Tuesday, 25 November 2014

ಕುಮುದೇಂದುಮುನಿಯ ಸಿರಿಭೂವಲಯದ ಕೆಲವು ಸಾಂಗತ್ಯ ಪದ್ಯಗಳು

ಸಿರಿಭೂವಲಯದ ಕವಿಕಾವ್ಯಸಾರ (ಒಂದು ಕಿರು ಕಥನಕಾವ್ಯ) 

ರಚನೆ: ಸಿರಿಭೂವಲಯದ ಸುಧಾರ್ಥಿ 

ಒರೆಯುತಿಹೆ ನಾನೀಗ| ಧರೆಯಸೌಭಾಗ್ಯವನು||
ಗುರು ಕುಮುದೇಂದು ರಚಿಸಿರುವ| ಸಿರಿಪಾದ ಕಾವ್ಯವನು||ಪ||

ಆದಿನಾಥರಕಾವ್ಯ| ಭೇದವಳಿಸುವಕಾವ್ಯ||
ಬೋಧಿಸಿದ ಗೊಮ್ಮಟನ| ಸುಧೆಯಸಾಗರಕಾವ್ಯ||೧||

ಅಜಿತನಾಥರಕಾವ್ಯ| ಶಂಭವನಶುಭಕಾವ್ಯ||
ಅಭಿನಂದನರು ಸುಮತಿ| ಸಮ್ಮತಿಸಿದಕಾವ್ಯ||೨||

ಪದುಮಪ್ರಭತುಂಬಿರುವ| ಸುಪಾರ್ಶ್ವನಾಥರಕಾವ್ಯ||
ಚಂದ್ರಪ್ರಭದೇವ| ಪುಷ್ಪದಂತರಕಾವ್ಯ||೩||

ಶೀತಲಶ್ರೇಯಾಂಸವಾಸುಪೂಜ್ಯ| ವಿಮಲಾನಂತಧರ್ಮ||
ಶಾಂತಿಕುಂತುವುಮತ್ತೆ| ಅರನೊರೆದಸಿರಿಕಾವ್ಯ||೪||

ಮಲ್ಲಿನಾಥರುಇತ್ತ|  ಸುವ್ರತರುನಮಿನೇಮಿ||
ಪಾರ್ಶ್ವನಾಥರನುಡಿಯು| ಮಹವೀರವಾಣಿ||೫||

ಯದುನಂದನನಗೀತೆ| ಭೂವಲಯಸಂಜಾತೆ||
ವ್ಯಾಸರುಸುರಿದವಾಣಿ| ಪರಬೊಮ್ಮನಾರಾಣಿ||೬||

ಅದ್ವೈತಸಾಗರಕೆ| ಮೇರೆಇರಿಸದಕಾವ್ಯ||
ಸ್ಯಾದ್ವಾದದಾಸಿರಿಯು| ತುಂಬಿಗರಿಯುವಕಾವ್ಯ||೭||

ಧಾರಿಣಿಯಗುರುಫಣನ| ಮೀರಿಬೆಳೆದಿಹಕಾವ್ಯ||
ಧರೆಯಮಾನವರೆಲ್ಲ| ಒಂದೆನುವಸಿರಿಕಾವ್ಯ||೮||

ಧರಸೇನ ಗುಣಸೇನ| ಕುಂದಕುಂದರಜ್ಞಾನ||
ಸಿಂಧುಶಯನನಸಿರಿಯು| ಕುಮುದೇಂದುಧ್ಯಾನ||೯||

ವೀರಸೇನರ ವಿವರ| ಜಿನಸೇನರಾ ಪ್ರವರ||
ಗುರುಪರಂಪರೆವಾಣಿ| ಭೂವಲಯರಾಣಿ||೧೦||

ಕರಕಮಲದಲಗಳಲಿ| ವೈರಾಗ್ಯವರಿತವರು||
ಧರೆಯಜನಗಳಿಗೆಲ್ಲ| ಧರುಮವರುಹುತಲಿಹರು||೧೧||

ಸಕಲವನುಬಲ್ಲವನು| ಸುತನೆಂಬಪ್ರೇಮದಲಿ||
ಜಕಿಲಕಿಯಬ್ಬೆತಾ| ಬರೆಸಿರುವಸಿರಿಕಾವ್ಯ||೧೨||

ಮಲ್ಲಿಕಬ್ಬೆಯಭಕ್ತಿ| ಗುರುಶಕ್ತಿ ಮುಕ್ತಿ||
ಹರಿದುಬಂದಿಹಭವ್ಯ| ಕುಮುದೇಂದುಕಾವ್ಯ||೧೩||

ಅಷ್ಟಕರ್ಮವಕೆಡಿಪ| ಶಿಷ್ಟರುಸುರಿದಕಾವ್ಯ||
ಅಷ್ಟಮಜಿನತಾನು| ಸೃಷ್ಟಿಸಿದಸಿರಿಕಾವ್ಯ||೧೪||

ಕನ್ನಡಿಯಕನ್ನಡವು| ಆದಿಜಿನನುಸಿರೆಂಬ||
ಅಚ್ಚರಿಯತೆರೆದಿಡುವ| ಕನ್ನಡದಸಿರಿಕಾವ್ಯ||೧೫||

ವೇದಸಾರುತಿಹಯಜ್ಞಯಾಗಗಳು| ಹಿಂಸೆಯೆನುವಭಾವ||
ವೇದವಾಕ್ಯಗಳಸತ್ಯಸತ್ವಗಳ| ಅರಿತಜಿನನಕಾವ್ಯ||೧೬||

ಸರಸತಿಯ ಸಿರಿಮುಡಿಯ| ಸೇರಿಪಾವನವಾದ||
ಸಿರಿಕಂಠತೆರೆದಿಟ್ಟ| ಸುರವಂದ್ಯಸಿರಿಕಾವ್ಯ||೧೭||

ಮೋಡದಲಿಮಂತ್ರಗಳ| ನೋಡಿತಿಳಿಯುತಲಿದ್ದ||
ದೇವರಾತರುಸವಿದ| ದಿಕ್ಕುಧರಿಸಿದಕಾವ್ಯ||೧೮||

ಸಿಗದಕಾವ್ಯವಿದೆಂದು| ರಾಜೇಂದ್ರರಕ್ಷಿಸಿದ||
ಜಗದಅಚ್ಚರಿತಾನು| ಯುಗಯುಗದಕಾವ್ಯ||೧೯||

ಕಬ್ಬಿಣದಕಡಲೆಯನು| ಕಬ್ಬಿನಾರಸದಂತೆ||
ಜಗದಜನಗಳಿಗಿತ್ತ| ಗಿರಿಜೆಯೊಲವಿನಕಾವ್ಯ||೨೦||

ಸುಧೆಯನರ್ಥಿಸುವವನ| ಹೃದಯಕಮಲದಕಾವ್ಯ||
ಪದುಮಾವತಿಯರಸ| ಮುದದಿರಚಿಸಿದಕಾವ್ಯ||೨೧||

ಬೆಂದಕಾಳೂರ್ಸನಿಹ| ನಂದಿಗಿರಿತಪ್ಪಲಲಿ||
ಯಲವಭೂರಿಸಿಬರೆದ| ಸಿರಿಭೂವಲಯಕಾವ್ಯ||೨೨||

ಚೆನ್ನಿರುವಕಾವ್ಯವಿದು| ಹೊನ್ನುಡಿಯಹೆಮ್ಮೆಯಿದು||
ಕಸವರದಕಂಠದಲಿ|ಹಾಡಬೇಕಿಹಕಾವ್ಯ||೨೩||
******************************************************

