Friday, 24 July 2015

ಸಿರಿಭೂವಲಯ ಸ್ಥೂಲ ಪರಿಚಯ : ಅಧ್ಯಾಯ ೧೩

   ಎರಡೂವರೆ ದ್ವೀಪವೆನಿಸಿದ ಈ ನಾಡಿನಲ್ಲಿ ಅನಾದಿಕಾಲದಿಂದಲೂ ಸಾಧುಸಂತರು ಮೋಕ್ಷಸಾಧನೆ ಮಾಡುತ್ತಿರುವುದನ್ನೂ, ಈ ಸಾಧನೆಗೆ ನವವೆಂಬ ಓಂ ಅಕ್ಷರವೇ ಮೂಲವೆಂದೂ ಸೂಚಿಸುವುದರೊಂದಿಗೆ ೧೩ನೇ ಅಧ್ಯಾಯವು ಪ್ರಾರಂಭವಾಗಿದೆ. ಅನಂತ ಜ್ಞಾನದ ಆದಿಸ್ವರೂಪವನ್ನು ಸಾಧಿಸಿದವರು ಪರಮಾತ್ಮನನ್ನು ತಮ್ಮ ಆತ್ಮದಲ್ಲಿಯೇ ಕಾಣುತ್ತಾರೆ ಎಂಬುದಾಗಿ ಅದ್ವೆತದ ಶುದ್ಧ ಕನ್ನಡ ರೂಪವನ್ನು ನಮಗೆ ಒದಗಿಸಿಕೊಟ್ಟಿದ್ದಾನೆ.

  ಜ್ಞಾನಸಂಪಾದನೆಗೆ ತೊಡಗಿರುವವರು ಆತ್ಮಜ್ಞಾನವನ್ನು ಬಿಡಬಾರದು. ಇಂಥವರು ಸಿಂಹದಂತೆ ಮಹಾಪರಾಕ್ರಮ ಉಳ್ಳವರು. ಸಂಯಮಶೀಲರು, (ಮುಂಗೋಪಿಗಳಲ್ಲ!) ಇವರು ಸದಾಕಾಲವೂ ಜ್ಞಾನ; ಆತ್ಮಜ್ಞಾನ ಮುಂತಾದುವುಗಳಲ್ಲೇ ಆಸಕ್ತರಾಗಿರುತ್ತಾರೆ. ಜ್ಞಾನಿಗೆ ಆತ್ಮಜ್ಞಾನವೇ ಪ್ರಧಾನ. ಉಳಿದವು ಗೌಣ. ಜ್ಞಾನಿಯು ಮಹಾ ಪರಾಕ್ರಮಿಯೇ ಹೊರತು; ಹೇಡಿಯಲ್ಲ. ಜ್ಞಾನಿಯು ನಿಧಾನಿಯೇ ಹೊರತು; ಆತುರಗಾರನಲ್ಲ ಎಂಬುದಾಗಿ ಜ್ಞಾನಿ ಹಾಗೂ ಜ್ಞಾನದ ವಿವರ ನೀಡಿದ್ದಾನೆ.

  ಶಿಷ್ಯರಿಗೆ ಗಣಿತಸೂತ್ರಗಳನ್ನು ನೀಡಿ, ಅದನ್ನು ವಿಸ್ತರಿಸಿ ತರುವಂತೆ ಸೂಚಿಸುವುದು, ರಾತ್ರಿಯ ಸಮಯದಲ್ಲಿ ಶಿಷ್ಯರು ಈ ಸೂತ್ರಗಳನ್ನು ಕುರಿತು ಚಿಂತಿಸಿ; ಮನನ ಮಾಡಿಕೊಂಡು, ವಿಸ್ತರಿಸಿ ಮರುದಿನ ಗುರುವಿಗೆ ವಿವರಗಳನ್ನೊದಗಿಸುವುದು, ಇವುಗಳನ್ನು ಕ್ರೋಢೀಕರಿಸಿ; ಕುಮುದೇಂದು ಮುನಿಯು ಸಿರಿಭೂವಲಯವನ್ನು ನಿರೂಪಿಸುವುದು; ಈ ಗ್ರಂಥರಚನೆಯ ವಿಧಾನ. ಇದನ್ನು ಕುರಿತ ವಿವರಗಳನ್ನು ಓದುಗರು ೧೩ನೇ ಅಧ್ಯಾಯದ ಪೂರ್ಣಪದ್ಯಗಳ ಅಶ್ವಗತಿಯ ಅ೦ತರ್ ಸಾಹಿತ್ಯದಲ್ಲಿ ಕಾಣಬಹುದು. ಕಾವ್ಯದುದ್ದಕ್ಕೂ ಸಾಕಷ್ಟು ಸು೦ದರವಾದ, ಸಮರ್ಪಕವಾದ, ಉಪಮಾನಗಳನ್ನೂ ಓದುಗರು ಗಮನಿಸಬಹುದು. ಇದಕ್ಕೆ ಉದಾಹರಣೆಯನ್ನು ನೀಡುವ ಅಗತ್ಯವೇನಿಲ್ಲ.

