Friday, 5 December 2014

ರಾಷ್ಟ್ರಾಭಿವರ್ಧನೆ ಎಂದರೇನು?

ದೇಶದೆಲ್ಲೆಡೆ ಹಬ್ಬಿದೆ ಅಭಿವೃದ್ಧಿಯ ಹರಿಕಾರ ಮೋದಿ ಅಲೆ. ದೇಶವೇನು ಅಭಿವೃದ್ಧಿಯಾಗಿಯೇ ಬಿಟ್ಟಿದೆಯೆಂಬ ಸಂತೋಷ, ಆನಂದ, ಉತ್ಸಾಹ. ಆದರೆ ಅದೆಷ್ಟು ಫಲದಾಯಕ, ಸತ್ಯ? ಈ ವಿಚಾರವಾಗಿ ಸ್ವಲ್ಪ ಚಿಂತನೆ ಮಾಡೋಣವಲ್ಲವೆ? ಬನ್ನಿ ನಿಧಾನವಾಗಿ ಕುಳಿತು ಆಲೋಚಿಸಿ. ಮೋದಿಯವರ ಮಹತ್ತ್ವಾಕಾಂಕ್ಷೆ ಎಷ್ಟು ಫಲಪ್ರದ? ಶುಭಪ್ರದ? ಎಷ್ಟು ಅಭಿವೃದ್ಧಿ ಕರ? ಎಷ್ಟು ಸಮಂಜಸ? ಎಷ್ಟು ನ್ಯಾಯ? ಎಷ್ಟು ಸೂಕ್ತ? ಈ ದೃಷ್ಟಿಯಲ್ಲಿ ಯೋಚಿಸಬೇಕು.

ಮೊದಲಾಗಿ ದೇಶದ ಅಭಿವೃದ್ಧಿಯೆಂದರೇನು? ಈ ಬಗ್ಗೆ ಮೊದಲಾಗಿ ತಿಳಿಯಬೇಕು. ಹಲವು ಲಕ್ಷ ವರ್ಷಗಳಿಂದ ನಮ್ಮಲ್ಲಿ ಸಮರ್ಥ ರಾಜ್ಯಶಾಸ್ತ್ರ+ಅರ್ಥಶಾಸ್ತ್ರ ರೂಢಿಯಲ್ಲಿತ್ತು. ಈಗ ವಿದೇಶೀಯತೆಯ ಕಾರಣದಿಂದ ನಶಿಸಿಹೋಗಿದೆ. ಅದರ ದೃಷ್ಟಿಯಲ್ಲಿ ರಾಷ್ಟ್ರಾಭಿವರ್ಧನೆ ಎಂದರೇನು ಚಿಂತಿಸೋಣ.

ಅಥರ್ವ ಕಾಂಡ 1, ಸೂಕ್ತ 29, ಮಂತ್ರ 1-6
ಅಭೀವರ್ತೇನ ಮಣಿನಾ ಯೇನೇಂದ್ರೋ ಅಭಿವಾವೃಧೇ |
ತೇನಾಸ್ಮಾನ್ ಬ್ರಹ್ಮಣಸ್ಪತೇಭಿ ರಾಷ್ಟ್ರಾಯ ವರ್ಧಯ || 1 ||
ಅಭಿವೃತ್ಯ ಸಪತ್ನಾನಭಿ ಯಾ ನೋ ಅರಾತಯಃ |
ಅಭಿ ಪೃತನ್ಯಂತಂ ತಿಷ್ಠಾಭಿ ಯೋ ನೋ ದುರಸ್ಯತಿ || 2 ||
ಅಭಿತ್ವಾ ದೇವಃ ಸವಿತಾಭಿ ಸೋಮೋ ಅವೀವೃಧತ್ |
ಅಭಿತ್ವಾ ವಿಶ್ವಾ ಭೂತಾನ್ಯಭೀವರ್ತೋ ಯಥಾಸಸಿ || 3 ||
ಅಭೀವರ್ತೋ ಅಭೀಭವಃ ಸಪತ್ನಕ್ಷಯಣೋ ಮಣಿಃ |
ರಾಷ್ಟ್ರಾಯ ಮಹ್ಯಂ ಬಧ್ಯತಾಂ ಸಪತ್ನೇಭ್ಯಃ ಪರಾಭುವೇ || 4 ||
ಉದಸೌ ಸೂರ್ಯೋ ಅಗಾದುದಿದಂ ಮಾಮಕಂ ವಚಃ |
ಯಥಾಹಂ ಶತ್ರುಹೋಸಾನ್ಯಸಪತ್ನಃ ಸಪತ್ನಹಾ || 5 ||
ಸಪತ್ನಕ್ಷಯಣೋ ವೃಷಾಭಿರಾಷ್ಟ್ರೋ ವಿಷಾಸಹಿಃ |
ಯಥಾಹಮೇಷಾಂ ವೀರಾಣಾಂ ವಿರಾಜಾನಿ ಜನಸ್ಯ ಚ || 6 ||

