Monday, 8 June 2015

ಸಿರಿಭೂವಲಯ ಸ್ಥೂಲ ಪರಿಚಯ : ಅಧ್ಯಾಯ ೧-೪

ಸರ್ವಭಾಷಾಮಯೀಭಾಷಾ ಸಿರಿಭೂವಲಯ ಗ್ರಂಥದ ಸ್ಥೂಲ ಪರಿಚಯ
ಮೊದಲನೇ ಅಧ್ಯಾಯ

  ಸಿರಿಭೂವಲಯ ಗ್ರಂಥದ ಸ್ಥೂಲ ಪರಿಚಯವೆಂದ ಮಾತ್ರಕ್ಕೆ ಯಾರೊಬ್ಬರೂ ಇದು ಈ ಗ್ರಂಥದ ಸಮಗ್ರಸಾರಾಂಶವೆಂದು ತಪ್ಪಾಗಿ ಗ್ರಹಿಸಬಾರದಾಗಿ ಮೊದಲಿಗೆ ನನ್ನ ವಿನಂತಿ. ಸಿರಿಭೂವಲಯ ಗ್ರಂಥದ ಸಾರವನ್ನು ತೆಗೆದಿಡುವ ಕಾರ್ಯವು ಇಂದು ಯಾರಿಂದಲೂ ಸಾಧ್ಯವಿಲ್ಲದ್ದು. ಈಗ ೧೯೫೩ ಹಾಗೂ ೧೯೫೫ ರಲ್ಲಿ ಎರಡು ಭಾಗಗಳಾಗಿ ಮುದ್ರಣವಾಗಿರುವ ಸುಮಾರು ೧೦೦೦೦ ಪದ್ಯಗಳಲ್ಲಿ ನನ್ನ ಸೀಮಿತ ಅರಿವಿಗೆ ಸಿಲುಕಿದ ಕೆಲವಾರು ಪದ್ಯಗಳ ಮುಖ್ಯ ಸಾರಾಂಶವನ್ನು ಮಾತ್ರ ನಾನಿಲ್ಲಿ ಸಂಗ್ರಹಿಸಲು ಶಕ್ತನಾಗಿದ್ದೇನೆ ಅಷ್ಟೇ. ಗ್ರಂಥವನ್ನು ಪೂರ್ಣವಾಗಿ ಓದಿ ಅರ್ಥೆಸಿಕೊಳ್ಳಲು ಅಗತ್ಯವಾದ ಅರ್ಹತೆ ಪಡೆದಿರುವವರು ಮಾತ್ರವೇ ಈ ಗ್ರಂಥಭೂಗದ ಸಮರ್ಪಕ ಪರಿಚಯ ನೀಡಲು ಸಾಧ್ಯ ಎಂಬ ಸಂತಿಯನ್ನು ಓದುಗರು ನೆನಪಿನಲ್ಲಿಟ್ಟು ಕೊಳ್ಳಬೇಕು. ನನ್ನಲ್ಲಿ ಆ ಮಟ್ಟದ ಸಾಮರ್ಥ್ಯವು ಖಂಡಿತವಾಗಿಯೂ ಇಲ್ಲವೆಂಬುದರ ಅರಿವು ನನಗಿದೆ. ಈ ಕಿರು ಪರಿಚಯವನ್ನು ಓದಿದ ಮಾತ್ರೆಕ್ಕೇ ಸಿರಿಭೂವಲಯವನ್ನು ತಿಳಿದಂತಾಯಿತೆಂದು ಯಾರೂ ತಪ್ಪಾಗಿ ಭಾವಿಸಬಾರದು. ಇದು ಆ ಸಾಹಿತ್ಯ ಸಾಗರದ ಪೀಠಿಕೆಯಲ್ಲಿರುವ ಸಾವಿರಾರು ಸಂಗತಿಗಳ ಪೈಕಿ, ಆರಿಸಿದ ಕೆಲವೊಂದು ಮಾಹಿತಿಗಳು ಮಾತ್ರ! ಉಳಿದವು ಇನ್ನೂ ಕತ್ತಲಲ್ಲೇ ಇವೆ ಎಂಬ ಸಂಗತಿಯನ್ನು ಮತ್ತೆ ಮತ್ತೆ ನಿಮಗೆ ನೆನಪು ಮಾಡಿಕೊಡುವುದು ನನ್ನ ಕರ್ತವ್ಯವಾಗಿದೆ. ಈ ಗ್ರಂಥ ಸಂಶೋಧನೆ ಮಾಡಿದ ಕರ್ಲಮಂಗಲಂ ಶ್ರೀಕಂಠಯ್ಯನವರೇ ಈ ಗ್ರಂಥದ ಸಮರ್ಪಕವಾದ ಪರಿಚಯ ಮಾಡಿಕೊಡುವ ಕಾರ್ಯವು ಅಸಾಧ್ಯವಾದುದೆಂದು ಕೆಚೆಲ್ಲಿದ್ದರು. ಹಾಗಿರುವಲ್ಲಿ, ಅತಿಸಾಮಾನ್ಯನಾದ ನಾನು ಇದರ ಪರಿಚಯ ಮಾಡಿಕೊಡುವ ಕಾರ್ಯಕ್ಕೆ ಕೈಹಾಕಿದ್ದು ಅಕ್ಷಮ್ಯ ಅಪರಾಧ. ಆದರೆ, ವಸಿಷ್ಠ; ವಿಶ್ವಾಮಿತ್ರರಿಂದಾರಂಭಿಸಿ, ಜಮದಗ್ನಿ; ಪರಶುರಾಮ; ಋಷಭದೇವಾದಿಗಳನೊಳಗೊಂಡು, ಶಂಕರರು ಮತ್ತು ಕುಮುದೇಂದುಮುನಿಯೊಂದಿಗೆ ಧರಣೇಂದ್ರ ಪಂಡಿತರು ಹಾಗೂ ಕರ್ಲಮಗಲಂ ಶ್ರೀಕಂಠಯ್ಯನವರು ಮತ್ತು ಕೆ. ಅನಂತಸುಬ್ಬರಾಯರು ನನಗೆ ಗುರುಸಮಾನರು ಮಾತ್ರವಲ್ಲ; ಋಷಿಸಮುದಾಯದವರು. ನನಗೆ ಪರಮಪೂಜ್ಯರಾದ ಈ ಋಷಿಸಮುದಾಯದ ಋಣವನ್ನು ತೀರಿಸಲೇಬೇಕಾದುದು ನನ್ನ ಕರ್ತವ್ಯವಾದ್ದರಿಂದ ಈ ಸಾಹಸಕ್ಕೆ ಕೈಹಾಕಿದ್ದೇನೆ. ಈ ಹಿನ್ನೆಲೆಯಲ್ಲಿ ನನ್ನ ಪ್ರಯತ್ನವು ಇಂದಿನ ಓದುಗರಿಗೆ ಕಿಂಚಿತ್ತಾದರೂ ಪ್ರಯೋಜನಕಾರಿಯಾದಲ್ಲಿ ನನಗೆ ಸಾರ್ಥಕತೆ ದೊರೆತಂತಾಗುವುದು.