  ಭೂಮಿಯ ಸುತ್ತಲೂ ಸಾಗರವು ಆವರಿಸಿರುವುದೆಂಬುದು ಸಹಜ ಸಂಗತಿ. ಇಂದಿನ ವಿಜ್ಞಾನಿಗಳು ಅಥವಾ ಸಾಗರ ಪ್ರವಾಸಿಗಳು ಈ ವಿಚಾರವನ್ನು ಕಂಡುಹಿಡಿದರೆಂಬ ನಂಬಿಕೆಯು ಬಹಳಷ್ಟು ಜನಗಳಲ್ಲಿದೆ. ಆದರೆ ನಮ್ಮ ಪೂರ್ವಜರಿಗೆ ಇದೆಲ್ಲವೂ ಕುಳಿತ ಕಡೆಯೇ ತಿಳಿಯುತ್ತಿತ್ತೆಂಬ ಸಂಗತಿಯನ್ನು ೧೨೦೦ ವರ್ಷಗಳಿಗೆ ಮೊದಲೇ ಕುಮುದೇಂದು ಮುನಿಯು  ಸಾರಿ ಹೇಳಿದ್ದಾನೆ! ಇದನ್ನು ನಾವು ನಂಬುವುದಿಲ್ಲ!!  ಅಮೆರಿಕಾದಲ್ಲಿ ಭಯೋತ್ಪಾದಕರು ನಡೆಸಿದ ವಿಮಾನಧಾಳಿ,  ಜಗತ್ತಿನ ಯಾವುದೋ ಮೂಲೆಯಲ್ಲಿ ನಡೆಯುವ ಪ್ರಕೃತಿ ವಿಕೋಪದ ರುದ್ರ ರಮಣೀಯ ದೃಷ್ಯಗಳನ್ನು ಇಂದು ದೂರದರ್ಶನದ ಮೂಲಕ ಕುಳಿತೆಡೆಯಲ್ಲೇ ಕಾಣುವ ಸೌಲಭ್ಯವಿರುವಾಗ; ಈ ಸೌಲಭ್ಯದ ನಿರೂಪಣೆಯಲ್ಲಿ ಯಾರೋ ವಿಜ್ಞಾನಿಯ ಏಕಾಗ್ರ ಚಿತ್ತದ ಚಿಂತನೆಯು ಕಾರಣವೆಂಬುದು ನಿಜವಾಗಿರುವಾಗ, ನಮ್ಮ ಪೂರ್ವಿಕರು ತಮ್ಮ ಏಕಾಗ್ರ ಚಿತ್ತದ ಜ್ಞಾನಾರ್ಜನೆಯಿಂದ ಕುಳಿತೆಡೆಯಲ್ಲಿಯೇ ಲೋಕಾಂತರ ಸಂಚಾರ ಮಾಡುತ್ತಿದ್ದ ಸಂಗತಿಯನ್ನು ಯಾವ ಕಾರಣಕ್ಕಾಗಿ ನಿರಾಕರಿಸಬೇಕುಹಾಗೂ ಈ ರೀತಿ ನಿರಾಕರಿಸುವುದು ನ್ಯಾಯವೇ?? ಎಂಬುದನ್ನು ವಿವೇಕಿಗಳು ಆಲೋಚಿಸಬೇಕು.

