Friday, 22 May 2015

ಋಗ್ವೇದದ ಯಮ-ಯಮೀ ಸೂಕ್ತ


      ವೇದಗಳು ಸಂಸ್ಕೃತದಲ್ಲಿಲ್ಲ, ಬ್ರಾಹ್ಮಿಯಲ್ಲಿದೆ. ಸಂಸ್ಕೃತದಲ್ಲಿ ಅರ್ಥ ಮಾಡಿದರೆ ಅಪಾರ್ಥವಾಗುವುದು ನಿಶ್ಚಿತ ಎಂಬುದಕ್ಕೆ ಈ ಸೂಕ್ತ ಒಂದು ಉದಾಹರಣೆ. ಯಮ-ಯಮೀ ಅಣ್ಣ-ತಂಗಿ, ಅವರ ಕಾಮಸಲ್ಲಾಪ, ವಿವಾಹ ಆಗುತ್ತದೆ ಎಂದಲ್ಲ ಮನ ಬಂದಂತೆ ವ್ಯಾಖ್ಯಾನಿಸಿದ್ದಾರೆ. ಸಂಸ್ಕೃತ ಒಂದು ಉತ್ಕೃಷ್ಟ ಭಾಷೆ, ಅದನ್ನು ಕಲಿತು ಬಳಸುವುದು ಒಳಿತು. ಆದರೆ ವೇದಗಳನ್ನು ಸಂಸ್ಕೃತದಲ್ಲಿ ಅರ್ಥೈಸಬೇಡಿ. ಕೆಲವರು ಯಮ-ಯಮೀ ಸಂವಾದ ಎನ್ನುತ್ತಾರೆ, ಆದರೆ ವೇದದಲ್ಲಿ ಅದನ್ನು ಸಂವಾದ ಎಂದು ಹೇಳಿಯೇ ಇಲ್ಲ.

ಋಗ್ವೇದದ ಈ ವಿಚಾರದ ಅಂಶಗಳನ್ನೇ ಇಟ್ಟುಕೊಂಡು ಅಥರ್ವದಲ್ಲಿ ಒಂದಿಷ್ಟು ಸಂಕಲನ ಮಾಡಿದರು. ಋಗ್ವೇದದಲ್ಲಿ ಇಲ್ಲದ ವಿಚಾರವು ಇನ್ನುಳಿದ ೩ ವೇದಗಳಲ್ಲಿಲ್ಲ. ಋಗ್ವೇದದಲ್ಲಿ ಇರುವ ವಿಚಾರವೇ ಪುನಃ ಸಂಕಲನವಾದ ಭಾಗವೇ ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ. ಹೊಸದಾಗಿ ಮತ್ತದಕ್ಕೆ ವೇದ ಎಂಬುದಿಲ್ಲ. ವಿಭಾಗಿಸಿದ ಇಷ್ಟಿಷ್ಟು ಮಂತ್ರಗಳಿಗೊಂದು ವೇದ ಎಂದು ಮಾಡಲ್ಪಟ್ಟದ್ದಲ್ಲ. ವ್ಯಾಸರು ಪುನಃ ಸಂಕಲನ ಮಾಡಿಕೊಟ್ಟಂತಹಾ ಭಾಗವನ್ನು ಮತ್ತೊಂದು ವೇದವೆಂದು ಹೆಸರಿಸಿ ಅದನ್ನು ಉಪಾಸನೆ ಮಾಡಿಕೊಂಡು ಬನ್ನಿ ಎಂದರು. ನಮ್ಮಲ್ಲಿ ಋಷ-ಛಂದಸ್ಸಿನ ಬಗ್ಗೆ ಬೇರೆ ಬೇರೆ ಕಲ್ಪನೆಗಳಿದೆ. ಅದರ ಬಗ್ಗೆ ನೀವು ಮೊದಲು ಸ್ಪಷ್ಟ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ನೈಜ ಕಲ್ಪನೆ ಬರುವುದಿಲ್ಲ. ಇಲ್ಲಿ ಒಂದು ಮಂತ್ರಕ್ಕೆ ಯಮ ಋಷಿ, ಮತ್ತೊಂದು ಮಂತ್ರಕ್ಕೆ ಯಮಿ ಋಷಿ. ಹಾಗೇ ಒಂದು ಮಂತ್ರಕ್ಕೆ ಯಮ ದೇವತೆ, ಮತ್ತೊಂದು ಮಂತ್ರಕ್ಕೆ ಯಮಿ ದೇವತೆ. ಈ ಎಲ್ಲ ಮಂತ್ರಗಳೂ ತ್ರಿಷ್ಟುಪ್ ಛಂದಸ್ಸಿನಲ್ಲಿವೆ. (ಋಗ್ವೇದ ೧೦-೧೦-೦೧)

