Thursday, 30 October 2014

ಸಿರಿಭೂವಲಯದ ಕಿರು ಪರಿಚಯ

ಸಿರಿಭೂವಲಯದ ಕಿರು ಪರಿಚಯ೧. ಕನ್ನಡ ಭಾಷಾಬೆಳವಣಿಗೆಯ ವಿಚಾರದಲ್ಲಿ ನಮ್ಮ ಇಂದಿನ ಅಭಿಪ್ರಾಯಗಳನ್ನು ಇದು ಎಷ್ಟೇ ತಲೆಕೆಳಗು ಮಾಡಿದರೂ, ಇದೊಂದು ಆಧುನಿಕ ಕೃತಿ ಎಂದು ಸಾಬೀತು ಪಡಿಸುವವರೆವಿಗೂ ಕನ್ನಡ ಸಾಹಿತ್ಯ ಹಾಗೂ ಕನ್ನಡ ಭಾಷಾಚರಿತ್ರೆಗೆ ಸಂಬಂಧಿಸಿದಂತೆ ಇದು ಪ್ರಾಚೀನ ಕೃತಿಗಳಲ್ಲಿ ಒಂದು.

೨. ಸಂಸ್ಕೃತ, ಪ್ರಾಕೃತ, ತಮಿಳು ಮತ್ತು ತೆಲುಗು ಭಾಷೆಗಳ ೯ನೇ ಶತಮಾನದ ಚರಿತ್ರೆಯ ವಿಚಾರದಲ್ಲಿ ಇದು ಕಣ್ತೆರಿಸುವ ಸಾಧನವಾಗಿದೆ.

೩. ಭಾರತೀಯ ತತ್ವಶಾಸ್ತ್ರ ಹಾಗೂ ಮತ ಸಂಪ್ರದಾಯದ ಅಧ್ಯಯನದಲ್ಲಿ - ವಿಶೇಷವಾಗಿ ಜೈನ ಸಂಪ್ರದಾಯದ ಅಧ್ಯಯನದಲ್ಲಿ ಇಂದಿನ ಭಾರತೀಯ ದೃಷ್ಟಿಕೋನದ ಬೆಳವಣಿಗೆಗೆ ಕ್ರಾಂತಿಕಾರಕವಾದ ಹೊಸ ಸಾಮಗ್ರಿಯನ್ನು ಇದು ಒದಗಿಸುತ್ತದೆ.

೪. ಮೈಸೂರಿನ ಅಮೋಘವರ್ಷ ಹಾಗೂ ಗಂಗ ವಂಶದ ರಾಜರ ಆಳ್ವಿಕೆಯ ವಿಚಾರವಾಗಿ ಈ ಗ್ರಂಥದಲ್ಲಿರುವ ಉಲ್ಲೇಖವು ಭಾರತೀಯ ಹಾಗೂ ಕರ್ನಾಟಕದ ರಾಜಕೀಯ ಚರಿತ್ರೆಗೆ ನೂತನ ಸಾಮಗ್ರಿಯನ್ನೊದಗಿಸುತ್ತದೆ.

