Saturday, 1 November 2014

ಕನ್ನಡ ರಾಜ್ಯೋತ್ಸದ ಶುಭ ಸಂದರ್ಭದಲ್ಲಿ "ಆಶ್ರಮ ಧರ್ಮ ದೀಪಿಕಾ ಕೃತಿಯ" ಲೋಕಾರ್ಪಣಾ ಸಮಾರಂಭ


-: ಲೋಕಾರ್ಪಣ ಸಮಾರಂಭ :-

ಸ್ಥಳ : ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಾಲಯದ ಪ್ರಾಂಗಣ

ದಿನಾಂಕ : ೦೧-೧೧-೨೦೧೪, ಶನಿವಾರ

ಸಮಯ: ಬೆಳಿಗ್ಗೆ ೬:೦೦ ರಿಂದ ೧೦:೦೦ ರವರೆಗೆ

ಅನುಗ್ರಹೋಪಸ್ಥಿತಿ : ಶ್ರೀ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮಿಗಳು, 
                            ಶ್ರೀ ಮಠ ಬಾಳೆಕುದ್ರು

ದಿವ್ಯೋಪಸ್ಥಿತಿ : ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದರು, 
                      ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು

ಅಭ್ಯಾಗತರು : ಶ್ರೀ ದುಗ್ಗಣ್ಣ ಸಾವಂತರಸರು, 
                     ಮುಲ್ಕಿ ಸೀಮೆ ಅರಸರು ಮತ್ತು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಮೊಕ್ತೇಸರರು

                     ಶ್ರೀ ದಾ. ಮ. ರವೀಂದ್ರ
                     ಹಿರಿಯ ಪ್ರಚಾರಕರು, ರಾ. ಸ್ವ. ಸಂಘ

                     ಶ್ರೀ ನಳಿನ್ ಕುಮಾರ್ ಕಟೀಲ್
                          ಸಂಸದರು, ಮಂಗಳೂರು

                     ಡಾ|| ಎಸ್. ಎನ್. ಪಡಿಯಾರ್ ಹಾಗೂ ಶ್ರೀಮತಿ ಅರುಣಾ ಪಡಿಯಾರ್,
                     ಕುಂದಾಪುರ

                     ಶ್ರೀ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ
                     ಗಡಿಕಾರರು, ಗೋಳಿದಡಿ ಗುತ್ತು, ಗುರುಪುರ

                     ವಿದ್ವಾನ್ ನವೀನ ಹೊಳ್ಳ
                     ಶ್ರೀ ರಾಜೀವ್ ಗಾಂಧಿ ವಿದ್ಯಾ ಪೀಠ, ಶೃಂಗೇರಿ

ಕಾರ್ಯಕ್ರಮದ ಸ್ವರೂಪ
 • ಬೆಳಿಗ್ಗೆ ೬:೧೫ಕ್ಕೆ ಸಪ್ತರ್ಷಿ ಪೂಜೆ
 • ಬೆಳಿಗ್ಗೆ ೬:೨೫ಕ್ಕೆ ದೇವಳದ ತೀರ್ಥಮಂಟಪದಲ್ಲಿ ಗ್ರಂಥ ಪೂಜೆ
 • ಉತ್ತಮಾಂಗದಲ್ಲಿರಿಸಿದ ಗ್ರಂಥವನ್ನು ಮೆರವಣಿಗೆಯಲ್ಲಿ ತಂದು ವೇದಿಕೆಯ ಪೀಠದಲ್ಲಿ ಸ್ಥಾಪನೆ
 • ಗ್ರಂಥ ಪರಿಚಯ
 • ಪ್ರಮುಖರಿಂದ ಕಾಲನ ನಡೆಗೆ ಮುಡಿಬಾಗಿ ಅಭಿಪ್ರಾಯ ಕಥನ
 • ಗ್ರಂಥ ಲೋಕಾರ್ಪಣೆ
 • ಅನುಗ್ರಹೋಪಸ್ಥಿತಿ ಪೀಠದಿಂದ ಅನುಗ್ರಹ ಸಂದೇಶ
 • ಅಭ್ಯಾಗತರ ಅಭಿಪ್ರಾಯ ಕಥನ
 • ಲೋರ್ಕಾರ್ಪಿತ ಬದುಕಿನ ಮೇಲ್ಪಂಕ್ತಿ ಹಾಕಿಕೊಟ್ಟ ಋಷಿತುಲ್ಯ ಬದುಕನ್ನು ನಿರ್ವಹಿಸುತ್ತಿರುವ ದಿವ್ಯ ಚೇತನಕ್ಕೆ ಪೂಜ್ಯಾಭಿವಂದನಮ್
 • ದಿವ್ಯೋಪಸ್ಥಿತಿ ಪೀಠದಿಂದ ಸುಜ್ಞಾನಾಮೃತ ಸಿಂಚನ
 • ಧನ್ಯೋಕ್ತಿಪ್ರಸ್ತಾವನೆ
- 1 -
ವೇದ-ವಿಜ್ಞಾನ ಮಂದಿರ, ಚಿಕ್ಕಮಗಳೂರು, ಇದರ ಸ್ಥಾಪಕರಾದ ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದರ ಆಶ್ರಮಧರ್ಮ ದೀಪಿಕಾ ಕೃತಿಯು ಹತ್ತು ಅಧ್ಯಾಯಗಳಲ್ಲಿ ರೂಪುಗೊಂಡಿದ್ದು, ಅವುಗಳಲ್ಲಿ ಆಶ್ರಮಧರ್ಮವನ್ನು ಸ್ಫುಟೀಕರಿಸಿ, ವಿಶದಪಡಿಸಿದ ನಾಲ್ಕು ಅಧ್ಯಾಯಗಳು ಮುಖ್ಯವಾಗಿವೆ. ಪ್ರಾರಂಭದಲ್ಲಿ ಸ್ತುತಿ ಮತ್ತು ಪೀಠಿಕಾ` ಅಧ್ಯಾಯಗಳು, ಕೊನೆಯಲ್ಲಿ ಪರಿವ್ರಾಜಕಾಧ್ಯಾಯ, ವ್ಯಾಸರು, ಬ್ರಹ್ಮಕಲ್ಪ ಮತ್ತು ಉಪಸಂಹಾರಗಳೆಂಬ ನಾಲ್ಕು ಅಧ್ಯಾಯಗಳಿವೆ.