ಅಭೀವರ್ತ ಅಥವಾ ತೊಡಗುವಿಕೆಯ ಪ್ರವರ್ತನಾ ನಿರ್ಣಯ ಆಧರಿಸಿದ ಮೂಲಸೂತ್ರಗಳು ಹೇಗಿರಬೇಕು ಎಂದು ಅಥರ್ವ ಹೇಳುತ್ತದೆ. ಖ್ಯಾತ ಅರ್ಥಶಾಸ್ತ್ರಜ್ಞರೂ ಆದ ವಸಿಷ್ಠರು ಸ್ವತಃ ಈ ವಿಚಾರವಾಗಿ ಬ್ರಹ್ಮಣಸ್ಪತಿಗಳಲ್ಲಿ ವಿಚಾರಿಸುತ್ತಾರೆ. ಒಂದು ರಾಷ್ಟ್ರದ ಅಭಿವೃದ್ಧಿಯೆಂದರೇನು? ಅದರ ಮುಖ್ಯ ಅಭೀವರ್ತಗಳು ಹೇಗಿರಬೇಕು? ಜೈವಿಕ ಜಗತ್ತಿನ ಮೂಲ ಸತ್ಯ, ಸತ್ಯಾತ್ಮಕ ಪ್ರವರ್ತನೆಯೇನು? ಎಂದು ಕೇಳಲಾಗಿ ವಸಿಷ್ಠರ ಪ್ರಶ್ನೆಗೆ ಉತ್ತರ ರೂಪದಲ್ಲಿ ಈ ಸೂಕ್ತವಿರುತ್ತದೆ. ಅಯ್ಯಾ ವಸಿಷ್ಠನೇ, ಈ ನಿನ್ನ ಪ್ರಶ್ನೆಗೆ ಮೂರು ಮತ್ತು ಒಂದು ಅಂಶ ಪ್ರಧಾನವಾದ ಅರ್ಥ ಸಂಯೋಜನಾ ಸೂತ್ರ ಯಾರು ಅರಿತಿದ್ದಾನೋ ಅವನು ನಾಯಕನಾಗಿದ್ದಲ್ಲಿ ಮಾತ್ರಾ ಈ ರಾಜ್ಯಸೂತ್ರ ಬಳಸು. ರಾಷ್ಟ್ರಾಭಿವೃದ್ಧಿಯಾಗುತ್ತದೆ. ಹಾಗೇ ಯಾವ ದೇಶದ ಪ್ರಜೆಗಳಲ್ಲಿ ತಮ್ಮ ಆತ್ಮಕ್ಕೇ ದ್ರೋಹವೆಸಗುವ ಕೃತಘ್ನತೆ ಇಲ್ಲವೋ ಅಲ್ಲಿ ಮಾತ್ರಾ ಈ ರಾಜ್ಯಸೂತ್ರ ಬಳಸು. ಆಗ ಇದು ಮಣಿ ಅಂದರೆ ಶ್ರೇಷ್ಠ ಸಲಹೆ ಎಂದು ಅರ್ಥ. ಹಾಗಾಗಿ ರಾಜನು ಅರಿತಿರಬೇಕಾದ ಮುಖ್ಯ ಮೂರು ಮತ್ತೊಂದು ಯಾವುದು?

1) ಭೂತದ ಆಧಾರದಲ್ಲಿ ಭವ್ಯ ನಿರೂಪಣಾ ಕುಶಲಿಯಾಗಿರಬೇಕು

2)  ಜೈವಿಕ ಜಗತ್ತಿನ ಸಮತೋಲನ ಸೂತ್ರದ ಬಗ್ಗೆ ಉತ್ತಮ ತಿಳುವಳಿಕೆ ಇರಬೇಕು.

3)  ತಾನು ಸ್ವತಃ ಪ್ರವೃತ್ತಿಧರ್ಮದಲ್ಲಿದ್ದು ತಾನು ನಡೆದ ಮಾರ್ಗದಲ್ಲಿ ತನ್ನ ಪ್ರಜೆಗಳನ್ನೂ ಮುನ್ನಡೆಸಬೇಕು.

ಇವು ಮೂರು ಅರ್ಹತೆಗಳು ನಾಯಕನಿಗಿರಬೇಕು. ಇನ್ನು ಮತ್ತೊಂದು ಅರ್ಹತೆ ಪ್ರಜೆಗಳಿಗಿರಬೇಕು. ಅದರ ವಿಚಾರ ಮುಂದೆ ಬರೆಯುತ್ತೇನೆ. ಈ ಮೊದಲ ಮೂರು ಅರ್ಹತೆಗಳ ಬಗ್ಗೆ ಚಿಂತಿಸೋಣ. ಮೊದಲನೆಯ ಭೂತದ ಆಧಾರದಲ್ಲಿ ಭವ್ಯತೆ ಎಂದರೇನು? ಅದನ್ನು ನಿರೂಪಿಸುವುದು ಹೇಗೆ? ಅದರ ಬಗ್ಗೆ ಪೂರ್ಣ ಅರ್ಥಶಾಸ್ತ್ರ ವಿವರಿಸಲು ಸಾಧ್ಯವಿಲ್ಲವಾದರೂ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತೇನೆ. ಯೋಜನೆಯ ಮೊದಲು ಅದರ ನಿತ್ಯತೆ, ನಿರಂತರತೆ, ಅಭಿವೃದ್ಧಿ, ಸಬಲೀಕರಣ, ಸೂಕ್ತತೆ, ಅನಿವಾರ್ಯತೆ, ಭವಿಷ್ಯದ ಪೂರಕತೆಯ ವಿಚಾರದಲ್ಲಿ ಸಮರ್ಥ ಚಿಂತನೆ ಇರಬೇಕು. ಅದಕ್ಕೆ ಸಂಬಂಧಿಸಿ ಯೋಜನೆಯ ಪೂರ್ವೋದಾಹರಣೆ, ಲಾಭ, ಸಾಮಾಜಿಕ ಜನಜೀವನದಲ್ಲಿ ಉಂಟಾಗುವ ಪರಿಣಾಮ ಮತ್ತು ಉಪಪರಿಣಾಮ ಇವೆಲ್ಲಾ ಚಿಂತಿಸಲೇಬೇಕಾದ ಅಗತ್ಯವಿದೆ. ಅದನ್ನೆಲ್ಲಾ ಅರ್ಥಮಾಡಿ ಕೊಳ್ಳುವ ಗುಣ, ಶಕ್ತಿ ನಾಯಕನಿಗೆ ಇರಬೇಕು. ಇಲ್ಲವಾದಲ್ಲಿ ಆ ಯೋಜನೆ ಮುಂದೆ ಒಂದು ದೊಡ್ಡ ದುರಂತವಾಗಿ ಪರಿಣಾಮವಾಗುತ್ತದೆ. ನಂತರ ಅದು ಸಮಾಜವನ್ನು ಶಾಪ ರೂಪದಲ್ಲಿ ಬಾಧಿಸುತ್ತಲೇ ಇರುತ್ತದೆ. ಉದಾ:- ನಮ್ಮ ಮಲೆನಾಡು ಬೆಟ್ಟಗುಡ್ಡಗಳಲ್ಲಿ ನಮ್ಮ ಸರಕಾರ ಯೋಜಿಸಿದ ಗೇರು ಅಭಿವೃದ್ಧಿ ಯೋಜನೆ. ತೀರಾ ಅವೈಜ್ಞಾನಿಕವಾಗಿ ತಾತ್ಕಾಲಿಕ ಲಾಭ ಚಿಂತನೆಯಿಂದ ಗೇರು ಅಭಿವೃದ್ಧಿಪಡಿಸಲಾಯ್ತು. ನಂತರ ಅದರ ರಕ್ಷಣೆಯ ದೃಷ್ಟಿಯಿಂದ ವಿಷವಸ್ತುಗಳ ಪ್ರಯೋಗ. ಆ ಕಾರಣದಿಂದಾಗಿ ಜೀವಜಂತುಗಳ ನಾಶ, ರೋಗಾದಿಗಳ ಉತ್ಪತ್ತಿ. ಮುಖ್ಯವಾಗಿ ಅಂಗವಿಕಲ ಮಕ್ಕಳ ಜನನ. ಅವರು ಅಂಗವಿಕಲರಾಗಿ ಹುಟ್ಟಲು ಕಾರಣರು ಯಾರು? ಅದು ದೇಶದ ದೊಡ್ಡ ಸಮಸ್ಯೆಯೇ ಅಲ್ಲವೆ? ಈ ರೀತಿಯಲ್ಲಿ ಪರಿವರ್ತಿತವಾದ ಜೀನುಗಳು ಮುಂದೆ ಒಂದು ಸಾವಿರ ವರ್ಷಕಾಲ ಪರಿಣಾಮ ಬೀರಬಹುದು. ಎಷ್ಟು ಜನರ ಜೀವನ ನಾಶ? ಎಷ್ಟು ನಷ್ಟ? ಗೇರು ಅಭಿವೃದ್ಧಿಯ ಲಾಭದ ಸಾವಿರಪಟ್ಟು ನಷ್ಟವಾಗುತ್ತಿದೆ. ಅಲ್ಲದೇ ಈ ಕೆಳಗಿನ ಕೆಲ ಮುಖ್ಯ ಅಂಶ ಗಮನಿಸಿ.

