Wednesday, 8 July 2015

ಸಿರಿಭೂವಲಯ ಸ್ಥೂಲ ಪರಿಚಯ : ಅಧ್ಯಾಯ ೧೨

ಹನ್ನೆರಡನೇ ಅಧ್ಯಾಯ
 
ಹಿಂದಿನ ಋಷಿಮುನಿಗಳು ತಮ್ಮ ಯೋಗ ಸಾಮ್ರಾಜ್ಯದಲ್ಲಿ ವಶಪಡಿಸಿಕೊಂಡ ಈ ರಸವಸ್ತುವಿನ ಸಂಪತ್ತನ್ನು ಅವರು ಸಂಯಮದಿಂದ ತ್ಯಜಿಸಿದ್ದಾರೆ. ಈ ಯಶಸ್ಸಿನ ಕಾವ್ಯ ಭೂವಲಯ ಎಂಬುದಾಗಿ ಗ್ರಂಥ ಪ್ರಶಂಸೆಯೊಂದಿಗೆ ಹನ್ನೆರಡನೇ ಅಧ್ಯಾಯವು ಪ್ರಾರಂಭವಾಗಿದೆ. ಮಾನವ ಜನ್ಮದ ಆದಿ-ಅಂತ್ಯಗಳ ಶುಭಕರ್ಮಗಳು; ಇರುವಷ್ಟು ಸುಖ; ಇವುಗಳನ್ನು ತುಂಬಿ, ಎಲ್ಲ ಪುಣ್ಯೋದಯದ ವಿಚಾರಗಳೂ ಹದಿನೆಂಟು ಶ್ರೇಣಿಯಲ್ಲಿ ಬರಬೇಕೆಂದು ರಚಿಸಿದ ಕಾವ್ಯ ಭೂವಲಯ ಎಂದು ವಿವರಿಸುತ್ತಾನೆ.  ಈ ಅಧ್ಯಾಯಾಂತರ್ಗತವಾಗಿ ದೊರೆಯುವ ಅಂತರ್ ಸಾಹಿತ್ಯವನ್ನು ಪ್ರತ್ಯೇಕವಾಗಿ ಸೂಚಿಸಲಾಗಿದೆ. ೨೭೭ನೇ ಪಾದಪದ್ಯದಿಂದ ೬ನೇ ಪಾದಪದ್ಯದ ವರೆವಿಗೆ ಪ್ರತಿಪಾದ ಮೊದಲನೇ ಅಕ್ಷರವನ್ನು ನಾಗಬಂಧ ಕ್ರಮದಲ್ಲಿ ಜೋಡಿಸಿಕೊಂಡಾಗ ದೊರೆಯುವ ಸಾಹಿತ್ಯದ ವಿಚಾರವನ್ನೂ ಅಲ್ಲೇ ಸೂಚಿಸಲಾಗಿದೆ. ಈ ಭಾಗವು ೧೯ನೇ ಅಧ್ಯಾಯದಿಂದ ಹಿಂದಕ್ಕೆ ೧೨ನೇ ಅಧ್ಯಾಯದ ವರೆವಿಗೆ ಹರಿದುಬಂದಿದೆ ಎಂಬುದನ್ನು ಮರೆಯದೇ ನೆನೆಪಿನಲ್ಲಿಟ್ಟುಕೊಳ್ಳಬೇಕು.

  ಮಂಗಗಳ ಮನಸ್ಸು ಬಹಳ ಚಂಚಲವಾದುದು. ಈ ಕಾರಣದಿಂದಾಗಿಯೇ ಅವುಗಳು ಹಗಲೆಲ್ಲ ಮರದಿಂದ ಮರಕ್ಕೆ ನೆಗೆದಾಡುತ್ತಲೇ ಇರುತ್ತವೆ! ಮನುಷ್ಯನ ಮನಸ್ಸಿನ ನೆಗೆದಾಟವೂ ಇದೇ ಕ್ರಮದಲ್ಲಿರುತ್ತದೆ. ಧ್ವಜದಲ್ಲಿರುವ ಕಪಿಯ ಹಾರಾಟಕ್ಕೆ ಮಿತಿ ಇರುತ್ತದೆ. ಈ ರೀತಿಯಲ್ಲಿ ಹಾರಾಡುವ ಮನಸ್ಸನ್ನು ಒಂದೆಡೆ ಕಟ್ಟಿನಿಲ್ಲಿಸುವ ಸಾಧನವೆಂದರೆ, ಸ್ಯಾದ್ವಾದ. ಈ ಸ್ಯಾದ್ವಾದದಿಂದಲೇ ಸರ್ವಸ್ವವನ್ನೂ ಕಟ್ಟಿರಿಸಿದ್ದಾರೆಂಬ ವಿಚಾರವನ್ನು ಸೂಚಿಸಿದ್ದಾನೆ. ಸ್ವರ್ಣ, ರಜತ, ಪಾದರಸ ಮೊದಲಾದುವನ್ನು ಕ್ಷಣಮಾತ್ರದಲ್ಲಿ ಭಸ್ಮವಾಗಿ ಪರಿವರ್ತಿಸುವ ಹೂವಿನ ಆಯುರ್ವೇದದ ವಿಚಾರ ತಿಳಿಸಿದ್ದಾನೆ.