ಕೃತಿಯ ಬಹುಭಾಗವು ಷಟ್ಪದಿಯಲ್ಲಿದೆ. ಕೃತಿಯಲ್ಲಿ ಬಳಸಲಾದ ಷಟ್ಪದಿಗಳೆಂದರೆ ಭಾಮಿನಿ, ವಾರ್ಧಿಕ, ಖರ, ಶರ, ಗಜ, ಹಂಸವಿಷಯ, ಕುಸುಮ, ಮೇಘಧ್ವನಿ, ಸಿಂಹ, ಏಕಚಕ್ರ, ಜಲಧ್ವನಿ, ಪಕ್ಷೀರವ, ಧ್ವಜ, ಘಂಟಾಪಟ, ಢಮರುಕ ಇತ್ಯಾದಿ ಛಂದೋ ನಿಯಮದ  ಸುಂದರ ಷಟ್ಪದಿಗಳನ್ನು ಅರ್ಥೈಸಿಕೊಳ್ಳುವುದು ಸುಲಭ. ಎಲ್ಲಿಯೂ ಭಾಷಾ ತೊಡಕಾಗುವುದಿಲ್ಲ. ಕನ್ನಡದ ಸಮಗ್ರ ಕಾವ್ಯಲೋಕದಲ್ಲಿ ಇಂಥ ಬೇರೊಂದು ಸಾಹಿತ್ಯಕ ಕೃತಿಯಿದೆಯೆ? ಬಲ್ಲವರು ಹೇಳಬೇಕು. ಏನಿದ್ದರೂ ಆಶ್ರಮಧರ್ಮ ದೀಪಿಕಾ  ಸಾಹಿತ್ಯಕವಾಗಿ ಅಪೂರ್ವವಾದ ಒಂದು ಕೃತಿ. ಎಲ್ಲಕ್ಕಿಂತ ಹೆಚ್ಚಾಗಿ ಇದು ಸಮಗ್ರ ಜೀವನದ ಮಹದ್ದರ್ಶನ, ಬೃಹತ್ ಮಾರ್ಗದರ್ಶಿಯಾಗಿದೆ. ಆದ್ದರಿಂದಲೇ ಇದಕ್ಕೆ ಕಾಲ ಮತ್ತು ದೇಶವನ್ನು ಮೀರಿ ನಿಲ್ಲಬಲ್ಲ ಶಕ್ತಿಯಿದೆ.

- 2 -
ಕೃತಿ ರಚನೆಯಲ್ಲಿ ಬಳಕೆ ಮಾಡಿದ ಮೂಲ ಆಕರಗಳು ಯಾವುವು? ಕೃತಿಕಾರರ ಮಾತುಗಳಲ್ಲೇ ಹೇಳುವುದಾದರೆ 
ವೇದ ಮೊದಲಾದಖಿಳ ಶಾಸ್ತ್ರಗಳ
ನೋದಿ ಪರಿಕಿಸಿ ನೋಡಿ ಬರೆದಿಹ
ಆದಿಗ್ರಂಥಗಳ ಸಹಾಯದಿಂದೀ ಲೇಖನವ ರಚಿಸಿದೆನು ನಾನೂ ||
ವೇದವ್ಯಾಸ ಬಾದರಾಯಣನಿಂದಿದ
ಮೋದಿಸಿಹೆ ಹಲಕೆಲವು ಋಷಿಗಳ
ಸಾಧಿಸಿ ಚರ್ಚಿಸಿಹೆ ನಂತರದಿ ಷಟ್ಪದಿ ವಾಕ್ಯ ನಿಯಮದಲೀ ||   