  ಸರ್ವಸಾಧುಗಳೂ ಸಾಧಿಸಿರುವ ಸಮ್ಯಜ್ಞಾನದ ಸ್ವರೂಪವನ್ನು ವಿವರಿಸಿದ್ದಾನೆ. ಸಂಯಕ್ತ್ವ ಚಾರಿತ್ರದ ವಿವರ ನೀಡಿದ್ದಾನೆ. ತಪಸ್ಸಿನ ಮಾರ್ಗವನ್ನು ನಿರ್ದೇಶಿಸಿದ್ದಾನೆ. ತಪಸ್ಸಿನ ಆಚಾರವನ್ನು ವಿವರಿಸಿದ್ದಾನೆ. 'ಸಮಯಸಾರ' ಎಂಬ ಪ್ರಾಚೀನ ಕೃತಿಯು ದೊರೆಯುವ ವಿಚಾರ ಕುರಿತು ಸೂಚನೆ ನೀಡಿದ್ದಾನೆ. ಈ ಸಂಸಾರದ ಆಶೆಯು ಏಕೆ? ಅದನ್ನು ಬಿಡು, ಮಹಾತ್ಮರ ನೀತಿಯ ಮಾರ್ಗವನ್ನು ಕಾಯಾ ವಾಚಾ ಮನಸಾ ಅತಿಶವಾದ ಭಕ್ತಿಯಿಂದ ಅನುಸರಿಸು ಎಂಬ ಮಹತ್ತರವಾದ, ಸರಳವಾದ ವಿಚಾರವನ್ನು ಅತಿ ಸರಳವಾದ ಮಾತುಗಳಲ್ಲೇ ವಿವರಿಸಿದ್ದಾನೆ.

  ಭಗವಂತನೆಂಬ ಅಗೋಚರ ಶಕ್ತಿಗೆ ನಮಸ್ಕರಿಸುವುದು, ಸ್ಮರಣೆಮಾಡಿಕೊಳ್ಳುವುದು, ಸ್ತೋತ್ರಗಳ ಮೂಲಕ ಹೊಗಳುವುದು ಎಂಬ ಕ್ರಮವನ್ನು ಸಿರಿಭೂವಲಯವು ಹೇಳುತ್ತದೆ೦ದು ಸೂಚಿಸಿದ್ದಾನೆ. ಹೆಚ್ಚು ಕಷ್ಟ ಪಡದೇ ಸಿದ್ಧಾಂತ ಮಾರ್ಗದಲ್ಲಿ ನಡೆದರೆ, ನಿಮಗೆ ಮುಕ್ತಿಯು ತಪ್ಪದೇ ದೊರೆಯುವುದೆಂದು ಭರವಸೆ ನೀಡಿದ್ದಾನೆ. ತನ್ನ ಪೂರ್ವದ ಐದು ಜನ ಗುರುಗಳ ಪದ ಭಕ್ತಿಯಿ೦ದ ಬಂದಿರುವ ಈ ಅಂಕಾಕ್ಷರ ಕಾವ್ಯವನ್ನು ಪ್ರಾಕೃತ; ಸಂಸ್ಕೃತ; ಕನ್ನಡವನ್ನು ಬೆರೆಸಿ ಪದ್ಧತಿ ಗ್ರಂಥವಾಗಿ ರಚಿಸಿರುವೆನೆಂದು ಸ್ಪಷ್ಟಗೊಳಿಸಿದ್ದಾನೆ. ಜಗತ್ತಿನಲ್ಲಿರುವ ಸಮಸ್ತ ವಸ್ತುಗಳ ವಿಚಾರವೂ ಇದರಲ್ಲಿ ಅಡಕವಾಗಿರುವುದನ್ನು ತಿಳಿಸಿದ್ದಾನೆ.

