Friday, 22 May 2015

ಋಗ್ವೇದದ ಯಮ-ಯಮೀ ಸೂಕ್ತ


      ವೇದಗಳು ಸಂಸ್ಕೃತದಲ್ಲಿಲ್ಲ, ಬ್ರಾಹ್ಮಿಯಲ್ಲಿದೆ. ಸಂಸ್ಕೃತದಲ್ಲಿ ಅರ್ಥ ಮಾಡಿದರೆ ಅಪಾರ್ಥವಾಗುವುದು ನಿಶ್ಚಿತ ಎಂಬುದಕ್ಕೆ ಈ ಸೂಕ್ತ ಒಂದು ಉದಾಹರಣೆ. ಯಮ-ಯಮೀ ಅಣ್ಣ-ತಂಗಿ, ಅವರ ಕಾಮಸಲ್ಲಾಪ, ವಿವಾಹ ಆಗುತ್ತದೆ ಎಂದಲ್ಲ ಮನ ಬಂದಂತೆ ವ್ಯಾಖ್ಯಾನಿಸಿದ್ದಾರೆ. ಸಂಸ್ಕೃತ ಒಂದು ಉತ್ಕೃಷ್ಟ ಭಾಷೆ, ಅದನ್ನು ಕಲಿತು ಬಳಸುವುದು ಒಳಿತು. ಆದರೆ ವೇದಗಳನ್ನು ಸಂಸ್ಕೃತದಲ್ಲಿ ಅರ್ಥೈಸಬೇಡಿ. ಕೆಲವರು ಯಮ-ಯಮೀ ಸಂವಾದ ಎನ್ನುತ್ತಾರೆ, ಆದರೆ ವೇದದಲ್ಲಿ ಅದನ್ನು ಸಂವಾದ ಎಂದು ಹೇಳಿಯೇ ಇಲ್ಲ.

ಋಗ್ವೇದದ ಈ ವಿಚಾರದ ಅಂಶಗಳನ್ನೇ ಇಟ್ಟುಕೊಂಡು ಅಥರ್ವದಲ್ಲಿ ಒಂದಿಷ್ಟು ಸಂಕಲನ ಮಾಡಿದರು. ಋಗ್ವೇದದಲ್ಲಿ ಇಲ್ಲದ ವಿಚಾರವು ಇನ್ನುಳಿದ ೩ ವೇದಗಳಲ್ಲಿಲ್ಲ. ಋಗ್ವೇದದಲ್ಲಿ ಇರುವ ವಿಚಾರವೇ ಪುನಃ ಸಂಕಲನವಾದ ಭಾಗವೇ ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ. ಹೊಸದಾಗಿ ಮತ್ತದಕ್ಕೆ ವೇದ ಎಂಬುದಿಲ್ಲ. ವಿಭಾಗಿಸಿದ ಇಷ್ಟಿಷ್ಟು ಮಂತ್ರಗಳಿಗೊಂದು ವೇದ ಎಂದು ಮಾಡಲ್ಪಟ್ಟದ್ದಲ್ಲ. ವ್ಯಾಸರು ಪುನಃ ಸಂಕಲನ ಮಾಡಿಕೊಟ್ಟಂತಹಾ ಭಾಗವನ್ನು ಮತ್ತೊಂದು ವೇದವೆಂದು ಹೆಸರಿಸಿ ಅದನ್ನು ಉಪಾಸನೆ ಮಾಡಿಕೊಂಡು ಬನ್ನಿ ಎಂದರು. ನಮ್ಮಲ್ಲಿ ಋಷ-ಛಂದಸ್ಸಿನ ಬಗ್ಗೆ ಬೇರೆ ಬೇರೆ ಕಲ್ಪನೆಗಳಿದೆ. ಅದರ ಬಗ್ಗೆ ನೀವು ಮೊದಲು ಸ್ಪಷ್ಟ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ನೈಜ ಕಲ್ಪನೆ ಬರುವುದಿಲ್ಲ. ಇಲ್ಲಿ ಒಂದು ಮಂತ್ರಕ್ಕೆ ಯಮ ಋಷಿ, ಮತ್ತೊಂದು ಮಂತ್ರಕ್ಕೆ ಯಮಿ ಋಷಿ. ಹಾಗೇ ಒಂದು ಮಂತ್ರಕ್ಕೆ ಯಮ ದೇವತೆ, ಮತ್ತೊಂದು ಮಂತ್ರಕ್ಕೆ ಯಮಿ ದೇವತೆ. ಈ ಎಲ್ಲ ಮಂತ್ರಗಳೂ ತ್ರಿಷ್ಟುಪ್ ಛಂದಸ್ಸಿನಲ್ಲಿವೆ. (ಋಗ್ವೇದ ೧೦-೧೦-೦೧)

ಓ ಚಿತ್ಸಖಾಯಂ ಸಖ್ಯಾ ವವೃತ್ಯಾಂ ತಿರಃ ಪುರೂ ಚಿದರ್ಣವಂ ಜಗನ್ವಾನ್ |
ಪಿತುರ್ನಪಾತಮಾ ದಧೀತ ವೇಧಾ ಅಧಿ ಕ್ಷಮಿ ಪ್ರತರಂ ದೀಧ್ಯಾನಃ || ೧ ||

[ ओ चि॒त्सखा॑यं स॒ख्या व॑वृत्यां ति॒रः पु॒रू चि॑दर्ण॒वं ज॑ग॒न्वान् ।
पि॒तुर्नपा॑त॒मा द॑धीत वे॒धा अधि॒ क्षमि॑ प्रत॒रं दीध्या॑नः ॥ ]

ಈ ಮೊದಲ ಮಂತ್ರವನ್ನು ಯಮೀ ಕೇಳುತ್ತಾಳೆ ಎಂದು ನೀವು ಅರ್ಥ ಮಾಡಿಕೊಳ್ಳಬೇಕು. ಅಲ್ಲಿ ಯಮೀ ಎಂದರೆ ಯಾವುದು? ಅದು ಮೊದಲು ಸ್ಪಷ್ಟವಾಗಬೇಕು. ಈ ಒಂದನೇ ಮಂತ್ರಕ್ಕೆ ಋಷಿಯಾಗಿ ಯಮೀ, ದೇವತೆಯಾಗಿ ಯಮ. ಯಮ ಎಂದರೇನು? "ಯಮು ನಿಯಂತ್ರಣೇ" ಎನ್ನುತ್ತಾರೆ. ಇಲ್ಲಿ ಪ್ರಭು ಎನ್ನುವ ಅರ್ಥವೂ ಬರುತ್ತದೆ. ಅಥವಾ ಧರ್ಮ ಎಂದೂ, ಅತೀತವೆಂದೂ ಅರ್ಥ ಬರುತ್ತದೆ. ಯಾವುದನ್ನು ಯಾರಿಗೂ ಮೀರಲು ಸಾಧ್ಯವಿಲ್ಲವೋ ಅದನ್ನು ಅತೀತವೆಂದರು. ಆ ಅತೀತವಾದದ್ದನ್ನು ಆಧರಿಸಿದ ಯಾವ ಅತೀತೋಪಾಸನೆ ಇದೆಯೋ ಅದರ ಉಪಾಸಕಿಯೇ ಯಮೀ. ಅಲ್ಲಿ ಅಣ್ಣ-ತಂಗಿ, ಗಂಡ-ಹೆಂಡತಿ ಎಂಬ ಸಂಬಂಧವೇ ಇಲ್ಲ! ಉಪಾಸನಾ ತತ್ವವು ಮೇಲಿದ್ದರೆ, ಉಪಾಸನೆ ಮಾಡುವವರು ಕೆಳಗೆ ಎಂಬಂತೆ ಬಿಂಬಿಸಿರುತ್ತದೆ. ಮೇಲಿರುವ ಅತೀತವನ್ನು ಪಡೆಯುವ ಮಾರ್ಗದ ಆರೋಹಿಯಾಗಿರುವ ಕಾರಣ ಸ್ತ್ರೀ ದ್ಯೋತಕವಾದ ಯಮೀ ಶಬ್ದವೇ ಹೊರತು ಹೆಣ್ಣು ಎಂಬ ಅರ್ಥವೇ ಅಲ್ಲಿಲ್ಲ.