1.  ದೇಶದಲ್ಲಿ ಗೇರು ಅಭಿವೃದ್ಧಿಯ ನೆಪದಲ್ಲಿ ಉಂಟಾದ ಸಮಸ್ಯೆಗಳು
1) ಸ್ವಾಭಾವಿಕ ಕಾಡು ನಾಶ
2) ಓಷಧೀಗಿಡಗಳ ನಾಶ
3) ಗೋಮಾಳ ಹುಲ್ಲುಗಾವಲು ನಾಶ
4) ಅದರ ಕೊಳೆತ ಹಣ್ಣುಗಳು ಆಸಂಬಂಧಿ ಪರಿಸರ ದೂಷಣೆ
5) ಅದರ ಉದುರಿದ ಒಣಗಿದ ತರಗೆಲೆಯಿಂದ ಭೂಮಿಯ ಸತ್ವನಾಶ
6) ದೇಶೀಯ ಸಾಂಪ್ರದಾಯಿಕ ಕೃಷಿಯ ಅವಗಣನೆ

2. ರಕ್ಷಣಾತ್ಮಕ ದೃಷ್ಟಿಯಿಂದ ತೆಗೆದುಕೊಂಡ ಭದ್ರತಾ ಕ್ರಮಗಳಿಂದ ಉಂಟಾದ ತೊಂದರೆಗಳು
1) ಹೆಚ್ಚಿನ ಫಸಲು ನಿರೀಕ್ಷಿಸಿ ರಾಸಾಯನಿಕ ಬಳಸಿ ಭೂಮಿನಾಶ
2) ಹೆಚ್ಚಿನ ಫಸಲು ನಿರೀಕ್ಷಿಸಿ ವಿಷಕಾರಿ ವಸ್ತುಗಳ ಸಿಂಪರಣೆ, ಅದರಿಂದ ನಾನಾ ರೋಗಗಳು.
3)  ವ್ಯಾಪಾರೀ ಲಾಭದೃಷ್ಟಿಯಿಂದ ಜನರಲ್ಲಿ ಹುಟ್ಟುವ ವೈಮನಸ್ಯತೆ.
4)  ಸೌಲಭ್ಯದ ದೃಷ್ಟಿಯಿಂದ ಕೈಗೊಂಡ ಅಭಿವೃದ್ಧಿಯ ರಸ್ತೆ ಇತ್ಯಾದಿ ಕಾರ್ಯಗಳು.

3.  ವ್ಯಾಪಾರೀ+ಬಂಡವಾಳಶಾಹೀ ಪ್ರವೃತ್ತಿಯ ಕೃಷಿ ಪ್ರೇಷಣೆಯಿಂದಾದ ತೊಂದರೆಗಳು.
1) ಸಾಂಪ್ರದಾಯಿಕ ಕೃಷಿಯ ನಿರ್ಮೂಲನೆ
2) ತೀವ್ರತರದ ತೀಕ್ಷ್ಣ ರಾಸಾಯನಿಕ ಬಳಕೆ
3) ಅದರ ಉಪ ಉತ್ಪನ್ನಗಳ ಚಿಂತನೆ, ಮದ್ಯಾದಿಗಳ ತಯಾರಿಕೆ ದುಷ್ಪರಿಣಾಮ.
4) ವಿದೇಶೀ ವ್ಯಾಪಾರವೆಂಬ ಲಾಭ ಚಿಂತನೆಯಲ್ಲಿ ಕಳ್ಳಸಾಗಾಟ ದಂಧೆ.
5) ದೇಶೀಯ ಅಮೂಲ್ಯ ಗಂಧ, ಚಂದನ, ಅಗರುಗಳ ಕಳ್ಳಸಾಗಾಟ.

ಇವಿಷ್ಟು ಅಲ್ಲದೇ ಅದರ ಉಪಪರಿಣಾಮಗಳನ್ನೂ ಹೆಸರಿಸುತ್ತಾ ಹೋದಲ್ಲಿ ಮುಗಿಯದ ಕಥೆ. ಜೊತೆಗೆ ಈ ಅತೀ ಫಸಲಿನ ಆಸೆ ರಕ್ಷಣೆ ದೃಷ್ಟಿಯಿಂದ ಬಳಸಿದ ವಿಷ ಎಂಡೋಸೆಲ್ಫಾನ್ ಪರಿಣಾಮ ಇನ್ನು ಸಾವಿರ ವರ್ಷದ ಕಾಲದ ದುಷ್ಪರಿಣಾಮ ಬೀರುವ ವಿಷವಸ್ತುವದು. ಈ ವಿಷ ಕೇವಲ ಗೇರುಮರದ ಉತ್ಪನ್ನ ಮತ್ತು ಲಾಭ ದೃಷ್ಟಿಯಿಂದಲೇ ಬಳಸಲಾಗಿದೆ. ಹಾಗಾಗಿ ಇನ್ನು ಮುಂದೆ ಈ ರೀತಿಯ ಅಂಗವಿಕಲ ಮಕ್ಕಳ ಜನನ ನಿತ್ಯ ನಿರಂತರವಾಗುತ್ತದೆ. ದೇಶದ ದೊಡ್ಡ ಹೊರೆ ಆರ್ಥಿಕಶಕ್ತಿ ಕ್ಷೀಣತೆಗೆ ಕಾರಣವಾಗುತ್ತದೆ.