ಓ ಚಿತ್ಸಖಾಯಂ ಸಖ್ಯಾ ವವೃತ್ಯಾಂ ತಿರಃ ಪುರೂ ಚಿದರ್ಣವಂ ಜಗನ್ವಾನ್ |
ಪಿತುರ್ನಪಾತಮಾ ದಧೀತ ವೇಧಾ ಅಧಿ ಕ್ಷಮಿ ಪ್ರತರಂ ದೀಧ್ಯಾನಃ || ೧ ||

[ ओ चि॒त्सखा॑यं स॒ख्या व॑वृत्यां ति॒रः पु॒रू चि॑दर्ण॒वं ज॑ग॒न्वान् ।
पि॒तुर्नपा॑त॒मा द॑धीत वे॒धा अधि॒ क्षमि॑ प्रत॒रं दीध्या॑नः ॥ ]

ಈ ಮೊದಲ ಮಂತ್ರವನ್ನು ಯಮೀ ಕೇಳುತ್ತಾಳೆ ಎಂದು ನೀವು ಅರ್ಥ ಮಾಡಿಕೊಳ್ಳಬೇಕು. ಅಲ್ಲಿ ಯಮೀ ಎಂದರೆ ಯಾವುದು? ಅದು ಮೊದಲು ಸ್ಪಷ್ಟವಾಗಬೇಕು. ಈ ಒಂದನೇ ಮಂತ್ರಕ್ಕೆ ಋಷಿಯಾಗಿ ಯಮೀ, ದೇವತೆಯಾಗಿ ಯಮ. ಯಮ ಎಂದರೇನು? "ಯಮು ನಿಯಂತ್ರಣೇ" ಎನ್ನುತ್ತಾರೆ. ಇಲ್ಲಿ ಪ್ರಭು ಎನ್ನುವ ಅರ್ಥವೂ ಬರುತ್ತದೆ. ಅಥವಾ ಧರ್ಮ ಎಂದೂ, ಅತೀತವೆಂದೂ ಅರ್ಥ ಬರುತ್ತದೆ. ಯಾವುದನ್ನು ಯಾರಿಗೂ ಮೀರಲು ಸಾಧ್ಯವಿಲ್ಲವೋ ಅದನ್ನು ಅತೀತವೆಂದರು. ಆ ಅತೀತವಾದದ್ದನ್ನು ಆಧರಿಸಿದ ಯಾವ ಅತೀತೋಪಾಸನೆ ಇದೆಯೋ ಅದರ ಉಪಾಸಕಿಯೇ ಯಮೀ. ಅಲ್ಲಿ ಅಣ್ಣ-ತಂಗಿ, ಗಂಡ-ಹೆಂಡತಿ ಎಂಬ ಸಂಬಂಧವೇ ಇಲ್ಲ! ಉಪಾಸನಾ ತತ್ವವು ಮೇಲಿದ್ದರೆ, ಉಪಾಸನೆ ಮಾಡುವವರು ಕೆಳಗೆ ಎಂಬಂತೆ ಬಿಂಬಿಸಿರುತ್ತದೆ. ಮೇಲಿರುವ ಅತೀತವನ್ನು ಪಡೆಯುವ ಮಾರ್ಗದ ಆರೋಹಿಯಾಗಿರುವ ಕಾರಣ ಸ್ತ್ರೀ ದ್ಯೋತಕವಾದ ಯಮೀ ಶಬ್ದವೇ ಹೊರತು ಹೆಣ್ಣು ಎಂಬ ಅರ್ಥವೇ ಅಲ್ಲಿಲ್ಲ.