ಓ ಚಿತ್ಸಖಾಯಂ - ಯಾವುದು ಮನೋ ಬುದ್ಧಿಯ ವ್ಯಾಪ್ತಿಯನ್ನು ಮೀರಿ ಚಿತ್ತ ಎಂದು ಹೇಳತಕ್ಕಂತಹಾ ಪ್ರವೃತ್ತಿಗೆ ಬಂದಂತಹಾ ಮಾನಸಿಕ ಕಲ್ಪನೆ ಏನಿದೆಯೋ ಅದು ಯಾವುದನ್ನು ಅಪೇಕ್ಷಿಸುತ್ತದೆ? ಮನಸ್ಸು ಒಂದನ್ನು ಅಪೇಕ್ಷಿಸುತ್ತದೆ, ಬುದ್ಧಿಯು ಮತ್ತೊಂದನ್ನು ಪರಿಷ್ಕರಿಸಿ ಸೂಕ್ತವಾದದನ್ನು ಕೊಡುತ್ತದೆ. ಆದರೆ ಅವೆರಡನ್ನೂ ಮೀರಿದ್ದು ಚಿತ್ತ.

ಚಿತ್ಸಖಾಯಂ ಸಖ್ಯಾ - ಆ ಚಿತ್ತವು ಯಾವುದನ್ನು ಅಪೇಕ್ಷಿಸುತ್ತದೆ? ಹೇಗೆ ಚಿತ್ತವು ಅದರ  ಸ್ನೇಹವನ್ನು ಪಡೆಯುತ್ತದೆ?

ವವೃತ್ಯಾಂ ತಿರಃ ಪುರೂ ಚಿದರ್ಣವಂ ಜಗನ್ವಾನ್ - ತನ್ಮೂಲಕ ಜಗತ್ತು ಹೇಗೆ ಸೃಷ್ಟಿಯಾಗುತ್ತದೆ? ಎಂದು ಹೇಳಿದ್ದು.

      ಇಲ್ಲಿ ಯಮಿಯ ಯಾವುದೇ ಕೆಟ್ಟ ಕೊಳಕು ಬೇಡಿಕೆಯೂ ಇಲ್ಲ ಎಂಬುದು ಸ್ಪಷ್ಟ. ಇನ್ನು ಪ್ರಸಕ್ತ ಕಾಲೀನ ಪುಸಕ್ತಗಳಲ್ಲಿ ಯಮಿಯು ತನ್ನ ಅಣ್ಣನನ್ನೇ ವರಿಸಲು ಇಚ್ಛಿಸಿದಳು ಎಂದೆಲ್ಲ ವ್ಯಾಖ್ಯಾನಿಸಿರುವುದು ವ್ಯಾಖ್ಯಾನಕಾರರ ಕೆಟ್ಟ ಮನಸ್ಸಿನ ಪ್ರತಿಬಿಂಬದ ದ್ಯೋತಕ.

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ | ಚಕ್ಷುರುನ್ಮೀಲಿತಂ ಯೇನ ತಸ್ಮೈಶ್ರೀ ಗುರವೇ ನಮಃ || 

ಅಜ್ಞಾನದಿಂದ ಮುಚ್ಚಿರುವ ಕಣ್ಣನ್ನು ಬಾಣದಿಂದ ತಿವಿದಾದರೂ ಜಾಗೃತಗೊಳಿಸುವವನು ಗುರು ಎಂದಿದೆ. ಆದರೆ ಈಗ ಜ್ಞಾನದ ಕಣ್ಣನ್ನು ಮುಚ್ಚಿ, ಅಜ್ಞಾನದ ಕಣ್ಣನ್ನು ತೆರೆದಿರಿಸಿರುವ ಕಾರಣ ವೇದ-ಶ್ವಾನ ಸಂಯೋಗ ವಾದವು ವಿಜೃಂಭಿಸುತ್ತಿದೆ.

ಚಿತ್ತ ಸಂಕ್ಷೋಭೆ ಎನ್ನುವುದನ್ನು ಬಹಳ ಅರ್ಥಬದ್ಧವಾಗಿ ಉಪಾಸಕಿಯಾದಂತಹಾ ಯಾವುದು ಅತೀತವಿದೆ, ಯಾವುದು ಧರ್ಮವಿದೆ, ಯಾವುದು ಪ್ರಭುವಿದೆ, ಅದರಲ್ಲಿ ಅದೆಲ್ಲ ಆರೋಪಿಸಲ್ಪಟ್ಟಿದೆ. ಹಾಗಾಗಿ ಅದನ್ನು ಉಪಾಸನೆ ಮಾಡಬೇಕು. ಆಗ ಜ್ಞಾನ ಪಡೆಯುತ್ತೀಯ. ಇದು ಯಮೀ = ಉಪಾಸಕಿಯ ವಚನ. ಅಷ್ಟು ಬಿಟ್ಟರೆ ಅಲ್ಲಿ ಯಾವುದೇ ಕೊಳಕು ಅಭಿಪ್ರಾಯವಿಲ್ಲ.

ಇಲ್ಲಿ ಸ್ಥೂಲವಾಗಿ ಸ್ವಲ್ಪ ವಿಚಾರವನ್ನು ಮಾತ್ರ ಲೇಖಿಸಲಾಗಿದೆ. ಬಹಳ ವಿಸ್ತಾರವಾದ ಆಧ್ಯಾತ್ಮ ಚಿಂತನೆ ಇದು. ಯಮ-ಯಮೀ ಸೂಕ್ತದ ಒಂದೊಂದು ಮಂತ್ರಕ್ಕೂ ಅಗಾಧ ವಿವರಣೆ ಇದೆ. ಈ ಸಾಹಿತಿಗಳಿಗೆ ವಿಚಾರದ ವ್ಯಾಪ್ತಿ, ವಿಶಾಲತೆಗಳ ಪ್ರಮಾಣವನ್ನು ಅಳೆಯಲಿಕ್ಕೇ ಗೊತ್ತಿಲ್ಲ. ಆದರೆ ರಾಷ್ಟ್ರ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ ಕೊಡುತ್ತಾರಲ್ಲ, ತತ್ಕಾರಣ ಏನೇನೋ ಅಕ್ಷರ ಗೀಚಿ ಇದೇ ವೇದದ ಅರ್ಥ ಎನ್ನುತ್ತಾರೆ.

ಯಮ-ಯಮೀ ಸೂಕ್ತವು ಒಂದು ಅದ್ಭುತವಾದ ವಿಚಾರ ಸರಣಿ. ಅದರಲ್ಲಿ ಯೋನಿ ಎಂಬ ಶಬ್ದ ಬರುತ್ತದೆ. ಅಲ್ಲಿ ಅದು ಮನಸ್ಸಿನ ಪ್ರವಹನಾ ದಾರಿ ಎಂಬ ಅರ್ಥ ಕೊಡುತ್ತದೆ. ಮನಸ್ಸು ಹೇಗೇಗೆ ಹರಿಯುತ್ತದೆ ಎಂದು ವಿವರಿಸುತ್ತದೆ. ಆದರೆ ಅದನ್ನು ಅರ್ಥ ಮಾಡಿಕೊಳ್ಳದ ಸಾಮರ್ಥ್ಯವಿಲ್ಲದೆ ಅದಕ್ಕೂ ವಿಪರೀತಾರ್ಥ ಮಾಡಿದ್ದರೆ. ಅದನ್ನೆಲ್ಲ ನಂಬಿ ಕೆಡದಿರಿ. ನೀವು ಅತೀತೋಪಾಸಕರಾಗಿ ಎಂದು ಹಾರೈಸುತ್ತೇವೆ.