  ಜೈನ ಸಂಪ್ರದಾಯದಲ್ಲಿ ೨೪ಜನ ತೀರ್ಥಂಕರರು ಪರಮಪೂಜ್ಯರು. ಇವರಲ್ಲಿ ಎಂಟನೆಯ ತೀರ್ಥಂಕರನಾದ ಚಂದ್ರಪಭನನ್ನು ಸ್ತುತಿಸುವುದರೊಂದಿಗೆ ಕವಿ ಕುಮುದೇಂದು ಮುನಿಯು ತನ್ನ ನವಮಾಂಕ ಗಣಿತದ ಅಂಕಕಾವ್ಯ ಸಿರಿಭೂವಲಯವನ್ನು ಪ್ರಾರಂಭ ಮಾಡಿದ್ದಾನೆ. ೨೪ನೇ ತೀರ್ಥಂಕರ ಮಹಾವೀರನ ಉಪದೇಶವಾದ ಪೂರ್ವೇಗ್ರಂಥವೆನಿಸಿದ -ಮುಂದಿನ ಅಧ್ಯಾಯಗಳಲ್ಲಿ ಈ ಪೂರ್ವೇಗ್ರಂಥವೇ ಪೂರ್ವೇಕಾವ್ಯವೆಂದೂಆದಿಮಂಗಲಪಾಭೃತವೆಂದೂಮಂಗಲಪಾಹುಡವೆಂದೂ; ಕರಣಸೂತ್ರವೆಂದೂ ಸೂಚಿಸಿದಾನೆ- ಸಿರಿಭೂವಲಯದ ರಚನೆಯ ಕ್ರಮ ವಿವರಿಸಿದ್ದಾನೆ. ಈ ಗ್ರಂಥವು ಸಾಮಾನ್ಯ ಜನತೆಗೂ ಪಂಡಿತರಿಗೂ ಅವರವರವರ ಶಕ್ತಿಗೆ ತಕ್ಕಂತೆ ಅರಿವಿಗೆ ಬರುವುದೆಂಬ ವಿಚಾರ; ಎರಡನೇ ತೀರ್ಥಂಕರನಾದ ಗೊಮ್ಮಟದೇವನಿಂದ ಹರಿದು ಬಂದ ಅಂಕಾಕ್ಷರವಾಣಿ ಇದೆಂಬ ಸಂಗತಿ; ೬೪ ಅಂಕಾಂಕ್ಷರಗಳ ಬಳಕೆಯಿಂದಲೇ ಈ ಕರ್ಣಾಟಕದ ಕಾವ್ಯವು ರಚನೆಯಾಗಿರುವ ವಿಚಾರ; ರಸಮಣಿಯು ಸಿದ್ಧವಾಗುವ ವಿಚಾರ; ನಾಗಾರ್ಜುನನಿಗೆ ಈ ರಸಮಣಿಯೌಷಧದ ಗಣಿತವು ತಿಳಿದಿದ್ದ ಸಂಗತಿ; ಆದಿಜಿನನೆನಿಸಿದ ಋಷಭತೀರ್ಥಂಕರನಿಂದ ಪ್ರವಹಿಸಿರುವ ಈ ಗ್ರಂಥದ ಮಹಿಮೆ; ಸೇನಗಣದ ಗುರುಪರಂಪರೆಯಿಂದ ಈ ಮಹತ್ವದ ಕಾವ್ಯ ಪ್ರವಾಹವು ಹರಿದುಬಂದಿರುವ ಸಂಗತಿ; ಒಂಬತ್ತು ಎಂಬ ಅಂಕದ ಮಹಿಮೆ ಇತ್ಯಾದಿಗಳನ್ನು ಸೂಚಿಸುವ ಮೂಲಕ ಮಂಗಲಪಾಹುಡ ಅಥವಾ ಮಂಗಲ ಪಾಭೃತವೆಂಬ ಮೊದಲನೇ ಅಧ್ಯಾಯವನ್ನು ಮುಕ್ತಾಯಗೊಳಿಸಿದ್ದಾನೆ. ಪ್ರತಿಯೊಂದು ಅಧ್ಯಾಯದ ಕೊನೆಯಲ್ಲೂ ಆಯಾ ಅಧ್ಯಾಯಗಳಲ್ಲಿ ಸೇರಿರುವ ಅಕ್ಷರಗಳ ಸಂಖ್ಯೆ ಹಾಗೂ ಅದುವರೆವಿಗಿನ ಒಟ್ಟು ಅಕ್ಷರಗಳ ಸಂಖ್ಯೆಯನ್ನು ಲೆಕ್ಕಹಾಕಿ ಸೂಚಿಸಲಾಗಿದೆ.
