Skip to main content

ಸಿರಿಭೂವಲಯ ಸ್ಥೂಲ ಪರಿಚಯ : ಅಧ್ಯಾಯ ೧೧

ಹನ್ನೋಂದನೇ ಅಧ್ಯಾಯ

ಮನಸ್ಸಿನ ಬೇಡಿಕೆಯಂತೆ (ಮನಃ ಪೂರ್ವಕವಾಗಿ) ಮಂಗಲಪ್ರಾಭೃತವನ್ನು ಓದಿದರೆ, ಜಿನಧರ್ಮದ ತತ್ವಜ್ಞಾನಗಳೆಲ್ಲ ತನಗೆ ತಾನೇ ತನ್ನ ನಿಜರೂಪವನ್ನು ತೋರಿಸುವಂಥ ಘನವಿಧ್ಯಾ ಸಾಧನೆಯ ಯೋಗ ಸಿಗುವುದೆಂದು ಸೂಚಿಸುವುದರೊಂದಿಗೆ ಹನ್ನೊಂದನೇ ಅಧ್ಯಾಯವು ಪ್ರಾರಂಭವಾಗಿದೆ.  ಗ್ರಂಥ ಪ್ರಶಂಸೆಯೊ೦ದಿಗೆ ೨೪ ಜನ ತೀರ್ಥ೦ಕರರೂ ಈಶ್ವರ ಸ್ವರೂಪಿಗಳೆಂದು ಸೂಚಿಸಿದ್ದಾನೆ. 'ದೋಷಮುಕ್ತರಾಗಬೇಕೆಂಬಾಶೆ' ಇರುವವರೆಲ್ಲರ ಆಶೆಯನ್ನೂ ಗುರುತಿಸಿ, ದೇಶಜ್ಞಾನವನ್ನು ಸಂಪೂರ್ಣವಾಗಿ ಒಳಗೊಂಡ 'ದೇಸೀಯ ಭಾಷೆಯ ಅಂಕಕಾವ್ಯ' ಎಂದು ಸಿರಿಭೂವಲಯವನ್ನು ವರ್ಣಿಸಿದ್ದಾನೆ.

  ತಾನು ಕಾವ್ಯರಚನೆಗೆ ಬಳಸಿರುವ ೯ ಅಂಕಿಗಳು ಅರಹಂತರಾದಿಯಿಂದಲೂ ನವತೀರ್ಥಗಳಿದ್ದಂತೆ. ಶಾಸ್ತ್ರಾನುಸಾರವಾಗಿ ಭೂದೇವಿಯ ಪೂಜೆಗೆ ವಿನಿಯೋಗವಾಗುವ ಶಿವಪದ ಎಂದರಿಯಬೇಕು ಎಂದು ತಿಳಿಸಿದ್ದಾನೆ. ಜೈನಾಗಮದರ್ಶನವಾದ ಈ ಭೂವಲಯವು 'ಜೋಣಿಪಾಹುಡ' ಎಂಬ ಗ್ರಂಥದ ಮೂಲವೆಂದು ಸೂಚಿಸಿದ್ದಾನೆ. '' ಕಾರದಿಂದ 'ಫ್' ಕಾರದವರೆಗಿನ ೬೪ ಅಕ್ಷರಗಳೇ ಬ್ರಾಹ್ಮೀಲಿಪಿ ಎಂದರಿದು ಸುಖಿಯಾಗು ಎಂದು ಋಷಭದೇವನು ತನ್ನ ಪುತ್ರಿ ಬ್ರಾಹ್ಮಿಗೆ ಶೀರ್ವದಿಸಿ, ಅವಳ ಎಡಗೆಯ್ಯ ಹೆಬ್ಬೆರಳ ಮೂಲದಲ್ಲಿದ್ದ ಶುದ್ಧವಾದ ಅಂಕರೇಖೆಗಳ ಆದಿ; ಮಧ್ಯ; ಅಂತ್ಯ; ಸಮ; ವಿಷಮ ಸ್ಥಾನಗಳನ್ನು ವಿವರಿಸಿ, ಅವಳಿಗೆ ಅಕ್ಷರದಾನ ಮಾಡಿದನೆಂಬ ಸಂಗತಿಯನ್ನು ವಿವರಿಸಿದ್ದಾನೆ. (ಅ.೧೧,ಪದ್ಯ,೫೪-೬೦) ರೇಖಾಂಕ ಗಣಿತ, ಅಂಕಗಣಿತ, ಅಕ್ಷರ ಇವೆಲ್ಲವುಗಳ ಸಂಬಂಧವನ್ನು ವಿಸ್ತಾರವಾಗಿ ಮಗಳಿಗೆ ಬೋಧಿಸಿದ ವಿಚಾರವನು ವಿವರಿಸಿದ್ದಾನೆ. ಕೋಟಿ ಕೋಟಾ ಕೋಟಿ ಸಾಗರದಳತೆಯ ಗೂಟ ಶಲಾಕೆ ಸೂಚಿಗಳ ಮೇಟಿಯಪದ ಣವಕಾರ ಮಂತ್ರದಲಿ ಬರುವ ಆಪಾಟಿ ಅಕ್ಷರಗಳ ಲೆಕ್ಕವನ್ನು ಸೂಚಿಸುವದೆಂದು ತಿಳಿಸಿದ್ದಾನೆ. ರೇಖಾಗಮ, ವರ್ಣಾಗಮ, ಶಬ್ದಾಗಮ ಮುಂತಾದವೆಲ್ಲವೂ  ಅಂಡದಕ್ಷರದ ವಶವಾಗಿರುತ್ತವೆ. ಕಾಲಕ್ಷೇತ್ರದ ಪಿಂಡವು ನಿತ್ಯಬಾಳುತ್ತದೆ ಎಂದು ಸೂಚಿಸಿದ್ದಾನೆ.