-      ಕೆ. ಎಸ್. ನಿತ್ಯಾನಂದರು,
ಅಘಸ್ತ್ಯಾಶ್ರಮ ಗೋಶಾಲೆ, 
ಬಂದ್ಯೋಡ್, ಕಾಸರಗೋಡು

Sunday, 10 May 2015

ಋಗ್ವೇದದ ವಸಿಷ್ಠ ಮಂಡಲದಲ್ಲೊಂದು ಗಣಿತಸೂತ್ರ - ಭಾಗ ೨

||  ಶ್ರೀಗುರುಭ್ಯೋನಮಃ ||

ಋ.ಮಂ.7 ಸೂ.15 ಮಂ.2
ಯಃ ಪಂಚ ಚರ್ಷಣೀರಭಿ ನಿಷಸಾದ ದಮೇದಮೇ | ಕವಿರ್ಗೃಹಪತಿರ್ಯುವಾ ||

        ವಸಿಷ್ಠರು ಈ ದೇಶದ ಒಬ್ಬ ನಿಃಸ್ಪೃಹ ಆದರ್ಶ ಗೃಹಸ್ಥ. ಹಾಗೇ ಕರ್ಮಠ ಬ್ರಾಹ್ಮಣ. ಹಾಗಾಗಿ ಎಲ್ಲಾ ಗೃಹಸ್ಥರಲ್ಲಿ ಅವರು ಪೂಜನೀಯರು. ವಿವಾಹವಾಗುವ ಪ್ರತಿಯೊಬ್ಬರೂ  ಖಂಡಿತವಾಗಿ ಅವರ ದರ್ಶನ, ಸೇವೆ, ಪೂಜೆ ಮಾಡಲೇಬೇಕಾದ ಆರ್ಹ ವ್ಯಕ್ತಿ. ಅವರ ಮಾತಿನಂತೆಯೇ ಈ ಮೇಲಿನ ವಿಚಾರ ವಿಮರ್ಶೆ ಮಾಡುವುದಿದ್ದರೆ ಈ ಪಂಚವೆಂಬುದು ಮಾನವಜನ್ಮದ ಅವಿಭಾಜ್ಯ ಅಂಗ. ಅದು ಪಂಚಭೂತಾತ್ಮಕ ಸತ್ಯ. ಅದನ್ನರ್ಥ ಮಾಡಿಕೊಂಡಲ್ಲಿ ಎಲ್ಲವೂ ನಿರಾಳ, ಸುಖಮಯ, ಸುಲಭವೆಂದಿದ್ದಾರೆ. ಈ ಪಂಚಾಂಗ ಸೂತ್ರವನ್ನೇ ಇಲ್ಲಿ ಹೇಳಿದ್ದಾರೆ ಗಮನಿಸಿ.

ಬುದ್ಧಿವಂತನಾದವನಿದ ಪೇಳು
ಬುದ್ಧಿಯಾ ಗಣಿತವಿದು ಕೇಳು
ಶುದ್ಧಿಯೊಳು ರೂಢಿಸಿದೆ ಸಂಖ್ಯೆ ಅದನರಿತು ನೀನೂ ||
ಬದ್ಧನಾಗೈ ಮಾನವ ಧರ್ಮಕೆ
ಬುದ್ಧಿಯೊಳಾಲೋಚಿಸುತ ನಡೆ
ತಿದ್ದಿಕೊಳ್ಳೈ ನಡೆಯನು ಈ ಪಂಚ ಬಂಧನವೂ || 1 ||

ಪಂಚದೊಳಗೆಲ್ಲ ಜಗವಿದೆ
ಸಂಚರಿಸುವಾ ಪ್ರಾಣ ಪಂಚಕ
ಹೊಂಚುವಾ ಅನ್ನ ಪಂಚಕ ಮಿಂಚುವಾ ನಿನ್ನಾನಂದ ||
ಪಂಚಕ ಮುಂಬನ್ನ ಋಣವೇ
ಪಂಚಕದೊಳಗ್ನಿಯಾಗುತಲಿ
ಪಂಚ ಪಂಚವಾಗಿ ವಿಭಜಿಸಿದೆ ನೀನರಿಯೋ || 2 ||

ಪಂಚಭೂತದ ಸಂಘಟನೆ
ಹೊಂಚಿದೆ ಈ ದೇಹ ವಾಯು
ಪಂಚಕಗಳಾ ಚಲನಾ ಮಾರ್ಗ ದೇಹವೂ ||
ಪಂಚೀಕರಣಗೊಳ್ಳದ ಮನ
ಪಂಚಾತ್ಮ ಹರಡುತಿದೆ ಜಗ
ಮಿಂಚಿ ಹೋಗುವ ಮುನ್ನ ನೀ ಲೆಕ್ಕ ಮಾಡೂ || 3 ||

ಕೊಂಚದವನಲ್ಲ ಹರಿ ಕೇಳು
ಹೊಂಚಿ ಅನ್ನವನಿಕ್ಕುತಲಿ
ಮಿಂಚ ಹರಿಸುವ ಜೀವರಲಿ ಪಂಚಪ್ರಾಣ ||
ಸಂಚಿದೇವನದು ಲೆಕ್ಕವಿದೆ
ಕೊಂಚ ಅರಿಯಿರಿ ಹರಿಯೇ
ಸಂಚಿನಾ ರೂವಾರಿ ಮಾಯೆ ಆತನ ಸಖಿಯು ಸತ್ಯ || 4 ||

ಮಂಚದಲಿ ಮಲಗಿ ತಾನಿಂದು
ಸಂಚ ರೂಪಿಸುವನಾತನೈ ಈ
ಪಂಚಕವನರಿಯದಾ ಮಾನವ ಮಿಂಚೆಂದು ಭ್ರಮಿಸಿ ||
ಹೊಂಚನರಿಯದೆ ತೊಳಲಾಡಿ ತಾ
ಮಿಂಚಿ ಮರೆಯಾಗೆ ಹುಟ್ಟೆಂದು
ಕೊಂಚವೂ ಎಗ್ಗಿಲ್ಲದೆ ಪೇಳುವನು ಇದು ಸತ್ಯವಲ್ಲಾ || 5 ||

ಪಂಚ ಪಂಚವೇ ಎಲ್ಲ ಮಾ ಜಗವೇ
ಪಂಚಭೂತದ ಸೃಷ್ಟಿಯಹುದು
ಹೊಂಚಿದೆ ಇದರೊಳು ಚೈತನ್ಯ ಆತ್ಮದಾಶ್ರಯ ತಾಣವೂ ||
ಸಂಚಿದರೊಳಗಿಲ್ಲ ಅನ್ನದೊಳಿದೆ
ಮುಂಚೆಯರಿತುಕೊ ಲೆಕ್ಕವನು
ಮಿಂಚಿ ಹೋಗದಿರು ಅನ್ನಕೆ ಮೋಸ, ವಂಚನೆ ಬೇಡವೋ || 6 ||

ಈ ಪಂಚ ಪಂಚಾತ್ಮಕ ಪ್ರಪಂಚದಲ್ಲಿ ಅನ್ನ ಕಾರಣವಾದ ಬಹುದೊಡ್ಡ ಪ್ರಪಂಚದ ಜಾಲ ಹರಡಿಕೊಂಡಿದೆ. ಅದನ್ನಾಧರಿಸಿದ ರೀತಿ, ನೀತಿ, ನಿಯಮ, ಕಾನೂನು, ಶಾಸ್ತ್ರ, ಧೈವ, ದೇವ, ಋಣ, ಕರ್ಮ, ಪ್ರಾಪ್ತಿ, ಸಂಚಿತ, ಆಗಾಮಿ, ಅಧಿಕಾರಿ, ನಿಯಾಮಕ, ದಾನಿ, ಧಾತೃ, ಭಿಕ್ಷುಕ, ಭಂಗ, ಭಂಡ, ಬಡವ, ಬಲ್ಲಿದ, ಆರ್ತ, ಶ್ರಮಿಕ, ಕಾಯಿಕ, ಕರ್ತ, ಕಾರ್ಯ, ಕಾರಣ, ಕವಿ, ದಮ, ಗೃಹಪತಿ, ಅನ್ನ, ಪ್ರಾಣ, ಜ್ಞಾನಗಳು ವ್ಯಾಪಿಸಿದೆ. ಇವೆಲ್ಲಾ ಅನ್ನ ಕಾರಣದ ಯಾವುದೋ ಒಂದು ಕೊಂಡಿಯಲ್ಲಿ ಪರಸ್ಪರ ಸಂಬಂಧ ಹೊಂದಿಯೇ ವ್ಯವಹರಿಸುತ್ತಿದೆ.  ಅದೇ ಜೀವನವೆಂಬ ಮಾಯಾ ಭ್ರಾಂತಿಯಲ್ಲಿ ಸಮಾಜವಿದೆ. ಅದರಿಂದ ದೂರವಿರಲು ಪ್ರಯತ್ನಸಿದಾಗಲೆಲ್ಲಾ ಅದು ಬಲವಾಗಿ ಬಿಗಿದಪ್ಪಿ ಹಿಡಿಯುತ್ತಿದೆ. ಅದಕ್ಕೇನು ಕಾರಣವಸಿಷ್ಠರ  ಮಾತಿನಲ್ಲೇ ಇದನ್ನು ಅರ್ಥ ಮಾಡಿಕೊಳ್ಳೋಣ.