  ಗಂಡಭೇರು೦ಡ ಪಕ್ಷಿಯು ಎರಡು ತಲೆಯುಳ್ಳದೆಂದೂ (ಇಂದಿನವರು ಇದೊಂದು ಕಾಲ್ಪನಿಕ ಪಕ್ಷಿ ಎಂದು ಪರಿಗಣಿಸಿದ್ದಾರೆ!) ಮುಂದೆ ಹುಟ್ಟುವ ಹೊಸರಾಜ್ಯಕ್ಕೆ ಇದು ಲಾಂಛನವಾಗುವುದೆಂದೂ ಭವಿಷ್ಯ ನುಡಿದಿದ್ದಾನೆ! ವಿಜಯನಗರ ಸಾಮ್ರಾಜ್ಯದ ಪತನಾನಂತರ ದಕ್ಷಿಣದಲ್ಲಿ ತಲೆ ಎತ್ತಿದ ಮೈಸೂರು ಸಂಸ್ಥಾನದ ಅರಸರ ರಾಜಲಾಂಛನವು ಗಂಡಭೇರುಂಡ ಪಕ್ಷಿ ಎಂಬುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ! ಆಗಸದಲ್ಲಿ ಉದ್ಭವಿಸುವ ಮಹಾವಿಷ್ಣುವೇ ಆದಿಜಿನನಾಥನೆಂಬ ಅಂಶವನ್ನು ಕವಿಯು ಇಲ್ಲಿ ಸ್ಪಷ್ಟಪಡಿಸಿದ್ದಾನೆ. ಮಹಾವಿಷ್ಣುವಿನ ದಶಾವತಾರಗಳಲ್ಲಿ ವರಾಹಾವತಾರವೂ ಒಂದು. (ಹಂದಿ; ಸೂಕರ)

  ಗಗನದೊಳಗೆಲ್ಲ ಸುತ್ತಿ ಆವರಿಸಿರುವ ಅಗಣಿತ ಶಬ್ದ ರಾಶಿಯನ್ನು ಪರಿಶುದ್ಧವಾದ ನಂದ್ಯಾವರ್ತದ ಹಗಲಿನಂತಿರುವ ನನ್ನ ಹೃದಯದಲ್ಲಿರಿಸಿದ್ದೇನೆಂದು ಸೂಚಿಸಿದ್ದಾನೆ. ಮನಸ್ಸೆಂಬ ಸಿಂಹದ ಪೀಠವನ್ನೇರಿದ ಮಹಾವೀರ ಹಾಗೂ ಉಳಿದೆಲ್ಲ ಜಿನನಾಯಕರ ವಾಹನವೂ ಸಿಂಹ. ಇನರೆಲ್ಲರೂ ಈ ಚಿಹ್ನೆಯು ರಾಜ್ಯ ಲಾಂಛನವೆಂದು ಮನೆಯ ಮೇಲೆ ಹಾರಿಸುವುದಾಗಿ ಭವಿಷ್ಯವನ್ನು ನುಡಿದಿದ್ದಾನೆ! - ಈ ನಾಲ್ಮೊಗದ ಸಿಂಹವೇ ಭರತಖಂಡದ ಶುಭ ಚಿಹ್ನೆಯಾಗಿ, ರಾಷ್ಟ್ರಧ್ವದಲ್ಲಿ  ಸ್ಥಾನ ಪಡೆದು, ಇಂದು ದೇಶಾದ್ಯಂತ ಮಾತ್ರವಲ್ಲ ಜಗತ್ತಿನಾದ್ಯಂತ ಹಾರಾಡುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ.