  ಸಕಲ ಶಬ್ದಾಗಮವೂ 'ಓಂ'ಕಾರದಿಂದಲೇ ಬಂದುದೆಂದು ತಿಳಿಸುತ್ತಾನೆ. ಓಂಕಾರವೇ ಸರ್ವಸ್ವವೂ ಆಗಿದೆ ಎಂದು ಹೇಳುತ್ತಾನೆ. ಓಂಕಾರವು ಪಾಪನಾಶಕ, ಪುಣ್ಯಪ್ರಕಾಶಕ, ಲೋಪವಿಲ್ಲದ ಶುದ್ಧರೂಪ, ತಾಪವಳಿಸಿ ಮೋಕ್ಷವನ್ನು ತೋರಿಸುವ ಓಂಕಾರವೆಂಬ ಶ್ರೀಪದವು ಒಂಬತ್ತರಂಕ ಎಂದು ಹೇಳುತ್ತಾನೆ. ಸ್ವರಗಳು, ಅವುಗಳ ಹೃಸ್ವ, ದೀರ್ಘ, ಪ್ಲುತ ರೂಪಗಳು ವಿಸ್ತರಿಸಿ ೨೭ ಸ್ವರಾಕ್ಷರಗಳು, ೨೫ ವ್ಯಂಜನಾಕ್ಷರಗಳು, ಬದ್ಧಾಕ್ಷರಗಳು, ಸಿದ್ಧಾಕ್ಷರಗಳ ರೂಪತಿಳಿಸಿ, ೬೪ ಅಕ್ಷರಗಳ ಸರ್ವಭಾಷಾಮಯೀಭಾಷಾ ಕನ್ನಡ ವರ್ಣಮಾಲೆಯನ್ನು ವಿವರಿಸಿದ್ದಾನೆ. ಈ ಅಕ್ಷರಗಳು ಉಂಟಾಗುವ ಕ್ರಮ, ಅಕಾರ ಉಕಾರ ಮಕಾರಗಳ ಸಂಯೋಗದಿಂದ ಓಂಕಾರವು ಉತ್ಪತ್ತಿಯಾಗುವ ಕ್ರಮ, ಅದರಿಂದ ಮಂತ್ರಗಳು ಹುಟ್ಟುವುದನ್ನು ಸೂಚಿಸಿದ್ದಾನೆ. ಒಂದಂಕದಿಂದ ೮ ಅಂಕಗಳಾಗಿ; ಸಂಖ್ಯಾತಾಸಂಖ್ಯಾತವಾಗಿ; ವಿಶ್ವಾನಂತಾಂಕ ಬರುವುದೆಂದು ತಿಳಿಸುತ್ತಾನೆ. ಈ ಅನಂತಾಂಕದ ಅನಂತರೂಪಗಳನ್ನು ನಾನಾವಿಧವಾಗಿ ವರ್ಣಿಸತ್ತಾನೆ.