ಋ.ಮಂ.7 ಸೂ.15 ಮಂ.4
ವಂ ನು ಸ್ತೋಮಗ್ನಯೇ ದಿವಃ ಶ್ಯೇನಾಯ ಜೀಜನಮ್ | ಸ್ವಃ ಕುವಿದ್ವನಾತಿ ನಃ ||

ಹಾರುತಿದೆ ಮನ ಪಕ್ಷಿ ಕೇಳ್
ಹೊರುತಿದೆ ಜೀವಾತ್ಮ ಬೇಡವೆಂ
ದರೆ ಕೇಳದೈ ಮನ ವಿಂಬುಗೊಡದು ತಾಳಿರಯ್ಯಾ ||
ಹರಿವ ಮನಗೊಂಬನಾತನು
ಪರಿಪರಿಯ ಆಕಾಂಕ್ಷೆಯಲಿ
ನಿರುತ ತೊಡಗುವ ಮನವ ಬಂಧಿಸುತ ಜಯಿಸೂ || 1 ||

ಮಾನದೊಳು ಬಾಳುವೆಗೆ ಅಲ್ಪತೃಪ್ತಿ
ಮನದ ಮೂಲೆಯ ದುರಾಶೆಯ
ಮನವಿಟ್ಟು ಬದಿಗೊತ್ತಿ ನೀ ಜಯಿಸಿದರೆ ಮನದ ಲೆಕ್ಕಾ ||
ಮನದಾಳ ಒಂಬತ್ತು ಅದರೊಳ
ಗೇನೇನಿದೆಯೊ ಗುಣಕದಲಿ ನವ
ಮನದಾಳದಾ ನವಕಗುಣ ಗುಣಿಸಿದರೆ ಮಿಂಚಿತ್ತೊಂದು || 2 ||

ದಿನವೊಂದುದಿಸಿತೆಂದು ಲೆಕ್ಕವ
ಮನದೊಳಗೆ ಮಾಡಿಕೊಳುತಲಿ
ದಿನದ ಜಾವವದೆಂಟು ಅದರನೆಂಟರಲಿ ಗುಣಿಸೀ ||
ದಿನದಿನಕು ಮೊತ್ತ ಹೆಚ್ಚುತ
ಮನ ವಿಕೃತಿಯೊಳಿರೆ ಅದನೇ
ಮನರಂಜನೆಯೆಂಬರೀ ಜನ ಸತ್ಯವಲ್ಲಾ || 3 ||

ಸೋಮವೆಂಬುದು ಕೇಳು ನೀ
ನಮ್ಮ ಜೀವ ಋಣ ಕರ್ಮದಾ
ಭಾಮೆಯ ಲೆಕ್ಕ ಹಾಕುವ ಸೂತ್ರವಯ್ಯಾ ||
ಸೋಮದಳತೆಯ ನೀನರಿತು
ಶ್ಯಾಮವಾಗೆಲೊ ಮನುಜ ನೀ
ಭಾಮೆಯರ ಸಂಗ ಮನೋರಂಜನೆಯಲ್ಲವಯ್ಯಾ || 4 ||

ಈ ರೀತಿಯಲ್ಲಿ ಮನದ ವಿಕೃತಿಯನ್ನು ಹೇಳುತ್ತಾ ಮನೋರಂಜನೆ ಬಗ್ಗೆ ಒಂದು ಗಣಿತ ಸೂತ್ರ ಹೇಳುತ್ತಾರೆ ವಸಿಷ್ಠರು. ಮನದ ಮೂಲಗುಣ ಒಂಬತ್ತು. ಅದರ ಗುಣಕ ಎಂಬತ್ತೊಂದು. ನಂತರ ಅದರ ವಿಕೃತಿ, ಪ್ರಕೃತಿಗಳು ಅಗಣಿತ. ಆದರೆ ಅದನ್ನು ರಂಜಿಸುವ ಸೂತ್ರವ್ಯಾವುದೂ ಅದಕ್ಕೆ ಸಂಬಂಧಿಸಿಲ್ಲ. ಮುಖ್ಯವಾಗಿ ತೃಪ್ತಿ, ತ್ಯಾಗ, ಪರೋಪಕಾರ, ಜ್ಞಾನಪ್ರಾಪ್ತಿ ಮಾತ್ರಾ ನೈಜ ಮನರಂಜನೆಯೆನ್ನುತ್ತಾರೆ ವಸಿಷ್ಠರು. ಅದಲ್ಲದೇ ಮನಸ್ಸಿಗೆ ಕಂಡದ್ದೆಲ್ಲಾ ಮನರಂಜನೆಯಲ್ಲ. ಅದು ವಿಕೃತ ಮನಸ್ಸಿನ ಪೀಕಲಾಟ. ಆದರೆ ಈ ಜನಕ್ಕೆ ಅದು ಅರ್ಥವಾಗಲಾರದು. ನೈಜ ಮನದ ಸತ್ಯದ ಅರಿವೇ ಇಲ್ಲದ ಜನಕ್ಕೆ ಅದಕ್ಕೆ ರಂಜನೆಯೇನು ಎಂಬುದು ಹೇಗೆ ಅರ್ಥವಾದೀತುಹಾಗಾಗಿ ನೈಜ ಮನದ ಅರಿವು ಪಡೆಯುವತ್ತ ನಿಮ್ಮ ಪ್ರಯತ್ನವಿರಲಿ ಎಂದು ಹೇಳುತ್ತಾರೆ ವಸಿಷ್ಠರು.

ಈಗಲಾದರೋ ವಿಕೃತ ಮನಸ್ಸಿನ ತಾಕಲಾಟ ಎಲ್ಲಿಗೆ ಹೋಗಿ ಮುಟ್ಟಿದೆಯೆಂದರೆ ಮೊನ್ನೆಯ ಒಂದು ಘಟನೆ, ಯು.ಆರ್. ಅನಂತಮೂರ್ತಿಯವರು ದಿವಂಗತರಾದರು. ಆ ಸಂದರ್ಭವನ್ನು ನೋಡಿ, ಕೆಲವರು ಪಟಾಕಿ ಸಿಡಿಸಿ ಆನಂದಪಟ್ಟರು ಕೆಲವರು ಅದನ್ನು ಖಂಡಿಸಿ ಆನಂದಪಟ್ಟರು, ಕೆಲವರು ಅದಕ್ಕಾಗಿ ಟಿ.ವಿ.ವಾಹಿನಿಗಳಲ್ಲಿ ದೊಡ್ಡ ದೊಡ್ಡ ಮಾತನ್ನಾಡಿ ಸಂತೋಷ ಪಟ್ಟರು, ಕೆಲವರು ನಾವೇ ಭಾರತೀಯ ಸಂಸ್ಕೃತಿಯ ನಿರ್ಮಾತೃಗಳು ಎಂದು ಕೂಗಾಡಿ ಹೋರಾಡಿ ಸಂತೋಷಪಟ್ಟರು. ಇವರಿಗೆ ಸಂಸ್ಕೃತಿಯ ಪರಿಚಯವಿದೆಯೋ ಇಲ್ಲವೋ ಅದು ಮುಖ್ಯವಲ್ಲ, ಅವರು ಟಿ.ವಿ. ಮಾಧ್ಯಮದಲ್ಲಿದ್ದರೆ ಅವರು ಸರ್ವಜ್ಞರು ಎಂಬ ಭಾವ ಕಂಡು ಬರುತ್ತದೆ. ಆ ಬಗ್ಗೆ ಅವರಿಗೆ ತಿಳುವಳಿಕೆ ಇದೆಯೇಅದು ಮುಖ್ಯವಲ್ಲ ಅವರು ಹೇಳಿದ್ದೆಲ್ಲಾ ಸತ್ಯ, ಸಂಸ್ಕೃತಿ, ಧರ್ಮ, ನ್ಯಾಯ ಅವರಿಗೆ ವಿನೋದವಾದರೆ ಅನಾವಶ್ಯಕ ಪ್ರಕರಣ ತೆಗೆದು ಧೂಳೆಬ್ಬಿಸುತ್ತಾರೆ. (ಅದು ಸ್ಟಿಂಗ್ ಆಪರೇಷನ್) ಕಂಪ್ಯೂಟರ್ ಮುಖೇನ ಮಾಡುವ ಗೋಲ್ ಮಾಲ್, ಇದು ಮಾಧ್ಯಮ ಸ್ಥಿತಿ. ಇರಲಿಬಿಡಿ ಇದರಲ್ಲಿ ವಿಕೃತ ಮನಸ್ಸಿನ ಆಟದ ಹೊಳಹನ್ನು ನೋಡೋಣ.

