Thursday, 18 June 2015

ಸಿರಿಭೂವಲಯ ಸ್ಥೂಲ ಪರಿಚಯ : ಅಧ್ಯಾಯ ೯

ಒಂಬತ್ತನೇ ಅಧ್ಯಾಯ
  ಮೂರು ಲೋಕಗಳ ಜೀವದ ಜೀವನಳಿಕೆಯ ಒಳ ಹೊರೆಗೆ ತುಂಬಿರುವ ಜ್ಞಾನದ ಘಟ್ಟಿಯನ್ನು ತನ್ನ ವಶಗೊಳಿಸಿಕೊಂಡಿರುವ ರಸಪಾಕವೇ ಈ ಮಂಗಲ ಪ್ರಾಭೃತವೆನಿಸಿದ ಭೂವಲಯ ಎಂಬುದಾಗಿ ಗ್ರಂಥ ಪ್ರಶಂಸೆಯೊಂದಿಗೆ ಒಂಬತ್ತನೇ ಅಧ್ಯಾಯವು ಪ್ರಾರಂಭವಾಗಿದೆ. ಭೂವಲಯದಲ್ಲಿ ಬಳಸಿರುವ ಭಾಷೆಯ ಸ್ವರೂಪವನ್ನು ಸೂಚಿಸುತ್ತ; ತುಟಿಗಳಲುಗಾಟದ ಅಗತ್ಯವಿಲ್ಲ, ಹಲ್ಲುಗಳ ನೆರವು ಬೇಕಿಲ್ಲ, ತಾಲು, ಓಷ್ಟಗಳ ಅಗತ್ಯವಿಲ್ಲ ಎಂದೂ; ಎಲ್ಲರ ಎಲ್ಲ ಪ್ರಶ್ನೆಗಳಿಗೂ ಜಿನರವಾಣಿಯಲ್ಲಿ ಉತ್ತರವಿದೆ ಎಂಬುದಾಗಿ ಸೂಚಿಸಿದ್ದಾನೆ. ಭೂವಲಯದ ದಿನಿಂದ ಕೇವಲ ಜ್ಞಾನ ಪ್ರಾಪ್ತಿಯಾಗುವುದೆಂದೂ ಹೇಳಿದ್ದಾನೆ. ಮಹಾಮಹಿಮೆಯುಳ್ಳ ಒಂಬತ್ತರೊಂದಿಗೆ ಸೇರಿಬರುವ ಭಕ್ತಿಯ ಶುದ್ಧಿ, ಭಕ್ತಿಯ ಸಿದ್ಧಿ, ಜ್ಞಾನದ ಶಕ್ತಿ, ನವದಂಕ ಸಿದ್ಧಿಯ ಚಾರಿತ್ರ್ಯ ಮುಂತಾದುವುಗಳನ್ನು ಕುರಿತು ಸೂಚಿಸಿದ್ದಾನೆ.
 • ಮಾಧವಿ;
 • ಗಂಧಮಾಧವ;
 • ಚಿತ್ರವಲ್ಲಿ;
 • ಸಂಪಗೆ;
 • ಗಂಧರಾಜ;
 • ಕಮಲ;
 • ಚಿತ್ರ;
 • ಕಾಮಕಸ್ತೂರಿ;
 • ಚೆನ್ಗಣಜಿಲ;
 • ವೇಲಾ;
 • ನವಮಾಲತಿ;
 • ಮುಡಿವಾಳ;
 • ಪಗಡೆ;
 • ಬಂದೂಕ;
 • ತಾಳೆ;
 • ಪಾದರಿ

ಮುಂತಾದುವು ಭೂಮಿಯ ಗೆರೆಗಳಂತಿವೆ ಈ ಭೂವಲಯ ಕಾವ್ಯದಲ್ಲಿ ಎಂಬುದಾಗಿ ಹಲವಾರು ಜಾತಿಯ ಪುಷ್ಪಗಳ ಹೆಸರು ಹೇಳುತ್ತಾನೆ. ಸುಗಂಧದ ಪನ್ನೀರನ್ನು ಮಳೆಯ ರೂಪದಲ್ಲಿ ದೇವೇಂದ್ರನಪ್ಪಣೆಯಂತೆ ಭೂಮಿಗೆ ಸುರಿಯುವ ಮೇಘ ಕುವರನ ವಿಚಾರ, ಮಳೆಯಿ೦ದ ಬೆಳೆ ಬರುವ ವಿಚಾರ, ಇದರಿಂದ ವಿವಿಧ ಜೀವರು ಅನುಭವಿಸುವ ನಿತ್ಯಸೌಖ್ಯ, ಹಿತವಾಗಿ ಬೀಸುವಗಾಳಿ, ನೀರಿಗೆ ಆಸರೆಯಾಗುವ ಕೆರೆ; ಬಾವಿ ಮುಂತಾದುವುಗಳನ್ನೆಲ್ಲ ಪ್ರತಿನಿಧಿಸುವ ಅಂಕಿಗಳ ವಿವರ ಸೂಚಿಸಿದ್ದಾನೆ.