  ಅರಹಂತರಾದಿಯಾಗಿ ಪಂಚಪರಮೇಷ್ಠಿಗಳೂ ಬೊಲ್ಲಿಯ ಪದ್ಧತಿಯಲ್ಲಿ ರಚನೆಯಾಗಿವೆ ಎಂದು ತಿಳಿಸುತ್ತಾನೆ. ಬೊಲ್ಲಿ ಎಂಬುದು ಒಂದು ಜಾತಿಯ ಕುದುರೆ. ಬೊಲ್ಲಿ ಪದ್ಧತಿ ಎಂದರೆ ಅಶ್ವಗತಿ ಎಂಬುದಕ್ಕೆ ಸಮಾನಾರ್ಥದ ಪದವಾಗಿರಬಹುದು. ಸಿರಿಭೂವಲಯದಲ್ಲಿ ಅಶ್ವಗತಿಯಲ್ಲೇ ಬಹಳಷ್ಟು ಅಂತರ್ ಸಾಹಿತ್ಯವು ದೊರೆಯುತ್ತದೆ ಎಂಬುದು ಗಮನಾರ್ಹವಾದುದು. ಓದುಗರ ಶ್ರದ್ಧೆ, ಆಶಕ್ತಿ, ಶ್ರಮಕ್ಕೆ ಅನುಗುಣವಾಗಿ ಅವರವರ ತಪಸ್ಸಿಗೆ ತಕ್ಕಂತೆ ಈ ಗ್ರಂಥವು ಸತ್ಫಲವನ್ನು ನೀಡುವುದೆಂದು ಘೋಷಿಸಿದ್ದಾನೆ.

   ಒಂಬತ್ತರ ಮಹಿಮೆಯನ್ನು ಮತ್ತೊಮ್ಮೆ ತಿಳಿಸುತ್ತಾ ಈ ಒಂಬತ್ತು ಅಂಕಿಗಳಲ್ಲಿ ಜಗತ್ತನ್ನೇ ಕಟ್ಟಿರಿಸಬಹುದೆಂಬ ಅಂಶವನ್ನು, ೧೦೦೮ ನಾಮಗಳನ್ನು ಕೂಡಿದಾಗ ಬರುವುದು ಒಂಬತ್ತು! ಸಾಯುವಾಗ ಜೀವರನ್ನು ಕಾಯುವುದುದೆಂದು ಮಹಾವೀರನು ಹೇಳಿರುವ ಕಾವ್ಯವಿರುವುದು ಈ ಒಂಬತ್ತಂಕದಲ್ಲೇ! ಜಗತ್ತಿನಲ್ಲಿ ಈ ಒಂಬತ್ತನ್ನು ವಿಸ್ತರಿಸಿದರೆ (೧೦೦೮ನ್ನು ೯ ರಿಂದ ಭಾಗಿಸಿದರೆ) ಬರುವ ಅಂಕಿ ೧೧೨ ಇದರ ಸಂಯುಕ್ತಾಂಕ ೪. ಇವೇ ನಾಲ್ಕು ವೇದಗಳು. ಇದಕ್ಕೆ ಅ, ಸಿ, , , ಸಾ ಎಂಬ ಪಂಚಾಕ್ಷರಗಳನ್ನು ಸೇರಿಸಿದಾಗ, ಅದೇ ಮತ್ತೆ ಒಂಬತ್ತಾಗುತ್ತದೆ. ಈ ಒಂಬತ್ತನ್ನು ಆಧಾರವಾಗಿಟ್ಟುಕೊಂಡೇ ಸಕಲವನ್ನೂ ಕಟ್ಟಿರಿಸುವ ಈ ಸಿರಿಭೂವಲಯದ ರಚನೆಯಾಗಿರುವುದೆಂಬ ಮಹತ್ವವನ್ನು ವಿವರಿಸಿದ್ದಾನೆ. ರತ್ನಖಚಿತವಾದ ಕಿರೀಟವನ್ನು ಶಿರದಲ್ಲಿ ಧರಿಸಿದ್ದರೂ ಗುರುವಿನ ಚರಣಧೂಳಿಯನ್ನು ಶಿರದ ಮೇಲಿರಿಸಿಕೊಳ್ಳುವ ಅಮೋಘವರ್ಷನ ರಾಜ್ಯದಲ್ಲಿ ಈ ಕಾವ್ಯವು ಸೃಷ್ಟಿಯಾಗಿದೆ ಎಂದು ಸೂಚಿಸುವುದರೊಂದಿಗೆ ೧೩ನೇ ಅಧ್ಯಾಯವು ಮುಕ್ತಾಯವಾಗಿದೆ.

*    *     *
                                                                                               - ಸುಧಾರ್ಥಿ, ಹಾಸನ

No comments:

Post a Comment