ಮುಖ್ಯವಾಗಿ ಯು.ಆರ್.ಅನಂತಮೂರ್ತಿಯವರು ಒಬ್ಬ ಕಟ್ಟಾ ವಿಚಾರವಾದಿ. ಸಮಾಜದ ಅಂಕುಡೊಂಕನ್ನು ತೋರಿಸುವ ಖಂಡಿತವಾದಿ. ಹುಟ್ಟು ಬ್ರಾಹ್ಮಣ. ಆದರೆ ಬ್ರಾಹ್ಮಣ್ಯದ ಕೆಲ ಕಂದಾಚಾರ ಕಟ್ಟುಪಾಡುಗಳ ಬದ್ಧ ವಿರೋಧಿ. ಮಡಿವಂತಿಕೆಯನ್ನು ಜಾತೀಯವಾದವನ್ನೂ ಮೆಟ್ಟಿ ನಿಂತ ಧೀಮಂತ ಮತ್ತು ಚಿಂತಕ. ಹಾಗೆ ಸಾಹಿತಿ, ಹೋರಾಟಗಾರ. ಜೊತೆಯಲ್ಲಿ ಸ್ವಲ್ಪ ಮಟ್ಟಿನ ರಾಜಕೀಯ ಪ್ರಾವೀಣ್ಯತೆಯೂ ಇದೆ. ಮನಸ್ಸಿನಲ್ಲಿದ್ದುದ್ದನ್ನು ಹೇಳಿ ಬಿಡುವ ತೀವ್ರವಾದಿ. ಅದೇ ತೀವ್ರವಾದಿತನವೇ ಕೆಲ ಕಟ್ಟಾ ಹಿಂದುಗಳಿಗೆ ನುಂಗಲಾರದ ಸಮಸ್ಯೆ. ಹಾಗೇ ಆ ಕಾರಣದಿಂದಲೇ ಅಜಾತಶತ್ರುವಾಗಬೇಕಾದ ಅನಂತಮೂರ್ತಿಯವರು ಕೆಲ ಆಸ್ತೀಕವಾದಿಗಳ ಕೋಪಕ್ಕೆ ಪಾತ್ರರಾಗಿದ್ದಾರೆ. ಹಿಂದುತ್ವವಾದಿಗಳ ಕಿಡಿಗಣ್ಣಿಗೆ ಗುರಿಯಾದರು. ಕಾರಣ ಅವರು ತಪ್ಪಿ ಕೊಟ್ಟ ಒಂದು ಹೇಳಿಕೆಯ ಮಾತು ದೇವರ ವಿಗ್ರಹಕ್ಕೆ ಮೂತ್ರ ಮಾಡಿದರೂ ಏನೂ ಆಗುವುದಿಲ್ಲ ಇದು ಹೇಳಿದ್ದು ಎಂದೋ, ಅದೂ ಮಾತಿನ ಭರಾಟೆಯಲ್ಲಿ ಆಡಿದ್ದಿರಬೇಕು. ವಸ್ತುಶಃ ಹೇಳಬೇಕೆಂದೇ ಉದ್ದೇಶಪೂರ್ವಕವಾಗಿ ಹೇಳಿದ್ದಲ್ಲ. ಅದೂ ಹೇಳಿದ ಎಷ್ಟೋ ಕಾಲದ ನಂತರ ಶ್ರೀಯುತ ಕಲಬುರ್ಗಿಯವರ ಕಾರಣದಿಂದಾಗಿ ಬೆಳಕಿಗೆ ಬಂತು. ಟಿ.ವಿ.ಯವರು ಪ್ರಕಾಂಡ ಸುದ್ದಿ ಮಾಡಿದರು. ರೊಚ್ಚಿಗೆದ್ದ ಹಿಂದುತ್ವವಾದಿಗಳು ಪ್ರತಿಭಟನೆ ಹೋರಾಟ ಮಾಡಿದರು. ಹಾಗೇ ನಿಧಾನವಾಗಿ ತಣ್ಣಗಾಯ್ತು ವಿಚಾರ. ಆದರೆ ನಂತರ ಶ್ರೀಯುತರು ಅನಾರೋಗ್ಯದಿಂದ ಸತ್ತಾಗ ಈ ಕಟ್ಟಾ ಆಸ್ತೀಕರಿಗೆ ಅದನ್ನು ತೋರಿಸಿಕೊಳ್ಳುವ ಒಂದು ಅವಕಾಶವೆಂದು ನಾನಾರೀತಿಯಲ್ಲಿ ತೋರ್ಪಡಿಸಿದರು. ಅದರಲ್ಲಿ ಪಟಾಕಿ ಸಿಡಿಸಿದವರು, ಅದನ್ನು ಖಂಡಿಸಿದವರು, ಕೂಗಾಡಿದವರು, ಅದರ ನೆಪದಿಂದ ಟಿ.ವಿ.ಯಲ್ಲಿ ಕಾಣಿಸಿಕೊಂಡು ದೊಡ್ಡವರಾದವರು ಎಲ್ಲರೂ ಸುಖಪಟ್ಟರು, ಸಂತೋಷಪಟ್ಟರು. ಸತ್ತ ಅನಂತಮೂರ್ತಿ ಅನಾಥರಾದರು. ಅವರು ತಮ್ಮ ಹಿಂದಿನ ವ್ಯಕ್ತಿತ್ವ ಧರ್ಮೀಯ ಜನರ ಸೋಗಲಾಡಿತನವನ್ನು ಖಂಡಿಸಿಕೊಂಡು ಬಂದ ಧೀಮಂತಿಕೆ, ಜಾತೀಯ, ಮತೀಯ ಮೂರ್ಖವಾದವನ್ನು ಖಂಡಿಸಿದ ಧೈರ್ಯ, ಸಾಹಸ, ತಮ್ಮ ಜೀವನ ಪರ್ಯಂತದ ತಪಸ್ಸನ್ನು ಅವರ ಉತ್ತರ ಕ್ರಿಯೆಯೆಂಬ ಆಚರಣೆಗಳಿಗೆ ತೂರಿ ಸಂತೋಷಪಟ್ಟರು. ಅವರಿಗೆ ವೇದೋಕ್ತ ಸಂಸ್ಕಾರವೆಂಬ ಬಣ್ಣ ಕಟ್ಟಿದರು. ಇದು ಅವರಿಗೆ ಅನ್ಯಾಯವೆಸಗಿದಂತಲ್ಲವೆಒಬ್ಬ ವಿಚಾರವಾದಿ, ನಾಸ್ತಿಕವಾದಿಯ ವಿಚಾರವನ್ನು ಗಾಳಿಗೆ ತೂರಿ ಅವರನ್ನು ಒಂದು ಧರ್ಮದ, ಮತದ ಮೂರ್ತಿಯಾಗಿ ಬದಲಿಸಿ ಗಾಳಿಗೆ ತೂರಿದ್ದು ಎಷ್ಟು ಸೂಕ್ತಹಾಗಿದ್ದಾಗ ಈ ಜನ ಅವರು ಸತ್ತಾಗ ಪಟಾಕಿ ಸಿಡಿಸಿದ್ದು ಅಸಮಂಜಸವೆನ್ನಲಾದೀತೆನಮ್ಮ ಸಂಸ್ಕೃತಿಗೆ ಇದು ಅಪಚಾರವೇ?  ಏಕೆ ಈ ಭಯ?  ಎಲ್ಲೋ ಒಬ್ಬ ಪಟಾಕಿ ಸಿಡಿಸಿದಾಗ ಅದರಿಂದ ಸಂಸ್ಕೃತಿ ನಾಶವಾಯ್ತೆಅದನ್ನು ಖಂಡಿಸಿದಾಗ ಖಂಡಿಸಿದವರೇನೂ ಪೂರ್ಣ ಸಾಚಾಗಳೆಂದೇ ಅರ್ಥವೇ?  ಇದ್ಯಾವುದೂ ಅಲ್ಲ. ಒಬ್ಬೊಬ್ಬರದ್ದು ಒಂದೊಂದು ರೀತಿಯ ವಿಕೃತ ಮನಸ್ಸಿನ ಮನರಂಜನೆಯಷ್ಟೆ. ಹಾಗೆಂದು ಎಲ್ಲವೂ ಸ್ವಾಭಾವಿಕ, ಅವಕ್ಕೆಲ್ಲಾ ಉದಾಸೀನವೇ ಮದ್ದು. ಹಾಗಾಗಿ ವಸಿಷ್ಠರು ಸಮಸ್ಥಿತಿ ಅಥವಾ ಸಮಚಿತ್ತತೆ ಎಂದರು. ಅದನ್ನು ಸಾಧಿಸಿಕೊ ಎಂದು ಹೇಳಿದರು.