ಆದಿಗ್ರಂಥಗಳ ಅಧ್ಯಯನ, ಬಲ್ಲವರೊಡನೆ ಸಂವಾದ ಇವೇ ಅಲ್ಲದೆ ಅನುಭವಜನ್ಯ ಜ್ಞಾನವು (Impirical knowledge)  ಕೂಡ ಕೃತಿಯಲ್ಲಿ ಅಂತರ್ಗತಗೊಂಡಿದೆ. ಗೃಹಸ್ಥಾಶ್ರಮಧರ್ಮದ ಕುರಿತು ನೂರು ಜನ ಪುರುಷರನ್ನು ಸಂದರ್ಶನ ಮಾಡಿ ಅಧ್ಯಯನ ಮಾಡಲಾಗಿದೆ. (ಇಂದಿನ ಪರಿಭಾಷೆಯಲ್ಲಿ ಇದನ್ನು interview method ಎನ್ನುವರು) ಗೃಹಸ್ಥಾಶ್ರಮಿಗಳಿಗೆ ಸಮಸ್ಯೆಗಳು ಏಕೆ ಉದ್ಭವಿಸುತ್ತವೆ? ಗೃಹಸ್ಥನಲ್ಲಿ ಒಡಕು ಕಂಡಲ್ಲಿ ಯಾರು ಕಾರಣ? ಇದರಲ್ಲಿ ಇಂದಿನ ಸರ್ಕಾರಿ ಕಾನೂನುಗಳ ಪಾತ್ರವೇನು? ಹಾಗೆಯೇ ಅದೇ ವಿಧಾನವನ್ನು ಬಳಸಿ, 27 ನಕ್ಷತ್ರದಲ್ಲಿ ಜನಿಸಿದ 27 ಜನ ಮಹಿಳೆಯರನ್ನು ಆಯ್ಕೆ ಮಾಡಿ ಅವರಿಗೆ ಅರಿವಿಲ್ಲದಂತೆ ಅಧ್ಯಯನ ನಡೆಸಲಾಗಿದೆ. ಅಧ್ಯಯನ ಫಲವಾಗಿ ಸಮಸ್ಯೆಗಳಿಗೆ ಕೆಲವೊಂದು ನಿರ್ದಿಷ್ಟ ಕಾರಣಗಳನ್ನು ಕಂಡುಕೊಳ್ಳಲಾಗಿದೆ.

- 3 -
ಕೃತಿ ರಚನೆಯ ಉದ್ದೇಶವನ್ನು ಕೃತಿಕಾರರು ಹೇಳುತ್ತ, ಕೃತಿಯು ಭುವನ ಕ್ಷೇಮದ ಚಿಂತನೆ ಯಾಗಿದೆ ಎನ್ನುತ್ತಾರೆ. ನಿಟ್ಟಿನಲ್ಲಿ ಅವರ ಮತ್ತಷ್ಟು ಮಾತುಗಳು; ಸುಮಾರು 17 ವರ್ಷಗಳ ಹಿಂದೆ ನಾನು ಗಮನಿಸಿದಂತೆ ನಮ್ಮೀ ರಾಜ್ಯದಲ್ಲಿ ನಾನು ಗುರುತಿಸಿದಂತೆ ದಾಂಪತ್ಯದಲ್ಲಿ ಉಂಟಾಗುವ ಬಿರುಕು ಮತ್ತು ಪರಿಣಾಮವಾದ ಡೈವೋರ್ಸ್  ಇದು ಒಂದು ದಾಮಾಶಯದಲ್ಲಿ ಹೆಚ್ಚುತ್ತಾ ಬರುತ್ತಿರುವುದು. ಹಿಂದೆ ಗಂಡನಿಂದ ಜಗಳವಾಗಿ ಕಾನೂನು ರೀತ್ಯ ಅಧಿಕೃತ ಬಿಡುಗಡೆ ಪಡೆದು ಪುನರ್ವಿವಾಹ ಆಗುವುದು ಶಾಸ್ತ್ರ ವಿರುದ್ಧವಾಗಿತ್ತು. ಆದರೆ ಇತ್ತೀಚೆಗೆ ಅದು ಒಂದು ವೃತ್ತಿಯಾಗಿ ರೂಪುಗೊಳ್ಳತ್ತಿದೆ. ಬಗ್ಗೆ ಕಾರಣ ಏನೇ ಇರಲಿ, ಅದರ ಹಿಂದಿನ ಆಧ್ಯಾತ್ಮ ಭಾರತದಲ್ಲಿ ಇದು ಸಾಧ್ಯವೇ ಇಲ್ಲ. ಹಾಗಿದ್ದರೂ ನಡೆಯುತ್ತಿದೆ ಎಂಬ ಕುತೂಹಲದಿಂದ ಸಂಶೋಧನೆ ಆರಂಭಿಸಿದೆ. ಹಾಗೇ ಪುಸ್ತಕದಲ್ಲಿ ಬರೇ ಗೃಹಸ್ಥಾಶ್ರಮ ಧರ್ಮ ಮಾತ್ರವಲ್ಲ, ಈಗ ಕೆಡುತ್ತಿರುವ ಬ್ರಹ್ಮಚರ್ಯ, ಸಂನ್ಯಾಸ, ವಾನಪ್ರಸ್ಥದ ಬಗ್ಗೆಯೂ ಒಂದು ಇದಮಿತ್ಥಂ ಎಂಬ ಲೇಖನ ಬರೆಯೋಣವೆಂದು ನಿರ್ಣಯಿಸಿ ಚಾತುರ್ವರ್ಣ ಪದ್ಧತಿಯ ಬಗ್ಗೆ ಸಮಗ್ರವಾಗಿ ಕ್ರೋಢೀಕರಿಸಿ ಬರೆಯಲು ಉಪಕ್ರಮಿಸಿದ್ದೇನೆ”.

