Tuesday, 11 August 2015

ಸಿರಿಭೂವಲಯ ಸ್ಥೂಲ ಪರಿಚಯ : ಅಧ್ಯಾಯ ೧೫

  
ಭವನವಾಸಿಗಳಾದ ದೇವನಿವಾಸ, ಅವರಭೇ, ಚಿಹ್ನೆ ಇತ್ಯಾದಿಗಳನು ಸವಿಸ್ತಾರವಾಗಿ ಈ ಕಾವ್ಯದಲ್ಲಿ ಕೇಳಿರಿ ಎಂಬುದಾಗಿ ೧೫ನೇ ಅಧ್ಯಾಯವು ಪ್ರಾರಂಭವಾಗುತ್ತದೆ. ತಮ್ಮ ತಪಸ್ಸಿನ ಫಲದಿಂದ ಲಾಭ ಹೊಂದಿ ಭವ್ಯಭವನ ವಾಸಿಗಳಾಗಿ ಸುಖಿಸುವ ಭವ್ಯಜನರ ವೈಭವವು ಈ ಭೂವಲಯದೊಳಗಿಹುದೆಂದು ತಿಳಿಸುತ್ತಾನೆ. ನಿರ್ಮಲವಾದ ತಪಸ್ಸಿನಿಂದ ಹಿಮ್ಮೆಟ್ಟಿದ ಜೀವರು ಹೆಮ್ಮೆಯ ಸಂಸಾರ ಸುಖವು ಒಮ್ಮೆಗೇ ಬರಬೇಕೆಂದಾಶಿಸಿ ನಿಧಾನವಾಗಿ ಈ ಭವನವಲಯವನ್ನು ಆತುಕೊಂಡಿದ್ದಾರೆ ಎಂದು ತಿಳಿಸತ್ತಾನೆ. ಕಾಮದಾಟಕೆ ಮನಸೋತು ಜಿನತಪವನು ಮಾರಿ ಬಿಟ್ಟು ಕೊನೆಗೆಬಂದಿಲ್ಲಿ ದೇವಿಯರ ಸೌಖ್ಯದೊಳಿದ್ದನ ಜಿನಭಕ್ತ ಕಾವ್ಯವಿದು ಎಂದು ಹೇಳಿದ್ದಾನೆ. ಮೋಹಪರವಶರಾದ ಈ ದೇವತಾಸ್ವರೂಪಿಗಳು ಮಡದಿಯೊಂದಿಗಿನ ರಸಿಕತೆಯನ್ನು ರಸವತ್ತಾಗಿ ವರ್ಣಿಸಿದ್ದಾನೆ. ಮೋಹಪರವಶರಾದ ಗಂಡುಹೆಣ್ಣುಗಳು ಪ್ರಣಯಭಾವದಿ೦ದ ಒಂದಾದಾಗ, ಅವರ ಮಾನಸಿಕ ಭಾವನೆಯ ಪ್ರತೀಕವಾಗಿ ನಡೆಯುವ ದೈಹಿಕ ಚಟುವಟಿಕೆಗಳನ್ನು ಬಹಳ ವಿವರವಾಗಿ; ವಿಸ್ತಾರವಾಗಿ; ಅತಿಸೂಕ್ಷ್ಮವಾಗಿ; ನವಿರಾಗಿ, ನಿರೂಪಿಸಿರುವುದನ್ನು ನಾವು ಕಾವ್ಯದಲ್ಲಿ ಕಾಣಬಹುದು. ಅವರ ಪ್ರೇಮದ ಕ್ರೀಡೆಗಳನ್ನು ನೆಲಕ್ರೀಡೆಯೆಂದು ಸೂಚಿಸಿದ್ದಾನೆ! ಅಲ್ಲಿನ ಶಯ್ಯಾಗೃಹಗಳ ವೈಭವವನ್ನು ವಿಸ್ತಾರವಾಗಿ ವರ್ಣಿಸಿದ್ದಾನೆ.