ಓ ಚಿತ್ಸಖಾಯಂ - ಯಾವುದು ಮನೋ ಬುದ್ಧಿಯ ವ್ಯಾಪ್ತಿಯನ್ನು ಮೀರಿ ಚಿತ್ತ ಎಂದು ಹೇಳತಕ್ಕಂತಹಾ ಪ್ರವೃತ್ತಿಗೆ ಬಂದಂತಹಾ ಮಾನಸಿಕ ಕಲ್ಪನೆ ಏನಿದೆಯೋ ಅದು ಯಾವುದನ್ನು ಅಪೇಕ್ಷಿಸುತ್ತದೆ? ಮನಸ್ಸು ಒಂದನ್ನು ಅಪೇಕ್ಷಿಸುತ್ತದೆ, ಬುದ್ಧಿಯು ಮತ್ತೊಂದನ್ನು ಪರಿಷ್ಕರಿಸಿ ಸೂಕ್ತವಾದದನ್ನು ಕೊಡುತ್ತದೆ. ಆದರೆ ಅವೆರಡನ್ನೂ ಮೀರಿದ್ದು ಚಿತ್ತ.

ಚಿತ್ಸಖಾಯಂ ಸಖ್ಯಾ - ಆ ಚಿತ್ತವು ಯಾವುದನ್ನು ಅಪೇಕ್ಷಿಸುತ್ತದೆ? ಹೇಗೆ ಚಿತ್ತವು ಅದರ  ಸ್ನೇಹವನ್ನು ಪಡೆಯುತ್ತದೆ?

ವವೃತ್ಯಾಂ ತಿರಃ ಪುರೂ ಚಿದರ್ಣವಂ ಜಗನ್ವಾನ್ - ತನ್ಮೂಲಕ ಜಗತ್ತು ಹೇಗೆ ಸೃಷ್ಟಿಯಾಗುತ್ತದೆ? ಎಂದು ಹೇಳಿದ್ದು.

      ಇಲ್ಲಿ ಯಮಿಯ ಯಾವುದೇ ಕೆಟ್ಟ ಕೊಳಕು ಬೇಡಿಕೆಯೂ ಇಲ್ಲ ಎಂಬುದು ಸ್ಪಷ್ಟ. ಇನ್ನು ಪ್ರಸಕ್ತ ಕಾಲೀನ ಪುಸಕ್ತಗಳಲ್ಲಿ ಯಮಿಯು ತನ್ನ ಅಣ್ಣನನ್ನೇ ವರಿಸಲು ಇಚ್ಛಿಸಿದಳು ಎಂದೆಲ್ಲ ವ್ಯಾಖ್ಯಾನಿಸಿರುವುದು ವ್ಯಾಖ್ಯಾನಕಾರರ ಕೆಟ್ಟ ಮನಸ್ಸಿನ ಪ್ರತಿಬಿಂಬದ ದ್ಯೋತಕ.

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ | ಚಕ್ಷುರುನ್ಮೀಲಿತಂ ಯೇನ ತಸ್ಮೈಶ್ರೀ ಗುರವೇ ನಮಃ || 

ಅಜ್ಞಾನದಿಂದ ಮುಚ್ಚಿರುವ ಕಣ್ಣನ್ನು ಬಾಣದಿಂದ ತಿವಿದಾದರೂ ಜಾಗೃತಗೊಳಿಸುವವನು ಗುರು ಎಂದಿದೆ. ಆದರೆ ಈಗ ಜ್ಞಾನದ ಕಣ್ಣನ್ನು ಮುಚ್ಚಿ, ಅಜ್ಞಾನದ ಕಣ್ಣನ್ನು ತೆರೆದಿರಿಸಿರುವ ಕಾರಣ ವೇದ-ಶ್ವಾನ ಸಂಯೋಗ ವಾದವು ವಿಜೃಂಭಿಸುತ್ತಿದೆ.