  ಣವಪದಭಕ್ತಿಯೇ ಅಣುವ್ರತಕ್ಕೆ ಆದಿಯೆಂದೂ, ಜಿನದೀಕ್ಷೆ ವಹಿಸಿದವರಿಗೆ ನವದಂಕವು ಎಂಟರಿಂದ, ಏಳರಿಂದ ಸಮಭಾಗವಾಗಿ ಸೊನ್ನೆಯನ್ನು ಕಾಣುವರೆಂದು ತಿಳಿಸಿದ್ದಾನೆ. ಮೋಹದಂಕವೆಷ್ಟು, ರಾಗದಂಕವೆಷ್ಟು, ಸಾಹಸಿ ದ್ವೇಷಾಂಕದಾಳ, ಮೋಹ; ರಾಗ; ದ್ವೇಷವಳಿದಾಗ ಆತ್ಮದ ರೂಪಿನ ಜ್ಞಾನಾಂಕವೆಷ್ಟು ಇತ್ಯಾದಿ ಹಲವಾರು ವಿಚಾರಗಳನ್ನು ಸೂಚಿಸು ವುದರೊಂದಿಗೆ ಹನ್ನೊಂದನೇ ಅಧ್ಯಾಯವು ಮುಕ್ತಾಯವಾಗಿದೆ.


ಹನ್ನೋಂದನೇ ಅಧ್ಯಾಯದ ಆಯ್ದ ಪದ್ಯಗಳು:-
ಜ್ಞಾನ ಸಾಧನೆ ಅಧ್ಯಾತ್ಮ ಯೋಗ | ಘನವಿಧ್ಯಾ ಸಾಧನೆ ಯೋಗ ||
ಕೋಶದ ಕಾವ್ಯ ಭೂವಲಯ | ದೇಸೀಯ ಭಾಷಾಂಕ ಕಾವ್ಯ | ಆನಂದ ದಾಯಕ ಕಾವ್ಯ ||
ರಾಶಿಯ ಪುಣ್ಯದ ಗಣಿತ | ಈಶನ ಭಕ್ತಿಯ ಗಣಿತ | 
ದೋಷ ಅಷ್ಟಾದಶ ಗಣಿತ | ಶ್ರೀಶನ ಸದ್ಧರ್ಮ ಗಣಿತ | ಆನಂದ ಸಾಮ್ರಾಜ್ಯ ಗಣಿತ ||
ಕರುಣೆಯಕ್ಷರವ ಕೇಳಮ್ಮ | ಅರಿಯ ಗೆಲ್ಲುವುದ ಕೇಳಮ್ಮ | 
ಪರಮನ ಅತಿಶಯವಮ್ಮ | ಧರೆಯ ಮಂಗಲದ ಕಾವ್ಯವಮ್ಮ ||
ಕೋಟಿ ಕೋಟಾಕೋಟಿ ಸಾಗರದಳತೆಯ | ಗೂಟ ಶಲಾಕೆ ಸೂಚಿಗಳ ||
ಮೇಟಿಯ ಪದ ಣವಕಾರ ಮಂತ್ರದೆ ಬಹ | ಪಾಟಿಯಕ್ಷರದ ಲೆಕ್ಕಗಳಂ ||
ಓಂಕಾರದಿಂದ ಬಂದ ಸರ್ವ ಶಬ್ದಾಗಮ | ದಂಕ ದಕ್ಷರದ ಅಂಕ ನಿತ್ಯ ||
ಶಂಕೆಗಳೆಲ್ಲವ ಪರಿಹಾರ ಮಾಡುವ | ಸಂಕರ ದೋಷ ವಿರಹಿತ ||
ವಶವಾದ ಕರ್ಮಾಟಕದೆಂಟು ಭಾಗದ | ರಸಭಂಗದ ಅಕ್ಷರದ ಸರ್ವ ||
ರಸಭಾವಗಳನ್ನೆಲ್ಲವ ಕೂಡಲು ಬಂದು | ವಶವೇಳು ನೂರು ಹದಿನೆಂಟು ಭಾಷೆ ||
ಯಾವಾಗ ಕರ್ಮ ಸಾಮಾನ್ಯವನೊಡವೆವೋ | ಆವಾಗ ಎಂಟು ರೂಪಾಗಿ ||
ತಾವದು ತುಳಿಯಲು ಸಂಖ್ಯಾತಾಸಂಖ್ಯಾತ | ದಾ ವಿಶ್ವಾನಂತಾಂಕ ಬಹುದು ||

*    *     *
                                                                                               - ಸುಧಾರ್ಥಿ, ಹಾಸನ

Comments

Popular posts from this blog

ಯಾಗದಲ್ಲಿ ಪಶುಬಲಿ ಪ್ರಹಸನ - ಒಂದು ಅಭಿಪ್ರಾಯ

- ಸಂಗ್ರಹ

ಭಾರತ ದೇಶವೆಲ್ಲಿದೆ? ಏನಾಗುತ್ತಿದೆ? ಇದೇನು ಧೈವಸಂಕಲ್ಪ? ನೇತ್ರಾವತಿ ತಿರುವು ಯೋಜನೆಯ ಸಾಧಕ ಬಾಧಕಗಳೇನು?