ಇನ್ನು ಭಾರತೀಯ ತತ್ವ ಸಿದ್ಧಾಂತ, ಬಸವಣ್ಣನವರ ವಚನ ಪರರ ನಿಂದಿಸಬೇಡ, ಅಹಿಂಸಾ ಪರಮೋ ಧರ್ಮವೆಂಬ ಸೈದ್ಧಾಂತಿಕ ನೆಲೆಗಟ್ಟಿಲ್ಲಿ ನೋಡಿದಾಗ ಯು.ಆರ್.ಅನಂತಮೂರ್ತಿ ಯವರು ಗುಟ್ಟಾಗಿ ಮಾಡಿದ ಕೆಲಸ-ಪರಿಣಾಮವಾಗಲಿಲ್ಲ, ಆದರೆ ಅದು ಶ್ರೀ ಕಲಬುರ್ಗಿಯವರ ಕಾರಣದಿಂದಾಗಿ ಜಗಜ್ಜಾಹೀರಾಯ್ತು. ನಂತರ ಅದು ಸಾಮಾಜಿಕ ನೋವು, ತನ್ಮೂಲಕ ಹಿಂದೆ ಧೈವೀಕ ನಿಂದೆಗೆ ಕಾರಣವಾಯ್ತು, ಹಾಗಾಗಿ ಮೂತ್ರಪಿಂಡ ಖಾಯಿಲೆಯೇ ಉಲ್ಬಣಿಸಿ ಮೃತಪಟ್ಟರು. ಸತ್ತಾಗಲೂ ಅವರು ಸಮಾಜಕ್ಕೊಂದು ಪಾಠ ಹೇಳಿ ಹೋದರು “ಅನಾವಶ್ಯಕ ಯಾವುದನ್ನೂ ನಿಂದಿಸದಿರಿ, ಅದಕ್ಕಾಗಿ ನಾನೂ ಬೆಲೆ ತೆತ್ತಿದ್ದೇನೆ” ಎಂದು. ತಪ್ಪೊಪ್ಪಿಕೊಂಡ ಮಹಾತ್ಮನಾತ. ಇದನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕು. ಒಂದು ಕ್ಷಣದ ವಿಕೃತ ಮನಸ್ಸಿನ ಸಂತೋಷಕ್ಕಾಗಿ ಮಾಡಿದ ತಪ್ಪು ಎಂತಹಾ ಘಟನೆಗೆ ಕಾರಣವಾಯ್ತು ಆಲೋಚಿಸಿ. ಅದರಿಂದಾಗಿ ಅರ್ಥಮಾಡಿಕೊಳ್ಳಿ ಎಂದಿಗೂ ನೀವು “ಪರರ ನಿಂದಿಸಬೇಡಿ” ಯಾರಿಗೂ ನೋವುಂಟು ಮಾಡಬೇಡಿ, ಆ ಕಾರಣದ ಮನೋರಂಜನೆ ಮುಂದೆ ನಿಮಗೇ ಅಪಾಯ. ಒಂದು ಸಾರ್ವತ್ರಿಕ ಸಮಾಜ ನಿಂದೆ, ಧರ್ಮನಿಂದೆ ಅಷ್ಟು ಸುಲಭದಲ್ಲಿ ಅರಗಿಸಿಕೊಳ್ಳಲಾಗದ್ದು. ಅದನ್ನು ಸಾರ್ವತ್ರಿಕವಾಗಿ ಯಾರೂ ಹೇಳುವುದು ಸೂಕ್ತವಲ್ಲ. ಈಗೀಗ ವಿಚಿತ್ರ ಖಾಯಿಲೆ, ಹಲವು ರೀತಿಯ ಸಾಮಾಜಿಕ ಸಮಸ್ಯೆಗಳು ಹುಟ್ಟಲು ಇದೇ ಕಾರಣವಿರಬಹುದು. ಕೆಲ ನಿಂದನೆಗೆ ಊಹಾಪೋಹಗಳ ಪ್ರಚಾರಕ್ಕಾಗಿಯೇ ಹುಟ್ಟಿಕೊಂಡ ಪೀತಪತ್ರಿಕೆ+ಟಿ.ವಿ. ಮಾಧ್ಯಮ ಇದನ್ನು ಸಮಾಜದಲ್ಲಿ ಹರಡುತ್ತಿದೆ. ಅದನ್ನು ಕೇಳಿ ಓದಿ ಸಂತೋಷಪಡುತ್ತಿದೆ ಸಮಾಜ. ಇದು ಬೇಕೇಖಂಡಿತಾ ಬೇಕಿಲ್ಲ. ಅರ್ಧ ಸತ್ಯದಷ್ಟು ಅಪಾಯಕಾರಿ ಸುಳ್ಳಲ್ಲ, ನೆನಪಿರಲಿ. ಅರ್ಧಸತ್ಯದ ಪ್ರಚಾರವನ್ನೂ ನೋಡಬೇಡಿ. ಅಂತಹಾ ಪತ್ರಿಕೆ ಓದಬೇಡಿ. ಯಾರೊಬ್ಬ ಲೇಖಕನ ಓರೆ ದೃಷ್ಟಿ ವಿಕೃತ ಮನಸ್ಸಿನ ಪರಿಣಾಮ ನಿಮ್ಮನ್ನು ಬಾಧಿಸದಿರಲಿ. ಯಾರ ನಿಂದೆಯನ್ನೂ ಕೇಳಿ ನಮಗಾಗ ಬೇಕಾದ್ದೇನುಆಲೋಚಿಸಿ. ನಂತರ ವಸಿಷ್ಠರು ಹೇಳುತ್ತಾರೆ ಮನೋರಂಜನೆ ಯೆಂಬುದು ಯಾರೋ ಒಬ್ಬನ ನಿರ್ಣಯ ಅಭಿಪ್ರಾಯವಲ್ಲ. ಕಜ್ಜಿಯಾದವನಿಗೆ ತುರಿಕೆಯಾಗಿ ಗಾಯವಾದರೇನೇ ಆತ್ಮ ಸಂತೋಷ. ಹಾಗಾಗಿ ತುರಿಸಿಕೊಳ್ಳುತ್ತಾನೆ ಹಾಗೆಂದು ಎಲ್ಲರೂ ತುರಿಸಿಕೊಂಡು  ಗಾಯ ಮಾಡಿಕೊಳ್ಳುವುದಲ್ಲ. ಕುಡುಕನಿಗೆ ನಿಶೆಯೇರಿ ಚರಂಡಿಗೆ ಬಿದ್ದಿದ್ದರೇ ಸಂತೋಷ. ಹಾಗೆಂದು ಚರಂಡಿಯೇನು ಮಲಗುವ ಮನೆಯಲ್ಲ. ವಿಕೃತ ಮನಸ್ಸನ್ನು ಬಿಡಿ. ನಾಶವನ್ನೂ, ನಿಷೇಧವನ್ನೂ, ಅನಾಗರೀಕತೆಯನ್ನೂ ನೋಡಿ ಸಂತೋಷಿಸಬೇಡಿ. ಅದನ್ನು ಉದಾಸೀನದಿಂದ ತಿರಸ್ಕರಿಸಿ ತನ್ಮೂಲಕ ನಿಧಾನವಾಗಿ ನಿಮ್ಮ ಮನೋವೃತ್ತಿ ಒಳ್ಳೆಯದರಿಂದ ಆನಂದಿಸುತ್ತದೆ.

ಇನ್ನೊಂದು ಅಂಶ ಮಾನವನ ಆರೋಗ್ಯಕ್ಕೆ ಸಂಬಂಧಿಸಿದ್ದು. ವಸಿಷ್ಠರು ಹೇಳುತ್ತಾರೆ “ಸತ್ಯವಚನ ಬದ್ಧತೆ ಅವನ ಆರೋಗ್ಯ ರಕ್ಷಕ” ವೆಂದು.  ವೃಥಾ ಸುಳ್ಳನ್ನೇ ನಂಬಿ ಬದುಕುವ ಸಂತೋಷಕ್ಕಿಂತ ಸತ್ಯವನ್ನು ನಂಬುವ, ಜೀವನಕಷ್ಟವೇ ಆರೋಗ್ಯ ದಾಯಕ. ಸುಳ್ಳು ಹೇಳಿ ಮೋಸ ಮಾಡಿ ಬದುಕುವವನನ್ನು ನಿರಂತರ ಅಪರಾಧೀ ಪ್ರಜ್ಞೆ ಕಾಡುತ್ತಾ ರೋಗಿಯನ್ನಾಗಿ ಮಾಡುತ್ತದೆ ಎಂದರು ವಸಿಷ್ಠರು.

