಿಯಲು ವಿಶೇಷವಾದ ಅಧ್ಯಯನವನ್ನು ಮಾಡಿದರೆ ತನ್ನ ಮನೋಭೂಮಿಕೆಯು ಸಮರ್ಥವಾಗಿ ಸಿದ್ಧವಾಗುತ್ತದೆ. ಹಾಗೂ ಇದು ತನ್ನ ಒಂದು ಮಹತ್ವವಾದ ಕರ್ತವ್ಯ ಎನ್ನುವ ಪ್ರಜ್ಞೆಯು ಸ್ಥಿರಗೊಳ್ಳುತ್ತದೆ.

ವೈದಿಕ ಚಿಂತನೆಯಲ್ಲಿ ಇಷ್ಟೊಂದು ದೀರ್ಘವಾದ ಪೂರ್ವ ಸಿದ್ಧತೆಗಳನ್ನು ವಿಧಿ-ವಿಧಾನ-ಕರ್ತವ್ಯ ಮುಂತಾದ ಕ್ರಮದಲ್ಲಿ ಶಾಸ್ತ್ರಬದ್ಧತೆಯನ್ನು ನಿರ್ಮಾಣ ಮಾಡಿರುವುದಕ್ಕೆ ಒಂದು ವಿಶೇಷ ಕಾರಣವೂ ಇದೆ. ಭರದ್ವಾಜ ಋಷಿಗಳು ಇದನ್ನು ಪ್ರಸ್ತಾಪಿಸುತ್ತಾ ಮೇಲೆ ಹೇಳಿದ ಐಚ್ಛಿಕ ಸಂತಾನ, ಸತ್ಸಂತಾನಗಳ ಪ್ರಕ್ರಿಯೆಗಳು ಪರಿಕಲ್ಪನೆಗಳು ಯಾವುದೂ ಇಲ್ಲದೇ ಇದ್ದರೆ ಅಥವಾ ವಿಕೃತವಾಗಿ ಪ್ರವೃತ್ತವಾದರೆ ಕೆಟ್ಟ ಸಂತಾನಕ್ಕೆ ಕಾರಣವಾಗುವ ಮತ್ಸರ ಎಂಬ ಅಗ್ನಿಯು ದೇಹದಲ್ಲಿ ನಿರ್ಮಾಣವಾಗಿ ಅದರ ಪ್ರಭಾವದಿಂದಲೇ ಸಂತಾನ ಪ್ರಕ್ರಿಯೆಯು ನಡೆಯುತ್ತದೆ. ಇದು ಹೀನವಾದುದು ಮಾತ್ರವಲ್ಲ ಅತ್ಯಂತ ಅಹಿತವಾದ ಸಾಮಾಜಿಕ ಪಾಪವೂ ಆಗುತ್ತದೆ.

ದೈಹಿಕಶಕ್ತತೆ:- ಸಂತಾನ ಪ್ರಕ್ರಿಯೆಯ ಸಮರ್ಥ ನಿರ್ವಹಣೆಗೆ ಸ್ತ್ರೀಪುರುಷರ ದೈಹಿಕ ಶಕ್ತಿಯು ಬಹಳ ಮುಖ್ಯವಾದ ಅವಶ್ಯಕತೆಯಾಗಿರುತ್ತದೆ. ಪೂರ್ವ ಸಂಸ್ಕಾರಗಳೆಲ್ಲವೂ ಇದಕ್ಕೆ ಪೂರಕವಾಗಿ ಸಹಾಯ ಮಾಡುತ್ತವೆ. ಅದರ ಜೊತೆಯಲ್ಲಿ ಕೆಲವು ವಿಶೇಷ ಬದ್ಧತೆಗಳನ್ನು ಅನುಸರಿಸುವುದು ಐಚ್ಛಿಕ ಸಂತಾನಕ್ಕೆ ಸಹಕಾರಿಯಾಗುತ್ತದೆ.

ಆಹಾರ ಬದ್ಧತೆ:- ವೈದಿಕ ಚಿಂತನೆಯಲ್ಲಿ ಆಹಾರವನ್ನು ಜೀವಿಯ ಪ್ರಾಣಧಾರಣೆಯ ವಿಷಯದಲ್ಲಿ ಒಂದು ಪ್ರಧಾನ ಅಂಶ ಎಂದು ಪರಿಗಣಿಸಲಾಗಿದೆ. ಆಹಾರ, ನಿದ್ರಾ ಹಾಗೂ ಬ್ರಹ್ಮಚರ್ಯ ಇವುಗಳನ್ನು ತ್ರಯೋಪಸ್ತಂಭ ಎಂದರೆ ಒಂದು ಕಟ್ಟಡದ ಭದ್ರತೆಗೆ ಅಗತ್ಯವಾದ ಕನಿಷ್ಠ ಅವಶ್ಯಕವಾದ 3 ಕಂಬಗಳಂತೆ ಪರಿಗಣಿಸಲಾಗಿದೆ. ಸ್ವಸ್ಥನ ಜೀವನ ಚರ್ಯೆಯಲ್ಲಿ ಶರೀರ, ಮನಸ್ಸುಗಳ ಸಮತ್ವ ಧಾರಣೆ ದೃಷ್ಟಿಯಿಂದ ಆಹಾರದ ವಿಧಿವಿಧಾನಗಳನ್ನು ಸವಿಸ್ತಾರವಾಗಿ ವಿವರಿಸಲಾಗಿದೆ. ಆಯುರ್ವೇದದಲ್ಲಿ ಸ್ವಾಸ್ಥ್ಯ ಹಾಗೂ ರೋಗ ಇವೆರಡು ಅವಸ್ಥೆಗಳಿಗೆ ಆಹಾರವೇ ಮೂಲಕಾರಣ ಎಂದು ಪರಿಗಣಿಸಲಾಗಿದೆ. ಶರೀರದಲ್ಲಿರುವ ಸಪ್ತಧಾತುಗಳು ಶರೀರವನ್ನು ಧಾರಣೆ ಮಾಡುತ್ತವೆ. ಇವುಗಳು ತಮ್ಮ ಗುಣಧರ್ಮಗಳ ರಕ್ಷಣೆ ಹಾಗೂ ಪೋಷಣೆಗಳಿಗೆ ಸಮತೋಲನವಾದ ಷಡ್ರಸಯುಕ್ತವಾದ ಆಹಾರವನ್ನೇ ಅವಲಂಬಿಸಿರುತ್ತದೆ. ಶಿಶುವಿನ ಉತ್ಪತ್ತಿಯಲ್ಲಿ ಶರೀರ ಧಾತು ಅಂಶಗಳ ನಿರ್ಮಾಣವಾಗುವುದು ಸ್ತ್ರೀಪುರುಷರ ಶುಕ್ರ ಮತ್ತು ಆರ್ತವಗಳ ಸಂಯೋಗದಿಂದ. ಆದ್ದರಿಂದ ಈ ಎರಡು ಸಂತಾನ ನಿರ್ಮಾತೃ ಬೀಜಗಳು ಉತ್ತಮ ದರ್ಜೆಯಲ್ಲಿ ನಿರ್ಮಾಣವಾಗಬೇಕಾದರೆ ಆಹಾರವು ಸಮರ್ಥವಾಗಿರುವುದು ಅತ್ಯವಶ್ಯ. ವಿಶೇಷವಾಗಿ ಸ್ತ್ರೀಪುರುಷರು ವಿವಾಹಯೋಗ್ಯ ವಯಸ್ಸಿನಲ್ಲಿ ವಿವಾಹವಾಗಿ ಗರ್ಭಾಧಾನಕ್ಕೆ ಸಿದ್ಧರಾಗುವಾಗ ವಿಶೇಷವಾದ ಆಹಾರ ಸಂಯೋಜನೆಯು ಎಲ್ಲಾ ಘಟ್ಟಗಳಲ್ಲಿಯೂ ಪ್ರಮುಖವಾದ ಸ್ಥಾನವನ್ನು ಪಡೆಯುತ್ತದೆ.

ಭಾರತೀಯ ಪರಂಪರೆಯಲ್ಲಿ ಬಹುತೇಕ ಎಲ್ಲಾ ಪ್ರದೇಶಗಳಲ್ಲಿಯೂ ತಮ್ಮ ತಮ್ಮ ಪ್ರಾದೇಶಿಕ ಪದ್ಧತಿಗಳಿಗೆ ಅನುಗುಣವಾಗಿ ಸಂಪ್ರದಾಯಿಕ ಆಹಾರ ಪದ್ಧತಿಗಳ ಅನುಸರಣೆ ಇರುವುದು ಕಂಡು ಬರುತ್ತದೆ. ಇವುಗಳಲ್ಲಿ ಶಾಸ್ತ್ರವಿಧಿತವಾದ ತತ್ವಾಂಶಗಳು ಬಹುತೇಕವಾಗಿ ಇರುವುದು ಸತ್ಯ. ಆರ್ಥಿಕ ಪರಿಸ್ಥಿತಿಯ ಆಧಾರದ ಮೇಲೆ ಆಚರಣೆಗಳಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು. ಆದರೂ ಎಲ್ಲಾ ಸಮಾಜಗಳಲ್ಲೂ ವಿವಾಹ ಸಂತಾನಗಳನ್ನು ಕುರಿತು ವಿಶೇಷವಾದ ಆಸ್ಥೆ-ಆಚರಣೆ-ಪ್ರೋತ್ಸಾಹ ಇರುವುದರಿಂದ ಇಂದಿಗೂ ಸಮಾಜದಲ್ಲಿ ರೂಢಿ ಗಮನೀಯವಾಗಿ ಜೀವಂತವಾಗಿದೆ. ವಿವಾಹ ಪೂರ್ವ ಹಾಗೂ ಗರ್ಭಾಧಾನ ಪೂರ್ವದಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಆಯುರ್ವೇದದ ಸಿದ್ಧಾಂತದ ಸೂತ್ರಗಳಲ್ಲಿ ಉತ್ತಮವಾದ ಧಾತು ಪೋಷಕ, ದೋಷ ನಾಶಕ, ಮನಃಸ್ವಾಸ್ಥ್ಯಕರವಾದ ನಿತ್ಯ ಜೀವನ ವ್ಯವಸ್ಥೆಯ ಜೊತೆಗೆ ಕೆಲವು ವಿಶೇಷ ದ್ರವ್ಯಗಳ ಉಪಯೋಗ ಮಾಡಬೇಕಾಗುತ್ತದೆ. ಆಹಾರದ ಬದ್ಧತೆಯು ದೈಹಿಕ ಶಕ್ತತೆಗೆ ಹೇಗೆ ಪ್ರಾಮುಖ್ಯವೋ ಹಾಗೆಯೇ ಮನಸ್ಸಿನ ಸ್ವಾಸ್ಥ್ಯಕ್ಕೂ ಪೂರಕವಾಗಿರುತ್ತದೆ.