***ಕುಮುದೇಂದುಮುನಿಯ ಸಿರಿಭೂವಲಯದ ಕೆಲವು ಸಾಂಗತ್ಯ ಪದ್ಯಗಳು***ಅಷ್ಟಮಹಾಪ್ರಾತೀಹಾರ್ಯವೈಭವದಿಂದ| ಅಷ್ಟಗುಣಂಗಳೊಳ್ಓಂದಮ್||
ಸೃಷ್ಟಿಗೆ ಮಂಗಲಪಯರ್ಯಾಯದಿನಿತ್ತ| ಅಷ್ಟಮಜಿನಗೆರಗುವೆನು ||
*  *  *
ಟವಣೆಯಕೋಲುಪುಸ್ತಕಪಿಂಛಪಾತ್ರೆಯ|ಅವತಾರದಕಮಂಡಲದ||
ನವಕಾರಮಂತ್ರಸಿದ್ಧಿಗೆಕಾರಣವೆಂದು|ಭುವಲಯದೊಳುಪೇಳ್ದಮಹಿಮಾ
*  *  *
ಆದಿದೇವನುಆದಿಯಕಾಲದಿಪೇಳ್ದ|ಸಾಧನೆಯಧ್ಯಾತ್ಮಯೋಗ||
ದಾದಿಯಅಜ್ಞಾನವಳಿವಧರ್ಮಧ್ಯಾನ|ಸಾಧಿತಕಾವ್ಯಭೂವಲಯ
*  *  *
ಲಾವಣ್ಯದಂಗಮೈಯ್ಯಾದಗೊಮ್ಮಟದೇವ|ಆವಾಗತನ್ನಅಣ್ಣನಿಗೆ||
ಈವಾಗಚಕ್ರಬಂಧದಕಟ್ಟಿನೊಳ್ಕಟ್ಟಿ|ದಾವಿಶ್ವಕಾವ್ಯಭೂವಲಯ
*  *  * 
ಯಶಸ್ವತೀದೇವಿಯಮಗಳಾದಬ್ರಾಹ್ಮಿಗೆ|ಅಸಮಾನಕರ್ಮಾಟಕದ||
ರಿಸಿಯುನಿತ್ಯವುಅರುವತ್ನಾಲ್ಕಕ್ಷರ|ಹೊಸೆದಂಗೈಯ್ಯಭೂವಲಯ||
*  *  *
ಕರ್ಮಟಕಮಾತಿನಿಂದಲಿಬಳಸಿಹ|ಧರ್ಮಮೂರ್ನೂರರವತ್ಮೂರಂ||
ನಿರ್ಮಲವೆನ್ನುತಬಳಿಯಸೇರಿಪಕಾವ್ಯ|ನಿರ್ಮಲಸ್ಯಾದ್ವಾದಕಾವ್ಯ
*  *  *
ಹದಿನೆಂಟುಭಾಷೆಯುಮಹಭಾಷೆಯಾಗಲು| ಬದಿಯಭಾಷೆಗಳ್ಏಳ್ನೂರಮ್||
ಹೃದಯದೊಳಡಗಿಸಿಕರ್ಮಾಟಲಿಪಿಯಾಗಿ| ಹುದುಗಿಸಿದಂಕಭೂವಲಯ ||
*  *  *
ಸಾವಿರದೆಂಟುಭಾಷೆಗಳಿರಲವನೆಲ್ಲ|ಪಾವನಮಹಾವೀರವಾಣಿ||
ಕಾವಧರ್ಮಾಂಕವುಓಂಬತ್ತಾಗಿರ್ಪಾಗ|ತಾವುಏಳ್ನೂರ್ಹದಿನೆಂಟು
*  *  *
ವರಪದ್ಮಮಹಾಪದ್ಮದ್ವೀಪಸಾಗರಬಂಧ|ಪರಮಪಲ್ಯದಅಂಬುಬಂಧ|
ಸರಸಶಲಾಕೆಯಶ್ರೇಣಿಯಂಕಬಂಧ|ಸೀಮಾತೀತದಲೆಕ್ಕಬಂಧ||
*  *  *
ತರುಣನುದೋರ್ಬಲಿಯವರಕ್ಕಬ್ರಾಹ್ಮಿಯು|ಕಿರಿಯಸೌಂದರಿಅರಿತಿರ್ದ||
ಅರವತ್ನಾಲ್ಕಕ್ಷರನವಮಾಂಕಸೊನ್ನೆಯ|ಪರಿಯಿಹಕಾವ್ಯಭೂವಲಯ||
*  *  *
ಭಾರತದೇಶದಮೋಘವರ್ಷನರಾಜ್ಯ|ಸಾರಸ್ವತವೆಂಬಂಗ||
ಸಾರಾತ್ಮಗಣಿತದೊಳಕ್ಷರಸಕ್ಕದ|ನೂರುಸಾವಿರಲಕ್ಷಕೋಟಿ||
*  *  *
ಜನಿಸಲುಸಿರಿವೀರಸೇನರಶಿಷ್ಯನ|ಘನವಾದಕಾವ್ಯದಕಥೆಯ||
ಜಿನಸೇನಗುರುಗಳತನುವಿನಜನ್ಮದ|ಘನಪುಣ್ಯವರ್ಧನವಸ್ತು||
*  *  *
ವೋದಿನೊಳಂತರ್ಮುಹೂರ್ತದಿಸಿದ್ಧಾಂತ|ದಾದಿಅಂತ್ಯವನೆಲಚಿತ್ತ||
ಸಾದಿಪರಾಜಅಮೋಘವರ್ಷನಗುರು|ಸಾಧಿತಶ್ರಮಸಿದ್ಧಕಾವ್ಯ||
*  *  *
ಗಣಿತಶಾಸ್ತ್ರವದೆಲ್ಲಮುಗಿದರುಮಿಕ್ಕುವ| ಗಣಿತವನಣುರೂಪಮ್ಗೈದು||
ಕ್ಷಣವೆನೆಸಮಯಓಂದರೊಳಸಂಖ್ಯಾತದ| ಗುಣಿತದಿಕೆಡಿಸುವಕ್ರಮವು
*  *  *
ಅಂಕವಿಜ್ಞಾನವಿರುವಗಣಿತಯೋಗ| ದಂಕೆಒಂದೊಂದಲೊಂದು||
ಶಂಕೆಯಿಲ್ಲದೆನೋಡಲಾದಿಯಾದೊಂದನು| ಪೆಂಕನೆಂತರಿವೆನೆನುವನು||
*  * *
ಅಣುವುನೀರೊಳಗೆಷ್ಟುಅನಲವಾಯುಗಳೆಷ್ಟು| ನೆನೆದುಸುಡದಅಣುವೆಷ್ಟು||
ತನಿವರ್ಣನಾಲ್ಕರಿಮ್ಪೂರಣಗಲನದೆ| ಮಿನುಗುವಪರಮಾಣುವೆಷ್ಟು ||
*  *  *
ಕರುನಾಡತಣ್ಪಿನನೆಲದೊಳುಹುಟ್ಟಿದ| ಕುರುಹರಿಪುರುವಂಶವೆರೆದು||
ಪೊರೆದುಹೊತಿಸಿದಅಂಕಜ್ವಾಲೆಯಬೆಳಕಿನ| ಪರಿಯಚಿಜ್ಯೋತಿಇದರಿಯಾ ||
*   *   *
ತನುವನಾಕಾಶಕೆಹಾರಿಸಿನಿಲಿಸುವ| ಘನವೈಮಾನಿಕದಿವ್ಯಕಾವ್ಯ||
ಪನಸಪುಷ್ಪದಕಾವ್ಯವಿಶ್ವಂಭರಕಾವ್ಯ| ಜಿನರೂಪಿನಭದ್ರಕಾವ್ಯ ||
*   *  *
ಯವೆಯಕಾಳಿನಕ್ಷೇತ್ರದಳತೆಯೊಳಡಗಿಸಿ| ಅವರೊಳನಂತವಸಕಲಾನ್||
ಕವನವದೊಳ್ಸವಿಯಾಗಿಸಿಪೇಳುವ| ನವಸಿರಿಇರುವಭೂವಲಯ ||
*   *   *
ಕರುಣೆಯಧವಲವರ್ಣದಪಾದಗಳಿಹ| ಪರಮಾತ್ಮಪಾದದ್ವಯದೆ||
ಸಿರವಿಹನಾಲ್ಕಂಕವೆರಸಿಸಿಂಹದಮುಖ| ಭರತಖಂಡದಶುಭಚಿಹ್ನೆ ||
*   *   *
ಋಷಿಗಳೆಲ್ಲರುಎರಗುವತೆರದಲಿ| ಋಷಿರೂಪಧರಕುಮುದೇಂದು||
ಹಸನಾದಮನದಿಂದಮೋಘ| ವರ್ಷಾಂಕಗೆಹೆಸರಿಟ್ಟುಪೇಳ್ದಶ್ರೀಗೀತೆ ||
*   *   *
ಮಿಗಿಲಾದತಿಶಯದೇಳ್ನೂರಹದಿನೆಂಟು|ಅಗಣಿತದಕ್ಷರಭಾಷೆ||
ಶಗಣಾದಿಪದ್ಧತಿಸೊಗಸಿನಿಮ್ರಚಿಸಿಹೆ|ಮಿಗುವಭಾಷೆಯುಹೊರಗಿಲ್ಲ||
*  *  *
ವರವಿಶ್ವಕಾವ್ಯದೊಳಡಗಿರ್ಪಕಾರಣ|ಸರಣಿಯನರಿತವರ್ಶುಭದ||
ಗುರುವರವೀರಸೇನರಶಿಷ್ಯಕುಮುದೇಂದು|ಗುರುವಿರಚಿತದಾದಿಕಾವ್ಯ
*  *  *
ಓದಿಸಿದೆನುಕರ್ಮಾಟದಜನರಿಗೆ|ಶ್ರೀದಿವ್ಯವಾಣಿಯಕ್ರಮದೆ||
ಶ್ರೀದಯಾಧರ್ಮಸಮನ್ವಯಗಣಿತದ|ಮೋದದಕಥಯನಾಲಿಪುದು||
*  *  *
ಮೇರುವಬಲಕ್ಕಿಂತಿರುಗುತನೆಲೆಸಿರ್ಪ| ಭೂರಿವೈಭವಯುತರಾದ||
ಸಾರದಬೆಳಕಬೀರುವಚಂದ್ರಸೂರ್ಯರು| ಧಾರುಣಿಯೊಳ್ತೋರ್ಪವರೆಗೆ ||
*   *   *
ನೀಲಾಂಬರದೊಳುಹೊಳೆಯುವನಕ್ಷತ್ರ| ಮಾಲಿನ್ಯವಾಗದವರೆಗೆ||
ಶೀಲವ್ರತಂಗಳೊಳುಬಾಳ್ದುಜನರೆಲ್ಲ| ಕಾಲನಜಯಿಸಲೆತ್ನಿಸಲಿ || 