ಒಂದಾನೊಂದು ಕಾಲದಲ್ಲಿ ಲೋಕಗುರುವಾಗಿದ್ದು, ಸಕಲ ದೇವಾನುದೇವತೆಗಳಿಗೂ ಮಾತೃಭೂಮಿಯೆನ್ನಿಸಿಕೊಂಡ ಈ ಭಾರತ ಭೂಮಿ ಪರಿಸ್ಥಿತಿ ಕೈಮೀರಿ ಹೋಗಿದ್ದು ಯಾವುದೇ ಧರ್ಮ, ಮತ, ದೇವರು, ಚಿಂತಕ, ಬುದ್ಧಿಜೀವಿ ದಡ ದಾಟಿಸಲಾರದ ಪರಿಸ್ಥಿತಿಗೆ ಬಂದು ನಿಂತಿದೆ. ಇದರ ಕಾರಣದ ಹಿನ್ನೆಲೆಯಲ್ಲಿ ನಾವು ಚಿಂತಿಸಹೊರಟರೆ ಒಂದು ಭಯಾನಕ, ಬೀಭತ್ಸ ಚಿತ್ರಣ ಮೂಡಿಬರುತ್ತಿದೆ. ಈ ನಿಟ್ಟಿನಲ್ಲಿ ಒಂದು ಚಿಂತನಾ ಪ್ರಬಂಧ ಬರೆದು ಲೇಖಿಸುವ ಮತ್ತು ಪ್ರಕಟಿಸುವ ಪ್ರಯತ್ನ ಮಾಡುತ್ತಿದ್ದೇನೆ ಗಮನಿಸಿ. ಓದಿ. ನಿಮಗೆ ಬೇಕಿದ್ದರೆ ತಿದ್ದುವ ಪ್ರಯತ್ನ ಮಾಡಿರಿ ಎಂದು ಪ್ರಾರ್ಥನೆ.
ಮೊದಲಾಗಿ ಭಾರತದೇಶದ ಮೂಲ ತಳಹದಿಯ ಚಿಂತನೆ ಮಾಡೋಣ. ಒಂದು ಯಾವುದೇ ಅಭಿವೃದ್ಧಿ ಸಾಧಿಸಲಿ ಅದು ಈ ಮೂಲ ತಳಹದಿಯ ನೆಲೆಯಲ್ಲೇ ಸಾಗಿರಬೇಕು. ಆಗ ನಿರಂತರ ಅಬಾಧಿತ, ಲಾಭದಾಯಕ, ಬೌದ್ಧಿಕ ಉನ್ನತಿಗೆ ಕಾರಣ. ಮಾನವೀಯ ಸಮೃದ್ಧ ಸಮಾಜ ಸೃಷ್ಟಿ ಸಾಧ್ಯ. ಮೂಲ ಸಿದ್ಧಾಂತ ಬಿಟ್ಟರೆ ಅದೆಂದೂ ಉದ್ಧಾರವಾಗಲಾರದು. ಸರ್ವಜ್ಞ ನೊಂದು ಮಾತು ಹೇಳಿದ್ದಾನೆ “ಕಜ್ಜಿಯ ಕೆರೆದಂತೆ” ಎಂದು. ಕೆರೆಯುವಾಗ ಆರಂಭದಲ್ಲಿ ಆಪ್ಯಾಯಮಾನ, ಆನಂದದಾಯಕ. ನಂತರ ಕೆರೆತದ ಕಾರಣದಿಂದಾಗಿ ಹುಣ್ಣಾಗಿ ಕೊಳೆತರೆ ಆ ಅಂಗವೇ ಕತ್ತರಿಸಬೇಕಾದೀತು. ನಂತರ ವಿಕಲಾಂಗವೇ ಗತಿ ಪುನಾರೂಪಿಸಲಾಗದ್ದು. ಈಗಿನ ನಮ್ಮ ರಾಜಕಾರಣಿಗಳು, ಯೋಜನಾಧಿಕಾರಿಗಳು ಈ ಕಜ್ಜಿ ಕೆರೆತದಷ್ಟೇ ಫಲ ನಿರೀಕ್ಷೆಯ ಯೋಜನೆ ತಯಾರಿಸುತ್ತಿದ್ದಾರೆ. ಭವಿಷ್ಯದ ಪರಿಣಾಮ ಅಷ್ಟೇ ಅಪಾಯಕಾರಿ. ಉದಾ:-…