ಆಯುರ್ವೇದಾಚಾರ್ಯ ವಾಗ್ಭಟರು ರೋಗರಹಿತವಾದ  ಜೀವನಕ್ಕೆ ಸೂತ್ರವನ್ನು ಹೀಗೆ ನೀಡಿರುತ್ತಾರೆ.

ನಿತ್ಯಂ ಹಿತಮಿತ ಆಹಾರ ಸೇವೀ ಸಮೀಕ್ಷಕಾರಿ ವಿಷಯೇಷು ಆಸಕ್ತಃ |
ಧಾತ ಸಮಃ ಸತ್ಯಪರಃ ಆಪ್ತೋಪಸೇವೀ ತಸ್ಯ ಭವೇತ್ ಅರೋಗಃ ||

ಪಾನೀಯ ಬದ್ಧತೆ:- ಪಾನೀಯ ಎಂದರೆ ದ್ರವರೂಪದಲ್ಲಿ ಉಪಯೋಗಿಸುವ ಆಹಾರ ಅಥವಾ ಅನುಪಾನ ದ್ರವ ಪದಾರ್ಥ. ನೀರು ಕೂಡ ಒಂದು ಪ್ರಧಾನ ಪಾನೀಯವೇ. ಪಾನೀಯಗಳನ್ನು ಉಪಯೋಗಿಸುವ ವಿಷಯದಲ್ಲಿ ಸಂಪೂರ್ಣವಾದ ಅಜ್ಞಾನ ಇಂದಿನ ನಾಗರೀಕತೆಯ ಸಂಸ್ಕೃತಿಯ ಒಂದು ರೋಗವಾಗಿದೆ. ಭಾರತದ ಸಂಸ್ಕೃತಿಯಲ್ಲಿ ಇದಕ್ಕೆ ಬಹಳ ಮಹತ್ವ ನೀಡಲಾಗಿದೆ. ಮನುಷ್ಯನ ಆಹಾರ ಪರಿಣಾಮವನ್ನು ಉಂಟು ಮಾಡುವ ವೈಶ್ವಾನರ ಎಂಬ ಅಗ್ನಿಯು ಜೀರ್ಣಾಂಗಗಳ ಪ್ರಧಾನ ತತ್ವವಾಗಿದ್ದು ಅದರ ಸಮರ್ಥ ನಿರ್ವಹಣೆಯನ್ನು ಆಹಾರ ಮತ್ತು ಪಾನೀಯಗಳ ಸಮರ್ಥ ಬಳಕೆಯ ಮೂಲಕ ಸಮಸ್ಥಿತಿಯಲ್ಲಿಡುವುದು ಅವಶ್ಯ. ಅಗ್ನಿಯು ಕ್ಷೀಣವಾಗಲಿ, ಮಂದವಾಗಲಿ ಆದರೆ ರೋಗಕಾರಕವಾಗುತ್ತದೆ. ಬಿಸಿಯಾಗಿಲ್ಲದಿರುವ ಪಾನೀಯಗಳು ಅಗ್ನಿಯನ್ನು ಹಾನಿಪಡಿಸುತ್ತವೆ. ಇಂದು ಬಳಕೆಯಲ್ಲಿರುವ ಅರೆ ಶೀತಜಲ ಮತ್ತು ವಿವಿಧ ವರ್ಣ ರಸ, ರಾಸಾಯನಿಕ ಸಂಯೋಜಿತ ಪಾನೀಯಗಳು ಅಗ್ನಿಯನ್ನು ಹಾಳು ಮಾಡುವುದರಲ್ಲಿ ಶ್ರೇಷ್ಠ ಪದಾರ್ಥವೆನ್ನಬಹುದು. ನಮ್ಮ ಸಂಪ್ರದಾಯಿಕ ಪಾನೀಯಗಳಾದ ವಿವಿಧ ರೀತಿಯ ಮಜ್ಜಿಗೆ, ಬಿಸಿಯಾಗಿರುವ ಕಷಾಯಗಳು, ಹಣ್ಣಿನಿಂದ ಮಾಡಿದ ರಸಗಳು ಪಾನೀಯಗಳೆಂದು ವಿವೇಚನೆಯಿಲ್ಲದೆ ಸೇವನೆ ಮಾಡಬಹುದು. ಸಾಮಾನ್ಯವಾಗಿ ಇವುಗಳು ಹಾನಿಕಾರಕವಲ್ಲವಾದರೂ ಸ್ವೇಚ್ಛಾವೃತ್ತಿ ವಿವೇಕವಲ್ಲ. ಪ್ರಸ್ತುತ ಐಚ್ಛಿಕ ಸಂತಾನಕ್ಕಾಗಿ ದೇಹ ಶಕ್ತಿ ದೃಷ್ಟಿಯಿಂದ ಪಾನೀಯಗಳನ್ನು ಆಹಾರ ರೂಪದಲ್ಲಿಯೇ ಸೇವಿಸುವುದು ಅಥವಾ ಅನುಪಾನವಾಗಿ ಸೇವಿಸುವುದು ಉತ್ತಮ. ಅವಶ್ಯವೆನಿಸಿದಾಗ ಮಾತ್ರ ಉಪಾಹಾರ ಮತ್ತು ಭೋಜನಗಳ ನಡುವೆ ಸರಿಯಾದ ಅಂತರವಿಟ್ಟು ಸೇವಿಸಬೇಕು. ದೇಹದಲ್ಲಿ ನೀರಿನ ಬಯಕೆ ಉಂಟಾದಾಗ ಮಾತ್ರ ನೀರು ಸೇವಿಸಬೇಕು. ಋತುಮಾನಕ್ಕೆ ಅನುಗುಣವಾಗಿ ಪ್ರಾದೇಶಿಕ ಪದ್ಧತಿಗೆ ಅನುಗುಣವಾಗಿಯೇ ಪಾನೀಯಗಳ ಸೇವನೆ ಉತ್ತಮ. ಪಾನೀಯಗಳ ಸಂಯೋಜನೆಯಲ್ಲಿ ದೇಹದ ಅವಶ್ಯಕತೆ, ಪಾನೀಯದಲ್ಲಿನ ದ್ರವ್ಯ ಸಂಘಟನೆ, ಪಾಕ-ಅಪಾಕ ವಿವೇಚನೆ, ಶೀತ-ಉಷ್ಣ ಇತ್ಯಾದಿಗಳ ವಿವೇಚನೆ ಬಹುಮುಖ್ಯವಾಗಿ ಅಗ್ನಿಯ ವಿವೇಚನೆ (ಹಸಿವು ಚೆನ್ನಾಗಿ ಆಗಿರುವಾಗ ಪಾನೀಯಗಳ ಸೇವನೆ ಅಗ್ನಿ ನಾಶಕವಾಗುತ್ತದೆ) ಹಾಗೂ ಸ್ತ್ರೀಪುರುಷರಿಗೆ ಪಾನೀಯದ ಅವಶ್ಯಕತೆಗಳನ್ನು ಸರಿಯಾಗಿ ವಿವೇಚಿಸಿ ಸೂಕ್ತವಾದ ಪಾನೀಯವನ್ನು ಮಾತ್ರ ಉಪಯೋಗಿಸಬೇಕು. ಲಭ್ಯವಿಲ್ಲದೆ ಎನ್ನುವ ಕಾರಣಕ್ಕಾಗಲಿ, ಸತ್ಕಾರಾದಿಗಳೆಂದಾಗಲಿ, ಹವ್ಯಾಸಕ್ಕೆಂದಾಗಲಿ, ವಿನೋದಕ್ಕೆಂದಾಗಲಿ ಪಾನೀಯಗಳ ಸೇವನೆ ಮಾಡಬಾರದು.

ಸೂಚನೆ: ಬಿಸಿ ನೀರು ಮತ್ತು ಬಿಸಿಯಾಗಿರುವ ಪಾನೀಯಗಳು ಅಗ್ನಿಗೆ ಹಾನಿಕಾರಕವಲ್ಲ. ಅತಿಯಾದ ನೀರಿನ ಸೇವನೆ ಯಾವಲಾಗಲೂ ಒಳ್ಳೆಯದಲ್ಲ. ಊಟದ ಜೊತೆಯಲ್ಲಿಯೂ ಸಹ ನೀರನ್ನು ಮಿತವಾಗಿ ಸೇವಿಸಬೇಕು. ಹಣ್ಣಿನ ರಸಗಳನ್ನು ಸೇವಿಸುವಾಗ ಅತಿಯಾದ ಶೀತಗುಣದಿಂದ ಇರಬಾರದು. ಊಟದ ನಂತರದಲ್ಲಿ ತಣ್ಣಗಿರುವ ಪಾನೀಯಗಳು ಸೇವನೆಗೆ ಯೋಗ್ಯವಲ್ಲ. ಹಾಲು ಒಂದು ಪೌಷ್ಠಿಕ ಆಹಾರ. ಇದನ್ನು ಬೇರೆ ಪಾನೀಯಗಳಂತೆ ಪರಿಗಣಿಸಬಾರದು. ಸಂಸ್ಕರಿತವಾದ ಬೆಣ್ಣೆಯನ್ನು ತೆಗೆದಿರುವ ಮಜ್ಜಿಗೆ ಅತ್ಯುತ್ತಮವಾದ ಪಾನೀಯ.

ವಿಹಾರಬದ್ಧತೆ:- ಸ್ತ್ರೀಪುರುಷರಿಗೆ ಅತಿಯಾಗಿ ಶ್ರಮದಾಯಕವಾದ ಯಾವುದೇ ರೀತಿಯ ವ್ಯಾಯಾಮ, ಆಸನಗಳು, ಯಾನಗಳು, ವರ್ಜಿಸುವುದು ಒಳ್ಳೆಯದು. ವಿಶೇಷವಾಗಿ ಮನಸ್ಸಿಗೆ ಮುದ ನೀಡುವಂತಹ ವಿಹಾರಗಳು ಸೂಕ್ತ. ಉದ್ರೇಕ, ಆತಂಕ, ಉದ್ವೇಗ, ಅಭಿತಾಪ ಉಂಟಾಗುವಂತೆ ವಿಹಾರಗಳಲ್ಲಿ ತೊಡಗಬಾರದು. ಶರೀರ-ಮನಸ್ಸು ಮತ್ತು ಮಾತು ಈ ಮೂರು ಯಾವ ರೀತಿಯಿಂದಲೂ ಅಸ್ವಸ್ಥವಾಗದಂತೆ ವಿಹರಿಸಬೇಕು. ವಿಹಾರದ ಉದ್ದೇಶ ಹಿತಮಿತವಾದ ಸುಖ, ಸಂತೋಷದಾಯಕವಾಗಿರುವಂತೆ ನೋಡಿಕೊಳ್ಳಬೇಕು. ಬದ್ಧತೆಯ ದೃಷ್ಟಿಯಿಂದ ಅಲಂಕಾರಗಳು, ಉಡಿಗೆ-ತೊಡಿಗೆಗಳು, ಆಭರಣಗಳು, ಹಾವಭಾವಗಳು ಒಂದು ನಿಯಮಬದ್ಧವಾದ ಆಚರಣೆಯಾಗಿರುವುದು ಹಿತ ಎನಿಸುತ್ತದೆ.