******************************************************

ಸಂಕ್ಷಿಪ್ತ ಸಂಗ್ರಹ: ಸಿರಿಭೂವಲಯದ ಸುಧಾರ್ಥಿ. ದೂರವಾಣಿ: 9449946280.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: sudharthyhassan@gmail.com

Sunday, 16 November 2014

ಬೃಹತ್ಸಂಹಿತಾ : ಶಾಸ್ತ್ರ ಉಪನಯನಾಧ್ಯಾಯ

ಸಂಸಾರದ ಉತ್ಪತ್ತಿಯ ಕಾರಣವನ್ನು ಹೇಳುತ್ತಾ
ಅಗ್ನೌ ಹುತಾಹುತಿಃ ಸಮ್ಯಗಾದಿತ್ಯಮುಪತಿಷ್ಠತೆ |
ಆದಿತ್ಯಾಜ್ಜಾಯತೇ ವೃಷ್ಟಿರ್ವೃಷ್ಟೇರನ್ನಂ ತತಃ ಪ್ರಜಾಃ [ಮನು].

ವಿಶ್ವದ ಆತ್ಮನೇ ಸೂರ್ಯನೆಂದು ಸೂರ್ಯ ಆತ್ಮಾ ಜಗತಸ್ತಸ್ಥುಷಶ್ಚ [ಶ್ರುತಿ]. ಆಕಾಶದ ಸ್ವಾಭಾವಿಕ ಆಭೂಷಣ ಹಾಗೂ ದ್ರವಿತ ಸುವರ್ಣದ ಸಮಾನವಾದ ಅನೇಕ ಕಿರಣಗಳಿಂದ ಶೋಭಾಯಮಾನನಾದ ಸವಿತೃ ಶ್ರೀ ಸೂರ್ಯನಾರಾಯಣ ಭಗವಾನ್ ಸರ್ವೋತ್ಕೃಷ್ಟತೆಯಿಂದ ಅರ್ಚಿಸಲ್ಪಟ್ಟಿದ್ದಾನೆ. ಪ್ರಥಮ ಮುನಿ (ಬ್ರಹ್ಮ)ನಿಂದ ಹೇಳಲ್ಪಟ್ಟಿರುವ ವಿಸ್ತೃತ ಗ್ರಂಥದ ಸತ್ಯಾರ್ಥವನ್ನು ನೋಡಿ ಅದನ್ನೇ ಅತಿ ಸಂಕ್ಷೇಪ ಹಾಗೂ ವಿಸ್ತಾರ ರಾಹಿತ್ಯ ರಚನೆಯಿಂದ ಸ್ಪಷ್ಟ ರೂಪದಿಂದ ಉಚ್ಛರಿಸಲು ವರಾಹಮಿಹಿರಾಚಾರ್ಯರು ಉಪಕ್ರಮಿಸುತ್ತಾರೆ. ಪ್ರಾಚೀನ ಮುನಿಗಳಿಂದ ವಿರಚಿತವಾದದ್ದು ಚಿರಂತನವಾಗಿರುತ್ತದೆ. ಅದು ಸಾಧು ಕಥಿತವೆಂದು ತಿಳಿಯಬೇಕೇ ಹೊರತು ಮನುಷ್ಯ ಲಿಖಿತವೆಂದಲ್ಲ.

       ಈ ಸಂಪೂರ್ಣ ಜಗತ್ತು ಹಿಂದೆ ಅಂಧಕಾರಮಯವಾಗಿತ್ತು. ಆಗ ಸ್ವರ್ಭೂಶಕಾಲೇ ಬ್ರಹ್ಮಾ ವಿಶ್ವಕೃದಂಡೇರ್ಕಶಶಿನಯನಃ ಎಂಬಂತೆ ಅಲ್ಲಿ ಅಂಧಕಾರದ ವಿಷಯ ಜಲದಲ್ಲಿ ತೇಜೋಮಯವಾದ ಒಂದು ಸುವರ್ಣ ಅಂಡವು ಉತ್ಪನ್ನವಾಯಿತು. ಅದು ವಿಭಜಿಸಿ ಸ್ವರ್ಗ ಹಾಗೂ ಪೃಥ್ವೀ ರೂಪು ಪಡೆಯುತ್ತವೆ. ಆ ಭಾಗಾಂಶಗಳಲ್ಲಿ ಸೂರ್ಯ ಹಾಗೂ ಚಂದ್ರರೆಂಬ ಎರಡು ಕಣ್ಣುಗಳುಳ್ಳ ಬ್ರಹ್ಮನು ಉತ್ಪನ್ನನಾದನು. ಜಗತ್ತಿನ ಉತ್ಪತ್ತಿಯ ವಿಷಯದಲ್ಲಿ ಅನೇಕ ಪ್ರಮಾಣಗಳು ಸಿಗುತ್ತವೆ. ಕಪಿಲ ಮುನಿಯ ಪ್ರಧಾನವಾದ ಅಣುವಿಧ್ಯೆ (ಮೂಲಪ್ರಕೃತಿ), ಕಣಾದರ ದ್ರವ್ಯಾದಿ ಪದಾರ್ಥ, ಕೆಲವರು ಕಾಲನೆಂದು, ಮತ್ತೆ ಸ್ವಭಾವವೆಂದು ಹಾಗೂ ಮೀಮಾಂಸಕರು ಕಾರ್ಯವೇ ಜಗತ್ತಿನ ಉತ್ಪತ್ತಿಯ ಕಾರಣವೆಂದು ತಮಗೆ ಗೋಚರಿಸಿದಂತೆ ತಿಳಿಸಿದ್ದಾರೆ. ಜಗತ್ತಿನ ಉತ್ಪತ್ತಿಯ ವಿಷಯದಲ್ಲಿ ವಿಸ್ತೃತ ರೂಪದ ವಿಚಾರ ಮಾಡುವುದು ಇಲ್ಲಿ ಪ್ರಸ್ತುತವಲ್ಲ. ಏಕೆಂದರೆ ಅದನ್ನು ವಿವರಿಸಲು ಅದಕ್ಕೆ ಸಂಬಂಧಪಟ್ಟ ಅನ್ಯ ಗ್ರಂಥಗಳಿಂದ ಅತಿ ವಿಸ್ತೃತ ವಿಷಯಗಳು ಅವಶ್ಯಕ. ಈ ಪ್ರಸಂಗವನ್ನು ಬಿಟ್ಟು ಪ್ರಸ್ತುತ ಜ್ಯೋತಿಃಶಾಸ್ತ್ರದ ಅಂಗಗಳನ್ನು ವರ್ಣನೆ ಮಾಡುತ್ತಾರೆ.

ಅನೇಕ ಭೇದಯುಕ್ತ ಜ್ಯೋತಿಷಶಾಸ್ತ್ರದಲ್ಲಿ 3 ಸ್ಕಂದಗಳಿವೆ - ಸಂಹಿತಾ, ತಂತ್ರ, ಹೋರಾ.
ಸಂಪೂರ್ಣ ಜ್ಯೋತಿಷದ ವಿಷಯಗಳ ವರ್ಣನೆಯುಳ್ಳ ವಿಭಾಗವೇ ಸಂಹಿತಾ. ಗಣಿತದಿಂದ ಗ್ರಹಗತಿ ನಿರ್ಣಯ ಮಾಡುವುದು ತಂತ್ರ. ಇದಲ್ಲದೆ ಜಾತಕಫಲ, ಮುಹೂರ್ತಾದಿ ನಿರ್ಣಯ ಯಾವುದರಲ್ಲಿ ಸಿಗುತ್ತದೋ ಅದನ್ನು ಹೋರಾ ಸ್ಕಂದವೆಂದು ಕರೆಯುತ್ತಾರೆ.