೫. ಭಾರತೀಯ ಗಣಿತಶಾಸ್ತ್ರದ ಚರಿತ್ರೆಗೆ ಇದೊಂದು ಪ್ರಮುಖ ದಾಖಲೆ. ಭಾರತೀಯರು ೯ನೇ ಶತಮಾನದಲ್ಲೇ- ಅದಕ್ಕಿಂತ ಶತಮಾನಗಳಷ್ಟು ಹಿಂದಿನಿಂದ ಅಲ್ಲವಾದರೂ- ಗಣಿತಶಾಸ್ತ್ರದ ಸ್ಥಾನ ನಿರ್ಣಯದಲ್ಲಿ (Place value) ಪ್ರವೀಣರಾಗಿದ್ದುದನ್ನು ವೀರಸೇನನ ಧವಳಟೀಕೆಯ ಇತ್ತೀಚಿನ ಅಧ್ಯಯನಗಳಿಂದ ಕಾಣಬಹುದಾಗಿದೆ. (ಮುಂದಿನ ಕೆಲವು ವಾಕ್ಯಗಳಲ್ಲಿ ಗಣಿತಶಾಸ್ತ್ರಕ್ಕೆ ಸಂಬಂಧಿಸಿದ ವಿಚಾರಗಳನ್ನು ಸೂಚಿಸಿ, ಕುಮುದೇಂದುವು ವೀರಸೇನನಿಗಿಂತಲೂ ಮುಂಚೂಣಿಯ ಪ್ರತಿಭಾಶಾಲಿ ಎಂಬ ಪ್ರಶಂಸೆ ನೀಡಿದ್ದಾರೆ)

೬. ಭೌತಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ, ಆಯುರ್ವೇದ, ಪ್ರಾಣಿಶಾಸ್ತ್ರ, ಪಶುವೈದ್ಯಶಾಸ್ತ್ರ, ಖಗೋಳಶಾಸ್ತ್ರ ಇತ್ಯಾದಿ ಭಾರತೀಯ ನೈಸರ್ಗಿಕ ವಿಜ್ಞಾನದ ಅಧ್ಯಯನದಲ್ಲಿ ಇದು ಪ್ರಮುಖವಾದದು. ೯ನೇ ಶತಮಾನದಷ್ಟು ಹಿಂದೆಯೇ- ಅದಕ್ಕಿಂತ ಹಿಂದಲ್ಲವಾದರೂ- ಭಾರತವು ಹೇಗೆ ಅಭಿವೃದ್ಧಿ ಹೊಂದಿತ್ತು ಎಂಬುದನ್ನು ಇದು ತೋರಿಸುತ್ತದೆ.

೭. ಲಲಿತ ಕಲೆಗಳಾದ ವಾಸ್ತುಶಿಲ್ಪ, ಮೂರ್ತಿಶಿಲ್ಪ, ಪ್ರತಿಮಾ ಲಕ್ಷಣ ವಿಜ್ಞಾನ, ವರ್ಣ ಚಿತ್ರಕಲೆ ಮುಂತಾದುವು ಹೇಗೆ ಅಭಿವೃದ್ಧಿ ಹೊಂದಿತ್ತು ಎಂಬುದನ್ನು ಇದು ತೋರಿಸುತ್ತದೆ.