ಸಂಪತ್ತಿನ ಬದ್ಧತೆ:- ಸ್ತ್ರೀಪುರುಷರಲ್ಲಿ ಮನುಷ್ಯನ ಸಹಜ ಸ್ವಭಾವದಂತೆ ಸಂಪತ್ತುಗಳು ಮಾನಸಿಕವಾಗಿ ಸುಖ-ಸಂತೋಷ ಆನಂದಗಳನ್ನು ನೀಡುವುದಾದರೂ ಕೆಲ ಅನಾವಶ್ಯಕವಾದ ಗುಣಗಳನ್ನು ಹುಟ್ಟು ಹಾಕುತ್ತವೆ. ಉದಾ:- ವಿವಿಧವಾದ ಮದಗಳು-ಅನ್ನಮದ, ಅರ್ಥಮದ, ವೈಭವಮದ, ನವನಾಗರೀಕತೆಯಲ್ಲಂತೂ ಈ ಮದಗಳ ವೈಭವ ಕಾಟ ವಿಪರೀತವಾಗಿ ಇರುವ ಸಾಧ್ಯತೆಗಳು ಉಂಟು. ಇದರ ಪರಿಣಾಮವಾಗಿ ದುರಹಂಕಾರವು ಅರಿವಿಲ್ಲದೆ ಬೆಳೆದು ಮನಸ್ಸಿನ ಅಸ್ವಾಸ್ಥ್ಯಕ್ಕೆ ಕಾರಣವಾಗುತ್ತದೆ. ಆದ್ದರಿಂದ ಯಾವುದೇ ಸಂಪತ್ತಿನ ವೈಭವೀಕರಣ ದುರುಪಯೋಗ ಮುಂತಾದ ಅಸಾಧು ಪ್ರವೃತ್ತಿಯನ್ನು ನಿಯಂತ್ರಿಸಬೇಕು.

ಮೇಲೆ ಹೇಳಿದ ಆಹಾರಾದಿ ವಿಷಯಗಳ ಬದ್ಧತೆಯನ್ನು ವ್ಯವಸ್ಥಿತವಾಗಿ ಯೋಜಿಸಲು ಪುರಾತನ ಕಾಲದಿಂದ ಕೆಲವು ಆಚರಣೆಗಳನ್ನು ಬಳಕೆಗೆ ತಂದಿರುತ್ತಾರೆ. ಧಾರ್ಮಿಕ ನೆಲೆಯಲ್ಲಿ ಯೋಜಿಸಲಾಗಿರುವ ಈ ನಿರ್ದೇಶನವು ವಿಶೇಷವಾದ ವ್ರತಗಳು, ಉಪಾಸನೆಗಳು, ಜಪ-ತಪ-ಅನುಷ್ಠಾನ, ಸದಾಚಾರ ಹಾಗೂ ಸದ್ವೃತ್ತಗಳ ವರ್ತನೆ ಮುಂತಾದ ಕ್ರಮಗಳನ್ನು ಇಲ್ಲಿ ಪ್ರಯೋಗಿಸಬಹುದು. ಇದನ್ನು ವೈಧ್ಯರು ಮತ್ತು ಪುರೋಹಿತರು ಸಮರ್ಥವಾಗಿ ಬಳಸಿಕೊಳ್ಳಬೇಕು.

ಭಾರದ್ವಾಜ ಪ್ರಣೀತ ಚಿಕಿತ್ಸಾಸೂತ್ರಐಚ್ಛಿಕ ಸಂತಾನ ಮಾರ್ಗದಲ್ಲಿ ಪ್ರವೃತ್ತರಾಗುವ ಸ್ತ್ರೀಪುರುಷರಿಬ್ಬರಿಗೂ ಬಳಸಬಹುದಾದ/ ಬಳಸಬೇಕಾದ ಒಂದು ಶ್ರೇಷ್ಠ ಚಿಕಿತ್ಸಾಕ್ರಮವನ್ನು ಉಪದೇಶಿಸಲಾಗಿದೆ. ಇದು ದೂರ್ವೆ ಅಥವಾ ಗರಿಕೆ ಹುಲ್ಲು ಎಂಬ ಸಾಮಾನ್ಯ ವನಸ್ಪತಿಯ ಬಳಕೆ. 4 ರೀತಿಯ ಪ್ರಯೋಗಗಳನ್ನು ವಿವರಿಸಲಾಗಿದೆ. ಅದನ್ನು ಬಲ್ಲ ವೈಧ್ಯರಿಂದ ತಿಳಿದು ಬಳಸಬೇಕೆಂದು ನಿರ್ದೇಶನವಿದೆ. 


 1. ಐಚ್ಛಿಕ ಸಂತಾನವನ್ನು ಬಯಸುವ ಸ್ತ್ರೀಪುರುಷರು ವಿವಾಹದ ನಂತರದಲ್ಲಿ ಬಹಳ ಸಮಯವನ್ನು ವಿಳಂಬ ಮಾಡದೆ ಪ್ರವೃತ್ತರಾಗುವುದು ಒಳ್ಳೆಯದಲ್ಲ.
 2. ಸಂತಾನ ಪ್ರವೃತ್ತಿಗೆ ಸಂಕಲ್ಪ ಮಾಡಿರುವವರಿಗೆ ದೂರ್ವಾರಸ ಪ್ರಯೋಗವನ್ನು ಯಾವಾಗ ಮಾಡಬೇಕು? ಸಂತಾನದ ಉದ್ದೇಶದಿಂದ ಋತುಕಾಲದಲ್ಲಿ ಸ್ತ್ರೀಪುರುಷ ಸಮಾಗಮದ ಮುಹೂರ್ತ ನಿರ್ಧಾರವನ್ನು ಮಾಡುವುದಕ್ಕೆ ಮೊದಲ ಮೂರು ತಿಂಗಳುಗಳ ಕಾಲ ಮೇಲಿನ ಎಲ್ಲಾ ಪ್ರಕ್ರಿಯೆಗಳನ್ನು ಮಾಡಲು ಬೇಕಾಗುತ್ತದೆ. ಅಂದರೆ ಗರ್ಭಾಧಾನಕ್ಕೆ 3 ತಿಂಗಳ ಮೊದಲಿನಿಂದ ಆಹಾರ ವಿಹಾರಾದಿಗಳ  ಒಂದು ನೂತನ ಕಾರ್ಯಕ್ರಮವನ್ನು ಪ್ರಾರಂಭಿಸಿ ಸಾಮಾನ್ಯ ಶರೀರ ಶೋಧನವನ್ನು ಮಾಡಿ ಮಾನಸಿಕ ಸ್ವಾಸ್ಥ್ಯಕ್ಕೆ ಬೇಕಾದ ಆಚರಣೆಗಳನ್ನು ಪ್ರಾರಂಭಿಸಿ ವಿಶೇಷವಾದ ಆಹಾರಕ್ರಮವನ್ನು ಅಳವಡಿಸಿದ ನಂತರದಲ್ಲಿ ದೂರ್ವಾರಸ ಪ್ರಯೋಗ ಮಾಡಿ ಮತ್ತೆ 1 ತಿಂಗಳ ಕಾಲವದರೂ ಅವಕಾಶವನ್ನು ಕೊಟ್ಟು ಗರ್ಭಾಧಾನದ ಮುಹೂರ್ತ ನಿರ್ಧಾರ ಮಾಡಬೇಕು.
 3.  ಪ್ರಾರಂಭಿಕ ಹಂತದಿಂದ 20 ದಿನಗಳು ಮೊದಲನೇ ಹಂತ.
 4. ಎರಡನೇ ಹಂತದಲ್ಲಿ ವಿಶೇಷ ಆಹಾರ, ವಿಹಾರ, ಬ್ರಹ್ಮಚರ್ಯಾದಿಗಳ ಪಾಲನೆ.
 5. ಈ ಮೂರು ತಿಂಗಳಕಾಲ ಸಮಯದಲ್ಲಿ ಋತುಮತಿಯಾಗುವ ಸಮಯವನ್ನು ಪರಿಶೀಲಿಸಿ ಬೇಕಾದಲ್ಲಿ ಸೂಕ್ತ ಚಿಕಿತ್ಸೆಗಳನ್ನು ಮಾಡಿ ಸ್ತ್ರೀಪುರುಷರಿಬ್ಬರೂ ಬ್ರಹ್ಮಚರ್ಯದಲ್ಲಿದ್ದು ಗರ್ಭಾದಾನ ಸಂದರ್ಭದಲ್ಲಿ ಒಂದುಗೂಡುವಂತೆ ಮಾಡಬೇಕು.

(ಆಯುರ್ವೇದ ಗ್ರಂಥಗಳಲ್ಲಿ ಹಾಗೂ ಧರ್ಮಶಾಸ್ತ್ರಗಳಲ್ಲಿ ಋತುಕಾಲದಲ್ಲಿ ಸ್ತ್ರೀಪುರುಷರ ಸಮಾಗಮವನ್ನು ಗಂಡು ಅಥವಾ ಹೆಣ್ಣು ಮಕ್ಕಳನ್ನು ಪಡೆಯುವ ಇಚ್ಛೆಯುಳ್ಳವರು ಮಾಡಬೇಕಾದ ಕ್ರಮವನ್ನು ತಿಳಿಸಿರುತ್ತಾರೆ. ಅದರಂತೆ ಸಮದಿನಗಳಲ್ಲಿ ಅಂದರೆ ಋತುಕಾಲದ 4-6-8-10-12 ಈ ದಿನಗಳು ಸಮಾಗಮ ಮಾಡಿದರೆ ಪುರುಷ ಶಿಶುವನ್ನು ಪಡೆಯಲು ಸೂಕ್ತ. ಬದಲಾಗಿ 5-7-9-11 ಈ ದಿನಗಳು ಸ್ತ್ರೀಶಿಶುವಿನ ದಾರಣೆಗೆ ಸೂಕ್ತ. 13 ನೇ ದಿವಸದ ನಂತರ ಸಮಾಗಮವು ನಿಂದಿತ.)