ಇಂದು ಕುಟುಂಬ ವಿಘಟನೆಯು ಪೂರ್ವ, ಪಾಶ್ಚಾತ್ಯರು ಎಂಬ ಎಲ್ಲೆಯನ್ನು ಲೆಕ್ಕಿಸದೆ ಎಲ್ಲೆಲ್ಲೂ ಹಬ್ಬಿದ ಮನುಕುಲ ಎದುರಿಸುವ ಮಹಾಸಂಕಟವಾಗಿದೆ. ಡಿ.ವಿ.ಜಿ.ಯವರು ಹೇಳುವಂತೆ -

ಭರತಖಂಡದ ನಾವು ಅಮೇರಿಕ, ರಷ್ಯಗಳಂತೆ ಹೊರಟಿದ್ದೇವೆ. ಯುರೋಪು, ಅಮೇರಿಕಗಳವರು ತಮ್ಮ ಬಾಳ್ವೆಯಲ್ಲಿ ಹುರುಳಿಲ್ಲ, ಬೇರೆಲ್ಲಿಯಾದರೂ ಹುರುಳುಂಟೆ? ಇಂಡಿಯಾದಲ್ಲಿ ಉಂಟೆ? ಎಂದು ಕೇಳುತ್ತಿದ್ದಾರೆ. ಆದರೆ ಇಲ್ಲಿಯವರ ಅಜ್ಞಾನ ದೃಷ್ಟಿಯಲ್ಲೊಂದು ಲೋಪ. ಅಲ್ಲಿಯವರ ದೃಷ್ಟಿಯಲ್ಲೊಂದು ಲೋಪ. ಒಂದು ಸಮಗ್ರ ಜೀವನದ ಮಹದ್ದರ್ಶನ ಹೊತ್ತು ಇಬ್ಬರಿಗೂ ಬೇಕಾಗಿದೆ. ಮಹತ್ವದ ದಿವ್ಯದರ್ಶನ ಮನುಷ್ಯಲೋಕಕ್ಕೆ ಎಂದು ಬಂದೀತೋ.. ಯಾವ ಭಾಷೆಯಲ್ಲಿ ಬಂದೀತೋ.... ತಿಳಿದು ಹೇಳಬಲ್ಲ ಕಾಲಜ್ಞಾನಿ ಎಲ್ಲಿಯೂ ಕಂಡು ಬಂದಿಲ್ಲ. ದೇವರ ಅವತಾರಕ್ಕಾಗಿ ಮಹರ್ಷಿಗಳೂ, ತಪಸ್ವಿಗಳೂ, ಸಾಧು ಸಜ್ಜನರೂ ಭಕ್ತಿ ಶ್ರದ್ಧೆಗಳಿಂದ ಕಂಡುಕೊಂಡಿದ್ದಂತೆ, ನಾವು ತಪೋನಿಷ್ಠೆಯಿಂದ ಮಹದ್ದರ್ಶನ ಸಾಹಿತ್ಯಕ್ಕಾಗಿ ತಾಳ್ಮೆ ತಾಳಿ ಎದುರು ನೋಡಿಕೊಂಡಿರುವುದು ಕರ್ತವ್ಯವಾಗಿದೆ. (ಡಿ.ವಿ.ಜಿ. ಅವರ ಬೆಲೆಬಾಳುವ ಬರಹಗಳು, 2012, ಪುಟ 90-91)

ಆಶ್ರಮಧರ್ಮ ದೀಪಿಕಾ ಕೃತಿಕಾರರು ಅಂಥ ಕಾಲಜ್ಞಾನಿಯೆ?  ಕೃತಿಯು ಅಂಥ ಮಹದ್ದರ್ಶನ ಸಾಹಿತ್ಯವೇ? ಇದಕುತ್ತರ ವಾಚಕರಿಗೆ ಬಿಟ್ಟದ್ದು.

- 4 -
ನಿರಂತರತೆಯನ್ನು ಸಾಧಿಸಲು ಮೂಲ ತಳಹದಿಯೇ ಬ್ರಹ್ಮಚರ್ಯಾಶ್ರಮ. ಅಧ್ಯಾಯದಲ್ಲಿ ಗುರುವಿನ ಮಹತ್ವ, ವಟುವಿನ ಗುರುಕುಲವಾಸ, ವಟು ಪಾಲಿಸಬೇಕಾದ ನಿಯಮ, ಪಠ್ಯಕ್ರಮ, ವಟುವಿನ ವಿಶಿಷ್ಟ ಗುಣಗಳು ಇತ್ಯಾದಿ ಅಮೂಲ್ಯ ವಿಚಾರಗಳಿವೆ.