ಚಿತ್ತ ಸಂಕ್ಷೋಭೆ ಎನ್ನುವುದನ್ನು ಬಹಳ ಅರ್ಥಬದ್ಧವಾಗಿ ಉಪಾಸಕಿಯಾದಂತಹಾ ಯಾವುದು ಅತೀತವಿದೆ, ಯಾವುದು ಧರ್ಮವಿದೆ, ಯಾವುದು ಪ್ರಭುವಿದೆ, ಅದರಲ್ಲಿ ಅದೆಲ್ಲ ಆರೋಪಿಸಲ್ಪಟ್ಟಿದೆ. ಹಾಗಾಗಿ ಅದನ್ನು ಉಪಾಸನೆ ಮಾಡಬೇಕು. ಆಗ ಜ್ಞಾನ ಪಡೆಯುತ್ತೀಯ. ಇದು ಯಮೀ = ಉಪಾಸಕಿಯ ವಚನ. ಅಷ್ಟು ಬಿಟ್ಟರೆ ಅಲ್ಲಿ ಯಾವುದೇ ಕೊಳಕು ಅಭಿಪ್ರಾಯವಿಲ್ಲ.

ಇಲ್ಲಿ ಸ್ಥೂಲವಾಗಿ ಸ್ವಲ್ಪ ವಿಚಾರವನ್ನು ಮಾತ್ರ ಲೇಖಿಸಲಾಗಿದೆ. ಬಹಳ ವಿಸ್ತಾರವಾದ ಆಧ್ಯಾತ್ಮ ಚಿಂತನೆ ಇದು. ಯಮ-ಯಮೀ ಸೂಕ್ತದ ಒಂದೊಂದು ಮಂತ್ರಕ್ಕೂ ಅಗಾಧ ವಿವರಣೆ ಇದೆ. ಈ ಸಾಹಿತಿಗಳಿಗೆ ವಿಚಾರದ ವ್ಯಾಪ್ತಿ, ವಿಶಾಲತೆಗಳ ಪ್ರಮಾಣವನ್ನು ಅಳೆಯಲಿಕ್ಕೇ ಗೊತ್ತಿಲ್ಲ. ಆದರೆ ರಾಷ್ಟ್ರ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ ಕೊಡುತ್ತಾರಲ್ಲ, ತತ್ಕಾರಣ ಏನೇನೋ ಅಕ್ಷರ ಗೀಚಿ ಇದೇ ವೇದದ ಅರ್ಥ ಎನ್ನುತ್ತಾರೆ.

ಯಮ-ಯಮೀ ಸೂಕ್ತವು ಒಂದು ಅದ್ಭುತವಾದ ವಿಚಾರ ಸರಣಿ. ಅದರಲ್ಲಿ ಯೋನಿ ಎಂಬ ಶಬ್ದ ಬರುತ್ತದೆ. ಅಲ್ಲಿ ಅದು ಮನಸ್ಸಿನ ಪ್ರವಹನಾ ದಾರಿ ಎಂಬ ಅರ್ಥ ಕೊಡುತ್ತದೆ. ಮನಸ್ಸು ಹೇಗೇಗೆ ಹರಿಯುತ್ತದೆ ಎಂದು ವಿವರಿಸುತ್ತದೆ. ಆದರೆ ಅದನ್ನು ಅರ್ಥ ಮಾಡಿಕೊಳ್ಳದ ಸಾಮರ್ಥ್ಯವಿಲ್ಲದೆ ಅದಕ್ಕೂ ವಿಪರೀತಾರ್ಥ ಮಾಡಿದ್ದರೆ. ಅದನ್ನೆಲ್ಲ ನಂಬಿ ಕೆಡದಿರಿ. ನೀವು ಅತೀತೋಪಾಸಕರಾಗಿ ಎಂದು ಹಾರೈಸುತ್ತೇವೆ.

-      ಕೆ. ಎಸ್. ನಿತ್ಯಾನಂದರು,
ಅಘಸ್ತ್ಯಾಶ್ರಮ ಗೋಶಾಲೆ, 
ಬಂದ್ಯೋಡ್, ಕಾಸರಗೋಡು

No comments:

Post a Comment