ಎಂಡೋಸೆಲ್ಫಾನ್  ಎಂಬ ವಿಷವಸ್ತು ಎಷ್ಟು ಪರಿಣಾಮಕಾರಿಯೆಂದರೆ ಒಂದು ಜೀವಿಯ ವಂಶವಾಹೀ ಗುಣವನ್ನೇ ಬದಲಿಸಬಲ್ಲದು. ಹಾಗಾಗಿ ಅಂಗವಿಕಲತೆಯೆಂಬುದು ಸರ್ವೇ ಸಾಮಾನ್ಯವಾಗಿ ರೂಪುಗೊಳ್ಳಬಹುದು. ಈಗೇನೋ ಗೋಡಂಬಿ ಮಾರಿ ಅದರ ಲಾಭಾಂಶ ತೆರಿಗೆ ಪಡೆದು ಸರಕಾರ ಲಾಭವಾಯ್ತೆಂದು ಭಾವಿಸಬಹುದು. ಆದರೆ ಮುಂದಿನ ಭವಿಷ್ಯ ಚಿಂತಿಸಿದರೆ ಅದು ಅಪಾಯಕಾರಿ, ತುಂಬಲಾರದ ನಷ್ಟ. ಜೀನುಗಳ ವ್ಯತ್ಯಾಸ ಪಡೆದು ಮಕ್ಕಳ ಜನನ ಆರಂಭವಾದರೆ ಅದು ದೇಶಾದ್ಯಂತ ಹರಡಬಹುದು. ಆಗ ದೇಶದಲ್ಲಿ ಅಂಗವಿಕಲ ಮಕ್ಕಳ ಸಂಖ್ಯೆ ಪ್ರಮಾಣವೆಷ್ಟಾಗಬಹುದು ಚಿಂತಿಸಿದ್ದೀರಾ? ಈಗಲೇ ಗರ್ಭಧಾರಣೆಯಾಗುವ ಶೇಕಡಾ 40 ರಷ್ಟು ಭ್ರೂಣಗಳನ್ನು ಬೆಳವಣಿಗೆ ಸರಿ ಇಲ್ಲ, ಅಂಗವಿಕಲತೆ ಇದೆಯೆಂಬ ಕಾರಣಕ್ಕೆ ಗರ್ಭಪಾತ ಮಾಡಿಸಲಾಗುತ್ತಿದೆ.  ಇದರ ಪರಿಣಾಮ ಇನ್ನೂ ಹೆಚ್ಚಾದರೆ ಏನಾಗಬಹುದು ಚಿಂತಿಸಿ?

ಇದು ಕೇವಲ ಒಂದು ಯೋಜನೆಯ ದುಷ್ಪರಿಣಾಮ. ಇಂತಹಾ ಎಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ನಮ್ಮ ಸ್ವಾತಂತ್ರ್ಯಾ ನಂತರದ ಸರಕಾರ? ಆಲೋಚಿಸಿ. ಅದು ಅಭಿವೃದ್ಧಿಯೆಂದು ಹಣದ, ಲಾಭದ ಆಮಿಷ ತೋರಿ ನಡೆಸುತ್ತಿರುವ ಅವ್ಯವಹಾರ, ಭ್ರಷ್ಟಾಚಾರ. ಹೀಗೆ ಅಡಿಕೆ, ರಬ್ಬರು, ಬೇರೆ ಬೇರೆ ರೀತಿಯ ವಾಣಿಜ್ಯ ಬೆಳೆಗಳು ಕೇವಲ ವಿದೇಶೀ ಮಾರುಕಟ್ಟೆ ಆಧರಿಸಿ ಯೋಜನೆ ರೂಪಿಸಲಾಗುತ್ತಿದೆ. ಅದೊಂದು ದೊಡ್ಡ ಮೋಸ. ಸ್ವದೇಶೀ ಮಾರುಕಟ್ಟೆ ಅಭಿವೃದ್ಧಿಪಡಿಸುವ, ಸ್ವದೇಶೀ ಉತ್ಪಾದನೆ ಮತ್ತು ಬಳಕೆಯತ್ತ ಯಾವುದೇ ಪ್ರಚೋದನೆ ಕಂಡುಬರುವುದಿಲ್ಲ. ದೇಶದ ಅಭಿವೃದ್ಧಿ ಸ್ವದೇಶೀಯತೆಯಲ್ಲಿದೆಯೇ ವಿನಃ ವಿದೇಶೀಯತೆಯಲ್ಲಿಲ್ಲ. ಆ ನಿಟ್ಟಿನಲ್ಲಿ ಯೋಜನೆ ರೂಪಿಸಿದಲ್ಲಿ ಮಾತ್ರಾ ಭವಿತವ್ಯದ ಹರಿಕಾರ ನಾಯಕನೆನ್ನಿಸಿಕೊಳ್ಳುತ್ತಾನೆ. ನಮ್ಮ ದೇಶದ ಉತ್ಪಾದನೆ ವಿದೇಶೀಯರನ್ನು ಹಲವು ಸಾವಿರ ವರ್ಷಗಳಿಂದ ಆಕರ್ಷಿಸುತ್ತಿದ್ದ ಮಾರುಕಟ್ಟೆ. ಕಾಳುಮೆಣಸು, ಅರಶಿನ, ಉಪ್ಪು, ಗಸಗಸೆ, ಹೀರೆಮದ್ದು, ಚಂಗಲ್ ಕೋಷ್ಟ್, ಈಶ್ವರೀ, ದಾಲಚಿನ್ನಿ, ಹುಳಗುನ್ನಿ, ದಂಬಳ, ಅಗರು, ಗುಗ್ಗುಳ, ಕಸ್ತೂರಿ, ಗಂಧ, ಚಂದನ, ಭೂರುಗ, ಜೇನು, ಅಷ್ಟಗಂಧ, ರಂಬಾ ಕರ್ಪೂರ, ಪಚ್ಚಕರ್ಪೂರ, ಪುನುಗು, ಕೇಸರಿ, ರೇಷ್ಮೆ, ಹತ್ತಿ, ತರಕಾರಿ ಇತ್ಯಾದಿ ಇತ್ಯಾದಿ ಸ್ವದೇಶೀ ಉತ್ಪಾದನೆಗೆ ಪ್ರಚೋದನೆ ಕೊಡುವುದು ಬಿಟ್ಟು ವಿದೇಶೀ ಉತ್ಪಾದನೆಗೆ ಇಲ್ಲಿ ಪ್ರಾಶಸ್ತ್ಯ ಕೊಡುವುದರಿಂದ ಅನಾಹುತ ಖಂಡಿತ. ಇನ್ನಾದರೂ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳಲಿ. ಈಗಾಗಲೇ ಅಭಿವೃದ್ಧಿ ದೃಷ್ಟಿಯಿಂದ ಹುಟ್ಟಿದ ಅಂಗವಿಕಲ ಮಕ್ಕಳ ಬಗ್ಗೆ ಕರುಣೆ ತೋರಿ.