ವಟುವು ದೇಶಾಟನೆ ಮಾಡಿ ವ್ಯಾವಹಾರಿಕ ಜ್ಞಾನ ಗಳಿಸುವುದೂ ಅವಶ್ಯಕ. ದೇಶಾಟನೆ ಅಂದರೆ ಈಗಿನ ಪ್ರವಾಸವಲ್ಲ. ಅದನ್ನು ಧನ ಬಲದಿಂದ ಮಾಡುವುದಲ್ಲ. ಅದು ನಿತ್ಯ ನಿರಂತರ ಸಂಚಾರ ಮಾಡುತ್ತಾ, ಅಲ್ಲಲ್ಲಿ ಒಂದೆರಡು ಮೂರು ದಿನ ನಿಂತು ಯಾವುದಾದರೊಂದು ವೃತ್ತಿ ವಹಿಸಿಯೊ ಅಥವಾ ಇನ್ಯಾವ ಧರ್ಮಮಾರ್ಗದಿಂದಲೊ ಧನ ಸಂಚಯನ ಮಾಡುತ್ತಾ, ಸಂಚಾರ ಮಾಡುತ್ತಾ ಪ್ರಕೃತಿ, ಸಮಾಜ, ಜನಜೀವನದಲ್ಲಿ ಹಾಸುಹೊಕ್ಕಾಗಿರುವ ವಿಶೇಷಗಳ ಅಧ್ಯಯನ ಮಾಡಿ ಆದರೆ ಎಲ್ಲಿಯೂ ಹೆಚ್ಚು ಕಾಲ ನಿಲ್ಲದೆ ಪರ್ಯಟನೆ ಮಾಡಬೇಕು. ಇದು ದೇಶಸಂಚಾರ  ವಿಧಿಯೆನ್ನಿಸುತ್ತದೆ.

ಬ್ರಹ್ಮಚರ್ಯಾಶ್ರಮ ಅಧ್ಯಾಯದಲ್ಲಿ ಕುಂಡಲಿನಿ ಉದ್ದೀಪನದ ಸ್ಪಷ್ಟ ವಿವರಗಳಿವೆ. ವಟುವು ಯಾವುದಾದರೂ ಒಂದು ವಿಧಾನದಲ್ಲಿ ಕುಂಡಲಿನಿಯನ್ನು ಉದ್ದೀಪನಗೊಳಿಸಬೇಕು. ಮುಂದಿನ ಗೃಹಸ್ಥಾಶ್ರಮಧರ್ಮ ನಡೆಸುವಷ್ಟು ಕಾಲ, ಕಡಿಮೆಯೆಂದರೆ 12 ವರ್ಷಕಾಲ ಕುಂಡಲಿನಿ ಸ್ವಾಧಿಷ್ಠಾನದಲ್ಲಿ ಸ್ಥಿರವಾಗಿರಬೇಕು. ಆಗ ಮಾತ್ರವೇ ಸಂಸಾರವು ಸುಖಪ್ರದವೂ, ಸ್ವಾದಿಷ್ಠವೂ, ಆನಂದದಾಯಕವೂ ಆಗಿ ಮನಸ್ಸು ಪಕ್ವತೆ ಪಡೆಯಲು ಸಹಕಾರಿಯಾಗುತ್ತದೆ. ಮೂಲಾಧಾರದಲ್ಲಿ ಕುಂಡಲಿನಿ ನಿದ್ರಾಸ್ಥಿತಿಯಲ್ಲಿದ್ದರೆ ಸಂಸಾರ ಮಧುರವಾಗುವುದಿಲ್ಲ. ಪ್ರಾಣಿಜೀವನ ಎನ್ನಿಸುತ್ತದೆ. ಸ್ವಾಧಿಷ್ಠಾನದಲ್ಲಿ ಯೋಗಶಕ್ತಿಯನ್ನು ಸ್ಥಾಪಿಸಿಕೊಂಡವನು ಮಾತ್ರವೇ ಮುಕ್ತವಾಗಿ ಗೃಹಸ್ಥಾಶ್ರಮಜೀವನ ಸಾಧಿಸಬಹುದು.

-         5 -
ಕೃತಿಯ ಮೇರು ಶಿಖರವೇ ಗೃಹಸ್ಥಾಶ್ರಮ ಅಧ್ಯಾಯ. ಇದರಲ್ಲಿ 251 ಪದ್ಯಗಳಿವೆ. ಪದ್ಯಗಳ ಗದ್ಯಾನುವಾದವಿದೆ. ಕೊನೆಯಲ್ಲಿ ಅಧ್ಯಾಯದ ಸಾರಾಂಶವನ್ನು ಗದ್ಯದಲ್ಲಿ ಕೊಡಲಾಗಿದೆ. ಗ್ರಂಥಕರ್ತರು   ಅಧ್ಯಾಯಕ್ಕೆ ವಿಶೇಷ ಒತ್ತು ನೀಡಿದಂತಿದೆ. ಅವರು ಗೃಹಸ್ಥಾಶ್ರಮವು ಶ್ರೇಷ್ಠವಾದ ಆಶ್ರಮಧರ್ಮ ಎಂದು ಪ್ರಾರಂಭದಲ್ಲೇ ಹೇಳಿ ಬಂದಿರುತ್ತಾರೆ.

ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಗೃಹಸ್ಥಾಶ್ರಮ ಧರ್ಮಾಚರಣೆಯಲ್ಲಿ ಭರತವರ್ಷದಲ್ಲಿ ಒಂಬತ್ತು ಮುಖ್ಯ ಭಿನ್ನತೆಗಳೂ 42 ಪ್ರಾದೇಶಿಕ ಭಿನ್ನತೆಗಳೂ ಇದ್ದು ಅವುಗಳ ಕೆಲವು ವಿಶಿಷ್ಟ ಅಂಶಗಳನ್ನು ಕೃತಿಕಾರರು ವರ್ಣಿಸಿದ್ದಾರೆ. ಇಲ್ಲಿ ಕಂಡು ಬರುವ ಮಾಹಿತಿ ಅಪರೂಪದ್ದಾಗಿದೆ. ಒಂಭತ್ತು ಸಂಸ್ಕೃತಿಗಳು ಈಗಿನ ಕಾಲದಲ್ಲಿ ಮಿಶ್ರವಾಗಿ ಕಾಲಾನುಗತಿಯಲ್ಲಿ ಅಧೋಗತಿಯನ್ನು ಕಂಡಿವೆ. ಆದುದರಿಂದಲೇ ಅವನ್ನೆಲ್ಲಾ ಒಟ್ಟು ಸೇರಿಸಿಯೇ ಒಂದು ಅಭಿಪ್ರಾಯಕ್ಕೆ ಬಂದು ವಿವರಿಸಬೇಕಾದ ಅನಿವಾರ್ಯತೆ ಇರುತ್ತದೆ ಎಂಬ ನಿರ್ಣಯಕ್ಕೆ ಗ್ರಂಥಕರ್ತರು ಬಂದಿರುತ್ತಾರೆ. ಹಿನ್ನೆಲೆಯಲ್ಲಿ ಅಧ್ಯಾಯದ ಮುಂದಿನ ಭಾಗದಲ್ಲಿ ಗೃಹಸ್ಥಾಶ್ರಮಧರ್ಮವನ್ನು ಸ್ಫುಟೀಕರಿಸಿ ವಿಶ್ಲೇಷಣೆ ಮಾಡಿದ್ದಾರೆ.

ಪ್ರಾಚೀನ ಧರ್ಮಶಾಸ್ತ್ರ ಸಾಹಿತ್ಯದಲ್ಲಿ ಧರ್ಮದ ಸ್ವರೂಪ ಮತ್ತು ವ್ಯಾಖ್ಯೆ ಸವಿವರವಾಗಿ ಮೂಡಿ ಬಂದಿದೆ. ಗ್ರಂಥಕರ್ತರು ಧರ್ಮವೆಂದರೆ ಪರೋಪಕಾರಾಯ ಪುಣ್ಯಾಯ ಪಾಪಾಯ ಪರಪೀಡನಂ ಎಂದು ತುಂಬಾ ಸರಳ, ಸ್ಪಷ್ಟ, ಶಕ್ತಿಶಾಲಿಯಾಗಿ ಹೇಳಿದ್ದಾರೆ. ಧರ್ಮ, ನ್ಯಾಯ, ನೀತಿ, ಸತ್ಯಗಳೇ ಗೃಹಸ್ಥಾಶ್ರಮ ಧರ್ಮದ ಚತುಷ್ಟಯಗಳು. ನೀತಿಯೆಂದರೆ ಬಾಳುವೆಗೆ ಮಿತಿಯಿಟ್ಟು ನಡೆಸುವ ಧರ್ಮ.

ಭಾರತೀಯ ಸಂಸ್ಕೃತಿಯ ಉದಾರತೆಯನ್ನು ಸಾರುವ ಸರ್ವೇ ಜನಾಃ ಸುಖಿನೋ ಭವಂತು ಎಂಬ ಧರ್ಮದ ಇನ್ನೊಂದು ಮುಖ ಅಧ್ಯಾಯದ 150ನೇ ಪದ್ಯದಲ್ಲಡಗಿದೆ. ಪದ್ಯದ ಸರಳಾನುವಾದ ಹೀಗಿದೆ; “ಲೋಕದ ಎಲ್ಲವನ್ನೂ ಪ್ರೀತಿಸು. ಎಲ್ಲರನ್ನೂ ಪ್ರೀತಿಸು. ನಿನ್ನ ಸತೀಸುತರು, ಕುಲಬಾಂಧವರು, ಸಮಾಜದ ಸುತ್ತಿನ ಜನರು, ಗಿಡ, ಮರ, ಪಶು, ಪಕ್ಷಿ, ನೆಲ, ಜಲ, ಗುಡ್ಡ, ಕಾಡುಗಳೂ ನಿನ್ನ ಸಹಜೀವಿಗಳೆಂದು ಪ್ರೀತಿಸು. ಅದೇ ನಿಜವಾದ ಗೃಹಸ್ಥ ಧರ್ಮ. ಆಗ ಮಾತ್ರಾ ನಿನ್ನಲ್ಲಿ ಸಂಚಿತ ಕರ್ಮ ಬಿಡುಗಡೆ ಸಾಧ್ಯ.