ಗರ್ಭಾಧಾನದ ನಂತರದಲ್ಲಿ ಸ್ತ್ರೀಪುರುಷರು ಮತ್ತೆ ಸಂಯಮದಿಂದ ಇದ್ದು ಗರ್ಭಾಧಾರಣೆ ಆಗಿದೆ ಎಂಬ ಮನೋಧರ್ಮದಲ್ಲಿ ಮುಂದಿನ ದಿನಚರ್ಯೆ, ರಾತ್ರಿಚರ್ಯೆಯನ್ನು, ಆಹಾರ-ವಿಹಾರಾದಿಗಳನ್ನು ನಡೆಸಿಕೊಳ್ಳಬೇಕು. ಭರದ್ವಾಜ ಋಷಿಗಳು ಮೊದಲನೆ 2 ತಿಂಗಳುಗಳ ಕಾಲ ಅತ್ಯಂತ ಮಹತ್ವದ ಸಮಯವಾಗಿದ್ದು ಐಚ್ಛಿಕ ಸಂತಾನದಲ್ಲಿ ಗರ್ಭಾಧಾನ ಆಗಿ ಭ್ರೂಣ ಉಂಟಾಗುವ ಮೊದಲನೆಯ ಕ್ಷಣದಲ್ಲಿಯೇ ಆತ್ಮ ಸಂಯೋಜನೆಯು ಆಗುವುದರಿಂದ ಗರ್ಭವನ್ನು ಧರಿಸಿದ ಸ್ತ್ರೀಯು ಕೆಲವು ವಿಶೇಷ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ. ಪುರುಷನು ಜೊತೆಗೆ ಇದ್ದು ದಂಪತಿಗಳು ತಮ್ಮ ಜೀವನದ ಅತ್ಯಂತ ಪ್ರಾಮುಖ್ಯವಾದ ದಾಯಿತ್ವವನ್ನು ನಿರ್ವಹಣೆ ಮಾಡುತ್ತಿದ್ದೇವೆ ಎಂಬ ಪ್ರಜ್ಞೆಯನ್ನು ತಮ್ಮಲ್ಲಿ ಬೇರೂರುವಂತೆ ಸಿದ್ಧವಾಗಬೇಕು. ಈ ಸಮಯದ ಉತ್ತಮ ನಿರ್ವಹಣೆಗಾಗಿ ವಿಶೇಷ ವ್ರತಗಳ ಆಚರಣೆಯನ್ನು ನಿರ್ದೇಶಿಸಲಾಗಿದ್ದು ಅವರವರ ವರ್ಣಾಶ್ರಮಗಳ ಪರಂಪರೆಗಳ ಮತ್ತು ವಂಶದ ಪದ್ಧತಿಗಳ ಅನುಸಾರವಾಗಿ ಗುರುಹಿರಿಯರಿಂದ ಮಾರ್ಗದರ್ಶನ ಪಡೆದು ಆಚರಿಸಬೇಕು. ಧಾರ್ಮಿಕವಾದ ಸಾಂಪ್ರದಾಯಿಕ ವ್ರತಗಳು ಜೀವನ ಕ್ರಮದ ಸರಿಯಾದ ಆಚರಣೆಗೆ, ಮನೋಸ್ಥಿತಿಯ ರಕ್ಷಣೆಗೆ, ದಾರ್ಢ್ಯತೆಗೆ, ಸಂಯಮಕ್ಕೆ, ಅತ್ಯಂತ ಪೂರಕವಾದ ಮಾರ್ಗವಾಗಿರುತ್ತದೆ. ವ್ರತಗಳ ಅನುಸರಣೆಯಲ್ಲಿ ಮನೆಯಲ್ಲಿ ಎಲ್ಲರೂ ಪಾಲ್ಗೊಂಡು ಒಂದು ಉತ್ಸಾಹದ ಹಬ್ಬದ ವಾತಾವರಣ ನಿರ್ಮಾಣವಾಗುವುದರಿಂದ ಅತ್ಯುತ್ತಮ ಪದ್ಧತಿ ಎಂದು ಪರಿಗಣಿಸಲಾಗಿದೆ. ಇದರ ಜೊತೆಯಲ್ಲಿ ಸ್ತ್ರೀಯು ತನ್ನ ಪುರುಷನ ಜೊತೆಯಲ್ಲಿ ಮನೆದೇವರ ದರ್ಶನ, ಅರ್ಚನ, ಪೂಜೆ ಪುನಸ್ಕಾರಗಳನ್ನೂ, ತನ್ನ ಇಷ್ಟದ ಕ್ಷೇತ್ರ ಸ್ಥಳ, ದೇಶಗಳ ದರ್ಶನವನ್ನು ಮಾಡಬೇಕು. ತಮ್ಮ ವಂಶದ ಗುರುಹಿರಿಯರಿಂದ ಸೂಕ್ತವಾದ ಮಂತ್ರೋಪದೇಶವನ್ನು ಪಡೆದು ಸಾತ್ವಿಕವಾದ ಜಪತಪಗಳನ್ನು ಮಾಡಬೇಕು. ಪುರೋಹಿತರ ಮಾರ್ಗದರ್ಶನದಲ್ಲಿ ಸ್ವಸ್ತಿವಾಚನ, ವಾಸ್ತುರಾಕ್ಷೋಘ್ನ ಹಾಗೂ ದೇವತೆಗಳ ಉಪಾಸನೆಯ ಹವನ ಹೋಮಗಳು, ಸುಶ್ರಾವ್ಯವಾದ ಮಂತ್ರಘೋಷಗಳ ಶೃತಿ ಮತ್ತು ವೇದ ವಿದ್ವಾಂಸರಿಂದ ಆಶೀರ್ವಚನಾದಿಗಳನ್ನು ಪಡೆಯಬೇಕು. ಸ್ವಯಂ ತಂದೆ ತಾಯಿಗಳಾಗುವ ಸಂಕಲ್ಪವನ್ನು ಮಾಡಿರುವ ಸ್ತ್ರೀಪುರುಷರು ಈ ಎರಡು ತಿಂಗಳ ಕಾಲ ತಮ್ಮ ಇಷ್ಟದೇವತಾ ಉಪಾಸನೆಯನ್ನು ವಿಶೇಷವಾಗಿ ಕೈಗೊಳ್ಳಬೇಕು. ಈ ಉಪಾಸನೆಯು ಗರ್ಭಸ್ಥ ಶಿಶುವಿನ ದೃಷ್ಟಿಯಿಂದ ಮತ್ತು ಅದರ ದೈವತ್ವದ ನಿರ್ಮಾಣ, ಜ್ಞಾನ ಸ್ಥಾಪನೆ ಹಾಗೂ ಇಡೀ ಜೀವನದ ಶ್ರೇಯೋಭಿವೃದ್ಧಿಗೆ ಬುನಾದಿಯನ್ನು ಹಾಕುವುದು. ಉಪಾಸನೆಯು ಈ ಸಮಯದಲ್ಲಿ ಶಿಶುವಿನ ಸಂಪೂರ್ಣ ಅಂಗಾಂಗಗಳ ನಿರ್ಮಾಣ (ಚೇತನ ಸ್ಥಾಪನ)ಗಳಿಗೆ ಬೇಕಾದ ಬಹುಮುಖ್ಯವಾದ ಪೋಷಣೆಯನ್ನು ಸಮರ್ಥವಾಗಿ ನೀಡುವುದು.

ಆತ್ರೇಯರ ಅಭಿಪ್ರಾಯದಂತೆ ಆತ್ಮವಸ್ತುವಿನ ಜೊತೆಯಲ್ಲಿ ಸೂಕ್ಷ್ಮವಾದ 4 ಭೂತಗಳು ಬಂದು ಶರೀರ ರಚನೆಯಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸುತ್ತವೆ. ಶುಕ್ರ ಶೋಣಿತ ಸಂಯೋಗದ ನಂತರ ಸತ್ವಗುಣವು ಪ್ರಧಾನ ಕರಣವಾಗಿ ಆಹಾರ ರಸದಲ್ಲಿರುವ ಗುಣಗಳನ್ನು ಗ್ರಹಣ ಮಾಡಿ ಶರೀರದ ಮೂಲ ಧಾತುಗಳನ್ನು ನಿರ್ಮಾಣ ಮಾಡುತ್ತದೆ. ಈ ಸತ್ವಗುಣವೇ ಮನಸ್ಸು ಎಂಬ ಪ್ರಧಾನ ತತ್ವ ವಿಶೇಷವಾಗಿದ್ದು ಪೂರ್ವಜನ್ಮ ಸಂಸ್ಕಾರಗಳ ಸ್ಮೃತಿಯ ಪ್ರಭಾವದಿಂದ ನಿರ್ದೇಶಿತವಾಗಿ ಕಾರ್ಯ ನಿರ್ವಹಿಸುತ್ತದೆ. ಮನಸ್ಸಿನ ಭೂಮಿಕೆ ಈ ಕಾರಣದಿಂದ ಪ್ರಧಾನವಾದ ಸೂತ್ರಧಾರ ತತ್ವವಾದುದರಿಂದ ಉಪಾಸನಾ ಮಾರ್ಗದ ಮೂಲಕವಾಗಿ ಅದನ್ನು ವಿಶೇಷವಾಗಿ ಸಂರಕ್ಷಣೆ ಮತ್ತು ಪೋಷಣೆ ಮಾಡುವುದು ಉದ್ದೇಶವಾಗಿರುತ್ತದೆ.

ಈ 2 ತಿಂಗಳಿನಲ್ಲಿ ಮಾಡುವ ಇವೆಲ್ಲಾ ಕಾರ್ಯಗಳು ಶಿಶುವಿನ ಜೀವರಕ್ಷಣೆಗೆ ಸಹಾಯವಾಗುವುದರ ಜೊತೆಗೆ ದೀರ್ಘಾಯಷ್ಯವನ್ನೂ ನೀಡುತ್ತದೆ. ಸದೃಢವಾದ ಶರೀರ ಮತ್ತು ಮನಸ್ಸು, ಸಾತ್ವಿಕ ಪ್ರವೃತ್ತಿ, ಸಾರ್ಥಕ ಬದುಕು, ಆಧ್ಯಾತ್ಮಿಕ ಚಿಂತನ ಹಾಗೂ ಜೀವನ, ಕೊನೆಯಲ್ಲಿ ಅನಾಯಾಸೇನ ಮರಣಂ ಗೂ ಸಹಕಾರಿಯಾಗುತ್ತದೆ.