  ವಿದ್ಯುತ್ ಎಂಬದು 'ಎಲೆಕ್ಟ್ರಿಕ್' ಎಂಬ ಆಂಗ್ಲಾಶಬ್ದದ ಸಮಾನಾರ್ಥಕಪದ. ಇದು ಆಧುನಿಕ ವಿಜ್ಞಾನದ ಬೆಳವಾಣಿಗೆಯಾದ ನಂತರ ಎರಕಹೊಯ್ಯಲಾದ ಪದವೆಂದು ಎಲ್ಲರೂ ಭಾವಿಸುವುದು ಸಹಜ. ಆದರೆ ಈ ಪದವು ಕುಮುದೇಂದುವಿನ ಕಾಲದಲ್ಲೇ ಬಳಕೆಯಲ್ಲಿದ್ದು ಇ೦ದಿಗೂ ಉಳಿದುಬಂದಿದೆ! ಹಲವಾರು ಪ್ರಾಚೀನ ಕುಲಗಳ ಹೆಸರು ಸೂಚಿಸಿ, ಈ ದೇವತೆಗಳ ದೇವನಿಲಯದ ಭವನಗಳು ಗಗನದಲ್ಲಿವೆಯೆಂದು ಹೇಳುತ್ತಾ ಅವುಗಳ ವಿಸ್ತಾರವನ್ನೂ; ವೈಭವವನ್ನೂ ವರ್ಣಿಸಿದ್ದಾನೆ. ಈ ಭವನಗಳು ಕಲ್ಲು ಮಣ್ಣು ಇಟ್ಟಿಗೆಗಳ ಕಟ್ಟಡಗಳಲ್ಲ. ನವರತ್ನಗಳಿಂದ ಶೋಭಿತವಾದ ಭವನಗಳು!  ಇವುಗಳ ವಿಸ್ತಾರವು ಸಾವಿರಾರು ಯೋಜನಗಳಷ್ಟು! ( ಯೋಜನದ ಲೆಕ್ಕ ಹಲವಿವೆ; ಅದರಲ್ಲಿ ಒಂದನ್ನು ಉದಾಹರಸುವುದಾದರೆ ಸುಮಾರು ಹನ್ನೆರಡು ಮೈಲಿಗಳ ಅಳತೆ. ಸಾವಿರಾರು ಯೋಜನಗಳ ವಿಸ್ತಾರವೆಂದರೆ, ೧೨೦೦೦ ಚದರ ಮೆಲಿಗಳ ವಿಸ್ತಾರವಾಗುತ್ತದೆ. ಇಷ್ಟು ವಿಸ್ತಾರವಾದ ಕಟ್ಟಡದ ಸೊಬಗನ್ನು ಸಾಧ್ಯವಾದರೆ ಕಲ್ಪಿಸಿಕೊಳ್ಳಿ!)

  ಬೇರೆ ಬೇರೆ ದೇವತೆಗಳಿಗೆ ಬೇರೆ ಬೇರೆ ಭವನಗಳು; ಅಸುರರಿಗೆ ಬೇರೆ ಬೇರೆ ಭವನಗಳೆಂದು ಸೂಚಿಸಿ, ಅವುಗಳ ಒಟ್ಟು ಲೆಕ್ಕವನ್ನು ಏಳುಕೋಟಿ ಎಪ್ಪತ್ತೆರಡೂವರೆಲಕ್ಷಗಳೆಂದೂ ಲೆಕ್ಕವನ್ನು ಸರಿಯಾಗಿ ಪರೀಕ್ಷಿಸಬಹುದೆಂದೂ ತಿಳಿಸಿದ್ದಾನೆ. ಈ ದೇವಕುಲಕ್ಕೆಲ್ಲ ಕುಲವೊಂದಕ್ಕೆ ಇಬ್ಬರು ಇಂದ್ರರು ಎಂದು ಹೇಳುತ್ತಾನೆ.

 • ಭೂತಾನಂದ;
 • ಧರಣಾನಂದ;
 • ಸುಪಾರ್ಣವ;
 • ವೇಣು;
 • ವೇಣುಧಾರಿ;
 • ಲಕ್ಷಣದ್ವೀಪಕುಮಾರ;
 • ವಶಿಷ್ಟ;
 • ಉದಧಿಕುವರ;
 • ಜಲಪ್ರಭ;
 • ಜಲಕಾಂತ;
 • ಸ್ತನಿತಕುಮಾರ;
 • ವಿನುತ;
 • ಘೋಷೇಂದ್ರ;
 • ಮಹಾಘೋಷೇಂದ್ರ;
 • ಹರಿಷೇಣ;
 • ಹರಿಕಾಂತ;
 • ಆಮಿತಗತಿ;
 • ಅಮಿತವಾಹನದೇವ;
 • ಶ್ರೀಮಯ;
 • ಅಗ್ನಿವಾಹನ;
 • ಆನಂದ;
 • ಪ್ರಭಂಜನ