  ಮೂರು ಲೋಕಗಳ ಶಿಖರದ ಸಿದ್ಧಿಯುಂಟಾಗಲೆಂದು ಆಶಿಸುವ ಜ್ಞಾನವು ಸಿರಿವೀರಸೇನನ ಶಿಷ್ಯನ ಘನವಾದ ಕಥೆ. ಜಿನಸೇನ ಗುರುಗಳ ತನುವಿನ ಜನ್ಮದ ಪುಣ್ಯವಸ್ತು. ನಾನಾ ದೇಶದ ಜನಪದದಲ್ಲಿ ಧರ್ಮವು ಕ್ಷೀಣಿಸಿರುವಾಗ, ಮಾನ್ಯ ಖೇಟದ ದೊರೆ ಅಮೋಘವರ್ಷಾಂಕನಿಗೆ; ನವದಂಕ ಮೂರ್ತಿಯಾಗಿರುವ ಕವಿಯು ಎಲ್ಲ ವಿಚಾರಗಳನ್ನೂ ತಿಳಿದವನಾಗಿ, ಜಗತ್ತಿನ ಎಲ್ಲ ಜ್ಞಾನವನ್ನೂ ಅರಿತವನಾಗಿ, ಭೂಮಿಯ ಸೌಭಾಗ್ಯವಾಗಿ, ಬ್ರಹ್ಮಜ್ಞಾನ ಸಂಪನ್ನನಾಗಿ, ಅಮೋಘವರ್ಷನ ಗುರುವಾಗಿ, ಸೇನಗಣದಲ್ಲಿ ಜನಿಸಿದ ಜ್ಞಾತವಂಶಿ, ಸದ್ಧರ್ಮ ಗೋತ್ರ, ಶ್ರೀ ವೃಷಭಸೂತ್ರ ದ್ರವ್ಯಾಂಗ ಶಾಖೆ ಇಕ್ಷ್ವಾಕು ವಂಶ ಇವುಗಳನ್ನೆಲ್ಲ ತ್ಯಜಿಸಿದ ಸೇನ ಗಣಗಚ್ಛವನ್ನು ಸೇರಿ, ಕರ್ನಾಟಕದ ದೊರೆ ಅಮೋಘವರ್ಷನಿಗೆ ವಿವರವಾಗಿ ಕರ್ಮವನ್ನು ಹೇಳಿದ ಅಂಕಕಾವ್ಯ ಈ ಭೂವಲಯ, ಭುವನ ವಿಖ್ಯಾತವಾದುದು ಎಂಬುದಾಗಿ ತನ್ನನ್ನೂ ತನ್ನ ಪೂರ್ವಾಶ್ರಮ ಹಾಗೂ ಸಂನ್ಯಾಸಾಶ್ರಮದ ವಿವರಗಳನ್ನೂ, ತನ್ನ ಅಂಕಕಾವ್ಯದ ಮಹತ್ವವನ್ನೂ, ವೀರಸೇನ; ಜಿನಸೇನರು ತನ್ನ ಗುರುಗಳೆಂಬ ವಿಚಾರವನ್ನೂ ಬಹಳ ಸ್ಪಷ್ಟವಾಗಿ; ಸಂಕ್ಷೇಪವಾಗಿ ಸೂಚಿಸಿದ್ದಾನೆ.( ಅ.೯, ಪದ್ಯ ೧೪೨-೧೬೫)