ವರಾಹಮಿಹಿರರು ತಮ್ಮ ಪಂಚಸಿದ್ಧಾಂತಿಕಾ ಎಂಬ ಕರಣ ಗ್ರಂಥದಲ್ಲಿ ಭೌಮಾದಿ ಪಂಚತಾರಾ ಗ್ರಹಗಳ ವಕ್ರ, ಮಾರ್ಗ, ಉದಯಾದಿ ವರ್ಣನೆ ಮಾಡಿದ್ದಾರೆ. ಬೃಹಜ್ಜಾತಕ, ಬೃಹದ್ವಿವಾಹಪಟಲಾದಿ ಗ್ರಂಥಗಳಲ್ಲಿ ಜನ್ಮ, ಯಾತ್ರಾ, ವಿವಾಹಾದಿಗಳನ್ನು ವಿಸ್ತಾರ ಪೂರ್ವಕ ವರ್ಣಿಸಿದ್ದಾರೆ. ಶಿಷ್ಯರಿಂದ ಕೇಳಲ್ಪಟ್ಟ ಪ್ರಶ್ನೆಗಳಿಗೆ ಪ್ರಾಚೀನ ಮುನಿಗಳಿಂದ ನೀಡಲ್ಪಟ್ಟ ಉತ್ತರ, ಅನೇಕ ಪ್ರಕಾರದ ಕಥಾಪ್ರಸಂಗ, ಸೂರ್ಯಾದಿ ಗ್ರಹರ ಉತ್ಪತ್ತಿ ಇತ್ಯಾದಿ ಸ್ವಲ್ಪವೇ ಉಪಯೋಗವಾಗುವ ವಿಷಯಗಳನ್ನು ಬಿಟ್ಟು ಜೀವಿಗಳ ಹಿತಕ್ಕಾಗಿ, ಎಲ್ಲ ಪ್ರಯೋಜನಯುತ ಸಾರರೂಪವಾದ ವಿಷಯಗಳನ್ನು ಈ ಗ್ರಂಥದಲ್ಲಿ ವರ್ಣಿಸಿದ್ದಾರೆ.

-- ಸಾಂವತ್ಸರ ಸೂತ್ರಾಧ್ಯಾಯಃ --

       ಜ್ಯೋತಿಷಿಯ ಲಕ್ಷಣವನ್ನು ಹೇಳುತ್ತಾರೆ -
ಪ್ರಿಯದರ್ಶನ, ವಿನೀತವೇಷ, ಸತ್ಯವಾನ್, ಅನಸೂಯಕ, ಸಮಾನತ್ವ, ದೃಢ ಹಾಗೂ ಪುಷ್ಟ ದೇಹವುಳ್ಳ, ಸರ್ವಾಂಗಪೂರ್ಣ, ಶ್ರೇಷ್ಠ ಲಕ್ಷಣಗಳುಳ್ಳ ಜಾಗೃತವಾದ ಹಸ್ತ, ಪಾದ, ನಖ, ನಯನ, ಚಿಬುಕ, ದಂಷ್ಟ್ರ, ಶ್ರವಣ, ಲಲಾಟ, ಭ್ರೂ, ಶಿರವುಳ್ಳ; ಸುಂದರ, ಗಂಭೀರ ಹಾಗೂ ಉದಾತ್ತ ಜೌತಿಷಿಯಾಗಬೇಕು;

ಏಕೆಂದರೆ ಶರೀರಾಕಾರ ಅನುವರ್ತಿಯಾಗಿಯೇ ಗುಣ-ದೋಷಗಳು ಉಂಟಾಗುತ್ತವೆ. ದೈವಜ್ಞನ ಗುಣಗಳು - ಶುಚಿ, ದಕ್ಷತೆ, ಪ್ರಗಲ್ಭ, ವಾಗ್ಮಿ, ಪ್ರತಿಭಾವಂತ, ದೇಶ-ಕಾಲವಿದ, ಸಾತ್ವಿಕ, ಪರಿಷತ್ ಭೀರುಃ, ಸಹಾಧ್ಯಾಯಿ, ಅನಭಿ ಭವನೀಯಃ, ಕುಶಲ, ಅವ್ಯಸನೀ, ಉತ್ಪಾತಾದಿಗಳ ನಿವಾರಣಾರ್ಥ ವೇದೋಕ್ತ ಮಂತ್ರ ಪಾಠ ವಿನಿಯೋಗದ ಅನುಷ್ಠಾನಬಲ್ಲ ಶಾಂತಿಕರ್ತ;
ಆಯು, ಧನ, ಧಾನ್ಯ, ಪುತ್ರಾದಿ ವೃದ್ಧಿಕಾರಕ ಪ್ರಕ್ರಿಯೆಗಳಬಲ್ಲ ಪುಷ್ಟಿಕರ್ತ;
ಮಾರಣ, ಮೋಹನ, ಉಚ್ಚಾಟನ, ವಿದ್ವೇಷಣ, ಆಕರ್ಷಣ, ಸ್ಥಂಭನಾದಿಬಲ್ಲ ಆಭಿಚಾರಿ;
ಸ್ನಾನ, ಯಾತ್ರಾ ಇತ್ಯಾದಿ ವಿಧ್ಯಾಭಿಜ್ಞ;
ದೇವಾರ್ಚನ, ವ್ರತೋಪವಾಸ ನಿರತ, ತನ್ನಯ ತಂತ್ರದಿಂದ ಆಶ್ಚರ್ಯ ಉತ್ಪಾದಿತ ಪ್ರಭಾವ ಹೆಚ್ಚಿಸುವವ;
ಪ್ರಶ್ನೋತ್ತರ ಮಾಡುವವ;
ದೈವಾತ್ಯಯ - ಪ್ರಾಕೃತಿಕ ಅಶುಭ ಉತ್ಪಾತಾದಿಗಳ ನಿವಾರಣಾರ್ಥವಾಗಿ ಯಾರಿಗೂ ಹೇಳಿ-ಕೇಳಿ ಮಾಡದೆ ತಾನಾಗಿಯೇ ಶಾಂತಿ ಕರ್ಮ ಮಾಡಿಸುವವ; ಗ್ರಹಗಣಿತ, ಸಂಹಿತಾ, ಹೋರಾ ಈ ಗ್ರಂಥಗಳ ಅಂತರಾರ್ಥವನ್ನು ತಿಳಿದವ ದೈವಜ್ಞನಾಗಬೇಕು.
      
ಗ್ರಹಗಣಿತ ವಿಭಾಗದಲ್ಲಿ ಸ್ಥಿತ ಪೌಲಿಶ, ರೋಮಕ, ವಾಸಿಷ್ಠ, ಸೌರ, ಪೈತಾಮಹ ಈ ಪಂಚ ಸಿದ್ಧಾಂತಗಳಲ್ಲಿ ಪ್ರತಿಪಾದಿತ ಯುಗ, ವರ್ಷ, ಅಯನ, ಋತು, ಮಾಸ, ಪಕ್ಷ, ಅಹೋರಾತ್ರ, ಪ್ರಹರ (ಯಾಮ), ಮುಹೂರ್ತ, (ಘಟಿ, ಪಳಾ)[ನಾಡಿ], ಪ್ರಾಣ, ತ್ರುಟಿ, ತ್ರುಟೀಯ ಅವಯವಾದಿ ಕಾಲಗಳ ಹಾಗೂ ಭಗಣ, ರಾಶಿ, ಅಂಶ, ಕಲಾ, ವಿಕಲಾ ಇತ್ಯಾದಿ ಕ್ಷೇತ್ರಗಳ ಜ್ಞಾನವು ಜ್ಯೋತಿಷಿಗೆ ಇರಬೇಕು.