ಇನ್ನು ಎರಡನೆಯದು ಜೈವಿಕ ಜಗತ್ತಿನ ಸಮತೋಲನ ಸೂತ್ರ. ಇದನ್ನು ಉತ್ತಮ ನಾಯಕನಾದವನು ಅರಿತಿರಲೇಬೇಕು. ಮಾನವ ತನ್ನ ಬದುಕಿಗಾಗಿ ಸಮತೋಲನ ಹಾಳು ಮಾಡುತ್ತಿದ್ದಾನೆ. ಅದನ್ನು ತಡೆಯುವುದು ಈ ಕ್ಷಣದ ಅಗತ್ಯ ಕರ್ತವ್ಯ. ಇಲ್ಲವಾದಲ್ಲಿ ಮತ್ತೊಂದು ದೊಡ್ಡ ದುರಂತ ಮನುಕುಲದ ನಾಶ ಖಂಡಿತ. ಈಗಿನ ಕೆಲ ವಿಕೃತ ತರಂಗಗಳಿಂದಾಗಿ ಕೆಲ ಪ್ರಭೇದದ ಪಕ್ಷಿ ಸಂಕುಲ ನಾಶವಾಗಿದೆ. ಕೆಲ ಮಾನವ ಉಪಯುಕ್ತ ಕೀಟ ಸಂಕುಲ ನಾಶವಾಗಿದೆ. ಹಾವಿನ ಪ್ರಭೇದಗಳು ನಶಿಸಿ ಹೋಗುತ್ತಿವೆ. ವನ್ಯ ಮೃಗಗಳ ಪ್ರವೃತ್ತಿ ಬದಲಾಗುತ್ತಿದೆ. ಅವುಗಳಿಗೆ ಮೊದಲಿದ್ದ ಮಾನವ ತನ್ನ ಸಹಜೀವಿ ಎಂಬ ಭಾವ ಬದಲಾಗುತ್ತಿದೆ. ಆಕ್ರಮಣ ಕಾರಿಯಾಗಿ ರೂಪುಗೊಳ್ಳುತ್ತಿವೆ. ಮಾನವನನ್ನೇ ಆಶ್ರಯಿಸಿ ಬದುಕುವ ನಾಯಿಗಳು ಮಾನವನ ಮೇಲೆ ಆಕ್ರಮಣಕಾರೀ ಪ್ರವೃತ್ತಿ ಹೊಂದುತ್ತಿರುವುದು ವಿಪುಲವಾಗಿ ಕಂಡು ಬರುತ್ತಿವೆ. ಕಾಡನ್ನೇ ಆಶ್ರಯಿಸಿ ಬದುಕುವ ಹುಲಿ, ಚಿರತೆ, ಆನೆಗಳು ನಾಡಿನತ್ತ ಆಕರ್ಷಿತವಾಗುತ್ತಿವೆ. ಇದೆಲ್ಲಾ ಮುಂದುವರಿದ ವಿಜ್ಞಾನವೆಂಬ ಮೋಸದ ಕೊಡುಗೆ. ಮನುಷ್ಯನ ಆಹಾರೋತ್ಪನ್ನಗಳ ಮೇಲೂ ಈ ತರಂಗ+ಕಿರಣ ಪರಿಣಾಮ ಉಂಟಾಗುತ್ತಿವೆ. ಮಾನವನಲ್ಲಿ ಧೈರ್ಯ ಸಾಹಸ, ಸ್ವಂತಿಕೆ, ಸೃಜನಶೀಲತೆ, ಪ್ರಾಮಾಣಿಕತೆ ಸಂಪೂರ್ಣ ನಾಶವಾಗುತ್ತಿವೆ. ಅದರಿಂದಾಗಿ ದೇಶಭಕ್ತಿ, ತ್ಯಾಗ, ದಾನ, ಸತ್ಯ, ದಯೆ ಇಲ್ಲವಾಗುತ್ತಿವೆ. ಇದೆಲ್ಲಾ ಜೈವಿಕ ಸಮತೋಲನ ತಪ್ಪಿದ ಪರಿಣಾಮಗಳು. ಇದನ್ನು ನಾಯಕನಾದವನು ಅರಿತಿರಬೇಕು. ಆ ಸಂಬಂಧಿ ಮುನ್ನೆಚ್ಚರಿಕೆ, ತಕ್ಕ ಶಿಕ್ಷಣ ನೀಡಬೇಕು. ಅದೇ ಸಮರ್ಥ ನಾಯಕನ ಮುಖ್ಯ ಲಕ್ಷಣ. ಈ ಒಟ್ಟಾರೆ ಸಂಸ್ಕೃತಿಯಾಧರಿಸಿದ ಜನಜೀವನ ಪದ್ಧತಿಗೆ ಮುಂದೆ ಇದು ಮಾರಕವಾಗಬಹುದು. ಹೀಗೆ ಮುಂದುವರಿದರೆ ನಿರ್ಬಲ ಮಾನವ ತಾನು ಸಾಕಿದ ನಾಯಿಗಳಿಂದಲೇ ಸರ್ವನಾಶವಾದಾನು ಎಚ್ಚರಿಕೆ.