ಋ.ಮಂ.7 ಸೂ.15 ಮಂ.6-15
ಸೇಮಾಂ ವೇತು ವಷಟ್ಕೃತಿಮಗ್ನಿರ್ಜುಷತ ನೋ ಗಿರಃ | ಯಜಿಷ್ಠೋ ಹವ್ಯವಾಹನಃ || 6 ||
ನಿತ್ವಾ ನಕ್ಷ್ಯ ವಿಶ್ಪತೇ ದ್ಯುಮಂತಂ ದೇವ ಧೀಮಹಿ ಸುವೀರಮಗ್ನ ಆಹುತ || 7 ||
ಕ್ಷಪ ಉಸ್ರಶ್ಚ ದೀದಿಹಿ ಸ್ವಗ್ನಯಸ್ತ್ವಯಾ ವಯಮ್ ಸುವೀರಸ್ತ್ವಮಸ್ಮಯುಃ || 8 ||
ಉಪ ತ್ವಾ ಸಾತಯೇ ನರೋ ವಿಪ್ರಾಸೋ ಯಂತಿ ಧೀತಿಭಿಃ ಉಪಾಕ್ಷರಾ ಸಹಸ್ರಿಣೀ || 9 ||
ಅಗ್ನೀ ರಕ್ಷಾಂಸಿ ಸೇಧತಿ ಶುಕ್ರಶೋಚಿರಮರ್ತ್ಯಃ ಶುಚಿಃ ಪಾವಕ ಈಡ್ಯಃ || 10 ||
ಸ ನೋ ರಾಧಾಂಸ್ಯಾ ಭರೇಶಾನಃ ಸಹಸೋ ಯಹೋ ಭಗಶ್ಚ ದಾತು ವಾರ್ಯಮ್ || 11 ||
ತ್ವಮಗ್ನೇ ವೀರವದ್ಯಶೋ ದೇವಶ್ಚ ಸವಿತಾ ಭಗಃ ದಿತಿಶ್ಚ ದಾತಿ ವಾರ್ಯಮ್ || 12 ||
  ಅಗ್ನೇ ರಕ್ಷಾಣೋ ಅಂಹಸಃ ಪ್ರತಿಷ್ಮ ದೇವ ರೀಷತಃ ತಪಿಷ್ಠೈ ರಜರೋ ದಹ || 13 ||
ಅಧಾ ಮಹೀ ನ ಆಯಸ್ಯನಾಧೃಷ್ಟೋ ನೃಪೀತಯೇ ಪೂರ್ಭವಾ ಶತಭುಜಿಃ || 14 ||
ತ್ವಂ ನಃ ಪಾಹ್ಯಂಹಸೋ ದೋಷಾವಸ್ತರಘಾಯತಃ ದಿವಾ ನಕ್ತ ಮದಾಭ್ಯ || 15 ||

1) ಶುಚಿಯಾಗಿರು, ಪೂರ್ಣನಾಗಿರು. ನೆಮ್ಮದಿಯನ್ನು ಪಡೆಯುವೆ

2) ಸತ್ಯವನ್ನೇ ಹೇಳು, ಮನ ಮುಕ್ತವಾಗಿರಲಿ ಆರೋಗ್ಯ ಪಡೆಯುವೆ

3) ನಿಂದನೆಯಿಂದ ದೂರವಿರು, ಯಾರನ್ನೂ ನಿಂದಿಸಬೇಡ ಮನೋವಿಕೃತಿ ದೂರವಾಗುತ್ತದೆ

4) ತ್ಯಾಗಿಯಾಗು, ಉಪಕಾರಿಯಾಗು ಯೋಗಿಯಾಗುತ್ತೀಯ

5) ಅನ್ನವನ್ನೇ ತಿನ್ನು, ಅದು ನಿನ್ನದ್ದಾಗಿರಲಿ ದೈಹಿಕ ರೋಗ ಓಡಿಹೋಗುತ್ತದೆ

6) ನಿತ್ಯ ಶ್ರಮಿಕನಾಗು, ಪರವಸ್ತುಗಳನ್ನು ದ್ವೇಷಿಸು ಆತ್ಮೋನ್ನತಿ ಸಿದ್ಧಿಯಾಗುತ್ತದೆ

7) ಆಸೆ ಬಿಡು ನಿತ್ಯ ತೃಪ್ತಜೀವನ ನಡೆಸು ಶ್ರೀಮಂತನಾಗುತ್ತೀಯ

8) ಪ್ರೀತಿ, ದಯೆ, ಕ್ಷಮೆ ನಿನ್ನದ್ದಾದರೆ ನೀ ದೇವನಾಗುತ್ತೀಯ

9) ನೀ ಶೂದ್ರನಾಗು, ನೀ ರುದ್ರನಾಗು ಆಗ ನೀ ಅರಸನಾಗುತ್ತೀಯ

10) ದೇಹಸುಖ + ಮನೋಸುಖ ಎರಡರಲ್ಲಿ ವಿವೇಕವಿದ್ದರೆ  ನೀ ನಾಗರೀಕನಾಗುತ್ತೀಯ
ಈ ಹತ್ತು ಮುಖ್ಯಾಂಶಗಳನ್ನು ಪಟ್ಟಿ ಮಾಡಿ ಮಾನವ ಉತ್ಕರ್ಷವನ್ನು ಹೇಳಿದರು ವಸಿಷ್ಠರು. ಈ ದಶದಿಕ್ಕುದಾರಿ ಅರ್ಥ ಮಾಡಿಕೊಂಡವನೇ ಮಹಾಜ್ಞಾನಿಯೆಂದರು. ಕಾಮಾದಿ ಅರಿಗಳನ್ನು ಜಯಿಸಿ ಮನೋ ವಿಕೃತಿಯಿಂದ ಹೊರಬರುವ ಸುಲಭ ಮಾರ್ಗವೆಂದರು. ಅದನ್ನೇ ಆ ದಶ ಸೂತ್ರವನ್ನೇ ಈ  ಹತ್ತು ಮಂತ್ರಗಳಲ್ಲಿ ವಿವರಿಸಿರುತ್ತಾರೆ. ಒಟ್ಟಾರೆ ಮಾನವನಾಗುವತ್ತ ಈ ಹತ್ತು ದಾರಿಯನ್ನು ಬಳಸಿರೆಂದು ಹೇಳಿರುತ್ತಾರೆ. ಅವೆಲ್ಲಾ ಸೂತ್ರಬದ್ಧವೆಂದೂ, ಮಾನವ ಜೀವನ ಪೂರ್ಭವಾ ಶತಭುಜಿಃ” ಎಂದು ಹೇಳಿದರು.

ಋ.ಮಂ.7 ಸೂ.18 ಮಂ.16-18
ಅರ್ಧಂ ವೀರಸ್ಯ ಶೃತಪಾಮನಿಂದ್ರಂ ಪರಾ ಶರ್ಧಂತಂ ನುನುದೇ ಅಭಿಕ್ಷಾಮ್
ಇಂದ್ರೋ ಮನ್ಯುಂ ಮನ್ಯುಮ್ಯೋ ಮಿಮಾಯ ಭೇಜೇ ಪಥೋ ವರ್ತನಿಂ ಪತ್ಯಮಾನಃ || 16 ||
ಆಧ್ರೇಣ ಚಿತ್ತದ್ವೇಕಂ ಚಕಾರ ಸಿಂಹ್ಯಂ ಚಿತ್ ಪೇತ್ವೇನಾ ಜಘಾನ |
ಅವಸ್ರಕ್ತೀರ್ವೇಶ್ಯಾವೃಶ್ಚದಿಂದ್ರಃ ಪ್ರಾಯಚ್ಛದ್ವಿಶ್ವಾ ಭೋಜನಾ ಸುದಾಸೇ || 17 ||
ಶಶ್ವಂತೋ ಹಿ ಶತ್ರವೋ ರಾರಧುಷ್ಟೇ ಭೇದಸ್ಯ ಚಿಚ್ಛರ್ಧತೋ ವಿಂದ ರಂಧಿಮ್
ಮರ್ತಾಙ್ ಏನಃ ಸ್ತುವತೋ ಯಃ ಕೃಣೋತಿ ತಿಗ್ಮಂ ತಸ್ಮಿನ್ನಿ ಜಹಿ ವಜ್ರಮಿಂದ್ರಃ || 18 ||