ಸೌರ, ಸಾವನ, ನಾಕ್ಷತ್ರ, ಚಾಂದ್ರ ಈ 4 ಮಾನಗಳು ಹಾಗೂ ಅಧಿಕ ಮಾಸ, ಕ್ಷಯ ಮಾಸ, ಇವುಗಳ ಉತ್ಪತ್ತಿ ಕಾರಣಗಳನ್ನು ತಿಳಿದಿರಬೇಕು. ಪ್ರಭವಾದಿ 60 ಸಂವತ್ಸರ, ತದಂತರ್ಗತ ಯುಗ, ವರ್ಷ, ಮಾಸ, ದಿನ, ಹೋರಾ ಇವುಗಳ ಅಧಿಪತಿಗಳ ಪ್ರವರ್ತನೆ ಹಾಗೂ ನಿವೃತ್ತಿಯ ಜ್ಞಾನ ಹೊಂದಿರಬೇಕು. ಅನೇಕ ಶಾಸ್ತ್ರಗಳಲ್ಲಿ ಹೇಳಿದ ಸೌರಾದಿ ಮಾನಗಳಲ್ಲಿ ಯಥಾರ್ಥ ಹಾಗೂ ಯಥಾರ್ಥವಲ್ಲದ್ದನ್ನು ವಿಚಾರ ಮಾಡಲು ಕುಶಲನಾಗಿರಬೇಕು. ಈ ಶಾಸ್ತ್ರಗಳಲ್ಲಿ ಭಿನ್ನ-ಭಿನ್ನ ಮಾನಗಳಲ್ಲಿ ಯಾವುದು ಎಲ್ಲಿ ಬಳಕೆಯಾಗುತ್ತದೆ ಎಂಬುದು ಮುಖ್ಯ.

ಸಿದ್ಧಾಂತಗಳಲ್ಲಿ ಸೌರಾದಿ ಮಾನಗಳ ಭೇದ, ಅಯನನಿವೃತ್ತಿಯ ಭೇದ, ಸಮಮಂಡಲ ಪ್ರವೇಶ ಕಾಲಿಕ ಉದಿತ ಅಂಶಗಳ ಭೇದ, ಛಾಯಾ ಜಲಯಂತ್ರದಿಂದ ದೃಗ್ಗಣಿತ ಸಾಮ್ಯತ್ವ. ಈ ವಿಚಾರಗಳಲ್ಲಿ ಕುಶಲನಾಗಿರಬೇಕು. ಸೂರ್ಯಾದಿ ಗ್ರಹಗಳ ಶೀಘ್ರ, ಮಂದ, ದಕ್ಷಿಣ, ಉತ್ತರ, ನೀಚ, ಉಚ್ಚ ಗತಿಗಳ ಕಾರಣಗಳನ್ನು ತಿಳಿದ ಕುಶಲನಾಗಿರಬೇಕು. ಸೂರ್ಯ-ಚಂದ್ರರ ಗ್ರಹಣದಲ್ಲಿ ಸ್ಪರ್ಶ, ಮೋಕ್ಷ, ಇವುಗಳ ದಿಗ್ಞಾನ, ಸ್ಥಿತಿ, ವಿಭೇದ, ವರ್ಣ, ದೇಶ, ಭಾವೀ ಗ್ರಹ ಸಮಾಗಮ ಹಾಗೂ ಗ್ರಹಯುದ್ಧಗಳನ್ನು ಹೇಳುವಂತವನು ದೈವಜ್ಞನಾಗಬೇಕು. ಪ್ರತ್ಯೇಕ ಗ್ರಹಗಳ ಯೋಜನಾತ್ಮಕ ಕಕ್ಷಾಪ್ರಮಾಣ ಹಾಗೂ ಪ್ರತ್ಯೇಕ ದೇಶಗಳಲ್ಲಿನ ಯೋಜನಾತ್ಮಕ ದೇಶಾಂತರವನ್ನು ತಿಳಿಯಲು ಕುಶಲನಾಗಿರಬೇಕು. ಪೃಥ್ವೀ, ನಕ್ಷತ್ರಗಳ ಭ್ರಮಣ ಹಾಗೂ ಸಂಸ್ಥಾನ, ಅಕ್ಷಾಂಶ, ಲಂಬಾಂಶ, ದ್ಯುಜ್ಯಾಚಾಪಾಂಶ, ಚರಖಂಡ, ರಾಶ್ಯುದಯ, ಛಾಯಾ, ನಾಡೀ, ಕರಣಾದಿಗಳ ಕ್ಷೇತ್ರ, ಕಾಲ ಹಾಗೂ ಕರಣಗಳನ್ನು ತಿಳಿದಿರುವವ ದೈವಜ್ಞನಾಗಬೇಕು. ಅಗ್ನಿ, ನಿಕಷ, ಸಂತಾಪಾದಿ ಹಲವಾರು ಪ್ರಕ್ರಿಯೆಗಳ ತರುವಾತವೂ ಸುವರ್ಣವು ತನ್ನ ಶುದ್ಧತೆಯನ್ನು ಕಾಯ್ದುಕೊಳ್ಳುವ ಹಾಗೆ ಅತಿಶಯ ಸ್ವಚ್ಛ, ಶಾಸ್ತ್ರ ವಕ್ತಾರನು, ಅನೇಕ ಪ್ರಕಾರದ ಚೋದ್ಯ ಪ್ರಶ್ನಭೇದಗಳನ್ನು ತಿಳಿಯುವ ನಿಶ್ಚಯಾತ್ಮಕ ಜ್ಞಾನವುಳ್ಳವನು ತಂತ್ರಜ್ಞನಾಗಿರಬೇಕು.

ಯಾರು ಶಾಸ್ತ್ರಯುಕ್ತ ಅರ್ಥವನ್ನು ಹೇಳುವುದಿಲ್ಲವೋ, ಪ್ರಶ್ನೆ ಕೇಳಲಾಗಿ ಒಂದಕ್ಕೂ ಉತ್ತರವನ್ನು ನೀಡುವುದಿಲ್ಲವೋ ಮತ್ತು ವಟು-ವಿಧ್ಯಾರ್ಥಿಗಳಿಗೂ ಹೇಳಿಕೊಡದಿರುವವ ಯಾವ ರೀತಿಯ ಶಾಸ್ತ್ರಜ್ಞನಾಗಲು ಸಾಧ್ಯ? ಯಾವ ರೀತಿಯಲ್ಲಿ ಗ್ರಂಥದ ಆಶಯವಿರುವುದೋ ಅದನ್ನರಿಯದೆ ಮೂರ್ಖನಂತೆ ಅದರ ವಿರುದ್ಧಾರ್ಥ ಮಾಡುತ್ತಾರೋ ಅವರು ಬ್ರಹ್ಮನ ಎದುರು ಹೋಗಿ ಆತನನ್ನೇ ನಿಂದಿಸಿದಂತೆ.

ಶಾಸ್ತ್ರಜ್ಞನು ಛಾಯಾ, ಜಲಯಂತ್ರಾದಿ ಸಾಧನಗಳಿಂದ ಲಗ್ನದ ಜ್ಞಾನ ಪಡೆಯಲು ಶಕ್ಯನಾಗಿದ್ದು, ಫಲ ಜ್ಯೋತಿಷ್ಯವನ್ನು ಚೆನ್ನಾಗಿ ಬಲ್ಲವನಾಗಿರುವಂತಹಾ ಗುಣಸಂಪನ್ನನಿಂದ ಹೊರಡುವ ವಾಣಿಯು ಎಂದಿಗೂ ನಿಷ್ಪಲವಾಗುವುದಿಲ್ಲ. ಈಜುವ ಮನುಷ್ಯನು ಒಂದು ವೇಳೆ ವಾಯುವೇಗದಿಂದ ಸಮುದ್ರವನ್ನು ಪಾರು ಮಾಡಬಲ್ಲ, ಆದರೆ ಕಾಲಪುರುಷ ಸಂಜ್ಞಕ ಮಹಾರ್ಣವವನ್ನು ಋಷಿ-ಮುನಿಗಳ ಹೊರತು ಮನುಷ್ಯ ಮನಸ್ಸಿನಿಂದ ಪಾರಾಗಲು ಕಷ್ಟಸಾಧ್ಯ.