ಇನ್ನು ಮೂರನೆಯದಾದ ನಾಯಕನ ನಡತೆ ಮತ್ತು ಶೀಲ, ತ್ಯಾಗ ಗುಣ, ಸರಳತೆ. ಅದನ್ನು ತಾನು ಆಚರಿಸಿ ಜನ ಅನುಕರಣೆ ಮಾಡುವಂತೆ ಪ್ರೇರೇಪಿಸಬೇಕು. ತಾನು ಉತ್ತಮ, ಸರಳ, ಶುದ್ಧ ಸ್ವಚ್ಛ ಜೀವನ ನಡೆಸಿ ಜನ ಅದನ್ನು ಅನುಸರಿಸುವಂತೆ ಮಾಡಬೇಕು. ಅದನ್ನೇ ಬ್ರಹ್ಮಣಸ್ಪತಿಗಳು ವಸಿಷ್ಠರಿಗೆ ಹೇಳಿದ್ದು. ಅವರ ಮಾತಿನಲ್ಲೇ ಹೇಳುವುದಾದರೆ ಅರಸನು ಅಥವಾ ನಾಯಕನು ತನ್ನ ರಾಜ್ಯ, ಶಾಸನ, ಪ್ರಜೆಗಳು, ಧರ್ಮ ಇವನ್ನು ಹೆಂಡತಿಗಿಂತಲೂ ಹೆಚ್ಚಾಗಿ ಪ್ರೀತಿಸಬೇಕು. ಅವರನ್ನು ಅಂದರೆ ಪ್ರಜೆಗಳನ್ನು ಅವರ ಕಷ್ಟ, ಬಾಧಕ, ಆಪತ್ತಿಗಳಿಂದ ನಿರಂತರ ರಕ್ಷಿಸುತ್ತಿರಬೇಕು. ಹಾಗೆ ಪ್ರಜಾಭಿವೃದ್ಧಿಯನ್ನು ದೀರ್ಘಕಾಲೀನ ಚಿಂತನೆಯಿಂದ ಕೈಗೊಳ್ಳಬೇಕು. ಭವಿಷ್ಯದಲ್ಲಿ ಯಾವುದೇ ದುಷ್ಪರಿಣಾಮವಾಗದಂತೆ ಯೋಜನೆ ಇರಬೇಕು. ತಾತ್ಕಾಲಿಕ ಚಿಂತನೆ, ತಾತ್ಕಾಲಿಕ ಲಾಭ ದೇಶದ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದಲ್ಲ. ರಾಜನ ಕೊಡುಗೆ ಪ್ರಜೆಗಳಿಗೆ ಪುರಸ್ಕಾರ ರೀತಿಯಲ್ಲಿರಬೇಕು. ಭಿಕ್ಷೆಯಾಗಿರಬಾರದು. ಈ ಹಿಂದೆ ಸರಕಾರದ ಒಂದು ಯೋಜನೆ ಉದಾಹರಿಸುತ್ತೇನೆ ಗಮನಿಸಿ. 

1973 ರಲ್ಲಿ ಟೆನೆನ್ಸಿ ಕಾನೂನು ಅಥವಾ ಒಕ್ಕಲು ಮಸೂದೆ ಜಾರಿಗೆ ಬಂತು. ಯಾರು ರೈತನೋ ಅವನೇ ಭೂಮಿಗೆ ಒಡೆಯ ಎಂಬ ಘೋಷಣೆ ಯೊಂದಿಗೆ ಆದರ್ಶವಾಗಿ ವೈಭವದಿಂದ ಜಾರಿಗೆ ಬಂದ ಕಾನೂನು ಕೃಷಿ ಅಭಿವೃದ್ಧಿ ದೃಷ್ಟಿಯಿಂದ ಜಾರಿಗೆ ಬಂತು. ಆಗ ದೇಶದಲ್ಲಿ ಒಟ್ಟು ಭೂಮಿಯಲ್ಲಿ ಶೇಕಡಾ 42 ಭಾಗ ಕೃಷಿಭೂಮಿ, ಉತ್ತಮ ಕೃಷಿಯಾಗುತ್ತಿತ್ತು. ಅದು ಆಹಾರ ಧಾನ್ಯಗಳು, ಹಣ್ಣುಗಳು, ತರಕಾರಿ, ವನಸ್ಪತಿ ಇತ್ಯಾದಿ ಇತ್ಯಾದಿ. ಆಗ ಭೂಮಾಲೀಕನಿದ್ದ, ರೈತರಿದ್ದರು, ಉತ್ತಮ ಕೃಷಿ ಮಾಡಿ ಬೆಳೆ ಹಂಚಿಕೊಳ್ಳುತ್ತಿದ್ದರು, ಕೊರತೆ ಇರಲಿಲ್ಲ. ಆದರೆ ಈಗ ಆ ಭೂಕಂದಾಯ ಮತ್ತು ಪಟ್ಟ ಹಕ್ಕಿನ ಜಮೀನು ಶೇಕಡಾ 60 ಭಾಗ ಬೀಳು ಬಿದ್ದಿದೆ. ನೀರಾವರಿ ಇತ್ಯಾದಿ ಅಭಿವೃದ್ಧಿ ಸಾಧಿಸಿದ್ದರೂ ಆಹಾರ ಧಾನ್ಯ ಉತ್ಪಾದನೆ ಕುಂಠಿತವಾಗುತ್ತಿದೆ. ಕಾರಣ ಧರ್ಮಕ್ಕೆ ಭೂಮಿ ಸಿಕ್ಕಿದ ರೈತ ಅದನ್ನು ಬೀಳು ಬಿಟ್ಟಿದ್ದಾನೆ. ಕಾರಣ ಕೃಷಿ ಅಭಿವೃದ್ಧಿಯೆಂಬ ಸರಕಾರಿ ಧೋರಣೆ ದಾರಿ ತಪ್ಪಿದೆ. ಧರ್ಮಕ್ಕೆ ಸಿಕ್ಕಿದ ಜಮೀನನ್ನು ರೈತ ಮಾರಿಕೊಂಡು ಪಟ್ಟಣ ಸೇರಿದ್ದಾನೆ. ಹಳ್ಳಿ ಹಾಳು ಬಿದ್ದು ಭಣಗುಡುತ್ತಿದೆ. ಕೃಷಿ ಚಟುವಟಿಕೆ ನಾಶದ ಅಂಚಿನಲ್ಲಿ ಬಂದು ನಿಂತಿದೆ. ಮುಂದೆ ಅನ್ನದ ಕೊರತೆಯೆಂಬ ಭೀಕರ ಬರಗಾಲ ಬರಬಹುದು. ಹಾಗೆಂದು ಒಂದು ರೂಪಾಯಿಗೆ ಅಕ್ಕಿ ಕೊಟ್ಟರೆ ಬರಗಾಲ ನಿವಾರಣೆಯಾಗುವುದಿಲ್ಲ. ಆ ಕಾನೂನು ಮಾಡಿದ ತಜ್ಞರಿಗೆ ಅನುಭವ ಸಾಲದು, ಭೂಮಿಯ ಒಡೆತನ ಕೊಟ್ಟು ಬಿಟ್ಟರೆ ಕೃಷಿ ಅಭಿವೃದ್ಧಿ ಸಾಧ್ಯವಿಲ್ಲ. ಆ ಉಳುವ ರೈತ ಹೆಚ್ಚು ಬೆಳೆ ತೆಗೆಯಲು ಬೇಕಾದ ಪ್ರೋತ್ಸಾಹ, ಸೌಲಭ್ಯ, ಬೆಲೆ ಕೊಡಲಿಲ್ಲ. ಹಾಗಾಗಿ ಕೃಷಿ ನಿರ್ನಾಮವಾಗುತ್ತಿದೆ. ಭೂಮಿಯ ಒಡೆತನದಿಂದ ರೈತನ ಅಭಿವೃದ್ಧಿ ಸಾಧ್ಯವಿಲ್ಲ, ಅದರಿಂದ ಉತ್ಪತ್ತಿ ತೆಗೆದರೆ ರೈತನ ಅಭಿವೃದ್ಧಿ ಸಾಧ್ಯವೆಂಬ ಸಣ್ಣ ಅಂಶ ಕಾನೂನು ತಜ್ಞರಿಗೆ ತಿಳಿಯಲಿಲ್ಲ. ಒಡೆತನ ಕೊಟ್ಟರು, ರೈತನಿಗೆ ಹಣಬೇಕು, ಈಗಿನ ಕಂಪೆನಿಗಳೆಂಬ ಜಮೀನ್ದಾರಿಕೆ ಹುಟ್ಟಿಕೊಂಡು ಜಮೀನು ಕೊಂಡು ಕೊಂಡರು, ರೈತ ಮಾರಿದ, ಪಟ್ಟಣ ಸೇರಿದ, ನಗರ ಜೀವನವೂ ಅಸ್ತವ್ಯಸ್ತವಾಯ್ತು.