ಭರದ್ವಾಜರ ಚಿಂತನೆಯಲ್ಲಿ ಸಂತಾನಕ್ರಿಯೆ ಅಂದರೆ ಸೃಷ್ಟಿಯ ಮೂಲದಲ್ಲಿ ಇರುವ ಚೇತನ ಅಭಿವ್ಯಕ್ತಿ ಕ್ರಿಯೆಯು ಮನಸ್ಸಿನ ಪ್ರಧಾನ ಪ್ರಕ್ರಿಯೆಯಾಗಿರುತ್ತದೆ.  ಸ್ತ್ರೀಪುರುಷರ ದೃಢ ಸಂಕಲ್ಪದಿಂದ ಪ್ರವರ್ತಿತವಾದ ಗರ್ಭವು ಮೊದಲನೇ ದಿನದಿಂದಲೇ ಆತ್ಮ ಸಂಯೋಗವನ್ನು ಪಡೆಯುವುದರಿಂದ ಮನಸ್ಸಿನ ಪ್ರತಿಷ್ಠಾನ ಉಂಟಾಗುವುದು. ಆದ್ದರಿಂದ ಮೊದಲ 2 ತಿಂಗಳು ಗರ್ಭಸ್ಥ ಶಿಶುವು ತನ್ನ ಸಂಪೂರ್ಣ ಅಂಗಾಂಗಗಳೆಲ್ಲದರ ಸೂಕ್ಷ್ಮಾತಿಸೂಕ್ಷ್ಮ ರಚನೆಗಳನ್ನು ಅದರಲ್ಲಿ ಮನಸ್ಸು ತನ್ನ ಸಂಪೂರ್ಣ ಅಸ್ತಿತ್ವವನ್ನು ಸ್ಥಿರೀಕರಿಸುವುದು. ಈ ಕಾರಣಗಳಿಂದ ಮೊದಲಿನ ಈ 2 ತಿಂಗಳು ಗರ್ಭಿಣಿ ಸ್ತ್ರೀಯು ತನ್ನ ಎಲ್ಲಾ ಕಾರ್ಯಗಳನ್ನು ಬದಿಗಿಟ್ಟು ಶಿಶುವಿನ ಇಡೀ ಜೀವನ ದೃಷ್ಟಿಯಿಂದ ಉಪಾಸನಾದಿ ನಿರ್ದೇಶಿತ ಕಾರ್ಯಗಳನ್ನು ಸಂತೋಷವಾಗಿ ತನ್ಮಯತೆಯಿಂದ ಮಾಡಬೇಕು. ತಾಯ್ತನದ ದಾಯಿತ್ವವು ಸಮರ್ಥವಾಗಿ ಆಗಲು ವಿವಾಹಪೂರ್ವ ಸಂಸ್ಕಾರ, ಸಂಕಲ್ಪಿತ ಗರ್ಭಾಧಾನ, ಮೊದಲ 2 ತಿಂಗಳ ಕಾರ್ಯಗಳು ಮತ್ತು ಮುಂದಿನ 7 ತಿಂಗಳಲ್ಲಿ ಮಾಡುವ ಸಂಸ್ಕಾರಗಳು, ಆಹಾರ, ವಿಹಾರ, ವಿಚಾರಾದಿ ಪ್ರವೃತ್ತಿಗಳೆಲ್ಲವೂ ಮಹತ್ವದ ಘಟ್ಟಗಳಾಗಿರುತ್ತವೆ ಎಂಬುದನ್ನು ಸ್ತ್ರೀಯು ಪ್ರಜ್ಞಾಪೂರ್ವಕವಾಗಿ ತಿಳಿದಿರಬೇಕು.


                                 -:ಆಕಸ್ಮಿಕ ಸಂತಾನ:-

ಆಕಸ್ಮಿಕ ಎಂಬ ಪದವೇ ಹೇಳುವಂತೆ ಈ ಸಂತಾನವು ಸಂಕಲ್ಪಿತ ಸಂಸ್ಕಾರಿತ ಗರ್ಭಾಧಾನದಿಂದ ಉಂಟಾಗಿರುವುದಿಲ್ಲ. ವಿವಾಹಪೂರ್ವ ಸಂಸ್ಕಾರಗಳು ಆಗಿರಬಹುದು ಅಥವಾ ಇಲ್ಲದಿರಬಹುದು. ಸ್ತ್ರೀಪುರುಷರ ಸಮಾಗಮವು ಗರ್ಭಾಧಾನ ಉದ್ದೇಶಿತ ಆಗಿಲ್ಲದಿದ್ದರೂ ಋತುಕಾಲದಲ್ಲಿ ಶುಕ್ರ ಶೋಣಿತ (ಆರ್ತವ) ಸಂಯೋಗವಾದರೆ ಗರ್ಭಾಧಾನ ಉಂಟಾಗುತ್ತದೆ. ಆದರೆ ಆತ್ಮ ಸಂಯೋಗವು ಆ ಸಂದರ್ಭದಲ್ಲಿ ಉಂಟಾಗುವುದಿಲ್ಲ. ಇದರಲ್ಲಿ ಪ್ರವೇಶವಾಗುವ ಆತ್ಮಕ್ಕೆ ತನ್ನದೇ ಆದ ನಿರ್ಬಂಧವಿರುತ್ತದೆ. ಅದಕ್ಕಾಗಿ ಯಾವ ಸಂಕಲ್ಪ, ಸಂಸ್ಕಾರಾದಿಗಳಿಗೆ ಒಳಗಾಗದೆ ಋಣದ ನಿರ್ಬಂಧತೆಯಿಂದ ಸಾಮಾನ್ಯವಾಗಿ 3 ತಿಂಗಳ ನಂತರ ಯಾವಾಗಲಾದರೂ ಆತ್ಮ ಸಂಯೋಜನೆ ಆಗುತ್ತದೆ. ಸಾಮಾನ್ಯವಾಗಿ ಗರ್ಭಧರಿಸಿದ 89 ನೇ ದಿನದಿಂದ 110 ದಿನಗಳ ಒಳಗೆ ಆಗುತ್ತದೆ. ಈ ಸಂತಾನ ಪ್ರವೃತ್ತಿಯು ತನ್ನಿಂದ ತಾನೇ ಅಕಸ್ಮಾತ್ ಆಗಿ ಉಂಟಾಗುವುದರಿಂದ ಒಂದು ಪಶುವಿನಂತೆ ಬೆಳೆಯುತ್ತಾ ಹೋಗಿ ಒಂದು ಜೀವಿಯಾಗಿ ಮನುಷ್ಯರೂಪವನ್ನು ತಾಳುತ್ತದೆ. ಈ ವಿಧದ ಸಂತಾನವು ಅರಿಷ್ಟ, ವ್ಯಾಧಿಗಳನ್ನು ವಿಶೇಷವಾಗಿ ತನ್ನ ಪೂರ್ವ ಜನ್ಮಗಳ ಸ್ಮೃತಿಯಿಂದ ಹೊತ್ತು ತಂದು ಋಣಬಾಧೆಯನ್ನು ಉಂಟುಮಾಡುವ ಸ್ವರೂಪದ್ದಾಗಿರುತ್ತದೆ. ಇದನ್ನೇ ಆಯುರ್ವೇದದಲ್ಲಿ ಪೂರ್ವಜನ್ಮ ಕೃತಂ ಪಾಪಂ ವ್ಯಾಧಿರೂಪೇಣ ಭಾದ್ಯತೆ ಎಂದು ಹೇಳಲಾಗಿದೆ. 

ಬಹುತೇಕ ಸಂತಾನಗಳು ಆಕಸ್ಮಿಕವಾಗಿಯೇ ಆಗುವುದು ಸಾಮಾನ್ಯವಾಗಿರುವುದರಿಂದ ಸಾಮಾಜಿಕ ಹಿತ ದೃಷ್ಟಿಯಿಂದ ವೈಧ್ಯರು ಮತ್ತು ಪುರೋಹಿತರು ಉಪೇಕ್ಷೆ ಮಾಡುವುದು ತಪ್ಪಾಗುತ್ತದೆ. ಆದ್ದರಿಂದ ಗರ್ಭಧಾರಣೆ ಆಗಿದೆ ಎಂದು ತಿಳಿದ ನಂತರ ಸಂಸ್ಕಾರಗಳನ್ನು ಗರ್ಭಿಣಿಗೆ ಆಹಾರ-ವಿಹಾರ-ವಿಚಾರ-ವ್ಯವಹಾರ-ಮಾನಸಿಕವಾದ ಎಲ್ಲಾ ಕ್ರಿಯೆಗಳು ಮತ್ತು ಗರ್ಭಸ್ಥ ಶಿಶುವಿನ ಸಂಸ್ಕಾರಕ್ಕಾಗಿ ವೈದಿಕ ಚಿಂತನೆಯಲ್ಲಿ ಧೈವ ಪ್ರೇರಿತವಾಗಿ ಋಣ ಸಂಯೋಗದಿಂದ ಉಂಟಾಗುವ ಇಂತಹ ಸಂತಾನಗಳನ್ನು ಪುರುಷಸ್ಮರ ಅಥವಾ ಪುರುಷ ಪ್ರಯತ್ನಗಳಿಂದ ಸಂಸ್ಕರಿಸಿ ಒಂದು ಉತ್ತಮ ಪ್ರಜೆಯ ನಿರ್ಮಾಣದ ಬದ್ಧತೆಯನ್ನು ಪೂರೈಸಬೇಕು. ಈ ದೃಷ್ಟಿಯಿಂದ ಕೆಲವು ವಿಶೇಷ ನಿರ್ದೇಶನವನ್ನು ನೀಡಲಾಗಿದೆ.