  ಅಮೋಘವರ್ಷನಿಗೆ ಧವಲ; ಜಯಧವಲ; ಮಹಾಧವಲ; ಜಯಶೀಲಧವಲ; ಅತಿಶಯ ಧವಲ; ವಿಜಯಧವಲ ಎಂಬ ಪದವಿಗಳಿದ್ದುದನ್ನು ಸೂಚಿಸಿ, ದಕ್ಷಿಣದೇಶದಲ್ಲಿ ಸಿಹಿಯಾದ ಖಂಡವೆನಿಸಿದ ಕರ್ನಾಟಕದ ಚಕ್ರವರ್ತಿಯ ರಾಜ್ಯವನ್ನು ವಿವರಿಸಿದ್ದಾನೆ. ನೃಪತುಂಗನ ಕಾಲದಲ್ಲಿ ಜೈನಧರ್ಮವು ಉನ್ನತ ಸ್ಥಿತಿಯಲ್ಲಿದ್ದ ವಿಚಾರವನ್ನು ವಿವರಿಸಿದ್ದಾನೆ. ಮಹಾವೀರನೂ ಕನ್ನಡಿಗ ಎಂಬ ವಿಚಾರವನ್ನು ಸೂಚಿಸುವ ಮೂಲಕ ಕರ್ನಾಟಕದಲ್ಲಿ ಸಿರಿಭೂವಲಯದ ಮಹತ್ವವು ಹೆಚ್ಚಿನದು ಎಂಬುದನ್ನು ಸ್ಪಷ್ಟವಾಗಿ ವಿವರಿಸಿದ್ದಾನೆ. ಜಗತ್ತನ್ನೆಲ್ಲ ಪಾಲಿಸುವ ಜೈನಧರ್ಮವನ್ನು - ನರಪಾಲಿಸುವುದೇನರಿದೇ, ಗುಣಧರ್ಮದಾಚಾರವನು ಮೀರದಿಹರಾಜ ಧರೆಯಪಾಲಿಸುವುದೇನರಿದೇ? ಎಂದು ಲೋಕಧರ್ಮದ, ರಾಜಧರ್ಮದ ಸಹಜ ಸ್ವಭಾವವನ್ನು ಸೂಚಿಸಿದ್ದಾನೆ. ಹಜ್ಜೆ ಹೆಜ್ಜೆಗೂ ಭೂವಲಯ ಕಾವ್ಯದ ಮಹತ್ವವನ್ನು ಒತ್ತಿ ಹೇಳುತ್ತಾನೆ. - ತನ್ನ ಕಾವ್ಯದ ಮಹಿಮೆಯನ್ನು ಕುರಿತು ಕವಿಯೇ ಸ್ವತಃ ಇಷ್ಟು ಸ್ಪಷ್ಟವಾಗಿ ತಿಳಿಸಿದ್ದರೂ ಈ ಕಾವ್ಯವು ೧೨೦೦ ವರ್ಷಗಳ ನಂತರವೂ ಅಜ್ಞಾತವಾಗಿಯೇ ಉಳಿಯುವಂತಾದುದು ನಿಜಕ್ಕೂ ಕನ್ನಡಿಗರ ದೌರ್ಭಾಗ್ಯವೋ ಅಥವಾ ದುರ್ಬಲತೆಯೋ ಎಂಬುದನ್ನು ವಿಚಾರಶಾಲಿಗಳಾದ ಕನ್ನಡಿಗರು ತಿಳಿಯಲೇಬೇಕು- ಭೂವಲಯ ಕಾವ್ಯದ ಕರ್ತೃವಾದ ಭೂತಬಲಿಯಾಚಾರ್ಯನ ಖ್ಯಾತಿಯನ್ನು ಸೂಚಿಸಿದ್ದಾನೆ. (ಭೂವಲಯವೆಂದರೆ; ಸಿರಿಭೂವಲಯವಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಂಡಿರಿ! ಇವೆರಡೂ ಬೇರೆ ಬೇರೆ ಕಾವ್ಯಗಳು) ಭಾರತ ದೇಶದ ಖ್ಯಾತಿಗೆ ಕಾರಣರಾದ ಗುರುಪರಂಪರೆಯ ರಾಜ್ಯವು ಸಮುದ್ರದಿಂದ ಆವರಿಸಲ್ಪಟ್ಟಿರುವುದನ್ನು ಸೂಚಿಸಿದ್ದಾನೆ. ವರ್ಧಮಾನಪುರದಂತಹ ಸಾವಿರ ಪುರಗಳ ನಾಡಾದ ಸೌರಾಷ್ಟ್ರ, ಮಗಧ ದೇಶಗಳವರೆವಿಗೂ ಕರ್ನಾಟಕವು ವ್ಯಾಪಿಸಿದ್ದನ್ನು ಸೂಚಿಸಿ, ಅಲ್ಲಿನ ಬಿಸಿನೀರಿನ ಬುಗ್ಗೆ; ಅದರಲ್ಲಿ ಅಡಗಿರುವ ರಸ ಇತ್ಯಾದಿಗಳನ್ನು ಹೇಳಿ, ಇದರ ಉಪಯೋಗವನ್ನು ಮುಂದೆ ತಿಳಿಸುವುದಾಗಿ ಹೇಳುತ್ತಾ, ಕಳಿಂಗದೇಶವೂ ಕನ್ನಡರಾಜ್ಯದ ಭಾಗವೆಂದು ಸೂಚಿಸುತ್ತಾ, ಒಂಬತ್ತನೇ ಅಧ್ಯಾಯವನ್ನು ಮುಕ್ತಾಯಗೊಳಿಸಿದ್ದಾನೆ.

*    *     *
                                                                                                                                                                                                                                                         - ಸುಧಾರ್ಥಿ, ಹಾಸನ

No comments:

Post a Comment