ಮಾನವ ಧರ್ಮದ ಉದಾತ್ತ ಚಿಂತನೆಯು ಪದ್ಯ 178ರಲ್ಲಿ ಸೊಗಸಾಗಿ ಮೂಡಿ ಬಂದಿದೆ.

ಮಾನವ ಧರ್ಮ ಕೇಳು ಗೃಹಸ್ಥನೇ ನೀ
ಮಾನವನಾಗು ಮೊದಲು ನಂತರದಿ ಜೀ
ವನ ಮಾಡು ಆಶ್ರಮಧರ್ಮವೆಳಸು ಯಶ ಕೀರ್ತಿಯೊದಗೀ ||
ವನ ಸುತ್ತ ಬೇಕಿಲ್ಲ ಎಲ್ಲ ದರ್ಶನ ನಿನಗೀ
ಮಾನವತ್ವದಿ ಕಾಣುವುದು ತಪ ಬೇಕಿಲ್ಲ
ಮನುಜ ಕೇಳ್ ಅದ ನಡೆಸೆ ಗೃಹಸ್ಥಾಶ್ರಮ ಧರ್ಮದಲಿ ಸಾಧ್ಯಾ ||  

ಇದು ಮಾನವಕುಲವನ್ನೇ ಉದ್ಧರಿಸುವ ಚಿಂತನೆಯಲ್ಲವೆ? ಮುಂದೆ ವಾನಪ್ರಸ್ಥಾಧ್ಯಾಯ ಮತ್ತು ಸಂನ್ಯಾಶ್ರಮಗಳನ್ನೆತ್ತಿಕೊಂಡು ಅವುಗಳ ಸ್ವರೂಪವನ್ನು ಪ್ರಸ್ತುತ ಕಾಲಕ್ಕೆ ಹೊಂದಾಣಿಕೆಯಾಗುವಂತೆ ಸರಳೀಕರಿಸಿ, ನವೀಕರಿಸಿ ತೆರೆದಿಡಲಾಗಿದೆ. ಜೊತೆಗೆ ಆಶ್ರಮಗಳ ಮೂಲಸತ್ವ, ಜೀವಾಳವನ್ನು ಜೀವಂತವಾಗಿರಿಸುವ ಸೂಕ್ಷ್ಮ ಪ್ರಯತ್ನವನ್ನೂ ಮಾಡಲಾಗಿದೆ.

ಅನಂತರ ಬರುವುದು ಪರಿವ್ರಾಜಕಾಧ್ಯಾಯ. ಗ್ರಂಥಕರ್ತರೇ ಪರಿವ್ರಾಜಕರಾಗಿದ್ದು ಅಧ್ಯಾಯ ಅತ್ಯಂತ ಅನುಭವಜನ್ಯವಾಗಿ ಹೊರಹೊಮ್ಮಿದೆ. ಕೃತಿಗಾರರು ಪರಿವ್ರಾಜಕನ ಕೆಲವೊಂದು ಸ್ವರೂಪ, ಗುಣವಿಶೇಷಗಳನ್ನು ರೀತಿಯಾಗಿ ಬಣ್ಣಿಸಿದ್ದಾರೆ;

ಪರಿವ್ರಾಜಕನೆಂದರೆ ಪ್ರಪಂಚದಾ ಪರಿಯರಿತು ದಾಟಿದ ವೃಜವುಸರ್ವತಂತ್ರ ಸ್ವತಂತ್ರನಾತನುಬಹಳ ನಾಟಕಿಯೀತನೂಎಲ್ಲಬಲ್ಲವನೀತ  ಮೂಢನಂತಿಹರೋಗಹರನೀತರಾಗಿಯೀತನು ವಿರಾಗಿ ಯೋಗಿಯೀತನೈನಿಲ್ಲದೇ ತಿರುಗುತಿಹ ಎಲ್ಲಾ ಕಡೆಚಿತ್ತ ವೃತ್ತಿಯಿಲ್ಲ ಚಿತ್ತ ವಿಕಾರಕೆಡೆಯಿಲ್ಲ ಸಿದ್ಧನುಭಿತ್ತಿಯಲಿ ಮುಂದಿನೇಳುಚರಿತೆಯೆತ್ತಿ ನೋಡಲು ಬಲ್ಲನೀತನುನಡೆಸಬಲ್ಲ ಜಗವನು ಅವನೇ ಪರಿವ್ರಾಜಕನೂ. ಪರಿವ್ರಾಜಕನು ಕಲ್ಪಾಂತದವರೆಗೆ ಕರ್ತವ್ಯದಲ್ಲಿ ಇರುತ್ತಾನೆ.

ಪರಿವ್ರಾಜಕನನ್ನು ಕುರಿತಾದ ಒಳನೋಟ ಅಪೂರ್ವವಾದುದು. ಅಧ್ಯಾಯದ ಕೊನೆಯಲ್ಲಿ ತೆರೆಮರೆಯಲ್ಲಿರುವ 715 ಪರಿವ್ರಾಜಕರ ಹೆಸರುಗಳ ಅಪರೂಪದ ಸಂಗ್ರಹವಿದೆ. ಅವರಲ್ಲಿ ತಿರುಕ (ಶ್ರೀನಿತ್ಯಾನಂದ) ಅವರೂ ಒಬ್ಬರು. ಅನಂತರ 354 ಯೋಗಿನಿಯರ ಪಟ್ಟಿ, ಕೊನೆಯಲ್ಲಿ ವ್ಯಾಸರು, ಬ್ರಹ್ಮಕಲ್ಪ ಮತ್ತು ಉಪಸಂಹಾರ ಮೂರು ಅಧ್ಯಾಯಗಳಿವೆ.