ಉದಾ:- 1970 ನೇ ಇಸವಿಯ ಹಿಂದೆ ನಮ್ಮ ಬೆಂಗಳೂರು ಸ್ವರ್ಗವೆಂದೇ ಕರೆಯುತ್ತಿದ್ದರು. ನಂತರದ ದಿನಗಳಲ್ಲಿ ಕೆಡುತ್ತಾ ಬಂದು ಈಗ ನರಕವೆಂದರೆ ಒಂದು ಜ್ವಲಂತ ಉದಾಹರಣೆ ಬೆಂಗಳೂರು ಆಗಿದೆ. ಇದು ಅಭಿವೃದ್ಧಿಯ ಹೆಸರಿನಲ್ಲಿ ಕೈಗೊಂಡ ನಿರ್ಣಯದ ತಪ್ಪು. ಹಾಗಾಗಿ ಶತ್ರುಗಳು ಎಂದರೆ ಹೊರಗಿನವರಲ್ಲ, ತಪ್ಪು ಕಾನೂನುಗಳು, ತಪ್ಪು ಅಭಿವೃದ್ಧಿ ಯೋಜನೆಗಳು, ವೃಥಾ ಆಮಿಷಗಳು, ಅನಗತ್ಯ ಲಾಭ ಚಿಂತನೆ, ಅತೀ ಲಾಲಸೆಯನ್ನು ಕೊಡುವ ನಾಯಕನೇ ಪ್ರಜೆಗಳಿಗೆ ಶತ್ರು ಎಂದು ಬ್ರಹ್ಮಣಸ್ಪತಿಗಳು ಹೇಳಿದರು. ಹಾಗಾಗಿ ನಾಯಕನಾದವನು ಸರಳನೂ, ತ್ಯಾಗಿಯೂ, ವಿಚಕ್ಷಣಮತಿಯೂ, ಪ್ರಜೆಗಳ ಹಿತವೇ ತನ್ನ ಹಿತವೆಂದೂ, ಆಜ್ಞ ಪ್ರಜೆಗಳ ಹಿತವನ್ನು ತಾನರಿತು ಮಾಡಬೇಕೆಂದೂ ಹೇಳಿದರು. ಹಾಗೇ ಪ್ರಜೆಗಳು ಕರ್ತವ್ಯವೆಂಬ ಮತ್ತೊಂದನ್ನು ಹೇಳಿದರು. ಹಿಂದಿನ ಮೂರು ರಾಜನಾದರೆ ಈ ಒಂದು ಪ್ರಜೆಗಳು. ಪ್ರಜೆಗಳು ಹೇಗಿರಬೇಕು? ಅದೇ ಮಂತ್ರ ಗಮನಿಸಿ. ಅಲ್ಲಿ ಪ್ರಜೆಯೆಂದರೆ ಏನು ಎಂದು ವಿವರಿಸಿದೆ.

ಪ್ರಜಾ:- ಸತ್, ಕ್ಷಮಾ, ಧೃತಿ, ಶೃತಿ, ಭಕ್ತ, ಭಕ್ತ್ಯಾನುವರ್ತಿನೀ ||
ನಿತ್ಯ, ವಿನೂತನೈ, ಸತ್ಯಾಶ್ರಯಾಃ, ತೃಪ್ತ, ಕಾಂಚನಪ್ರಭಾಃ ||