೮. ಸಾಮಾನ್ಯ ಪಾಠವಾವುದೆಂದು ನಿಶ್ಚಿತವಾಗಿ ಹೇಳಲಾಗದ ರೀತಿಯಲ್ಲಿ ಈಚಿನ ಕೆಲವರ ಪ್ರಕ್ಷಿಪ್ತ ಭಾಗಗಳಲ್ಲಿ ಮುಳುಗಿ ಹೋಗಿರುವ ಮಹಾಭಾರತ, ಹಾಗೂ ಭಗವದ್ಗೀತೆಯ ಪಾಠಕ್ರಮದಲ್ಲಿ ವಿಶೇಷ ಗಮನ ಹರಿಸಬೇಕು. ಹಲವಾರು ಕಾವ್ಯಗಳನ್ನು ಗಣಿತಾತ್ಮಕವಾಗಿ ಅಂಕಾಕ್ಷರ ಸಂಯೋಗದಿಂದ ಬಂಧಿಸಿಡುವ ಒಂದು ಸಾರ್ವತ್ರಿಕ ಯೋಜನೆಯನ್ನು ರೂಪಿಸುವ ಅಸಾಮಾನ್ಯ ಪ್ರತಿಭೆಯನ್ನು ಹೊಂದಿರಲು ಯಾರಿಗೆ ಸಾಧ್ಯ? ಕುಮುದೇಂದುವಿನ ಹೇಳಿಕೆಯಂತೆ ಐದು ಭಾಷೆಗಳಲ್ಲಿ ಭಗವದ್ಗೀತೆಯ ಎಂಟು ಹತ್ತು ವ್ಯಾಖ್ಯಾನಗಳಿವೆ. ಮಹಾಭಾರತಕ್ಕೆ ಸಂಬಂಧಿಸಿದಂತೆ ವಿಮರ್ಶಾತ್ಮಕವಾದ ಆವೃತ್ತಿಯನ್ನು ಹೊರತರಲು ಪುಣೆಯ ಭಂಡಾರ್ಕರ್ ಸಂಸ್ಥೆಯವರು ಕಳೆದ ಇಪ್ಪತ್ತೈದಕ್ಕೂ ಹೆಚ್ಚು ವರ್ಷಗಳಿಂದ ಶ್ರಮಿಸುತ್ತಿದ್ದಾರೆ. ಮಹಾಭಾರತದ ಮೂಲ ತಿರುಳಾದ ಜಯಾಖ್ಯಾನ ಸಂಹಿತೆಯನ್ನು ಕೊಡುವುದಾಗಿ ಭೂವಲಯವು ಬಹಿರಂಗ ಘೋಷಣೆ ಮಾಡಿದೆ. ಈಗ ಅಂಗೀಕೃತವಾಗಿರುವ ಋಗ್ವೇದ ಸಂಹಿತೆಗಿಂತ ಸಂಪೂರ್ಣ ಬೇರೆಯದಾದ ಮೂರು ಕ್ರಮಗಳನ್ನು ಇದು ನೀಡುತ್ತದೆ. ಭಗವದ್ಗೀತೆ, ಮಹಾಭಾರತ ಮತ್ತು ಋಗ್ವೇದ ಹಾಗೂ ರಾಮಾಯಣವು ಭಾರತೀಯ ಸಂಸ್ಕೃತಿಯ ಅಧ್ಯಯನಕ್ಕೆ ಮೂಲಭೂತ ಸಾಹಿತ್ಯವೆಂದು ಪರಿಗಣಿತವಾಗಿದೆ. (ಕುಮುದೇಂದುವಿನ ಕಾವ್ಯದಲ್ಲಿ ರಾಮಾಯಣವೂ ಕೂಡ ಅಂತರ್ಗತವಾಗಿದೆ)

೯. ಸಾಮಾನ್ಯ ಆಸಕ್ತಿಯು ಈ ಕೃತಿಗಳೊಂದಿಗೆ ಉಮಾಸ್ವಾತಿಯ ತತ್ವಾರ್ಥಾದಿಗಮ ಸೂತ್ರಗಳು, ಸಮಂತಭದ್ರನ ಗಂಧ ಹಸ್ತಿ ಮಹಾಭಾಷ್ಯ; ದೇವಾಗಮ ಸೂತ್ರ ಮುಂತಾದುಗಳು, ಕುಂದಕುಂದಾಚಾರ್ಯನ ಚೂಡಾಮಣಿ; ಸಮಯಸಾರ; ಪ್ರವಚನ ಸಾರ ಮುಂತಾದ ಕೃತಿಗಳು, ಪೂಜ್ಯಪಾದನ ಸರ್ವಾರ್ಥಸಿದ್ಧಿ, ಅಕಲಂಕ, ವೀರಸೇನ, ಜಿನಸೇನ ಮುಂತಾದ ದಿಗಂಬರ ಪಂಥದವರ ಕೃತಿಗಳು; ದಿಗಂಬರ ಪಂಥದವರು ಲುಪ್ತವಾಗಿ ಹೋದುವೆಂದು ಹೇಳುವ; ಆದರೆ ಶ್ವೇತಾಂಬರ ಪಂಥದವರು ಸಂರಕ್ಷಿಸಿದ್ದೇವೆಂದು ಹೇಳುವ ಹಲವಾರು ಕೃತಿಗಳು; ಸೂರ್ಯಪ್ರಜ್ಞಪ್ತಿ, ತ್ರಿಲೋಕಪ್ರಜ್ಞಪ್ತಿ, ಜಂಬೂದ್ವೀಪಪ್ರಜ್ಞಪ್ತಿ, ಮುಂತಾದ ತಾಂತ್ರಿಕ ಕೃತಿಗಳನ್ನು ಒಳಗೊಂಡಿದೆ.