3ನೇ ತಿಂಗಳ ನಂತರ ಯಾವಾಗಲಾದರೂ ಉಂಟಾಗಬಹುದಾದ ಆತ್ಮ ಸಂಯೋಜನೆಯನ್ನು ನಾಡಿ ಪರೀಕ್ಷೆಗಳ ಮೂಲಕ ನೋಡಿ ಯಾವತ್ತಿನ ದಿನ ಈ ಕ್ರಿಯೆಯು ಆಯಿತು ಎಂದು ತಿಳಿದುಕೊಳ್ಳಬೇಕು. ನಿಖರತೆಯಿಂದ ಅದು ತಿಳಿದರೆ ಸೂಕ್ತವಾದ ಕೆಲವು ಪ್ರಕ್ರಿಯೆಗಳ ಮೂಲಕ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ಪ್ರಯತ್ನ ಪಡಬಹುದು. ಅಂದರೆ ವಿರುದ್ಧತೆಯಿಂದಾಗಿ ದುಷ್ಟ ಸಂತಾನಾದಿಗಳನ್ನು ದೇಶ ಹಾಗೂ ಸಮಾಜದ ಹಿತ ದೃಷ್ಟಿಯಿಂದ ತಡೆಗಟ್ಟುವುದು. ಈ ಆತ್ಮ ಸಂಯೋಜನೆಯನ್ನು ಗಭಸ್ತಿ ಎನ್ನುವ ಪ್ರವೃತ್ತಿ ಎಂದು ಕರೆಯಲಾಗುತ್ತದೆ. ಅಂದರೆ ಮೂಳೆಯು ಸಂಯೋಜನೆಯಾಗುವ ಪ್ರಕ್ರಿಯೆ. ಈ 22 ದಿನಗಳಲ್ಲಿ ಆತ್ಮ ಸಂಯೋಜನೆಯು ಆಗದಿದ್ದರೆ ಗರ್ಭಪಾತ ಉಂಟಾಗುತ್ತದೆ. ಯಾವ ದಿವಸ ಆತ್ಮ ಸಂಯೋಜನೆ ಉಂಟಾಗುತ್ತದೆ ಎನ್ನುವುದನ್ನು ಹಸ್ತದಲ್ಲಿನ ನಾಡಿ ಬಡಿತವನ್ನು ಅಧ್ಯಯನ ಮಾಡಿ ತಿಳಿಯಬಹುದು. ಇದು ನಾಡಿ ಜ್ಞಾನ ಹಾಗೂ ಅನುಭವವುಳ್ಳ ವೈಧ್ಯರು ಅಥವಾ ಅನುಭವಿಗಳು ಮಾಡಬಹುದು. ತಿಳಿದು ಮುಂದೆ ಮಾಡಬಹುದಾದ ಕೆಲವು ಪ್ರಯತ್ನಗಳು ವಿಶೇಷವಾಗಿ ಗರ್ಭಸ್ಥ ಶಿಶುವು ಪೂರ್ವಜ್ಞಾನದಿಂದಾಗಿ ಋಣ ಉಂಟಾಗಿರುತ್ತದೆ. ಇದರ ಅಭಿವ್ಯಕ್ತಿಯು ತಾಯಿಯಲ್ಲಿ ಕಂಡು ಬರುತ್ತದೆ. ಇದನ್ನೇ ಬಯಕೆ ಎಂದು ಕರೆಯಲಾಗುತ್ತದೆ. ಈ ಬಯಕೆಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ಸೂಕ್ತವಾದ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಆಕಸ್ಮಿಕ ಸಂತಾನದ ಗರ್ಭವು ವಿಶೇಷವಾದ ಋಣ ಸಂಬಂಧಿ ಪ್ರಕ್ರಿಯೆಯಾದುದರಿಂದ ವ್ಯಾಧಿಗಳ ಉಪದ್ರವ ವಿಶೇಷವಾಗಿ ಕಂಡುಬರುತ್ತವೆ. ಹೃದಯ ಸಂಬಂಧಿ ರೋಗಗಳನ್ನು ಉದಾಹರಿಸಬಹುದು. ಬಯಕೆಗಳ ಪೂರೈಕೆಯನ್ನು ಉಪಾಯದಿಂದ ಅರಿತು ಮಾಡಬೇಕಾಗುತ್ತದೆ. ಋಣ ಸಂಬಂಧಿ ವ್ಯಾಧಿಯ ತೀವ್ರತೆಯನ್ನು ಜಾತಕರ್ಮ ಸಂಸ್ಕಾರದಲ್ಲಿ ತಕ್ಕಮಟ್ಟಿಗೆ ಸರಿಪಡಿಸಬಹುದು. ಶಿಶುವಿನ ಜನ್ಮದ ನಂತರ ಸದ್ಭಾವದಿಂದ ಸಮೂಹದಲ್ಲಿ ಬೆಳೆಸುವುದಿ ಉತ್ತಮ. ಮಾನಸಿಕವಾಗಿ ದ್ವೇಷವು ಯಾವುದೇ ರೀತಿಯಿಂದ ಉಂಟಾಗದಂತೆ ಮತ್ತು ಪ್ರಬಲವಾಗಿ ಬೇರೂರದಂತೆ ಜಾಗರೂಕತೆ ವಹಿಸಬೇಕು. ದ್ವೇಷವು ಬಹುತೇಕ ಖಾಯಿಲೆಗಳಿಗೆ ಮೂಲ ಕಾರಣವಾಗಿರುತ್ತದೆ ಎಂಬ ಅರಿವಿನಿಂದ ಕಾರ್ಯ ಪ್ರವೃತ್ತರಾಗಿ ಸಾಮಾಜಿಕ ಜವಾಬ್ದಾರಿ ನಿರ್ವಹಣೆ ದೃಷ್ಟಿಯಿಂದ ಶಿಶುವು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಬೇಕು. ಸಾಮಾನ್ಯವಾಗಿ ಈ ಸಂತಾನ ಶಿಶುಗಳಲ್ಲಿ 12 ರೀತಿಯ ಶಾರೀರಿಕ ನ್ಯೂನತೆಗಳು ಮತ್ತು 7 ರೀತಿಯ ಮಾನಸಿಕ ನ್ಯೂನತೆಗಳು ಕಂಡುಬರುತ್ತವೆ. ಆದ್ದರಿಂದ ಜಾತಕರ್ಮ ಸಂಸ್ಕಾರವು ಅತ್ಯಂತ ಅಗತ್ಯವಾದ ಕಾರ್ಯವಾಗಿರುತ್ತದೆ. ಈ ಶಿಶುಗಳ ಜಾತಕವನ್ನು ಅಧ್ಯಯನ ಮಾಡಿ ಈ ಸಂದರ್ಭದಲ್ಲಿ ಸೂಕ್ತವಾದ ಪ್ರಕ್ರಿಯೆಗಳನ್ನು ಮಾಡುವುದರಿಂದ ಮುಂದೆ ಆಗಬಹುದಾದ ಅನೇಕ ಸಮಸ್ಯೆಗಳ ನಿವಾರಣೆ ಆಗುವುದಲ್ಲದೆ ಮುಂದಿನ ಸಂತಾನಗಳು ಸರಿಯಾಗುವಂತೆ ಮಾಡಬಹುದು.


                               -:ಪೈಶಾಚಿಕ ಸಂತಾನ:-


ಈ ಸಂತಾನವನ್ನು ಕೇವಲ ಸಂಖ್ಯಾವೃದ್ಧಿಯ ದೃಷ್ಟಿಯಿಂದಲೇ ಮಾಡುವ ಪ್ರವೃತ್ತಿಯಾದುದರಿಂದ ಇದನ್ನು ಪೈಶಾಚಿಕವೆಂದು ಕರೆಯಲಾಗಿದೆ. ಇದರಲ್ಲಿ ಆತ್ಮ ಸಂಯೋಗವು 5 ನೇ ತಿಂಗಳಿನ ನಂತರದಲ್ಲಿ 7 ನೇ ತಿಂಗಳಿನವರೆಗೂ ಅಂದರೆ ಅಷ್ಟು ತಡವಾಗಿ ಉಂಟಾಗುತ್ತದೆ. ಬಲವೃದ್ಧಿಯು 5 ನೇ ತಿಂಗಳಿನ ನಂತರವೇ ಆಗುವುವು. ಈ ಸಂತಾನಗಳು ಬಹುತೇಕ ಸಮಾಜದ ಸಮಸ್ಯೆಯಾಗಿಯೇ ಉಳಿಯುತ್ತಾರೆ. ಆದ್ದರಿಂದ ಇದನ್ನು ಉಪೇಕ್ಷೆ ಮಾಡುವುದು ಸೂಕ್ತವಲ್ಲ. ವೈಧ್ಯನು ಮೊಸರನ್ನು ವಿಶೇಷವಾದ ಆಹಾರವನ್ನಾಗಿ ಗರ್ಭಿಣಿ ಸ್ತ್ರೀಗೆ ಕೊಡಬೇಕು. ಶಿಶುವಿಗೆ 6 ವರ್ಷ ತುಂಬುವವರೆಗೂ ಸಾಂಪ್ರದಾಯಿಕವಾಗಿ ಕೊಡುವ ಬಜೆ, ಗಜ್ಜುಗ, ಅಳಲೆಕಾಯಿ ಇವುಗಳನ್ನು ಮುಂದುವರೆಸಬೇಕು. ಅರಶಿನದ ಪ್ರಯೋಗ ಖಂಡಿತವಾಗಿಯೂ ಮಾಡಲೇಬೇಕಾದುದು. ವಿಧ್ಯೆಯಲ್ಲಿ ವಿಶೇಷವಾದ ಗಮನ ಅಗತ್ಯ. ಸತ್ಕರ್ಮಗಳನ್ನು ಸದಾಚಾರ ಪ್ರವೃತ್ತಿಯನ್ನು ವಿವಿಧರೀತಿಯಲ್ಲಿ ಬೋಧಿಸಬೇಕು. ಜ್ಞಾನವೃದ್ಧಿಗೆ, ನೈತಿಕ ಪ್ರಜ್ಞೆಗೆ ಅನುಕೂಲವಾದ ಶಿಕ್ಷಣವನ್ನು ನೀಡಬೇಕು.
ಪೈಶಾಚಿಕ ಸಂತಾನದಲ್ಲಿ ಅನೇಕ ವಿಕೃತಿಗಳು ಸಹಜವಾಗಿ ಉಂಟಾಗುತ್ತವೆ. ಅಂತಹ 7 ವಿಧವಾದ ವಿಕೃತಿಗಳನ್ನು ಗುರುತಿಸಲಾಗಿದೆ.

1) ರರಾಣ:- ಇದು ಹಿಂಸೆಯ ಪ್ರವೃತ್ತಿ. ಜೊತೆಯವರಿಗೆ, ಒಡಹುಟ್ಟಿದವರಿಗೆ, ಸಹಪಾಠಿಗಳಿಗೆ ವಿವಿಧ ರೀತಿಯಲ್ಲಿ ಸದಾ ಹಿಂಸೆಯನ್ನು ಕೊಡುವುದು. ಇದರ ಚಿಕಿತ್ಸೆಗಾಗಿ ಶವಾಹಾರವನ್ನು ಹೇಳಲಾಗಿದೆ. ಎಂದರೆ ಆಹಾರ ಪದಾರ್ಥಗಳನ್ನು ಪೂರ್ಣವಾಗಿ ಪರಿವರ್ತನಾ ರೂಪದಲ್ಲಿ ನೀಡುವುದು. ಉದಾಹರಣೆ:- ಧಾನ್ಯಗಳ ಹಿಟ್ಟು ಮಾಡಿ ಅದರಿಂದ ಆಹಾರ ತಯಾರಿಸುವುದು. ಇದನ್ನು ಅರಿಯದ ಮೂಢರು ಶವಾಹಾರ ಎಂದರೆ ಹೆಣವನ್ನೇ ತಿನ್ನುವುದು ಎಂದು ವ್ಯಾಖ್ಯಾನಿಸಬಹುದು, ಹುಷಾರ್!ರರಾಣ ಪ್ರವೃತ್ತಿಯ ಮಕ್ಕಳಿಗೆ ಪರಾಕ್ರಮ, ವೀರತ್ವಗಳ ಪ್ರಶಂಸೆ ಮಾಡಿ ಬೋಧನೆ ಮಾಡಬಾರದು. ಆದಷ್ಟು ಸಾಮೂಹಿಕವಾಗಿ ಕೊಡುವ ಒಂದೇ ರೀತಿಯ ಶಿಕ್ಷಣ ಸಾಧುವಲ್ಲ. ಸಾಧ್ಯವಾದರೆ ಶಾಲೆಗೆ ಕಳಿಸದೆ ಸರಿಯಾದ ಸಂಸ್ಕಾರ ಕೊಟ್ಟು ಮನೆಯಲ್ಲೇ ಬೆಳೆಸುವುದು ಒಳ್ಳೆಯದು. 