ಇದರಂತೆ ಮಾನವನು ತನ್ನ ತಾನು ಹಾಳು ಮಾಡಿಕೊಳ್ಳುತ್ತಾನೆ ವಿವೇಕ ಕಳೆದುಕೊಳ್ಳುತ್ತಾನೆ. ಕಾರಣ ಸಿಟ್ಟು. ಈ ಕೋಪವೆಂಬುದು ಒಂದು ನರ ಸಂವೇದೀ ಚರ್ಯೆ. ಅದು ಉದ್ದೀಪನಗೊಂಡಾಗ ಕಾರಣವಿಲ್ಲದೇ ಹುಟ್ಟಿ ಇವನ ಅಭ್ಯುದಯವನ್ನು ನಾಶ ಮಾಡಿ ನಂತರ ಏನೂ ಇಲ್ಲದಂತೆ ಸುಮ್ಮನಾಗುತ್ತದೆ. ನಂತರ ಬುದ್ಧಿ ಪ್ರಚೋದನೆಯಾಗಿ ಆ ಘಟನೆಯನ್ನು ವಿಮರ್ಶಿಸಿ ಸತ್ಯ ದರ್ಶನ ಮಾಡಿಸಿದರೂ ಸಿಟ್ಟಿನ ಕೈಯಲ್ಲಿ ಹಾಳಾದ್ದು ನಂತರ ಸರಿಯಾಗದ ಸ್ಥಿತಿಗೆ ತಲುಪಿರುತ್ತದೆ. ಹಾಗಾಗಿ ನಿನ್ನ ಸಿಟ್ಟೆಂಬ ನಿನ್ನ ಶತ್ರುವನ್ನು ನಿನ್ನಲ್ಲೇ ಇಟ್ಟುಕೊಂಡು ಏಕೆ ಸಾಕುತ್ತೀಯಅದನ್ನು ಬಿಟ್ಟು ವಿವೇಕವೆಂಬ ಗೋಸಾಕಣೆ ಮಾಡು. ಚಿತ್ ಪರಿಪಕ್ವತೆ ಸಾಧಿಸಿ ಸಿಟ್ಟನ್ನು ಗೆಲ್ಲು. ಮನಸ್ಸಿನಂತೆ ವರ್ತಿಸಬೇಡ. ಚಿತ್ತಕ್ಕೆ ಸಮನಾಗಿ ವರ್ತಿಸು. ಸಿಟ್ಟನ್ನು ನೀನು ಗೆಲ್ಲದಿದ್ದರೆ ನೀ ಮಾನವನಾಗಲು ಸಾಧ್ಯವೇ ಇಲ್ಲ. ನಿನ್ನ ವಿಕೃತ ಮನಸ್ಸಿನ ಅಸಹಾಯಕತೆಯೇ ಸಿಟ್ಟಿಗೆ ಕಾರಣ. ಹಾಗಾಗಿ ಎಂದೆಂದೂ ಭಾವನಾತ್ಮಕವಾಗಿ ಸಣ್ಣವನಾಗಿರು. ಸಿಟ್ಟು ಬರುವುದಿಲ್ಲ. ನಿನ್ನ ಅಹಂಕಾರವನ್ನು ಮೆಟ್ಟು, ಸಿಟ್ಟು ಓಡಿ ಹೋಗುತ್ತದೆ. ಅಸಹಾಯಕತೆ, ಅಹಂಕಾರ, ಮೋಹ, ದುರಾಸೆ, ಮದವೇ ಸಿಟ್ಟಿಗೆ ಕಾರಣ. ಸಿಟ್ಟನ್ನು ಗೆದ್ದಲ್ಲಿ ಲೋಕವನ್ನೇ ಗೆದ್ದಂತೆ ಎಂದಿದ್ದಾರೆ ವಸಿಷ್ಠರು. ಹಾಗೇ ಆ ಹತ್ತೂ ಮಂತ್ರಗಳಲ್ಲಿ ಒಂದು ಸೂತ್ರ ಸಂಯೋಜಿಸಿದ್ದಾರೆ. ಅದೊಂದು ವಿಶಿಷ್ಟ ಸಮೀಕರಣ. ಅದನ್ನು ಅರ್ಥಮಾಡಿಕೊಂಡಲ್ಲಿ ಏನು ಬೇಕಾದರೂ ಸಾಧಿಸಲು ಸಾಧ್ಯವೆಂದರು.

ಮರೆಯಾಗಿ ನಿಂತಿದೆ ಓರೆಕೋಲು ನಿ
ನ್ನಿರವ ನರಿತಿದೆ ಅಳತೆಯಿದೆ ನಿನ್ನ್ಹೆಜ್ಜೆ
ಊರಿದಾ ದನಿಯ ಲೆಕ್ಕದಲಿ ಮುಂದೊತ್ತಿ ತಲೆಗೆ ಬಡಿಯೇ  ||
ಅರಿತುಕೊ ಹನ್ನೆರಡಂಗುಲದ ಹೆಜ್ಜೆ
ಮರೆಯಲಿಹ ಕೋಲಿನಾ ಉದ್ದ ಒಂದಾಳು
ಸರಿಯಾಗಿ ನಿನ್ನ ತಲೆ ಗುರಿ ನಿನ್ನ ನಡಿಗೆಯ ದೂರವೆಷ್ಟು || 1 ||

ನಾಲಗೆಯೊಳಿದೆ ಲೆಕ್ಕ ಅಕ್ಕಪಕ್ಕದಿ
ನಾಲಗೆಯನಣಕಿಸುತಿದೆ ದಂತ
ನಾಲಗೆಯು ಬಹು ಜಾಣ ಹಲ್ಲಿಗೆಟಕದು ಇದನು ||
ನಾಲಗೆಯ ನುಸಿವ ಶಕ್ತಿಯ ಅಳತೆ
ನಾಲಗೆ ದಂತದಾ ಮಧ್ಯಕಾಲವನರಿ
ನಾಲಗೆಯ ಕಚ್ಚದು ಹಲ್ಲು ಇಲ್ಲದಿರೆ ನೋವು ನಿನಗೇ || 2 ||

ಕಣ್ಣು ಮುಚ್ಚಿದೆ ರೆಪ್ಪೆ ನೋಡಲು
ಕಣ್ಣು ತೆರೆದು ಮುಚ್ಚುವ ಕಾಲ
ಕಣ್ಣಿಗಪಾಯವಿಲ್ಲದ ತೆರದ ಲೆಕ್ಕವಿದೂ ||
ಕಣ್ಣಿನಾ ಪಾಪೆ ತಾನೆಲ್ಲವರಿತಿಹೆ
ಎಣ್ಣಿಸಿದೆ ಅಪಾಯವಿಲ್ಲವೆಂದು
ಕಣ್ಣು ಕಾಯಲು ಅದಕೆ ಲೆಕ್ಕವಿದೆಯೇ ರೆಪ್ಪೆ ಬೇಕೂ || 3 ||

ಕಿವಿಯೊಳಿಟ್ಟ ವಿಚಾರ ಬಾಯಿ
ಯಲಿ ಹೊರಬರಲು ಕಾಲವೆಷ್ಟು
ಕಿವಿರಂಧ್ರ ಹೊರರಂಧ್ರದಳತೆಯಲಿ ಹರಿದೂ ||
ಕಿವಿಯೊಳಿಹ ಮೂಲತಂತುವು
ಉಲಿದಿಹುದು ನಾದವು ಅದರಂತೆ
ಬಲಿದೊಡೆ ಮೊತ್ತ ಕಾಣುವುದು ಕೇಳು ರಹಸ್ಯ || 4 ||

ಹೀಗೆ ಮಾನವನ ಕಣ್ಣು, ಕಿವಿ, ನಾಲಗೆ, ಮೂಗು, ಬಾಯಿ, ಹಲ್ಲು, ಚರ್ಮ, ಅಸ್ಥಿ, ಮಜ್ಜೆ, ರಕ್ತಗಳೆಂಬ ದಶವಿಧದ ದಂಶಗಳೇ ಮಾನವ ದೇಹ ಅಸ್ಥಿತ್ವವೆಂದರು. ದೇಹವನ್ನು  ಸಮಸ್ಥಿತಿಯಲ್ಲಿಟ್ಟಲ್ಲಿ, ಆರೋಗ್ಯಕರವಾಗಿದ್ದಲ್ಲಿ, ಅರಿಷಡ್ವರ್ಗಗಳು ಸಹಜವಾಗಿ ಜಯಿಸಲ್ಪಡುತ್ತವೆ. ಅದನ್ನೇ ವಸಿಷ್ಠರು ಹೇಳುತ್ತಾ  ಈ ಮೇಲ್ಕಂಡ ಹತ್ತು ಅಂಗಗಳ ಸಹಜ ಗಣಕೀಕೃತ ಸೂತ್ರವನ್ನು ಹೇಳಿದರು. ಮುಂದಿನ ವಿಚಾರ ಮುಂದಿನ ಸಂಚಿಕೆಯಲ್ಲಿ.

ಇಂತು

ಕೆ. ಎಸ್. ನಿತ್ಯಾನಂದ
ಅಘಸ್ತ್ಯಾಶ್ರಮ ಗೋಶಾಲೆ, 
ಬಂದ್ಯೋಡು, ಕಾಸರಗೋಡು.