  ತೀರ್ಥಂಕರರು ತಪಸ್ಸನ್ನಾಚರಿಸಿದ ವೃಕ್ಷಗಳ ಹೆಸರು ಸೂಚಿಸಿದ್ದಾನೆ. ಇದರ ಆಧಾರದಲ್ಲಿ ಕನಿಷ್ಠ ಪಕ್ಷ ೨೪ ಜಾತಿಯ ಮರಗಳ ಹೆಸರುಗಳನ್ನಾದರೂ ಓದುಗರು ಇಲ್ಲಿ ತಿಳಿಯಬಹುದು! ಈ ೨೪ ಜಾತಿಯ ಮರಗಳ ಹೂವಿನೊಂದಿಗೆ ಪರಮಾತ್ಮನು ೧೮ ಸಾವಿರ ಜಾತಿಯ ಹೂವುಗಳ ಬಳಕೆಯನ್ನು ಪುಷ್ಪಾಯುರ್ವೇದದಲ್ಲಿ ತಿಳಿಸಿರುವುದನ್ನು ಸೂಚಿಸಿದ್ದಾನೆ. ಸ್ಯಾದ್ವಾದ ಬುದ್ಧಿಯ ತೀಕ್ಷ್ಣತೆಯು ಎಷ್ಟೆಂಬುದನ್ನು ತೀಕ್ಷ್ಣವಾಗಿ ಅರಿತರೆ, ಈ ಪುಷ್ಪಾಯುರ್ವೇದದ ರಕ್ಷಣೆಯು ದೊರೆಯುವುದೆಂದು ನಿರೂಪಿಸಿದ್ದಾನೆ.


  ಪಾದ ಪದ್ಯಗಳಲ್ಲಿ ಅ೦ತರ್ಗತವಾಗಿರುವ ಸಾಹಿತ್ಯದಲ್ಲಿ ತನ್ನ ಗುರುಪರಂಪರೆಯ ವಿಧ್ಯಾಬುದ್ಧಿಗಳ ಸಾಮರ್ಥ್ಯದ ದರ್ಶನ ಮಾಡಿಸಿದ್ದಾನೆ. ಇಲ್ಲಿ ಸೂಚಿಸಿರುವ ಜ್ಞಾನದ ವ್ಯಾಪ್ತಿಯಲ್ಲಿ ಇಂದಿನ ವಿದ್ವಾಂಸರ ಅರಿವು ಹರಿದುಹೋದ ಅರಿವೆಯ ಚೂರಿನಷ್ಟೂ ಇರಲಾರದೆನಿಸುತ್ತದೆ! ಹಾಗಿರುವಲ್ಲಿ ಸಾಮಾನ್ಯ ಜನರು ಈ ಜ್ಞಾನದ ಪರಿಧಿಯನ್ನು ಅರಿಯಲು ಸಾಧ್ಯವೇ? ಕನ್ನಡ ರಾರುಗಳ; ಕನ್ನಡ ರಾಜಗುರುಗಳ; ಕನ್ನಡಿಗರ ಮನೋಧರ್ಮ, ಚ್ಛಾರಿತ್ರ್ಯ, ಸಹನಶೀಲತೆ, ಔದಾರ್ಯ, ವಿಧ್ಯಾಸಕ್ತಿ, ನ್ಯಾಯಪರತೆ ಇತ್ಯಾದಿ ಸಕಲ ಸದ್ಗುಣಗಳನ್ನು ವಿವರಿಸಿದ್ದಾನೆ. ಕರ್ನಾಟಕವನ್ನು ಚಿನ್ನದ ನಾಡೆಂದು ಹಾಡಿ ಕೊ೦ಡಾಡುವುದರೊಂದಿಗೆ ೧೨ನೇ ಅಧ್ಯಾಯವು ಮುಕ್ತಾಯವಾಗಿದೆ. ಕನ್ನಡ ರಾಜಗುರುಗಳ ಗುಣಗಾನವು ೧೩ನೇ ಅಧ್ಯಾಯದ ಪಾದಪದ್ಯಗಳಲ್ಲಿ ಮುಂದುವರೆದಿದೆ. ಹಲವಾರು ಗುರುಗಳ ಹೆಸರುಗಳನ್ನು ಸೂಚಿಸಿದ್ದಾನೆ. ಜಿನತೀರ್ಥಂಕರರ ಹೆಸರುಗಳನ್ನು ಹೇಳಿದ್ದಾನೆ.

*    *     *
                                                                                               - ಸುಧಾರ್ಥಿ, ಹಾಸನ

No comments:

Post a Comment