ಹೋರಾಶಾಸ್ತ್ರದಲ್ಲಿ ಮೇಷಾದಿ ರಾಶಿಸ್ವರೂಪದಿಂದ ಆರಂಭಿಸಿ, ಹೋರಾ, ದ್ರೇಕ್ಕಾಣ, ನವಾಂಶ, ದ್ವಾದಶಾಂಶ, ತ್ರಿಂಶಾಂಶ, ರಾಶಿಗಳ ಬಲಾಬಲ ಪರಿಗ್ರಹ. ಸೂರ್ಯಾದಿ ಗ್ರಹಗಳ ದಿಗ್ಬಲ, ಸ್ಥಾನಬಲ, ಕಾಲಬಲ, ಚೇಷ್ಟಾಬಲ ಇವುಗಳಿಂದ ಬಲದ ವಿಚಾರ. ಗರ್ಭಾಧಾನ, ಜನ್ಮಕಾಲ, ಇವುಗಳಲ್ಲಿ ವಿಸ್ಮಯಜನಕ ವಿಶ್ವಾಸೀಯ ಆದೇಶವಾಗಿ ನಾಲವೇಷ್ಟಿತ, ಕೋಶವೇಷ್ಟಿತ, ಯಮಲಾದಿ ಸಂತಾನವಾಗಿರುವುದನ್ನು ಹೇಳಿ ಶಾಸ್ತ್ರಗಳ ದೃಢತೆಯನ್ನು ಸಾಧಿಸಿ ವಿಶ್ವಾಸ ವೃದ್ಧಿಸಬಹುದು. ಶೀಘ್ರ ಮರಣ, ಆಯುರ್ದಾಯ, ದಶಾ, ಅಂತರ್ದಶಾ, ಅಷ್ಟಕವರ್ಗ, ರಾಜಯೋಗ, ಚಂದ್ರಯೋಗ, ದ್ವಿಗ್ರಹಯೋಗ, ನಾಭಸಯೋಗ ಈ ಎಲ್ಲವುಗಳ ಫಲ. ಆಶ್ರಯ, ಭಾವ, ದೃಷ್ಟಿ, ನಿರ್ಯಾಣ, ಗತಿ, ಅನೂಕ (ಪೂರ್ವಜನ್ಮ), ಇವುಗಳ ವಿಚಾರ. ತಾತ್ಕಾಲಿಕ ಪ್ರಶ್ನೆಗಳಲ್ಲಿ ಶುಭಾಶುಭ ಕಾರಣ. ಲಗ್ನದ ಆಶ್ರಿತ ಶುಭಾಶುಭ ಸೂಚಕ ಕಾರಣ. ಚೂಡಾಕರ್ಮ, ಉಪನಯನ, ಗೃಹಪ್ರವೇಶ, ವಿವಾಹಾದಿ ಕರ್ಮಗಳ ಜ್ಞಾನಕಾರಣ. ಈ ವಿಷಯಗಳ ವಿಚಾರವು ವರಾಹಮಿಹಿರ ವಿರಚಿತ ಬೃಹಜ್ಜಾತಕ, ವಿವಾಹಪಟಲ ಈ 2 ಗ್ರಂಥಗಳಲ್ಲಿ ಸುಂದರವಾಗಿ ವರ್ಣಿಸಲಾಗಿದೆ.

ಯಾತ್ರೆಯಲ್ಲಿ ತಿಥಿ, ದಿನ, ಕರಣ, ನಕ್ಷತ್ರ, ಮುಹೂರ್ತ, ಲಗ್ನ, ಯೋಗ, ಅಂಗಸ್ಫುರಣ, ಸ್ವಪ್ನ, ವಿಜಯ, ಗೆಲ್ಲುವ ಇಚ್ಛೆಯುಳ್ಳ ರಾಜನ ವಿಜಯನಿಮಿತ್ತಿಕ ಸ್ನಾನ, ಗ್ರಹಗಳ ಯಜ್ಞ, ಯಾತ್ರೆಯ 7 ದಿನ ಪೂರ್ವದಿಂದ ಗುಹ್ಯಕಪೂಜೆ ಗಣಹೋಮ, ಹವನ ಕಾಲೀನ ಅಗ್ನಿಯ ಲಕ್ಷಣ ಅಗ್ನಿಲಿಂಗ, ಗಜಾಶ್ವಗಳ ಚೇಷ್ಠಾ, ಪ್ರಧಾನ ರಾಜೋದ್ಯೋಗಿಗಳ ವಾಕ್ಯದಿಂದ ಉತ್ಸಾಹ-ಅನುತ್ಸಾಹಾದಿ ಚೇಷ್ಠಾ, ವಾಯು, ಮೇಘ, ವೃಷ್ಟ್ಯಾದಿ ಲಕ್ಷಣ; ಸಂಧಿ, ವಿಗ್ರಹ, ಯಾನ, ಆಸನ, ದ್ವೈಧೀಭಾವ, ಸಂಶ್ರಯಾದಿ ಷಡ್ಗುಣ, ಇವುಗಳ ಗ್ರಹಗಳಿಗೆ ವಶವಾದ ಸಿದ್ಧಿ-ಅಸಿದ್ಧಿಯ ಜ್ಞಾನ; ಸಾಮ, ದಾಮ, ಭೇದ, ದಂಡಗಳೆಂಬ ಉಪಾಯಗಳ ಸಿದ್ಧಿ-ಅಸಿದ್ಧಿಯ ಜ್ಞಾನ, ಮಂಗಳ-ಅಮಂಗಳ, ಶಕುನ, ಸೇನೆಗಳ ನಿವಾಸ ಭೂಮಿ, ಅಗ್ನಿಯ ವರ್ಣ, ಮಂತ್ರಿ, ಚರ, ದೂತ, ವನವಾಸಿಗಳ ಕಾಲಾನುಸಾರ ಪ್ರಯೋಗ, ಶತ್ರುವಿನ ಕೋಟೆಯ ಲಾಭ. ಈ ಎಲ್ಲವುದರ ವಿವರಣೆ ಇರುತ್ತದೆ.

ಭಗಣಗಳಿಂದ ಯುಕ್ತ ಹೋರಾಶಾಸ್ತ್ರವು ಲೋಕದಲ್ಲಿ ವಿಸ್ತೃತದಂತೆ, ಬುದ್ಧಿಯಲ್ಲಿ ಅಂಕಿತದಂತೆ ಹಾಗೂ ಹೃದಯದಲ್ಲಿ ಖಚಿತದಂತೆ ಇದೆ. ಅದರ ಆದೇಶವು ಎಂದಿಗೂ ನಿಷ್ಪಲವಾಗುವುದಿಲ್ಲ. ಸಂಹಿತಾ ಸಂಬಂಧೀ ನಿಃಶೇಷ ತತ್ವಾರ್ಥವನ್ನು ತಿಳಿದವನು ದೈವಚಿಂತಕನಾಗುತ್ತಾನೆ. ಯಾವುದರಲ್ಲಿ ವಕ್ಷಮಾಣ ವಿಷಯಗಳ ವರ್ಣನೆ ಇರುತ್ತದೇ ಅದರ ಹೆಸರು ಸಂಹಿತಾ ಎಂದಾಗುತ್ತದೆ.