ಇತ್ಯಾದಿ ಹೆಸರುಗಳನ್ನು ಸೂಚಿಸಿ, ಇವರೆಲ್ಲರೂ ಇಂದ್ರರಾಜರುಗಳೆಂದು ಹೇಳಿದ್ದಾನೆ. ಇವರ ಇಂದ್ರಭವನಗಳ ಲೆಕ್ಕ ತಿಳಿಸಿತ್ತಾ, ಕೋಟ್ಯಾಂತರ ಭವನಗಳ ಪಟ್ಟಿ ಹೇಳಿದ್ದಾನೆ. ಇವೆಲ್ಲವೂ ಮೇಲುಲೋಕದ ವಿವರಗಳು. ಕೊನೆಯಲ್ಲಿ ಅಸುರರಿಗೆ ಮಾತ್ರ ಭವನವೆನ್ನುವ ಒಂದೇ ಒಂದು ಮನೆ ಎಂದು ಹೇಳಿದ್ದಾನೆ. ಈ ಅಸುರರ ಮನೆಗಳು ಭೂಮಂಡಲದ ಮನೆಗಳಂತೇ ಇರುವವು. ಇವರ ಲೋಕವು ಚಿತ್ರಾಪೃಥ್ವಿ. ಅಲ್ಲಿನ ಕೆಳಲೋಕದಲ್ಲಿ ಅಲ್ಪರು ಅಧಿಕವಂತೆ. ಇವುಗಳ ಅಂತರ ಸಾವಿರಾರು ಯೋಜನಗಳು! ಲಕ್ಷಾಂತರ ಯೋಜನಗಳು! ಅಲ್ಲಿನ ಕಾಡುಗಳಲ್ಲಿರುವ ಭವನಗಳೆಲ್ಲವೂ ವಿಸ್ತಾರವಾದ ಚತುಷ್ಕೋಣಾಕೃತಿಯಲ್ಲಿವೆಯಂತೆ. ಅವುಗಳ ದ್ವಾರಗಳು ವಜ್ರಖಚಿತವಾಗಿರುವುದಂತೆ. ಈ ಕಾವ್ಯದ ಮೂಲಕವಾಗಿ ಅಲ್ಲಿನ ಭವನಾಮರರನ್ನು ತಿಳಿದುಕೊಳ್ಳಿ ಎಂಬುದಾಗಿ ಸೂಚಿಸಿದ್ದಾನೆ. ಹಿಂದಿನ ರಾಜ; ಮಹಾರಾಜರ ಕತ್ತಿಯ ಹಿಡಿಯು ರತ್ನಖಚಿತವಾಗಿರುತ್ತಿತ್ತೆಂಬ ಸಂಗತಿಯನ್ನೇ ಇಂದಿನ ನಾವುಗಳು ಉತ್ಪ್ರೇಕ್ಷೆ ಎನ್ನುತ್ತೇವೆ. ಮೈಸೂರರಸರ ರತ್ನಖಚಿತವಾದ ಸ್ವರ್ಣಸಿಂಹಾಸನವು ಕಣ್ಣಿಗೆ ಕಾಣಿಸುವಂತಿರುವುದರಿಂದ ಮಾತ್ರ ಅದನ್ನು ನಂಬುತ್ತೆವೆ. ಇಲ್ಲವಾಗಿದ್ದರೆ; ಅದೂ ಕಟ್ಟು ಕಥೆ ಎನಿಸುತ್ತಿತ್ತು! ದೇವಲೋಕದವರ -
 • ಅಂಗರಕ್ಷಕ ಪಡೆ,
 • ರಕ್ಷಣಾಮಂತ್ರಾಲಯ,
 • ಮಧ್ಯಮ;
 • ಬಾಹ್ಯ;
 • ಪರಿಷ ಸಮಾನ ದೇವಸೇನೆ;
 • ಪುರಜನರು;
 • ದೇವಗಾಯಕರು;
 • ಇಂದ್ರ;
 • ಪ್ರತೀಂದ್ರ;
 • ಸೋಮ;
 • ಯಮ;
 • ವರುಣ;
 • ಕುಬೇರ

ಮುಂತಾದವರ ಹೆಸರು ಸೂಚಿಸುತ್ತಾ ಅವರ -
 • ಏಳು ರೀತಿಯ ಸೈನಿಕಪಡೆ;
 • ಮಹಿಷ;
 • ತುರಗ;
 • ಗಜ;
 • ರಥ;
 • ಪದಾತಿ;
 • ಗಂಧರ್ವರ ನೃತ್ಯ ಸಮೂಹ;
 • ದೋಣಿ;
 • ಗರುಡ;
 • ಮಕರ;
 • ಒಂಟೆ;
 • ಸಿಂಹ
 • ಮುಂತಾದುವುಗಳ ಶಿಬಿಗೆ ಇತ್ಯಾದಿಗಳು,
 • ಅವರಿಗೆಲ್ಲ ಸಾವಿರಾರು ದೇವಿಯರು,
 • ಸಾವಿರಾರು ವಲ್ಲಭೆಯರು,
 • ಪತ್ನಿಯರು


ಇತ್ಯಾದಿಗಳ ವಿವರಗಳನ್ನೊಳಗೊಂಡ ಭೂವಲಯ ಎಂದು ಸೂಚಿಸುವುದರೊಂದಿಗೆ ೧೫ನೇ ಅಧ್ಯಾಯವು ಮುಕ್ತಾಯವಾಗಿದೆ.
*    *     *
                                                                                               - ಸುಧಾರ್ಥಿ, ಹಾಸನ

No comments:

Post a Comment