*   *    *
ಎರಡನೇ ಅಧ್ಯಾಯ
  ಸೃಷ್ಟಿಯು ಆರಂಭವಾದ ಕಾಲದಿಂದ ಇರುವ ಅತಿಶಯ ಜ್ಞಾನಸಾಮ್ರಾಜ್ಯದಲ್ಲಿ ಅಡಕವಾಗಿರುವ ಎಲ್ಲ ಸಂಗತಿಗಳನ್ನೂ ಹಿಡಿದಿಡುವ ನವಮಾಂಕಬಂಧದಲ್ಲಿ ಕಾವ್ಯವು ರಚನೆಯಾಗಿರುವ ವಿಚಾರದೊಂದಿಗೆ ಎರಡನೇ ಅಧ್ಯಾಯವು ಪ್ರಾರಂಭವಾಗಿದೆ. ಆದಿಮನ್ಮಥನೆನಿಸಿದ ಗೊಮ್ಮಡದೇವ (ಬಾಹುಬಲಿಯು) ತನ್ನ ತಂಗಿ ಸೌಂದರಿಯು ತಿಳಿದ ಅಂಕಗಣನೆಯನ್ನು ಮನವಿಟ್ಟು ಕಲಿತನೆಂಬ ವಿಚಾರ; ಹಕದಂಕ ೫೪ರ ಅಕ್ಷರಭಂಗದಿಂದ ೮೬ ಬಿಡಿಯಂಕಗಳ ಒಂದು ದೊಡ್ಡ ಸಂಖ್ಯೆಯ ಅಕ್ಷರಗಳಲ್ಲಿ ಸಕಲಶಬ್ದಾಗಮಗಳೂ  ಏಳುಭಂಗಗಳಲ್ಲಿ ದೊರೆಯುವುದೆಂಬ ಸಂಗತಿ; ಅನುಲೋಮ ಕ್ರಮದಲ್ಲಿ ಈ ೫೪ ಅಕ್ಷರಗಳ ಭಂಗವು ೭೧ ಬಿಡಿಯಂಕಗಳ ಒಂದು ದೊಡ್ಡ ಸಂಖ್ಯೆಯಾಗುವುವೆಂಬ ಲೆಕ್ಕ೫೪ ಅಕ್ಷರಗಳ ಸಮಸ್ತ ಭಂಗಾಂಕವಾದ ಕರಣಸೂತ್ರಾಂಕವೆಂಬ ಸಂಗತಿ ಇತ್ಯಾದಿ ಗಣಿತಕ್ಕೆ ಸಂಬಂಧಿಸಿದ ವಿವರಗಳು, ಆತ್ಮಜ್ಞಾನಕ್ಕೆ ಸಂಬಂಧಿಸಿದ ಉಪದೆ ನೀಡುವ ಪಾಠಕ, ಉಪಾಧ್ಯಾಯ, ಆಚಾರ್ಯರ ವಿಚಾರ, ಋಷಭದೇವನ ಕಾಲದಿಂದ ಬೆಳೆದು ಬಂದಿರುವ ಜ್ಞಾನದಮಹಿಮೆ; ಜಗತ್ತಿನ ಎಲ್ಲ ಪದಾರ್ಥಗಳ ಮಹಿಮೆಯನ್ನೂ ತಿಳಿಸುವ ಗ್ರಂಥವಿದು ಎಂಬ ಸಂಗತಿ; ರಸಸಿದ್ಧಿಯಾದಲ್ಲಿ ಪಾದರಸವು ಚಿನ್ನವಾಗುವಂತೆ, ಆತ್ಮನು ದೇಹವರ್ಜಿತನಾಗಿ ಮೋಕ್ಷಸಂಪಾದಿಸುವ ಮಾರ್ಗವಿದೆಂಬ ವಿಚಾರ; ಅಕ್ಷರಜ್ಞಾನದಿಂದಲೇ ಆತ್ಮನ ಉದ್ಧಾರವೆಂಬ ಸಂಗತಿ; ಓಂಕಾರದೊಳಗೇ ೬೪ ಅಕ್ಷರಗಳು ಅಡಗಿದ್ದು, ೬೪ರ ಮೊತ್ತವು ವಾದ ಒಂದರಲ್ಲಿ (ಅಂದರೆ ಅದ್ವೈತದಲ್ಲಿ)  ಸಕಲವೂ ಅಡಗಿರುವುದೆಂಬ ಸಂಗತಿಯನ್ನು ಎರಡನೇ ಅಧ್ಯಾಯದಲ್ಲಿ ನಿರೂಪಿಸಿದ್ದಾನೆ.