ಸಂಹಿತಾ - ಸೂರ್ಯಾದಿ ಗ್ರಹಗಳ ಸಂಚಾರ, ಆ ಸಂಚಾರದಲ್ಲಿ ಉಂಟಾಗುವ ಗ್ರಹಗಳ ಸ್ವಭಾವ, ವಿಕಾರ, ಪ್ರಮಾಣ ಅಂದರೆ ಬಿಂಬದ ಪರಿಮಾಣ, ವರ್ಣ, ಕಿರಣ, ದ್ಯುತಿ = ಕಿರಣಕಾಂತಿ; ಊಧ್ರ್ವ ಅಧೋಗಾಮಿ ತೋರಣ, ದಂಡಾದಿ ಸಂಸ್ಥಾನ; ಅಸ್ತ, ಉದಯ, ಮಾರ್ಗ, ಮಾರ್ಗಾಂತರ, ವಕ್ರ, ಅನುವಕ್ರ, ನಕ್ಷತ್ರಗಳೊಂದಿಗೆ ಗ್ರಹ ಸಂಯೋಗ, ನಕ್ಷತ್ರದಲ್ಲಿ ಚಲನೆ = ಚಾರ, ಇವುಗಳ ಫಲ, ನಕ್ಷತ್ರ ವಿಭಾಗದಿಂದ ಮಾಡಲ್ಪಟ್ಟ ಕೂರ್ಮ ಚಕ್ರದಿಂದ ದೇಶಗಳ ಶುಭಾಶುಭ ಫಲ, ಅಗಸ್ತ್ಯ ಸಂಚಾರ, ಸಪ್ತರ್ಷಿ ಸಂಚಾರ, ಗ್ರಹಗಳ ಭಕ್ತಿ ದೇಶ, ದ್ರವ್ಯ, ಪ್ರಾಣಿಗಳ ಅಧಿಪತ್ಯ; ನಕ್ಷತ್ರಗಳ ವ್ಯೂಹ ದ್ರವ್ಯ, ಜನಗಳ ಅಧಿಪತ್ಯ; ಗ್ರಹ ಶೃಂಗಾಟಕ, ಗ್ರಹ ಯುದ್ಧ, ಗ್ರಹ ಸಮಾಗಮ, ಗ್ರಹಗಳ ವರ್ಷಾಧಿಪತಿಯಾಗುವುದರಿಂದ ಫಲ, ಗರ್ಭ ಲಕ್ಷಣ, ರೋಹಿಣೀ ಯೋಗ, ಸ್ವಾತೀ ಯೋಗ, ಆಷಾಢೀ ಯೋಗ, ಸದ್ಯೋವರ್ಷಣ, ಕುಸುಮ-ಲತಾ ಲಕ್ಷಣ, ವೃಕ್ಷಗಳ ಫಲ-ಪುಷ್ಪಾದಿ ಉತ್ಪತ್ತಿಯಿಂದ ಸಾಂಸಾರಿಕ ಶುಭಾಶುಭ ಜ್ಞಾನ, ಪರಿಧಿ - ಪ್ರತಿಸೂರ್ಯನ ಲಕ್ಷಣ, ಪರಿವೇಷ, ಪರಿಘ - ಸೂರ್ಯನ ಉದಯಾಸ್ತ ಕಾಲದಲ್ಲಿ ತಿರ್ಯಕ್‍ಸ್ಥಿತ ಮೇಘರೇಖಾ ಲಕ್ಷಣ, ವಾಯು, ಉಲ್ಕಾಪಾತ, ದಿಗ್ದಾಹ ಲಕ್ಷಣ, ಭೂಕಂಪ, ಸಂಧ್ಯಾ ರಾಗ, ಗಂಧರ್ವ ನಗರ ಲಕ್ಷಣ, ಧೂಲಿ ಲಕ್ಷಣ, ವಾಸ್ತು ವಿಧ್ಯಾ, ಅಂಗವಿಧ್ಯಾ ಅಂಗಸ್ಪರ್ಶದಿಂದ ಪ್ರಾಣಿಗಳ ಶುಭಾಶುಭ ತಿಳಿಯುವ ವಿಧ್ಯೆ, ವಾಯಸವಿಧ್ಯಾ ಕಾಕಚೇಷ್ಟಿತ, ಅಂತರಚಕ್ರ, ಮೃಗಚಕ್ರ ಮೃಗಚೇಷ್ಟಿತ, ಅಶ್ವಚಕ್ರ, ವಾತಚಕ್ರ, ಪ್ರಾಸಾದ ಲಕ್ಷಣ, ಪ್ರತಿಮಾ ಲಕ್ಷಣ, ಪ್ರತಿಮಾ ಪ್ರತಿಷ್ಠಾ, ವೃಕ್ಷಾಯುರ್ವೇದ ವೃಕ್ಷಗಳ ಚಿಕಿತ್ಸೆ, ಉದ್ಗಾರ್ಗಲ - ಜಲೋಪಲಬ್ಧಿ, ನೀರಾಜನ ಮಂತ್ರಗಳಿಂದ ಶುದ್ಧ ಜಲದಿಂದ ಪವಿತ್ರೀಕರಣ, ಖಂಜನ ಲಕ್ಷಣ, ಉತ್ಪಾತಗಳ ಶಾಂತಿ, ಮಯೂರಚಿತ್ರಕ, ಘೃತ, ಕಂಬಲ, ಖಡ್ಗ, ಪಟ್ಟ, ಕುಕ್ಕುಟ, ಕೂರ್ಮ, ಗೌ, ಅಜಾ, ಶ್ವಾನ, ಅಶ್ವ, ಹರಿತ, ಪುರುಷ, ಸ್ತ್ರೀ, ಅಂತಃಪುರದ ಚಿಂತನೆ, ಪಿಟಕ, ಮುತ್ತು, ವಸ್ತ್ರಛೇದ, ಚಾಮರ, ದಂಡ, ಶಯ್ಯಾ, ಆಸನ ಇವುಗಳ ಲಕ್ಷಣ, ರತ್ನಪರೀಕ್ಷಾ, ದೀಪಲಕ್ಷಣ, ದಂತ-ಕಾಷ್ಠಾದಿಗಳಿಂದ ಶುಭಾಶುಭ ಫಲದ ಲಕ್ಷಣ, ಸಂಸಾರದ ಪ್ರತ್ಯೇಕ ಪುರುಷ ಹಾಗೂ ರಾಜರಲ್ಲಿ ಪೂರ್ವೋಕ್ತ ಪ್ರತ್ಯೇಕ ಲಕ್ಷಣದ ವಿಚಾರವನ್ನು ಏಕಾಗ್ರಚಿತ್ತನಾಗಿ ಮಾಡಬೇಕು.

ಒಬ್ಬನೇ ದೈವಜ್ಞನು ಸದಾ ಶುಭಾಶುಭ ಫಲ ನಿರ್ಣಯ ಮಾಡಲು ಸಮರ್ಥನಾಗಿರುವುದಿಲ್ಲ. ಹಾಗಾಗಿ ಸತ್ಕಾರಗಳಿಂದ ಸಂತುಷ್ಟಿಗೊಳಿಸಿದ ದೈವಜ್ಞನೊಂದಿಗೆ ಶಾಸ್ತ್ರ ಬಲ್ಲವರು ಹಾಗೂ ಇನ್ನೂ 4 ದೈವಜ್ಞರನ್ನು ರಾಜನು ನಿಯುಕ್ತಿಗೊಳಿಸಿಕೊಳ್ಳಬೇಕು. ಆ 4 ದೈವಜ್ಞರಲ್ಲಿ ಒಬ್ಬನನ್ನು ಪೂರ್ವ ಹಾಗೂ ಅಗ್ನಿಕೋಣದಲ್ಲಿ, ಎರಡನೆಯವನನ್ನು ದಕ್ಷಿಣ ಹಾಗೂ ನೈರ್ಋತ್ಯಕೋಣದಲ್ಲಿ, ಮೂರನೇಯವನನ್ನು ಪಶ್ಚಿಮ ಹಾಗೂ ವಾಯವ್ಯಕೋಣದಲ್ಲಿ ಮತ್ತು ನಾಲ್ಕನೇಯವನನ್ನು ಉತ್ತರ ಹಾಗೂ ಈಶಾನ್ಯಕೋಣದಲ್ಲಿ ಪರೀಕ್ಷಾ-ಪ್ರಯೋಗಾರ್ಥ ಸ್ಥಾನ ನೀಡಬೇಕು. ಏಕೆಂದರೆ ಉಲ್ಕಾಪಾತ, ಗಂಧರ್ವನಗರ, ಕೇತು ಇತ್ಯಾದಿ ನಿಮಿತ್ತಗಳನ್ನು ನೋಡುವುದರ ಜೊತೆಗೆ ಲುಪ್ತಗೊಳಿಸಿಬಿಡಲೆಂಬ ಸದಾಶಯ. ಇವುಗಳ ಆಕಾರ, ವರ್ಣ, ಸ್ನಿಗ್ಧತೆ, ಪ್ರಮಾಣ, ಗ್ರಹ-ನಕ್ಷತ್ರಗಳ ಅಭಿಘಾತಾದಿಗಳಿಂದ ಶುಭಾಶುಭ ಫಲಗಳು ಉಂಟಾಗುತ್ತದೆ.

ಎಲ್ಲ ಪ್ರಕಾರದ ಕೌಶಲ್ಯ, ಹೋರಾಶಾಸ್ತ್ರ ಮತ್ತು ಗಣಿತದಲ್ಲಿ ಪ್ರವೀಣನಾದ ಜ್ಯೋತಿಷಿಯ ಪೂಜೆಯನ್ನು ಮಾಡದಿರುವ ರಾಜನು ನಾಶಹೊಂದುತ್ತಾನೆ ಎಂದು ಮಹರ್ಷಿ ಗಾರ್ಗ್ಯರು ಹೇಳಿದ್ದಾರೆ. ವನದಲ್ಲಿರುವವರು, ಮಮತ್ವರಹಿತ, ನಿಷ್ಪರಿಗ್ರಹರಾದ ವ್ಯಕ್ತಿಗಳೂ ಗ್ರಹ-ನಕ್ಷತ್ರಾದಿ ತಿಳಿದ ದೈವಜ್ಞರಲ್ಲಿ ಪ್ರಶ್ನೆ ಕೇಳುತ್ತಾರೆ.

ಅಪ್ರದೀಪಾ ಯಥಾ ರಾತ್ರಿ ಅನಾದಿತ್ಯಂ ಯಥಾ ನಭಃ |

ತಥಾsಸಾಂವತ್ಸರೋ ರಾಜಾ ಭ್ರಮತ್ಯಂಧ ಇವಾಧ್ವನಿ.