2)    ಋಜೀಕ:- ತಾನು ಹೇಳಿದ ಹಾಗೆಯೇ ನಡೆಯಬೇಕೆಂಬ ಪ್ರವೃತ್ತಿ (ಹಠ) ಫಲಿಸದಿದ್ದರೆ ಬೇರೆಯವರನ್ನು ಹಾಳು ಮಾಡುವುದೇ ಪ್ರವೃತ್ತಿಯಾಗುತ್ತದೆ. ಉದಾ:- ಶಕುನಿ. ಇಂತಹವರಿಗೆ ವಿಶೇಷ ಚಿಕಿತ್ಸೆ ಇಲ್ಲ.

3) ಮಂದತ್ವ:- ಯಾವುದೇ ವಿಶೇಷವಾದ ಪ್ರವೃತ್ತಿಗಳಿಲ್ಲದೆ ಸುಮ್ಮನೆ ಗರಬಡಿದಂತೆ ಕುಳಿತಿರುವುದು. ಸಾಮಾನ್ಯವಾಗಿ ಇಂತಹವರಿಗೆ ಮಂಕ, ಮದ್ದು, ಹೆಡ್ಡ, ಪೆದ್ದ ಎಂದು ಕರೆಯುತ್ತಾರೆ. ಸಾಮಾಜಿಕ ಸಮಸ್ಯೆ ಇಲ್ಲ. (60% ಸಂತಾನ)

4)    ಅವಾಸ:- ಇವರುಗಳಲ್ಲಿ ಮನುಷ್ಯರಲ್ಲಿ ದ್ವೇಷ, ಪಶು, ಪ್ರಾಣಿಗಳಲ್ಲಿ ವಿಶೇಷ ಆಸ್ಥೆ ಇರುತ್ತದೆ. ಇವರು ಪಲಾಯನ ಪ್ರವೃತ್ತರಾಗಿರುತ್ತಾರೆ.

5)    ಧೀರವಸ:- ತೀರಾ ಪ್ರಾಮಾಣಿಕತೆ. ಇದೊಂದು ವಿಶೇಷ ವಿಕೃತಿಯಲ್ಲ. ಸಾಮಾನ್ಯವಾಗಿ ಮನೆಗೆ ಮಾರಿ ಪರರಿಗೆ ಉಪಕಾರಿ ಎಂದು ಕರೆಯಲ್ಪಡುವ ವ್ಯಕ್ತಿಗಳಾಗಿರುತ್ತಾರೆ. ಸಮಾಜಕ್ಕೆ ಸಮಸ್ಯೆ ಇಲ್ಲ.

6)    ಕುವಿತ್ತಾ:- ಈ ಸಂತಾನದಲ್ಲಿ ವ್ಯವಸ್ಥೆಗೆ ವಿರುದ್ಧವಾದ ಪ್ರವೃತ್ತಿ, ಅಪರಾಧ ಪ್ರವೃತ್ತಿ ಇದ್ದು ಶಿಶುಪಾಲ, ದಂತವಕ್ತ್ರ ಇವರುಗಳಂತೆ ತಾನು ಮಾಡುವುದು ಅಪರಾಧವೇ ಅಲ್ಲ ಎನ್ನುವ ಮನೋಭಾವನೆಯುಳ್ಳವರು. ಸಮಾಜಕ್ಕೆ ಅಪಾಯಕಾರಿಯಾದ ಇಂತಹ ಪ್ರವೃತ್ತಿಯವರನ್ನು ಸಮಾಜದಿಂದ ದೂರ ಕಾಡಿಗೆ ಬಿಡುವ ವ್ಯವಸ್ಥೆ ಸೂಕ್ತ ಎಂದು ಹೇಳಲ್ಪಟ್ಟಿದೆ. ಹೀಗೆ ಕಾಡಿಗೆ ಬಿಟ್ಟ ಪುರಾಣಿಕ ವ್ಯಕ್ತಿ ವಾಲ್ಮೀಕಿ.

7) ಸುಶ್ಮಿನಿಂದ್ರ:- ಸದಾ ಇನ್ನೊಬ್ಬರಲ್ಲಿ ಸೇವೆಯಲ್ಲೇ ನಿರತರಾಗಿರುವ ಪ್ರವೃತ್ತಿ. ನಾಚಿಕೆ, ಮಾನ, ಮರ್ಯಾದೆ ಇವುಗಳು ಇವರಿಗೆ ಮಹತ್ತವಾದ ವಿಷಯವಲ್ಲ.


                           -:ವೈದಿಕ ಸಂತಾನ ಪ್ರವೃತ್ತಿಯ ಮಹತ್ವ:-ಜಗತ್ತಿನಲ್ಲಿ ಸಂತಾನ ಪ್ರವೃತ್ತಿಯು ಇಂದಿನ ಸಮಾಜದಲ್ಲಿ ಒಂದು ಪ್ರಜ್ಞಾ ಪೂರ್ವಕವಾಗಿ ಮನುಷ್ಯನು ಮಾಡದೇ ಇರುವ ಒಂದು ಕಾರ್ಯವಾಗಿರುತ್ತದೆ. ಬಹುತೇಕ ಯಾವ ನಿರ್ಬಂಧವೂ ಇಲ್ಲದೆ ಸ್ವೇಚ್ಛಾ ಪ್ರವೃತ್ತಿಯಲ್ಲಿಯೇ  ಯಾವ ಸಾಮಾಜಿಕ ಚಿಂತನೆ ಹೊಣೆ ಇಲ್ಲದೆ ಮನುಷ್ಯನು ಮಾಡುವ ಅತ್ಯಂತ ದೊಡ್ಡ ಕಾರ್ಯವಾಗಿರುತ್ತದೆ. ಇಲ್ಲಿ ಯಾವ ಸರ್ಕಾರವಾಗಲಿ, ಶಾಸನಗಳಾಗಲಿ, ಧರ್ಮಗಳಾಗಲಿ ನಾಗರಿಕ ಪ್ರಪಂಚದ ಇಂದಿನ ವಿಜ್ಞಾನ ತಂತ್ರಜ್ಞಾನ ಅವಲಂಬಿತ ಸಮಾಜದಲ್ಲಿ ಸಮಾಜಕ್ಕೆ ನೀಡುವ ಸಂತಾನವು ಯಾವ ಗುಣಮಟ್ಟದಲ್ಲಿರಬೇಕು ಎಂಬ ಯಾವ ತತ್ವವನ್ನು ಪರಿಗಣಿಸುವುದಿಲ್ಲ. ಬಹುಶಃ ಗುಣ ಅವಗುಣವನ್ನು ನೋಡದೆ ಮಾಡುವ ಒಂದೇ ಒಂದು ಕಾರ್ಯ ಸಂತಾನ ಪ್ರವೃತ್ತಿಯೆಂದು ಹೇಳಿದರೆ ತಪ್ಪಾಗುವುದಿಲ್ಲ. ಪ್ರಾಚೀನ ಭಾರತೀಯ ಸಂಸ್ಕೃತಿಯ ಮೂಲವಾದ ಈ ವೈದಿಕ ವಿಜ್ಞಾನ ನಮ್ಮ ಸಮಾಜದಲ್ಲಿಯೂ ಇಲ್ಲವೆಂದೇ ಹೇಳಬೇಕಾಗುತ್ತದೆ. ನಮ್ಮ ಸಮಾಜದ ಪ್ರಮುಖ ಭಾಗವಾಗಿರುವ ಮತ, ಧರ್ಮ, ಜಾತಿ ಇತ್ಯಾದಿಗಳ ಸ್ವಯಂಘೋಷಿತ ಮಠ, ಗುರು, ಸಂಸ್ಥೆಗಳು  ಈ ವಿಷಯದಲ್ಲಿ ಯಾವ ಪ್ರಕ್ರಿಯೆಯನ್ನೂ ಇಟ್ಟುಕೊಂಡಿರುವುದು ಕಂಡು ಬರುವುದಿಲ್ಲ. ಇದೊಂದು ದೊಡ್ಡ ವಿಪರ್ಯಾಸವೇ ಸರಿ. ವಾಸ್ತವವಾಗಿ ಉತ್ತಮ ಸಂತಾನ ಎಲ್ಲರಿಗೂ ಬೇಕಾದ ಒಂದು ಅತ್ಯಂತ ಮಹತ್ವದ ವಿಷಯವಾಗಿರುತ್ತದೆ. ಸಂಸ್ಕೃತಿಯ ನಾಶ ಮಾಡುವ ಪ್ರಯತ್ನದಲ್ಲಿ ಇದು ಅಳಿಸಿ ಹೋಗಿರುವುದು ಒಂದು ದುರ್ದೈವ. ಬಹುಶಃ ಈ ವಿಚಾರದಲ್ಲಿ ಒಂದು ದೊಡ್ಡ ಅಜ್ಞಾನ ಅಂಧಕಾರ ಕವಿದಿರುವುದೇ ಇದಕ್ಕೆ ಕಾರಣ. ಒಂದು ದೊಡ್ಡ ಆಂದೋಲನವನ್ನು ನಮ್ಮ ಸಮಾಜದಲ್ಲಿ ಜಾತಿ, ಪಂಥ, ಮತಗಳನ್ನು ಮೀರಿ ಆಗಬೇಕಾದುದು ಅನಿವಾರ್ಯ.