*    *    *

ಮೂರನೇ ಅಧ್ಯಾಯ
ಆದಿದೇವನಾದ ಋಷಭತೀರ್ಥಂಕರನು ಆದಿಕಾಲದಿಂದ ಉಳಿದುಬಂದಿದ್ದ ಅಜ್ಞಾನವನ್ನಳಿಸುವ ಧರ್ಮಧ್ಯಾನವನ್ನು ಸಾಧಿಸಿದವನೆಂಬ ಮಾಹಿತಿಯೊಂದಿಗೆ ಮೂರನೇ ಅಧ್ಯಾಯವು ಪ್ರಾರಂಭವಾಗಿದೆ. (ಋಷಭದೇವನ ಕಾಲವು ಸುಮಾರು ಕ್ರಿ. ಪೂ. ೩೩೦ ಕೋಟಿವರ್ಷಗಳು!) ಎಲ್ಲರಿಗೂ ತಿಳಿದಿರುವ; ತಿಳಿಯದಿರುವ ಎಲ್ಲ ತತ್ವಗಳನ್ನೂ ಒಳಗೊಂಡ ಶಿವಸೌಖ್ಯಕಾವ್ಯ ಈ ಭೂವಲಯ ಎಂಬ ಮಾಹಿತಿಯನ್ನು ನೀಡಿದ್ದಾನೆ. 'ಅನಂತ' ಎಂಬ ಶಬ್ದದ ವಿವರ ಸೂಚಿಸಿದ್ದಾನೆ. ಯೋಗ; ಯೋಗಿ; ಚಾರಿತ್ರ; ದರ್ಶನ; ಜ್ಞಾನ; ಆತ್ಮಸ್ವರೂಪ ಮುಂತಾದುವುಗಳನ್ನು ವಿವರಿಸಿದ್ದಾನೆ. ಗಣಿತಶಾಸ್ತ್ರದ ಮಹತ್ವವನ್ನು ವಿವರಿಸಿದ್ದಾನೆ. ಸಂಗೀತದಲ್ಲಿ ಸಪ್ತಸ್ವರಗಳಿರುವಂತೆ, ಸಾಹಿತ್ಯದಲ್ಲಿ ಒಂಬತ್ತು ಸ್ವರಗಳೆಂದು ತಿಳಿಸುತ್ತಾನೆ. ನವಸ್ವರಗಳನ್ನು ಕೂಡಿಸುವ ನವಸಿದ್ಧಕಾವ್ಯ ಭೂವಲಯ ಎಂದಿದ್ದಾನೆ.

  ಅಧ್ಯಾತ್ಮಕ್ಕೆ ಸಂಬಂಧಿಸಿದಂತೆ ಮಹಾವೀರನು ಉಪದೇಶಿಸಿದ ಸಾರಸರ್ವಸ್ವವೂ ಇದರೊಳಗೆ ಅಡಕವಾಗಿರುವುದನ್ನು ಸೂಚಿಸಿದ್ದಾನೆ. ೩೬೩ ಮತಧವರ್ಮಗಳ ವಿಚಾರವಿರುವುದನ್ನು ತಿಳಿಸಿದ್ದಾನೆ. ಈ ಅಧ್ಯಾಯದಲ್ಲಿ ಗ್ರಂಥದ ಮಹತ್ವವನ್ನು ಬಹಳ ವಿವರವಾಗಿ ಸೂಚಿಸಿರುವುದನ್ನು ಕಾಣಬಹುದು.