- 6 -
ಆಶ್ರಮಧರ್ಮವನ್ನು ಪರಿವ್ರಾಜಕರೊಬ್ಬರು ಸ್ಫುಟೀಕರಿಸಿದ್ದಾಯಿತು. ಆದರೆ ಇದು ಜನಜೀವನದಲ್ಲಿ ಹಾಸುಹೊಕ್ಕಾಗಿ ಜೀವಂತ ಸಂಸ್ಕೃತಿಯಾಗಿರಬೇಕಲ್ಲವೆ? ಸಂವಿಧಾನಬದ್ಧ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿರುವ ನಮಗೆ ಆಂಗ್ಲೇಯ ಪ್ರೇರಿತ ಇಂದಿನ ಕಾನೂನುಗಳ ಗೊಂಡಾರಣ್ಯವನ್ನು ಭೇದಿಸಿ, ತ್ಯಜಿಸಿ ಹೊರಬರಲು ಸಾಧ್ಯವೇ? ಇದಿಷ್ಟು ವ್ಯಾವಹಾರಿಕ ಸತ್ಯವಾಗಿದೆ. ಆದರೂ ಧರ್ಮದ ಪರಿಕಲ್ಪನೆ ಮತ್ತು ವೇದವಿಜ್ಞಾನ ಸುಜ್ಞಾನಗಳ ತಳಹದಿಯಲ್ಲಿ, ಕಾಲಘಟ್ಟದಲ್ಲಿ ಉಲ್ಬಣಗೊಂಡ ಸಾಮಾಜಿಕ, ಧಾರ್ಮಿಕ, ಪಾರಮಾರ್ಥಿಕ ವಿಕೃತಿ, ಅಸಮಂಜತೆಯನ್ನು ದಿಟ್ಟವಾಗಿ ಎದುರಿಸಿ, ಹೊಸ ನಾಗರೀಕತೆಯನ್ನು ಕಟ್ಟಿ, ಆಧ್ಯಾತ್ಮಿಕ ಜಗದ್ಗುರು ಆಗುವ ಅಂತಃಸತ್ವ ಭಾರತೀ ಸಂತತಿಗಿದೆ. ನಾವು ಪಣತೊಟ್ಟು ಕ್ರಿಯಾಶೀಲರಾದರೆ ಭಗವಂತ, ಪರಿವ್ರಾಜಕರು, ಋಷಿಮುನಿಗಳ ಪೂರ್ಣ ಅನುಗ್ರಹ ಇದ್ದೇ ಇದೆ. ಇಂಥ ದಾರ್ಶನಿಕವಾದ ಕನಸುಗಾರಿಕೆಯನ್ನು ಸಾಕಾರಗೊಳಿಸಲು ನಿರ್ದಿಷ್ಟ ಯೋಜನೆಯ ಅವಶ್ಯಕತೆಯಿದೆ. ವೇದ ವಿಜ್ಞಾನ ಸುಜ್ಞಾನ ಮಹಾಪೀಠವನ್ನು (World University)  ಸ್ಥಾಪಿಸಿ ವೇದ ವಿಜ್ಞಾನಗಳ ಉಳಿಕೆ, ಕಲಿಕೆ ಮತ್ತು ವಿಸ್ತರಣೆಗಳ (pro) ಕಾರ್ಯ ನಡೆಯಬೇಕಿದೆ.

ಕೊನೆಯಲ್ಲಿ ಮಹಾಕೃತಿಗೆ ಪ್ರಸ್ತಾವನೆ ಬರೆಯಲು ಅತ್ಯಮೂಲ್ಯವಾದ ಅವಕಾಶ ನೀಡಿದ ಶ್ರೀನಿತ್ಯಾನಂದರಿಗೆ ನನ್ನ ಹೃದಯದಾಳದ ಕೃತಜ್ಞತೆಗಳನ್ನು ಹೇಳುತ್ತಾ, ನನ್ನನ್ನು ಸದಾಕಾಲ ಅನುಗ್ರಹಿಸಲಿ ಎಂದು ಅವರಲ್ಲಿ ವಿನಮ್ರನಾಗಿ ಪ್ರಾರ್ಥಿಸುತ್ತೇನೆ.
ರಾಘವೇಂದ್ರ ಪ್ರಭು ಎಂ.
ಇತಿಹಾಸ ಪ್ರೊಫೆಸರ್ (ವಿಶ್ರಾಂತ) ಹಾಗೂ
ಪ್ರಾಂಶುಪಾಲರು, ನಾಯಕತ್ವ ಮತ್ತು
ಮಾನವ ಸಂಪನ್ಮೂಲ ಅಭಿವೃದ್ಧಿ ಕಾಲೇಜು,
ಮಂಗಳೂರು
ದೂರವಾಣಿ9611 943 649

No comments:

Post a comment