ಐಚ್ಛಿಕ ಸಂತಾನ ಪ್ರವೃತ್ತಿಯ ತಾತ್ವಿಕ ವಿವೇಚನೆ


ಐಚ್ಛಿಕ ಸಂತಾನವನ್ನು ಶ್ರೇಷ್ಠವಾದ ಸಂತಾನ ಉತ್ಪತ್ತಿಯ ಪ್ರಜ್ಞಾಪೂರ್ವಕ ವೈದಿಕ ಸಂಶೋಧಿತ ವಿಜ್ಞಾನ ಎಂದು ಕರೆಯುವುದು ಸೂಕ್ತ. ಈ  ಇಡೀ ಪ್ರಕ್ರಿಯೆಯು ಶರೀರದ ಮತ್ತು ಮನಸ್ಸಿನ ಅತ್ಯಂತ ಸೂಕ್ಷ್ಮ ಸಂವೇದನಾಶೀಲ ಅಂಗ ಪ್ರತ್ಯಂಗಗಳ ರಚನೆ-ಕ್ರಿಯೆಗಳನ್ನು ಅವಲಂಬಿಸಿರುತ್ತದೆ. ಮನುಷ್ಯನ ಬಾಯಿ ಮತ್ತು ಅದರ ಒಳಗಿನ ವಿಶಿಷ್ಟ ರಚನೆಗಳು ಈ ತತ್ವ ವಿವೇಚನ ದೃಷ್ಟಿಯಿಂದ ವಿವರಿಸಲ್ಪಟ್ಟಿರುತ್ತವೆ. ಅದರಲ್ಲಿ ಬಾಯಿಯ ಮೇಲಿನ ಅಂಗಳದ ಹಿಂಭಾಗದಲ್ಲಿ ಅಂದರೆ ತಾಲುವಿನ ಮೇಲೆ ಇರುವ 7 ಗ್ರಂಥಿಗಳು ಬಹಳ ವಿಶೇಷವಾದ ಪಾತ್ರವನ್ನು ನಿರ್ವಹಿಸುತ್ತವೆ. ಇವುಗಳನ್ನು ಆಯುರ್ವೇದ ಶಾಸ್ತ್ರದಲ್ಲಾಗಲಿ, ಕಾಮಶಾಸ್ತ್ರದಲ್ಲಾಗಲಿ, ಆಧುನಿಕ ವಿಜ್ಞಾನದಲ್ಲಾಗಲಿ ವಿವರಿಸಲು ಸಾಧ್ಯವಾದಂತೆ ಕಂಡು ಬರುವುದಿಲ್ಲ. ಈ 7 ಗ್ರಂಥಿಗಳ ಹೆಸರುಗಳು ಕೆಳಕಂಡಂತೆ ಇರುತ್ತವೆ.

1)    ಸದಸ್ವ
2)    ಮದ
3)    ಸದ್ವಸ್ಯ
4)    ಪೀತಾ
5)    ಸಖ್ಯಾ
6)    ನಿಷಧಿ
7)    ಪುರ (ದೇಹ, ಹೃದಯ)

ಎಂದು ಹೇಳಲಾಗಿದೆ. ಈ 7 ಗ್ರಂಥಿಗಳು ಸೃಷ್ಟಿ ಪ್ರಕ್ರಿಯೆಗೆ ಅತ್ಯಂತ ಮಹತ್ವದ ಮೂಲ ಕಾರಣಗಳಾಗಿರುತ್ತವೆ. ಇವುಗಳು ಸ್ವಭಾವದಿಂದ ನಿರಂತರವಾಗಿ ಹೊಸತನ್ನು ಅನ್ವೇಷಣೆ ಮಾಡುತ್ತಲೇ ಅತ್ಯಂತ ಚಂಚಲವಾಗಿ ಪ್ರವರ್ತಿಸುತ್ತಾ ಯಾವುದಾದರು ಪ್ರಕ್ರಿಯೆಯು ಅತ್ಯಂತ ಎತ್ತರಕ್ಕೆ ಅಂದರೆ ತುರೀಯ ಅವಸ್ಥೆಗೆ ಹೋದಾಗ ಸೃಷ್ಟಿಗೆ ಪ್ರಚೋದಕವಾಗುತ್ತದೆ. ಇವುಗಳ ಪ್ರವೃತ್ತಿಯ ವೇಗವನ್ನು ಒಂದು ಕ್ಷಣದಲ್ಲಿನ 77  ಭಾಗದಲ್ಲಿ 1 ಅಂಶದಲ್ಲಿಯೂ ಸ್ಥಿರತೆಯಿಲ್ಲದ ವೇಗದಲ್ಲಿ ಚಲಿಸುತ್ತವೆಂದು ನಿರ್ಧರಿಸಲಾಗಿದೆ. ಕಾಂತೀಯ ತರಂಗ ಸ್ವರೂಪದಲ್ಲಿರುವ ಸೂಕ್ಷ್ಮ ಶಕ್ತಿ ಎಂದು ಹೇಳಲ್ಪಟ್ಟಿದ್ದು ಇಂದ್ರಿಯ ಪ್ರವೃತ್ತಿಯ ಪೂರ್ವದಲ್ಲಿ ಸಂಕಲ್ಪಿತವಾಗಿ ಇಂದ್ರಿಯ ಪ್ರವೃತ್ತಿಯನ್ನು ಪ್ರಚೋದಿಸಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತವೆ. ಇದನ್ನು ಇಂದ್ರಿಯವೆಂದೇ ಗುರುತಿಸುತ್ತಾರೆ. ಆಯುರ್ವೇದದಲ್ಲಿ ಸಾಂಖ್ಯ ಸಿದ್ಧಾಂತಾನುಸಾರ ಇಂದ್ರಿಯಗಳನ್ನು ಇಂದ್ರಿಯ-ಇಂದ್ರಿಯಸ್ಥಾನವೆಂದು 2 ವಿಭಾಗ ಮಾಡಿ ಸ್ಥಾನಗಳನ್ನು ಪಾಂಚಭೌತಿಕ ಶರೀರದ ಭಾಗವಾಗಿಯೂ ಇಂದ್ರಿಯಗಳನ್ನು ಗುಣಾತ್ಮಕವಾದ ಶಕ್ತಿರೂಪ ಭೂತಗುಣವೆಂದು ವಿವರಿಸಲಾಗಿದೆ.

ಮನುಷ್ಯನ ಶರೀರದಲ್ಲಿ 330 ಪ್ರಚೋದಕಕಾರಕವಾದ ಅಂಗಗಳು, ಭಾಗಗಳು ಇರುತ್ತವೆ. ಈ ವಿವಿಧ ಪ್ರಚೋದಕ ಸ್ಥಾನಗಳನ್ನು ಏಕಕಾಲದಲ್ಲಿ ಪ್ರಚೋದಿಸುವಂತೆ ಮಾಡಿ ತನ್ಮೂಲಕ ಸಾಮಾನ್ಯ ಕಾಮಪ್ರಕ್ರಿಯೆ ಉಂಟಾಗುವುದು ಅತ್ಯಂತ ಶ್ರೇಷ್ಠವಾದ ಸಂತಾನ ಪ್ರಕ್ರಿಯೆ. ಆದರೆ ಈ ಸಾಧ್ಯತೆ ಕೋವಲ ಯೋಗಮಾರ್ಗದಿಂದ ಸಾಧ್ಯವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಸಂಪೂರ್ಣ ಪ್ರಚೋದಿತವಾದ ಈ ಪ್ರಕ್ರಿಯೆಯನ್ನು ಭ್ರೂ ಮಧ್ಯದ ಆಜ್ಞಾ ಚಕ್ರಕ್ಕೆ ಪ್ರವಹಿಸಿ ಸಂಪೂರ್ಣ ನಿಯಂತ್ರಿತ ಕಾಮ ಪ್ರಕ್ರಿಯೆ ಉಂಟಾಗುವುದು ಅತ್ಯುತ್ತಮ ಐಚ್ಛಿಕ ಸಂತಾನ ಪ್ರಕ್ರಿಯೆ ಎಂದೆನಿಸುವುದು. ಉಳಿದಂತೆ ವೈದಿಕ ವಿಧಿಯನ್ನು ಅನುಸರಿಸಿ ಸಾಮಾನ್ಯ ಗೃಹಸ್ಥ ಜೀವನದ ವಿವಾಹ ಪೂರ್ವ-ವಿವಾಹ-ಗರ್ಭಾಧಾನ ಸಂಸ್ಕಾರಗಳು ಐಚ್ಛಿಕ ಸಂತಾನ ಪ್ರಕ್ರಿಯೆಗಳಿಂದ ಸ್ವಾಭಾವಿಕ ಕಾರಣಗಳಿಂದ ಪ್ರಚೇದನ ಕ್ರಿಯೆಯು ಮೇಲೆ ಹೇಳಿದ 7 ಗ್ರಂಥಿಗಳ ಸಂಯತ್ ಪ್ರಚೋದನೆಯ ಸಹಾಯದಿಂದ ಉಂಟಾಗಿ ಉತ್ತಮ ಸಂತಾನ ಉತ್ಪತ್ತಿಯ ನಿರ್ವಹಣೆಯು ಸಾಧ್ಯವಾಗುತ್ತದೆ. ಭಾರದ್ವಾಜರು ಪಶು ಸ್ವರೂಪದಲ್ಲಿ ನಿರ್ಮಾಣವಾಗುವ ಮಾಂಸ ಕಲಲವನ್ನು ವಿಶಿಷ್ಠವಾಗಿ ಹೊಲೆಯುವ ಪ್ರಕ್ರಿಯೆಯಿಂದ ಒಂದು ದೈವತ್ವದ ಶಿಶುವಿನ ಸೃಷ್ಟಿ ಸಾಧ್ಯ ಎಂದು ಹೇಳಿರುತ್ತಾರೆ. 

|| ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಾಂ ನ್ಯಾಯೇನ ಮಾರ್ಗೇಣ ಮಹಿಂ ಮಹೀಷಾಃ
ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ ಲೋಕಾಃ ಸಮಸ್ತಾಃ ಸುಖಿನೋ ಭವಂತು |
ಕಾಲೇ ವರ್ಷತು ಪರ್ಜನ್ಯಃ, ಪೃಥಿವೀ ಸಸ್ಯ ಶಾಲಿನೀ, ದೇಶೋಯಂ ಕ್ಷೋಭ ರಹಿತಃ
ಸಜ್ಜನಾಃ ಸಂತು ನಿರ್ಭಯಾಃ, ದುರ್ಜನಾಃ ಸಂತು ಸಜ್ಜನಾಃ, ಸಮಸ್ತ ಸನ್ಮಂಗಳಾನಿ ಭವಂತು ||

- ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದ ಸ್ವಾಮೀಜಿಯವರ ಆಯುರ್ವೇದ ಪಾಠವನ್ನು
ತಮ್ಮ ಅನುಭವ ಸಾರ ಸೇರಿಸಿ ಲೇಖಿಸಿದವರು ಡಾ|| ಬಿ.ವಿ. ಕುಮಾರಸ್ವಾಮಿ

No comments:

Post a Comment