*   *   *

ನಾಲ್ಕನೇ ಅಧ್ಯಾಯ
  ತೀರ್ಥಂಕರರ ಜ್ಞಾನನಿಧಿಯಾದ ಸಿರಿಭೂವಲಯವನ್ನು ವಿವರಿಸುತ್ತಲೇ ನಾಲ್ಕನೇ ಅಧ್ಯಾಯವು ಪ್ರಾರಂಭವಾಗಿದೆ. 'ಅಹಂಬ್ರಹ್ಮಾಸ್ಮಿ' ಎಂಬ ಮಹಾವಾಕ್ಯದ ವಿವರವನ್ನು ತನಗೆತಾನೇ ಬ್ರಹ್ಮನೆನುವ ಮಾತಿನೊಂದಿಗೆ ವಿವರಿಸಿದ್ದಾನೆ. ಅದ್ವೈತ ಸಿದ್ಧಾಂತವು ಶಂಕರರಿಗೆ ಮೊದಲೇ ಅನಾದಿಕಾಲದಿಂದಲೂ ಪ್ರಚಲಿತವಿದ್ದ ಸಂಗತಿಯನ್ನು ಸೂಚಿಸಿದ್ದಾನೆ. ಗುರುಗಳ ಉಪದೇಶವನ್ನು ಅನುಸರಿಸುವುದರಿಂದಾಗುವ ಫಲವನ್ನು ವಿವರಿಸಿದ್ದಾನೆ. ಪರಮಪದ ಪ್ರಾಪ್ತಿಯ ಜೀವನವೇ ಪಂಚಾಸ್ತಿಕಾಯವೆಂಬುದರ ವಿವರದಿಂದ ಆತ್ಮ ಹಾಗೂ ದೇಹದ ವಿಚಾರ ಸೂಚಿಸಿದ್ದಾನೆ. ಆಕಾಶದ ತುತ್ತ ತುದಿಯಲ್ಲಿ ಪ್ರಕಾಶಿಸುತ್ತಿರುವ ಶಿವಲೋಕದ ಜೀವಾತ್ಮರ ವಿವರ ನಿರೂಪಿಸಿದ್ದಾನೆ. ಸಿರಿಭೂವಲಯವು 'ವಿಶ್ವಕಾವ್ಯ' ಎಂಬುದನ್ನು ತಿಳಿಸಿ, ಕಾವ್ಯದಲ್ಲಿರುವ ಹಲವಾರು ಬಂಧಗಳ ಹೆಸರನ್ನು  ಸೂಚಿಸಿದ್ದಾನೆ. ಸಿರಿಭೂವಲಯದಲ್ಲಿ ಅಡಕವಾಗಿರುವ ಹಲವಾರು ಪೂರ್ವಕವಿಗಳ ಕಾವ್ಯಗಳ ಹೆಸರು ಹೇಳಿದ್ದಾನೆ. ಶಿವಕೋಟಿಶಿವಾಚಾರ್ಯ, ಸ್ವಾಮಿ ಶಿವಾಯನ, ನಾಗಾರ್ಜುನ ಮುಂತಾದವರು; ಸ್ವರ್ಣಸಿದ್ಧಾಂತ, ಕಕ್ಷಪುಟ ಮುಂತಾದ ಕೃತಿಗಳನ್ನು ಹೆಸರಿಸಿದ್ದಾನೆ.  ಇಂದಿನ ವಿಜ್ಞಾನಿಗಳು ಆಕಾಶದ ಕಕ್ಷೆಗೆ ಹಾರಿಸಿ ಬಿಡುವ ಉಪಗ್ರಹಗಳ ವಿವರದಂತೆ, ಮಾನವನ ದೇಹವನ್ನು ಆಕಾಶಕ್ಕೆ ಏರಿಸಿ; ಸ್ಥಿರವಾಗಿ ನಿಲ್ಲಿಸುವ ಘನವೆಮಾನಿಕಕಾವ್ಯ (ಉಪಗ್ರಹ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಚಾರ) ಎಂದು ಸೂಚಿಸಿದ್ದಾನೆ. ಜಗತ್ತಿನಲ್ಲಿ ಯುದ್ಧವನ್ನೇ ಇಲ್ಲದಂತೆ ಮಾಡುವ ಕಾವ್ಯ ಎಂದು ಹೇಳಿದ್ದಾನೆ! ಪುಷ್ಪಾಯುರ್ವೇದದ ವಿಚಾರ ಸೂಚಿಸಿದ್ದಾನೆ. ನೂರುಸಾವಿರ ಹೂವುಗಳ ಸಾರದಿಂದ ತಯಾರಿಸುವ ರಸಮಣಿಯ ವಿಚಾರ ತಿಳಿಸಿದ್ದಾನೆ. ಕಾವ್ಯವು ಸಾಗರ ರತ್ನಮಂಜೂಷವೆಂದು ಹೊಗಳಿದ್ದಾನೆ. ಕಾವ್ಯದಲ್ಲಿ ೭೧೮ ಭೂಷೆಗಳ ಸಾಹಿತ್ಯವಿರುವ ಸಂಗತಿಯನ್ನು ಹೇಳಿದ್ದಾನೆ.

*    *   *
- ಸುಧಾರ್ಥಿ, ಹಾಸನ

No comments:

Post a Comment