ಜ್ಯೋತಿಷಿ ಇಲ್ಲದಿರೆ ಮುಹೂರ್ತ, ತಿಥಿ, ನಕ್ಷತ್ರ, ಋತು, ಅಯನಾದಿ ಎಲ್ಲ ವಿಷಯಗಳು ಉಲ್ಟಾ-ಪಲ್ಟಾ ಆಗುತ್ತವೆ. ಜಯ, ಯಶ, ಶ್ರೀ, ಭೋಗ ಹಾಗೂ ಮಂಗಳವನ್ನು ಇಚ್ಛಿಸುವ ರಾಜನು ವಿದ್ವಾಂಸನಾದ ಶ್ರೇಷ್ಠ ಜ್ಯೋತಿಷಿಯ ಬಳಿ ಹೋಗಿ ತನ್ನ ಭವಿಷ್ಯವನ್ನು ಕೇಳುವುದು. ಎಲ್ಲ ಪ್ರಕಾರದಲ್ಲಿ ತಮ್ಮ ಕುಶಲತೆಯನ್ನು ಇಚ್ಛಿಸುವ ಮಾನವರು ದೈವಜ್ಞಹೀನ ದೇಶದಲ್ಲಿ ವಾಸಿಸಬಾರದು. ಏಕೆಂದರೆ ಎಲ್ಲಿ ನೇತ್ರಸ್ವರೂಪರಾದ ದೈವಜ್ಞರ ನಿವಾಸವಿರುತ್ತದೋ ಅಲ್ಲಿ ಪಾಪವಿರುವುದಿಲ್ಲ. ಜ್ಯೋತಿಷ ಶಾಸ್ತ್ರವನ್ನು ಪಠನ ಹಾಗೂ ಪಾಠನ ಮಾಡುವ ಮನುಷ್ಯನು ನರಕ ಅಂದರೆ ದುರ್ಗತಿ ಹೊಂದದೆ, ಬ್ರಹ್ಮಲೋಕ ಹೊಂದುತ್ತಾರೆ. ಮ್ಲೇಚ್ಛ ಯವನರ ಬಳಿ ಈ ಶಾಸ್ತ್ರವಿದ್ದರೆ ಅವರೂ ಋಷಿಗಳ ತರಹ ಪೂಜಿತರಾಗುತ್ತಾರೆ. ಇಂದ್ರಜಾಲ ವಿಧ್ಯೆಯಿಂದ ತನ್ನ ಶರೀರವನ್ನು ಮರೆಮಾಚಿ ಗುಪ್ತ ರೂಪದಿಂದ ಪೃಚ್ಛಕನ ಅಭಿಪ್ರಾಯವನ್ನು ತಿಳಿದು ಹೇಳುವವನು ಹಾಗೂ ಕರ್ಣಪಿಶಾಚಿ-ಸಿದ್ಧಿಯಿಂದ ಪ್ರಶ್ನಾದಿಗಳನ್ನು ಹೇಳುವ ಜ್ಯೋತಿಷಿಯಲ್ಲಿ ಎಲ್ಲಾದರಲ್ಲಿ ಏನಾದರೇನು ಕೇಳಬಾರದು, ಏಕೆಂದರೆ ಅವರು ದೈವಜ್ಞರಾಗಿರುವುದಿಲ್ಲ. ಯಾವ ಮನುಷ್ಯನು ಜ್ಯೋತಿಷ ಶಾಸ್ತ್ರವನ್ನು ತಿಳಿಯದೆ ತನ್ನನು ತಾನು ದೈವಜ್ಞನೆಂದು ಕರೆದುಕೊಂಡು ವ್ರತ, ಉಪವಾಸಾದಿಗಳನ್ನು ಹೇಳುತ್ತಾನೋ ಅವನು ಪಂಕ್ತಿದೂಷಕ ಪಾಪಿಯು ನಕ್ಷತ್ರಸೂಚಕನೆಂದು ತಿಳಿಯಬೇಕು. ಇಂತಹಾ ನಕ್ಷತ್ರಸೂಚಕರಿಂದ ಹೇಳಲ್ಪಟ್ಟ ವ್ರತ, ಉಪವಾಸಾದಿಗಳು ಆಚರಿಸುವ ಮನುಷ್ಯನು ಆ ಋಕ್ಷವಿಡಂಬಿಯ ಜೊತೆ ಅಂಧತಾಮಿಸ್ರವೆಂಬ ನರಕವನ್ನು ಹೊಂದುತ್ತಾನೆ. ಹೇಗೆ ಪುರದ್ವಾರದಲ್ಲಿ ಸ್ಥಿತ ಮೃತ್ಖಂಡದ ಸಮೀಪದಲ್ಲಿ ಮಾಡಲ್ಪಟ್ಟ ಯಾಚನೆಯು ಪ್ರಾಯಶಃ ಕಾಕತಾಳೀಯವಾಗಿ ಪೂರ್ಣವಾಗುತ್ತದೋ ಹಾಗೆಯೇ ಮೂರ್ಖರ ಆದೇಶವೂ ಕೆಲವೊಮ್ಮೆ ಸತ್ಯವಾಗುತ್ತದೆ, ಆದರೆ ಪರಮಾರ್ಥವಾಗಿ ಎಂದಿಗೂ ಸತ್ಯವಾಗುವುದಿಲ್ಲ.

ಸಂಪತ್ತು ಹೊಂದುವ ಲೋಭತನದಿಂದ ಯಾವನು ಆದೇಶ ಮಾಡುತ್ತಾನೋ ಹಾಗೂ ಜ್ಯೋತಿಷ್ಯ-ಶಾಸ್ತ್ರದಿಂದ ಭಿನ್ನ ಕಥೆಯಲ್ಲಿ ಯಾವನ ಸ್ನೇಹವಿರುತ್ತದೋ, ಅಂತಹಾ ಒಂದು ವಿಚಾರದ ಅನುಮಾನ ಬಂದೊಡನೆ ರಾಜನು ಆ ಜ್ಯೋತಿಷಿಯನ್ನು ತ್ಯಜಿಸಬೇಕು. ಜಯೇಚ್ಛೆ ಉಳ್ಳ ರಾಜನು ಹೋರಾ, ಗಣಿತ, ಸಂಹಿತಾ ಎಂಬೀ 3 ಸ್ಕಂಧಗಳನ್ನು ಕರತಲಾಮಲಕ ಮಾಡಿಕೊಂಡ ದೈವಜ್ಞನನ್ನು ಪೂಜಿಸಬೇಕು ಹಾಗೂ ಆತನ ಆಜ್ಞೆಯನ್ನು ಪಾಲಿಸಬೇಕು. 


ನ ತತ್ಸಹಸ್ರಂ ಕರಿಣಂ ವಾಜಿನಾಂ ಚ ಚತುರ್ಗುಣಮ್ |
ಕರೋತಿ ದೇಶಕಾಲಜ್ಞೋ ಯಥೈಕೋ ದೈವಚಿಂತಕಃ ||

ಅಂದರೆ ದೇಶ ಕಾಲಗಳನ್ನು ತಿಳಿದ ಒಬ್ಬ ದೈವಜ್ಞನು ಮಾಡುವ ಕೆಲಸವನ್ನು 1,000 ಆನೆಗಳು ಹಾಗೂ 4,000 ಕುದುರೆಗಳೂ ಮಾಡಲಸಾಧ್ಯ. ರಾಜನ ಕೀರ್ತಿ ವೃದ್ಧಿಸಲು ದೈವಜ್ಞನು ಮಾಡುವ ಪ್ರಯತ್ನವು ಹಾಗೂ ಹಿತವು ರಾಜನು ತನ್ನಯ ಮಾತಾ-ಪಿತಾ, ಸ್ವಜನ ಹಾಗೂ ಮಿತ್ರರಿಂದಲೂ ಪಡೆಯುವುದಿಲ್ಲ.
ಚಂದ್ರನ ನಕ್ಷತ್ರ ಸಂವಾದವನ್ನು ಶ್ರವಣ ಮಾಡುವುದರಿಂದ ದುಸ್ವಪ್ನ, ದುಶ್ಚಿಂತನೆ, ದುರ್ದರ್ಶನ, ದುಷ್ಕರ್ಮಗಳು ಶೀಘ್ರ ನಾಶ ಹೊಂದುತ್ತವೆ.

ಶ್ರುತ್ವಾ ತಿಥಿಂ ಭಗ್ರಹವಾಸರಂ ಚ ಪ್ರಾಪ್ನೋತಿ ಧರ್ಮಾರ್ಥಶಾಂಸಿ ಸೌಖ್ಯಮ್ |

ಆರೋಗ್ಯಮಾಯುರ್ವಿಜಯಂ ಸುತಾಂಶ್ಚ ದುಃಸ್ವಪ್ನಘಾತಂ ಪ್ರಿಯತಾ ಚ ಲೋಕೇ ||