ಒಬ್ಬ ಪ್ರಜೆ ತಾನು ಮೊದಲು ದೇಶಭಕ್ತನಾಗಿರಬೇಕು. ಆಳುವ ಸರಕಾರ+ಕಾನೂನಿಗೆ ಬದ್ಧನಾಗಿರಬೇಕು. ತನ್ನ ಹಿತ, ಲಾಭವನ್ನು ಗಣಿಸಿ ಕಾನೂನಿಗೆ ಮೋಸ ಮಾಡಬಾರದು. ದೇಶದ ಎಲ್ಲಿಯೇ ಅಂತಹ ಮೋಸ ನಡೆಯುವುದು ಕಂಡು ಬಂದರೂ ಅದನ್ನು ಆಡಳಿತದ ಗಮನಕ್ಕೆ ತರಬೇಕು. ಹಾಗೇ ಆ ವಿಚಾರ ದಾಖಲಾತಿಯನ್ನೂ ಹೊಂದಿರಬೇಕು. ಸದಾ ಅದಕ್ಕೆ ಸಂಬಂಧಿಸಿ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ವಿಚಾರಿಸುತ್ತಿರಬೇಕು. ಇಲ್ಲವಾದಲ್ಲಿ ಇಲಾಖಾ ಅಧಿಕಾರಿಗಳು ಭ್ರಷ್ಟಾಚಾರ ಮಾಡಲು ಸಹಾಯವಾಗುತ್ತದೆ. ಈ ಸಂಬಂಧಿಯಾಗಿ ಎರಡು ಉದಾಹರಣೆ ಕೊಡುತ್ತೇನೆ. ಹಾಗೇ ಪ್ರತೀ ಪ್ರಜೆಯೂ ತಮ್ಮ ಮಕ್ಕಳಿಗೆ ಆದಷ್ಟು ಕಾನೂನಿನ ಪರಿಚಯ ಮಾಡಿಸಬೇಕು. ಅವ್ಯವಹಾರವನ್ನು ಖಂಡಿಸುವ ಮನೋವೃತ್ತಿ ಬೆಳೆಸಬೇಕು. ಒಟ್ಟಾರೆ ಪುತ್ಥಳಿ ಚಿನ್ನದಂತಹಾ ಜೀವನವಿರಬೇಕು. ದೇಶವೆಂಬುದು ನಮ್ಮ ದೇವಾಲಯ. ಅಲ್ಲಿ ಆಳುವ ಅರಸನೇ ದೇವರು. ಪ್ರಜೆಯೇ ಭಕ್ತ. ಯಾವುದೇ ಕಾರಣಕ್ಕೂ ಧೈವದ್ರೋಹ ಮಾಡಬಾರದು. ಒಟ್ಟು 11 ಲಕ್ಷಣಯುಕ್ತನಾದವನೇ ನಿಜವಾದ ಪ್ರಜೆಯೆನಿಸಿಕೊಳ್ಳುತ್ತಾನೆ.

ಮುಖ್ಯವಾಗಿ ಗಮನಿಸಿ, ನಮ್ಮನ್ನು ನಾವು ಆಳಿಕೊಳ್ಳುತ್ತಿದ್ದೇವೆ ಎಂಬ ಧ್ಯೇಯ ಆದರ್ಶಗಳಿಂದ ಯುಕ್ತರಾಗಿ ಬ್ರಿಟಿಷರಿಂದ ಅಧಿಕಾರ ಪಡೆದ ನಾವು ನಾವೇ ಪ್ರಭುಗಳು. ನಮ್ಮನ್ನಾಳುವ ಸರಕಾರ 5 ವರ್ಷದ ಮಟ್ಟಿಗೆ ನಾವೇ ಆರಿಸಿದ ಪ್ರಜಾ ಸೇವಕರು. ಅವರು ದೊರೆಗಳಲ್ಲ. ನಮ್ಮ ಸುತ್ತಮುತ್ತ ಇರುವ ಸರಕಾರೀ ನೌಕರರು, ಅಧಿಕಾರಿಗಳು, ಪ್ರಜೆಗಳ ಹಣದಿಂದ ಸಂಬಳ ಪಡೆದು ಕಾರ್ಯ ನಿರ್ವಹಿಸುವ ಕೂಲಿಗಳು. ನಾವು ಪ್ರಜೆಗಳು ಪ್ರಭುಗಳು. ಹಾಗೆಂದು ವೃಥಾ ವೈಯಕ್ತಿಕ ಕಾರಣದಿಂದ ಅವರನ್ನು ದೂಷಿಸಬೇಡಿ. ಅವರು ಯಾರೂ ಅಲ್ಲಿ ಸರಕಾರೀ ಸೇವೆಯಲ್ಲಿ ನಿಯುಕ್ತರಾದ ನಮ್ಮ ನಿಮ್ಮ ಬಂಧುಗಳೇ. ಅವರು ಪ್ರಾಮಾಣಿಕ ಸೇವೆ ನಿರ್ವಹಿಸುತ್ತಿದ್ದರೆ ಅವರಿಗೆ ಗೌರವವಿರಲಿ. ಆದರೆ ಅವರು ಭ್ರಷ್ಟಾಚಾರ, ಲಂಚಗುಳಿತನ, ವಂಚನೆಗಿಳಿದರೂ ಅವರು ನಿಮ್ಮ ಅಣ್ಣ, ತಮ್ಮ, ತಂದೆ ಯಾರೇ ಆಗಿರಲಿ ಅವರನ್ನು ಖಂಡಿಸಿರಿ, ದೂಷಿಸಿರಿ, ಅವರನ್ನು ತ್ಯಜಿಸಿರಿ. ಇದೇ ಭಾರತೀಯ ಪ್ರಜೆಯ ಆದ್ಯ ಕರ್ತವ್ಯ. ಮುಖ್ಯವಾಗಿ ಪ್ರಜಾಪ್ರಭುತ್ವದಲ್ಲಿ ಸ್ವಹಿತಾಸಕ್ತಿ ಗೌಣ. ಸಾರ್ವಜನಿಕ ಹಿತಾಸಕ್ತಿ ಮುಖ್ಯ. ಇದು ವೇದಕಾಲದ ಆದರ್ಶ. ಸರ್ವೇ ಜನಾಃ ಸುಖಿನೋ ಭವಂತು ಇಲ್ಲಿ ನನಗೆ ಸುಖ, ಸಂತೋಷ ಕೇಳಿಲ್ಲ, ಎಲ್ಲರಿಗೂ ಸಿಗಲಿ ಅರ್ಥಾತ್ ಎಲ್ಲರಲ್ಲಿ ನಾನೂ ಒಬ್ಬ, ಈ ಆದರ್ಶ. ಈ ಆದರ್ಶದೊಂದಿಗೆ ಇಂದೇ ನವಭಾರತ ನಿರ್ಮಾಣ ಸಂಕಲ್ಪ ಬದ್ಧರಾಗಿ ಸತ್ಯ, ನ್ಯಾಯ, ಧರ್ಮವೇ ದೇವರು. ಅದಕ್ಕೆ ನಾಮಕರಣ ಬೇಡ. ಎಲ್ಲರೂ ದೇವರನ್ನು ಪೂಜಿಸೋಣ.
ಇಂತು
ಕೆ.ಎಸ್. ನಿತ್ಯಾನಂದ
ಅಘಸ್ತ್ಯಾಶ್ರಮ ಗೋಶಾಲೆ
ಬೇರಿಕೆ ಬೆಂದ್ರ, ಬಂದ್ಯೋಡು, ಕೇರಳ.

No comments:

Post a Comment