೧೦. ಇಪ್ಪತೇಳು ವರ್ಣಮಾಲೆಗಳು ಹಾಗೂ ಹಲವಾರು ಭಾಷೆಗಳಿಗೆ ಸಂಬಂಧಿಸಿದ ಪ್ರಾಚೀನ ವಿಷಯಗಳ ಅಧ್ಯಯನ ದೃಷ್ಟಿಯಿಂದಲೂ ಈ ಕೃತಿಯು ಪ್ರಮುಖವಾದುದಾಗಿದೆ. ಸಂಕ್ಷಿಪ್ತವಾಗಿ ಹೇಳಬಹುದೆಂದರೆ, ಭಾರತೀಯ ಮತ್ತು ಜಾಗತಿಕ ಸಂಸ್ಕೃತಿಯ ಪರಿಚಯಕ್ಕೆ ಈ ಗ್ರಂಥದ ಅಧ್ಯಯನವು ಪ್ರಮುಖವಾದುದೆಂದರೆ ಅತಿಶಯೋಕ್ತಿಯಲ್ಲ. ಪ್ರಜ್ಞಾವಂತ ನಾಗರಿಕರಿಂದ ದೊರೆತ ಅತ್ಯಲ್ಪ ಉತ್ತೇಜನದಿಂದಲೇ ಈ ಗೂಡಾರ್ಥ ಕಂಡುಹಿಡಿಯುವ ಅತಿ ಕಠಿಣ ಕಾರ್ಯವನ್ನು ಸಂಪಾದಕರು ಕೈಗೊಂಡು ನಿಜವಾಗಿಯೂ ನಿಸ್ವಾರ್ಥದಿಂದ ದುಡಿಯುತ್ತಿದ್ದಾರೆ. ಜಗತ್ತಿನಾದ್ಯಂತ ಚದುರಿ ಹೋಗಿರುವ ಕೆಲವೇ ಮಂದಿ ವಿದ್ವಾಂಸರಿಂದ ಪರಿಗಣಿಸಲ್ಪಡಬಹುದಾದ ಮಹತ್ವ ಇವರದು. ಈ ಮಹತ್ವ ಪೂರ್ಣವಾದ ಕಾರ್ಯದ ವಿಚಾರವಾಗಿ ಪೂರ್ಣಪ್ರಮಾಣದ ಪ್ರಚಾರನೀಡದಿದ್ದರೆ, ಭಾರತೀಯ ಶಾಸ್ತ್ರಾಧ್ಯಯನ ಮಾಡುತ್ತಿರುವ ಇಂದಿನವರಿಗೆ ಹಾಗೂ ಮುಂದಿನ ಸಾಮಾನ್ಯ ಜನತೆಗೆ ಇದರ ಮಹತ್ವದ ಅರಿವಾಗುವುದು ಅಸಂಭವ.

(ಸುಧಾರ್ಥಿ ಹಾಸನ ಇವರ ಸರ್ವಭಾಷಾಮಯೀಭಾಷಾ ಸಿರಿಭೂವಲಯಸಾರ ಪುಸ್ತಕದಿಂದ ಆಯ್ದ ಲೇಖನ)
                                                                 - ದಿ|| ಡಾ. ಎಸ್. ಶ್ರೀಕಂಠ ಶಾಸ್ತ್ರಿಗಳು

 - 

No comments:

Post a Comment